ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಳೆ ಬಂದು ನಿಂತಿದೆ

ವಿ.ಹರಿನಾಥ ಬಾಬು

ಮಳೆ ಬಂದು ನಿಂತಿದೆ
ಮೋಡಗಳು ಮಾತು ಮರೆತ ಮೌನವಾಗಿವೆ
ಪೂರ್ವದ ಗೆಳೆಯ ತನ್ನಿನಿಯಳ ತೆಕ್ಕೆಯೊಳಗೆ ಅದಾಗಲೇ ಕನಸು ಕಾಣುತ್ತಿರುವ
ಮಿಣುಕು ಹುಳುಗಳು ಅವನ ಕನಸಿಗೆ ಕಣ್ಣಾಗಿ ಹಾಯುತ್ತಿವೆ
ದೀಪದ ಸೊಡರು ಸ್ವಲ್ಪ ಮಂದವಾಗಿಯೇ ಉರಿಯುತ್ತಿದೆ

ಮಳೆ ಬಂದು ನಿಂತಿದೆ
ಇನ್ನೇನು ಅವಳು ಬರುವ ಹೊತ್ತು
ಚಂದಿರ ರಥವನೇರಿ ಸಿದ್ಧನಾಗಿರುವ
ರಾತ್ರಿರಾಣಿಯ ಸುಗಂಧ ಅವಳ ಹುಡುಕಿಕೊಂಡು ಬಂದು ಸಜ್ಜಾಗಿ ನಿಂತಿದೆ
ಅಪ್ಸರೆಯರು ಅವಳಿಗಾಗಿ ಪಲ್ಲಂಗ ಸರಿಪಡಿಸಿ ಹೋಗಿದ್ದಾರೆ
ವಾತ್ಸಾಯನ ಹೇಳದೇ ಇರುವ ಭಂಗಿಯೊಂದು ಕಾತುರದಿ ಕಾಯುತ್ತಲಿದೆ

ಮಳೆ ಬಂದು ನಿಂತಿದೆ
ಏನೋ ಸಣ್ಣ ಎಡವಟ್ಟು ಅವಳ ಕಾಲ ತೊಡಕಾಗಿರಬಹುದು
ಇನಿಯನಿನ್ನೂ ನಿದಿರಾದೇವಿಯ ವಶವಾಗಿರಲಿಕ್ಕಿಲ್ಲ
ಮಕ್ಕಳು ಮಲಗಲು ಹಟ ಮಾಡುತ್ತಿರಬೇಕು
ಚಪ್ಪಲಿ ಅದಲು ಬದಲಾಗಿರಬಹುದೇ
ಕಂದೀಲು ಕೈಗೆ ಎಡತಾಗಿದೆಯೋ ಇಲ್ಲವೋ

ಮಳೆ ಬಂದು ನಿಂತಿದೆ
ಹಳೆಯ ನೆನಪು ಸರಿಯಾಗಿ ಗುರುತಾದರೆ
ಬಹುಶಃ ಆ ಜಾತ್ರೆ ಆ ತೇರ ಬೀದಿಯ ಕೊನೆಗೆ
ಅಲ್ಲಿ ಅವಳ ಸಖಿಯರೊಡನೆ ಕಿಲಕಿಲ ನಗುವಾಗ
ಅವಳು ಅವನ ಕಣ್ಣ ಗೊಂಬೆಯಾಗಿ ನಿಂತುಬಿಟ್ಟಳು
ಅಂದಿನಿಂದ ಅವಳು ಅವನೊಳಗೆ ಹೀಗೆ ಹುಚ್ಚು ಹಿಡಿಸಿದ ಕ್ಲಿಯೋಪಾತ್ರ

ಇನ್ನೇನು ಅವಳು ಬರುವ ಹೊತ್ತು
ಅದಾಗಲೆ ಮಳೆ ಬಂದು ನಿಂತು ತುಂಬಾ ಹೊತ್ತಾಯಿತು
*********************

About The Author

3 thoughts on “ಮಳೆ ಬಂದು ನಿಂತಿದೆ”

  1. ಶರಣಪ್ಪ ತಳ್ಳಿ

    ಮಳೆ ಬಂದು ನಿಂತಿದೆ……ಎನ್ನುವ ನುಡಿಯಲ್ಲಿ ಬಹು ನೀರಿಕ್ಷೆಯ ಕಾತರಗಳಿವೆ.,ರೂಪಕಗಳ ಸಂವೇದನೆ ಆಪ್ತವಾಗುತ್ತದೆ.
    ಕವಿತೆ ಚೆನ್ನಾಗಿದೆ.

  2. ಕವಿತೆ ತನ್ನೊಡಲಲ್ಲಿ ನೂರಾರು ನಿರೀಕ್ಷೆಗಳನ್ನು ಗರ್ಬೀಕರಿಸಿಟ್ಟಿದೆ..ಅರ್ಥ ಪೂರ್ಣ ಕವನ

Leave a Reply

You cannot copy content of this page

Scroll to Top