ದಾರಾವಾಹಿ ಆವರ್ತನ ಅದ್ಯಾಯ-27 ಗುರೂಜಿಯ ಮನೆಯಿಂದ ಹಿಂದಿರುಗಿದ ಸುಮಿತ್ರಮ್ಮ ಆತುರಾತುರವಾಗಿ ಮನೆಗೆ ಬಂದವರು ಕೈಕಾಲು ಮುಖ ತೊಳೆಯಲು ಬಚ್ಚಲಿಗೆ ಹೋದರು. ಆಹೊತ್ತು ಲಕ್ಷ್ಮಣಯ್ಯ ವರಾಂಡದಲ್ಲಿ ಕುಳಿತುಕೊಂಡು ಜೈಮಿನಿ ಭಾರತದ ಚಂದ್ರಹಾಸನ ಪ್ರಸಂಗವನ್ನು ಓದುತ್ತಿದ್ದರು. ಅದರಲ್ಲಿ, “ಮಂತ್ರಿ ದುಷ್ಟಬುದ್ಧಿಯು ಕುಳಿಂದನನ್ನು ಸೆರೆಯಲ್ಲಿಟ್ಟು ಕುಂತಳಪುರಕ್ಕೆ ಬರುವಾಗ ಹಾವೊಂದು ಅವನೆದುರು ಬಂದು, ನಿನ್ನ ಮನೆಯಲ್ಲಿದ್ದ ನಿಧಿಯನ್ನು ಕಾಯುತ್ತಿದ್ದೆ. ಆದರೆ ನಿನ್ನ ಮಗ ಅದೆಲ್ಲವನ್ನೂ ವೆಚ್ಚ ಮಾಡಿದ! ಎಂದು ಹೇಳಿ ಹೊರಟು ಹೋಯಿತು” ಎಂಬ ಕಥೆಯ ಕೊನೆಯಲ್ಲಿದ್ದರು. ಅಷ್ಟೊತ್ತಿಗೆ ಸುಮಿತ್ರಮ್ಮ ನಗುತ್ತ ಬಂದು ‘ಉಸ್ಸಪ್ಪಾ…!’ ಎಂದು ಗಂಡನ ಹತ್ತಿರ ಕುಳಿತರು. ಲಕ್ಷ್ಮಣಯ್ಯನಿಗೆ ಮರಳಿ ಆತಂಕ ಶುರುವಾಯಿತು. ‘ಹೋದ ಕೆಲಸ ಏನಾಯ್ತು ಮಾರಾಯ್ತೀ…? ಎಂಬ ಮಾತು ನಾಲಗೆಯ ತುದಿಯಲ್ಲಿ ಬಂದು ನಿಂತಿತು. ಆದರೆ ಹಾಗೆ ಕೇಳಿದರೆ ಇವಳು ಇನ್ನೇನಾದರೂ ರಾಮಾಯಣ ತೆಗೆದರೆ ಕಷ್ಟ! ಎಂದುಕೊಂಡು ಮತ್ತಷ್ಟು ಆಳವಾಗಿ ಓದಿನಲ್ಲಿ ಮುಳುಗಿರುವಂತೆ ನಟಿಸಿದರು. ಗಂಡನ ಉದಾಸೀನವನ್ನು ಕಂಡ ಸುಮಿತ್ರಮ್ಮ, ‘ರೀ, ನಮ್ಮ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳಲು ಆ ದರಿದ್ರದ ರಾಧಾಳ ಕುಟುಂಬವೇ ಕಾರಣವಂತೆ ಮಾರಾಯ್ರೇ! ಆ ಹೊಲಸು ಜನರಿಂದಾಗಿ ನಾವೆಲ್ಲ ಇನ್ನೂ ಏನೇನು ಅನುಭವಿಸಲಿಕ್ಕುಂಟೋ ದೇವರೇಬಲ್ಲ…!’ ಎಂದು ಸಿಡುಕಿದರು. ಅರೆರೇ! ನಮ್ಮ ಮನೆಯೊಳಗೆ ಹಾವು ಕಾಣಿಸಿಕೊಳ್ಳುವುದಕ್ಕೆ ಗೋಪಾಲನ ಕುಟುಂಬ ಹೇಗೆ ಕಾರಣವಾಗುತ್ತದೆ? ಇದೆಂಥ ತಮಾಷೆಯಪ್ಪಾ ಎಂದು ಅಚ್ಚರಿಪಟ್ಟ ಲಕ್ಷ್ಮಣಯ್ಯ, ‘ಹೌದಾ…? ಅದು ಹೇಗೆ ಮಾರಾಯ್ತೀ…?’ ಎಂದು ಕಣ್ಣಗಲಿಸಿ ಕೇಳಿದರು. ‘ಹ್ಞೂಂ ಮತ್ತೆ! ನಾನೂ ಅದಕ್ಕೇ ನಿಮ್ಮಲ್ಲಿ ಮೊನ್ನೆಯಿಂದಲೂ ಜೋಯಿಸರ ಹತ್ತಿರ ಹೋಗಿ ಬರುವ ವಿಚಾರ ಎತ್ತುತ್ತಿದ್ದುದು. ನೀವು ದುಡ್ಡು ಕೊಡುವುದಿಲ್ಲ ಎಂದಿರಿ. ಆದರೆ ನಿಮಗೆ ಬೇಡವಾದ್ರೂ ನನಗೆ ಸಂಸಾರ ಬೇಕಲ್ಲವಾ ಮಾರಾಯ್ರೇ…ಅದಕ್ಕೆ ಹೋಗಿ ಬಂದೆ!’ ಎಂದು ವ್ಯಂಗ್ಯವಾಗಿ ಹೇಳಿದರು. ಆದರೆ ಅದಕ್ಕೆ ಲಕ್ಷ್ಮಣಯ್ಯನ ಉತ್ತರ, ಮತ್ತೆ ಜೈಮಿನಿ ಭಾರತದತ್ತ ಗಮನ ಹರಿಸುವುದಾಗಿತ್ತು. ಅದನ್ನು ಕಂಡ ಸುಮಿತ್ರಮ್ಮ, ‘ಇಷ್ಟೊಂದು ನೇಮನಿಷ್ಠೆಯಿಂದ ಇರುವ ನಮ್ಮ ಮನೆಯೊಳಗೇ ಹಾವು ಕಾಣಿಸಿಕೊಳ್ಳುವುದೆಂದರೇನು? ಎಂದು ಆ ಹಾವು ಬಂದಂದಿನಿಂದ ನನ್ನನ್ನು ಅನುಮಾನ ಕಾಡಲು ಶುರುವಾಗಿತ್ತು. ಆದರೆ ಅದನ್ನು ನಿವಾರಿಸಿಕೊಳ್ಳದೆ ನಿಮ್ಮೊಡನೆ ಯಾವುದನ್ನು ಮಾತಾನಾಡುವುದೂ ವ್ಯರ್ಥ ಅಂದುಕೊಂಡಿದ್ದೆ. ಇವತ್ತು ಗುರೂಜಿಯವರಲ್ಲಿಗೆ ಹೋದ ಮೇಲೆ ಹಾಲು ಯಾವುದು ನೀರು ಯಾವುದು ಅಂತ ಸ್ಪಷ್ಟವಾಯಿತು. ಅಷ್ಟು ಮಾತ್ರವಲ್ಲ, ಆ ಗುರೂಜಿಯವರ ಶಕ್ತಿ ಎಂಥದ್ದೆಂಬುದೂ ತಿಳಿಯಿತು!’ ಎಂದರು ಹಮ್ಮಿನಿಂದ. ‘ಓಹೋ ಹೌದಾ ಮಾರಾಯ್ತೀ…ಹಾಗಾದರೆ ಅದೇನೆಂದು ನನಗೂ ಸ್ವಲ್ಪ ಹೇಳು…!’ ಎಂದು ಲಕ್ಷ್ಮಣಯ್ಯ ತಮ್ಮ ಕುತೂಹಲವನ್ನು ತೋರಿಸಿಕೊಳ್ಳದೆ ಕೇಳಿದರು. ಆಗ ಸುಮಿತ್ರಮ್ಮ, ಗುರೂಜಿ ತನಗೆ ಹೇಳಿದ ಸಂಗತಿಯನ್ನೆಲ್ಲ ಗಂಡನಿಗೆ ವಿಸ್ತಾರವಾಗಿ ವಿವರಿಸಿದವರು, ಅದಕ್ಕೆ ಅವರು ಸೂಚಿಸಿದ ಪರಿಹಾರ ಕಾರ್ಯವನ್ನೂ ಮೃದುವಾಗಿ ತಿಳಿಸಿದರು. ಏನೋ ಗಹನವಾದ ವಿಚಾರವೇ ಇರಬೇಕು ಎಂದು ಆಸಕ್ತಿಯಿಂದ ಕೇಳಿಸಿಕೊಂಡ ಲಕ್ಷ್ಮಣಯ್ಯನ ಉತ್ಸಾಹಕ್ಕೆ ಗುರೂಜಿಯ ಪರಿಹಾರ ಸೂತ್ರವು ರಪ್ಪನೆ ತಣ್ಣೀರೆರಚಿದಂತಾಯಿತು. ಥೂ! ಇಷ್ಟೆನಾ…! ಇಂಥ ಕಟ್ಟುಕಥೆಯನ್ನು ಬುದ್ಧಿಯಿರುವವರು ಯಾರಾದರೂ ನಂಬಲಿಕ್ಕುಂಟಾ…? ಆ ಖದೀಮ ಗುರೂಜಿ ಇಂಥ ಮಾಟದ ಮಾತುಗಳಿಂದ ಇನ್ನೆಷ್ಟು ಮಂದಿಯ ಮಂಡೆ ಗಿರ್ಮಿಟ್ ಮಾಡಿ ಹಣ ಮಾಡಲು ಹೊರಟಿದ್ದಾನೋ ದೇವರಿಗೇ ಗೊತ್ತು! ಎಂದು ಜಿಗುಪ್ಸೆಯಿಂದ ಅಂದುಕೊಂಡರು. ಆದರೆ ಹೆಂಡತಿಯೆದುರು ಆ ಅಸಹನೆಯನ್ನು ತೋರಿಸಿಕೊಳ್ಳಲಿಲ್ಲ. ಒಂದು ವೇಳೆ ತಾವೀಗ ಇವಳ ಮಾತನ್ನು ತಿರಸ್ಕರಿಸಿದರೆ ಇವಳು ಅದನ್ನು ಖಂಡಿತಾ ಒಪ್ಪುವ ಜಾತಿಯವಳಲ್ಲ. ಬದಲಿಗೆ ನನ್ನ ಮೇಲಿನ ಕೋಪಕ್ಕಾದರೂ ಇನ್ನಷ್ಟು ಖರ್ಚಿನ ದಾರಿ ಹುಡುಕಲೂ ಹಿಂಜರಿಯಲಿಕ್ಕಿಲ್ಲ ಹಾಳಾದವಳು. ಇರಲಿ. ಏನಾದರೇನು, ತಮ್ಮ ಮನೆಯ ಸಮಸ್ಯೆಯೊಂದು ತಮ್ಮದಲ್ಲ ಎಂದು ಇವಳಿಗೂ ತಿಳಿಯಿತಲ್ಲ ಅಷ್ಟು ಸಾಕು ಎಂದುಕೊಂಡು ನೆಮ್ಮದಿಪಟ್ಟರು. ಆದರೆ ನಾಗಪೂಜೆಯನ್ನೂ ಮತ್ತು ಷಣ್ಮುಖಕ್ಷೇತ್ರದ ಪ್ರಯಾಣವನ್ನೂ ಮಾಡಬೇಕೆಂದು ಹೆಂಡತಿಯ ಕಟ್ಟಪ್ಪಣೆಯಾದಾಗ ಮಾತ್ರ ಗುರೂಜಿಯೇ ತಮ್ಮ ಹೊಟ್ಟೆಗೆ ಕೊಳ್ಳಿಯಿಟ್ಟಂತಾಯಿತು. ಆದ್ದರಿಂದ ಗುರೂಜಿಯ ಮೇಲೆ ಅವರಿಗೆ ಕೆಟ್ಟ ಸಿಟ್ಟು ಬಂತು. ಇವನಂಥ ಕಪಟಿ ಜ್ಯೋತಿಷ್ಯರಿಂದಾಗಿ ಇಡೀ ಜ್ಯೋತಿಷ್ಯ ಕುಲಕ್ಕೇ ಅವಮಾನ! ಇಂಥವರನ್ನು ಯಾರಾದರೂ ಹಿಡಿದು ಸರಿಯಾಗಿ ಶಿಕ್ಷಿಸುವುದಿಲ್ಲವಲ್ಲಾ ಥತ್!’ ಎಂದು ಶಪಿಸಿಕೊಂಡರು. ಆದರೆ ಸುಮಿತ್ರಮ್ಮ ಗಂಡನ ನೋವಿಗೆ ಸ್ಪಂದಿಸುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಆಹೊತ್ತು ಅವರ ತಲೆಯೊಳಗೆ ಗುರೂಜಿಯ ಮಾರ್ಮಿಕ ನುಡಿಮುತ್ತುಗಳೇ ಅನುರಣಿಸುತ್ತಿದ್ದವು. ಹಾಗಾಗಿ ಅವರಿಗೆ ಗೋಪಾಲನ ಕುಟುಂಬದ ಮೇಲೆ ತಿರಸ್ಕಾರ ಹುಟ್ಟಿಬಿಟ್ಟಿತು. ಆದಷ್ಟು ಬೇಗನೇ ಈ ವಿಷಯವನ್ನು ರಾಧಾಳಿಗೆ ತಿಳಿಸಿ ಅವರನ್ನು ಈ ವಠಾರದಿಂದಲೇ ಓಡಿಸಿಬಿಡಬೇಕು. ಅದಾಗದ್ದರೆ ಇದೇ ನೆಪ ಹಿಡಿದುಕೊಂಡು ಅವರೂ ನಮ್ಮಂತೆ ಶುದ್ಧಾಚಾರದಿಂದ ಬದುಕುವಂತೆ ಮಾಡಬೇಕು! ಎಂದು ನಿರ್ಧರಿಸಿ ತಟ್ಟನೆದ್ದು, ‘ಈಗ ಬಂದೆ ಮಾರಾಯ್ರೇ…’ ಎಂದು ಗಂಡನಿಗೆ ಹೇಳಿ ಸರಸರನೇ ಗೋಪಾಲನ ಮನೆಯತ್ತ ಹೊರಟರು. *** ರಾಧಾಳ ಮನೆತನವೂ ತಮ್ಮ ಪೂರ್ವಜರು ಆರಾಧಿಸಿಕೊಂಡು ಬಂದಂಥ ಅನೇಕ ದೈವದೇವರುಗಳ ಅತೀವ ಭಕ್ತರಾಗಿದ್ದವರು. ಹಾಗಾಗಿ ರಾಧಾಳಲ್ಲೂ ಅದರ ಪ್ರಭಾವವಿತ್ತು. ಅವಳು ತನ್ನ ಸುತ್ತಮುತ್ತಲಿನ ಜನರು ಯಾವ ದೇವರು ದಿಂಡರುಗಳನ್ನು ‘ಬಹಳ ಕಾರಣಿಕದ ಶಕ್ತಿಗಳು!’ ಎಂದು ಬಣ್ಣಿಸುತ್ತಾರೋ ಅವರನ್ನೆಲ್ಲ ಮರು ಮಾತನಾಡದೆ ನಂಬಿ ಪೂಜಿಸಿಕೊಂಡು ಬರುವಂಥ ಮುಗ್ಧೆ. ಆದರೆ ಗೋಪಾಲ ಹಾಗಲ್ಲ. ಅವನಿಗೆ ತನ್ನ ಮನೆತನದ ಆರಾಧ್ಯಶಕ್ತಿಗಳ ಕುರಿತು ಸ್ಪಷ್ಟವಾದೊಂದು ಕಲ್ಪನೆಯಾಗಲಿ ಅದಕ್ಕೆ ತಕ್ಕಂಥ ನಂಬಿಕೆಯಾಗಲಿ ಇರಲಿಲ್ಲ. ಕಾರಣ, ಅವನು ಹುಟ್ಟುವ ಕಾಲಕ್ಕೆ ಅವನಪ್ಪ ಸಂಜೀವಣ್ಣನಿಗೆ ದುಡಿಮೆಯೇ ಜೀವನದ ಮುಖ್ಯ ಅಂಗವಾಗಿತ್ತು. ಹಾಗಾಗಿ ಅವರು ತಮ್ಮ ಮನೆತನದ ದೈವಾರಾಧನೆಗೆ ಅಷ್ಟಾಗಿ ಒಲವು ತೋರದೆ ವರ್ಷಕ್ಕೊಂದು ಬಾರಿ ಮೂಲದ ಮನೆಯಲ್ಲಿ ನಡೆಯುವ ದೈವಾಚರಣೆಗೆ ಮಾತ್ರವೇ ಒಂದು ರಾತ್ರಿಯ ಮಟ್ಟಿಗೆ ಹೋಗಿ ಕುಟುಂಬಿಕರೊಡನೆ ಬೆರೆತು ಪಾಲ್ಗೊಂಡು ಹಿಂದಿರುಗುವ ರೂಢಿಯಿಟ್ಟುಕೊಂಡಿದ್ದರು. ಹೀಗಾಗಿ ಗೋಪಾಲನೂ ಆ ನಂಬಿಕೆ, ಸಂಪ್ರದಾಯಗಳಿಂದ ದೂರವೇ ಉಳಿದುಬಿಟ್ಟ. ಆದ್ದರಿಂದ ಆ ವಿಷಯಗಳು ಅವನಲ್ಲಿ ಅಷ್ಟೊಂದು ಮಹತ್ವವನ್ನು ಸೃಷ್ಟಿಸುತ್ತಿರಲಿಲ್ಲ. ಆದರೆ ತನ್ನ ಅಗತ್ಯಕ್ಕೋ ಅಥವಾ ಯಾವುದಾದರೂ ತಕ್ಷಣದ ಸಮಸ್ಯೆ, ಅಂಜಿಕೆಗಳ ನಿವಾರಣೆಗೋ ಅವನು ತನ್ನ ಮನೆತನದ ದೈವಶಕ್ತಿಗಳಿಗೆ ಮೊರೆ ಹೋಗುವ ಅಭ್ಯಾಸವಿಟ್ಟುಕೊಂಡಿದ್ದ. ಜೊತೆಗೆ ನಾಡಿನ ನಾಗ ಕಟಾಕ್ಷದ ಬಗ್ಗೆಯೂ ಅವನಲ್ಲಿ ವಿಶೇಷ ಭಯಭಕ್ತಿಯಿತ್ತು. ಆದರೆ ಅದು ಅವನಿಗೆ ತನ್ನ ಸುತ್ತಮುತ್ತಲಿನ ಸಮಾಜದಿಂದ ಬಂದ ಬಳುವಳಿಯಾಗಿತ್ತು. ಹಾಗಾಗಿ ನಾಗನ ವಿಚಾರದಲ್ಲಿ ಯಾರು ಏನು ಹೇಳಿದರೂ ಎಲ್ಲರಂತೆ ಅವನೂ ಕಣ್ಣುಮುಚ್ಚಿ ನಂಬುವವನಾಗಿದ್ದ. ಇಂದು ಗೋಪಾಲ ಮನೆಯಲ್ಲಿರುವ ಹೊತ್ತಲ್ಲೇ ಸುಮಿತ್ರಮ್ಮ ದುಗುಡದಿಂದ ಬಂದವರು, ಅವರ ಮನೆಯ ಗೇಟು ದಾಟಿ ಒಳಗಡಿಯಿಡಲಿಲ್ಲ. ಬೇಲಿಯ ಹೊರಗೆಯೇ ನಿಂತುಕೊಂಡು, ‘ರಾಧಾ, ಹೇ ರಾಧಾ…!’ ಎಂದು ಅಸಹನೆಯಿಂದ ಕೂಗಿದರು. ಆಹೊತ್ತು ರಾಧಾಳ ನಾಯಿ ಮೋತಿಯು ತನ್ನ ಕಾಲುಗಳನ್ನು ಉದ್ದನೆ ಚಾಚಿ ಮಗ್ಗುಲು ಮಲಗಿಕೊಂಡು ತನ್ನ ಎಂಟು ಮರಿಗಳಿಗೆ ಹಾಲುಣಿಸುತ್ತ ಅರೆನಿದ್ರೆಯಲ್ಲಿತ್ತು. ಆದರೆ ಅದು ತನ್ನ ಯಜಮಾನ್ತಿಯ ಹೆಸರಿನ, ‘ರಾ…’ ಎಂಬ ಅಕ್ಷರ ಸುಮಿತ್ರಮ್ಮನ ಬಾಯಿಯಿಂದ, ಅದೂ ಅಸಹನೆಯಿಂದ ಹೊರಗೆ ಬೀಳುತ್ತಲೇ ತಟ್ಟನೆ ಅದುರಿ ಎಚ್ಚೆತ್ತಿತು. ತನ್ನ ಹೊಟ್ಟೆಯನ್ನು ಮೃದುವಾಗಿ ಗುದ್ದಿ ಗುದ್ದಿ ಹಾಲು ಕುಡಿಯುತ್ತಿದ್ದ ಮರಿಗಳನ್ನು ಮೊಲೆ ತೊಟ್ಟುಗಳಿಂದ ನಯವಾಗಿ ಬಿಡಿಸಿಕೊಂಡು ಕರ್ಕಶವಾಗಿ ಬೊಗಳುತ್ತ ಅವರತ್ತ ಧಾವಿಸಿತು. ತಾಯಿ ಎದ್ದು ಹೋದ ಅಸಹನೆಯಿಂದ ಮರಿಗಳೂ ತಟಪಟನೆದ್ದು ಕೀರಲು ಧ್ವನಿಯಿಂದ ಅರುಚುತ್ತ ಅಮ್ಮನನ್ನು ಹಿಂಬಾಲಿಸಿದವು. ನಾಯಿಗಳ ದೊಡ್ಡ ಹಿಂಡೊಂದು ತಮ್ಮತ್ತ ನುಗ್ಗಿ ಬರುತ್ತಿದ್ದುದನ್ನು ಕಂಡ ಸುಮಿತ್ರಮ್ಮನ ಜೀವ ಹೌಹಾರಿತು. ಜೊತೆಗೆ ತಮ್ಮ ಕೋಪಕ್ಕೆ ನಾಯಿಗಳ ಭಯವೂ ಬೆರೆತು ಏನೇನೋ ಆಗಿಬಿಟ್ಟಿತು. ಅಷ್ಟರಲ್ಲಿ, ‘ಬೊಗಳುವ ನಾಯಿ ಕಚ್ಚುವುದಿಲ್ಲ!’ ಎಂಬ ಹಳೆಯ ನಂಬಿಕೆ ಅವರಿಗೆ ನೆನಪಿಗೆ ಬಂದು ಸ್ವಲ್ಪ ಧೈರ್ಯ ಬಂತು. ಆದರೆ ಕೆಲವು ನಾಯಿಗಳು ತಮ್ಮ ಮರಿಗಳ ರಕ್ಷಣೆಗೂ ಮತ್ತು ತಮ್ಮನ್ನು ಸಾಕಿ ಸಲಹಿದ ಮನೆಮಂದಿಗೆ ಆಗದವರನ್ನು ಕಂಡಾಗಲೂ ಬೊಗಳು ಬೊಗಳುತ್ತಲೇ ಕಚ್ಚುತ್ತವೆ ಎಂಬ ಪ್ರಾಣಿ ಮನಃಶಾಸ್ತ್ರವು ಅವರಿಗೆ ತಿಳಿದಿರಲಿಲ್ಲ. ಆದ್ದರಿಂದ, ‘ಹೇ, ಹೇ, ಹೇ, ಹಚೀ, ಹಚೀ…!’ ಎಂದು ಅವನ್ನು ಬೆದರಿಸುತ್ತ ಇನ್ನಷ್ಟು ಹಿಂದೆ ಸರಿದು ನಿಂತರು. ಸುಮಿತ್ರಮ್ಮನ ಧ್ವನಿ ಕೇಳಿದ ರಾಧಾಳ ಹೇಟೆಯೂ ತನ್ನ ಮರಿಗಳತ್ತ ಅಪಾಯ ಸೂಚಕ ಕೂಗೆಬ್ಬಿಸುತ್ತ ರಪ್ಪನೆ ಅವುಗಳನ್ನು ಮನೆಯ ಇಳಿ ಮಾಡಿನ ಮಡಲಿನೆಡೆಗೆ ಕರೆದೊಯ್ದು ಮರೆಮಾಚಿತು. ಅಂಗಳದಲ್ಲಿ ಕಟ್ಟಿದ್ದ ದನಕರುಗಳು ದಿಢೀರನೇ ಅಪಾಯದ ಜೀವಿಯೊಂದನ್ನು ಕಂಡಂತೆ ಬೆದರಿ ಹಗ್ಗವನ್ನು ಬಿಡಿಸಿಕೊಂಡು ದೂರ ಓಡಲು ಹವಣಿಸುವಂತೆ ವರ್ತಿಸಿದವು. ಆದರೆ ಅಂಥ ಸಂದರ್ಭದಲ್ಲೂ ಸುಮಿತ್ರಮ್ಮನಿಗೆ ಆ ಸಣ್ಣ ಸಣ್ಣ ನಾಯಿ ಮರಿಗಳು, ಒಂದು ರಾಶಿ ಕೋಳಿಗಳು, ಅಂಗಳದಲ್ಲೆಲ್ಲ ಮೆತ್ತಿಕೊಂಡಿದ್ದ ಅವುಗಳ ಹೇಲು ಹೇಸಿಗೆಯ ದುರ್ನಾತವು ಮತ್ತದರ ಮೇಲೆಲ್ಲಾ ಥಕಥೈ ಥಕಥೈ! ಎಂದು ಕುಣಿಯಲಾರಂಭಿಸಿದ ಹಸುಗಳನ್ನೂ ಕಂಡು ವಾಕರಿಕೆ ಬಂದುಬಿಟ್ಟಿತು. ಥೂ, ಥೂ! ಅಸಹ್ಯ ಮನುಷ್ಯರು. ಇಂಥ ಹೊಲಸು ಜನರು ಯಾವ ವಠಾರದಲ್ಲಿದ್ದರೂ ನಾಗಧೂತನು ಕಾಣಿಸಿಕೊಳ್ಳುವುದು ಖಂಡಿತಾ!’ ಎಂದುಕೊಂಡು ಮತ್ತಷ್ಟು ಅಶಾಂತರಾದರು. ಅಷ್ಟರಲ್ಲಿ ಮೋತಿಯು ತನ್ನ ಮರಿಗಳ ಸಮೇತ ಗೇಟು ತೂರಿಕೊಂಡು ಹೋಗಿ ಸುಮಿತ್ರಮ್ಮನನ್ನು ಕಡಿಯಲು ಮುಂದಾಯಿತು. ಅದನ್ನು ಕಂಡ ಅವರಿಗೆ ತಮ್ಮ ನಂಬಿಕೆ ಪೂರ್ತಿ ಹುಸಿಯಾಗುವುದು ಖಚಿತವೆನಿಸಿತು. ‘ಅರೇರೇ, ಹೇ…ರಾಧಾ, ಗೋಪಾಲ ಎಲ್ಲಿದ್ದೀರಿ ಮಾರಾಯಾ… ಒಮ್ಮೆ ಹೊರಗೆ ಬನ್ನಿಯಾ…! ನಿಮ್ಮ ಹಾಳಾದ ನಾಯಿಗಳು ಏನು ಮಾಡುತ್ತಿದೆ ನೋಡಿಲ್ಲೀ…!?’ ಎಂದು ಜೋರಾಗಿ ಅರಚಿದರು. ಸುಮಿತ್ರಮ್ಮನ ಕೀರಲು ಧ್ವನಿಯು ರಪ್ಪನೆ ಗೋಪಾಲ ದಂಪತಿಯ ಕಿವಿಗಪ್ಪಳಿಸಿದ್ದರಿಂದ ಅವರು ಬೆಚ್ಚಿಬಿದ್ದು, ಅಯ್ಯಯ್ಯೋ ದೇವರೇ…! ಇವತ್ತು ತಮಗೇನೋ ಆಪತ್ತು ಕಾದಿದೆ! ಎಂದು ಆತಂಕದಿಂದ ಅಂದುಕೊಂಡರು. ಏಕೆಂದರೆ, ಸುಮಿತ್ರಮ್ಮ ಯಾವತ್ತೂ ಯಾರ ಮನೆಯಂಗಳಕ್ಕೂ ವಿನಾಕಾರಣ ಹೆಜ್ಜೆಯಿಟ್ಟವರಲ್ಲ. ತಮಗೆ ಯಾರಿಂದಲಾದರೂ ಕೆಲಸವಾಗಬೇಕಿದ್ದರೂ ಅಂಥವರನ್ನು ತಮ್ಮ ಮನೆ ಬಾಗಿಲಿಗೇ ಕರೆಸಿಕೊಂಡು ಮಾತಾಡುತ್ತಿದ್ದರು. ಅಂಥ ಸುಮಿತ್ರಮ್ಮ ರಾಧಾಳ ವಿಷಯದಲ್ಲಿ ಇಂದು ತಮ್ಮ ನಿಯಮವನ್ನು ಮುರಿದಿದ್ದರು. ಕಾರಣ, ಅವಳು ಕೆಳಜಾತಿಯವಳೆಂದೋ ಅಥವಾ ತಾವೇ ಅವಳ ಮನೆ ಬಾಗಿಲಿಗೆ ಹೋಗಿ ಗುರೂಜಿಯವರು ತಿಳಿಸಿದ ವಿಷಯವನ್ನು ವಿವರಿಸಿ ಅವಳ ನೆಮ್ಮದಿಯನ್ನು ಕೆಡಿಸಬೇಕೆಂಬ ಕೆಟ್ಟ ಆಸೆಯಿಂದಲೋ ತಾವೇ ಹೊರಟು ಬಂದಿದ್ದರು. ‘ಸುಮಿತ್ರಮ್ಮ ಬಂದಿದ್ದಾರೆ ಹೋಗಿ ನೋಡು ಮಾರಾಯ್ತಿ…!’ ಎಂದು ಗೋಪಾಲ ಹೆಂಡತಿಗೆ ಆತಂಕದಿಂದ ಸೂಚಿಸಿದ. ಅವಳು ದಡಬಡಿಸಿ ಎದ್ದು ಹೊರಗ್ಹೋಡಿ ಬಂದಳು. ಯಜಮಾನ್ತಿಯನ್ನು ಕಂಡ ಮೋತಿ ಇನ್ನಷ್ಟು ರೋಷದಿಂದ ಸುಮಿತ್ರಮ್ಮನ ಮೇಲೆರೆಗಲು ಹವಣಿಸಿತು. ಅದನ್ನು ಕಂಡ ರಾಧಾಳಿಗೆ ಆಘಾತವಾಯಿತು! ಛೇ, ಛೇ! ಈ ನಾಯಿಗೇನಾಗಿದೆ ಈವತ್ತು…! ಎಂದೆನ್ನುತ್ತ ಅದರತ್ತ ನುಗ್ಗಿ ಬೆನ್ನಿಗೊಂದೇಟು ಗುದ್ದಿ ಓಡಿಸಿದಳು. ಅದು ‘ಕೊಂಯ್ಯ್‍ಕ್…!’ ಎಂದು ಅರಚಿ ದೂರ ಓಡಿ ಹೋಗಿ ಮತ್ತೂ ಬೊಗಳುತ್ತಲೇ ಇತ್ತು. ಆಗ ಸುಮಿತ್ರಮ್ಮನಿಗೆ ಜೀವ ಬಂದಂತಾಯಿತು. ಆದರೆ ಮೋತಿಯ ದೆಸೆಯಿಂದ ರಾಧಾಳ ಕುಟುಂಬದ ಮೇಲಿದ್ದ ಅಸಹನೆಯು ಮತ್ತಷ್ಟು ಹೆಚ್ಚಾಯಿತು. ‘ಅಯ್ಯೋ, ಸುಮಿತ್ರಮ್ಮ ಕ್ಷಮಿಸಿ ಮಾರಾಯ್ರೇ…! ಈ ದರಿದ್ರದ ನಾಯಿ ಇವತ್ತು ಯಾಕೆ ನಿಮ್ಮ ಗುರುತವೇ ಹತ್ತದಂತೆ ಆಡಿತೋ ಗೊತ್ತಾಗುತ್ತಿಲ್ಲ ನಂಗೆ!’ ಎಂದು ಬೇಸರದಿಂದ ಅಂದವಳು, ‘ಅದು ಮರಿಯಿಟ್ಟಿದೆಯಲ್ಲ ಹಾಗಾಗಿ ಹೆದರಿರಬೇಕು. ಕಚ್ಚುವ ಜಾತಿಯದ್ದಲ್ಲ!’ ಎಂದು ಅಂಜುತ್ತ ಹೇಳಿ ಅವರನ್ನು ಸಮಾಧಾನಿಸಲು ನೋಡಿದಳು. ಆದರೆ ಸುಮಿತ್ರಮ್ಮನ ಮುಖ ಕೆಟ್ಟದಾಗಿ ಕಪ್ಪಿಟ್ಟಿತ್ತು. ‘ಎಂಥದು ಕಚ್ಚುವ ಜಾತಿಯದ್ದಲ್ಲ ಮಾರಾಯ್ತೀ…? ನೀನು ಬರುವುದು ಸ್ವಲ್ಪ ತಡವಾಗಿದ್ದರೆ ಅದು ನನ್ನನ್ನು ಹರಿದೇ ಹಾಕುತ್ತಿತ್ತು ಹಾಳಾದ್ದು!’ ಎಂದು ಬಿರುಗಣ್ಣುಗಳಿಂದ ಅವಳನ್ನು ದಿಟ್ಟಿಸಿದರು. ರಾಧಾ ಭಯದಿಂದ ತಲೆತಗ್ಗಿಸಿ, ‘ಕ್ಷಮಿಸಿ ಸುಮಿತ್ರಮ್ಮಾ, ಏನು ವಿಷಯ…? ಒಳಗೆ ಬನ್ನಿಯಲ್ಲವಾ…!’ ಎಂದು