ಯುಗಾದಿ ವಿಶೇಷ ಬರಹ ಯುಗಾದಿಯ ಸವಿ ಅಲ್ರಿ..ನನಗೊಂದು ಹೊಸ ಸೀರಿಬೇಕು.ಯಾಕಂದ್ರ ಹೊಸ ವರ್ಷದ ಸಂಭ್ರಮಕ ಎಲ್ಲವೂ ಹೊಸದಾಗಿರಬೇಕು ಅನ್ನು ತ್ತಿದ್ದರು ಅವನೇನು ತಲಿ ಕೆಡಸಿಕೊಂಡಿರಲಿಲ್ಲ. ಅಲ್ಲೆ ಕಪಾ ಟ ತುಂಬ ಇರೋ ಸಾರಿ ಮೊದಲ ಉಟ್ಟ ಹರಿ,ಆ ಮ್ಯಾಲೆ ಹೊಸಾದು ತಗೊಳಾಕಂತ. ಸುಮ್ಮನ ಯಾಕ ಖರ್ಚು ಎಷ್ಟ ರ ಜಿಪುಣ ಅದಿರಿ ನೀವು? ನಾ ಎನಾರ ಬಂಗಾರ ಕೇಳಿನೇ ನು? ಅದನಂತೂ ಹಾಕ್ಕೊಂಡು ಅಡ್ಡಾಡೋ ಯೋಗ ಇಲ್ಲ ನನಗ.ಬರಿ ಸೀರಿವಳಗಾದ್ರೂ ಖುಷಿ ಪಡೋಣ ಅಂದ್ರ ಅದಕೂ ಹಿಂಗ ಅಂತಿರಿ. ಗೆಳತೆರ ಮುಂದ ಮರ್ಯಾದಿ ತಗಿಬ್ಯಾಡ್ರಿ? ಹಾಂಗಲ್ಲ ಮಾರಾಯ್ತಿ, ನನ್ನ ಅಂಗಿ ಪ್ಯಾಂಟ್ ನಮ್ಮ ಮದವ್ಯಾಗಿಂದು. ಇನ್ನು ಹಾಂಗ ಅದಾವ ನಾ ಎನ ರ ಹೊಸಾದು ಇಷ್ಟವರ್ಷದಾಗ ಹೊಲಸಿನೇನ? ಇದ್ದುದ ರಾಗ ಮಾಡಕೊಂಡ ಹೊಂಟಿಲ್ಲೆನ ಅದಕ ಎಲ್ಲ ಹಬ್ಬ, ಅಮಾಸಿ,ಹುಣ್ಣಮಿಗೆ ಅರಬಿ ತಗೊಳ್ಳೊದು ಕಡಮಿ ಮಾ ಡು ನನ್ನ ಕಿಸೆ ಮೊದಲ ಹರದೈತಿ. ಆತ ಬಿಡ್ರಿ? ಹೆಚ್ಚ ಮಾತ ಬೇಡ.ನಿಮಗ ಕೊಡಸಾಕ ಮನ ಸಿಲ್ಲ ಅಂತ ಡೈರೆಕ್ಟ ಹೇಳಿಬಿಡ್ರಿ.ಎಲ್ಲರ ಮನಿಯಾಗ ಹಬ್ಬಕ್ಕ ಬಟ್ಟಿ,ಬಂಗಾರ ಹಾಕ್ಕೊಂಡು ಹಬ್ಬ ಮಾಡಿದ್ರ,ನಮ್ಮ ಮನಿ ಯಾಗ ಹಳೆ ಸೀರ್ಯಾಗ ಹೊಸವರ್ಷಾನ ಬರಮಾಡಕೋ ಭಾಗ್ಯ ಸಿಕ್ಕಿದ್ದು ನನ್ನ ಹಣೆಬರ ಇಷ್ಟ ಅಂತಾತು.ಉಡಾಂಗಿ ಲ್ಲ,ತೊಡಾಂಗಿಲ್ಲ ಎನ್ನುತ್ತ ಬಿರುಸಿಲೆ ಒಳನಡೆದೆ. ಹಬ್ಬ ಅಂದ ಮ್ಯಾಲೆ ಸ್ವಲ್ಪರ ತಯಾರಿಬೇಕು.ಬೆಲ್ಲ,ಬೇವು,ಕಬ್ಬು ಮಾವು ಹೊಸ ಫಲಗಳ ಪೂಜಿಸಾಕ ರೆಡಿ ಮಾಡತಿದ್ದೆ. ಅವನು ನಾನು ಬೆರೆತಿದ್ದು ಕಷ್ಟದ ಸಮಯದಾಗ. ಬದುಕಿಗೆ ಯಾರ ಆಶ್ರಯವಿಲ್ಲದೇ ಇರುವೆಯಂತೆ ಹಗುರಾದ ಆನೆ ಯಂತೆ ಭಾರವಾದ ಎಲ್ಲ ಸುಖವ ಸಮನಾಗಿ ಹಂಚಿಕೊಂ ಡು ಹೆಜ್ಹೆಯಿಟ್ಟವರು. ದೈವದ ಸಂಕಲ್ಪವೇ ಕೈ ಹಿಡಿದು ಮುನ್ನಡೆಸಿದೆ. ಕಷ್ಟ ಸುಖಗಳಿಗೆ ಸಮನಾಗಿ ಬೆರೆಯುವ ಮನೋಭಾವ ಎಲ್ಲರಲ್ಲಿ ಬರಲೆಂದು, ಚಾಂದ್ರಮಾನ ಯುಗಾದಿ ಹೊಸ ಸಂವತ್ಸರಕ್ಕೆ ಪಾದಾರ್ಪಣೆ ಮಾಡುವಾ ಗ ನಮ್ಮಲ್ಲಾಗುವ ಬದಲಾವಣೆಗಳು ಇಡೀ ಜೀವನದ ಮೇಲೆ ಪರಿಣಾಮ ಬಿರುವಂತಹ ಸುಸಂದರ್ಭ.ಇದೆಲ್ಲ ಗೊತ್ತಿದ್ದು ಎಲ್ಲ ಬೇಡವೆನ್ನುವವನ ಕಂಡು ಮಾತಾಡಿ ಉಪಯೋಗವಿಲ್ಲವೆಂದು ಸುಮ್ಮನಾದೆ. ಮಕ್ಕಳು ಅಪ್ಪನೊಂದಿಗೆ ತಳಿರುತೋರಣ ಕಟ್ಟುವಲ್ಲಿ ಬ್ಯೂಜಿ.ನಾನು ಅಡಿಗೆ ತಯಾರಿಯಲ್ಲಿ ಮನೆಯೋ ನವ ಮದುಮಗಳಂತೆ ಶೃಂಗಾರ ಮಾಡಿದ್ದು ಖಷಿ ತಂದಿತ್ತು. ಎಲ್ಲವಿದ್ದರೂ ಅವನ ಪ್ರೇಮದ ಮಾತುಗಳು ಸುಳಿಯದಿ ದ್ದರೆ,ಬೇವು ಮಾತ್ರ ಒಡಲ ಸೇರಿ ಬೆಲ್ಲದ ಸವಿಯ ಇಲ್ಲವಾ ಗಿಸಿದಂತೆ. ಹೊಸ ಪಂಚಾಂಗದ ಮುನ್ನುಡಿ ನಂಬುವವರ ರಾಶಿಗಳ ಬಲಾಬಲದ ಪಠಣ.ನಲಿವೆಂಬುದು ನಮ್ಮಲ್ಲಿ ಸದಾ ಜೇನುಗೂಡು ಕಟ್ಟಿದಂತೆ. ಪೂಜೆಯ ಸಿದ್ದತೆ ಮುಗಿದ ಮೇಲೆ ರೆಡಿಯಾಗಲು ಇದ್ದುದ ರಲ್ಲೆ ಸೀರೆಗಾಗಿ ಹುಡುಕಾಟ. ಎದುರಿಗೊಂದು ಪಾಕೀಟು. ಆಶ್ಚರ್ಯ ಇದೇನೆಂದು ಬಿಚ್ಚಿದರೆ ‘ಸೀರೆ’ನನಗಿಷ್ಟವಾದ “ತಿಳಿನೀಲಾಕಾಶ” ಆಗಿಂದ ಅಂದಿದ್ದೆಲ್ಲ ಬರಿ ತಮಾಷೆ, ರೇಗಿಸುವ..ಬುದ್ದಿ ಇನ್ನು ಹೋಗಿಲ್ಲ. ಅದೆಲ್ಲ ಸತ್ಯ ಅಂತ ಬೈದೆನಲ್ಲ ಎನ್ನುತ ಸೀರೆ ಕವರ್ ಸಮೇತ ರೀ…ಇದು ನನಗಾ? ಮತ್ತೆ ಹೇಳಲೇ ಇಲ್ಲ? ಅಯ್ಯೋ ಗುಂಡಿ ನಿನ್ನ ಗುಣ ನನಗಲ್ಲದೆ ಇನ್ನಾರಿಗೆ ಗೊತ್ತಾಗೊದು? ಮನೆಯ ಮಹಾಲಕ್ಷ್ಮಿ ಕಣೇ ನೀನು.ಸದಾ ನಗುನಗುತಾ ಓಡಾಡಿಕೊಂಡಿದ್ದರೆ ಅದೇ ನನಗೆ ಸ್ವರ್ಗ. ಯುಗಾದಿಯು ಕಹಿ ನೆನಪುಗಳ ಮರೆಸಲಿ, ಸಿಹಿನೆನಪುಗಳನ್ನು ಹಚ್ಚಿಸಲಿ. ನಮ್ಮಿಬ್ಬರ ಬಾಳಲಿ ವಿರಸಗಳು ಸುಳಿಯದಿರಲಿ ಚಿನ್ನಾ. ಬೇವು-ಬೆಲ್ಲದಂತೆ ಎನ್ನುತ ಮುದ್ದಿಸಿದವನ ಪ್ರೀತಿಯಲಿ ಯುಗಾದಿಯ ಸವಿಯ ಮೆಲ್ಲುತ್ತಿದ್ದೆ…. ********* ಶಿವಲೀಲಾ ಹುಣಸಗಿ
ಯುಗಾದಿ ವಿಶೇಷ ಬರಹ ಕಹಿ ಜಾಸ್ತಿ ತಿಂದ್ರೆ ವರ್ಷ ಪೂರ್ತಿ ಸಿಹಿಯಂತೆ ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ವರ್ಷದ ಆರಂಭ ಯುಗಾದಿ. ಸಂವತ್ಸರವೊಂದು ಮುಗಿದು ಮತ್ತೊಂದು ಸಂವತ್ಸರಕ್ಕೆ ಕಾಲಿಡುವ ಸಮಯ ಅರವತ್ತು ಸಂವತ್ಸರಗಳ ಈ ಚಕ್ರದಲ್ಲಿ ಈಗ ನಾವು ೩೫ ರ ಪ್ಲವ ನಾಮ ಸಂವತ್ಸರದಲ್ಲಿ ಇದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಬಂದಮೇಲೆ ತಿಥಿ ನಕ್ಷತ್ರ ಸಂವತ್ಸರಗಳ ಲೆಕ್ಕಾಚಾರ ಅಷ್ಟಾಗಿ ನಮ್ಮ ದೈನಂದಿನ ಬದುಕಿನಲ್ಲಿ ಉಳಿದುಕೊಂಡಿಲ್ಲ. ಅದರಲ್ಲಿ ಯುಗಾದಿಯ ಆಚರಣೆ ಸ್ವಲ್ಪ ಮುಂಚೂಣಿಯಲ್ಲಿದೆ ಅನ್ನಬಹುದೇನೋ. ಯಾಕೆಂದರೆ ನಾವು ಹೊಸವರ್ಷವನ್ನು ಡಿಸೇಂಬರ್ 31ರಂದು ಸಂಪದ್ಭರಿತವಾಗಿ ಆಚರಿಸುತ್ತೇವೆ. ಅದೇನೇ ಇದ್ದರೂ ವಾಸ್ತವದ ಲೆಕ್ಕಾಚಾರ ಕಾಲಮಾನ ಬದಲಾಗಲಾರದು. ಹೂ ಹೀಚು ಹಣ್ಣುಗಳಿಂದ ಪ್ರಕೃತಿ ಹೊಸ ಹೊಸ ಬಗೆಯ ಉಡುಗೆ ತೊಟ್ಟು ಸಂಭ್ರಮಿಸುವ ಕಾಲ ಈಗಲೇ. ಇಯರ್ ಎಂಡ್ ಅಂತ ಈಗಲೂ ಲೆಕ್ಕಾಚಾರ ಮಾರ್ಚ್ ತಿಂಗಳನ್ನೇ ಹೇಳೋದು. ಯುಗಾದಿಯ ನಂತರ ವಿಪರೀತವಾಗುವ ತಾಪಮಾನ. ಹಲವಾರು ರೋಗ ರುಜಿನಗಳನ್ನು ತರುತ್ತದೆ. ನೂರಕ್ಕೂ ಹೆಚ್ಚು ಔಷಧೀಯ ಗುಣವಿರುವ ಬೇವು, ಇದರ ಸೇವನೆಯಿಂದ, ಬರುವ ರೋಗಗಳನ್ನು ತಡೆಗಟ್ಟಬಹುದು. ಮತ್ತು ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಜೊತೆಗೆ ಬೆಲ್ಲವನ್ನೂ ತಿನ್ನುವ ವೈಜ್ಞಾನಿಕ ಕಾರಣವೂ ನಮಗಿಲ್ಲಿ ಸಿಗುತ್ತದೆ. ಈಗಲೂ ಹಳ್ಳಿಗಳಲ್ಲಿ ಬೆಲ್ಲ ತಿಂದು ನೀರು ಕುಡಿಯುವ ಪದ್ಧತಿ ಇದೆ. ಮಲೆನಾಡಿನ ಜೋರು ಮಳೆಗೆ ಜೀವ ಉಳಿಸಿಕೊಳ್ಳಲು ಹೆಣಗಾಡುವ ಬೇವಿನಗಿಡ ಅಪರೂಪದ ಅತಿಥಿ. ಹಬ್ಬದ ಮುಂಚಿನ ದಿನವೇ ಯಾರ ಮನೆಯಲ್ಲಿ ಬೇವಿನ ಗಿಡವಿದೆ ಎನ್ನುವ ತಲಾಷ್. ಕಣ್ಣು ಉಜ್ಜುತ್ತಲೇ ಬೇವಿನ ಎಲೆ ಕಿತ್ತು ತರುವ ಕಾಯಕ. ಹೆಚ್ಚು ಎಲೆ ತಂದರೆ ಹೆಚ್ಚು ತಿನ್ನಿಸುತ್ತಾಳೆ ಅಮ್ಮ ಎಂದು ಚೂರೇಚೂರು ಹಿಡಿದು ಬರುವ ಹುಷಾರಿತನ. ಇದೇನು ಇಷ್ಟು ಹನಿ ಇನ್ನೂ ಬೇಕು ಎನ್ನುವ ಅಮ್ಮ ಮತ್ತೆ ತರುವ ವರೆಗೂ ಬಿಡ್ತಿರಲಿಲ್ಲ. ಅಮ್ಮ ಅದೆಷ್ಟು ಕಹಿ ತಿನ್ನಿಸುತ್ತಾಳೋ ಇಂದು ಎಂದು ನಮ್ಮ ನಮ್ಮೊಳಗೆ ಚರ್ಚೆ ಹೇಗೆ ತಪ್ಪಿಸಿಕೊಳ್ಳುವದೆಂದು. ಎಲ್ಲಾ ಹಬ್ಬಗಳಲ್ಲೂ ಸಂಭ್ರಮ ಸೂಸುವ ಮುಖದಲ್ಲಿ ಆವತ್ತು ಸ್ವಲ್ಪ ಮಂಕು. ತುಪ್ಪದಲ್ಲಿ ಹುರಿದು ಜೊತೆಗಿಷ್ಟು ಬೆಲ್ಲ ಇಟ್ಟು ದೇವರಿಗೆ ಕೈಮುಗಿದು ತಿನ್ನಿ ಎನ್ನುತಿದ್ದಳು. ಈ ದಿನ ಕಹಿ ಜಾಸ್ತಿ ತಿಂದವರಿಗೆ ಬದುಕಿನಲ್ಲಿ ಸಿಹಿ ಜಾಸ್ತಿ ಎನ್ನುವ ಅಮ್ಮನ ನುಡಿಗಟ್ಟಿಗೆ ಹೆದರಿ ತಟ್ಟೆಯಲ್ಲಿದ್ದ ಬೇವಿನ ಎಲೆಗಳೆಲ್ಲ ಖಾಲಿ. ಕಿವುಚಿದ ಮುಖದಲ್ಲಿ ಪೆಚ್ಚು ನಗು. ಅಪ್ಪ ಪೂಜೆಗೆ ಇಟ್ಟ ಪಂಚಾಂಗ ತೆಗೆದು ತಿಥಿ, ವಾರ,ನಕ್ಷತ್ರ,ವಾರ್ಷಿಕ ಹಬ್ಬಗಳನ್ನು ಓದುತ್ತಿದ್ದರು. ಆಗಲೇ ನಮಗೆ ವರ್ಷ ಭವಿಷ್ಯ ಓದಲು ಕಾತರ. ಯಾರು ಮೊದಲು ಓದುವುದು ಪೂರ್ಣ ವರ್ಷದ ಭವಿಷ್ಯವೀಗ ನಮ್ಮ ಕೈಯೊಳಗೆ ಇದೆ ಎನ್ನುವ ಕೆಟ್ಟ ಕುತೂಹಲ. ಮತ್ತೆ ತಿಳಿದು ಕೊಳ್ಳುವ ಗಡಿಬಿಡಿ. ಯಾರಾದರೂ ಒಬ್ಬರು ಎಲ್ಲರ ಭವಿಷ್ಯವನ್ನು ದೊಡ್ಡದಾಗಿ ಓದಬೇಕು ಎನ್ನುವಲ್ಲಿಗೆ ಅದಕ್ಕೊಂದು ಪರ್ಯಾಯ ವ್ಯವಸ್ಥೆ. ಅಪ್ಪನ ರಾಶಿಯಿಂದ ಶುರುವಾದ ಭವಿಷ್ಯ ಸುಮಾರು ಒಂದು ತಾಸುಗಳ ಕಾಲ ನಡೆಯುವ ಈ ಪ್ರಕ್ರಿಯೆಯಲ್ಲಿ ಇಡೀ ವರ್ಷದ ಬದುಕೇ ಕಣ್ಮುಂದೆ ನಿಂತು ಕುಣಿದ ಭಾವ. ಗೊತ್ತಿದ್ದವರದ್ದೆಲ್ಲ ಓದಿ ಎಲ್ಲರ ಹಣೆಬರಹ ಬಲ್ಲವರಂತೆ ಪೋಸು. ಕಲಹ,ಪ್ರೀತಿ, ಸಂತಾನ ಭಾಗ್ಯ,ಕಂಕಣ ಭಾಗ್ಯ, ಧನಹಾನಿ,ಮಾನ ಹಾನಿ. ಇದನ್ನೆಲ್ಲಾ ಪರಿಹರಿಸಲು ಸರಿದೂಗಿಸಲು ಅಲ್ಲೊಂದು ಸಣ್ಣ ತಯಾರಿ. ಒಂದಕ್ಕೊಂದು ತಾಳೆಯಾಗದ ಭವಿಷ್ಯ ಫಲಕ್ಕೆ ಚಿಂತಿತ ಮನಸು,ಮುಸಿ ಮುಸಿ ನಗು. ಒಟ್ಟಿನಲ್ಲಿ ಈ ವರ್ಷ ಮಿಶ್ರಫಲ ಎಂದಾಗ ಒಂತರ ಮಿಶ್ರಭಾವ. ವರ್ಷಾರಂಭದ ವಾಸ್ತವ ಮತ್ತು ಕಲ್ಪನೆಗಳ ಬದುಕಿಗೆ, ಅಮ್ಮನ ಅಡುಗೆಯ ಹೋಳಿಗೆ ಸಿಹಿಯೊಡನೆ ಸಣ್ಣ ಆರಂಭ. ಅಳು ನಗು ಕಿತ್ತಾಟ ಪ್ರೀತಿ ಇಂದು ನೀವು ಏನೇ ಮಾಡಿದರೂ ವರ್ಷ ಪೂರ್ತಿ ಅದೇ ಇರುತ್ತೆ ನಿಮ್ ಪಾಲಿಗೆ ಎನ್ನುವ ವಾರ್ನಿಂಗ್ ಗೆ ಎಲ್ಲ ಮರೆತ ಭರಪೂರ ಪ್ರೀತಿ. ಹಬ್ಬಗಳು ಯಾವುದೇ ಇರಲಿ ಆರೋಗ್ಯ,ಪ್ರೀತಿ, ನಿಷ್ಠೆ,ನಂಬಿಕೆಗಳ ಜೊತೆಗೆ ಬಂಧಗಳ ಬೆಸೆಯುವುದೇ ಎಲ್ಲ ಹಬ್ಬದ ಉದ್ದೇಶ ಎನ್ನುವುದು ನಾವು ಅರಿಯಬೇಕಾದ ಸತ್ಯ. ಯೇ ಕಹಿ ಜಾಸ್ತಿ ತಿನ್ನು ಇಲ್ಲ ಅಂದ್ರೆ ಬದುಕು ಸಿಹಿಯಾಗಿ ಇರಲ್ಲ ಅನ್ನೋದನ್ನ ಮಗನಿಗೆ ಹೇಳೋದನ್ನ ಮರೆತಿಲ್ಲ ನಾನು ಯಾಕೆಂದ್ರೆ ನಂಬಿಕೆಯೇ ಬದುಕು. ************************************** ಸ್ಮಿತಾ ಭಟ್
ಯುಗಾದಿ ವಿಶೇಷ ಬರಹ ಹೊಸ ವರುಷವು ಬರಲಿ, ಸುಖ ಸಾವಿರ ತರಲಿ… ಅದೇನೋ ಬೇರೆ ಎಲ್ಲಾ ಹಬ್ಬಗಳಿಗಿರುವ ಒಂದು ಆಕರ್ಷಣೆ, ಆಚರಣೆ ಯುಗಾದಿ ಹಬ್ಬಕ್ಕಿಲ್ಲ. ಹಿಂದೂ ಚಾಂದ್ರಮಾನ ಪಂಚಾಗದ ಪ್ರಕಾರ ಚೈತ್ರ ಶುದ್ಧ ಪಾಡ್ಯಮಿಯನ್ನು ಯುಗಾದಿ ಹಬ್ಬವೆಂದು, ವರ್ಷದ ಮೊದಲ ದಿನವೆಂದು ಆಚರಿಸುತ್ತೇವೆ. ಸೌರಮಾನದವರು ಪ್ರತಿವರ್ಷ ಏಪ್ರಿಲ್ 14ರಂದು ಯುಗಾದಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಮಾರ್ಚ್ ತಿಂಗಳ ಕೊನೆಯಿಂದ ಏಪ್ರಿಲ್ ನಡುವಿನೊಳಗೆ ಹೊಸವರ್ಷದ ಆರಂಭವಾಗುವುದು ಆಚರಣೆಯಲ್ಲಿದೆ. ಚಿಕ್ಕಂದಿನಿಂದಲೂ ಈ ಹಬ್ಬದ ಬಗ್ಗೆ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬೇವಿನ ಟೊಂಗೆಯನ್ನು ಸಿಕ್ಕಿಸಿ ಸಿಂಗರಿಸುತ್ತಿದ್ದೆವು. ಎಂದಿನಂತೆ ಅಂದೂ ನಮ್ಮಪ್ಪ ದೇವರಪೂಜೆ ಮಾಡುತ್ತಿದ್ದರು. ಆ ವರ್ಷದ ಪಂಚಾಂಗವನ್ನು ತಂದು ದೇವರ ಮುಂದಿಟ್ಟು ಅದಕ್ಕೂ ಪೂಜೆ ಸಲ್ಲಿಸುತ್ತಿದ್ದರು. ನಂತರ ಬೇವಿನ ಹೂವು ಮತ್ತು ಬೆಲ್ಲದ ಮಿಶ್ರಣವನ್ನು ಪ್ರಸಾದವಾಗಿ ಕೊಡುತ್ತಿದ್ದರು. ಇದನ್ನು ಬೇಡವೆನ್ನುವಂತೆಯೇ ಇಲ್ಲ. ಜೀವನದಲ್ಲಿ ಎದುರಿಸುವ ಸಿಹಿ ಕಹಿಗಳ ಸಂಕೇತವಂತೆ ಇದು. ಎರಡನ್ನೂ ಸಮಭಾವದಿಂದ ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಆಶಯವಿದೆ ಈ ಆಚರಣೆಯ ಹಿಂದೆ. ಒಟ್ಟಿನಲ್ಲಿ ಹೇಗೋ ನುಂಗಿಬಿಡುತ್ತಿದ್ದೆವು. ಆಮೇಲೆ ನಮ್ಮ ತಂದೆ ಪಂಚಾಗ ಶ್ರವಣ ಮಾಡುತ್ತಿದ್ದರು. ನಾವೇನು ಎಂದೂ ಕೇಳಿಸಿಕೊಂಡಿರಲಿಲ್ಲ ಬಿಡಿ. ಸ್ಕೂಲಿಗೆ ಹೋಗುವ ಯಾವ ಮಕ್ಕಳಿಗೂ ಯುಗಾದಿಯ ಬಗ್ಗೆ ವಿಶೇಷವಾದ ಅಸ್ಥೆಯಿರುವುದಿಲ್ಲ. ಯಾಕೆನ್ನಿ, ಎಲ್ಲರಿಗೂ ಪರೀಕ್ಷೆಯ ಸಮಯ. ವರ್ಷವಿಡೀ ಆರಾಮಾಗಿ ಕಾಲಕಳೆದು ʻಯುದ್ಧಕಾಲೇ ಶಸ್ತ್ರಾಭ್ಯಾಸʼದ ತರಹ ಆಗ ಪುಸ್ತಕ ಹಿಡಿದು ಕೂರುವವರದು ಒಂದು ರೀತಿಯ ಸಂಕಟವಾದರೆ, ವರ್ಷಾರಂಭದಿಂದಲೂ ಓದಿ ಓದಿ ಗುಡ್ಡೆಹಾಕಿ ಪರೀಕ್ಷೆಯಲ್ಲಿ ಏನು ಕೇಳಿಬಿಡುವರೋ ಎಂಬ ಆತಂಕದಿಂದಲೇ ಇರುವ ಬುದ್ಧಿವಂತ ವಿದ್ಯಾರ್ಥಿಗಳ ಸಂಕಟವೇ ಬೇರೆ. ಒಬ್ಬರಿಗೆ ಹೇಗೋ ಪಾಸಾಗುವಷ್ಟು ಅಂಕಗಳನ್ನು ಗಳಿಸಿಕೊಂಡು ಈ ವರ್ಷ ದಾಟಿಕೊಂಡರೆ ಸಾಕು, ಮುಂದಿನ ವರ್ಷ ನೋಡಿಕೊಂಡರಾಯಿತು ಎನ್ನುವ ಮನೋಭಾವವಿದ್ದರೆ, ಇನ್ನೊಬ್ಬರಿಗೆ ಯಾವ ಗೊಂದಲದಲ್ಲಿ ಎಷ್ಟು ಅಂಕ ಕಳೆದುಹೋಗುವುದೋ, ಭವಿಷ್ಯದ ಗತಿಯೇನು ಎನ್ನುವ ಚಿಂತೆ. ಹೇಗಿದೆ ನೋಡಿ, ದಡ್ಡರಿಗೆ ಗಳಿಸಿಕೊಳ್ಳುವ ಉಮೇದು; ಜಾಣರಿಗೆ ಕಳೆದುಕೊಳ್ಳುವ ಭಯ. ನಾನಂತೂ ಪ್ರತಿವರ್ಷವೂ ʻಮುಂದಿನ ವರ್ಷ ಹೀಗೆ ಕಡೆಯ ಘಳಿಗೆಯಲ್ಲಿ ಒದ್ದಾಡದೆ, ಅಂದಂದಿನ ಪಾಠಗಳನ್ನು ಅಂದಂದೇ ಓದುತ್ತೇನೆಂದುʼ ಒಂದು ಘೋರ ಪ್ರತಿಜ್ಞೆ ಮಾಡುತ್ತಿದ್ದೆ. ಆದರೆ ಅದನ್ನು ಪೂರೈಸಿಬಿಟ್ಟರೆ ಮುಂದಿನ ವರ್ಷ ಮಾಡಲು ಪ್ರತಿಜ್ಞೆಗಳೇ ಇರುವುದಿಲ್ಲವಲ್ಲ; ಹಾಗಾಗಿ ಅದನ್ನೆಂದೂ ಪೂರೈಸುತ್ತಿರಲಿಲ್ಲ. ಹೀಗೆ ಅವರವರದೇ ತಲ್ಲಣಗಳಲ್ಲಿ ಮುಳುಗಿರುವ ಕಾಲದಲ್ಲಿ ಹಬ್ಬ ಬಂದರೆ ಮಕ್ಕಳಿಗೆ ಅದಿನ್ಯಾವ ಖುಷಿಯಿದ್ದೀತು ಹೇಳಿ. ಆಗ ನಮಗಿದ್ದ ಒಂದೇ ಖುಷಿಯೆಂದರೆ ವರ್ಷದಲ್ಲಿ ಎರಡೇ ಹಬ್ಬಕ್ಕೆ ಹೊಸಬಟ್ಟೆ ಸಿಗುತ್ತಿದ್ದುದು, ಅದು ಯುಗಾದಿ ಮತ್ತು ದೀಪಾವಳಿಯಲ್ಲಿ ಮಾತ್ರಾ. ಮದುವೆಯ ಜವಳಿ ಕೊಳ್ಳುವಂತಹ ಉಮೇದಿನಿಂದ ಊರೆಲ್ಲಾ ಪರ್ಯಟನೆ ಮಾಡಿ, ಜೊತೆಯವರು ಕೊಂಡ ಬಟ್ಟೆಗಳ ಎಲ್ಲಾ ವಿವರಗಳನ್ನೂ ತಿಳಿದುಕೊಂಡು, ಅಂಥದೇ ಬೇಕೆಂದು ಅಪ್ಪ, ಅಮ್ಮರಲ್ಲಿ ಬೇಡಿಕೆಯಿಟ್ಟರೂ, ಅವಾವುದೂ ಹಬ್ಬದ ಬಜೆಟ್‌ನಲ್ಲಿ ಪಾಸಾಗದೆ ಕಡೆಗೆ ಅಮ್ಮ ತಂದ ಯಾವುದೋ ಒಂದು ಬಟ್ಟೆಗೆ ಸಮಾಧಾನ ಮಾಡಿಕೊಳ್ಳಬೇಕಿತ್ತು, ಮಾಡಿಕೊಳ್ಳುತ್ತಿದ್ದೆವು. ಹಬ್ಬದಡುಗೆಯಲ್ಲಿ ಹೆಚ್ಚಾಗಿ ಮಾವಿನಕಾಯಿ ಚಿತ್ರಾನ್ನ, ಹೋಳಿಗೆ ಇರುತ್ತಿತ್ತು. ಹೋಳಿಗೆಗಿಂತಾ ವರ್ಷದ ಹೊಸಫಸಲು ಮಾವಿನಕಾಯಿ ಚಿತ್ರಾನ್ನದ ಬಗ್ಗೆಯೇ ಹೆಚ್ಚಿಗೆ ಒಲವು. ವರ್ಷಾರಂಭವಾಗಿ ಮೂರು ತಿಂಗಳ ನಂತರ ಬರುವ ಯುಗಾದಿಗೆ ವರ್ಷದ ಮೊದಲು ಎಂದೇಕೆ ಹೇಳುತ್ತಾರೆಂದು ಆಗೆಲ್ಲಾ ಅನ್ನಿಸುತ್ತಿತ್ತು. ಸಂಕ್ರಾಂತಿ ಸುಗ್ಗಿಯ ಹಬ್ಬವಾದರೂ, ಅದು ಮರಗಳೆಲ್ಲಾ ಎಲೆಯುದುರಿಸಿ ಬೋಳಾಗಿರುವ ಕಾಲ. ಚಳಿ ಕಳೆದು ಬಿಸಿಲು ಹುಟ್ಟಿದಾಗಲೇ ಸುತ್ತಲಿನ ಪ್ರಕೃತಿಯಲ್ಲೂ ಎಂತಹ ಸುಂದರ ಬದಲಾವಣೆ. ಬೋಳುಮರಗಳ ಗೆಲ್ಲು ಗೆಲ್ಲುಗಳೂ ಜೀವರಸ ತಳೆದು ಮೆಲ್ಲಗೆ ಕುಡಿಯೊಡೆದು, ಎಲೆಗಳೆಲ್ಲಾ ನಸುಗೆಂಪಾಗಿ ಚಿಗುರೊಡೆದು, ಎಳೆಹಸಿರು, ಎಲೆಹಸಿರು, ಕಡುಹಸಿರು ಬಣ್ಣಕ್ಕೆ ತಿರುಗಿ, ಮೈತುಂಬಾ ಬಣ್ಣಬಣ್ಣದ ಹೂತಳೆದು ರಸ್ತೆಯುದ್ದಕ್ಕೂ ಹಾಸಿ ವಸಂತರಾಜನ ಆಗಮನಕ್ಕೆಂದು ಸಿದ್ಧವಾಗಿ ಸಿಂಗರಿಸಿಕೊಂಡು ನಿಂತಿರುವಾಗ ಅದೆಂಥ ಸೊಬಗು! ʻಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ; ಚಳಿಯನು ಕೊಂದ ಹಕ್ಕಿಗಲುಳಿಗಳೆ ಚಂದʼ ಎಂದು ಬಿ.ಎಂ.ಶ್ರೀಯವರು ಹಾಡಿದಂತೆ ಎಲ್ಲ ಜಡತ್ವವನ್ನೂ ಹೊಡೆದೋಡಿಸಿ ಹೊಸ ಚಿಗುರು, ಹೊಸ ಹೂವು, ಹಣ್ಣುಗಳನ್ನು ತರುವ ಯುಗಾದಿ ಚಂದವೇ ಅಲ್ಲವೇ. ʻಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ; ಎಲ್ಲಿಯದೀ ಅನುಬಂಧ!ʼ ಜೊತೆಗೇ ಹಿಮ್ಮೇಳದವರಂತೆ ಅದೆಷ್ಟೊಂದು ಹಾಡುವ ಹಕ್ಕಿಗಳು ಈ ಕಾಲದಲ್ಲಿ! ನೆತ್ತಿ ಸುಡುವಷ್ಟು ಬಿಸಿಲಿರುವಾಗ ತಂಪಾಗುವಂತೆ ಬೇವನ್ನು, ಹೊಂಗೆಯನ್ನೂ ಅರಳಿಸುವ ಪ್ರಕೃತಿಯ ಮಾಯೆ ಅದೆಂಥದು! ಸೃಷ್ಟಿಯ ಸಮತೋಲನವೆಂದರೆ ಇದೇ ಅಲ್ಲವೇ. ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವಾಗಲೀ, ಹೂವಿನ ರಾಣಿ ಎನಿಸಿಕೊಂಡಿರುವ ಮಲ್ಲಿಗೆಯಾಗಲೀ ಮೊಗತೋರುವುದು ಈ ಕಾಲದಲ್ಲೇ. ನಮ್ಮಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು – “ಮಾವಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಇಷ್ಟ ಪಡದಿರುವವರೇ ಇಲ್ಲ. ಹಾಗೂ ಇದ್ದಾರೆಂದರೆ ಅದವರ ರುಚಿಯ ದೋಷ; ಮಾವು ಮಲ್ಲಿಗೆಯದಲ್ಲ” ಎಂದು. ನಿಜವಲ್ಲವೇ? ಮಾವು ಎಂದಾಕ್ಷಣ ನನ್ನ ನೆನಪು ನಮ್ಮ ಶಾಲೆಯ ದಿನಗಳಿಗೆ ಓಡಿಹೋಗುತ್ತದೆ. ಆಗೆಲ್ಲಾ ಹಲವು ಮುದುಕ, ಮುದುಕಿಯರು ಸ್ಕೂಲಿನ ಮುಂದೆ ಕಿತ್ತಳೆ, ಪರಗಿ, ನೇರಳೆ, ಬೋರೆಯಂತಹ ಹಣ್ಣುಗಳನ್ನು, ನೆಲ್ಲಿಕಾಯಿ, ಮಾವಿನಕಾಯಿ ಇಂತಹ ಹುಳಿಯಾದ ಕಾಯಿಗಳನ್ನು ಬುಟ್ಟಿಯಲ್ಲಿಟ್ಟುಕೊಂಡು, ಮುಂದೆ ಸುರಿದುಕೊಂಡು ಮಾರುತ್ತಿದ್ದರು. ಹಣ್ಣು ತೊಳೆದು ತಿನ್ನುವುದೆಲ್ಲಾ ಈ ಕಾಲಕ್ಕೆ, ಅಂದು ಅಂತಹ ರಿವಾಜುಗಳಾಗಲೀ, ಸ್ನಾನ ಸಂಸ್ಕಾರಗಳಾಗಲೀ ಇರಲಿಲ್ಲ. ಬೀದಿಯಲ್ಲಿಟ್ಟುಕೊಂಡಿದ್ದು ಸೀದಾ ಹೊಟ್ಟೆಯಲ್ಲಿರುತ್ತಿತ್ತು. ಎರಡು ಪೈಸೆಗೂ ನಾಲ್ಕಾರು ಪುಟ್ಟ ಹಣ್ಣುಗಳನ್ನು, ಕಾಯಿಗಳನ್ನು ಕೈಗಿಡುತ್ತಿದ್ದರು. ನಾವು ಕೊಂಡ ಹಣ್ಣುಗಳನ್ನು ಒಂದು ಪುಟ್ಟ ಅಲ್ಯುಮಿನಿಯಮ್ ಪಾತ್ರೆಗೆ ಸುರಿದುಕೊಂಡು ಅದಕ್ಕಷ್ಟು ಉಪ್ಪು ಖಾರ ಬೆರಸಿ, ಎಗರಿಸಿ ಎಗರಿಸಿ ಚೆನ್ನಾಗಿ ಹೊಂದಿಸಿ ಒಂದು ಕಾಗದದ ಪೊಟ್ಟಣಕ್ಕೆ ಹಾಕಿಕೊಟ್ಟರೆ… ಅಬ್ಭಾ! ಯಾವ ಅಮೃತದ ರುಚಿಯೂ ಅದರ ಮುಂದಿಲ್ಲ. ಪುಟ್ಟ ಕಿತ್ತಳೇ ಹಣ್ಣನ್ನು ಅರ್ಧಕ್ಕೆ ಹೆಚ್ಚಿ ಅದಕ್ಕೆ ಉಪ್ಪುಖಾರದ ಪುಡಿಯನ್ನು ಬೆರೆಸಿ ನಾಲಿಗೆಗೆ ಸವರಿಕೊಳ್ಳುತ್ತಿದ್ದರೆ, ಎಂತಹ ಬಾಯಿಕೆಟ್ಟು ರುಚಿ ಕೆಟ್ಟಿದ್ದರೂ ಓಡಿಹೋಗಬೇಕು! ಈ ಸರಕಲ್ಲೆಲ್ಲಾ ಹೆಚ್ಚಿನ ಬೆಲೆ ಎಂದರೆ ಗಿಣಿಮೂತಿ ಮಾವಿನಕಾಯಿಗೆ. ಪುಟ್ಟವಕ್ಕೆ ಐದು ಪೈಸೆಯಿಂದ ಹಿಡಿದು ದೊಡ್ಡ ಕಾಯಿಗಳು ಗರಿಷ್ಟವೆಂದರೆ ಇಪ್ಪತ್ತೈದು ಪೈಸೆ. ನಮ್ಮ ರೇಂಜ್ ಯಾವಾಗಲೂ ಐದರಿಂದ ಹತ್ತು ಪೈಸೆ ಮಾತ್ರಾ. ಅದೂ ಪರೀಕ್ಷೆ ಮುಗಿಯುವ ತನಕ ಏನೇ ಆದರೂ ಮಾವಿನಕಾಯನ್ನು ತಿನ್ನಲೇಬಾರದು ಎಂದು ಮನೆಯಲ್ಲಿ ಕಟ್ಟಪ್ಪಣೆ. ತಿಂದು ಜ್ವರ ಕೆಮ್ಮು ಬಂದು ಪರೀಕ್ಷೆಗೇ ಚಕ್ಕರ್ ಕೊಡುವಂತಾದರೆ ಎನ್ನುವ ಕಾಳಜಿ. ಅಪ್ಪಣೆಗಳನ್ನು ಮೀರುವುದರಲ್ಲಿರುವ ಖುಷಿ, ಪಾಲಿಸುವುದರಲ್ಲಿದೆಯೇ! ಹೇಗೋ ಅತ್ತೂ, ಕರೆದೂ ಎಂದೋ ಒಂದೊಂದು ದಿನವಾದರೂ ಕಾಸು ಗಿಟ್ಟಿಸಿಕೊಳ್ಳುತ್ತಿದ್ದೆವು. ಈ ತ್ಯಾಗಕ್ಕೆ ಪ್ರತಿಫಲವಾಗಿ ಕಡೆಯ ಪರೀಕ್ಷೆಯ ದಿನ ಹಟಮಾಡಿ ಒಂದಿಡೀ ಹತ್ತುಪೈಸೆಯ ಮಾವಿನಕಾಯನ್ನು ಕೊಂಡು ತಿಂದರೆ ಭೂತಬಲಿ ಹಾಕಿದಂತೆ! ಆಮೇಲೆ ಶಾಲೆಯ ಕಡೆ ಹೋಗುವಂತೆಯೂ ಇಲ್ಲ; ಹಣ್ಣುಕಾಯಿನ ಅಜ್ಜಿಯರೂ ಇಲ್ಲ. ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಕಾನ್ವೆಂಟಿನಲ್ಲಿ ದೊಡ್ಡ ಮಾವಿನ ಮರದ ತೋಪು ಇತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ತಂತಮ್ಮ ಗುಂಪಿನೊಡನೆ ಹೋಗಿ ನಿಗದಿ ಮಾಡಿಕೊಂಡಿದ್ದ ಮಾವಿನ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದೆವು. ಅಲ್ಲಿನ ಸಿಸ್ಟರ್‌ಗಳು ಅದೆಷ್ಟು ಶಿಸ್ತನ್ನು ಪಾಲಿಸುತ್ತಿದ್ದರೆಂದರೆ ಆ ಸಮಯಕ್ಕೆ ಮುಂಚೆಯೇ ಆಳುಗಳನ್ನು ಬಿಟ್ಟು ಉದುರಿದ ಕಾಯಿಗಳೆಲ್ಲವನ್ನೂ ಹುಡುಕಿ ಹುಡುಕಿ ಆರಿಸಿಕೊಂಡು ಹೋಗಿರುತ್ತಿದ್ದರು. ಮತ್ತು ಊಟದ ಸಮಯದ ಉದ್ದಕ್ಕೂ ತೋಪಿನ ಬಾಗಿಲಲ್ಲೇ ನಿಂತು ಯಾರಾದರೂ ಕಲ್ಲೆಸೆಯುತ್ತಿದ್ದಾರೆಯೇ, ಹತ್ತಿ ಕಿತ್ತುತ್ತಿದ್ದಾರೆಯೇ ಎನ್ನುವ ಕಣ್ಗಾವಲನ್ನು ಇರಿಸಿಕೊಂಡು ನಿಂತಿರುತ್ತಿದ್ದರು. ಟೊಂಗೆಟೊಂಗೆಯಲ್ಲೂ ಜಿಗಿಯುತ್ತಿರುವ ಎಳೆಯ ಮಾವಿನಕಾಯಿಗಳು… ಕಣ್ಣೋಟಕ್ಕಷ್ಟೇ, ಕೈಗಿಲ್ಲ! ನಾವು ಕುಳಿತಿರುವಾಗಲೇ, ನಮ್ಮ ಅದೃಷ್ಟ ಖುಲಾಯಿಸಿ ಯಾವುದಾದರೂ ಕಾಯಿ ಬಿದ್ದರೆ ಅದು ನಮ್ಮ ಪುಣ್ಯ. ಅದು ಹೇಗೋ ಟಿಫಿನ್ ಬಾಕ್ಸಿನ ಮುಚ್ಚಳದಿಂದಲೇ ಕತ್ತರಿಸಿ ಹಂಚಿಕೊಂಡು ತಿಂದಾಗ ಅದೆಂಥ ಆನಂದ. ಕದ್ದ ಮಾಲಿಗಿರುವ ರುಚಿ ಕೊಂಡದ್ದಕ್ಕಿದೆಯೇ? ನೆತ್ತಿಗೇರಿ ಜುಟ್ಟು ನಿಮಿರಿಸುತ್ತಿದ್ದ ಹುಳಿ ಅದೆಷ್ಟು ರುಚಿ! ಅಂತೂ ಅಂತಹ ಅದೃಷ್ಟವೂ ಎಂದಾದರೊಮ್ಮೆ ಒದಗಿ ಬರುತ್ತಿತ್ತು. ಈಗ ಮತ್ತೆ ಯುಗಾದಿ ಹಬ್ಬಕ್ಕೆ ಬರೋಣ. ಹಬ್ಬದ ದಿನ ಸಂಜೆ ನಾವೆಲ್ಲರೂ ಹೊಸ ಬಟ್ಟೆ ತೊಡುತ್ತಿದ್ದೆವು. ಹೊಸ ಸೀರೆಯುಟ್ಟ ಅಮ್ಮ ಪಂಚಾಂಗದಲ್ಲಿ ಈ ವರ್ಷದ ಭವಿಷ್ಯ ಹೇಗಿದೆಯೆಂದು ಓದುತ್ತಿದ್ದರು. ಮಳೆ, ಬೆಳೆ, ರಾಜಕೀಯ ಪಲ್ಲಟಗಳು ಎಲ್ಲವೂ ಮುಗಿದ ನಂತರ ಪ್ರತಿಯೊಬ್ಬರ ರಾಶಿಯ ಕಂದಾಯ ಫಲವನ್ನು ನೋಡುತ್ತಿದ್ದರು. ಕಂದಾಯ ಫಲವೆಂದರೆ ಆಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜಪೂಜ-ರಾಜಕೋಪ ಹೀಗೆ ವರ್ಷದ ಮೂರೂ ಭಾಗಗಳಲ್ಲಿ ಒಬ್ಬೊಬ್ಬರ ಫಲವೂ ಹೇಗಿದೆ ಎಂದು ನೋಡುವುದು. ʻಮನೆಗಿರುವ ಆದಾಯ ಅಪ್ಪ ಒಬ್ಬರದೇ ಆಗಿರುವಾಗ ಬೇರೆ ಬೇರೆಯವರಿಗೆ ಬೇರೆ ಬೇರೆ ಆದಾಯ ಹೇಗಿರುತ್ತದೆ?ʼ ಎನ್ನುವ ಸಂಶಯ ನನಗೆ ಯಾವಾಗಲೂ. ಇದಾದ ಮೇಲೆ ಪ್ರತಿಯೊಬ್ಬರ ರಾಶಿಫಲವನ್ನೂ ಓದುತ್ತಿದ್ದರು. ಏನೋ ಚೆನ್ನಾಗಿರುವುದು ಬಂದರೆ ಓದು ಮುಂದುವರೆಯುತ್ತಿತ್ತು; ಇಲ್ಲವಾದರೆ “ಅಯ್ಯೋ ಇದ್ರಲ್ಲಿ ಬರ‍್ದಿರೋದೆಲ್ಲಾ ಆಗೋ ಹಂಗಿದ್ರೆ ಇನ್ಯಾಕೆ? ಬಂದಾಗ ಅನುಭವಿಸೋದು ಇದ್ದೇ ಇದೆ. ಸಾಕಿಷ್ಟು ತಿಳ್ಕೊಂಡಿದ್ದು” ಎನ್ನುತ್ತಾ ಪುಸ್ತಕ ಮುಚ್ಚುತ್ತಿದ್ದರು. ಎಷ್ಟೊಂದು ಆರೋಗ್ಯಕರ ಮನೋಭಾವವಲ್ಲವೇ?! ಈಗಂತೂ ಬಿಡಿ, ಪ್ರತಿ ವಾಹಿನಿಯಲ್ಲೂ ನೂರಾರು ಜ್ಯೋತಿಷ್ಯ ಹೇಳುವವರು ಉದ್ಭವಿಸಿ ದೊಡ್ಡ ಕಾರ್ಯಕ್ರಮವನ್ನೇ ನಡೆಸಿಬಿಡುತ್ತಾರೆ. ಕೆಲವು ಸಲವಂತೂ ಇಬ್ಬರು, ಮೂವರು ಒಟ್ಟಿಗೇ ಕುಳಿತು ಅದರ ಬಗ್ಗೆ ಚರ್ಚೆ, ವಾದ-ವಿವಾದಗಳು ಬೇರೆ. ಹಲವು ಕಂಟಕಗಳಿಗೆ ಅವರು ಹೇಳುವ ಪರಿಹಾರಗಳನ್ನು ಮಾಡಹೊರಟರೆ ಗಂಟು ಮುಳುಗಿ ಜನಸಾಮಾನ್ಯರು ಮಖಾಡೆ ಮಲಗುವುದೇ ಸರಿ. ಹೋಗಲಿ ಬಿಡಿ, ಅದು ಅವರವರ ವೃತ್ತಿ ಧರ್ಮ, ಕೇಳುವವರ ಕರ್ಮ. ಯುಗಾದಿಯಂದು ಎಲ್ಲರಿಗೂ ಒಳ್ಳೆಯದನ್ನು ಹಾರೈಸೋಣ. ಮುಂದೆ ಬರುವ ದಿನಗಳು ಚೆನ್ನಾಗಿರುತ್ತವೆ ಎಂದು ಭಾವಿಸೋಣ. ನಮ್ಮಮ್ಮ ಹೇಳಿದಂತೆ ʻಬಂದರೆ ಅನುಭವಿಸುವುದು ಇದ್ದೇ ಇದೆʼ. ಈಗಿಂದಲೇ ಏಕೆ ಚಿಂತೆ? ಮನೆಯಲ್ಲಿ ಮಾಡಲು ಬರದಿದ್ದರೆ ಹೋಳಿಗೆ ಮನೆಯಿಂದಾದರೂ ತಂದು ಮಧುಮೇಹವಿಲ್ಲದಿದ್ದರೆ ಹಾಲು, ತುಪ್ಪದೊಂದಿಗೆ ಸಂಭ್ರಮಿಸುತ್ತಾ ತಿನ್ನೋಣ. ಎಲ್ಲೆಲ್ಲೂ ಮಾವಿನಕಾಯಿ ಸುರಿಯುತ್ತಿದೆ. ಚಿತ್ರಾನ್ನಕ್ಕಂತೂ ಮೋಸವಿಲ್ಲ. ನೆನಪಿಸಿಕೊಂಡರೇ ಬಾಯಲ್ಲಿ ನೀರೂರುತ್ತಿದೆ. ಕೊರೋನಾ ಕಾವಳದಲ್ಲೂ ಇಂತಹ ಸಣ್ಣ ಪುಟ್ಟ ಸಂಭ್ರಮಗಳನ್ನು ಮನಸಾರೆ ಅನುಭವಿಸೋಣ. ********************************************* ಟಿ. ಎಸ್. ಶ್ರವಣ ಕುಮಾರಿ.
ಯುಗಾದಿ ವಿಶೇಷ ಬರಹ ಚಿಗುರಿದಚೈತ್ರ ನಾಳೆ ಚೈತ್ರಮಾಸದ ಮೊದಲನೆ ದಿನ, ನಮಗೆ ಹೊಸ ವರುಷ. ತೊರಣ ಕಟ್ಟಬೇಕು, ಮಾವಿನ ಎಲೆ, ಬೇವಿನ ಸೊಪ್ಪು ತರಬೇಕಾಗಿದೆ, ಮಗನಿಗೆ ಹೇಳಲೇ! ಪ್ರತಿವರ್ಷವೂ ಇದೇ ಗೊಳು, ಮಗನು ಪ್ರಾಯಕ್ಕೆ ಬಂದಾಗಿಂದಾ ಹಬ್ಬದ ದಿನಗಳಲ್ಲಿ ಮಗನಾಗಲಿ, ಗಂಡನಾಗಲೀ ಸ್ವಲ್ಪವೂ ಆಸಕ್ತಿಯನ್ನು ತೋರುವುದೇ ಇಲ್ಲ. ನಾನೊಬ್ಬಳೇ ಎಲ್ಲಾ ಹಬ್ಬದ ಕೆಲಸಗಳನ್ನು ಮಾಡಬೇಕು. ಎಲ್ಲರೂ ಆಸಕ್ತಿಯಿಂದ ಜೊತೆಗೂಡಿ ಹಬ್ಬಗಳನ್ನು ಆಚರಿಸಿದರೆ ಬಲು ಚೆಂದ. ಏನು ಮಾಡುವುದಕೂ ಬೆಸರ, ಮನಸಿಗೆ ಉಲ್ಲಾಸವೇ ಇಲ್ಲವಾಗುತ್ತಿದೆಯಲ್ಲ! ಜೀವನದಲ್ಲಿ ಸಾರವೇ ಇಲ್ಲ. ಮೌನವಾಯಿತು ಮನ. “ಏ ವೀಣಾ ಎಣ್ಣೆ ಸ್ನಾನ ಮುಗಿಸಿ, ಹೂಗಳ ಹಾರವನ್ನು ಕಟ್ಟಿ ಕೊಡು” ಅಮ್ಮನ ಕೂಗಿಗೆ ಎದ್ದು, ಬೇಗ ಬೇಗನೆ ಸಿದ್ಧಳಾದೆ. ಅಕ್ಕನ ಜೊತೆ ಸೇರಿ ಮನೆಯ ಅಂಗಳದಲ್ಲಿ, ಪ್ರೀತಿಯಿಂದ ಆರೈಕೆಮಾಡಿ ಬೆಳೆದ, ಬಣ್ಣ ಬಣ್ಣದ ಸ್ಪಟಿಕ ಹೂ, ಮಲ್ಲಿಗೆ, ಗುಲಾಬಿ, ಸಂಪಿಗೆ, ಕಾಕಡ, ಮಾಚಿ ಪತ್ರೆ, ಗರಿಕೆ, ದಾಳಿಂಬ್ರೆ ಪತ್ರೆ, ಸೀಬೆಗಿಡದ ಒಂದೆರಡು ಕುಡಿಗಳನ್ನು ಕಿತ್ತು, ಅಕ್ಕನ ಜೊತೆ ಕೂಡಿ ಹೂವಿನ ಹಾರವನ್ನು ಕಟ್ಟಿ, ಪೂಜೆಯ ಸಿದ್ಧತೆಗಳನ್ನು ಮಾಡಿಮುಗಿಸಿದೆ. ಅಣ್ಣ ಮಾವಿನ ಸೊಪ್ಪು, ಹೂಗಳಿದ್ದ ಬೇವಿನ ಚಿಗುರುಗಳನ್ನು ತಂದು, ಮಾವಿನ ತೊರಣವನ್ನು ಕಟ್ಟಿ, ಬೇವಿನ ಕುಡಿ, ಹೂವ, ಬೆಲ್ಲ, ಸ್ವಲ್ಪ ತುಪ್ಪ ಹಾಕಿ ಕುಟ್ಟಿ ದೇವರ ನೈವೇದ್ಯಕೆಂದು ಒಂದು ಬಟ್ಟಲಲ್ಲಿ ಹಾಕಿ ದೇವರ ಕೋಣೆಯಲ್ಲಿ ಪೂಜೆ ಮಾಡುತ್ತಿದ್ದ ಅಪ್ಪನಿಗೆ ಕೊಟ್ಟನು, ತಾನೂ ಪೂಜೆಗೆ ಕುಳಿತನು. ಅಮ್ಮ ಬೇಗ ಬೇಗನೆ ಒಂದೆರಡು ಬೇಳೆ ಹೋಳಿಗೆಯನ್ನು ಮಾಡಿ, ತುಪ್ಪ ಹಾಕಿ ನೈವೇದ್ಯದ ಸಮಯಕ್ಕೆ ತಂದು ಕೊಟ್ಟು, ತಾನೂ ಮಹಾಮಂಗಳಾರತಿಯನ್ನು ತೆಗೆದುಕೊಂಡು, ಮತ್ತೆ ಹೊಳಿಗೆಯನ್ನು ಮಾಡಲು ಅಡುಗೆ ಮನೆಯತ್ತ ಹೋದಳು. ಅಪ್ಪ ಎಲ್ಲರಿಗೂ ಬೇವುಬೆಲ್ಲದ ಮಿಶ್ರಣವನ್ನು ಕೊಟ್ಟರು. ಕಹಿ ಇದ್ದರೂ ಸಹ ನಾವೆಲ್ಲ ಶ್ರದ್ಧೆಇಂದ ತಿಂದು, ಹೊಳಿಗೆಗಾಗಿ ಕಾತರದಿಂದ ಕೈ ಚಾಚಿದೆವು. ಅಣ್ಣ ಆ ಎರಡು ಹೊಳಿಗೆಯನ್ನು ತುಂಡುಗಳನ್ನಾಗಿ ಮಾಡಿ ಎಲ್ಲರಿಗೂ ಕೊಟ್ಟು ತಾನೂ ತಿಂದನು. ಅಕ್ಕ ಮಾವಿನಕಾಯಿಯನ್ನು ಸಣ್ಣಗೆ ಹಚ್ಚುತ್ತಿದ್ದಳು, ನಾನೂ ಸಹ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯನ್ನು ತೊಳೆದು, ಹೆಸರಬೇಳೆ ಕೋಸಂಬ್ರಿ, ಮಾವಿನಕಾಯಿ ಚಿತ್ರಾನ್ನ ಮಾಡುವುದಕ್ಕೆ, ಅಮ್ಮನಿಗೆ ಸಹಾಯಮಾಡಿದೆವು. ಮನೆಯೆಲ್ಲಾ ಮಲ್ಲಿಗೆ ಹೂವಿನ ಪರಿಮಳದಿಂದ ಕೂಡಿತ್ತು. ಹೋಳಿಗೆ, ಬೊಂಡದ ವಾಸನೆಯು ನಮ್ಮ ಹಸಿವನ್ನು ಹೆಚ್ಚಿಸಿತ್ತು. ಅಣ್ಣ ಎಲ್ಲರಿಗೂ ಬಾಳೆ ಎಲೆ ಹಾಕಿ, ನೀರಿಟ್ಟು ಊಟಕ್ಕೆ ಎಲ್ಲರನ್ನೂ ಕರೆದು, ತಾನು ನಮ್ಮಜೊತೆ ಸೇರಿ ಪಾಯಸ, ಪಲ್ಯ, ಕೊಸಂಬರಿಯನ್ನು ಬಡಿಸಿದನು. ಅಪ್ಪ, ಅಮ್ಮರ ಜೊತೆ ಕುಳಿತು ನಾವೆಲ್ಲರೂ ನಗುನಗುತ್ತ ಹಬ್ಬದ ಊಟವನ್ನು ಮುಗಿಸಿದೆವು. “ಅಣ್ಣ ಯಾರೋ ಗೇಟ್ ತೆಗೆದಹಾಗಾಯಿತು”, “ನೊಡು, ಯಾರೋ ಬಂದಿರಬೇಕು” ನನ್ನಕ್ಕ ಹೇಳಿದಂತೆ, ಅಣ್ಣ ಬಾಗಿಲನ್ನು ತೆಗೆದನು. ನಾನು ಓಡಿಹೋಗಿ, ಯಾರಿರಬೇಕೆಂದು ತೊಂಗಿ ನೋಡಿದೆ, ಅರೆ ಮೊಹನ, ಜ್ಯೊತಿ ಎಲ್ಲರೂ ಬಂದಿದ್ದಾರೆ, “ಅಮ್ಮ ಅಮ್ಮ ಮಾಮನ ಮಕ್ಕಳು ಬಂದಿದ್ದಾರೆ”, “ಹೌದೆನೆ!, ಅಮ್ಮ ಕೊಣೆಯಿಂದ ಹೊರಗೆ ಬಂದು, ತನ್ನ ಆಣ್ಣನ ಮಕ್ಕಳನ್ನು ಸ್ವಾಗತಿಸಿದಳು. ನಮ್ಮೆಲ್ಲರಿಗೂ ಖುಷಿಯೋ ಖುಷಿ. ನಾವೆಲ್ಲರೂ ಹರಟೆಹೊಡೆಯುತ್ತ, ಕೇರಂ ಆಟವನ್ನು ಆಡಿ, ಅಂತಾಕ್ಷರಿಯಲ್ಲಿ ಕನ್ನಡ, ಹಿಂದಿ ಹಾಡುಗಳನ್ನು ಹಾಡುತ್ತ, ಹಾಡುತ್ತಾ, ಅಮ್ಮ ತಂದುಕೊಟ್ಟ ನಿಂಬೆಹಣ್ಣಿನ ಪಾನಕವನ್ನು ಕುಡಿಯುತ್ತ ಅಂತಾಕ್ಷರಿಯನ್ನು ಮುಗಿಸಿದೆವು. ಸಮಯ ಕಳೆದದ್ದೇ ತಿಳಿಯಲಿಲ್ಲ. ಮನೆಯ ಗಿಡದಲ್ಲಿ ಬಿಟ್ಟ ಸೀಬೆಹಣ್ಣನ್ನು ಕಿತ್ತು ಅವರಿಗೆ ಕೊಟ್ಟು, ನಾವೆಲ್ಲರೂ, ಮೊಹನ, ಜ್ಯೊತಿಯನ್ನು ಅವರ ಮನೆಯ ಅರ್ಧ ದಾರಿಯವರೆಗೆ ಬೀಳ್ಕೊಟ್ಟು ಮನೆಗೆ ಬಂದೆವು. ಎಲ್ಲರ ಮನದಲ್ಲೂ ಎನೋ ಒಂದು ತೃಪ್ತಿ ತುಂಬಿ ಕುಣಿಯುತಿತ್ತು. ಹೆಜ್ಜೆಯ ಸದ್ದಿಗೆ, ನೆನಪುಗಳಿಂದ ಹೊರಬಂದು, ತಲೆ ಎತ್ತಿ ನೋಡಿದೆ. ಮಗ ಸೊಸೆಯ ಕೈಹಿಡಿದು ನನ್ನ ಸಮೀಪ ಬಂದು ಕುಳಿತನು. “ಅಮ್ಮ ಒಂದು ಚೀಟಿಯಲ್ಲಿ ನಾಳೆ ಹಬ್ಬಕ್ಕೆ ಏನೇನು ತರಬೇಕೆಂದು ಬರೆದು ಕೊಡು, ನಾನು, ಇವಳು ಇಬ್ಬರೂ ಹೋಗಿ ತರುತ್ತೇವೆ. ನಾಳೆ ಬೇಳೆ ಹೋಳಿಗೆ ಮಾಡು, ಕೋಸಂಬ್ರಿಗೆ ಮಾವಿನಕಾಯಿ ಹಾಕು. ಮಸಾಲವಡೆ ಮಾಡು, ನಾವು ನಿನಗೆ ಸಹಾಯ ಮಾಡ್ತಿವಿ”. ಮಗನ ಮಾತನ್ನು ನಂಬಲಾಗಲಿಲ್ಲ, ಆದರೂ ಸಂತೊಷದಿಂದ ಎದ್ದು, ಚೀಟಿಯನ್ನು ಬರೆದು ಕೊಟ್ಟೆ. ಇಬ್ಬರೂ ಹೊರಟರು. ಏನಿದು ಆಶ್ಚರ್ಯ!! ಮಗ ಮೊದುವೆ ಆದಮೇಲೆ ಬದಲಾದನೇ!, ಪೂಜೆ, ಹಬ್ಬಗಳೆಂದರೆ ಆಸಕ್ತಿಯನ್ನು ತೋರದ ಮಗ, ಇಂದು ಹೀಗೆಲ್ಲಾ ಹೇಳಿದನೇ! ಇದೆಲ್ಲಾ ಸೊಸೆಯ ಪ್ರಭಾವವಿರಬೇಕು! ಸದ್ಯ ನಮ್ಮ ಆಚರಣೆಗಳಲ್ಲಿ ಆಸಕ್ತಿಯನ್ನು ತೋರಿದನಲ್ಲ, ಅಷ್ಟೇ ಸಾಕು. ಸೊಸೆಯ ಮೇಲೆ ಪ್ರೀತಿ ಹೆಚ್ಚಿತು. ಬೇಗ ಬೇಗನೆ ಮನೆಯನ್ನು ಸ್ವಚಗೊಳಿಸಿ, ಮಗ, ಸೊಸೆ ಬರುವದರೊಳಗೆ ಹಬ್ಬದ ತಯಾರಿಯನ್ನು ಮಾಡಿದೆನು. ಪೂಜೆಯ ಸಾಮಗ್ರಿಗಳನ್ನು ಒರೆಸುತ್ತಾ ಕುಳಿತ ನನಗೆ, ಮತ್ತೆ ತವರುಮನೆಯ ನೆನಪಾಯಿತು. ಎಲ್ಲರೂ ಬೆಳೆದು ದೊಡ್ಡವರಾದೆವು, ಆದರೆ ಬುದ್ಧಿ ಬೆಳೆಯಲಿಲ್ಲ. ಸಂಸಾರದಲ್ಲಿ ಮನಸ್ತಾಪಗಳು ಹುಟ್ಟಿ, ಅಣ್ಣ ತಂಗಿಯರೆಲ್ಲಾ ದೂರ ಸರಿದೆವು. ಅಪ್ಪ ಅಮ್ಮರ ಸಾವಿನನಂತರ ತವರುಮನೆ ಇಲ್ಲದೇ ಹೋಯಿತಲ್ಲಾ. ನಾನೇ ಪೂಜೆಯನ್ನು ಮಾಡಿ ಎಲ್ಲರಿಗೂ ಬೇವು,ಬೆಲ್ಲದ ಚೂರ್ಣವನ್ನು ಕೊಟ್ಟು, ಹೋಳಿಗೆ ಮಾಡಲು ಅಡುಗೆ ಮನೆಗೆ ಹೋದೆನು. ಗಂಡ ದಿನಪತ್ರಿಕೆಯನ್ನು ಓದುವುದರಲ್ಲಿ ಮುಳುಗಿಹೋಗಿದ್ದರು. ಅವರಿಗೇ ದಿನನಿತ್ಯ ಅದೇ ಪ್ರಪಂಚವಾಗಿತ್ತು. ಬದಲಾಗದ ಜೀವಿ. “ಹಹ….ಬನ್ನಿ..ಬನ್ನಿ…” ಪಕ್ಕದ ಮನೆಯವರ ದ್ವನಿ ಕೇಳಿಸಿತು, ಮನಸ್ಸು ಒಲ್ಲದಿದ್ದರೂ, ಕುತೂಹಲದಿಂದ ಕಿಟಕಿಇಂದ ಇಣುಕಿ ನೋಡಿದೆ. ಪ್ರಕಾಶ್ ರವರ ತಮ್ಮ, ಅಕ್ಕ ಬಂದಿದ್ದರು ಹಬ್ಬಕ್ಕಾಗಿ. ಪ್ರಕಾಶ್ ರವರ ಪತ್ನಿ ಶೊಭಾಳೊ ರೇಶಿಮೆ ಸೀರೆ ಉಟ್ಟಿದ್ದರು, ಎಲ್ಲರೂ ಹೊಸ ಬಟ್ಟೆಗಳನ್ನು ತೊಟ್ಟು, ಹಬ್ಬದ ಸವಿಯಲ್ಲಿ ಮುಳುಗಿದ್ದರು. ಅವರ ಸಂಭ್ರಮವನ್ನು ನೋಡಿ ಒಂದು ಷಣ ಅಲ್ಲೇ ಸುಮ್ಮನೆ ನಿಂತುಬಿಟ್ಟೆ. ಸಂಸಾರವೆಂದರೆ ಹಾಗಿರಬೇಕೆಂದೆನಿಸಿತು. ಬಂಧುಗಳ ಒಡನಾಟದ ಮಹತ್ವದ ಅರಿವಾಯಿತು. ಯೊವ್ವನದಲ್ಲಿ ಯಾರೂ ಬೇಕಾಗುವುದಿಲ್ಲ, ಅದೇ ವಯಸ್ಸಾಗುತ್ತಾ.. ಆಗುತ್ತಾ..ಒಂಟಿತನವು ಕಾಡುವುದು, ಮಕ್ಕಳು ಅವರ ಪಾಡಿಗೆ, ಅವರ ಇಷ್ಟದಂತೆ ಜೊತೆಯಲಿ ಇದ್ದರೂ ಇಲ್ಲದವರಂತಿರುತ್ತಾರೆ, ಇಲ್ಲವೇ ಹೊರ ರಾಜ್ಯಗಳಲ್ಲೋ, ದೇಶಗಳಲ್ಲೋ ಕೆಲಸದ ಕಾರಣಕ್ಕೆ ಇದ್ದುಬಿಡುತ್ತಾರೆ. ಆಗ ನಮಗೆ ನಮ್ಮ ನೆಂಟರ, ಸ್ನೇಹಿತರ ಒಡನಾಟ ಬೇಕೆಂದೆನಿಸುವುದು. ಅಣ್ಣ ಮೊದುವೆಯಾದ ನಂತರ ಬದಲಾಗಿಬಿಟ್ಟ, ನಾವು ಅಮ್ಮನ ಮನೆಗೆ ಉಗಾದಿ ಹಬ್ಬಕೆಂದು ಹೋದಾಗೆಲ್ಲಾ, ಅಣ್ಣ ಅತ್ತಿಗೆಯ ನಡವಳಿಕೆ ಬದಲಾದಂತೆನಿಸುತಿತ್ತು. ವ್ಯಂಗವಾದ ಮಾತುಗಳು ಕಿವಿಗೆ ಬೀಳುತಿದ್ದವು. ಕ್ರಮೇಣ ಅಪ್ಪ, ಅಮ್ಮರ ಸಾವಿನ ನಂತರ ತವರುಮನೆಇಂದ ದೂರವಾಗಿಯೇಬಿಟ್ಟೆವು. ಅತ್ತೆ ಮನೆಯಲ್ಲಂತೂ ನನ್ನದೆಂಬುದು ಏನೂ, ಯಾರೂ ಇಲ್ಲವೆಂದೆನಿಸಿತು. ಹಬ್ಬ ಹರಿದಿನಗಳಲ್ಲಿ ಮನೆಗೆ ನೆಂಟರು ಬಂದು ಹೋಗಿ ಮಾಡಿದರೆ, ನಮ್ಮ ಹಾಗೂ ಅವರ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುವುದು. ಗಂಡನಾದರೋ ಒಂಟಿಯಾಗಿರುವುದನ್ನೇ ಇಷ್ಟ ಪಡುತ್ತಿದ್ದರು. ಆದರೆ ನನಗೆ ಎಲ್ಲರ ಸಂಬಂಧವು ಬೇಕೆನಿಸುತ್ತಿತ್ತು. ಮನೆ, ಮನಸ್ಸು ಖಾಲಿ ಖಾಲಿ ಎಂದೆನಿಸಿತು. ಅಮ್ಮ, ಅಪ್ಪ ನೆನಪಾಗಿ ಹೃದಯ ಭಾರವೆನಿಸಿತು. “ಮಗ, ಸೊಸೆ ಹೊರಗೆ ಹೋಗದೆ, ಹಬ್ಬಕ್ಕೆ ಮನೆಯಲ್ಲಿ ನಮ್ಮಜೊತೆ ಇದ್ದಾರೆ, ಇದು ಸಂತೋಷದ ಷಣ, ಸುಮ್ಮನೆ ಹಳೆಯ ನೆನಪುಗಳೋಂದಿಗೆ ಈ ದಿನವೇಕೆ ಬೇಸರಗೊಳ್ಳಬೇಕು”. ಮುಖವನ್ನು ತೊಳೆದು ಅಡುಗೆ ಮನೆಯತ್ತ ಹೆಜ್ಜೆ ಇಟ್ಟೆ, ಅಲ್ಲಿ ಮಗ ಮಾವಿನ ಕಾಯಿಯನ್ನು ಹಚ್ಚುತಿದ್ದ, ಸೊಸೆಯೋ ತನ್ನ ಪುಟ್ಟ ಪುಟ್ಟ ಕೈಯಲ್ಲಿ ನಾನು ಮಾಡಿಟ್ಟ ಹೂರ್ಣದ ಉಂಡೆಗಳನ್ನು ಮಾಡಿ ಒಂದು ತಟ್ಟೆಯಲ್ಲಿ ಇಡುತ್ತಿದ್ದಳು. ಅವರಿಬ್ಬರೂ ಎನೋ ಮಾತನಾಡುತ್ತ ನಗು ನಗುತ್ತ ನನಗೆ ಸಹಾಯವನ್ನು ಮಾಡುತಿದ್ದರು. ತಕ್ಷಣ ಅವರಿಬ್ಬರನ್ನು ಪ್ರೀತಿಇಂದಪ್ಪಿಕೊಂಡು, ಇಬ್ಬರಿಗೂ ಹಬ್ಬದ ಶುಭಾಶಯಗಳನ್ನು ಹೇಳಿ ಹೋಳಿಗೆಯನ್ನು ಮಾಡಿ ಮುಗಿಸಿದೆ. ನಗುನಗುತ ಎಲ್ಲರಿಗೂ ಬಾಳೆ ಎಲೆಯ ಊಟ ಬಡಿಸಿ, ಅಡುಗೆಮನೆಗೆ ಬಂದು ಒಂದೆರಡು ಡಬ್ಬಗಳಲ್ಲಿ, ಹೋಳಿಗೆ, ಮಾವಿನಕಾಯಿ ಚಿತ್ರಾನ್ನ, ಒಂದೆರಡು ಮಸಾಲವಡೆಯನ್ನು ತುಂಬಿಸಿಕೊಂಡು, ರೌಕೆಕಣ, ತಾಂಬೂಲವನ್ನು ಚೀಲದಲ್ಲಿ ಇಟ್ಟು, ಮೂಲೆ ಮನೆಯಲ್ಲಿದ್ದ ಪಾರ್ವತಮ್ಮ-ನಾಗರಾಜ ವೃದ್ಧದಂಪತಿಗಳ ಮನೆಗೆ ಬಂದು, ಅವರಿಗೆ ಹಬ್ಬದ ತಿಂಡಿಯನ್ನು ಕೊಟ್ಟು, ಅವರ ಆಶೀರ್ವಾದವನ್ನು ಪಡೆದು, ಮನೆಗೆ ಬಂದು, ತಾನೂ ಊಟ ಮಾಡಿ, ಮಗ, ಸೊಸೆಯೊಂದಿಗೆ ಆ ದಿನ ಬೆರೆತು ಮನತುಂಬುವ ತನಕ ಮಾತನಾಡಿ, ಮಿಕ್ಕ ಕೆಲಸವನ್ನೆಲ್ಲ ಮಾಡಿ ಮುಗಿಸಿದೆನು. ಮನಸು ತೃಪ್ತಿ ಇಂದ ತುಂಬಿತ್ತು. ಅಂದು ಅರಿವಾಯಿತು ನನಗೆ. ಬಿರುಕು ಬಿಟ್ಟ ಸಂಬಂಧಗಳನ್ನು ಮತ್ತೆ ಮತ್ತೆ ನೆನೆಯುತ್ತ, ವಿನಾಕಾರಣ ಕೊರಗುವುದಕಿಂತ, ನಮ್ಮ ಅಕ್ಕ ಪಕ್ಕದವರೋಂದಿಗೆ ಪ್ರೀತಿಯನ್ನು ಹಂಚಿಕೊಳ್ಳುವುದೇ ಸರಿ ಎನಿಸಿತು. ಪಾರ್ವತಮ್ಮನ ಮಕ್ಕಳು ಅವರಜೊತೆ ಇಲ್ಲ. ಬೇರೆ ಊರಿನಲ್ಲಿದ್ದಾರೆ, ಅವರಿಬ್ಬರೇ ಜೀವನವನ್ನು ನಡೆಸುತಿಲ್ಲವೇ? ಪಾರ್ವತಮ್ಮ-ನಾಗರಾಜ ದಂಪತಿಗಳು ನನ್ನ ತಂದೆ-ತಾಯಿ ಅಥವ ಅಣ್ಣ ಅತ್ತಿಗೆಯಾಗಬಹುದಲ್ಲವೇ? ಈ ದಿನ ಅವರಿಬ್ಬರೇ ಹಬ್ಬವನ್ನು ಆಚರಿಸುತಿಲ್ಲವೇ? ಸಾಯಂಕಾಲ ಮಗ, ಸೊಸೆಯನ್ನು ತನ್ನ ಸ್ನೇಹಿತನ ಮನೆಗೆಂದು ಬಸವನಗುಡಿಯತ್ತ ಹೊರಟನು. ಸೊಸೆ ಸುಂದರವಾಗಿ ಅಲಂಕರಿಸಿಕೊಂಡು, ನಗುನಗುತ್ತ ಮಗನ ಕೈ ಹಿಡಿದು ಹೊರಟಳು. ಅಂದು ನನ್ನ ಮನಸು “ಮಾವಿನ ಚಿಗುರಿನಂತೆ ಚಿಗುರಿ, ಬೇವಿನ ಹೂವಿನಂತೆ ಅರಳಿ, ಬೆಲ್ಲದ ಸಿಹಿಯು ಚೈತ್ರ ಮಾಸದ ಮಳೆಹನಿಯೊಂದಿಗೆ ಸೇರಿ, ಅ ಸಿಹಿಯ ಹನಿಯು ನನ್ನ ಹೃದಯವನ್ನು ಪ್ರೀತಿಯಿಂದ ಪಸರಿಸಿತು. ಎಲ್ಲೆಲ್ಲಿಯೂ ಹೊಸ ತನ, ಹೊಸ ಭರವಸೆಯೊಂದಿಗೆ ಹೊಸ ಹೊಸ ಸ್ನೇಹಗಳ ಬಂಧನದಲ್ಲಿ ಬೆಸೆಯಬೇಕೆನಿಸಿತು”. “ಉಗಾದಿ ಮರಳಿ ಮರಳಿ ಬರಲೆಂದು ಮನಸು ಹಾಡಿತು”. **************************************************************** ಮೀನಾಕ್ಷಿಹರೀಶ್.
ಯುಗಾದಿ ವಿಶೇಷ ಲೇಖನ ನವಚೈತನ್ಯಕ್ಕೆ ಮುನ್ನುಡಿ ಯುಗಾದಿ ಸಂಗಾತಿ ಸಾಹಿತ್ಯ ಪತ್ರಿಕೆ: ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಸಂಚಲನ ಮೂಡುತ್ತದೆ ಎಲ್ಲಾ ಕಡೆಗೂ ಹಸಿರುತೋರಣ ಹೂವಿನ ಶೃಂಗಾರ ಮಾಡಿದಂತೆ ಗಿಡದ ತುಂಬಾ ಹೂಗಳು ಅರಳಿ ಚಿಗುರು ಮೂಡಿ ಸಂಭ್ರಮದ ವಾತಾವರಣ ಏರ್ಪಡಿಸುತ್ತವೆ.ಇದು ನಾವು ಹೊಸವರ್ಷದ ಎಂದು ಸಂಭ್ರಮಪಡುವ ಯುಗದ ಆದಿ ಯುಗಾದಿಯ ವಿಶೇಷತೆ. ಹೊಸವರ್ಷವೆಂದರೆ ಇದುವೇ ಎಂದು ಸಾಧಿಸುವಂತೆ ಎಲ್ಲಾ ಕಡೆಗೂ ಹಸಿರು ಉಸಿರಾಡುವುದು. ಬಣ್ಣ ಬಣ್ಣದ ಹೂವುಗಳು ಗಿಡದ ತುಂಬೆಲ್ಲಾ ಅರಳಿ ಪರಿಸರವೆಲ್ಲಾ ಶೃಂಗಾರ. ವರ್ಷದ ಆರಂಭದ ಸಂಕೇತವನ್ನು, ಹೊಸತನದ ಕಳೆಯನ್ನು ಪ್ರಕೃತಿ ಎಲ್ಲೆಡೆ ಪಸರಿಸುತ್ತದೆ. ಅದೇ ಇಡೀ ಜಗತ್ತು ಹೊಸ ವರ್ಷವೆಂದು ಆಚರಿಸುವ ಜನವರಿ ಒಂದು, ಮಧ್ಯರಾತ್ರಿಯಲ್ಲಿ ನಿಶಾಚರಗಳು ಹೋರಾಡುವ ಸಮಯದಲ್ಲಿ ಪ್ರಾರಂಭವಾಗುವುದು . ಆರೋಗ್ಯ ಹಾಳು ಮಾಡಿಕೊಳ್ಳುವಂತಹ ಬೇಕರಿ ತಿನಿಸುಗಳು , ಕೇಕ್ ,ಡ್ರಿಂಕ್ಸ್ ಕೂಲಡ್ರಿಂಕ್ಸ್, ಮೋಜು-ಮಸ್ತಿ ಮಾಡುತ್ತಾರಾತ್ರಿಯೆಲ್ಲಾ ನಿದ್ದೆಗೆಟ್ಟು ಅನಾಹುತಕ್ಕೆ ಕಾರಣ ಮಾಡಿಕೊಳ್ಳುವ ಇದು ಹೊಸವರ್ಷವೇ? ಅದೇ ಭಾರತೀಯ ಪದ್ದತಿಯಂತೆ ಯುಗಾದಿಯಂದು ನಾವು ಆಚರಿಸುವ ಹೊಸ ವರ್ಷವು ಮುಂಜಾವಿನ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾರಂಭವಾಗುವುದು.ಅಂದು ಮೊದಲೇ ಶುಚಿಗೊಳಿಸಿದ ಮನೆಯಲ್ಲಿ ಬಾಗಿಲಿಗೆ ಮಾವಿನ ತೋರಣ ಕಟ್ಟಿ , ಹೂವಿನ ಅಲಂಕಾರ ಮಾಡಿ , ಅಂಗಳದಲ್ಲಿ ಸುಂದರ ರಂಗೋಲಿಗೆ ಬಣ್ಣದ ಮೆರಗು . ಎಲ್ಲರೂ ಬೇವು ಬೆರೆಸಿದ ಬಿಸಿ ನೀರಿನಲ್ಲಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಲ್ಲೇ ಮಾಡಿದ ಹೋಳಿಗೆ,ಕಡುಬು, ಅನ್ನ ಸಾರು ಸಂಡಿಗೆ, ಹಪ್ಪಳ ,ಉಪ್ಪಿನಕಾಯಿ, ಮೊಸರು ಮುಂತಾದ ಬಗೆಬಗೆಯ ಅಮೃತದಂತಹ ಸವಿಭೋಜನ ಜೊತೆಗೆ ಜೀವನದ ಮರ್ಮ ಸಾರುವ ಬೇವು-ಬೆಲ್ಲವನ್ನು ಮನೆಮಂದಿಯಲ್ಲಾ ಸೇರಿ ಸವಿದು ಸಂಭ್ರಮಿಸುವ ನಮ್ಮ ಹಬ್ಬ ತನುಮನಕ್ಕೆ ಹಿತಕರ. ಪ್ರಕೃತಿಗೆ ಹತ್ತಿರ. ಇಡೀ ವರ್ಷ ಉತ್ಸಾಹ ಸಂಭ್ರಮದಿಂದ ಕಳೆಯುವಂತೆ ಚೈತನ್ಯ, ಬರವಸೆ ಮೂಡಿಸುವ ಈ ನಮ್ಮ ಯುಗಾದಿ ನಿಜವಾದ ಹೊಸ ವರ್ಷ. ನಮ್ಮ ಮನೆಯಲ್ಲಂತೂ ಯುಗಾದಿ ಬಂದರೆ ಸಾಕು ವಾರದ ಮೊದಲೇ ಸ್ವಚ್ಛತಾ ಕಾರ್ಯ ನಡೆಯುವುದು. ಮನೆಯಲ್ಲಾ ಶುಚಿಗೊಳಿಸಿ , ಹಾಸಿಗೆ ಬಟ್ಟೆ, ಪಾತ್ರೆಗಳನ್ನು ಶುಭ್ರಗೊಳಿಸುತ್ತೇವೆ. ಅಮಾವಾಸ್ಯೆ ದಿನದಂದೇ ನಮ್ಮ ಮನೆಯಲ್ಲಿ ಹಬ್ಬ ಪ್ರಾರಂಭವಾಗುವುದು. ಮನೆಗೆ ತಳಿರು ತೋರಣ ಹೂಗಳಿಂದ ಸಿಂಗರಿಸಿ, ಆ ದಿನದಂದೇ ಘಟಸ್ಥಾಪನೆ ಮಾಡಿ ಐದು ದಿನಗಳ ಕಾಲ ನಂದಾದೀಪವನ್ನು ಹಗಲು-ಇರುಳು ಕಾಯುತ್ತೇವೆ. ಅಂದು ಹೋಸ ಗೋಧಿ,ನೆನೆಸಿದ ಕಡಲೆಕಾಳು,ಉಡಕ್ಕಿ ಸಾಮಾನು ಇಟ್ಟು ಕಾಳಿಕಾ ದೇವಿಯನ್ನು ಪೂಜಿಸುತ್ತೇವೆ. ಹೋಳಿಗೆ ಅನ್ನ ,ಸಾರು ,ಕೋಸಂಬರಿ, ಪಲ್ಯ ಮುಂತಾದವುಗಳನ್ನು ನೈವೇದ್ಯ ಮಾಡುತ್ತೇವೆ .ಅಮವಾಸ್ಯೆ ಮರುದಿನ ಪಾಡ್ಯದಂದು ಬೇವು ಹಾಕಿದ ನೀರಿನಿಂದ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ.ಅಂದು ಗೋಧಿ ಹುಗ್ಗಿ, ಬೇವು ಬೆಲ್ಲ ವನ್ನು ನೈವೇದ್ಯಕ್ಕೆ ವಿಶೇಷವಾಗಿ ಮಾಡಿರುತ್ತೇವೆ.ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾಗುತ್ತೇವೆ. ಹೀಗೆ ಯುಗಾದಿ ಮನೆ ಒಳಗೂ ಹೊರಗೂ ಸಂಭ್ರಮ ಸಡಗರದ ವಾತಾವರಣವನ್ನು ಏರ್ಪಡಿಸುತ್ತದೆ.ಮಾನವರ ದೇಹ ಮನಸ್ಸುಗಳಿಗೆ,ಸಸ್ಯ ಜೀವ ಸಂಕೂಲಕ್ಕೆನವಚೈತನ್ಯ, ನವೋಲ್ಲಾಸ ಹೊತ್ತು ತರುತ್ತದೆ. ****** ಲಕ್ಷ್ಮೀದೇವಿ ಪತ್ತಾರ
ಅಂಕಣ ಬರಹ ಯಾರಿಗೆ ಯಾರುಂಟು ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ.. ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ.. ನಿಜವೆ ? ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು ಸಾಮಾನ್ಯರಿಗೆ ಸಾಧ್ಯವಾಗುತ್ತದಾ? ಈ ಮಾತುಗಳು ,ದಾಸವಾಣಿ ಇವೆಲ್ಲ ಇಂದಿನ ತಂತ್ರಜ್ಞಾನದ ಯುಗದ ಜನತೆಗೆ ಬೇಕೆ? ನಾವು ಬದುಕುವುದು ಕೇವಲ ನಮಗಾಗಿ ಎಂದರೆ ತಮ್ಮ ಮಕ್ಕಳಿಗಾಗಿ ..ಮುಂದಿನ ಮೂರು ತಲೆಮಾರುಗಳಿಗಾಗಿ ಆಸ್ತಿ ಸಂಪಾದಿಸುವ ಜನರೆಲ್ಲ ಕೇವಲ ತಮಗಾಗಿಯೇ ಬದುಕಿದ್ದಾರೆಯೆ? ನಾನು ಹೋದರೂ ನನ್ನ ಮಕ್ಕಳು ಸುಖದಿಂದ ಇರಲಿ ಎನ್ನುವ ನಿಜ ಕಾಳಜಿ, ಅಥವಾ ನನ್ನ ಮುಂದಿನ ಹತ್ತು ತಲೆಮಾರಿನವರಿಗೆ ಕಷ್ಟ ಬರಬಾರದು ಎಂಬ ದುರಾಸೆ ಮಿಶ್ರಿತ ಕಾಳಜಿಯಿರುವುದರಿಂದಲೇ ಅಲ್ಲವೆ ಬ್ಯಾಂಕ್ ಡಿಪಾಸಿಟ್ , ಒಡವೆ, ಮನೆ , ಫ್ಲಾಟ್, ಜಮೀನು ಎಂದೆಲ್ಲ ಗಳಿಸುತ್ತಿರುವುದು. ಇರುವುದೊಂದೇ ಬದುಕು , ಈ ಬದುಕು ನನ್ನದು ಮಾತ್ರಾ ಇತರರ ಬಗ್ಗೆ ನಾನು ಯೋಚಿಸುವುದಿಲ್ಲ ಎನ್ನುವುದು , ನನ್ನ ಕುಟುಂಬಕ್ಕಾಗಿ ನಾನು ನನ್ನ ಆಸೆಗಳನ್ನು ತ್ಯಾಗ ಮಾಡುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ಸ್ವಾರ್ಥಪರತೆಯಾಗುತ್ತದೆ. ಒಂದು ಕುಟುಂಬ ವ್ಯವಸ್ಥೆಯಲ್ಲಿರುವ ಗಂಡು ಹೆಣ್ಣು ಇಬ್ಬರಿಗೂ ಸಮಾನ ಜವಾಬ್ದಾರಿಗಳಿರುತ್ತವೆ. ಒಂದು ವೇಳೆ ಗಂಡು ತನ್ನ ಜವಾಬ್ದಾರಿ ಮರೆತರೂ ಹೆಣ್ಣು ಆ ಕುಟುಂಬಕ್ಕಾಗಿ ತನ್ನೆಲ್ಲ ಶಕ್ತಿ ಧಾರೆಯೆರೆಯುತ್ತಾಳೆ. ನಾನಿಲ್ಲದಿದ್ದರೂ ಜಗತ್ತು ಹಾಗೇ ನಡೆಯುತ್ತದೆ.ನಾನಿಲ್ಲವಾದರೂ ನನ್ನ ಪ್ರೀತಿ ಪಾತ್ರರು ಹಾಗೇ ಬದುಕುತ್ತಾರೆ ..ಹಾಗಿದ್ದಾಗ ನಾನೇಕೆ ನನ್ನ ಆಸೆ , ಗುರಿ ಏನೆಲ್ಲ ತ್ಯಾಗ ಮಾಡಬೇಕು ಎಂಬ ಯೋಚನೆಗಳಿರುವವರೂ ನಮ್ಮ ಮಧ್ಯೆ ಇಲ್ಲದಿಲ್ಲ. ಈ ಭೂಮಿ ನಮಗಾಗಿ ಅದೆಷ್ಟಲ್ಲಾ ಹೂ ,ಹಣ್ಣು ಹಸಿರು ಕೊಟ್ಟು ಆಧಾರವಾಗಿದೆಯಲ್ಲ.ಅದೂ ನನಗೇಕೆ ಬೇಕು ಇವೆಲ್ಲ ..ನನಗಿಷ್ಟ ಬಂದಂತೆ ನಾನಿರುವೆ ಎಂದು ಸುಮ್ಮನಿದ್ದರೆ ನಮ್ಮ ಗತಿ ದೇವರೇ ಗತಿ! ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ಎನ್ನುವ ಮೂಕ ಗೋವು ಸಹಾ ತನ್ನ ಹಾಲೆಲ್ಲಾ ಕೇವಲ ತನ್ನ ಕಂದನಿಗಿರಲಿ ಎಂದೂ ಆಶಿಸಿಲ್ಲ.ಅದಕ್ಕೆ ಇಷ್ಟ ಇರುತ್ತದೋ ಇಲ್ಲವೋ ಆದರೂ ಕರುವಿನ ಪಾಲುಗಿಂತ ಹೆಚ್ಚು ಹಾಲನ್ನು ನಮಗೆ ನೀಡುತ್ತಿದೆ. ಒಂದು ಮನೆ , ಗಂಡ – ಹೆಂಡತಿ, ಇಬ್ಬರು ಪುಟ್ಟ ಮಕ್ಕಳಿದ್ದರು. ಗಂಡ ಅಸಾಧ್ಯ ಬುದ್ಧಿವಂತ. ಆಗಾಗ ಜಗಳವಾದಾಗಲೆಲ್ಲ ಹೆಂಡತಿಗೆ ಹೇಳುತ್ತಿದ್ದ “. ಏನು ಮಾಡ್ಲಿ ಹೇಳು…ಒಂದು ವೇಳೆ ನಾನೇನಾದರೂ ನಿನ್ನ ಮದುವೆಯಾಗಿಲ್ಲದಿದ್ದರೆ ..ಎಲ್ಲೋ ಹೋಗಿ ಏನೋ ಮಾಡಿ…ಏನೋ ಆಗಿರುತ್ತಿದ್ದೆ…ಆದ್ರೆ .ನಿನ್ನ ಮದುವೆಯಾಗಿಬಿಟ್ನೆ??” ಹೆಂಡತಿಯೂ ಸೋಲುತ್ತಿರಲಿಲ್ಲ..” ನೀನು ಬರೀ ನಿನ್ನ ಬಗ್ಗೆ ಹೇಳ್ತೀಯಲ್ಲ..ನನಗೂ ಒಂದಷ್ಟು ಆಸೆಗಳಿದ್ದವು..ನಿನ್ನ ಮದುವೆಯಾಗಿ ನಾನೂ ಅವಕ್ಕೆಲ್ಲ ಎಳ್ಳು ನೀರು ಬಿಡಲಿಲ್ಲವ …” ಎಂದು ವಾದ ಮಾಡುತ್ತಿದ್ದಳು. ಗಂಡ – ಹೆಂಡತಿಯರ ಈ ವಾದಗಳನ್ನು ಕೇಳುತ್ತಾ ಮಕ್ಕಳು ಒಳಗೊಳಗೇ ಆತಂಕ ಪಡುತ್ತಿದ್ದವು.ಇವರಿಬ್ಬರೂ ಹೀಗೇ ಜಗಳವಾಡಿಕೊಂಡು ಮನೆ ಬಿಟ್ಟು ಹೋದರೆ ನಮ್ಮ ಗತಿಯೇನು ಎಂದು. ಗಂಡನಿಗೆ ಅರ್ಥವಾಗದಿದ್ದರೂ ಮಕ್ಕಳ ಈ ಆತಂಕ ಹೆಂಡತಿಗರ್ಥವಾಯಿತು. ನಮ್ಮನ್ನೇ ನಂಬಿರುವ ಈ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಗಂಡನಿಗೆ ಅರ್ಥ ಮಾಡಿಸಿದಳು. ಒಂದು ಸಂಸಾರ ಎಂದು ಕಟ್ಟಿಕೊಂಡ ಕ್ಷಣದಿಂದಲೇ ನಮ್ಮ ಕೆಲವೊಂದು ಆದ್ಯತೆಗಳು ನಮಗೇ ಅರಿವಿಲ್ಲದಂತೆ ಬದಲಾಗಿ ಬಿಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ನಾವುಗಳು ನಮ್ಮ ಆಸಕ್ತಿಯ ಕ್ಷೇತ್ರವನ್ನು ಮರೆತೇ ಬಿಡಬೇಕಾಗುತ್ತದೆ. ದುರದೃಷ್ಟವಶಾತ್ ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ. ಗಂಡು ತನಗನಿಸಿದ್ದನ್ನ ಯಾವಾಗ ಬೇಕಾದರೂ ಸಾಧಿಸುವಷ್ಟು ಸ್ವತಂತ್ರವನ್ನು ಸ್ವಯಂ ತೆಗೆದುಕೊಂಡು ಬಿಟ್ಟಿದ್ದರೆ ಹೆಣ್ಣು ಮನೆ , ಮಕ್ಕಳು ಅವರ ಓದುಬರಹ ,ಆರೋಗ್ಯ ಮನೆಯಲ್ಲಿನ ಹಿರಿಯರ ಆರೈಕೆ ಎಂದು ನೂರಾರು ಜವಾಬ್ದಾರಿಗಳನ್ನ ತನ್ನ ಕೋಮಲಭುಜಗಳ ಮೇಲೆ ಹೊತ್ತು ಇದೇ ನನ್ನ ಬದುಕು ಎಂದುಕೊಂಡು ಹಾದಿ ಸವೆಸುತ್ತಾಳೆ. ಗಂಡು ಮನೆಯ ಜವಾಬ್ದಾರಿಯನ್ನ ಸಮವಾಗಿ ನಿಭಾಯಿಸಿದ್ದರೆ ಹೆಣ್ಣಿಗೆ ಅದೂ ಏನಾದರೊಂದು ಸಾಧಿಸಬೇಕೆಂಬ ಆಕಾಂಕ್ಷೆಯಿರುವ ಹೆಣ್ಣಿಗೆ ಸಂಸಾರ ಹೊರೆಯೆನಿಸುವುದಿಲ್ಲ. ಮನೆ ಹೊರಗು ಒಳಗುಗಳೆರಡನ್ನೂ ನಿಭಾಯಿಸುವ ಕುಶಲತೆ ಆಕೆಗಿದೆ. ಆದರೆ ಯಾವುದೋ ಒಂದು ಘಳಿಗೆಯಲ್ಲಿ…ಛೇ ..ಇದೆಂತಹ ಬದುಕು ನನ್ನದು ..ನನಗಾಗಿ ನಾನು ಬದುಕದೆ ಈ ಮನೆ ,ಗಂಡ ಮಕ್ಕಳಿಗಾಗಿ ಬದುಕುತ್ತಿದ್ದೇನಲ್ಲ..ಹಾಗಾದರೆ ನನಗಾಗಿ ಬದುಕುವುದಾದರೂ ಯಾವಾಗ ಎನಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು ಆ ಕುಟುಂಬದ ಸರ್ವನಾಶ !! ಹೆಣ್ಣಿಗೆ ಹೀಗೆಂದೂ ಅನಿಸದಂತೆ ನೋಡಿಕೊಳ್ಳುವ ಗುರುತರ ಹೊಣೆ ಗಂಡುಗಳಿಗಿದೆ. ಕುಟುಂಬ ಒಂದು ಮಧುರ ಬಂಧ! ಏನೂ ಸರಯಿಲ್ಲದಿದ್ದಾಗ, ತೀರಾ ಹಿಂಸೆಯಾಗುತ್ತಿದ್ದಾಗ ಪರಸ್ಪರರ ಒಪ್ಪಿಗೆ ಮೇರೆಗೆ ಬೇರಾದರೂ ಮಕ್ಕಳ ಜವಾಬ್ದಾರಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಮ್ಮ ನಮ್ಮ ತಾಯ್ತಂದೆಯರನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ನನ್ನ ದಾರಿ ನನಗೆ ನಾನಿಲ್ಲದೆಯೂ ಇವರೆಲ್ಲ ಇದ್ದೇ ಇರುತ್ತಾರೆ ..ನನ್ನ ಆಕಾಂಕ್ಷೆಯೇ ಮುಖ್ಯ ಎಂದು ಹೊರಟು ಬಿಟ್ಟಿದ್ದರೆ ನಾವುಗಳು ಈಗ ಇರುವಂತೆ ಇರಲು ಸಾಧ್ಯವಾಗುತ್ತಿತ್ತೆ? ( ವ್ಯತಿರಿಕ್ತ ಉದಾಹರಣೆಗಳಿವೆ ..ಇಲ್ಲಿ ಮಾತು ಸಾಮಾನ್ಯವಾಗಿ ಕುಟುಂಬದ ಕುರಿತು ಬಂದಿದೆ). ನಿಜ , ನಾನಿಲ್ಲದೆಯೂ ಲೋಕ ಇದ್ದೇ ಇರುತ್ತದೆ..ನನ್ನವರೂ ಬದುಕಿ ಬಾಳಿಯೇ ಬಾಳುತ್ತಾರೆ. ಆದರೆ ನಾನಿಲ್ಲದಾಗ ನನ್ನವರನ್ನು ಬದುಕಲು ಸಿದ್ಧ ಮಾಡುವುದಿದೆಯಲ್ಲ..ಅದೇ ನಮ್ಮೆಲ್ಲರ ಹೊಣೆಗಾರಿಕೆ.ನಾನಿಲ್ಲದ ಮೇಲೆ ಮನೆ ಮಾಡುವುದೇಕೆ ಎಂದು ಯಾರಾದರೂ ಯೋಚಿಸಿದ್ದರೆ ಜನಸಾಲದ ಹೊರೆಯಲ್ಲಿ ನಲುಗಿ ಮನೆ ಕಟ್ಟುತ್ತಲೇ ಇರಲಿಲ್ಲ.ಒಂದು ವೇಳೆ ಸಾಲ ತೀರಿಸಿದ ಮರು ದಿನವೇ ಆತ ಸತ್ತರೂ ಅಯ್ಯೋ ನಾನು ಕಟ್ಟಿಸಿದ ಮನೆಯಲ್ಲಿ ಬಹಳ ದಿನ ಬದುಕಲಿಲ್ಲ ಎಂದು ಕೊರಗುತ್ತ ಸಾಯಲಾರ.ಬದಲಾಗಿ ನಾನು ಹೋದರೂ ನನ್ನವರಿಗೊಂದು ನೆಲೆ ಇದೆ ಎಂದು ನೆಮ್ಮದಿಯಿಂದ ಸಾಯುತ್ತಾನೆ.ಆಸ್ತ ಮಾಡದವನು ಮಕ್ಕಳನ್ನು ಚೆನ್ನಾಗಿ ಓದಿಸಿದವನು ನಾನಿಲ್ಲದೆಯೂ ನನ್ನವರು ಬದುಕಲು ಗಟ್ಡಿಗರಾಗಿದ್ದಾರೆ ಎಂದು ನಿರಾಳವಾಗಿ ಸಾಯುತ್ತಾನೆ. ಇದೆಲ್ಲ ಇಲ್ಲದವನೂ ಸಹಾ ನಾನು ಹೋದರೇನು ನನ್ನ ಹೆಂಡತಿ ಮಕ್ಕಳು ನನ್ನಂತೆಯೇ ದಿನಾ ದುಡಿದು ತಿನ್ನುತ್ತಾರೆ ಎಂಬ ಭಾವದಲ್ಲಿ ಸಾಯುತ್ತಾನೆ. ಇಲ್ಲಿ ನಾವು ಯಾರೂ ನಮಗಾಗಿ ಬದುಕುವುದಿಲ್ಲ..ಆದರೆ ನಾವೇ ಅಂಟಿಸಿಕೊಂಡ ಬಂಧಗಳಿಗಾಗಿ ಬದುಕುತ್ತೇವೆ.ಹಣ ,ಕೀರ್ತಿ..ಹೀಗೇ ಹತ್ತಾರು ಕಾರಣಗಳಿಂದ ಕುಟುಂಬದ ಜವಾಬ್ದಾರಿ ತೊರೆದ ಬಹಳಷ್ಟು ಬದುಕು ಒಂದು ಹಂತದಲ್ಲಿ ಪ್ರಸಿದ್ಧಿಗೆ ಬಂದರೂ ನಂತರ ಮೂರಾಬಟ್ಟೆಯಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಗಂಡಿರಲಿ ಹೆಣ್ಣಿರಲಿ..ಕುಟುಂಬ ವ್ಯವಸ್ಥೆ ಗೆ ಒಳಪಟ್ಟ ಮೇಲೆ ಪರಸ್ಪರರ ಗೌರವಿಸುತ್ತಾ ಮನೆ ಕುಟುಂಬ ಎನ್ನುವುದು ಇಬ್ಬರ ಪಾಲಿಗೂ ಹೊರೆಯಾಗದಂತೆ ನಡೆದುಕೊಳ್ಳುವುದು ತೀರಾ ಅನಿವಾರ್ಯ. ಹೀಗೆ ರಾಜಿಯಾಗಲು ಸಾಧ್ಯವಿಲ್ಲದವರು ಸಂಸಾರ ಕಟ್ಡಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕಿದೆ.ನಮ್ಮ ಬದುಕನ್ನು ನಾವು ಹಾಳುಗೆಡವಬಹುದು ಆದರೆ ನಮ್ಮನ್ನು ನಂಬಿದವರ ಬದುಕನ್ನು ಹಾಳುಗೆಡವಲು ನಮಗಾವ ಅಧಿಕಾರವೂ ಇರುವುದಿಲ್ಲ.. ನಾವು ಬದುಕುವುದು ಕೇವಲ ನಮಗಾಗಿ ಅಲ್ಲ..ನಮ್ಮವರಿಗಾಗಿಯೂ ಹೌದು..ಅದಕ್ಕಾಗಿ ಒಂದಷ್ಟು ನಮ್ಮ ಆಸೆಗಳನ್ನ ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ. ಒಂದು ಹಕ್ಕಿಯೂ ಸಹಾ ತನ್ನ ಮರಿಗಳಿಗೆ ರೆಕ್ಜೆ ಮೂಡಿ ಅವು ಪುರ್ರನೆ ಬಾನಿನಲ್ಲಿ ಹಾರುವ ಸಾಮರ್ಥ್ಯ ಪಡೆವವರೆಗೂ ಕಾಳಜಿಯಿಂದ ಅವುಗಳನ್ನ ಪಾಲಿಸುತ್ತದೆ. ಹಿಂಡಿನಲ್ಲಿ ವಾಸಿಸುವ ಪ್ರಾಣಿಗಳೂ ತಮ್ಮ ಹಿಂಡಿನಲ್ಲಿ ಯಾವುದಾದರೊಂದು ಪ್ರಾಣಿಸಂಕಷ್ಟಕ್ಕೆ ಸಿಲುಕಿದಾಗ ಜೀವದ ಹಂಗು ತೊರೆದು ಅದನ್ನು ಕಾಪಾಡಿದ ಉದಾಹರಣೆಗಳೂ ಇವೆ. ಹೀಗಿರುವಾಗ ನಾವು ಮನುಷ್ಯರು! ಹೇಳಿ ಕೇಳಿ ಸಮಾಜ ಜೀವಿಗಳು..ಕುಟುಂಬ ವ್ಯವಸ್ಥೆಯನ್ನ ಒಪ್ಪಿಕೊಂಡವರು ನನಗಾಗಿ ನಾನು ಬದುಕುತ್ತೇನೆಂದು ಎಲ್ಲ ತೊರೆದು ಅಷ್ಟು ಸುಲಭವಾಗಿ ನಮ್ಮಿಷ್ಟದ ಹಾದಿಯಲ್ಲಿ ಹೋಗಿಬಿಡಲಾಗುತ್ತದೆಯೆ? ಮಕ್ಕಳು ತಮ್ಮ ಅಪ್ಪ- ಅಮ್ಮದಿರು ಇಲ್ಲವಾದಾಗಲೂ ಅವರ ಬಗ್ಗೆ ಕೃತಜ್ಞತೆಯಿಂದ ಪ್ರೀತಿಯಿಂದ ನೆನೆವಂತೆ ನಮ್ಮ ಬಾಳಿರಬೇಕು.ಇಂದಿನ ಫಾಸ್ಟ್ ಜನರೇಷನ್ ರವರು ಇದನ್ನ ಒಪ್ಪುವರೋ ಇಲ್ಲವೊ ತಿಳಿಯದು. ಎಷ್ಟೆಲ್ಲ ಜವಾಬ್ದಾರಿಯುತವಾಗಿ ಮಕ್ಕಳನ್ನು ಬೆಳೆಸಿದರೂ ಮುಂದೆ ಆ ಮಕ್ಕಳು ತಮ್ಮ ತಂದೆ ತಾಯಿಯರನ್ಮು ಹೀನಾಯವಾಗಿ ಕಾಣುವ ,ಅನಾಥಾಶ್ರಮಕ್ಕೆ ತಳ್ಳುವುದೂ ನಡೆಯುತ್ತಲೇ ಇದೆ. ಹಾಗೆಂದು ಎಲ್ಲೋ ಕೆಲವರು ಹೀಗೆ ಮಾಡುತ್ತಾರೆಂದು ಎಲ್ಲಾ ಅಪ್ಪ – ಅಮ್ಮದಿರು ತಮ್ಮ ಮಕ್ಕಳನ್ನ ಓದಿಸದೆ ಒಳ್ಳೆಯ ಸಂಸ್ಕಾರ ಕೊಡದೆ ಬೆಳೆಸಲು ಇಚ್ಛಿಸುವುದೆಲ್ಲಿಯಾದರೂ ಇದೆಯೆ? ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಶುದ್ಧ ನೀರು ,ಶುದ್ಧ ಭೂಮಿಯನ್ನು ಉಳಿಸೋಣವೆಂದು ಆಶಿಸುವ ನಾವುಗಳು ಅಂತೆಯೇ ಈ ಶುದ್ಧ ಜಗತ್ತಿನಲ್ಲಿ ಎಲ್ಲಾ ರೀತಿಯಿಂದಲೂ ಬದುಕಲು ಅರ್ಹರಾದ ಪೀಳಿಗೆಯನ್ನು ಬೆಳೆಸುವುದೂ ಅಷ್ಟೇ ಮುಖ್ಯ. ತಾನು ಬಾಡಿ ಮಣ್ಣ ಸೇರಿ ಹೋಗುತ್ತೇನೆಂದು ಮಲ್ಲಿಗೆ ಪರಿಮಳ ಸೂಸುವುದ ನಿಲ್ಲಿಸುವುದಿಲ್ಲ. ತಾನು ಹೇಗಿದಗದರೂ ಆರಿ ಕತ್ತಲಾವರಿಸಿಬಿಡುತ್ತದೆಂದು ಒಂದು ಹಣತೆ ಎಣ್ಣೆ ಬತ್ತಿ ಎಲ್ಲಾ ಇದ್ದರೂ ಬೆಳಕು ಕೊಡದೆ ಸುಮ್ಮನಿರುವುದಿಲ್ಲ. ಬದುಕೂ ಅಷ್ಟೇ ..ಮಲ್ಲಿಗೆಯಂತಾಗಲಿ, ಉರಿವ ಹಣತೆಯಂತಾಗಲಿ.ಇರುವಷ್ಟು ದಿನ ಸುತ್ತಮುತ್ತ ಪರಿಮಳವನ್ನೂ ,ಬೆಳಕನ್ನೂ ಚೆಲ್ಲುವಂತಾಗಲಿ. ******************************* ಶುಭಾ ಎ.ಆರ್ (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ





