ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸರಳತೆಯ ಘನತೆ ನಾನು ಭೇಟಿಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಬನ್ನೂರು ನಿವಾಸಿ ಅದೀಬ್ ಅಖ್ತರ್ ಅವರೂ ಒಬ್ಬರು. ಅದೀಬರ ಲಘು ಬರೆಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಲೇಖನದಲ್ಲಿ ಅವರು ತಾನೊಬ್ಬ ಉರ್ದು ಮಾಧ್ಯಮದ ವಿದ್ಯಾರ್ಥಿಯೆಂದೂ, ನಡುಪ್ರಾಯದಲ್ಲಿ ಕನ್ನಡ ಕಲಿತು ಬರೆಯಲು ಆರಂಭಿಸಿದವನೆಂದೂ ಹೇಳಿಕೊಂಡಿದ್ದರು. ಇದು ಕುತೂಹಲ ಹುಟ್ಟಿಸಿತು. ಅವರೂ ನನ್ನನ್ನು ನೋಡಬಯಸಿ ಪತ್ರ ಬರೆದರು. ಅಂಗಡಿ ಬಿಟ್ಟು ಹೋಗಲು ಸಾಧ್ಯವಾಗದೆ ಇರುವುದರಿಂದ ನಾನೇ ಬರಬೇಕೆಂದು ತಿಳಿಸಿದ್ದರು. ಬನ್ನೂರಿಗೆ ಹೋದೆ. ಅದೀಬರ ವಿಳಾಸ ಬಹಳ ಸುಲಭ- ಬಸ್ಸುನಿಲ್ದಾಣ ಎದುರಿನ ಚಪ್ಪಲಿ ಅಂಗಡಿ. ಕುಟುಂಬಕ್ಕೆ ಇದುವೇ ಆಧಾರ. ನಾನು ಅಂಗಡಿಯಲ್ಲಿದ್ದಷ್ಟು ಹೊತ್ತು ಅಲ್ಲಿಗೆ ಯಾವ ಗಿರಾಕಿಗಳು ಬರಲಿಲ್ಲ. ಹೆಚ್ಚಿನ ಜನ ಮೈಸೂರಿಗೆ ಹೋದಾಗ ಚಪ್ಪಲಿ ಕೊಂಡುಕೊಳ್ಳುತ್ತಾರೆ. ನಿಮ್ಮ ಗಿರಾಕಿಗಳು ಯಾರೆಂದು ಕೇಳಿದೆ. ಶಾಲಾ ಮಕ್ಕಳು ಯೂನಿಫಾರಂ ಜತೆಗೆ ಹಾಕಿಕೊಳ್ಳುವ ಬೂಟುಗಳಿಂದ ಕೊಂಚ ವ್ಯಾಪಾರವಾಗುತ್ತೆ ಎಂದರು. ನನಗೆ ಎದ್ದು ಕಂಡಿದ್ದು ಅವರ ಜತೆ ನಾವು ಮಾತಾಡುವಾಗ ಕರುಬುತ್ತ ತಕರಾರು ಮಾಡುತಿದ್ದ ಬೆಕ್ಕು. ಅದೀಬ್ ಅಂಗಡಿಯಲ್ಲಿ ಮಗನನ್ನು ಕೂರಿಸಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅದೊಂದು ತೀರ ಚಿಕ್ಕಮನೆ. ಕುರ್ಚಿಯಿಲ್ಲದ ಚಿಕ್ಕ ಹಾಲು. ಅಗತ್ಯಕ್ಕಿಂತ ಹೆಚ್ಚಿನ ಪಾತ್ರೆಯಿರದ ಅಡುಗೆಮನೆ. ಮಂಚವಿಲ್ಲದ ಒಂದು ಮಲಗುಕೋಣೆ. ಕಳ್ಳಹೊಕ್ಕ ಮನೆಯಂತಿದ್ದ ಅಲ್ಲಿ ಬೆಲೆಬಾಳುವ ವಸ್ತುಗಳೇ ಇರಲಿಲ್ಲ. ಅದೀಬ್ ಭಾಷಣಕ್ಕೆ ಹೋದಾಗ ಸಭೆಗಳಲ್ಲಿ ಕೊಡುವ ಕಾಣಿಕೆಗಳನ್ನು ದಾರಿಯಲ್ಲಿ ಸಿಗುವ ಯಾರಿಗಾದರೂ ಕೊಟ್ಟುಬರುತ್ತಾರಂತೆ. ಅವರಿಗೊಮ್ಮೆ ಶಾಲೆಯವರು `ಇದನ್ನು ಯಾರಿಗೂ ದಾನ ಕೊಡಬಾರದು; ಸಂಸ್ಥೆಯ ನೆನಪಿಗೆ ಇಟ್ಟುಕೊಳ್ಳಬೇಕು’ ಎಂದು ಕರಾರು ಮಾಡಿ ಶಾಲು ಹೊದೆಸಿದರಂತೆ. ಅದೀಬ್ ಪ್ರಾರ್ಥನೆಯಲ್ಲಿ ಚೆನ್ನಾಗಿ ಭಾವಗೀತೆ ಹಾಡಿದ ಒಬ್ಬ ಹುಡುಗಿಗೆ ಗುಟ್ಟಾಗಿ ಅದನ್ನು ಕೊಟ್ಟರಂತೆ. ಅವರ ಮಡದಿಯ ಮುಖದಲ್ಲಿ ಪ್ರಸನ್ನತೆಯು ಕಾವೇರಿ ತೀರದ ಮಾಗಿದ ಬತ್ತದ ತೆನೆಯ ಗದ್ದೆಗಳಂತೆ ತೊನೆದಾಡುತ್ತಿತ್ತು. ಇದಕ್ಕೆ ಅವರ ಅಸಂಗ್ರಹ ತತ್ವವೂ ಕಾರಣವಿರಬಹುದು ಎನಿಸಿತು. ಕೂಡಲೇ ನನಗೆ ನಮ್ಮ ಮಧ್ಯಮವವರ್ಗದ ಮನೆಗಳು ನೆನಪಾದವು. ಶಾಪಿಂಗ್ ಮಾಡಲು ತ್ರಾಣವಿಲ್ಲದಿದ್ದರೂ ಕೊಳ್ಳುಬಾಕತನದ ಕೆಟ್ಟಹುಚ್ಚು ಈ ವರ್ಗಕ್ಕೆ. ಓಡಾಡಲು ಜಾಗವಿಲ್ಲದಂತೆ ಹಾಲಿನಲ್ಲಿ ಫರ್ನಿಚರು; ಗೊಂಬೆಗಳೂ ಫಲಕಗಳೂ ತುಂಬಿದ ಶೋಕೇಸು, ಟಿವಿ; ಸೀರೆಭರಿತ ವಾರ್ಡ್‍ರೋಬು; ಎರಡು ತಿಂಗಳು ಪುನರಾವರ್ತನೆ ಮಾಡದೆ ಉಡಬಹುದಾದಷ್ಟು ಪ್ಯಾಂಟು-ಶರ್ಟು ಮೆರೆಯುತ್ತಿರುತ್ತವೆ. ಇಷ್ಟಾದರೂ ಪೇಟೆಗೆ ಪ್ರವಾಸ ಹೋದರೆ, ಶಾಪಿಂಗ್ ಚಟ ಜಾಗೃತವಾಗುತ್ತದೆ. ನಾನು ಮದುವೆಯಾದ ಹೊಸತರಲ್ಲಿ ಬಂಧುಗಳ ಮನೆಯಲ್ಲೊಮ್ಮೆ ಊಟಕ್ಕೆ ಕರೆದಾಗ ವಸತಿ ಮಾಡಿದ್ದು ನೆನಪಾಗುತ್ತಿದೆ. ನಮಗೆ ಬಿಟ್ಟುಕೊಟ್ಟಿದ್ದ ಬೆಡ್‍ರೂಮಿನ ಮೂಲೆಯಲ್ಲಿ ಕುರ್ಚಿ ಟೀಪಾಯಿ ಒಟ್ಟಲಾಗಿತ್ತು. ಅವುಗಳ ಮೇಲೆ ಉಡುಗೊರೆ ಪ್ಯಾಕು, ಟೇಬಲ್‍ಫ್ಯಾನು ಹೇರಲಾಗಿತ್ತು. ಅವು ಯಾವುದೇ ಗಳಿಗೆಯಲ್ಲಿ ಕವುಚಿ ಮೈಮೇಲೆ ಬೀಳುವಂತೆ ಕಂಡು ನನಗೆ ನಿದ್ದೆಯೆ ಹತ್ತಲಿಲ್ಲ. ಹೊಸಸೊಸೆಯ ಜತೆ ಬಂದಿದ್ದ ಹೊಸ ಫರ್ನಿಚರುಗಳು ಹಳತನ್ನು ಮೂಲೆಗುಂಪು ಮಾಡಿದ್ದವು. ಹಪಾಪಿತನ, ವರದಕ್ಷಿಣೆಗಳಿಂದ ಬಹುತೇಕರ ಮನೆಗಳು ಗೋಡೌನಾಗಿರುತ್ತವೆ. ಅಗತ್ಯವಿರದಾಗ ಬೇಡ ಎನ್ನುವ ಸಂಯಮ, ಹೆಚ್ಚಿದ್ದಾಗ ಹಂಚಿಕೊಂಡು ಬದುಕುವ ಖುಶಿಯನ್ನೇ ಮಧ್ಯಮವರ್ಗದ ನಾವು ಕಳೆದುಕೊಂಡಿದ್ದೇವೆ. ಮಾರುಕಟ್ಟೆ ನಮ್ಮನ್ನು ಹುಳಗಳನ್ನಾಗಿ ಮಾಡಿಬಿಟ್ಟಿದೆ. ಮಧ್ಯಮವರ್ಗದ ಈ ಕೊಳ್ಳುಬಾಕುತನವು ಮೇಲ್‍ಮಧ್ಯಮ ವರ್ಗದ ವಿಲಾಸಿ ಬದುಕಿನ ಕರುಣಾಜನಕ ಅನುಕರಣೆಯ ಪರಿಣಾಮ. ಮಾರುಕಟ್ಟೆ ಸಂಸ್ಕøತಿಯ ಉಬ್ಬರದ ಈ ದಿನಮಾನದಲ್ಲಿ, ಶಾಪಿಂಗ್ ಸೋಂಕುರೋಗದಂತೆ ಹರಡುತ್ತಿದೆ. ಪರಿಚಿತರೊಬ್ಬರು `ಕೋನ್ ಬನೇಗಾ ಕಡೋಡ್ ಪತಿ’ ಕಾರ್ಯಕ್ರಮಕ್ಕೆ ಬಚನ್ ಹೊಸಹೊಸ ಕೋಟು ಹಾಕಿಕೊಂಡು ಬರುತ್ತಾನಲ್ಲ, ಅವನಲ್ಲಿ ಎಷ್ಟು ಕೋಟುಗಳಿರಬಹುದು ಎಂದು ವಿಸ್ಮಯಪಡುತ್ತಿದ್ದರು. ಆ ನಟನ ದಿರಿಸು ಸ್ಟುಡಿಯೋದ್ದೂ ಇದ್ದೀತು. ಆತ ತನ್ನ ಕೋಟುಗಳನ್ನು ಇಂಗ್ಲೆಂಡಿನಲ್ಲಿ ಹೊಲಿಸುತ್ತಾನೆಂಬ ದಂತಕತೆಯಿದೆ. ಸಿರಿಯಗುಡ್ಡೆಯ ಮೇಲೆ ಕುಳಿತವರಿಗೆ ಇದು ದೊಡ್ಡ ವಿಚಾರವಲ್ಲ. ವ್ಯಂಗ್ಯವೆಂದರೆ, `ಅಮಿತಾಭ’ ಎನ್ನುವುದು ಅಸಂಗ್ರಹತತ್ವ ಪ್ರತಿಪಾದಿಸಿದ ಬುದ್ಧನ ಹೆಸರುಗಳಲ್ಲಿ ಒಂದು. ನಾನಿದ್ದಷ್ಟೂ ಹೊತ್ತು ಅದೀಬ್ ಬುದ್ಧನ ಬಗ್ಗೆಯೇ ಮಾತಾಡಿದರು. ನಾನು ಹೊರಡುವಾಗ ಭಿಕ್ಷುವೊಬ್ಬರು ಬರೆದ ಚಿಕ್ಕ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟರು. `ಮನುಷ್ಯನ ವೇದನೆಗೆ ಕಾರಣ ಎಲ್ಲಿದೆ?’ ಎಂಬುದನ್ನು ವಿಶ್ಲೇಷಿಸುವ ಬೌದ್ಧ ಚಿಂತನೆಯ ಪುಸ್ತಿಕೆಯದು. ಹತ್ತಿಪ್ಪತ್ತು ಪುಸ್ತಕಗಳಿದ್ದ ಅವರ ಕಪಾಟನ್ನು ಕುತೂಹಲದಿಂದ ನೋಡುತ್ತ ಒಂದು ಪುಸ್ತಕ ತೆರೆದು ಓದಲಾರಂಭಿಸಿದೆ. ಅದನ್ನು ಕಂಡ ಅದೀಬ್ `ನೀವು ಓದಿಲ್ಲವಾದರೆ ತೆಗೆದುಕೊಂಡು ಹೋಗಿ. ನಾನು ಮುಗಿಸಿದ್ದೇನೆ. ನಿಮ್ಮದು ಮುಗಿದ ಮೇಲೆ ಅಗತ್ಯವುಳ್ಳ ಬೇರೆಯವರಿಗೆ ದಾಟಿಸಿ’ ಎಂದು ನನಗೆ ದಾನಮಾಡಿದರು. ಅವರು ಓದಿದ ಮೇಲೆ ಯಾವ ಪುಸ್ತಕವನ್ನೂ ತಮಗಾಗಿ ಇಟ್ಟುಕೊಂಡಂತೆ ಕಾಣಲಿಲ್ಲ. ಕೆಲವು ವರ್ಷಗಳ ಹಿಂದೆ , ನಾವು ಕೆಲವು ಗೆಳೆಯರು ಸೇರಿ ಬೌದ್ಧಚಿಂತಕರನ್ನು ಭೇಟಿಮಾಡುತ್ತ ಕರ್ನಾಟಕ ತಿರುಗಾಡಿದ್ದುಂಟು. ಆಗ ಅದೀಬ್ ಬೌದ್ಧದರ್ಶನದ ಶ್ರೇಷ್ಠ ಮೌಲ್ಯಗಳನ್ನು ಬದುಕುತ್ತಿರುವ ಸಾಧಕರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವರ ಜತೆ ಅರ್ಧದಿನ ಕಳೆಯುತ್ತಿದ್ದೆವು. ಅದೀಬ್ `ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ತನದಿಂದ ಮನಸ್ಸನ್ನು ಎಷ್ಟು ನಿರಾಳ ಇಟ್ಟುಕೊಂಡಿದ್ದಾರೆ! ಸಂತೃಪ್ತವಾಗಿರುವ ಅವರ ಮುಖ ನೋಡುವಾಗ, ಅದನ್ನು ಅವರು ತಮ್ಮ ಮಡದಿಯಿಂದಲೂ ಪಡೆದಿರಬಹುದು ಅನಿಸಿತು. ಗಾಂಧಿಯ ಬದುಕೂ ಸರಳವಿತ್ತು. ಅವರ ಟೀಕಾಕಾರರು `ಬಾಪು, ನಿಮ್ಮ ಸರಳತೆಗಾಗಿ ಎಷ್ಟೊಂದು ಖರ್ಚು ಮಾಡಲಾಗುತ್ತಿದೆ ಗೊತ್ತೇ?’ ಎಂದು ಕೆಣಕುತ್ತಿದ್ದರು. ಉದ್ಯಮಿಗಳ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಅವರನ್ನು ಛೇಡಿಸುತ್ತಿದ್ದರು. ಭಾಷಣ ಮಾಡುವುದು ಬರೆಯುವುದು ಸುಲಭ. ಸವಾಲಿರುವುದು ಬದುಕುವುದರಲ್ಲಿ. ಬಸವಣ್ಣ ನುಡಿಯ ಚಹರೆಗಳನ್ನು ಮುತ್ತಿನ ಹಾರದಂತೆ ಮಾಣಿಕ್ಯದ ದೀಪ್ತಿಯಂತೆ ಸ್ಫಟಿಕದ ಶಲಾಕೆಯಂತೆ ಇರಬೇಕು ಎಂದೆಲ್ಲ ಪಟ್ಟಿ ಮಾಡುತ್ತಾನೆ. ಕೊನೆಯಲ್ಲಿ ಮಾತಿಗೊಂದು ಶರತ್ತು ವಿಧಿಸುತ್ತಾನೆ- ನುಡಿದಂತೆ ನಡೆಯಲಾಗದಿದ್ದರೆ ವ್ಯರ್ಥ ಎಂದು. ನಾವಾಡಿದ ಮಾತು ನಮಗೇ ಹಗೆಯಾಗದಂತೆ ಬದುಕುವುದು ಬಹಳ ಕಷ್ಟ. ಬದುಕಿದ್ದನ್ನು ಮಾತಿಗೆ ತಾರದೆ ಬದುಕುವುದು ಇನ್ನೂ ದೊಡ್ಡದು. ಅದೀಬರನ್ನು ಭೇಟಿಮಾಡಿ ಬಂದ ಬಳಿಕ ನನ್ನಲ್ಲಿ ಲಜ್ಜೆ ಹುಟ್ಟಿತು. ಅವರ ಬಾಳಿನಲ್ಲಿ ತೋರಿಕೆಯಿರಲಿಲ್ಲ. ಸ್ವಯಂತೃಪ್ತ ಘನತೆಯಿತ್ತು. ಅದನ್ನು ಸರಳತೆಯಲ್ಲಿ ಹುಟ್ಟುವ ಘನತೆ ಎನ್ನಬಹುದು.ಈ ತೃಪ್ತಸ್ಥಿತಿಯಲ್ಲಿ ಲೋಕದ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದ ನಿರುಮ್ಮಳತೆ ಇರಬಹುದೇ? ತಾನು ಬದುಕದೆ ಊರಿಗೆಲ್ಲ ತತ್ವಸಾರುವುದು ಒಂದು ಮಿತಿ; ಸರಳತೆ ಘನತೆ ಸ್ವಯಂತೃಪ್ತಿಗಳು ಸ್ವಕೇಂದ್ರಿತ ಮನೋಭಾವಕ್ಕೆ ಕಾರಣವಾದರೆ ಇನ್ನೊಂದು ಮಿತಿ. ದೊಡ್ಡಬಾಳು ಮತ್ತೊಂದು ಬಾಳನ್ನು ಸೋಂಕುವ ಅಗತ್ಯವಿದೆ. ಬುದ್ಧನ ಬಾಳು ಕೇವಲ ವಜ್ರಪ್ರಭೆಯಾಗಿರಲಿಲ್ಲ. ಸಂಪರ್ಕಕ್ಕೆ ಬಂದ ದೀಪಗಳನ್ನೂ ಬೆಳಗಿಸಬಲ್ಲ ದೀಪವಾಗಿತ್ತು. ಕರಕುಗಟ್ಟಿದ್ದ ಬತ್ತಿಕುಡಿಯನ್ನು ಸ್ವಚ್ಛಗೊಳಿಸಿಕೊಂಡು ನಾನೂ ದೀಪ ಹತ್ತಿಸಿಕೊಳ್ಳಲು ಯತ್ನಿಸಿದೆ. ಅದು ಉಜ್ವಲಿಸಲಿಲ್ಲ. ಆದರೆ ಮಿಣಿಮಿಣಿಗುಟ್ಟಿತು ****************************

Read Post »

ಕಾವ್ಯಯಾನ

ಕವಿತೆಯೆಂದರೆ…

ಕವಿತೆ ಕವಿತೆಯೆಂದರೆ… ವಿದ್ಯಾಶ್ರೀ ಎಸ್ ಅಡೂರ್ ಕವಿತೆಯೆಂದರೆ ಮನದೊಳಗೊಂದುಚುಚ್ಚುವ ನೋವು….ಕವಿತೆಯೆಂದರೆ ಉಕ್ಕಿಹರಿವಮನಸಿನ ನಲಿವು…. ಕವಿತೆಯೆಂದರೆ ಮೌನಮನಸಿನಸ್ವಚ್ಚಂದ ಆಕಾಶಕವಿತೆಯೆಂದರೆ ಗಿಜಿಗುಡುವಏಕತಾನತೆಯ ಆಕ್ರೋಶ ಕವಿತೆಯೆಂದರೆ ಸುಮ್ಮನೆನಿಡುಸುಯ್ದ ನಿಟ್ಟುಸಿರುಕವಿತೆಯೆಂದರೆ ನೀರು-ಗೊಬ್ಬರಹಾಕಿ ಬೆಳೆಸಿದ ಹಸಿರು ಕವಿತೆಯೆಂದರೆ ರಂಗುರಂಗಿನಬಣ್ಣ ಬಣ್ಣದ ಕಾಮನಬಿಲ್ಲುಕವಿತೆಯೆಂದರೆ ಗಾಢಾಂಧಕಾರದಿಬಿಡುಗಡೆಯ ಸೊಲ್ಲು ಕವಿತೆಯೆಂದರೆ ಮೌನಮನಸ್ಸಿನ ಟಿಪ್ಪಣಿಕವಿತೆಯೆಂದರೆ ಕೂಗಿ ಕರೆಯುವಹಾರಿ ಸಾರುವ ಪುರವಣಿ ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿಉಪ್ಪಿ ಅಪ್ಪಿದ ಮೌನಕವಿತೆಯೆಂದರೆ ಅಂಗೈಯಲ್ಲಿಮೊಗೆಮೊಗೆದು ಅನುಭವಿಸುವ ಜೀವನ ಕವಿತೆಯೆಂದರೆ ಹೆಪ್ಪುಗಟ್ಟಿದಭಾವಗಳ ಕಾರ್ಮುಗಿಲುಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವಮನಸಿನ ದಿಗಿಲು ಕವಿತೆಯೆಂದರೆ ಬಿದ್ದಾಗಆಸರೆ ಕೊಡುವ ನೆಲಕವಿತೆಯೆಂದರೆ ಸದಾ ಹಸಿರುತೆನೆಗಳಿಂದ ತೊಯ್ದಾಡುವ ಹೊಲ ಕವಿತೆಯೆಂದರೆ ಮನದ ತಮ ಕಳೆಯಲುನಾನೇ ಹಚ್ಚಿದ ದೀಪಕವಿತೆಯೆಂದರೆ ಬಗೆ ಬಗೆಭಾವದ ಬಗೆಬಗೆ ರೂಪ ಕವಿತೆಯೆಂದರೆ ನನ್ನ ಸದಾಪೊರೆವ ಅಮ್ಮನ ಮಡಿಲುಕವಿತೆಯೆಂದರೆ ಭಾವದ ಕೂಸುಮಲಗಿರುವ ತೂಗುವ ತೊಟ್ಟಿಲು ********************************************

ಕವಿತೆಯೆಂದರೆ… Read Post »

ಪುಸ್ತಕ ಸಂಗಾತಿ

ಕಾಡ ಸೆರಗಿನ ಸೂಡಿ

ಪುಸ್ತಕ ಪರಿಚಯ ಕಾಡ ಸೆರಗಿನ ಸೂಡಿ ಕಾಡ ಸೆರಗಿನ ಸೂಡಿಕಾದಂಬರಿಮಂಜುನಾಥ್ ಚಾಂದ್ಅಕ್ಷರ ಮಂಡಲ ಪ್ರಕಾಶನ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ನಾಡಿನ ಹಲವು ಪತ್ರಿಕೆಗಳ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಚಾಂದ್ ‘ ಓ ಮನಸೇ’ ಪಾಕ್ಷಿಕದಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ‘ಅಮ್ಮ ಕೊಟ್ಟ ಜಾಜಿ ದಂಡೆ, ಕದ ತೆರೆದ ಆಕಾಶ’ ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಪ್ರಥಮ ಕಾದಂಬರಿ. ಕಾಡ ಸೆರಗಿನ ಸೂಡಿ ಕಾದಂಬರಿಯು 1930- 34ರ ಕಾಲಘಟ್ಟದಲ್ಲಿ ನಡೆಯುವ ಕಥಾನಕ. 1934ರ ಫೆಬ್ರವರಿ ಇಪ್ಪತ್ತಾರರಂದು ಮಹಾತ್ಮ ಗಾಂಧೀಜಿಯವರು ಕುಂದಾಪುರಕ್ಕೆ ಬಂದ ಎಳೆಯನ್ನು ಇಟ್ಟುಕೊಂಡು ಮಂಜುನಾಥರು ಈ ಕೃತಿಯನ್ನು ರಚಿಸಿದ್ದಾರೆ. ಗಾಂಧೀಜಿ ಬರುವ ಸಮಯದಲ್ಲಿ ಎಲ್ಲೋ ಪ್ರಕಟವಾದ ಪತ್ರಿಕೆ, ಅದು ಮತ್ಯಾವುದೋ ದೂರದ ಗ್ರಾಮದ ಮನೆಮನೆಗೆ ತಲುಪುತ್ತಿದ್ದ ರೀತಿ, ಆ ಗ್ರಾಮದ ಪ್ರಮುಖರು, ಅವರ ಜೀವನ, ಕಾಡಿನಲ್ಲಿ ಜೀವನ ನಡೆಸುತ್ತಿದ್ದ ಬುಡಕಟ್ಟು ಜನಾಂಗದ ತನಿಯಾ ಮತ್ತು ಸನಿಯಾರು ದಂಪತಿಯ ಚಿತ್ರಣ, ಬ್ರಿಟಿಷ್ ಅಧಿಕಾರಿಯ ಕ್ರೂರತೆ, ಮುಂದೆ ಆತ ಒಂದು ಅನೂಹ್ಯ ಕ್ಷಣದಿಂದ ಬದಲಾಗುವುದು, ಊರಿನವರೆಲ್ಲರ ಜೊತೆ ಒಂದಾಗಿ ಬಾಳುವ ಮುಗ್ಧ ತನಿಯಾ, ಸ್ವಾತಂತ್ರ್ಯ ಹೋರಾಟಗಾರರ ಸಾವುಗಳಿಂದ ಚೇತರಿಸಿಕೊಂಡು ಚಳುವಳಿಗೆ ತಮ್ಮದೇ ಕೊಡುಗೆಯನ್ನು ಕೊಡುವ ಮಹಿಳೆಯರು… ಹೀಗೆ ಕಾದಂಬರಿ ಸೌಪರ್ಣಿಕಾ ನದಿಯಂತೆ ಸರಳವಾಗಿ, ಶಾಂತವಾಗಿ ಮತ್ತು ಸುಂದರವಾಗಿ ಸಾಗುತ್ತದೆ. ಯಾವುದೇ ಜನಪ್ರಿಯ ಧಾಟಿಯನ್ನು ಕೃತಿಕಾರರು ಅವಲಂಬಿಸದೇ ತಮ್ಮದೇ ಓಘದಲ್ಲಿ ಕಥೆಯನ್ನು ಹೇಳಿರುವುದು ಇಲ್ಲಿಯ ವಿಶೇಷವಾಗಿದೆ. ನದಿ, ಕಾಡು, ಗುಡ್ಡ, ಜಲಪಾತ, ಮರ, ಬಳ್ಳಿಗಳು ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿವೆ. ಪ್ರಕೃತಿಯ ದಿವ್ಯ ಸಾನಿಧ್ಯದಲ್ಲಿ ಅಲೆದಾಡಿದ ಅನುಭವ ಓದುಗನಿಗೆ ದೊರೆಯುತ್ತದೆ. ಚಾಂದ್ ಅವರಲ್ಲಿರುವ ನಿರೂಪಕ ಇಲ್ಲಿ ಕಾವ್ಯಾತ್ಮಕವಾಗಿ ಗೋಚರಿಸುತ್ತಾನೆ. ಕುಂದಾಪುರ ಭಾಷೆಯ ಸೊಗಡನ್ನು ಇಲ್ಲಿ ಸವಿಯಬಹುದು. ಇಲ್ಲಿರುವ ಶೀರ್ಷಿಕೆ ಸೂಡಿ ಎನ್ನುವುದು ಇಡೀ ಗ್ರಾಮದ, ಪಂಚಮುಖಿ ಕಣಿವೆಯ ಬೆಳಕೂ, ಜ್ಯೋತಿಯೂ ಆಗಿದೆ, ಪ್ರತಿಭಟನೆಯ ಅಸ್ತ್ರವೂ ಆಗಿದೆ ಮತ್ತು ಪ್ರತಿರೋಧ ತೋರಿದವರ ಪಾಲಿನ ಕೊಳ್ಳಿಯೂ ಆಗಿದೆ. ಹೀಗೆ ಗಾಂಧೀಜಿಯವರು ನಡೆದ ನಾಡಿನ ಅದ್ಭುತವಾದ ಕಥಾನಕವನ್ನು ಚಾಂದ್ ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಶ್ರೀಪತಿ ಮತ್ತು ಗಿರಿಜಾ ಹೆಗಡೆ, ತನಿಯಾ- ಸನಿಯಾರು, ಸುಂದರ ಶೆಟ್ಟಿ, ಶಿವರಾಮ ಪಂಡಿತ, ರಾಬರ್ಟ್ ಕೇವಿನ್ ಹೀಗೆ ಪ್ರತೀ ಪಾತ್ರವನ್ನು ಅವರು ತೀವ್ರವಾಗಿ ಚಿತ್ರಿಸಿದ್ದಾರೆ. ಪ್ರಕೃತಿ ಸಹ ಇಲ್ಲೊಂದು ಪಾತ್ರವಾಗಿ ಮಿಂಚುತ್ತದೆ. ಸುಧಾಕರ ದರ್ಭೆ ಅವರ ಮುಖಪುಟ ವಿನ್ಯಾಸ ಮನಸೆಳೆಯುತ್ತದೆ. ಸದಾ ಒಳಿತನ್ನೇ ಆಶಿಸುವ ಸದಾಶಯದ ಕೃತಿಯಿದು. ಮನೋಜಗತ್ತು ತಲ್ಲಣಿಸುತ್ತಿರುವ ಈ ಸಂದರ್ಭದಲ್ಲಿ ನೆಮ್ಮದಿಯ ಓದಿಗೆ ‘ಸೂಡಿ’ಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ***************************  ಡಾ. ಅಜಿತ್ ಹರೀಶಿ

ಕಾಡ ಸೆರಗಿನ ಸೂಡಿ Read Post »

ಪುಸ್ತಕ ಸಂಗಾತಿ

‘ಕಾಗೆ ಮುಟ್ಟಿದ ನೀರು’

ಪುಸ್ತಕ ಪರಿಚಯ ನಾನುಕಂಡಂತೆ– ‘ಕಾಗೆಮುಟ್ಟಿದನೀರು’         ಆಫೀಸಿನ ಕೆಲಸ ಮುಗಿಸಿ, ಬರುತ್ತಾ ದಾರಿಯ ನಡುವೆ ಸಿಗುವ ‘ನವಕರ್ನಾಟಕ’ದಲ್ಲಿ ಪುಸ್ತಕ ಖರೀದಿಸಿದವಳೇ ಮನೆಗೆ ಬಂದೆ. ಮನೆವಾರ್ತೆ, ಮಕ್ಕಳ ಉಸಾಬರಿ, ಊಟ ಮತ್ತೆಲ್ಲಾ ಮುಗಿಸಿ ಪುಸ್ತಕ ಕೈಯಲ್ಲಿ ಹಿಡಿದೆ.        ಅದೇನು ಪುಸ್ತಕ ಓದಿದೆನಾ ಅಥವಾ ‘ಬೆಟ್ಟದ ಹೂ’ ಸಿನೆಮಾ ಪುನಃ ಕಂಡೆನಾ ಗೊತ್ತಾಗದಂತಹ ಭಾವ! ಪುಸ್ತಕದ ಆರಂಭ ಇರುವುದೇ ಹಾಗೆ. ಬಹಳ ಆಪ್ತವಾಗುವಂತೆ. ಕಾಡು, ಮನೆ, ಇಲಿ-ಹಾವು, ಅಪ್ಪ-ಅಮ್ಮ, ಶಾಲೆ, ಗುರುಗಳು, ನೆಂಟರು, ಬಡತನ, ಪುಟಾಣಿ ಹುಡುಗನೊಬ್ಬ ಆಸೆ ಕಂಗಳಿಂದ ಕಾಣುವ ಪುಟ್ಟ ಪುಟ್ಟ ವಿವರಗಳು…   ಅರವತ್ತರ ವಯಸ್ಸಲ್ಲಿ ಮಾಗಿ ಮಗುವಾಗಿ ನೆನಪಿನ ಹಾದಿಯಲ್ಲಿ ಹಿಂದಿರುಗಿ ಉತ್ಪ್ರೇಕ್ಷೆ ಇಲ್ಲದೆ ಸುಮ್ಮಗೆ ಅಡ್ಡಾಡಿ ಬರುವುದು ಇದೆಯಲ್ಲಾ… ಆ ಸುಖ ನಮ್ಮದೂ ಆಗುವ ಆಪ್ತ ಆರಂಭ ಪುಸ್ತಕದಲ್ಲಿದೆ. ಇದನ್ನು ಕೇವಲ ವಿವರಣೆ ಎನ್ನಲೇ? ವರ್ಣನೆ ಎನ್ನಲೇ? ಗೊಂದಲವಾಗುತ್ತೆ.     ಆರಂಭದ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ತೆರೆದಿಡುವ ಹೂ ಪಕಳೆಗಳಂತಹ ಮೃದುತ್ವದ ಬಾಲ್ಯದನುಭವಗಳು, ಕಂಡ ವ್ಯಕ್ತಿತ್ವ ಶ್ರೇಷ್ಠತೆಗಳು, ಕಟ್ಟಿಕೊಡುವ ಕತೆಗಳು ಭಾರೀ ಹಿಡಿಸುತ್ತವೆ. ಆದರೆ, ಮಂಡ್ಯ ಎಂಬ ಅಪ್ಪಟ ಬಯಲು ನೆಲದ ನನ್ನಂತಹವರಿಗೆ ಗುಡ್ಡ ಬೆಟ್ಟ ಹತ್ತಿಳಿಯುತ್ತಾ ಕಾಡು- ಮೇಡು ಅಲೆದಾಡುತ್ತಾ ಸಿಗುವ ಊರುಗಳು ಹೇಗಿರಬಹುದೆಂಬ ಕುತೂಹಲ ಮೂಡುತ್ತದೆ. ಅದರ  ಹೊರತು ನನ್ನೂರಿನಂತೆ ರಸ್ತೆ ಬದಿಗೇ ಸಿಕ್ಕಿಬಿಡುವ ಊರುಗಳಂತಿಲ್ಲದ ಪರಮಲೆ, ವಾಟೆಕಜೆ, ಕಳ್ಮಕಾರಿ,  ಹೊಪ್ಪಳೆ, ಕಮಿಲ, ಬಂಟಮಲೆ, ಬಿಳಿಮಲೆ, ಏನೇಕಲ್ಲು, ಪಂಜ, ಕರ್ಮಜೆ, ಕರಿಮಲೆ, ಎಲಿಮಲೆ, ಬಂಗಾಡಿ, ಕೂತ್ಕುಂಜ, ಸಂಪಾಜೆ… ಊಫ್!! ಇವೆಲ್ಲಾ ಅರ್ಥವಾಗದ ಚಿದಂಬರ ರಹಸ್ಯ ಹೊದ್ದುಕೊಂಡು ನಿಬಿಡ ಕಾನನದೊಳಗೆ ಲೀನವಾಗಿರುವ ಹಾರುವ ಓತಿಕ್ಯಾತದಂತೆ ಕಾಣುವ ಊರುಗಳಾಗುತ್ತವೆ. ಒಮ್ಮೆಯಾದರೂ ಅವನ್ನೆಲ್ಲಾ ತೀರಾ ಸಮೀಪ ಅನುಭವಿಸಿ ಬರಬೇಕೆನ್ನುವಂತೆ ಹುಚ್ಚು ಹಿಡಿಸುತ್ತವೆೆ.       ಬಾಲ್ಯದ ವಿವರಣೆಗಳು ಆಪ್ತವಾಗುತ್ತಾ ಆಗುತ್ತಾ ಮಂತ್ರಮುಗ್ಧತೆಯಲ್ಲಿ ಕಳೆದು ಹೋಗುತ್ತಿರುವಾಗಲೇ ಕಾಲ ಮಾಗುವುದೇ ತಿಳಿಯದು. ಆಮೇಲಿನದ್ದೆಲ್ಲಾ ಓದು- ಉದ್ಯೋಗ, ಏಳು-ಬೀಳಿನ ವ್ಯಾಪಾರ. ಕನ್ನಡ ಸಾಹಿತ್ಯ ಲೋಕದ ವ್ಯವಹಾರಗಳು, ವಿಶ್ವವಿದ್ಯಾಲಯವೊಂದರ ಕಟ್ಟುವಿಕೆಯ ಪರಿಶ್ರಮ, ಹಿರಿಯರ ಅನುಚಿತ ನಡೆ ಇವೆಲ್ಲಾ ಹಸಿಹಸಿಯಾಗಿಯೇ ದಾಖಲಾಗಿರುವುದು ಇಷ್ಟೊತ್ತಿಗಾಗಲೇ  ನಾಡಿನ ಸಾಹಿತ್ಯ- ಸಾಂಸ್ಕೃತಿಕ ಲೋಕದಲ್ಲಿ ತಳಮಳ ಹುಟ್ಟಿಸಬೇಕಿತ್ತು. ಬಹು ಚರ್ಚೆಗೆ ಗ್ರಾಸವಾಗಬೇಕಿತ್ತು. ಆದರೆ ಲೋಕ ಇರುವುದೇ ಹೀಗೆ ನಮ್ಮ ಬೇಳೆ ಬೆಂದರೆ ಸಾಕೆನ್ನುವ ಲೋಕಜ್ಞಾನ ಪ್ರಾಪ್ತವಾಗಿರುವ ನಾಡವರಾಗಿರುವ ನಾವು ಅದೆಷ್ಟು ಜಡ್ಡುಗಟ್ಟಿದವರೆನ್ನುವುದು ತಿಳಿದುಕೊಂಡು ತೆಪ್ಪಗಿರಬೇಕಾಗಿದೆಯಲ್ಲ ಎಂದು ಸಂಕಟವಾಗುತ್ತದೆ.         ‘ಚದುರಿ ಬಿದ್ದ ಆತ್ಮದ ತುಣುಕುಗಳ’ನ್ನು ಆಯ್ದು ಕೊಂಡು ಎದೆಗಾನಿಸಿಕೊಳ್ಳುತ್ತಿರುವಾಗಲೇ ಥಟ್ಟನೆ ನಾನೊಂದು ಪ್ರವಾಸ ಕಥನವನ್ನೋ, ಸಾಹಸಗಾಥೆಯನ್ನೋ ಓದುತ್ತಿರುವಂತೆ ಭಾಸವಾಗುತ್ತದೆ. ಒಂದು ನಿರ್ದಿಷ್ಟ ತಾರ್ಕಿಕ ಆಲೋಚನೆಯನ್ನು ಹೊಂದಿದ ವ್ಯಕ್ತಿಯೊಬ್ಬರು ಕೆಲವಾರು  ಆಪ್ತ ಸಮಾನಮನಸ್ಕರೊಡನೆ ಸೇರಿ ಮಾಡುವ ಸಾಂಸ್ಥಿಕ  ಸಂಘಟನೆಯ ಕೆಲಸವು ಸಂತಸ ತರುತ್ತದೆ. ಅದರಲ್ಲೂ ನಮ್ಮ ಕನ್ನಡದ ನೆಲದ ವಿಚಾರಗಳು ನಾಡಿನ ಎಲ್ಲೆ ಮೀರಿ ದೆಹಲಿ, ಅಮೇರಿಕ, ಬೆಲ್ಜಿಯಂ, ಜಪಾನು, ಹೊನಲುಲು ಮೊದಲಾದೆಡೆಗಳಲ್ಲಿ ವಿವಿಧ ರೂಪಗಳಲ್ಲಿ ಬಿತ್ತರವಾದ ಬಗೆಗಳು ದಾಖಲಾದ ವಿವರಗಳನ್ನು ಓದುವಾಗ ಹೆಮ್ಮೆಯ ಭಾವ ಸ್ಫುರಿಸುತ್ತದೆ.              ಇಡೀ ಪುಸ್ತಕದ ಸ್ವರೂಪ ಹೀಗೆಯೇ ಎಂದು ನಿರ್ಣಾಯಕವಾಗಿ ಹೇಳಲು ಬಾರದಂತಹ ವಿಶಿಷ್ಟವಾದ ಕೃತಿ. ಸೊಗಸಾದ ನಿರೂಪಣೆ. ಹಲವು ಬಗೆಯಲ್ಲಿ ಕನ್ನಡ ನಾಡು- ನುಡಿ, ರಾಜಕೀಯ- ಸಾಂಸ್ಕೃತಿಕ- ಸಾಮಾಜಿಕ ಸ್ಥಿತ್ಯಂತರಗಳ ದಾಖಲೀಕರಣದಂತೆ ಭಾಸವಾಗುತ್ತದೆ. ಹಾಗೆಯೇ ಕೋಮುವಾದ, ಜಾತೀಯತೆ, ಬಡತನ, ಪಕ್ಷಪಾತ ಮೊದಲಾದನ್ನು ಕುರಿತು ಒತ್ತುಕೊಡದೆ, ಹೇಳಿಯೂ ಹೇಳದಂತೆ ಮಾಡಿರುವ ಲೇಖಕರ ಒಂದು ರೀತಿಯ ಜಾಗೃತ ಸ್ಥಿತಪ್ರಜ್ಞತೆಯು ಕಾಡದೇ ಬಿಡುವುದಿಲ್ಲ.       ನಮ್ಮ ನಡುವೆ ಲೋಕಜಾಗೃತಿಯಂತಿರುವ ಹಿರಿಯರಾದ ಶ್ರೀ ಪುರುಶೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಅನ್ನು ಮನೆಗೆ ಕೊಂಡುತಂದ ದಿನವೇ ಓದಿ ಮುಗಿಸಿದಾಗ ರಾತ್ರಿ ೧:೩೦ ದಾಟಿತ್ತು. ಇತ್ತೀಚೆಗೆ ನನ್ನಿಂದ ಇಷ್ಟು ಮಾತ್ರ ಒಂದೇ ಗುಕ್ಕಿಗೆ ಓದಿಸಿಕೊಂಡ ಕೃತಿ ಇದು.             ಎಲ್ಲಾ ಓದಿಯಾದ ಮೇಲೆ ಪುಸ್ತಕದ ಹಲವಾರು ವಿಷಯಗಳು ದಟ್ಟವಾಗಿ ಕಾಡುತ್ತಲಿವೆಯಾದರೂ ತೀವ್ರವಾಗಿ ಉಳಿದದ್ದು ಮಾತ್ರ ಮೂರು ವಿಚಾರಗಳು.   ೧. ನಿಗದಿಪಡಿಸಿದ ದಿನದಂದು ಗಂಡುಮಗುವಿನೊಡನೆ ಗಂಡನ ಮನೆಗೆ ಹಿಂದಿರುಗದೆ, ಮಳೆ ಕಡಿಮೆಯಾದ ಮೇಲೆ ಗಂಡನ ಮನೆಗೆ ಹಿಂದಿರುಗಿದ ಹಸಿಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳದೆ ಹಸುಗುಸನ್ನು ಮಾತ್ರ ಉಳಿಸಿಕೊಂಡದ್ದು,ಆದರೆ  ಆ ಬಾಣಂತಿ ಅನಂತರ ಏನಾದರೆಂದು ತಿಳಿಯದೇ ಹೋದದ್ದು… ೨. ಕಾಡ ನಡುವೆ ಶಾಲೆಗೆ ಹೋಗಿ ಬರುತ್ತಿದ್ದ ಮಗುವನ್ನು ಹೊಳೆ ದಾಟಿಸಿಕೊಳ್ಳಲು ಬರುಬೇಕಿದ್ದ ಅಮ್ಮ ಕಾಗೆ ಮುಟ್ಟಿದ್ದಕ್ಕೆ ಬರಲಾರದೇ ಹೋದದ್ದು. ಮತ್ತು ಆ ಮಗು ಇಡೀ ರಾತ್ರಿ ನಿಬಿಡ ಕಾಡಿನೊಳಗೆ ಅಮ್ಮನ ಬರುವಿಕೆಯನ್ನು ನಂಬಿ ಕಾದದ್ದು… ೩. ಹೃದಯವನ್ನು ಎಂದೋ ಕೊಟ್ಟಿದ್ದ ಪತ್ನಿ ಕಿಡ್ನಿ ಕೊಟ್ಟದ್ದು…  ವಸುಂಧರಾ ಕದಲೂರು

‘ಕಾಗೆ ಮುಟ್ಟಿದ ನೀರು’ Read Post »

ಕಾವ್ಯಯಾನ

ಸಂಗಾತಿ ಬುದ್ದ

ಕವಿತೆ ಸಂಗಾತಿ ಬುದ್ದ ನಳಿನ ಡಿ ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,ಒಪ್ಪಿರುವ ಎನಿಸಿದಾಗ,ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ.. ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,ಬುದ್ಧ ಬಂದಿದ್ದ ಬಾಲಕನಾಗಿ,ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,ತಂಪು ಹಳ್ಳದ ಏರಿಯ ಮೇಲೆಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,ಜನನಿಬಿಡ ಹಾದಿಗುಂಟ ಕೈ ಬೀಸುತಲೇ ಇರಲು, ಕಾಡುಗುಡ್ಡದ ನಡುವೆ, ಅಲೆಮಾರಿ ಹಕ್ಕಿಯಾಗಲುರೆಕ್ಕೆಯಾದವ ಬುದ್ಧ,ಈಶಾನ್ಯ ಗಾಳಿಗೆ ಒಡ್ಡಿದ ದೀಪವೆಂದುಕೊಂಡಾಗ, ಎರಡು ಹಸ್ತಗಳ ನಡುವೆ ದೀವಿಗೆ ಹಿಡಿವವನು,ನಾ ಹುಡುಕಿದಾಗ ಸಿಕ್ಕಿದ ಬುದ್ಧನ ಪ್ರಮಾಣದಂತೆ ಅನುರಣನ ಅವನ ಇರುವಿಕೆ… **********************

ಸಂಗಾತಿ ಬುದ್ದ Read Post »

ಕಾವ್ಯಯಾನ

ಯಾರೊಬ್ಬರಾದರೂ…

ಕವಿತೆ ಯಾರೊಬ್ಬರಾದರೂ… ಅನುರಾಧಾ ಪಿ. ಎಸ್ ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,ಗಾಳಿಗೊಪ್ಪಿಸುತ್ತೇನೆ.ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ. ಅವರ ಕಣ್ಣು ಬೆಳಗುತ್ತವೆ,ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆಕಣ್ಮುಚ್ಚಿ ಮೃದುವೊಂದು ಮಗುವಂತೆಅದು ಮಗ್ಗುಲು ಹೊರಳುತ್ತದೆ ನನಗೋ ಸುಖದ ಅಮಲುಒಳಗೂ ಆ ಅಮಲಡರಿದ ಘಮಲುಅವರುದ್ಗರಿಸುತ್ತಾರೆ,“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!” ತಟ್ಟನೆಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-‘ನೀನಿನ್ನೂ ತಾಕುವುದಾಗಿಲ್ಲ’ನಾನೆಚ್ಚೆತ್ತುಕೊಳುತೇನೆ,ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ- ‘ಸ್ರೋತವವರಿಗೆ ಕಾಣುವುದಿಲ್ಲಮೂಲವನಾರೂ ತಲುಪುವುದಿಲ್ಲ‘ಎಷ್ಟು ಚಂದ ನಿನ್ನ ಪ್ರೀತಿ’ ಎಂದೊಬ್ಬರೂ ಹೇಳುವುದಿಲ್ಲ **********************************

ಯಾರೊಬ್ಬರಾದರೂ… Read Post »

ಕಾವ್ಯಯಾನ

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ ಚೆಕ್‌ಮೇಟ್ ಜೀವನವೇ ಒಂದು ಚದುರಂಗಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀಕಪ್ಪು ಬಿಳುಪಿನ ಚೌಕದ ಸಾಲು ಸಾಲುಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲದ್ವಂಸಗೈದ ಬಿಳಿಯ ಸೈನ್ಯವನ್ನುಬರೀ ಪದಾತಿದಳವೊಂದರಿಂದಲೇಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಬದುಕಲೆಂದೇ ಇದೆ ಕ್ಯಾಸ್‌ಲಿಂಗ್ರಾಜನೊಬ್ಬ ಬದುಕಿದರೆ ಸಾಕುಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ? ಒಬ್ಬ ರಾಜನನ್ನುಳಿಸಲುಸೈನ್ಯದ ಪ್ರತಿಯೊಬ್ಬನೂಜೀವದ ಹಂಗು ತೊರೆದು ಹೋರಾಡಬೇಕುಪದಾತಿದಳದ ಸೈನಿಕನೊಬ್ಬ ಒಂದೊಂದೇಹೆಜ್ಜೆಯಿಟ್ಟು ಕೊನೆಯ ಹಂತ ತಲುಪಿತ್ರಿವಿಕ್ರಮನಾಗಿಬಿಟ್ಟರೆ ತಕ್ಷಣವೇಆತನನ್ನು ಬದಲಿಸಿರಾಣಿಯೊಬ್ಬಳನ್ನು ಪಟ್ಟಕ್ಕೇರಿಸಬೇಕುಇನ್ನೊಬ್ಬರ ಶ್ರಮದ ದುಡಿಮೆಯಲ್ಲಿರಾಜ ಮತ್ತಿಷ್ಟು ಕೊಬ್ಬಬೇಕು ಎಷ್ಟೆಂದು ಆಡುತ್ತೀರಿ?ದಿನವಿಡೀ ಒಂದೇ ಆಟಛೇ… ಈಗಲಾದರೂ ಮುಗಿಸಿಬಿಡಿಕಪ್ಪು ಸೈನ್ಯವನ್ನು ಸೋಲಿಸುವ ಮೋಸದಾಟಮುಸುಗುಡುವ ಬಿಳಿಯ ರಾಜನಿಗೆ ಎದುರಾಗಿಕಪ್ಪು ರಾಣಿಯನ್ನಿಟ್ಟು ಬಿಟ್ಟರೆಅಲ್ಲಾಡಲಾಗದೇ ಜೀವನವೇ ಚೆಕ್‌ಮೇಟ್ ಬಿಸಿ ಚಹಾ- ಈ ಮುಸ್ಸಂಜೆಯಲ್ಲಿ ನಾನುನಿನ್ನ ನೆನಪಿನಲ್ಲಿ ಕನವರಿಸುತ್ತಿದ್ದರೆನೀನು ಈ ಲೋಕಕ್ಕೆ ಸಲ್ಲದಅತೀತ ಲೋಕದ ಸಹಚರರೊಂದಿಗೆಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರಮನದ ಕಿಟಕಿಯೊಳಗೆ ತೂರಿ ಬರುತ್ತಿದೆ ನನ್ನ ಏಕಾಂತಕ್ಕೆ ಸಾಥ್ ಕೊಡುವಆತ್ಮಸಾಂಗತ್ಯದ ಗೆಳೆಯನೆಂದರೆಅದು ಹೊಗೆಯೇಳುವಬಿಸಿಚಹಾದ ಬಟ್ಟಲು ಮಾತ್ರಎನ್ನುವ ಸತ್ಯ ಗೊತ್ತಿರುವುದರಿಂದನೀನು ನಿಶ್ಚಿಂತನಾಗಿದ್ದೀಯ ಬಾಡಿದ ಮನಸ್ಸನ್ನು ಝಾಡಿಸಿಕೊಂಡುಬಲವಂತವಾಗಿ ವಾಸ್ತವಕ್ಕೆ ಎಳೆ ತರಲುಚಹಾ ಮಾಡಿಕೊಳ್ಳುವ ನೆಪ ಹೂಡುತ್ತೇನೆಸಕ್ಕರೆ ಡಬ್ಬದೊಳಗೆ ಸಿಕ್ಕಿಕೊಂಡ ಇರುವೆಹೊರಜಗತ್ತಿನ ಸಂಪರ್ಕ ಕಾಣದೇಸುತ್ತಿದಲ್ಲೇ ಸುತ್ತುತ್ತ ಸುಖವಾಗಿದೆ ನನ್ನೆದುರಿಗಿದ್ದ ಎರಡು ಕಪ್ ಚಹಾದಲ್ಲಿನನ್ನ ಪಾಲಿನ ಚಹಾವನ್ನು ಕಪ್‌ನತಳದಲ್ಲಿ ಒಂದಿಷ್ಟೂ ಅಂಟದಂತೆಹನಿಹನಿಯಾಗಿ ಹೀರಿದ್ದೇನೆನಿನ್ನ ಕುಸುರಿ ಕೆತ್ತಿದ ಪಿಂಗಾಣಿ ಕಪ್‌ನಒಳಗೆ ಬಿಸಿಚಹಾ ಕೆನೆಗಟ್ಟುತ್ತಿದೆ ಇರಲಿ ಬಿಡು,ನಿನ್ನ ಬಟ್ಟಲಿನಲ್ಲಿ ಇಣುಕುವಕೆಂಪು ದ್ರವದಷ್ಟು ಉನ್ಮಾದವನ್ನುಈ ಚಹಾ ನನಗೆ ಏರಿಸದೇ ಹೋದರೂನನ್ನ ನೆನಪಿನ ನೋವಿಗೆ ಮುಲಾಮು ಹಚ್ಚಲುನಿನಗೆಂದು ಕಾದಿಟ್ಟ ಬಿಸಿಚಹಾ ಕೈ ಚಾಚುತ್ತದೆ—— ಅಸಂಗತನ್ನು ಅರಸುತ್ತ.. ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲಜುಲುಮೆಯಿಂದ ದೂರ ಸರಿಸಿದೂರದ ಶಿವಾಲಯಕೆ ಹೊರmನನ್ನೊಳಗೆ ನಿಗಿನಿಗಿಸುವ ಕೆಂಡ ಶಿವಾಲಯದ ಆಸುಪಾಸಲ್ಲೆಲ್ಲೂನಿನ್ನ ಸುಳಿವಿಲ್ಲಡಮರುಗದ ದನಿಯೂ ಮೊರೆಯುತ್ತಿಲ್ಲಗರ್ಭಗುಡಿಯ ಒಳಗೆ ಅನ್ಯಮನಸ್ಕಳಾಗಿಕುಂಕುಮವಿಟ್ಟೆ, ಹೂ ಮುಡಿಸಿನಿಟ್ಟುಸಿರಿಟ್ಟು ಕೋಪಿಸಿದೆ ಒಳಗೊಳಗೇಬಂದಿದ್ದು ನಿನಗಾಗಿ ಅಲ್ಲವೋ ಸ್ಮಶಾನವಾಸಿ,ಎಲ್ಲಾತ? ಜಗವನ್ನೇ ಕುಣಿಸುವ ಮದ್ದಳೆಯವ?ಪ್ರಶ್ನಿಸಿದೆ ಶಿವನನ್ನೇ ಕೊಂಕಿಸಿ ಕತ್ತು ದಿಟ್ಟಿಸಿದರೆ ಗಂಧ ಪೂಸುವಾಗ ಶಿವನನ್ನೇಅರೆರೆ…, ಮನ ಕದ್ದು ,ಬವಣೆಗೊಳಪಡಿಸಿಲಿಂಗದೊಳಗೆ ಅಡಗಿ ಕುಳಿತಿದ್ದಾನಲ್ಲದಿನವಿಡೀ ನಿನ್ನನ್ನೇ ಕಂಡಂತಾಗುವ ಭ್ರಮೆಗೆರೋಸಿ ಕಣ್ಣುಜ್ಜಿಕೊಂಡ ಪಿರಿಗಣ್ಣು ತೆರೆದರೂಅಲ್ಲಿ ಕಂಡಿದ್ದು ಲಿಂಗವಲ್ಲಬರಿದೇ ನಿನ್ನ ರೂಪ ಮಂತ್ರಘೋಷ, ಜಾಗಟೆಯ ದನಿಕೇಳಿಸಿದರೂ ಕಿವಿಗಿಳಿಯಲಿಲ್ಲಧೂಪದಾರತಿ, ಮಂಗಳಾರತಿ ಕಣ್ತುಂಬಲಿಲ್ಲಲಿಂಗದೊಳಗೆ ಕಣ್ಣು ಮುಚ್ಚಾಲೆಯಾಡುವವನೇಕಣ್ಣು ತಪ್ಪಿಸುವ ನಾಟಕವೇಕೇ? ಮನದೊಳಗೇ ಅನುಸಂಧಾನ ನಡೆಸುತ್ತಲಿಂಗದೆದುರು ಶಿಲೆಯಾದ ನನ್ನ ಕಂಡುಹಣ್ಣು ಹಾಲು ತಂದಿಲ್ಲವೇ?ನೈವೇದ್ಯದ ಅರ್ಪಣೆಗೇನಿದೆ?ಮೀಸೆ ಮರೆಯಲ್ಲೇ ನಗುತ್ತ ಕೇಳಿದವರಿಗೆನನ್ನನ್ನೇ ಆತನಿಗೆ ಸಮರ್ಪಿಸುತ್ತೇನೆಎಂದುಸುರಿಯೇ ಬಿಟ್ಟ ತರಳೆ ನಾನು ಲೋಕ ಬೆಚ್ಚಿಬಿದ್ದು, ಗಡಗಡನೆ ನಡುಗಿತು,ಬೂದಿ ಬಳಿದು, ಊರೂರು ತಿರುಗುವ ಶಿವನಿಗೆತನ್ನನ್ನೇ ನೀಡುವ ಶಪಥಗೈಯ್ಯುವುದೇ?ಹಾಹಾಕಾರ ಎಲ್ಲೆಲ್ಲೂಲೋಕಪಾಲನಿಗೇ ಈ ಆಹ್ವಾನವೇ?ಜಗನ್ಮಾತೆಗೆ ಸವತಿಯಾಗುವ ಕನಸೇ? ಗಹಗಹಿಸಿದೆ ಮನದಲ್ಲೇತುಟಿಯಂಚು ಮೀರದಂತೆ ನಗು ಅಡಗಿಸಿಹಿಮ ಆವರಿಸಿದ ಬೆಟ್ಟಗಳೊಡೆಯನಾತಎಲ್ಲರಿಗೂ ಭಕ್ತವತ್ಸಲಬಯಸಿದ ಹೆಣ್ಣಿಗೆ ಮಾತ್ರ ಅಸಂಗತನನಗಲ್ಲ, ಶಿವೆಗೂ ಸಿಗದ ವಿರಾಗಿಕುಹಕದ ಎಲ್ಲ ಮಾತುಗಳಿಗೆ ಬೆನ್ನು ಹಾಕಿಇಹ ಪರವೆರಡರಲ್ಲೂ ಒಂದೇ ಗುರಿ ಹೊತ್ತುಹೊರಟಿದ್ದೇನೀಗ ಮದ್ದಳೆಯ ದನಿಯರಸಿ(ಆಸೆಯೆಂಬ ಶೂಲದ ಮೇಲೆ ಸಂಕಲನದಿಂದ) ***********************

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ ಮತ್ತೆ ಸಾಯುವ ಹಸೆ, ಹನಿಹನಿಯಾಗಿ ***********************

ಗಝಲ್ Read Post »

ಕಾವ್ಯಯಾನ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ ಒಂದು ಹೆಣ್ಣಿನ ಸ್ವಗತ. ನನಗಾರ ಭಯ..!ನಾನು ಜನ್ಮ ಕೊಡುವ ಹೆಣ್ಣು ಮಗುವನ್ನುಈ ಲೋಕದಿ ತರಲು ನನಗಾರ ಭಯ..ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವಧೈರ್ಯ ನನಗಿಲ್ಲದಿರುವದು..ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳುಅವಳು ಅನುಭವಿಸುವದು ಬೇಡವೆಂದೇ…ಕೆಟ್ಟ ಕಾಮುಕರಿಗೆ ಬಲಿಯಾದೀತೆಂದುದಿಗಿಲುಗೊಂಡೇ…ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದುಭಯಗೊಂಡೆ…ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..!ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ.. ಹೆದರದಿರು ಮನವೇ..ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದುತಿಳಿದಿರು..ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟದಾರಿ ಇದೆ..ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ..ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ..ಹೆಣ್ಣು ಹೆಣ್ಣೆಂದು ಜರೆಯಬೇಡ..ಹೆಣ್ಣು ಹೇರಲು ಅಂಜಬೇಡ..ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ. ಭರವಸೆಯ ಕಿರಣ. ದೀಪಗಳೆ..ದೀಪಗಳೆಮಿನುಗುವ ಮಿಣುಕು ನಕ್ಷತ್ರಗಳೆಮನದ ಕತ್ತಲೆ ಓಡಿಸಿ ಬೆಳಕುಪಸರಿಸುವ ಚಂದಿರಗಳೆ.. ಬಾನಿಗೂ ಭೂವಿಗೂ ಬೆಸೆದಮಿಂಚಿನ ದಿವ್ಯ ಪ್ರಭೆಗಳೆನಾಲ್ಕು ದಿಕ್ಕಿಗ ಹರಡಿದಅರಿವಿನ ವಿಶ್ವ ಜ್ಯೋತಿಗಳೆ.. ಚಿಂತೆಯ ಕಾರ್ಮೊಡ ಕರಗಿಸುವಹರುಷದ ಹೊನಲುಗಳೆನಿರಾಶೆಯ ಮುಂದೆ ಆಸೆ ತೋರುವವಿಶ್ವಾಸದ ದನಿಗಳೆ.. ಕನಸಿನ ಗೊನೆಗೆ ನೀರೆರೆದುಪೋಷಿಸುವ ಮಿಂಚಿನ ಸಿಂಚನಗಳೆಬದುಕ ಭಾರವನ್ನು ಹಗುರಗೊಳಿಸುವಉಲ್ಲಾಸದ ಕೋಲ್ಮಿಂಚುಗಳೆ.. ಕತ್ತಲು ಕಳೆದು ಬೆಳಗು ಮೂಡಿಸುವಸುಖದ ಕಲ್ಪನೆಗಳೆಮುಸುಕು ಸರಿಸಿ ದಾರಿ ತೋರಿಸಿಗುರಿಮುಟ್ಟಿಸುವ ಹೊಂಗಿರಣಗಳೆ.. ನಿಸ್ತರಂಗದ ಬಾಳಲಿ ಚಲನೆಮೂಡಿಸುವ ಆಶಾ ದೀವಿಗೆಗಳೆಬಾಳ್ ದಾರಿಯಲೆಲ್ಲಾ ಸದಾಜೊತೆಗಿರುವ ಭರವಸೆಯ ಕಿರಣಗಳೆ.. ಅಕ್ಕ. ಅಕ್ಕ…ಚನ್ನನ ಮೇಲೆ ಅದೆಂತಹ ಮೋಹ ನಿನಗೆಆ ಚೆನ್ನ ಸಿಕ್ಕನೇನೆ ನಿನಗೆ.ಕೇಶವನ್ನೆ ಅಂಗಕ್ಕೆ ಮರೆಮಾಡಿಕೊಂಡುಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನಿಗಾಗಿಕಾಡು ಮೇಡು ಅಲೆದು ದಣಿದ ನಿನಗೆಆ ಚೆನ್ನ ಸಿಕ್ಕನೇನೆ ಕೊನೆಗೆ ದೇಹದ ಮೋಹವನ್ನು ತೋರೆದುಭಯವೆಂಬ ಭವವ ನಿರ್ಬಯದಿ ಹರಿದುಆಡಿಕೊಳ್ಳುವವರ ಮುಂದೆ ಧೈರ್ಯದಿ ಮೆರೆದೆ ನೀನಿನೋಲಿದ ಚನ್ನ ಸಿಕ್ಕನೇನೆ ನಿನಗೆ. ಬೆಟ್ಟು ಮಾಡುವರನ್ನು ದಿಟ್ಟ ನಿಲುವುಗಳಿಂದಬಿಚ್ಚು ಮನಸ್ಸಿನಿಂದ ಬೆರಗುಗೋಳಿಸಿಇಚ್ಚೆ ಪಟ್ಟವನನ್ನು ಅರಸುತ್ತಾಅರಸೊತ್ತಿಗೆ ಬಿಟ್ಟು ಬಂದ ನಿನಗೆಆ ಚನ್ನ ಸಿಕ್ಕನೇನೆ ಅಕ್ಕ.. ಶ್ರೀಶೈಲದ ಕಾಡುಮೇಡು ಅಲೆದುಕದಳಿಯ ಭವ ಘೋರಾರಣ್ಯ ಹೊಕ್ಕುಭವಗೆಟ್ಟು ಹೋದನಿನಗೆ ಬಿಗಿದಪ್ಪಲು ಭವಹರನಾದಆ ಚನ್ನ ಸಿಕ್ಕನೇನೆ ಅಕ್ಕ.. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದಸೀಮೆಇಲ್ಲದ ನಿಸ್ಸೀಮನಿಗಾಗಿಉಡತಡಿಯಿಂದ ಕಲ್ಯಾಣದ ವರೆಗೆಕದಳಿಯ ಸೀಮೆಯವರೆಗೆ ತ್ರೀಕೂಟವೆಂಬಮಹಾಗಿರಿಯ ಬಟ್ಟಬಯಲೋಳಗೆ ಹುಚ್ಚಾಟದ ಮೇರೆಮೀರಿ ಹುಡುಕಾಡಿಶರಣಸತಿ ಲಿಂಗಪತಿ ಎಂಬ ಭಾವದಲ್ಲಿಕದಳಿಯಲ್ಲಿ ನಿನ್ನ ಚನ್ನನಲ್ಲೆ ಒಂದಾದೆಯಲ್ಲ.. ಕೋನೆಗೂ ನಿನ್ನ ಚನ್ನನನ್ನು ಹುಡುಕೆಬಿಟ್ಟಯಲ್ಲ… *******************

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ Read Post »

ಕಾವ್ಯಯಾನ

ವಿಶಾಲಾ ಆರಾಧ್ಯ ಕಾವ್ಯಗುಚ್ಛ

ವಿಶಾಲಾ ಆರಾಧ್ಯ ಕಾವ್ಯಗುಚ್ಛ ಬುದ್ಧನೊಂದಿಗೊಂದು ದಿನ ನಿನ್ನಂತಾಗಲೂನಾನೇನು ಮಾಡಬೇಕು ?ಕತ್ತಲ ಬದುಕಿನಿಂದೊಡನೆನಡೆದುಬಿಡಲೇ?ಓ..ಓಹ್ಎಂದಾದರೂ ಉಂಟೆ ಬುದ್ಧ ?ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆಕಥೆ ಏನಾಗಿರುತ್ತಿತ್ತು..??ನೀನೇನೋ ಸಿದ್ಧಾರ್ಥನಿಂದಬುದ್ಧನಾಗಿ ಹೋದೆಯಶೋಧರೆಗೆಂತೆಂಥಹ ಪದವಿಬಿರುದು ವಿಜೃಂಭಿಸುತ್ತಿದ್ದವುಬಲ್ಲೆ ಏನು?ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನಸಾವಿತ್ರಿಯ ಸೋಲಿಸೆ ನಿಂದಸಿದ ಯಮಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇಅಂಬರವ ಹರಿದ ಬಣ!ಯಶೋಧರೆಯ ಬೇರಾವ ಅಗ್ನಿನುಡಿಗೀಡುಮಾಡುತ್ತಿದ್ದರೋ..ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!ಪುತ್ರನ ನೆನಪೇನಾದರೂ ಸುಳಿಯಿತೇ?ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನುಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!! ಎಲ್ಲೆ ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆಮಾಡಿದ ಸೈಟು ಬೇಡಿದ ಕಾರುಮಾಡಿದ ಕಾರುಬಾರೆಲ್ಲಾಅವನ ಕೃಪೆಯೇ !ಗೋಡೆಯಲಿ ಇದ್ದಾಗಅಮ್ಮ ಅಪ್ಪನೇ ಗುರುವೇ ಎಂದುವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!ಕಾಯಿ ಹೊಡೆದು ಹಣ್ಣನಿತ್ತುದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟುಕೈ ಜೋಡಿಸಿ ಬೇಡಿದವರೇ..!ಅವನಿಗಾಗಿ ಜಾತ್ರೆ ಮಾಡಿಅವನ ಹೆಸರಲೇ ಯಾತ್ರೆ ಮಾಡಿದಂಡಿ ದಂಡಿ ದಂಡವಿಟ್ಟುಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!ಅಂಬರಕ್ಕೇ ಅಂಬರವನಿತ್ತುದಯಾಮಯಿಗೇ ದಯೆ ತೋರಿನೆಲೆಯಾದವನಿಗೇ ಗುಡಿಯ ಕಟ್ಟಿಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನಮಾಸಿದನೆಂದೋ ಪಟ ಪಸುಗೆಯಾಯಿತೆಂದೋಮನೆಯಾಚೆ ತಳ್ಳಿ ಜಗನ್ನಾಥನನ್ನೇಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ? ಕುದಿ ಕುದಿಯುವ ಹೂವಿನ ಹೃದಯಗಳಲಿನಗುವಿನ ಆವಿಯ ಚಿತ್ರಣ ತೋರಿಕೆಅಂತರಂಗದ ಕತ್ತಲಾಮಿಷ ಕೋಣೆಗೆಬಹಿರಂಗದಿ ಕಾಣುವ ಬೆಳಕಿನ ಜವನಿಕೆ ಹೂವಿನ ಹುಡುಗನು ಕಟ್ಟುವ ನೂಲಲೇಕೊರಳುಸಿರಿನ ಇರಿತದ ಮತ್ಸರವಿಹುದುಕಸಾಯಿಕಾನೆಯ ಕಟುಕನ ಕಣ್ಣಲೂಕರುಣೆಯ ಕರುಳಿನ ಕರೆಯಿರಬಹುದು ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳುಜೀವ ತೆಗೆಯುವ ಸುಂದರ ಜಲಚರಕಸವನೇ ನುಂಗಿದ ಕೆಸರಿನ ಹೊಂಡದಿಪೂಜೆಗೆ ಒದಗುವ ಕಮಲದ ಹಂದರ ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆಅಂದದೊಂದಿಗೆ ಚಂದದ ಮನದಿಮನದೊಳಗೆ ವಿಷವನೇ ಬಸಿದಿದೆ————- *********************

ವಿಶಾಲಾ ಆರಾಧ್ಯ ಕಾವ್ಯಗುಚ್ಛ Read Post »

You cannot copy content of this page

Scroll to Top