ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ʼಕನಸಿನದನಿʼ

ಪುಸ್ತತಕಪರಿಚಯ ʼಕನಸಿನದನಿʼ             ಸಾಹಿತ್ಯ ಲೋಕದ ಪಯಣ ಹಲವು ಅಚ್ಚರಿಗಳಿಗೆ ಕಾರಣ. ಹಾಗೆ ನೋಡಿದರೆ ಜೀವನವೇ ಒಂದು ಸುದೀರ್ಘ ಪ್ರಯಾಣ.ಈ ಪ್ರಯಾಣದಲ್ಲಿ ಪರಿಚಿತರು ಅಪರಿಚಿತರಾಗುವುದು ಅಪರಿಚಿತರು ಪರಿಚಿತರಾಗುವುದು ಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ. ಆದರೆ ಇದು ಎಣಿಸಿದಷ್ಟು ಸುಲಭವೂ ಸಹಜವೂ ಅಲ್ಲ. ಇಲ್ಲಿ ಅನೂಹ್ಯವಾದುದು ಘಟಿಸುತ್ತದೆ ಊಹಿಸಿಕೊಂಡದ್ದು ನಡೆಯುವುದೇ ಇಲ್ಲ. ಪರಸ್ಪರ ಭೇಟಿಯಾಗದ ಎಷ್ಟೋ ಚೇತನಗಳು ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಒಂದುವಿಶೇಷ ಪ್ರಕ್ರಿಯೆ. ಒಂದು ಸಹೃದಯ ಪರಿಚಯ ಹೇಗೆ ವಿಶ್ವಾಸವನ್ನು ಉಳಿಸಿಕೊಂಡು ಎಷ್ಟೇ ಅಂತರದಲ್ಲಿದ್ದರೂ ಸ್ನೇಹವನ್ನು ಕಾಪಿಟ್ಟುಕೊಂಡಿರುತ್ತದೆ ಎಂಬುದನ್ನು ನನಗೆ ಇಲ್ಲಿ ವಿವರಿಸಬೇಕಿತ್ತು. ಅದಕ್ಕಾಗಿ ಹೀಗೆ ಪಯಣ, ಪರಿಚಯ, ಪ್ರಕ್ರಿಯೆ ಎಂದೆಲ್ಲಾ ಕೊಂಕಣ ಸುತ್ತಿಮೈಲಾರಕ್ಕೆ ಬರಬೇಕಾಯ್ತು.             ಡಾ|| ಅಜಿತ್ ಹರೀಶಿ ಎಂಬ ಸಹೃದಯ ವ್ಯಕ್ತಿತ್ವ ನನಗೆ ಪರಿಚಯವಾದುದು ಆನ್ಲೈನ್ ಸಾಹಿತ್ಯ ವೇದಿಕೆ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ. ಪ್ರಾಮಾಣಿಕತೆಯ ಸೆಲೆ ಇರುವ ಬರವಣಿಗೆಗಳು ಮೂಲಕ ಅಜಿತರು ನನಗೆ ಪರಿಚಯವಾದರು. ಒಮ್ಮೆ ಶಿರಸಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾಗ ನೇರ ಕಾಣುವಂತಾಯಿತು.ಸಾಮಾನ್ಯ ಹಾಗೂ ಸಾಹಿತ್ಯದ ಪರಿಭಾಷೆಯಲ್ಲಿ ಹೇಳುವಂತೆ ಅಜಿತರದು ಸ್ಫುರದ್ರೂಪಿ ನಿಲವು. ಅಷ್ಟೇ ಗಾಂಭೀರ್ಯದ ನಡವಳಿಕೆ. ವಿನಯವಂತಿಕೆಬೆರೆತ ಜಾಣ್ಮೆ. ಸೌಜನ್ಯ ಪೂರ್ಣ ಸ್ನೇಹ. ಅಂದು ಮುಖಾಮುಖಿಯಾಗಿ ಭೇಟಿಯಾದ ಅನಂತರ ಫೋನಿನಲ್ಲಿ ಒಂದೆರಡು ಬಾರಿ ಮಾತನಾಡಿರಬಹುದು. ನಾಲ್ಕಾರು ಸಂದೇಶ ವಿನಿಮಯವಾಗಿರಬಹುದು. ಇಷ್ಟರ ಹೊರತು ಪರಿಸ್ಪರ ಪರಿಚಿತರಾದ ಅಪರಿಚಿತರು ನಾವಿಬ್ಬರು.             ಅಜಿತರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವುದು ನನಗೆ ಅವರ ಮೇಲಿನ ಮಮಕಾರವನ್ನು ಹೆಚ್ಚು ಮಾಡಲಿಕ್ಕೆ ಒಂದು ಕಾರಣ ಇರಬಹುದು. ಏಕೆಂದರೆ ನನ್ನ ತಂದೆಯವರೂ ಸಹ ವೈದ್ಯರೇ ಆಗಿದ್ದುದು ಅಜಿತರಲ್ಲಿ ಒಂದು ವಿಶ್ವಾಸ ಮೂಡಲು ಕಾರಣ ಇರಬಹುದು. ಉಳಿದಂತೆ ನಗರದ ಆಡಂಬರಕ್ಕೆ ಮೋಹಗೊಂಡು, ವ್ಯಾಪಾರೀ ತಂತ್ರವಾಗಿ ರೂಪಿಸಿಕೊಳ್ಳಬಹುದಾಗಿದ್ದ ತಮ್ಮ ವೃತ್ತಿಯನ್ನು ತನ್ನೂರಿನ ಜನರ ಸೇವೆಗೆ ಮೀಸಲಿರಿಸಿಕೊಂಡು ಸಹಜವಾಗಿ ಸರಳವಾಗಿ ಜೀವನ್ಮುಖಿಯಾಗಿ ಬದುಕುವ ವಿವೇಕವುಳ್ಳ ತರುಣರಾಗಿ ಕಂಡುಬರುವ ಡಾ|| ಅಜಿತರ ಬಗೆಗೆ ನನಗೆಒಂದು ಅಭಿಮಾನದ ಭಾವ ಮೂಡುತ್ತದೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಾಗಿ ಬರವಣಿಗೆ, ಓದಿನ ಹವ್ಯಾಸವನ್ನು ಹೊಂದಿರುವ ಇವರ ಸಾಹಿತ್ಯದ ಮೇಲಿನ ವ್ಯಾಮೋಹ ಸ್ವತಃ ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನನ್ನು ಚಕಿತಗೊಳಿಸುತ್ತದೆ. ಇಂಥಾಸಾಹಿತ್ಯಪ್ರೇಮಿ, ಸಹೃದಯಿ ಸಾಹಿತಿ ಅವರ ಬರಹಗಳನ್ನು ನನಗೆ ಮರೆಯದೆ ಕಳುಹಿಸುವುದು ನನಗೆ ವಿಶೇಷ ಸಂತಸವನ್ನು ತಂದುಕೊಡುತ್ತದೆ. ಕಾವ್ಯ ರಚನೆಯಲ್ಲಿ ಆಸಕ್ತಿ ಇದ್ದ ನನ್ನನ್ನು ಕಥಾ ರಚನೆಯತ್ತಲೂ ಚಿತ್ತ ಹರಿಸುವಂತೆ ಪ್ರೋತ್ಸಾಹಿಸಿದ ಅಜಿತರು ಮೂಲತಃ ಸೊಗಸಾಗಿ, ಸಹಜ ಸರಳವಾಗಿ ಕಥೆ ಬರಯುತ್ತಾರೆ. ಕನ್ನಡ ನಾಡಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ಪ್ರಸಿದ್ಧ ಆನ್ಲೈನ್ ಪತ್ರಿಕೆಗಳಲ್ಲಿ ಹಾಗೂ ಮುದ್ರಣ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿದ್ದು, ತಮ್ಮದೇ ಆದ ಓದುಗ ವರ್ಗವನ್ನು ಅಜಿತರು ಹೊಂದಿರುತ್ತಾರೆ. ಹಾಗೆಯೇ ತಮಗೆ ದೊರೆತ ಎಲ್ಲರ ಪುಸ್ತಕಗಳನ್ನು ಓದಿ ಪ್ರತಿಕ್ರಿಯೆ ನೀಡುವ ಸಂಯಮ ಹಾಗೂ ಆರ್ದ್ರತೆ ಇರುವ ಇವರು ಈ ಕಾಲಕ್ಕೆ ಅಪರೂಪ ಎನಿಸುವಷ್ಟು ಸ್ನೇಹಜೀವಿ. ಅಜಿತರ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣ ಮೊನ್ನೆ ಅಚಾನಕ್ ಬಂದು ತಲುಪಿದ ಅವರ ಹೊಸ ಕವನ ಸಂಕಲನ ʻಕನಸಿನ ದನಿʼ.             ಒಟ್ಟು ೪೬ ಕವನಗಳುಳ್ಳ ʻಕನಸಿನ ದನಿʼಯ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆಯುತ್ತವೆ. ʻʻಕನಸು’ ಎಂದರೆ ಅದೊಂದು ಆಶಾಭಾವನೆಯೂ ಹೌದು. ಅದಕ್ಕೆ ಒಂದು ದನಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲʼʼ. ಎನ್ನುವ ಕವಿ ಕನಸಿನ ಮೌನದ ಸದ್ದನ್ನು ಹಿಡಿದು ಸಾಗಿಬರುವ ಹಾದಿಯಲ್ಲಿ ದೊರೆತ ಸಾಲುಗಳನ್ನೇ ಕಾವ್ಯವಾಗಿಸಿ ಈ ಕೃತಿಯಲ್ಲಿ ನೀಡಿದ್ದಾರೆ ಎನಿಸುತ್ತದೆ. ʻಹಳೆಯ ಟ್ರಂಕಿಗೂ ಮೆಟ್ರೋ ರೈಲಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ..!ʼ ಎನ್ನುವ ಸ್ವಗತವೇ ʼಕನಸಿನ ದನಿʼ ಕವನದ ಭಾವ. ಕಳೆದ ಭೂತಕಾಲ, ವಾಸ್ತವದ ವರ್ತಮಾನ ಹಾಗೂ ಕನಸಿನ ಭವಿಷ್ಯವನ್ನು ಒಂದೇ ಗುಕ್ಕಿನಲ್ಲಿ ಹಿಡಿದಿಡುವ ಕವನವಿದು. ೭೦ ರಿಂದ  ೯೦ರ ದಶಕವನ್ನು ಸಾವಕಾಶವಾಗಿ ಕಂಡ ಪೀಳಿಗೆಯವರು ಅತ್ಯಾಧುನಿಕ ಜಗತ್ತಿನೊಡನೆಯೂ ಕಲೆತು ಬದುಕುತ್ತಿದ್ದರೂ ಯಾವುದೋ ನಿಧಿಯನ್ನು ಕಳೆದು ಕೊಂಡಂತೆ, ಭವಿಷ್ಯದ ಅನಾಹುತಗಳ್ನು ನೆನೆದು ಬೆಚ್ಚಿಬೀಳುವ ಆತಂಕದ ತಲ್ಲಣದ ಚಿತ್ರಣವಿದೆ. ಜೊತೆಗೆ ಈ ಸಂಕಲನದಲ್ಲಿನ ಹಲವಾರು ಕವನಗಳು ಕವಿಯ ಹಳೆಯ ಸೊಗಸಿನ ಕನವರಿಕೆ ಹಾಗೂ ಭವ್ಯಭವಿಷ್ಯದ ಪರಿಕಲ್ಪನೆಗಳಂತೆ ಕಾಣುತ್ತದೆ. ಆಶಾವಾದಿ ಮನಸ್ಸಿನ ಅಜಿತರ ಸಾಕ್ಷಿ ಪ್ರಜ್ಞೆಯಂತೆ. ʼಹೇಳಿಕೆ ʼಕವನ ವಿಮರ್ಶೆಯನ್ನು ಒಪ್ಪದ ಜಿಗುಟು ಮನಃಸ್ಥಿತಿಯನ್ನು ಗೇಲಿ ಮಾಡುವಂತಿದೆ.                                     ʼʼಚೆನ್ನಾಗಿಲ್ಲ                                     ಅಂತಹೇಳುವಂತಿಲ್ಲ                                     ಕಳೆದುಹೋಯಿತು ಆ ಕಾಲ..ʼʼ             ಸಂಬಂಧ ಹಳಸುವುದು, ಹದಗೆಡುವುದು ದೃಷ್ಟಿಕೋನದ ಪ್ರತಿಫಲ. ಸಾವರಿಸಿಕೊಂಡು, ಸುಧಾರಿಸಿಕೊಂಡು ಹೋಗುವುದಾದರೆ ಜೀವನ ಸರಿ. ನಮ್ಮ ತಪ್ಪಿಲ್ಲದಿದ್ದರೂ ಸಾರಿ ಹೇಳಿ, ಎಲ್ಲಾ ಚೆಂದ ಎಲ್ಲಾ ಚೆಂದ ಎಂದರೆ ನೆಮ್ಮದಿ ಎನ್ನುವ ಜ್ಞಾನಮೀಮಾಂಸೆಯನ್ನು ಈ ಕಾವ್ಯ ಕಟ್ಟಿಕೊಡುತ್ತದೆ. ಸಮಾಜಕ್ಕೆ, ಸುತ್ತಲಿನ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾ ಹೋಗುವಾಗ ಒಮ್ಮೆ ಸರಿಕಂಡದ್ದನ್ನು ಮತ್ತೊಮ್ಮೆ ನಿರಾಕರಿಸುತ್ತಾ, ನಿರಾಕರಿಸಿದ್ದನ್ನು ಸ್ವೀಕರಿಸುತ್ತಾ ಕವಿ ಪರಸ್ಪರ ವೈರುಧ್ಯ ಭಾವ ಕವಿಗೆ ಸಹಜ ಎನಿಸುತ್ತಾನೆ. ʼಸವಾಲುʼ ಕವನದಲ್ಲಿ, ʼʼವಂಶವಾಹಿಯಾಗಿ ಹರಿದು ಬಂದ ಜೀವತಂತು ವಿನಕಾರಣಕ್ಕೆಲವು ನಡವಳಿಕೆ ಆತ್ಮವಿಮರ್ಶೆ ಮದ್ದು ಸ್ವಯಂಕೃತ ಅಪರಾಧಕೆ ಪಶ್ಚಾತ್ತಾಪಕ್ಕಿಂತ ಮಿಗಿಲಾದ ಶಿಕ್ಷೆಯಿಲ್ಲʼʼ ಎನ್ನುವುದು ಜೀವತಂತುವಿನ ಅಧ್ಯಯನಾ ವರದಿ ಮಾತ್ರವಲ್ಲ. ಸಾಬೀತಾದ ಸತ್ಯ! ಅಜಿತರ ಕವನಗಳು ಕೇವಲ ಕಾವ್ಯ ಭಾಷೆಯಲ್ಲಿ ಮಾತನಾಡುವ ಕ್ಲೀಷೆಗೆ ಸೇರುವುದಿಲ್ಲ. ಅವರ ವೃತ್ತಿ ಬದುಕಿನ ಪರಿಭಾಷೆಗಳು ಹಾಗೂ ಪಾರಿಭಾಷಿಕ ಪದಗಳು ಕವಿತೆಗೆ ವಿಶೇಷ ಜೀವ ತುಂಬುತ್ತವೆ. ಉದಾಹರಣೆಗೆ, ʼಭುಕ್ತಿʼ ಕವನದ ಈ ಸಾಲುಗಳು, ʼʼಎರಡು ಗೆರೆ ಬಿದ್ದಿದೆ ಡೆಲಿವರಿ ಸಂಕೇತ ಪ್ರೆಗ್ನೆನ್ಸಿ ಕಿಟ್ನಲ್ಲಲ್ಲ! ವಾಟ್ಸಾಪಿನ ವರಾತ ನೋಡಿದರೆ ನೀಲಿಗೆರೆ, ಆರೋಪ ಉತ್ತರಿಸದಿರೆ ಸಿಕ್ಕು ಸೆಟ್ಟಿಂಗ್ ಬದಲಿಸಿದರೆʼʼ ಹಾಗೂ ʼಸಾವಂಚಿನ ಕೂಗುʼ ಕವನದ, ʼʼಗಂಟಲೊಳಗೆ ತೂರಿಸಿದ ಆಳ ತೂಗಾಕಿದ ಡ್ರಿಪ್ಪು, ಕೈಗೆ ಚುಚ್ಚಿದ ಕ್ಯಾನುಲ ಆಷ್ಸಿಮೀಟರು, ಪಲ್ಸ– ಬಿಪಿಮಾನಿಟರು ಕಫದಸಕ್ಷನ್ನು, ಚೆಕ್ಕಾಗುವರಕ್ತ, ಶುಗರು ನರ್ಸು–ಇಂಟೆನ್ಸಿವಿಷ್ಟು, ಮೂತ್ರಕೆ ಕಾಥೆಟರು..ʼʼ ರೋಗಿಯೊಬ್ಬರ ವೈದ್ಯಕೀಯ ವರದಿಯನ್ನು ವೈದ್ಯರು ನೀಡುತ್ತಿರುವಂತೆ ಕಂಡರೂ, ಇದು ಕರಾಳ ಸತ್ಯದ ಅನಾವರಣ ಮಾಡುವ ಕವಿತೆಯಾಗಿದೆ. ಹೊರಗಿನ ಸೋಗು ಒಳಿನ ಕೂಗನ್ನು ಹೇಗೆ ಕಡೆಗಣಿಸಿದೆ ಎಂದು ಕವಿತೆ ವಿಶದಪಡಿಸುತ್ತದೆ. ಮಾಫಲೇಶು ಕದಾಚನ ಕವಿತೆ ನೋಡಿ, ʼʼನೋಡಿ ಪುಷ್ಪಗಳ ನೀಡುತ್ತವೆ ಉಚಿತವಾಗಿ ಪರಿಮಳ ಮಕರಂದಗಳ ಸುವಾಸನೆ ಬೀರಿ ಮುಗಿಸಿ ಕಾರ್ಯವ ತೊಟ್ಟು ಕಳಚಿ ಬಿದ್ದು ಮಾಯವಾಗಿ ಬಿಡುತ್ತವೆ ನಾವು ಹೊಲಸು ನಾರಿಯೇತೀರುತ್ತೇವೆ ತೀರಿದ ಮೇಲೂ ಹೊಲಸು ನಾರುತ್ತೇವೆ!ʼʼ ಇದನ್ನು ಕೇವಲ ನಾಕಾರು ಸಾಲಿನ ಕವಿತೆ ಎಂದು ಮೂಗು ಮುರಿಯಲಾದೀತೆ?! ಜೀವನ ಸಾರ್ಥಕತೆಯ ತತ್ತ್ವ ದರ್ಶನವನ್ನೇ ಇದು ಕಾಣಿಸುತ್ತದೆ.             ವಿದಳನ, ಊನ,  ವಜನು, ಐ ರಿಪೀಟ್, ಇಲಿ, ಬೋನು ಮತ್ತು ಸಾಬೂನು, ಶರಾವತಿಯ ಅಳಲು ಮೊದಲಾದವು ಜೀವನದ ವಿವಿಧ ಮಗ್ಗಲುಗಳ ವಿಮರ್ಶೆಯಂತಿವೆ. ಸಾಮಾನ್ಯದಂತೆ ಕಾಣುವ ಈ ಕೆಲವು ಕವಿತೆಗಳು ಗಹನವಾದ ಆಧ್ಯಾತ್ಮದ ಚಿಂತನೆಗೆ ತೊಡಗುವಂತೆ ಮಾಡತ್ತವೆ. ಮೇಲು ಮೇಲಿನ ಓದಿಗೆ ದಕ್ಕುವಂತೆ ಆಳ ವಿಶ್ಲೇಷಣೆಗೂ         ಡಾ|| ಅಜಿತರ ಕಾವ್ಯಗಳನ್ನು ಸಂಯೋಜಿಸಬಹುದು.             ಇಡೀ ಸಂಕಲನದ ಕವಿತೆಯ ವಸ್ತುಗಳಿಗಾಗಿ ಕವಿ ತಿಣುಕಾಡಿಲ್ಲ. ಸುತ್ತಲಿನ ಘಟನೆಗಳನ್ನೇ ತಮ್ಮ ಎಕ್ಸರೇ ಕಂಗಳಿಂದ ಪರೀಕ್ಷಿಸಿ ಕವಿತೆಗೆ ವಸ್ತುವಾಗಿಸಿ ಕೊಂಡಿದ್ದಾರೆ. ಇದು ಕಾವ್ಯ ರಚನೆಗೆ ಪೂರಕವಾಗಿದ್ದರೂ ಮತ್ತಷ್ಟು ವಸ್ತು ವೈವಿಧ್ಯತೆಯನ್ನು ಕವಿ ಸಮರ್ಥವಾಗಿ ಕೊಡಬಲ್ಲರೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ನಿಟ್ಟಿನಲ್ಲಿಡಾ|| ಅಜಿತರು ಹೆಚ್ಚಿನ ಗಮನ ಹರಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾ, ನನ್ನ ಒಂದು ಓದಿನ ಅಳವಿಗೆ ಸಿಕ್ಕ ಭಾವಗಳಿಗೆ, ಮಾತುಗಳಿಗೆ ಹೀಗೆ ಅಕ್ಷರ ರೂಪ ಕೊಟ್ಟಿರುತ್ತೇನೆ.             ತಮ್ಮ ಕತೆಗಳಲ್ಲಿ, ದೈನಂದಿನ ಘಟನಾವಳಿಗಳನ್ನು ಚಿತ್ತಿಸುತ್ತಲೇ ಅಚ್ಚರಿಯ ತಿರುವುಗಳನ್ನು ನೀಡುವ ಮೂಲಕ ಓದುಗರ ಗಮನವನ್ನು ಸೆಳೆಯುವ ಅಜಿತರು ಕವನ ರಚನೆಗೆ ಏಕಾಗ್ರಚಿತ್ತರಾದರೆ. ಅವರಿಂದ ಇನ್ನೂ ಮೌಲಿಖ ಕವನಗಳನ್ನು ನಿರೀಕ್ಷಿಸಬಹುದು. ಎಂದಿನಂತೆ,  ನನ್ನೊಂದಿಗಿರುವ ಅಜಿತರ ನಿರ್ಮಲ ಸ್ನೇಹಕ್ಕೆ ಹಾಗೂ ಬರಹದ ಮೇಲೆ ಅವರಿಗಿರುವ ಮೋಹಕ್ಕೆ ಖುಷಿಪಡುತ್ತಾ, ಒಂದೊಳ್ಳೆ ಕವನ ಸಂಕಲನ ಓದಿಸಿದ್ದಕ್ಕೆ ಧನ್ಯವಾದಗಳನ್ನು ಹೀಗೆ ಹೇಳಬಯಸುವೆ. . . . ************************** ವಸುಂಧರಾಕದಲೂರು.

ʼಕನಸಿನದನಿʼ Read Post »

ಕಾವ್ಯಯಾನ, ಗಝಲ್

ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಅಂಕಣ ಬರಹ ‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌. ಸಾಧಕಿಯರ ಯಶೋಗಾಥೆ ಸಮಾಜ ಸೇವಕಿ ಮತ್ತು ವೈದ್ಯೆ ರುಕ್ಮಾಬಾಯಿ (೧೮೬೪-೧೯೫೫) ವಸಾಹಾತುಶಾಹಿ ಭಾರತದ ವೈದ್ಯೆರಾಗಿದ್ದ ರುಕ್ಮಾಬಾಯಿಯವರು ೨೨ ನವೆಂಬರ್ ೧೮೬೪ ರಲ್ಲಿ ಜನಿಸಿದರು. ಇವರ ತಂದೆ ಜನಾರ್ಧನ್ ಪಾಂಡುರಂಗ ತಾಯಿ ಜಯಂತಿಬಾಯಿ. ಇವರು ಮರಾಠಿ ಕುಟುಂಬದವರು. ರುಕ್ಮಾಬಾಯಿಯು ಎರಡು ವರ್ಷದವಳಿರುವಾಗಲೇ ತಂದೆಯನ್ನು ಕಳೆದುಕೊಂಡರು. ಬಡಿಗ/ ಸುತಾರ ಸಮುದಾಯದಲ್ಲಿ ವಿಧವೆಯರ ಮರುಮದುವೆಗೆ ಅವಕಾಶ ಇರುವುದರಿಂದ ರುಕ್ಮಾಬಾಯಿಯ ತಾಯಿಯೂ, ಬಾಂಬೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಖ್ಯಾತ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗಿದ್ದ ಡಾ|| ಸಖಾರಾಮ್ ಅರ್ಜುನ ಅವರನ್ನು ಮರು ವಿವಾಹವಾದರು. ಇವರ ತಾಯಿಯು ಕೂಡ ಬಹಳ ದಿನಗಳವರೆಗೆ ಬದುಕುಳಿಯಲಿಲ್ಲ. ರುಕ್ಮಾಬಾಯಿಯು ೧೭ ವರ್ಷದವಳಿದ್ದಾಗ ತಾಯಿಯನ್ನು ಕೆಳೆದುಕೊಂಡರು. ೧೧ ವರ್ಷದ ರುಕ್ಮಾಬಾಯಿಯು ತನ್ನ ಮಲತಂದೆಯ ಸೋದರ ಸಂಬಂಧಿ ೧೯ ವರ್ಷದ ದಾದಾಜಿ ಭಿಕಾಜಿಯವರನ್ನು ಮದುವೆಯಾದರು. ಚಿಕ್ಕವರಾಗಿರುವುದರಿಂದ ಮದುವೆಯ ಬಳಿಕ ತಂದೆ-ತಾಯಿಯ ಮನೆಯಲ್ಲಿಯೇ ಉಳಿಯುತ್ತಾರೆ. ಹಾಗೆಯೇ ಇವರ ಪತಿಯೂ ಕೂಡ ಮನೆಅಳಿಯರಾಗುತ್ತಾರೆ. ಆ ಸಮಯದಲ್ಲಿ ಇಬ್ಬರೂ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದು, ಒಳ್ಳೆಯ ಮನುಷ್ಯರಾಗಿ ಬಾಳಳು ತಂದೆ ತಾಯಿಗಳು ಮಾರ್ಗದರ್ಶನ ನೀಡುತ್ತಾರೆ. ರುಕ್ಮಾಬಾಯಿಯವರು ಮದುವೆಯಾಗಿ ಆರು ತಿಂಗಳಲ್ಲಿ ಋತುಮತಿಯಾಗುತ್ತಾರೆ. ಆಗ ಗಂಡನ ಮನೆಗೆ ಕಳುಹಿಸಿಕೊಡಬೇಕೆಂದು ಗಂಡನ ಕುಟುಂಬದವರು ಒತ್ತಾಯಿಸುತ್ತಾರೆ. ಮಗಳು ಚಿಕ್ಕವಳಾಗಿರುವುದರಿಂದ ಗಂಡನ ಮನೆಗೆ ಕಳುಹಿಸುವುದನ್ನು ಸಖಾರಾಮ್ ರವರು ಒಪ್ಪುವುದಿಲ್ಲ. ರುಕ್ಮಾಬಾಯಿ ಪತಿ ದಾದಾಜಿ ಭಿಕಾಜಿಯವರು ೨೦ ವರ್ಷದವರಿದ್ದಾಗ ಅವರ ತಾಯಿ ತೀರಿಕೊಂಡರು. ರುಕ್ಮಾಬಾಯಿಯ ಕುಟುಂಬದವರು ಭಿಕಾಜಿಯವರನ್ನು ಶಾಲೆಗೆ ಸೇರಿಸಲು ಮುಂದಾದರು. ಆದರೆ ದಾದಾಜಿ ಭಿಕಾಜಿಯವರು ಕಾಲೇಜು ಮಟ್ಟದಲ್ಲಿ ಇರಬೇಕಾದ ಸಮಯದಲ್ಲಿ ಅವರು ಆರನೇ ತರಗತಿಗೆ ಹೋಗಬೇಕಾಗಿತ್ತು. ಹಾಗಾಗಿ ಭಿಕಾಜಿಯವರು ಓದಲು ನಿರಾಕರಿಸಿ ಅತ್ತೆ ಮಾವನ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೇ ಭಿಕಾಜಿಯವರು ರುಕ್ಮಾಬಾಯಿಯವರನ್ನು ತಮ್ಮೊಂದಿಗೆ ಬಂದು ವಾಸಿಸಲು ಒತ್ತಾಯಿಸಿತ್ತಾರೆ. ಆಗ ರುಕ್ಮಾಬಾಯಿಯವರು ಗಂಡ ನೊಂದಿಗೆ ಹೋಗಲು ನಿರಾಕರಿಸಿದ ನಿರ್ಣಯಕ್ಕೆ ಅವರ ಮಲತಂದೆಯವರು ಕೂಡ ಬೆಂಬಲಿಸಿದರು. ಪತಿ ದಾದಾಜಿ ಭಿಕಾಜಿಯವರ ವಿರುದ್ಧವಾಗಿ ಅದೇ ವರ್ಷ ರುಕ್ಮಾಬಾಯಿಯವರು ಚರ್ಚ್ಮಿಷನ್ ಗ್ರಂಥಾಲಯದಿಂದ ಉಚಿತವಾಗಿ ಗ್ರಂಥಗಳನ್ನು ಪಡೆದುಕೊಂಡು ಮನೆಯಲ್ಲಿಯೇ ಅಧ್ಯಯನ ಮಾಡಲು ತೊಡಗುತ್ತಾರೆ. ತನ್ನ ತಂದೆಯ ಒಡನಾಟದಿಂದಾಗಿ ಅನೇಕ ಧಾರ್ಮಿಕ ಮತ್ತು ಸಮಾಜ ಸುಧಾರಕರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ವಿಷ್ಣುಶಾಸ್ತ್ರಿ ಪಂಡಿತ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡಾಗಲೇ ಯುರೋಪಿಯನ್ ಸ್ತ್ರೀಯರ ಮತ್ತು ಪುರುಷರ ಸುಧಾರಣಾವಾದಗಳನ್ನು ಒಪ್ಪಿಕೊಳ್ಳುತ್ತಾರೆ. ತನ್ನ ತಾಯಿಯೊಂದಿಗೆ ಇವರು ನಿಯಮಿತವಾಗಿ ಪ್ರಾರ್ಥನಾ ಸಮಾಜ ಮತ್ತು ಆರ್ಯ ಮಹಿಳಾ ಸಮಾಜ ಸಾಪ್ತಾಯಿಕ ಸಭೆಗಳಲ್ಲಿ ಭಾಗವಹಿಸಿತ್ತಿದ್ದರು. ದಾದಾಜಿ ಭಿಕಾಜಿಯವರು ಕಾಂಜುಗಲ್ ಹಕ್ಕುಗಳ ಮರುಸ್ಥಾಪನೆಗಾಗಿ ಮಾರ್ಚ್ ೧೮೮೪ರಲ್ಲಿ ಕೋರ್ಟ್ ಮೆಟ್ಟಿಲೇರಿದರು. ಭಿಕಾಜಿಯವರು ತಮ್ಮ ವಕೀಲರ ಸಹಾಯದಿಂದ ಸಖಾರಾಮ್ ಅರ್ಜುನ ಅವರಿಗೆ ಕಾನೂನು ನೋಟಿಸ್ ಕಳುಹಿಸಿ ‘ಪತ್ನಿ ರುಕ್ಮಾಬಾಯಿಯವರೊಂದಿಗೆ ತನ್ನನ್ನು ಸೇರಿಕೊಳ್ಳಲು ತಡೆಯೊಡ್ಡುತ್ತಿದ್ದಾರೆ’ ಎಂದು ಕೋರ್ಟಿಗೆ ಮೊರೆ ಹೋಗುತ್ತಾರೆ. ಅದಕ್ಕೆ ಪ್ರತಿಯಾಗಿ ಡಾ. ಸಖಾರಾಮ್ ರವರು ಕೂಡ ತಮ್ಮ ಕಾನೂನು ಸಲಹಾಗಾರರ ಸಹಾಯ ಪಡೆದು ‘ಮಗಳನ್ನು ಏಕೆ ಅಳಿಯನೊಂದಿಗೆ ಕಳುಹಿಸುತ್ತಿಲ್ಲ’ ಎಂಬುದಕ್ಕೆ ಕಾರಣಗಳನ್ನು ವಿವರವಾಗಿ ನೀಡುತ್ತಾರೆ. ಹಾಗಾಗಿ ಕಾನೂನು ಕೂಡ ಯುವತಿಯನ್ನು ಒತ್ತಾಯಿಸಲು ಬರುವುದಿಲ್ಲವೆಂದು ಹೇಳುತ್ತದೆ. ಈ ಪ್ರಕರಣದಲ್ಲಿ ಅನೇಕ ಪರ ವಿರೋಧಗಳು ಕಂಡು ಬಂದವು. ಹಿಂದೂ ಸಂಪ್ರದಾಯವಾದಿಗಳು ರುಕ್ಮಾಬಾಯಿಯವರ ಕುಟುಂಬದವರನ್ನು ಟೀಕಿಸುತ್ತಾರೆ. ಅನೇಕ ಪತ್ರಿಕೆಗಳು ಕೂಡ ಇವರ ವಿರುದ್ಧವಾಗಿ ಬರೆಯುತ್ತವೆ. ಆದರೂ ಕೂಡ ರುಕ್ಮಾಬಾಯಿಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಓದನ್ನು ಮುಂದುವರಿಸುತ್ತಾರೆ. ಈ ಪ್ರಕರಣವನ್ನು ೧೮೮೭ರಲ್ಲಿ ಮತ್ತೆ ನ್ಯಾಯಮೂರ್ತಿ ಫರಾನ್ ಮರುವಿಚಾರಣೆಗೆ ಕೈಗೆತ್ತಿಕೊಂಡಿತು. ಹಿಂದೂ ಕಾನೂನುಗಳ ಸಹಾಯ ಪಡೆದು ರುಕ್ಮಾಬಾಯಿಗೆ ಗಂಡನೊಂದಿಗೆ ವಾಸಿಸಲು ನಿರ್ದೇಶನವನ್ನು ನೀಡುತ್ತದೆ. ಗಂಡನ ಜೊತೆಗೆ ವಾಸಿಸಲು ನಿರಾಕರಿಸಿದರೆ ಆರು ತಿಂಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆಂದು ಆದೇಶವನ್ನು ನೀಡುತ್ತದೆ. ಅದಕ್ಕೆ ಪ್ರತಿಯಾಗಿ ರುಕ್ಮಾಬಾಯಿಯು ಗಂಡನ ಮನೆಗೆ ಹೋಗಲು ನಿರಾಕರಿಸಿ ಜೈಲು ಶಿಕ್ಷೆಯನ್ನು ಅನುಭವಿಸಲು ಸಿದ್ಧಳಾಗುತ್ತಾಳೆ.  ಈ ನಿರ್ಧಾರವು ಸಮಾಜದಲ್ಲಿ ಕೋಲಾಹಲ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಯಿತು. ಇದೇ ಸಮಯದಲ್ಲಿ ಬಾಲಗಂಗಾಧರ ತಿಲಕ್‌ರವರು ಕೇಸರಿ ಪತ್ರಿಕೆಗೆ “ಇಂಗ್ಲೀಷ್ ಶಿಕ್ಷಣದ ಪ್ರಭಾವದಿಂದಾಗಿ ಹಿಂದೂಧರ್ಮ ಅಪಾಯದಲ್ಲಿದೆ” ಎಂದು ಬರೆದರು. ಮತ್ತೊಂದೆಡೆ ಮ್ಯಾಕ್ಸೆಮುಲ್ಲರ್‌ರವರು ‘ರುಕ್ಮಾಬಾಯಿಯ ಪ್ರಕರಣಕ್ಕೆ ಕಾನೂನು ಮಾರ್ಗವು ಪರಿಹಾರವಲ್ಲ ಮತ್ತು ಅವಳ ಶಿಕ್ಷಣವು ಕೂಡ ಅಲ್ಲ, ಅವಳು ತನ್ನದೇ ಆದ ಆಯ್ಕೆಯ ಅತ್ಯುತ್ತಮ ನ್ಯಾಯಾಧೀಶಳಾಗಿದ್ದಾಳೆಂದು’ ಬರೆಯುತ್ತಾರೆ. ರುಕ್ಮಾಬಾಯಿಯವರು ತನ್ನ ವಿವಾಹ ವಿಚ್ಚೇದನೆಗೆ ಸಂಬಂಧಿಸಿದಂತೆ  ರಾಣಿ ವಿಕ್ಟೋರಿಯಾರವರ ಸಹಾಯವನ್ನು ಪಡೆಯುತ್ತಾರೆ. ೧೮೮೮ರಲ್ಲಿ ವಿವಾಹ ವಿಚ್ಛೇದನೆ ಪಡೆದ ದಾದಾಜಿ ಭಿಕಾಜಿಯವರು ಬೇರೆ ಮದುವೆಯಾಗುತ್ತಾರೆ. ರುಕ್ಮಾಬಾಯಿಯವರು ಖ್ಯಾತ ಸ್ತ್ರೀವಾದಿ ಮತ್ತು ವೈದ್ಯರಾಗಿ ಬೆಳಕಿಗೆ ಬರುತ್ತಾರೆ. ರುಕ್ಮಾಜಿಯವರ ಪ್ರಕರಣವು ಭಾರತ ಮತ್ತು ಇಂಗ್ಲೆಂಡಿನೊಳಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕುತ್ತದೆ. ಇದರ ಪರಿಣಾಮವಾಗಿ ಭಾರತದಲ್ಲಿ ೧೮೯೧ರಲ್ಲಿ “ಎಜ್‌ಆಫ್ ಕನ್‌ಸಂಟ್ ಆಕ್ಟ್”ವು ಜಾರಿಗೆ ಬರಲು ಕಾರಣವಾಯಿತು. ಬ್ರಿಟೀಷ್ ಭಾರತದಾದ್ಯಂತ ೧೦ ರಿಂದ ೧೨ ವರ್ಷಗಳಿಗೆ ವಿವಾಹ ಒಪ್ಪಿಗೆಗೆ ಅನುಮತಿಯನ್ನು ನೀಡಿತು. ಕಾಮಾ ಆಸ್ಪತ್ರೆಯಲ್ಲಿ ಡಾ.  ಎಡಿತ್ ಪೆಚ್ ಎಂಬುವವರು ರುಕ್ಮಾಬಾಯಿಯನ್ನು ಪ್ರೋತ್ಸಾಹಿಸಿ, ಇವರ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ೧೮೮೯ರಲ್ಲಿ ಲಂಡನ್ ಸ್ಕೂಲ್ ಆಫ್ ಮೆಡಿಸನ್ ಫಾರ್ ವುಮೆನ್ ನಲ್ಲಿ ಅಧ್ಯಯನ ಮಾಡಲು ರುಕ್ಮಾಬಾಯಿ ಇಂಗ್ಲೆಂಡಿಗೆ ತೆರಳುತ್ತಾರೆ. ರುಕ್ಮಾಬಾಯಿ ರಕ್ಷಣಾವೇದಿಕೆಯನ್ನು ಸ್ಥಾಪಿಸಲು ಇವಾ ಮೆಕ್ಲಾರೆನ್, ವಾಲ್ಟರ್ ಮೇಕ್ಲಾರೆನ್, ಅಡಿಲೇಡ್ ಮ್ಯಾನಿಂಗ್ ಇತರರು ಸಹಕಾರ ನೀಡಿದರು. ಶಿವಾಜಿರಾವ್ ಹೇಳರ ಎಂಬುವವರು ೫೦೦ ರುಪಾಯಿಗಳ ದೇಣಿಗೆಯನ್ನು ನೀಡುತ್ತಾರೆ. ರುಕ್ಮಾಬಾಯಿಯವರು ತಮ್ಮ ಅಂತಿಮ ಪರೀಕ್ಷೆಗಾಗಿ ಎಡಿನ್‌ಬರ್ಗ್ಗೆ ತೆರಳಿ ಅಧ್ಯಯನ ಪೂರ್ಣಗೊಳಿಸಿ ೧೮೯೪ ರಲ್ಲಿ ಭಾರತಕ್ಕೆ ಬಂದ ನಂತರ ಸೂರತ್ ಆಸ್ಪತ್ರೆಯಲ್ಲಿ ಸೇರಿಕೊಳ್ಳುತ್ತಾರೆ.  ೧೯೧೮ ರಲ್ಲಿ ರುಕ್ಮಾಬಾಯಿಯವರು ಮಹಿಳಾ ವೈದ್ಯಕೀಯ ಸೇವೆಗೆ ಸೇರಲು ನಿರಾಕರಿಸಿದ್ದರೂ ಈಗ ರಾಜ್ಕೋಟನಲ್ಲಿ ಮಹಿಳೆಯರಿಗಾಗಿ ರಾಜ್ಯ ಆಸ್ಪತ್ರೆಯಲ್ಲಿ ಸೇರಿಕೊಳ್ಳುತ್ತಾರೆ. ಬಾಂಬೆಯಲ್ಲಿ ೧೯೩೦ ರಲ್ಲಿ ತಮ್ಮ ಸೇವೆಯಿಂದ ನಿವೃತ್ತರಾಗುವ ಮುನ್ನ ರುಕ್ಮಾಬಾಯಿಯವರು ೩೫ ವರ್ಷಗಳ ಕಾಲ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಸಮಾಜ ಸುಧಾರಣೆಗಾಗಿ ತಮ್ಮ ಕೆಲಸವನ್ನು ಮುಂದುವರಿಸಿದರು. ರುಕ್ಮಾಬಾಯಿಯವರು ‘ಪರ್ದಾಹ ಅದರ ನಿರ್ಮೂಲನೆಯ ಅಗತ್ಯ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ರುಕ್ಮಾಬಾಯಿಯವರು ೨೫ ಸೆಪ್ಟೆಂಬರ್ ೧೯೫೫ ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ೯೦ ವರ್ಷ ವಯಸ್ಸಿನವರಿರುವಾಗ ನಿಧನರಾದರು. ರುಕ್ಮಾಬಾಯಿಯವರ ಜೀವನ ಕಥೆಯನ್ನು ಆಧರಿಸಿ ಅನೇಕ ಕಾದಂಬರಿಗಳು ಮತ್ತು ಚಲನಚಿತ್ರಗಳು ಮೂಡಿಬಂದಿವೆ. ೨೦೧೭ ನವೆಂಬರ್ ೨೨ ರಂದು ಗೂಗಲ್ ಇಂಡಿಯಾ ರುಕ್ಮಾಬಾಯಿಯವರ ೧೫೩ ನೇ ಹುಟ್ಟು ಹಬ್ಬದಂದು ಒಂದು ಡೂಡಲ್(ಸಾಕ್ಷ್ಯ ಚಿತ್ರವನ್ನು) ಅನ್ನು ಅರ್ಪಿಸಿತ್ತು. ******************************** ಡಾ.ಸುರೇಖಾ ಜಿ.ರಾಠೋಡ ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Read Post »

You cannot copy content of this page

Scroll to Top