ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನೀನೆಂದೂ ಬಂಧಿಸಲಿಲ್ಲ

ಡಾ. ಪುಷ್ಪಾವತಿ ಶಲವಡಿಮಠ

woman wearing gray long-sleeved shirt facing the sea

ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ
ಸರಪಳಿ ಹೊನ್ನಾದರೇನು ಕಬ್ಬುಣವಾದರೇನು?
ಬಂಧನವದು ಉಸಿರುಗಟ್ಟಿಸುವುದು
ಪ್ರೀತಿಯೆಂಬುದದು ಬಂಧನವ ಕಳಚಿ ಬಂಧುರವಾಗಿಸುವುದೆಂದೆ…..

ದೂರದಲಿ ಎತ್ತರದಲ್ಲಿ ಹಾರುವ ಹಕ್ಕಿ ತೋರಿ
ಪ್ರೀತಿಯೆಂದರೆ ರೆಕ್ಕೆಯೆಂದೆ
ಗಗನ ಗುಡಿಯೆಡೆಗೆ ಅದನೆ ಕಟ್ಟಿಕೊಂಡು
ಕಡಲ ತಡಿಗಳ ಸವರಿ ಗಡಿರೇಖೆಗಳೆಲ್ಲೆ ಮೀರಿ
ಹಾರಬೇಕಿದೆ ಎಂದೆ
ಪಕ್ಕ ಎರಡು ರೆಕ್ಕೆ ಇಟ್ಟು ಹಾರಲು ಬಿಟ್ಟೆ
ಅಲ್ಲಮನ ಬಯಲು ತಬ್ಬುವುದ ಕಲಿಸಿದೆ….

ಹರಿಯುವ ನದಿಯ ತೋರಿ
ಮೋಹನ ಮುರುಳಿಯ ಗಾನದಲಿ
ಪ್ರೀತಿಯ ಜುಳುಜುಳು ಮಂಜುಳ ನಿನಾದದಲಿ
ಗಿರಿ-ಗಹ್ವರಗಳ ಮೌನ ತನ್ಮಯತೆಯಲಿ
ಮನವ ನಿಲ್ಲಿಸಿದೆ ಪ್ರೀತಿಯ ಹುಚ್ಚಿನಲಿ
ಕೊಚ್ಚಿ ಹೋಗದಂತೆ ಎಚ್ಚರಿಸಿದೆ
ಕಲ್ಮಶವ ತೊಳೆಯುವ ಗಂಗೆ ತುಂಗೆಯರಂತೆ ಪ್ರೀತಿ
ಬುದ್ಧನ ಧ್ಯಾನವೇ ಅದರ ರೀತಿ ಎಂದೆ….

ಅರಳುವ ಹೂವ ತೋರಿ
ಸಡಗರದಿ ಜೀವಿಸುವ ಪರಿಯ ಹೇಳಿ
ಕೊನೆಯವರೆಗೂ ಬಿಡದೆ ಗಂಧ ಕಂಪ ಹರಡಿ
ಮಣ್ಣ ಮಡಿಲಿನಲಿ ಪವಡಿಸುವ ಹೂವಂತೆ ಜೀವಪ್ರೀತಿ
ಬಸವ ಭಕ್ತಿಯ ಸಹಜತೆಯಂತೆ
ಬಾಳ ತುಂಬಿರಬೇಕು ಪ್ರೀತಿ ಎಂದೆ…..

ನಗುವ ಮಗುವ ತೋರಿ
ಕಪಟವಿಲ್ಲದ ಅದರ ನೀತಿಯಂತೆ ಪ್ರೀತಿ
ಶುದ್ಧ ಬಿಳಿಯರಳೆಯ ತೆರದಿ ನಿರ್ಮಲವೆಂದೆ
ಬಾಪು ಭಾರತವನ್ನಪ್ಪಿಕೊಂಡಂತೆ
ತನುಮನವ ತಬ್ಬಿಕೊಂಡಿರುವುದೇ ಪ್ರೀತಿಯೆಂದೆ
ಅನಂತತೆಯ ಕಡೆಗೆ ಹೊರಳಿಸಿದೆ
ಬಾನು ಬಯಲು ಒಂದಾದ ಪ್ರೀತಿಯ ತೋರಿದೆ
ಬಂಧನದಿಂದ ಬಿಡುಗಡೆಯೆಡೆಗೆ ನಡೆಸಿದೆ
ಮುಕ್ತಿ ಪಥವ ಪ್ರೀತಿಯಿಂದಲಿ ತೋರಿದೆ
ಪ್ರೀತಿ ಹೆಸರಲಿ ನೀನೆಂದೂ ಬಂಧಿಸಲಿಲ್ಲ…..


About The Author

13 thoughts on “ನೀನೆಂದೂ ಬಂಧಿಸಲಿಲ್ಲ”

    1. R G Halli Nagaraja

      ಪುಷ್ಪಾ ಶಲವಡಿಮಠ ಅವರ ಕವಿತೆ ಓದಿದೆ.
      *ನೀನೆಂದೂ ಬಂಧಿಸಲಿಲ್ಲ* ಅರ್ಥಪೂರ್ಣ ಕವನ. ಅಭಿವ್ಯಕ್ತಿಯ ಸ್ವಾತಂತ್ರ್ಯ ಎಂಬುದು ಹಕ್ಕಿ ರೆಕ್ಕೆಬಿಚ್ಚಿ ಹಾರಿದಂತೆ. ಪ್ರೀತಿಗೂ ಬಂಧನ ಇರಬಾರದು. ಅದು ಮನಸ್ಸಿನ ಭಾವನೆ. ಗಂಡು – ಹೆಣ್ಣಿನ ಸ್ಪರ್ಶದ ರೋಮಾಂಚನವೇ ಪ್ರೀತಿಯ ಸೆಳೆತ ಅಲ್ಲ. ಮಧುರ ಭಾವಗಳು ಅಲ್ಲಮ, ಬುದ್ದನಲ್ಲೂ ಹುಡುಕಾಟ ನಡೆಸಿ ಅವರನ್ನೂ ಬಂಧಿಸಿಡುವುದು ಪ್ರೀತಿಯ ಭಾಗವೂ, ಭಾವವೂ ಹೌದು.
      *ಆರ್ ಜಿ*

      1. Pushpa Pushpa S

        ಕವಿತೆ ಅಂತರಾಳದ ಭಾವ ಸ್ಪರ್ಶಿಸಿದ ತಮಗೆ ಧನ್ಯವಾದಗಳು ಸರ್

  1. Yallappa M Yakolli

    ಪ್ರೀತಿ ಅನುಭಾವವಾಗುವ ಪರಿ ವಿಸ್ಮಯ !ಚಂದದ ಕವಿತೆಗೊಂದು ಸಲಾನು ಅಭಿನಂದನೆ ಮೆಡಮ್

  2. ಮಹಾಂತೇಶ್.ಮರಿಗೂಳಪ್ಪನವರ್

    ಮೃದು ಮಧುರ ಪದಗಳು .. ಪ್ರೀತಿಯ ವಿಸ್ತಾರಕೆ ಎಳೆಯಾಗಿವೆ

  3. ಪ್ರೀತಿಯ ಪರಿಮಳ ಮತ್ತು ಅದರ ತಳಮಳ ಅದ್ಭುತವಾಗಿ ಮೂಡಿಬಂದಿದೆ

Leave a Reply

You cannot copy content of this page

Scroll to Top