ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಅಪ್ಪ ಅಮ್ಮಂದಿರೊಂದಿಗೆ ನಾಲ್ಕು ದಿನ ಖುಷಿಯಿಂದಿದ್ದು ಹೊರಟು ಹೋಗುವ ಪರಿಪಾಠವನ್ನು ನಿಭಾಯಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ‘ನನಗೆ ನೀನು, ನಿನಗೆ ನಾನು!’ ಎಂಬಂತಿರುತ್ತದೆ ಈ ಮುದಿಜೀವಗಳ ಬದುಕು. ತೀರಾ ಬಡತನದಿಂದ ಬಂದಂಥ ನಾರಾಯಣರು, ಕೆಳದರ್ಜೆಯ ಗುಮಾಸ್ತನಾಗಿ ಉದ್ಯೋಗ ಆರಂಭಿಸಿದವರು. ಆದರೆ ಕಾಯಕವೇ ಕೈಲಾಸ! ಎಂಬ ದೃಢ ನಂಬಿಕೆಯಿಂದ ತಮ್ಮ ಜೀವಮಾನವಿಡೀ ಮಿಲಿಟರಿ ಶಿಸ್ತಿನಂಥ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಕಣ್ಕಾಪು ಕಟ್ಟಿದ ಕುದುರೆಯಂತೆ ಅತ್ತಿತ್ತದ ಯಾವ ವಿಷಯಗಳ ಕುರಿತಾಗಿಯೂ ಆಸಕ್ತಿವಹಿಸಿದೆ ಬರೇ ಬ್ಯಾಂಕಿಗಾಗಿಯೇ ಅವಿರತವಾಗಿ ದುಡಿಯುತ್ತ ಹಂತಹಂತವಾಗಿ ಮೇಲ್ದರ್ಜೆಗೆ ಭಡ್ತಿ ಹೊಂದಿ ಮ್ಯಾನೇಜರ್ ಹುದ್ದೆಗೆ ಏರಿದವರು. ಆದ್ದರಿಂದ ಆ ಉದ್ಯೋಗಕ್ಕಿರಬೇಕಾದ ಗತ್ತು, ಬಿಗುಮಾನಗಳನ್ನು ತುಸು ಹೆಚ್ಚೇ ತಮ್ಮ ಮೇಲೆ ಹೇರಿಕೊಂಡು ಅಧಿಕಾರದ ವರ್ಚಸ್ಸಿನಿಂದ ಮುಂದುವರೆದು ಬಹುಬೇಗನೇ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ನಿವೃತ್ತರಾದವರು.    ಇಂಥ ಸ್ವಭಾವದ ನಾರಾಯಣರು ನಿವೃತ್ತರಾಗುವವರೆಗೆ ಯಾವ ದೈವದೇವರುಗಳನ್ನೂ ನಂಬದೆ, ಪೂಜಿಸದೆ ಕಟ್ಟಾ ನಾಸ್ತಿಕರಾಗಿ ಬದುಕುತ್ತ ಯಶಸ್ಸಿನ ಗುರಿ ತಲುಪಿದವರು. ಆದರೆ ನಿವೃತ್ತರಾದ ಕೆಲವೇ ವರ್ಷದೊಳಗೆ ಇದ್ದಕ್ಕಿದ್ದಂತೆ ಒಮ್ಮೆ ಅವರು ದೈವ ದೇವರಗಳ ಅತೀವ ಭಕ್ತರಾಗಿ ಬದಲಾಗಿಬಿಟ್ಟರು. ಅದಕ್ಕೆ ಮುಖ್ಯ ಕಾರಣವೂ ಇತ್ತು. ನಾರಾಯಣರು ಆವರೆಗೆ ಆರೋಗ್ಯವಂತರಾಗಿ ಘನ ಗಾಂಭೀರ್ಯದಿಂದ ಬದುಕಿದವರು. ಆದರೆ ಯಾವತ್ತು ಅವರನ್ನು ಮಧುಮೇಹ, ರಕ್ತದೊತ್ತಡ ಮತ್ತು ಅಸ್ತಮದಂಥ ವಯೋಸಹಜ ಕಾಯಿಲೆಗಳು ಆವರಿಸಿಕೊಂಡಿತೋ ಅಂದಿನಿಂದ ಅವರು ಒಳಗೊಳಗೇ ದುರ್ಬಲರಾಗತೊಡಗಿದರು. ಆವರೆಗೆ ಹಠ ಹಿಡಿದು ಕಾಪಾಡಿಕೊಂಡು ಬಂದಂಥ ಅವರ ಆತ್ಮಸ್ಥೈರ್ಯವೆಂಬ ಭದ್ರಕೋಟೆಯು ಒಡೆದು ನುಚ್ಚುನೂರಾಯಿತು. ಆ ಕಾಯಿಲೆಗಳ ಹಿಂಸೆಗಿಂತಲೂ ಅವು ತನ್ನಂಥ ಆರೋಗ್ಯವಂತ ಆತ್ಮ ಸಂಯಮಿಯನ್ನೇ ಹಿಡಿದುಕೊಂಡಿವೆ ಎಂದರೆ ಅರ್ಥವೇನು? ಎಂಬ ಆಘಾತವೇ ಅವರನ್ನು ಹಣ್ಣು ಮಾಡತೊಡಗಿತ್ತು. ಹಾಗಾಗಿ ಬರಬರುತ್ತ ಅವರಿಗೆ ಬದುಕೇ ನಶ್ವರವೆನ್ನಿಸತೊಡಗಿತು. ಅಸ್ತಮವೊಂದನ್ನುಳಿದು ಮತ್ತೆರಡು ಕಾಯಿಲೆಗಳು ಗಿರಿಜಕ್ಕನಿಗೂ ಇದ್ದವು. ಆದರೆ ಅವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಹೆಂಗಸಲ್ಲ. ಕಾರಣ ಅದಾಗಲೇ ಅವರಲ್ಲಿ ವಯೋಸಹಜ ಪ್ರಬುದ್ಧತೆ ಮೂಡಿತ್ತು. ಹಾಗಾಗಿ ಆಕೆ ತಮ್ಮ ಇಷ್ಟದ ದೈವದೇವರುಗಳ ಪೂಜೆ ಪುನಸ್ಕಾರಗಳಲ್ಲೂ ದೈನಂದಿನ ಚಟುವಟಿಕೆಗಳಲ್ಲೂ ತೊಡಗಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಗಂಡನ ನಿರುತ್ಸಾಹ ಮತ್ತು ಅವರು ಸದಾ ತಮ್ಮ ಕಾಯಿಲೆಗಳ ಬಗ್ಗೆಯೇ ಕೊರಗುತ್ತ ಕೃಶರಾಗುತ್ತಿದ್ದುದನ್ನು ಕಾಣುತ್ತಿದ್ದವರಿಗೆ ಆತಂಕವಾಗುತ್ತಿತ್ತು. ಆದ್ದರಿಂದ ದಿನಾಲು ಗಂಡನಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ಒತ್ತಾಸೆಯಾಗಿರಲು ಪ್ರಯತ್ನಿಸುತ್ತಿದ್ದರು. ಆದರೂ ನಾರಾಯಣರಿಗೆ ಹೆಂಡತಿಯ ಬುದ್ಧಿಮಾತುಗಳು ಹಿಡಿಸುತ್ತಿರಲಿಲ್ಲ. ಹೀಗಿದ್ದ ಸಮಯದಲ್ಲೇ ಒಮ್ಮೆ ನಾರಾಯಣರ ದೊಡ್ಡ ಕುಟುಂಬದ ಮೂಲದ ಮನೆಯಲ್ಲಿ ವರ್ಷಾವಧಿ ‘ಭೂತ’ ಕ್ಕೆ ನಡೆಯುವ ದಿನವನ್ನು ಗೊತ್ತು ಪಡಿಸಲಾಯಿತು. ಅದರ ಹೇಳಿಕೆ ನೀಡಲು ಅವರ ಹಿರಿಯ ಮಾವ ಸಂಜೀವಣ್ಣ ಮನೆಗೆ ಬಂದರು.    ಸಂಜೀವಣ್ಣ ಮತ್ತು ನಾರಾಯಣರು ತೀರಾ ಹತ್ತಿರದ ಬಂಧುಗಳೇನಲ್ಲ. ಚಿಕ್ಕಮ್ಮ, ದೊಡ್ಡಮ್ಮನ ಮಕ್ಕಳಿಂದ ಸಂಬಂಧಿಗಳಾದವರು. ಹಿಂದೆಲ್ಲ ತಮ್ಮ ಬಂಧುಗಳು ಅಥವಾ ಸ್ನೇಹಿತರು ಎಂಬ ಭೇದಭಾವವಿಲ್ಲದೆ ಎಲ್ಲರೊಡನೆಯೂ ಖಡಕ್ಕಾಗಿ ವ್ಯವಹರಿಸುತ್ತಿದ್ದ ನಾರಾಯಣರು ಇಂದು ಕುಂದಿದ ಜೋಲು ಮುಖ ಹೊತ್ತುಕೊಂಡು ತಮ್ಮನ್ನು ಸ್ವಾಗತಿಸಿದ್ದನ್ನು ಕಂಡ ಸಂಜೀವಣ್ಣನಿಗೆ ಅನುಕಂಪವೂ ಅನುಮಾನವೂ ಒಟ್ಟೊಟ್ಟಿಗೆ ಮೂಡಿತು. ‘ಅರೇರೇ, ಏನೋ ನಾಣು…ಹೀಗಾಗಿಬಿಟ್ಟಿದ್ದೀಯಾ ಹುಷಾರಿಲ್ಲವನಾ…?’ ಎಂದು ಕೇಳಿಯೇ ಬಿಟ್ಟರು. ತಮ್ಮನ್ನು ಕಂಡ ಕೂಡಲೇ ಮಾವನ ಬಾಯಿಯಿಂದ ಹೊರಟ ಅಂಥ ಆತ್ಮೀಯತೆಯ ಮಾತುಗಳು ನಾರಾಯಣರೊಳಗಿನ ಹತಾಶೆಯ ತಂತಿಯನ್ನು ರಪ್ಪನೆ ಮೀಟಿದಂತಾಯಿತು.  ‘ಅಯ್ಯೋ, ಮಾವಾ ನನ್ನ ಅವಸ್ಥೆಯನ್ನು ಏನೂಂತ ಕೇಳುತ್ತೀರಿ…? ಜೀವನದಲ್ಲಿ ಎಷ್ಟೊಂದು ಕಷ್ಟಪಟ್ಟು ಮೇಲೆ ಬಂದವನು ನಾನು ಅಂತ ನಿಮಗೆಲ್ಲರಿಗೂ ಗೊತ್ತುಂಟಲ್ಲವಾ? ನನ್ನ ಹೆತ್ತವರ ಅಂದಿನ ಬಡತನಕ್ಕೂ ನಾನು ಬೆಳೆದು ಬಂದ ರೀತಿಗೂ ಏನಾದರೂ ಸಂಬಂಧವಿದೆ ಅಂತ ನಿಮಗಾದರೂ ಅನಿಸುತ್ತದಾ ಹೇಳಿ!’ ಎಂದು ತಮ್ಮ ಕಳೆಗುಂದಿದ ಕಣ್ಣುಗಳಲ್ಲಿ ಹಿಡಿತ ತಪ್ಪಿ ತೊಟ್ಟಿಕ್ಕುತ್ತಿದ್ದ ನೀರನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತ ಅಂದರು. ಮಾವನಿಗೆ ಸೋದರಳಿಯನ ಅಳು ನೋಡಿ ಇನ್ನೂ ಸೋಜಿಗವಾಯಿತು. ಹೌದು ಅವರು ನಾರಾಯಣರ ಕುಟುಂಬದ ಬಡತನವನ್ನು ಕಣ್ಣಾರೆ ಕಂಡಿದ್ದರು. ಅಲ್ಲದೇ ಅಂದು ಅವರ ಕುಟುಂಬವೂ ಅನುಕೂಲಸ್ಥವಾಗಿತ್ತು. ಹಾಗಾಗಿ ಆವತ್ತು ಅವರು ನಾರಾಯಣರ ಕುಟುಂಬಕ್ಕೆ ಸಹಾಯ ಮಾಡಲು ಮನಸ್ಸು ಮಾಡಿದ್ದರೆ ನೈಜ ಬಂಧುತ್ವವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ, ‘ಉಳ್ಳವರ ಬಹುತೇಕ ಸಹಾಯ ತಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕಾಗಿಯೇ ಇರುತ್ತದೆ. ಅದು ನಿಜವಾದ ಬಡತನವನ್ನೆಂದೂ ಅಳಿಸುವ ಪ್ರಯತ್ನ ಮಾಡದು!’ ಎಂಬ ಮಾತಿನಂತೆಯೇ ಸಂಜೀವಣ್ಣನ ಮನಸ್ಥಿತಿಯೂ ಇತ್ತು. ಆದ್ದರಿಂದ ಅವರು, ‘ಅವರೇನೂ ತಮ್ಮ ಹತ್ತಿರದ ಸಂಬಂಧಿಗಳಲ್ಲ. ಅವರ ರಕ್ತ ಸಂಬಂಧಿಕರೇ ಸುಮಾರು ಜನ ಅನುಕೂಲಸ್ಥರಿದ್ದು ಅವರೆಲ್ಲರೂ ಸುಮ್ಮನಿರುವಾಗ ನಾವೇಕೆ ಮೇಲೆ ಬಿದ್ದುಕೊಂಡು ಹೋಗಿ ಉದ್ಧಾರ ಮಾಡಬೇಕು?’ ಎಂಬ ಧೋರಣೆಯಿಂದ ದೂರವೇ ಇದ್ದವರು. ಹೀಗೆ ಅಂದು ನಾರಾಯಣರ ಎಲ್ಲ ಬಂಧುಗಳೂ ಅವರ ಕುಟುಂಬವನ್ನು ಅಸ್ಪ್ರಶ್ಯರಂತೆ ಕಾಣುತ್ತ ದೂರದಿಂದಲೇ ಸಂಬಂಧವನ್ನು ನಿಭಾಯಿಸಿಕೊಂಡು ಬಂದಿದ್ದರು. ಆದರೆ ನಾರಾಯಣರು ಬೆಳೆದು ಬ್ಯಾಂಕ್ ಅಧಿಕಾರಿಯಾಗಿ ಹೆಸರು ಮಾಡಿದ ಮೇಲೆ ಇತರರಂತೆ ಸಂಜೀವಣ್ಣನ ಧೋರಣೆಯೂ ಬದಲಾಯಿತು ಮತ್ತು ವಯೋಸಹಜ ಪ್ರಬುದ್ಧತೆಯೂ ಅವರನ್ನು ಮೃದುವಾಗಿಸಿತ್ತು. ಪರಿಣಾಮ, ಅವರು ಈಗೀಗ ರಕ್ತ ಸಂಬಂಧಿಗಳೊಂದಿಗೆ ಹೆಚ್ಚೆಚ್ಚು ಅನ್ಯೋನ್ಯವಾಗಿರಲು ಪ್ರಯತ್ನಿಸುತ್ತ ಎಲ್ಲರ ಮನೆಗಳಿಗೂ ಆಗಾಗ ಭೇಟಿ ನೀಡುತ್ತ ಒಂದು ಮಟ್ಟದ ಬಾಂಧವ್ಯವನ್ನು ಹೊಸದಾಗಿ ಚಿಗುರಿಸುವಲ್ಲಿ ಸಫಲರಾಗಿದ್ದಾರೆ. ಇಂಥ ಸಂಜೀವಣ್ಣ ಇಂದು ನಾರಾಯಾಣರ ಮಾತಿಗೆ, ‘ಹೌದು ಹೌದು ಮಾರಾಯಾ ನಿನ್ನ ಅಪ್ಪ, ಅಮ್ಮ ಆವಾಗ ಇದ್ದ ಪರಿಸ್ಥಿತಿಯನ್ನು ನೆನೆದರೆ ನೀನಿಷ್ಟೊಂದು ಎತ್ತರಕ್ಕೆ ಬೆಳೆಯುತ್ತಿ ಅಂತ ನಾವ್ಯಾರೂ ಕನಸು ಮನಸಿನಲ್ಲೂ ಎಣಿಸಲಿಲ್ಲ ನೋಡು!’ ಎಂದು ತಾವೂ ಅವರ ಮಾತನ್ನು ಅನುಮೋದಿಸಿದರು.     ಅಷ್ಟು ಕೇಳಿದ ನಾರಾಯಣರು ಸ್ವಲ್ಪ ಗೆಲುವಾದರು. ‘ಹ್ಞೂಂ, ಹೌದಲ್ಲವಾ ಮಾವ. ಹಾಗಿರುವಾಗ ಅಂಥ ಸ್ಥಾನಮಾನವನ್ನು ನಾನು ಗಳಿಸಲು ಮತ್ತದನ್ನು ಉಳಿಸಿಕೊಳ್ಳಲು ಜೀವನದ ಎಂಥೆಂಥ ಸಂಗತಿಗಳನ್ನೂ ಸುಖ ಸಂತೋಷಗಳನ್ನೂ ಕಣ್ಣೆತ್ತಿಯೂ ನೋಡದೆ ಇಷ್ಟು ವರ್ಷಗಳ ಕಾಲ ರಾಜ ಸಿಪಾಯಿಯಂತೆ ಬದುಕಿದೆನೆಂದರೆ ಸಣ್ಣ ವಿಷಯವಾ ಹೇಳಿ? ಆದರೆ ಇಷ್ಟೆಲ್ಲ ಆದ ಮೇಲೆ ರಿಟಾಯರ್‍ಮೆಂಟ್‍ನ ನಂತರವಾದರೂ ಸ್ವಲ್ಪ ನೆಮ್ಮದಿಯಿಂದ ಜೀವನ ಸಾಗಿಸುವ ಎಂದು ಕನಸು ಕಂಡಿದ್ದರೆ ಇದೇನಾಗಿ ಹೋಯಿತು ಮಾವಾ! ಇಷ್ಟರವರೆಗೆ ಎಲ್ಲಿದ್ದವೋ ಹಾಳು ಕಾಯಿಲೆಗಳೆಲ್ಲ ನನ್ನನ್ನು ನುಂಗಿ ನೀರು ಕುಡಿಯುತ್ತಿವೆಯಲ್ಲ? ಇವು ನನ್ನನ್ನು ಹಿಂಸಿಸುವುದನ್ನು ನೋಡಿದರೆ ಬಹಳ ಬೇಗನೇ ಸತ್ತು ಹೋಗುತ್ತೇನೇನೋ ಅಂತ ಟೆನ್ಷನ್ ಆಗಿಬಿಟ್ಟಿದೆ!’ ಎಂದು ನಾರಾಯಣರು ನೋವು ತೋಡಿಕೊಂಡರು. ಅವರ ಮಾತಿಗೆ ಸಂಜೀವಣ್ಣ ಮೌನವಾಗಿ ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಗಿರಿಜಕ್ಕ ಇಬ್ಬರಿಗೂ ಕಾಫಿ ತಂದು ಕೊಟ್ಟು ತಾನೂ ಗಂಡನ ಪಕ್ಕದಲ್ಲಿ ಕುಳಿತವರು, ‘ಅಲ್ಲ ಸಂಜೀವಣ್ಣಾ, ಇವರ ಕಥೆ ಏನು ಮಾರಾಯ್ರೇ…! ಯಾವಾಗಲೂ ಇವರಿಗೆ ಬರೇ ಕಾಯಿಲೆಯದ್ದೇ ಚಿಂತೆಯಾಗಿಬಿಟ್ಟಿದೆಯಲ್ಲ? ಆ ಸಣ್ಣಪುಟ್ಟ ರೋಗಗಳು ನನಗೂ ಇವೆ. ಆದರೆ ನಾನ್ಯಾಕೆ ಟೆನ್ಷನ್ ಮಾಡಿಕೊಳ್ತಾ ಇಲ್ಲ! ಅದಾದರೂ ಅರ್ಥವಾಗಬೇಕಲ್ಲವಾ ಇವರಿಗೆ? ದಯವಿಟ್ಟು ಹೆಚ್ಚು ಚಿಂತೆ ಮಾಡ್ಕೋಬೇಡಿ. ಅದರಿಂದ ಇರುವ ಆರೋಗ್ಯವೂ ಕೆಟ್ಟು ಹೋಗುತ್ತದೆ. ಅಂತ ನಂಗಂತೂ ಹೇಳಿ ಹೇಳಿ ಸಾಕಾಗಿ ಹೋಯ್ತು. ಇನ್ನು ನೀವೇ ಇವರಿಗೆ ಬುದ್ಧಿ ಹೇಳಬೇಕಷ್ಟೇ!’ ಎಂದರು ನೋವಿನಿಂದ. ‘ಆಯ್ತು, ಆಯ್ತಮ್ಮಾ. ನಾನೇ ಹೇಳುತ್ತೇನೆ. ಇನ್ನು ನೀನೂ ಮಂಡೆಬಿಸಿ ಮಾಡ್ಕೊಂಡು ನಿನ್ನ ಆರೋಗ್ಯವನ್ನೂ ಕೆಡಿಸಿಕೊಳ್ಳಬೇಡ. ಒಳಗೆ ನಡಿ. ಏನಾದರೂ ಅಡುಗೆ ಮಾಡು. ಊಟ ಮಾಡಿಕೊಂಡೇ ಹೋಗುತ್ತೇನೆ’ ಎಂದು ಸಂಜೀವಣ್ಣ ಹಿರಿಯನ ಅಧಿಕಾರದಿಂದ ಆಜ್ಞಾಪಿಸಿದವರು ಸೋದರಳಿಯನ ಸಮಸ್ಯೆಗೂ ಅದಾಗಲೇ ಪರಿಹಾರವನ್ನು ಹುಡುಕಿಯಾಗಿತ್ತು. ಅದನ್ನು ತಿಳಿಸಲೂ ಇದೇ ಸುಸಂದರ್ಭವೆಂದುಕೊಂಡವರು, ‘ನೋಡು ನಾಣೂ ನಿನಗಿಂತ ಹಿರಿಯನಾಗಿ ಒಂದೆರಡು ಮಾತು ಹೇಳುತ್ತೇನೆ. ಅದನ್ನು ತಾಳ್ಮೆಯಿಂದ ಕೇಳಬೇಕು ನೀನು…?’ ಎಂದರು ಗಂಭೀರವಾಗಿ. ‘ಆಯ್ತು ಮಾವ, ಹೇಳಿ…!’ ಎಂದರು ನಾರಾಯಣರೂ ಆಸಕ್ತಿಯಿಂದ. ‘ನಮ್ಮ ದೇಹದಲ್ಲಿ ತ್ರಾಣ ಇರುವಾಗ ಮತ್ತು ರಕ್ತವೂ ಬಿಸಿಯಿರುವಾಗ ನಾವು ಯಾರು? ಈ ಭೂಮಿಯಲ್ಲಿ ಯಾಕೆ ಹುಟ್ಟಿದೆವು? ಮನುಷ್ಯ ಜೀವನ ಎಂದರೇನು? ನಮ್ಮ ಬದುಕಿನಲ್ಲಿ ತಾಪತ್ರಯಗಳು ಯಾಕೆ ಬರುತ್ತವೆ? ಸಂಸಾರ, ಬಂಧು ಬಳಗ, ಆಸೆ ದುರಾಸೆಗಳಿಗೆ ಅರ್ಥವೇನು? ಇಲ್ಲಿ ಯಾವುದು ಸತ್ಯ ಯಾವುದು ಮಾಯೆ? ಸತ್ತ ನಂತರ ಎಲ್ಲಿಗೆ ಹೋಗುತ್ತೇವೆ?’ ಎಂಬ ಯಾವ ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟುವುದಿಲ್ಲ ಅಥವಾ ಹುಟ್ಟಿದರೂ ಅದಕ್ಕೆ ತಕ್ಕ ಉತ್ತರವೂ ನಮ್ಮ ಆಗಿನ ತಿಳಿವಿಗೆ ಸಿಗುವುದಿಲ್ಲ. ಹಾಗಾಗಿ ಸಮಾಜದ ಸಂಸ್ಕಾರ ಸಂಪ್ರದಾಯಗಳಿಗೆ ತಕ್ಕಂತೆ ಬದುಕನ್ನು ರೂಪಿಸಿಕೊಳ್ಳುತ್ತ ಹೋಗುತ್ತೇವೆ. ಆ ಪ್ರಯತ್ನದಲ್ಲಿ ಗೆಲ್ಲುತ್ತೇವೋ ಸೋಲುತ್ತೇವೋ ನಮಗೆ ಮುಖ್ಯವಾಗುವುದಿಲ್ಲ. ಆದರೆ ಕೊನೆಯಲ್ಲಿ ನಮ್ಮ ದಾರಿಯೇ ಸರಿ ಎಂಬ ನಿರ್ಧಾರಕ್ಕೆ ಬಂದು ಜೀವನ ಇಷ್ಟೇ ಎಂಬ ಭ್ರಮೆಯಲ್ಲಿ ಬದುಕುತ್ತೇವೆ. ಅಂಥ ಜೀವನದ ಅನುಭವಗಳಿದಿಂದಾಗಿ ಮುಂದೆ ಬರುವ ವೃದ್ಧಾಪ್ಯದ ಬಗ್ಗೆಯಾಗಲಿ ದೇಹವನ್ನು ಕೊನೆ ಮುಟ್ಟಿಸಲು ಎಡತಾಕುವ ರೋಗರುಜಿನಗಳ ಕುರಿತಾಗಲಿ ಸರಿಯಾದ ತಿಳುವಳಿಕೆ, ಕಾಳಜಿ ನಮಲ್ಲಿ ಹೆಚ್ಚಿನವರಿಗಿರುವುದಿಲ್ಲ. ಆದರೆ ಕೊನೆಯವರೆಗೆ ಬದುಕಿದ ಎಲ್ಲರಿಗೂ ಮುದಿತನ ಬಂದೇ ಬರುತ್ತದಲ್ಲ! ಒಂದು ದಿನ ಅದು ಬಂದು ಇನ್ನೇನು ಎಲ್ಲವೂ ಮುಗಿಯುತ್ತದೆ ಎಂಬಷ್ಟರಲ್ಲಿ ಆ ಕಠೋರ ಸತ್ಯವನ್ನು ಸ್ವೀಕರಿಸಲಾಗದೇ, ಎದುರಿಸಲಾಗದೇ ಸಣ್ಣ ಮಕ್ಕಳಂತೆ ಕೈಕಾಲು ಬಡಿದುಕೊಂಡು ಅಳತೊಡಗುತ್ತೇವೆ ಮತ್ತು ಕೊನೆಯಲ್ಲಿ ಮನಸ್ಸಿನ ಸ್ವಾಸ್ಥ್ಯವನ್ನು ಕಳೆದುಕೊಂಡು ನರಳುತ್ತೇವೆ. ಇಂಥ ಅವಸ್ಥೆಯಲ್ಲಿ ಒದ್ದಾಡುವವನು ನಿನ್ನೊಬ್ಬನೇ ಅಲ್ಲ ಮಾರಾಯಾ. ನನ್ನನ್ನೂ ಸೇರಿಸಿ ಹೆಚ್ಚಿನ ಮುದುಕರ ಅವಸ್ಥೆಯೇ ಹೀಗಾಗಿ ಬಿಟ್ಟಿದೆ. ಇವುಗಳ ಜೊತೆಯಲ್ಲಿ ಇನ್ನೊಂದು ದೊಡ್ಡ ದುರಂತವೆಂದರೆ ಸಾಯುವವರೆಗೂ ನಾವು ಈ ಜೀವನ ನಶ್ವರ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ! ಆದ್ದರಿಂದ ನೀನು ಈ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡೆಯೆಂದರೆ ನಿನ್ನ ರೋಗರುಜಿನವೆಲ್ಲವೂ ಅರ್ಧಕ್ಕರ್ಧ ಗುಣವಾಗುತ್ತವೆ ನೋಡು!’ ಎಂದು ಗಂಭೀರವಾಗಿ ಹೇಳಿದರು. ಆದರೆ ಇನ್ನೂ ಕಣ್ಕಾಪು ಕಿತ್ತೊಗೆಯದ ನಾರಾಯಣರ ಮನಸ್ಸೆಂಬ ಮುದಿ ಕುದುರೆಗೆ ಆ ವಿಚಾರವು ಸ್ವಲ್ಪವೂ ಅರ್ಥವಾಗಲಿಲ್ಲ. ‘ಏನೋ ಮಾವಾ, ನನಗೊಂದೂ ತಿಳಿಯುವುದಿಲ್ಲ!’ ಎಂದು ಉದಾಸೀನ ತಾಳಿದರು. ಅವರ ಪ್ರತಿಕ್ರಿಯೆಯನ್ನು ಕಂಡ ಸಂಜೀವಣ್ಣನಿಗೆ ತಾನು ಬೋರ್ಗಲ್ಲ ಮೇಲೆ ನೀರೆರೆದಂತಾಯಿತಲ್ಲ ಎಂದೆನ್ನಿಸಿತು. ಆದರೂ ಸೋಲೊಪ್ಪಿಕೊಳ್ಳದೆ, ‘ಹಾಗೆಲ್ಲ ನಿರಾಶೆ ಮಾಡಿಕೊಳ್ಳಬಾರದು ಮಾರಾಯಾ. ನಿನ್ನ ತೊಂದರೆಗಳಿಗೆಲ್ಲಾ ಪರಿಹಾರ ಇದ್ದೇ ಇದೆ. ಸ್ವಲ್ಪ ತಾಳ್ಮೆಯಿಂದಿರು!’ ಎಂದು ಮೃದುವಾಗಿ ಅಂದವರು, ‘ಅದೆಲ್ಲ ಹಾಗಿರಲಿ ಮಾರಾಯಾ… ನೀನು ನಮ್ಮ ಮನೆತನದ ದೈವಗಳನ್ನು ನೋಡಲು ಬರದೆ ಎಷ್ಟು ವರ್ಷವಾಯಿತು ಹೇಳು? ಇಷ್ಟು ಕಾಲ ದುಡಿಮೆ ದುಡ್ಡು ಸಂಸಾರ ಅಂತ ಓಡುತ್ತಲೇ ಇದ್ದೆ. ಆದರೆ ಈಗ ನೋಡಿದರೆ ಅದರಿಂದ ನಿಜವಾದ ಸುಖ ಏನು ಪಟ್ಟೆ ಹೇಳು? ಅಷ್ಟಲ್ಲದೇ ನಿನ್ನ ಇಲ್ಲಿಯವರೆಗಿನ ದೊಡ್ಡ ಗೆಲುವಿಗೆ ಕಾರಣವಾದವರು ಯಾರು ಅಂತ ಒಮ್ಮೆಯಾದರೂ ಯೋಚಿಸಿದ್ದೀಯಾ? ಹತ್ತಾರು ತಲೆಮಾರಿನಿಂದಲೂ ನಮ್ಮ ಸಂತಾನವನ್ನು ಕಾಪಾಡಿಕೊಂಡು ಬಂದಂಥ ನಮ್ಮ ದೈವ, ಭೂತಗಳೇ ನಿನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅಂತ ಇನ್ನಾದರೂ ಅರ್ಥ ಮಾಡಿಕೋ ಮಾರಾಯಾ! ನೀನು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—28 ಆತ್ಮಾನುಸಂಧಾನ ಬಹುಮುಖೀ ವ್ಯಕ್ತಿತ್ವದ ರಾಕಜ್ಜ ನಮ್ಮ ತಾಯಿಯ ಚಿಕಪ್ಪ ರಾಕು. ಬಾಲ್ಯದಲ್ಲಿಯೇ ತಂದೆ, ಅವಳ ವಿವಾಹದ ಬಳಿಕ ತಾಯಿಯನ್ನು ಕಳೆದುಕೊಂಡ ಅವ್ವನಿಗೆ ತೌರುಮನೆಯ ಕಡೆಯಿಂದ ಕೊನೆಯವರೆಗೂ ಹತ್ತಿರದಲ್ಲಿ ಕುಟುಂಬದ ಸದಸ್ಯನೇ ಎಂಬಂತೆ ಆಧಾರವಾಗಿದ್ದವನು ಚಿಕ್ಕಪ್ಪ ರಾಕು. ನಮಗೆಲ್ಲ ಅಕ್ಕರೆಯ ರಾಕಜ್ಜ. ವಿಶೇಷವೆಂದರೆ ಬಾಲ್ಯದಿಂದಲೂ ನನ್ನನ್ನು ವಿಶೇಷವಾಗಿ ಎದೆಗೆ ಹಚ್ಚಿಕೊಂಡು ಅಕ್ಕರೆ ತೋರಿದವನು ರಾಕಜ್ಜನೇ. ಜಾತ್ರೆಗೋ, ಯಕ್ಷಗಾನ ಬಯಲಾಟ ನೋಡುವುದಕ್ಕೋ ನನ್ನನ್ನು ಹೆಗಲೇರಿಸಿಕೊಂಡು ಹೊರಡುವ ರಾಕಜ್ಜ ನಾನು ಬೇಡಿದುದನ್ನು ಕೊಡಿಸುತ್ತ ಮುದ್ದು ಮಾಡಿ ಬೆಳೆಸಿದವನು. ನಾನು ಬೆಳೆದಂತೆ ಕಾರಣಾಂತರಗಳಿಂದ ದೂರವಿರಬೇಕಾದಾಗಲೆಲ್ಲ ಹೆಂಗಸರಂತೆ ಬಿಕ್ಕಿ ಬಿಕ್ಕಿ ಅಳುತ್ತಲೇ ಬೀಳ್ಕೊಡುವ ಅಜ್ಜನ ಅಪಾರವಾದ ಅಕ್ಕರೆಯ ನಡುವೆಯೇ ನನಗೆ ಬುದ್ಧಿ ಬೆಳೆದಂತೆ ಅವನ ವ್ಯಕ್ತಿತ್ವದ ವಿವಿಧ ಮುಖಗಳು ಬಿಚ್ಚಿಕೊಳ್ಳುತ್ತ ವಿಸ್ಮಯವುಂಟುಮಾಡಿದವು. ಅಜ್ಜನ ಕೈ ಹಿಡಿದವಳು ನಾನು ಹುಟ್ಟುವ ಮೊದಲೇ  ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ್ದಳು. ಅಜ್ಜ ಇನ್ನೊಂದು ಮದುವೆ ಮಾಡಿಕೊಂಡಿದ್ದ ನಂತೆ. ಆದರೆ ಅವಳು ಅಜ್ಜನೊಟ್ಟಿಗೆ ಬಹುಕಾಲದ ನಿಲ್ಲದೆ ಅಂಕೋಲೆ ಕಡೆಯ ತೌರುಮನೆಗೆ ಹೊರಟು ಹೋದವಳು ಮತ್ತೆ ತಿರುಗಿ ಬರಲಿಲ್ಲ. ಹಾಗಾಗಿ ನನಗೆ ಬುದ್ಧಿ ಬಲಿತ ಕಾಲದಿಂದಲೂ ಅಜ್ಜ ಒಂಟಿಯಾಗಿರುವುದನ್ನು ಮಾತ್ರ ನಾನು ಕಂಡಿದ್ದೇನೆ. ಮೊದಲ ಹೆಂಡತಿ ಯಿಂದ ಪಡೆದ ಮಗಳನ್ನು ಪ್ರೀತಿಯಿಂದಲೇ ಬೆಳೆಸಿದ ಅಜ್ಜ, ಅವಳು ಹರೆಯಕ್ಕೆ ಬಂದಾಗ ಗುಂಡಬಾಳೆಯ ಕಡೆಯ ಹುಡುಗನೊಬ್ಬನಿಗೆ ಮದುವೆ ಮಾಡಿ ಕೊಟ್ಟವನು ಮಗಳು ಅಳಿಯನೆಂದು ವರ್ಷಕ್ಕೆ ಒಮ್ಮೆ ಅಥವಾ ಅನಿವಾರ್ಯವಾದ ಸಂದರ್ಭದ ಭೇಟಿಯಲ್ಲದೆ ಹೆಚ್ಚಿನ ಒಡನಾಟದ ಸಂಬಂಧ ಉಳಿಸಿಕೊಂಡಿರಲಿಲ್ಲ. ತಂದೆ-ತಾಯಿ ಇಬ್ಬರೂ ಇಲ್ಲದ ತಬ್ಬಲಿ ಎಂಬ ಕಾರಣದಿಂದಲೋ ಅವ್ವನನ್ನೇ ಪ್ರೀತಿಯ ಮಗಳು ಎಂದು ಮಮಕಾರ ತೋರುತ್ತಿದ್ದ. ನಮ್ಮ ಮನೆಯ ಸನಿಹದಲ್ಲಿಯೇ ಅಜ್ಜನಿಗೆ ಸರಕಾರ ನೀಡಿದ ಐದು ಗುಂಟೆ ಭೂಮಿ, ಒಂದು ಜನತಾ ಮನೆಯಿತ್ತು. ಕೃಷಿ ಕೂಲಿ, ತೆಂಗು ಅಡಿಕೆ ಮರ ಹತ್ತಿ ಕೊಯ್ಲು ಮಾಡುವ ಕೌಶಲ್ಯ ರಾಕಜ್ಜನಿಗಿತ್ತು. ಕೂಲಿ ಕೆಲಸದ ಆಳುಗಳಿಗೆ ತಾನೇ ಮುಂದಾಳಾಗಿ ನಾಯಕತ್ವ ವಹಿಸುವ ಅವನ ಮಾತಿಗೆ ಸಮಾಜ ಬಾಂಧವರೂ ಮನ್ನಣೆ ನೀಡಿ ಗೌರವಿಸುತ್ತಿದ್ದರು. ಇದಕ್ಕೆ ಅಜ್ಜನ ಬಹುಮುಖೀ ವ್ಯಕ್ತಿತ್ವವೇ ಕಾರಣವಾಗಿದ್ದಿರಬೇಕೆಂದು ಅನ್ನಿಸುತ್ತದೆ. ಅಜ್ಜನ ಮನಯ ಮುಂದೆ ಒಂದು ಬೃಹತ್ತಾದ ತುಳಸಿ ಕಟ್ಟೆಯಿತ್ತು. ತಲೆ ತಲಾತಂತರಗಳಿಂದ ಬಂದ ಈ ತುಳಸಿ ಕಟ್ಟೆಗೆ ಅಜ್ಜನೇ ಪೂಜಾರಿ. ನಮ್ಮ ಕೇರಿಯಲ್ಲಿ ಇರುವುದು ಇದೊಂದೇ ತುಳಸಿ ಕಟ್ಟೆಯಾದ್ದರಿಂದ ಹಬ್ಬ ಹರಿದಿನಗಳಲ್ಲಿ, ವಿಶೇಷವಾಗಿ ಕಾರ್ತಿಕ ಮಾಸದ ತುಳಸಿ ವಿವಾಹ ಸಂಭ್ರಮದ ಪೂಜೆಯಲ್ಲಿ ಕೇರಿಯ ಎಲ್ಲರೂ ಬಂದು ಭಾಗವಹಿಸುತ್ತಿದ್ದರು. ಇಂಥ ಪೂಜಾ ಸಮಯದಲ್ಲಿ ಮಂಗಳಾರತಿ ಮುಗಿಯುತ್ತಿದ್ದಂತೆ ಅಕ್ಷತೆಯನ್ನು ಹಿಡಿದು ಕುಟುಂಬದ ಮತ್ತು ಊರಿನ ಎಲ್ಲರ ಕ್ಷೇಮದ ಕುರಿತು ಅಜ್ಜ ಪ್ರಾರ್ಥಿಸುತ್ತಿದ್ದ. ಇದೇ ಸಂದರ್ಭದಲ್ಲಿ ಅಜ್ಜನಿಗೆ ದೇವರು ಮೈಮೇಲೆ ಬರುವುದೂ, ಭಕ್ತಾದಿಗಳು ಪ್ರಶ್ನಿಸಿ ಪರಿಹಾರ ಕೇಳುವುದೂ ನಡೆಯುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು. ಕೇರಿಯ ಹಲವರು ಬೇರೆಬೇರೆ ಬೇಡಿಕೆಯನ್ನಿಟ್ಟು ಪ್ರಾರ್ಥಿಸಿಕೊಳ್ಳುತ್ತಿದ್ದರು. ಬರುವ ವರ್ಷ ಅದೇ ಹಬ್ಬದ ಪೂಜೆಯಲ್ಲಿ ಹರಕೆಯೊಪ್ಪಿಸಿ ಕೃತಾರ್ಥರಾಗುತ್ತಿದ್ದರು. ಇಂಥ ಪೂಜೆಯ ವಿಶೇಷ ದಿನಗಳಲ್ಲಿ ಅಜ್ಜ ಪೂಜೆ ಮುಗಿಯುವವರೆಗೆ ನಿರಾಹಾರಿಯಾಗಿಯೇ ಇರುತ್ತಿದ್ದ. ಪೂಜೆಯ ಬಳಿಕ ಮಾಡಿದ ಅಡುಗೆಯನ್ನು ದೇವರಿಗೆ, ಪಿತೃಗಳಿಗೆ ಮೀಸಲು ಒಪ್ಪಿಸಿದ ಬಳಿಕವೇ ಊಟ ಮಾಡುತ್ತಿದ್ದ. ಬಹುಶಃ ಇದೇ ಕಾರಣದಿಂದ ಕೇರಿಯ ಎಲ್ಲರೂ ಅಜ್ಜನನ್ನು ಗೌರವ ಭಾವದಿಂದ ಕಾಣುತ್ತಿರಬೇಕು. ನಮ್ಮ ಸಮುದಾಯದ ಸಂಪ್ರದಾಯದಂತೆ ಸಮಾಜದ ಮದುವೆ, ನಾಮಕರಣ, ಅಂತ್ಯಸಂಸ್ಕಾರ ಇತ್ಯಾದಿ ಕರ್ಮಗಳಲ್ಲಿ ಬುಧವಂತ ಮತ್ತು ಕೋಲಕಾರರೆಂಬ ಇಬ್ಬರು ಹಿರಿಯರು ಕಾರ್ಯನಿರ್ವಹಣೆಯ ಸೂತ್ರಧಾರರಾಗಿ ಇರುತ್ತಿದ್ದರು. ಅಜ್ಜನಿಗೆ ಇಂಥ ನಿರ್ದಿಷ್ಟ ಸಾಮಾಜಿಕ ಅಧಿಕಾರವೇನೂ ಇರಲಿಲ್ಲ. ಆದರೆ ಜಾತಿಯ ವಿವಾಹ ಸಂಬಂಧ ಕುದುರಿಸುವ ಮತ್ತು ವಿವಾಹ ಮುಂತಾದ ಮಂಗಳ ಕಾರ್ಯಗಳ ನಿರ್ವಹಣೆಯಲ್ಲಿ ಊರಿನ ಬುಧವಂತ ಕೋಲಕಾರರೂ ಅಜ್ಜನನ್ನೆ ಮುಂದಿಟ್ಟುಕೊಂಡು ಅವನ ಸಲಹೆ-ಸಹಕಾರದಿಂದಲೇತಮ್ಮ ಜವಾಬ್ದಾರಿಯನ್ನು ಪೂರೈಸುವುದು ಅಜ್ಜನ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆಯೆಂದೇ ತೋರುತ್ತಿತ್ತು. ರಾಕಜ್ಜನ ವ್ಯಕ್ತಿತ್ವದ ಬಹುಮುಖ್ಯವಾದ ಭಾಗವೆಂದರೆ ಯಕ್ಷಗಾನ. ಮಾಸ್ಕೇರಿಯ ಹಿರಿಯ ಯಕ್ಷಗಾನ ಕಲಾವಿದರೂ, ಪ್ರಸಂಗಕರ್ತರೂ, ವಿದ್ವಾಂಸರೂ ಆದ ತಿಮ್ಮಣ್ಣ ಗಾಂವಕಾರ ಎಂಬವರು ನಮ್ಮ ಸಮಾಜದ ಯುವಕರನ್ನು ಸಂಘಟಿಸಿ ಯಕ್ಷಗಾನ ತರಬೇತಿ ನೀಡುತ್ತಿದ್ದರೆಂದೂ, ಇದೇ ಕಾರಣದಿಂದ ಅವರು ತಮ್ಮ ಜಾತಿ ಬಾಂಧವರಿಂದ ಬಹಿಷ್ಕಾರದ ಶಿಕ್ಷೆ ಅನುಭವಿಸಿದ್ದರಂದೂ ನಾನು ನನ್ನ ಹಿಂದಿನ ಬರಹಗಳಲ್ಲಿ ಉಲ್ಲೇಖಿಸಿದ್ದೇನೆ. ಇದೇ ತಿಮ್ಮಣ್ಣ ಗಾಂವಕರರ ಶಿಷ್ಯ ಬಳಗದಲ್ಲಿ ತರಬೇತಿ ಪಡೆದ ನಮ್ಮ ರಾಮಕಜ್ಜನು ಉತ್ತಮ ಯಕ್ಷ ಕಲಾವಿದನಾಗಿಯೂ ಪ್ರಸಿದ್ಧಿ ಪಡೆದಿದ್ದ. ವಿಶೇಷವಾಗಿ ಸ್ತ್ರೀ ಪಾತ್ರದಲ್ಲಿ ಪರಿಣಿತಿ ಹೊಂದಿದ್ದ ರಾಕಜ್ಜನು ದಕ್ಷಿಣದ ಕಡೆಯ ಯಕ್ಷಗಾನ ಕಲಾವಿದರಂತೆ (ಸ್ತ್ರೀ ಪಾತ್ರಗಳಿಗೆ ಅನುಕೂಲಕರವಾಗಿ) ಉದ್ದ ತಲೆಗೂದಲು ಬಿಟ್ಟುಕೊಂಡೇ ಇದ್ದ. ಅವನ ಮೂಗಿನಲ್ಲಿ ಮೂಗುತಿಯ ಗುರುತುಗಾಯ, ಕಿವಿಯಲ್ಲಿ ಕಿವಿಯೋಲೆ ಚುಚ್ಚುವ ಗಾಯಗಳನ್ನು ನಾನು ದೊಡ್ಡವನಾದ ಮೇಲೆಯೂ ಗಮನಿಸಿದ್ದೇನೆ. ಆದರೆ ನಾನು ಯಕ್ಷಗಾನ ಪಾತ್ರ ಮಾಡಲಾರಂಭಿಸಿದಾಗ ರಾಕಜ್ಜ ವಯೋ ಸಹಜ ಕಾರಣಗಳಿಂದ ಸ್ತ್ರೀ ಪಾತ್ರ ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದ. ತೀರ ಅಪರೂಪವಾಗಿ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಒಂದು ತಾಮ್ರಧ್ವಜ ಕಾಳಗ ಯಕ್ಷಗಾನ ಬಯಲಾಟದಲ್ಲಿ ಅಜ್ಜನೇ ಅರ್ಜುನನಾಗಿ ಪಾತ್ರ ವಹಿಸಿದ್ದರೆ ನಾನು ಕೃಷ್ಣನ ಪಾತ್ರ ಮಾಡಿದ್ದೆ. ಅದೇ ಪ್ರಸಂಗದಲ್ಲಿ ನಾನು ಬಲಗೈಯಲ್ಲಿ ಬಿಲ್ಲು ಹಿಡಿದು ಎಡಗೈಯಲ್ಲಿ ಬಾಣ ಪ್ರಯೋಗಿಸುವಂತೆ ತಪ್ಪಾಗಿ ಅಭಿನಯಿಸಿದೆನೆಂದು ಆಟದ ಮರುದಿನ ಎಲ್ಲರೆದುರು ಅಜ್ಜ ಅಪಹಾಸ್ಯ ಮಾಡಿ ನಕ್ಕಿದ್ದು ಅಜ್ಜನ ರಂಗಪ್ರಜ್ಞೆಯ ವಿವೇಕವೇ ಆಗಿತ್ತು ಎಂಬುದು ನಿಧಾನವಾಗಿ ನನಗೆ ಅರಿವಾಯಿತು. ಅಜ್ಜನಿಗೆ ಅಕ್ಷರಾಭ್ಯಾಸವಿರಲಿಲ್ಲ. ಯಕ್ಷಗಾನ ಕಲೆಯ ಆರಾಧಕನಂತೆ ಅದನ್ನು ಹಚ್ಚಿಕೊಂಡಿದ್ದ ಆತನಿಗೆ ಮಹಾಭಾರತಗಳು ಕಂಠಪಾಠದಂತೆ ಅವನ ಸ್ಮೃತಿಯಲ್ಲಿ ನೆಲೆಸಿದ್ದವು. ಭಾರತದ ಹದಿನೆಂಟು ಪರ್ವಗಳಲ್ಲಿ ಯಾವ  ಏನಿದೆ? ಎಂಬುದನ್ನು ತಪ್ಪಿಲ್ಲದೆ ಹೇಳುತ್ತಿದ್ದ. ಯಾವುದೇ ಹೊಸ ಪ್ರಸಂಗವಿದ್ದರೂ ಅದರ ಪದ್ಯವನ್ನು ಕೇಳುತ್ತಲೇ ಅರ್ಥ ವಿವರಿಸುವ ಪ್ರಾಜ್ಞತೆ ಅವನಿಗೆ ಲೋಕಾನುಭವದಿಂದಲೇ ಸಾಧ್ಯವಾಗಿತ್ತು. ನಾನು ನಮ್ಮೂರಿನ ಬಯಲಾಟ ಪ್ರದರ್ಶನಗಳಿಗಾಗಿ ನನ್ನ ಬಿ.ಎ. ದ್ವಿತೀಯವರ್ಷದ ಕಲಿಕೆಯ ಹಂತದಲ್ಲಿಯೇ ಯಕ್ಷಗಾನ ಪ್ರಸಂಗ ರಚನೆಗೆ ತೊಡಗಿದ್ದೆ. ಆಗ ನಮ್ಮ ತಂದೆಯವರೂ ಸಮರ್ಥ ಕಲಾವಿದರೂ, ಭಾಗವತರೂ ಆಗಿ ಸುತ್ತೆಲ್ಲ ಪ್ರಸಿದ್ಧಿ ಪಡೆದಿದ್ದರು. ನಾನು ರಚಿಸಿದ ಪದ್ಯಗಳನ್ನು ಅವರಿಗೆ ತೋರಿಸಿ ಸರಿಪಡಿಸಿಕೊಳ್ಳಲು ಧೈರ್ಯವಿಲ್ಲದೆ ನಾನು ರಾಕಜ್ಜನನ್ನೇ ಅವಲಂಬಿಸಿದ್ದೆ. ನಾಲ್ಕಾರು ಭಾಮಿನಿ-ವಾರ್ಧಕ ಷಟ್ಪದಿಗಳನ್ನು, ವಿವಿಧ ತಾಳಗಳ ಪದ್ಯಗಳನ್ನು ಬರೆದಾದ ಬಳಿಕ ಅಜ್ಜನ ಮುಂದೆ ಹಾಡಿ ತೋರಿಸುತ್ತಿದ್ದೆ. ಅದರ ಅರ್ಥ ಹೇಳುವುದರೊಂದಿಗೆ ಹಾಡಲು ಸರಿಹೊಂದದಿದ್ದರೆ ಛಂದೋ ದೋಷವಿದೆಯೆಂದೂ ಅಜ್ಜ ಸಲಹೆ ನೀಡುತ್ತಿದ್ದ. ತನಗೆ ಲಭ್ಯವಾದ ಸಂಕುಚಿತ ಪರಿಸರದಲ್ಲಿಯೇ ತನ್ನ ಅದ್ಭುತ ವ್ಯಕ್ತಿತ್ವಕ್ಕೆ ಸಾಣೆ ಹಿಡಿಸಿಕೊಂಡು ಬೆಳೆದು-ಬೆಳಗಿ ಮರೆಯಾದ ರಾಕಜ್ಜ ಇಂದಿನ ಆಧುನಿ ಪ್ರಪಂಚದಲ್ಲಿ ಬದುಕಿ ಇದ್ದಿದ್ದರೆ?…… ಎಂದು ಹಲವು ಬಾರಿ ನನಗನಿಸಿದೆ ******************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ನಾಟಕ ನೋಡಿದ ಅದೆಷ್ಟು ಸಿರಿವಂತ ಹೃದಯದವರು ದೊಡ್ಡ ದೊಡ್ಡ ಹೆಸರು ಮಾಡಿದ ಕಲಾವಿದರೊಂದಿಗೆ ನನ್ನನ್ನು ಹೋಲಿಸಿ ಶಹಭಾಷ್ ಎಂದಾಗ ಕಲಾವಿದೆಯಾಗಿ ತೊರೆ ತೆರೆದು ಅರಳುವಿಕೆಗೆ ಸಮರ್ಪಣೆ ಮಾಡಿದ್ದು ಸಾರ್ಥಕ ಅನ್ನಿಸಿದೆ

Read Post »

You cannot copy content of this page

Scroll to Top