ಗಜಲ್
ರತ್ನರಾಯಮಲ್ಲ


ಭಯ ಪಡಿಸುವ ಪ್ರೀತಿಲಿ ಕಾಳಜಿಯಿದೆ ಅರಿಯಬಾರದೆ..
ನಗಿಸುವ ಪ್ರೇಮದಲಿ ಕಣ್ಣೀರಿದೆ ಕಂಬನಿಯ ಒರೆಸಬಾರದೆ..
ಉಸಿರುಗಳ ನಡುವೆ ತುಸುವೆ ಸಂಪರ್ಕ ಕಡಿತವಾಗಿದೆ ಇಂದು
ಸೇತುವೆಯ ನಿರ್ಮಿಸಲು ನೀನು ಒಂದ್ಹೆಜ್ಜೆ ಮುಂದಿಡಬಾರದೆ..
ಪರಪಂಚದ ಕಂಬನಿಗೆ ನನ ಹೃದಯವೆ ತಂಗುದಾಣವಾಗಿದೆ
ನೀನೊಮ್ಮೆ ಆಲಂಗಿಸಿ ಬಿಸಿಯುಸಿರಿನಲಿ ಸಂತೈಸಬಾರದೆ..
ಕೊಲ್ಲುತಿದ್ದ ಕೊರಗುಗಳು ನಿನ ಮುಂದೆ ಶರಣಾಗಿವೆ ಸಾಕಿ
ಮುಗುಳು ನಗೆಯಲಿ ತೊಳಲಾಟವನು ತಡೆಯಬಾರದೆ..
ನೀನಿಲ್ಲದೆ ‘ಮಲ್ಲಿ’ಯ ಧ್ವನಿಯು ಉಸಿರುಗಟ್ಟಿ ಸಾಯುತಿದೆ
ಮೌನದಲಿ ಮಾತಾಗಿ ಬಂದು ಮುತ್ತಿನ ಮಳೆ ಸುರಿಸಬಾರದೆ
*******************




Hrudhangama gazal