ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು ಸರಿತಾ ಮಧು ಚುನಾವಣೆಗಳೆಂದರೆ ಹಬ್ಬಪ್ರಜಾಪ್ರಭುತ್ವದ್ದೂ , ಜನಗಳದ್ದೂಪ್ರತಿವರ್ಷವೂ ಆಚರಣೆಯೇಗ್ರಾಮ, ತಾಲ್ಲೂಕು, ಜಿಲ್ಲೆಗಳೂಹೊರತಲ್ಲ ಒಂದಾಗಿದ್ದ ಊರೊಳಗೆ ಜಾತಿಯ ತಂದಿಟ್ಟುಭಿನ್ನತೆಯ ಪ್ರತೀಕವಾದರು ನಮ್ಮವರು , ನಮ್ಮ ಜನಗಳು ಹೆಂಡ ಹಣದ ಹೊಳೆಯಲಿಮುಳುಗೆದ್ದರು , ಮೈಮರೆತರುಹಗಲು ಇರುಳುಗಳ ಲೆಕ್ಕಿಸದೆನಮ್ಮವರು , ನಮ್ಮ ಜನಗಳು ಆಮಿಷವೋ, ಮತ್ತೊಂದೋಮತಗಳು ಬಿಕರಿ ಮಾಡಿಯೇ ಬಿಟ್ಟರುಚುನಾವಣಾ ಸಂತೆಯಲ್ಲಿನಮ್ಮವರು, ನಮ್ಮ ಜನಗಳು ಯಾವುದಕ್ಕಾಗಿ ಹೋರಾಟಈ ಹಾರಾಟ, ಮಾರಾಟತಮ್ಮತನವ ಅಡವಿಟ್ಟು ನಿಂತರಲ್ಲನಮ್ಮವರು, ನಮ್ಮ ಜನಗಳು ಮುಸುಕಿನೊಳಗಿನ ಗುದ್ದಾಟನಗೆಯ ಮರೆಯಲ್ಲಿ ಹಗೆಯಹೊಗೆಯಾಟಮನದೊಳಗೆ ಮತ್ಸರದ ಅಗ್ನಿಪರ್ವತದ ಪ್ರತೀಕವಾದರುನಮ್ಮವರು, ನಮ್ಮ ಜನಗಳು ಎಲ್ಲಿಂದ ಪಯಣವೋ ಮುಕ್ತಾಯವೂ ಅನೂಹ್ಯಸಮೂಹದೊಳಗೆ ಗೆದ್ದವರು ಇಲ್ಲ ,ಸೋತವರೂ ಇಲ್ಲಗೆದ್ದೆನೆಂದು ಬೀಗಿದವರಿಗೆಸೋಲಿನ ಅರಿವಿಲ್ಲಸೋಲು – ಗೆಲುವಿನ ಪಂದ್ಯದಲ್ಲಿನರಳುವರು ನಮ್ಮವರುನಮ್ಮ ಜನಗಳು *******************************

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು Read Post »

ಕಾವ್ಯಯಾನ

ನೆತ್ತರಿನ ಮಳೆ ಬಿದ್ದು….

ನೆತ್ತರಿನ ಮಳೆ ಬಿದ್ದು…. ಅಲ್ಲಾಗಿರಿರಾಜ್ ಕನಕಗಿರಿ ನೆತ್ತರಿನ ಮಳೆ ಬಿದ್ದುಮೈ ಮನಸು ಕೆಂಪಾದವೋ. ಕಪ್ಪಾದ ಮೋಡದಲ್ಲಿಕೆಂಪಾದ ಮಿಂಚೊಂದು ಹರಿದು.ಊರು ಕೇರಿ ಕೆಂಪಾದವೋ. ಬಿಸಿಲುಂಡ ನೆಲದಾಗ ನದಿಯೊಂದುಕೆಂಪಾಗಿ ಕಾಡು ಮೇಡು ಕೆಂಪಾದವೋ. ಬರಗಾಲಕ್ಕೆ ಹುಟ್ಟಿದ ಕೂಸುಎದೆಯ ರಕುತ ಕುಡಿದುತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ. ದಿಲ್ಲಿ ಗಡಿಗಳಲ್ಲಿಕೊರೆಯುವ ಚಳಿ ಬಿಸಿಯಾಗಿರೈತರ ಹೊಲಗದ್ದೆಗಳು ಕೆಂಪಾದವೋ. ಬಿಳಿ ಹಾಳೆಯ ಮೇಲೆ ಕವಿಯಅಕ್ಷರದ ಸಾಲುಗಳು ಹಸಿದವರದನಿ ಕೇಳಿ ಕೆಂಪಾದವೋಎಲ್ಲ ಕೆಂಪಾದವೋ……… **********************************

ನೆತ್ತರಿನ ಮಳೆ ಬಿದ್ದು…. Read Post »

ಕಾವ್ಯಯಾನ

ನಮ್ಮ ರೈತ

ಭಾಮಿನಿ ಷಟ್ಪದಿ ನಮ್ಮ ರೈತ ಅಭಿಜ್ಞಾ ಪಿ ಎಮ್ ಗೌಡ ಲೋಕ ಬೆಳಗುವ ದಿವ್ಯ ಮೂರ್ತಿಯುನಾಕ ಮಾಡುತ ಧರೆಯ ಮಡಿಲನುದೇಕುತಿರುತಿಹ ನಿತ್ಯ ಹೊಲದಲಿದಣಿದ ಜೀವವಿದು|ನೂಕು ನುಗ್ಗಲು ಜನರ ಗುಂಪಲುಬೇಕು ಬೇಡುವನರಿತು ಸಾಗುವಬಾಕಿಯುಳಿಸದೆ ಭುವಿಯ ಕಾರ್ಯವಮಾಡೊ ನಿಸ್ವಾರ್ಥಿ|| ಹಸಿರ ಸೇಚಿಸಿ ಚಂದ ಗೊಳಿಸುತನಸುಕು ಕಾಲದೊಳೆದ್ದು ದುಡಿಯುತಕೆಸರು ಧರಣಿಗೆ ಚೆಲುವ ಮಾಡಿನಿಂತು ನೋಡಿಹನು|ಸಸಿನೆಯಿಂದಲೆ ಹಸನು ಮಾಡಿಸಿಬೆಸೆದ ಬಂಧವ ಗಟ್ಟಿಗೊಳಿಸುತತಸಕುಗೊಳ್ಳುವ ಪಾಪ ರೈತನುನಿತ್ಯ ಮರುಗುವನು|| ಭವದ ಭಯವನು ಸಹಿಸಿಕೊಳ್ಳುತದವನ ಸೂಸುವ ಬೆಳೆಯ ಬೆಳೆಯುತಸವಿದ ಭಾವದ ದಿವ್ಯ ಹೂರಣಮೆಚ್ಚಿ ನಡೆಯುವನು|ತವಕದಿಂದಲೆ ಕುಗ್ಗಿ ಹೋಗುವಬೆವರ ಸುರಿಸುತ ಕೆಲಸ ಮಾಡುತಧವಸ ಧಾನ್ಯವ ಬೆಳೆದು ನಲಿದರುಕಷ್ಟ ಕಾರ್ಪಣ್ಯ|| ಮಳೆಯ ಮಾಟಕೆ ಕುಸಿದು ಬೀಳುತಬೆಳೆದ ಬೆಳೆಗೂ ಬೆಲೆಯು ಸಿಗದೇಕಳೆಯು ಕುಂದಿದೆ ರೈತ ಮೊಗವದುಭಾರಿ ಭಂಗದಲಿ|ತೊಳೆಯಬೇಕಿದೆ ಮನದ ಕೊಳೆಯನುಬಳಕೆ ಮಾಡದ ವಸ್ತು ವಿಷಯದಹಳತು ಹೊಸತಿನ ಭವ್ಯ ಸಂಗಮಕೂಗಿ ಕರೆದಿರಲು|| ಅನ್ನ ನೀಡುತ ಜಗವ ರಕ್ಷಿಸಿತನ್ನ ಹೆಸರಲಿ ನೋವು ಬರೆಸುತಭಿನ್ನ ರೂಪದಿ ಮನವ ಗೆದ್ದು ನೋವಪಡುತಿಹನು|ಚಿನ್ನದಂತಹ ಬೆಳೆಯ ತೆಗೆದರುಕನ್ನ ಹಾಕುವ ಮಂದಿ ಮುಂದೆಯೆಮನ್ನದಿಂದಲೆ ಬದುಕ ಸವೆಸುತದುಡಿವ ಯೋಗಿಯಿವ|| *************************************************

ನಮ್ಮ ರೈತ Read Post »

ಕಾವ್ಯಯಾನ

ಆಲದ ಮರದ ಅಳಲು

ಕವಿತೆ ಆಲದ ಮರದ ಅಳಲು ನೂತನ ದೋಶೆಟ್ಟಿ ನಾನೊಂದು ಆಲದ ಮರ ಅಜ್ಜ ನೆಟ್ಟಿದ್ದಲ್ಲಬಿಳಲ ಬಿಟ್ಟು ಬೆಳೆದೆ, ಹರಡಿದೆ ಬಯಲ ತುಂಬ ನಾನು ಬೆರಳ ಚಾಚಿ ನಿಂತಿದ್ದೇನೆಅದರ ದಿಕ್ಕು ಬಯಲಿನಾಚೆಗಿದೆ!ಆ ಬೆರಳ ತುದಿಯವರೆಗೆ ನೋಡಿದಿರಿ, ನಡೆದಿರಿಅಲ್ಲೇ ಗುಂಪಾದಿರಿಓಟವಿನ್ನೂ ಮುಗಿದಿಲ್ಲಇದು ದೂರದಾರಿ ಗೆಳೆಯರೆ ಗಡಿರೇಖೆಗಳ ಅಳಿಸಿದಾಗನಾನು ಒಬ್ಬನೇ ಇದ್ದೆಬುದ್ಧನಿಗೆ ಹತ್ತಿರವಾದೆಅವನೂ ಆಲೂ ತಾನೆ? ನಾನು , ಬುದ್ಧ ಕೇಳಬೇಕಿದೆ ನಿಮ್ಮನ್ನುನಮ್ಮ ಬಿಳಲುಗಳ ಅಂಟಿಕೊಂಡಿರಿನೀವೇಕೆ ಆಲವಾಗಲಿಲ್ಲ? ಸಂವಿಧಾನವ ಕೇಳಿ ನೋಡಿನಾನು ಹೋರಾಡಿದ್ದುಕರ್ತವ್ಯ ಮಾಡುತ್ತಕಾಯಕ ದೇವರು ನನಗೆದೇವರ ಮರೆತ ಹಕ್ಕಿಗೆ ಯಾವ ಲೆಕ್ಕ ? ಬುದ್ಧ ಬೋಧಿಸಿದಂತೆ ಬದುಕಿದಲೋಕ ಅವನ ಹಿಂದೆ ನಡೆಯಿತುಹೆಚ್ಚೇನು ಹೇಳಲಿ? ಇನ್ನೀಗ ಬಯಲಾಚೆ ಜಿಗಿಯಿರಿನಾನು, ಬುದ್ಧ ನಿಮಗಾಗಿ ಕಾಯುತ್ತೇವೆ. *****************************************

ಆಲದ ಮರದ ಅಳಲು Read Post »

ಅನುವಾದ

ಗೊಲ್ಲರ ರಾಮವ್ವ

ಅನುವಾದಿತ ಕಥೆ ಗೊಲ್ಲರ ರಾಮವ್ವ(ಭಾಗ- ಒಂದು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಪಿ.ವಿ.ನರಸಿಂಹರಾವ್ ತಮ್ಮ ಮಾತೃಭಾಷೆಯಾದ ತೆಲುಗಿನಲ್ಲೇ ಅಲ್ಲದೇ ಹಿಂದಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ತೆಲುಗಿನಲ್ಲಿ ಜ್ಞಾನ ಪೀಠ ಪ್ರಶಸ್ತಿ‌ ಪಡೆದ ವಿಶ್ವನಾಥ ಸತ್ಯನಾರಾಯಣ ಅವರವೇಯಿ ಪಡಗಲು (ಸಾವಿರ ಹೆಡೆ) ಕಾದಂಬರಿಯನ್ನು ಹಿಂದಿಗೆ “ಸಹಸ್ರ ಫಣ್” ಎಂಬ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಮತ್ತೆ ಮರಾಠಿಯ ಹರಿನಾರಾಯಣ ಆಪ್ಟೆಯವರ ” ಪಣ್ ಲಕ್ಷ್ಯತ್ ಕೋಣ್ ಘೇತೊ ಕಾದಂಬರಿಯನ್ನು ತೆಲುಗಿಗೆ ತಂದಿದ್ದಾರೆ. ಒಟ್ಟು ೧೭ ಭಾಷೆ ಬಲ್ಲವರಾಗಿದ್ದರು. ಕನ್ನಡಕ್ಕೆ: ರಮೇಶ್ ಬಾಬು ಚಂದಕ ಚರ್ಲ ಢಾಂ…..ಢಾಂ…..ಢಾಂ…! ಬಾಂಬುಗಳ ಸ್ಫೋಟದಿಂದ ಅರ್ಧ ರಾತ್ರಿಯ ಪ್ರಶಾಂತ ವಾತಾವರಣ ಕದಡಿತು. ಎಲ್ಲೆಡೆ ತುಂಬಿನಿಂತ ನೀರವತೆಯನ್ನು ಆ ಧ್ವನಿ ತರಂಗಗಳು ಒಂದು ವಿಚಿತ್ರ ಸಂಚಲನವನ್ನೆಬ್ಬಿಸಿ ಶೂನ್ಯದಲ್ಲಿ ವಿಲೀನ ಮಾಡಿದವು. ಗಾಢ ನಿದ್ರೆಯಲ್ಲಿದ್ದ ಗ್ರಾಮವೆಲ್ಲಾ ಒಮ್ಮೆಲೇ ತತ್ತರಿಸಿ ಹೋಯಿತು. ಮಕ್ಕಳಾದಿಯಾಗಿ ಎಲ್ಲಾರೂ ಗೋಳಿಟ್ಟರು. ನಿದ್ದೆಯ ಮಂಪರಿನಲ್ಲಿ ಏನು ನಡೆಯುತ್ತಿದೆಯೋ ಯಾರಿಗೂ ತಿಳಿಯುತ್ತಿಲ್ಲ. ಏನೋ ನೋವು… ಏನೋ ಕಳವಳ… ಏನೋ ಹೆದರಿಕೆ. ಆದರೂ ಎಲ್ಲಾ ಅಗಮ್ಯಗೋಚರ. ಊರಿನವರಿಗೆಲ್ಲಾ ಯಾವುದಾದರೂ ದುಃಸ್ವಪ್ನ ಬಿದ್ದು ಎಲ್ಲರೂ ಒಟ್ಟಿಗೆ ಎದ್ದು ಕೂತಿದ್ದಾರಾ ಎನ್ನುವಷ್ಟು ಗಲಿಬಿಲಿ ಯಾಗಿತ್ತು ಆ ಎರಡು ನಿಮಿಷಗಳಲ್ಲಿ…. ಇಷ್ಟು ಗೊಂದಲ ವಾದರೂ ಬಜಾರು ಮಾತ್ರ ನಿರ್ಮಾನುಷ್ಯ ವಾಗೇ ಇತ್ತು. ಬಾಗಿಲು ತೆಗೆದು ಹೊರಗೆ ನೋಡಬೇಕೆನ್ನುವವರ ಕೈಗಳು ಸಹಿತ ಚಿಲಕ ಗಳ ಮೇಲೆ ಹೋಗುತ್ತಿದ್ದ ಹಾಗೇ ಜಡವಾಗಿದ್ದವು. ಬೇಜಾರಿನಿಂದ ಆಚೆ ಈಚೆ ಹಾರುವ ಹಕ್ಕಿಗುಂಪು, ಅವುಗಳ ರೆಕ್ಕೆಗಳ ಪಟಪಟ ಸದ್ದು, ಊರಿನ ಎಲ್ಲ ಹಿತ್ತಲುಗಳಿಂದ ಕೇಳಿಬರುತ್ತಿದ್ದ ನಾಯಿಗಳ ಬೊಗಳಿಕೆ, ದೊಡ್ಡಿಗಳಲ್ಲಿ ಮೆಲಕು ಹಾಕುತ್ತಿದ್ದ ದನಕರುಗಳ ಸಪ್ಪಳ. ಅಲ್ಲಲ್ಲಿ ಬೇಲಿಗಳನ್ನೆಲ್ಲ ತುಳಿದು ಓಡುತ್ತಿದ್ದ ಕೋಣಗಳ ಗೊರಸುಗಳ ಘರ್ಷಣೆ- ಇವುಮಾತ್ರ ನಂತರ ಕೇಳಿಬಂದವು.  ಸದ್ದು ಕೇಳಿದ ತಕ್ಷಣ ಗೋಳಿಟ್ಟ ಗ್ರಾಮಸ್ಥರಾರೂ ಅದೇನೋ ದಿವ್ಯ ಜ್ಞಾನ ಬೋಧಿತರ ತರ ಕಿಮ್ಮೆನ್ನಲಿಲ್ಲ. ಕಿಮ್ಮೆನಲಿಲ್ಲ ನಿಜ. ಆದರೇ ಹಸುಗೂಸುಗಳೂ ಸೇರಿ ಅಲ್ಲಿ ಯಾರೂ ನಿದ್ರೆ ಮಾಡಲಿಲ್ಲ. ಏನೋ ಗುಸು ಗುಸು .. ಏನೋ ಸಂಜ್ಞೆಗಳು.. ಏನೋ ಅಸಹಾಯಕ ನೋಟ… ಏನೋ ಕೇಳಿಸದಂಥ ಹರಕೆಗಳು. ತಾಯಿಗಳು ಮಕ್ಕಳಿಗೆ “ಶ್ರೀರಾಮರಕ್ಷ” ಎನ್ನುತ್ತ ದೃಷ್ಟಿ ತೆಗೆದರು. ಮಕ್ಕಳ ಹೆದರಿಕೆ ಹೋಗಲಾಡಿಸಲು ಅವರ ಅಂಗಾಲಿನ ಧೂಳು ತೆಗೆದು ಅವರ ಹಣೆಗೆ ಹಚ್ಚಿದರು. ಬೆನ್ನು ನೇವರಿಸಿದರು. ಆದರೇ ಮಕ್ಕಳ ಹೆದರಿಕೆಗೆ ಉಪಾಯ ಹೇಳುವ ತಾಯಂದರಿಗೆ ತಮ್ಮ ಹೆದರಿಕೆ ಹೋಗಲಾಡಿಸುವ ಉಪಾಯವೇ ಗೊತ್ತಾಗಲಿಲ್ಲ. ಹಣೆಗೆ ಬೊಟ್ಟಿಡುತ್ತಿದ್ದ ಕೈಗಳ ಬಳೆಗಳು ಗಲಗಲ ಎನ್ನುತ್ತಲೇ ಇದ್ದವು. ಕಾಲಿನ ಪಟ್ಟಿಗಳು ಕೂಡ ಕೊಂಚ ಝೇಂಕರಿಸುತ್ತಲೇ ಇದ್ದವು. ಅದೊಂದು ವಿಚಿತ್ರ ಪ್ರಳಯ…ಅದೊಂದು ಕ್ಷಣಿಕ ಮೃತ್ಯು ತಾಂಡವ….. ಅದೊಂದು ಅಸ್ಥಿರೊತ್ಪಾತ….. ಒಂದು ಗಂಟೆ ಕಳೆಯಿತು.  ಎಂದಿನಹಾಗೇ ಸುತ್ತೂ ಅಂಧಕಾರ ಆವರಿಸಿತು. ಚಿಮ್ಮಂಡಿ ಹುಳಗಳು ಏಕಶೃತಿಯಲ್ಲಿ ಹಾಡುತ್ತಿವೆ. ಎಲ್ಲಾ ಎಂದಿನ ಹಾಗೇನೇ ! ಆದರೇ ನಿದ್ರೆ ಮಾತ್ರ ಊರಿನ ಹತ್ತಿರ ಸುಳಿದಿರಲಿಲ್ಲ. ಗೊಲ್ಲರ ರಾಮವ್ವ ತನ್ನ ಗುಡಿಸಲಲ್ಲಿ ಕತ್ತಲಲ್ಲೇ ಕುಳಿತಿದ್ದಾಳೆ. ಅವಳ ಕೈಕಾಲುಗಳು ನಡುಗುತ್ತಿವೆ. ಸ್ವಲ್ಪ ಅವಳ ವಯಸ್ಸಿನಿಂದ, ಮತ್ತೆ ಸಲ್ಪ ಭಯದಿಂದ. ಅವಳ ಮಡಿಲಲ್ಲಿ ಒಬ್ಬ ಹದಿನೈದು ವರ್ಷದ ಹುಡುಗಿ ಹುದುಗಿಕೊಂಡು ಮಲಗಿದ್ದಾಳೆ. “ಅವ್ವಾ! ಈಗ ಇದೇನ್ ಸಪ್ಪಳಾನೇ ?” ಮೆತ್ತಗೆ ಕೇಳಿತು ಆ ಹುಡುಗಿ. “ನಿನ್ಗ್ಯಾಕೇ ಮೊದ್ದುಮುಂಡೇ !ಇದೇನು ? ಅದೇನು?… ಬರೀಕೇಳೋದೇ ….ಏನೋ ಮುಳುಗಿಹೋದ ಹಾಗೆ ಎಲ್ಲಾ ನಿನಗೇ ಬೇಕು “ ಆ ಹುಡುಗಿ ಮತ್ತೆ ಮಾತಾಡುವ ಸಾಹಸ ಮಾಡಲಿಲ್ಲ. ಮತ್ತೆ ಕೆಲ  ನಿಮಿಷದ ನಂತರ ಮುದುಕಿ ತನ್ನಲ್ಲಿ ತಾನೇ ಗೊಣಗಲು ಶುರುಮಾಡಿದಳು. ” ಏನಂದ್ಕೊಂಡಿಯೇ ತಾಯೀ ! ಹಾಳು ಕಾಲ ಬಂತು. ನೀವೆಲ್ಲ ಹೇಗೆ ಬದುಕ್ತೀರೋ ಏನೋ? ಈ ತುರುಕರ ಜತೆ ಒಳ್ಳೆ ಸಾವು ಬಂತು… ಮೊನ್ನೆ ನಾಲ್ಕು ಮಂದಿನ್ನ ಗುಂಡು ಹೊಡೆದು ಕೊಂದ್ರು. ಮತ್ತೆ ಇವತ್ತು ಕೂಡ ಅಂಥದೆ ಅಘಾಯಿತ್ಯ ಮಾಡ್ಯಾರೋ ಏನೋ ! ಅದೇನ್ ಹೋಗೋ ಕಾಲಾನೋ ಇವರಿಗೆ” ಮತ್ತೆ ನಿಶ್ಶಬ್ದ. ರಾಮವ್ವ, ಮಲ್ಲಮ್ಮ ಇಬ್ಬರೂ ತಮ್ಮ ತಮ್ಮ ಆಲೋಚನೆಗಳಲ್ಲಿ ಮುಳುಗಿಹೋದರು. ನಿದ್ರೆಗೆ ಮಾತ್ರ ಬಹಿಷ್ಕಾರ ಹಾಕಿಯಾಗಿತ್ತು. ಎಪ್ಪತ್ತು ದಾಟಿದ ರಾಮವ್ವನಿಗೂ ಜಾಗರೆಣೆನೇ. ಹದಿನೈದು ವಯಸ್ಸಿನ ಮಲ್ಲಮ್ಮನಿಗೂ ಜಾಗರಣೆನೇ. ಅಷ್ಟರಲ್ಲಿ ಕಿಟಿಕೀಯನ್ನ ಯಾರೋ ತಟ್ಟಿದರು. ಕಿಟಿಕಿ ಅಂದರೇ ಅದರದೆಷ್ಟು ತ್ರಾಣ ? ಬೆಳಕಿನ ಸಲುವಾಗಿ ಗೋಡೆಯಲ್ಲಿ ಕೊರೆದ ಒಂದು ತೂತಷ್ಟೇ. ಅದಕ್ಕೆ ಗೆದ್ದಲು ಹತ್ತಿದ ಯಾವುದೋ ಕಟ್ಟಿಗೆಯಲ್ಲಿ ಮಾಡಿದ ಎರಡು ಚಿಕ್ಕ ಬಾಗಿಲು. ಅದೇ ಆ ಗುಡಿಸಲಿಗೆ ಕಿಟಿಕಿ. ಆ ಸದ್ದಿಗೆ ಇಬ್ಬರೂ ಬೆಚ್ಚಿಬಿದ್ದು ಕುಳಿತರು. ಕೂತಲ್ಲಿಯೇ ಶ್ವಾಸ ಬಿಗಿಹಿಡಿದು ಜಾಗ್ರತೆಯಾಗಿ ಕೇಳತೊಡಗಿದರು. ಕಿಟಿಕಿ ಬಾಗಿಲು ಗಾಳಿಗೆ ಹೊಡೆದುಕೊಂಡವೋ ಅಥವಾ ಯಾವ ಬೆಕ್ಕೇನಾದರೂ ಅದನ್ನ ಸರಿಸಿತೋ ಅಂತ ! ಮತ್ತೆ ಅದೇ ಸದ್ದು. ಈಸಲ ಸಂಶಯವೆನಿಸಲಿಲ್ಲ. ಯಾರೋ ಕಿಟಿಕಿ ಬಾಗಿಲು ಹೊಡೆಯುತ್ತಿರುವುದು ನಿಜ. ಅದು ಗಾಳಿ ಅಲ್ಲ. ಬೆಕ್ಕಂತೂ ಅಲ್ಲವೇ ಅಲ್ಲ. ಏನು ಮಾಡೋದು? ಒಂದೂ ತೋಚಲಿಲ್ಲ. ಮತ್ತೆ ಸದ್ದು ಕೇಳಿಸಿತು.ಈ ಸಲ ದೊಡ್ಡದಾಗೇ ಕೇಳಿಸಿತು. ಯಾವುದೋ ಸ್ಥಿರ ಸಂಕಲ್ಪದೊಂದಿಗೆ ತಟ್ಟಿದಹಾಗೆ. ಇನ್ನು ಲಾಭವಿಲ್ಲ. ಮುದುಕಿ ನಿದಾನವಾಗಿ ಏಳತೊಡಗಿದಳು. ಮಲ್ಲಮ್ಮನಿಗೆ ಎದೆ ಹೊಡೆತ ಜೋರಾಯಿತು. ಅವ್ವನನ್ನು ಹಿಡಿದುಕೊಂಡು ಕಂಪಿಸುವ ದನಿಯಲ್ಲಿ “ನಂಗೆ ಭಯವಾಗ್ತಿದೆ ಅವ್ವಾ ” ಅಂತ ಮಾತ್ರ ಅಂದಳು. “ಹಾಗೇ ಇರು. ಅದೇನೋ ನೋಡೋಣ.” ಮುದುಕಮ್ಮ ದೃಢ ನಿಶ್ಚಯದಿಂದ ಎದ್ದಳು. ಅಭ್ಯಾಸ ಬಲದಿಂದ ಕತ್ತಲಲ್ಲೇ ಕಿಟಿಕಿ ಹತ್ತಿರ ಸೇರಿದಳು. ಒಳಗಿನ ಚಿಲಕ ತೆಗೆಯುತ್ತಾ ” ಯಾರು” ಅಂದಳು. ಅವಳ ಆ ಪ್ರಶ್ನೆ ಮುಗಿಯುತ್ತಿದ್ದ ಹಾಗೇ ಅವಳ ಬಾಯಿ ಮುಚ್ಚಲ್ಪಟ್ಟಿತು. ತಕ್ಷಣ ಒಬ್ಬ ವ್ಯಕ್ತಿ ಆ ಇಕ್ಕಟ್ಟಾದ ಸಂದಿನಿಂದ ಅತಿ ಕಷ್ಟದಲ್ಲಿ ನುಸುಳಿ ಬಂದ. ಅವನ ಕಾಲು ನೆಲಕ್ಕೆ ತಾಗುತ್ತಿರುವ ಹಾಗೇ ಒಳಗಿನ ಚಿಲಕವನ್ನು ಹಾಕಿದ. ಮುದುಕಮ್ಮ ಹಾಗೇ ನಿಂತಿದ್ದಳು. ಇನ್ನೊಂದು ಕಡೆ ಮಲ್ಲಮ್ಮ ಕಣ್ಣು ಮುಚ್ಚಿ ಕತ್ತಿಯ ಇರಿತಕ್ಕಾಗಿ ಕಾಯುತ್ತಿರುವ ಹಾಗೆ ಬಿದ್ದಿದ್ದಳು. ಕತ್ತಲಲ್ಲಿ ಏನೋ ಕಾಣ್ತಾಇಲ್ಲ. ಮುದುಕಮ್ಮನಿಗೆ ಮಾತ್ರ ಸಂಶಯವೇ ಇರಲಿಲ್ಲ. ಗತಾನುಭವವೇ ಎಲ್ಲಾ ಹೇಳ್ತಾ ಇತ್ತು. ಪೋಲೀಸರವನೋ ಅಥವಾ ರಜಾಕಾರ್ ತುರುಕುವರವನೋ ಮನೆಯೊಳಗೆ ಬಂದಿದ್ದಾನೆ. ಇನ್ನೇನಿದೆ ? ತನಗೆ ಸಾವು ತಪ್ಪುವುದಿಲ್ಲ. ಮುದ್ದಾಗಿ ಬೆಳೆಸಿದ ಮೊಮ್ಮಗಳಿಗೆ ಮಾನ ಭಂಗ ತಪ್ಪುವುದಿಲ್ಲ. ಈ ರಾಕ್ಷಸರನ್ನು ಯಾರು ಎದುರಿಸುತ್ತಾರೆ….? ತಾನು ಗದ್ದಲ ಮಾಡಿದರೇ ಪಕ್ಕದ ಮನೆಯವರು ಕೇಳಿಸ್ಕೋತಾರಾ ? ಇಲ್ಲ. ಅದೆಲ್ಲ ಕನಸಿನ ಮಾತು. ಅವರವು ಮಾತ್ರ ಪ್ರಾಣಗಳಲ್ಲಾ ? ಅವರ ಮನೆಯಲ್ಲಿ ಮಾತ್ರ ಹರೆಯದ ಹುಡುಗಿಯರಿಲ್ಲಾ ? ಆವತ್ತು ಶಾನುಭೋಗರ ಮಗಳ್ನ ಬಲಾತ್ಕಾರದಿಂದ ಹೊತ್ಕೊಂಡು ಹೋದಾಗ ಯಾರಿಗೇನು ಮಾಡಲಾಗಿತ್ತು? ಯಾರಡ್ಡ ಬರಲಿಕ್ಕಾಯಿತು? ಈಗ ತನಗೆ ಮಾತ್ರ ಯಾರು ದಿಕ್ಕಾಗ್ತಾರೆ …? ಒಂದು ನಿಮಿಷದಲ್ಲಿ ಮುದುಕಮ್ಮ ಇಷ್ಟೆಲ್ಲಾ ಆಲೋಚಿಸಿದಳು. ಇನ್ನು ನಡೆಯೋದು ಅವಳಿಗೆ ಸ್ಪಷ್ಟವಾಗಿ ಕನ್ನಡಿಯಲ್ಲಿಯ ತರ ಕಾಣಿಸಲಾರಂಭಿಸಿತು. ತಾನು ಸತ್ತರೂ ಸರಿಯೇ… ತಂದೆ ತಾಯಿ ಇಲ್ಲದ ಈ ಮಲ್ಲಿಗಾದ್ರೂ ಮಾನಭಂಗ ತಪ್ಪಿದ್ರೇ… ತಾನು ಇಷ್ಟು ದಿನ ಸಾಕಿ ಸಲಹಿದ್ದು ಈ ರಾಕ್ಷಸನ ಕೈಗೆ ಕೊಡಲಿಕ್ಕಾ ? ಮುದುಕುಮ್ಮ ಕಣ್ಣೀರು ಹಾಕುತ್ತಾ ಕೊರಡಿನ ತರ ನಿಂತಳು. ವೃದ್ಧಾಪ್ಯದ ನಡುಗು ಸಹ ತಾನಾಗಿಯೇ ನಿಂತುಹೋಯಿತು. ಮುದುಕಮ್ಮನಿಗೂ, ಆ ವ್ಯಕ್ತಿಗೂ ಸುಮಾರು ಎರಡು ಗಜ ದೂರವಿತ್ತು. ಹೀಗೆ ಆಲೋಚಿಸುತ್ತಿರುವಾಗಲೇ ಆತ ಅವಳ ಕಡೆಗೆ ಎರಡು ಹೆಜ್ಜೆ ಹಾಕಿದ. ಕತ್ತಲಲ್ಲೂ ನೇರವಾಗಿ ಸಮೀಪಿಸುತ್ತಿದ್ದಾನೆ. ಅವಳಿಗೆ ಆಕಾಶವೇ ಮೇಲೆ ಬಿದ್ದಂತಾಯಿತು. ಇನ್ನೊಂದು ಹೆಜ್ಜೆಯಲ್ಲಿ ತನ್ನ ಬದುಕು ಕೊನೆಗಾಣುತ್ತದೆ. ಮತ್ತೆ ಮಲ್ಲಿ….! ಅತಿ ಕಷ್ಟದಲ್ಲಿ ಮುದುಕಮ್ಮ “ಅಯ್ಯಾ ” ಎನ್ನುವವಳಿದ್ದಳು. ಆದರೇ ಮತ್ತೆ ಅವಳ ಬಾಯಿ ಮುಚ್ಚಲ್ಪಟ್ಟಿತು. ಆ ಕ್ಷಣದಲ್ಲಿ ತನಗೆ ಗೊತ್ತಿದ್ದ ದೇವರನ್ನೆಲ್ಲಾ ನೆನೆದಳು. ತನ್ನ ಮೊಮ್ಮಗಳ ಸಲುವಾಗಿ. ಅಷ್ಟರಲ್ಲಿ ಆ ವ್ಯಕ್ತಿಯ ಗುಸುಗುಸು ಕೇಳಿಬಂತು ಮುದುಕಮ್ಮನ ಕಿವಿಯಲ್ಲಿ ” ಸದ್ದು ಮಾಡಬೇಡ. ನಾನು ಕಳ್ಳನಲ್ಲ. ರಜಾಕಾರನಲ್ಲ. ಪೋಲೀಸರವನೂ ಅಲ್ಲ. ನಿಮ್ಮನ್ನೇನೂ ಮಾಡಲ್ಲ. ಸದ್ದು ಮಾತ್ರ ಮಾಡಬೇಡ. “ “ಅಬ್ಬಾ ! ಏನೂ ಮೋಸ ಇವರದು ! ನಂಬಿಸಿ ಕುತ್ತಿಗೆ ಕೊಯ್ಯಲು ನೋಡುತ್ತಿದ್ದಾನೆ ಇವನು. ಸವಿ ಮಾತಿನಲ್ಲಿ ಮುದಗೊಳಿಸಿ ಮಲ್ಲೀನ್ನ…. ಅಬ್ಬ ! ಯಾವುದಕ್ಕೂ ಹೇಸುವುದಿಲ್ಲ ಈ ರಾಕ್ಷಸರು. ಮೊದಲು ಸಿಹಿ ಮಾತು. ಅದಾಗದಾದರೇ ಬೇರೇ ಉಪಾಯ. ಅದೇ ವರಸೆ ಅಲ್ಲಾ… “ ಯಾವುದಾದರಾಗಲೀ ಅಂತ ಮುದುಕಮ್ಮ ಅವನ ಎರಡೂ ಕಾಲು ಹುಡುಕಿದಳು. ದೀನವಾಗಿ ಬೇಡಿಕೊಂಡಳು.  ” ನಿನ್ನ ಗುಲಾಮಳು ನಾನು. ನಿನ್ನ ಮೆಟ್ಟು ಹೊರ್ತೀನಿ. ನನ್ ತಲೆ ಬೇಕಾದ್ರೇ ತೊಗೋ. ಹುಡುಗೀನ್ನ ಮಾತ್ರ ಮುಟ್ಟಬೇಡ. ನಿನ್ನ ತಂಗಿ ಅಂತ ತಿಳ್ಕೋ. ನಿನ್ ಕಾಲಿಗೆ ಬೀಳ್ತೀನಿ “ “ಇಲ್ಲವ್ವಾ ! ನಾನು ಹೇಳ್ತಿದ್ರೆ ನಂಬ್ತಾ ಇಲ್ಲ ಯಾಕೆ ? ನಾನು ನೀನು ಹೇಳಿದ ಯಾವ ದುಷ್ಟನೂ ಅಲ್ಲ. ನಿನ್ನ ಹಾಗೇ ತೆಲುಗಿನವನು. ಹೌದು. ಶುದ್ಧ ತೆಲುಗಿನಲ್ಲೇ ಮತಾಡ್ತಾ ಇದಾನೆ. ಮುದುಕಮ್ಮನಿಗೆ ಇನ್ನುವರೆಗೋ ಇಷ್ಟು ಒಳ್ಳೆ ತೆಲುಗು ಮಾತಾಡಿದ ರಜಾಕಾರ್ ಕಂಡುಬಂದಿರಲಿಲ್ಲ. ಬರೀ ಬಂದೂಬಾರದ ತೆಲುಗು ಮಾತಾಡುವ ನಿಜಾಮಿನ ತುರುಕರನ್ನೇ ನೋಡಿದ್ದಳಾಕೆ. ಹಾಗಾದರೇ ಇವನು ರಜಾಕಾರ್ ಅಲ್ಲವೆಂದೇ ಚರ್ಚೆ ಮಾಡಿಕೊಂಡಳಾಕೆ. ಕೆಲ ನಿಮಿಷಗಳಾದರೂ ಸಾವು, ಮಾನಭಂಗ ತಪ್ಪಿದವು ! ಮುದುಕಮ್ಮನಿಗದೇ ಇಂದ್ರಜಾಲವೆನಿಸಿದವು. ಮಾನವನ ಹೃದಯಲ್ಲಿರುವ ಅಡಗಿರೋ ಅಜೇಯ ಆಶಾವಾದ ಶಕ್ತ ಆಕೆಗೆ ಆಸರೆಯಾಯಿತು. ಬಂದ ಮನುಷ್ಯ ಎಷ್ಟು ಹೊಸಬನಾದರೂ, ಆತ ಬಂದ ಪರಿಸ್ಥಿತಿಗಳು ಎಷ್ಟು ಅನುಮಾನಾಸ್ಪದವಾಗಿದ್ದರೂ ಅದೇಕೋ ಮುದುಕಮ್ಮನಿಗೆ ಮಾತ್ರ ಅವನನ್ನು ನಂಬಬಹುದೆನಿಸಿತು.  ಅದು ವಿಶ್ವಾಸವಲ್ಲ. ವಿಶ್ವಾಸೇಚ್ಛೆ. ವಿಪತ್ತಿನ ಸ್ಥಿತಿಯಲ್ಲಿ ಕಾಣಿಸಿದ ಏಕೈಕ ಆಧಾರ. ಅದನ್ನು ಹೇಗೆ ಬಿಟ್ಟಾಳು? ಬಂದ ಮನಷ್ಯನ ಕಾಲು ಹಿಡಿದ ಮುದುಕಮ್ಮ ಮೆಲ್ಲ ಮೆಲ್ಲಗೆ ಏಳುತ್ತಾ, ಅವನ ಮೊಣಕಾಲು, ಸೊಂಟ, ಎದೆ, ಬೆನ್ನು, ಮುಖ, ತಲೆ ತಡವಿದಳು. ಮೈಮೇಲೆ ಒಂದು ಚಡ್ಡಿಮಾತ್ರವಿತ್ತು. ಅಂಗಿ ಇಲ್ಲ. ಮೈಯೆಲ್ಲ ನಾನಾ ತರದ ಹುಲ್ಲು, ಮಣ್ಣು ಮೆತ್ತಿಕೊಂಡಿತ್ತು. ದೇಹದ ಎಲ್ಲಾ ಕಡೆ ಗಾಯಗಳಾಗಿದ್ದವು. ಕೆಲ ಕಡೆಯಿಂದ ಇನ್ನೂ ರಕ್ತ ಒಸರುತ್ತಿದ್ದು ರಕ್ತ ಮುದುಕಮ್ಮನ ಕೈಗಂಟಿತು. ಕೆಲವು ಕಡೆ ಯಾವಾಗೋ ಜಿನುಗಿ ಅಟ್ಟಿ ಕಟ್ಟಿದ ರಕ್ತದ ಕುರುಹು ಕೈಗೆ ತಗುಲುತ್ತಿತ್ತು. ಮೈಯೆಲ್ಲಾ ಜ್ವರದಿಂದ ಕುದಿಯುತ್ತಿತ್ತು. ಮುಖದ ತುಂಬಾ ಬೆವರು. ಉಸಿರು ಸಹ ಕಷ್ಟದಲ್ಲಿ ಆಡುತ್ತಿದ್ದ ಹಾಗಿತ್ತು. ನಡುನಡುವೆ ಅವನಿಗರಿವಿಲ್ಲದ ಹಾಗೇ ನರಳುವಿಕೆ ಹೊರಬರುತ್ತಿತ್ತು. ಎದೆಯಂತೂ ತಿದಿಯಂತೆ ಏರಿಳಿಯುತ್ತಿತ್ತು. ತನ್ನ ಸ್ಪರ್ಶದಿಂದಲೇ ಮುದುಕಮ್ಮನಿಗೆ ಗೊತ್ತಾಯಿತು. ಈ ವ್ಯಕ್ತಿ ನಿಸ್ಸಹಾಯಕ. ಯಾವುದೋ ಆಪತ್ತಿನ ಸ್ಥಿತಿಯಲ್ಲಿದ್ದ ಶರಣಾಗತ ಅಂತ. ಇಷ್ಟು ತಿಳಿದ ತಕ್ಷಣ ಮುದುಕಮ್ಮನ ಮನಃಸ್ಥಿತಿ ಗಟ್ಟಿಯಾಯಿತು. ಕಾಯಕವು ಎದ್ದು ನಿಂತಿತು. ಅನಿರ್ವಚನೀಯವಾದ ಪರಿವರ್ತನೆ ಉಂಟಾಯಿತು. ಐದು ನಿಮಿಷದ ಕೆಳಗೆ ಮೊಮ್ಮಗಳ ಶೀಲ ರಕ್ಷಣೆಯ ಸಲುವಾಗಿ ಅವನ ಕಾಲು ಹಿಡಿದು “ನಾನು ನಿನ್ನ ಗುಲಾಮಳು. ನಿನ್ನ ಕಾಲಿಗೆ ಬೀಳ್ತೀನಿ” ಎಂದು ಬೇಡಿದ ಮುದುಕಮ್ಮ ಈಗ ಆಶ್ಚರ್ಯ ಮತ್ತು ಸಹಾನುಭೂತಿ ಮಿಶ್ರಿತ ಸ್ವರದಲ್ಲಿ ” ಇದೇನ್ ಗತಿನೋ ನಿಂದು?

ಗೊಲ್ಲರ ರಾಮವ್ವ Read Post »

ಕಾವ್ಯಯಾನ

ಉಳಿದ ಸಾರ್ಥಕತೆ!

ಕವಿತೆ ಉಳಿದ ಸಾರ್ಥಕತೆ! ಸುಮನಸ್ವಿನಿ ನೀ ಅರ್ಧ ನಕ್ಕು ಉಳಿಸಿದಸಣ್ಣನಗು ನಾನು,ಸ್ವಲ್ಪ ಓದಿ ಕಿವಿ ಮಡಚಿಟ್ಟಹಳೇ ಪುಸ್ತಕ.. ನೀ ಅಷ್ಟುದ್ದ ನಡೆದು ಮಿಗಿಸಿದಕಾಲುಹಾದಿ ನಾನು,ಚೂರೇ ಅನುಭವಿಸಿ ಎದ್ದುಹೋದಸಂಜೆ ಏಕಾಂತ.. ನೀ ತುಸು ಹೊತ್ತೇ ಕೈಯಲಿಟ್ಟುನಲಿದ ಹೂ ನಾನು,ತೃಪ್ತಿಯಾದಷ್ಟು ಸವಿದು ಇರಿಸಿದದೇವಳದ ಪ್ರಸಾದ. ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂದಾರಿಬದಿಯ ಮೈಗಲ್ಲಿನಂತೆಮಿಕ್ಕುಳಿದ ಸಾರ್ಥಕತೆಯತುಂಬಿಕೊಳುವ ನಿರೀಕ್ಷೆಯಲಿ! ****************

ಉಳಿದ ಸಾರ್ಥಕತೆ! Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ ಸಿಗುತ್ತದೆ. ಆದರೆ ಅಸಂಖ್ಯ ಮಕ್ಕಳಿಗೆ ಅದೂ ಇಲ್ಲ. ಆ ಮಕ್ಕಳನ್ನು ನೆನೆದು ನಾವಿಲ್ಲಿ ದುಃಖಿಸಿ ದುಃಖಿಸಿ ಅಳುತ್ತೇವೆ. ಪ್ರಾರ್ಥಿಸುತ್ತೇವೆ. ನ್ಯಾಯಕ್ಕಾಗು ಕೂಗುತ್ತೇವೆ. ದೀಪ ಹಚ್ಚಿ ಅವರ ಆತ್ಮಕ್ಕಾಗಿ ನಾವಿಲ್ಲಿ ಶಾಂತಿ ಕೋರುತ್ತೇವೆ. ಹೀಗೇ ಯಾರೋ ಎಂಥದೋ ಸಂಕಟದಲ್ಲಿರುತ್ತಾರೆ, ಮತ್ಯಾರೋ ತುಂಬಾ ಕಷ್ಟಪಡುತ್ತಿರುತ್ತಾರೆ. ಯಾರು ಏನು ಎತ್ತ ಎಂದು ತಿಳಿಯದ ಅವರ ಬಗ್ಗೆ ನಾವಿಲ್ಲಿ ಮರುಗತೊಡಗುತ್ತೇವೆ. ಸಧ್ಯ ಅವರು ಅದರಿಂದ ಹೊರಬಂದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಕೈಲಾದಷ್ಟು ಸಹಾಯ ಮಾಡಲು ಹೊರಡುತ್ತೇವೆ. ಅದು ನಮ್ಮೊಳಗಿನ ಮನುಷ್ಯತ್ವ. ಅದಕ್ಕೆ ಯಾವ ಭೇದವೂ ಇಲ್ಲ, ಬೇಲಿಯೂ ಇಲ್ಲ. ಅದಕ್ಕೆ ನಾವೆಲ್ಲ ಮನುಷ್ಯರು ಎನ್ನುವ ಒಂದೇ ಕಾರಣ ಸಾಕು. ನಮ್ಮ ಅದೆಷ್ಟೋ ಇಂತಹ ನಿಸ್ವಾರ್ಥ ಪ್ರಾರ್ಥನೆಗಳು ಅದೆಷ್ಟೋ ಜನರ ಬದುಕಿನ ಹಿಂದಿರುತ್ತವೆ ಎನ್ನುವುದನ್ನು ನಾವು ಯೋಚಿಸಿಯೂ ಇರುವುದಿಲ್ಲ. ಅಪ್ಪ, ಅಮ್ಮ, ಸಂಬಂಧಿಕರು, ಸ್ನೇಹಿತರು, ಪರಿಚಯದವರಷ್ಟೇ ಅಲ್ಲದೆ ಕೆಲವೊಮ್ಮೆ ಅಪರಿಚಿತರೂ ಆಪದ್ಭಾಂದವರಾಗಿ ಬರುತ್ತಾರೆ. ನಮ್ಮ ಹೊಗಳಿಕೆ, ಗಮನ ಯಾವೊಂದನ್ನೂ ನಿರೀಕ್ಷಿಸದೆ ಪ್ರಾರ್ಥಿಸುವ ಆ ಕೈಗಳು ನಿಜಕ್ಕೂ ಭಗವಂತನ ಆಶೀರ್ವಾದವೇ ಇರಬೇಕು. ಮತ್ತೆ ನಾವು ಸುಖಾ ಸುಮ್ಮನೆ ಸಣ್ಣ ಸಣ್ಣ ವಿಚಾರಕ್ಕೂ ನಮ್ಮನ್ನು ಪ್ರೀತಿಸುವವರೊಂದಿಗೆ ಮುನಿಸಿಕೊಳ್ಳುತ್ತೇವೆ, ದೂರವಾಗಿಬಿಡುತ್ತೇವೆ. ಆದರೆ ಅವರ ಮನಸಿನಲ್ಲಿ ಉಳಿದಿರುವ ನಮ್ಮ ಬಗ್ಗೆ ನಮಗೇ ಅರಿವಿರುವುದಿಲ್ಲ. ನಮ್ಮ ಕಷ್ಟ ಸುಖಕ್ಕೆ ಅವರದೊಂದು ಪ್ರಾರ್ಥನೆ ಸದಾ ಸಲ್ಲುತ್ತಿರುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಅವಳು ನನ್ನ ಗೆಳತಿ. ಆದರೆ ಬಹಳ ವರ್ಷಗಳಿಂದ ನಮ್ಮಿಬ್ಬರ ನಡುವೆ ಸಂಪರ್ಕವಿಲ್ಲ. ಜಗಳ ಮನಸ್ಥಾಪ ಎಂತದ್ದೂ ಇಲ್ಲ. ಆದರೆ ಸುಮ್ಮನೇ ಅದು ಹೇಗೋ ಸೃಷ್ಟಿಯಾದ ನಿರ್ವಾತವದು. ಅವಳಿಗೆ ಮಕ್ಕಳೆಂದರೆ ಪ್ರಾಣ. ಆದರೆ ಅವಳ ಮಮತೆಯ ಮಡಿಲು ಮಾತ್ರ ಇನ್ನು ತುಂಬಿರಲಿಲ್ಲ. ಎರೆಡು ಮಕ್ಕಳನ್ನು ಕಳೆದುಕೊಂಡಿದ್ದಳು. ದಿನ ತುಂಬಿದ್ದರೂ ಗರ್ಭದಲ್ಲೇ ಮರಣಿಸಿಬಿಟ್ಟಿದ್ದವು. ಮತ್ತೆರೆಡು ಬಾರಿ ಆದ ಗರ್ಭಪಾತಗಳು ಅವಳನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದ್ದವು. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಅದು ತಿಳಿದಾಗಿನಿಂದಲೂ ಸದಾ ಒಂದು ಪ್ರಾರ್ಥನೆ ಅವಳಿಗಾಗಿ.ಪ್ರತಿದಿನ ದೇವರ ಮುಂದೆ ಕೂತಾಗಲೂ, ಅವಳೇ ಕಣ್ಮುಂದೆ ಬರುತ್ತಾಳೆ, ಒಂದು ಪ್ರಾರ್ಥನೆ ದೇವರ ಪಾದದ ಮೇಲೆ ಬೀಳುತ್ತದೆ, “ಭಗವಂತಾ ಇದೊಂದು ಮಗು ಅವಳ ಮಮತೆಯ ಮಡಿಲಿಗಿಳಿದು ಅವಳ ಮಡಿಲು ಜೀವಂತವಾಗಿಬಿಡಲಿ…” ಎಂದು ಒಂದು ನಿಮಿಷ ಕಣ್ಮುಚ್ಚಿ ಕೈಮುಗಿದು ಕುಳಿತುಬಿಡುತ್ತೇನೆ. ನಾನು ಅವಳಿಗಾಗಿ ಇಲ್ಲಿ ಪ್ರಾರ್ಥಿಸುತ್ತಿದ್ದೇನೆ ಎನ್ನುವ ಸುದ್ದಿಯೂ ಅವಳಿಗೆ ಗೊತ್ತಿಲ್ಲ. ಅವಳಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ನಾನು ಪ್ರಾರ್ಥಿಸುತ್ತಲೂ ಇಲ್ಲ. ಆದರೆ ಒಂದು ಮಾತ್ರ ನನಗೂ ಆಶ್ಚರ್ಯ! ಅವಳಿಗೇ ಗೊತ್ತಿಲ್ಲದ ನನ್ನ ಪ್ರಾರ್ಥನೆಯೊಂದು ಅವಳ ಬದುಕಿಗಾಗಿ ಸಲ್ಲುತ್ತಿದೆ.. ಹಾಗೆಯೇ ನಮ್ಮ ಬದುಕಿಗೂ ನಮಗೇ ಗೊತ್ತಿಲ್ಲದ ಅದೆಷ್ಟು ಜನರ ಅದೆಷ್ಟು ಪ್ರಾರ್ಥನೆಗಳು ಸಲ್ಲಿಸಲ್ಪಟ್ಟಿರಬಹುದು! ಇಲ್ಲದ ಇರುವ ಕೊರತೆಗಳನ್ನು ದೊಡ್ಡದು ಮಾಡಿಕೊಂಡು ಬದುಕನ್ನು ಹಳಿಯುವ ಮೊದಲು ನಾವ್ಯಾಕೆ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ಎನ್ನುವುದು ಅರ್ಥವಾದರೆ ಖಂಡಿತ ನಾವು ಇರುವುದರಲ್ಲೆ ಸಂತೋಷವಾಗಿ ಬದುಕಬಲ್ಲೆವು. ನಮಗೆ ಸಿಕ್ಕಿರುವ ಈ ಬದುಕಿನ ಅದೆಷ್ಟೋ ಕಾಣದ ಕೈಗಳ ಪ್ರಾರ್ಥನೆ ಇರುವುದು ತಿಳಿದರೆ ನಮ್ಮ ದುರಾಸೆಯ ಬಗ್ಗೆ ನಮಗೆ ಅಂಜಿಕೆ, ಮುಜುಗರವಾಗಬಹುದು. ಬಹಳ ವರ್ಷಗಳ ನಂತರ ಗೆಳತಿಯೊಬ್ಬಳು ಸಿಕ್ಕಿದಳು. ಆಡಿದ ಮಾತುಗಳು ಸಾವಿರ. ನಕ್ಕಿದ್ದೆಷ್ಟೋ… ಅತ್ತಿದ್ದೆಷ್ಟೋ… ಕೊನೆಗೆ ಅವಳು ಮೆಲ್ಲಗೆ, “ನಿನ್ನ ಮೊದಲ ಹೆರಿಗೆಯಲ್ಲಿ ಏನೋ ತೊಂದರೆ ಆಗಿತ್ತಂತೆ ಹೌದಾ..?” ಎಂದು ಕೇಳಿದಳು. ನಾನು ನಗುತ್ತಾ “ಎಂಟು ವರ್ಷಗಳೇ ಕಳೆದು ಹೋದವು… ಈಗ್ಯಾಕೆ ಮಾರಾಯ್ತಿ ಆ ಮಾತೆಲ್ಲ…?” ಎಂದೆ. ಅದಕ್ಕವಳು, “ಏನಿಲ್ಲ ಅವತ್ತು ಯಾರೋ ನನಗೆ ಸುದ್ದಿ ಮುಟ್ಟಿಸಿದ್ದರು. ನನಗಾದ ಗಾಬರಿ ಅಷ್ಟಿಷ್ಟಲ್ಲ, ಹೋಗಿ ದೇವರ ಮುಂದೆ ದೀಪ ಹಚ್ಚಿಟ್ಟು, ದೇವರೇ ಎಲ್ಲ ಸಸೂತ್ರ ಆಗಿ ಅವಳು ಆರೋಗ್ಯವಾಗಿ ಮಗುವಿನೊಟ್ಟಿಗೆ ಮನೆಗೆ ಬಂದುಬಿಡಲಪ್ಪಾ… ” ಎಂದು ಹರಸಿಕೊಂಡಿದ್ದೆ. ಮತ್ತೆ ನೀ ಮನೆಗೆ ಬಂದದ್ದು ತಿಳಿದ ಮೇಲೆ ದೇವರಿಗೆ ಹೋಗಿ ಹರಕೆ ತೀರಿಸಿ ಬಂದಿದ್ದೆ ಎಂದಳು. ನನ್ನ ಕಣ್ಣು ತುಂಬಿಬಿಟ್ಟಿದ್ದವು. ಗಂಟಲು ಕಟ್ಟಿಬಿಟ್ಟಿತ್ತು. ಸುಮ್ಮನೇ ಅವಳನ್ನು ತಬ್ಬಿಕೊಂಡೆ. ಕಣ್ಣೀರು ಅವಳ ಭುಜವನ್ನು ತೋಯಿಸುತ್ತಿತ್ತು. ಇಂಥದೊದು ಹರಕೆ ನನ್ನನ್ನು ಕಾಯುತ್ತಿದೆ ಎನ್ನುವ ಕಲ್ಪನೆಯೂ ಇಲ್ಲದೆಯೇ ಇಷ್ಟು ವರ್ಷ ಬದುಕಿದೆನಲ್ಲ ಅನಿಸಿ ಅಂತಃಕರಣದ ಎಳೆಗಳು  ನಮ್ಮನ್ನು  ಸುತ್ತಿಕೊಂಡು ಪೊರೆಯುವ ರೀತಿಗೆ ಸೋತುಹೋದೆ. ಹೀಗೆ ಬದುಕು ನಮ್ಮ ಹುಂಬ ನಡವಳಿಕೆಗಳನ್ನು ಸುಳ್ಳು ಮಾಡುತ್ತಾ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ನಾವು ಎನ್ನುವುದನ್ನು ಮತ್ತೆ ಮತ್ತೆ ಪ್ರಾಮಾಣೀಕರಿಸಿ ತೋರಿಸಿಕೊಡುತ್ತಿರುತ್ತದೆ… **************************************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ” ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ “ ಇಂದುಮತಿ ಲಮಾಣಿ ಪರಿಚಯ; ಇಂದುಮತಿ ಲಮಾಣಿ. ಬಿಜಾಪುರದವರು. ೧೯೫೯ ಜನನ. ಓದಿದ್ದು ಪಿಯುಸಿ.ಕತೆ ,ಕವನ ಸಂಕಲನ ,ಸಂಪಾದನಾ ಕೃತಿ ಸೇರಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಆಸೆ ಎಂಬ ಕವನ ೯ ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅತ್ತಿಮಬ್ಬೆ,ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ.‌ ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರಮಹಿಳಾ ಸೇನಾ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ಕಿ, ಈಜಿಪ್ಟ್ ದೇಶಗಳ ಪ್ರವಾಸ ಮಾಡಿದ್ದಾರೆ. ಬಂಜಾರ ನೃತ್ಯ ಸಂಸ್ಕೃತಿ ಉಳಿಸಲು ತಂಡ ಕಟ್ಟಿ‌ ಶ್ರಮಿಸುತ್ತಿದ್ದಾರೆ.ಇವರ ಮಗ ಬಸವರಾಜು ಡಿವೈಎಸ್ಪಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ. ಈ ಸಲದ ಮುಖಾಮುಖಿಯಲ್ಲಿ ಕತೆಗಾರ್ತಿ, ಕವಿ ಇಂದುಮತಿ ಲಮಾಣಿ  ಇವರನ್ನು ಮಾತಾಡಿಸಿದ್ದಾರೆ ನಾಗರಾಜ್ ಹರಪನಹಳ್ಳಿ  ಕತೆಗಳನ್ನು ಯಾಕೆ ಬರೆಯುತ್ತೀರಿ ? ಮನಸ್ಸಿಗೆ ಕಾಡುವ ಕೆಲ ವಿಷಯಗಳು, ಎನಾದರೂ ಬರೆಯಲು ಪ್ರೇರೇಪಿಸುತ್ತವೆ. ಆಗ ಸಹಜ ಕಥೆಯ ರೂಪದಲ್ಲಿ ಬರಹ ಆರಂಭವಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲೂ  ನನ್ನ ಬರಹ ಕಾರಣವಾಗಿದೆ. ಕತೆ ಹುಟ್ಟುವ ಕ್ಷಣ ಯಾವುದು ? ನನ್ನ ಸುತ್ತ ಮುತ್ತ ಘಟಿಸುವ ಆಗುಹೋಗುಗಳು ಮನಸಿನ ಮೇಲೆ ಘಾಡ ಪರಿಣಾಮ ಬೀರಿದಾಗ, ಒಂಟಿಯಾಗಿ ಇರುವಾಗ  ಅವು ಕಥೆ ರೂಪದಲ್ಲಿ ಹೊರ ಹೊಮ್ಮುತ್ತವೆ. ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? ಹೆಚ್ಚಾಗಿ ನನ್ನ ವಸ್ತು ವ್ಯಾಪ್ತಿ ಸಾಮಾಜಿಕ ಜೀವನ. ಪ್ರತಿಭೆಯನ್ನು ಕತ್ತು ಹಿಸುಕುವಂಥಹ ಸನ್ನಿವೇಶ, ಮತ್ತು, ವಯಸ್ಸಿನ ಪರಿ ಇಲ್ಲದೆ ಹೆಣ್ಣಿನ ಮೇಲೆ ಘಟಿಸುವಂಥಾ ಅತ್ಯಾಚಾರ ,ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹೀನಾಯ ಬಂಧನ, ಆಕೆಯ   ಜೀವನ ಪಥ, ಜಾತಿ ಭೇದತೆ, ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ.  ಕತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ? ಖಂಡಿತಾ. ಎರಡೂ ಇರುತ್ತವೆ.ಆ ಎರಡೂ ಇದ್ದಾಗಲೇ ಕಥೆಗೆ ಇಂಬು ಮೂಡುತ್ತದೆ.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ರಾಜಕೀಯ ಇವತ್ತು ಸ್ವಾರ್ಥದ ಅಂಗಿ ತೊಟ್ಟು, ಮುಖವಾಡ ಧರಸಿ ತಿರುಗುತ್ತಿದೆ. ಅಂದಿನ ಜನನಾಯಕರ ನಡೆ, ನುಡಿ, ನಿಸ್ವಾರ್ಥ ಈಗ ಇಲ್ಲ. ಮುಖ ನೋಡಿ ಮಣೆ ಹಾಕುವುದೇ ಜನ್ಮ ಸಿದ್ದ ಹಕ್ಕು ಎಂಬಂತಾಗಿದೆ. ಜನರಿಗಾಗಿ ಅಂದು ಅವರು ದುಡಿದರು,ಮಡಿದು ಹೆಸರಾದರು. ಇವತ್ತು ಜನರೇ ಇವರಿಗಾಗಿ ಹೋರಾಡಿ ಹಾರಾಡಿ  ಮಡಿಯುತ್ತಿದ್ದಾರಷ್ಟೆ.  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಮಾತಾಪಿತರ ಕಾಳಜಿ, ಮಹಿಳೆ ಮತ್ತು  ಹಿರಿಯರಲ್ಲಿ ಗೌರವ, ಇರುವಲ್ಲಿ ಮತ್ತು, ಎಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೋ ಅದೇ ಧರ್ಮ. ಕಷ್ಕಕ್ಕಾದವರೇ ಪರಮ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಂಸ್ಕೃತಿ ಜೀವಂತ ಇರೋತನಕಾ ಸಾಂಸ್ಕೃತಿಕ ಬದುಕು  ಸದಾ ಇರುತ್ತದೆ. ಇವತ್ತು ಸಂಸ್ಕೃತಿ ಮುಸುಕಾಗಿದೆ. ಫ್ಯಾಷನ್ ಯುಗ ಎಲ್ಲೆಲ್ಲೂ ಕುಣಿಯುತ್ತಿದೆ. ಕೇವಲ ಸಿನೇಮಾ,ಧಾರಾವಾಹಿ,  ವೇದಿಕೆಯಲ್ಲಿ  ಸಂಸ್ಕೃತಿ ತೋರಿಸುವದಲ್ಲ. ನಮ್ಮ ನಿಮ್ಮ  ನಡೆ,ನುಡಿಯಲ್ಲಿ ಅದು ಪಕ್ಕಾ ಇರಬೇಕು. ಸಂಸ್ಕೃತಿ  ನಶಿಸುವುದಕ್ಕೆ  ಸಾಕಷ್ಟು  ಉದಾಹರಣೆಗಳಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಈಗ ಈ  ವಿಷಯ ಅತ್ಯಂತ ಬೇಸರ ತರಿಸುವಂಥಹದ್ದು. ಸಾಹಿತ್ಯದಲ್ಲಿ ರಾಜಕೀಯ ಇವತ್ತು ಕೈಯಾಡಿಸದೆ ನಡಿಯೋದೇ ಇಲ್ಲವೆನ್ನುವಂತಾಗಿದೆ. ಸಾಹಿತ್ಯದ ಯಾವ ಗಂಧ ಗಾಳಿಯೂ ಇಲ್ಲದವರನ್ನು ತಂದು ಮೆರೆಸುವದು, ಸಾಹಿತ್ಯ ಪ್ರತಿಭೆಗೆ ಸಿಗಬೇಕಾದ ಮನ್ನಣೆಗೆ ಕತ್ತರಿ ಹಾಕುವುದು, ಲಾಭಿ ಮಾಡುವವರನ್ನು ದೊಡ್ಡ ವೇದಿಕೆಯಲ್ಲಿ ಕೂಡಿಸುವದು ಇತ್ತೀಚೆಗೆ ತೀರಾ ಸಾಮಾನ್ಯ ಆಗಿದೆ. ಸಾಹಿತಿಗಳಿಗೆ ಸಿಗದ ಪರಿಷತ್ತಿನ ಅಧಿಕಾರ, ರಾಜಕೀಯ ವ್ಯಕ್ತಿಗಳು ಅಲಂಕರಿಸುವದು ಕೂಡ ಸಹಜವಾಗಿಯೇ ಇದೆಯೆಂದು ಖಾತ್ರಿ ಅನಿಸುತಿದೆ. ಸಾಹಿತ್ಯಕ್ಕೆ ಮಾನ ಮನ್ನಣೆ ಸಿಗಬೇಕು ಅಂದರೆ ಮುಂದಾಳತ್ವ ನುರಿತ ಸಾಹಿತಿಯಿಂದ ಮಾತ್ರ ಅರಿವು ಬರೋದು.  ಇಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಮ್ಮ ದೇಶವೀಗ ಬಲಿಷ್ಠತೆಯಲ್ಲಿ ಯಾವ ದೇಶಗಳಿಗಿಂತಲೂ ಕಮ್ಮಿ ಎನಿಲ್ಲ.ಬಡತನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದನ್ನು ಕಾಣುತ್ತಿದ್ದೆವೆ. ಈಗ ಮೊದಲಿಗೆ ಇದ್ದ ಬಡತನ ಇಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂಧನಭಾಗ್ಯ ಹೀಗೆ ಹಲವಾರು ಉಪಕೃತ ಯೋಜನೆಗಳನ್ನು ಕಾಣುತ್ತಿದ್ದೆವೆ.ಆಗಿನಂತೆ ಈಗ ಹಸಿವಿನಿಂದ ಸಾವು ಇಲ್ಲ.ಒಟ್ಟಿನಲ್ಲಿ ನಮ್ಮ ದೇಶದಲ್ಲಿ  ಇವತ್ತು ಇತರ ದೇಶಕ್ಕಿಂತ ಹೆಚ್ಚಿನ ಪ್ರಗತಿಯಲ್ಲಿ ಸಾಗಿದೆ.  ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯದಲ್ಲಿ ನಾನು ಇನ್ನೂ ಬೆಳೆಯಬೇಕು,  ಕಲಿಯಬೇಕು. ತಿಳಿದುಕೊಳ್ಳಬೇಕು. ಕನ್ನಡ   ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ? ಕನ್ನಡದ ಕವಿ  ನಿಸಾರ್ ಅಮಹ್ಮದ .  ಈಚೆಗೆ ಓದಿದ ಕೃತಿಗಳಾವವು? ನಾಗೇಶ್ ಜೆ, ನಾಯಕರ ಓಲವ ತುಂತುರು ಮತ್ತು ವಿಶ್ವೇಶ್ವರ ಮೇಟಿ ಅವರ ಸೋಲಾಪುರ ಜಿಲ್ಲೆಯ ಇತಿಹಾಸದತ್ತ ಒಂದು ನೋಟ ನಿಮಗೆ ಇಷ್ಟವಾದ ಕೆಲಸ ಯಾವುದು? ಬರವಣಿಗೆ ನಿಮಗೆ ಇಷ್ಟವಾದ ಸ್ಥಳ ಯಾವುದು ? ಬಾಗೇವಾಡಿ ತೋಟದ ಮನೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು? ಶರಪಂಜರ ನೀವು ಮರೆಯಲಾರದ‌ ಘಟನೆ‌ ಯಾವುದು? ಪತಿಯ ಅಗಲಿಕೆ ಇನ್ನು ಕೆಲ ಹೇಳಲೇ‌ ಬೇಕಾದ ಸಂಗತಿಗಳಿದ್ದರೂ ಹೇಳಿ……. ಇವತ್ತು ನಾವು ಮಹಾತ್ಮಾ ಗಾಂಧೀಜಿಯವರ ಕುರಿತು ಹೊಗಳಿಕೆಯ ಭಾಷಣ ಮಾಡುತ್ತೆವೆ, ಅದೇ ರೀತಿ ಜಗತ್ತಿನಲ್ಲಿ  ಮಹಾ ಮಹಾನ್ ರಾಗಿ ಆಗಿ ಹೋದವರ ಕುರಿತು ಹಾಡಿ ಅಭಿಮಾನ ತೋರುತ್ತೆವೆ. ದುರಂತವೆಂದರೆ,  ನಾವು ಅವರಾಗುವದಿಲ್ಲ. ಅವರನ್ನೇ ಹುಟ್ಟಿ ಬರಬೇಕು ಅಂತ ಬಯಸುತ್ತೆವೆ. ಹುಟ್ಟಿರುವ ನಾವೇಕೆ ಅವರ ದಾರಿಯಲ್ಲಿ ನಡಿಯೋದಿಲ್ಲ?          ಅತ್ತೆಯೊಬ್ಬಳು, ವೇದಿಕೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ,ದ ಕುರಿತು, ಅವಳಿಗೆ ಬೇಕಾದ ಸ್ವಾತಂತ್ರ್ಯದ ಕುರಿತು  ಭಾಷಣ ಮಾಡುತ್ತಾಳೆ, ಆದರೆ ಮನೆಯಲ್ಲಿ ಸೊಸೆಗೆ ಸ್ವಾತಂತ್ರ್ಯ ಏಕೆ ಬೆಕೆಂದು  ಅವಾಜು ಹಾಕುತ್ತಾಳೆ.          ಇದಕ್ಕೆ ತದ್ವಿರುಧ್ಧವಾಗಿ ಅತ್ತೆಯು, ಸೊಸೆಯನ್ನು ಮಗಳಾಗಿ ಪ್ರೀತಿಸಿದರೂ ಸೊಸೆ ಪರಕೀಯತೆಯಿಂದ ಹೊರ ಬಾರದೆ ಪತಿ ಸಹಿತ ಬೇರೆ ಹೋಗಿ, ಅತ್ತೆಯನ್ನು ಕತ್ತೆ ಸಮಾನವಾಗಿ ಕಾಣುತ್ತಾಳೆ.    ಮಕ್ಕಳು ಇದ್ದರೂ ಭಿಕಾರಿಯಾಗಿ ತಿರಗುವ ಹೆತ್ತವರ ಪಡಿಪಾಲು ನೋವು ನೀಡುತ್ತವೆ. ಇವೆಲ್ಲ ನೋಡುತ್ತಾ ಇರುವಾಗ ಅನಿಸಿದ್ದೆನೆಂದರೇ, ನಾವೆಕೆ ಮನುಷ್ಯರಾದೆವು!! ನಾವೂ ಉಳಿದ ಜೀವಜಂತುಗಳಂತೆ ಇರಬಹುದಿತ್ತಲ್ಲವೆ! ದೇವರು ತನ್ನ ಆಟಕ್ಕೆ ಮನುಷ್ಯರನ್ನೇ  ತನ್ನಾಟದ ದಾಳವೆಂದೆಕೆ ಆಯ್ಕೆ ಮಾಡಿಕೊಂಡ ಅಂತ!! ಇಂಥಹ ವೈಪ್ಯರೀತತೆಗಳು ಬಹಳ ಕಾಡುತ್ತವೆ. ****************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಇತರೆ

ಮೋಹದ ಬೆನ್ನು ಹತ್ತಿದರೆ . . . . .

ಲೇಖನ ಮೋಹದ ಬೆನ್ನು ಹತ್ತಿದರೆ ಜಯಶ್ರೀ.ಜೆ. ಅಬ್ಬಿಗೇರಿ  ಹೊಸದಾಗಿ ಮದುವೆಯಾದ ದಿನಗಳಲ್ಲಿ ಬಾಳ ಸಂಗಾತಿಯ ಮೋಹ ಅತಿಯೆನಿಸುವಷ್ಟು ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮೋಹವೆಂಬುದು ಲೋಕಾರೂಢಿ. ಅದರಲ್ಲೇನು ವಿಶೇಷವಿದೆ ಎಂದು ಮನಸ್ಸು ಪ್ರಶ್ನೆ ಹಾಕಿ ನಗುವುದುಂಟು. ಮೋಹದ ಕುರಿತಾಗಿ ಪುಂಖಾನುಪುಂಖವಾಗಿ ಘಟನೆಗಳನ್ನು ಉಲ್ಲೇಖಿಸಬಹುದು. ಅದರಲ್ಲೂ ತುಳಸಿದಾಸರ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದ್ದದ್ದೇ ಇದೆ. ಅದನ್ನು ಹಾಗೆ ಒಮ್ಮೆ ಮೆಲಕು ಹಾಕುವುದಾದರೆ ಹೀಗೆ ಸಾಗುತ್ತದೆ. ತುಳಸಿದಾಸರಿಗೆ ತಮ್ಮ ಪತ್ನಿಯಲ್ಲಿ ಅಪಾರ ಆಸಕ್ತಿ. ಆಕೆಯನ್ನು ಬಿಟ್ಟಿರಲು ಮನಸ್ಸು ಒಪ್ಪುತ್ತಲೇ ಇರುತ್ತಿರಲಿಲ್ಲ. ಹೊಳೆಯ ಆಚೆ ಪತ್ನಿಯ ಮನೆ ಹೊಳೆಯ ಈಚೆ ತುಳಸಿದಾಸರ ಮನೆ. ಒಂದು ದಿನ ಮಡದಿ ಅವಸರದಲ್ಲಿ ಅವರಿಗೆ ಹೇಳದೇ ತನ್ನ ತವರಮನೆಗೆ ಹೋದಳು. ಸತಿಯನ್ನು ಮನೆಯಲ್ಲಿ ಕಾಣದ ತುಳಸಿದಾಸರಿಗೆ ಚಡಪಡಿಕೆ ಶುರುವಾಯಿತು. ಇವತ್ತು ರಾತ್ರಿ ಎಷ್ಟೊತ್ತಾದರೂ ಸರಿ ಹೊಳೆ ದಾಟಿ ಸತಿಯ ಮನೆಯನ್ನು ತಲುಪಲೇ ಬೇಕೆಂದು ನಿರ್ಧರಿಸಿದರು. ಅದೇ ದಿನ ಹೊಳೆಗೆ ಮಹಾಪೂರ ಬಂದಿತ್ತು. ಮಹಾಪೂರ ಎಂದ ಮೇಲೆ ಕೇಳಬೇಕೆ? ಅದು ತನ್ನೊಡಲಿನಲ್ಲಿ ಊರಿನಲ್ಲಿರುವ ಕಸವನ್ನು ತಂದು ಹೊಳೆಗೆ ಚೆಲ್ಲಿತ್ತು. ಹೊಳೆ ಊರಿನ ಕೊಳೆಯಿಂದಲೇ ತುಂಬಿತ್ತು. ತುಳಸಿದಾಸನಿಗೆ ಮಾತ್ರ ಇದಾವುದೂ ಕಾಣಲೇ ಇಲ್ಲ. ಅವರ ಕಣ್ಣಲ್ಲಿ ಮಡದಿಯ ರೂಪ ಅಚ್ಚೊತ್ತಿತ್ತು. ಮನದಲ್ಲಿ ಆಕೆಯ ಸವಿನೆನಪು. ಸತಿಯ ಮೇಲಿನ ಮೋಹ ಅವರಲ್ಲಿ ಶಕ್ತಿಯನ್ನು ನೂರ್ಮಡಿಗೊಳಿಸಿತ್ತು. ಹಿಂದೆ ಮುಂದೆ ನೋಡದೇ ಹೊಳೆಗೆ ಧುಮುಕಿಯೇ ಬಿಟ್ಟರು. ನೋಡು ನೋಡುತ್ತಿದ್ದಂತೆಯೇ ಆಚೆ ದಡ ತಲುಪಿದ್ದರು. ತಮ್ಮೊಂದಿಗೆ ಹೊಳೆಯ ಕೊಳೆಯನ್ನು ಹೊತ್ತು ತಂದಿದ್ದರು.      ಅದೇ ಆವಸ್ಥೆಯಲ್ಲಿ ಮಡದಿ ಮನೆಯ ಕದ ತಟ್ಟಿದರು. ಮಡದಿ ಹೊರ ಬಂದು ನೋಡಿದಳು. ಮೈಯೆಲ್ಲಾ ಕೊಳೆ ತುಂಬಿತ್ತು. ಕಂಗಳಲ್ಲಿ ಮೋಹ ತುಂಬಿತ್ತು. ‘ಇದೇನಿದು ಇಷ್ಟು ರಾತ್ರಿ ಹೊತ್ತಿನಲ್ಲಿ ಹೀಗೆ ಬಂದಿದ್ದೀರಿ?’ ಎಂದಳು. ಹೌದು ಕಾಣದೇ ಇರಲಾಗಲಿಲ್ಲ ಅದಕ್ಕೆ ಬಂದೆ ಎಂದ ಪತಿ. ಪತಿಯ ಮೋಹ ಕಂಡ ಜಾಣ ಸತಿ ಹೀಗೆ ಹೇಳಿದಳು. ‘ನೀವು ಇಷ್ಟು ಪ್ರೇಮವನ್ನು ದೇವರ ಮೇಲೆ ಇಟ್ಟಿದ್ದರೆ ನಿಮಗೆ ದೇವರ ದರ್ಶನವಾಗುತ್ತಿಲ್ಲ!’ ಮಡದಿಯ ಮಾತು ಕೇಳಿದ ತುಳಸಿದಾಸರಿಗೆ ಒಮ್ಮೆಲೇ ಸತ್ಯ ಹೊಳೆಯಿತು.ಮೋಹವೆಂಬ ಕತ್ತಲೆ ಕಳೆದು ಜ್ಞಾನ ಜ್ಯೋತಿಯ ಹೊತ್ತಿಸಿದೆ. ನನ್ನ ಪಾಲಿನ ಗುರು ನೀನು. ಕಣ್ತೆರೆಸಿದ ದೇವತೆಯೂ ನೀನು. ಎನ್ನುತ್ತ ಮಡದಿಯ ಮನೆಯಿಂದ ಹೊರ ಬಂದ. ಮೈ ಮನವೆಲ್ಲ ಸುತ್ತಿದ್ದ ಮೋಹದ ಪೊರೆ ಕಳಚಿಕೊಂಡ. ಸತ್ಯದರ್ಶನ ಪಡೆದು ಮಹಾ ಸಂತನಾದ.      ಇದು ಜನ ನಾಲಿಗೆಯ ಮೇಲೆ ನಲಿದಾಡುವ ಕಥೆ.ಪುರಾಣ ಇತಿಹಾಸಗಳಲ್ಲಿ ಇಂತಹ ಕಣ್ತೆರೆಸಿದ ಕಥೆಗಳು ಹೇರಳವಾಗಿ ಲಭ್ಯ. ಹೀಗಿದ್ದಾಗ್ಯೂ ನಾವು ನಮ್ಮದೇ ಮೋಹ ಲೋಕದಲ್ಲಿ ಮೇಲೇಳದಂತೆ ಮುಳುಗಿದ್ದೇವೆ. ಒಬ್ಬೊಬ್ಬರಿಗೆ ಒಂದೊಂದು ಮೋಹ. ಹೆಣ್ಣು ಹೊನ್ನು ಮಣ್ಣಿನ ಹಿಂದೆ ಬಿದ್ದು ಜೀವನದಾನಂದವನ್ನು ಕಳೆದುಕೊಂಡು ದಿಕ್ಕು ತಪ್ಪಿದವರಂತೆ ತಿರುಗುತ್ತಿದ್ದೇವೆ. ಜ್ಞಾನವೆಂಬ ಕಣ್ಣಗಲಿಸಿ ನೋಡಿದರೆ ಎಲ್ಲೆಲ್ಲೂ ನಿರ್ಮೋಹದ ಬೆಳಕು ಕಣ್ತುಂಬಿಸಿಕೊಳ್ಳುವ ಸುದೈವ ದೊರೆಯದೇ ಇರದು.  ಮುಂಜಾನೆದ್ದು ಕಿವಿಗೆ ಬೀಳುವ ಹಕ್ಕಿಗಳ ಕಲರವ, ಬಾನಿಗೆ ಬಂಗಾರದ ಬಣ್ಣ ಬಳಿಯುತ್ತ ಉದಯಿಸುವ ಸೂರ್ಯ, ಕತ್ತಲಲ್ಲಿ ಮಿನುಗಿ ನಗುವ ನಭದ ತಾರೆಗಳು, ಸದಾ ಉತ್ಸಾಹದಲ್ಲಿರುವ ಚಿಕ್ಕ ಮಕ್ಕಳನ್ನು ಕಂಡರೆ ನಮ್ಮಲ್ಲೂ ಸಂತಸದ ಕಾರಂಜಿ ಚಿಮ್ಮುವುದು. ಆಡುವ ಮಕ್ಕಳು ಆಟಿಕೆಯಲ್ಲಿ ಮುಳುಗಿ ಚಿಮ್ಮಿಸುವ ಬೊಚ್ಚ ಬಾಯಿಯ ನಗು ಎಂಥವರನ್ನು ಆನಂದದ ಬುಗ್ಗೆಯಲ್ಲಿ ಮುಳುಗಿಸುತ್ತದೆ. ಕಡಲನ್ನು ನೋಡುತ್ತ ಅದರ ಅಲೆಗಳ ಅಬ್ಬರದಲ್ಲಿ ಕಳೆದು ಹೋಗುವುದು ಎಲ್ಲಿಲ್ಲದ ಸಂತಸ ನೀಡುವುದು.ಜೀವನವೇ ಆನಂದ ಧಾರೆ ಎನ್ನಿಸದೇ ಇರದು.  ಜೀವನದ ಮೂಲಧಾರೆ ಯಾವುದಿರಬಹುದು? ಎಲ್ಲಿಂದ ಆರಂಭವಾಗಿರಬಹುದು ಎಂದು ತಿಳಿಯುವುದು ಸುಲಭದ ಸಂಗತಿಯಲ್ಲ.ಬಹಳಷ್ಟು ಅರಿತವರಿಗೂ ವಿದ್ವಾಂಸರಿಗೂ ಪ್ರಾಯಶಃ ಬಹಳ ಬಹಳ ಸಮಯದವರೆಗೂ ಚರ್ಚಿತ ವಿಷಯವಾಗಿದೆ ಎಂದೆನಿಸುತ್ತದೆ. ಮನುಷ್ಯನ ಅಂತರಂಗದತ್ತ ಮನಸ್ಸನ್ನು ಕೇಂದ್ರೀಕರಿಸಿದರೆ ಹೊಳೆಯುವ ಸೀದಾ ಸರಳ ಉತ್ತರ ಮೋಹವನ್ನು ತೊರಯುವುದು. ಪ್ರತಿ ದಿನವನ್ನು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವುದೇ ಬದುಕಿನ ಪರಮೋಚ್ಛ ಧ್ಯೇಯ. ಇದಕ್ಕಾಗಿಯೇ ಕಬ್ಬಿಣದ ಕಡಲೆಯಂತಿರುವ ಬದುಕನ್ನು ತಿಳಿದುಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ಹಾಗೆ ನೋಡಿದರೆ ಜೀವನ ತುಂಬಾ ಸರಳ ಇದೆ. ಅದನ್ನು ಸಂಕೀರ್ಣ ಮಾಡಿಕೊಂಡವರೇ ನಾವು. ನಮ್ಮ ವಿಚಾರಗಳು ನಮ್ಮ ಪ್ರಪಂಚವನ್ನು ರೂಪಿಸುತ್ತವೆ ಎಂದು ಗೊತ್ತಿದ್ದೂ ಅವುಗಳ ಮೇಲೆ ಹತೋಟಿ ಸಾಧಿಸದೇ ಮೋಹದ ಬಲೆಯಲ್ಲಿ ಬಿದ್ದಿದ್ದೇವೆ. ಕಣ್ಣು ಕಾಣದ ಗಾವಿಲರಂತೆ ಆಡುತ್ತಿದ್ದೇವೆ. ಯಾವುದರ ಬಗ್ಗೆ ಗಮನ ಹರಿಸುತ್ತೇವೆಯೋ ಅದು ಬೆಳೆಯುತ್ತದೆ. ನಾನು ನನ್ನದೆಂಬ ಮೋಹದ ಬೆನ್ನು ಹತ್ತಿದರೆ ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತದೆ ಬದುಕು ಕತ್ತಲಲ್ಲಿ ಮುಳುಗಿ ನರಳುತ್ತದೆ. ನಿರ್ಮಲ ಮನಸ್ಸಿನಿಂದ ನಿರ್ಮೋಹದತ್ತ ಮುಖ ಮಾಡಿದರೆ ಹೋದ ದಿಕ್ಕು ದಿಕ್ಕಿನಲ್ಲೂ ಬದುಕಿನ ಪರಮ ಸತ್ಯದ ಕಾಮನ ಬಿಲ್ಲು ಕಮಾನು ಕಟ್ಟಿ ಕರೆಯುತ್ತದೆ. ಮೋಹ ನಾಚಿ ನೀರಾಗಿ ದೂರ ಸರಿಯುತ್ತದೆ.

ಮೋಹದ ಬೆನ್ನು ಹತ್ತಿದರೆ . . . . . Read Post »

You cannot copy content of this page

Scroll to Top