ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

( ದಸ್ತಯೇವಸ್ಕಿಯ
‘ಸಾಧು ಸ್ವಭಾವದವಳು’ ನೀಳ್ಗತೆಯ ಪ್ರೇರಣೆಯ ಕವಿತೆ )

ಸಾಧು ಸ್ವಭಾವದವಳು

ವೈಜಿಅಶೋಕ್ ಕುಮಾರ್

Sculpture, Monument, Statue, Stone

ಅವಳಿಗಾಗಿಯೇ ನಾನು ಪ್ರೀತಿಯಿಂದ ಕೊಂಡು ತಂದ ಮಂಚದಲ್ಲಿ ಆಕೆಯನ್ನು ಮಲಗಿಸಿದ್ದರು

ರಿವಾಲ್ವಾರ್ ಟೇಬಲ್

ಮೇಲಿತ್ತು

ಆಕೆ ಕಿಟಕಿಯಿಂದ ಕೆಳಗೆ ನೆಗೆದಿದ್ದಳು

ಒಂದು ಬೊಗಸೆಯಷ್ಟು ರಕ್ತ ಚಿಮ್ಮಿ ನೆಲದ ಮೇಲೆ ಹರಡಿತ್ತು

ಅತ್ತಿಂದಿತ್ತ ಶತಪಥ ತಿರುಗುತ್ತಿದ್ದ ನಾನು ಚಲಿಸದೇ ಒಂದೆಡೆ ಕುಳಿತು ಅವಳ ಮುಖವನ್ನೇ ದಿಟ್ಟಿಸುತ್ತಿದ್ದೆ.

ಅಲ್ಲಿ ತಿರಸ್ಕಾರವಿರಲಿಲ್ಲ

ನೋವು ಕಿವುಚಿದಂತಿತ್ತು

ಮೊದಲ ನೋಟದಲ್ಲೇ ಅವಳ ನೀಲಿ ಬೊಗಸೆ ಕಂಗಳನ್ನು ನೋಡುತ್ತಲೇ ಇರಬೇಕೆಂಬ ಹಂಬಲ,

 ಅವಳು ಬೇಗ ಬರಲೆಂಬ

ತವಕ, ವಿಳಂಬವಾದರೆ

ಚಡಪಡಿಕೆ

ಅನುಭವಿಸಿದ್ದು ನೆನಪಾಯಿತು.

ಬಡತನದಲ್ಲಿ ಬೇಯುತ್ತಿದ್ದ ಅವಳು

ನನ್ನ ಬೃಹತ್ ಗಿರವಿ ಅಂಗಡಿಯ ಮನೆಗೆ ಹಣಕ್ಕಾಗಿ ಬಂದರೂ ಏನಾದರೂ ಒತ್ತೆ ಇಟ್ಟು ಹೋಗುತ್ತಿದ್ದಳು.

ಒಂದು ರಜಾ ಕಾಲದಲ್ಲಿ ಅವಳನ್ನೇ ಒತ್ತೆ ಇಟ್ಟುಕೊಳ್ಳಲು ಬಯಸಿದ್ದೇ

ನಂತರ ನಮ್ಮಿಬ್ಬರ ಮದುವೆ ಶಾಸ್ತ್ರವೂ ಆಯಿತು

ಅವಳ ನೀಲಿ ಬಟ್ಟಲು

ಕಂಗಳನ್ನು ಅದೆಷ್ಟು ಚುಂಬಿಸಿದೆನೋ,

ಪ್ರತಿಸಲ ಅವಳು ಮುದುಡುತ್ತಿದ್ದಳು.

ಮುಂದೆ ನನ್ನ ಗಿರವಿ ಅಂಗಡಿಯಲ್ಲಿ

ಅವಳೂ ಯಜಮಾನಿಯಂತೆ

ವ್ಯವರಿಸುತ್ತಿದ್ದಳು,

ಬಡ ಸಾಧು ಜೀವಗಳಿಗೆ ಕರುಣೆ ತೋರುವುದನ್ನು

ಗಮನಿಸುತ್ತಲೇ ಇದ್ದೆ.

ಕಾಲಕ್ರಮೇಣ

ನನ್ನೆಡೆಗೆ ಒಂದು

ತಿರಸ್ಕಾರದ ಭಾವ

ಸಣ್ಣಗೆ ಮಿಡಿನಾಗರದಂತೆ ಅವಳಲ್ಲಿ ನುಸುಳಿತ್ತು.

ನನ್ನ ಹಿಡಿತ ಹೆಚ್ಚಾದರೂ ಆಕೆ

ಚಡಪಡಿಸಲಿಲ್ಲ,

ಅಂಗಡಿಗೆ ಬಂದವರು ನನ್ನ ಹಳೆಯ ಜೀವನದ ಕುರಿತು ಹೇಳಿದ ಕಥೆಯನ್ನು ಬಲವಾಗಿ

ನಂಬಿದಂತಿತ್ತು

ಚುಂಬನಕ್ಕೆ ಪ್ರತಿಕ್ರಿಯಿಸಲಿಲ್ಲ.

ಸಾಧು ಸ್ವಭಾವದ

ಬಡವಿಯನ್ನು ವರಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟೆ.

ನನ್ನ ಬಲ ಜೇಬಿನಲ್ಲಿ ಗುಂಡು ತುಂಬಿದ ಪಿಸ್ತೂಲು

ಚುಚ್ಚುತ್ತಲೇ ಇತ್ತು.

ಒಮ್ಮೆ ಆ ದಿನ ಬಂದೇ ಬಿಟ್ಟಿತು

ನಾನವಳಿಗೆ ಡಿವೋರ್ಸ್ ನೀಡಿದೆ,

ಆದರೂ

ದೂರ ತಳ್ಳಲು ನನ್ನಿಂದಾಗಲಿಲ್ಲ.

ಆ ನೀಲಿ ಬೊಗಸೆ ಕಣ್ಣುಗಳಿಂದ ತಪ್ಪಿಸಿಕೊಳ್ಳದಾದೆ,

ಒಂದೇ ಕೋಣೆಯಲ್ಲಿ ಮುಖ

ತಿರುಗಿಸಿ ಮಲಗಿದೆವು

ದೂರ ತಳ್ಳುವೆನೆಂದು

ಭಾವಿಸಿದ್ದ ಅವಳು

ಯೋಚಿಸಿ ಯೋಚಿಸಿ  ಕೃಶಳಾದಳು.

ಚಿಂತಾಕ್ರಾಂತೆಯಾದ ಅವಳ ಆರೋಗ್ಯ ಕುಸಿಯಿತು

ಆಸ್ಥೆಯಿಂದ ಶೂಶ್ರೂಷೆ ಮಾಡಿಸಿದೆ

ಅವಳ ನೀಲಿ ಬಟ್ಟಲು ಕಣ್ಣುಗಳು ನಿಸ್ತೇಜಗೊಂಡು ಆಳಕ್ಕಿಳಿದವು

ಚೂಪಾದ ಮೂಗು ಮಾತ್ರವೇ ಎದ್ದು ಕಾಣುತ್ತಿತ್ತು

ಅವಳು ಮೂಗಿಯೇನೋ ಎನ್ನುವಷ್ಟು ಮೌನಿಯಾಗಿಬಿಟ್ಟಳು.

ನಾನು ಅವಳ ತಣ್ಣನೆಯ ದೇಹವನ್ನು

ದಿಟ್ಟಿಸುತ್ತಲೇ ಇದ್ದೆ

ನಾಳೆ ಅವಳಿಲ್ಲದೆ

ನಾನಾದರೂ ಏನು ಮಾಡಲೀ

ಸುತ್ತ ಮುತ್ತ

ಒತ್ತೆ ಇಟ್ಟುಕೊಂಡ ಬೆಲೆ ಬಾಳುವ ವಸ್ತುಗಳು ಜೀವ ಕಳೆದುಕೊಂಡು ಬಿದ್ದು ಅಣಕಿಸುತ್ತಿದ್ದವು.

ಅವಳ ನೀಲಿ ಬೊಗಸೆ ಕಂಗಳು ಮುಚ್ಚಿಹೋಗಿತ್ತು

ರಿವಾಲ್ವಾರ್ ನನ್ನ ಬಲ ಜೇಬಿನಲ್ಲಿ ಚುಚ್ಚುತ್ತಲೇ ಇತ್ತು.

******************************

About The Author

Leave a Reply

You cannot copy content of this page

Scroll to Top