ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್ ಜುಗಲ್ ಬಂದಿ-08

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-08

painting of red flowers

ರೇಖಾ ಭಟ್

ಸ್ಪಂದನೆ ಬಯಸದ ಭಾವಗಳ ಹಡೆಯುವುದು ಸುಲಭವಲ್ಲ
ಕನಸುಗಳನು ಕಾಲಡಿಗೆ ಹಾಸಿ ನಡೆಯುವುದು ಸುಲಭವಲ್ಲ

ಕಹಿ ನೆನಪುಗಳಿಗೆ ಕೊಳ್ಳಿಯಿಟ್ಟು ಸವಿಯ ಬೆಳೆಯಬೇಕಲ್ಲವೇ
ವಿಷ ವಿಷಯವ ನುಂಗಿ ಅಮೃತವ ಕಡೆಯುವುದು ಸುಲಭವಲ್ಲ

ಸರಿಪಡಿಸಲಾರದ ಸ್ಥಿತಿಯಲಿ ಬಂಧವೊಂದು ಬಸವಳಿದರೇನು
ಒಲುಮೆಯಲಿ ಕಟ್ಟಿದ ಮಂದಿರವ ಒಡೆಯುವುದು ಸುಲಭವಲ್ಲ

ಹೂವೆಂದು ಮೊಗೆದದ್ದು ಮುಳ್ಳಾಗಿ ಚುಚ್ಚಿ ಮರೆಯಾಯಿತೇಕೆ
ಮನ ಪರದೆಗೆ ಅಂಟಿದ ಮಸಿಯ ತೊಡೆಯುವುದು ಸುಲಭವಲ್ಲ

ಬೆಳಕಿನ ‘ರೇಖೆ’ಗೂ ಆಗಾಗ ಮೋಡಗಳ ತಡೆಗೋಡೆಯಿದೆ ಬಿಡಿ
ಅರ್ಥವಾಯಿತೀಗ ಬಯಸಿದ್ದೆಲ್ಲ ಪಡೆಯುವುದು ಸುಲಭವಲ್ಲ


ಸ್ಮಿತಾ ಭಟ್

ಅರ್ಥ-ಸ್ವಾರ್ಥವ ಮರೆತು ಒಲವಾಗುವುದು ಸುಲಭವಲ್ಲ
ನನಸಾಗದ ಕನಸುಗಳ ಉಳಿಸಿಕೊಳ್ಳುವುದು ಸುಲಭವಲ್ಲ

ಕಷ್ಟಗಳನು ಹಗುರಾಗಿಸಿ ಬಾಳ ಪಯಣ ಸಾಗಬೇಕಲ್ಲವೇ
ನೋವುಗಳಿಗೆ ಬೆನ್ನುಮಾಡಿ ನಡೆಯುವುದು ಸುಲಭವಲ್ಲ

ಸಾಗುವ ದಾರಿಗೆ ಮುದಿತಭಾವಗಳನ್ನಷ್ಟೇ ಹೇಗೆ ಪೋಣಿಸಲಿ
ಪ್ರೇಮದ ಗೋರಿಯ ಮೈ ಸವರಿ ನಗುವುದು ಸುಲಭವಲ್ಲ

ಎಲ್ಲ ಹೂವುಗಳು ಸುಗಂಧವನ್ನಷ್ಟೇ ಸೂಸಬೇಕು ಅನ್ನಬಹುದೆ
ಒಳತೋಟಿಗಳ ಅದುಮಿ ಖುಷಿಯ ಹಂಚುವುದು ಸುಲಭವಲ್ಲ

ಎಲ್ಲದಕ್ಕೂ ಆಡಿಕೊಳ್ಳುವವರು ಇರುತ್ತಾರೆ ಈ ಜಗದಲಿ”ಸ್ಮಿತ”
ಮರೆಯಬೇಡ ಋಣ ತೊರೆದು ಜೀವಿಸುವುದು ಸುಲಭವಲ್ಲ

******************************

About The Author

2 thoughts on “”

Leave a Reply

You cannot copy content of this page

Scroll to Top