ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನಾನು ಗಂಡಾಗಿ ಹುಟ್ಟಿದ್ದಿದ್ದರೆ..

ಶೀಲಾ ಭಂಡಾರ್ಕರ್

ನಾಳೆ ಮದುವೆಯಾಗಿ ಅತ್ತೆ ಮನೆಗೆ
ಹೋಗಬೇಕಾದ ಹುಡುಗಿ
ಜಾಸ್ತಿ ಕುಣಿಯಬೇಡ ಕಣೆ.

ಮರ ಹತ್ತಿ ಧುಮುಕುತ್ತೀಯಲ್ಲಾ..
ಕೈ ಕಾಲು ಮುರಿದು ಕೂತರೆ
ನಾಳೆ ಯಾರು ಮದುವೆ ಆಗುತ್ತಾರೆ?

ನೋಡು ಹೆಚ್ಚು ಮಾತಾಡಬೇಡ.
ಜೋರಾಗಿ ನಗಬೇಡ.
ಮಾತಿಗೆ ಎದುರು ಮಾತು ಬೇಡ.

ಕಿಟಕಿಯಿಂದ ಇಣುಕಬೇಡ.
ಒಬ್ಬಳೇ ಹೊರಗೆ ಹೋಗೋದು ಬೇಡ.
ಕತ್ತಲಾಯಿತು ಒಳಗೆ ನಡಿ.

ಮನೆ ಕೆಲಸ ಎಲ್ಲವೂ ಕಲಿತಿರಬೇಕು.
ಅತ್ತೆ ಮನೆಯಲ್ಲಿ ಭೇಷ್ ಅನಿಸಿಕೊಳ್ಳಬೇಕು.
ಅಪ್ಪ ಅಮ್ಮನಿಗೆ ಒಳ್ಳೆಯ ಹೆಸರು ತರಬೇಕು.

ಈ ಮಾತುಗಳನೆಲ್ಲ
ನಾನು ಕೇಳಬೇಕಾಗಿರಲಿಲ್ಲ.
ಈ ಬೇಡ ಎಂದವುಗಳನೆಲ್ಲಾ
ಮನಸೋ ಇಚ್ಛೆ ಮಾಡಿ
ಆನಂದಿಸಲು ಯಾರದೇ
ಅಡ್ಡಿ ಇರುತ್ತಿರಲಿಲ್ಲ.

ಆದರೆ…
ಹೆಣ್ಣಾಗಿ ಹುಟ್ಟಿದ ಹೆಮ್ಮೆ ಇದೆ.
ಅನೇಕ ಬೇಸರಿಕೆ, ಹೇವರಿಕೆಯ
ನಡುವಿನ ಚಿಕ್ಕ ಪುಟ್ಟ ಆಸೆಗಳ,
ಸಣ್ಣ ಖುಷಿಗಳ ಆನಂದವಿದೆ.

ಆದರೂ…

ಗಂಡಾಗಿ ಹುಟ್ಟದೇ ಇರುವುದಕ್ಕೆ,
ಮತ್ತು
ನನಗೊಂದು ಭಾನುವಾರವೂ ಇಲ್ಲದುದಕ್ಕೆ
ಅತೀವ ವಿಷಾದವಿದೆ.

ಇವೆಲ್ಲದರ ನಡುವೆಯೂ
ಅಂತರಾಷ್ಟ್ರೀಯ ಮಹಿಳಾ ದಿನ
ಎಂಬುದೊಂದಿದೆ.
ಈ ದಿನವೂ ಮನೆಯಲ್ಲಿ
ಕೈ ತುಂಬಾ ಕೆಲಸವಿದೆ.

*****************************************

About The Author

5 thoughts on “ನಾನು ಗಂಡಾಗಿ ಹುಟ್ಟಿದ್ದಿದ್ದರೆ..”

  1. Nagaraj Harapanhalli

    ಭಾರತೀಯ ಸಂಪ್ರದಾಯ ಹೆಣ್ಣಿನ ಮೇಲೆ ಎಷ್ಟೆಲ್ಲಾ ಸಂಕೋಲೆಗಳನ್ನು ಹೇರಿದೆ ಎಂಬುದನ್ನು ಧ್ವನಿಪೂರ್ಣವಾಗಿ, ಸರಳವಾಗಿ, ಸಶಕ್ತವಾಗಿ ಹೇಳಿದೆ ಈ ಕವಿತೆ .‌..ಇದೆಲ್ಲಾ ಬಂಧನದ ಮಧ್ಯೆಯೂ ಹೆಣ್ಣು ಬೆಳಕಿನಂತೆ ಪುಟಿದೆದ್ದಿದ್ದಾಳೆ. ಕತ್ತಲನ್ನು ಕತ್ತಲು ಎಂದು ಕೂಗಿ ಹೇಳಿದ್ದಾಳೆ. ಆಶಾವಾದಿಯಾಗಿದ್ದಾಳೆ….

    ಚೆಂದ ಕವಿತೆ ಇದು…

  2. ಸುಜಾತಾ ಲಕ್ಮನೆ

    ಚಂದದ ಕವಿತೆ. ಅರ್ಥಪೂರ್ಣ. ಹೆಣ್ಣಿನ ಬಿಡುವಿಲ್ಲದ ಜೀವನದ ದರ್ಶನ ಸಾದೃಶ್ಯವಾಗಿ ಮೂಡಿದೆ.. ಹೆಣ್ಣೆಂದರೆ ಇಷ್ಟೆ..ಕಷ್ಟವೋ, ನಷ್ಟವೋ..ಯಾವ ದಿನಗಳೂ ಅವಳದಲ್ಲ ಎಂಬ ನಗ್ನ ಸತ್ಯವನು ಸಾರಿದ ಕವಿತೆ..

Leave a Reply

You cannot copy content of this page

Scroll to Top