ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮೂರು ದಿನಗಳ ಆಚೆ…

ಕವಿತಾ ಹೆಗಡೆ ಅಭಯಂ

ಅಣುವೊಡೆದು ಚೂರಾಗಿ,
ಪಿಂಡವೊಂದು ಬ್ರಹ್ಮಾಂಡ
ಸೇರಲೊಲ್ಲದ ತಪ್ಪಿಗೆ,
ನೀರಲ್ಲಿ ನೀರಾಗಿ,
ಮಲಿನದ ಹೆಸರಲ್ಲಿ ಹರಿದುಹೋದರೆ;
ರಜ ಸೋರಿದ್ದು ದೇಹಕ್ಕೆ,
ತಮ ಕವಿದದ್ದು ಮನಕ್ಕೆ.

೧. ಆಚೆ ಕೂತರೆ:
ಇಡೀ ಮನೆಯಲ್ಲಿ ಇವಳೊಬ್ಬಳೇ ಅಸ್ಪೃಶ್ಯೆ,
ಮೂರು ದಿನ ಯಾಚನೆಯೇ ಜೀವನ.
ಕೊಟ್ಟರುಂಟು …ತಿನ್ನು..ಉಡು.
ಯಾತನೆಯೇ ಜೀವನ.
ಕೂತು, ಮಲಗಿ ಬೇಸರಪಡು,
ಇಲ್ಲ, ಹೊರೆ ಹೊರಗೆಸಲ ಮಾಡು.
ಕತ್ತೆಯಾಗುವುದು ಲೇಸು!

೨. ಆಚೆಯಾಗಿ ಈಚೆಯಿದ್ದರೆ:
ರಿಯಾಯತಿಯಿಲ್ಲದ ನಿತ್ಯ ಕರ್ಮಗಳು,
ನೆಂಟರು, ಒಮ್ಮೊಮ್ಮೆ ದುಪ್ಪಟ್ಟಾಗುವ
ಬಿಡುವಿಲ್ಲದೆ ಬೆಂಬತ್ತುವ ಜವಾಬ್ದಾರಿಗಳು.
ಮಗುವಾದರೆ ಒಳ್ಳೆಯದಿತ್ತು!

೩. ಶಾಲೆಯ ಹುಡುಗಿ:
ನೂರು ಆಚರಣೆ – ಸ್ಪರ್ಧೆಗಳ
ಹೆಸರಲ್ಲಿ, ಎಳೆಜೀವವ ಕುಣಿಸಿ,
ಹೆಣಗಿಸಿ, ಯಾರು ಯಾರದೋ
ಕಾಣದ ಕಲ್ಲು ಮನ ರಂಜಿಸಲು ,
ತಾಲೀಮಿನಲಿ ಬತ್ತಿದ ಕಾಲು.
ನೋ ಸಿಂಕ್……..
ಕ್ಷಣ ವಿರಮಿಸಿದರೂ ಮೂದಲಿಕೆ-
“ಇಕಿನ ಮತ್ತ ಯದಕ್ಕೂ
ತಗೋಬ್ಯಾಡ್ರಿ..ಕೆಟ್ ಆಲಸಿ ಇದಾಳಿಕಿ…”
ಅವಕಾಶಗಳಿಗೆಲ್ಲ ಎಳ್ಳು ನೀರು!

೪. ಹೊಸ ನಟಿ:
ಸೇದಿ ಹೋಗುವ ಕಾಲು,
ಸಿಡಿವ ಸೊಂಟದ ಬಾಧೆ,
ಎಲ್ಲಿಂದ ಬಂದೀತು ಭಾವನೆ?
“ನಿಮ್ಮಂಥವ್ರೆಲ್ಲಾ ಯಾಕ್ರೀ ಬರ್ತೀರಾ
ಫೀಲ್ಡಿಗೆ?…..ಪ್ಯಾಕ್ ಅಪ್..”
ಮೊದಲ ಚಾನ್ಸಿಗೇ ಅರ್ಧಚಂದ್ರ ;
ಇಲ್ಲ ಅದೇ ಕಡೆಯ ಚಿತ್ರ!

೫. ರಿಯಾಲಿಟಿ ಶೋ ಸ್ಪರ್ಧಿ:
ಕನಿಷ್ಟ ಬಟ್ಟೆಯಲಿ,
ಲಾಗ ಹಾಕುವ, ಹತ್ತುವ,
ಹಾರುವ, ಕುಣಿವ, ಮಣಿವ
ಸವಾಲು…”ಆಗದು ಎನ್ನುವ
ಮಾತೇ ಆಡಕೂಡದು..”
ಮತ್ತೆ ಮತ್ತೆ ತೆಗೆದುಕೊಂಡ
ಹಿಂದೆ ಮುಂದೆ ಹಾಕುವ ಗುಳಿಗೆಗಳ
ಅಡ್ಡ ಪರಿಣಾಮ, ಅಕಾಲ ವೃದ್ಧಾಪ್ಯ,
ನಿಜದ ಮುದುಕಿಯಾದರೆ ಒಳ್ಳೆಯದಿತ್ತು!

೬. ಉದ್ಯೊಗಸ್ಥೆ:
ಪರಿಪೂರ್ಣೆಯಾಗುವ ತವಕ,
ಸಮಳೆನಿಸಿಕೊಳುವ ತುಡಿತ,
ಮೂರರ ಚಕ್ರದಲಿ ಮಾತಿಲ್ಲ.
ಗಿರಗಟ್ಟೆ ತಿರುಗುವ ಕರ್ಮದಲಿ
ಕಾರಣ ಕೊಡುವ ಹಾಗಿಲ್ಲ.
“ಪ್ರೆಸೆಂಟೇಶನ್ ತೃಪ್ತಿಕರವಾಗಿಲ್ಲ,
ಸಮಯಕ್ಕೆ ಸಬ್ಮಿಟ್ಟಾಗಿಲ್ಲ…”
ನಿವೃತ್ತಿ ದಿನಾಂಕ ಯಾವಾಗ!

ಬಾಧೆಗಳ ಅಡಗಿಸಿದ ಹುಸಿ ನಗು
ಎದೆಯಲ್ಲಿ ಭಾವೋದ್ವೇಗದ ಅಳು.
ಹಸಿ ಹಸಿ ಸುಳ್ಳು ರಜೆಯ ಜೀವಕೆ
ಅಷ್ಟು ಬೇಗ ನಿಜದ ರಜೆ ಸಿಗುವುದೆ?
ಮುಗಿದ ನಿರಾಳತೆ ಆರುವುದರೊಳಗೆ
ಮತ್ತೆ ಬಂದೇ ಬಿಟ್ಟಿತು. ಮೂರಕ್ಕೆ
ನೂರುಗಳ ನೋಟು ಪಡೆಯುತ ಅಣಕಿಸುತ.
ಮೂರು ದಿನಗಳ ಆಚೆಯೋ ಈಚೆಯೋ;
ಹುಡುಕಬೇಕಿದೆ ಹೊಸ ಬದುಕ –
ಹೊಸ ಬೆಳಕ…

*************

About The Author

Leave a Reply

You cannot copy content of this page

Scroll to Top