ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅನಾವರಣ

ಸಂಗೀತ ರವಿರಾಜ್

ಬರೋಬ್ಬರಿ ಆರ್ವರ್ಷದಿಂದೀಚೆಗೆ ನೋಡುತ್ತಿದ್ದ ಧಾರಾವಾಹಿ
ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಸುಳಿವು ಸಿಗುತ್ತಿದ್ದಂತೆ
ಹೆಂಗಳೆಯರಿಗೆ ಮುಂಗುರುಳ ಹಿಂದಕ್ಕೆ ನೀವಿಕೊಳ್ಳಲು ಮನಸ್ಸಾಗದ ಚಡಪಡಿಕೆ
ಉರುಳಿದ ವರ್ಷಗಳು ಲೆಕ್ಕಕ್ಕೆ ಇಲ್ಲದಂತೆ
ಉಳಿದ ದಿನಗಳ ಲೆಕ್ಕಾಚಾರದ ಸಂತೆಯಲಿ ಮುಳುಗಿದೆ ಎಣಿಕೆ!

ಕಂತುಗಳ ಕಂತೆ ವರ್ಷಾನುಗಟ್ಟಲೆ ದಾಟಿದರೂ
ಮದುವೆಯಾಗಿ ತಿಂಗಳಿಗಾದ ಮಗುವಿಗಿನ್ನು ನಾಮಕರಣವೆ ಆಗಿಲ್ಲವಲ್ಲ!
ಸೌಪರ್ಣಿಕ ಡೈವೋರ್ಸ್ ಪಡೆದ ಮೇಲೆ
ಮುಂದೇಗೆಂದು ತೋರಿಸದೆ ಹೇಗೆ ಮುಗಿಸಬಲ್ಲರು?
ಇವಳು ಹೇಗೆ ಹೆರಬಲ್ಲಳು ನಾನು ನೋಡುತ್ತೇನೆ
ಎಂದು ಕಿರುಚಾಡುವ ವಿಲನ್ ಗೆ ಶಿಕ್ಷೆಯೆ ಆಗಿಲ್ಲ ,
ಆರ್ವರ್ಷದಿಂದ ಪುನರ್ವಸುವಿಗೆ ಉದ್ಯೋಗವೆ ದಕ್ಕಿಲ್ಲ…
ಇದಕ್ಕೆಲ್ಲ ಇನ್ನೊಂದಷ್ಟು ವರ್ಷ ಇರಲೇಬೇಕಲ್ಲ ?
ಪ್ರತಿದಿನದ ಏಕತಾನತೆಗೆ ಸುಖ ಕೊಡುವ ಕಾಯುವಿಕೆಗಳು …….

ನಟನೆಯಲ್ಲಿ ಸ್ತ್ರೀಯರಿಗೆಲ್ಲ ಏನು ಮನೆಕೆಲಸವೆ ಇರುವುದಿಲ್ಲವಲ್ಲ
ಸದಾ ಸಿಂಗರಿಸಿಕೊಂಡೆ ಇರುವ ಇವರು ಈವರೆಗು ನಮಗೆಲ್ಲ ಸೋಜಿಗ!
ಲೋಕದೆಲ್ಲಾ ಸದ್ಗಹೃಣಿಯರಂತೆ
ನಟನೆ ಮುಗಿದ ಬಳಿಕ ಅವರವರ ಮನೆಯಲ್ಲಿ
ಅವರಿಗೆ ಲೆಕ್ಕವಿಲ್ಲದಷ್ಟು ಕೆಲಸದ ತವಕ
ಸಾಕೆನ್ನುವ ವೃತ್ತಿಯ ನಡುವೆಯು
ಪ್ರತಿಭೆ ಸಂಪಾದನೆಯ ಹಾದಿ.

ನಟನೆಗು ಬದುಕಿಗು ನಂಟೇನಿಲ್ಲ ಎಂಬರಿವಿದ್ದರು
ನಮ್ಮೊಳಗೆ ಪರಾಕಾಯ ಪ್ರವೇಶಿಸಿದ ಪಾತ್ರಗಳಿಗೆ
ಉತ್ತರವಾಗಬೇಕು ಕತೆಗಳು..
ತೆರೆ ಮೇಲೆ ಅಂಕ ಮುಗಿಯುವರೆಗು ಪಯಣ
ಪಥಿಕರು ನಾವೋ ? ಅವರೋ?
ತಿಳಿಯದ ಗೊಂದಲ….


About The Author

Leave a Reply

You cannot copy content of this page

Scroll to Top