ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಚಿಕ್ಕುಡದಮ್ಮನ-ಗಿರಿ

ನೇತ್ರ ಪ್ರಕಾಶ್ ಹಲಗೇರಿ

(ನನ್ನ ತವರೂರ ಬಳಿ ಇರುವ ಚಿಕ್ಕುಡದಮ್ಮನ ಗಿರಿಯ

ಜೊತೆಗಿನ ಬಾಲ್ಯದ ನೆನಪುಗಳ ಮೆಲುಕು ಈ ಕವಿತೆ)

ಅಂದು ಕಡೇ ಶ್ರಾವಣದ ಮಂಗಳವಾರ
ಜಿಟಿ ಜಿಟಿ ಮುಸುಲಧಾರೆಯ ಹೊದಿಕೆ
ಬದುಕಿಗೆ ವಿರಾಮ ಜನಸ್ತೋಮ ಆರಾಮ
ಮಜ್ಜನ ಊರು- ಕೇರಿಯದು ಮಕ್ಕಳೊಂದಿಗೆ

ಚಕ್ಕಡಿ, ಟ್ರೈಲರ್, ಟ್ರಾಕ್ಟರ್ ಅಲ್ಲಿಲ್ಲಿ ಕಾರು
ವ್ಯಾನ್ ಬೈಕ್ ಗಳು ಥರಾವರಿ ಒನಪು ಒಯ್ಯಾರ
ಹೆಂಗೆಳೆಯರ ಒಗ್ಗಟ್ಟಿನ ರುಚಿಕಟ್ಟಿನಾ ಅಡುಗೆ
ದನಕರು ಕಾಯುವ ಕಾವಲು ದೇವಿಯ ಹರಕೆಗೆ

ಹರ್ಲಿಪುರ ಯೆಲೋದಳ್ಳಿ ಮದ್ಯೆ ಚಿಕ್ಕದೊಂದು
ಗಿರಿ ಸಾಲು ಅದರ ಮೇಲೊಂದು ಕಲ್ಲ ಗುಡಿ
ಬಸವಾಪಟ್ನದಿಂದ ಯೆಕ್ನಳ್ಳಿವರೆಗೆ ಹಬ್ಬಿದ ಅರಾವಳಿ
ಪರ್ವತ ನೆನಪಿಗೆ ತರುವ ತರುಲತೆಗಳ ಚಿಕ್ಕುಡ್ದ

ಗುಡ್ಡವೆಂದರೂ ಬೆಟ್ಟದಂತೇ ಭಾವ ಅದಕ್ಕಾಗಿ ಏರಲೇಬೇಕು ತಾಯಿ ನೋಡಲು ಉಘೇ ಹಾಡಲು
ರಂಗು ರಂಗಿನ ಬಣ್ಣದುಡಿಗೆಗಳ ಚಿಟ್ಟೆಯೋಪಾದಿಯಲ್ಲಿ
ಸಾಗುತಿರುವ ಸರದಿ ಮಂದಿ ಅಲ್ಲಿಲ್ಲ ಸಂದಿ ಗೊಂದಿ

ಅಲ್ಲಿಂದ ಸುತ್ತಲೂ ವೀಕ್ಷಣೆ ಹಾಲಸ್ವಾಮಿ ದುರ್ಗಮ್ಮ
ಪುಣ್ಯ ಸ್ಥಳದ ಗಿರಿವೃಂದ ಸೂಳೆಕೆರೆಯಿಂದ ಬರುವ ಥಳುಕು
ಬಳುಕಿನ ದೊಡ್ಡ ಚಾನಲ್ ಜೊತೆಗೆ ಮರಿ ಕಾಲುವೆ ಝರಿ
ಸುತ್ತೆಲ್ಲ ಅಡಿಕೆ ಬಾಳೆ ತೆಂಗು ಕಂಗು ಭತ್ತ ಮುತ್ತುಗಳ ಐಸಿರಿ

ಕೆಮ್ಮಣ್ಣಿನ ಕಾಲ್ದಾರಿಗಳ ಅಂಕುಡೊಂಕು ಬಳುಕು ಬೆಡಗಿಯಂತೆ
ಅಕ್ಕಪಕ್ಕದ ಊರುಗಳ ವಿಹಂಗಮ ನೋಟ ಕಣ್ಮನ ಸೆಳೆತ
ಸಾಲಾಗಿ ನಿಲ್ಲಿಸಿ ಮನುಷ್ಯರಿಗೆ ತೊಡಿಸಿದ ಬಿಳಿಯಂಗಿ ಕೆಂಪು
ಕರಿ ಟೋಪಿಯಂತೆ ಕಂಗೊಳಿಸುವ ವಿವಿಧ ಹೆಂಚಿನ ಮನೆಗಳು!

ಗುಡ್ಡದ ತಪ್ಪಲಲ್ಲಿ ಖಾರಾ ಮಂಡಕ್ಕಿ ಮಿರ್ಚಿ ಬೋಂಡಾ
ಒಗ್ಗರಣೆ ಘಮ ಇದರೊಂದಿಗೆ ಬೆಂಡು ಬತ್ತಾಸು ಜಿಲೇಬಿ
ಮೈಸೂರು ಪಾಕ್ ರುಚಿ ಪೀಪಿ ಬಲೂನ್ ಬಾಲ್ ಕೊಳಲು
ಬಳೆ ಸರ ಕೇಣಿಯವರತ್ತ ಧಾಪುಗಾಲು ಅವನ್ನು ಬೇಗ ಕೊಳ್ಳಲು

ದೇವಿ ದರ್ಶನ ಮುಗಿಸಿ ಹಿಂತಿರುಗುವಾಗ ಚಾನಲ್ ದಡದಲ್ಲಿ
ಭೋಜನ ಅಲ್ಲಿ ಗಿಳಿ ಕೋಗಿಲೆಗಳ ಕೂಜನ ಜಿಬುರಿನ ಮಳೆಸ್ನಾನ
ಬಾಳೆ ಎಲೆಯ ಆಸ್ವಾದ ರೊಟ್ಟಿ ಚಟ್ನಿ ಬುತ್ತಿ ಹಿಂಡಿ ಪಲ್ಯ ಪಚಡಿ
ರವೆ ಉಂಡಿ ಕೇಸರಿಬಾತ್ ರಸದೌತಣ ಸುಖದೊರತೆಯ ಸಿಹಿ ತಾಣ…

***********************

About The Author

24 thoughts on “ಚಿಕ್ಕುಡದಮ್ಮನ-ಗಿರಿ”

  1. Dr.Ningappa Mudenur

    ಚಿಕ್ಕುಡದಮ್ಮನ-ಗಿರಿ ತುಂಬಾ ಒಳ್ಳೆಯ ಪದ್ಯ.ನಿಮಗೆ ಕಾವ್ಯದ ಶ್ರದ್ಧೆ ಒಲಿದಿದೆ.ಬರೆಯುತ್ತಿರಿ ಅಭಿನಂದನೆಗಳು.

    1. ನಿಮ್ಮ ಈ ಕವಿತೆಯನ್ನು ನೋಡಿ ನಮ್ಮ ಗುರುಗಳು ಪ್ರಕಾಶ್ ಹಲಗೇರಿ ಸರ್ ನೆನಪಾಯಿತು ಮೇಡಂ ತುಂಬಾ ಚೆನ್ನಾಗಿದೆ ಈ ನಿಮ್ಮ ಕವಿತೆ

      1. ನಾನು ಪ್ರಕಾಶ್ ಹಲಗೇರಿ ಸರ್ ಅವರ ಶಿಷ್ಯ ಗೋಣಿಸ್ವಾಮಿ ಮೇಡಂ

  2. I am very happy to see the content.
    Great thought
    We are realy missing great personality
    We will defnitely support

  3. ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ️️. ಬರವಣಿಗೆ ಮುಂದುವರಿಸಿ️️

  4. ಅತ್ಯುತ್ತಮ ವಾಗಿದೆ
    ಗದ್ಯರೂಪದ ಕವನ

    ಕವಿತಾ ಶಕ್ತಿ ನಿಮಗೆ ಒಲಿದಿದೆ ಮುಂದುವರಿಯಲಿ ನಿಮ್ಮ ಕಾವ್ಯಯಾನ

  5. ಸುಶಿಲಾದೇವಿ

    ತುಂಬಾ ಖುಷಿಯಾಯಿತು…ಪ್ರತಿಭೆಗೆ ಬೆಲೆ ಇದೆ.

Leave a Reply

You cannot copy content of this page

Scroll to Top