ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ

ಗಜಲ್ Read Post »

ಇತರೆ

ಹಿರಿಯರು ಹೊರೆಗಳಾಗದಿರಲಿ

ಲೇಖನ ಹಿರಿಯರು ಹೊರೆಗಳಾಗದಿರಲಿ ವಿಶ್ವನಾಥ ಎನ್ ನೇರಳಕಟ್ಟೆ [6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು. “ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. ನನ್ನ ಕೈ ಗಟ್ಟಿ ಹಿಡಿದುಕೊಳ್ಳಿ”, ವೃದ್ಧಾಶ್ರಮಕ್ಕೆ ಕರೆತರುವಾಗ ಕಾಳಜಿಯ ಮುಖವಾಡ ಹೊತ್ತು ಮಗನಾಡಿದ ಮಾತು ಅವರ ಕಿವಿ ತಮಟೆಯನ್ನು ಈಗಲೂ ಕತ್ತರಿಸತೊಡಗಿತ್ತು. “ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂಬ ತೋರಿಕೆಯ ಮಾತು ಬೇರೆ. ಯಾವ ಕರ್ಮಕ್ಕೆ ಆರೋಗ್ಯ?” ನಾರಾಯಣರಾಯರು ಗೊಣಗಿಕೊಂಡದ್ದು ಮಾತ್ರ. ಅದ್ಯಾವುದೋ ಮಾಯೆಯಲ್ಲಿ ಪಕ್ಕದಲ್ಲಿದ್ದ ವೃದ್ಧರಿಗೆ ಸ್ಪಷ್ಟವಾಗಿ ಕೇಳಿಸಿತು. “ನಿಮ್ಮ ಮಗನಾದರೋ ನಿಮ್ಮನ್ನು ಇಲ್ಲಿಗೆ ಕರೆತಂದು ಬಿಟ್ಟು ಹೋಗಿದ್ದಾನೆ. ನನ್ನ ಮಗ ರಾತ್ರೆ ಹೊತ್ತಿಗೆ ಮನೆಯಿಂದ ಹೊರದಬ್ಬಿ ಬಾಗಿಲು ಹಾಕಿಕೊಂಡ. ಅದು ಚಳಿಗಾಲ ಬೇರೆ. ನಾನು ಅನುಭವಿಸಿದ ಸಂಕಟ ದೇವರಿಗೇ ಪ್ರೀತಿ…” ಉಕ್ಕಿಬಂದ ಕಣ್ಣೀರು ಅವರ ಮಾತಿಗೆ ಅರೆಕ್ಷಣದ ಬ್ರೇಕ್ ಹಾಕಿತು. “ಐದು ವರ್ಷ ಆಗಿದೆ ನಾನಿಲ್ಲಿಗೆ ಬಂದು. ಒಂದು ದಿನವೂ ಬಂದದ್ದಿಲ್ಲ, ವಿಚಾರಿಸಿದ್ದಿಲ್ಲ. ನಾಳೆ ನಾನು ಸತ್ತರೂ ಬರಲಿಕ್ಕಿಲ್ಲವೇನೋ…” ದುಃಖದ ಮಹಾಪ್ರವಾಹದಲ್ಲಿ ಅವರಿಗೆ ಮಾತು ಮುಂದುವರಿಸಲಾಗಲಿಲ್ಲ. ನಾರಾಯಣರಾಯರನ್ನೂ ದುಃಖ ಪರವಶಗೊಳಿಸಿತ್ತು. ಮೌನವೇ ನಡೆದುಹೊರಟಂತೆ ತಮ್ಮ ರೂಮನ್ನು ಹೊಕ್ಕರು. ‘ಹೊತ್ತು ಹೋಗುತ್ತಿಲ್ಲ’ ಎಂದು ಅಂದುಕೊಂಡವರು ಬ್ಯಾಗಿನೊಳಗಿದ್ದ ಡೈರಿಯನ್ನು ಎತ್ತಿಕೊಂಡರು. ‘ಒಳ್ಳೆಯದಾಗಲಿ’ ಡೈರಿಯ ಮೊದಲ ಪುಟದಲ್ಲಿ ತಂದೆ ಬರೆದಿದ್ದ ಈ ಪದ ನಾರಾಯಣರಾಯರನ್ನು ಭಾವನಾತ್ಮಕವಾಗಿಸಿತು. “ನನ್ನ ತಂದೆಯನ್ನು ನಾನು ಅಂದು ವೃದ್ಧಾಶ್ರಮಕ್ಕೆ ಕಳಿಸಬಾರದಿತ್ತು. ಚೆನ್ನಾಗಿ ನೋಡಿಕೊಂಡಿದ್ದರೆ ಇಂದು ನನ್ನ ಮಗ ನನ್ನನ್ನು ವೃದ್ಧಾಶ್ರಮದ ಪಾಲಾಗಿಸುತ್ತಿರಲಿಲ್ಲ” ಭೂತಕಾಲದ ಯೋಚನೆ ನಾರಾಯಣರಾಯರ ಸ್ಮøತಿಪಟಲದಲ್ಲಿ ಓಡಾಡತೊಡಗಿತು. ಗೋಡೆಯ ಮೇಲೆ ತೂಗಾಡುತ್ತಿದ್ದ ಕ್ಯಾಲೆಂಡರ್ 2050ನೇ ಇಸವಿಯನ್ನು ಸಾರಿ ಹೇಳುತ್ತಿತ್ತು. *************************************   ‘ವಸುಧೈವ ಕುಟುಂಬಕಂ’ ಎಂದು ಜಗತ್ತಿಗೇ ಸಾರಿದ ರಾಷ್ಟ್ರ ನಮ್ಮದು. ‘ಭೂಮಿಯೇ ಒಂದು ಕುಟುಂಬ; ಭೂಮಿಯಲ್ಲಿರುವ ಎಲ್ಲರೂ ನಮ್ಮವರು’ ಎನ್ನುವ ಈ ತತ್ತ್ವದ ಮೂಲಕವೇ ಭಾರತ ಗುರುತಿಸಿಕೊಂಡಿದೆ, ಬೆಳೆದಿದೆ; ಜ್ಞಾನದ ಹಣತೆಯನ್ನು ಜಗತ್ತಿನುದ್ದಕ್ಕೂ ಬೆಳಗಿದೆ. ಆದರೆ ಆಧುನಿಕತೆಯ ಕಪಿಮುಷ್ಟಿಗೆ ಸಿಲುಕಿಕೊಂಡ ನಾವು ಇಂದು ತೀರಾ ಭಿನ್ನ ನೆಲೆಯಲ್ಲಿ ಸಾಗುತ್ತಿದ್ದೇವೆ. ಕೌಟುಂಬಿಕ ಬಾಂಧವ್ಯಗಳನ್ನೂ ವ್ಯಾವಹಾರಿಕತೆಯ ದೃಷ್ಟಿಕೋನದಿಂದ ಗಮನಿಸಿಕೊಳ್ಳುತ್ತಿದ್ದೇವೆ. ನಮ್ಮ ಕುಟುಂಬದವರನ್ನೂ ನಮ್ಮವರು ಎಂದು ಅಂದುಕೊಳ್ಳದ ಸಂಕುಚಿತ ಮನಃಸ್ಥಿತಿಗೆ ಒಳಗಾಗುತ್ತಿದ್ದೇವೆ. ‘ಸರ್ವೇಜನಃ ಸುಖಿನೋ ಭವಂತು’ ಎಂದು ಬೋಧಿಸಿದ ರಾಷ್ಟ್ರದ ಕಸದ ತೊಟ್ಟಿಯಲ್ಲಿ ವೃದ್ಧೆಯನ್ನು ಕಾಣುವಂತಾಗುತ್ತದೆ. ಅವರ ಮಕ್ಕಳೇ 50 ಲಕ್ಷದ ಕಾರಿನಲ್ಲಿ ಕರೆತಂದು ಎಸೆದುಹೋಗಿರುತ್ತಾರೆ. ಚಳಿಗೆ ಮರಗಟ್ಟಿರುವ ಅವಳ ಸ್ಥಿತಿ ಸಮಾಜದ ಅದೆಷ್ಟೋ ಜನರ ಕಣ್ಣೀರಿಗೆ ಕಾರಣವಾಗುತ್ತದೆ. ಆದರೆ ಅವರ ಮಕ್ಕಳ ಕಣ್ಣು ತೆರೆಯುವುದೇ ಇಲ್ಲ.    ಭಾರತವನ್ನು ಕಂಡು ವಿದೇಶಿಯರು ಅಚ್ಚರಿಪಟ್ಟಿದ್ದರು. ಇಲ್ಲಿನ ಕುಟುಂಬ ವ್ಯವಸ್ಥೆ ಅವರಲ್ಲಿ ದಿಗ್ಭಮೆಯನ್ನು, ಕುತೂಹಲವನ್ನು ಹುಟ್ಟುಹಾಕಿತ್ತು. ಹತ್ತಿಪ್ಪತ್ತು ಜನ ಒಂದೇ ಸೂರಿನಡಿಯಲ್ಲಿ ಬಾಳುವುದು ಅವರ ಪಾಲಿಗೆ ಇನ್ನಿಲ್ಲದ ಅದ್ಭುತವಾಗಿತ್ತು. ಭಾರತದ ಕುಟುಂಬ ವ್ಯವಸ್ಥೆಯೊಳಗಿನ ಬಾಂಧವ್ಯ, ಸಂಬಂಧಗಳ ನಡುವಿನ ಪರಸ್ಪರ ನಂಬಿಕೆಯನ್ನು ಕೂಗಿ ಹೇಳುವ ರೀತಿಯಲ್ಲಿ ಬದುಕಿದ ವಿಧಾನ ಒಂದು ಅನುಕರಣೀಯ ಮಾದರಿಯನ್ನು ಹುಟ್ಟುಹಾಕಿತ್ತು. ಕೌಟುಂಬಿಕ ಮೌಲ್ಯಗಳ ಅದಃಪತನವು ಎಂತಹ ತಲೆಮಾರನ್ನು ರೂಪುಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವೆಂಬಂತೆ ಒಂದು ಅರ್ಥಪೂರ್ಣ ಕಥೆಯಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಮನೆಯಿಂದ ಹೊರಹಾಕುತ್ತಾನೆ. ರಕ್ತವನ್ನೂ ಹೆಪ್ಪುಗಟ್ಟಿಸಬಲ್ಲಂತಹ ಚಳಿಗಾಲದ ರಾತ್ರಿಯದು. “ಮೈ ಮುಚ್ಚಿಕೊಳ್ಳುವುದಕ್ಕೆ ಒಂದು ಕಂಬಳಿಯನ್ನಾದರೂ ಕೊಡು” ಎಂದು ಆ ವೃದ್ಧ ತನ್ನ ಮಗನಲ್ಲಿ ಅಂಗಲಾಚುತ್ತಾನೆ. ಅರೆಬರೆ ಹರಿದ, ಹಳೆಯ ಕಂಬಳಿಯೊಂದನ್ನು ಮನೆಯೊಳಗಿಂದ ತಂದ ಮಗ ಋಣವೇ ಮುಗಿಯಿತೆಂಬಂತೆ ತಂದೆಯ ಮುಖಕ್ಕೆ ಅದನ್ನು ಎಸೆಯುತ್ತಾನೆ. ಈ ಎಲ್ಲಾ ವಿದ್ಯಮಾನವನ್ನೂ ಗಮನಿಸುತ್ತಿದ್ದ ಆ ವೃದ್ಧನ ಮೊಮ್ಮಗ, ಎಂಟು ವರ್ಷದವನು, ತಕ್ಷಣ ತನ್ನ ಅಜ್ಜನ ಬಳಿಗೆ ಓಡುತ್ತಾನೆ. ಅಜ್ಜನ ಮೈಮೇಲೆ ಹರಡಿದ್ದ ಕಂಬಳಿಯನ್ನು ಅರ್ಧ ಭಾಗ ಮಾಡಿ ಒಂದು ಭಾಗವನ್ನು ತೆಗೆದುಕೊಳ್ಳುತ್ತಾನೆ. ಆ ಹಳೇ ಕಂಬಳಿ ಏಕೆ ಎಂದು ತಂದೆ ಕೇಳಿದ್ದಕ್ಕೆ ಆ ಪುಟ್ಟ ಹುಡುಗ ಹೇಳಿದ್ದಿಷ್ಟು- “ಇನ್ನು ಸ್ವಲ್ಪ ವರ್ಷಗಳಾದ ಮೇಲೆ ನೀವು ಮುದುಕರಾಗುತ್ತೀರಿ. ಆಗ ನಾನೂ ನಿಮ್ಮನ್ನು ಇದೇ ರೀತಿ ಮನೆಯಿಂದ ಹೊರಹಾಕುತ್ತೇನೆ. ಆಗ ನೀವು ಕಂಬಳಿ ಬೇಕೆಂದು ಕೇಳಿದರೆ ಕೊಡುವುದಕ್ಕೆ ಬೇಕಲ್ಲಾ.” ಮಕ್ಕಳು ಹೇಳಿಕೊಟ್ಟದ್ದನ್ನು ಅನುಸರಿಸುವುದಕ್ಕಿಂತಲೂ ಕಂಡದ್ದನ್ನು ಕಂಡ ಹಾಗೆಯೇ ಅನುಸರಿಸುತ್ತಾರೆ. ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವುದನ್ನು ಇಂದಿನ ಮಕ್ಕಳು ಕಾಣುವಂತಾಗಬಾರದು, ಕಲಿಯುವಂತಾಗಬಾರದು. ಪ್ರಪಂಚದ ಹಲವು ದೇಶಗಳು ಆರ್ಥಿಕವಾಗಿ ಮುಂದುವರಿದಿವೆ ನಿಜ. ಆದರೆ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಅವುಗಳ ನಡೆ ಪ್ರಶ್ನಾರ್ಹವಾದುದು. ನಮಗೆ ಗೊತ್ತಿದೆ, ಹಲವು ದೇಶಗಳಲ್ಲಿ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ತಮ್ಮ ಹೆತ್ತವರಿಂದ ಹಣವನ್ನು ಅಪೇಕ್ಷಿಸುವಂತಿಲ್ಲ. ಒಂದುವೇಳೆ ಹಣವನ್ನು ಪಡೆದುಕೊಂಡರೆ ಅದನ್ನು ಹಿಂದಿರುಗಿಸಬೇಕು. ಮಕ್ಕಳು ಹಣ ಗಳಿಕೆ- ನಿರ್ವಹಣೆಯ ಮಹತ್ವವನ್ನು ಮನಗಾಣುವಂತಾಗಲು ಈ ವ್ಯವಸ್ಥೆಯನ್ನು ಹೆತ್ತವರು ರೂಪಿಸಿಕೊಂಡಿದ್ದಾರೆ ನಿಜ. ಉದ್ದೇಶ ಒಳ್ಳೆಯದೇ. ಆದರೆ ಅದು ಉಂಟುಮಾಡುವ ಪರಿಣಾಮ? ಹೆತ್ತವರಿಂದಲೇ ಸಾಲ ಪಡೆದುಕೊಂಡ ಮಕ್ಕಳು ಹೆತ್ತವರನ್ನು ವ್ಯಾವಹಾರಿಕತೆಯ ಆಯಾಮದಿಂದಲೇ ಗಮನಿಸಿಕೊಳ್ಳತೊಡಗುತ್ತಾರೆ. ಅವರ ಜೊತೆಗಿನ ಭಾವನಾತ್ಮಕತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಭಾರತ ಹಾಗಲ್ಲ. ಬದುಕಿನ ಬಿಂದು ಬಿಂದುಗಳಲ್ಲಿಯೂ ಭಾವನಾತ್ಮಕತೆಯನ್ನು ಬಚ್ಚಿಟ್ಟುಕೊಂಡ ಭವ್ಯತೆ ಭಾರತದ್ದು. ಆದರೆ ಆಧುನಿಕತೆಯೆಂಬ ಮಾಯೆ ಭಾರತದ ಕೌಟುಂಬಿಕ ವ್ಯವಸ್ಥೆಯೊಳಗಿನ ಭಾವನಾತ್ಮಕತೆಯನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವುದು ಸತ್ಯ. ಆಧುನಿಕತೆಯ ಪರಿಣಾಮವಾಗಿ ವೃದ್ಧರು ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕುಟುಂಬದ ಬೆಂಬಲವನ್ನು ಕಳೆದುಕೊಂಡ ಹಿರಿಯರ ಬದುಕಿನಲ್ಲಿ ಭರವಸೆಯನ್ನು ಹುಟ್ಟಿಸಬೇಕಾದದ್ದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ವೃದ್ಧಾಶ್ರಮಗಳ ಮುಖ್ಯಸ್ಥರು, ಸಿಬ್ಬಂದಿಗಳ ಸೇವೆ ಗಮನಾರ್ಹವಾದದ್ದು. ನೆಲೆ ಕಳೆದುಕೊಂಡವರ ಮನಸ್ಸಿನ ಅಲೆಯನ್ನು ಕಾಪಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಂಚಿತರ ಬದುಕನ್ನು ಪ್ರೀತಿಯ ಹಾದಿಯಲ್ಲಿಯೇ ಮುನ್ನಡೆಸಲು ಶ್ರಮಿಸುವ ಅವರ ಕಾಯಕ ನಿಷ್ಠೆಗೆ ಸಲಾಂ ಹೇಳಬೇಕಾಗಿದೆ.

ಹಿರಿಯರು ಹೊರೆಗಳಾಗದಿರಲಿ Read Post »

ಇತರೆ

ಮಿಸ್ ಯೂ ಡ್ಯಾಡಿ

ನೆನಪು ಮಿಸ್ ಯೂ ಡ್ಯಾಡಿ ಮೌಲ್ಯಗಳ ಸಂಪುಟ ನನ್ನಪ್ಪ ಎಪ್ರಿಲ್ ತಿಂಗಳ ಸಮಯ ಬೆಂಗಳೂರಿನ ಸೆಂಟ್ರಲ್ ಸ್ಕೂಲಲ್ಲಿ ಇಂಗ್ಲಿಷ್ ಮೌಲ್ಯಮಾಪನ ನಡೆದಿತ್ತು.ನನ್ನ ತಂದೆ ಮಲ್ಲಣ್ಣ ಭರಮಪ್ಪ ತಿರ್ಲಾಪುರ ಇಂಗ್ಲಿಷ್ ಪ್ರಾಧ್ಯಾಪಕರು, ಮಾಮಲೆ ದೇಸಾಯಿ ಹೈಸ್ಕೂಲ್ ಶಿಗ್ಗಾವಿ, ಮೌಲ್ಯಮಾಪನಕ್ಕೆ ಅಲ್ಲಿ ಹಾಜರಿದ್ದರು. ಬೆಂಗಳೂರಿಗೆ ಬರುವಾಗ ತುಂಬು ಗರ್ಭಿಣಿಯಾದ ಕಿರಿ ವಯಸ್ಸಿನ ಹೆಂಡತಿಯನ್ನು ಅರೆಮನಸ್ಸಿನಿಂದಲೇ ಬಿಟ್ಟು ಬಂದಿದ್ದರು. ಬೆಂಗಳೂರಿಗೆ ಬಂದು ಒಂದು ವಾರಕ್ಕೆ ಅವರಿಗೆ ಒಂದು ಪತ್ರ ಬರುತ್ತದೆ. ಅದು ಮೊದಲ ಮಗುವಿನ ಜನನದ ಕುರಿತಾದ ಪತ್ರ. ಅಕಸ್ಮಾತಾಗಿ ಆ ಪತ್ರ ಮೊದಲು ಗೆಳೆಯರ ಕೈಸೇರುತ್ತದೆ. ಗೆಳೆಯರು ತಾವೇ ಪತ್ರವನ್ನು ಹರಿದು ಓದಿ ಕಂಗ್ರಾಜುಲೇಷನ್ಸ್ ನಿಮಗೆ ಗಂಡು ಮಗುವಾಗಿದೆ ಪಾರ್ಟಿ ಕೊಡಿ ಎಂದು, ದೊಡ್ಡ ಹೋಟೆಲಿಗೆ ಕರೆದೊಯ್ದು ಹೊಟ್ಟೆ ಬಿರಿಯೆ ಪಾರ್ಟಿ ತಿಂದಮೇಲೆ, ಕ್ಷಮಿಸಿ ತಿರ್ಲಾಪುರ ನಿಮಗೆ ಮಗಳು ಹುಟ್ಟಿದ್ದಾಳೆ ಅಂದರಂತೆ. ಆಗ ನನ್ನ ತಂದೆ ಕೊಂಚವೂ ವಿಚಲಿತವಾಗದ ಅರೆ ನನಗೆ ಇನ್ನೂ ಖುಷಿಯಾಯಿತು ಲಕ್ಷ್ಮಿ ನನ್ನ ಮನೆಗೆ ಬಂದಿದ್ದಾಳೆಅವಳಿಗೆ ನಾನು ವಿಜಯಲಕ್ಷ್ಮಿ ಎಂದು ಹೆಸರಿಡುತ್ತೇನೆ ಅವಳನ್ನು ನಾನು ಇಂಗ್ಲೀಷ್ ಪ್ರೊಫೇಸರ್ ಮಾಡುತ್ತೇನೆ ನೋಡುತ್ತೀರಿ ಅಂದಿದ್ದರಂತೆ. ..ಮುಂದೆ ಅದರಂತೆ ತಮ್ಮ ಮಗಳನ್ನು ಅವರು ಬೆಳಗಾವಿಯಮರಾಠಾ ಮಂಡಳ ಪದವಿ ಮಹಾವಿದ್ಯಾಲಯದ ಇಂಗ್ಲೀಷ್ ಉಪನ್ಯಾಸಕಿ ಯನ್ನಾಗಿ ಮಾಡಿದ್ದು ಈಗ ಇತಿಹಾಸ…. ನಾನು ಪ್ರೀತಿಯಿಂದ ಅಪ್ಪನನ್ನು ಡ್ಯಾಡಿ ಡ್ಯಾದೂಸ್, ಗೋಬಸ್ ಏನೆಲ್ಲಾ ವಿಚಿತ್ರ ಹೆಸರುಗಳಿಂದ ಕರೆಯುತ್ತಿದ್ದೆ. ಅವರು ಮಾತ್ರ ನನ್ನನ್ನು, “ಎಸ್ ಮೈ ಡಿಯರ್ ಡಾಟರ್ ವಿಜಯಲಕ್ಷ್ಮಿ” ಎಂದು ಯಾವಾಗಲೂ ಪ್ರೀತಿಯಿಂದಲೇ ಸಂಬೋಧಿಸುತ್ತಿದ್ದರು. ನನ್ನ ಮಗಳು ತುಂಬಾ ಜಾಣೆ, ಪಾಕಪ್ರವೀಣೆ, ಒಳ್ಳೆಯ ಗಾಯಕಿ ಎಲ್ಲದರಲ್ಲಿಯೂ ಅವಳದು ಎತ್ತಿದ ಕೈ ಅವಳನ್ನು ಮದುವೆಯಾಗುವ ತುಂಬಾ ಪುಣ್ಯವಂತ ಎಂದು ಸದಾ ನನ್ನನ್ನು ಒಳ್ಳೆಯ ಮಾತುಗಳಿಂದ ಹುರಿದುಂಬಿಸುತ್ತಿದ್ದರು. ಅಪ್ಪನೆಂದರೆ ನನ್ನ ಭಾವ, ನನ್ನ ಜೀವ ,ನನ್ನ ಜೀವನ ಕಟ್ಟಿದ ಶಿಲ್ಪಿ, ನನ್ನ ಆತ್ಮೀಯ ಗೆಳೆಯ, ನನ್ನ ತಾಯಿ, ನನ್ನ ಬಂಧು, ನನ್ನ ಸಲಹೆಗಾರ …ಒಂದೇ ಎರಡೇ ಎಲ್ಲಕ್ಕಿಂತ ಹೆಚ್ಚಾಗಿದೊಡ್ಡ ಸಹನಾಮೂರ್ತಿ. ಅವರಲ್ಲಿರುವ ತಾಳ್ಮೆಗೆ ಯಾರು ಸರಿಸಾಟಿ ಅಲ್ಲ ಸಹೃದಯಿ, ಪರೋಪಕಾರಿ, ಕಷ್ಟಸಹಿಷ್ಣು, ಮಕ್ಕಳನ್ನು ಒಂದು ಪೆಟ್ಟು ಹಾಕದೆ ಅತ್ಯಂತ ಪ್ರೀತಿಯಿಂದ ಬೆಳೆಸಿದ ಕರುಣಾಮಯಿ. ತಂದೆಯೆಂದರೆ ನಮಗೆ ಪ್ರೀತಿ, ತಂದೆಯೆಂದರೆ ಸಲುಗೆ ,ಆತ್ಮೀಯತೆ, ಹಠ….. ಶಿಗ್ಗಾವಿ ಮಾಮಲೆ ದೇಸಾಯಿ ಹೈಸ್ಕೂಲಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ಯಾವಾಗಲೂ ಮಕ್ಕಳಲ್ಲಿ ಉನ್ನತ ವಿಚಾರಗಳನ್ನು ತುಂಬುತ್ತಿದ್ದರು. ಸದಾ ಮನೆಯಲ್ಲಿ ಒಂದು ಆರೋಗ್ಯಕರ ಶೈಕ್ಷಣಿಕ ಧಾರ್ಮಿಕ ಸಾಂಪ್ರದಾಯಿಕ ಗೌರವಯುತವಾದ ಪರಿಸರವನ್ನು ಕಟ್ಟಿಕೊಟ್ಟಿದ್ದರು.”ಸಣ್ಣ ಗುರಿ ಅಪರಾಧ”, “Low aim is crime” ಹಾಗಾಗಿ ಉನ್ನತ ಗುರಿಯನ್ನು ನೀವು ಇಡಬೇಕು ಎಂದು ನಮಗೆ ಯಾವಾಗಲೂ ತಿಳಿಹೇಳುತ್ತಿದ್ದರು. ಹಾಗಾಗಿ ಇವತ್ತು ಅವರ ಹಿರಿಯ ಮಗಳಾದ ನಾನು ಬೆಳಗಾವಿಯ ಮರಾಠ ಮಂಡಳ ಕಾಲೇಜಿನ ನಲ್ಲಿ ಇಂಗ್ಲಿಷ್ವಿಭಾಗದ ಮುಖ್ಯಸ್ಥೆಯಾಗಿ ಯುಜಿಸಿ ಸಂಬಳವನ್ನು ಪಡೆಯುತ್ತಿದ್ದೇನೆ. ನನ್ನ ಮೊದಲನೆಯ ತಮ್ಮ ರವಿ ಎಂ ತಿರ್ಲಾಪುರ ಈಗ ಸ್ಪೆಷಲ್ ಡಿಸಿ ಆಗಿ ಬೆಂಗಳೂರಿನಲ್ಲಿಉನ್ನತ ಹುದ್ದೆಯಲ್ಲಿ ತಂದೆಯ ಎಲ್ಲ ಆದರ್ಶ ಮತ್ತು ಆಶಯಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಎರಡನೆಯ ತಮ್ಮ ಡಾಕ್ಟರ್ ಮೃತ್ಯುಂಜಯ ತಿರ್ಲಾಪುರ ತಮ್ಮದೇ ನರ್ಸಿಂಗ್ ಹೋಮ್ ನಡೆಸುತ್ತಿದ್ದು ಜೊತೆಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ವೃದ್ದಾಶ್ರಮ ನಡೆಸುತ್ತ ಪತ್ನಿ ಡಾಕ್ಟರ್ ರಾಣಿ ತಿರ್ಲಾಪುರ ಅವರೊಂದಿಗೆ ಸಮಾಜಮುಖಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. 1990 ರಲ್ಲಿ ಒಂದು ಘಟನೆ ನಡೆಯುತ್ತೆ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಮೇಜರ್ ತೆಗೆದುಕೊಂಡು ಪ್ರಥಮ ದರ್ಜೆಯಲ್ಲಿ ನಾನು ಬಿಎ ಪಾಸಾಗಿದ್ದೆ. ಮುಂದೇನು? ಎನ್ನುವ ಪ್ರಶ್ನೆಗೆ ನಾನು ಡ್ಯಾಡಿ ನಾನು B.ed ಮಾಡಿ ನಿಮ್ಮಂತೆ ಹೈಸ್ಕೂಲ್ ಶಿಕ್ಷಕಿ ಆಗುತ್ತೇನೆ ಎಂದೆ. ಆದರೆ ನನ್ನ ತಂದೆ ಇಲ್ಲ ನೀನು ನನ್ನಂತೆ ಆಗುವುದು ಬೇಡ ನನಗಿಂತ ಎತ್ತರಕ್ಕೆ ಬೆಳೆಯಬೇಕು ತಂದೆಯನ್ನು ಮೀರಿ ಬೆಳೆದ ಮಗಳಾಗಬೇಕು ಆದ್ದರಿಂದ ನೀನು ಯೂನಿವರ್ಸಿಟಿ ಅಥವಾ ಡಿಗ್ರಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಆಗಬೇಕೆನ್ನುವುದು ನನ್ನ ಆಸೆ ಎಂದರು. ಅವರ ಮಾತನ್ನು ನಾನು ಕೇಳದೆ ಹಠ ಮಾಡತೊಡಗಿದೆ, ಕೊನೆಗೆ ಅನಿವಾರ್ಯವಾಗಿ ಧಾರವಾಡದಲ್ಲಿಯ ಕೆಎಲ್ಇ ಬಿಎಡ್ ಕಾಲೇಜಿಗೆ ನನ್ನ ಕರೆದುಕೊಂಡು ಹೋದರು ಅಲ್ಲಿ ಏನಾಯಿತೋ ಗೊತ್ತಿಲ್ಲ ಆ ಮಹಾವಿದ್ಯಾಲಯದ ಪ್ರಾಚಾರ್ಯರು ಕೂಡ ನೀನು ಬಿ ಎಡ ಮಾಡುವುದು ಬೇಡ ನಿಮ್ಮ ತಂದೆಯ ಮಾತನ್ನು ಕೇಳು ಇಂಗ್ಲಿಷ್ನಲ್ಲಿ MA ಮಾಡು ಎಂದು ಉಪದೇಶಿಸಿದರು..ಬೇರೆ ದಾರಿ ಕಾಣದೆ ಅವರಿಬ್ಬರ ಮಾತುಗಳಿಗೆ ನಾನು ತಲೆಬಾಗಿ ಮುಂದೆ ಇಂಗ್ಲಿಷ್ನಲ್ಲಿ MA ಮಾಡಿ ಇದೀಗ ಬೆಳಗಾವಿಯ ಪ್ರತಿಷ್ಠಿತ ಡಿಗ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿ ಅದು ಕೂಡ ಈಗ ಇತಿಹಾಸ…ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಧ್ಯೇಯವನ್ನೇ ಇಟ್ಟುಕೊಳ್ಳಬೇಕು ಎನ್ನುವುದು ನನ್ನ ತಂದೆಯ ಅಭಿಲಾಷೆ ಇದೀಗ ಅವರ ಆಶಯದಂತೆಎಲ್ಲ ಮೊಮ್ಮಕ್ಕಳು ಕೂಡ ನಡೆಯುತ್ತಿದ್ದಾರೆ. ನನ್ನ 45ನೆಯ ವಯಸ್ಸಿನ ಆಸುಪಾಸಿನಲ್ಲಿ ಕಾಲೇಜಿನ ಕೆಲಸದ ಒತ್ತಡ ಮನೆ ಕೆಲಸಗಳು ಸಾಮಾಜಿಕ ಕಾರ್ಯಕ್ರಮಗಳು ಬೇರೆ ಊರಿಗೆ ವರ್ಗಾವಣೆ ಮನೆಯಲ್ಲಿ ಮಾವನ ಅನಾರೋಗ್ಯ ಚಿಕ್ಕ ಮಕ್ಕಳ ಶಾಲೆ ಪಾಠ ಪ್ರವಚನ ಪತಿಯ ದೂರದ ನೌಕರಿ ಎಲ್ಲವೂ ಸೇರಿ ಒಂಥರಾ ಮಾನಸಿಕ ಮತ್ತು ದೈಹಿಕ ಅನಾರೋಗ್ಯವನ್ನು ಉಂಟು ಮಾಡಿ ನಾನು ಹಾಸಿಗೆ ಹಿಡಿದು ಮಲಗಿ ಬಿಟ್ಟೆ ವಿಷಯ ತಿಳಿದ ನನ್ನ ತಂದೆ ಕಕ್ಕುಲತೆಯಿಂದ ಧಾವಿಸಿಬಂದರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧೋಪಚಾರ ಮಾಡಿಸಿ ಕಾಲೇಜಿಗೆ ಒಂದು ತಿಂಗಳು ರಜೆ ಹಾಕಿಸಿ ಚಿಕ್ಕ ಮಗುವನ್ನು ನೋಡಿಕೊಳ್ಳುವ ಹಾಗೆ ಸತತ ಒಂದು ತಿಂಗಳು ಹಣ್ಣು ಹಾಲು ಔಷದೋಪಚಾರ ಸಮಯಕ್ಕೆ ಸರಿಯಾಗಿ ಊಟ ತಿಂಡಿ ವಿಶ್ರಾಂತಿ ಎಲ್ಲವನ್ನೂ ನನಗೆ ಕೊಟ್ಟು ಒಂದೇ ತಿಂಗಳಿನಲ್ಲಿ ನನ್ನ ಹಿಮೋಗ್ಲೋಬಿನ್ ಹೆಚ್ಚಾಗುವ ಹಾಗೆ ನನ್ನ ಆರೈಕೆ ಮಾಡಿ ಮತ್ತೆ ನನ್ನ ಮುಖದಲ್ಲಿ ನಗು ಅರಳಿಸಿದ್ದು ನನ್ನಪ್ಪ.ಆ ಕಾಳಜಿ ಪ್ರೀತಿ ಕಕ್ಕುಲತೆ ಅಂತಃಕರಣ ಈಗ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಂದೆಯ ಎಲ್ಲ ಗುಣಗಳನ್ನು ಎರಕಹೊಯ್ದು ಮೈಗೂಡಿಸಿಕೊಂಡು ಇಂದಿಗೂ ಬದುಕುತ್ತಿರುವಳು ನಾನುಮತ್ತು ನನ್ನ ತಮ್ಮಂದಿರು. 1993 ಮಾಂತೇಶ್ ಪುಟ್ಟಿ ಮೆಕ್ಯಾನಿಕಲ್ ಇಂಜಿನಿಯರ್ ಸಂಪಗಾವಿ ಇವರೊಂದಿಗೆ ನನ್ನ ಮದುವೆಯಾಗಿ ವರ್ಷ ಕಳೆದಿತ್ತು. ಚಿಕ್ಕ ಬಾಡಿಗೆ ಮನೆ ಪುಟ್ಟ ಸಂಬಳ ಆದರೆ ಯಾವುದಕ್ಕೂ ಕೊರತೆ ಇರಲಿಲ್ಲ. ಬಹಳಷ್ಟು ಪ್ರೀತಿ-ವಿಶ್ವಾಸ ನೆಮ್ಮದಿಯಿಂದ ಬದುಕಿದ್ದ ದಿನಗಳು. ಮೇಲಿಂದ ಮೇಲೆ ಅಪ್ಪ-ಅಮ್ಮ ನನ್ನೆಡೆಗೆ ಬಂದು ಹೋಗುತ್ತಿದ್ದರು. ನಾನು ಪಾರ್ಟ್ ಟೈಮ್ ಉಪನ್ಯಾಸಕಿಯಾಗಿ ಕೇವಲ ಎರಡು ನೂರು ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದೆ. ಆಗ ನಮ್ಮ ಹತ್ತಿರ ಟು ವೀಲರ್ ಕೂಡ ಇರಲಿಲ್ಲ. ಆದರೆವಿಚಿತ್ರವೆಂಬಂತೆ ಪದೇಪದೇ ನನಗೊಂದು ಕನಸುಬೀಳುತ್ತಿತ್ತು ಮತ್ತು ಕಾಡುತ್ತಿತ್ತು. ಅದನ್ನು ನನ್ನ ತಂದೆಯೊಂದಿಗೆ ಹಂಚಿಕೊಂಡೆ. ” ಡ್ಯಾಡಿ ಯಾಕೋ ಪದೇ ಪದೇ ಕನಸಿನಲ್ಲಿ ನಾನು ಕಾರ್ ಡ್ರೈವಿಂಗ್ ಮಾಡುತ್ತಿದ್ದೇನೆ ನಮ್ಮ ಹತ್ತಿರ ಕಾರು ಬಿಡಿ ಟು ವೀಲರ್ ಕೂಡ ಇಲ್ಲ ಅದೇಕೆ ಹೀಗಾಗುತ್ತದೆ ಗೊತ್ತಾಗುತ್ತಿಲ್ಲ ಅಂದೆ ” ಅದಕ್ಕೆ ಅವರು ನೀನು ಮುಂದೆ ಕಾರ್ ಡ್ರೈವಿಂಗ್ ಮಾಡುವವಳಿದ್ದಿ ಅದು ಒಂಥರಾ ಇಂಟ್ಯೂಷನ್…. ನಾಳೆ ನೇನೀನು ಡ್ರೈವಿಂಗ್ ಕ್ಲಾಸಿಗೆ ಹಚ್ಚು ಎಂದು ನಾಲ್ಕು ಸಾವಿರ ರೂಪಾಯಿಗಳನ್ನು ತೆಗೆದು ಕೈಗಿಟ್ಟರು. ನಾನು ಕೂಡ ತಡಮಾಡದೆ ಮರುದಿವಸವೇ ಡ್ರೈವಿಂಗ್ ಕ್ಲಾಸ್ ಹಚ್ಚಿದೆ.ಮುಂದೆ ನಡೆದದ್ದು ಮತ್ತೆ ಇತಿಹಾಸವೇ …ಈಗ ಮನೆಯಲ್ಲಿ ಮೂರುಕಾರುಗಳು. ಕಳೆದ 15 ವರ್ಷಗಳಿಂದ ಡ್ರೈವಿಂಗ್ ಮಾಡುತ್ತಿದ್ದೇನೆ.ಇದು ಕೂಡ ನನ್ನ ಅಪ್ಪನ ಕಾಣಿಕೆ.. ಹೇಗೆ ಮರೆಯಲಾದೀತು ಅದೆಲ್ಲವನ್ನು….? ನನ್ನ ಮಾವ ಶಿವಜ್ಞಾನಿ ಪುಟ್ಟಿ ಮತ್ತು ನನ್ನ ತಂದೆಇಬ್ಬರು ಬೀಗರಾದರೂ ಅವರಿಬ್ಬರಲ್ಲಿ ಒಂದು ಸಲಿಗೆ ಅನ್ಯೋನತೆ ಅವಶ್ಯಕತೆಗಿಂತ ತುಸು ಹೆಚ್ಚೇ ಇತ್ತು. ಮನೆಯಲ್ಲಿ ಅತ್ತೆ ಇಲ್ಲದ ಕಾರಣ ವಯಸ್ಸಾದ ಮಾವನ ಬಹಳಷ್ಟು ಕೆಲಸವನ್ನು ನಾನೇ ಮಾಡಬೇಕಾಗುತ್ತಿತ್ತು. ಎಷ್ಟು ಸಲ ಬೆಳಗಾವಿಗೆ ಬಂದಾಗ ನನ್ನ ತಂದೆಯವರು, “ಅಕ್ಕವ್ವ ನೀನು ಹೋಗಮ್ಮ ಕಾಲೇಜಿಗೆ, ನಾನು ನಿಮ್ಮ ಮಾವನವರಿಗೆ ಊಟ ಬಡಿಸುತ್ತೇನೆ ನಾನೇ ಚಹ ಮಾಡಿಕೊಡುತ್ತೇನೆ ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಮಗಳ ಕೆಲಸವನ್ನು ಕಡಿಮೆ ಮಾಡಿ ಕಂಫರ್ಟ್ ನೀಡಿದವರು ನನ್ನ ಡ್ಯಾಡಿ. ಪ್ರತಿಬಾರಿಯೂ ನಮ್ಮ ತಂದೆ ಬೆಳಗಾವಿಗೆ ಬರುವಾಗ 5000 10000 ನೋಟಿನ ಕಂತೆಯನ್ನು ಇಟ್ಟುಕೊಂಡೇ ಬರುತ್ತಿದ್ದರು. ಇಲ್ಲಿ ಬಂದಾಗ ಮಗಳಿಗೆ ಮೊಮ್ಮಕ್ಕಳಿಗೆ ಹೊಸಬಟ್ಟೆ ಕೊಡಿಸುವುದು ಹೋಟೆಲುಗಳಲ್ಲಿ ಉಣಿಸುವುದು ಸಿನಿಮಾ ತೋರಿಸುವುದು ಮಾಡುತ್ತಿದ್ದರು.ಒಂದು ಬಾರಿ ಒಂದು ಸ್ವಾರಸ್ಯಕರ ಘಟನೆ ನಡೆಯುತ್ತದೆ. ಊರಿನಿಂದ ಅವರು ಬಂದು ನಮ್ಮ ಮಾವನ(ವಯಸ್ಸಿನಲ್ಲಿ ತುಂಬಾ ಹಿರಿಯರಾದ ಅವರನ್ನು ಅಜ್ಜ ಎಂದು ಕರೆಯುತ್ತಿದ್ದೆ) ರೂಮಿನಲ್ಲಿ ಮಲಗುತ್ತಾರೆ. ಅದೇ ರೂಮಿನಲ್ಲಿದ್ದ ನಮ್ಮ ಮಾವನ ಅಲೆಮಾರಿನಲ್ಲಿ 10000 ರೂಪಾಯಿಗಳನ್ನು ಇಡುತ್ತಾರೆ. ಮುಂದೆ ಎರಡು ದಿನದಲ್ಲಿ ಆ ದುಡ್ಡು ಕಾಣೆಯಾಗುತ್ತದೆ. ಗಾಬರಿಗೊಂಡು ನನ್ನ ತಂದೆ ನನ್ನನ್ನು ಕರೆದು *ಅಲೆಮಾರಿನಲ್ಲಿ ಇಟ್ಟಿದ್ದ ರೂಪಾಯಿ ಕಾಣುತ್ತಿಲ್ಲ 10000 ರೂಪಾಯಿಗಳನ್ನು ನಿನ್ನ ಮಾವನವರೇ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸ ತೊಡಗಿದರು, ಅದಕ್ಕೆ ಪ್ರತ್ಯುತ್ತರವಾಗಿ, ಡ್ಯಾಡಿ,”ಇಲ್ರಿ ನಮ್ಮ ಅಜ್ಜಾರು ಅಂಥವರಲ್ಲ ಅವರು ಬೇರೆಯವರ ದುಡ್ಡಿಗೆ ಆಸೆ ಮಾಡುವುದಿಲ್ಲ ನೀವು ಎಲ್ಲೋ ಇಟ್ಟು ಮರೆತಿರಿ ಗಾಬರಿಯಾಗಬೇಡಿ ನಿಧಾನವಾಗಿ ಹುಡುಕೋಣ” ಎಂದೆ. ನನ್ನ ಮಾತು ಕೇಳಿ ಅವರಿಗೆ ಸಿಟ್ಟು ಬಂತುಏನವ್ವ ನೀನು ನಿಮ್ಮ ಮಾವನ್ನ ಮ್ಯಾಲಗಟ್ಟತಿಅಲ್ಲ ,ಅಪ್ಪನಿಗಿಂತ ಅವರು ನಿನಗೆ ಹೆಚ್ಚೇನು? ಅಂದ್ರು, ನಾನು ಏನು ಮಾತನಾಡಲಿಲ್ಲ. ಮುಂದೆ ಮರುದಿವಸಅಕಸ್ಮಾತಾಗಿ ಅವರ ದೊಡ್ಡ ಏರ್ ಬ್ಯಾಗ್ ನಲ್ಲಿ ಇಟ್ಟಿದ್ದ ಡೈರಿಯಲ್ಲಿ 10000 ರೂಪಾಯಿಗಳ ಕಂತೆ ಅವರಿಗೆ ಸಿಕ್ಕಿತು. ತುಂಬಾ ಪಶ್ಚಾತ್ತಾಪ ಪಟ್ಟುಕೊಂಡು ನೀನು ಹೇಳಿದ್ಹೇ ಸರಿ ಮಗಳ, ನಾನೇ ನಿನ್ನ ಅಜ್ಜನನ್ನು ತಪ್ಪು ತಿಳಿದುಕೊಂಡಿದ್ದೆ, ಈಗಿನ ಕಾಲದಲ್ಲಿ ಅತ್ತೆ-ಮಾವ ಎಂದರೆ ಮೂಗು ಮುರಿಯುವವರೇ ಜಾಸ್ತಿ ಅಂತದ್ದರಲ್ಲಿ ನೀನು ತಂದೆಯನ್ನು ಲೆಕ್ಕಿಸದೆ ಮಾವನ ಸ್ವಭಾವವನ್ನು ಎತ್ತಿ ಹಿಡಿದೆ ನೀನು ನನ್ನ ಮಗಳು ಎಂಬ ಹೆಮ್ಮೆ ನನಗಿದೆ ಅಂದಿದ್ದರು ನಮ್ಮ ತಂದೆ, ಅದೆಲ್ಲವೂ ಈಗ ನೆನಪಾಗುತ್ತಿದೆ….. ನೌಕರಿಗೆ ಸಂಬಂಧಪಟ್ಟಂತ ಏನೇ ಸಮಸ್ಯೆಗಳು ಇರಲಿ ನನಗೆ ಬೆನ್ನೆಲುಬಾಗಿ ಸದಾ ಬೆಂಗಾವಲಾಗಿ ಇರುತ್ತಿದ್ದರು ನನ್ನತಂದೆ. ಎರಡನೆಯ ಪ್ರಮೋಷನ್ ಸಮಯ, ರೆಫ್ರೇಶರ್ ಕೋರ್ಸ ಮಾಡಿಕೊಳ್ಳಬೇಕಿತ್ತು ಹತ್ತಿರದ ಯಾವ ಯೂನಿವರ್ಸಿಟಿಯಲ್ಲಿ ಅವಕಾಶ ಸಿಗಲಿಲ್ಲ ಕೊನೆಗೆ ಪಾಂಡಿಚೇರಿ ಯೂನಿವರ್ಸಿಟಿ ಗೆ ಹೋಗುವುದು ಎಂದಾಯಿತು. ನಾನೊಬ್ಬಳೇ ಹೇಗೆ ಹೋಗಲಿ ಎಂದು ಚಿಂತೆ ಮಾಡುತ್ತ ಕುಳಿತಾಗ, ಮತ್ತೆ ಯಥಾಪ್ರಕಾರ ನನ್ನ ತಂದೆ ನಾನು ಬರುತ್ತೇನೆ ನಡೆಯಮ್ಮ(ಆಗ ತೀವ್ರವಾದ ಮಂಡಿ ನೋವಿನಿಂದ ಬಳಲುತ್ತಿದ್ದರು) ಎಂದು ಪಾಂಡಿಚೇರಿಯ ವರೆಗೆ ನನ್ನೊಂದಿಗೆ ದೀರ್ಘ ಪ್ರಯಾಣವನ್ನು ಮಾಡಿ ನನ್ನನ್ನು ಯುನಿವರ್ಸಿಟಿಯ ಹಾಸ್ಟೆಲ್ ವರೆಗೆ ಮುಟ್ಟಿಸಿ, ಮರುದಿವಸ ರೆಫ್ರೇಶರ್ ಕೋರ್ಸ ಮೊದಲ ತರಗತಿಯಲ್ಲಿ ಚಿಕ್ಕಮಕ್ಕಳಂತೆ ನನ್ನನ್ನು ಕುಳ್ಳರಿಸಿ ಆಲ್ ದ ಬೆಸ್ಟ್ ಹೇಳಿ ಊರಿಗೆ ಮರಳಿದ್ದರು.ಇವತ್ತು ನಾನು ಅಸೋಸಿಯೇಟ್ ಪ್ರೊಫೆಸರ್ ದೊಡ್ಡ ಸಂಬಳದ ಪ್ರಾಧ್ಯಾಪಕಿ ಕಾರಣ …..ಮತ್ತೆ ನನ್ನ ತಂದೆ. ಇಲ್ಲಿಯವರೆಗೆ ಸಾವಿರಾರು ಘಟನೆಗಳು ನಡೆದಿವೆ,ಲೆಕ್ಕಕ್ಕೆ ಸಿಗದ ಅವರ ಸಹಾಯ.ಒಂದೇ-ಎರಡೇ ಯಾವುದನ್ನು ನೆನಪಿಸಿಕೊಳ್ಳಲಿ ಯಾವುದನ್ನು ಉಲ್ಲೇಖಿಸಲಿ ತಿಳಿಯುತ್ತಿಲ್ಲ….. ಸಂಜೆಯಾದರೆ ಸಾಕು ದಿನಾಲು ಅಪ್ಪನಿಗೆಫೋನ್ ಹಚ್ಚುತ್ತಿದ್ದೆ ವಾಕಿಂಗ್ ನೆಪಮಾಡಿ ಹೊರಹೋಗಿ ಗಂಟೆಗಟ್ಟಲೆ ಮಾತನಾಡುತ್ತಿದ್ದೆ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದಎಲ್ಲಾ ಘಟನೆಗಳನ್ನು ಅವರೊಂದಿಗೆ

ಮಿಸ್ ಯೂ ಡ್ಯಾಡಿ Read Post »

ಕಾವ್ಯಯಾನ

ಆಮೆಯೂ ಮೊಲವೂ

ಕಥನಕಾವ್ಯ ಆಮೆಯೂ ಮೊಲವೂ ಬೆಂಶ್ರೀ ರವೀಂದ್ರ ಭಾಗ ಒಂದು ಸ್ಪರ್ಧೆಗೆ ಆಮೆಯೂ ಮೊಲವುಟ್ರ್ಯಾಕಿನ ಗೆರೆಯಲಿ‌ ನಿಂತಿಹವುಓಟದ ರೇಸಿಗೆ ಅಣಿಯಾಗಿಹವು ಇದೆಂತಹ ಆಟ ತಮಾಷೆ ಜೂಟಾಟಮಜವಿದೆ ನೋಟ ಆಮೆ ಮೊಲದೋಟಕಾಡಿನ ಪ್ರಾಣಿಗಳಿಗೆ ಮೋಜಿನ ಮಾಟ ಕಿವಿಯನು ನಿಗುರಿಸಿ ಕಣ್ಣನು ಪಿಳುಕಿಸಿಸಮ ಎನಗಾರೆಂದು ಬೀಗಿಹ ಭೂಪಬೆಳ್ಳನೆ ಬೆಳುಪಿನ ಮೊಲ ಮಹರಾಯ ಕಾಲನು ಜಾಡಿಸಿ ಕತ್ತನು ಆಡಿಸಿಸುತ್ತಲೂ ನೋಡಿ ದೇವಗೆ ಪ್ರಾರ್ಥಿಸಿಓಟಕೆ ಸಿದ್ದವಾದನು ಆಮೆರಾಯ ಕತ್ತನು‌ ಕೊಂಕಿಸಿ ಕಾಲನು ಜಾಡಿಸಿಕಣ್ಣನು ಕೀಲಿಸಿ ಟ್ರ್ಯಾಕನು ವೀಕ್ಷಿಸಿಅಂಪೈರ್ ಸೀಟಿಯು ಜಿರಾಫೆರಾಯ ಮಿಂಚಿನ ವೇಗದಿ ಓಡಿತು ಮೊಲವುತೆವಳುತ ಸಾಗಿತು ಗುರಿಯೆಡೆ ಆಮೆಹೋ..ಎಂದಿತು ಪ್ರಾಣಿಯು ಗಿಡಮರ ಅರ್ಧದಾರಿ ಓಡಿದ ಮೋಲವುಕಂಡಿತು ತುಂಬಿದ ಹಸಿರು ಕಾವಲುಹಿಂತಿರುಗಿ ನೋಡಲು ಪೋಟಿದಾರ ಹಿಂದೆಲ್ಲೊ ಇಹನು ಈ ಆಮೆಭೂಪಬರುವ ತನಕ ಇಲ್ಲಿಗೆ ವಿಶ್ರಾಂತಿ ಪಡೆವೆಹುಲ್ಲೂ ನೀರು ಉಂಡು ಮಲಗಿದನು ಮೊಲಕೆ ಬಂದಿತು ಗಡದ್ದು ನಿದ್ದೆಕೇಳಿಸಿತೆಲ್ಲಡೆ ಗೊರಕೆಯ ಸದ್ದೆನಡೆಯಿತು ಆಮೆ ಗುರಿಯೆಡೆಗೆ ನಿದ್ದೆಲಿ ಮೊಲಕೆ ಗೆಲುವಿನ ಪದಕಖುಷಿಯಲಿ ಮಾಡಿ ಮತ್ತಷ್ಟು ನಿದ್ದೆಅಷ್ಟರಲಿ ಹೋ…ಎನ್ನುವ ಸದ್ದು “ಗುರಿ ಮುಟ್ಟುವ ತನಕ ನಿಲ್ಲದಿರಿ”ಮಾತನು ಮನಸಲಿ ಇಟ್ಟಿದ ಆಮೆಸದ್ದಿಲ್ಲದೆ ಗೆಲುವಿನ ಕಂಬವ ದಾಟಿತ್ತು ಕಾಡು ಪ್ರಾಣಿಗೀಣಿ ಹಕ್ಕಿಪಿಕ್ಕಿ ಕೂಡಿದವುಗೆಲುವಿನ ನಿಲುವಲಿ ಆಮೆಯ ನಿಲಿಸಿಕತ್ತಿಗೆ ಪದಕವ ತೊಡಿಸಿದವು ಸೋಮಾರಿಯಾಗದಿರಿ ಮಕ್ಕಳೆಗೆಲುವಿನ ಗುರಿಯು ಮನದೊಳಗಿರಲಿಶ್ರಮಕೆ ಫಲಸಿಗುವುದು ಶತಸಿದ್ದ. ಭಾಗ ಎರಡು ನೆನಪಿದೆಯೇ‌ ಮಕ್ಕಳೆ ನಿಮಗೆಮೊಲದಾಮೆಯ ಓಟದ ಆಟಕಾಡಿನಲಂತೂ ನಡೆದಿದೆ ಈಗಅದೇ ಮಾತಿನ ಮೋಜಾಟ ಓಟದ ವೀರ ಸೋತಿದ್ದೆಂತುತೆವಳುವ ಆಮೆ ಗೆದ್ದಿದ್ದೆಂತುಬುಡಮೇಲಾಗಿ ಲೆಕ್ಕಾಚಾರಹೀಗೂ ಉಂಟೆ ಅಚ್ಚರಿ ಹೂಟ ಹುಲ್ಲಿನ ಬಣಿವೆಲಿ ಚಿಗುರನು ಕಚ್ಚುತಚಿಂತಿಸಿ ಮೊಲವು ಕಿವಿಯನು ನಿಗುರಿಸಿಅರಿಯಿತು ಸೋಲಿನ ಗುಟ್ಟನು ಬಿಡಿಸಿಹ್ಞಾ…ನಾ.‌‌.ಸೋಮಾರಿ ದುರಹಂಕಾರಿ ವಿನಯದಿ ಆಮೆಯು ಗೆಲುವಿಗೆ ಬೀಗದೆಯೋಚಿಸಿತು, ಗುರಿಯೆಡೆ ಲಕ್ಷವನಿಡದೆಸೋತಿತು ಮೊಲವು ಓಟವನು, ಕಲಿತರೆಬುದ್ದಿಯ ಒಳಿತಾಗುವುದು ಎಲ್ಲರಿಗೆ ಸ್ನೇಹದಿ ಹೀಗಿರಲೊಮ್ಮೆ ಮೊಲವನುಆಮೆಯ ಕಾಡಿನ ರಾಜನು ಕರೆದಿಹನುಅವಸರದಿ ಹೋಗಿರಿ ಪಕ್ಕದ ಕಾಡಿಗೆರಾಯಭಾರಿಯಾಗಿ ತುರ್ತುಚರ್ಚೆಗೆ ತಲುಪಲೇ ಬೇಕು ನಾಳೆಯೆ ಅಲ್ಲಿಗೆಕಾಡುಮೇಡು ಕೊರಕಲು ಕೆರೆ ನದಿಯುಕಣಿವೆಯು ಎಂತು ದೂರದ ಹಾದಿಯುಚಿಂತಿಸಿ ಹುಡುಕಿದರೊಂದು ಉಪಾಯ ಬೆಳಗಿನ ಜಾವಕೆ ಮೊಲದ ಬೆನ್ನಲಿಆಮೆಯು ಕುಳಿತು ಸವೆಯಿತು ಹಾದಿಕಾಡು ಮೇಡಲಿ ಅಡ್ಡ ಬರಲು ನೀರುಮೊಲವೇರಿತು ಆಮೆಯ ಬೆನ್ನು ಇಂತು ಉಪಾಯವ ಮಾಡಿದವುಪಕ್ಕದ ಕಾಡಿಲಿ ಸವಿನುಡಿಯಾಡಿದವುಕೆಲಸವ ಸಾಧಿಸಿ ಸಮಯ ಮೀರದೆದೊರೆಗಿತ್ತವು ವರದಿಯ ಸಂಭ್ರಮದಿ ಮಕ್ಕಳೆ ತಿಳಿಯಿರಿ ನಮ್ಮಯ ಶಕ್ತಿಗೆಕೂಡಲು ಬೇಕು ಗೆಳೆಯರ ಬಲವುಒಗ್ಗಟ್ಟಲ್ಲುಂಟು ನಲಿವು ಗೆಲುವುಕೂಡಿ ಬಾಳಿದರೆ ಸ್ವರ್ಗ ಸುಖವು

ಆಮೆಯೂ ಮೊಲವೂ Read Post »

ಕಾವ್ಯಯಾನ

ಮರೆಯದ ನೆನಪು

ಕಾವ್ಯಯಾನ ಮರೆಯದ ನೆನಪು ಶೃತಿ ಮೇಲುಸೀಮೆ ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸುದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲುಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು ತುಂಬಿತ್ತು ತನ್ನತನವನುಳಿಸಿಕೊಂಡು, ಅನ್ಯಮತವನು ಗುಣಿಸಿಕೊಂಡುಅಂಧಕಾರವ ಮರೆಸಿ, ಕಲಿತ ಸಾಲಿಲೇ ಪಾಠ ಹೇಳೋಕೆ ಹೋಗೋತರಾಯ್ತು ಹೋಗೋ ದಾರಿಲಿ ಯವ್ವಾ ನನ್ನ ಮಗಿನು ನಿನ್ನಂಗ ಮಾಡವ್ವ ಅನ್ನೋ ಮಾತುಆಗ್ಲಿಯವ್ವ ಮಗಿನ ದುಡಿಯಕ ಹಚ್ಚದೆ,ಶಾಲಿಗೆ ಕಳ್ಸು ಅಂದಾಗ ಹ್ಮ್ ಗುಟ್ಟಿದ ಮನಸು ಬಾಲ್ಯದಲ್ಲಿ ಕಂಡ ಕನಸು, ಅನುಭವಿಸಿದ್ದ ತ್ರಾಸುಬದುಕು ಹೇಳ್ಕೊಟ್ಟ ನೀತಿ, ಸಾರ್ಥಕ ಅನ್ಸಿತ್ತು

ಮರೆಯದ ನೆನಪು Read Post »

ಅಂಕಣ ಸಂಗಾತಿ, ತೊರೆಯ ಹರಿವು

ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ  ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ ಅವರ ಪಾಡಿಗೆ; ನಾವೂ ಆಡಿಕೊಳ್ಳೋಣ ನಮ್ಮ ಪಾಡಿಗೆ ಎಂಬರ್ಥದಲ್ಲಿ ಈ ಮಾತು ಬಳಕೆ ಆಗಿರುತ್ತದೆ. ಇಲ್ಲಿ ಸಣ್ಣಮಕ್ಕಳಿಗೆ ದೊಡ್ಡವರ ಗುಂಪಿನಲ್ಲಿ ತಾವೂ ಆಡಿದೆವೆಂಬ ಖುಷಿ ಸಿಕ್ಕರೆ, ದೊಡ್ಡವರಿಗೆ ತಮ್ಮ ಆಟದ ನಿಯಮಗಳಿಗೆ ಮಕ್ಕಳಿಂದ ತೊಂದರೆ ಆಗಲಿಲ್ಲ ಎಂಬ ಸಮಾಧಾನ!  ಈ ಖುಷಿ – ಸಮಾಧಾನ ಸ್ಥಾಯಿಯಲ್ಲ. ಯಾರನ್ನು ಆಟಕ್ಕುಂಟು ಲೆಕ್ಕಕ್ಕಿಲ್ ಲವೆಂದು  ಪರಿಗಣಿಸಿ ಹಾಗೆ ನಡೆಸಿಕೊಳ್ಳಲಾಗಿರುತ್ತದೆಯೋ ಅವರಿಗೆ ಸ್ವಲ್ಪ ತಿಳುವಳಿಕೆ ಮೂಡುತ್ತಿದ್ದಂತೆಯೇ, ತನ್ನನ್ನು ಗುಂಪಿನಿಂದ ಪ್ರತ್ಯೇಕಿಸಲಾಗಿದೆ ಎನ್ನುವುದು ಅರ್ಥ ಆಗುತ್ತದೆ. ಆಗ ಮೊದಲಿಗೆ ಅವರ ಮನಸ್ಸಿಗೆ ಘಾಸಿಯಾಗುತ್ತದೆ! ಅನಂತರ ದುಃಖ ಮೂಡಿ; ಕೊನೆಗೆ ಅದು ಸಿಟ್ಟು, ಕೋಪಕ್ಕೆ ಮೂಲವಾಗಿ ದ್ವೇಷ-ರೋಷದ ಕಿಡಿ ಹೊತ್ತಿಸಿ ಇತರರೊಡನೆ ಜಗಳವಾಡಿಕೊಂಡು, ದೂರು ಹೇಳಿ, ಗಲಾಟೆ ಎಬ್ಬಿಸಿ ಆಟದ ಆನಂದವನ್ನೇ ಕೆಡಿಸಬಹುದು ಅಥವಾ ಆಟವನ್ನೇ ಮುಕ್ತಾಯಗೊಳಿಸುವ ಕೊನೆಯ ಹಂತಕ್ಕೆ ಮುಟ್ಟಬಹುದು.    ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘ಗುಡ್ ಫಾರ್ ನಥಿಂಗ್’ ಎಂದು. ಇದನ್ನೂ ಸಹ ನಮ್ಮ ‘ಆಟಕ್ಕುಂಟು …’ ಎನ್ನುವ ನುಡಿಗಟ್ಟಿನಂತೆಯೇ ಬಳಸುವುದುಂಟು. ಅಪ್ರಯೋಜಕರಿಗೆ, ನಿಷ್ಪ್ರಯೋಜಕರಿಗೆ ಬೆಟ್ಟು ಮಾಡಿ ತೋರಿಸುವಾಗ ಈ ಮಾತು ಹೇಳಲಾಗುತ್ತದೆ. ಎಂದರೆ ಮನುಷ್ಯ ಒಳ್ಳೆಯವರೇ, ಆದರೆ ಏನೂ ಉಪಯೋಗವಿಲ್ಲ! ಉಪಯೋಗಕ್ಕೆ ಬಾರದ ಒಳ್ಳೆಯತನ ಕಟ್ಟಿಕೊಂಡು ಪ್ರಯೋಜನವೇನು? ಎಂದು ಕೇಳಬಹುದಾದ ಪ್ರಶ್ನೆಗೆ, ಒಳ್ಳೆಯದ್ದೇ ಅಪರೂಪ ಆಗುತ್ತಿರುವ ಈ ಸಂದರ್ಭದಲ್ಲಿ ಕಡೇಪಕ್ಷ ಅಂತಹ ಗುಣವನ್ನು ತೋರುವವರಾದರೂ ಇದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆನ್ನುವ ಉತ್ತರ ನೀಡಬಹುದೇ?   ಆಟ ಎಂದರೆ ಎಷ್ಟೊಂದು ಬಗೆ ನೆನಪಾದರೂ ‘ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆಯೋಕೆ..’ ಸಾಧ್ಯವೇ ಇರೋಲ್ಲ. ನಮ್ಮ ಬಾಲ್ಯ ಕಾಲದ ಆಟಗಳ ಮುಂದೆ ಈಗಿನ ಮಕ್ಕಳ ಇಂಟರ್ನೆಟ್ಟಿನೊಳಗಿನ ವೀಡಿಯೋ ಗೇಮಾಟಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಮಣ್ಣಿನೊಡನೆ ಆಡಿರೆಂದರೆ ಮೂಗು ಮುರಿದುಕೊಳ್ಳುವ ಈ ಮಕ್ಕಳಿಗೆ ಇಂಡೋರ್ ಗೇಮ್ ಎಂದರೆ ಕೇರಂ, ಚೆಸ್, ಪಗಡೆ, ಅಳಿಗುಣಿ ಮನೆ, ಚೌಕಾಬಾರ, ಹಾವು ಏಣಿ  ಮೊದಲಾದವು ನೆನಪಾಗುವುವೇ? ಧರ್ಮರಾಯನೂ ಸಹ ಇಂಡೋರ್ ಗೇಮೆಂಬ ದ್ಯೂತದಲ್ಲಿ ಸೋತವನೇ.. ಸೋತವನು ಅನಂತರ ಗೆದ್ದವನಾದುದೇ ಒಂದು ದೊಡ್ಡ ರಾಮಾಯಣ..! ಅಲ್ಲಲ್ಲ ಮಹಾಭಾರತ.     ‘ದೇವರ ಆಟಾ ಬಲ್ಲವರಾರು…?’ ಎನ್ನುತ್ತಾ  ‘ಎಲ್ಲಾ ವಿಧಿಯ ಲೀಲೆ ನರಮಾನವನ ಕೈಯಲ್ಲಿ ಏನಿದೆ?’ ಎಂದು ಯಾವ ಜವಾಬ್ದಾರಿಯನ್ನೂ ಹೊರಲಾರದವರು ಹೇಳಿ ಕೈ ತೊಳೆದುಕೊಂಡು ಬಿಡುವುದುಂಟು. ಇದು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಯುದ್ಧ ಎಂದಾಗ ನೆನಪಾಗುವುದು ನೋಡಿ, ಹೊಡಿಬಡಿಕಡಿ,ಹುಡುಕಿ ಕೊಚ್ಚು, ಅಟ್ಟಾಡಿಸಿ ಕೊಲ್ಲು, ಬಾಂಬ್ ಹಾಕು, ಬಂದೂಕಿನಿಂದ ಗುರಿಹಿಡಿ, ಎದೆ ಸೀಳು, ರಕ್ತ ಬಸಿ ಎನ್ನುವಂತಹ ವೀಡಿಯೋ ಗೇಮ್ ಗಳನ್ನು ಈಗತಾನೇ, ತಾಯ ಮೊಲೆಹಾಲು ಕುಡಿದು ಬಿಟ್ಟ ತುಟಿಗಳಲ್ಲಿ ಹಸಿಹಾಲಿನ ವಾಸನೆ ಆರಿರದ ಕಂದಮ್ಮಗಳು ಆಡುತ್ತಿರುವುದು ಭೀಭತ್ಸಕ್ಕೆ ನೈಜ ಉದಾಹರಣೆ. ಹೀಗೆ ಆಡುವುದೇ ಮಜಾ ಎಂಬಂತೆ, ಬ್ರೈನ್ ವಾಷ್ಗೆ ಒಳಗಾಗುವ ಮಕ್ಕಳ ಕೈಯಲ್ಲಿ ಎಕೆ-೪೭ ರಂತಹ ರಣಮಾರಿಯ ಕೈಯ ಆಯುಧ ಸಿಕ್ಕರೆ ತಮ್ಮ ಖುಷಿಗಾಗಿ ಅನ್ಯ ಸಹಜೀವಿಯನ್ನು ಕೊಂದು ತೀರದಿರರೇ?    ‘…ಆಟ ಊಟ ಓಟ ಕನ್ನಡ ಮೊದಲನೆ ಪಾಠ..’  ಎಂದು ಚಿಕ್ಕಂದಿನಲ್ಲೇ ಕಲಿಯುತ್ತಾ ಬೆಳೆದ ನಾವು ದೊಡ್ಡವರಾದ ಮೇಲೆ ಹೇಳ್ತೀವಿ, ‘ನಿನ್ನಾಟ ನನ್ಹತ್ರ ನಡೀಯಲ್ಲಮ್ಮಾ..’ ಎಂದು. ಆದ್ರೆ ಕೃಷ್ಣನಾಟಕ್ಕೆ ಮಾತ್ರ ಸುಮ್ಮನೆ ಮಾತಿಗೆಂಬಂತೆ, ‘ಬೇಡ ಕೃಷ್ಣಾ ರಂಗಿನಾಟ..’ ಎಂದು ಹುಸಿ ಮುನಿಸು ತೋರಿದರೂ ಒಳಗೊಳಗೆ ಪುಳಕಗೊಂಡು ಸಂಭ್ರಮಿಸ್ತೀವಿ! ಕೃಷ್ಣ ಬರಿಯ ರಂಗಿನಾಟಗಳನ್ನು ಮಾತ್ರ ಆಡಿದವನಲ್ಲ, ರಾಜತಾಂತ್ರಿಕ ನೈಪುಣ್ಯ ಸಾಧಿಸಿದವನು ಎಂದೆಲ್ಲಾ ಕೊಂಡಾಟ ಮಾಡಿದರೂ ನಮಗೆ ಇಷ್ಟವಾಗಿ ಮನಸ್ಸಿಗೆ ಹತ್ತಿರವಾಗೋದು ಗೋಪಬಾಲನ ಬಾಲ್ಯದ ಆಟಗಳ ಸೊಗಸುಗಾರಿಕೆಗಳೇ..    ಒಂದೊಂದು ಪ್ರದೇಶಕ್ಕೂ ವಿಶಿಷ್ಟವಾದ ಸ್ಥಳೀಯ ಆಟಗಳಿರುತ್ತವೆ. ಭಾರತ-ಹಾಕಿ, ಅಮೇರಿಕ- ರಗ್ಬಿ, ಸ್ಪೇನ್- ಗೂಳಿ ಕಾಳಗ, ಆಸ್ಟ್ರೇಲಿಯಾ-  ಕ್ರಿಕೆಟ್, ಬಾಂಗ್ಲಾದೇಶ- ಕಬಡ್ಡಿ, ಚೀನಾ – ಪಿಂಗ್ ಪಾಂಗ್, ಜಪಾನ್- ಸುಮೋ, ಭೂತಾನ್-ಆರ್ಚರಿ…. ಹೀಗೆ ಹಲವು ರಾಷ್ಟ್ರಗಳು ತಮ್ಮ ರಾಷ್ರೀಯ ಕ್ರೀಡೆಗಳನ್ನು ಇವೇ ಎಂದು ಘೋಷಿಸಿಕೊಂಡಿವೆ. ಇದರ ಜೊತೆಗೇ, ಭಾರತದಂತಹ ಸಂಯುಕ್ತ ಒಕ್ಕೂಟ ರಾಷ್ಟ್ರದಲ್ಲಿ ಕಬಡ್ಡಿ, ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಸ್ಪರ್ಧೆ, ದೋಣಿ ಸ್ಪರ್ಧೆ, ಮರ ಏರುವುದು, ಬುಗುರಿ, ಚಿನ್ನಿದಾಂಡು, ಅಪ್ಪಾಳೆ ತಿಪ್ಪಾಳೆ, ಮುದ್ದೆ ನುಂಗುವುದು, ಗದ್ದೆ ನಾಟಿ ಮಾಡುವುದು…,  ಹೀಗೆ ಹಲವು ಪ್ರಾದೇಶಿಕ ಆಟಗಳನ್ನು ಹಾಗೂ ಕೆಲವು ಸೀಸನಲ್ ಆಟಗಳನ್ನೂ ಆಡುವುದುಂಟು.     ಆಟವನ್ನು ಆಟ ಎಂದರೆ, ಏನೋ ಲಘುತ್ವ ಭಾವ. ಹಾಗಾಗಿ, ಕ್ರೀಡೆ ಎಂದು ಕರೆದು ಅದಕ್ಕೆ ಗಾಂಭೀರ್ಯವನ್ನು ಆರೋಪಿಸಲಾಗುತ್ತದೆ. ಹೌದಲ್ಲವೇ? ಆಡುವಾಗ ಗಂಭೀರವಾಗಿಲ್ಲದಿದ್ದರೆ, ಏಕಾಗ್ರತೆ ಕಳೆದುಕೊಂಡು ಬಹುಮಾನ ವಂಚಿತರಾಗಬಹುದು. ಸ್ಥಳೀಯ ಕ್ರೀಡೆಗಳು ಮನೆಯ ಒಳಾಂಗಣದಿಂದ ಪ್ರಾರಂಭವಾಗಿ, ಅಂಗಳ ಮುಟ್ಟಿ, ಬಯಲಿಗೆ ಸಾರಿರುವುದು ಮಾನವನ ನಾಗರಿಕತೆಯ ವಿಕಾಸವಾದದಷ್ಟೇ ಇತಿಹಾಸ ಉಳ್ಳದ್ದು. ಶಾಲೆ- ಕಾಲೇಜು ಹಂತಗಳಲ್ಲಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಉನ್ನತ ವ್ಯಾಸಂಗಕ್ಕೆ ವಿಫುಲ ಮೀಸಲಾತಿಯ ಅವಕಾಶಗಳನ್ನು ಸರ್ಕಾರ ಮಾಡಿಕೊಡುತ್ತದೆ. ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲ, ಸರ್ಕಾರಿ ಉದ್ಯೋಗದಲ್ಲೂ ಗೌರವ ಸ್ಥಾನಮಾನಗಳನ್ನು ಕಲ್ಪಿಸಲಾಗುತ್ತದೆ.  ಕ್ರೀಡಾ ಸಾಧಕರದ್ದು ವೈಯಕ್ತಿಕ ಸಾಧನೆ, ಅವರಿಗೇಕೆ ಈ ಬಗೆಯ ವಿಶೇಷ ಗೌರವ ಎನ್ನುವವರಿಗೆ, ತಿಳಿ ಹೇಳಬೇಕಾದುದು ಜವಾಬ್ದಾರಿ  ಹೊಂದಿರುವ ನಾಗರಿಕರ ಕರ್ತವ್ಯ.    ಕೆಲವೊಮ್ಮೆ ಆಟಗಳನ್ನು ಸಾಂಪ್ರದಾಯಿಕ ಎಂದೋ ಹ್ಂದಿನಿಂದ ನಡೆದು ಬಂದ ರೂಢಿ- ಪರಂಪರೆ ಎಂದೋ ಆಡುವುದು ಕಡ್ಡಾಯ. ಕೃಷ್ಣ ಜನ್ಮಾಷ್ಠಮಿಗೆ ಮೊಸರಿನ ಗಡಿಗೆ ಒಡೆಯುವುದು, ಗಾಳಿಪಟ ಬಿಡುವುದು, ಎತ್ತಿನ ಬಂಡಿ ಓಡಿಸುವುದು, ಭಾರದ ಗುಂಡು ಎತ್ತುವುದು, ದಸರಾ ಹಬ್ಬದಲ್ಲಿ ಪೈಲ್ವಾನ್ಗಳಿಂದ ಕುಸ್ತಿ ಕಾಳಗ, ಹುಂಜದ ಅಂಕಣ, ಕೋಳಿ ಜಗಳ, ಹೋರಿ- ಟಗರು ಕಾಳಗ, ಯುಗಾದಿ ಹಬ್ಬದ ಮಾರನೆ ದಿನ ಇಸ್ಪೀಟಾಟ…. ಇವೆಲ್ಲಾ ಒಂದು ಪುರಾಣದ್ದೋ ಇತಿಹಾಸದ್ದೋ ಎಳೆಯನ್ನು ಇಟ್ಟುಕೊಂಡು  ನಾಮಕಾವಾಸ್ತೆಗೆ ಇರಲಿ ಎಂದಾದರೂ ಆಡುವಂತಿರುತ್ತವೆ!!     ಕ್ರೀಡೆ ಎಂದರೆ ಕೇವಲ ದೈಹಿಕ ಆಟವಲ್ಲ. ಅದು ಮಾನಸ್ಥಿಕ ಸ್ಥಿತಿಯೂ ಕೂಡ. ‘ಕ್ರೀಡಾ ಮನೋಭಾವ’ ಹೊಂದಿರಬೇಕೆಂದರೆ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಎಂದರ್ಥ. ಸೋತ ಕಾರಣಕ್ಕೆ ಹತಾಶರಾಗಿ ಕೈ ಚೆಲ್ಲದೇ, ಮರಳಿ ಯತ್ನವ ಮಾಡುತ್ತಿರಬೇಕೆನ್ನುವ ಸಂಕಲ್ಪ ಶಕ್ತಿಯನ್ನು ಸದಾಕಾಲ ಜಾಗೃತವಾಗಿ ಇಟ್ಟುಕೊಳ್ಳುವುದೇ ಕ್ರೀಡಾ ಮನೋಭಾವ. ಇದು ವೈಯಕ್ತಿಕ ಸ್ವಾಸ್ಥ್ಯದೊಡನೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ.          ಒಲಂಪಿಕ್ಸ್, ಕಾಮನ್ವೆಲ್ತ್, ಫಿಫಾ, ಟೆನ್ನಿಸ್ ನ ವಿವಿಧ ಗ್ಯ್ರಾಂಡ್ ಸ್ಲ್ಯಾಮ್ ಗಳು, ಚೆಸ್, ಕ್ರಿಕೆಟ್, ರಗ್ಬಿ, ಕುದುರೆ ಸವಾರಿ, ಅಥ್ಲೆಟಿಕ್ಸ್ ನ ರಾಷ್ಟ್ರೀಯ- ಅಂತಾರಾಷ್ಟ್ರೀಯ ಕ್ರೀಡೆಗಳು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುತ್ತವೆ. ಯಾವುದೋ ದೇಶದ ಕ್ರೀಡಾ ತಾರೆ, ಮತ್ಯಾವುದೋ ದೇಶದ ಗಾಡ್ ಆಫ್ ಅರ್ಥ್ ಆಗುವುದೇ ಒಂದು ಸೋಜಿಗ. ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹುಚ್ಚುತನ ಎನಿಸುತ್ತದೆ. ಕೆಲವೊಂದು ಕ್ರೀಡೆಗಳು ಸಮುದಾಯವನ್ನೇ ಸಮೂಹ ಸನ್ನಿಗೆ ಒಳಪಡಿಸುತ್ತವೆ. ಕ್ರೀಡೆಗಳನ್ನು ಅನುಸರಿಸಿ ಬರುವ ಪ್ರಾಯೋಜಕರು, ಜಾಹೀರಾತುಗಳು ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಸುತ್ತವೆ. ವೇಶ್ಯಾವಾಟಿಕೆಗೆ, ಡ್ರಗ್ಸ್ ದಂಧೆಗೆ, ಮಾನವ ಸಾಗಾಣಿಕೆ, ರಾಜಕೀಯ ಸ್ಥಿತ್ಯಂತರಕ್ಕೆ, ಆಟಗಳೂ ಪ್ರಮುಖ ಕಾರಣ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವೇ…    ಸರಿಯಾದ ತರಬೇತಿ, ಅನುಕೂಲಕರ ವ್ಯವಸ್ಥೆ ಒದಗಿಸಿದರೆ ಗ್ರಾಮೀಣ ಪ್ರತಿಭೆಗಳು ಸಾಧನೆ ಯಾವ ಎತ್ತರದಲ್ಲಿರುತ್ತದೆ ಎಂಬುದಕ್ಕೆ ನಮ್ಮ ಮುಂದೆ ಉದಾಹರಣೆಯ ಸಾಲು ಸಾಲು ಮಾದರಿಗಳೇ ಇವೆ. ಆದರೆ, ಲಿಂಗ-ಜಾತಿ- ವರ್ಗ- ವರ್ಣ ತಾರತಮ್ಯಗಳು ಅಂಥ ಸಾವಿರಾರು ಪ್ರತಿಭೆಗಳನ್ನು ಅವಕಾಶವಂಚಿತರನ್ನು ಸೃಷ್ಟಿಸಿರುವುದು ಉಂಟು. ವಶೀಲಿಭಾಜಿ ನಡೆಸಿ, ಕ್ರಿಕೆಟ್, ಅದರಲ್ಲೂ ಪುರುಷರ ಕ್ರಿಕೆಟ್ ಒಂದೇ ನಿಜವಾದ ಆಟವೆಂದು ಪರಿಗಣಿಸುವ ಭಾರತದಂಥ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಎರಡಂಕಿ ಮೇಲೆ ಪದಕ ನಿರೀಕ್ಷಿಸುವುದು ಮೂರ್ಖತನ.     ನಾವು ಎಂಜಿನಿಯರ್, ವೈದ್ಯಕೀಯ ಬಿಟ್ಟ ಓದು ಓದಲ್ಲ ಎಂದೂ, ಕ್ರಿಕೆಟ್ ಬಿಟ್ಟ ಇತರೆ ಆಟ ಆಟವಲ್ಲ ಎಂದೂ ಎಂದೋ ಪರಮ ದಡ್ಡತನದ ನಿರ್ಧಾರ ಮಾಡಿಬಿಟ್ಟಿರುವಂತಿದೆ. ಶಾಲಾ ಹಂತದಲ್ಲಿ ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿದ್ದ ಶಿಕ್ಷಣ ವ್ಯವಸ್ಥೆ ಬರಬರುತ್ತಾ, ಓದಿನ ಕಾರ್ಖಾನಗಳಂತೆ ಆಗುತಿರುವುದು ದೈಹಿಕ – ಮಾನಸಿಕ ಹಾಗೂ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯದ ಹದವನ್ನು ಹಾಳುಗೆಡವುತ್ತಿದೆ.       ಬೆಕ್ಕಿನ ಕೈಗೆ ಸಿಕ್ಕಿ ಬೀಳುವ ಇಲಿಯನ್ನು ಅದು ಒಂದೇ ಏಟಿಗೆ ಕೊಂದು-ತಿಂದು ಮುಗಿಸುವುದಿಲ್ಲ. ಬಿಟ್ಟ ಹಾಗೆ ಮಾಡಿ, ಮತ್ತೆ ಮೇಲೆ ಹಾರಿ ಅದನ್ನು ಸತಾಯಿಸಿ ಸುಸ್ತು ಮಾಡಿಸಿ ಅದು ಗಾಬರಿ ಬಿದ್ದು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿರುತ್ತದೆ. ಹೀಗೆ, ಒಬ್ಬರ ಆಟ ಮತ್ತೊಬ್ಬರಿಗೆ ಪ್ರಾಣ ಕಂಟಕ ಆಗಬಾರದು ಎಂದೇ ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಎಂಬ ಗಾದೆ ಟಂಕಿಸಲಾಗಿದೆ. ‘ಆಟ ಆಡಿದ್ರೆ ಅರಗಿಣಿ; ಕಾಟ ಕೊಟ್ರೆ ನಾಗಪ್ಪ’ ಅಂತಾನೂ ಮನೋಆಟದ ಕುರಿತ ಗಾದೆ ಇದೆ. ಇದು ಮಾನವರ ನಡವಳಿಕೆಯು ಹೇಗೆ ಪ್ರಾಣಿಗಳ ನಡವಳಿಕೆಗೆ ಹೋಲಿಕೆಯಾಗುವುದು ಎಂಬ ಬಗ್ಗೆ  ಇರುವಂತಹದ್ದು. ಹಿಂದಿನ ರಾಜಮಹಾರಾಜರು, ಹಣವಂತರು ಶಿಕಾರಿಯನ್ನೂ ಆಟವೆಂದೇ ಭಾವಿಸಿದ್ದರೆನ್ನುವುದು ಓದಿನಿಂದ ತಿಳಿಯಬಹುದು. ಈಗ ಕಾನೂನು ಶಿಕಾರಿಯನ್ನು ಅಮಾನ್ಯ ಮಾಡಿದೆ. ಸರ್ಕಸ್ ನಲ್ಲಿ ಹಿಡಿದು ಪಳಗಿಸಿದ ಕಾಡುಪ್ರಾಣಿಗಳಿಂದ ಕೆಲವಾರು ಆಟ ಆಡಿಸಿ ಕಾಸು ಮಾಡುವುದು ಈ ಮನುಷ್ಯ ಜಾತಿಯವರ ಆಸೆಬುರಕತನವೋ ಅಥವಾ ಚಾಣಾಕ್ಷತನವೋ ನಿರ್ಧರಿಸುವುದು ಹೇಗೆ?      ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು’ ಎನ್ನುವ ಆಸ್ತಿಕವಾದಿಗಳು, ತಮ್ಮ ನಿರ್ಧಾರಗಳಿಗೂ ಬೇರೆಯ ಧಾತುವನ್ನು ಹೊಣೆಗಾರಿಕೆ ಮಾಡುವುದು ಬೇಜವಾಬ್ದಾರಿತನ ಅವಲ್ಲದೆ ಮತ್ತೇನಲ್ಲ ಎಂದು ಖಂಡಿತವಾಗಿ ಹೇಳಬಹುದು. ಒಟ್ನಲ್ಲಿ ‘ಆಟ ಕೆಟ್ಟರೆ ದೀವಟಿಗೆಯವನ ಸುತ್ತ’ ಎಂದಂತೆ, ಜೀವನದ ಆಟದಲ್ಲಿ ಭಾಗವಹಿಸಿರುವ ಎಲ್ಲರೂ ಒಂದಲ್ಲಾ ಒಂದು ಪಾತ್ರ ನಿರ್ವಹಿಸವೇ ಬೇಕು. ಹಾಗೂ  ‘…. ನಿಂತಾಗ ಬುಗುರಿಯ ಆಟ ಎಲ್ಲಾರೂ ಒಂದೇ ಓಟ…’ ಎಂದು ಆಟ ಮುಗಿಸಿ ‘ಸಾಯೋ ಆಟ’ ಆಡಲು ಗಂಟುಮೂಟೆ ಕಟ್ಟಲೇಬೇಕು… ******************** – ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Read Post »

You cannot copy content of this page

Scroll to Top