ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಇಳಿ ವಯಸಿನ ಒಡನಾಡಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

Person Inside the Tunnel

ವಯಸ್ಸು ಪಶ್ಚಿಮದತ್ತ
ಹೊರಳುತ್ತಾ ಸಾಗಿದಂತೆ
ಸಂಜೆ ಮಬ್ಬುಗತ್ತಲು ಇದ್ದಕ್ಕಿದ್ದಂತೆ
ನಸುನಸು ಅಷ್ಟೇ ಆವರಿಸತೊಡಗಿ
ನನ್ನ ಕುಸಿಯುವಿಕೆಯ ಗೌಪ್ಯ
ಆರಂಭದ ಅರಿವು ಮನನ
ನನಗಾಗ
ಹಾಗೂ ಆ ದಿನದ ಅವಸಾನ…!

ಗೆಳೆಯರು ಕೂಡ ಈಗಿಲ್ಲ ನನ್ನ
ಅಕ್ಕಪಕ್ಕ
ಹೋಗಿದ್ದಾಗಿದೆ ಕೆಲವರು
ಬಹುದೂರ
ಹಿಂದಿರುಗಿ ಬರಲೂ ಈಗ
ಶಕ್ತಿಯಿರದವರ ಹಾಗೆ
ಸ್ವರ್ಗದಲ್ಲಿ ಇನ್ನೂ ಹಲವರು
ನೆಮ್ಮದಿಯಲಿ ತಳ ಊರಿದ್ದೂ ಆಗಿದೆ…

ಮೊಮ್ಮಕ್ಕಳಿಗೆ ಎಂದಿನ ಹಾಗೆ
ತಮ್ಮ ಒಡನಾಡಿಗಳು ಹಾಗೂ
ವಿದ್ಯಾರ್ಜನೆ ಶಾಲೆಯ ಖುಷಿ
ಮತ್ತು ಮಕ್ಕಳು
(ಈಗ ಸಮರ್ಥವಾಗಿ ಬೆಳೆದವರು)
ನಾನವರ ವಯಸ್ಸಿನಲಿದ್ದ ಹಾಗೆಯೇ
ತಂತಮ್ಮ ಗಮ್ಯ ಸೌಧ ನಿರ್ಮಾಣದ ಯೋಜನೆಗಳಲಿ ಗಾಢ
ಮತ್ತು ತಮ್ಮದೇ ಸಖರ ಗುಂಪಿನಲಿ
ಸಹಜ ಬೆರೆತು ಹೋಗಿಹರು…
ಇನ್ನು ನಂಟರು
ಹಿಂದಿನ ಹಾಗೆಯೇ
ಇಂದು ಮುಂದೆಂದೆಂದೂ
ನಂಟರು – ಅಷ್ಟೆ
ಬೆಲೆ ಬಾಳುವವರಲ್ಲ
ಬೆಲೆಗೆ ಅರ್ಹರೂ ಅಲ್ಲ…!

ಕೊನೆಯಲ್ಲಿ
ಅಂದಾಜು ದಶಕದಷ್ಟು ಕಿರಿಯ
ವಯಸಿನ ಮಡದಿ
ಇಳಿವಯಸಿನ ನನ್ನ ಬೇನೆಯ ಬಗ್ಗೆ
ಎಂದಿನ ಹಾಗೆ ಅಪಾರ ಅನಾಸಕ್ತಳು
ಅಥವ ಅರಿವೇ ಇಲ್ಲದವಳು
ಹಾಗೂ ತಾನೇ ಮೈಮೇಲೆ
ಅಡಕಿಕೊಂಡ ಎಡೆಬಿಡದ ಮನೆ
ಮತ್ತು ಊಳಿಗದಲಿ ಮಗ್ನ…
ನಸೀಬಿಗೆ ಇನ್ನೂ ಸುದ್ದ
ಅವಳ ಆರೋಗ್ಯ!
ತರುವಾಯ ತನ್ನದೇ ಅಂಥದೊಂದು
ಸಮಯ
ವಯಸ್ಸಿನ ಜೊತೆಗೇ ಅಡರದೆ
ಇರದೆ…ಬಹುಶಃ!
ಈ ಬದುಕು ಯಾರನ್ನು ತಾನೆ
ಬಿಟ್ಟಿದೆ ಹೇಳಿ ಹಾಗೇ ಸುಮ್ಮನೆ…

.

ಇಷ್ಟಾದರೂ
ಒಬ್ಬಂಟಿ ಬದುಕು ನನ್ನ
ನನ್ನೊಳಗಿನ ನರನಾಡಿಗಳನ್ನ
ಕೊಂಚ ಕೂಡ ನುಚ್ಚುಗುಟ್ಟಲಿಲ್ಲ
ಒಂದೇ ಒಂದು ಘಳಿಗೆ…
ಮತ್ತು ನನಗೆ ಒಡನಾಡಿಗಳು
ಅಸಂಖ್ಯಾತ ಈಗ ಯಾವಾಗಲು…!
ನನ್ನ ಭುಜದ ಮೇಲೀಗ
ಮೊಮ್ಮಕ್ಕಳ ಸವಾರಿಯಿಲ್ಲ ನಿಜ
ಸೊರಗಿ ಬಾಗಿದ ನನ್ನ ಭುಜವೀಗ
ರಾಜಗಾಂಭೀರ್ಯದ ಹೆಮ್ಮೆಯಲಿ
ಅರೆವ ಸದ್ದಿನ ಸ್ಪಾಂಡಿಲಿಟಿಕ್
ಕತ್ತನ್ನೆ ಹೊತ್ತು ಮೆರೆದಿದೆ
ಮೊಮ್ಮಕ್ಕಳ ಬದಲಿಗೆ…
ದೇಹದೆಲ್ಲ ಕಡೆ ಅಂದು
ಬೆಳೆವ ಮಕ್ಕಳ ಹೊತ್ತು ತಿರುಗಿದ್ದು
ಇದೀಗ ಆ ಮಂಡಿ ಸೊಂಟ ಮತ್ತು
ಇತರ ಆಸ್ಟಿಯೋ ಆರ್ಥ್ರಿಟಿಕ್
ಕೀಲುಗಳು ಸಮರ್ಪಣೆಯಲಿ
ಹೊತ್ತು ನಡೆದಿವೆ ನನ್ನ
ಸೇವೆಯ ಹಿಗ್ಗಿನಲಿ…
ದಶಕಗಳಷ್ಟು ಪ್ರಾಚೀನ ರುಜಿನಗಳು
ಶಿಖರದ ತುತ್ತತುದಿಯಲೆ ಎಲ್ಲ
ರಕ್ತದೊತ್ತಡ ಸಕ್ಕರೆ ಹಾಗೂ ಉಳಿದೆಲ್ಲ…
ಒಡನಾಟ ಅಂದರೆ ಇದಲ್ಲದೆ ಇನ್ನೇನಿದೆ…!

ಮತ್ತು ಈಗ ಇಳಿವಯಸು
ಅಂದರೆ ವ್ಯವಕಲನದ ವಯಸು
ಖರ್ಚಿನ ವಯಸು…
ಇಳಿವಯಸು ಅಪರೂಪಕೂ
ಖುಷಿಯ ವಯಸಲ್ಲ…

ಬೆಳಕು ಮುಳುಗಿದೆ
ಕ್ಷಿತಿಜ ಹೀರಿ ಆಪೋಶಿಸಿದೆ
ಇದೀಗ ಪಶ್ಚಿಮ ಕಪ್ಪಾಗಿದೆ
ಮತ್ತು ದಿನವು ಇನ್ನೇನು
ಸಾಯುವುದರಲ್ಲಿದೆ
ನಾನೀಗ ವೃದ್ಧ
ಮತ್ತು ನನ್ನ ಕಾಲ ಇನ್ನೇನು
ಮುಗಿಯಿತು…

***************************************

About The Author

8 thoughts on “ಇಳಿ ವಯಸಿನ ಒಡನಾಡಿ”

  1. ವಿಶಾಲಾ ಆರಾಧ್ಯ

    ತುಂಬಾ ಚೆನ್ನಾಗಿದೆ ಇಳಿವಯಸ್ಸಿನ ಒಡನಾಡಿ . ಎಲ್ಲರ ಬದುಕಲಿ ಬಂದೇ ಬರುವ ಕಾಲವಿದು.

    1. Dr. Arkalgud Neelakanta Murthy

      ವಿಶಾಲಾ ಆರಾಧ್ಯ ಅವರ ಅನಿಸಿಕೆಗೆ ಬಹಳ ಧನ್ಯವಾದಗಳು

  2. Ili vayassinalli bedavendru nuggi baruva novina sankatagalu ondadamelondaranthi baadisuva chithrana apoorvavagide danyavadagalu

  3. ರಮೇಶ್ ಎ. ಎಂ.

    ಇಳಿ ವಯಸ್ಸಿನ ಸಂಕಷ್ಟಗಳನ್ನು ಬಹಳ ಚನ್ನಾಗಿ ಈ ಕವಿತೆಯಲ್ಲಿ ಬಣ್ಣಿಸಿದ್ದೀರಿ. ಅಭಿನಂದನೆಗಳು ನೀಲಣ್ಣ

  4. ಸುಜಾತಾ ಲಕ್ಮನೆ

    ಬದುಕಿನ ಇಳಿಸಂಜೆಯ ಮುಖದ ಅನಾವರಣ!! ಓದುತ್ತಾ ಹೋದಂತೆಲ್ಲ ಹೊಟ್ಟೆಯಲ್ಲಿ ತೌಡು ಕುಟ್ಟಿದ ಸಂಕಟ..ನಮ್ಮ ತಂದೆಗೂ ಹೀಗೇ ಎನಿಸಿತ್ತಾ ಎನಿಸುವಷ್ಟು..!! ಮಾರ್ಮಿಕ ಕವಿತೆ..

    1. ವೃದ್ಧಾಪ್ಯದ ಹಲುಬುಗಳನ್ನು ನಾವೇ ಅನುಭವಿಸಿದಂತೆ ಇವೆ ಅಂಕಲ್. ನಮಗೆ ಒಂದು experience ಕೊಟ್ಟಿರುವಿರಿ

  5. Dr. Arkalgud Neelakanta Murthy

    ಜಗನ್ನಾಥ್, ಜಯರಾಮ್ ಪ್ರಸನ್ನ ಕುಮಾರ್, ಎ.ಎಂ.ರಮೇಶ್, ಸುಜಾತ ಲಕ್ಮನೆ ಹಾಗೂ ನಿಖಿತಾ ಅವರಿಗೆಲ್ಲ ಅನಂತಾನಂತ ಧನ್ಯವಾದಗಳು.

Leave a Reply

You cannot copy content of this page

Scroll to Top