ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅರಳುವುದೇಕೋ.. ?ಬಾಡುವುದೇಕೋ

ಕವಿತೆ ಅರಳುವುದೇಕೋ.. ?ಬಾಡುವುದೇಕೋ ಲಕ್ಷ್ಮೀ ಮಾನಸ ಕಾಲದ ಗಾಲಿಯುಉರುಳುತ್ತಾ,ಜವದಿಂದೆಸೆದಅಗಣಿತ ಪ್ರಶ್ನೆಗಳಸರಮಾಲೆಯಲ್ಲಿ,ಮೃದು ಹೃದಯ ಸಿಲುಕಿ,ಅರಳಿ ಮುದುಡುವುದುರಅರ್ಥ ಅರಿಯಲು,ಕಾಲವನ್ನೇ ಮರೆಯುತಿದೆ….. ಕುಸುಮಗಳ ಸರಮಾಲೆಯಲ್ಲಿ,ಸುಮಗಳಿಂದು  ನಲುಗುತಿವೆ,ನೀರವ ಮೌನದಲ್ಲಿ….,ಬಿಸಿಲು -ಮಳೆಯೆನ್ನದೆ,ಬಾಳ ಕೊನೆಯನರಿಯದೆ…… ತಾನಾಗಿಯೂ ಅರಳಲಿಲ್ಲ,ತಾನಾಗಿಯೂ ಮುದುಡಲಿಲ್ಲ,….,ಅರಳುವ ಆಸೆಯೂ ಇರಲಿಲ್ಲ,ಮುದುಡುವ ಬಯಕೆಗೂ ಬರವಿಲ್ಲ…, ಬಿಡಿಸಲಾಗದ ಗಂಟುಗಳಲ್ಲಿ,ಉತ್ತರವಿಲ್ಲದ ಪ್ರಶ್ನೆಗಳಲ್ಲಿ,ಪ್ರಶ್ನೆಗಳಿಗೇ ಪ್ರಶ್ನೆಯಾಗಿ,ಬಾಳುತಿರುವ  ಈ ಕುಸುಮಅರಳುವುದೇಕೋ… ?ಮುದುಡುವುದೇಕೋ… ? ************************

ಅರಳುವುದೇಕೋ.. ?ಬಾಡುವುದೇಕೋ Read Post »

ಇತರೆ

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ

ಜನ್ಮದಿನಾಚರಣೆ 11/04/2021 ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ [01:48, 11/04/2021] +91 95382 66593: ಭಾರತದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಜ್ಯೋತಿಬಾ ಪುಲೆ.ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಧರ್ಮ, ಪಂಥ, ಸಂಪ್ರದಾಯ ಈ ರೀತಿಯ ಕಟ್ಟುಪಾಡುಗಳಿಗೆ ಜೋತುಬೀಳದೆ,ಮಾನವ ಧರ್ಮವನ್ನು ಆಧರಿಸಿ ನಡೆಯಬೇಕೆಂದು ಅಪೇಕ್ಷೆ ಪಟ್ಟವರು. ಜ್ಯೋತಿಬಾ ಪುಲೆ ಅವರು 11/04/1827 ರಂದು ಮಹಾರಾಷ್ಟ್ರದ ‘ಕಟಗುಣ’ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್,ತಾಯಿ ಚಿಮಣಾಬಾಯಿ. ಜ್ಯೋತಿಬಾ ಅವರು ಇನ್ನೂ ಚಿಕ್ಕವರಿದಾಗಲೇ ತಾಯಿ ಚಿಮಣಾಬಾಯಿ ಅವರು ಸ್ವರ್ಗಸ್ತರಾಗುತ್ತಾರೆ.ನಂತರ ಜ್ಯೋತಿಬಾ ಅವರನ್ನು ಸಾಕಿ ಸಲುಹಿದ್ದು ತಾಯಿ ಚಿಮಣಾಬಾಯಿ ಅವರ ಸೋದರಿ ಸಗುಣಾಬಾಯಿ ಅವರು.ಸಗುಣಾಬಾಯಿ ಅವರು ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆ ಎಂಬ ಬೆಳಕಿನ ಜ್ಞಾನವನ್ನು ಬಿತ್ತುತ್ತಾರೆ. ಜಾತಿಯ ಕಟ್ಟಲೆಗಳಿಂದ ಮಡುಗಟ್ಟಿದ್ದ ಸಮಾಜದಲ್ಲಿ ಶಿಕ್ಷಣವೆಂಬ ಸೇವೆಯ ಮೂಲಕ ಸಂಪೂರ್ಣ ಭಾರತದಲ್ಲಿ ಪ್ರಗತಿಪರ ನಡೆಯನ್ನು ಹುಟ್ಟುಹಾಕಿದ ಜ್ಯೋತಿಬಾ ಫುಲೆ ಅವರು,ಅಂಬೇಡ್ಕರರವರಿಗೂ ಹಲವು ವಿಚಾರಗಳಲ್ಲಿ ಆದರ್ಶವಾಗಿದ್ದರು.ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪ್ರದಾಯದ ಹೆಸರಿನಲ್ಲಿ ನಿಷೇಧಿಸಿದ್ದ ಕಾಲದಲ್ಲಿ ಜ್ಯೋತಿಬಾರವರು ತನ್ನ ಪತ್ನಿ ಸಾವಿತ್ರಿಭಾಯಿ ಪುಲೆ ರವರಿಗೆ ಅಕ್ಷರ ಕಲಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ರೂಪಿಸಿದ ಮಹಾನ್ ಚೇತನ. ಆ ಕಾಲದಲ್ಲಿ ಮೇಲ್ಜಾತಿಯವರಿಗೆ ಮಾತ್ರ ಶಿಕ್ಷಣವೆಂಬ ಅನಿಷ್ಟ ಪದ್ಧತಿ ಇತ್ತು.ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಶಾಲೆಗಳಿದ್ದವು.ಆದರೆ ಆ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ಕಲಿಯುವ ಅವಕಾಶ ಇತ್ತು, ಆ ಎಲ್ಲಾ ಕಟ್ಟಲೆಗಳನ್ನು ಮೀರಿ 1848 ರಲ್ಲಿ ಪುಣೆಯಲ್ಲಿ ಶ್ರೀ ಬಿಡೇಯವರ ಭವನದಲ್ಲಿ ಹೆಣ್ಣು ಮಕ್ಕಳ ಶಾಲೆ ಆರಂಭಿಸಿ ಭಾರತದಲ್ಲಿ ಪ್ರಪ್ರಥಮ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ ಕೀರ್ತಿಯನ್ನು ಪುಲೆ ದಂಪತಿ ಪಡೆದರು.ಬಡವ,ಶ್ರೀಮಂತ, ಜಾತಿ ಧರ್ಮಗಳ ಬೇಧ ಮಾಡದೇ ಸಕಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದರು ಪುಲೆ ದಂಪತಿಗಳು,ಆ ಕಾಲದಲ್ಲಿ ಜ್ಯೋತಿಬಾ ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು.ಆದರೆ ಅವರ ಇಚ್ಛೆ,ಗುರಿ ಒಂದೇ ಆಗಿತ್ತು ಸಮಾಜ ಸೇವೆ.ಶಿಕ್ಷಣದ ಕ್ರಾಂತಿಯ ಜೊತೆಗೆ ಜ್ಯೋತಿಬಾ ಪುಲೆ ಅವರು ವಿಧವೆಯರ ಮಕ್ಕಳಿಗಾಗಿ ಅನಾಥ ಶಾಲೆ,ವಿಧವಾ ವಿವಾಹ, ಸತ್ಯಶೋದಕ ಸಮಾಜದ ಸ್ಥಾಪನೆ ಮಾಡಿ ಬಸವ ಮಾರ್ಗದಲ್ಲಿ ಸಾಗಿದ ಮಹಾನ ಚೇತನ ಜ್ಯೋತಿಬಾ ಪುಲೆ. ಇಂದಿನ ಯುವ ಸಮಾಜ ಪುಲೆ ದಂಪತಿಗಳ ಆದರ್ಶಗಳನ್ನ ಪಾಲಿಸಿಕೊಂಡು ಹೋಗಬೇಕಾಗಿದೆ.ನಟ ನಟಿಯರ ಜನ್ಮದಿನದವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಕಾರ್ಯದಲ್ಲಿ ಬಹುತೇಕ ಇಂದಿನ ಯುವ ಸಮಾಜ ಮುಳುಗಿದೆ.ಆದರೆ ಈ ರೀತಿಯ ಮಹಾನ ಚೇತನಗಳು ಯುವ ಸಮಾಜಕ್ಕೆ ನೆನಪಾಗದೆ ಇರುವುದು ವಿಪರ್ಯಾಸ,ಪುಲೆ ದಂಪತಿಗಳ ಜನ್ಮದಿನವನ್ನು ಅದ್ದೂರಿಯಾಗಿ ಮಾಡದೇ ಇದ್ದರೂ ಅವರ ಜೀವನದ ಕುರಿತು ತಿಳಿದುಕೊಂಡು ಅವರು ಸಾಗಿದ ಮಾರ್ಗದಲ್ಲಿ ಒಂದಿಷ್ಟಾದರೂ ಸಾಗುವ ಮನಸ್ಸು ನಾವುಗಳು ಮಾಡಬೇಕಿದೆ. ************************************** ಹೊರನಾಡ ಕನ್ನಡಿಗ ಪ್ರಕಾಶ (ಇಂದೋರ್- ಮಧ್ಯಪ್ರದೇಶ)

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ Read Post »

ಇತರೆ

ನುಡಿ ಕಾರಣ

ಧನ ಸಂಪತ್ತು ಕೆಲವರಿಗೆ ಇರಬಹುದು,ಕೆಲವರಿಗೆ ಇರಲಿಕ್ಕಿಲ್ಲ.ಒಬ್ಬನು ಸಿರಿವಂತ ನಾಗಬೇಕಾದರೆ ಒಬ್ಬ ಬಡವನಾಗುತ್ತಾನೆ.( ರಾಜಕಾರಣಿ ಶ್ರೀಮಂತನಾದಾಗ,ಆದಾಯ ಕರ ಸಲ್ಲಿಸುವವನು ಬಡವನಾಗುವುದು

ನುಡಿ ಕಾರಣ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರುನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ ಸರಿಸದಿರು ರಸಿಕತೆ ರಂಗೇರಿದಾಗ ಕೋಣೆಯ ದೀಪ ನಾಚಿ ಮುಖ ಮುಚ್ಚಿಕೊಳ್ಳುತ್ತದೆಅರುಣಾ ನೀ ಕೊಟ್ಟ ಹಿಡಿ ಪ್ರೀತಿ ಉಣ್ಣಬೇಕೆಂದಿರುವೆ ದೂರ ಸರಿಸದಿರು *******************************************

ಗಜಲ್ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಈಗ ಬಸವಣ್ಣನವರು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳಿಗೆ ಈ ಎರಡು ಹೆಸರುಗಳನ್ನು ಪ್ರಶ್ನಾರ್ಥಕವಾಗಿಯೇ ಬಳಸಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಹೀಗೆ ಪಟ್ಟಿ ಮಾಡಿಯೇಬಿಡಬಹುದು.

Read Post »

ಕಾವ್ಯಯಾನ

ನಿನ್ನ ಪಾಪದ ಹೆಣ

ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು ಹೇಳಿಬಿಡುತ್ತೇನೆ ಎಲ್ಲವೀಗಬಟಾಬಯಲಲ್ಲಿ ನಿಂದುನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ ಸಾಕು ಸಾಕಾಗಿದೆನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ. ಮತ್ತಿಂದುಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲುಮಾಧ್ಯಮಗಳಲಿಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ ಹಳೆಯದು,ಹೊಸದಾಗಿ ಹೊಸೆದ ಹಳೆಯಶಾಸ್ತ್ರಗಳ ಧಿಕ್ಕರಿಸಿ ಹೇಳಿಬಿಡುವೆನಾನೀಗ ಬರಿಯ ಸಂತ್ರಸ್ತೆಯಲ್ಲ,ಶಸ್ತ್ರಾಸ್ತ್ರ ಸಜ್ಜಿತೆಮುರಿದುಬಿಡುವೆ ಎಲ್ಲ ಮುರಿದುಬಿಡುವೆ. ಕಾಡುಮೇಡಲಿ ಅಲೆದೆ ಕಾಡೆಂದರಿಯದೆಕಾಡು ಪ್ರಾಣಿಯೆ ನಿನ್ನ ಜಾಡನರಿಯದೆ,ಸುಖವುಂಡು ನೋವಿತ್ತು ನೀಹರಿದು ಮುಕ್ಕಿಬಿಟ್ಟೆ ; ನೆಲಕೆ ಒತ್ತಿಬಿಟ್ಟೆ ಬರೆದ ಶಾಸ್ತ್ರಗಳಲಿ ನೆಯ್ದ ಸೂತ್ರಗಳಲಿನಿಲ್ಲಿಸಿಬಿಟ್ಟೆ ಎನ್ನ ಬಾಗಿಲ ಹೊರಗೆ ಜಾಣತನದಲಿನದಿ ತಟಾಕಗಳಲಿ ನಾಗರೀಕತೆಯ ಕಟ್ಟಿದೆನೆಂಬ ಬಿಮ್ಮಲಿಬುವಿ ನದಿಗಳ ಬಳಸಿ ನನ್ನ ಹೆಸರಿಟ್ಟುಆರತಿಯ ಜ್ವಾಲೆಯಲಿ ಕರಕಾಗಿಸಿಟ್ಟೆ ಜಗದ ಉದ್ದಗಲ ಅಂಗುಲಂಗುಲ ಲಂಗುಲಗಾಮಿಲ್ಲದೆ ಹೇಸಿಗೆಯ ಮಾಡಿಮನಸು ಕೊರಾಡಾಗಿಸಿನನ್ನ ಆಳ ಹೊರಟೆ, ಮೇಲಾಳಾಗಿಆಳಕೆ ಅದುಮಿ ಆಳ ಮಾಡಿಬಿಟ್ಟೆ ನೀನು ಮಾಡಿದಯುದ್ದಗಳಿಗೆ ಶಸ್ತ್ರಾಸ್ತ್ರವೆನ್ನ ಮಾಡಿದೆಫಿರಂಗಿಗಳ ಗುಂಡುಗಳಲಿ ಸೀಳಿಬಿಟ್ಟೆಬಸಿದ ರಕ್ತವ ಕ್ಯಾನ್ವಾಸಿನಲ್ಲಿ ಚೆಲ್ಲಿ ನವ್ಯಕಲೆಯೆಂದು ಸಾರಿಬಿಟ್ಟೆ ಎದೆಯ ನುಡಿಯನು ಎರಡಾಗಿಸಿಒಳಾಂಗಳದ ಭಾನಗಡಿಯ ಬಚ್ಚಿಟ್ಟೆನನ್ನ ಚಿಟ್ಟೆಯೆಂದು ಬಿಟ್ಟೆ. ನಾನಿನ್ನು ಬಿಡುವುದಿಲ್ಲನನ್ನ ಕೈ ಕಾಲಿಗೆ ಕೋಳವಿಕ್ಕಲುಪುಕಪುಕಿಸಿಸುವ ನಿನ್ನ ಪುಕ್ಕಲುತನಕೆಸೋಗದಂಬರ ತೊಡಲುಇನ್ನು ಆಗಲಾರೆ ನಿನ್ನ ತೆಕ್ಕೆಯ ಮುಳ್ಳುಗಳಿಗೆ ಮಗ್ಗುಲು ಹಿಮಾಲಯದ ತುದಿಗೆ ಹೋಗುವೆಕನ್ಯಾಕುಮಾರಿಯ ಅಂಚಿಗೆ ಸಾಗುವೆಕೂಗಿ ಹೇಳುತ್ತೇನೆ, ಬೀಳಲಾರೆ ಸಂಚಿಗೆನೋವುಗಳ ಎದೆಯಲ್ಲಿಟ್ಟುದೈನ್ಯತೆಯ ಬೇಡಿನಿನ್ನ ಅನುಕಂಪಿತ ಕೂಸು ನಾನಾಗಲಾರೆಶಸ್ತ್ರವೆತ್ತುವೆ,ನಿನ್ನ ಪಾಪದ ಹೆಣವಾದರೂ ಸರಿಯೆ, ಸಂತ್ರಸ್ತೆಯಾಗಲಾರೆ. **************************************************

ನಿನ್ನ ಪಾಪದ ಹೆಣ Read Post »

ಇತರೆ

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಲೇಖನ ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ ಅಂಜಲಿ ರಾಮಣ್ಣ ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮೊದಲ ಬಾರಿಗೆ ಮುರಿದು ಈ ಬಾರಿ  11 ಗಂಟೆಗೆ ಮತ ಚಲಾವಣೆಗೆ ಹೊರಟೆ. ಚಾಲೀಸಾ ಪಠಣೆ ಮುಗಿದರೂ ಹನುಮಂತ ಪ್ರತ್ಯಕ್ಷ ಆದರೂ ಮುಗಿಯದಷ್ಟು ಬಾಲದಷ್ಟುದ್ದದ ಸಾಲಿತ್ತು. ಬರೋಬರಿ 1 ಗಂಟೆ ನಲವತ್ತು ನಿಮಿಷದ ನಂತರ ಮತಹಾಕುವ ಕೋಣೆಯ  ಎದುರು ಸಾಲಿನಲ್ಲಿ ನಿಂತಿದ್ದೆ .ಪೊಲೀಸಪ್ಪನೊಬ್ಬ ಸರಬರ ಬಂದು ಬಾಗಿಲಲ್ಲಿ ನಿಂತ . ಐದು ನಿಮಿಷಕ್ಕೆ ತಂದೆಯೊಬ್ಬ ಮಗಳನ್ನು ಕರೆದುಕೊಂಡು ಬಂದು ಅದೇ ಪೊಲೀಸ್ಗೆ “ನೋಡಿ ತಪ್ಪು ಸಾಲಲ್ಲಿ ನಿಂತಿದ್ದ್ವಿ ಈಗ ಗೊತ್ತಾಯ್ತು ಇದು ನಮ್ಮ ಸಾಲು ಅಂತ” ಎಂದು ಹೇಳುತ್ತಾ ನಡುವೆ ಮಗಳನ್ನು ತೂರಿಸಲು ಪ್ರಯತ್ನ ಪಡುತ್ತಿದ್ದನ್ನು ಕಂಡು ತುಂಬಾ ಮೇಲು ದನಿಯಲ್ಲಿ ಆ ಹುಡುಗಿಗೆ ಸರತಿಯಲ್ಲಿಯೇ ಬರಲು ಹೇಳಿದೆ. ಅವರಿಗೆ ಅಲ್ಲಿದ್ದ ಪೊಲೀಸಪ್ಪನೇ ನೆಂಟನಾದ್ದರಿಂದ ಅವರುಗಳನ್ನು ಒಳ ತೂರಿಸಲು ಆತನೂ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದ. ನನ್ನ ಕೋರಿಕೆಗೆ ಅವರುಗಳ ಮಾತು , ಹುಡುಗಿಯ ದಡ್ಡ ಮೌನ ಎಲ್ಲವೂ ಸೇರಿತ್ತು. ಆತ “ಆಯ್ತು ಬಿಡಿ ನೀವೇ ವೋಟ್ ಆಕೋಳಿ ನನಗೆ ವೋಟ್ ಆಕದಿದ್ದರೆ ಪ್ರಾಣ ಓಗಲ್ಲ” ಎಂದ. “ಅಪ್ಪ ತಂದೆ ವೋಟ್ ಹಾಕದಿದ್ದರೆ ನಿನ್ನ ಪ್ರಾಣ ಹೋಗಲ್ಲ ಆದರೆ ನನ್ನದು  ಹೋಗತ್ತಪ್ಪಾ” ಎಂದು ಹೇಳಿ ಅಂತೂ ಸರತಿ ಸಾಲಿನ ಕೊನೆ ಸೇರಿಸಿದೆ ಆ ಅಪ್ಪ ಮಗಳನ್ನು. ಇದು ಹೆಚ್ಚುಗಾರಿಕೆಯಲ್ಲ . ಆದರೆ ನಾ ವಿರೋಧ ವ್ಯಕ್ತ ಪಡಿಸಿ ಗೆದ್ದ ಮೇಲೆ ಅಲ್ಲಿದ್ದ ಒಂದಷ್ಟು ಹೆಂಗಸರು Thank you  ಎಂದದ್ದು ಒಂದು ಪಾಠ. ದನಿ ಎತ್ತಬೇಕು ಎನ್ನುವ ಮೆದುಳಿದ್ದರೂ “ಶ್ ಸೈಲೆನ್ಸ್” ಎನ್ನುವ ಗುಡುಗಿಗೆ ಬಲಿಯಾಗುವ ಹೆಂಗಸರ ಪರವಾಗಿ ಮಾತಾಗಲಾದರೂ ಮತ ಹಾಕಬೇಕು. ಬಾಲ್ಯ ಕಳೆಯುತ್ತಿದ್ದ ಕಾಲದಲ್ಲಿ ನನ್ನ ಅಜ್ಜಿ ತಾತನ ತಲೆ ಮಾರಿನವರು ನಮ್ಮ ಹಾಗೆ ಕೈಕೈ ಹಿಡಿದುಕೊಂಡು ಮುಸಿಮುಸಿ ನಗುತ್ತಾ, ಕಣ್ಣಲ್ಲೇ ಕಾಮಿಸುತ್ತಾ, ಮಾತುಗಳಲ್ಲಿ ಪ್ರೇಮಿಸುತ್ತಿದ್ದವರಲ್ಲ. ಯಾರು ಗಂಡ ಆತನ ಹೆಂಡತಿ ಯಾರು ಎನ್ನುವುದು ಕೇವಲ ಹೆಸರುಗಳ ಮೂಲಕವೇ ಕಂಡುಕೊಳ್ಳ ಬೇಕಿತ್ತು. ಆದರೆ ಅಂತಹ ಮಡಿವಂತರುಗಳು ಜೋಡಿಯಾಗಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಚುನಾವಣೆಯ ದಿನ, ಮತಗಟ್ಟೆಗಳ ಮುಂದಿನ ಸಾಲುಗಳಲ್ಲಿ ಮಾತ್ರ. ಗಂಡನ ಇತರೆ ಸಂಬಂಧಗಳು, ಹೆಂಡತಿಯ ಮೂದಲಿಕೆ, ಮನೆ ಭರ್ತಿ ಮಕ್ಕಳು, ನೆಂಟರು ಇಷ್ಟರುಗಳ ಕದಲಿಕೆ, ಹಣ-ಕಾಸಿನ ಅಗಲಿಕೆ ಯಾವುದಕ್ಕೂ ಆ ದಿನ ಮಾತ್ರ ಜಗ್ಗದೆಯೇ ಬಂದು ಮತ ಚಲಾಯಿಸುತ್ತಿದ್ದರು ವೃದ್ಧ ದಂಪತಿಗಳು ಅದು ಒಂದೇ ಕಾರಣಕ್ಕೆ ಸೊಗಸಾಗಿ ಕಾಣಿಸುತ್ತಿದ್ದರು ಕೂಡ. ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರ, ವಿದ್ಯಾವಂತ ಕುಟುಂಬ ನಮ್ಮದು. ಊಟವನ್ನಾದರೂ ಬಿಟ್ಟೇವು ಪ್ರತಿಷ್ಠೆ, ನಿಷ್ಠೆಯಿಂದ ಕದಲೆವು ಎನ್ನುವ ಪಾಠವನ್ನು ಮನೆಯ ಪ್ರತಿ ಅಮ್ಮನೂ ಮಕ್ಕಳಿಗೆ ತುತ್ತಿಡುವಾಗಲೇ ಜೀರ್ಣಿಸಿಕೊಡುತ್ತಿದ್ದ ಮನೆತನ. ಅಂದಮೇಲೆ ಚುನಾವಣೆ ದಿನ ದಸರೆಯ ದಿನಗಳ ಸಂಭ್ರಮಕ್ಕಿಂತ ಭಿನ್ನ ಎನಿಸುತ್ತಿರಲಿಲ್ಲ. ಕೂಡು ಕುಟುಂಬದ ಪ್ರತೀ ಗಂಡಸರು ಹೆಂಗಸರು ವಯಸ್ಕ ಮಕ್ಕಳು ತಮ್ಮ ನಿತ್ಯ ಕೆಲಸಗಳನ್ನು ಮುಗಿಸಿ ಬೆಳಿಗ್ಗೆ 7.30 ಗಂಟೆಗೆ ಮತಗಟ್ಟೆಯ ಮುಂದೆ ನಿಂತಿರಬೇಕು ಎನ್ನುವ ಅಲಿಖಿತ ನಿಯಮ. ಮತಗಟ್ಟೆಯ ಸಿಬ್ಬಂದಿಗಳು ಇನ್ನೂ ಬೆಳಗಿನ ಕಾಫಿ ಕುಡಿದು ಮುಗಿಸುವುದರ ಮೊದಲೇ ಕೆ.ರಾಮಣ್ಣ (ನನ್ನ ತಂದ) ಇವರ ಕುಟುಂಬದವರು ಹನುಮಂತನ ಬಾಲದಂತೆ ಮತಗಟ್ಟೇಯ ಮುಂದೆ ನಿಂತಿರುತ್ತಿದ್ದರು. ಆ ದಿನಗಳಲ್ಲಿ ದೇಶ ಭಕ್ತಿ ಮತ್ತು ಕರ್ತವ್ಯ ಎನ್ನುವ ಪರಿಕಲ್ಪನೆಗಳ ವ್ಯಾಖ್ಯಾನವನ್ನು ಸುಪ್ರೀಮ್ ಕೋರ್ಟ್ ಕೊಟ್ಟೀರಲಿಲ್ಲ ಬದಲಿಗೆ ದೇಹದಲ್ಲಿರುವ ಪ್ರತೀ ಜೀವಕೋಶಗಳು ಉತ್ಪಾದನೆ ಮಾಡುತ್ತಿದ್ದವು ಅದಕ್ಕೇ ವಯಸ್ಸು, ಅಂತಸ್ತುಗಳ ವ್ಯತ್ಯಾಸವಿಲ್ಲದೆ ಮತಗಳು ನೊಂದಾಯಿತವಾಗುತ್ತಿತ್ತು. ಈ ಬಾರಿಯೂ ನಾನು ಮತ್ತು ಹಾಕಿದ್ದು ಅಭ್ಯರ್ಥಿಯ ಬಗ್ಗೆ ನನಗಿರುವ ವಿಶ್ವಾಸಕ್ಕಾಗಲೀ, ರಾಜಕೀಯದಲ್ಲಿ ಉಳಿದುಕೊಂಡಿರುವ ಅಲ್ಪ ಆಸಕ್ತಿಯಿಂದಾಗಲೀ ಅಲ್ಲ. ನನ್ನ ಮನೆತನದ ಹೆಮ್ಮೆಯ ಧ್ಯೋತಕವಾಗಿ. ನನ್ನ ಪಪ್ಪ-ಅಮ್ಮ ನಮ್ಮೆಲ್ಲರನ್ನು ಬೆಳಿಸಿದ ಪರಿಗೆ ಸಲ್ಲಿಸುವ ಗೌರವಕ್ಕಾಗಿ. ಈ ನೆಲಕ್ಕೆ ಸ್ವಾತಂತ್ರ್ಯದ ಗಾಳಿಯನ್ನು ಸರಾಗವಾಗಿಸಿಕೊಟ್ಟ ನನ್ನ ಪಪ್ಪನಂತಹ ಹೋರಾಟಗಾರರಿಗೆ ಧನ್ಯವಾದ ಹೇಳುವುದಕ್ಕಾಗಿ. ಮೈ ಮನ ಮಸಿಯಾಗಿಸದೆಯೇ ಬೆರಳನ್ನು ಮಾತ್ರ ಕರೆ ಮಾಡಿಕೊಳ್ಳುವ ಸೋಜಿಗದ ಪ್ರತೀಕದಂತೆ ಕಾಣುತ್ತದೆ ನನಗೆ ಮತ ಚಲಾವಣೆ. ಒಂದು ಕಪ್ಪು ಕಲೆ ವಿಕಾರ ರೂಪದಲ್ಲಿ ಹುಟ್ಟಿ ದಿನಗಳೆದಂತೆ ಗಾಢವಾಗುತ್ತಾ, ಆಕಾರ ಪಡೆಯುತ್ತಾ, ಕ್ರೋಢಿಕರಣಗೊಂಡು, ಉಗುರ ತುದಿಯಲ್ಲಿ ಸಾಂಧ್ರವಾಗಿ, ಮತ್ತೆ ಬರುತ್ತೇನೆ ಎಂದು ಹೇಳುತ್ತಾ ದೂರಾಗುವ ಪರಿಯನ್ನು ನೋಡುವುದು ಮತ್ತು ಅದರಿಂದ ಕಲಿಯುವುದು, ಈ ರೊಮ್ಯಾಂಟಿಕ್ ಪ್ರಕ್ರಿಯೆಯಲ್ಲಿ ದೇಶ ಎನ್ನುವ ಚಿರಯೌವ್ವನೆ ಅರಳುವುದ ಕಾಣಲು ಮತ ಹಾಕಿದ್ದೇನೆ. ಹಾಂ ಹಿಂದಿರುಗಿ ಬರುವ ದಾರಿಯಲ್ಲಿ ಮೆಡಿಕಲ್ ಶಾಪ್ ತೆಗೆದಿತ್ತು . ಹೊಸ ಮುಖ ಚಿಗುರು ಮೀಸೆ ಹೊತ್ತು ಗಿರಾಕಿಗಳ ಕೈಯಿಂದ ಚೀಟಿ ತೊಗೊಂಡು ಚುರುಕಾಗಿ ಔಷಧಿ ಬಟವಾಡೆ ಮಾಡುತ್ತಿತ್ತು. ಬೆರಳು ನೋಡಿದೆ ಮಸಿ ಇಲ್ಲ. ‘ ವೋಟ್ ಮಾಡಲಿಲ್ಲವಾ ಮಗಾ’ ಎಂದೆ . ‘ಇಲ್ಲಾ ಮೇಡಂ ಊರಿಗೆ ಹೋಗಿ ವೋಟ್ ಹಾಕಕ್ಕೆ ಓನರ್ ರಜಾ ಕೊಡಲಿಲ್ಲ ‘ ಎಂದ. ಓನರ್ಗೆ ಫೋನ್ ಮಾಡಿದೆ. ಆತ ಕುಟುಂಬ ಸಮೇತ ಮತಗಟ್ಟೆಯ ಸಾಲಿನಲ್ಲಿ ನಿಂತಿದ್ರು. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಸಾರೀಮೇಡಮ್ ಎಂದರಷ್ಟೇ. ಆ ಕೊನೆಘಳಿಗೆಯಲ್ಲಿ ನಾ ಏನೂ ಮಾಡಲಾಗಲಿಲ್ಲ. ಆದರೆ ಮುಂದಿನ ಚುನಾವಣೆಗೆ ಹುಡುಗ ರಜೆ ಪಡೆದು ವೋಟ್ ಹಾಕುತ್ತೇನೆ ಎನ್ನುವಷ್ಟು ಸಬಲನಾದರೆ ಚಲಾವಣೆಯಾದ ನನ್ನ ಮತಕ್ಕೂ ಹೆಮ್ಮೆ. ನನ್ನ ಮೈಸೂರಿನ ದಿನಗಳಲ್ಲಿ ’ಅಮ್ಮ ಎಲ್ಲಿ?’ ಎನ್ನುವ ಯಾರದ್ದೇ ಪ್ರಶ್ನೆಗೂ ಉತ್ತರ ಇರುತ್ತಿದ್ದದ್ದು ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ, ಬಟ್ಟೆ ಒಣಗುವಲ್ಲಿ, ಪಾತ್ರೆ ತೊಳೆಸಿಕೊಳ್ಳುವ ಹಿತ್ತಲಲ್ಲಿ, ದಾಸವಾಳಕ್ಕೆ ನೀರು ಹಾಕುವ ಕಾಂಪೌಂಡ್‍ನಲ್ಲಿ, ಗಂಡನ ಕೇಳಿ ಬರುವ ದೂರವಾಣಿ ಕರೆಗಳಿಗೆ ನೀಡುತ್ತಿದ್ದ ಮಾಹಿತಿಗಳಲ್ಲಿ, ನೆಂಟರಲ್ಲಿ-ನೆರೆಹೊರಯವರಲ್ಲಿ, ಪುಸ್ತಕದ ಓದಿನಲ್ಲಿ, ವೀಣೆ ನುಡಿಸುವುದರಲ್ಲಿ, ಯೋಗಾಭ್ಯಾಸ ಮಾಡುವಲ್ಲಿ, ಲೇಖನಗಳನ್ನು ಬರೆಯುವಲ್ಲಿ ಎಂದಾಗಿತ್ತು. ಇಷ್ಟೆಲ್ಲವೂ ಆಗಿಹೋಗಿದ್ದ ನನ್ನಮ್ಮ ಚುನಾವಣೆ ದಿನದಲ್ಲಿ ಕೇವಲ ಮತದಾರಮಾತ್ರ ಆಗಿರುತ್ತಿದ್ದಳು. ಸ್ವತಂತ್ರ್ಯ ಭಾರತಕ್ಕೆ ಎರಡೇ ವರ್ಷ ಚಿಕ್ಕವಳು ಅವಳು. ಈಗಲೂ ಬದಲಾವಣೆ ಆಗದ ಅವಳ ಒಂದೇ ಸ್ವಭಾವ ಎಂದರೆ ಮತ ಹಾಕುವುದು. ಒಮ್ಮೆ ಮೈಸೂರಿನ ಸ್ಥಳೀಯ ಚುನಾವಣೆಯ ಸಮಯ. ಕಾಲು ಫ್ರ್ಯಾಕ್ಚರ್ ಆಗಿ ಇವಳು ಬೆಂಗಳೂರಿನ ಆಸ್ಪತ್ರೆ ವಾಸಿ. “ಇನ್ನು ಎರಡು ವಾರ ರೆಸ್ಟ್ ನಲ್ಲಿ  ಇರಬೇಕು” ಡಾಕ್ಟರ್ ಹೇಳಿಯಾಗಿತ್ತು. ಬಿಡುವಳೇ ಇವಳು, ’ಸಾಧ್ಯವೇ ಇಲ್ಲ ಮತ ಹಾಕಲೇ ಬೇಕು” ಎಂದು ಶೂರ್ಪಣಕಿಯ ಹಠದಲ್ಲಿ ಮೈಸೂರಿಗೆ ನೇರವಾಗಿ ಮತಗಟ್ಟೆಗೇ ಬಂದವಳು. ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲೂ ಮತ ಹಾಕಲು ತಪ್ಪಿಸಿಕೊಳ್ಳದವಳು. ಯಾವ ಚುನಾವಣೆಯ ದಿನದ ಹಿಂದಿನ ರಾತ್ರಿಯೇ ಫೋನ್ ಮಾಡಿ ಬೆಳಗ್ಗೆ ಬೇಗ ಹೋಗಿ ಮತ ಹಾಕಿಬಿಡು ಎಂದು ಎಚ್ಚರಿಸಿ ಮಲಗುವವಳು ಅಷ್ಟೇ ಅಲ್ಲ ,  ಮತ ಹಾಕಿ ಬರುವವರೆಗೂ ಪ್ರಾಣ ತಿನ್ನುವ ನನ್ನ ಅಮ್ಮ ನಿಜಕ್ಕೂ ಆಯ್ಕೆ ಸ್ವಾತಂತ್ರ್ಯದ ಸದ್ಬಳಕೆ ಕಲಿಸಿಕೊಟ್ಟವಳು. ನಾ ಮತ ಹಾಕುವುದು ಅವಳೆಡೆಗೆ ನನ್ನ ಒಂದು ಮುಷ್ಟಿ ಋಣ ಸಂದಾಯದಂತೆ. ಪಪ್ಪ ಇರುವವರೆಗೂ ಅವರೊಂದಿಗೇ ಹೋಗಿ ಮತ ಹಾಕಿ ಬರುತ್ತಿದ್ದ ಅಮ್ಮನ ಕಾಲುಗಳು ಈಗ ಊರುಗೋಲಿನ ಸಾಂಗತ್ಯಕ್ಕೆ ಜೋತು ಬಿದ್ದಿವೆ. ಚಾಮುಂಡಿ ತಾಯಿ ನೀಡುತ್ತಿರುವ ಬೇಸಿಗೆ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಹೊಸಿಲು ದಾಟಲು ಯಾರದ್ದಾದರೂ ಕೈ ಹಿಡಿದುಕೊಳ್ಳಲೇ ಬೇಕು ಎನ್ನುವ ಸ್ಥಿತಿ ಆದರೂ ಚುನಾವಣಾ ದಿನಕ್ಕೆ ಉಡಬೇಕಾದ ಸೀರೆ ರವಿಕೆಗೆ ಇಸ್ತ್ರಿ ಮಾಡಿರಿಸಿಕೊಂಡಿದ್ದಳು. ಈಗಂತೂ ಮತ ಚಲಾವಣೆ ಅವಳ ಪಾತಿರ್ವ್ರತ್ಯದ ಒಂದು ಭಾಗವಾಗಿದೆ. ಅದನ್ನು ಅವಳು ತನ್ನ ಗಂಡನಿಗೆ ತೋರುವ ಪ್ರೀತಿ, ಕಾಳಜಿ ನಿಷ್ಠೆ ಎಂದುಕೊಂಡಿರುವಂತಿದೆ. “ಅಮ್ಮ ನೀ ಕಳೆದ ಬಾರಿ ಮತ ಹಾಕಿದವರು ಗೆಲ್ಲಲಿಲ್ಲ, ಸುಮ್ಮನೆ ಯಾಕೆ ಶ್ರಮ ಪಡ್ತೀಯ, ಮನೇಲಿರು” ಎನ್ನುವ ಮಗಳ ಉಪದೇಶದ ಒಂದು ವಾಕ್ಯಕ್ಕೆ , ಪ್ಯಾರಾಗ್ರಾಫ್‍ನಲ್ಲಿ ಸಿಟ್ಟಾಗುತ್ತಾಳೆ. “ಹೌದು ಈ ಬಾರಿಯೂ ನನ್ನ ಅಭ್ಯರ್ಥಿ ಗೆಲ್ಲುವ ಸಂಭವ ಕಡಿಮೆ , ಆದರ ನಾನು ಅವನಿಗೇ ವೋಟ್ ಹಾಕೋದು” ಎನ್ನುತ್ತಾಳೆ. “ಇಷ್ಟೆಲ್ಲಾ ಮೈಕೈ ನೋಯಿಸಕೊಂಡು ಹೋಗ್ತಿದ್ದೀಯ ಗೆಲ್ಲುವ ಅಭ್ಯರ್ಥಿಗೇ ಹಾಕು ನಿನ್ನ ಮತ ಉಪಯೋಗಕ್ಕೆ ಬರಲಿ” ಎನ್ನುವ ನನ್ನೆಡೆಗೆ ಅನುಮಾನದ ನೋಟ ತೂರುತ್ತಾ ಹೇಳುತ್ತಾಳೆ  “ನಿನ್ನ ಪಪ್ಪ ಇದ್ದಿದ್ದರೆ ಅವರು ನೀ ಹೇಳುವ ಅಭ್ಯರ್ಥಿಗೆ ವೋಟ್ ಹಾಕ್ತಿದ್ದ್ರಾ? ಇದು ನನ್ನ ಮತ ಅಲ್ಲ ನನ್ನ ಗಂಡನ ವೋಟ್ ನಾನು ಹಾಕುತ್ತಿದ್ದೇನೆ” ಬೇಗ ಹೋಗಲು ಉಸಿರು ಸಾಲದೆ ನಡು ಮಧ್ಯಾಹ್ನದಲ್ಲಿಯಾದರೂ ಮತ ಹಾಕಿದ್ದು ಅವಳ ಪಾಲಿಗೆ ಜೀವದ್ರವದಂತೆ. ಆ ತಲೆಮಾರಿಗೆ ನಿಷ್ಠೆ ಕಲಿಸಿಕೊಟ್ಟ ಚುನಾವಣೆಗಳು ನನ್ನ ತಲೆಮಾರಿಗೆ ಬದಲಾವಣೆಯನ್ನು “ಬಯಸು, ಆರಿಸು, ಒಪ್ಪಿಕೊ”  ಎನ್ನುವುದನ್ನು ಕಲಿಸಿಕೊಟ್ಟಿದೆ. ಆದರೆ ಈ ದೇಶ ನನ್ನದು ಎನ್ನುವ ಸ್ವಾರ್ಥವನ್ನು ಮಾತ್ರ ಕಡಿಮೆ ಮಾಡಿಲ್ಲ ರಾಜಕೀಯ. ಅದಕ್ಕಾಗಿಯಾದರೂ ಮತ ಹಾಕಲು ತಪ್ಪಿಸುವುದಿಲ್ಲ.  ಹೌದು, ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಥೇಟ್ ಅಮ್ಮನ ವಾತ್ಸಲ್ಯ ಮತ್ತು ಅಪ್ಪನ ಅಭಯದಂತೆ. ಇದೇ ಆಸ್ಥೆಯೊಂದಿಗೆ ಈ ಬಾರಿಯೂ ಮತ ಹಾಕಿ ಬಂದೆ. ********************************* (ಲೇಖನ ಕೃಪೆ: ಆಂದೋಲನ ಪತ್ರಿಕೆ ಮೈಸೂರು-ಏಪ್ರಿಲ್-2019) ಮತ್ತು ಅಸ್ಥಿತ್ವ ಲೀಗಲ್ ಬ್ಲಾಗಸ್ಪಾಟ್.ಕಾಮ್

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಜೊತೆಗೆ ಸಂತಾನಪ್ಪನ ಮೇಲೆ ತೀವ್ರ ದ್ವೇಷವೂ ಬೆಳೆದುಬಿಟ್ಟಿತು. ಆದ್ದರಿಂದ ಅವನು ತಾನು ಸಂತಾನಪ್ಪನಂಥ ನೀಚನ ಮೇಲೆ ಸೇಡು ತೀರಿಸಿಕೊಳ್ಳದಿದ್ದರೆ ತನ್ನ ಪುರುಷತ್ವಕ್ಕೇ ಅವಮಾನ! ಎಂದು ಯೋಚಿಸುತ್ತ ಕುದಿಯತೊಡಗಿದ. ಆದರೆ ಸಂತಾನಪ್ಪನೆದುರು ತಾನು ಉಸಿರೆತ್ತಲಾಗದ ದೈನೇಸಿ ಸ್ಥಿತಿಯಲ್ಲಿದ್ದೇನೆಂಬುದನ್ನೂ ತಿಳಿದಿದ್ದವನು ಅದೇ ಕೊರಗಿನಿಂದ ಮಹಾ ಕುಡುಕನಾಗಿಬಿಟ್ಟಿದ್ದ. ಆದರೂ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಹಾಗಾಗಿ ಇಂದು ಅದೇ ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಬಿಲ್ಡರ್‍ಗಳಲ್ಲೊಬ್ಬನಾದ ಶಂಕರನ ಮೇಲೆ ಮಚ್ಚು ಹರಿಸಲು ಹವಣಿಸುತ್ತ ತಿರುಗಾಡುತ್ತಿದ್ದ ಸಂಗತಿಯು ಪರಮೇಶನಿಗೆ ತಿಳಿದು ಅವನ ದ್ವೇಷದ ಜ್ವಾಲೆಗೆ ತುಪ್ಪ ಸುರಿದಂತಾಯಿತು. ಅವನು ತನ್ನ ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರವಾದ ಖುಷಿಯಿಂದ ಸಾರಾಯಿ ಶೀಶೆಯನ್ನು ನೆತ್ತಿಯ ಮೇಲಿಟ್ಟುಕೊಂಡು ಕುಣಿದಾಡಿಬಿಟ್ಟ!    ಉತ್ತರ ಕರ್ನಾಟಕದ ರುದ್ರೇನಾಹಳ್ಳಿ ಎಂಬ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಪರಮೇಶ ಮತ್ತು ದ್ಯಾವಮ್ಮ ನೆರೆಕರೆಯಲ್ಲೇ ವಾಸಿಸುತ್ತಿದ್ದವರು.  ಅವನಿಗೆ ಕುಡಿಮೀಸೆ ಚಿಗುರುತ್ತಲೂ ಇವಳಿಗೆ ಹದಿಹರೆಯ ಇಣುಕುತ್ತಲೂ ಇಬ್ಬರ ನಡುವೆ ದೈಹಿಕಾಕರ್ಷಣೆಯ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರೀತಿಯ ಮಧುರ ಸವಿಯನ್ನು ಹೆಚ್ಚು ಕಾಲ ಅನುಭವಿಸಲು ಇಬ್ಬರ ಮನೆಯ ಪರಿಸ್ಥಿತಿಯೂ ಅವಕಾಶ ಕೊಡಲಿಲ್ಲ. ಒಂದೆಡೆ ಅತಿಯಾದ ಬಡತನ, ಇನ್ನೊಂದೆಡೆ ಮಳೆ ಬೆಳೆಯೂ ಚೆನ್ನಾಗಿ ಆಗದೆ ದ್ಯಾವಮ್ಮನ ಅಪ್ಪ ಮಲ್ಲೇಶ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಊರುಬಿಟ್ಟು ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸಿದ. ಅತ್ತ ಪರಮೇಶನ ಕುಟುಂಬವೂ ಅದೇ ಕಾರಣಕ್ಕೆ ಮಲ್ಲೇಶನ ಕುಟುಂಬದೊಂದಿಗೆ ಸೇರಿ ವಲಸೆ ಹೊರಟು ಕಟ್ಟಡ ಕಾಮಗಾರಿ ಬಿಲ್ಡರ್‍ಗಳ ‘ಅಧಿಕ ಸಂಬಳ’ ದ ಆಸೆಗೊಳಗಾಗಿ ಈಶ್ವರಪುರಕ್ಕೆ ಬಂದು ನೆಲೆಸಿತ್ತು. ದ್ಯಾವಮ್ಮ ಪರಮೇಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದ್ದರಿಂದ ಪರವೂರಿಗೆ ಬಂದ ನಂತರ ಕೆಲವು ಕಾಲ ಅವನ ಸಾಂಗತ್ಯವನ್ನು ಮತ್ತಷ್ಟು ಬಯಸುತ್ತಿದ್ದಳು. ಪರಮೇಶನಿಗೂ ಅವಳು ಸರ್ವಸ್ವವಾಗಿದ್ದಳು. ಊರಲ್ಲಿದ್ದಾಗಲೂ ಅವನು ಸದಾ ಅವಳ ಹಿಂದೆಯೇ ಸುತ್ತುತ್ತಿದ್ದ. ಇಬ್ಬರೂ ತಂತಮ್ಮ ಹೊಲಗದ್ದೆಗಳ ಕೆಲಸ ಕಾರ್ಯಗಳಲ್ಲೂ ಜೊತೆಯಾಗಿ ದುಡಿಯುತ್ತ ಮಾವು ಮತ್ತು ದಾಳಿಂಬೆ ತೋಪುಗಳ ಮರೆಯಲ್ಲಿ ಕುಳಿತು ಪ್ರೇಮಸಲ್ಲಾಪವಾಡುತ್ತ ಪ್ರಪಂಚವನ್ನೇ ಮರೆಯುತ್ತಿದ್ದರು. ಆದರೆ ಅಂದು ತನ್ನ ಜನುಮದ ಗೆಳೆಯನನ್ನು ಒಂದು ಕ್ಷಣವೂ ಬಿಟ್ಟಿರಲಾಗದೆ ಒಡನಾಡುತ್ತಿದ್ದ ದ್ಯಾವಮ್ಮ ಈಶ್ವರಪುರಕ್ಕೆ ಬಂದ ಕೆಲವೇ ಕಾಲದೊಳಗೆ ಬದಲಾಗಿಬಿಟ್ಟಳು. ಅದಕ್ಕೆ ಕಾರಣವೂ ಇತ್ತು. ಈಶ್ವರಪುರದ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಅವರ ಶಿಸ್ತುಬದ್ಧ ಜೀವನಶೈಲಿ, ಸುಸಂಸ್ಕೃತ ನಡೆ ನುಡಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ತನ್ನ ಓರಗೆಯ ಹೆಣ್ಣು ಮಕ್ಕಳ ಸ್ನಿಗ್ಧ ಚೊಕ್ಕ ಸೌಂದರ್ಯ ಹಾಗೂ ಅದಕ್ಕೊಪ್ಪುವಂಥ ಆಧುನಿಕ ಶೈಲಿಯ ವೇಷ ಭೂಷಣಗಳನ್ನು ಅವರೆಲ್ಲ ತೊಡುತ್ತ ವನಪು ವಯ್ಯಾರದಿಂದ ಮಿಂಚುತ್ತಿದ್ದುದನ್ನು ಕಾಣುತ್ತ ಬಂದ ಬಯಲುಸೀಮೆಯ ಹಳ್ಳಿಯ ಹುಡುಗಿ ದ್ಯಾವಮ್ಮನಿಗೆ ತನ್ನೂರಿನ ಜೀವನವೇಕೋ ಶುಷ್ಕ ನೀರಸವಾಗಿ ಕಾಣತೊಡಗಿತು. ಹಾಗಾಗಿ ತಾನೂ ಇಲ್ಲಿನವರಂತೆ ಸುಂದರವಾಗಿ ಬದುಕಬೇಕು ಎಂದು ಅವಳು ಇಚ್ಛಿಸಿದಳು. ಅಪ್ಪನೊಂದಿಗೆ ಕೂಲಿಗೆ ಹೋಗಿ ದುಡಿಮೆಯಾರಂಭಿಸಿದ ಮೇಲೆ ಕೆಲವೇ ಕಾಲದೊಳಗೆ ಲಂಗ ದಾವಣಿ ಮತ್ತು ಅರ್ಧ ಸೀರೆಯಂಥ ಹಳ್ಳಿಯ ಉಡುಗೆ ತೊಡುಗೆಗಳನ್ನು ಕಿತ್ತೊಗೆದು ಚೂಡಿದಾರ್, ಸ್ಕರ್ಟ್‍ಗಳನ್ನು ತೊಟ್ಟುಕೊಂಡು ವಿಹರಿಸಲಾರಂಭಿಸಿದಳು. ಬರಬರುತ್ತ ಅದರಿಂದಲೂ ತೃಪ್ತಳಾಗದೆ ಜೀನ್ಸ್ ಪ್ಯಾಂಟ್, ಟೀಶರ್ಟ್ ಧರಿಸುವವರೆಗೂ ಮುಂದುವರೆದು ಹದಿನೆಂಟರ ಹರೆಯ ತನ್ನ ಕೋಮಲ ಸೌಂದರ್ಯವನ್ನು ಮಾಟವಾಗಿ ಪ್ರದರ್ಶಿಸುತ್ತ ಖುಷಿಪಡಲಾರಂಭಿಸಿದಳು. ಆದ್ದರಿಂದ ದಿನವಿಡೀ ಎಲೆಯಡಿಕೆ, ಮಾವಾ ಮತ್ತು ಪಾನ್‍ಪರಾಗ್‍ನಂಥ ಮಾದಕವಸ್ತುಗಳನ್ನು ಜಗಿಯುತ್ತ ಅದರದೇ ನಶೆಯಲ್ಲಿದ್ದು ಅಡ್ಡ ವಾಸನೆ ಹೊಡೆಯುತ್ತಿದ್ದ ಪರಮೇಶನ ಒಣಕಲು ಮೂತಿಯೂ, ಬಡಕಲು ದೇಹವೂ ಅವಳಿಗೆ ಸಹಜವಾಗಿಯೇ ಅಸಹ್ಯವೆನಿಸತೊಡಗಿತು. ಅದರಿಂದ ನಿಧಾನಕ್ಕೆ ಅವನ ಮೇಲಿನ ಪ್ರೀತಿಯೂ ಅವಳಲ್ಲಿ ಆರಿಹೋಯಿತು.    ಮೂರುಕಾಸಿಗೆ ಬೆಲೆಯಿಲ್ಲದಂಥ ಈ ಪ್ರೀತಿ ಪ್ರೇಮಕ್ಕೆಲ್ಲ ತಾನಿನ್ನು ಮರುಳಾಗುವ ಅವಿವೇಕಿಯಾಬಾರದು. ಪರಮೇಶನನ್ನು ಮದುವೆಯಾದೆನೆಂದರೆ ಸಾಯುವತನಕವೂ ತಾನು ಕೂಲಿನಾಲಿ ಮಾಡುತ್ತ ಗುಡಿಸಲಲ್ಲೇ ಬದುಕಿ ಸಾಯಬೇಕಾದೀತು! ಹಾಗೆ ಬದುಕಲು ತನ್ನಿಂದಿನ್ನು ಸಾಧ್ಯವೇ ಇಲ್ಲ. ಈ ಬಡತನದಿಂದ ಆದಷ್ಟು ಬೇಗ ಹೊರಗೆ ಬಂದು ಇಲ್ಲಿನ ಜನರಂತೆ ತಾನೂ ಸ್ಥಿತಿವಂತಳಾಗುವ ದಾರಿಯನ್ನು ಕಂಡುಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಿದ್ದ ದ್ಯಾವಮ್ಮ ತನ್ನಿಚ್ಛೆ ನೆರವೇರಿಸುವಂಥ ಗಂಡೊಬ್ಬನ ಅನ್ವೇಷಣೆಗಿಳಿದಳು. ಅದೇ ಸಮಯದಲ್ಲಿ ದಿಢೀರ್ ಶ್ರೀಮಂತನೂ, ಶಂಕರನಂಥ ಸ್ಥಳೀಯ ಶ್ರೀಮಂತರ ಸಂಘ ಬೆಳೆಸಿ ಇಲ್ಲಿನವನಾಗಿಯೇ ರಾಜಾರೋಷದಿಂದ ಬದುಕುತ್ತಿದ್ದ ಸಂತಾನಪ್ಪ ಕಿಲ್ಲೆಯ ಕಟ್ಟಡವೊಂದಕ್ಕೆ ಅವನ ಮೇಸ್ತ್ರಿಯೊಡನೆ ಕೂಲಿಯಾಳಾಗಿ ಹೋದಳು. ಆವತ್ತು ಸಂತಾನಪ್ಪನೂ ತನ್ನ ಕಟ್ಟಡದ ಕೆಲಸಕಾರ್ಯಗಳನ್ನು ಗಮನಿಸಲು ಬಂದಿದ್ದ. ಆಹೊತ್ತು ಆಕಸ್ಮತ್ತಾಗಿ ಅವನ ವಕ್ರದೃಷ್ಟಿಯು ದ್ಯಾವಮ್ಮನ ಮೇಲೆ ಬಿದ್ದುಬಿಟ್ಟಿತು. ಅವಳ ತೆಳ್ಳನೆ ನಸುಗೆಂಪಿನ, ಬಾಗಿ ಬಳುಕುವಂಥ ದೇಹಸಿರಿಯನ್ನು ಕಂಡವನು ಆಕ್ಷಣವೇ ಅವಳನ್ನು ಮೋಹಿಸಿಬಿಟ್ಟ.    ದ್ಯಾವಮ್ಮಳೂ ಸಂತಾನಪ್ಪನನ್ನು ಕೆಲವು ಕ್ಷಣ ಅಡಿಗಣ್ಣಿನಿಂದ ದಿಟ್ಟಿಸಿ ನೋಡಿದಳು. ಮೂವತ್ತೈದರ ಯುವಕನಂತೆ ಕಾಣುತ್ತಿದ್ದ ಅವನ ಕಟ್ಟುಮಸ್ತುತನಕ್ಕಿಂತಲೂ ತನ್ನಪ್ಪನಿಂದಲೇ ಅವನ ಸಿರಿವಂತಿಕೆಯ ಕಥೆಯನ್ನು ಕೇಳಿದ್ದವಳು ಅಂದೇ ಅವನಿಗೆ ಆರ್ಕಷಿತಳಾಗಿ ತನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂಬ ಕನಸು ಕಾಣತೊಡಗಿದಳು. ಹೀಗಿದ್ದವಳನ್ನು ಆವತ್ತೊಂದು ದಿನ ಮೇಸ್ತ್ರಿಯು ಸಂತಾನಪ್ಪನ ಆಜ್ಞೆಯ ಮೇರೆಗೆ ಅವನ ಕೋಣೆಗೆ ಕಳುಹಿಸಿಕೊಟ್ಟ. ದ್ಯಾವಮ್ಮನಿಗೂ ಅದೇ ಬೇಕಿತ್ತು. ಆದರೆ ಸ್ತ್ರೀ ಸಹಜ ನಾಚಿಕೆ ಅಳುಕು ಅವಳನ್ನು ಕಾಡುತ್ತಿತ್ತು. ಮೇಸ್ತ್ರಿ ಮತ್ತು ಜೊತೆ ಕೆಲಸಗಾರರಿಂದ ಸಂತಾನಪ್ಪನ ಗುಣಗಾನವನ್ನೂ, ಅವನ ಉದಾರತೆಯನ್ನೂ ಕೇಳುತ್ತಿದ್ದವಳಿಗೆ ಅವನು ತಮ್ಮೂರಿನ ಕಡೆಯವನೇ ಎಂಬ ಧೈರ್ಯವೂ ಅವಳನ್ನು ಅವನ ಕೋಣೆ ಹೆಜ್ಜೆಯಿಡುವಂತೆ ಪ್ರೇರೇಪಿಸಿತು. ಕೋಣೆ ಹೊಕ್ಕವಳು ಒಂದು ಮೂಲೆಗೆ ಸರಿದು, ಸಿಮೆಂಟು ಮೆತ್ತಿದ್ದ ತನ್ನ ಪಾದಗಳನ್ನು ಮುಜುಗರದಿಂದ ಮರೆಮಾಚುತ್ತ, ಹೆಬ್ಬೆರಳುಗಳಿಂದ ಅಲ್ಲಲ್ಲೇ ಅದನ್ನು ತೊಡೆದು ಹಾಕುತ್ತ ನಿಂತಳು. ಅವಳ ನಾಚಿಕೆಯನ್ನು ಕಂಡ ಸಂತಾನಪ್ಪ ರೋಮಾಂಚಿತನಾಗಿ ಮಾತಾಡಿಸಿದ. ಅವಳೂ ವಯ್ಯಾರದಿಂದ ನುಲಿಯುತ್ತ ಒಂದಿಷ್ಟು ಮಾತಾಡಿದಳು. ಮಾತಿನ ಮಧ್ಯೆ ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಂತಾನಪ್ಪನ ಮನಸ್ಸು ಈ ಪುಟ್ಟ ರಾಜಕುಮಾರಿ ತನ್ನವಳಾಗಲೇಬೇಕೆಂದು ಹಠ ಹಿಡಿದುಬಿಟ್ಟಿತು. ಆದ್ದರಿಂದ ಅವನು ಮತ್ತೆ ತಡಮಾಡಲಿಲ್ಲ. ‘ಹೇ, ಹುಡಿಗಿ, ಬ್ಯಾಸರ ಮಾಡ್ಕೊಳ್ಳೊದಿಲ್ಲ ಅಂದ್ರ ಒಂದ್ ಮಾತ್ ಕೇಳೇನು…?’ ಎಂದ ಮೃದುವಾಗಿ.‘ಹ್ಞೂಂ ಹೇಳಿ, ಏನಾ…?’ ಎಂದಳು ಅವಳು ತಲೆತಗ್ಗನನ್ನ ಮದಿವಿ ಆಗ್ತಿ ಏನಾ…?’ ಎಂದು ಸಂತಾನಪ್ಪ ತುಟಿಯಂಚಿನಲ್ಲಿ ನಗುತ್ತ ಕೇಳಿದ. ದ್ಯಾವಮ್ಮ ಬೆಚ್ಚಿ ಬಿದ್ದವಳಂತೆ ನಟಿಸಿದಳು. ನಂತರ ಲಜ್ಜೆಯಿಂದ, ‘ಅಯ್ಯಯ್ಯಾ…ಅದೆಲ್ಲ ನಂಗೊತ್ತಿಲ್ಲಪ್ಪಾ! ಅಪ್ಪಯ್ಯನ್ ಕೇಳಿ. ಅಂವ ಹ್ಞೂಂ ಅಂದ್ರಾ ನಾನೂ ಹ್ಞೂಂ…!’ ಎಂದವಳು ಒಂದೇ ಉಸಿರಿಗೆ ಹೊರಗ್ಹೋಡಿ ಬಂದಳು.    ಅಷ್ಟು ಸಣ್ಣ ಪ್ರಾಯದ ಹುಡುಗಿಯೊಬ್ಬಳು ಪ್ರಥಮ ನೋಟದಲ್ಲೇ ಮತ್ತು ಮೊದಲ ಮಾತುಕತೆಯಲ್ಲೇ ತನ್ನನ್ನು ಮೆಚ್ಚಿದ್ದು ಸಂತಾನಪ್ಪನಲ್ಲಿ ಮೊದಲಿಗೆ ವಿಸ್ಮಯವನ್ನೂ ಅನುಮಾನವನ್ನೂ ಮೂಡಿಸಿತಾದರೂ ಅದನ್ನು ಬದಿಗೊತ್ತಿದವನು, ತಾನು ಈ ವಯಸ್ಸಿನಲ್ಲೂ ಸಣ್ಣ ಹುಡುಗಿಯರು ಇಷ್ಟಪಡುವಂತೆ ಇದ್ದೇನೆಯೇ? ಎಂದು ಯೋಚಿಸಿ ಪುಳಕಿತನಾದ. ಏಕೆಂದರೆ ಅವನು ತನ್ನ ಮೊದಲ ಮಡದಿ ಮುನಿಯಮ್ಮನ ಜೊತೆಗಿನ ಸಂಸಾರದಲ್ಲಿ ಬಹಳವೇ ನೀರಸಗೊಂಡಿದ್ದ. ಹಾಗಾಗಿ ಈಗಿನ ಶ್ರೀಮಂತ ಬದುಕಿಗೆ ಹೊಸದೊಂದು ಸಂಗಾತಿಯ ಬಯಕೆಯು ಅವನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಮರುದಿನವೇ ದ್ವಾವಮ್ಮಳ ಅಪ್ಪ ಮಲ್ಲೇಶಪ್ಪನನ್ನು ಕಟ್ಟಡಕ್ಕೆ ಕರೆದು ಕುಳ್ಳಿರಿಸಿಕೊಂಡು ಮಾತುಕತೆಗಿಳಿದ. ಮಲ್ಲೇಶಪ್ಪನಿಗೆ ಸಂತಾನಪ್ಪನ ಕಥೆಯೆಲ್ಲ ಗೊತ್ತಿತ್ತು. ಆದರೂ ತಾನವನ ಅಡಿಯಾಳಾಗಿ ದುಡಿಯುವವನೆಂಬ ಗೌರವಕ್ಕೆ ಮಣಿದು ಅವನೆದುರು ವಿನಮ್ರವಾಗಿ ಕುಳಿತುಕೊಂಡ. ‘ಮಲ್ಲೇಶಪ್ಪಾ ನಾನು ಸುತ್ತಿ ಬಳಸಿ ಮಾತಾಡೋನಲ್ಲ. ನಂಗ್ ಈಗಾಗಲೇ ಸಂಸಾರ ಐತಿ ಅಂತ ನಿಂಗೂ ಗೊತ್ತೈತಿ. ಆದರೆ ನನ್ನಾಕಿ ವಿದ್ಯಾಬುದ್ಧಿ ಕಲ್ತವಳಲ್ಲ. ಮಕ್ಕಳಿನ್ನೂ ಸಣ್ಣವು. ನಂಗಿರುವ ದೊಡ್ಡ ಆಸ್ತಿಯನ್ನು ಸಂಭಾಳಿಸಲು ಅವ್ರಿಂದ ಸಾಧ್ಯ ಆಗಕಿಲ್ಲ. ನಿನ್ ಮಗ್ಳು ಶಾಲೆ ಓದಿರೋಳು. ಭಾಳ ಶಾಣೆಯೂ ಅದಾಳ. ಹಂಗಾಗಿ ನಂಗೆ ಆಕಿ ಹಿಡಿಸಿಯಾಳ. ಆಕಿಗೂ ನಾ ಒಪ್ಪಿಗೆಯಾಗಿವುನಿ. ಆಕಿ ನಿನ್ನ ಒಪ್ಪಿಗಿ ಕೇಳು ಅಂದಾಳ. ನೀನು ಆಕೀನ ನಂಗಾ ಕೊಟ್ಟು ಮದಿವಿ ಮಾಡಿದಿಯಂದ್ರಾ ಆಕೀನ ರಾಣಿ ಹಂಗೆ ನೋಡ್ಕೊಂತೀನಿ ಮಾತ್ರವಲ್ಲ, ನಿನ್ನೆಲ್ಲ ಉದ್ರೀನ (ಸಾಲ) ತೀರ್ಸಿ, ನನ್ ಹಿರಿಯನಂಗೆ ಜೋಪಾನ ಮಾಡ್ತೀನಿ, ಏನಂತೀ…?’ ಎಂದು ಗಂಭೀರವಾಗಿ ಕೇಳಿದ.    ಸ್ತ್ರೀಯರ ವಿಷಯದಲ್ಲಿ ಸಂತಾನಪ್ಪ ಸ್ವಲ್ಪ ದುರ್ಬಲ ಬುದ್ಧಿಯವನು ಹೌದಾದರೂ ಇತರ ವಿಷಯಗಳಲ್ಲಿ ಅವನು ಯಾರಿಗೂ ಮೋಸ, ಕೇಡು ಬಗೆದ ಮನುಷ್ಯನಲ್ಲ. ತಮ್ಮೂರಿನ ಜನರಿಗೆ ಅವನು ಬಹಳ ಕರುಣೆ ಅನುಕಂಪ ತೋರಿಸುತ್ತ ಉಪಕಾರ ಮಾಡುತ್ತ ಬರುತ್ತಿರುವವನು ಎಂಬುದನ್ನೆಲ್ಲ ಮಲ್ಲೇಶಪ್ಪನೂ ಗಮನಿಸುತ್ತ ಬಂದಿದ್ದ. ಹೀಗಿರುವಾಗ ಈಗ ತನ್ನ ಒಪ್ಪಿಗೆಯಿಂದ ಮಗಳ ಬಾಳು ಹಸನಾಗುವುದಲ್ಲದೇ ತನ್ನ ತಲೆಯ ಮೇಲಿರುವ ದೊಡ್ಡ ಮೊತ್ತದ ಉದಾರಿಯೂ ಕಳಚಿಕೊಳ್ಳುತ್ತದೆ ಎಂದೂ ಯೋಚಿಸಿದ. ಹಾಗಾಗಿ ಈ ಸನ್ನಿವೇಶವು ಅವನಿಗೆ ದಿಢೀರ್ರನೇ ದೇವರು ಪ್ರತ್ಯಕ್ಷನಾಗಿ, ‘ಭಕ್ತಾ, ನಿನಗೇನು ವರ ಬೇಕೋ ಕೇಳುವಂತವನಾಗು…?’ ಎಂಬಂತಾಯಿತು. ಮುಂದೇನೂ ಯೋಚಿಸದೆ ಮಗಳನ್ನು ಅವನಿಗೆ ಧಾರೆಯೆರೆದುಬಿಟ್ಟ. ಅಂದಿನಿಂದ ದ್ಯಾವಮ್ಮ ಸಂತಾನಪ್ಪನ ಎರಡನೆಯ ಹೆಂಡತಿಯಾಗಿ ತಾನು ಅಂದುಕೊಂಡಂತೆಯೇ ತಗಟು ಶೀಟಿನ ಜೋಪಡಿಯನ್ನು ತೊರೆದು ಮಸಣದಗುಡ್ಡೆಯ ರಾಮತೀರ್ಥ ಕಾಮತರ ಬಾಡಿಗೆಯ ತಾರಸಿ ಮನೆಯ ಸಿರಿವಂತ ಬದುಕಿಗೆ ಪಾದಾರ್ಪಣೆ ಮಾಡಿದಳು.   ಆದರೆ ಆವತ್ತು ಮಧುಚಂದ್ರದ ರಾತ್ರಿ ಗಂಡನ ಕೋಣೆ ಪ್ರವೇಶಿಸಿದ ದ್ಯಾವಮ್ಮನಿಗೆ ತನ್ನ ಹಳೆಯ ಪ್ರೇಮಿ ಪರಮೇಶನ ನೆನಪು ಇನ್ನಿಲ್ಲದಂತೆ ಕಾಡಿತು. ಅವನ ಮುಗ್ಧ, ನಿಶ್ಕಲ್ಮಶ ಪ್ರೀತಿಯನ್ನು ನೆನೆದವಳ ಕರುಳು ಹಿಂಡಿದಂತಾಗಿ ಕಣ್ಣೀರುಕ್ಕಿ ಬಂತು. ಆ ಅಮಾಯಕನಿಗೆ ದ್ರೋಹ ಮಾಡಿಬಿಟ್ಟೆನೇನೋ…? ಎಂಬ ಪಾಪಪ್ರಜ್ಞೆ ಹುಟ್ಟಿತು. ಸುಮಾರು ಹೊತ್ತು ಅಳುತ್ತ ಕುಳಿತಳು. ಅದೇ ಹೊತ್ತಿಗೆ ಸುಗಂಧದ್ರವ್ಯದ ಪರಿಮಳವೂ ಮಲ್ಲಿಗೆ ಹೂವಿನ ಕಂಪೂ ಅವಳ ಕೋಣೆಯತ್ತ ಇಂಪಾಗಿ ಹರಿದು ಬಂತು. ಆಗ ಅಳು ನಿಲ್ಲಿಸಿ ಅತ್ತ ಗಮನ ಹರಿಸಿದಳು. ಸಂತಾನಪ್ಪ ಬಾಗಿಲು ತಳ್ಳಿಕೊಂಡು ಒಳಗಡಿಯಿಟ್ಟ. ಅವನು ತನ್ನ ಭುಜ, ಕತ್ತು ಮತ್ತು ಕೈಗಳಿಗೆ ಮಲ್ಲೆಹೂವಿನ ದಂಡೆಯನ್ನು ಸುತ್ತಿಕೊಂಡು ದ್ಯಾವಮ್ಮಳತ್ತ ತುಂಟ ನಗುತ್ತ ಬೀರುತ್ತ ಬಂದ. ದ್ವಾವಮ್ಮ ಅವನಿಗೆ ತಿಳಿಯದಂತೆ ಕಣ್ಣೊರೆಸಿಕೊಂಡಳು. ಭಯದಿಂದ ಅವಳೆದೆ ಜೋರಾಗಿ ಬಡಿದುಕೊಂಡಿತು. ವಿಪರೀತ ಲಜ್ಜೆಯೂ ಮೂಡಿ ಎದ್ದು ತಲೆತಗ್ಗಿಸಿ ನಿಂತಳು. ಸಂತಾನಪ್ಪ ಡೇಸಾರ ಅಪಾರ ಸಂಪತ್ತಿನ ಒಡೆತನಕ್ಕೆ ಇವಳಿಂದಲೂ ಸಮರ್ಥ ಪುತ್ರನೊಬ್ಬನನ್ನು ಪಡೆಯುವ ಇಚ್ಛೆಯಿಂದ ಸಮೀಪಿಸಿದ. ದ್ಯಾವಮ್ಮ ಅವನನ್ನು ಎದುರುಗೊಂಡಳು. ತುಸುಹೊತ್ತಲ್ಲಿ ಶ್ರೀಮಂತ ಗಂಡನ ತೋಳತೆಕ್ಕೆಯಲ್ಲಿ ಮೃದುವಾಗಿ ನಲುಗುತ್ತ ತೃಪ್ತಿಯ ಪರಾಕಷ್ಠೆ ತಲುಪಿದ ಮರುಕ್ಷಣ ಅವಳು ತನ್ನ ಕೊರಳನ್ನು ವಿನಾಕಾರಣ ನೋಯಿಸುತ್ತಿದ್ದ ಮುತ್ತಿನ ಹಾರವನ್ನು ಸರ್ರನೆ ಕಿತ್ತೆಸೆಯುವಂತೆ ಪರಮೇಶನ ಪ್ರೀತಿಯ ನೆನಪುಗಳನ್ನೂ ಮನಸ್ಸಿನಿಂದ ಹರಿದು ಚೆಲ್ಲಿಬಿಟ್ಟಳು.                                                          *** ಅತ್ತ ದ್ಯಾವಮ್ಮಳ ಮೊದಲ ರಾತ್ರಿಯ ಹೊತ್ತು ಪರಮೇಶ ತೀರಾ ವಿಚಲಿತನಾಗಿದ್ದ. ಅವಳ ಅಗಲಿಕೆಯ ನೋವನ್ನು ತಾಳಲಾಗದೆ ಮೂಗಿನ ಮಟ್ಟ ಕುಡಿದು ಮಸಣದ ಗುಡ್ಡೆಯ ಪಕ್ಕದ ಮೈದಾನದಲ್ಲಿ ಅಂಗಾತ ಬಿದ್ದುಕೊಂಡು ದಟ್ಟ ಕತ್ತಲಾಗಸವನ್ನು ದಿಟ್ಟಿಸುತ್ತ ರೋಧಿಸುತ್ತಿದ್ದ. ತನ್ನ ಸಂಗಾತಿಯಾಗಿ ತನ್ನ ವಂಶದ ಕುಡಿಗಳನ್ನು ಹೆತ್ತು ಹೊತ್ತು ಜೀವನ ಹಸನಾಗಿಸಲೆಂದೇ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಹೊಸ್ತಿಲಾಚೆಗಿನ ರಂಗಜೀವಿ ಬದುಕ ರಂಗವನ್ನು ಆತ್ಮ ತೊರೆದಿತ್ತು. ಮನೆಯ ಉದ್ದದ ಚಾವಡಿಯಲ್ಲಿ ಅತ್ತೆಯ ಶರೀರ  ಮಲಗಿತ್ತು. ತಲೆಯ ಬದಿಯಲ್ಲಿ ತೆಂಗಿನ ಕಾಯಿಯ ಒಂದು ಭಾಗದೊಳಗೆ ದೀಪ ಮೌನವಾಗಿ ಉರಿಯುತ್ತಿತ್ತು. ರಾಶಿ ಮೌನಗಳನ್ನು ದರದರನೆ ಎಳೆತಂದು ಕಟ್ಟಿ ಹಾಕಿದ ರಾಕ್ಷಸ ಮೌನ ಘೀಳಿಡುತ್ತಿತ್ತು. ಎದೆ ಒತ್ತುವ, ಕುತ್ತಿಗೆ ಒತ್ತುವ ನಿರ್ವಾತಕ್ಕೆ ಅಂಜಿ ಮುಂಬಾಗಿಲಿಗೆ ಬಂದೆ. ಶರೀರವನ್ನು ಉದ್ದಕ್ಕೆ ನೆಲಕಂಟಿಸಿ ಮುಖವನ್ನು ಅಡ್ಡಕ್ಕೆ ಬಾಗಿಸಿ ‘ಪೀಕು’ ಮಲಗಿದ್ದಾಳೆ. ನಾನು ಅಲ್ಲಿರುವುದು ತಿಳಿದಿಲ್ಲವೇ? ಯಾವಾಗಲೂ ನಡಿಗೆಯ ಪದತರಂಗವನ್ನು ಗಬಕ್ಕೆಂದು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಹುಡುಕಾಟ ನಡೆಸುವವಳು ತಾನೇ ವ್ರತ ಹಿಡಿದಂತೆ ಒರಗಿದ್ದಾಳೆ. ನನ್ನ ಕಂಠದಿಂದ ಸ್ವರ ಹೊರಡುತ್ತಿಲ್ಲ. ಎಂದಿನ ಲಾಲಿತ್ಯದಲ್ಲಿ ” ಪೀಕು   ಪೀಕೂ.. ಪೀ….ಕೂ” ಎನ್ನುವ ಭಾವ, ಶಬ್ದ, ಸ್ವರ ಒಣಗಿ ಹೋಗಿದೆ. ಮತ್ತೆ ಒಳನಡೆದೆ.  ಮನೆಯ ಹಿರಿಯ ಜೀವ ಮನೆ ತೊರೆದು  ನಡೆದಿದ್ದರು. ಕಾಲದ ಹೆಜ್ಜೆಗೆ ಸ್ಪಂದಿಸಿ, ಮೌನ ಒಡೆದು ಮಾತು ತೇಕಿ ತೆವಳಿ ನಡೆ ಆರಂಭಿಸಿತ್ತು.ಆದರೆ ಪೀಕು ಮಾತ್ರ ಚಾವಡಿಯ ಮೆಟ್ಟಲಿನ ಕೆಳಗೆ ಕೂತು ಪೇಲವ ದೃಷ್ಟಿಯಿಂದ ಒಳಗೆ ದಿಟ್ಟಿಸುತ್ತ ಮತ್ತೆ ನೆಲಕ್ಕೊರಗುತ್ತಿದ್ದಾಳೆ. ನಾಲ್ಕು ದಿನವಾಯಿತು. ಒಂದಗುಳು ಅನ್ನ,ನೀರು ಮುಟ್ಟಿಲ್ಲ. ಅಕ್ಕನ ಸಾವಿಗೆ ದಿಗಿಲಾಗಿ ಓಡಿ ಬಂದ ಮಾತಿಲ್ಲದ, ಶ್ರವಣಾತೀತ ದೇವತೆ, ತಾರಕ್ಕನೂ ಇದೀಗ ಹೌದೋ ಅಲ್ಲವೋ ಎಂಬಂತೆ ಕಣ್ಣಲ್ಲಿ ತೆಳು‌ವಾಗಿ ನೀರು ತುಂಬಿ ಪೀಕುವಿನ ಬಳಿ ಹೋಗಿ “ವ್ಯಾವ್ಯಾ. ವ್ಯಾ…ವ್ಯಾ ” ಎಂದು ಕೈ,ಕಣ್ಣು ಬಾಯ ಸನ್ನೆಯಲ್ಲಿ ಆಡುತ್ತಿದ್ದಾರೆ. ಯಾವತ್ತೂ ಸ್ಪಂದಿಸುವ ಪೀಕು ಅದೂವುದೂ ನನಗಲ್ಲ ಎಂಬಂತಿದ್ದಾಳೆ.  ನಾನೂ ಹಲವಾರು ಬಾರಿ ಮೈ ಸವರಿ ಮಾತನಾಡಿಸಿಯಾಗಿದೆ.  ರೂಮಿನಲ್ಲಿ ನಿಶ್ಚಲವಾಗಿ ಕೂತ ನನ್ನನ್ನು,  ಸರ್ರೆಂದು ಬಂದ ತಾರಕ್ಕ ಕಣ್ಣು ಉರುಟುರುಟು ತಿರುಗಿಸಿ ನೋಟದಲ್ಲಿಯೇ ಗದರಿಸ ತೊಡಗಿದರು. ನಾನು ಪೀಕು ಬಳಿ ಬಂದೆ. ಆ ಕಪ್ಪು ತುಪ್ಪಳದ ಮೈ ಎತ್ತಿ ಮಡಿಲಲ್ಲಿ ತುಂಬಿ ನೇವರಿಸ ತೊಡಗಿದೆ. ಅನತಿ ದೂರದ ದಂಡೆಯಲ್ಲಿ ಕೂತ ” ಚಿನ್ನು”   ಫಟ್ಟೆಂದು ಹಾರಿ ನನ್ನ ಬಳಿ ಬಂದಳು.  ಅದಕ್ಕೂ ಪೀಕು ಸ್ಪಂದಿಸಲಿಲ್ಲ.  ಹಾಗೆ  ಅಂಗಳದಲ್ಲಿ ನಾನು, ‘ಪೀಕು’ ಮತ್ತು ‘ಚಿನ್ನು’ ನಡುವೆ ಶಬ್ದದ ಹೊಸ್ತಿಲಿನ ಆಚೆಗಿನ ಸಾವಿರದ ಮಾತುಗಳು ವಿನಿಮಯಗೊಳ್ಳುತ್ತಿದ್ದವು. ಹೊತ್ತು‌ ದಣಿ ದಣಿದು ಕಂತುತ್ತಿತ್ತು. ಮೆಲ್ಲಗೆ ಎದ್ದ ಪೀಕು ದಯನೀಯವಾದ ನೋಟ ಹರಿಸಿ ಪಕ್ಕದ ಪಾತ್ರೆಯಲ್ಲಿದ್ದ ನೀರನ್ನು, ತನ್ನ ನೀಳ ನಾಲಿಗೆ ಹೊರ ಚಾಚಿ, ಮೆಲ್ಲಗೆ ಕುಡಿಯತೊಡಗಿದಳು. ಚಿನ್ನು ನೆಗೆಯುತ್ತ‌ ಮನೆಯೊಳಗೆ ಓಡಿದಳು. ಈ ಹಳ್ಳಿಮನೆಯಲ್ಲಿ ಆಟವಾಡಿ  ನನಗೆ ರಸಾನುಭವ ಉಣಬಡಿಸಿದ ಚಿನ್ನು ಹಾಗೂ ಪೀಕು ಎಂಬ ಎರಡು ಪಾತ್ರಗಳನ್ನು ಪರಿಚಯಿಸಲೇ ಬೇಕು.ಕೃಷ್ಣೇಗೌಡರ ಆನೆ, ನಾಯಿ ಕಥೆಯಂತಹ ನಾಟಕ ಕಟ್ಟೋಣದಲ್ಲಿ ಚಿನ್ನು ಪೀಕುರಂತವರ ಪ್ರತ್ಯಕ್ಷ, ಪರೋಕ್ಷ ಪಾತ್ರಾಭಿನಯ ಸಾಮಾನ್ಯವೇ? ಹಸಿರುತೋಟದ ನಡುವೆ, ಆಗಸ ಮತ್ತು ಅಂಗಳದ ನಡುವೆ ಹೆಂಚಿನ ಮಾಡು. ಅಂಗಳರಂಗದ ಇಂಚಿಂಚೂ ಬಳಸಿಕೊಂಡು ಹೊಸ್ತಿಲಿನಾಚೆಗೆ ಮತ್ತು ಈಚೆಗೆ ಜೀವಾಭಿನಯ. ಪೀಕು ಎಂಬ ನಾಯಿ, ಅದಾಗಲೇ ಆ ಮನೆಗೆ, ಪರಿಸರಕ್ಕೆ ಹಳಬಳಾಗಿದ್ದಳು. ನಂತರ ಪ್ರವೇಶ ಪಡೆದ  ಬಿಳೀದೇಹದ ಬೆಕ್ಕು-ಪುಟಾಣಿ ಚಿನ್ನು.ಚಿನ್ನು ವಿಪರೀತ ಕೀಟಲೆ. ನಮ್ಮ ಬೆರಳುಗಳೊಂದಿಗೆ, ಮಲಗಿದಾಗ ತಲೆಗೂದಲಿನೊಂದಿಗೆ ಆಟವಾಡಿ ತರಲೆ ಮಾಡುವ ತುಂಟಿ.   ಪೀಕು ಹಾಗೂ ಚಿನ್ನು ಇವರ ನಡುವಿನ ಕೋಪ, ಮುನಿಸು, ಕೀಟಲೆಗಳನ್ನೊಳಗೊಂಡ ಆಟದಂತಹ ಜಗಳ ನಡೆಯುತ್ತಲೇ ಇತ್ತು. ಇದು ಮನರಂಜನೆ. ಆದರೆ ತುಸು ಭಯ ಹುಟ್ಟಿಸುತ್ತಿತ್ತು. ಅದೊಂದು ಘಟನೆಯಂತೂ ಅಚ್ಚರಿ, ಭಯ, ದುಃಖ ಎಲ್ಲವನ್ನೂ ಜೊತೆಜೊತೆಯಾಗಿಸಿತ್ತು.ಚಿನ್ನುಗೆ ಮನೆಯ ಒಳಗಿನ ಅಧಿಪತ್ಯವಾದರೆ ಪೀಕುವಿನ ಸಾಮ್ರಾಜ್ಯ ಹೊರಗಡೆ. ಎರಡೂ ಸಾಮ್ರಾಜ್ಯಗಳ ನಡುವೆ ಮನೆಯ ಹೊಸ್ತಿಲು.  ಪುಟ್ಟ ದೇಹದ ಬಿಳಿ ಬಣ್ಣದ ಚಿನ್ನು ಎಲ್ಲರ ಮುದ್ದು. ಮನೆ ಮಂದಿ ಹಾಲ್ ನಲ್ಲಿ ಕುರ್ಚಿ, ಸೋಫಾಗಳಲ್ಲಿ ಕೂತರೆ ಅಡುಗೆ ಮನೆಯಲ್ಲಿ ತೂಕಡಿಸುತ್ತಿದ್ದವಳು ಮೊಲದಂತೆ ನೆಗೆಯುತ್ತ ಓಡಿಬರುತ್ತಿದ್ದಳು. ಕಾಲಿಗೆ ಮುಖ ಉಜ್ಜಿ ಸಣ್ಣನೆಯ ಸ್ವರದಲಿ ಮಿಯ್ಯಾಂವ್ ಎಂದು ಆಲಾಪಿಸಿ ಎಂದು ತನ್ನ ಮುಖ ಎತ್ತಿ ನಮ್ಮ ಮುಖವನ್ನೇ ನೋಡಿ ಕಣ್ಣು ಮಿಟುಕಿಸುತ್ತ ಒಂದೇ ನೆಗೆತಕ್ಕೆ ಸೋಫಾ ಏರುತ್ತಿದ್ದಳು. ನೇರವಾಗಿ ಮಡಿಲ ಬಿಸಿಗೆ ತವಕಿಸಿ ತನ್ನ ಹಕ್ಕು ಎಂಬಂತೆ ಕೂತು ಬಿಡುತ್ತಿದ್ದಳು. ಹೊಸಿಲ ಹೊರಗಿನ ಪೀಕುವಿಗೆ ಆಗಲೇ ತಳಮಳ. ಕಾಲಿನಿಂದ ನೆಲ ಕೆರೆಯುತ್ತ,ಬೊಗಳುತ್ತ, ಅಳುತ್ತ ತನ್ನ ಪ್ರತಿಭಟನೆ, ಅಸಹನೆ ತೋರ್ಪಡಿಸುತ್ತಿತ್ತು. ಹೊಸತಾಗಿ ಬಂದ ಈ ಲಾವಣ್ಯವತಿ, ತನಗಾಗಿ ಮುಡಿಪಾಗಿದ್ದ ಅಷ್ಟೂ ಪ್ರೀತಿಯನ್ನೂ ಕಸಿದುಕೊಂಡರೆ!.  ಚಿನ್ನುವಿಗೆ ಇದೊಂದು ಆಟದಂತೆ. ಕೂತವರ ಮಡಿಲಿನಿಂದ ಜಾರಿದರೂ  ಹೋಗುವುದು ನೇರ ಹೊಸಿಲಿನ ಬಳಿ. ಹೊಸಿಲ ಮೇಲೆ, ಅಥವಾ ಹೊಸಿಲಿನಿಂದ ಹೊರಗೆ ತಪಸ್ವಿಯಂತೆ ಕೂತು ಪೀಕುವನ್ನೇ ನೋಡುವುದು. ಅವಳಿಗೆ ಅದುವರೆಗಿನ ಸಿಟ್ಟು ಮತ್ತಷ್ಟು ಹೆಚ್ಚಿ ತನ್ನನ್ನು ಕಟ್ಟಿ ಹಾಕಿದ ಸರಪಳಿ ಕತ್ತರಿಸಿ ಹಾಕಿ ಇವಳ ಹಿಡಿದು ಬಿಡುವೆ ಎನ್ನುವಂತೆ ಸರಪಳಿ ಎಳೆಯುತ್ತಾಳೆ ಈ ಸರಪಳಿಯ ಅಳತೆ ಚಿನ್ನುವಿಗೆ ಸರಿಯಾಗಿ ಗೊತ್ತಿದೆ. ಅವಳು ಅಳತೆ ಪಟ್ಟಿ ಹಿಡಿದು ದೂರ ಅಳೆದು, ಕರಾರುವಾಕ್ಕಾಗಿ , ಪೀಕುವಿನ ಕಾಲು,ಮುಖ ತಾಗಿತು ಅನ್ನುವಷ್ಟು ಹತ್ತಿರ ಆದರೂ ತಾಗದಂತೆ ಕೂತು ಬಿಡುತ್ತಿದ್ದಳು. ಕೆಲವೊಮ್ಮೆ ಬೊಗಳಿ ತನ್ನನ್ನು ಕಟ್ಟಿದ ಸರಪಳಿ ಎಳೆದು ಎಳೆದು ಸುಸ್ತಾಗಿ ಪಚಪಚ ಎಂದು ನೀರು ಕುಡಿಯುತ್ತಿದ್ದಳು. ಅವಳನ್ನು ಸಾಕಷ್ಟು ಗೋಳುಹೊಯ್ಸಿದ ನಂತರವೇ ಈ ಪುಟಾಣಿ ಚಿನ್ನು ಹೊಸಿಲು ಬಿಟ್ಟು ಹೊರಡುತ್ತಿದ್ದದ್ದು. ಇದು ಯಾವುದೋ ಒಂದು ದಿನದ ಲಕಥೆಯಲ್ಲ. ಇದು ಎಂದೂ ಮುಗಿಯದ ಧಾರವಾಹಿ. ಎಷ್ಟು ಎತ್ತಿ ತಂದರೂ ಚಿನ್ನು ಕುಳಿತು ಕೊಳ್ಳುವುದು ಅಲ್ಲೇ. ಕೆಲವೊಮ್ಮೆ ನಿಧಾನವಾಗಿ ತನ್ನ  ಎದುರಿನ ಕಾಲು ಮುಂದೆ ತಂದು ಮಲಗಿದ್ದ ಪೀಕುವನ್ನು ಮುಟ್ಟಿ ಎಚ್ಚರಿಸಿ ಥಟ್ಟೆಂದು ಓಡಿ ಒಂದು ತನ್ನ ಜಾಗದಲ್ಲಿ ಕೂತು ನುರಿತ ಆಟಗಾರಳಂತೆ ಕದನ ಆರಂಭಿಸುವುದೂ ಇದೆ. ಅದೊಂದು ದಿನ ಮನೆಯೊಳಗೆ ಮನೆಮಂದಿ ಹರಟೆಯಲ್ಲಿದ್ದಾಗ ಥಟ್ಟೆಂದು ಪೀಕು ಮನೆಯೊಳಗೇ ಬಂದು ಬಿಟ್ಟಳು ಹಾಗೆಲ್ಲ ಅತಿಕ್ರಮ ಪ್ರವೇಶ ಮಾಡುವ ಹೆಣ್ಣಲ್ಲ ಅದು. ಹೀಗೆ ಏಕಾಏಕಿ ಬಂದು ನಮ್ಮ ಮುಖವನ್ನು ಆತಂಕದಲ್ಲಿ ನೋಡಿದಂತೆ ನೋಡಿ ಹೊರಗೋಡಿದಳು. ಹಿಂತಿರುಗಿ ನೋಡಿ ನಾವು ಅವಳನ್ನು ಹಿಂಬಾಲಿಸುತ್ತಿಲ್ಲವೆಂದು ಮತ್ತೆ ಓಡಿ ಒಳಬಂದು ಬಾಲವನ್ನು ನನ್ನ ಮೈಗೆ ಸವರಿ, ಮುಖನೋಡುತ್ತ ತನ್ನ ಭಾಷೆಯಲ್ಲೇ “ಹ್ಹುಂ  ಹ್ಹೂಂ… ಬೌ…..”ಎನ್ನುತ್ತ ಹೊರಗೋಡುತ್ತ ಚಡಪಡಿಸುತ್ತಿದ್ದಳು. ಇದನ್ನು ನೋಡಿದ ಅತ್ತೆ ಮಗನಿಗೆ” ಏನೋ ಆಗಿದೆ. ಅವಳ ಹಿಂದೆ ಹೋಗು. ಹಾವು ಗೀವು ಬಂದಿರಬೇಕು. ಎಲ್ಲಿ ಬಡಿದು ಹಾಕಿ ತೋರಿಸಲು ಬಂದಿದ್ದಾಳೋ..”ಎಂದು ಮಣಮಣಿಸುತ್ತಿದ್ದರು. ನಾನೂ,ನನ್ನವರೂ ಓಡಿದೆವು. ಪೀಕು ನಮ್ಮನ್ನು ಬಟ್ಟೆ ಒಗೆಯವ ಬಾವಿ ಕಟ್ಟೆಯ ಹತ್ತಿರ ಕರೆದೊಯ್ದಳು.  ಹಳ್ಳಿಯ ಮನೆಯಲ್ಲಿ ಪಾತ್ರೆ, ಬಟ್ಟೆ ಎಲ್ಲವನ್ನೂ ತೊಳೆಯಲು ಮನೆಯ ಹೊರಗಡೆ, ಅನತಿ ದೂರದ ಬಾವಿಕಟ್ಟೆಯ ಸಮೀಪವೇ ವ್ಯವಸ್ಥೆಯಾಗಿತ್ತು. ಅಲ್ಲಿಂದ ತೊಳೆದ ನೀರು ಹರಿದು ತೆಂಗಿನ ಮರದ ಬುಡಕ್ಕೆ ಹೋಗುತ್ತಿತ್ತು. ಸತತ ನೀರು ಹೋಗಿ ಅಲ್ಲಿ ಆಳ ಗುಂಡಿಯಂತೆ ಆಗಿತ್ತು. ಕಪ್ಪನೆ ಕೆಸರು ಮಣ್ಣು ತುಂಬಿಕೊಂಡಿದೆ. ಪೀಕು ಅದರ ಸಮೀಪ ಕರೆದೊಯ್ದು ನಮ್ಮ ಮುಖವನ್ನೂ, ಆ ಹೊಂಡವನ್ನೂ ನೋಡಿ ಆಕಾಶಕ್ಕೆ ಮುಖ ಎತ್ತರಿಸಿ ದೀರ್ಘ ಆಲಾಪ ತೆಗೆಯತೊಡಗಿದಳು.ನನ್ನವರು ಕೂತು ನೀರು, ಮಣ್ಣು, ಕೆಸರು ತುಂಬಿದ ಆ ಜಾಗವನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದಾಗ ಕಪ್ಪು ತುಸು ಅಲುಗಿದಂತೆ ಕಾಣಿಸಿತು.  ಕೂಡಲೇ ತಮ್ಮ ಕೈಯನ್ನು ಕೆಸರಿನೊಳಗೆ ಹಾಕಿ ಕಪ್ಪು ಕೆಸರಿನ ಮುದ್ದೆ ಹೊರತೆಗೆದರು. ನೀರು ಸುರಿದರು. ನಾನು ವಿಸ್ಮಯ ನೇತ್ರ ಳಾಗಿ ನೋಡುತ್ತಿದ್ದೇನೆ. ಚಿನ್ನುವಿನ ಪುಟ್ಟ..ನಿಶ್ಚಲವಾದ ದೇಹ. ಅಳು ಒತ್ತರಿಸಿ ಬಂತು” ಅಯ್ಯೋ ನಮ್ಮ ಚಿನ್ನು ಏನಾಯಿತು. ಸತ್ತು ಹೋಯಿತೇ ” ಪೀಕು ಅಪರಾಧಿಯಂತೆ ದೂರಹೋಗಿ ನಿಂತು ನನ್ನ ನೋಡುತ್ತಿದ್ದಾಳೆ.  ” ಇಲ್ಲ ಜೀವ ಇದೆ” ನನ್ನವರ ಮಾತಿನಿಂದು ತುಸು ಗೆಲುವಾಗಿ ಕೈಯಲ್ಲಿ ಸತ್ತಂತಿರುವ ಆ ಜೀವ ಹಿಡಿದು ಒಳಗೋಡಿ ಬಂದೆ. ಬೆಚ್ಚನೆಯ ಟವಲಿನಿಂದ ಮೈ ಒರೆಸಿ ದೇಹ ಬೆಚ್ಚಗಾಗಿಸಲು ಪ್ರಯತ್ನಿಸಿದೆ. ಹಾಗೇ ಬಿದ್ದಿತ್ತು. ಸ್ವಲ್ಪ ಹೊತ್ತು ಬಿಟ್ಟು ಕಣ್ಣು ನಿಧಾನವಾಗಿ ತೆರೆದು ನೋಡಿ ಹಾಗೇ ಮಲಗಿತು.ನಾವು ಒಳ ಹೊರಗೆ ಹೋಗುವಾಗೆಲ್ಲ ಎಂದಿನ ಗತ್ತು ತೋರದೆ ಪೀಕು ಅಪರಾಧಿಯಂತೆ ಕಳ್ಳ ನೋಟ ಬೀರುತ್ತಿದ್ದಳು ಆ ದಿನವೆಲ್ಲ ಚಿನ್ನುವನ್ನು ಗಮನಿಸುವುದೇ ಕೆಲಸ. ಸಂಜೆಯ ಸಮಯ ತೇಲಿದಂತೆ ಎದ್ದು ಹಾಲು ಕುಡಿದಳು. ಮರುದಿನ ಚಿನ್ನು ಸುಸ್ತಾದಂತೆ ಕಂಡರೂ ಆರೋಗ್ಯ ವಾದಳು. ನಂತರ ಒಂದಷ್ಟು ಕಾಲ ಚಿನ್ನು ಹೊಸಿಲ ಮೇಲೆ ಕೂತು ಅಣಕಿಸುವ, ಪೀಕುವನ್ನು ಛೇಡಿಸುವ ಆಟ ಸ್ಥಗಿತಗೊಳಿಸಿದಳು.  ಹೊರಹೋಗಬೇಕಾದರೂ ಪೀಕುವಿನ ಸಮೀಪದಿಂದ ಓಡಿಕೊಂಡು ಗಡಿ ದಾಟುತ್ತಿದ್ದಳು. ಪೀಕೂ ಮೊದಲಿನಂತೆ ಕಾಲುಕೆರೆದು ಆರ್ಭಟಿಸುತ್ತಿರಲಿಲ್ಲ. ಮೌನವಾಗಿ ಕೂತು ಓಡುವ ಚಿನ್ನುವನ್ನು ಗಮನಿಸುತ್ತಿದ್ದಳು. ಇದಾಗಿ ಹಲವು ದಿನಗಳ ನಂತರ ಮತ್ತೆ ಚಿನ್ನುವಿಗೆ ತುಂಟತನದ ಆಸೆ ಹೆಚ್ಚಿ, ಕಟ್ಟಿ ಹಾಕಿದ ಪೀಕುವಿನ ಬಳಿ ಅಂತರ ಇಟ್ಟು ಕೂರುತ್ತಿದ್ದಳು. ಆದರೆ ಇದು ಮೊದಲಿನಷ್ಟು ಉಮೇದು ಹೊಂದಿರಲಿಲ್ಲ. ಕೆಲ ನಿಮಿಷಕ್ಕೆ ಈ ಆಟ ಮುಗಿದು ಬಿಡುತ್ತಿತ್ತು. ಅಂತಹ ಪೀಕು ಮನೆಯೊಡತಿಯ ಅಗಲಿಕೆಗೆ ಮೌನವಾದಳು. ಅವಳ ಮೌನಕ್ಕೆ ಚಿನ್ನು ಶ್ರುತಿ ಹಿಡಿದಳು. ಪೀಕು ನಿಧಾನವಾಗಿ ಸಹಜಸ್ಥಿತಿಯತ್ತ ಬರುತ್ತಿದ್ದಂತೆ ಚಿನ್ನೂ ಗೆಲುವಾದಳು. ರಂಗದಲ್ಲಿ ಭಾವನೆಗಳ ಜೊತೆಯಲ್ಲಿ ಕಲಾವಿದರು ಆಟ ಆಡುತ್ತೇವೆ. ಜಗತ್ತಿನ ಶ್ರೇಷ್ಠ ಜೀವಿ ಮಾನವ. ನಮಗೆ ನೋವು ನಲಿವು ಎರಡನ್ನೂ ತೀವ್ರವಾಗಿ ಅನುಭವಿಸುವ ಶಕ್ತಿ ಇದೆ. ಅದನ್ನೇ ರಂಗದಲ್ಲಿ ಅಭಿನಯಿಸಿ ತೋರುತ್ತೇವೆ. ಆದರೆ ಇಂತಹ ಅದೆಷ್ಟೋ ಘಟನೆಗಳು,ಪ್ರಾಣಿ ಪ್ರಪಂಚದ ವರ್ತನೆಗಳು, ನಮ್ಮ ತಿಳುವಳಿಕೆ ಎಷ್ಟು ಅಪೂರ್ಣ ಎಂದು ನೆನಪಿಸುತ್ತದೆ. ಪ್ರಾಣಿಗಳೂ ಅದೆಷ್ಟು ಆಳವಾಗಿ ನೋವು ನಲಿವು ಕ್ರೋಧ, ಮುನಿಸುಗಳನ್ನು ತೋರಬಲ್ಲವು.  ಅವುಗಳ ರಂಗಸ್ಥಳ ಬಹಳ ದೊಡ್ಡದು. ನೈಜವಾದುದು. ಸಹಜವಾದುದು. ಆ ಪರಿಕರಗಳಲ್ಲಿ ಯಾವುದೇ ಮುಖವಾಡಗಳಿಲ್ಲ. ಕೆಲವೊಮ್ಮೆ ಈ ಅಭಿನಯದ ಆಟ ಅವುಗಳಿಗೆ ಪ್ರಾಣಾಪಾಯಕಾರಿಯೂ ಹೌದು. *********************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು ಓದಿಕೊಂಡ ಬುದ್ಧಿವಂತರು ಎಂದು ಬಲವಾಗಿ ನಂಬಿಕೊಂಡಿದ್ದೆ. ಇದರಿಂದಾಗಿ ಸಂಸ್ಕೃತ ಭಾಷೆಯ ಕುರಿತು ಗಂಭೀರವಾದ ವ್ಯಾಮೋಹವೊಂದು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನನ್ನೊಳಗೆ ಜಾಗೃತವಾಗುತ್ತಿತ್ತು. ಮತ್ತು ಸಂಸ್ಕೃತ ಸುಲಭ ಓದಿಗೆ ದಕ್ಕುವ ವಿಷಯವಲ್ಲದೆಯೂ ಹೆಚ್ಚಿನ ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವುದು ಸಾಧ್ಯ ಎಂಬ ಗೆಳೆಯರ ನಡುವಿನ ವದಂತಿಯನ್ನು ನಿಜವೆಂದು ನಂಬಿ ಎಂಟನೆ ತರಗತಿಗೆ ವಿಷಯ ಆಯ್ಕೆಯ ಸಂದರ್ಭದಲ್ಲಿ ಸಂಸ್ಕೃತವನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡೆ. ಆದರೆ ತರಗತಿಗಳು ಆರಂಭವಾದ ಬಳಿಕ ಸಂಸ್ಕೃತ ವಿಷಯ ಆಯ್ಕೆಯ ನನ್ನ ಒಲವು ತಪ್ಪು ಎಂಬುದರ ಅರಿವಾಗತೊಡಗಿತು. ನಾನು ನನ್ನೆಲ್ಲ ಪಠ್ಯಗಳ ಜೊತೆಯಲ್ಲಿ ಸಂಸ್ಕೃತ ಪಠ್ಯವನ್ನು ಖರೀದಿಸಿ ತರಗತಿಗೆ ಹೋಗಲಾರಂಭಿಸಿದೆ. ಆದರೆ ಅದು ಏಕೋ ಸಂಸ್ಕೃತ ತರಗತಿಯಲ್ಲಿ ನನ್ನ ಉಪಸ್ಥಿತಿ ನಮ್ಮ ತರಗತಿಯ ಸಂಸ್ಕೃತ ಮೇಷ್ಟ್ರಿಗೆ ಹಿತವಾಗಿ ಕಾಣಲಿಲ್ಲ. ಬಹುತೇಕ ಬ್ರಾಹ್ಮಣ, ಗೌಡ, ಸಾರಸ್ವತ ಬ್ರಾಹ್ಮಣ ಇತ್ಯಾದಿ ಮೇಲ್ಜಾತಿಯ ಬೆಳ್ಳುಂಬೆಳಗಿನ ವಿದ್ಯಾರ್ಥಿ ಸಮುದಾಯದ ನಡುವೆ ಕಪ್ಪು ಬಣ್ಣದ ಒಬ್ಬನೇ ಒಬ್ಬ ವಿದ್ಯಾರ್ಥಿ ಇಡಿಯ ತರಗತಿಗೆ ಕಳಂಕದ ‘ಕಪ್ಪು ಚುಕ್ಕೆ’ ಎಂಬಂತೆ ನಮ್ಮ ಗುರುಗಳ ಕಣ್ಣಿಗೆ ಕಂಡಿರಬೇಕು. ಅವರು ತರಗತಿಯಲ್ಲಿ ತುಂಬ ವಿಶಿಷ್ಟವೆನ್ನಿಸುವ ದೃಷ್ಟಿಯಲ್ಲಿ ನನ್ನನ್ನು ನೋಡತೊಡಗಿದರು. ಅವರು ನನ್ನೆಡೆಗೆ ಬೀರುವ ನೋಟದಲ್ಲಿಯೇ “ಎಲಾ ಶೂದ್ರ ಮುಂಡೇದೆ ನೀನೂ ಸಂಸ್ಕೃತವ ಕಲೀತಿಯೇನೋ…?” ಎಂಬ ತಿರಸ್ಕಾರದ ದೃಷ್ಟಿ ಇರುವುದು ನನ್ನ ಅರಿವಿಗೆ ನಿಲುಕಲಿಲ್ಲ. “ಈ ಶೂದ್ರನಿಗೆ ಸಂಸ್ಕೃತವನ್ನು ಹೇಳಿಕೊಟ್ಟು ತಾನು ಪೂಜ್ಯ ಮನು ಮಹರ್ಷಿಯ ಘನ ಶಾಪಕ್ಕೆ ಪಕ್ಕಾದೆನಲ್ಲಾ…” ಎಂಬ ಅವರೊಳಗಿನ ಚಡಪಡಿಕೆಯನ್ನು ಅರ್ಥ ಮಾಡಿಕೊಳ್ಳುವ ಬುದ್ಧವಂತಿಕೆಯೂ ಅಂದು ನನಗಿರಲಿಲ್ಲ. ಈ ಶ್ರೀಪಾದರೆಂಬ ಸಂಸ್ಕೃತ ಶಿಖಾಮಣಿಗಳು ನಾನು ಸಂಸ್ಕೃತವನ್ನು ಬಿಟ್ಟು ಬಿಡುವಂತೆ ಬಾಯಿಬಿಟ್ಟು ಹೇಳಲಾಗದ ಸಂಕಟಕ್ಕೆ ವಾಮ ಮಾರ್ಗವೊಂದನ್ನು ಹಿಡಿದರು. ಚಡಪಡಿಕೆ ಸಂಕಟಗಳ ನಡುವೆಯೇ ಸಂಸ್ಕೃತ ವಚನ ವಿಭಕ್ತಿಗಳ ಕುರಿತು ಪಾಠ ಆರಂಭಿಸಿ ಸಂಸ್ಕೃತದಲ್ಲಿರುವ ಏಕವಚನ, ದ್ವಿವಚನ, ಬಹುವಚನಗಳನ್ನು ತಿಳಿಸಿ ನಾಮಪದ, ಸರ್ವನಾಮಗಳನ್ನು ಮೂರು ವಚನಗಳಲ್ಲಿ ಮತ್ತು ಸಂಸ್ಕೃತದ ಎಂಟು ವಿಭಕ್ತಿಗಳಲ್ಲಿ ರೂಪಾಂತರಿಸಿ ನಡೆಸಲು ಶ್ರುತಿ ಸ್ಮೃತಿ ಪರಂಪರೆಯ ಮೂಲಕ ಗುರುಕುಲದ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ ಬಳಸಿದ,“ರಾಮಃ ರಾಮೌ ರಾಮಾಃ…” (ರಾಮ, ಇಬ್ಬರು ರಾಮರು, ಅನೇಕ ರಾಮರು) ಇತ್ಯಾದಿ ಉದಾಹರಣೆಯ ಶ್ಲೋಕ ಮಾದರಿಯೊಂದನ್ನು ಕಂಠಪಾಠ ಮಾಡಲು ತಿಳಿಸಿದರು. ಮತ್ತು ಮರುದಿನವೇ ಪಾಠ ಒಪ್ಪಿಸಲು ತಾಕೀತು ಮಾಡಿದ್ದರು. ವಸತಿ ನಿಲಯದ ನಿರ್ಜನ ಮೂಲೆಯಲ್ಲಿ, ಆಟದ ಬಯಲಿನಲ್ಲಿ, ಸ್ನಾನಕ್ಕೆ ನಿಂತಾಗಲೂ ಈ “ರಾಮಃ ರಾಮೌ…” ಪಠ್ಯ ಹಿಡಿದು ಕಂಠಪಾಠ ಮಾಡಿದೆ. ಆದರೆ ತರಗತಿಯಲ್ಲಿ ಗುರುಗಳು ನನ್ನನ್ನೆ ಎದ್ದು ನಿಲ್ಲಿಸಿ ಪಾಠ ಒಪ್ಪಿಸಲು ತಿಳಿಸಿದಾಗ ಒಂದಕ್ಷರವೂ ನನ್ನ ಬಾಯಿಂದ ಹೊರ ಬಾರದೆ ನಗೆಪಾಟಲಾದೆ. ಗುರುಗಳು ಇದನ್ನೇ ಅಸ್ತçವಾಗಿ ನಿತ್ಯವೂ ಬಳಸತೊಡಗಿದರು. ಅದೇನೋ ಹೇಳುವಂತೆ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಪ್ರಯೋಗಿಸುವಂತೆ ನಿಷ್ಕುರಣೆಯಿಂದ ಅಸ್ತ್ರ ಪ್ರಯೋಗ ಮಾಡಿದರು. ಅಷ್ಟಕ್ಕೆ ನಿಲ್ಲದೆ ವೈಷ್ಣವಾಸ್ತ್ರ,  ನೀಲಕಂಠಾಸ್ತ್ರಗಳನ್ನೂ ನೆರವಿಗೆ ತೆಗೆದುಕೊಂಡವರಂತೆ ಬೇರೆ ಬೇರೆ ದೃಷ್ಟಾಂತಗಳನ್ನು ಹೇಳಿ ನನ್ನನ್ನು ಹಿಂಸೆಗೀಡು ಮಾಡಿದರು. ಗುರುಗಳ ವ್ಯಂಗ್ಯೋಕ್ತಿಗಳು, ಸಹಪಾಠಿಗಳ ಅಪಹಾಸ್ಯದ ನಗುವಿನೊಡನೆ ಹತ್ತೆಂಟು ದಿನಗಳ ಕಾಲ ತೀವೃವಾದ ಹಿಂಸೆಯನ್ನು ಅನುಭವಿಸಿದೆ. ತರಗತಿ ಆರಂಭ ಆಗುತ್ತಿದ್ದಂತೆಯೇ ನನ್ನನ್ನು ಮೊದಲು ಎದ್ದು ನಿಲ್ಲಿಸುವುದು, ಹಲವು ಪ್ರಶ್ನೆಗಳನ್ನು ನನ್ನೊಬ್ಬನಿಗೇ ಕೇಳುವುದು… ಇತ್ಯಾದಿ ಆಕ್ರಮಣಗಳಿಂದ ಭಯ ನಾಚಿಕೆಯಲ್ಲಿ ನಾನು ನಿತ್ಯವೂ ಸಂಸ್ಕೃತ ತರಗತಿಯಲ್ಲಿ ಬೆವರಿಳಿದು ಬಸವಳಿಯುತಿದ್ದೆ. ಇದನ್ನು ನೋಡಿ ನೋಡಿ ಗುರುಗಳು ಹಿಂಸಾರತಿಯ ಆನಂದವನ್ನು ಅನುಭವಿಸುತ್ತಿದ್ದರು. ನನಗೆ ಸಂಸ್ಕೃತದ ಸಹವಾಸ ಸಾಕು ಅನಿಸಿತು. ಕೊಂಡು ತಂದ ಪುಸ್ತಕವನ್ನು ಸಹಪಾಠಿಯೊಬ್ಬನಿಗೆ ಅರ್ಧ ಬೆಲೆಗೆ ಮಾರಿ ಕೈತೊಳೆದುಕೊಂಡೆ. ಸಂಸ್ಕೃತವನ್ನು ಬಿಟ್ಟು ‘ಎಡಿಷನಲ್ ಕನ್ನಡ’ ಆಯ್ದುಕೊಂಡೆ ಗುರುಗಳು ನಿರಾಳವಾದರು. ಆದರೆ ಸಂಸ್ಕೃತದ ಕುರಿತಾದ ನನ್ನ ಪ್ರೀತಿ ನನ್ನೊಳಗೆ ಸುಪ್ತವಾಗಿ ಉಳಿದುಕೊಂಡಿತ್ತು. ಮುಂದೆ ಜಿ.ಸಿ. ಕಾಲೇಜಿನಲ್ಲಿ ಪದವಿ ತರಗತಿಯನ್ನು ಓದುವಾಗ ಪ್ರೊ.ಎಂ.ಪಿ.ಭಟರಲ್ಲಿ ವಿನಂತಿಸಿಕೊಂಡು ಸಂಸ್ಕೃತವನ್ನು ಮೈನರ್ ವಿಷಯವಾಗಿ ಆಯ್ದುಕೊಂಡೆ. ಮತ್ತು ಮೂರು ವರ್ಷಗಳಲ್ಲಿಯೂ ಸಂಸ್ಕೃತದಲ್ಲಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾಗಿದ್ದೆ. ಹಾಗೆಂದು ಸಂಸ್ಕೃತದ ವಿಶೇಷ ಪಾಂಡಿತ್ಯವೇನೂ ದಕ್ಕಲಿಲ್ಲ. ಪರೀಕ್ಷೆಯಲ್ಲಿ ಕನ್ನಡದಲ್ಲಿಯೇ ಉತ್ತರಿಸುವ ಅವಕಾಶವಿದ್ದುದರಿಂದ ಹೆಚ್ಚಿನ ಅಂಕ ಗಳಿಕೆಗೆ ಪೂರಕವಾಯಿತು ಅಷ್ಟೆ. ಆದರೂ ಸಂಸ್ಕೃತದ ಒಂದಿಷ್ಟು ಕಾವ್ಯಾಭ್ಯಾಸ, ಅರಿವಿನ ವಿಸ್ತಾರವನ್ನು ಹೆಚ್ಚಿಸಿದ್ದು ನಿಜವೇ. ಯಕ್ಷಗಾನ ಕಲಾವಿದನಾಗಿ ಪಾತ್ರ ನಿರ್ವಹಿಸುವಾಗ ಒಂದಿಷ್ಟು ಶ್ಲೋಕಗಳನ್ನು ನಿರರ್ಗಳವಾಗಿ ಮಾತಿನ ಮಧ್ಯೆ ಪ್ರಯೋಗಿಸಲು ಅನುಕೂಲವಾದದ್ದು ಕೂಡ ಸಂಸ್ಕೃತದ ಕಲಿಕೆಯ ಪ್ರಯೋಜನ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನನ್ನ ಪ್ರೀತಿಯ ಪ್ರಾಧ್ಯಾಪಕರಲ್ಲಿ ಒಬ್ಬರಾದ ಪ್ರೊ.ಎಂ.ಪಿ.ಭಟ್ ಅವರಿಗೆ ನಾನು ಸದಾ ಋಣಿಯಾಗಿರುವೆ. ********************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top