ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಹೀಗೊಬ್ಬ ಅಜ್ಜ

ತಮ್ಮಣ್ಣ ಬೀಗಾರ.

ಅವನದು ಯಾವಾಗಲೂ ಶಾಂತವಾದ ಮುಖ. ಬೆಳ್ಳಗಿನ ಉರುಟಾದ ಮುಖದಲ್ಲಿ ಬಿಳಿಯ ಮೀಸೆ ಬಿಳಿಯ ಹುಬ್ಬು ನಕ್ಕರೆ ಅಷ್ಟೇ ಬಿಳಿಯದಾಗಿ ಹೊಳೆಯುವ ಹಲ್ಲು ಎಲ್ಲ ಅವನನ್ನು ನೋಡಿದಾಗ ನಮಗೆ ಅವನಲ್ಲಿ ಏನೋ ಆಕರ್ಷಣೆಯಾಗುತ್ತಿತ್ತು. ಮುಖದ ಅಗಲಕ್ಕೆ ಚಿಕ್ಕದೇನೋ ಅನಿಸುವಂತಹ ಕಣ್ಣುಗಳು ಹುಬ್ಬಿನ ಅಡಿಯಲ್ಲಿ ಸ್ವಲ್ಪ ಆಳದಲ್ಲಿ ಎಂಬಂತೆ ಕುಳಿತಿದ್ದವು… ಆದರೆ ಆ ಕಣ್ಣುಗಳ ಹೊಳಪಿನಿಂದಾಗಿ ಅವನ ಮುಖ ನೋಡಿದ ತಕ್ಷಣ ಕಾಣುವ ದಪ್ಪ ಮೀಸೆಯ ಜೊತೆಗೇ ಕಣ್ಣುಗಳೂ ಗಮನ ಸೆಳೆಯುತ್ತದ್ದವು. ಅಯ್ಯೋ, ಯಾರಬಗ್ಗೆ ಇಷ್ಟೆಲ್ಲಾ ವರ್ಣನೆಗೆ ಇಳಿದಿದ್ದೀರಿ… ಅವನ ಬಿಳಿಯ ಹುಬ್ಬು ಬಿಳಿಯ ಮೀಸೆಯ ವರ್ಣನೆ ಎಲ್ಲಾ ಕೇಳಿ ಅವನು ಒಬ್ಬ ಅಜ್ಜ ಅಂತ ನಮಗೆ ಗೊತ್ತಾಯಿತು. ಅಜ್ಜನ ಕುರಿತಾಗಿ ಹೇಳಲು ನಿಮಗೆ ಬೇಕಾದಷ್ಟು ಸಂಗತಿಗಳಿರಬಹುದು. ಆದರೆ ನಮಗೆ ಕೇಳಲು ಇಷ್ಟವಾಗುವಂತಹ ಸಂಗತಿ ಇದ್ದರೆ ಕೇಳುತ್ತೇವೆ. ಇಲ್ಲದಿದ್ದರೆ ಎದ್ದು ಹೋಗುತ್ತೇವೆ ಎಂದೆಲ್ಲಾ ಹೇಳುತ್ತಿದ್ದೀರಾ? ಸರಿ ಸರಿ, ನೀವು ಮಕ್ಕಳು. ನಿಮಗೆ ಏನು ಇಷ್ಟ ಅಂತಲೂ ನನಗೆ ಗೊತ್ತು. ಯಾವುದಾದರೂ ಅಜ್ಜರೊಂದಿಗೆ ನಿಮಗೇನು ಕೆಲಸ. ಅಜ್ಜ ಅಂದರೆ ನಿಮ್ಮ ಹಾಗೇ ಇರಬೇಕು. ನಿಮಗೊಂದಿಷ್ಟು ಸಿಹಿ ಹಂಚಬೇಕು. ಮೋಡದ ಮೇಲೆ ಕೂಡ್ರಿಸಿ ನಕ್ಷತ್ರಗಳ ಬೆಳಕನ್ನೆಲ್ಲಾ ತೋರಿಸುತ್ತ… ಚಂದ್ರಣ್ಣನಿಗೆ ಟಾಟಾ ಮಾಡಿ ಬರುವಂತಹವನಾಗಿರಬೇಕು. ಅವನ ಕೈಲ್ಲಿರುವ ಕೋಲು ಮಾಂತ್ರಿಕನ ಮಂತ್ರದ ಕೋಲಿನಂತೆ ಲವಲವಿಕೆಯಿಂದ ಇರಬೇಕು… ಹೌದು ಕೋಲು ಕುದುರೆಯಾಗಿ, ವಿಮಾನವಾಗಿ, ಹಾಡುವ ಹಾಡಾಗಿ, ನೋಡಲು ಹೂವಾಗಿ, ಹಕ್ಕಿಯಾಗಿ ಏನೇನೋ ಅಗಿ ಬದಲಾದರೆ ಹೇಗೆಲ್ಲಾ ಮಜವಾಗಿರುತ್ತದೆ ಅಲ್ಲವಾ? ಹಾಂ, ಅದೆಲ್ಲಾ ಹೇಗೆ ಸಾಧ್ಯ, ಬರೀ ಸುಳ್ಳಿನ ಪಟಾಕಿಯ ಸರಮಾಲೆ ಕಟ್ಟಿದರೆ ಅಷ್ಟೇ. ನಮ್ಮ ದೋಸ್ತಿ ಕಟ್ ಕಟ್ ಎಂದು ಬಿಡುತ್ತೀರಿ ನೀವು. ಅದಕ್ಕೇ ನಿಮ್ಮನ್ನೆಲ್ಲಾ ಕಂಡಾಗ ಸುಳ್ಳುಗಳೆಲ್ಲಾ ಓಡಿ ಹೋಗಿ ಕೆಟ್ಟವರ ಹೊಟ್ಟೆಯೊಳಗೆ ಸೇರಿಕೊಂಡು ಅವರಿಗೊಂದಿಷ್ಟು ಉಪಟಳ ಕೊಡುವಂತಾಗಲಿ ಎಂದೆಲ್ಲಾ ನನಗೆ ಯೋಚನೆ ಬರುತ್ತದೆ… ಅಂತಹ ಯೋಚನೆಯಲ್ಲಾ ಸುಳ್ಳಾಗುತ್ತದೆ ಎಂದು ನೀವು ಹೇಳಿಯೇ ಬಿಡುತ್ತೀರಿ. ಸರಿ ನಾನು ಅದೇ ಬಿಳಿ ಮೀಸೆಯ ಹೊಳಪಿನ ಕಣ್ಣಿನ ಅಜ್ಜನ ಬಗ್ಗೆ ಹೇಳುತ್ತಿದ್ದೆ. ಅವನ ಬಗ್ಗೆ ಹೇಳುವುದು ನೀವು ಹೇಳಿದ ಹಾಗೆ ಸಾಕಷ್ಟಿದೆ.

  ಅಜ್ಜ ಮಕ್ಕಳನ್ನು ಕಂಡರೆ ತುಂಬಾ ನಗುತ್ತಿದ್ದ. ಪ್ರೀತಿಯಿಂದ ಕೈ ಚಾಚಿ ಮಕ್ಕಳನ್ನು ತಬ್ಬುತ್ತಿದ್ದ. ತನ್ನ ಪುಟ್ಟ ಮನೆಯೊಳಗೆ ಹೋಗಿ ಯಾತರಿಂದಲೋ ಮಾಡಿದ್ದ ಸಿಹಿ ಉಂಡೆಯನ್ನು ತಂದು ಕೊಡುತ್ತಿದ್ದ. ಅವನು ಯಾವಾಗಲೂ ಹಾಪ್ ಪ್ಯಾಂಟ ತೊಟ್ಟು ಮೇಲೊಂದು ಬಿಳಿಯ ಟೀಶರ್ಟ ಹಾಕುತ್ತಿದ್ದ. ಆಗಲೇ ಹೇಳಲು ಮರೆತೆ. ಬಿಳಿಯ ರೇಶ್ಮೆ ಎಳೆಯಂತಹ ಮಿರಿ ಮಿರಿ ಮಿಂಚುವ ತಲೆಗೂದಲನ್ನು ಉದ್ದವಾಗಿ ಹೆಗಲವರೆಗೂ ಇಳಿಬಿಟ್ಟಿದ್ದ. ಗಾಳಿ ಬೀಸಿದಾಗ ಹಾರುತ್ತಿದ್ದ ಕೂದಲು ಅಜ್ಜ ಈಗ ರೆಕ್ಕೆ ಬಿಚ್ಚಿ ಹಾರುತ್ತಾನೋ ಎನ್ನುವ ಹಾಗೆ ಕಾಣುತ್ತಿತ್ತು.

  ಹೌದು ಆಗಾಗ ಅಜ್ಜ ಗದ್ದೆ ಬಯಲಿನಲ್ಲಿ ಬಂದು ಕೂಡ್ರುತ್ತಿದ್ದ. ಅಲ್ಲೆಲ್ಲ ನೂರಾರು ಬೆಳ್ಳಕ್ಕಿಗಳು ಬಂದು ತಮ್ಮ ಆಹಾರ ಹುಡುಕುವುದರಲ್ಲಿ ನಿರತರಾದರೆ ಅಜ್ಜ ಅವನ್ನೇ ನೋಡುತ್ತಿದ್ದ. ಅವು ಗದ್ದೆಯಿಂದ ಗದ್ದೆಗೆ ದಾಟಿದಂತೆ ತಾನೂ ದಾಟುತ್ತ ಎಷ್ಟೋಹೊತ್ತು ಇರುತ್ತಿದ್ದ. ಆಗಾಗ ಮೇಲೆ ನೋಡುತ್ತ ತನ್ನ ಕೈತೋಳು ಉದ್ದಕ್ಕೆ ರೆಕ್ಕೆಯ ಹಾಗೆ ಬಿಡಿಸಿ ಹಕ್ಕಿಗಳು ರೆಕ್ಕೆ ಬಡಿದಂತೆ ಕೈ ಅಲ್ಲಾಡಿಸುತ್ತಿದ್ದ. ಅವನು ಆ ಬೆಳ್ಳಕ್ಕಿಗಳಿಗೆ ಪರಿಚಿತನಾಗಿ ಬಿಟ್ಟಿದ್ದ ಎಂದು ಅನಿಸುತ್ತದೆ. ಅವನು ಅವುಗಳ ಹತ್ತಿರ ಹೋದರೂ ಅವು ಹಾರಿಹೋಗದೆ ತಮ್ಮ ಕೆಲಸದಲ್ಲಿ ತೊಡಗಿರುತ್ತಿದ್ದವು. ಆದರೆ ನಮ್ಮಂತಹ ಮಕ್ಕಳು ಅವುಗಳನ್ನು ನೋಡಹೊರಟರೆ ದೂರದಲ್ಲಿರುವಾಗಲೇ ಗುರುತಿಸಿ ನಮ್ಮಿಂದ ದೂರ ಸರಿಯುತ್ತಿದ್ದವು. ನಾವು ಅವನ್ನು ಹತ್ತಿರದಿಂದ ನೋಡಬೇಕು ಅಂದರೆ ಯಾವುದೋ ಗಿಡದ ಮರೆಯಲ್ಲಿಯೋ, ತಗ್ಗಾದ ಪ್ರದೇಶದಲ್ಲಿಯೋ ಕುಳಿತು ಅವುಗಳಿಗೆ ಕಾಣದಂತೆ ಮರೆಯಾಗಿ ಇದ್ದು ನೋಡಬೇಕು. ಬೆಳ್ಳಕ್ಕಿಗಳು ಮಾತ್ರ ಅಜ್ಜನ ಸ್ನೇಹಿತರಲ್ಲ… ದನಗಳು ಮೇಯತ್ತಿದ್ದರೆ ಅಲ್ಲಿಗೂ ಹೋಗುತ್ತಿದ್ದ. ಅವರ ಮೈ ಉಜ್ಜುತ್ತ ಅವರ ಮೈಗೆ ಒರಗಿದಂತೆ ಮಾಡಿಕೊಂಡು ಎಷ್ಟೋ ಹೊತ್ತು ನಿಂತಿರುತ್ತದ್ದ. ಇದನ್ನೆಲ್ಲಾ ನೋಡಿದ ಜನ ಅಜ್ಜ ಒಬ್ಬ ಹುಚ್ಚ ಎಂದು ಹೇಳುತ್ತಿದ್ದರು. ಅವನಿಗೆ ನಮ್ಮಂತವರ ಭಾಷೆ ತಿಳಿಯದು. ಅವನದೇನಿದ್ದರೂ ದನದ ಭಾಷೆ, ಹಕ್ಕಿಗಳ ಭಾಷೆ, ಮಳೆಯ ಭಾಷೆ, ಮಣ್ಣಿನ ಭಾಷೆ ತಪ್ಪಿರೆ ಮಕ್ಕಳ ಭಾಷೆ ಎಂದು ಹೇಳುತ್ತ ನಗುತ್ತಿದ್ದರು. ಅಜ್ಜ ಜನರೇನೇ ಅಂದರೂ ಸಿಟ್ಟಾಗುತ್ತಿರಲಿಲ್ಲ. ಅವರನ್ನು ನೋಡಿ ಮುಖ ತಿರುಗಿಸುತ್ತಲೂ ಇರಲಿಲ್ಲ. ಎಲ್ಲವೂ ಸಹಜವೆಂಬಂತೆ ಅದೇ ನಗುಮುಖದೊಂದಿಗೆ ಇರುತ್ತಿದ್ದ.

  ಕಳೆದ ವರ್ಷ ನಮ್ಮ ಊರಿನ ಹೈಸ್ಕೂಲ ಮಕ್ಕಳಿಗೂ ಪಕ್ಕದ ಊರಿನ ಹೈಸ್ಕೂಲ ಮಕ್ಕಳಿಗೂ ಕಬಡ್ಡಿ ಪಂದ್ಯ ಏರ್ಪಟ್ಟಿತ್ತು. ಕಬಡ್ಡಿ ಎಂದರೆ ನಮ್ಮ ಊರಿನಲ್ಲಿ ಎಷ್ಟೆಲ್ಲಾ ಜನ ಬರುತ್ತಾರೆ ಎಂದು ನಿಮಗೆ ಗೊತ್ತು. ಹೌದು ಊರಿಗೆ ಊರೇ ಕಬಡ್ಡಿ ಮೈದಾನದಲ್ಲಿ ಸೇರಿತ್ತು. ಮಕ್ಕಳ ಆಟ ಇದ್ದಾಗ ಅಜ್ಜ ಅಲ್ಲಿ ಇದ್ದೇ ಇರುತ್ತಾನೆ. ಅಜ್ಜ ನಿಧಾನ ಹೆಜ್ಜೆ ಹಾಕುತ್ತ ಬಂದು ಮುಂದಿನ ಸಾಲಿನಲ್ಲಿ ಕುಳಿತ. ಮಕ್ಕಳು ಆಟದ ಮೈದಾನಕ್ಕೆ ಬರುತ್ತಿದ್ದಂತೆ ಅವನು ತಂದಿದ್ದ ಸಿಹಿ ಉಂಡೆಯನ್ನು ಎರಡೂ ತಂಡದವರಿಗೂ ಹಂಚಿದ. ಎಲ್ಲರೂ ಪ್ರೀತಿಯಿಂದ ಆಡಿ ಎಂದು ಕೈಯಲ್ಲಿಯೇ ಶುಭ ಕೋರುತ್ತ  ತನ್ನ ಜಾಗದಲ್ಲಿ ಬಂದು ಕುಳಿತ.

  ಕಬಡ್ಡಿ ಆಟ ಶುರುವಾಯಿತು. ಎರಡೂ ತಂಡದವರು ಉತ್ತಮವಾಗಿ ಆಡುತ್ತ ಗೆಲುವಿಗೆ ಭಾರೀ ಪೈಪೋಟಿ ನಡೆಸಿದ್ದರು. ಈಗ ಅಜ್ಜನ ಊರಿನ ತಂಡದ ನಾಯಕ ಮೇಲಿಂದ ಮೇಲೆ ಅಂಕ ಪಡೆಯ ತೊಡಗಿದ. ಆಚೆಯ ತಂಡದವರು ಸಿಟ್ಟಿನಿಂದ ಆಡತೊಡಗಿದರು. ಅವರ ತರಬೇತಿ ದಾರ ಅವರಿಗೆ ಏನೋ ಉಪಾಯ ಹೇಳಿದ. ಆಟ ಮುಂದುವರಿದಿತ್ತು. ಅಜ್ಜನ ಊರಿನ ತಂಡದ ನಾಯಕನನ್ನು ಎದುರಿನ ತಂಡದವರು ಹಿಡಿದರು. ಎಲ್ಲರೂ ನೋಡುತ್ತಿದ್ದಂತೆ ಅವನ ಕಾಲನ್ನು ಎಳೆದು ಬಗ್ಗಿಸಿದರು… ಹೌದು, ಪಾಪ ತಂಡದ ನಾಯಕನ ಮೂಳೆ ಮುರಿಯಿತು. ಗದ್ದಲವಾಯಿತು. ಅವನನ್ನು ಆಸ್ಪತ್ರೆಗೆ ಸಾಗಿಸಿದರು. ಅಜ್ಜ ಕಣ್ಣೀರುಹಾಕುತ್ತ ನೋಡಿದ. ಮತ್ತೆ ಎದ್ದು ಹೋಗಿ ಮಕ್ಕಳಿಗೆ ಪ್ರೀತಿಯಿಂದ ಆಡಿ ಅಂದ… ಆಗ ಆಚೆ ತಂಡದ ಬೆಂಬಲಿಗರ್ಯಾರೋ ಅಜ್ಜನನ್ನೇ ನಿಮ್ಮ, ನಾಯಕನಾಗಿಸಿಕೊಂಡು ಆಡಿ ಎಂದು ಕೂಗಿದರು. ಅದನ್ನು ಕೇಳಿದ ಮತ್ತೊಂದಿಷ್ಟು ಜನ ಮುದಿ ಅಜ್ಜ ನಿಮ್ಮ ನಾಯಕನಾಗಲಿ… ಎಂದೆಲ್ಲಾ ಕೂಗಿದರು. ಅಜ್ಜನ ಊರಿನ ಮಕ್ಕಳಿಗೆ ಏನೆನಿಸಿತೋ ಏನೋ. ಹಾಗಾದರೆ ಅಜ್ಜನನ್ನೇ ಇಟ್ಟುಕೊಂಡು ನಾವು ಆಡುತ್ತೇವೆ ಅಂದರು. ಸಂಘಟಕರೂ ಮಕ್ಕಳ ಒತ್ತಾಯಕ್ಕೆ ಒಪ್ಪಿದರು. ಹೀಗೆ ಅಜ್ಜ ಊರಿನ ಮಕ್ಕಳ ತಂಡಕ್ಕೆ ಸೇರಿಕೊಂಡ. ಹುಚ್ಚು ಅಜ್ಜ ಏನು ಮಾಡುತ್ತಾನೋ ಎಂದು ಒಂದಿಷ್ಟು ಜನ ಹೇಳಿಕೊಂಡಿದ್ದೂ ಆಯಿತು.

  ಅಜ್ಜ ಮಕ್ಕಳನ್ನು ನಿಲ್ಲಿಸಿದ. ಕೈಕೈ ಹಿಡಿಸಿ ಜೋಡಿ ಮಾಡಿಸಿದ. ಎಲ್ಲರೂ ಒಂದೇ ಮನಸ್ಸಿನಿಂದ ಗೆಲುವು ಸಾಧಿಸೋಣ ಎಂದೆಲ್ಲಾ ಹೇಳಿದ. ಹೌದು ಒಂದು ರೀತಿಯ ಜಾದುವೇ ನಡೆದು ಹೋಯಿತು. ಅಜ್ಜನ ತಂಡ ಗೆದ್ದಿತು. ಆದರೆ ಅಜ್ಜ ಮಕ್ಕಳೊಂದಿಗಿದ್ದನೇ ಹೊರತು ಆಡಲಿಲ್ಲ. ನಂತರ ಅಜ್ಜನಿಗೆ ನೀಡಿದ ವಿಶೇಷ ಉಡುಗೊರೆ ಸೋತ ತಂಡಕ್ಕೆ ಕೊಟ್ಟು ಮತ್ತೆ ಮತ್ತೆ “ಪ್ರೀತಿಯಿಂದ ಆಡಿ, ಪ್ರೀತಿಯಿಂದ ಆಡಿ” ಎಂದಷ್ಟೇ ಹೇಳಿದ. ಆದರೂ ಜನ ‘ಅಜ್ಜನಿಗೆ ಮಕ್ಕಳ ಜೊತೆ ಆಡುವ ಹುಚ್ಚು… ತಾನು ಒಬ್ಬ ಅಜ್ಜ ಎನ್ನುವ ಅರಿವೂ ಇಲ್ಲ…’ ಎಂದೆಲ್ಲ ಹೇಳಿಕೊಂಡರು.

  ಅಜ್ಜ ರಸ್ತೆ ಬದಿಯಲ್ಲಿ ಗಿಡ ನೆಟ್ಟು ನೀರು ಹಾಕುತ್ತಿದ್ದ. ದೊಡ್ಡ ಮರದ ಮೇಲೆ ಹತ್ತಿ ಎರಡುಮೂರು ತಾಸು ಕೂತಿರುತ್ತಿದ್ದ. ಕೆರೆಗೆ ಹೋಗಿ ಥೇಟ ಮಕ್ಕಳಂತೆ ಕೆರೆಗೆ ಇಳಿದು ಈಜುತ್ತಿದ್ದ. ತಾವರೆ ಹೂವನ್ನು ತಂದು ಮಕ್ಕಳಿಗೆ ಕೊಟ್ಟು ನಗುತ್ತಿದ್ದ. ಮಕ್ಕಳು ಮನೆಗೆ ಬಂದರೆ ಕಥೆ ಹೇಳುತ್ತಿದ್ದ ಹಾಗೂ ಮಕ್ಕಳಿಗೆ ಕಥೆ ಪುಸ್ತಕ ನೀಡುತ್ತಿದ್ದ.

  ಗುಡ್ಡದ ತುದಿಯಲ್ಲಿ ಕುಳಿತು ಹಾಡು ಹೇಳುತ್ತ ಮೋಡಗಳನ್ನು ಕಂಡಾಗ ಕೋಲನ್ನು ಎತ್ತಿ ನಿಧಾನ ಹೆಜ್ಜೆ ಹಾಕುತ್ತಿದ್ದ. ಪಟಪಟನೆ ಮಳೆ ಹನಿ ಬೀಳುವಾಗ ಮೇಲಕ್ಕೆ ಮುಖ ಮಾಡಿ ಬಾಯ್ತೆರೆದು ನಿಲ್ಲುತ್ತಿದ್ದ. ಇದೆಲ್ಲ ನೋಡುತ್ತ ಎಷ್ಟೋ ಸಾರಿ ಮಕ್ಕಳು ಅವನ ಹಿಂದೇ ತಿರುಗುತ್ತಿದ್ದರು. ಗುಂಪು ಗುಂಪಾಗಿ ಅವನ ಮನೆಗೆ ಹೋಗಿ ಅಜ್ಜ ಅಜ್ಜ ಎಂದು ಕೂಗಿ ಕುಣಿಯತ್ತಿದ್ದರು. ಅದ್ಯಾವಾಗ ಮಾಡಿರುತ್ತಾನೋ ಗೊತ್ತಿಲ್ಲ. ಆಗಾಗ ಮಕ್ಕಳಿಗೆ ಸಿಹಿ ಉಂಡೆ ಹಂಚುತ್ತಲೇ ಇರುತ್ತಿದ್ದ!

 ಆದರೆ ಆ ಅಜ್ಜ… ಇಂದು ಮಕ್ಕಳು ಬಂದಾಗ ಅವನ ಮನೆಯ ಬಾಗಿಲಲ್ಲೇ ಮಲಗಿದ್ದ. ಹಾಗೆ ಶಾಂತವಾಗಿ ಕಣ್ಣು ಮುಚ್ಚಿ ನಿದ್ದೆ ಮಾಡಿದಂತಿದ್ದ. ಮಕ್ಕಳು ಅಜ್ಜಾ ಅಜ್ಜಾ ಎಂದು ಕೂಗಿದರೂ ಏಳಲಿಲ್ಲ… ಅಲುಗಾಡಲೂ ಇಲ್ಲ! ಮಕ್ಕಳಿಗೆ ಗಾಬರಿಯಾಗಿದೆ. ಅಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಯಾರನ್ನೋ ಕರೆದಿದ್ದಾರೆ. ಅವರು ಬಂದು ನೋಡಿದ್ದಾರೆ. “ಅಜ್ಜನ ಜೀವ ಹೋಗಿದೆ, ಅವನು ಇನ್ನು ಏಳುವುದಿಲ್ಲ” ಎಂದಿದ್ದಾರೆ. ಮಕ್ಕಳು ಮತ್ತೆ ಅಜ್ಜ ಅಜ್ಜ ಎಂದು ಕರೆದು ಅಲ್ಲಾಡಿಸಿದ್ದಾರೆ. ಅಷ್ಟರಲ್ಲಿ ಮತ್ತಷ್ಟು ದೊಡ್ಡವರು ಬಂದು ನೋಡಿ ಅಜ್ಜ ಸತ್ತಿದ್ದಾನೆ ಎಂದು ಹೇಳಿದ್ದಾರೆ. ಮಕ್ಕಳೆಲ್ಲ ಸುಮ್ಮನಾಗಿ ಕಣ್ಣೀರು ಹಾಕುತ್ತ… ಅಜ್ಜನನ್ನೇ ನೋಡುತ್ತಿದ್ದರೆ, ಮಕ್ಕಳಜ್ಜ ಸತ್ತ ಎಂದು ಒಂದಿಷ್ಟು ಜನ ಮಾತಾಡಿದ್ದಾರೆ. ಅಷ್ಟರಲ್ಲಿ ಶಾಲೆಯ ಮುಖ್ಯ ಗುರುಗಳೂ ಓಡೋಡಿ ಬಂದರು. “ಏನು, ಅಜ್ಜ ಇಲ್ಲ ಆದರಾ?” ಎಂದರು. “ನಿನ್ನೆ ಶಾಲೆಗೆ ಬಂದು ಮಕ್ಕಳಿಗಾಗಿ ಓದಲು ಸಾವಿರಾರು ಪುಸ್ತಕ ಕೊಟ್ಟರು. ಜೊತೆಯಲ್ಲಿ ನನ್ನಲ್ಲಿ ಹತ್ತು ಲಕ್ಷ ರೂಪಾಯಿ ಇದೆ, ಇದರಿಂದ ಮಕ್ಕಳಿಗೆ ಒಳಿತಾಗುವ ಕೆಲಸ ಮಾಡಿಸಿ ಎಂದು ಹೇಳಿ ಚೆಕ್ ನೀಡಿದ್ದರು. ಅವರ ಹತ್ತಿರ ಶಾಲೆಗೆ ಏನೆಲ್ಲಾ ಮಾಡಿಸೋಣ ಎಂದು ಚರ್ಚಿಸ ಬೇಕಿತ್ತು” ಎಂದು ಹೇಳುತ್ತ ಅಜ್ಜನ ಕಾಲು ಹಿಡಿದು ನಮಸ್ಕರಿಸುತ್ತಿದ್ದರೆ… ಮಕ್ಕಳು ಜನರೆಲ್ಲಾ ಅಜ್ಜನನ್ನೇ ನೋಡುತ್ತಾ ಸುಮ್ಮನಾಗಿದ್ದರು.

*****************

About The Author

19 thoughts on “ಹೀಗೊಬ್ಬ ಅಜ್ಜ”

  1. ಗಣಪತಿಭಟ್.

    ತಮ್ಮಣ್ಣ ಅಜ್ಜ ಬದುಕಿನ ಸಾರ್ಥಕತೆ ಪಡೆದ. ನನಗಂತೂ ಕಿಂದರಜೋಗಿಯಂತೆ ಕಂಡ…ಸರಳವಾಗಿ ಕತೆಹೇಳುವ ರೀತಿ ತುಂಬಾ ಇಷ್ಟವಾಯ್ತು.

    1. ಕಥೆ ತುಂಬಾ ಕುತೂಹಲದಿಂದ ಕೂಡಿದೆ.ತುಂಬಾ ಚೆನ್ನಾಗಿದೆ.ಅಭಿನಂದನೆಗಳು.

  2. ಚನ್ನಬಸವ ಪುತ್ತೂರು ಉಡುಪಿ

    ಕಥೆಯ ಆರಂಭದ ಪ್ರಸ್ತಾವನೆ ಸ್ವಲ್ಪ ದೀರ್ಘವೆನ್ನಿಸಿದರೂ ಮಕ್ಕಳ ಮನಸ್ಸಿನ ಅಜ್ಜನ ನಡವಳಿಕೆ ಇಷ್ಟವಾಯಿತು.ಆದರೆ ಕಥೆಯ ಅಂತ್ಯ ದುರಂತದಲ್ಲಿ ಮುಕ್ತಾಯಗೊಳಿಸಿ ದ್ದು ಬೇಸರವೆನ್ನಿಸಿತು.ಅಭಿನಂದನೆ ಮತ್ತು ಧನ್ಯವಾದಗಳು ಶುಭವಾಗಲಿ ಸರ್

  3. Shankar Halagatti

    ತ್ಯಾಗದ ಪರಿಕಲ್ಪನೆ ಮಕ್ಕಳಲ್ಲಿ ಪ್ರಭಾವಗೊಳಿಸಲು ಕಥೆ ಯಶಸ್ವಿಯಾಗಬಲ್ಲದು.

  4. ಜೀನಹಳ್ಳಿ ಸಿದ್ಧಲಿಂಗಪ್ಪ

    ಅಜ್ಜನ ಕಥೆ ಸೊಗಸಾಗಿದೆ.ಇಂತಹ ಅಜ್ಜಂದಿರು ಈಗಲೂ ಮಕ್ಕಳಜೊತೆ. ಪ್ರಭಾವಿ ಬೀರುವಷ್ಟು ಮನಸ್ಸು ಸೆಳೆಯುವುದಾದಲ್ಲಿ ಯಾರಿಗೆ ಖುಷಿಯಾಗದಿರದು? ತಮ್ಮಣ್ಣಬೀಗಾರ ಅವರಿಗೆ ಅಭಿನಂದನೆಗಳು.

  5. ಎಷ್ಟೋ ಅಜ್ಜಂದಿರು ಕಣ್ಣ ಮುಂದೆ ಹಾದು ಹೋದರು.. ಸೊಗಸಾದ ಕಥೆ ಸರ್..

  6. Shridhar Shet Shirali

    ಪ್ರೀತಿಯ ಬೀಗಾರ್ ಅವರೇ,
    ಸರಳ ಹಾಗೂ ಸುಂದರ ನಿರೂಪಣೆ ಯೊಂದಿಗೆ ನಿಮ್ಮ ಅಜ್ಜ ಮಕ್ಕಳ ಮನಗೆದ್ದಿದ್ದಾನೆ.
    ಅಭಿನಂದನೆಗಳು ಸರ್.

  7. Udaykumar Habbu

    ಅಜ್ಜನ ಕತೆ ತುಂಬಾನೆ ಇಷ್ಟವಾಯ್ತು. ಈ ಕತೆಯಲ್ಲಿ ಕಾಕಣ್ಣ ಗುಬ್ಬಣ್ಣಕತೆ ಇಲ್ಲ. ವಾಸ್ತವದ ನೆಲೆ ಇದೆ. ಇಂತಹ ಅಜ್ಜ ಮಕ್ಕಳಿಗೆ ಬಲು ಪ್ರೀತಿಯವನು ಆಗತಾನೆ.‌ಕತೆಯ ನಿರೂಪಣೆ ಮಕ್ಕಳಿಗೆಂದೆ ಬರೆದ ಆಕರ್ಷಕವಾಗಿದೆ

    1. ತಮ್ಮಣ್ಣ ಬೀಗಾರ

      ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು ಸರ್.

  8. ದೇವಿದಾಸ ಬಿ ನಾಯಕ ಅಗಸೂರು ಶಿರಸಿ

    ಕಥೆ ಓದುತ್ತ ಹೋದಂತೆ ನಮಗೆ ಸೆಳೆಯುತ್ತದೆ.ಮಕ್ಕಳಿಗೆ ಕೇಳಬೇಕೆ? ಕಥೆಯಲ್ಲಿ ಅಜ್ಜ ಎನ್ನುವ ಪದ ಹೇಳುತ್ತ ಹೇಗೆಲ್ಲ ನೋಡಿ ಜನ ಆಡಿದರೂ ತನ್ನ ಕೆಲಸ ಅಜ್ಜ ಬಿಡಲಿಲ್ಲ ಹಾಗಾಗಿ ಮಕ್ಕಳಿಗೆ ಆಪ್ತನಾದ.ಕ್ರಿಯಾಶೀಲರಿಗೆ ವಯಸ್ಸು ಮುಖ್ಯವಲ್ಲ ಮನಸು.ಸೊಗಸಾದ ಕಥೆ.ಅಭಿನಂದನೆಗಳು ಸರ್

Leave a Reply

You cannot copy content of this page

Scroll to Top