ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬುವಿ ರವಿ ಮತ್ತು ಮುಂಗಾರಮ್ಮ

ಕವಿತಾ ಹೆಗಡೆ ಅಭಯಂ

Rainy Day People" Oil painting Paul Guy Gantner … | Oil pastel paintings, Art  painting, Umbrella art

ವಸಂತದಲ್ಲಿ ಬುವಿಗೆ ರವಿಯ
ಗಂಟು ಹಾಕಿದ ಮುಂಗಾರಮ್ಮ
ಈಡು ಜೋಡು ಹೊಂದಿತೆಂಬ ನಿರುಮ್ಮಳದಿ ಸಾಗರ ಸಂಚಾರಕೆ
ಹೊರಟೇಹೋದಳಲ್ಲ.

ವಸಂತವಿಡೀ ರವಿಯ ವೀರಾವೇಶ
ಆಟಾಟೋಪಕೆ ಮೈಮನದ ತುಂಬ
ಮೊದಮೊದಲು ಹೂವರಳಿಸಿ ನಕ್ಕ ಬುವಿ.
ಹಗಲೆಲ್ಲ ಎಡೆಬಿಡದೆ ಕಾಡುವ ಹಠಮಾರಿ ದಣಿವರಿಯದ ರವಿಯ ಬಿಸುಪ ಬೇಗುದಿಗೆ ಮೆಲ್ಲಗೆ
ಸೋತು ಬೆವೆತವಳ
ಬಿಡಲಾರದ ಬಂಧಕೆ ಬೀಗ ಜಡಿದ
ಬಾಯೊಳಗೆ ಅನೂಹ್ಯ ಹಾಹಾಕಾರ.

ಮಗಳ ನೋಡಲು ಹೊರಟ ಮುಂಗಾರಮ್ಮ ತಿನಿಸ ಶೇಖರಿಸುತ್ತ ಒಡಲ ಗಂಟ ಹಿಗ್ಗಿಸಿ ಹಿರಿದಾಗಿಸಿ
ಲಗುಬಗೆಯಲಿ ಅವತರಣ.

ಅಲ್ಲೋ ಕೃಶಕಾಯೆ
ರವಿತೃಷೆಗೆ ಹಿಂಜಿ ಹತ್ತಿಯಾದ ಬುವಿ.
ಒಡಲ ಆರ್ಭಟವ ಒಳಗೆ ಅಡಗಿಸಿಡುತ
ಶ್ರಾವಣದ ಸಿಂಚನದಿ ಮಗಳ
ನೆನೆಸುವ ತವಕ.
ಮಿಂಚ ಚಕ್ಕುಲಿ ಸಿಡಿಲ ಉಂಡೆಗಳ
ಔತಣದಿ ಮಗಳ ಹಸಿಯಾಗಿಸುವ ಹರಕೆ.

ಆಷಾಢದಲೋ ಅತಿ ಅಮೃತಧಾರೆ
ಸೋನೆ ಜಡಿಮಳೆಯಾಗಿ
ಕಂಡ ಅಂಡ ಅಣುಗಳನೆಲ್ಲ
ನೆನೆಸಿ ಹಸಿರಾಗಿಸುವಾಸೆ.
ತುಸು ಆರೈಕೆಯ ಹುನ್ನಾರಕೆ ಆಷಾಢದಗಲಿಕೆಯ ನೆಪ.

ತಿಂಗಳು ಕಳೆಯುವದರಲ್ಲಿ
ಬುವಿಗೆ ತವರು ತಂಗಳು
ರವಿಯ ಅನವರತ ಕನವರಿಕೆ.
ಮುನಿದ ಮುಂಗಾರಮ್ಮ
ಬುವಿ ರವಿಯ ಪುನರ್ಮಿಲನಕೆ
ಒಲ್ಲದ ಮನದಿ ಹಿಂದೆ ಹಿಂದೆ ಸರಿವಾಗ
ರವಿಯ ಭದ್ರಪದ ಭಾದ್ರಪಾದವಾಗಿ
ಮಿಲನ ಮಹೋತ್ಸವಕೆ ಪುನರ್ನಾಂದಿ.
ಮತ್ತೆ ಮುಂಗಾರಮ್ಮ ಬರುವವರೆಗೂ
ಮೀಸಲಿದೆ ಮತ್ತದೇ ವೈಭವ.
*****************

About The Author

Leave a Reply

You cannot copy content of this page

Scroll to Top