ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಜಯಶ್ರೀ ಹಾಲಾಡಿಯವರ ಕವಿತೆಗಳು

ಲಾಂದ್ರ ಉರಿಯುತ್ತಲೇ ಇತ್ತು

ಅವಳು. ..
ಗಾಳಿಕೈಗಳಲ್ಲಿ ಕುಂಚವಾಡಿಸಿ
ಹಸಿರು ಮರ ಸಣ್ಣ ಎಲೆಗಳನ್ನು
ಕೊರೆಕೊರೆದು ಹಚ್ಚಿಟ್ಟಳು
ಕಿತ್ತಳೆ ನೇರಳೆ ಕೆಂಪು ಗುಲಾಬಿ..
ಜನ -ಮನೆ -ಶಾಪಿಂಗ್ ಮಾಲ್ ಗಳನ್ನು
ಬಿಡಿಸಿ ಬೇಸರಿಸಿ ನಿಡುಸುಯ್ದಳು
ನೀಲ ಕಡಲು ಅಲೆವ ಚಂದಿರ
ಹುಚ್ಚು ಮರಳನ್ನು ಗೀಚಿದಳು
ಗೀಚುತ್ತಲೇ ಹೋದಳು …
ತೆಂಗಿನ ಗರಿಯ ಗುಡಾರಗಳಲ್ಲಿ
ಬೆಕ್ಕುಗಳು ಸುರುಳಿಸುತ್ತಿ ಮಲಗಿದ್ದವು
ನಾಯಿಗಳು ಪಾದಕ್ಕೆ ತಲೆಕೊಟ್ಟು
ವಿರಾಮ ಬಯಸುತ್ತಿದ್ದವು
ಅವಳ ಮೃದು ಗೆಜ್ಜೆಗಳು ರಿಂಗಣಿಸುತ್ತ
ಮದರಂಗಿಗೆ ನೇರಳೆ ಮೆತ್ತಿದವು
ಲಾಂದ್ರ ಬೆಳಗಿಸಿ ಕಡಲಲ್ಲಿ ಬಿಂಬ
ನೋಡುತ್ತ ಚಂದ್ರನಿಗೆ ಅಣಕಿಸಿದಳು
ಮೈಮುರಿದು ಆಕಳಿಸಿ ಉರಿ ಹೊತ್ತಿಸಿ
ಕಪ್ಪು ಕಾಫಿ ಬೆರೆಸಿ ಹೀರಿದಳು
ಬಾನ ಹೊದಕೆಯೆಳೆದುಕೊಳ್ಳುತ್ತ
ಮಣ್ಣುಕಡಲಿನ ಹಾಸಿಗೆಯಲ್ಲಿ
ಬೆಚ್ಚಬೆಚ್ಚಗೆ ಉರುಳಿಕೊಂಡಳು ..

ಆ ಲಾಂದ್ರ ಉರಿಯುತ್ತಲೇ ಇತ್ತು
ದಟ್ಟ ಇರುಳಿನಲ್ಲಿ. …
ಅವಳಿಗಾಗಿ -ಬರೀ ಪ್ರೀತಿಗಾಗಿ .
**

ಉಳಿದುಕೊಳ್ಳಬೇಕು

ಹೌದು
ಇದೆಲ್ಲ ವ್ಯಕ್ತವಾಗಿಸಲಾದರೂ
ನಾನು ಉಳಿದುಕೊಳ್ಳಬೇಕು
ತುಟಿಕಚ್ಚಿದ ಗಾಯಗಳನ್ನು
ಚಲಿಸದ ಆತ್ಮಗಳನ್ನು ..

ಮೂಕತನಕ್ಕೆ ಬಾಯಿ
ಬರುವುದಾದರೂ ಎಂದು
ಹೂವುಗಳು ಅರಳುತ್ತವಾದರೂ ಹೇಗೆ
ಈಗೀಗ ಅಚ್ಚರಿಯಾಗುತ್ತದೆ ..

ಸಂತೆಯಲ್ಲಿ ಒಂಟಿಯಾದ
ನನ್ನ ಕೈಬೆರಳುಗಳನ್ನು
ನಿಷ್ಕಲ್ಮಷ ಮೆದುಳನ್ನು
ತಡವಿ ನೋಡಿಕೊಳ್ಳುತ್ತೇನೆ ..

ಹೊಳೆದಂಡೆಯ ಗುಂಟ
ಪ್ರೀತಿಯೊಂದಿಗೆ ನಡೆವ ಕನಸು
ಹುಟ್ಟಿಕೊಂಡದ್ದಾದರೂ ಏಕೆ
–ಈ ಬದುಕಿಗೆ
ಹೇಳು ಜೀವವೇ. ..!
*******

ಇವಳು ನಿನ್ನವಳಲ್ಲ ..

ಇರುಳು ಕಾಕು ಹಾಕಿ
ಕೂಗಿ ಕರೆಯುತ್ತಿದೆ
ಹಗಲು ಬೆಚ್ಚಿ ಬೀಳಿಸಿ
ನರ್ತಿಸುತ್ತಿದೆ
ಗುಬ್ಬಚ್ಚಿ ಹೃದಯ
ಪತಗುಟ್ಟುತ್ತಿದೆ
ಎಲ್ಲಿ ಬಚ್ಚಿಡಲಿ
ಹೇಳು ಇವನೇ ..

ಹರವಾದ ಎದೆಯಲ್ಲಿ
ಮುಖ ಮರೆಸಿ
ತೋಳದಿಂಬಿನಲ್ಲಿ
ಕಣ್ಣಿರಿಸಿ
ನಿದ್ರಿಸುತ್ತಿದ್ದ ಹಗಲು
ರಾತ್ರಿಗಳಿದ್ದವು
ಅವುಗಳ ನೆನಪೂ
ನಮ್ಮದಲ್ಲ ಬಿಡು ..

ಏಳು ಸಮುದ್ರಗಳಾಚೆ
ಗಿಳಿಯಾಗಿದ್ದ
ಏಳು ಮಲ್ಲಿಗೆ ತೂಕದ
ರಾಜಕುಮಾರಿ
ಕನಸಿಗೆ ಬಂದಿದ್ದಳು
ಬಿರುಬಿಸಿಲಲ್ಲಿ
ಕೊಡೆಯೂ ಗತಿಯಿಲ್ಲದ
ನಿನ್ನವಳಿಗೆ. ..
—೨—
ಸುಡುಸತ್ಯಗಳನ್ನು
ಉದ್ದ ತಲೆಕೂದಲೊಂದಿಗೆ
ಗುಳ ಹಾಕಿ ತೊಳೆದಳು
ಗೋಧಿ ಮೈಗೆ ಮೆತ್ತಿದ
ಬಣ್ಣ ಬಣ್ಣಗಳನ್ನು
ಮಣ್ಣು ಹಾಕಿ ಬಳಿದಳು
ಚಂದದ ಭಾವಗಳನ್ನು
ಕೈಬಳೆಗಳೊಂದಿಗೆ ಒಡೆದಳು
ಭೂತನಗೆ ನಕ್ಕು
ಉಮ್ಮಲ್ತಿಯಂತೆ
ಎದೆ ಸೆಟೆಸಿ ಹೊರಟಳು …

ಎಲ್ಲಿಗೆಂದು ಕೇಳಬೇಡ
ಇವಳು ನಿನ್ನವಳಲ್ಲ. !!

**************************************

About The Author

1 thought on “ವಿಜಯಶ್ರೀ ಹಾಲಾಡಿಯವರ ಕವಿತೆಗಳು”

  1. ನಿಮ್ಮ ಕವಿತೆಗಳ ಭಾವಲಹರಿ ಚೆಂದ…. ಇಷ್ಟವಾಯಿತು ಮೇಡಂ ಅಭಿನಂದನೆಗಳು

Leave a Reply

You cannot copy content of this page

Scroll to Top