ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಯಾವುದೀ ನಕ್ಷತ್ರ?

ಮಾಲತಿ ಶಶಿಧರ್

ಮಾಲತಿ ಶಶಿಧರ್  ಕಾವ್ಯಗುಚ್ಛ

silhouette photo of person holding flashlight under milk way

ಕವಿಗೆ ಏಕಾಂತ ಸಿಕ್ಕರೆ ಸಾಕು
ಚಂದ್ರ ನೇರವಾಗಿ ಎದೆಗೆ
ನೆಗೆದುಬಿಡುವನು
ನನ್ನ ಏಕಾಂತದ ಅಂಗಳಕೆ
ನಕ್ಷತ್ರವೊಂದು ಜಾರಿ
ಬಿದ್ದಿದೆ
ಇಂದ್ರಲೋಕದ ಸ್ವತ್ತೋ
ಇಲ್ಲ ಚಂದ್ರನ ಅಣುಕಿಸಲು ಬಂತೋ??

ದಾಹದಾಳವ ಅರಿತು
ಎದೆಯ ಬಗೆದು ನೀರು ತೆಗೆದು
ತಣಿಸುತ್ತದೆ
ಮುತ್ತು ರತ್ನಗಳ ಕಣ್ಣಂಚಲ್ಲೆ
ಸುರಿಸುತ್ತದೆ
ಈ ನಕ್ಷತ್ರದ್ದು ಇಲ್ಲೇ ಬಿಡಾರ
ಬಿಡುವ ಹುನ್ನಾರೋ ಇಲ್ಲ
ನನ್ನೇ ಎಳೆದೊಯ್ಯುವ
ತಕರಾರೋ ಕಾಣೆ

ಈ ನಕ್ಷತ್ರ ಅವರಿಬ್ಬರಂತಲ್ಲ
ಒಬ್ಬ ತಿಂಗಳಿಗೊಮ್ಮೆ ಬಂದರೆ
ಇನ್ನೊಬ್ಬ ತಾಸುಗಟ್ಟಲೆ ಹರಟಿ
ಅಲ್ಲೆಲ್ಲೋ ಪಶ್ಚಿಮ ದಿಕ್ಕಿನ
ಗುಡ್ಡದಡಿ ತಲೆ ಮರೆಸಿಕೊಳ್ಳುವ

ನೆಟ್ಟಗೆ ಎದೆಗೆ
ಹೂಡಿದ ಬಾಣ
ಈ ನಕ್ಷತ್ರ
ಜಲದವಶೇಷಗಳ
ಚಿಲುಮೆ ಜಿನುಗುತ್ತದೆ

ಜನ್ಮಾಂತರದ ವಿರಹ, ಕಾತರ
ಕಾದ ವೇದನೆ ಯಾತನೆ
ಕತ್ತಲರೆಕ್ಷಣದಲ್ಲಿ ಓಡಿಸಲು
ಬಂತೇನೋ ಈ ಗಂಡು ನಕ್ಷತ್ರ..

***************************

About The Author

19 thoughts on “ಯಾವುದೀ ನಕ್ಷತ್ರ?”

  1. Nagaraj Harapanahalli

    ಕವಿಯೆ ಅಗಮ್ಯವಾಗಿ ಸಾಗಿ ಬಂದಿದೆ.‌ಕೊನೆಗೆ ಗಂಡು ನಕ್ಷತ್ರ ಎಂದು ಹೇಳಬೇಕಿರಲಿಲ್ಲ.‌ಇಡೀ ಕವಿತೆಯ ಗುಟ್ಟುನ್ನು ಕೊನೆಗೆ ಬಯಲು ಮಾಡಬೇಕೆಂದಿರಲಿಲ್ಲ. ಕವಿತೆ ಪಯಣದಲ್ಲಿ ಅದು ಚೆಂದ ನಡಿಗೆಯಾಗಿ ಬಂದಿತ್ತು.

    ಕವಿತೆ ಚೆಂದವಿದೆ..

  2. ರಘೋತ್ತಮ ಹೊಬ

    ನಕ್ಷತ್ರ ಎಂಬೋ ಗಂಡು
    ಕವನ ಎಂಬ ಹೆಣ್ಣು
    ಇದು ಕಾವ್ಯ ಜಗತ್ತಿನ
    ನಿತ್ಯ ನೂತನ ಸಂಬಂಧ. ಕವಯಿತ್ರಿ ಇದನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಸೂಪರ್

  3. Pradeep Kumar M

    ತುಂಬಾ ಅದ್ಭುತವಾಗಿದೆ ಮೇಡಂ ನಿಮ್ಮಲ್ಲಿ ಒಬ್ಬ ಕವಿಯತ್ರಿ ಇದ್ದಾರೆ ಎಂಬುದು ಎದ್ದು ಕಾಣಿಸುತ್ತದೆ ಪ್ರಯತ್ನವನ್ನು ಸದಾ ಹೀಗೆ ಮುಂದುವರಿಸಿ.

  4. ಕವಿತೆ ಚೆನ್ನಾಗಿದೆ. ಕೊನೆಯಲ್ಲಿ ವಾಚ್ಯ ವಾಗಿದೆ ಎನ್ನುವ ಕೊರತೆ ಇದೆ.

Leave a Reply

You cannot copy content of this page

Scroll to Top