ಅಂಕಣ ಬರಹ “ಆಕಾಶವಾಣಿಯ ಅವಕಾಶದಾಕಾಶ” “ಬರೆದ ಕಥೆ ಹಾಗೇ ಬಿಡುವಂತಿಲ್ಲ. ವಿಳಾಸ ಕೊಡುತ್ತೇನೆ. ಆಕಾಶವಾಣಿಗೆ ಕಳುಹಿಸು. ನೋಡೋಣ! ನೀನು ಎಂತಹ ಕಥೆಗಾರ್ತಿ”.ನಾನು ಬರೆದ ಕಥೆಯೊಂದು ಸರ್ ಗೆ ಸಿಕ್ಕಿ ಗಂಡ- ಹೆಂಡತಿ ಅದನ್ನು ಓದಿ ಮುಂದಿನ ಬಾರಿ ಅವರ ಮನೆಗೆ ಹೋದಾಗ ಇಬ್ಬರೂ ಸೇರಿ ವಿಚಾರಣೆಗೆ ಕಟಕಟೆಯಲ್ಲಿ ನಿಲ್ಲಿಸಿದ್ದರು. ತಲೆತಗ್ಗಿಸಿದವಳ ಪರ ಲಾಯರ್ ಆಗಿ ಅವರ ಶ್ರೀಮತಿ ನಿಂತಿದ್ದರು. ಕೊನೆಗೂ ತೀರ್ಪು ಹೊರಬಿದ್ದಿತ್ತು. ಚಿಕ್ಕನಡುಕ,ಸಂಭ್ರಮ ಜೊತೆಯಾಗಿತ್ತು. ಆದರೆ ಸರ್ ಗೆ ಆಕಾಶವಾಣಿಯಲ್ಲಿ ಪರಿಚಯವಿದೆ. ಅವರು ಒಂದು ಮಾತು ಸಂಬಂಧಪಟ್ಟವರಿಗೆ ಹೇಳಬಾರದೇ ಎಂಬ ತಳಮಳಕ್ಕೆ ಉತ್ತರ ಎಂಬಂತೆ ನುಡಿದಿದ್ದರು. ” ನಾನು ವಿಳಾಸವಷ್ಟೆ ಕೊಡುವುದು. ನಿನ್ನ ಅರ್ಹತೆಯ ಆಧಾರದಲ್ಲೇ ನಿನ್ನ ದಾರಿ ಸ್ಪಷ್ಟವಾಗಬೇಕು.” ಕಥೆ ಆಯ್ಕೆಯಾಗಿತ್ತು. ಅದುವರೆಗೂ ಉಡುಪಿಯ ನಾನು ಮಂಗಳೂರನ್ನು ನೋಡಿಯೇ ಇರಲಿಲ್ಲ. ಅಕಾಶವಾಣಿ ಹೊಸ ಊರು ಹೊಸ ಪುಳಕ,ಸಂಭ್ರಮಗಳನ್ನು ಹೊಸ ಹೆದರಿಕೆಯೊಂದಿಗೆ ಪರಿಚಯಿಸಿತ್ತು. ಮಣಿಯಕ್ಕ ಆಕಾಶವಾಣಿಗೆ ಹೋಗುವ ಹಿಂದಿನ ದಿನ ಬಾಯಿಗೆ ಸಕ್ಕರೆ ಹಾಕಿ ” ಇನ್ನೂ ಹೆಚ್ಚು ಬರೆಯಬೇಕು. ಹೆಸರು ಬರಬೇಕು” ಎಂದು ಆಶೀರ್ವದಿಸಿ,ಹಾರೈಸಿ ಕಳುಹಿಸಿದ್ದರು. ಯಾರು, ಈ ಸರ್ ಮತ್ತು ಮಣಿಯಕ್ಕ! ಕೇಳಿ. ಉಡುಪಿಯ ಎಂ.ಜಿ.ಎಂ.ಕಾಲೇಜಿನ ಎತ್ತರದ ಕಾಂಪೌಂಡ್ ಗೋಡೆಯ ಕೊನೆ ನೊನೆಯಲ್ಲಿ ನಿಂತ ಗೇಟು ದಾಟಿ ಹೊರಗೆ ಬಂದರೆ ರಸ್ತೆಯುದ್ದಕ್ಕೆ ಎರಡೂ ಬದಿ ಬೇರುಬಿಟ್ಟು ಕೂತ ಒಂದೇ ಬಗೆಯ ಸಾಲು ಮನೆಗಳು. ಪದವಿ ತರಗತಿಯಲ್ಲಿರುವಾಗ ಗೆಳತಿಯರ ಜೊತೆ ಹರಟೆ ಹೊಡೆಯುತ್ತ ಅಲ್ಲಿ ಕಳ್ಳರಂತೆ ಅಲೆದು” ಇದು ಯಾರದ್ದು? ಅದು? ಈ ಕಡೇದು?. ಇಲ್ಲಿ ನೋಡು!. ಓ ಆಚೆ ಕೂಡ ಮನೆಗಳು!” ಎಂದು ಪರಸ್ಪರ ಪ್ರಶ್ನೆ ಉತ್ತರ ತಡಕಾಡಿ ಯಾವ ಸರ್ ಗೆ ಯಾವ ಮನೆ ಎಂದು ಗುರುತಿಸಿ ಖುಷಿ ಪಟ್ಟದ್ದೆವು. ಸಾಹಿತ್ಯದ ವಿದ್ಯಾರ್ಥಿಗಳಿಗೆ, ಉಳಿದ ವಿದ್ಯಾರ್ಥಿಗಳಿಗಿಂತ ಉಪನ್ಯಾಸಕರ ಬಳಿ ತುಸು ಹೆಚ್ಚೇ ಸಲುಗೆ. ಮಾತಿಗೆ ಸಾವಿರ ವಿಷಯ. ಕವಿತೆ, ಕಥೆ, ಕಾದಂಬರಿ, ಹರಟೆ, ಪಾಠ ಎಲ್ಲವೂ ಬೇವು ಬೆಲ್ಲ ಪಾನಕ. ಪಾಠ ಎಂದೂ ಬರಡೆನಿಸದು. ಬೇರೆ ವಿಷಯಗಳ ತರಗತಿಯಾಗುವಾಗಲೂ ಕನ್ನಡ ಉಪನ್ಯಾಸಕರು ನಡೆದು ಹೋದರೆ ಸಣ್ಣನೆಯ ಖುಷಿಯೇ ಸರಿದುಹೋದಂತೆ. ಆಗಲೇ ಆ ಏಳು ನಂಬರ್ ನ ಕ್ವಾರ್ಟರ್ಸ್ ಕಂಡದ್ದು. ಅದರ ಬಾಗಿಲಲ್ಲಿ ‘ ಹೊಸ್ಕೆರೆ ಎಸ್. ಶಿವಸ್ವಾಮಿ’ ಎಂಬ ನಾಮ ಫಲಕ. ಕಂಚಿನ ಕಂಠದ ಪಾಠ. ಚಂದ್ರಮತಿಯ ವಿಲಾಪ, ಹರಿಶ್ಚಂದ್ರ ಕಾವ್ಯವನ್ನು ಮನಸ್ಸಿನಲ್ಲಿ ನೆಟ್ಟವರು. ಪರೀಕ್ಷೆ ಗೆಂದೇ ಓದುವ ಅಗತ್ಯವೇ ಕಂಡಿರಲಿಲ್ಲ. ಕ್ಲಾಸಿನಲ್ಲಿ ಪಾಠ ಕೇಳಿದರಾಯಿತು. ಪರೀಕ್ಷೆ ಹಾಲ್ ನಲ್ಲಿ ಅದನ್ನೇ ನೆನಪಿಸಿದರೆ ಮನಸ್ಸಿನಲ್ಲಿ ಅಚ್ಚಾದ ಅವರ ಧ್ವನಿ ಚಿತ್ರಕಗಳು ಪೇಪರಿನ ಮಡಿಲಿನಲ್ಲಿ ಒಂದೊಂದೇ ಪಾತ್ರಗಳಾಗಿ ಮಾತು, ಭಾವ, ಜೀವ ಪಡೆಯುತ್ತಿದ್ದವು. ರಂಗವು ಮನದ ಭಿತ್ತಿಯೊಳಗೆ ಹುಟ್ಟಿ ಪರೀಕ್ಷೆಯಲ್ಲಿಯೂ ನಾಟಕ ನಡೆಯುತ್ತಲೇ ಇತ್ತು. ನಾನು ಅದರ ವಿವರ ಬಿಳಿ ಪೇಪರಿನಲ್ಲಿ ದಾಖಲಿಸುತ್ತಿದ್ದೆ. ಪರೀಕ್ಷಾ ಕೊಠಡಿಯಿಂದ ಹೊರಬಂದರೂ ಅದೇ ನಶೆ, ಗುಂಗು. ಆ ಪಾತ್ರಗಳು ನನ್ನ ಹಿಂಬಾಲಿಸುತ್ತಿದ್ದವು. ಅಂತಹ ಮನೋಹರ ಶೈಲಿಯ ಪಾಠ ಅವರದ್ದು. ಕನ್ನಡದಲ್ಲಿ ಸ್ನಾತಕೋತ್ತರ ಓದು ಬೇಕೆನ್ನುವ ಆಸೆಗೆ ಮತ್ತಷ್ಟು ಬಲ ತುಂಬಿದ್ದು ಆಗಲೇ. ಪದವಿ ಮುಗಿದು ಎಂ.ಎ ಓದಿಗೆ ಹೆಸರು ನೋಂದಾಯಿಸಿ ಆಗಿತ್ತು. ಮನೆಯಲ್ಲಿ ಕೂತು ಓದು. ಜೊತಗೆ ಉದ್ಯೋಗ. ಹಳೆಗನ್ನಡ, ಕೆಲವು ಪಠ್ಯ ಅರ್ಥವಾಗದೇ ಹೋದಾಗ ಸರ್ ಮನೆಗೆ ಹೋಗಿ ಬಹು ಅಂಜಿಕೆಯಲ್ಲಿ ಬಾಗಿಲು ತಟ್ಟಿದ್ದೆ. ಕೆಂಪು ಸೀರೆ ಉಟ್ಟ,ಅಚ್ಚ ಬಿಳಿಬಣ್ಣದ, ಉದ್ದಮೂಗಿನ, ಹೊಳಪು ಕಣ್ಣಿನ ವಯಸ್ಸಾದವರು ಕಂಡಿದ್ದರು. ಏನು? ಎಂದಾಗ ಏನೂ ಹೇಳಲು ತೋಚದೆ ಖಾಲಿಯಾಗಿ ಬೆಪ್ಪಳಂತೆ ನಿಂತಿದ್ದೆ. ಅವರ ಹಿಂದೆ ತೆಳ್ಳಗಿನ ಉದ್ದ ದೇಹದ ಮಹಿಳೆ. ಬೈತಲೆ ತೆಗೆದು ಕಟ್ಟಿದ ಸೂಡಿ. ಹಣೆಯಲ್ಲಿ ಹದಗಾತ್ರದ ಹೊಳೆಯುವ ಕೆಂಪು ಚಂದಿರ. ಸೌಮ್ಯ ಮುಖ. ಹಿರಿಯಕ್ಕನಂತೆ ” ಬನ್ನಿ ಒಳಗೆ” ಎಂದು ಕೂರಿಸಿ”ಮೇಷ್ಟ್ರನ್ನು ಮಾತನಾಡಿಸಬೇಕಿತ್ತೇ”ಎಂದು ಮೃದು ವಾಗಿ ಕೇಳಿದ್ದರು. ತಲೆಯಲುಗಿಸಿದ್ದೆ. ಹೊಸದೊಂದು ನವಿರು ಬಾಂಧವ್ಯ ಮನಸ್ಸಿಗೆ ಕಟ್ಟಿ ಅವರು ಒಳನಡೆದರು. ಅದು ಗುರುಗಳ ಅಮ್ಮ ಹಾಗೂ ಹೆಂಡತಿ. ನನಗೆ ಅರ್ಥವಾಗದ ಪಾಠಗಳನ್ನು ಸರ್ ಹೇಳಿ ಕೊಟ್ಟರು. ಗುರುಪತ್ನಿ ನಾಗಮಣಿ ಅಮ್ಮ ಅವರು ತಿಂಡಿ, ಕಾಫಿ, ಊಟ, ಪ್ರೀತಿ, ಭಾವ, ಕಾಳಜಿ, ಹಾರೈಕೆ ತುತ್ತು ಉಣಿಸುತ್ತಾ ಹೋದರು. ನಾನು ಆ ಮನೆಯಲ್ಲಿ ಬದುಕಿನಲ್ಲಿ ಎಂದೂ ಸಿಗಲಿಲ್ಲವೆಂದುಕೊಂಡ ವಾತ್ಸಲ್ಯ ಉಂಡು ಚಿಗುರುತ್ತ ಚಿಗುರುತ್ತ ನಡೆದೆ. ನಾನು ಹೋಗುವಾಗೆಲ್ಲ ಸರ್ ತಮ್ಮ ಕುರ್ಚಿಗೆ ಅಂಟಿ ಮೇಜಿನ ಮೇಲೆ ಪೇಪರ್ ಹರವಿ ಬರೆಯುತ್ತಿದ್ದರು. ಕವನ, ಕಥೆ..ಇನ್ನೂ ಏನೋ..ತಮ್ಮ ಇಷ್ಟದ ಭಾವ ತಮಗಿಷ್ಟ ಆಗುವ ಪರಿಯಲ್ಲಿ ಅಕ್ಷರವಾಗಿಸುತ್ತಿದ್ದರು ನಾನು ಸದ್ದಾಗದಂತೆ ಒಳ ನಡೆದು ಅಡುಗೆ ಮನೆಯ ಒಡತಿಯ ಅಕ್ಕರೆಗೆ ಮಗುವಾಗುತ್ತಿದ್ದೆ. ಅಕ್ಷರ ಮತ್ತು ಅಕ್ಕರೆ ಆ ಮನೆಯ ಅವಳಿ ಮಕ್ಕಳು!. ಅವರ ಮನದ ಭಾವತರಂಗಗಳ ನಾದಕ್ಕೆ ನಾನು ಕಿವಿ. ಆಗ ಸರ್ ಆಕಾಶವಾಣಿಗೆ ಚಿಂತನ ಬರೆದು ಕಳುಹಿಸುತ್ತಿದ್ದರು. ” ಕೇಳು” ಎನ್ನುತ್ತಿದ್ದರು. ನಿಧಾನವಾಗಿ ಗುರುಪತ್ನಿಯ ಚಿಂತನಗಳು ಬರತೊಡಗಿದವು. ಅವರ ಮನದ ಚಿಂತನಗಳು ಶ್ರವಣಕೇಂದ್ರವಾಗಿ ಅಚ್ಚರಿ, ಸೋಜಿಗವಾಗುತ್ತಿತ್ತು. ಹೊಸದೊಂದು ಸೆಳೆತ. ರೇಡಿಯೋ ಕಥೆ,ಕವನ,ನಾಟಕ. ಎಲ್ಲಿಯೋ ಆಡಿದ ಮಾತು. ಧ್ವನಿತರಂಗಗಳು ಮನೆಯ ಒಳ ಬಂದು ಪಟ್ಟಾಂಗವಾಡುವುದು. ಆಗಲೇ ನಾನು ಬರೆದ ಕಥೆಯನ್ನು ಅವರಿಬ್ಬರೂ ಓದಿ, ಆಕಾಶವಾಣಿಗೆ ಕಳುಹಿಸಿದ್ದು. ಕಥೆ ಓದುವುದು ಹೊಸ ಅನುಭವ.” ಆರಾಮವಾಗಿ ಓದು. ಭಾವ ತುಂಬಿ ಓದು. ಅವಸರಿಸಬೇಡ” ನಾಗಮಣಿ ಅಮ್ಮನ ಸಕ್ಕರೆ ಜೊತೆಗಿನ ಅಕ್ಕರೆ ವಾಣಿ ಒಳಗೊಳಗೇ ಮತ್ತೆ ಮತ್ತೆ ಧ್ವನಿಸುತ್ತಿತ್ತು. ಮೊದಲ ಓದು ತಿಳಿಸಿಕೊಟ್ಟವರು ಆಗ ಆಕಾಶವಾಣಿಯಲ್ಲಿ ಯುವವಾಣಿಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಶರಭೇಂದ್ರಸ್ವಾಮಿಯವರು. ಕಣ್ಣ ಮುಂದೆ ಮನಸ್ಸಿನಲ್ಲಿ ಗೆಜ್ಜೆಕಟ್ಟಿ ಕೂತಿದ್ದ ಪಾತ್ರಗಳು ಅಕ್ಷರಗಳಾಗಿ, ಮಾತಾಗಿ, ಧ್ವನಿಯಾಗಿ ಹೊರಟಿದ್ದವು. ಮುಂದೆ ಬದುಕಿನಲ್ಲಿ ಕಂಡ ಕಥೆ ಕಥೆಗಳು ಅಕ್ಷರಗಳಾದವು. ಗುರುಪತ್ನಿಯ ಶಿಫಾರಸ್ಸು.” ಎಷ್ಟು ಚೆಂದ ಬರ್ದಿದೀಯೇ ಹುಡುಗೀ..”” ನಿನ್ನ ಕಥೆ ನನಗಿಷ್ಟ” ಎನ್ನುತ್ತಾ ನಾಗಮಣಿ ಅಮ್ಮ, ತನ್ನ ಮಡಿಲಲ್ಲಿ ಕೂರಿಸಿ, ಒಪ್ಪ ಮಾಡಿ ಒಬ್ಬ ಕಥೆಗಾರ್ತಿಯನ್ನು ಕಟ್ಟುತ್ತಲೇ ನಡೆದರು. ” ಏನು,ಯಾವ ಕಥೆ? ಬರೆದಿರುವೆಯಾ, ತಾ ಇಲ್ಲಿ. ಕೊಡು.” ” ವ್ಹಾ, ಮಣಿ ಕಂಡೆಯಾ, ಎಂತಹ ಹೋಲಿಕೆ, ಏನು ಚೆಂದ” ಎನ್ನುತ್ತಾ ಸರ್ ಅವರು, ನನ್ನೊಳಗೆ ಇದ್ದ, ಇದ್ದೂ ಇಲ್ಲದಂತಿದ್ದ ಕಥೆಗಾರ್ತಿಯನ್ನು ಬೆಳೆಸಿದರು. ಆಕಾಶವಾಣಿಯೆಂಬ ಅದ್ಬುತ ನನಗೆ ಹೊಸ ಲೋಕದ ದೊರೆತನವನ್ನೇ ಕಾಣಿಕೆ ನೀಡಿದಂತೆ ಶ್ರೀಮಂತಗೊಳಿಸಿತು. ಜೊತೆಜೊತೆಗೆ ಗುರುದಂಪತಿಗಳ ವಾತ್ಸಲ್ಯ. ಮೊಗೆಮೊಗೆದು ಕೊಟ್ಟ ಪ್ರೀತಿಗೆ ಎಣೆಯುಂಟೇ? ಯಾವ ಹಬ್ಬವಾಗಲಿ ಕರೆ ಬರುತ್ತಿತ್ತು. ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಮಾಡಿದ ಸಿಹಿತಿಂಡಿ ಮುಚ್ಚಟೆಯಾಗಿ ತೆಗೆದಿರಿಸಿ ಅವರ ಮನೆಗೆ ನಾನು ಹೋದಾಗ ಕೊಡುತ್ತಿದ್ದರು. ತಾನು ಹೆತ್ತ ಕಂದ ಇವಳು ಎಂಬಂತೆ. ಮನಸ್ಸಿನ ಮಾತು ಹಂಚಿಕೊಳ್ಳುತ್ತಿದ್ದರು. ” ನಿನಗಿಂತ ಆತ್ಮೀಯಳು ಯಾರು ಹೇಳು?” “ಹೇ ಹುಡುಗಿ ,ನನ್ನ ಮಾತು ಸರ್ ಬಳಿ ಹೇಳಬೇಡ.” “ಎಲ್ಲಿದ್ದಿಯೇ,ಮನೆಗೆ ಬಾ. ಅದೆಷ್ಟು ಮಾತಿದೆ.” “ನನ್ನ ಬಗ್ಗೆ ಒಂದು ಕಥೆ ಬರಿ ನೋಡುವಾ” “ಸಂಕ್ರಾಂತಿಯ ಎಳ್ಳು ಬೆಲ್ಲ ಬೇಡ್ವಾ” ” ನಿನ್ನ ಕಥೆ ನೋಡು ತುಷಾರದಲ್ಲಿ ಬಂದಿದೆ. ಬೇಗ ಬಾ. ಸ್ವೀಟ್ ಹಿಡಕೊಂಡು ಬಾ.” ” ಹೇ,ನಾನೇ ಮಾಡಿದ್ದೇನೆ. ಬಾ ಈಗ”. ಹೀಗೆ ಸದಾ ತೊಟ್ಟಿಕ್ಕುತ್ತಿದ್ದ ಎಂದೂ ಬತ್ತದ ಮಮತೆಯ ಮಾತುಗಳು.ತಾನೇ ನಾನಾದಂತೆ ನಾನೇ ಆಗಿ ಉಳಿದ ತಾಯಿ. ಈ ಬಂಧ ಹಾಗೇ ಉಳಿದಿದೆ. ಊರು ಬದಲಾದರೇನು? ಮನದ ಭಾವ ಬದಲಾದೀತೇ?”ನಿನ್ನಿಂದ ಸಾಧ್ಯ, ಮಾಡು!. ಮಾಡು!!” ಅನ್ನುತ್ತ ಅಂಜುಬುರುಕಿ ಹೆಣ್ಣನ್ನು ಕಲೆಯ ಮಹಲೊಳಗೆ ಕಿರುಬೆರಳು ಹಿಡಿದು ನಡೆಸಿದವರು.ರಂಗದ ಮೆಟ್ಟಲು ಹತ್ತಲು ಇಂತಹ ದೇವತೆಗಳೂ ಬೇಕಾಗುತ್ತಾರೆ ಎನ್ನುವ ತಿಳಿವು ಮೂಡಿಸಿದವರು.ತಾನು ಕಥೆ ಬರೆದಾಗ ಓದಿ ನೋಡು. ನೀನು ಹೇಳಿದರೆ ನನಗೊಂದು ನೆಮ್ಮದಿ ಎನ್ನುತ್ತ ಆತ್ಮವಿಶ್ವಾಸ ಗಂಟು ನನ್ನಲ್ಲಿ ಜೋಪಾನವಾಗಿಸಿದರು. ಆಕಾಶವಾಣಿಯಲ್ಲಿ ಕಥೆಗಳ ಓದು,ಕಥೆಯ ರಚನೆಗೆ ಮೂಲ ಶಕ್ತಿಯಾದಂತೆ ಮುಂದೆ ರೇಡಿಯೋ ನಾಟಕದ ಹುಚ್ಚು ಆಸೆ ತುಂಬಿತು. ಮುದ್ದು ಮೂಡುವೆಳ್ಳೆಯಂತವರ ನಿರ್ದೇಶನದಲ್ಲಿ ಆಕಾಶವಾಣಿ ಕಲಾವಿದಳಾದೆ. ರೇಡಿಯೋ ನಾಟಕಗಳಲ್ಲಿ ಅವಕಾಶ ದೊರಕಿದಾಗ ಹೊಸಹೊಸ ನಾಟಕಗಳ ಓದು, ಕಲ್ಪನೆ. ಜೊತೆಗೆ ಶರಭೇಂದ್ರ ಸ್ವಾಮಿಯಂತ ನುರಿತ ನಿರ್ದೇಶಕರು, ಸ್ವರಭಾರ, ಧ್ವನಿಪೆಟ್ಟಿಗೆ, ಭಾವದ ಏರಿಳಿತ ಹೇಳಿ ಕಲೆಯ ವ್ಯಾಮೋಹ ಅಮಲು ನನ್ನೊಳಗೆ ಹರಿದುಬರಲು ಪ್ರೇರಕ ಶಕ್ತಿಯಾದರು. ಅದು ಪೂರ್ತಿ ಹೊಸ ನಶೆ. ರಂಗದ ಪ್ರವೇಶಕ್ಕೆ ನಿಜವಾದ ಪ್ರವೇಶಿಕೆ. ಆಕಾಶವಾಣಿಯ ಅವಕಾಶದಾಕಾಶ ತೆರೆದ ಗುರುಗಳು ಈ ವರ್ಷ, ಸೂಚನೆ ನೀಡದೆ ನಡೆದಿದ್ದಾರೆ. ನನ್ನ ಬದುಕಿನ ಗುಡಿಯಲ್ಲಿ ಮಾತ್ರ ಇವರು ಸದಾ ಪ್ರತಿಷ್ಠೆಗೊಂಡು, ಬೆಳಗ್ಗಿನ ಮೊದಲ ಪೂಜೆ ಇವರಿಗೇ ಅನ್ನುವಷ್ಟು ಪ್ರಾತಃಸ್ಮರಣೀಯರು. **************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ದಾಖಲೆಗಳಿವೆ
ಕವಿತೆ ದಾಖಲೆಗಳಿವೆ ವಸುಂಧರಾ ಕದಲೂರು ಸುಧಾರಕರನು ಹುಚ್ಚರೆಂದುಕರೆದು ಥಳಿಸಿದುದಕೆ, ಕೂಡುರಸ್ತೆಗಳ ನಡುವಲ್ಲಿ ಹೀಗಳೆದುಕಲ್ಲುತೂರಿ ಕಟುನುಡಿ ಮಳೆಗರೆದು,ತೋಯಿಸಿ ನೋಯಿಸಿದುದಕೆ. ಗಾಸೀಪು ತೂಪಾಕಿಗಳ ತೂಫಾನುಸಿಡಿಸಿ ಗಡೀಪಾರು ಮಾಡಿಸಿ; ಗುಲ್ಲೆಬ್ಬಿಸಿ ಗಲ್ಲಿಗೇರಿಸಿ, ಗುಂಪುಗುಂಪಾಗಿ ಗುಟ್ಟು ಮಾಡಿ; ಒಳಸಂಚು ಮಾಡಿ ಮೂಲೆ ಗುಂಪಾಗಿಸಲು ಕಾರ್ಯ ಗೇಯ್ದದದಕೆ. ಇದರ ನಡುವೆಯೂ ಅವರು, ಅವರ ವರ್ತಮಾನಗಳಲಿ ದಂತಕತೆಗಳಾಗಿ, ಭವಿಷ್ಯತ್ತಿನಲಿ ಹುತಾತ್ಮರಾಗಿ ಇತಿಹಾಸದ ಪುಟಗಳಲಿ ಮಹಾತ್ಮರಾಗಿ ಸೇರಿಹೋದುದಕೆ ಸಾಕ್ಷ್ಯಗಳಿವೆ.. ********************************************
ಅಂಕಣ ಬರಹ ಸವಡಿಯಾಗುವ ಸವತಿಯರು ಭಾರತ ಬಹುಸಂಸ್ಕೃತಿ ನಾಡು. ಅಂತೆಯೆ ಬಹು ಪತ್ನಿತ್ವ ಸಮಾಜವುಳ್ಳ ಕೇಂದ್ರಸ್ಥಾನವೂ ಹೌದು.ಒಬ್ಬ ಪುರುಷನನ್ನು ಇಬ್ಬರು ಮಹಿಳೆಯರು ಮದುವೆಯಾದರೆ ಅವರು ಒಬ್ಬರಿಗೊಬ್ಬರು ಸವತಿಯಾಗುವರು. ‘ಸವತಿ’ ಎನ್ನುವ ಈ ಶಬ್ದ ಮೂಲತಃ ಸಹವರ್ತಿ ಎನ್ನುವ ಪದದಿಂದ ಬಂದಿದ್ದು. ಇದರ ಅರ್ಥ ಇಬ್ಬರೂ ಸಮಾನ ಹಕ್ಕು ಹೊಂದಿರುವುದು ಎಂದಾಗುತ್ತದೆ. ಸಮಾನ ಹಕ್ಕುಗಳು, ಸಮಾನ ಸಕಲ ಸವಲತ್ತುಗಳನ್ನು ಸಮಾನವಾಗಿ ಪಡೆಯುವರನ್ನು ಸವತಿ ಎಂದು ಕರೆಯುವರು. ಈ ಸವತಿ ಎನ್ನುವ ಪದ ಹೊಟ್ಟೆಕಿಚ್ಚು, ಮತ್ಸರ, ವೈರಿ, ಅಸಹನೆ ಎಂಬ ನಾನಾರ್ಥಗಳನ್ನು ಕೊಡುತ್ತವೆ. ಹಾಗೇ ನೋಡಿದರೆ ಈ ಸವತಿ ಎಂಬ ಸಂಸ್ಕೃತಿ ಮತ್ತು ಸಂಪ್ರದಾಯ ಬೆಳೆದು ಬರಲು ಮುಖ್ಯ ಕಾರಣ ಪುರುಷರ ಪ್ರತಿಷ್ಠೆ ಮತ್ತು ಲೈಂಗಿಕ ಬಯಕೆಗಳು, ಸಂತಾನ ಅಪೇಕ್ಷೆಗಳು ಪ್ರಮುಖ ಎಂದು ಹೇಳಬಹುದು. ಇಲ್ಲಿಯೂ ಸವತಿಯರಾಗಿ ಬಂದ ಸ್ತ್ರೀಯರನ್ನು ಇನ್ನಷ್ಟು ದುಸ್ಥಿತಿಗೆ ಸಿಲುಕಿಸಿತು. ಇದೊಂದು ಕೆಟ್ಟ ಸಾಮಾಜಿಕ ಸಮಸ್ಯೆ ಎಂದೇ ಹೇಳಬಹುದು. ಗಂಡನು ಇನ್ನಾವುದೋ ಕಾರಣದಿಂದ ಎರಡನೆಯ ಮದುವೆಯಾದರೆ ಮೊದಲ ಸತಿಯ ಎದೆ, ಮನಸು ಒಪ್ಪದಿದ್ದರೂ ಅದಕ್ಕೆ ಶಾಂತವಾಗಿ, ಮೌನವಾಗಿ ಸಮ್ಮತಿಯನ್ನು ಕೊಡಬೇಕು. ಅಂದು ಸ್ತ್ರೀಯು ತನ್ನ ಒಡಲಾಳದ ನೋವು ಗಂಭೀರ ಆಗಿದ್ದರೂ ಅವಳು ತನ್ನ ಗಂಡನ ಎದುರು ಹೇಳಿಕೊಳ್ಳುವಂತಿರಲಿಲ್ಲ. ಅಂತಹ ಕೆಟ್ಟ ವ್ಯವಸ್ಥೆಯನ್ನು ಎದುರಿಸಿ ನಿಲ್ಲುವ ಶಕ್ತಿ ಅವಳಾಗ ಪಡೆದುಕೊಂಡಿರಲಿಲ್ಲ. ಪತ್ನಿಯ ಮುಂದೆ ಎರಡನೆಯ ಮದುವೆ ವಿಚಾರ ಪ್ರಸ್ತಾಪಿಸಿ ಅವಳ ಒಪ್ಪಿಗೆಗಾಗಿ ಕಾಯುವುದು ಅಂದಿನ ವ್ಯವಸ್ಥೆಗೆ ಹೊಂದದ ನಿಯಮವನ್ನಾಗಿ ಮಾಡಿಕೊಂಡಿತು ಈ ಪುರುಷ ಸಮಾಜ. ಇಂತದ್ದೆ ಒಂದು ಉದಾಹರಣೆ ನೋಡಲಾಗಿ, ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮೈತಾಳರು ತಮ್ಮ ಎರಡನೆಯ ಮದುವೆ ವಿಷಯದಲ್ಲಿ ಸಂಶಯ ಗ್ರಹಸ್ಥನಾದ ಶೀನಮ್ಮಯ್ಯನಿಗೆ ಮನವರಿಕೆ ಮಾಡುವ ಹೇಳಿಕೆಯನ್ನು ನಿದರ್ಶನವಾಗಿ ನೋಡಬಹುದು. “ಶೀನ ನಮ್ಮ ಮನೆಯ ಪಂಚಾಯಿತಿ ನಿನಗೆ ಗೊತ್ತಿಲ್ಲ.ನಮ್ಮಲ್ಲಿ ಒಬ್ಬ ಯಜಮಾನ ಎಂದರೆ ಸಿಂಗಲ್ ಯಜಮಾನ.ಗಂಡನು ಒಂದು ಹೇಳುವುದು, ಹೆಂಡತಿ ಇನ್ನೊಂದು ಹೇಳುವುದು ಈವರೆಗೆ ನಡೆದಿಲ್ಲ”. ಇಂತಹ ವ್ಯವಸ್ಥೆಯ ಬೇರು ಗಟ್ಟಿಯಿರುವಾಗ ಸ್ತ್ರೀ ಅದನ್ನು ವಿರೋಧಿಸುವಂತಿಲ್ಲ.ಆದಾಗ್ಯೂ ಹೆಂಡತಿಯ ಬಗೆಗೆ ದ್ವೇಷ ಮಾಡಿಕೊಳ್ಳವ ಬದಲು ಇಲ್ಲಿ ಪಾರ್ವತಿಯು ಸತ್ಯಭಾಮೆಯರೊಂದಿಗೆ ಬಹು ಅಕ್ಕರೆಯಿಂದಲೇ ನಡೆದುಕೊಳ್ಳುತ್ತಾಳೆ. ಆದರೂ ಇಲ್ಲಿ ಮೊದಲು ಸವತಿಯ ಮೇಲೆ ಹೊಟ್ಟೆಕಿಚ್ಚು ಹೊಂದಿದಳು ಅನ್ನುವದಂತು ನಿಜ. ಈ ವ್ಯವಸ್ಥೆ ಹೇಗೆ ಪುರುಷನ ನಿಯಂತ್ರಣದಲ್ಲಿರುತ್ತದೆ, ಹೆಣ್ಣು ತನ್ನ ಕೋಪವನ್ನು ಹೇಗೆ ಹೆಣ್ಣಿನ ಮೇಲೆ ಸಾಧಿಸಿಕೊಂಡು ಪುರುಷನ ಮೇಲೆ ತೀರಿಸಿಕೊಳ್ಳುತ್ತಾಳೆ ಅಂದ್ರೆ, ಅವಳು ತನ್ನ ಸಿಟ್ಟುನ್ನು ಹೊಸದಾಗಿ ಬಂದ ಹೆಣ್ಣಿನ ಮೇಲೆ ಜಗಳ, ಅಸಹನೆ ತೋರುವುದರ ಮೂಲಕ ತೀರಿಸಿಕೊಳ್ಳುವಳು. ಹೀಗೆ ಇದು ಸವತಿಯರ ಮತ್ಸರಯುದ್ದ ಎಂದೇ ಹೇಳಬಹುದು. ಇಂತದ್ದೆ ಒಂದು ಉದಾಹರಣೆ ‘ಅಂತರಂಗ’ ಕಾದಂಬರಿಯಲ್ಲಿ ಪಾತಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ. ಇಲ್ಲಿ ಭಟ್ಟರು ತೀರ್ಥಯಾತ್ರೆ ಕೈಗೊಂಡು ಪ್ರಯಾಣದ ನಡುವೆ ಬಸವಿ ಗೌರಮ್ಮಳಿಗೆ ಮನಸೋತು ಹೋಗುವನು. ಬಸವಿಯಾದ ಗೌರಮ್ಮ ಯಾರಿಗೂ ಕಣ್ಣೆತ್ತಿ ನೋಡದ ಅವಳು ಇಲ್ಲಿ ಭಟ್ಟರಿಗೆ ಮನಸೋತು ಹೋಗುತ್ತಾಳೆ. ಭಟ್ಟರು ತೀರ್ಥ ಯಾತ್ರೆ ಮುಗಿಸಿಕೊಂಡು ಮನೆಗೆ ಬಂದ ಕೆಲವು ದಿನಗಳಲ್ಲಿ ಬಸವಿ ಗೌರಮ್ಮ ಕೂಡಾ ಮನೆಗೆ ಬರುವಳು. ವಿಶಾಲ ನಿರ್ಮಲ ಪ್ರೇಮದ ಗೌರಮ್ಮ ವೈರಾಗ್ಯ ನಿಧಿಯಂತೆ ಇರುತ್ತಾಳೆ. ಆದರೆ ಭಟ್ಟರು ಗೌರಮ್ಮಳ ಕುರಿತು ತನ್ನ ಸ್ನೇಹಿತರಿಗೆ, ಸಂಬಂಧಿಕರ ಎದುರಿಗೆ ಮಾಡುವ ವರ್ಣನೆಯಿಂದ ಭಟ್ಟರ ಮೊದಲ ಹೆಂಡತಿ ಪಾತಮ್ಮ ಮೂರ್ಛೆ ಹೋಗುತ್ತಾಳೆ. ಅಂದಿನಿಂದ ಅವಳು ಗಂಡನನ್ನು ದ್ವೇಷಿಸುತ್ತಾಳೆ .ಹೀಗೆ ಇಲ್ಲಿ ಗಂಡನನ್ನ ತಿರಸ್ಕಾರದ ಮನಸ್ಸು ಬೀರುವುದರೊಂದಿಗೆ ಸವತಿಯರ ಅಸಹನೆ ಎದ್ದು ಕಾಣುತ್ತದೆ. ಪುರುಷನದೆ ಸಮಾಜ ಅಲ್ವ ಇದು! ಇಲ್ಲಿ ಎಂಥದ್ದೇ ಸಮಸ್ಯೆಗಳಾದರೂ ಪರಿಹಾರ ಅವಳಿಂದಲೇ ಅನ್ನುವುದು ಆಲ್ರೆಡಿ ಶಾಸನ ಹೊರಡಿಸಿ ಆಗಿದೆ ಈ ನೆಲದ ಮಣ್ಣಿನ ಮೇಲೆ. ಅಂತಹ ಸಾಮಾಜಿಕ ಸಮಸ್ಯೆಗಳು ಕಾದಂಬರಿಯಲ್ಲಿ ಪ್ರಸ್ತಾಪಿಸುವ ಮೂಲಕವೇ ಈ ವ್ಯವಸ್ಥೆಯನ್ನು ಹೀಗೆಳೆಯುವುದು ಒಂದು ಉಸಿರು ಬೇರೆಡೆ ಬಿಡುವಂತೆ ಮಾಡುತ್ತದೆ. ಅಂತೆಯೆ ಇನ್ನೊಂದು ಕಾದಂಬರಿಯಾದ ‘ಪ್ರಬುದ್ಧ ಪದ್ಮನಯನೆ’ ಯಲ್ಲಿ ಪದ್ಮನಯನೆ ಮತ್ತು ಜೀವನಕಲಾ ಸವತಿಯರಾದರೂ ಇಲ್ಲಿ ಅವರಿಬ್ಬರೂ ಬಲುಪ್ರೇಮ ಅಕ್ಕರೆಯಿಂದ ಇದ್ದವರು. ಆದರೂ ಬದಲಾವಣೆ ಮತ್ತು ಹೊಂದಾಣಿಕೆಯ ಮನಸುಗಳು ಕೆಲವೊಂದು ಸಲ ಅನಿವಾರ್ಯತೆಗೆ ಒಗ್ಗಿಕ್ಕೊಳ್ಳುತ್ತವೆ ಅನ್ನುವುದಕ್ಕೆ ಇದೊಂದು ದೃಷ್ಟಾಂತ. ಹೊಯ್ಸಳ ದೊರೆ ವಿಷ್ಣುವರ್ಧನ ಶಾಂತಲೆಗೆ ಮನಸೋತಾಗ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧವನ್ನು ಹೊಂದಿದ್ದ ನಾಟ್ಯರಾಣಿ ಶಾಂತಲೆ ಹಾಗೂ ಲಕ್ಷ್ಮೀ ಇಬ್ಬರೂ ಕೊನೆಗೆ ವಿಷ್ಣುವರ್ಧನನ ಪತ್ನಿಯರಾಗಿ ಕೊನೆಗೆ ತ್ಯಾಗದ ಮೂರ್ತಿಯಾಗುವ ಕತೆಯನ್ನು ‘ಕೆ ವಿ ಅಯ್ಯರ್ ರವರ ‘ಶಾಂತಲೆ’ ಕಾದಂಬರಿಯಲ್ಲಿ ಕಾಣಬಹುದು. ಈ ಸವತಿಯರು ಸಂಪ್ರದಾಯ ಇವತ್ತು ನಿನ್ನೆಯದಲ್ಲ. ಇದು ವೇದ ಕಾಲದಿಂದ ಹಿಡಿದು ರಾಜ ಮಹಾರಾಜರ ಕಾಲದಲ್ಲಿ ವಿಫುಲವಾಗಿ ಸಂಚರಿಸಿಕೊಂಡು ಬಂದ ಒಂದು ಪದ್ಧತಿ. ಒಬ್ಬರಿಗೊಬ್ಬರ ಬಗೆಗೆ ಸಿಟ್ಟಲ್ಲಿ ಮತ್ಸರವಿದ್ದರೂ ಆ ಸವತಿಯರು ಈ ಸಮಾಜದಲ್ಲಿ ಸವತಿಯರಾಗಿ ಉಳಿಯದೇ ಅಕ್ಕತಂಗಿಯರಾಗಿ ಬದುಕು ಸಾಗಿಸುವ ಪರಿ ಗಮನಾರ್ಹವಾದುದು. ಹೀಗೆ ಹೆಣ್ಣು ಈ ಸಮಾಜದಲ್ಲಿ ಭೋಗಕ್ಕೆ ಸಿಲುಕಿದಂತೆ ತ್ಯಾಗಕ್ಕೂ ಸೈ ಅನ್ನುವ ಆದರ್ಶನಾರಿಯೇ ಆಗಿದ್ದಾಳೆ. ****************************************** ತೇಜಾವತಿ ಹೆಚ್ ಡಿ
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-6 ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ. ಅಲ್ಲೇ ಒಂದು ಬಂಡೆಯ ಮೇಲೆ ಕೂತು ಸಮುದ್ರ ನೋಡುತ್ತಾ ಇದ್ದಾಗ ನಮ್ಮ ಮ್ಯಾನೇಜರ್ ಬಂದು, ನೀವಿಲ್ಲೇ ಇದ್ದೀರಾ? ಮುಂದೆ ಹೋಗಿ ಬನ್ನಿ ಸರ್ ಎಂದು ಹೇಳಿದರು. ಅವರಿಗೆ ಆಗ್ತಿಲ್ಲ. ಅದಕ್ಕೆ ಇಲ್ಲೇ ಕೂತೆವು ಅಂದೆ. ಯಾಕೆ? ಏನಾಯ್ತು? ಎಂದು ಗಾಬರಿಯಾದರು. ಏನಿಲ್ಲ. ಈಗ ಏನೂ ಆಗಿದ್ದಲ್ಲ. ಒಂದೂವರೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆದ ವಿಷಯ ಹೇಳಿದೆ. ನನಗೆ ಗೊತ್ತೇ ಆಗಿಲ್ಲ. ನೀವು ಮೊದಲೇ ಹೇಳಿದ್ದರೆ ನಾನಿಲ್ಲಿ ಅವರ ಜೊತೆ ಇದ್ದು ನೋಡಿಕೊಳ್ತಾ ಇದ್ದೆ. ನೀವು ಹೋಗಿ ಬರಬಹುದಿತ್ತು, ಈಗ ಹೋಗಿ ನಾನಿಲ್ಲಿರ್ತೇನೆ ಅಂದರು. ಅಷ್ಟರೊಳಗೆ ಎಲ್ಲರೂ ವಾಪಸ್ ಬರುತ್ತಾ ಇದ್ದರು. ಅಲ್ಲೊಂದಿಷ್ಟು ಹೊತ್ತು ಮತ್ತೆ ಫೋಟೊ ಶೂಟಿಂಗ್ ಆಯಿತು. ನಂತರ ನಾವು ಹೋಗಿದ್ದು ಲಕ್ಷ್ಮಣಪುರ ಬೀಚ್ ಗೆ. ಸೂರ್ಯ ಮುಳುಗೋದನ್ನು ನೋಡಲು ಅಲ್ಲಿ ತುಂಬಾ ಜನ ಬರ್ತಾರೆ. ಸಂಜೆ ಐದೂವರೆಗೆ ಸೂರ್ಯಾಸ್ತ. ನಾವು ಬೇಗ ಹೋಗಿ ಕೂತರೆ ಒಳ್ಳೆಯ ದ್ರಶ್ಯ ನೋಡಲು ಸಿಗುತ್ತೆ ಅಂತ ಮತ್ತೆ ಬಸ್ಸಿನಲ್ಲಿ ನೀಲ್ ದ್ವೀಪದ ಪಶ್ಚಿಮಕ್ಕಿರುವ ಆ ಬೀಚ್ ತಲುಪುವಾಗ ಐದು ಗಂಟೆ. ಸಣ್ಣ ಚಿರೋಟಿ ರವೆಯಂತ ಮರಳು, ಪುಸ್ ಪುಸ್ ಜಾರುತ್ತಾ ಹೆಜ್ಜೆ ಇಟ್ಟಲ್ಲೇ ಇದ್ದ ಹಾಗೆ, ಮುಂದೆ ಸಾಗುತ್ತಲೇ ಇಲ್ಲ. ಅಂತೂ ಹೋಗಿ ಸೂರ್ಯಾಸ್ತ ಆಗುವ ಜಾಗಕ್ಕೆ ಹೋಗಿ ಸೇರಿದೆವು. ಕಲ್ಲಿನ ಬೆಂಚ್ ತರ ಮಾಡಿ ಇಟ್ಟಿದ್ದಾರೆ. ಜಾಗ ಸಿಕ್ಕಿದಲ್ಲಿ ಕೂತೆವು. ಪಕ್ಕದಲ್ಲಿ ಚಾ ಅಂಗಡಿ. ಯಾವತ್ತೂ ಚಾ ಕುಡಿಯದ ನನಗೆ ಆವತ್ತು ಚಹಾದ ಪರಿಮಳ ತುಂಬಾ ಇಷ್ಟವಾಗಿ ಎಲ್ಲರೊಂದಿಗೆ ನಾನೂ ಚಹಾ ಕುಡಿದೆ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು. ನಮ್ಮ ಜೊತೆಯಲ್ಲಿ ಬಂದವರಲ್ಲಿ ನವವಿವಾಹಿತ ಜೋಡಿ ಒಂದಿತ್ತು. ನಮ್ಮ ಮಕ್ಕಳಿಗೆ ಈ ಬೀಚ್ ಲ್ಲಿ ಅವರಿಬ್ಬರೂ ಸ್ನೇಹಿತರಾದರು. ಎಲ್ಲರೂ ಜೊತೆ ಸೇರಿ ನಗುತ್ತಾ ಹರಟುತ್ತಾ ಹಾಯಾಗಿ ಸಮುದ್ರದ ಬಳಿ ಇದ್ದರು. ಆ ಜಾಗದಲ್ಲಿ ಸಮುದ್ರ ಸ್ವಲ್ಪ ಆಳವಾಗಿದೆ, ತುಂಬಾ ಮುಂದೆ ಹೋಗೋದೆಲ್ಲ ಬೇಡ. ಸೂರ್ಯಾಸ್ತ ನೋಡಿದ ಕೂಡಲೇ ರೆಸಾರ್ಟ್ ಗೆ ಹೊರಡೋದು ಎಂದು ಬರುವಾಗ ಬಸ್ಸಿನಲ್ಲೇ ಹೇಳಿದ್ದರು. ಸೂರ್ಯ ಉರಿಯುತ್ತಾ ಇದ್ದವನೇ.. ಇದ್ದಕ್ಕಿದ್ದ ಹಾಗೆ ಸುತ್ತಲೂ ಆಕಾಶ ಕೆಂಪು ಕೆಂಪಾಗಿ ಮೆಲ್ಲ ಮೆಲ್ಲನೆ ಆ ಕೆಂಪಿನೊಳಗೆ ಜಾರುತ್ತಾ ಸಮುದ್ರವನ್ನೂ ಕೆಂಪಾಗಿಸುತ್ತಾ.. ಸಮುದ್ರದ ನೀರು ನೀಲಿ ಹಸುರಿನ ಜೊತೆ ಕೆಂಪನ್ನೂ ಸೇರಿಸಿ ವರ್ಣರಂಜಿತ. ಅಬ್ಬಾ ನೋಡಲು ಕಣ್ಣುಗಳೇ ಸಾಲುವುದಿಲ್ಲ! ನೋಡನೋಡುತ್ತಿದ್ದಂತೆಯೇ ಸೂರ್ಯ ಸಮುದ್ರದೊಳಗೆ ಕರಗಿಯೇ ಹೋದ. ನೋಡಲು ಕೂತವರ ಮುಖದ ಮೇಲಿನ ಭಾವನೆಗಳ ಜೊತೆ ಆಕಾಶದ ರಂಗೂ ಸೇರಿ ಸುತ್ತಮುತ್ತೆಲ್ಲ ಕೆಂಪಾದವೋ ಎಲ್ಲಾ ಕೆಂಪಾದವೋ.. ಆ ನೀಲಿ ಸಾಗರ, ಸುತ್ತಲಿದ್ದ ಹಸುರು ಮರಗಳು, ಕೂತ ನಾವಷ್ಟೂ ಜನರೂ ಕೆಂಪಾದೆವು!! ಸಂಜೆಯಾ ರಾಗಕೆ ಬಾನು ಕೆಂಪೇರಿದೆ!! ಅಕ್ಷರಶಃ ಕೆಂಪೇರಿತ್ತು. ಎದ್ದು ಬರಲು ಯಾರಿಗೂ ಮನಸ್ಸಿಲ್ಲ.ಹಾಗೇ ಕಾಲೆಳೆದು ನಡೆದು ಬರುವಾಗ ಮಸುಕು ಕತ್ತಲಲ್ಲಿ ಕೆಂದಾಳೆ ಸೀಯಾಳವನ್ನು ಮಾರುತ್ತಾ ನಿಂತವನನ್ನು ದಾಟುವಾಗ ಒಮ್ಮೆಲೇ ಎಲ್ಲರಿಗೂ ಎಳನೀರು ಕುಡಿಯುವ ಬಯಕೆಯಾಯಿತು. ಅದ್ಭುತ ರುಚಿಯ ಆ ಕೆಂದಾಳೆಯ ನೀರು ಒಂದೇ ಚಿಟಿಕೆ ಉಪ್ಪು ಬೆರೆಸಿದ ಹಾಗೆ ಇತ್ತು. ನಮ್ಮನ್ನು ನೋಡಿ ಇನ್ನೂ ಕೆಲವರು ಸೇರಿದರು. ನೋಡ ನೋಡುತಿದ್ದಂತೆ ಅವನ ಸೈಕಲಲ್ಲಿದ್ದ ಅಷ್ಟೂ ಎಳನೀರು ಮಾರಾಟವಾಗಿ ಹೋಯಿತು. ಬಸ್ಸು ಹತ್ತುವುದರೊಳಗೆ ದೊಡ್ಡವಳು.. ಅಮ್ಮಾ ಅಮ್ಮಾ ಅಮ್ಮಾ ನೋಡಿಲ್ಲಿ ಇವಳು ಜೆನಿಶಾ.. ಇದು ಇವಳ ಗಂಡ ಪ್ರವೀಣ್. ಎಂದು ಪರಿಚಯ ಮಾಡಿ ಕೊಟ್ಟಳು.ಶ್… ಏನಿದು.. ಇದು, ಗಂಡ. ಹಾಗೆಲ್ಲಾ ಅನ್ನಬಾರದು ಅಂದೆ.ಆಯ್ತಮ್ಮಾ ನೀನು ಕೂತ್ಕೊ ಎಂದು ಅವರ ಹರಟೆಯಲ್ಲಿ ಅವರು ಮಗ್ನರಾದರು. ಅಷ್ಟರವರೆಗೆ ಇಬ್ಬರು ಹುಡುಗಿಯರು ಒಬ್ಬ ಹುಡುಗ ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಂಡಿದ್ದವರಿಗೆ ಈಗ ಇನ್ನಿಬ್ಬರು ಸೇರಿ ಅವರ ಲೋಕವೇ ಬೇರೆಯಾಯ್ತು. ಈ ರೆಸಾರ್ಟ್ ತುಂಬಾ ದೊಡ್ಡದಾಗಿದ್ದು ಪ್ರತ್ಯೇಕ ಕಾಟೇಜ್ ಗಳು ತುಂಬಾ ಚೆನ್ನಾಗಿದ್ದವು. ಸುತ್ತಲೂ ಮರಗಿಡಗಳು, ನಮ್ಮನ್ನು ಬಾರ್ಜಲ್ಲಿ ಕರೆದುಕೊಂಡು ಬಂದು ಹೌರಾ ಬ್ರಿಜ್ ನೋಡಲು ಹೋದಾಗ ನಮ್ಮ ಲಗ್ಗೇಜ್ ಗಳು ಇಲ್ಲಿ ಈ ರೆಸಾರ್ಟಲ್ಲಿ ಬಂದು ಕೂತಿದ್ದವು. ನಮ್ಮ ನಮ್ಮ ಕಾಟೇಜ್ ಯಾವುದೆಂದು ನಮಗೆ ತಿಳಿಸಿ, ನಮ್ಮ ಲಗ್ಗೇಜ್ ಗಳನ್ನು ಅಲ್ಲಿನ ಹುಡುಗರು ತಂದಿರಿಸಿದರು. ನಾವೆಲ್ಲಾ ಮತ್ತೊಮ್ಮೆ ಸ್ನಾನ ಮಾಡಿ ಶುಚಿಯಾಗಿ ಎಂಟು ಗಂಟೆಗೆ ರೆಸ್ಟೋರೆಂಟ್ ಗೆ ಬರಬೇಕು ಎಂದು ಹೇಳಿದ್ದರಿಂದ ಅಲ್ಲೇ ಹೋಗಿ ಕೂತೆವು. ಮಾರನೆ ದಿನದ ಕಾರ್ಯಕ್ರಮದ ಬಗ್ಗೆ ತಿಳಿಸಲು ರಾಕೇಶ್ ಮತ್ತು ದರ್ಶನ್ ನಿಂತಿದ್ದರು.ನಾಳೆ ನೀಲ್ ಐಲ್ಯಾಂಡ್ ಲ್ಲಿರುವ ಡೈವಿಂಗ್ ಸ್ಪಾಟ್ ಲ್ಲಿ ಸ್ಕೂಬಾ ಡೈವಿಂಗ್, ಸ್ನೊರ್ಕ್ಲಿಂಗ್, ಗಾಜಿನ ತಳದ ದೋಣಿಯಲ್ಲಿ ಸಮುದ್ರಯಾನ ಮುಂತಾದ ಚಟುವಟಿಕೆಗಳಿಗಾಗಿ ಕರೆದುಕೊಂಡು ಹೋಗುತ್ತೇವೆ. ಸ್ಕೂಬಾ ಡೈವಿಂಗ್ ಮಾಡುವಆಸಕ್ತಿ ಉಳ್ಳವರು ತಯಾರಾಗಿರಿ. ಮದ್ಯಾಹ್ನದವರೆಗೆ ಸಮುದ್ರದ ಬಳಿ ಕಾಲ ಕಳೆದು ಊಟದ ನಂತರ ಮತ್ತೆ ನಾವು ಹಡಗಿನಲ್ಲಿ ಪೋರ್ಟ್ ಬ್ಲೇರ್ ಗೆ ಹೋಗುವವರಿದ್ದೇವೆ ಎಂದು ತಿಳಿಸಿದರು. ರಾತ್ರಿ ಒಳ್ಳೆಯ ನಿದ್ರೆ ಅತೀ ಅವಶ್ಯಕ, ಸಾಕಷ್ಟು ನೀರು ಕುಡಿಯುತ್ತಾ ಇರಿ. ಮತ್ತು ನಾಳೆ ಬೆಳಗಿನ ಉಪಹಾರದಲ್ಲಿ ಎಣ್ಣೆ ಪದಾರ್ಥವನ್ನು ಸೇವಿಸಬೇಡಿ. ಬ್ರೆಡ್, ಬನ್ ಮತ್ತು ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು ಎಂದು ಸೂಚನೆಗಳನ್ನು ಕೊಟ್ಟರು. ಬೆಳಿಗ್ಗೆ ನಿಗದಿತ ಸಮಯಕ್ಕೆ ತಯಾರಾಗಿ ನಮ್ಮ ಸಾಮಾನುಗಳ ಜೊತೆಗೆ ರೆಸ್ಟೋರೆಂಟ್ ಗೆ ಬಂದು ಉಪಹಾರ ಸೇವಿಸಿ ಲಗ್ಗೇಜ್ ಗಳನ್ನು ಅಲ್ಲಿಯೇ ಬಿಟ್ಟು ನಾವೆಲ್ಲರೂ ಬಸ್ಸಿನಲ್ಲಿ ಸಮುದ್ರ ತೀರಕ್ಕೆ ಹೋದೆವು. ಈ ನನ್ನ ಪ್ರವಾಸ ಕಥನದಲ್ಲಿ ನಮ್ಮ ಸುಖಪ್ರವಾಸದ ಬಗ್ಗೆ ನಿಮಗೆ ನನಗೆ ನೆನಪಿದ್ದಷ್ಟು ತಿಳಿಸುತಿದ್ದೇನೆ. ಪ್ರವಾಸ ವೆಂದರೆ ಸಾಹಸ ಎಂದುಕೊಂಡವರಿಗೆ ನೀರಸವೆನಿಸಬಹುದು.ಸಾಮಾನ್ಯವಾಗಿ ನಾವು ಸಂಸಾರದ ಏಕತಾನತೆಯಿಂದ ಬಿಡುಗಡೆ ಹೊಂದಲು ಒಂದಿಷ್ಟು ಸಮಯವನ್ನು ಬೇರೆ ವಾತಾವರಣದಲ್ಲಿ ಕಳೆಯಲು ಎಂದು ಹೋಗುತ್ತೇವೆ. ಆದರೆ ಬಂದ ಮೇಲೆ ಹೋದ ಖುಷಿಗಿಂತ ಕಿರಿಕಿರಿಯೇ ಜಾಸ್ತಿ ಅನಿಸಿ, ಯಾಕಾದರೂ ಹೋಗಬೇಕಿತ್ತೋ! ಅನಿಸುವುದೂ ಇದೆ. ನಾವು ಅಂಡಮಾನ್ ಗೆ ಹೋಗಿ ಬಂದು ಒಂದು ವರ್ಷದ ಮೇಲಾಯ್ತು. ಬಂದ ಕೂಡಲೇ ಬರೆಯಬೇಕು ಎಂದುಕೊಂಡಿದ್ದೆ. ಏನು ಬರೆದರೂ ನಮ್ಮ ಮಧುರ ಅನುಭವಕ್ಕಿಂತ ಸಪ್ಪೆ ಅನಿಸುತಿತ್ತು. ಹಾಗಾಗಿ ಕೈ ಬಿಟ್ಟಿದ್ದೆ. ಅದಾದ ಸ್ವಲ್ಪ ದಿನಕ್ಕೆ ಕೊರೊನಾ, ಲಾಕ್ ಡೌನ್ ಎಂದು ಬೇರೆಯೇ ಪ್ರಪಂಚದಲ್ಲಿದ್ದಂತೆ ದಿನ ಕಳೆದ ಮೇಲೆ ಅಂಡಮಾನ್ ನೆನಪು ಮರೆತೇ ಹೋಗಿತ್ತು. ಇತ್ತೀಚೆಗೆ ರೇಖಾ ಗೌಡ ಅವರು ಪೂರ್ಣ ಚಂದ್ರ ತೇಜಸ್ವಿಯವರ ಅಂಡಮಾನ್ ಪ್ರವಾಸ ಮತ್ತು ನೈಲ್ ಮಹಾನದಿ ಎಂಬ ಪುಸ್ತಕ ಓದಿ ಅಂಡಮಾನ್ ಬಗ್ಗೆ ಬಹಳ ಆಸೆಯಿಂದ ಬರೆದಿದ್ದರು. ಆಗ ನಾವು ಹೋಗಿ ಬಂದ ವಿಷಯ ಹೇಳಿದ್ದೆ ಅವರಿಗೆ. ನೀವು ನಿಮ್ಮ ಅನುಭವ ಬರೆಯಿರಿ ಎಂದು ತುಂಬಾ ಒತ್ತಾಯಿಸಿದರು. ಬರೆಯಲು ಶುರು ಮಾಡಿದಾಗ ಏನೂ ಸರಿಯಾಗಿ ನೆನಪಿರಲಿಲ್ಲ. ಆಮೇಲಾಮೇಲೆ ಒಂದೊಂದೇ ನೆನಪಾಗಲು ತೊಡಗಿತು. ನಾನೂ ಐದಾರು ದಿನಗಳಿಂದ ಅಂಡಮಾನ್ ಲ್ಲೇ ಇದ್ದಂತೆ ಅನಿಸುತ್ತಿದೆ. (ಮುಂದುವರೆಯುತ್ತದೆ..) ********* ಶೀಲಾ ಭಂಡಾರ್ಕರ್.




