ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಎಷ್ಟೊಂದು ಚಂದದ

ಭಾವಚಿತ್ರಗಳು

ಡಾ. ಧನಂಜಯ ಕುಂಬ್ಳೆ

firewood burning

ಎಷ್ಟೊಂದು ಚಂದದ ಭಾವಚಿತ್ರಗಳು
ನೋಡುವಾಗ ಹೊಟ್ಟೆ ಉರಿಯುತ್ತದೆ

ಬದುಕಿಡೀ ಒದ್ದಾಡಿ ಮನೆ, ಮಕ್ಕಳು, ಸಂಸಾರ ಎಂದುಕೊಂಡು
ಈಸುತ್ತಾ ಒಂದು ಸ್ಥಿತಿಗೆ ಬಂದು
ಕಾಲು ನೀಡಿ ಮೊಮ್ಮಕ್ಕಳ ತಿದ್ದಿ, ತೀಡಿ, ಆಟವಾಡಿ
ಇನ್ನೊಂದ್ಹತ್ತ್ತು ವರ್ಷ ಹಾಯಾಗಿರಬೇಕಾದ ಅಜ್ಜ ಅಜ್ಜಿಯರು

ಅನುಭವದಿ ಗಟ್ಟಿಗೊಳ್ಳುತ್ತಾ ನಿಂತ ನೆಲದಲ್ಲೇ ಬೇರು ಬಿಡುತ್ತಾ
ಇನ್ನರ್ಧ ವಯಸ್ಸನ್ನು ಸಾಧನೆಗೆ ಮುಡಿಪಿಡಬೇಕಾಗಿದ್ದ ವಯಸ್ಕರು

ನಿತ್ಯ ಜ್ವರಕ್ಕೆ ಮದ್ದು ಕೊಡುತ್ತಿದ್ದ ಡಾಕ್ಟ್ರು,
ತಾಯಂತಿದ್ದ ದಾದಿ
ಜಗತ್ತಿನೆತ್ತರದ ಕಟ್ಟಡದ ತುದಿಯ ಮನೆವಾಸಿ
ಏನೂ ಆಗಲ್ಲ ಎಂದಿದ್ದ ಮಂತ್ರಿ
ಎಲ್ಲರ ಭಾವಚಿತ್ರಗಳು ಒಂದೇ ಪುಟದಲ್ಲಿ ಸಾಲಾಗಿ
ದಿನವೂ ರಾಶಿ ರಾಶಿ ಬರುವಾಗ

ಹೊಟ್ಟೆ ಚುರುಗುಟ್ಟುತ್ತದೆ
ಇರುವವರನ್ನು ನೆನೆದು
ಅಜ್ಜಿ ಕತೆ, ಅಜ್ಜನ ಜೊತೆ
ಶಾಲೆ ಬಾಲ್ಯ ಕಳಕೊಂಡ ಮಕ್ಕಳು
ಮೊಬೈಲಲ್ಲೇ ಸಮಯ ದೂಡುವ ಯುವಕರು
ಟಿವಿ ನೋಡಿ ಬಡಿತ ಹೆಚ್ಚಿಸಿಕೊಳ್ಳುವವರು
ಗೋಡೆಗೆ ಪಾಠ ಮಾಡುವ ಗುರುಗಳು

ಚಚ್ಚಬೇಕೆನಿಸುತ್ತದೆ
ಊರಿಗೆ ಬಿದ್ದ ಬೆಂಕಿಯಲಿ ಬೀಡಿ ಸೇದುವವರ
ಸಾಲು ಸಾವಿನ ಕೆನ್ನಾಲಿಗೆ ಎದುರು ಪಿಟೀಲು ನುಡಿಸುವರ
ಎಡ ಬಲಗಳಲಿ ಕತ್ತಿ ಮಸೆಯುತ್ತಾ ರಕ್ತ ಕಕ್ಕುವವರ
ಸ್ಮಶಾನದ ಬಾಗಿಲಲಿ ಸ್ವಾಗತ ಕಮಾನು ಇಕ್ಕುವವರ

ಮೆಚ್ಚಬೇಕೆನಿಸುತ್ತದೆ
ತಬ್ಬಲಿಗಳಿಗೆ ಹಾಲೂಡುವ ಎದೆಗೆ
ಕೊಟ್ಟದ್ದರ ಲೆಕ್ಕಕೊಡದ ಕೈಗಳಿಗೆ
ಮನೆಯೆದುರು ಮರ ನೆಟ್ಟ ಹಿರಿಯರಿಗೆ

*******************************

About The Author

19 thoughts on “ಎಷ್ಟೊಂದು ಚಂದದ ಭಾವಚಿತ್ರಗಳು”

      1. Vikram Kanthikere

        ಚಂದದ ಕವಿತೆ. ಭಾವಚಿತ್ರಗಳ ಜೊತೆ ಭಾವಯಾನ, ಕಾವ್ಯಯಾನ, ಜೀವನ ಪಯಣ.

  1. ಕವಿತೆಯ ಭಾವ…ಕವಿಯ ಮನದ ಚಿತ್ರ ಹೃದಯ ತಟುತ್ತದೆ

  2. Madhukumar K.R

    ಸಾಮಾನ್ಯ
    ಕವಿತೆಗಳಮೇಲೆ ಕಣ್ಣೋಡಿಸುವಾಗ ಮನಸ್ಸು ಸೌಂದರ್ಯವನ್ನೇ ಹುಡುಕುತ್ತಿರುತ್ತದೆ… ಇಲ್ಲಿ ಅದಾಗದೇ ಮನ ಭಾವಭಾರಕ್ಕೆ ತುತ್ತಾಯಿತು… ಮನುಕುಲದ ಎದುರಿಸುತ್ತಿರುವ ಸಂಕಷ್ಟದ ದಿನಗಳನ್ನು ವ್ಯಕ್ತಿ ದೃಷ್ಟಿಯಿಂದ ಕಾಣಿಸುವ ರೀತಿ ಒಳಗೊಂಡ ವಸ್ತು ನಮ್ಮೊಡನೆ ಕೂತು ಮಾತಾಡುತ್ತದೆ….

  3. ಎಷ್ಟೊಂದು ಸೊಗಸಾಗಿದೆ ಸಾಲುಗಳು..!!

    ಅಭಿನಂದನೆಗಳು ಕುಂಬ್ಳೆ ಸಾರ್…

    ಹರೀಶ್ ಶಾಸ್ತ್ರಿ

  4. ಕೊರೋನಾ ಕಾಲದ ಚಿತ್ರಗಳು ವಾಸ್ತವದ ದೃಶ್ಯಗಳಾಗಿ ಮೂಡಿಬಂದಿವೆ.

  5. Annapoorna. N. K

    ಎಷ್ಟೊಂದು ಅರ್ಥಗರ್ಭಿತವಾಗಿದೆ.. ಸೊಗಸಾದ ಕವಿತೆ..

  6. ಧನಂಜಯ ಕುಂಬ್ಳೆ,
    ಸುಂದರ ಭಾವಚಿತ್ರಗಳ ಆಳದಲ್ಲಿರುವ ಸಂಕಟ ವಿಷಾದಗಳು ವಾಸ್ತವವನ್ನು ಸಶಕ್ತವಾಗಿ ಧ್ವನಿಸುತ್ತವೆ.ಅಭಿನಂದನೆಗಳು. -ಮೋಹನ ಕುಂಟಾರ್

Leave a Reply

You cannot copy content of this page

Scroll to Top