ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ—ಎರಡು ಟ್ರೀಣ್ … ಟ್ರೀಣ್.. ಅಬ್ಬಾ ಯಾರಿದು ಇಷ್ಟು ಹೊತ್ತಿಗೆ ಫೋನ್ ಮಾಡ್ತಿರೋದು ಎಂದು ಗಾಬರಿಯಲ್ಲಿ ಎದ್ದರೆ.. ಎಲ್ಲಿದ್ದೇನೆಂದು ತಿಳಿಯುವುದಕ್ಕೆ ಸ್ವಲ್ಪ ಹೊತ್ತು ಬೇಕಾಯ್ತು. ಎದ್ದು ಫೋನ್ ಕೈಗೆ ತಗೊಂಡೆ.. ಹಲೋ ಎನ್ನುವುದರೊಳಗೆ ಆ ಕಡೆಯಿಂದ ಮೇಡಮ್ ಇನ್ನು ಅರ್ಧ ಗಂಟೆಯೊಳಗೆ ರೆಡಿಯಾಗಿ ಲಾಂಜ್ ಗೆ ಬನ್ನಿ ಎನ್ನುವುದು ಕೇಳಿಸಿತು. ಹೂಂ ಎನ್ನುವುದರೊಳಗೆ ಫೋನ್ ಇಟ್ಟಾಯ್ತು. ಯಾವ ಮೇಡಮ್? ಯಾವ ಲಾಂಜ್! ಹೊತ್ತಲ್ಲದ ಹೊತ್ತಿನಲ್ಲಿ ಮಲಗಿ ಎದ್ದರೆ ಹೀಗೆ ಆಗುವುದು. ಇಡೀ ರಾತ್ರಿ ಬಯಲಾಟ ನೋಡಿ ಬಂದು ಮಲಗಿದವರಿಗೆ ಆಗುವಂಥದೇ ಅಮಲು ನನ್ನನ್ನು ಆವರಿಸಿತ್ತು. ಸ್ವಲ್ಪ ಸ್ವಲ್ಪವೇ ತಿಳಿಯಾದ ಮೇಲೆ ಎಲ್ಲವೂ ನೆನಪಿಗೆ ಬರಲು ಶುರುವಾಯ್ತು. ನಿನ್ನೆ ರಾತ್ರಿ ನಾವು ಇನ್ನೊವಾದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದು. ನಮಗೆ ಕೂತುಕೊಳ್ಳಲು ಆರಾಮಾಗಲಿ ಎಂದು ನಮ್ಮ ಎಲ್ಲಾ ಲಗ್ಗೇಜನ್ನು ವಾಹನದ ಮೇಲೆ ಜೋಡಿಸಿ ಕಟ್ಟಿದ್ದು. ನಮ್ಮ ದೊಡ್ಡವಳಿಗೆ ಸ್ವಲ್ಪ ಕೀಟಲೆ ಬುದ್ಧಿ. “ಅವರು ಅಷ್ಟು ಗಟ್ಟಿಯಾಗಿ ಕಟ್ಟಿಲ್ಲ ಅಂತ ಅನಿಸುತ್ತೆ ನನಗೆ, ಈಗ ಯಾವುದಾದರೂ ಬ್ಯಾಗ್ ಬಿದ್ದು ಹೋದರೆ? ಧಾತ್ರಿ ಬ್ಯಾಗ್ ಮೇಲೆ ಇಟ್ಟಿರೋದ್ರಿಂದ ಅದೇ ಮೊದಲು ಬೀಳೋದು. ಗೊತ್ತಾಗೋದ್ರೊಳಗೆ ಎಷ್ಟೋ ದೂರ ಬಂದು ಬಿಟ್ಟಿರುತ್ತೇವೆ.” ಎಂದೆಲ್ಲಾ ಹೇಳುತ್ತಾ ಇದ್ದಾಗ ನಾನು ಗದರಿದೆ. ಸುಮ್ನಿರು ನೀನು ಹಾಗೆಲ್ಲ ಹೇಳ್ಬೇಡ ಅಂದೆ. ಈಗ ಧಾತ್ರಿಗೆ ನಿಜವಾಗಲೂ ಭಯ ಶುರುವಾಯ್ತು. “ನನ್ನ ಬ್ಯಾಗ್ ಬಿದ್ರೆ ಇನ್ನು ಐದು ದಿನ ನಾನೇನು ಹಾಕಿಕೊಳ್ಳಲಿ? ನನ್ನ ಬಟ್ಟೆ ಒಂದೂ ಇಲ್ಲವಲ್ಲ!” ಬ್ಯಾಗ್ ಬೀಳುವುದಿಲ್ಲ ಎಂದು ಧೈರ್ಯ ಹೇಳೋದು ಬಿಟ್ಟು ಒಬ್ಬೊಬ್ಬರೂ ಒಂದೊಂದು ಸಲಹೆ ಕೊಡಲು ತೊಡಗಿದೆವು. ಅವಳು ಅಳುವುದೊಂದು ಬಾಕಿ. ಕೊನೆಗೆ ಅವಳೇ ಸಮಾಧಾನ ಮಾಡಿಕೊಂಡು. ಲಗ್ಗೇಜ್ ಗಟ್ಟಿಯಾಗಿ ಕಟ್ಟಿದ್ದೀರಲ್ಲ, ಬ್ಯಾಗ್ ಬೀಳೋದಿಲ್ಲ ಅಲ್ವಾ ? ಎಂದು ಡ್ರೈವರನ್ನೇ ಕೇಳಿದಳು. ಇಲ್ಲಮ್ಮ ಛಾನ್ಸೇ ಇಲ್ಲ ಎಂದು ಅವರಂದ ಮೇಲೆ ನೆಮ್ಮದಿಯಿಂದ ಕೂತಳು. ನಮ್ಮ ವಿಮಾನ ಪೋರ್ಟ್‌ಬ್ಲೇರ್ ನ ವೀರ ಸಾವರ್ಕರ್ ನಿಲ್ದಾಣದಲ್ಲಿ ಇಳಿದಾಗ ಹೊರಗೆ ಇಣುಕಿ ನೋಡಿ ನಾವು ಕನಸು ಕಂಡಿದ್ದು ನಿಜವಾಯಿತಲ್ಲ ಎಂದು ಮೈಮನವೆಲ್ಲ ಪುಳಕ. ವಿಮಾನದಿಂದ ಇಳಿಯಲು ಒಬ್ಬರ ಹಿಂದೆ ಒಬ್ಬರು ಸಾಲಾಗಿ ಬರುವಾಗ ಒಮ್ಮೆಲೇ ಏನೋ ನೆನಪಾಗಿ ಪಿಚ್ಚೆನಿಸಿತು. ನಮ್ಮಜ್ಜಿ ಒಮ್ಮೆ ಪೇಪರ್ ಓದುತ್ತಾ ಜೋರಾಗಿ, ಇವರನ್ನೆಲ್ಲಾ ಅಂಡಮಾನ್ ಜೈಲಿಗೆ ಕಳಿಸಬೇಕು. ಬ್ರಿಟಿಷರ ಕಾಲಾಪಾನಿ ಶಿಕ್ಷೆ ಕೊಡಿಸಬೇಕು. ಎಂದು ಗೊಣಗುತಿದ್ದಾಗ ಅಲ್ಲೇ ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತಿದ್ದ ದೊಡ್ಡಪ್ಪ , ಯಾರನ್ನು ಕಳಿಸಬೇಕು ಅಂಡಮಾನಿಗೆ? ಕೊಲೆ ಸುಲಿಗೆ ಅತ್ಯಾಚಾರಕ್ಕೆಲ್ಲಾ ಅಂಡಮಾನಿಗೆ ಕಳಿಸುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದವರನ್ನು ಮಾತ್ರ ಕಳಿಸುತಿದ್ದರು. ಎಂದು ಹೇಳಿದಾಗ, ಅಲ್ಲೇ ಇದ್ದ ನನಗೆ ಕಾಲಾಪಾನಿ ಎಂದರೆ ಕಪ್ಪು ನೀರು ಅದ್ಯಾವ ತರದ ಶಿಕ್ಷೆ ಎಂದು ಯೋಚಿಸುವಂತಾಗಿತ್ತು. ನಾವೀಗ ಪ್ರವಾಸಕ್ಕೆಂದು ಖುಷಿಯಿಂದ ಬಂದಿದ್ದೇವೆ. ಮತ್ತೆ ನಮ್ಮ ಊರಿಗೆ ಹೋಗುವಾಗ ಇನ್ನಷ್ಟು ಸಂತೋಷದಿಂದ ಒಳ್ಳೆಯ ನೆನಪುಗಳನ್ನು ಹೊತ್ತು ಕೊಂಡೊಯ್ಯುತ್ತೇವೆ. ಆದರೆ.. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಅವರು ಈ ನೆಲದ ಮೇಲೆ ಕಾಲಿಟ್ಟ ಗಳಿಗೆಯಲ್ಲಿ ಮತ್ತೆ ತಮ್ಮ ಊರಿಗೆ ಹಿಂತಿರುಗುವ ಕನಸು ಕೂಡ ಕಾಣದೆ, ಋಣ ಹರಿದುಕೊಂಡಂತೆ ಇಟ್ಟ ಆ ಒಂದೊಂದು ಹೆಜ್ಜೆಯೂ ಅದೆಷ್ಟು ಭಾರವಿದ್ದಿರಬಹುದು! ಯೋಚನೆಗೆ ಬಿದ್ದಿದ್ದೆ. ವಿಮಾನ ನಿಲ್ದಾಣದ ಹೊರಗೆ ಬಂದು ನಿಂತಾಗ ವತಿಕಾ ಇಂಟರ್ನ್ಯಾಷನಲ್ ಎಂಬ ಬೋರ್ಡ್ ಹಿಡಿದುಕೊಂಡು ನಿಂತ ಹುಡುಗ, ವಿಜಯ್ ನಮ್ಮನ್ನು ನಗುಮೊಗದಿಂದ ಸ್ವಾಗತಿಸಿ ನಮ್ಮ ಲಗ್ಗೇಜ್ ಗಳನ್ನೆಲ್ಲಾ ಒಂದು ವಾಹನಕ್ಕೆ ತುಂಬಿಸಿ, ನಮ್ಮನ್ನು ಮತ್ತೊಂದು ಮಿನಿಬಸ್ ಒಳಗೆ ಹತ್ತಲು ಹೇಳಿದಾಗ, ಅರೆಬರೆ ನಿದ್ದೆಯಿಂದ ಎದ್ದ ನನ್ನ ಯಜಮಾನರು ನಮ್ಮ ಬ್ಯಾಗು ನಮ್ಮ ಬ್ಯಾಗು ಎಂದು ಕಿರುಚಲು ಶುರು ಮಾಡಿದರು. ನಾವೆಲ್ಲರೂ ಸಮಾಧಾನದಿಂದ ನಾವು ಹೋಗುವಲ್ಲಿಗೇ ಬರುತ್ತೆ ಅದು ಎಂದರೆ ಒಂದು ಕ್ಷಣ ಒಪ್ಪಿದರೂ ಮರುಕ್ಷಣ ಮತ್ತೆ ಅದನ್ನೇ ಹೇಳುತ್ತಾ ಗಾಬರಿಯಾಗುತಿದ್ದರು. ಆಗ, ದೀಕ್ಷಾ ಮಾತು ಮರೆಸಲು “ಅಪ್ಪಾ.. ನೋಡಿಲ್ಲಿ. ನಾವೆಲ್ಲಿ ಬಂದಿದ್ದೇವೆ ಗೊತ್ತಾ? ಅಂಡಮಾನ್ ಇದು.” ಎಂದಳು. ” ಗೋವಾ ಕರಕೊಂಡು ಬಂದು ಅಂಡಮಾನ್ ಅಂದ್ರೆ ನಾನು ನಂಬಲ್ಲ.” ಅವರೆಂದಾಗ ನಮ್ಮ ಜೊತೆಯಲ್ಲಿದ್ದ ಉಳಿದವರು ಅರ್ಥವಾಗದೆ ಗಲಿಬಿಲಿಯಾಗಿದ್ದು ನಮಗೆ ತಿಳಿಯಿತು. ಪರಸ್ಪರ ಪರಿಚಯವಾಗದುದರಿಂದ ಯಾರೂ ಏನೂ ಕೇಳಲಿಲ್ಲ. ನಾವೂ ನಮ್ಮಷ್ಟಕ್ಕೆ ಇದ್ದೆವು. ಇವರು ನಡುನಡುವೆ ನಮ್ಮ ಲಗ್ಗೇಜನ್ನು ನೆನಪಿಸಿಕೊಂಡು ಕೇಳುತಿದ್ದರು. ನಮ್ಮ ಪಶ್ಚಿಮ ಕರಾವಳಿಯ ಊರುಗಳಂಥದ್ದೇ ಊರು ಇದು. ಅದೇ ರೀತಿಯ ಸಣ್ಣ ಸಣ್ಣ ಗಲ್ಲಿಗಳಂತ ರಸ್ತೆಗಳು. ಗೋವಾ ಎಂದು ಅನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಬಾಗಿಲು ಬಡಿದ ಶಬ್ದವಾಯಿತು. ಮಕ್ಕಳು ಆಗಲೇ ತಯಾರಾಗಿ ಬಂದಿದ್ದರು. ನಾವೂ ತಯಾರಾಗಿಯೇ ಇದ್ದುದರಿಂದ ಮತ್ತೇನೂ ವಿಶೇಷವಾದ ಕೆಲಸವಿರಲಿಲ್ಲ. ಸತೀಶ್ ಅವರನ್ನು ನಿದ್ದೆಯಿಂದ ಎಚ್ಚರಿಸಿ ಕೂರಿಸಿದೆವು. ಒಂದು ನಿದ್ದೆಯಾದರೆ ಅದರ ಮುಂಚಿನ ವಿಷಯ ಮರೆತಿರುತ್ತದೆ ಅವರಿಗೆ. ಈಗ ಬ್ಯಾಗ್ ವಿಷಯ ಸಂಪೂರ್ಣ ಮರೆತಿದ್ದರು. ನಮ್ಮೊಂದಿಗೆ ಲಾಂಜ್‍ಗೆ ನಡೆದು ಬಂದರು. ಊಟ ಮುಗಿಸಿ ಸರಿಯಾಗಿ ಒಂದು ಗಂಟೆಗೆ ನಮ್ಮನ್ನು ಅಲ್ಲಿಯೇ ಬಂದು ಸೇರಲು ಹೇಳಿದರು ನಮ್ಮ ಟೂರ್ ಮ್ಯಾನೆಜರ್, ರಾಕೇಶ್ ಸರ್. ಮೊದಲೇ ತಯಾರಾಗಿ ನಿಂತ ಎರಡು ವಾಹನಗಳಲ್ಲಿ ನಾವೆಲ್ಲ ಹೊರಟೆವು. ಅಂಡಮಾನ್ ಪ್ರವಾಸದ ಬಹು ಮುಖ್ಯವಾದ ಪ್ರಸಿದ್ಧ ಸೆಲ್ಯುಲರ್ ಜೈಲ್‌ಗೆ ಭೇಟಿ ಆ ದಿನದ ನಮ್ಮ ಕಾರ್ಯಕ್ರಮವಾಗಿತ್ತು. ಜೈಲಿನ ಆವರಣ ವಿಶಾಲವಾಗಿದ್ದು ಎತ್ತರದ ಕಟ್ಟಡಗಳನ್ನು ನೋಡುವಾಗ, ಜೊತೆಗೆ ನಮಗೆಂದು ನೇಮಿಸಿದ ಗೈಡ್ ಪಟಪಟನೆ ಇತಿಹಾಸವನ್ನು ವಿವರಿಸುತ್ತಿರುವಾಗ ಗತಕಾಲಕ್ಕೆ ಹೋದಂತೆ ಭಾಸವಾಯಿತು. ಕಾಲಾಪಾನಿ ಎಂದರೆ ಕಪ್ಪು ನೀರು ಅಲ್ಲ. ಅದು ಕಾಲ್ ಕಾ ಪಾನಿ, ಕಾಲಾ ಪಾನಿ. ಕಾಲ್ ಎಂದರೆ ಕಾಲ ಅಥವಾ ಮೃತ್ಯು. ಆ ಬಂಗಾಳ ಕೊಲ್ಲಿಯ ಸಮುದ್ರದ ನೀರು, ದಾಟುತ್ತಿರುವಾಗ ಆಗಿನ ಖೈದಿಗಳಿಗೆ ಮೃತ್ಯುವಿನ ನೀರಾಗಿ ಕಂಡದ್ದರಲ್ಲಿ ಸತ್ಯವಿದೆ. ಒಮ್ಮೆ ಆ ಸಮುದ್ರ ದಾಟಿ ಅಂಡಮಾನ್ ನ ಈ ಜೈಲು ಪ್ರವೇಶಿಸಿದವರು ಮತ್ತೆಂದೂ ತಮ್ಮ ತಾಯ್ನಾಡಿಗೆ ಮರಳುವುದು ಕನಸಲ್ಲೂ ಸಾಧ್ಯವಿರಲಿಲ್ಲ. ಜೈಲಿನ ಕಟ್ಟಡ ನಕ್ಷತ್ರ ಮೀನಿಗಿರುವಂತೆ ಮಧ್ಯದ ಗೋಪುರದ ಕಟ್ಟಡಕ್ಕೆ ಸುತ್ತಲೂ ಏಳು ರೆಕ್ಕೆಗಳಿದ್ದಂತೆ ಕಟ್ಟಲ್ಪಟ್ಟಿತ್ತು. ಕಾಲಕ್ರಮೇಣ ಕಟ್ಟಡಗಳು ಬಿದ್ದು ಹೋಗಿ ಮೂರು ರೆಕ್ಕೆಗಳು ಮಾತ್ರ ಉಳಿದಿವೆ. ಇಲ್ಲಿ ನಾನು ನಿಮಗೆ ಇಸವಿಗಳು, ಆ ವೈಸ್‌ರಾಯ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಕುಳಿತರೆ, ನಿಮಗೆ ಇತಿಹಾಸದ ತರಗತಿಯಲ್ಲಿ ಪಾಠ ಕೇಳುವಂತಾಗಿ ನಿದ್ದೆ ಬಂದೀತು. ಜೈಲಿನ ಒಂದು ರೆಕ್ಕೆಯ ಮುಂಭಾಗದಲ್ಲಿ ಇನ್ನೊಂದು ರೆಕ್ಕೆಯ ಹಿಂಭಾಗವಿದ್ದು ಪ್ರತಿ ರೆಕ್ಕೆ ಅಥವಾ ವಿಂಗ್, ಮೂರು ಮೂರು ಅಂತಸ್ತುಗಳನ್ನು ಹೊಂದಿವೆ. ಸಣ್ಣ ಸಣ್ಣ ಕೊಠಡಿಗಳಿಗೆ ಎತ್ತರದ ಸೂರು. ಹತ್ತು ಅಡಿಗಳಷ್ಟು ಎತ್ತರದಲ್ಲಿ ಗಾಳಿ ಬೆಳಕು ಒಳ ಬರಲು ಒಂದು ಸಣ್ಣ ಕಿಂಡಿ. ಹಾಗಾಗಿ ಒಬ್ಬರ ಸಂಪರ್ಕ ಇನ್ನೊಬ್ಬರಿಗಿರಲಿಲ್ಲ. ಕೊಠಡಿಯ ಚಿಲಕ, ಬೀಗಗಳು ಕೈಗೆ ಎಟುಕದಷ್ಟು ದೂರವಿದ್ದವು. ನಾವು ಹೋದಾಗ ರಿಪೇರಿ ಕಾರ್ಯ ನಡೆಯುತಿದ್ದು ಒಂದು ವಿಂಗ್ ನ್ನು ನೋಡಲು ಅನುಮತಿ ಇದ್ದಿತ್ತು. ವೀರ ಸಾವರ್ಕರ್ ಅವರನ್ನು ಆಗ ಮೂರನೆಯ ಅಂತಸ್ತಿನ ಕೊನೆಯ ಕೊಠಡಿಯಲ್ಲಿಟ್ಟಿದ್ದರು. ಅವರ ಜ್ಞಾಪಕಾರ್ಥ ಆ ಕೊಠಡಿಯೊಳಗೆ ಅವರ ಭಾವಚಿತ್ರವನ್ನು ಇಡಲಾಗಿದೆ. ವಿನಾಯಕ ಸಾವರ್ಕರ್ ಅವರ ಸಹೋದರನನ್ನೂ ಅದೇ ಜೈಲಿನಲ್ಲಿಟ್ಟರೂ ಎಂದೂ ಪರಸ್ಪರ ಭೇಟಿಯಾಗಿರಲಿಲ್ಲವಂತೆ. ಆಗಿನ ಉಗ್ರಾಣ, ಅಡುಗೆ ಕೋಣೆಗಳು, ಗಲ್ಲು ಶಿಕ್ಷೆಯ ಕೋಣೆ, ಮತ್ತು ಕಠಿಣ ಶಿಕ್ಷೆಗಳನ್ನು ಕೊಡುತಿದ್ದ ಜಾಗ ಎಲ್ಲವನ್ನೂ ನೋಡಿದೆವು. ಎತ್ತುಗಳಂತೆ ಗಾಣವನ್ನು ಸುತ್ತಿ ಕೊಬ್ಬರಿ ಮತ್ತು ಸಾಸಿವೆಯಿಂದ ಎಣ್ಣೆ ತೆಗೆಯಬೇಕಿತ್ತು. ಒಬ್ಬರಿಗೆ ದಿನಕ್ಕೆ ಇಂತಿಷ್ಟು ಎಣ್ಣೆ ಎಂದು ನಿಗದಿ ಮಾಡುತಿದ್ದರು. ಕೈ ಕಾಲುಗಳಿಗೆ ಸರಪಳಿಗಳನ್ನು ಕೋಳಗಳನ್ನು ಕಟ್ಟಿ ಇಡುತಿದ್ದರು. ಕಠಿಣ ಶಿಕ್ಷೆಯ ದೊರಗಾದ ಬಟ್ಟೆಯ ಉಡುಪನ್ನು ಧರಿಸಬೇಕಿತ್ತು. ಅದರಿಂದ ಅವರಿಗೆ ಭಯಂಕರ ಶೆಖೆ, ನವೆ, ಉರಿ, ತುರಿಕೆಗಳು ಶುರುವಾಗುತಿದ್ದವು. ಖೈದಿಗಳನ್ನು ಶಿಕ್ಷಿಸುತಿದ್ದ ಎಲ್ಲಾ ಕ್ರಮಗಳನ್ನು ಅಲ್ಲಿ ಪ್ರದರ್ಶನಕಿಟ್ಟಿದ್ದಾರೆ‌. ಮಧ್ಯದ ಗೋಪುರದ ಮೇಲ್ಭಾಗದಿಂದ ಕಾಣುವ ಸುಂದರ ಸಮುದ್ರದ ದೃಶ್ಯ ರಮಣೀಯ. ಜೈಲಿನ ಅಧಿಕಾರಿಗಳು, ಕಾವಲುಗಾರರು ಆ ಗೋಪುರದ ಮೇಲಿನಿಂದ ಎಲ್ಲಾ ಆಗುಹೋಗುಗಳನ್ನು ವೀಕ್ಷಿಸುತಿದ್ದರಂತೆ. ಸ್ವಾತಂತ್ರ್ಯಾ ನಂತರ ಈಗ ಆವರಣದೊಳಗೆ ಐನೂರು ಹಾಸಿಗೆಗಳ, ನಲವತ್ತು ವೈದ್ಯರಿರುವ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಶ್ರೀ ಗೋವಿಂದ ವಲ್ಲಭ ಪಂತ್ ಆಸ್ಪತ್ರೆ. ಎರಡು ಜ್ಯೋತಿಗಳು ಹುತಾತ್ಮರ ಸ್ಮರಣಾರ್ಥ ಹಗಲು ರಾತ್ರಿ ಬೆಳಗುತ್ತಲೇ ಇವೆ. ಅವುಗಳನ್ನು ಉರಿಸಲು ಪ್ರತಿ ತಿಂಗಳಿಗೆ ನಲವತ್ತೆಂಟು ಗ್ಯಾಸ್ ಸಿಲಿಂಡರ್ ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್  ಉಚಿತವಾಗಿ ಪೂರೈಸುತ್ತಿದೆ. ಮದ್ಯಾಹ್ನ ಒಂದೂವರೆಯಿಂದ ಸಾಯಂಕಾಲ ಐದರವರೆಗೆ ಜೈಲಿನ ವೀಕ್ಷಣಾ ಸಮಯ. ಮತ್ತೆ ಸಂಜೆ ಆರರಿಂದ ಏಳೂವರೆಯ ವರೆಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವಿತ್ತು. ನಡುವಿನ ಒಂದು ಗಂಟೆಯ ಸಮಯವನ್ನು ಕಳೆಯಲು ನಮ್ಮನ್ನು ಕೊರ್ಬಿನ್ಸ್ ಬೀಚ್ ಗೆ ಕರೆದುಕೊಂಡು ಹೋದರು. ಪ್ರತಿಯೊಂದು ಕಡೆಯೂ ಟಿಕೇಟ್ ಗಳನ್ನು ಖರೀದಿಸುವುದು, ಸೀಟುಗಳನ್ನು ಕಾಯ್ದಿರಿಸುವುದೆಲ್ಲವನ್ನೂ ಅವರೇ ಮಾಡುತ್ತಾರೆ. ಹಾಗಾಗಿ ಯಾವ ಗಡಿಬಿಡಿಯೂ ನಮಗಿರಲಿಲ್ಲ. ಹಾಯಾಗಿ ಸಮುದ್ರವನ್ನು ನೋಡುತ್ತಾ ಕುಳಿತುಕೊಂಡೆವು. ಸರಿಯಾದ ಸಮಯಕ್ಕೆ ನಮ್ಮನ್ನು ಮತ್ತೆ ಜೈಲಿನ ಬಳಿ ಕೊಂಡೊಯ್ದು ವ್ಯವಸ್ಥಿತ ರೀತಿಯಲ್ಲಿ ನಮ್ಮನ್ನೆಲ್ಲಾ ಆಸನಗಳಲ್ಲಿ ಕೂರಿಸಲಾಯಿತು. ವಾರದಲ್ಲಿ ನಾಲ್ಕು ದಿನ ಈ ಪ್ರದರ್ಶನ ಹಿಂದಿ ಇಂಗ್ಲೀಷ್ ಎರಡೂ ಭಾಷೆಗಳಲ್ಲಿರುತ್ತದೆ. ಕಾರ್ಯಕ್ರಮ ಶುರುವಾಗುತಿದ್ದಂತೆ ಅಲ್ಲಿದ್ದ ಪುರಾತನ ಅರಳಿ ಮರ ಮಾತನಾಡಲು ತೊಡಗಿತು. ( ಮುಂದುವರೆಯುವುದು..) **************************** ಶೀಲಾ ಭಂಡಾರ್ಕರ್. ಗೃಹಿಣಿ, ಹಲವಾರು ಹವ್ಯಾಸಗಳಲ್ಲಿ ಬರವಣಿಗೆಯೂ ಒಂದು. ಅನೇಕ ಕವನಗಳು, ಲಲಿತ ಪ್ರಬಂಧಗಳು, ಪೌರಾಣಿಕ ಪಾತ್ರಗಳ ಸ್ವಗತಗಳನ್ನು ಬರೆದಿದ್ದು.ತಪ್ತ ಮೈಥಿಲಿ, ರಾಮಾಯಣದ ಊರ್ಮಿಳೆಯ ಪಾತ್ರದ ಕಥನವು ಎಚ್ಚೆಸ್ಕೆಯವರ ನೂರರ ಸಂಭ್ರಮದಲ್ಲಿ ಬಿಡುಗಡೆಯಾಗಿರುತ್ತದೆ.

Read Post »

ಕಾವ್ಯಯಾನ

ಹೊಸವರುಷದ ಸಂಜೆ

ಕವಿತೆ ಹೊಸವರುಷದ ಸಂಜೆ ವೈ.ಎಂ.ಯಾಕೊಳ್ಳಿ ಆಡಿ ಬೆಳೆದ ಹೊಲತಿಂದ ಮುಟಿಗೆ ಉಂಡಿಕಾದ ದನ,ಹಿಂಡಿ ಕಾಸದೆ ಕುಡಿದ ಹಾಲುಕಳೆದ ಏಸೋ ಕಂಟಿ ಮರೆಯ ನೆನಪುಗಳುಆಗಾಗ ಕಾಡಿಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು ಜೋಳದ ಸಿಹಿತೆನಿ ತಿಂದ ಗಿಡಗಡಲೆಸುಟ್ಟ ಸೆಂಗಾ…ಒಂದೇ ಎರಡೇನೆನಪುಗಳ ಬೋರ್ಗರೆತಕಾಟಮಳ್ಳೇ ಕಪಾಟಮಳ್ಳೆಗುರ್ಜಿ ಆಟಗಳ ಗುಂಗುಕಿವಿಯಲ್ಲಿ ಗುಣುಗುಣಿಸಿ ಈಗಯಾವ ಚಾನಲ್ಕಿನ ಬಟನ್ನು ಒತ್ತಿದರೂಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿಹಿಡಿಯಲೆಳಸಿದ ಆದ ಮಂಡಿಗಾಯಕ್ಕೆಯಾವುದೊ ರಸದ ಎಲೆಯ ಹಿಂಡಿದ್ದುಪಕ್ಕದ ಬದುವಿನ ಎಳೆಯ ಸೆರಗುಕಿಸಕ್ಕನೆ ನಕ್ಕಿದ್ದುನೆನೆದುಜೀವ ರೋಮಾಂಚನಗೊಳ್ಳುತ್ತದೆ ಎಲ್ಲಿ ಹೋದಾವೊ ಗೆಳೆಯಾಕಾಡಿದ ಕವಿಯ ಸಾಲಿನ ಗುಂಗುಕಣ್ಣಿಗೆ ಕುಕ್ಕುವ ಬಣ್ಣಬಣ್ಣದಮಂದಬೆಳಕಿನ ನಡುವೆನೆನಪುಗಳ ಹಗೆಯೊಳಗೆಅನಂತ ದೀಪ ಮಿಣಕ್ ಮಿಣಕ್ಉರಿದು ಹಂಗಿಸುತ್ತದೆ ದಾರಿ ಕಾಣದ ನಾನು ಬಗೆಬಗೆಯ ಬಣ್ಣದದ್ರವಗಳಲಿತೇಲುವವರ ನಡುವೆಮೂಲೆ ಸೇರುತ್ತೇನೆಜೀವಯಾನದ ಮತ್ತೊಂದು ವರುಷಕಡಿತಗೊಂಡದ್ದಕ್ಕೆವಿಷಾದಿಸುತ್ತ *********************************

ಹೊಸವರುಷದ ಸಂಜೆ Read Post »

ಪುಸ್ತಕ ಸಂಗಾತಿ

ಕಾವ್ಯವೆಂಬ ಕಾವು ಆರದ ಮಗ್ಗಲು

ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. ಬೀಜ ಮೊಳೆತು ದಳಗಳಾಗಿ ಅರಳಿ,ಹಣ್ಣಾಗಿ ಮಾಗುವ ಈ ವಿಕಸನದ ಕ್ರಿಯೆ ಜೀವಂತ. ಭವದಿಂದ ಅನುಭವ, ಅನುಭವದಿಂದ ಅನುಭಾವ. ಈ ಗುಟ್ಟು ಕವಿತೆಯನ್ನು ಒಳಗೊಳಗೇ ಮಾಗಿಸುತ್ತದೆ. ತೇಜಾವತಿಯವರ ಕವಿತೆಗಳಲ್ಲಿ ಹೀಗೆ ಹಿಗ್ಗುವ ಮಹತ್ವಾಕಾಂಕ್ಷೆಯಿದೆ. ಆ ದಾರಿಯಲ್ಲಿ ಅವರ ಹಸಿಹೆಜ್ಜೆಗಳು ಮೂಡುತ್ತಿವೆ. ಕವಿತೆ ಹದಗೊಂಡ ತನ್ನೊಳಗನ್ನು ಕಾಣಿಸಲು ಭಾಷೆಯು ಸೂಕ್ಷ್ಮಗೊಳ್ಳಬೇಕು. ಕಣ್ಣಿನಾಚೆಯ ಸತ್ಯವನ್ನು ಕವಿಯು ಕಾಣಲು ಪ್ರಜ್ಞೆಯು ಸೂಕ್ಷ್ಮಗೊಳ್ಳಬೇಕು. ಇಂಥ ಸೂಕ್ಷ್ಮತೆಯಿಂದ ಕಂಪಿಸುವ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ಕವಿ ತನ್ನ ಪ್ರಜ್ಞೆಯನ್ನು ಬೆಳಕಾಗಿಸಿ ಕತ್ತಲನ್ನು, ದುಃಖವನ್ನು ಸದಾ ದಾಟಲು ಪ್ರಯತ್ನಿಸುತ್ತಿರುತ್ತಾಳೆ/ತ್ತಾನೆ. ಅಂಥ ಬೆಳಕಿನ ಕಾವು ಆರದಂತೆ ಕಾಪಿಟ್ಟುಕೊಳ್ಳುವ ನಿಗಿನಿಗಿ ಹಂಬಲವು ಇಲ್ಲಿನ ಕವಿತೆಗಳನ್ನು ಸದಾ ಎಚ್ಚರದಲ್ಲಿ ಇರಿಸಿದೆ. ಸುತ್ತುವರಿದ ಸಮಾಜದ ಚೌಕಟ್ಟುಗಳು, ತೋರಿಕೆಯ ಬದುಕಿನ ಬಂಧನದಾಚೆಗೆ ತೂರಿಬರಲು ತಪಿಸುವ ಆರ್ದ್ರ ದನಿಯೊಂದು ಇಲ್ಲಿ ನಿನದಿಸುತ್ತದೆ. ತೇಜಾವತಿಯವರ ಕವಿತೆಗಳು ಸ್ಮೃತಿ, ಎಚ್ಚರ ಹಾಗೂ ಇದನ್ನು ಮೀರಿದ ಇನ್ನೇನನ್ನೋ ಹಿಡಿಯುವ ಸನ್ನಾಹದಲ್ಲಿ ಬೆರಗು ಮೂಡಿಸುತ್ತವೆ. ಚಲಿಸುವ ಕಾಲದ ಬಿಂಬಗಳನ್ನು ರೂಪಕಗಳಲ್ಲಿ ಸೆರೆಹಿಡಿಯಲು ಹವಣಿಸುತ್ತಾರೆ. “ಊರುಗಳೇ ತಲೆದಿಂಬಾದವು” ಎಂಬ ಕವಿತೆ ಇಂಥ ಬೆರಗಲ್ಲಿ ಹುಟ್ಟಿದ್ದು. ಪ್ರೀತಿ -ಸ್ನೇಹಗಳ ಸೆಳೆತದಲ್ಲಿ ಹಿಗ್ಗುತ್ತ ಹರಿಯುವ ಬದುಕಲ್ಲಿ ಅದನ್ನು ನಿರ್ಬಂಧಿಸುವ ವರ್ತಮಾನದ ಸೂಕ್ಷ್ಮತೆಯನ್ನು ತೇಜಾವತಿಯವರ ಕವಿತೆ ಪ್ರಶ್ನಿಸುತ್ತ ಪ್ರತಿರೋಧಿಸುತ್ತ ಹರಿಯುತ್ತವೆ. ಬೀಸುವ ಗಾಳಿ, ಹರಿಯುವ ನದಿ, ಕೊರೆಯುವ ಹಿಮಗಲ್ಲಿಗಿಲ್ಲದ ಧರ್ಮದ ಹಂಗು ನಮಗೆಲ್ಲ ಯಾಕೆ? ಎಂದು ಆರ್ತವಾಗಿ ಕೇಳುತ್ತಾರೆ. ಮನುಷ್ಯನ ಪ್ರಜ್ಞೆಯನ್ನು ಪ್ರಕೃತಿಯ ಅನಿರ್ಬಂಧಿತ ಪ್ರಜ್ಞೆಯಲ್ಲಿ ಕರಗಿಸುವ ನುಡಿಗಳಿಂದ ಕವಿತೆ ಒಳಗಿನ ಸ್ವಾತಂತ್ರ್ಯದ ಝರಿಯನ್ನು ಶೋಧಿಸಿಕೊಳ್ಳುತ್ತದೆ. ಘೋಷಣೆಗಿಳಿಯದೇ, ಕಾದಾಡದೇ ಎಲ್ಲವನ್ನೂ ಮೀರುವ ಸಂಯಮದ ದನಿಯೇ ಇಲ್ಲಿ ಕಸುವುಗೊಂಡಿದೆ. ಸುತ್ತಲಿನ ದಿಗ್ಬಂಧನಗಳನ್ನು ಕಳಚಿ ನಿರಾಳವಾಗುವ ದಾರಿಗಳನ್ನು ಹುಡುಕುವ ಮಾಧ್ಯಮವೂ ಇಲ್ಲಿ ಕವಿತೆಯೇ ಆಗಿದೆ. ಒಂದು ದಿನ ಬೀಗ ಹಾಕಿಕೊಂಡಿದ್ದ ಬಾಯಿಗೆ ನಾಲಿಗೆ ಬಂದಿತು ಒಳಗಿಟ್ಟುಕೊಂಡಿದ್ದ ಕೆಂಡ ದುಃಖದ ಮಡುವಲ್ಲಿ  ಕರಗಿಹೋಯಿತು.. (ನೀರ ಮೇಲಿನ ಪಾದ) ತೇಜಾವತಿಯವರ ಕವಿತೆಯಲ್ಲಿರುವ ಬೆಳಕಿನ ಹಂಬಲ, ಆಶಾವಾದ, ಭವಿಷ್ಯದ ಕುರಿತ ಕನಸುಗಳು…. ಇವೆಲ್ಲ ಕತ್ತಲ ಗರ್ಭದಲ್ಲಿಯೇ ಬೆಳಕಿನ ಬೀಜಗಳನ್ನು ಊರುತ್ತವೆ. ಅದರ ಅಪಾರ ಸಾಧ್ಯತೆಗಳನ್ನು ಕನಸುತ್ತವೆ. ಕಾವ್ಯವು ಕಾವು ಆರದ ಮಗ್ಗಲಾಗಿ ಅವರಿಗೆ ಕಾಣಿಸುವುದೇ ಚೇತೋಹಾರಿ. ಬಾ… ಭವಿಷ್ಯದ ನಕ್ಷತ್ರಗಳಾಗೋಣ ಕಾವು ಆರದ ಮಗ್ಗಲುಗಳು ಎಡಬಿಡದೆ ಕಾಡಿಸುತ್ತವೆ ನಿನ್ನನ್ನೇ… ಬದುಕಿನ ಎಲ್ಲ ಮರ್ಮರಗಳಿಗೆ ಕಿವಿಯಾಗುತ್ತಲೇ ದಿವ್ಯವಾದುದೊಂದು ನಮ್ಮನ್ನು ಕಾಡದೇ ಹೋದರೆ, ನಮ್ಮ ಕನಸುಗಳನ್ನು ಹಸಿಯಾಗಿ ಉಳಿಸದೇ ಹೋದರೆ ಕಾವ್ಯ ಹಳಹಳಿಕೆಯಾಗುತ್ತದೆ. ತೇಜಾವತಿಯವರ ಕಾವ್ಯ ಜೀವಂತವಾಗಿರುವುದೇ ಅದರ ಚಲಿಸುವ ಚೈತನ್ಯದಿಂದ ಹಾಗೂ ಸದಾ ಹಿಗ್ಗುವ ಹಂಬಲದಿಂದ. ****************************************** ಡಾ. ಗೀತಾ ವಸಂತ

ಕಾವ್ಯವೆಂಬ ಕಾವು ಆರದ ಮಗ್ಗಲು Read Post »

You cannot copy content of this page

Scroll to Top