ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಹೊಸ್ತಿಲಾಚೆಗಿನ ರಂಗಜೀವಿ ಬದುಕ ರಂಗವನ್ನು ಆತ್ಮ ತೊರೆದಿತ್ತು. ಮನೆಯ ಉದ್ದದ ಚಾವಡಿಯಲ್ಲಿ ಅತ್ತೆಯ ಶರೀರ  ಮಲಗಿತ್ತು. ತಲೆಯ ಬದಿಯಲ್ಲಿ ತೆಂಗಿನ ಕಾಯಿಯ ಒಂದು ಭಾಗದೊಳಗೆ ದೀಪ ಮೌನವಾಗಿ ಉರಿಯುತ್ತಿತ್ತು. ರಾಶಿ ಮೌನಗಳನ್ನು ದರದರನೆ ಎಳೆತಂದು ಕಟ್ಟಿ ಹಾಕಿದ ರಾಕ್ಷಸ ಮೌನ ಘೀಳಿಡುತ್ತಿತ್ತು. ಎದೆ ಒತ್ತುವ, ಕುತ್ತಿಗೆ ಒತ್ತುವ ನಿರ್ವಾತಕ್ಕೆ ಅಂಜಿ ಮುಂಬಾಗಿಲಿಗೆ ಬಂದೆ. ಶರೀರವನ್ನು ಉದ್ದಕ್ಕೆ ನೆಲಕಂಟಿಸಿ ಮುಖವನ್ನು ಅಡ್ಡಕ್ಕೆ ಬಾಗಿಸಿ ‘ಪೀಕು’ ಮಲಗಿದ್ದಾಳೆ. ನಾನು ಅಲ್ಲಿರುವುದು ತಿಳಿದಿಲ್ಲವೇ? ಯಾವಾಗಲೂ ನಡಿಗೆಯ ಪದತರಂಗವನ್ನು ಗಬಕ್ಕೆಂದು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಹುಡುಕಾಟ ನಡೆಸುವವಳು ತಾನೇ ವ್ರತ ಹಿಡಿದಂತೆ ಒರಗಿದ್ದಾಳೆ. ನನ್ನ ಕಂಠದಿಂದ ಸ್ವರ ಹೊರಡುತ್ತಿಲ್ಲ. ಎಂದಿನ ಲಾಲಿತ್ಯದಲ್ಲಿ ” ಪೀಕು   ಪೀಕೂ.. ಪೀ….ಕೂ” ಎನ್ನುವ ಭಾವ, ಶಬ್ದ, ಸ್ವರ ಒಣಗಿ ಹೋಗಿದೆ. ಮತ್ತೆ ಒಳನಡೆದೆ.  ಮನೆಯ ಹಿರಿಯ ಜೀವ ಮನೆ ತೊರೆದು  ನಡೆದಿದ್ದರು. ಕಾಲದ ಹೆಜ್ಜೆಗೆ ಸ್ಪಂದಿಸಿ, ಮೌನ ಒಡೆದು ಮಾತು ತೇಕಿ ತೆವಳಿ ನಡೆ ಆರಂಭಿಸಿತ್ತು.ಆದರೆ ಪೀಕು ಮಾತ್ರ ಚಾವಡಿಯ ಮೆಟ್ಟಲಿನ ಕೆಳಗೆ ಕೂತು ಪೇಲವ ದೃಷ್ಟಿಯಿಂದ ಒಳಗೆ ದಿಟ್ಟಿಸುತ್ತ ಮತ್ತೆ ನೆಲಕ್ಕೊರಗುತ್ತಿದ್ದಾಳೆ. ನಾಲ್ಕು ದಿನವಾಯಿತು. ಒಂದಗುಳು ಅನ್ನ,ನೀರು ಮುಟ್ಟಿಲ್ಲ. ಅಕ್ಕನ ಸಾವಿಗೆ ದಿಗಿಲಾಗಿ ಓಡಿ ಬಂದ ಮಾತಿಲ್ಲದ, ಶ್ರವಣಾತೀತ ದೇವತೆ, ತಾರಕ್ಕನೂ ಇದೀಗ ಹೌದೋ ಅಲ್ಲವೋ ಎಂಬಂತೆ ಕಣ್ಣಲ್ಲಿ ತೆಳು‌ವಾಗಿ ನೀರು ತುಂಬಿ ಪೀಕುವಿನ ಬಳಿ ಹೋಗಿ “ವ್ಯಾವ್ಯಾ. ವ್ಯಾ…ವ್ಯಾ ” ಎಂದು ಕೈ,ಕಣ್ಣು ಬಾಯ ಸನ್ನೆಯಲ್ಲಿ ಆಡುತ್ತಿದ್ದಾರೆ. ಯಾವತ್ತೂ ಸ್ಪಂದಿಸುವ ಪೀಕು ಅದೂವುದೂ ನನಗಲ್ಲ ಎಂಬಂತಿದ್ದಾಳೆ.  ನಾನೂ ಹಲವಾರು ಬಾರಿ ಮೈ ಸವರಿ ಮಾತನಾಡಿಸಿಯಾಗಿದೆ.  ರೂಮಿನಲ್ಲಿ ನಿಶ್ಚಲವಾಗಿ ಕೂತ ನನ್ನನ್ನು,  ಸರ್ರೆಂದು ಬಂದ ತಾರಕ್ಕ ಕಣ್ಣು ಉರುಟುರುಟು ತಿರುಗಿಸಿ ನೋಟದಲ್ಲಿಯೇ ಗದರಿಸ ತೊಡಗಿದರು. ನಾನು ಪೀಕು ಬಳಿ ಬಂದೆ. ಆ ಕಪ್ಪು ತುಪ್ಪಳದ ಮೈ ಎತ್ತಿ ಮಡಿಲಲ್ಲಿ ತುಂಬಿ ನೇವರಿಸ ತೊಡಗಿದೆ. ಅನತಿ ದೂರದ ದಂಡೆಯಲ್ಲಿ ಕೂತ ” ಚಿನ್ನು”   ಫಟ್ಟೆಂದು ಹಾರಿ ನನ್ನ ಬಳಿ ಬಂದಳು.  ಅದಕ್ಕೂ ಪೀಕು ಸ್ಪಂದಿಸಲಿಲ್ಲ.  ಹಾಗೆ  ಅಂಗಳದಲ್ಲಿ ನಾನು, ‘ಪೀಕು’ ಮತ್ತು ‘ಚಿನ್ನು’ ನಡುವೆ ಶಬ್ದದ ಹೊಸ್ತಿಲಿನ ಆಚೆಗಿನ ಸಾವಿರದ ಮಾತುಗಳು ವಿನಿಮಯಗೊಳ್ಳುತ್ತಿದ್ದವು. ಹೊತ್ತು‌ ದಣಿ ದಣಿದು ಕಂತುತ್ತಿತ್ತು. ಮೆಲ್ಲಗೆ ಎದ್ದ ಪೀಕು ದಯನೀಯವಾದ ನೋಟ ಹರಿಸಿ ಪಕ್ಕದ ಪಾತ್ರೆಯಲ್ಲಿದ್ದ ನೀರನ್ನು, ತನ್ನ ನೀಳ ನಾಲಿಗೆ ಹೊರ ಚಾಚಿ, ಮೆಲ್ಲಗೆ ಕುಡಿಯತೊಡಗಿದಳು. ಚಿನ್ನು ನೆಗೆಯುತ್ತ‌ ಮನೆಯೊಳಗೆ ಓಡಿದಳು. ಈ ಹಳ್ಳಿಮನೆಯಲ್ಲಿ ಆಟವಾಡಿ  ನನಗೆ ರಸಾನುಭವ ಉಣಬಡಿಸಿದ ಚಿನ್ನು ಹಾಗೂ ಪೀಕು ಎಂಬ ಎರಡು ಪಾತ್ರಗಳನ್ನು ಪರಿಚಯಿಸಲೇ ಬೇಕು.ಕೃಷ್ಣೇಗೌಡರ ಆನೆ, ನಾಯಿ ಕಥೆಯಂತಹ ನಾಟಕ ಕಟ್ಟೋಣದಲ್ಲಿ ಚಿನ್ನು ಪೀಕುರಂತವರ ಪ್ರತ್ಯಕ್ಷ, ಪರೋಕ್ಷ ಪಾತ್ರಾಭಿನಯ ಸಾಮಾನ್ಯವೇ? ಹಸಿರುತೋಟದ ನಡುವೆ, ಆಗಸ ಮತ್ತು ಅಂಗಳದ ನಡುವೆ ಹೆಂಚಿನ ಮಾಡು. ಅಂಗಳರಂಗದ ಇಂಚಿಂಚೂ ಬಳಸಿಕೊಂಡು ಹೊಸ್ತಿಲಿನಾಚೆಗೆ ಮತ್ತು ಈಚೆಗೆ ಜೀವಾಭಿನಯ. ಪೀಕು ಎಂಬ ನಾಯಿ, ಅದಾಗಲೇ ಆ ಮನೆಗೆ, ಪರಿಸರಕ್ಕೆ ಹಳಬಳಾಗಿದ್ದಳು. ನಂತರ ಪ್ರವೇಶ ಪಡೆದ  ಬಿಳೀದೇಹದ ಬೆಕ್ಕು-ಪುಟಾಣಿ ಚಿನ್ನು.ಚಿನ್ನು ವಿಪರೀತ ಕೀಟಲೆ. ನಮ್ಮ ಬೆರಳುಗಳೊಂದಿಗೆ, ಮಲಗಿದಾಗ ತಲೆಗೂದಲಿನೊಂದಿಗೆ ಆಟವಾಡಿ ತರಲೆ ಮಾಡುವ ತುಂಟಿ.   ಪೀಕು ಹಾಗೂ ಚಿನ್ನು ಇವರ ನಡುವಿನ ಕೋಪ, ಮುನಿಸು, ಕೀಟಲೆಗಳನ್ನೊಳಗೊಂಡ ಆಟದಂತಹ ಜಗಳ ನಡೆಯುತ್ತಲೇ ಇತ್ತು. ಇದು ಮನರಂಜನೆ. ಆದರೆ ತುಸು ಭಯ ಹುಟ್ಟಿಸುತ್ತಿತ್ತು. ಅದೊಂದು ಘಟನೆಯಂತೂ ಅಚ್ಚರಿ, ಭಯ, ದುಃಖ ಎಲ್ಲವನ್ನೂ ಜೊತೆಜೊತೆಯಾಗಿಸಿತ್ತು.ಚಿನ್ನುಗೆ ಮನೆಯ ಒಳಗಿನ ಅಧಿಪತ್ಯವಾದರೆ ಪೀಕುವಿನ ಸಾಮ್ರಾಜ್ಯ ಹೊರಗಡೆ. ಎರಡೂ ಸಾಮ್ರಾಜ್ಯಗಳ ನಡುವೆ ಮನೆಯ ಹೊಸ್ತಿಲು.  ಪುಟ್ಟ ದೇಹದ ಬಿಳಿ ಬಣ್ಣದ ಚಿನ್ನು ಎಲ್ಲರ ಮುದ್ದು. ಮನೆ ಮಂದಿ ಹಾಲ್ ನಲ್ಲಿ ಕುರ್ಚಿ, ಸೋಫಾಗಳಲ್ಲಿ ಕೂತರೆ ಅಡುಗೆ ಮನೆಯಲ್ಲಿ ತೂಕಡಿಸುತ್ತಿದ್ದವಳು ಮೊಲದಂತೆ ನೆಗೆಯುತ್ತ ಓಡಿಬರುತ್ತಿದ್ದಳು. ಕಾಲಿಗೆ ಮುಖ ಉಜ್ಜಿ ಸಣ್ಣನೆಯ ಸ್ವರದಲಿ ಮಿಯ್ಯಾಂವ್ ಎಂದು ಆಲಾಪಿಸಿ ಎಂದು ತನ್ನ ಮುಖ ಎತ್ತಿ ನಮ್ಮ ಮುಖವನ್ನೇ ನೋಡಿ ಕಣ್ಣು ಮಿಟುಕಿಸುತ್ತ ಒಂದೇ ನೆಗೆತಕ್ಕೆ ಸೋಫಾ ಏರುತ್ತಿದ್ದಳು. ನೇರವಾಗಿ ಮಡಿಲ ಬಿಸಿಗೆ ತವಕಿಸಿ ತನ್ನ ಹಕ್ಕು ಎಂಬಂತೆ ಕೂತು ಬಿಡುತ್ತಿದ್ದಳು. ಹೊಸಿಲ ಹೊರಗಿನ ಪೀಕುವಿಗೆ ಆಗಲೇ ತಳಮಳ. ಕಾಲಿನಿಂದ ನೆಲ ಕೆರೆಯುತ್ತ,ಬೊಗಳುತ್ತ, ಅಳುತ್ತ ತನ್ನ ಪ್ರತಿಭಟನೆ, ಅಸಹನೆ ತೋರ್ಪಡಿಸುತ್ತಿತ್ತು. ಹೊಸತಾಗಿ ಬಂದ ಈ ಲಾವಣ್ಯವತಿ, ತನಗಾಗಿ ಮುಡಿಪಾಗಿದ್ದ ಅಷ್ಟೂ ಪ್ರೀತಿಯನ್ನೂ ಕಸಿದುಕೊಂಡರೆ!.  ಚಿನ್ನುವಿಗೆ ಇದೊಂದು ಆಟದಂತೆ. ಕೂತವರ ಮಡಿಲಿನಿಂದ ಜಾರಿದರೂ  ಹೋಗುವುದು ನೇರ ಹೊಸಿಲಿನ ಬಳಿ. ಹೊಸಿಲ ಮೇಲೆ, ಅಥವಾ ಹೊಸಿಲಿನಿಂದ ಹೊರಗೆ ತಪಸ್ವಿಯಂತೆ ಕೂತು ಪೀಕುವನ್ನೇ ನೋಡುವುದು. ಅವಳಿಗೆ ಅದುವರೆಗಿನ ಸಿಟ್ಟು ಮತ್ತಷ್ಟು ಹೆಚ್ಚಿ ತನ್ನನ್ನು ಕಟ್ಟಿ ಹಾಕಿದ ಸರಪಳಿ ಕತ್ತರಿಸಿ ಹಾಕಿ ಇವಳ ಹಿಡಿದು ಬಿಡುವೆ ಎನ್ನುವಂತೆ ಸರಪಳಿ ಎಳೆಯುತ್ತಾಳೆ ಈ ಸರಪಳಿಯ ಅಳತೆ ಚಿನ್ನುವಿಗೆ ಸರಿಯಾಗಿ ಗೊತ್ತಿದೆ. ಅವಳು ಅಳತೆ ಪಟ್ಟಿ ಹಿಡಿದು ದೂರ ಅಳೆದು, ಕರಾರುವಾಕ್ಕಾಗಿ , ಪೀಕುವಿನ ಕಾಲು,ಮುಖ ತಾಗಿತು ಅನ್ನುವಷ್ಟು ಹತ್ತಿರ ಆದರೂ ತಾಗದಂತೆ ಕೂತು ಬಿಡುತ್ತಿದ್ದಳು. ಕೆಲವೊಮ್ಮೆ ಬೊಗಳಿ ತನ್ನನ್ನು ಕಟ್ಟಿದ ಸರಪಳಿ ಎಳೆದು ಎಳೆದು ಸುಸ್ತಾಗಿ ಪಚಪಚ ಎಂದು ನೀರು ಕುಡಿಯುತ್ತಿದ್ದಳು. ಅವಳನ್ನು ಸಾಕಷ್ಟು ಗೋಳುಹೊಯ್ಸಿದ ನಂತರವೇ ಈ ಪುಟಾಣಿ ಚಿನ್ನು ಹೊಸಿಲು ಬಿಟ್ಟು ಹೊರಡುತ್ತಿದ್ದದ್ದು. ಇದು ಯಾವುದೋ ಒಂದು ದಿನದ ಲಕಥೆಯಲ್ಲ. ಇದು ಎಂದೂ ಮುಗಿಯದ ಧಾರವಾಹಿ. ಎಷ್ಟು ಎತ್ತಿ ತಂದರೂ ಚಿನ್ನು ಕುಳಿತು ಕೊಳ್ಳುವುದು ಅಲ್ಲೇ. ಕೆಲವೊಮ್ಮೆ ನಿಧಾನವಾಗಿ ತನ್ನ  ಎದುರಿನ ಕಾಲು ಮುಂದೆ ತಂದು ಮಲಗಿದ್ದ ಪೀಕುವನ್ನು ಮುಟ್ಟಿ ಎಚ್ಚರಿಸಿ ಥಟ್ಟೆಂದು ಓಡಿ ಒಂದು ತನ್ನ ಜಾಗದಲ್ಲಿ ಕೂತು ನುರಿತ ಆಟಗಾರಳಂತೆ ಕದನ ಆರಂಭಿಸುವುದೂ ಇದೆ. ಅದೊಂದು ದಿನ ಮನೆಯೊಳಗೆ ಮನೆಮಂದಿ ಹರಟೆಯಲ್ಲಿದ್ದಾಗ ಥಟ್ಟೆಂದು ಪೀಕು ಮನೆಯೊಳಗೇ ಬಂದು ಬಿಟ್ಟಳು ಹಾಗೆಲ್ಲ ಅತಿಕ್ರಮ ಪ್ರವೇಶ ಮಾಡುವ ಹೆಣ್ಣಲ್ಲ ಅದು. ಹೀಗೆ ಏಕಾಏಕಿ ಬಂದು ನಮ್ಮ ಮುಖವನ್ನು ಆತಂಕದಲ್ಲಿ ನೋಡಿದಂತೆ ನೋಡಿ ಹೊರಗೋಡಿದಳು. ಹಿಂತಿರುಗಿ ನೋಡಿ ನಾವು ಅವಳನ್ನು ಹಿಂಬಾಲಿಸುತ್ತಿಲ್ಲವೆಂದು ಮತ್ತೆ ಓಡಿ ಒಳಬಂದು ಬಾಲವನ್ನು ನನ್ನ ಮೈಗೆ ಸವರಿ, ಮುಖನೋಡುತ್ತ ತನ್ನ ಭಾಷೆಯಲ್ಲೇ “ಹ್ಹುಂ  ಹ್ಹೂಂ… ಬೌ…..”ಎನ್ನುತ್ತ ಹೊರಗೋಡುತ್ತ ಚಡಪಡಿಸುತ್ತಿದ್ದಳು. ಇದನ್ನು ನೋಡಿದ ಅತ್ತೆ ಮಗನಿಗೆ” ಏನೋ ಆಗಿದೆ. ಅವಳ ಹಿಂದೆ ಹೋಗು. ಹಾವು ಗೀವು ಬಂದಿರಬೇಕು. ಎಲ್ಲಿ ಬಡಿದು ಹಾಕಿ ತೋರಿಸಲು ಬಂದಿದ್ದಾಳೋ..”ಎಂದು ಮಣಮಣಿಸುತ್ತಿದ್ದರು. ನಾನೂ,ನನ್ನವರೂ ಓಡಿದೆವು. ಪೀಕು ನಮ್ಮನ್ನು ಬಟ್ಟೆ ಒಗೆಯವ ಬಾವಿ ಕಟ್ಟೆಯ ಹತ್ತಿರ ಕರೆದೊಯ್ದಳು.  ಹಳ್ಳಿಯ ಮನೆಯಲ್ಲಿ ಪಾತ್ರೆ, ಬಟ್ಟೆ ಎಲ್ಲವನ್ನೂ ತೊಳೆಯಲು ಮನೆಯ ಹೊರಗಡೆ, ಅನತಿ ದೂರದ ಬಾವಿಕಟ್ಟೆಯ ಸಮೀಪವೇ ವ್ಯವಸ್ಥೆಯಾಗಿತ್ತು. ಅಲ್ಲಿಂದ ತೊಳೆದ ನೀರು ಹರಿದು ತೆಂಗಿನ ಮರದ ಬುಡಕ್ಕೆ ಹೋಗುತ್ತಿತ್ತು. ಸತತ ನೀರು ಹೋಗಿ ಅಲ್ಲಿ ಆಳ ಗುಂಡಿಯಂತೆ ಆಗಿತ್ತು. ಕಪ್ಪನೆ ಕೆಸರು ಮಣ್ಣು ತುಂಬಿಕೊಂಡಿದೆ. ಪೀಕು ಅದರ ಸಮೀಪ ಕರೆದೊಯ್ದು ನಮ್ಮ ಮುಖವನ್ನೂ, ಆ ಹೊಂಡವನ್ನೂ ನೋಡಿ ಆಕಾಶಕ್ಕೆ ಮುಖ ಎತ್ತರಿಸಿ ದೀರ್ಘ ಆಲಾಪ ತೆಗೆಯತೊಡಗಿದಳು.ನನ್ನವರು ಕೂತು ನೀರು, ಮಣ್ಣು, ಕೆಸರು ತುಂಬಿದ ಆ ಜಾಗವನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದಾಗ ಕಪ್ಪು ತುಸು ಅಲುಗಿದಂತೆ ಕಾಣಿಸಿತು.  ಕೂಡಲೇ ತಮ್ಮ ಕೈಯನ್ನು ಕೆಸರಿನೊಳಗೆ ಹಾಕಿ ಕಪ್ಪು ಕೆಸರಿನ ಮುದ್ದೆ ಹೊರತೆಗೆದರು. ನೀರು ಸುರಿದರು. ನಾನು ವಿಸ್ಮಯ ನೇತ್ರ ಳಾಗಿ ನೋಡುತ್ತಿದ್ದೇನೆ. ಚಿನ್ನುವಿನ ಪುಟ್ಟ..ನಿಶ್ಚಲವಾದ ದೇಹ. ಅಳು ಒತ್ತರಿಸಿ ಬಂತು” ಅಯ್ಯೋ ನಮ್ಮ ಚಿನ್ನು ಏನಾಯಿತು. ಸತ್ತು ಹೋಯಿತೇ ” ಪೀಕು ಅಪರಾಧಿಯಂತೆ ದೂರಹೋಗಿ ನಿಂತು ನನ್ನ ನೋಡುತ್ತಿದ್ದಾಳೆ.  ” ಇಲ್ಲ ಜೀವ ಇದೆ” ನನ್ನವರ ಮಾತಿನಿಂದು ತುಸು ಗೆಲುವಾಗಿ ಕೈಯಲ್ಲಿ ಸತ್ತಂತಿರುವ ಆ ಜೀವ ಹಿಡಿದು ಒಳಗೋಡಿ ಬಂದೆ. ಬೆಚ್ಚನೆಯ ಟವಲಿನಿಂದ ಮೈ ಒರೆಸಿ ದೇಹ ಬೆಚ್ಚಗಾಗಿಸಲು ಪ್ರಯತ್ನಿಸಿದೆ. ಹಾಗೇ ಬಿದ್ದಿತ್ತು. ಸ್ವಲ್ಪ ಹೊತ್ತು ಬಿಟ್ಟು ಕಣ್ಣು ನಿಧಾನವಾಗಿ ತೆರೆದು ನೋಡಿ ಹಾಗೇ ಮಲಗಿತು.ನಾವು ಒಳ ಹೊರಗೆ ಹೋಗುವಾಗೆಲ್ಲ ಎಂದಿನ ಗತ್ತು ತೋರದೆ ಪೀಕು ಅಪರಾಧಿಯಂತೆ ಕಳ್ಳ ನೋಟ ಬೀರುತ್ತಿದ್ದಳು ಆ ದಿನವೆಲ್ಲ ಚಿನ್ನುವನ್ನು ಗಮನಿಸುವುದೇ ಕೆಲಸ. ಸಂಜೆಯ ಸಮಯ ತೇಲಿದಂತೆ ಎದ್ದು ಹಾಲು ಕುಡಿದಳು. ಮರುದಿನ ಚಿನ್ನು ಸುಸ್ತಾದಂತೆ ಕಂಡರೂ ಆರೋಗ್ಯ ವಾದಳು. ನಂತರ ಒಂದಷ್ಟು ಕಾಲ ಚಿನ್ನು ಹೊಸಿಲ ಮೇಲೆ ಕೂತು ಅಣಕಿಸುವ, ಪೀಕುವನ್ನು ಛೇಡಿಸುವ ಆಟ ಸ್ಥಗಿತಗೊಳಿಸಿದಳು.  ಹೊರಹೋಗಬೇಕಾದರೂ ಪೀಕುವಿನ ಸಮೀಪದಿಂದ ಓಡಿಕೊಂಡು ಗಡಿ ದಾಟುತ್ತಿದ್ದಳು. ಪೀಕೂ ಮೊದಲಿನಂತೆ ಕಾಲುಕೆರೆದು ಆರ್ಭಟಿಸುತ್ತಿರಲಿಲ್ಲ. ಮೌನವಾಗಿ ಕೂತು ಓಡುವ ಚಿನ್ನುವನ್ನು ಗಮನಿಸುತ್ತಿದ್ದಳು. ಇದಾಗಿ ಹಲವು ದಿನಗಳ ನಂತರ ಮತ್ತೆ ಚಿನ್ನುವಿಗೆ ತುಂಟತನದ ಆಸೆ ಹೆಚ್ಚಿ, ಕಟ್ಟಿ ಹಾಕಿದ ಪೀಕುವಿನ ಬಳಿ ಅಂತರ ಇಟ್ಟು ಕೂರುತ್ತಿದ್ದಳು. ಆದರೆ ಇದು ಮೊದಲಿನಷ್ಟು ಉಮೇದು ಹೊಂದಿರಲಿಲ್ಲ. ಕೆಲ ನಿಮಿಷಕ್ಕೆ ಈ ಆಟ ಮುಗಿದು ಬಿಡುತ್ತಿತ್ತು. ಅಂತಹ ಪೀಕು ಮನೆಯೊಡತಿಯ ಅಗಲಿಕೆಗೆ ಮೌನವಾದಳು. ಅವಳ ಮೌನಕ್ಕೆ ಚಿನ್ನು ಶ್ರುತಿ ಹಿಡಿದಳು. ಪೀಕು ನಿಧಾನವಾಗಿ ಸಹಜಸ್ಥಿತಿಯತ್ತ ಬರುತ್ತಿದ್ದಂತೆ ಚಿನ್ನೂ ಗೆಲುವಾದಳು. ರಂಗದಲ್ಲಿ ಭಾವನೆಗಳ ಜೊತೆಯಲ್ಲಿ ಕಲಾವಿದರು ಆಟ ಆಡುತ್ತೇವೆ. ಜಗತ್ತಿನ ಶ್ರೇಷ್ಠ ಜೀವಿ ಮಾನವ. ನಮಗೆ ನೋವು ನಲಿವು ಎರಡನ್ನೂ ತೀವ್ರವಾಗಿ ಅನುಭವಿಸುವ ಶಕ್ತಿ ಇದೆ. ಅದನ್ನೇ ರಂಗದಲ್ಲಿ ಅಭಿನಯಿಸಿ ತೋರುತ್ತೇವೆ. ಆದರೆ ಇಂತಹ ಅದೆಷ್ಟೋ ಘಟನೆಗಳು,ಪ್ರಾಣಿ ಪ್ರಪಂಚದ ವರ್ತನೆಗಳು, ನಮ್ಮ ತಿಳುವಳಿಕೆ ಎಷ್ಟು ಅಪೂರ್ಣ ಎಂದು ನೆನಪಿಸುತ್ತದೆ. ಪ್ರಾಣಿಗಳೂ ಅದೆಷ್ಟು ಆಳವಾಗಿ ನೋವು ನಲಿವು ಕ್ರೋಧ, ಮುನಿಸುಗಳನ್ನು ತೋರಬಲ್ಲವು.  ಅವುಗಳ ರಂಗಸ್ಥಳ ಬಹಳ ದೊಡ್ಡದು. ನೈಜವಾದುದು. ಸಹಜವಾದುದು. ಆ ಪರಿಕರಗಳಲ್ಲಿ ಯಾವುದೇ ಮುಖವಾಡಗಳಿಲ್ಲ. ಕೆಲವೊಮ್ಮೆ ಈ ಅಭಿನಯದ ಆಟ ಅವುಗಳಿಗೆ ಪ್ರಾಣಾಪಾಯಕಾರಿಯೂ ಹೌದು. *********************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು ಓದಿಕೊಂಡ ಬುದ್ಧಿವಂತರು ಎಂದು ಬಲವಾಗಿ ನಂಬಿಕೊಂಡಿದ್ದೆ. ಇದರಿಂದಾಗಿ ಸಂಸ್ಕೃತ ಭಾಷೆಯ ಕುರಿತು ಗಂಭೀರವಾದ ವ್ಯಾಮೋಹವೊಂದು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನನ್ನೊಳಗೆ ಜಾಗೃತವಾಗುತ್ತಿತ್ತು. ಮತ್ತು ಸಂಸ್ಕೃತ ಸುಲಭ ಓದಿಗೆ ದಕ್ಕುವ ವಿಷಯವಲ್ಲದೆಯೂ ಹೆಚ್ಚಿನ ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವುದು ಸಾಧ್ಯ ಎಂಬ ಗೆಳೆಯರ ನಡುವಿನ ವದಂತಿಯನ್ನು ನಿಜವೆಂದು ನಂಬಿ ಎಂಟನೆ ತರಗತಿಗೆ ವಿಷಯ ಆಯ್ಕೆಯ ಸಂದರ್ಭದಲ್ಲಿ ಸಂಸ್ಕೃತವನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡೆ. ಆದರೆ ತರಗತಿಗಳು ಆರಂಭವಾದ ಬಳಿಕ ಸಂಸ್ಕೃತ ವಿಷಯ ಆಯ್ಕೆಯ ನನ್ನ ಒಲವು ತಪ್ಪು ಎಂಬುದರ ಅರಿವಾಗತೊಡಗಿತು. ನಾನು ನನ್ನೆಲ್ಲ ಪಠ್ಯಗಳ ಜೊತೆಯಲ್ಲಿ ಸಂಸ್ಕೃತ ಪಠ್ಯವನ್ನು ಖರೀದಿಸಿ ತರಗತಿಗೆ ಹೋಗಲಾರಂಭಿಸಿದೆ. ಆದರೆ ಅದು ಏಕೋ ಸಂಸ್ಕೃತ ತರಗತಿಯಲ್ಲಿ ನನ್ನ ಉಪಸ್ಥಿತಿ ನಮ್ಮ ತರಗತಿಯ ಸಂಸ್ಕೃತ ಮೇಷ್ಟ್ರಿಗೆ ಹಿತವಾಗಿ ಕಾಣಲಿಲ್ಲ. ಬಹುತೇಕ ಬ್ರಾಹ್ಮಣ, ಗೌಡ, ಸಾರಸ್ವತ ಬ್ರಾಹ್ಮಣ ಇತ್ಯಾದಿ ಮೇಲ್ಜಾತಿಯ ಬೆಳ್ಳುಂಬೆಳಗಿನ ವಿದ್ಯಾರ್ಥಿ ಸಮುದಾಯದ ನಡುವೆ ಕಪ್ಪು ಬಣ್ಣದ ಒಬ್ಬನೇ ಒಬ್ಬ ವಿದ್ಯಾರ್ಥಿ ಇಡಿಯ ತರಗತಿಗೆ ಕಳಂಕದ ‘ಕಪ್ಪು ಚುಕ್ಕೆ’ ಎಂಬಂತೆ ನಮ್ಮ ಗುರುಗಳ ಕಣ್ಣಿಗೆ ಕಂಡಿರಬೇಕು. ಅವರು ತರಗತಿಯಲ್ಲಿ ತುಂಬ ವಿಶಿಷ್ಟವೆನ್ನಿಸುವ ದೃಷ್ಟಿಯಲ್ಲಿ ನನ್ನನ್ನು ನೋಡತೊಡಗಿದರು. ಅವರು ನನ್ನೆಡೆಗೆ ಬೀರುವ ನೋಟದಲ್ಲಿಯೇ “ಎಲಾ ಶೂದ್ರ ಮುಂಡೇದೆ ನೀನೂ ಸಂಸ್ಕೃತವ ಕಲೀತಿಯೇನೋ…?” ಎಂಬ ತಿರಸ್ಕಾರದ ದೃಷ್ಟಿ ಇರುವುದು ನನ್ನ ಅರಿವಿಗೆ ನಿಲುಕಲಿಲ್ಲ. “ಈ ಶೂದ್ರನಿಗೆ ಸಂಸ್ಕೃತವನ್ನು ಹೇಳಿಕೊಟ್ಟು ತಾನು ಪೂಜ್ಯ ಮನು ಮಹರ್ಷಿಯ ಘನ ಶಾಪಕ್ಕೆ ಪಕ್ಕಾದೆನಲ್ಲಾ…” ಎಂಬ ಅವರೊಳಗಿನ ಚಡಪಡಿಕೆಯನ್ನು ಅರ್ಥ ಮಾಡಿಕೊಳ್ಳುವ ಬುದ್ಧವಂತಿಕೆಯೂ ಅಂದು ನನಗಿರಲಿಲ್ಲ. ಈ ಶ್ರೀಪಾದರೆಂಬ ಸಂಸ್ಕೃತ ಶಿಖಾಮಣಿಗಳು ನಾನು ಸಂಸ್ಕೃತವನ್ನು ಬಿಟ್ಟು ಬಿಡುವಂತೆ ಬಾಯಿಬಿಟ್ಟು ಹೇಳಲಾಗದ ಸಂಕಟಕ್ಕೆ ವಾಮ ಮಾರ್ಗವೊಂದನ್ನು ಹಿಡಿದರು. ಚಡಪಡಿಕೆ ಸಂಕಟಗಳ ನಡುವೆಯೇ ಸಂಸ್ಕೃತ ವಚನ ವಿಭಕ್ತಿಗಳ ಕುರಿತು ಪಾಠ ಆರಂಭಿಸಿ ಸಂಸ್ಕೃತದಲ್ಲಿರುವ ಏಕವಚನ, ದ್ವಿವಚನ, ಬಹುವಚನಗಳನ್ನು ತಿಳಿಸಿ ನಾಮಪದ, ಸರ್ವನಾಮಗಳನ್ನು ಮೂರು ವಚನಗಳಲ್ಲಿ ಮತ್ತು ಸಂಸ್ಕೃತದ ಎಂಟು ವಿಭಕ್ತಿಗಳಲ್ಲಿ ರೂಪಾಂತರಿಸಿ ನಡೆಸಲು ಶ್ರುತಿ ಸ್ಮೃತಿ ಪರಂಪರೆಯ ಮೂಲಕ ಗುರುಕುಲದ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ ಬಳಸಿದ,“ರಾಮಃ ರಾಮೌ ರಾಮಾಃ…” (ರಾಮ, ಇಬ್ಬರು ರಾಮರು, ಅನೇಕ ರಾಮರು) ಇತ್ಯಾದಿ ಉದಾಹರಣೆಯ ಶ್ಲೋಕ ಮಾದರಿಯೊಂದನ್ನು ಕಂಠಪಾಠ ಮಾಡಲು ತಿಳಿಸಿದರು. ಮತ್ತು ಮರುದಿನವೇ ಪಾಠ ಒಪ್ಪಿಸಲು ತಾಕೀತು ಮಾಡಿದ್ದರು. ವಸತಿ ನಿಲಯದ ನಿರ್ಜನ ಮೂಲೆಯಲ್ಲಿ, ಆಟದ ಬಯಲಿನಲ್ಲಿ, ಸ್ನಾನಕ್ಕೆ ನಿಂತಾಗಲೂ ಈ “ರಾಮಃ ರಾಮೌ…” ಪಠ್ಯ ಹಿಡಿದು ಕಂಠಪಾಠ ಮಾಡಿದೆ. ಆದರೆ ತರಗತಿಯಲ್ಲಿ ಗುರುಗಳು ನನ್ನನ್ನೆ ಎದ್ದು ನಿಲ್ಲಿಸಿ ಪಾಠ ಒಪ್ಪಿಸಲು ತಿಳಿಸಿದಾಗ ಒಂದಕ್ಷರವೂ ನನ್ನ ಬಾಯಿಂದ ಹೊರ ಬಾರದೆ ನಗೆಪಾಟಲಾದೆ. ಗುರುಗಳು ಇದನ್ನೇ ಅಸ್ತçವಾಗಿ ನಿತ್ಯವೂ ಬಳಸತೊಡಗಿದರು. ಅದೇನೋ ಹೇಳುವಂತೆ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಪ್ರಯೋಗಿಸುವಂತೆ ನಿಷ್ಕುರಣೆಯಿಂದ ಅಸ್ತ್ರ ಪ್ರಯೋಗ ಮಾಡಿದರು. ಅಷ್ಟಕ್ಕೆ ನಿಲ್ಲದೆ ವೈಷ್ಣವಾಸ್ತ್ರ,  ನೀಲಕಂಠಾಸ್ತ್ರಗಳನ್ನೂ ನೆರವಿಗೆ ತೆಗೆದುಕೊಂಡವರಂತೆ ಬೇರೆ ಬೇರೆ ದೃಷ್ಟಾಂತಗಳನ್ನು ಹೇಳಿ ನನ್ನನ್ನು ಹಿಂಸೆಗೀಡು ಮಾಡಿದರು. ಗುರುಗಳ ವ್ಯಂಗ್ಯೋಕ್ತಿಗಳು, ಸಹಪಾಠಿಗಳ ಅಪಹಾಸ್ಯದ ನಗುವಿನೊಡನೆ ಹತ್ತೆಂಟು ದಿನಗಳ ಕಾಲ ತೀವೃವಾದ ಹಿಂಸೆಯನ್ನು ಅನುಭವಿಸಿದೆ. ತರಗತಿ ಆರಂಭ ಆಗುತ್ತಿದ್ದಂತೆಯೇ ನನ್ನನ್ನು ಮೊದಲು ಎದ್ದು ನಿಲ್ಲಿಸುವುದು, ಹಲವು ಪ್ರಶ್ನೆಗಳನ್ನು ನನ್ನೊಬ್ಬನಿಗೇ ಕೇಳುವುದು… ಇತ್ಯಾದಿ ಆಕ್ರಮಣಗಳಿಂದ ಭಯ ನಾಚಿಕೆಯಲ್ಲಿ ನಾನು ನಿತ್ಯವೂ ಸಂಸ್ಕೃತ ತರಗತಿಯಲ್ಲಿ ಬೆವರಿಳಿದು ಬಸವಳಿಯುತಿದ್ದೆ. ಇದನ್ನು ನೋಡಿ ನೋಡಿ ಗುರುಗಳು ಹಿಂಸಾರತಿಯ ಆನಂದವನ್ನು ಅನುಭವಿಸುತ್ತಿದ್ದರು. ನನಗೆ ಸಂಸ್ಕೃತದ ಸಹವಾಸ ಸಾಕು ಅನಿಸಿತು. ಕೊಂಡು ತಂದ ಪುಸ್ತಕವನ್ನು ಸಹಪಾಠಿಯೊಬ್ಬನಿಗೆ ಅರ್ಧ ಬೆಲೆಗೆ ಮಾರಿ ಕೈತೊಳೆದುಕೊಂಡೆ. ಸಂಸ್ಕೃತವನ್ನು ಬಿಟ್ಟು ‘ಎಡಿಷನಲ್ ಕನ್ನಡ’ ಆಯ್ದುಕೊಂಡೆ ಗುರುಗಳು ನಿರಾಳವಾದರು. ಆದರೆ ಸಂಸ್ಕೃತದ ಕುರಿತಾದ ನನ್ನ ಪ್ರೀತಿ ನನ್ನೊಳಗೆ ಸುಪ್ತವಾಗಿ ಉಳಿದುಕೊಂಡಿತ್ತು. ಮುಂದೆ ಜಿ.ಸಿ. ಕಾಲೇಜಿನಲ್ಲಿ ಪದವಿ ತರಗತಿಯನ್ನು ಓದುವಾಗ ಪ್ರೊ.ಎಂ.ಪಿ.ಭಟರಲ್ಲಿ ವಿನಂತಿಸಿಕೊಂಡು ಸಂಸ್ಕೃತವನ್ನು ಮೈನರ್ ವಿಷಯವಾಗಿ ಆಯ್ದುಕೊಂಡೆ. ಮತ್ತು ಮೂರು ವರ್ಷಗಳಲ್ಲಿಯೂ ಸಂಸ್ಕೃತದಲ್ಲಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾಗಿದ್ದೆ. ಹಾಗೆಂದು ಸಂಸ್ಕೃತದ ವಿಶೇಷ ಪಾಂಡಿತ್ಯವೇನೂ ದಕ್ಕಲಿಲ್ಲ. ಪರೀಕ್ಷೆಯಲ್ಲಿ ಕನ್ನಡದಲ್ಲಿಯೇ ಉತ್ತರಿಸುವ ಅವಕಾಶವಿದ್ದುದರಿಂದ ಹೆಚ್ಚಿನ ಅಂಕ ಗಳಿಕೆಗೆ ಪೂರಕವಾಯಿತು ಅಷ್ಟೆ. ಆದರೂ ಸಂಸ್ಕೃತದ ಒಂದಿಷ್ಟು ಕಾವ್ಯಾಭ್ಯಾಸ, ಅರಿವಿನ ವಿಸ್ತಾರವನ್ನು ಹೆಚ್ಚಿಸಿದ್ದು ನಿಜವೇ. ಯಕ್ಷಗಾನ ಕಲಾವಿದನಾಗಿ ಪಾತ್ರ ನಿರ್ವಹಿಸುವಾಗ ಒಂದಿಷ್ಟು ಶ್ಲೋಕಗಳನ್ನು ನಿರರ್ಗಳವಾಗಿ ಮಾತಿನ ಮಧ್ಯೆ ಪ್ರಯೋಗಿಸಲು ಅನುಕೂಲವಾದದ್ದು ಕೂಡ ಸಂಸ್ಕೃತದ ಕಲಿಕೆಯ ಪ್ರಯೋಜನ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನನ್ನ ಪ್ರೀತಿಯ ಪ್ರಾಧ್ಯಾಪಕರಲ್ಲಿ ಒಬ್ಬರಾದ ಪ್ರೊ.ಎಂ.ಪಿ.ಭಟ್ ಅವರಿಗೆ ನಾನು ಸದಾ ಋಣಿಯಾಗಿರುವೆ. ********************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top