ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸಾವು…!

ಕಾಂತರಾಜು ಕನಕಪುರ

death tube

……ರವರು ತೀರಿಹೋದರು
ಹಾಗೆಂದು ಅವರು
ಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ
ಬಹು ಬೆಲೆಕೇಳುವ ಆಸ್ಪತ್ರೆಯ
ಮುಖ್ಯ ವೈದ್ಯರಿಂದ ಹೇಳಿಕೆ…!

ಮಾಧ್ಯಮಗಳಲಿ
…..ರವರು ಬಹು ಅಂಗಾಂಗಳ
ವೈಫಲ್ಯದ ಕಾರಣ ಮರಣ ಹೊಂದಿದರು
ಎಂಬ ಎಕ್ಸ್ಲೂಸೀವ್ ಸುದ್ದಿ…!

ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳ ತುಂಬಾ
…..ರವರ ಇರದಿದ್ದ ಗುಣಗಾನದ ಜಡಿಮಳೆ
ಜೊತೆಯಲ್ಲಿ…..ರವರ ಸಹವರ್ತಿಗಳಿಂದ ನೆನಪುಗಳ
ಮೆಲುಕು ಹಾಕುವಿಕೆಯ ಹಿಮ್ಮೇಳ…!

ನಮಗೆ ತಿಳಿದಿರುವಂತೆ
…..ರವರ ಬಹು ಅಂಗಗಳು ವಿಫಲಗೊಂಡು
….ರವರು ಸತ್ತು ಬಹುಕಾಲವಾಯಿತಲ್ಲ…!

ಅಧಿಕಾರದಮಲಿನಲಿ ತೇಲಾಡುತಿರುವಾಗ
ಸಂಕಟದ ಆರ್ತನಾದ ಕೇಳದ ….ರವರ
ಕಿವಿಗಳು ಕಿವುಡಾಗಿ ಬಹುಕಾಲ ಸಂದಿತಲ್ಲ…!

ಕಡು ಕಷ್ಟ ಪಡುವವರ ಕಡೆಗೆ
ಕಿರುನೋಟವನ್ನೂ ಹರಿಸದ …..ರವರ
ಕಣ್ಣುಗಳು ಇಂಗಿಹೋಗಿ ಬಹಳ ದಿನವಾಯಿತಲ್ಲ…!

ನೆಲ-ಜಲಕೆ ಕೊಳೆ ಹರಿಸುವ
ಕಡತಗಳಿಗೆ ಸಹಿಯನಿಕ್ಕುವಾಗಲೇ ….ರವರ
ಕೈಗಳು ಸ್ವಾಧೀನ ಕಳೆದುಕೊಂಡಿದ್ದವಲ್ಲ…!

ತನ್ನವರು-ಪರರೆಂಬ ಭೇದವಿರದೆ ಎಲ್ಲರನು ತುಳಿದು
ತಾನು ಬೆಳೆಯಲು ಮೆಟ್ಟಿಲುಗಳನ್ನಾಗಿಸಿದಾಗಲೇ
….ರವರ ಕಾಲುಗಳು ಮರಗಟ್ಟಿ ಹೋಗಿದ್ದವಲ್ಲ…!

ಮೂಗಿನಡಿ ನಡೆವ ಭ್ರಷ್ಟತನಕ್ಕೆ
ಕುಮ್ಮಕ್ಕು ನೀಡಿ ಖುಷಿಪಟ್ಟ ….ರವರ
ಹೃದಯವು ಸ್ಪಂದನೆ ನಿಲ್ಲಿಸಿ ವರ್ಷ ಹಲವು ಆದವಲ್ಲ…!

ಸ್ವಹಿತವನ್ನೇ ಸಮೂಹ ಹಿತವೆಂದು
ಜನರಿಗೆ ಮಂಕುಬೂದಿ ಸಿಂಪಡಿಸುವಾಗಲೇ ….ರವರ
ಮೆದುಳು ನಿಷ್ಕ್ರಿಯಗೊಂಡಿತ್ತಲ್ಲ…!

ಭಿನ್ನತೆಯ ಕಿಡಿಗಳಿಗೆ ತಿದಿ ಒತ್ತಿ ಬೆಂಕಿಮಾಡಿ
ಊರ ಬೇಯಿಸಿ ಉಸಿರುಗಟ್ಟಿಸಿದಾಗಲೇ
….ರವರ ಉಸಿರು ನಿಂತು ಹೋಗಿತ್ತಲ್ಲ…!

ಈವಾಗ…
ಕೇವಲ ಉಸಿರಾಟ
ಹೃದಯದ ಬಡಿತ
ನಿಂತುಹೋದ ಮಾತ್ರಕ್ಕೆ
….ರವರ ಸಾವು ಸಂಭವಿಸಿತು ಎಂದರೆ
ಖಂಡಿತ ಅದು ಸಾವಿಗೆ ತೋರುವ
ಅಗೌರವವಲ್ಲದೆ ಮತ್ತೇನು?!

*****

About The Author

22 thoughts on “ಸಾವು…!”

    1. ಸಮಕಾಲೀನ ಸ್ಪಂದನಾ ಬಂಡಾಯ ಧ್ವನಿ
      ಕಾವ್ಯಯಾನ ಶುಭವಾಗಲಿ ಕಾಂತ್

    1. ಕಾಂತರಾಜು ಕನಕಪುರ

      ಪ್ರೋತ್ಸಾಹಕ್ಕೆ ಧನ್ಯವಾದಗಳು…

  1. ತುಂಬಾ ಚೆನ್ನಾಗಿದೆ .ಬರೆಯುವ ಹವ್ಯಾಸವು ಇದೆ ಎಂದು ತಿಳಿಯಿತು..ಮುಂದುವರಿಸಿ.

    1. ಕಾಂತರಾಜು ಕನಕಪುರ

      ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು…

  2. ಅದ್ಭುತ ರಚನೆ ಸರ್.. ನಿಮ್ಮ ಬರವಣಿಗೆ ಬಹಳ ಅರ್ಥಪೂರ್ಣವಾಗಿದೆ. ಪದಗಳ ಜೋಡಣೆ ತುಂಬಾ ಚೆನ್ನಾಗಿದೆ. ನಿಮ್ಮ ಇನ್ನಷ್ಟು ಬರವಣಿಗೆಗಾಗಿ ಎದುರು ನೋಡುತ್ತಿರುತ್ತೇನೆ ಸರ್..

  3. ಕಾಂತರಾಜು ಕನಕಪುರ

    ತಮ್ಮ ಅಭಿಪ್ರಾಯ ಮತ್ತು ಪ್ರೋತ್ಸಾಹಹದಾಯಕ ನುಡಿಗಳಿಗೆ‌ ಧನ್ಯವಾದಗಳು….

  4. ವಾಸ್ತವದ ನೈಜ ಚಿತ್ರಣದ ಅನಾವರಣ ಸಾರ್…. ಅಭಿನಂದನೆಗಳು

  5. ಚಂದ್ರು ಪಿ ಹಾಸನ್

    ಅರ್ಥಪೂರ್ಣ ಸಾಲುಗಳು
    ಬರವಣಿಗೆಯಲ್ಲಿ ಚೆನ್ನಾಗಿ ಪಳಗಿದ ಕೈಗಳು
    ಅಭಿನಂದನೆಗಳು ಸರ್

    1. ಕಾಂತರಾಜು ಕನಕಪುರ

      ಬರವಣಿಗೆ ಉತ್ಸುಕತೆಯನ್ನು ಹೆಚ್ಚಿಸುವ ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು…

Leave a Reply

You cannot copy content of this page

Scroll to Top