ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನಾನು ಭೂಮಿ , ನೀನು?

ನಾಗರಾಜ್ ಹರಪನಹಳ್ಳಿ

toucan perching on branch

ನನ್ನ ಎದೆ ಈಗ ಭೂಮಿ
ಅಲ್ಲಿ ಬೆಳೆದ ಮರ ನೀನು
ಮೌನಿ ನೀ
ಬೇರುಗಳು ನನ್ನೊಳಗೆ ಪಿಸುಗುಡುತ್ತಿವೆ ; ಪ್ರೇಮದ ಹೂ ಮರದ ತುದಿ ತುದಿಗೆ ಅರಳಿದೆ ನೋಡು
ಯಾರೋ ಹೂಗಳ ಮನೆಗೊಯ್ಯಯ್ದರು,ಇನ್ನಾರೂ ಸುಂದರಿ ಮುಡಿದು , ತನ್ನ ಗೆಳೆಯನ ಜೊತೆ ಕುಳಿತು ವೈಯಾರದ ಮಾತಾಡಿದಳು ; ಇಲ್ಲಿ ,‌ಈ ಮರದ ಬೇರು ನಸು ನಕ್ಕಿತು:

ನಾನು ಆಕಾಶ ,ಅಲ್ಲಿ ಚಲಿಸುವ ನೀನು
ಆಕಾಶದಷ್ಟಗಲ ಅರಳಿದ ಬೆಳದಿಂಗಳು
ಬೆಳದಿಂಗಳ ಉಂಡ ಭೂಮಿಯ ಜನ
ಅವರೀಗ ನಮ್ಮ ಪ್ರೇಮವ ಉಸಿರಾಡುತ್ತಿದ್ದಾರೆ

ನಾನು ಕಡಲು, ನೀ ಅಲ್ಲಿ ಚಲಿಸುವ ದೋಣಿ
ಕ್ಷಿತಿಜ ತಲುಪುವುದೇ ಇಲ್ಲ
ಮುಗಿಯದ ಪಯಣದಲಿ
ಲೋಕದ ಜನ ಕಡಲು , ದೋಣಿಯ ಕಂಡು ಚಪ್ಪಾಳೆ ತಟ್ಟಿ ನಕ್ಕು ನಲಿದು ಊರ ಸೇರಿದರು
ಮನೆಮನೆಯ ಗೋಡೆಯಲ್ಲಿ ನಾವು ಚಿತ್ರವಾದೆವು

ಮರ ನೆರಳು ಹೂವು ಆಕಾಶ ಚಂದ್ರ ಬೆಳದಿಂಗಳು ಕಡಲು ದೋಣಿ ಪಯಣ ಎಲ್ಲವೂ ಚಲಿಸದೇ ಚಲಿಸುತ್ತವೆ
ಜನ ಮಾತ್ರ ಮಣ್ಣಾಗುತ್ತಾರೆ
ಮತ್ತೆ ಹುಟ್ಟುತ್ತಾರೆ
ಪ್ರೇಮ ಪ್ರೇಮ ಮಾತ್ರ ದೀಪವಾಗಿ ಉಸಿರಾಡುತ್ತದೆ
ಇಲ್ಲಿ ಚಲನೆ ಚೆಲುವು
ಆ ಬೆಳದಿಂಗಳಲ್ಲಿ
ಮರ ನಿದ್ದೆ ಹೋಗಿದೆ ;
ನಿದ್ದೆ ಹೋಗಿದೆ …..

*****************************

About The Author

4 thoughts on “ನಾನು ಭೂಮಿ , ನೀನು?”

  1. ಪ್ರಕೃತಿ ಚಲಿಸದೆ ಚಲಿಸುತ್ತೆಂಬುದೆಂಬುದನ್ನು ಅದೆಷ್ಟು ನವಿರಾದ ಮಧುರಭಾವದಲ್ಲಿ ಹೇಳಿರುವಿರಿ ಸರ್

  2. ಸಂಗೀತ ರವಿರಾಜ್

    ಹೊಸತನದ , ಹೊಸತರದ ಕವಿತೆ. ಚಂದ ಇದೆ

Leave a Reply

You cannot copy content of this page

Scroll to Top