ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಜ಼ಲ್

ಗಜ಼ಲ್ ಎ . ಹೇಮಗಂಗಾ ‘ನಾನು , ನನ್ನದೆಂ’ದು ಎಷ್ಟು ಬಡಿದಾಡಿದರೂ ಸೇರಲೇಬೇಕು ಗೋರಿಯನ್ನು‘ನಾನೇ ಎಲ್ಲವೆಂ’ದು ಎಷ್ಟು ಸೆಣಸಾಡಿದರೂ ಸೇರಲೇಬೇಕು ಗೋರಿಯನ್ನು ನಿಲ್ಲದೇ ನಡೆದಿಹ ಬಾಳ ನಾಟಕದಿ ನೀನೂ ಬರಿಯ ಪಾತ್ರಧಾರಿಯಷ್ಟೆನಿರ್ಗಮಿಸುವ ಕ್ಷಣದಿ ಇರಬೇಕೆಂದರೂ ಸೇರಲೇಬೇಕು ಗೋರಿಯನ್ನು ಎಲ್ಲರನೂ ತನ್ನೊಳಗೆ ಮಣ್ಣಾಗಿಸುವ ಮಣ್ಣಿಗೆ ಭೇದ ಭಾವವೆಲ್ಲಿದೆಅಂತಕನಿಗೆ ಮಣಿದು ಅರಸನಾದರೂ ಸೇರಲೇಬೇಕು ಗೋರಿಯನ್ನು ಹಣ, ಪ್ರತಿಷ್ಠೆ ಯಾವುದೂ ಬರದು ನಿನ್ನೊಡನೆ ಮಸಣದಿ ಮಲಗಿರಲುಕೋಟೆ ಕಟ್ಟಿ ಅಧಿಕಾರದಿ ಮೆರೆದರೂ ಸೇರಲೇಬೇಕು ಗೋರಿಯನ್ನು ಮೂರು ದಿನದ ಬಾಳಿನಾಟದಿ ಎಲ್ಲಕೂ ಕೊನೆಯೊಂದಿದೆ ಹೇಮಚಿರಂಜೀವಿ ನೀನೆಂದು ಭ್ರಮಿಸಿದರೂ ಸೇರಲೇಬೇಕು ಗೋರಿಯನ್ನು *******************************************

ಗಜ಼ಲ್ Read Post »

ಕಾವ್ಯಯಾನ

ಹೆಜ್ಜೆಗಳ ಸದ್ದು

ಕವಿತೆ ಹೆಜ್ಜೆಗಳ ಸದ್ದು ವೀಣಾ ರಮೇಶ್ ನೀಬರುವ ದಾರಿಯಲಿ ಹೆಜ್ಜೆಗಳ ಸದ್ದುನನ್ನೆದೆಯ ರಂಗಮಂದಿರದಲ್ಲಿಗೆಜ್ಜೆ ಕಾಲ್ಗಳ ಸದ್ದು ಕುಣಿದು ಬಿಡು ಇನ್ನಷ್ಟುನನ್ನ ಭಾವನೆಗಳುಹುಚ್ಚೆದ್ದು ಕುಣಿಯಲಿಸಾಲು ಸಾಲು ಗೆಜ್ಜೆಗಳಲಿಸಾಲು ಸಾಲು ನೆನಪುಗಳು ನೀ ಇಡುವ ಗಗ್ಗರದಲಿಗಿರಕಿಯಾಡುವ ನನ್ನ ಕನಸುಗಳುಗುಂಗುರುಗಳ ನಡುವೆಉಂಗುರ ಅಪ್ಪಿದತುಂಟ ಬೆರಳುಗಳು,ತಪ್ಪಿದ ತಾಳಗಳು ನನ್ನೆದೆಯ ರಂಗ ವೇದಿಕೆಯಲಿನೀ ಬರೆದು ಗೀಚಿದ ಸರಸದಪಿಸುಮಾತುಗಳು ತಪ್ಪು ಹೆಜ್ಜೆಗಳಲಿಕುಣಿಯುತ್ತಿದೆಉನ್ಮಾದ,ಉದ್ವೇಗಗಳುನಾದ, ನೀನಾದಗಳುನೂಪುರದಗಲ್ ಗಲ್ ತಾಳದಲಿನೀ ತರುವ ಹೆಜ್ಜೆಗಳು ****************

ಹೆಜ್ಜೆಗಳ ಸದ್ದು Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-02 ಗೋಪಾಲ ಮೂಲತಃ ಈಶ್ವರಪುರ ಜಿಲ್ಲೆಯ ಅಶೋಕ ನಗರದವನು. ಅವನ ಹೆಂಡತಿ ರಾಧಾ ಕಾರ್ನಾಡಿನವಳು. ‘ಗಜವದನ’ ಬಸ್ಸು ಕಂಪನಿಯಲ್ಲಿ ಹಿರಿಯ ಚಾಲಕರಾಗಿದ್ದ ಸಂಜೀವಣ್ಣನ ಮೂರು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ ಗೋಪಾಲ ಕೊನೆಯವನು. ಸಂಜೀವಣ್ಣ ತಮ್ಮ ಪ್ರಾಮಾಣಿಕ ದುಡಿಮೆಯಲ್ಲಿ ಆಸ್ತಪಾಸ್ತಿಯನ್ನೇನೂ ಮಾಡಿರಲಿಲ್ಲ. ಆದರೆ ಮಕ್ಕಳು ಓದುವಷ್ಟು ವಿದ್ಯೆಯನ್ನೂ, ತನ್ನ ಸಂಸಾರ ಸ್ವತಂತ್ರರಾಗಿರಲೊಂದು ಹಂಚಿನ ಮನೆಯನ್ನೂ ಕಟ್ಟಿಸಿ, ಒಂದಷ್ಟು ಸಾಲಸೋಲ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಸಾಲ ತೀರುವ ಹೊತ್ತಿಗೆ ಹಿರಿಯ ಗಂಡು ಮಕ್ಕಳಿಬ್ಬರ ಮದುವೆಯೂ ನಡೆಯಿತು. ಆದರೆ ಗೋಪಾಲ ಅಪ್ಪ ಅಮ್ಮನ ಮುದ್ದಿನ ಕಣ್ಮಣಿಯಾಗಿದ್ದವನು. ಹಾಗಾಗಿ ಅವನು ಏಳನೆಯ ತರಗತಿಯವರೆಗೆ ಮಾತ್ರವೇ ಓದಿ ಮತ್ತೆ ಯಾರ ಒತ್ತಾಯಕ್ಕೂ ಮಣಿಯದೆ ಶಾಲೆಬಿಟ್ಟು ಉಂಡಾಡಿ ಗುಂಡನಂತೆ ಬೆಳೆಯತೊಡಗಿದ. ಕುಡಿಮೀಸೆ ಚಿಗುರಿ, ಐದಾರು ಮಳೆಗಾಲ ಕಳೆಯುತ್ತಲೇ ಮನೆ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಸೇರಿಕೊಂಡ. ಬಹಳ ಬೇಗನೇ ಆ ಕೆಲಸವನ್ನು ಕಲಿತ. ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಸ್ವತಃ ವಹಿಸಿಕೊಂಡು ದುಡಿಯುತ್ತ ಸಂಪಾದಿಸತೊಡಗಿದ. ತಮ್ಮ ಮಗ ವಿದ್ಯೆಯ ವಿಷಯದಲ್ಲಿ ಹಿಂದೆಬಿದ್ದರೂ ದುಡಿಮೆಯಲ್ಲಿ ಮೆಲುಗೈ ಸಾಧಿಸಿದ ಹಾಗೂ ಅವನು ತನ್ನ ಕೈಕೆಳಗೆ ಹತ್ತಾರು ಮಂದಿಯನ್ನು ದುಡಿಸತೊಡಗಿದ್ದನ್ನು ಕಂಡು ಹೆಮ್ಮೆಪಟ್ಟುಕೊಂಡ ಹೆತ್ತವರು ಅವನಿಗೂ ಮದುವೆ ಮಾಡಲು ಹೊರಟರು. ಹೆಣ್ಣಿನ ಕಡೆಯವರೂ ಗಂಡಿನ ಪ್ರಸ್ತುತ ದುಡಿಮೆಯ ಆಧಾರದ ಮೇಲೆಯೇ ಹೆಣ್ಣು ಕೊಟ್ಟರು. ಅದ್ಧೂರಿಯ ಮದುವೆಯೂ ನಡೆಯಿತು. ಗೋಪಾಲನ ಸಂಗಾತಿಯಾಗಿ ರಾಧಾ ಮನೆಗೆ ಬಂದಳು. ಇಷ್ಟಾಗುವ ಹೊತ್ತಿಗೆ ಸಂಜೀವಣ್ಣನಿಗೂ ವೃದ್ಧಾಪ್ಯ ಸಮೀಪಿಸಿತು. ಚಾಲಕವೃತ್ತಿಯಿಂದ ನಿವೃತ್ತರಾದರು. ಆನಂತರದ ಕೆಲವು ವರ್ಷಗಳ ಕಾಲ ಮಕ್ಕಳೊಂದಿಗೆ ನೆಮ್ಮದಿಯ ಬಾಳು ಕಂಡರಾದರೂ ಕೆಲವು ವರ್ಷ ಸಂಧಿವಾತ, ಸಕ್ಕರೆ ಕಾಯಿಲೆಗಳಿಂದ ನರಳುತ್ತ ತೀರಿಕೊಂಡರು.    ಸಂಜೀವಣ್ಣ ಗತಿಸುವ ಕೆಲವು ತಿಂಗಳ ಹಿಂದಷ್ಟೇ ಅವರ ಎರಡನೆಯ ಮಗ ಕೇಶವ ಮಲೆವೂರಿನಲ್ಲಿ ತನ್ನ ಟೈಲರ್ ಶಾಪಿನ ಪಕ್ಕದಲ್ಲಿ ಖಾಲಿಯಿದ್ದ ಬಾಡಿಗೆ ಮನೆಯನ್ನು ಗೊತ್ತುಪಡಿಸಿ ತನ್ನ ಸಂಸಾರವನ್ನು ಕರೆದುಕೊಂಡು ಹೋಗಿ ನೆಲೆಸಿದ್ದ. ಇನ್ನೊಬ್ಬ ಸಹೋದರ ದಿನೇಶ, ಸೈಕಲ್ ಶಾಪ್ ಹೊಂದಿದ್ದವನು ಬೇರೆ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದ್ದರಿಂದ ಹಿರಿಯ ಮಗ ಮಾಧವನೇ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಅವನು ಅಪ್ಪನಿಂದ ಬಸ್ಸು ಚಾಲನೆ ಕಲಿತಿದ್ದವನು ಬಾಡಿಗೆ ಟೆಂಪೋ ಚಾಲಕನಾಗಿ ದುಡಿಯುತ್ತಿದ್ದ. ಅಪ್ಪನ ನಂತರ ಅವರ ಉದ್ಯೋಗ ಮಾಧವನಿಗೆ ಸಿಕ್ಕಿತು. ಹೊಸ ಬಸ್ಸಿನ ಚಾಲಕನಾಗಿ ದುಡಿಮೆಯಾರಂಭಿಸಿದ. ತಾಯಿಯನ್ನೂ ಅವಳ ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಂಡ. ಹಾಗಾಗಿ ಅವಳು ತೀರಿದ ನಂತರ ಅವಳ ಇಚ್ಛೆಯಂತೆ ಮನೆಯು ಮಾಧವನ ಹೆಸರಿಗೆ ವರ್ಗವಾಯಿತು. ಹೆತ್ತವರ ಮುದ್ದಿನ ಪುತ್ತಳಿಯಂತೆ ಬೆಳೆದಿದ್ದ ಗೋಪಾಲ ಅವರು ಗತಿಸಿದ ನಂತರ ಕೆಲವು ಕಾಲ ಅನಾಥಪ್ರಜ್ಞೆಯಿಂದ ನರಳಿದ. ಆದರೆ ಚೆಲುವೆಯಾದ ಹೆಂಡತಿಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರಾಧಾ ಮತ್ತು ಅಣ್ಣ, ಅತ್ತಿಗೆಯರ ಒಡನಾಟದಿಂದ ಮರಳಿ ಸುಖವಾಗಿ ಸಂಸಾರ ಮಾಡತೊಡಗಿದ. ಆದರೆ ಬರಬರುತ್ತ ಅಣ್ಣನ ಹೆಂಡತಿ ಶ್ಯಾಮಲಾಳಿಗೆ ಮೈದುನನ ಅನ್ಯೋನ್ಯ ದಾಂಪತ್ಯವನ್ನು ಕಂಡು ಮತ್ಸರ ಹುಟ್ಟತೊಡಗಿ, ಕ್ರಮೇಣ ಅವಳ ಅಸಲಿ ಮುಖ ಮುನ್ನೆಲೆಗೆ ಬರಲಾರಂಭಿಸಿತು.    ಅವಳ  ಅಂಥ ನಡವಳಿಕೆಯಲ್ಲಿ ಬೇರೊಂದು ಉದ್ದೇಶವೂ ಅಡಗಿತ್ತು. ‘ಮಾವನನ್ನೂ, ಅತ್ತೆಯನ್ನೂ ತಾವೇ ಗಂಡ ಹೆಂಡತಿ ಕಷ್ಟಪಟ್ಟು ನೋಡಿಕೊಂಡಿದ್ದು. ಅದರ ಫಲವಾಗಿಯೇ ನಮಗೆ ಈ ಮನೆ ದಕ್ಕಿದ್ದು. ಹೀಗಿರುವಾಗ ಇಬ್ಬರು ಮೈದುನರು ಪಿತ್ರಾರ್ಜಿತ ಪಾಲು ಗೀಲು ಅಂತ ತಕರಾರೆತ್ತದೆ ಬೇರೆ ಸಂಸಾರ ಹೂಡಿದ್ದಾರೆ. ಆದರೆ ಈ ಗೋಪಾಲನ ಕುಟುಂಬ ಮಾತ್ರ ತಮಗೂ ಈ ಮನೆಯಲ್ಲಿ ಹಕ್ಕಿದೆ ಎಂಬಂತೆ ಠಿಕಾಣಿ ಹೂಡಿರುವುದು ಎಷ್ಟು ಸರಿ? ಇವರನ್ನು ಹೀಗೆಯೇ ಬಿಟ್ಟರೆ ನಾಳೆ ಅಪ್ಪ ಅಮ್ಮನ ಆಸ್ತಿಯಲ್ಲಿ ತಮಗೂ ಪಾಲಿದೆ. ಅಣ್ಣ, ಅತ್ತಿಗೆ ಹೆತ್ತವರನ್ನು ವಂಚಿಸಿ ಮನೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ!’ ಎಂದು ಇಬ್ಬರೂ ಆಡಿಕೊಂಡರೆ ಅಥವಾ ಪೊಲೀಸರಿಗೆ ದೂರುಕೊಟ್ಟರೆ ನನ್ನ ಸಂಸಾರದ ಗತಿಯೇನಾದೀತು? ಇಲ್ಲ ಇವರನ್ನು ಇಲ್ಲಿರಲು ಬಿಡಬಾರದು. ಆದಷ್ಟು ಬೇಗ ಓಡಿಸಬೇಕು!’ ಎಂಬದು ಅವಳ ದೂರಾಲೋಚನೆಯಾಗಿತ್ತು. ಅಂದಿನಿಂದ ವಿನಾಕಾರಣ ಗೋಪಾಲನನ್ನು ಚುಚ್ಚಿ, ಹೀಯಾಳಿಸಿ ಮಾತಾಡುವುದು, ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಆರಂಭಿಸಿದಳು. ಅವನು ಕೆಲಸಕ್ಕೆ ಹೊರಟು ಹೋದ ಮೇಲೆ ರಾಧಾಳನ್ನು ಹಿಡಿದು ಪೀಡಿಸತೊಡಗಿದಳು. ಅವಳಿಗೆ ವಿಶ್ರಾಂತಿ ಕೊಡದೆ ದುಡಿಸತೊಡಗಿದಳು. ‘ಗತಿಯಿಲ್ಲದವರು. ಸ್ವತಂತ್ರವಾಗಿ ಬದುಕಲು ಯೋಗ್ಯತೆ ಇಲ್ಲದವರು!’ ಎಂಬಂಥ ವ್ಯಂಗ್ಯ, ತುಚ್ಛ ಮಾತುಗಳಿಂದ ಗಂಡ ಹೆಂಡತಿಯ ನೆಮ್ಮದಿಯನ್ನು ಎಷ್ಟು ಸಾಧ್ಯವೋ ಅಷ್ಟು ಬಗೆಯಲ್ಲಿ ಕೆಡಿಸಲಾರಂಭಿಸಿದಳು.    ರಾಧಾ  ಮುಗ್ಧೆ ಮತ್ತು ಸಹನಶೀಲೆ ಹೆಣ್ಣು. ಪತಿಯೇ ಪರದೈವ. ಅವನ ಕುಟುಂಬವೂ ತನಗೆ ಅಷ್ಟೇ ಪೂಜ್ಯವಾದುದು. ಆದ್ದರಿಂದ ತನ್ನಿಂದ ಅವರಿಗೆ ಯಾವುದೇ ರೀತಿಯ ಅಪಚಾರವಾಗದಂತೆ ಅನುಸರಿಸಿಕೊಂಡು ಬಾಳಬೇಕು. ಅದುವೇ ತನಗೂ ತನ್ನ ಕುಟುಂಬಕ್ಕೂ ಶ್ರೇಯಸ್ಸು! ಎಂಬ ತನ್ನಮ್ಮನ ಗುಣ ಸ್ವಭಾವಗಳನ್ನು ತಾನೂ ಮೈಗೂಡಿಸಿಕೊಂಡು ಬಂದಿದ್ದಳು. ಆದ್ದರಿಂದ ಅಕ್ಕ ಅದೇನೇ ಅಂದರೂ ಎಂಥ ಕಿರುಕುಳ ಕೊಟ್ಟರೂ ತುಟಿ ಪಿಟಿಕ್ ಎನ್ನದೆ ಸಹಿಸಿಕೊಳ್ಳುತ್ತಿದ್ದಳೇ ಹೊರತು ಗಂಡನೊಡನೆ ದೂರು ಹೇಳಿ ದುಃಖಿಸುವುದಾಗಲೀ ಬೇರೆ ಮನೆ ಮಾಡುವಂತೆ  ಒತ್ತಾಯಿಸುವುದಾಗಲೀ ಮಾಡಿದವಳಲ್ಲ. ಅಂಥ ಆಲೋಚನೆ ಅವಳಲ್ಲಿ ಕೆಲವು ಬಾರಿ ಸುಳಿದಾಡಿದ್ದೂ ಉಂಟು. ಆದರೆ ತಾನು ದುಡುಕಿ ಹಾಗೇನಾದರೂ ಮಾಡಿಬಿಟ್ಟರೆ ಒಡಹುಟ್ಟಿದವರನ್ನು ಅಗಲಿಸಿದ ಶಾಪ ತನಗೆ ತಟ್ಟುವುದು ಖಚಿತ ಎಂದು ಯೋಚಿಸಿ ಭಯದಿಂದ ಸುಮ್ಮನಾಗುತ್ತಿದ್ದಳು.   ಗೋಪಾಲನಿಗೂ ಅಣ್ಣ ಅತ್ತಿಗೆಯೆಂದರೆ ಬಹಳ ಆತ್ಮೀಯತೆಯಿತ್ತು. ಮದುವೆಯಾಗಿ ಬಂದ ಆರಂಭದಲ್ಲಿ ಅತ್ತಿಗೆ ಅವನನ್ನು ಮಗನಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಹಾಗಾಗಿ ಅವನಿಗೂ ಅವಳೊಡನೆ ಮಧುರ ಬಾಂಧವ್ಯವಿತ್ತು. ಆದರೆ ತನ್ನ ಅಪ್ಪ ಅಮ್ಮ ತೀರಿಕೊಂಡ ಮೇಲೆ ಅವಳಲ್ಲಾದ ಬದಲಾವಣೆ ಅವನನ್ನು ಅಚ್ಚರಿಗೊಳಿಸಿತ್ತು. ಆ ಕುರಿತು ಕೆಲವು ಬಾರಿ ಯೋಚಿಸಿ ತಳಮಳಗೊಂಡಿದ್ದ. ಆದರೆ ಅವಳು ತಮ್ಮನ್ನು ಮನೆಯಿಂದ ತೊಲಗಿಸಲೆಂದೇ ಹಾಗೆಲ್ಲಾ ವರ್ತಿಸುತ್ತಿದ್ದಾಳೆ ಎಂಬ ಸತ್ಯ ಅವನ ಪೆದ್ದು ಮನಸ್ಸಿಗೆ ಹೊಳೆಯಲಿಲ್ಲ. ಆದ್ದರಿಂದ ಅತ್ತಿಗೆ ತನ್ನ ತಲೆ ಕಂಡ ಕೂಡಲೇ ಏನಾದರೊಂದು ಚುಚ್ಚಿ ಮಾತಾಡಿ ನೋಯಿಸುವುದು, ಅಸಡ್ಡೆ ತೋರಿಸುವುದರ ಬಗ್ಗೆ ಅವನು ದಿವ್ಯ ಮೌನ ತಳೆಯುತ್ತಿದ್ದ. ಆದರೆ ರಾಧಾಳಲ್ಲಿ ಈಗೀಗ ಹಿಂದಿನ ಲವಲವಿಕೆಯಿಲ್ಲದೆ, ದಿನೇದಿನೇ ಅವಳು ಸೊರಗುತ್ತಿದ್ದುದನ್ನು ಕಾಣುತ್ತ ಬಂದವನು ಚಿಂತೆಗೊಳಗಾದ. ಆವತ್ತೊಂದು ದಿನ ಬೆಳಿಗ್ಗೆ ಕೆಲಸಗಾರರನ್ನು ಕೆಲಸಕ್ಕೆ ಹಚ್ಚಿ ಬೇಗನೇ ಮನೆಗೆ ಹಿಂದಿರುಗಿದ. ‘ರಾಧಾ, ದೇವಸ್ಥಾನಕ್ಕೆ ಹೋಗದೆ ಕೆಲವು ವಾರಗಳು ಕಳೆದವಲ್ಲ ಮಾರಾಯ್ತೀ. ಇವತ್ತು ಸ್ವಲ್ಪ ಪುರುಸೋತ್ತು ಮಾಡಿಕೊಂಡು ಬಂದಿದ್ದೇನೆ. ನಡೆ ಹೋಗಿ ಬರುವ’ ಎಂದ. ಕೆಲವು ತಿಂಗಳಿನಿಂದ ಹೊರಗೆಲ್ಲೂ ಹೋಗದೆ ಗಂಡನ ಮನೆಯಲ್ಲಿ ಜೀತದಾಳಿನಂತೆ ದುಡಿಯುತ್ತ ಸೋತುಹೋಗಿದ್ದ ರಾಧಾಳಿಗೆ ಗಂಡ ಇಂದು ತನ್ನ ಇಷ್ಟದೇವತೆ ಮಹಾಕಾಳಿಯಮ್ಮನ ಸನ್ನಿಧಿಗೆ ಕರೆದೊಯ್ಯುತ್ತೇನೆಂದುದು ಬಹಳ ಸಂತೋಷವಾಯಿತು. ‘ಆಯ್ತುರೀ, ಈಗಲೇ ಹೊರಟೆ!’ ಎಂದವಳು ತರಾತುರಿಯಲ್ಲಿ ಸ್ನಾನ ಮಾಡಿ ತನ್ನ ಮದುವೆಯಲ್ಲಿ ತವರಿನಿಂದ ಉಡುಗೊರೆ ಬಂದಿದ್ದ ಹೊಸ ಕಾಟನ್ ಸೀರೆಯೊಂದನ್ನು ಉಟ್ಟು ಸರಳವಾಗಿ ಸಿಂಗರಿಸಿಕೊಂಡು ಹೊರಟಳು.     ದೇವಸ್ಥಾನಕ್ಕೆ ಹೋಗಿ ಗಂಡನ ಹೆಸರಿನಲ್ಲಿ ಅಮ್ಮನವರಿಗೆ ಮಂಗಳಾರತಿ ಸೇವೆಯನ್ನು ನೀಡಿ, ಹಣ್ಣುಕಾಯಿ ಮಾಡಿಸಿದಳು. ಗಂಡ ಹೆಂಡತಿ ಇಬ್ಬರೂ ಮಹಾಕಾಳಿಯಮ್ಮನೊಡನೆ ಭಕ್ತಿಯಿಂದ ತಮ್ಮ ಮನೋಭಿಲಾಷೆಗಳನ್ನು ನಿವೇದಿಸಿಕೊಂಡು ಸಾಂಷ್ಟಾಂಗ ನಮಸ್ಕರಿಸಿದ ನಂತರ ಅಮ್ಮನವರಿಂದ ಅಭಯ ದೊರಕಿದಂಥ ಪ್ರಸನ್ನತೆ ಇಬ್ಬರಲ್ಲೂ ಮೂಡಿತು. ಅರ್ಚಕರಿಂದ ಪ್ರಸಾದ ಪಡೆದು ಗರ್ಭಗುಡಿಯೆದುರಿನ ಸಂಪಿಗೆ ವನದೊಳಗೆ ಹೋಗಿ ಕುಳಿತರು. ಗೋಪಾಲನೇ ಮೌನ ಮುರಿದ. ‘ಯಾಕೆ ರಾಧಾ ಏನಾಗಿದೆ ನಿನಗೆ? ಮನೆಯಲ್ಲಿ ನೀನು ಮುಂಚಿನಂತೆ ನಗುನಗುತ್ತ ಓಡಾಡದೆ ಎಷ್ಟು ದಿನಗಳಾದವು? ಹೊಟ್ಟೆಗಾದರೂ ಸರಿಯಾಗಿ ತಿಂತಿಯೋ ಇಲ್ವೋ? ಎಷ್ಟೊಂದು ಸೊರಗಿ ಹೋಗಿದ್ದಿ ನೋಡು. ಹುಷಾರಿಲ್ವಾ ಅಥವಾ ಬೇರೇನಾದರೂ ಚಿಂತೆ ಮಾಡುತ್ತಿದ್ದೀಯಾ, ಏನಾಯ್ತೆಂದು ನನ್ನ ಹತ್ತಿರವಾದರೂ ಹೇಳಬೇಕಲ್ವಾ ನೀನು?’ ಎಂದು ಆಕ್ಷೇಪಿಸಿದ. ರಾಧಾಳಿಗೆ ದುಃಖ ಒತ್ತರಿಸಿ ಬಂತು. ಮುಖವನ್ನು ಬೇರೆಡೆ ತಿರುಗಿಸಿಕೊಂಡು, ‘ಛೇ! ಹಾಗೇನಿಲ್ಲರೀ. ಚೆನ್ನಾಗಿಯೇ ಇದ್ದೇನಲ್ಲ. ನೀವು ಸುಮ್ಮನೆ ಏನೇನೋ ಯೋಚಿಸುತ್ತಿದ್ದೀರಷ್ಟೇ’ ಎಂದು ಬಲವಂತದ ನಗು ತಂದುಕೊಳ್ಳುತ್ತ ಅಂದಳು.    ಗೋಪಾಲ ಅವಳ ಕಣ್ಣುಗಳು ಒದ್ದೆಯಾದುದನ್ನು ನೋಡಿದ. ಅವನ ಮನಸ್ಸು ಹಿಂಡಿತು. ‘ನೋಡು ರಾಧಾ, ನಾವು ದೇವಿಯ ಸನ್ನಿಧಿಯಲ್ಲಿ ಕುಳಿತಿದ್ದೇವೆ. ಸುಳ್ಳು ಹೇಳಬೇಡ. ನಿನ್ನ ಕಣ್ಣೀರೇ ಹೇಳುತ್ತದೆ, ನೀನು ನನ್ನೊಡನೆ ಏನನ್ನೋ ಮುಚ್ಚಿಡುತ್ತಿದ್ದಿ ಅಂತ. ಹೆದರ ಬೇಡ. ಸತ್ಯ ಹೇಳು!’ ಎಂದು ಮೃದುವಾಗಿ ಕೇಳಿದ. ರಾಧಾ ಮೊದಲಿಗೆ ವಿಷಯ ಹೇಳಲು ಹಿಂಜರಿದಳು. ಆದರೆ ಗಂಡನ ಒತ್ತಾಯ ಅವಳಿಂದ ಸತ್ಯವನ್ನು ಹೊರಡಿಸಿತು. ಆದ್ದರಿಂದ ಅತ್ತಿಗೆಯ ಚುಚ್ಚು ಮಾತುಗಳನ್ನೂ ಅವಳು ದಿನವಿಡೀ ನೀಡುತ್ತಿದ್ದ ಕಿರುಕುಳವನ್ನೂ ಒಂದೊಂದಾಗಿ ವಿವರಿಸುತ್ತ ಅತ್ತಳು. ಗೋಪಾಲ ಅವಕ್ಕಾದ. ತನ್ನ ಅತ್ತಿಗೆ ತುಂಬಾ ಒಳ್ಳೆಯವಳು. ಹಾಗಾಗಿ ಅವಳೆಂದೂ ತನ್ನ ಹೆಂಡತಿಯನ್ನು ಹಿಂಸಿಸುವ, ಶೋಷಿಸುವ ಮಟ್ಟಕ್ಕಿಳಿಯುವವಳಲ್ಲ ಎಂದೇ ಅವನು ಭಾವಿಸಿದ್ದ. ಆದರೆ ಕೇವಲ ಆರು ಕೋಣೆಯ ಒಂದು ಮನೆಯೂ ಐದು ಸೆಂಟ್ಸಿನಷ್ಟು ಜಾಗವೂ ಯಾವ ಸಂಬಂಧವನ್ನೂ ಹರಿದು ಚಿಂದಿ ಮಾಡಬಲ್ಲದು ಎಂಬ ಸತ್ಯವು ಅವನಿಗೆ ತಿಳಿಯಲೇ ಇಲ್ಲ! ಹಾಗಾಗಿ ಅಣ್ಣ ಅತ್ತಿಗೆಯ ಮೇಲೆ ಅವನಿಗೆ ಜಿಗುಪ್ಸೆ ಹುಟ್ಟಿತು. ‘ನನ್ನನ್ನು ಕ್ಷಮಿಸು ರಾಧಾ. ಇಷ್ಟೆಲ್ಲ ನನ್ನ ಗಮನಕ್ಕೆ ಬರಲೇ ಇಲ್ಲ ನೋಡು! ಅಣ್ಣ, ಅತ್ತಿಗೆಯ ಮೇಲೆ ನಾನು ಇಟ್ಟುಕೊಂಡಿದ್ದ ಕುರುಡು ನಂಬಿಕೆ, ಪ್ರೀತಿಯೇ ಇಷ್ಟಕ್ಕೆಲ್ಲ ಕಾರಣವಾಯಿತೇನೋ. ನನ್ನನ್ನೇ ನಂಬಿ ಬಂದವಳು ನೀನು. ನಿನಗೆ ಸುಖವಿಲ್ಲದ ಆ ಮನೆಯಿನ್ನು ನನಗೂ ಬೇಡ, ಅವರ ಸಂಬಂಧವೂ ಬೇಡ. ನಿನ್ನ ದುಃಖಕ್ಕೆ ಇನ್ನು ಮುಂದೆ ನಾನು ಅವಕಾಶ ಕೊಡುವುದಿಲ್ಲ. ಆದಷ್ಟು ಬೇಗ ಬೇರೆ ಮನೆ ಮಾಡುತ್ತೇನೆ. ಹೊರಟು ಹೋಗುವ’ ಎಂದು ಹೆಂಡತಿಯನ್ನು ಸಂತೈಸಿದ. ಆದರೆ ರಾಧಾಳಿಗೆ ಅವನ ನಿರ್ಧಾರ ಕೇಳಿ ಆತಂಕವಾಯಿತು. ‘ಅಯ್ಯಯ್ಯೋ, ಮನೆ ಬಿಟ್ಟು ಹೋಗುವುದೆಲ್ಲ ಬೇಡ ಮಾರಾಯ್ರೇ. ಯಾವುದೋ ಚಿಂತೆ, ಬೇಸರದಿಂದ ಅವರು ಹಾಗೆಲ್ಲಾ ನಡೆದುಕೊಳ್ಳುತ್ತಿರಬಹುದು. ಅದನ್ನೆಲ್ಲ ನಾವು ತಲೆಗೆ ಹಚ್ಚಿಕೊಳ್ಳದಿದ್ದರಾಯ್ತು. ಇವತ್ತಲ್ಲ ನಾಳೆ ಸರಿ ಹೋದಾರು!’ ಎಂದಳು ದುಗುಡದಿಂದ. ತನ್ನ ಹೆಂಡತಿಯ ಒಳ್ಳೆಯ ಮನಸ್ಸನ್ನು ಕಂಡು ಗೋಪಾಲನಿಗೆ ಹೆಮ್ಮೆಯೆನಿಸಿತು. ಆದರೆ ಅವನು ಪ್ರತ್ಯೇಕ ಸಂಸಾರ ಹೂಡಲು ನಿರ್ಧರಿಸಿಯಾಗಿತ್ತು. ಆದ್ದರಿಂದ, ‘ನಿನ್ನ ಆತಂಕ ನನಗೂ ಅರ್ಥವಾಗುತ್ತದೆ ರಾಧಾ. ಅಂಥದ್ದೇನೂ ಆಗುವುದಿಲ್ಲ. ಏನೇನೋ ಯೋಚಿಸಬೇಡ. ಮನೆಬಿಟ್ಟು ಹೋಗುವಾಗ ಅಣ್ಣ, ಅತ್ತಿಗೆಯೊಂದಿಗೆ ನಿಷ್ಠೂರ ಕಟ್ಟಿಕೊಂಡು ಹೋಗದಿದ್ದರಾಯ್ತು. ಸ್ವಲ್ಪ ಕಾಲವಷ್ಟೆ. ನಂತರ ಅವರಿಗೂ ತಮ್ಮ ತಪ್ಪಿನರಿವಾಗಬಹುದು. ಅಣ್ಣ ಒಳ್ಳೆಯವನು. ಅವನಿಗೆ ಬೇಸರವಾದರೂ ಹೋಗುವುದು ಅನಿವಾರ್ಯ. ಹಳಸಿಹೋದ ಸಂಬಂಧಗಳೊಡನೆ ಬದುಕುವುದು ಬಹಳ ಕಷ್ಟ!’ ಎಂದು ಅವಳನ್ನು ಸಮಾಧಾನಿಸಿದ. ಗಂಡನ ಮಾತು ರಾಧಾಳಿಗೂ ಸರಿಯೆನಿಸಿತು. ಮೌನವಾಗಿ ಸಮ್ಮತಿಸಿದಳು. ಗೋಪಾಲ ಅಂದುಕೊಂಡಂತೆಯೇ ಒಂದು ವಾರದೊಳಗೆ ಅಣ್ಣ, ಅತ್ತಿಗೆಯೊಡನೆ ಗೌರವದಿಂದ ಬೀಳ್ಗೊಂಡ. ತಮ್ಮನ ನಿರ್ಧಾರದಿಂದ ಅಣ್ಣ ಮೊದಲಿಗೆ ಅವಕ್ಕಾದಂತೆ ತೋರಿದ. ಗೋಪಾಲ ಹೊರಟುವ ಹೊತ್ತಲ್ಲಿ ಅವನ ಕಣ್ಣಾಲಿಗಳು ತುಂಬಿದವು. ಆದರೆ ಅವನು ಅವರನ್ನು ತಡೆಯುವ ಮನಸ್ಸು ಮಾಡಲಿಲ್ಲ. ಏಕೆಂದರೆ ಅವನ ಹೆಂಡತಿ ಹಿಂದಿನ ದಿನವೇ, ‘ನೋಡಿ ಮಾರಾಯ್ರೇ, ಅವರು ಬೇರೆ ಹೋಗುವ ವಿಷಯದಲ್ಲಿ ನೀವೇನಾದರೂ ತಕರಾರೆತ್ತಿದಿರೋ ಜಾಗ್ರತೆ! ನಿಮ್ಮ ಈಗಿನ ಗತಿಗೋತ್ರವಿಲ್ಲದ ಸಂಪಾದನೆಯಿಂದ ಮುಂದೆ ನಿಮ್ಮ ಹೆಂಡತಿ ಮಕ್ಕಳು ಗೆರಟೆ ಹಿಡಿದು ಭಿಕ್ಷೆ ಬೇಡಬೇಕಾದೀತು. ಎಚ್ಚರವಿಟ್ಟುಕೊಳ್ಳಿ!’ ಎಂದು ಆ ಸಂಬಂಧದ ಚಿಗುರನ್ನಲ್ಲೇ ಚಿವುಟಿ ಬಿಟ್ಟಿದ್ದಳು. ಆದ್ದರಿಂದ ತಮ್ಮನ ಸಂಸಾರವು ಹೊಸ್ತಿಲು

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನ‌ನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು ಮಾಡಿದವನು ಇವನು ಎಂಬ ಪ್ರತೀತಿಯೂ ಇದೆ. ಕಿನ್ಮರಿ ಬೊಮ್ಮಯ್ಯ ಆಂಧ್ರಪ್ರದಶದ ಪೂದೂರ (ಊಡೂರು) ಎಂಬಲ್ಲಿಯವನು. ಅಕ್ಕಸಾಲಿಗ ವೃತ್ತಿಯನ್ನು ಮಾಡಿ ಬದುಕುತ್ತಿದ್ದವನು. ತನ್ನ ಗುರುವು ವೃತ್ತಿ, ಕಾಯಕ‌ ನಿಷ್ಠೆ, ವೃತ್ತಿಧರ್ಮ ಮತ್ತು ಸತ್ಯಗಳನ್ನು ಅನುಮಾನಿಸಲಾಗಿ ಅಲ್ಲಿಂದ ಹೊರನಡೆದು ಕಲ್ಯಾಣ ಪಟ್ಟಣಕ್ಕೆ ಬಂದು ತನ್ನ ಕಾಯಕದಲ್ಲಿ ನಿರತನಾದವನು.೨ ದಿನವೂ ತನ್ನ ಕರಸ್ಥಳದಲ್ಲಿದ್ದ ಲಿಂಗದ ಮುಂದೆ ಕಿನ್ನರಿ ನುಡಿಸಿ, ಒಂದು ಹೊನ್ನು, ಒಂದು ಹಣ, ಒಂದು ಹಾಗವನ್ನು ಕೇಳುಗರಿಂದ ಪಡೆದು ಅದರಿಂದ ಜಂಗಮಾರ್ಚನೆ, ದಾಸೋಹ ಮಾಡುತ್ತಿದ್ದವನು.೩ ಬಹಳ ಮುಖ್ಯವಾಗಿ ಬಸವಣ್ಣನವರ ಸಮಕಾಲೀನ ಇವನು. ಬಸವಣ್ಣನನ್ನೇ ಬದಲಾಯಿಸಿದ, ಬಸವಣ್ಣನಿಗೆ ತಾಳುವಿಕೆಯನ್ನು ಕಲಿಸಿದ ಶಿವಶರಣನೀತ. ಈತ ತನ್ನ ಕೊನೆಯ ಕಾಲವನ್ನು ಯುದ್ಧಮಾಡುತ್ತಲೇ ಕಳೆದು ಯುದ್ಧದಲ್ಲೇ ಸತ್ತವನು.೪ ‌ಯುದ್ಧವನ್ನು ತಡೆಯಲು ಒಂದು ನದಿಯನ್ನೇ ತಿರುಗಿಸಿದನೆಂಬ ಪ್ರತೀತಿಯೂ ಇವನ ಬಗೆಗಿದೆ.೫  ಇವನ ವಚನಗಳ ಅಂಕಿತ “ಮಹಾಲಿಂಗ ತ್ರಿಪುರಾಂತಕ ದೇವ”. ಇವನ ಒಂದು ವಚನವನ್ನು ಕವಿಚರಿತಕಾರರು ಹೆಸರಿಸಿದ್ದು, ಉಳಿದಂತೆ ಶೂನ್ಯಸಂಪಾದನೆ, ಬಸವಯುಗದ ವಚನ ಸಂಪುಟಗಳಲ್ಲಿ ಬಹಳಷ್ಟು ವಚನಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅವನದೊಂದು ವಚನ ಹೀಗಿದೆ ————————— ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ ಸಿರಿಯ ಸಂತೋಷದ ಕರಿ ತುರಗ ರಥ ಪದಾತಿಯ ನೆರವಿಯ ಸತಿ ಸುತರ ಬಂಧುಗಳ ಸಮೂಹದ ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ ? ಮದನನಿಂ ಚೆಲುವನೆ ? ಸುರಪತಿಯಿಂದ ಸಂಪನ್ನನೆ ? ವಾಮದೇವ ವಶಿಷ್ಠರಿಂದ ಕುಲಜನೆ ? ಅಂತಕನ ದೂತರು ಬಂದು ಕೈಬಿಡಿದೆಳೆದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ ! ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ೬ ಮನುಷ್ಯನ ಸಮಸ್ಯೆ, ಅವಗುಣವೆಂದರೆ ಎಂದರೆ ತನ್ನ ಜನ, ಹುಟ್ಟಿನಿಂದ ಬಂದ ಶ್ರೀಮಂತಿಕೆ ಮತ್ತು ಸುತ್ತಮುತ್ತಲಿನ ಜನ ಸಹಾಯ, ಸಹಕಾರ ಇವುಗಳಿಂದ ಗರ್ವಿತನಾಗುವುದು. ಅದೇ ಹುಟ್ಟಿನಿಂದ ಬೆನ್ನ ಹಿಂದೆಯೇ ಅಂಟಿ ಬಂದಿರುವ ಸಾವಿನ ಬಗೆಗೆ ಯೋಚನೆ ಮಾಡದೆ ಇರುವುದು. ಈ‌ ವಚನವು ಎರಡೂ ಮುಖ್ಯ ನೆಲೆಗಳಾದ ಸಾವು ಮತ್ತು ಬದುಕುಗಳಲ್ಲಿ ಯಾವುದು ದೊಡ್ಡದು ? ಮತ್ತು ಏಕೆ ದೊಡ್ಡದು ? ಎಂಬ ವಿಷಯವಾಗಿ ಮಾತನಾಡುತ್ತದೆ. ಅದರೊಡನೆಯೇ ಎರಡರ ನಡುವೆ ಬದುಕು ಹೇಗಿರಬೇಕೆಂದು ಹೇಳುತ್ತದೆ. ಬಸವಣ್ಣನವರ ಒಂದು ವಚನವೂ ಇದೇ ರೀತಿಯ ಆಯಸ್ಸು ಕಡಿಮೆಯಾಗುವುದರ ಕಡೆಗೆ ಮತ್ತು ಮಾಡಬೇಕಾದ ಕಾರ್ಯದ ಕಡೆಗೆ ಗಮನ ಸೆಳೆಯುತ್ತದೆ.೭ ಆ ವಚನದ ಪ್ರಭಾವವೂ ಬೊಮ್ಮಯ್ಯನ ಪ್ರಕೃತ ವಚನದ ಮೇಲೆ ಆಗಿರಬಹುದು. ಪ್ರಕೃತ ವಚನದ ಬೆಳವಣಿಗೆಯ ಕ್ರಮವನ್ನು ಗಮನಿಸಿ. ದೇಹದ ಹೊರ ರೂಪದಿಂದ ಆರಂಭಗೊಂಡು ಭವವನ್ನು ಮೀರಿ ಗಳಿಸಬೇಕಾದ ಅಮೂರ್ತ ಪದವಿಯ ಆಶಯವನ್ನು ಹೊತ್ತು ಸಾಗುತ್ತಿದೆ. ಆದರೆ ಅದೆಲ್ಲವೂ  ಹೇಳುತ್ತಿರುವುದು ಹರೆಯದ ರೂಪ, ಆ ರೂಪಕ್ಕೆ ಕಾರಣವಾದ ಚೆಲುವು, ಸಿರಿಯಿಂದುಂಟಾಗುವ ಸಂತೋಷ ಕೇಡುಗಳನ್ನೇ ಕುರಿತು ಮೊದಲ ಹಂತದ್ದು. ಅದನ್ನು ಒಪ್ಪಿ ಅಪ್ಪಿದ ನಂತರ ಎರಡನೆಯ ಮೆಟ್ಟಿಲು ಆರಂಭವಾಗುತ್ತದೆ. ಕರಿ, ತುರಗ, ರಥ, ಪದಾತಿಗಳ ಸಮೂಹ ಸೃಷ್ಟಿಸುವ ಪ್ರಭುತ್ವದ ಸ್ಥಿತಿ. ಏಕಕಾಲದಲ್ಲಿ ಹಣ, ಹಣದಿಂದ ಉಂಟಾಗುವ ಅಧಿಕಾರದ‌ ಮದವನ್ನು ಕುರಿತು ನಂತರದ ಸಾಲುಗಳಲ್ಲಿ ಮಾತನಾಡುತ್ತಾನೆ. ಕುಟುಂಬ, ಮಕ್ಕಳು, ಹೆಂಡತಿ, ಕುಲದ ಅಭಿಮಾನ‌ ಇವುಗಳಿಂದ ಮುಕ್ತನಾಗುವುದರ ಕಡೆಗೆ ಗಮನ ಸೆಳೆಯುತ್ತಾನೆ. ಮಾತು ಜಾಣತನದಿಂದ ಕೂಡಿರಬೇಕಾದ ಅಗತ್ಯವಿಲ್ಲ, ವಚನಕಾರರಲ್ಲಿ ಚಮತ್ಕಾರೀ ಮಾತಿಗಿಂತ ಆತ್ಮಸಾಕ್ಷಿಯಿಂದಿದ್ದರೆ ಒಳಿತೆಂಬುದು ಅಭಿಪ್ರಾಯ. ವಚನ ಎಂಬುದೇ ಭಾಷೆಯ ಕೊಡುವುದನ್ನು ತಿಳಿಸುವಾಗ ಅದರ ಮೂಲಕವೇ ಅಮೂರ್ತ ಪದವಿಯ ಆಸೆಯಿಂದ, ಭವದಲ್ಲಿ ಬದುಕುವ ಆಶಯವನ್ನು ಹೊಂದಿದ್ದು ಭವದಿಂದ ಬಿಡುಗಡೆಯಾಗಿಯೂ ಯಶಸ್ಸನ್ನು ಗಳಿಸಬೇಕಾದ ಕಡೆಗೆ ಆಸೆಯನ್ನು ಹೊತ್ತು ಈ ವಚನ ಬಂದಿದೆ. ಮೂರು ವಿಧದ ಸಂಬಂಧಗಳನ್ನು ವಚನದ ರಚನಾ ವಿನ್ಯಾಸದಲ್ಲಿ ಮೆಟ್ಟಿಲುಗಳಾಗಿ ಅನುಕ್ರಮದಲ್ಲಿ ಇಡಲಾಗಿದೆ. ದೇಹದಿಂದ ಮೊದಲ್ಗೊಂಡು ಮತ್ತೆ ದೇಹದ ಕಡೆಗೆ ಬರುವ ಕ್ರಮವದು. ೧. ದೇಹ ಸಂಬಂಧ – ಹರೆಯ, ರೂಪು, ಚೆಲುವು, ನುಡಿ, ಜಾಣತನ, ಸಂತೋಷ ೨. ಸಮೂಹ ಸಂಬಂಧ – ಕರಿ, ತುರಗ, ರಥ, ಪದಾತಿ ಇವುಗಳ ನೆರವಿ ( ಗುಂಪು ) ೩. ಕುಟುಂಬ ಸಂಬಂಧ – ಸತಿ, ಸುತರ, ಬಂಧು, ಸಮೂಹ, ಕುಲದಭಿಮಾನ ಹೀಗೆ ವಚನ ಬೆಳೆಯುತ್ತಾ ಸಾಗುತ್ತದೆ. ನಂತರದಲ್ಲಿ ನೇರವಾಗಿಯೇ ಈ ಮೂರು ಸಂಬಂಧಗಳಿಂದ ಉಂಟಾಗುವ “ಗರ್ವವ ಬಿಡು” ಎನ್ನುತ್ತಾನೆ. ಮೇಲಿನ ಮೂರು ಅನುಕ್ರಮಗಳೊಡನೆ ಸಾಧಿಸುವ ಸಂಬಂಧ ಮತ್ತು ನಂತರದಲ್ಲಿ ಬರುವ ಪುರಾಣಪ್ರತೀಕಗಳ ಜೊತೆಗೆ ಸಾಧಿಸುವ ಸಂಬಂಧವನ್ನೂ ಗಮನಿಸಿ. ಸಾಮಾನ್ಯವಾಗಿಯೇ ಆರಂಭವಾದ ವಚನವು ಕೊನೆಗೆ ಪುರಾಣಪ್ರತೀಕಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಗರ್ವವನ್ನು ಬಿಡುವುದಕ್ಕೆ ಮಾರ್ಗವನ್ನು ಮಾಡುತ್ತದೆ. ರೋಮಜನಿಂದ ಹಿರಿಯನೆ ? (ಹನುಂತನ ರೋಮಗಳಿಂದ ಹುಟ್ಟಿದ ಲಿಂಗಗಳಿಗಿಂತ ದೊಡ್ಡವನೆ ) ಮನ್ಮಥನಿಂತ ಚೆಲುವನಾ ? ಇಂದ್ರನಿಗಿಂತ ಸಂಪತ್ತನ್ನು ಹೊಂದಿರುವವನೇ ? ವಾಮದೇವ ಮತ್ತು ವಶಿಷ್ಠರಿಗಿಂತ ಕುಲದಲ್ಲಿ ದೊಡ್ಡವನಾ ? ಹೀಗೆ ಬೇರೆ ಬೇರೆ ಪುರಾಣ ಕಥೆಗಳನ್ನು ತಂದು ಪ್ರಶ್ನಿಸುತ್ತಾನೆ. ಇಲ್ಲಿಯೂ ಲಿಂಗದಿಂದ/ ದೇವರಿಂದ ಆರಂಭವಾಗಿ ಮನುಷ್ಯರಲ್ಲೇ ಉತ್ತಮರಾದ, ಸಾಧನೆಯಿಂದ ದೊಡ್ಡವರಾದ ಋಷಿಗಳ ಕಡೆಗೆ ಬರುತ್ತದೆ. ಮೇಲೆ ಉನ್ನತವಾಗಿರುವ ದೃಷ್ಟಾಂತಗಳನ್ನೇ ಕೊಡುತ್ತಾನೆ. ಕೊನೆಗೆ ಮೂಲ ಉದ್ದೇಶವಾದ ಪದವಿಯನ್ನು ಗಳಿಸಬೇಕಾದರೆ “ಮಹಾಲಿಂಗ ತ್ರಿಪುರಾಂತಕದೇವರ ಪುಜಿಸಿದರೆ” “ಕೇಡಿಲ್ಲದ ಪದವಿ” ಯ “ಕೊಡುವ” ಎಂಬ ನಂಬಿಕೆಯಲ್ಲಿ,  ಅದೂ “ಕಾಲನ ದೂತರು ಬಂದು ಕೈ ಹಿಡಿದೆಳೆವಾಗ” ಎಂದು “ಪರಮಪದವಿ” ಯ ಕುರಿತು ಮಾತನಾಡಿ “ನುಡಿ ತಡವಲ್ಲ” ಎಂದು ಎಚ್ಚರಿಸುತ್ತಾನೆ. ಈ‌ ವಚನ ರಚನೆಗೆ ಕಾರಣವಾದ ಬಸವಣ್ಣನವರ “ನೆರೆ ಕೆನ್ನೆಗೆ ತೆರೆ ಗಲ್ಲಕೆ” ವಚನವನ್ನು ಇಟ್ಟು ನೋಡಬಹುದು. ಹಾಗೆಯೇ ವಚನ ಚಳಿವಳಿಯ ಅನಂತರದ ದಾಸ ಪರಂಪರೆಯಲ್ಲಿಯೂ ಇದೇ ಅಂಶಗಳು ಸ್ವಲ್ಪ ಮಾರ್ಪಾಟುಗೊಂಡು ಗೇಯತೆಯನ್ನು ಸಾಧಿಸಿಕೊಂಡು ಬಂದಿದೆ. ಪುರಂದರದಾಸರ “ಮಾನವ ಜನ್ಮ ದೊಡ್ಡದು ಇದ / ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂಬ ಪ್ರಖ್ಯಾತ ಕೀರ್ತನೆಯ ರಚನೆಯ ಮೇಲೆ ಪ್ರಭಾವ ಮತ್ತು ಪ್ರೇರಣೆಯಾಗಿದೆ.೮ ಅಂತಕನ ದೂತರು ಬಂದು ಕೈವಿಡಿದೆಳೆವಾಗ ನುಡಿ ತಡವಲ್ಲ ಕೇಳೋ ನರನೆ ! ಎಂದು ಕಿನ್ನರಿ ಬೊಮ್ಮಯ್ಯ ಹೇಳುವ ಈ ಸಾಲುಗಳ ಪಕ್ಕದಲ್ಲಿ ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ ಎಂಬ ಪುರಂದರದಾಸರ ಸಾಲುಗಳನ್ನಿಟ್ಟು ಒಮ್ಮೆ ನೋಡಿ. ಎರಡರ ನಡೆಯೂ ಒಂದೇ ಇದೆ. ವಚನದಲ್ಲಿ “ಅಂತಕನ ದೂತರು ಕೈವಿಡಿದು” ಎಂದಿದ್ದರೆ, ಪುರಂದರರಲ್ಲಿ  “ಕಾಲನ ದೂತರು ಕಾಲ್ ಪಿಡಿದೆಳೆವಾಗ” ಎಂದು ಬಂದಿದೆ. ದಾಸ ಸಾಹಿತ್ಯದಲ್ಲಿ ಲಯದ ಸಾಧ್ಯತೆಯಲ್ಲಿ ಈ ಮಾತುಗಳು ಬಹಳ ಪರಿಣಾಮಕಾರಿ ಯಶಸ್ಸಯನ್ನು ಸಾಧಿಸಿಬಿಡುತ್ತದೆ. “ಕಾಲ” “ಕಾಲ್ ಪಿಡಿದು” ಈ ಪದಗಳು ಸಾವು ಸಂಭವಿಸಿದ ನಂತರ ದೇಹವನ್ನು ಎಳೆದುಕೊಂಡು ಹೊಗುವ ಚಿತ್ರವನ್ನು ಕಣ್ಣಮುಂದೆ ಕಟ್ಟಿ ಬಿಡುತ್ತವೆ. ಬೊಮ್ಮಯ್ಯನ ವಚನದಲ್ಲಿ ಮೂಲ ಆಶಯವು ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ ಎಂದು ಬಂದಿದ್ದರೆ, ಪುರಂದರರಲ್ಲಿ ಎನು ಕಾರಣ ಯದುಪತಿಯ ಮರೆತಿರಿ ಧನಧಾನ್ಯ ಸತಿಸುತರು ಕಾಯುವರೆ ಇನ್ನಾದರೂ ಏಕೋಭಾವದಿ ಭಜಿಸಿರೋ ಚೆನ್ನ ಶ್ರೀ ಪುರಂದರವಿಠಲರಾಯನ ಎಂದು ಬಂದಿದೆ. “ಮರುಳೆ” ಎಂಬ ಬೊಮ್ಮೆಯ್ಯನು ಎದುರಿನವರೊಂದಿಗೆ ಸಾಧಿಸುವ ಸಂಬಂಧದ ವಿಧಾನಕ್ಕೂ, ಪುರಂದರರು “ಹುಚ್ಚಪ್ಪಗಳಿರಾ” ಎನ್ನುವಾಗ ಸಾಧಿಸುವ ಸಂಬಂಧಕ್ಕೂ ಬಹಳ ಹೋಲಿಕೆಯಿದೆ. ಈ ವಿಧಾನಗಳೂ ಇಲ್ಲಿ ಬಹುಮುಖ್ಯವಾದದ್ದು ನೇರವಾಗಿ ಎದುರಿರುವವರನ್ನು “ಮರುಳರು” ಎಂದು ಭಾವಿಸಿರುವುದು ತಿಳಿಯುತ್ತದೆ. ಒಟ್ಟಾರೆಯಾಗಿ ಕಿನ್ನರಿ ಬೊಮ್ಮಯ್ಯನ ವಚನವೊಂದು ಯಾವ ಆಸೆಯನ್ನು ಹೊತ್ತು ಕಾಲವನ್ನು ಕ್ರಮಿಸಿತೋ, ಅನಂತರದ ದಾಸ ಸಾಹಿತ್ಯದ ಕಾಲವೂ ಅದೇ ಆಶಯವನ್ನು ಹೊತ್ತು ನಡೆದಿದೆ. ಈ ಆಶಯಗಳು ಇಂದಿಗೂ ಮನುಷ್ಯ ತನ್ನ ಗರ್ವವನ್ನು ಬಿಟ್ಟು ಸಾಧಿಸಿಕೊಳ್ಳಬೇಕಾದುದರ ಹಂಬಲವನ್ನು ಸಾರುತ್ತಿದೆ. ————————————— ಅಡಿಟಿಪ್ಪಣಿಗಳು ೧. ಶರಣಾರ್ಥಿ ಶರಣಾರ್ಥಿ ಎಲೆ ತಾಯೆ ಎಮ್ಮವ್ವಾ ‌     ಶರಣಾರ್ಥಿ ಶರಣಾರ್ಥಿ ಕರುಣಾಸಾಗರನಿಧಿಯೆ      ದಯಾಮೂರ್ತಿ ಕಾಯೆ ಶರಣಾರ್ಥಿ ಶರಣಾರ್ಥಿ      ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕ ನೀವು ಬಿಡಿಸಿದಿರಿ      ನಿಮ್ಮ ದಯದಿಂದ ನಾನು ಹುಲಿನೆಕ್ಕಿ ಬದುಕಿದೆನು      ಶರಣಾರ್ಥಿ ಶರಣಾರ್ಥಿ ತಾಯೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ್ ಮತ್ತು ಪ್ರೊ. ಜಿ.‌ಎಸ್. ಸಿದ್ದಲಿಂಗಯ್ಯ. ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು. ವ. ಸಂ. ೧೦೨೦. ಪು ೪೪೯ ( ೨೦೦೮ ) ೨. ಶಿವಶರಣ ಕಥಾರತ್ನಕೋಶ. ತ. ಸು. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪುಟ ೮೬ ( ೧೯೬೭ ) ೩. ಪೂರ್ವೋಕ್ತ ೪. ಪೂರ್ವೋಕ್ತ ೫. ಪೂರ್ವೋಕ್ತ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ.‌ ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು. ವ.ಸಂ – ೧೧. ಪು ೧೨೦೪ ( ೨೦೧೬ ) ೭. .ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡುವೋಗದ ಮುನ್ನ       ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ       ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ       ಮುಪ್ಪಿಂದೊಪ್ಪವಳಿಯದ ಮುನ್ನ       ಮೃತ್ಯುಮುಟ್ಡದ ಮುನ್ನ         ಪೂಜಿಸು ನಮ್ಮ ಕೂಡಲಸಂಗಮದೇವನ ವಚನ ಸಾಹಿತ್ಯ ಸಂಗ್ರಹ. ಸಂ. ಸಂ ಶಿ ಭೂಸನೂರು ಮಠ. ವ. ಸಂ ೮೦. ಪು ೪೯ ( ೧೯೬೫ ) ೮. ಮಾನವಜನ್ಮ ದೊಡ್ಡದು ಇದ      ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ ( ಪ )      ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ      ಮಣ್ಣುಮುಕ್ಕಿ ಮರುಳಾಗುವರೆ      ಹೆಣ್ಣುಮಣ್ಣಿಗಾಗಿ ಹರಿಯ ನಾಮಾಮೃತ      ಉಣ್ಣದೆ ಉಪವಾಸ ಇರುವರೆ ಖೋಡಿ ( ೧ )     ಕಾಲನ ದೂತರು ಕಾಲ್ಪಿಡಿದೆಳೆವಾಗ     ತಾಳುತಾಳೆಂದರೆ ತಾಳುವರೆ     ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ     ಸುಳ್ಳಿನ ಸಂಸಾರಸುಳಿಗೆ ಸಿಕ್ಕಲುಬೇಡಿ ( ೨ )     ಏನು ಕಾರಣ ಯದುಪತಿಯ ಮರೆತಿರಿ     ಧನಧಾನ್ಯ ಸತಿಸುತರು ಕಾಯುವರೆ     ಇನ್ನಾದರು ಏಕೋಭಾವದಿ ಭಜಿಸಿರೊ     ಚೆನ್ನ ಶ್ರೀ ಪುರಂದರವಿಠಲರಾಯನ ( ೩ ) ಹರಿದಾಸರ ಜನಪ್ರಿಯ ಹಾಡುಗಳು. ಸಂ. ಡಾ. ಟಿ. ಎಸ್. ನಾಗರತ್ನ ಮತ್ತು ಡಾ. ಮಂದಾಕಿನಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು. ಪು ೨೦೯ ***************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ

Read Post »

You cannot copy content of this page

Scroll to Top