ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ ಅಲ್ಲದೆ ಸ್ವತ: ರಾಮಣ್ಣನಿಗು ಗೊತ್ತಿತ್ತು. ಅವನ ಮನೆಯವರಿಗೆ ಇದು ಸ್ವಲ್ಪ ಮುಜುಗರ ಎನಿಸಿದರೂ, ಸ್ವತ: ರಾಮಣ್ಣನಿಗೆ ಅದರಿಂದ ಯಾವ ಬೇಸರವಾಗಲಿ, ಮುಜುಗರವಾಗಲಿ ಇರಲಿಲ್ಲ. ತಾನು ಜುಗ್ಗ ಎನಿಸಿಕೊಳ್ಳುವ ನಿಟ್ಟಿನಲ್ಲಿನ ಆತನ ಪ್ರಯತ್ನ ಮುಂದುವರೆದಿತ್ತು. ಊರಲ್ಲಿ ತನ್ನ ಹೆಸರಿನ ಹಿಂದೆ ಸೇರಿಕೊಂಡ ಜುಗ್ಗ ಎನ್ನುವ ಶಬ್ದ ತನಗೆಸಿಕ್ಕ ಯಾವುದೊ ಪ್ರಶಸ್ತಿಯೇನೊ ಎಂಬಂತೆ ಒಳಗೊಳಗೆ ಖುಶಿ ಪಡುವಷ್ಟರ ಮಟ್ಟಿಗೆ ರಾಮಣ್ಣ ಅದಕ್ಕೆ ಒಗ್ಗಿ ಹೋಗಿದ್ದ. ಹಾಗೆ ನೋಡಿದರೆ ರಾಮಣ್ಣನೇನು ಹುಟ್ಟಾ ಶ್ರೀಮಂತನೇನಲ್ಲ. ಅವರ ಅಪ್ಪ ಆ ಕಾಲದಲ್ಲಿ ಒಂದು ಸೈಕಲ್ ಶಾಪ್ ಇಟ್ಟುಕೊಂಡು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಚಿರಪರಿಚಿತರಾಗಿದ್ದರು. ಹೈಸ್ಕೂಲು ದಾಟದ ರಾಮಣ್ಣನೂ ಕ್ರಮೇಣ ಸೈಕಲ್ ಶಾಪಿನ ಕೆಲಸಕ್ಕೆ ನಿಂತು ಬಿಟ್ಟ. ಪಂಕ್ಚರ್ ಹಾಕುವುದರಿಂದ ಹಿಡಿದು ವೀಲ್ ಬೆಂಡ್ ತೆಗಿಯೋವರೆಗಿನ ಅಷ್ಟೂ ಕೆಲಸಗಳನ್ನು ಕಲಿತುಕೊಂಡು ಸೈಕಲ್ ರಿಪೇರಿಯ ವಿಚಾರದಲ್ಲಿ ಪಂಟರ್ ಅನಿಸಿಕೊಂಡಿದ್ದ. ರಾಮಣ್ಣನಿಗೆ ಇಪ್ಪತ್ಕಾಲು ವರ್ಷವಾಗಿದ್ದಾಗ ಅವರ ಅಪ್ಪ ತುಮಕೂರಿನ ವ್ಯಾಪಾರಸ್ಥರೊಬ್ಬರ ಮಗಳುಸಾವಿತ್ರಮ್ಮನ ಜೊತೆ ಮದುವೆ ಮಾಡಿಸಿದ್ದರು..ರಾಮಣ್ಣನನ್ನು ಮದುವೆಯಾಗಿ ಬರುವಾಗ ಸಾವಿತ್ರಮ್ಮನೇನು ಬರಿಗೈಲಿ ಬಂದಿರಲಿಲ್ಲ. ಆ ಕಾಲದಲ್ಲಿಯೇ ಇಪ್ಪತ್ತು ಸಾವಿರ ರೂಪಾಯಿ ನಗದು ಕಾಲು ಕೆಜಿ ಬಂಗಾರ ಅರ್ದ ಕೆಜಿ ಬೆಳ್ಳಿ ಒಡವೆಗಳ ಗಂಟಿನೊಂದಿಗೆಯೇ ಬಂದಿದ್ದಳು. ಒಂದರ ಹಿಂದೆ ಒಂದರಂತೆ ನಾಲ್ಕು ಮಕ್ಕಳ ತಾಯಿಯಾದ ಸಾವಿತ್ರಮ್ಮನಿಗೆ ಮಾವ ಇರುವತನಕ ಯಾವ ಕಷ್ಟವೂ ಎದುರಾಗಿರಲಿಲ್ಲ. ಮನೆ ಮತ್ತು ಅಂಗಡಿಗಳ ವ್ಯವಹಾರಗಳನ್ನು ತನ್ನ ಕೈಲೇ ಇಟ್ಟುಕೊಂಡಿದ್ದ ರಾಮಣ್ಣನ ಅಪ್ಪ ತೀರಾ ದಾರಾಳಿಯಲ್ಲದಿದ್ದರು ಮನೆಗೆ ತಂದು ಹಾಕುವಲ್ಲಿ ಉಣ್ಣುವುದು ತಿನ್ನುವುದರಲ್ಲಿ ಜುಗ್ಗತನ ತೋರಿಸಿದವನಲ್ಲ. ಹೀಗಾಗಿ ರಾಮಣ್ಣನ ಮಕ್ಕಳು ತಾತನ ಆರೈಕೆಯಲ್ಲಿಯೇ ಬೆಳೆಯತೊಡಗಿದ್ದರು. ರಾಮಣ್ಣನ ಮೊದಲ ಮೂರೂ ಮಕ್ಕಳು ಗಂಡು ಮಕ್ಕಳಾಗಿದ್ದು ನಾಲ್ಕನೆಯದು ಮಾತ್ರ ಹೆಣ್ಣಾಗಿತ್ತು. ನಾಲ್ಕನೆಯದಾಗಿ ಹೆಣ್ಣು ಹುಟ್ಟಿದ ಮೂರನೆ ತಿಂಗಳಿಗೆ ರಾಮಣ್ಣನ ಅಪ್ಪ ಪಾಶ್ರ್ವವಾಯುವಿಗೆ ತುತ್ತಾಗಿ ಶಿವನ ಪಾದ ಸೇರಿಬಿಟ್ಟಿದ್ದರು. ಅಲ್ಲಿಂದಾಚೆಗೆ ರಾಮಣ್ಣನ ಯಜಮಾನಿಕೆ ಶುರುವಾಯಿತು. ಕೈಗೆ ವ್ಯವಹಾರ ಸಿಕ್ಕೊಡನೆ ರಾಮಣ್ಣ ಕೈ ಬಿಗಿಮಾಡತೊಡಗಿದ. ಸೈಕಲ್ಲು ಶಾಪಿಗೆ ಬರುತ್ತಿದ್ದ ಗಿರಾಕಿಗಳ ಕಷ್ಟ ಸುಖ ತಿಳಿದುಕೊಂಡಿರುತ್ತಿದ್ದ ರಾಮಣ್ಣ ನಿದಾನವಾಗಿ ಮನೆಯಲ್ಲಿದ್ದ ದುಡ್ಡನ್ನು ಬಡ್ಡಿಗೆ ಬಿಡತೊಡಗಿದ. ಮೊದಲು ಸಣ್ಣದಾಗಿ ಶುರು ಮಾಡಿಕೊಂಡ ಈಬಡ್ಡಿ ವ್ಯವಹಾರ ರಾಮಣ್ಣನ ಕೈ ಹಿಡಿಯತೊಡಗಿತು. ಮೊದಮೊದಲು ನಂಬಿಕೆಗೆ ಸೀಮಿತವಾಗಿ ನಡೆಯುತ್ತಿದ್ದ ವ್ಯವಹಾರ ಕ್ರಮೇಣ ಪತ್ರಗಳನ್ನು ಬರೆಸಿಕೊಳ್ಳುವ ಹಂತಕ್ಕೆ ಬಂದಿತ್ತು. ದಿನಕಳೆದಂತೆ ರಾಮಣ್ಣ ನಿದಾನವಾಗಿ ದೊಡ್ಡ ವ್ಯವಹಾರಗಳಿಗೆ ಕೈ ಹಾಕತೊಡಗಿದ್ದ. ಮನೆಪತ್ರ, ಹೊಲಗದ್ದೆಗಳ ಪತ್ರವನ್ನು, ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಕೊಡತೊಡಗಿದ. ಈ ಲೇವಾದೇವಿವ್ಯವಹಾರ ದೊಡ್ಡದಾಗುತ್ತಿದ್ದಂತೆ ಸೈಕಲ್ಲುಗಳ ಜಾಗದಲ್ಲಿ ಆಗತಾನೆ ಮಾರ್ಕೆಟ್ಟಿಗೆ ಬಂದ ಮೋಟಾರ್ ಸೈಕಲ್ಲುಗಳ ಹಾವಳಿ ಕಂಡ ರಾಮಣ್ಣ ತನ್ನದೇ ಆದ ಮೋಟಾರ್ ಸೈಕಲ್ ಮಾರಾಟದ ಶೋರೂಮನ್ನು ಪ್ರಾರಂಬಿಸಿದ. ಅದರಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯ ತೊಡಗಿತು. ಈ ನಡುವೆ ತನ್ನ ಲೇವಾದೇವಿ ವ್ಯವಹಾರಗಳಲ್ಲಿ ಪೋಲೀಸರ ಕಿರಿಕಿರಿ ತಡೆಯಲಾಗದೆ ನಾಮಕಾವಸ್ಥೆಗೆ ಒಂದು ಫೈನಾನ್ಸ್ ಕಂಪನಿ ರಿಜಿಸ್ಟರ್ ಮಾಡಿಸಿ ತನ್ನ ವ್ಯವಹಾರದ ಇಪ್ಪತ್ತೈದರಷ್ಟನ್ನು ಅದರ ಮೂಲಕ ಮಾಡ ತೊಡಗಿ, ಸರಕಾರದ ಕಣ್ಣಿಗೆ ಮಣ್ಣೆರಚಿ ವ್ಯವಹಾರ ನಡೆಸ ತೊಡಗಿದ. ಊರೊಳಗೆ ನಷ್ಟದಲ್ಲಿ ನಡೆಯುತ್ತಿದ್ದ ಒಂದು ರೈಸ್ ಮಿಲ್ಲನ್ನು ಖರೀಧಿಸಿ ಅದನ್ನು ಅಭಿವೃದ್ದಿ ಪಡಿಸಿ ಲಾಭ ಬರುವಂತೆ ಮಾಡಿಕೊಂಡ. ಕೊಟ್ಟ ಸಾಲ ಹಿಂದಿರುಗಿಸಲಾಗದವರ ಹತ್ತಾರು ಏಕರೆ ಗದ್ದೆ, ಅಡಿಕೆ ತೋಟಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಜಮೀನ್ದಾರನೆಂಬ ಹೆಸರು ಗಳಿಸಿಕೊಂಡ. ಇಷ್ಟೆಲ್ಲ ಆದರೂಹೀಗೆ ಯಥೇಚ್ಚವಾಗಿ ಸೇರುತ್ತಲೇ ಹೋದ ದುಡ್ಡು ಮನೆಯಲ್ಲಿ ಅವನ ಹೆಂಡತಿ ಮಕ್ಕಳಿಗೆ ಯಾವುದೆ ಸುಖಸಂತೋಷ ತರಲೇಇಲ್ಲ. ಮನೆಯಲ್ಲಿ ಒಂದು ಅಡುಗೆಮಾಡುವ ವಿಚಾರದಲ್ಲೂ ರಾಮಣ್ಣನ ಅನುಮತಿ ಬೇಕಾಗಿತ್ತು. ಆತ ತಂದು ಕೊಟ್ಟ ದಿನಸಿಯಲ್ಲಿಯೇ ಸಾವಿತ್ರಮ್ಮ ಸಂಸಾರ ನಿಬಾಯಿಸಬೇಕಿತ್ತು. ಮಕ್ಕಳು ಆಸೆಯಿಂದ ಏನಾದರು ತಿಂಡಿ ಕೇಳಿದರೂ ರಾಮಣ್ಣ ಸಂತೋಷವಾಗಿರುತ್ತಿದ್ದ ಸಮಯ ನೋಡಿ ಕೇಳಿ ಆತನ ಅಪ್ಪಣೆ ಪಡೆದೆ ಮಾಡಿಕೊಡಬೇಕಾಗಿತ್ತು. ಅವನ ಗಂಡುಮಕ್ಕಳಿಗು ಅಪ್ಪನ ಜುಗ್ಗತನ ಅರ್ಥವಾಗಿ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬೆಳೆಯ ತೊಡಗಿದ್ದರು. ವರ್ಷದಲ್ಲಿ ಗೌರಿ ಹಬ್ಬ ಮತ್ತು ದೀಪಾವಳಿಗೆ ಬಟ್ಟೆ ತೆಗೆಯುವಾಗಲೂ ಮೂವರು ಗಂಡು ಮಕ್ಕಳಿಗು ಒಂದೇ ತರದ ಅಗ್ಗದ ಬಟ್ಟೆ ತೆಗೆಯುತ್ತಿದ್ದ. ಅವನ್ನು ಹೊಲಿಸುವಾಗಲು ಅವರ ಅಳತೆಗಿಂತ ಸ್ವಲ್ಪ ಹೆಚ್ಚೇ ಅನ್ನುವಷ್ಟು ದೊಡ್ಡದಾಗಿಹೊಲಿಸುತ್ತಿದ್ದ.ಇನ್ನು ತನ್ನ ಮನೆಗೆ ಯಾರೇ ನೆಂಟರು ಬಂದರೂ ನೆಟ್ಟಗವರು ಒಂದು ರಾತ್ರಿಯೂ ಇರಬಾರದ ರೀತಿಯಲ್ಲಿ ಕಟುಕಿಯಾಡಿ ಕಳಿಸಿಬಿಡುತ್ತಿದ್ದ.ಅವನ ಇಂತಹ ಜಿಪುಣತೆಯನ್ನು ಕಂಡ ಸಾವಿತ್ರಮ್ಮನ ತವರಿನವರು ಸಹ ಈ ಕಡೆ ತಲೆಹಾಕಿ ಮಲಗುವುದನ್ನು ನಿಲ್ಲಿಸಿಬಿಟ್ಟಿದ್ದರು.ಗಂಡು ಮಕ್ಕಳಿಗೆ ಹದಿನಾರು ವರ್ಷ ದಾಟಿದರೂ ಯಾವತ್ತೂ ಅವರು ಒಂದೇ ಒಂದು ರೂಪಾಯಿ ತೆಗೆದುಕೊಂಡು ಅಂಗಡಿಗೆ ಹೋಗಿ ಸಾಮಾನು ತಂದವರಲ್ಲ.ಅವರುಗಳು ಹೈಸ್ಕೂಲು ಮುಗಿಸುವಷ್ಟರಲ್ಲಿ ಒಬ್ಬೊಬ್ಬರನ್ನೇ ತನ್ನ ವ್ಯವಹಾರಗಳನ್ನು ನಡೆಸಲು ಬಳಸಿಕೊಳ್ಳತೊಡಗಿದ.ದೊಡ್ಡ ಮಗ ಶೋರೂಮಿನಲ್ಲಿ ಕೂತರೂ ದಿನಸಂಜೆ ಅಪ್ಪನಿಗೆ ಪೈಸೆಪೈಸೆಗೆ ಲೆಕ್ಕ ಒಪ್ಪಿಸಬೇಕಿತ್ತು.ಬಂದ ಗಿರಾಕಿಗಳಿಗೆ ಒಂದು ಲೋಟ ಕಾಫಿ ತರಿಸಿ ಕುಡಿಸಲು ಸ್ವಾತಂತ್ರವಿಲ್ಲದೆಯೆ ಅವನು ಶೋರೂಮಲ್ಲಿ ಕೂರಬೇಕಿತ್ತು ಎರಡನೆಯವನು ಫೈನಾನ್ಸ್ ಆಪೀಸಲ್ಲಿ ಕೂತು ಲೆಕ್ಕಾಚಾರ ನೋಡಿಕೊಳ್ಳಬೇಕಿತ್ತು. ಜೊತೆಗೆ ಸಾಲ ವಸೂಲಿ ಮಾಡಿ ಅಪ್ಪನಿಗೆ ತಂದು ಕೊಡುವುದಷ್ಟನ್ನೆ ಮಾಡಬೇಕಾಗಿತ್ತು. ಇನ್ನು ವಸೂಲಿಗೆ ಹೋಗಲು ಹಳೆಯಕಾಲದ ಸೈಕಲ್ಲನ್ನೇ ತುಳಿಯಬೇಕಿತ್ತೇ ಹೊರತು ಮೋಟಾರ್ ಬೈಕು ಇರಲಿಲ್ಲ. ತಮ್ಮದೇಆದ ಮೋಟಾರ್ ಬೈಕಿನ ಶೋರೂಮಿದ್ದರೂ ಮಕ್ಕಳು ಮಾತ್ರ ಸೈಕಲ್ಲು ತುಳಿದೆ ಕೆಲಸ ಮಾಡಬೇಕಾಗಿತ್ತು. ಯಾರಾದರೂಅವನ ಸರೀಕರು ರಾಮಣ್ಣನನ್ನು ಕೇಳಿದರೆ ಸಯಕಲ್ಲು ಅನ್ನೋದು ನಮಗೆ ಮನೆದೇವರಿದ್ದ ಹಾಗೆ. ಅದರ ಪುಣ್ಯದಿಂದಲೇ ನಾವಿವತ್ತು ಈ ಮಟ್ಟಿಗೆ ಬಂದಿರುವುದೆಂದು ತಿಪ್ಪೆ ಸಾರಿಸುತ್ತಿದ್ದ. ಮೂರನೆಯವನು ರೈಸುಮಿಲ್ಲಿಗೆ ಹೋಗುತ್ತಾ ಗದ್ದೆತೋಟಗಳ ನಿಗಾ ವಹಿಸಿ ಕೆಲಸ ಮಾಡಬೇಕಾಗಿತ್ತೇ ಹೊರತು ಐದೇ ಐದು ಪೈಸೆಯ ಮುಖ ಕೂಡಾ ನೋಡಿರಲಿಲ್ಲ. ಇನ್ನು ರಾಮಣ್ಣ ಸ್ವತ: ತಾನಾದರು ಸುಖ ಅನುಭವಿಸಿದನೆ ಅಂದರೆ ಅದೂ ಇಲ್ಲ. ಒಂದು ದಿನವೂ ಒಳ್ಳೆಯ ಊಟಮಾಡದೆ ಒಂದೊಳ್ಳೆಯ ಬಟ್ಟೆ ಹಾಕದೆ ಜಿಪುಣತನದಲ್ಲಿಯೇ ಬದುಕುತ್ತಿದ್ದ. ಇನ್ನು ಊರಲ್ಲಿನ ಯಾವುದೇ ಸಮಾರಂಭಗಳಿಗೂ ನಯಾಪೈಸೆ ಕೊಡುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಾಗಿಲಿಗೆ ಸಾಲ ಕೇಳುವವರ ಹೊರತಾಗಿ ಬೇರೆಯವರೂ ಬರುತ್ತಿರಲಿಲ್ಲ. ಹಬ್ಬ ಹರಿದಿನಗಳನ್ನು ಆಚರಿಸಿದರೆ ಖರ್ಚಾಗುತ್ತದೆ ಅಂತ ಸಾವಿತ್ರಮ್ಮನ ತವರು ಮನೆಗೆ ಹೆಂಡತಿ ಮಕ್ಕಳನ್ನು ಕಳಿಸಿ ತಾನೊಬ್ಬನೆ ಮನೆಯಲ್ಲಿ ಇದ್ದು ಬಿಡುತ್ತಿದ್ದ. ಅವರು ಹೋಗಲು ಮಾತ್ರ ರೈಲಿನ ಟಿಕೇಟಿಗೆ ದುಡ್ಡು ಕೊಡುತ್ತಿದ್ದರಿಂದ ವಾಪಾಸು ಬರುವಾಗ ಅವಳ ತವರು ಮನೆಯವರೆ ಅವರನ್ನು ಕರೆದುಕೊಂಡು ಬಂದು ಬಿಟ್ಟುಹೋಗಬೇಕಾಗಿತ್ತು.. ರಾಮಣ್ಣ ಜುಗ್ಗರಾಮಣ್ಣನಾಗಿ ಹೀಗೆ ಹೆಸರುಮಾಡಿರುವಾಗಲೆ ನಡೆದ ಘಟನೆಯೊಂದು ರಾಮಣ್ಣನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತ್ತು. ರಾಮಣ್ಣನ ಮೂವರು ಗಂಡುಮಕ್ಕಳ ನಂತರ ಹಿಟ್ಟಿದ ಮಗಳು ಸುಮ ಪಿಯುಸಿ ಓದುತ್ತಿದ್ದಳು. ಒಂದು ದಿನ ಕಾಲೇಜಿಗೆ ಹೋದವಳು ಮನೆಗೆವಾಪಾಸು ಬರದೆಕಣ್ಮರೆಯಾಗಿ ಬಿಟ್ಟಿದ್ದಳು. ಹಾಗೆ ನೋಡಿದರೆ ರಾಮಣ್ಣನಿಗೆ ಮಗಳನ್ನು ಕಂಡರೆ ಬಹಳ ಪ್ರೀತಿ ಇತ್ತು. ಎಷ್ಟೇ ಜುಗ್ಗನಾದರೂ ಮನೆಯಲ್ಲಿ ಬೇರ್ಯಾರಿಗು ಕಾಣದಂತೆ ಆಕೆಗೆ ಗುಟ್ಟಾಗಿ ತುಂಬಾ ದುಡ್ಡು ಕೊಡುತ್ತಿದ್ದ. ಅವಳಿಗೆ ಏನು ಬೇಕಾದರು ತೆಗೆದುಕೊಳ್ಳಲು ನಡೆದುಕೊಳ್ಳಲು ಸ್ವಾತಂತ್ರ ಕೊಟ್ಟಿದ್ದ. ಆದರೆ ಅವಳ ಮೇಲೆ ತನಗಿರುವ ಪ್ರೀತಿಯನ್ನು ಅವನ್ಯಾವತ್ತು ಬಹಿರಂಗವಾಗಿ ತೋರಿಸಿಕೊಂಡವನಲ್ಲ. ಅಂತಹ ಮಗಳು ವಾರವಾದರು ಮನೆಗೆ ಬಾರದೆ ನಾಪತ್ತೆಯಾದಾಗ ರಾಮಣ್ಣ ಕುಸಿದು ಕುಳಿತು ಬಿಟ್ಟಿದ್ದ. ವಾರ ಕಳೆದರು ಅವನು ಮನೆಯಿಂದಾಚೆ ಬರಲೆ ಇಲ್ಲ. ಕೊನೆಗೆ ಗಂಡು ಮಕ್ಕಳೆ ಸ್ಟೇಷನ್ನಿಗೆ ಹೋಗಿಕಂಪ್ಲೇಟ್ ಕೊಟ್ಟು ಬಂದಿದ್ದರು. ಹತ್ತನೆ ದಿನದ ಹೊತ್ತಿಗೆ ಅವಳು ಅದೇ ಊರಿನ ಹುಡುಗನನ್ನು ಮದುವೆಯಾಗಿ ಬೆಂಗಳೂರಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿರುವುದು ಗೊತ್ತಾಯಿತು. ಈ ವಿಷಯ ಕೇಳಿದ ಸಾವಿತ್ರಮ್ಮ ಹೆಂಚು ಹಾರಿಹೋಗುವಂತೆ ಕಿರುಚಾಡಿ ಅಳುವಾಗ ‘ಮುಚ್ಚೇ ಬಾಯಿ! ಅವಳಿಗಿಷ್ಟ ಬಂದವನನ್ನು ಮದುವೆ ಮಾಡಿಕೊಂಡು ಹೋಗಿದ್ದಾಳೆ. ಎಲ್ಲೋ ಸುಖವಾಗಿರಲಿ’ ಅಂತೇಳಿ ಎಲ್ಲರಲ್ಲು ಅಚ್ಚರಿ ಹುಟ್ಟಿಸಿದ್ದ. ಬೆಂಗಳೂರಿಗೆ ಹೋಗಿ ಅವಳನ್ನು ನೋಡಿಕೊಂಡು ಬರೋಣ ಅಂತ ಹೆಂಡತಿ ಮಕ್ಕಳು ಹೇಳಿದರೂ ರಾಮಣ್ಣ ಸುತಾರಂ ಒಪ್ಪದೇ ಹೋದ.ಅಷ್ಟರಲ್ಲಿ ಊರಲ್ಲಿ ಇನ್ನೊಂದಿಷ್ಟು ವಿವರಗಳು ಬಯಲಾಗ ತೊಡಗಿದ್ದವು ಸುಮಾ ಪ್ರೀತಿಸಿ ಮದುವೆಯಾದ ಹುಡುಗ ಬೇರೆ ಯಾರೂ ಆಗಿರದೆ ನಾಲ್ಕು ವರ್ಷಗಳ ಹಿಂದೆ ರಾಮಣ್ಣನ ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಾಗ ಅವಮಾನ ಸಹಿಸಲಾಗದೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಪ್ಪನ ಮಗ ಎನ್ನುವ ವಿಷಯವೇಊರಲ್ಲಿ ಕುತೂಹಲದ ಕತೆಯಾಗಿ ಹರಡಿತ್ತು. ರಾಮಣ್ಣನ ಮೇಲಿನ ಸೇಡಿನಿಂದಲೇ ಆ ಹುಡುಗ ಸುಮಾಳನ್ನು ತಲೆ ಕೆಡಿಸಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆಂದು, ಸ್ವಲ್ಪ ದಿನವಾದ ಮೇಲೆ ಅವಳನ್ನು ಕೈಬಿಟ್ಟು ತವರು ಮನೆಗೆ ಓಡಿಸುತ್ತಾನೆಂದು ಜನ ಮಾತಾಡಿಕೊಳ್ಳತೊಡಗಿದ್ದರು. ಈ ವಿಷಯ ರಾಮಣ್ಣನ ಕಿವಿಗೂ ಬಿದ್ದಿತ್ತು. ಇದನ್ನು ಕೇಳಿದ ಸಾವಿತ್ರಮ್ಮನಂತು ಅಯ್ಯೋ ಈ ಗಂಡಸಿನ ಜುಗ್ಗತನದಿಂದ ನನ್ನ ಮಗಳ ಜೀವನ ಹಾಳಾಯಿತಲ್ಲ ಎಂದು ಎದೆ ಬಡಿದುಕೊಂಡು ಮನೆತುಂಬಾ ಉರುಳಾಡಿ ಅತ್ತಳು. ಗಂಡು ಮಕ್ಕಳು ಅಪ್ಪನನ್ನು ಮಾತಾಡಿಸುವ ಧೈರ್ಯ ಸಾಲದೆ ಕೂತುಬಿಟ್ಟಿದ್ದರು. ಅಂತೂ ಗಂಡ ಏನಾದರು ಅಂದುಕೊಂಡು ಸಾಯಲಿ ಎಂದುಕೊಂಡ ಸಾವಿತ್ರಮ್ಮ ಅವತ್ತು ಸಾಯಂಕಾಲ ಮೂವರು ಗಂಡುಮಕ್ಕಳನ್ನು ಕರೆದು ರೂಮಿನಲ್ಲಿ ಕೂತಿದ್ದ ಗಂಡನಿಗೆ ಕೇಳುವಂತೆ ನಾಳೆ ಬೆಳಗ್ಗಿನ ರೈಲಿಗೆ ಬೆಂಗಳೂರಿಗೆ ಹೋಗಿ ಮಗಳು ಅಳಿಯನನ್ನು ನೋಡಿಕೊಂಡು ಬರೋಣ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಎಂದು ಹೇಳಿದಾಗ ನಡುಮನೆಯಲ್ಲಿ ಸಾಲಾಗಿ ಕೂತಿದ್ದ ಗಂಡು ಮಕ್ಕಳು ಮೌನವಾಗಿ ತಲೆಯಾಡಿಸಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡರಾಮಣ್ಣ ಏನೂ ಮಾತಾಡಿರಲಿಲ್ಲ. ರಾತ್ರಿ ಮಾಮೂಲಿಯಂತೆಎಂಟುಗಂಟೆಗೆ ಊಟಕ್ಕೆ ಕರೆದಾಗ ಹೊರಗೆದ್ದು ಬಂದ ರಾಮಣ್ಣ ಹೆಂಡತಿ, ಮೂರೂಮಕ್ಕಳನ್ನು ಮುಂದೆ ಕೂರಿಸಿಕೊಂಡು ತನ್ನ ಕೈಲಿದ್ದ ಸಣ್ನ ಪೆಟ್ಟಿಗೆಯನ್ನು ಸಾವಿತ್ರಮ್ಮನ ಕೈಲಿ ಕೊಟ್ಟು ಇದರಲ್ಲಿ ಮನೆ, ಶೋರೂಂ, ಪೈನಾನ್ಸ್ , ಸೈಟು-ಮನೆಗಳ ಪತ್ರಗಳು,ಬ್ಯಾಂಕುಗಳ ಪಾಸ್ ಬುಕ್ಕುಗಳು ಸೇರಿದಂತೆ ಎಲ್ಲ ಪತ್ರಗಳೂ ಇವೆ. ನೀವು ಬೆಂಗಳೂರಿಗೆ ಹೋಗುವ ಮುಂಚೆ ಈ ಆಸ್ತಿಯನ್ನು ನಾಲ್ಕು ಭಾಗವನ್ನಾಗಿ ಮಾಡಿ ನಾಲ್ಕೂ ಮಕ್ಕಳ ಹೆಸರಿಗೆ ಮಾಡಿಸಿಬಿಡು. ನಮ್ಮ ಲಾಯರ್ ವೆಂಕಟೇಶಯ್ಯ ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಗೆ ಬರ್ತಾರೆ. ನೀವೆಲ್ಲ ಕೂತು ಮಾತಾಡಿ ಯಾರ್ಯಾರಿಗೆ ಏನೇನು ಅಂತ ನಿದರ್ಾರ ಮಾಡಿಕೊಳ್ಳಿ ಎಂದು ಯಾರೀಗೂ ಪ್ರಶ್ನೆ ಕೇಳುವ ಅವಕಾಶ ಕೊಡದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. ಬೆಳಿಗ್ಗೆ ಒಂಭತ್ತು ಗಂಟೆಯಾದರು ಯಾಕೆ ಎದ್ದಿಲ್ಲವೆಂದು ಸಾವಿತ್ರಮ್ಮ ಗಂಡನ ರೂಮಿಗೆ ಹೋದರೆ ಅವನಲ್ಲಿರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ಯಾವುದಾದರು ವಸೂಲಿಗೆ ಹೋಗಿರಬೇಕೆಂದು ಕೊಳ್ಳುವಷ್ಟರಲ್ಲಿ ಲಾಯರ್ ವೆಂಕಟೇಶಯ್ಯ ಬಂದರು. ರಾಮಣ್ಣನ ಅನುಪಸ್ಥಿತಿಯಲ್ಲಿಯೇ ಅವರುಗಳು ಆಸ್ತಿಯ ಪತ್ರಗಳನ್ನಿಟ್ಟುಕೊಂಡು ಮಾತಾಡತೊಡಗಿದರು. ಅವರೆಲ್ಲ ಒಂದು ತೀಮರ್ಾನಕ್ಕೆ ಬರುವಷ್ಟರಲ್ಲಿ ಮದ್ಯಾಹ್ನ ಎರಡು ಗಂಟೆಯಾಗಿತ್ತು. ಅಷ್ಟು ಹೊತ್ತಾದರು ರಾಮಣ್ಣ ಬರದೆ ಹೋದಾಗ ಎಲ್ಲರಿಗು ಆತಂಕ ಅನುಮಾನ ಶುರುವಾಗಿತ್ತು. ಮತ್ತೊಂದು

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ರೆಕ್ಕೆ ಬಿಚ್ಚಲು ಪ್ಯಾರಿಸುತ ಎಲ್ಲಿ ನೀನಿಲ್ಲವೋ… ಎಲ್ಲಿ ನೀನಿಲ್ಲವೋ ಅಲ್ಲಿ ನಾನೂ ಇಲ್ಲ ಅದು ನಿಲಯವಾಗಿದ್ದರು, ಆಲಯದಂತಿದ್ದರೂ, ಇದ್ದರೂ ಅದು ಶರೀರವಷ್ಟೇ..! ಮನಸು ನಿನ್ನ ಬೆನ್ನು ಬಿದ್ದಿದೆ ಆ ಕರಿನೆರಳಿನಂತೆ, ಮಾರುದ್ದ ಜಡೆಗೆ ಮುಡಿದ ಮಲ್ಲಿಗೆಯಂತೆ, ಹಿಂದೆ ಅಲೆಯುವ ಸೀರೆಸೆರಗಿನ ಗಾಳಿಯಂತೆ, ಗಾಳಿಯಲ್ಲಿ ಬರುವ ಹೂಡಿದೂಳಿನಂತೆ ಯಾವಾಗಲೂ ನೀ ನನ್ನಲ್ಲೇ ಇರುವೆ ಸದಾ ನೀರಿನಲಿರುವ ಮೀನಿನಂತೆ ನೀ ಪ್ರೇತವೆಂದರು,ಭೂತವೆಂದರು…! ನಾನಂತೂ ನಿನ್ನ ಬೆನ್ನು ಬಿಡೇನು ನಿನ್ನೊಮ್ಮೆ ತಿರುಗಿ ನೋಡುವಂತಿದ್ದರೆ ನಾ ಯಾವಾಗಲೂ ನಿನ್ನ ಕಣ್ಣ ಮುಂದೆ ಕಾಯ ಎರಡಾದರೇನು…? ಹೃದಯದ ಗರ್ಭದಲ್ಲಿರುವ ಪ್ರೀತಿ ಒಂದೇ ಅಲ್ಲವೇ..? ಈ ಬಿಳಿಹಾಳೆಯಲಿ ಅದೆಷ್ಟು ನಾ ತೋರ್ಪಡಿಸಲಿ ಅದೆಷ್ಟೇ ನಾ ತೋರ್ಪಡಿಸಿದರೂ ಅದು ಗುಲಗಂಜಿ ತೂಕವಷ್ಟೇ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ವಿಜಯಶ್ರೀ ಹಾಲಾಡಿ ಚಿತ್ರ ಬಿಡಿಸುವ ಮರಚಳಿಗೆ ನರಳಿ ಇಬ್ಬನಿಅಡರಿ ಹಿಮಗಾಳಿಶೀತ ಹಿಡಿದುಕೊಂಡಿದೆ ಗಳಿತ ಎಲೆಯೊಂದುಹಳದಿ ಉಸಿರಿನ ಕೂಡೆಮಣ್ಣಿಗೆ ಸೋಕಿ ನಿಡಿದುನಿರಾಳ ಅಪ್ಪಿಕೊಂಡಿದೆ ಧೂಳ ಹೆಜ್ಜೆಗಳಲ್ಲಿಪಾದವೂರಿದ ಬೀಜಮುಗಿಲೂರಿನ ಕನಸರಂಗುಗಳ ಕವಿದುಕೊಂಡಿದೆ ಮೈಮುರಿದು ಆಕಳಿಸುವನಿಗೂಢ ಇರುಳು ಮಾತ್ರಬಿಟ್ಟ ಕಣ್ಣು ಬಿಟ್ಟಹಾಗೆಗೂಬೆದನಿಗೆ ಆಲಾಪಿಸಿದೆ. *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನ ಅಡುಗೆ ಅಮೆರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ. ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ ನಿತ್ಯವೂ ಕೋಳಿ ಕೂಗುವ ಹೊತ್ತಿಗೆ ಎದ್ದು ತನ್ನ ಕೆಲಸದಲ್ಲಿ ತಲ್ಲೀನರಾಗಿಬಿಡುತ್ತಿದ್ದರು. ಸುಮಾರು ಐದುಮುಕ್ಕಾಲಿಗೆ ಅಮ್ಮನ ಕೆಲಸಗಳ ಧಡಬಡ ಸದ್ದು ಕೇಳಲು ಶುರುವಾಗುತ್ತಿತ್ತು. ಸುಮಾರು ನೂರೈವತ್ತು ಅಡಿ ಉದ್ದ ಹದಿನೈದು ಅಡಿ ಅಗಲದ ಮನೆಯ ಅಂಗಳವನ್ನು ಗುಡಿಸಿ ನೀರು/ಗಂಜಲ ಹಾಕಿ ಸಾರಿಸಿ ರಂಗೋಲಿಯಿಟ್ಟು, ಹೊಸ್ತಿಲು ತೊಳೆದು ಅರಿಶಿನ ಕುಂಕುಮಗಳಿಂದ ಅಲಂಕಾರ ಮಾಡಿ, ಬಿಸಿನೀರಿನ ಒಲೆ ಹಚ್ಚುತ್ತಿದ್ದರು. ಆಮೇಲೆ ಕೊಟ್ಟಿಗೆಯಿಂದ ದನಗಳನ್ನೆಲ್ಲ ಹೊರಗೆ ಕಟ್ಟಿ ಕೊಟ್ಟಿಗೆ ಕಸ ಗುಡಿಸಲು ಅಣಿಯಾಗುತ್ತಿದ್ದರು. ಇವೆಲ್ಲವೂ ನಡೆಯುವಾಗ ನನ್ನ ನಿದ್ರೆ ಸಾಂಗವಾಗಿ ಸಾಗುತ್ತಲೇ ಇರುತ್ತಿತ್ತು. ಹಬ್ಬದ ದಿನಗಳಲ್ಲಿ ಮಾತ್ರ ಮಾತಿನಲ್ಲೇ ತಿವಿದು ತಿವಿದು ಏಳುವವರೆಗೆ ಬಿಡುತ್ತಲೇ ಇರಲಿಲ್ಲವಾದ್ದರಿಂದ ಆ ದಿನಗಳಲ್ಲಿ ಅಮ್ಮನ ನಿತ್ಯದ ಕೆಲಸಗಳನ್ನು ಗಮನಿಸುವುದು ಸಾಧ್ಯವಿತ್ತು. ಮಿಕ್ಕ ದಿನಗಳಲ್ಲಿ ಅಮ್ಮ ಕೆಲಸಗಳನ್ನೆಲ್ಲ ಮುಗಿಸಿ ನಮ್ಮ ಮನೆಯಲ್ಲಿದ್ದ ಪುಟ್ಟ ಫಿಲಿಪ್ಸ್ ರೇಡಿಯೋ ಹೊತ್ತಿಸಿದಾಗಲೇ ನನಗೆ ಬೆಳಗಾಗುತ್ತಿದ್ದುದು. ಅದರಲ್ಲೂ, ಇಯಂ ಆಕಾಶವಾಣಿಃ, ಸಂಪ್ರತಿ ವಾರ್ತಾಹ ಶ್ರೂಯಂತಾಂ, ಪ್ರವಾಚಕಾಃ ಬಲದೇವಾನಂದ ಸಾಗರಃ ಅಂದಾಗ, ಸರಿಯಾಗಿ ಆರುಮುಕ್ಕಾಲು…. ಆ ಮಾರಾಯ ಬಲದೇವಾನಂದ ಸಾಗರಾಹ ಗೆ ಹುಷಾರು ತಪ್ಪುತ್ತಲೇ ಇರಲಿಲ್ಲವೇನೋ. ಒಂದೂ ದಿನ ತಪ್ಪದ ಹಾಗೆ ಸಂಸ್ಕೃತ ವಾರ್ತೆ ಕೇಳಿಸುತ್ತಿದ್ದರು. ನಂತರ ಚಿಂತನ, ಆಮೇಲೆ ಪ್ರದೇಶ ಸಮಾಚಾರ ಹೀಗೆ ರೇಡಿಯೋ ಕಾರ್ಯಕ್ರಮಗಳು ಮುಂದುವರಿಯುತ್ತಿರುವಾಗ ನನಗೂ ಹಾಸಿಗೆಗೂ ಇರುವ ಅಂಟು ನಿಧಾನವಾಗಿ ಬಿಡಿಸಿಕೊಳ್ಳುತ್ತಿತ್ತು. ಅಂಟು ಅಂದರೆ ಅದೊಂದು ನೀಳ್ಗತೆ. ಇಲ್ಲಿ ಸ್ವಲ್ಪ polished ಭಾಷೆಯಲ್ಲಿ ಹೇಳ್ತೇನೆ. ಬಾಲ್ಯದಲ್ಲಿ ನಾನು bedwetting ಮಾಡಿಕೊಳ್ಳುವ ಹವ್ಯಾಸ ಇತ್ತು; ಹವ್ಯಾಸ ಅನ್ನುವುದಕ್ಕೆ ಅದೇನು ಫೋಟೋಗ್ರಫಿ, ಪಕ್ಷಿವೀಕ್ಷಣೆ, ಚಾರಣ ಇಂತಹದ್ದೇನಲ್ಲ. ನಿತ್ಯವೂ ತಪ್ಪದೇ ನಡೆಯುತ್ತಿದ್ದರಿಂದ ಹಾಗಂದಿದ್ದು. ನನ್ನ ಬಾಲ್ಯದಲ್ಲಿ ಕನಸು ನನಸಾಗುತ್ತಿದ್ದುದು ಉಂಟು. ಅದು ಈ ಹವ್ಯಾಸದ ಮೂಲಕವಷ್ಟೇ! ನಿತ್ಯವೂ ನಾನು ಹೊರಗೆಲ್ಲೋ ಹೋಗಿ ಸೂಸು ಮಾಡಿಬಂದಿರುತ್ತಿದ್ದೆ. ಎಚ್ಚರವಾದಾಗ ಎಂದಿನಂತೆ ಎಡವಟ್ಟಾಗಿರುತ್ತಿತ್ತು!! ಕನ್ನಡಕ್ಕೆ ಅನುವಾದಿಸಿದರೆ ಆ ಬಾಲ್ಯದ ಸಂಕೋಚ ಮತ್ತೆ ಮರಳಿಬಿಡುವುದಲ್ಲಾಂತ ಈ ರೀತಿ ಪಾಲಿಶ್ ಮಾಡಿದ್ದೇನಷ್ಟೇ. ಸಧ್ಯಕ್ಕೆ ಈ ಕತೆ ಇಲ್ಲಿಗೇ ನಿಂತಿರಲಿ. ಅಮ್ಮನ ಹೊರಗಿನ ಕೆಲಸಗಳೆಲ್ಲ ಮುಗಿದು ಅಡುಗೆ ಮನೆಗೆ ಬಂದು ರೊಟ್ಟಿ ಮಾಡಲು ಅಣಿ ಮಾಡಿಕೊಳ್ಳುತ್ತಿದ್ದರು. ಅಮ್ಮನ ತಿಂಡಿ ಅಂದರೆ ಅದು ರೊಟ್ಟಿಯೇ. ಅಪ್ಪಿತಪ್ಪಿ ಉಪ್ಪಿಟ್ಟೋ ಚಿತ್ರಾನ್ನವೋ ಆದರೆ ಆ ದಿನ ಅಮ್ಮನ ಆರೋಗ್ಯ ಸರಿಯಿಲ್ಲ ಅಂತ ಅರ್ಥ, ಅಥವಾ ಬೆಳಗಿನ ಗ್ರಹಚಾರ ನೆಟ್ಟಗಿಲ್ಲ ಅಂತ ಇನ್ನೊಂದು ಅರ್ಥ. ರೊಟ್ಟಿಯ ಹೊರತಾಗಿ ಬೇರೆ ಯಾವುದೇ ತಿಂಡಿಯನ್ನೂ ನಾನೂ ನನ್ನ ಕೊನೆಯ ಸೋದರಮಾವನೂ ಒಕ್ಕೊರಲಿನಿಂದ ನಿರಾಕರಿಸುತ್ತಿದ್ದೆವು. ಅದರಲ್ಲೂ ಅಕ್ಕಿರೊಟ್ಟಿಯೇ ಆಗಬೇಕು. ಅಪರೂಪಕ್ಕೆ ಒಮ್ಮೊಮ್ಮೆ ಅಕ್ಕಿಹಿಟ್ಟು ಖಾಲಿಯಾಗಿ ಮುದ್ದೆ ಮಾಡಲು ಯಥೇಚ್ಛವಾಗಿರುತ್ತಿದ್ದ ರಾಗಿ ಹಿಟ್ಟಿನ ರೊಟ್ಟಿಯೇನಾದರೂ ಆಯ್ತೋ, ಅದಕ್ಕೂ ಗ್ರಹಚಾರ ಬಿಡಿಸುತ್ತಿದ್ದೆವು. ರೊಟ್ಟಿಗೆ ನಿತ್ಯವೂ ತೆಂಗಿನಕಾಯಿ ಚಟ್ನಿ, ಮುಂಗಾರಿನಲ್ಲಾದರೆ ತಿಂಗಳ ಹುರುಳಿಯ ಕಾಯಿ ಫಲ್ಯ, ಆಲೂಗಡ್ಡೆ ಫಲ್ಯ. ಅಮ್ಮನ ಆ ಒಂದು ರೊಟ್ಟಿ ತಿಂದರೆ ಮಧ್ಯಾಹ್ನ ಊಟದ ಅಗತ್ಯವಿರುತ್ತಿರಲಿಲ್ಲ. ಹಾಗಾಗಿ ಸ್ಕೂಲ್ ನ ಮಧ್ಯಾಹ್ನದ ಊಟದ ಸಮಯದಲ್ಲಿ ಅದೆಷ್ಟು ಒತ್ತಾಯಿಸಿದರೂ, ಗೆಳೆಯರ ಜೊತೆಯಲ್ಲಿ ಆಟ ಆಡುವುದಕ್ಕೆ ಜಾರಿಕೊಳ್ತಿದ್ದೆ. ಹಾಗೆ ಆಟ ಆಡುವಾಗ, ಕಳ್ಳ ಪೊಲೀಸ್ ಆಟವೇನಾದರೂ ಆಗಿದ್ದು, ಗುಡ್ಡದಂತೆ ಇದ್ದ ನಮ್ಮ ಊರಿನ ಕೆಳಭಾಗದಲ್ಲಿದ್ದ ಸ್ಕೂಲ್ ನಿಂದ ಗುಡ್ಡದ ತುದಿಯಲ್ಲಿದ್ದ ನಮ್ಮ ಮನೆಯ ಸಮೀಪ ಬಂದದ್ದೇನಾದರೂ ಆಗಿದ್ದರೆ ಅಂತಹ ಮಧ್ಯಾಹ್ನ ಊಟಕ್ಕೆ. ಇಲ್ಲಾಂದ್ರೆ ಚಕ್ಕರ್. ಒತ್ತಾಯಗಳಿಗೆ ಮಣಿಯದ ನನ್ನನ್ನು ಬದಲಾಯಿಸಲಾಗದೇ ಅಮ್ಮನೇ ಒಂದರ್ಧ ರೊಟ್ಟಿಯನ್ನು ಬ್ಯಾಗಿನೊಳಗೆ ಹಾಕಿ ಸ್ಕೂಲಿಗೆ ಕಳಿಸ್ತಿದ್ದರು. ಅಮ್ಮನ ಅಡುಗೆ ಅಂದರೆ ಅದು ಖಾರಾ ಬಾಂಬು! ಓಹೋ, ಆ ಖಾರಾಪುಡಿಯನ್ನು ತಯಾರಿ ಮಾಡಿಕೊಳ್ಳುವುದಂತೂ ಅಮ್ಮನ ಸಂಪ್ರದಾಯ. ಮೆಣಸಿನಕಾಯಿ ಹೆಕ್ಕಿ ಅದನ್ನು ಬಿಸಿಲಿನಲ್ಲಿ ಹದವಾಗಿ ಒಣಗಿಸಿ ಆಮೇಲೆ ಮೆಲು ಉರಿಯಲ್ಲಿ ಹುರಿದು ಪುಡಿಮಾಡಿಸುತ್ತಿದ್ದ ಪ್ರಕ್ರಿಯೆ, ನಮ್ಮ ರಕ್ಷಣಾ ಇಲಾಖೆಯ ಮದ್ದುಗುಂಡುಗಳ ತಯಾರಿಕೆಯ ಹಾಗೆ ಇರುತ್ತಿತ್ತು. ಇನ್ನು ಉಳಿದ ಸಂಬಾರ ಪದಾರ್ಥಗಳ ಏರ್ಪಾಡು ಅಂದರೆ ಅದು ಬಿಡಿ, ಬಜೆಟ್ ಮಂಡಿಸುವುದಕ್ಕೂ ಸಹ ಹಣಕಾಸು ಸಚಿವರು ನನ್ನ ಅಮ್ಮನ ರೀತಿಯ ತಯಾರಿ ಮಾಡಿಕೊಳ್ಳಲಾರರು! ಅಮ್ಮನ ಆ ಖಾರಾಬಾಂಬಿಗೆ ನಾವು ಎಷ್ಟು ಒಗ್ಗಿಹೋಗಿದ್ದೆವೆಂದರೆ ಯಾರಾದರೂ ನೆಂಟರು ಬಂದರೆ ಅವರ ಮೇಲಿನ ಕಾಳಜಿಯಿಂದ ಅಮ್ಮ ಸ್ವಲ್ಪ ಖಾರ ಕಡಿಮೆ ಮಾಡಿದರೂ ಅವರ ಬೆವರಿಳಿಯುತ್ತಿರುತ್ತಿತ್ತು. ನಾವು ಬೇರೆ ಮನೆಗಳಲ್ಲಿ ಊಟ ಮಾಡುವಾಗ ಉಪ್ಪಿನ ಕಾಯಿ ಇದ್ದರಷ್ಟೇ ಅಮ್ಮನ ಬಾಂಬಿಗೆ ತುತ್ತಾದ ನಮ್ಮ ನಾಲಿಗೆಗೆ ಬೇರೆಯವರ ಸಾಂಬಾರಿನ ರುಚಿ ಹೊಂದಿಸಿಕೊಳ್ಳಬಹುದಾಗಿತ್ತು. ಅಮ್ಮನ ಇನ್ನೊಂದು ವೈಖರಿಯೆಂದರೆ ಕಾಲಕ್ಕೆ ತಕ್ಕಂತೆ, ಋತು ಬದಲಾದ ಹಾಗೆ ಅಮ್ಮನ ತರಕಾರಿ ಪದಾರ್ಥಗಳೂ ಬದಲಾಗುತ್ತಿದ್ದವು. ಒಂದೇ ರೀತಿಯ ತರಕಾರಿಯನ್ನು ಯಾವತ್ತೂ ಪುನರಾವರ್ತಿಸುತ್ತಿರಲಿಲ್ಲ. ಸೊಪ್ಪು ಹೊಂದಿಸುವುದಕ್ಕಂತೂ ಅರ್ಧ ಮೈಲಿ ಸುತ್ತಿ ಬರುತ್ತಿದ್ದರು. ಇನ್ನು ಅಣಬೆ ಅಂದರೆ ಮುಂಜಾವಿನಲ್ಲಿಯೇ ಹೊರಟು ಒಂದು ಬುಟ್ಟಿ ಅಣಬೆ ಹೊಂದಿಸಿ ತಂದಿಟ್ಟಿರುತ್ತಿದ್ದರು. ಸೀಗೆಸೊಪ್ಪು, ನುಗ್ಗೆಸೊಪ್ಪು, ಬಸಳೆಸೊಪ್ಪು, ಬಿದಿರಿನ ಕಳಲೆ, ಗದ್ದೆಬದುಗಳಲ್ಲಿ ಇರ್ತಿದ್ದ ಕಹಿಎಣಿಗೆ ಸೊಪ್ಪು. ಹಲಸಿನ ಬಡುಕು, ಹಲಸಿನ ಬೀಜ, ಇವು ಕೆಲವೇ ಕೆಲವು. ಇನ್ನು ತರಕಾರಿಗೆ ತಕ್ಕಂತೆ ಹೊಂದುವ ಕಾಳುಗಳು. ಅವೂ ಸಹ ಎರಡು ದಿನಕ್ಕೆ ಪುನರಾವರ್ತನೆಯಾಗುತ್ತಿರಲಿಲ್ಲ. ಇಷ್ಟೆಲ್ಲಾ ಆಹಾರ ವೈವಿಧ್ಯತೆಯಿರುತ್ತಿದ್ದರಿಂದ ನಮಗೆ ಅನಾರೋಗ್ಯ ಅನ್ನುವುದೇ ಗೊತ್ತಿರಲಿಲ್ಲ. ಅಪರೂಪಕ್ಕೆಂದು ಜ್ವರವೋ, ಕೆಮ್ಮೋ ಆದರೆ ನಮ್ಮ ಊರಿನ ಪಕ್ಕದಲ್ಲಿರುವ ಶೆಟ್ಟಿಹಳ್ಳಿಯ ಸಂತಮರಿಯಮ್ಮನ ಆಸ್ಪತ್ರೆ. ಅಲ್ಲಿ ಒಂದು ಕ್ಯಾನ್ ನಲ್ಲಿ ಇರಿಸುತ್ತಿದ್ದ ಕೆಮ್ಮಿನ ಸಿರಪ್, ಅಥವಾ ಬಿಸಿನೀರಿನಲ್ಲಿ ಸದಾ ಕುದಿಸುತ್ತಿದ್ದ ಆ ಗಾಜಿನ ಸಿರಿಂಜುಗಳಲ್ಲಿ ಮೇಲಿನ ತುದಿಗೆ ಒಂದೆರಡು ಹನಿಯಂತೆ ಎಳೆದು ಚುಚ್ಚುತ್ತಿದ್ದ ಇಂಜೆಕ್ಷನ್ನು, ಅದೂ ಯುಗಾದಿ, ದೀಪಾವಳಿಯ ಹಾಗೆ ವರ್ಷಕ್ಕೊಂದೋ ಅಥವಾ ಎರಡೋ ಅಷ್ಟೇ! ನಾವು ಮಳೆಯಲ್ಲಿ ನೆನೆಯುವುದು ಧೂಳು ಕೊಳಕಿನಲ್ಲಿ ಆಟವಾಡುತ್ತಿದ್ದಕ್ಕೆ ಶೀತ ನೆಗಡಿ ಅನ್ನುವುದು ಆಗ್ಗಾಗ್ಗೆ ತೋರ್ಪಡಿಸಿಕೊಳ್ಳುತ್ತಿತ್ತು. ಹಾಲಿಗೆ ಒಂದಿಷ್ಟು ಮೆಣಸಿನ ಪುಡಿ, ಇನ್ನೊಂದಿಷ್ಟು ಅರಿಶಿನ ಹಾಕಿ ಬಿಸಿಯಾಗಿ ಕುಡಿದರೆ ಅದೇ ಮದ್ದು. ಅದಕ್ಕಿಂತ ಹೆಚ್ಚಿನ ಶುಶ್ರೂಷೆಯ ಅಗತ್ಯವಿರಲಿಲ್ಲ. ಆದರೆ ಅಮ್ಮನ ನಿತ್ಯದ ಖಾರಾಬಾಂಬಿನ ಜೊತೆಯಲ್ಲೇ, ಪ್ರತಿಶನಿವಾರವೂ ಕೊತಕೊತ ಕುದಿಯುತ್ತಿದ್ದ ನೀರಿನ ಅಭ್ಯಂಜನ. ಅದಂತೂ ಲಾವಾರಸವೇ ಮೈಮೇಲೆ ಹರಿದ ಹಾಗಿರುತ್ತಿತ್ತು. ನಾನಂತೂ ಶನಿವಾರದ ಸ್ನಾನ ತಪ್ಪಿಸಿಕೊಳ್ಳುವುದಕ್ಕೆ ತುದಿಗಾಲಿನಲ್ಲಿರುತ್ತಿದ್ದೆ. ಆಗುತ್ತಿರಲಿಲ್ಲ. ಓಹೋ, ಮೈಯೆಲ್ಲಾ ಸುಟ್ಟು ಹೊಗೆ ಬರುವ ಹಾಗೆ ಮಾಡಿಬಿಡುತ್ತಿದ್ದರು. ಅಲ್ಲಿಗೆ ಮಿಕ್ಕ ಖಾಯಿಲೆಗಳೆಲ್ಲ ಅದರಿ ಅಲ್ಲಾಡಿ ಬೆದರಿ ಬೆಂಡಾಗಿ ಹೋಗಿಬಿಡಬೇಕಿತ್ತಷ್ಟೇ! ಅಮ್ಮನ ಜೊತೆಗಿನ ಈ ದಿನಗಳಲ್ಲಿ ಅಂಗನವಾಡಿಯ ಸಮಯದಲ್ಲಿ ಆಂಟಿಯೂ ಇದ್ದರು. ನಾನು ಒಂದನೇ ಕ್ಲಾಸಿನಲ್ಲಿದ್ದಾಗ ಅವರ ಮದುವೆಯಾಯ್ತು. ಅದಾದ ನಂತರ ಏಳನೇ ಕ್ಲಾಸಿನ ತನಕ ಅಮ್ಮನ ಜೊತೆಯಲ್ಲಿಯೇ ಇದ್ದೆ. ಅಮ್ಮನ ಜೊತೆಯಿದ್ದು ಅದೆಷ್ಟು ಅವಲಂಬಿತನಾಗಿದ್ದೆ ಅಂದರೆ, ನನಗೆ ಬಾಗಿ ನನ್ನ ಕಾಲು ತೊಳೆದುಕೊಳ್ಳುವುದಕ್ಕೇ ಬರುತ್ತಿರಲಿಲ್ಲ. ನಾಲ್ಕನೇ ಕ್ಲಾಸಿನಲ್ಲಿ ನನ್ನ ಇಮ್ಮಡಿಗಳನ್ನು ಉಜ್ಜಿ ತೊಳೆಯುವುದಕ್ಕೆ ಕಲಿತಿದ್ದು. ಅಷ್ಟೇ ಯಾಕೆ, ಮೂಗಿನ ಸಿಂಬಳ ತೆಗೆಯುವುದು ಹೇಗೆ ! ಅಂತಲೂ ಗೊತ್ತಿರಲಿಲ್ಲ. ಅಮ್ಮನ ಆ ಆರೈಕೆ ಕಾಳಜಿಗಳು ಮುಂದೆ ನಾನು ಹಾಸ್ಟೆಲ್ ಸೇರಿದ ದಿನಗಳಲ್ಲಿ ವಿಪರೀತ ಹಿಂಸೆ ಅನುಭವಿಸುವ ಹಾಗೂ ಮಾಡಿದವು. ಆದರೆ ಬಾಲ್ಯದ ಅಮ್ಮನ ಆ ಆಹಾರ ಪದ್ಧತಿಯು ನನ್ನ ಆರೋಗ್ಯವನ್ನು ಏರುಪೇರಾಗದಂತೆ ಇರಿಸಿತ್ತು. ಒಂದು ಸಾರ್ತಿ ಹಾಸನದಲ್ಲಿದ್ದಾಗ ಟೈಫಾಯ್ಡ್ ಆಗಿ ಆಸ್ಪತ್ರೆ ದಾಖಲಾಗಿದ್ದ ಒಂದೇ ಘಟನೆ. ಅದು ಬಿಟ್ಟು ನಾನು ಈವರೆಗೆ ಬೇರೆ ಖಾಯಿಲೆ ಅಂತ ಡಾಕ್ಟರನ್ನು ನೋಡಿಲ್ಲ. ಇನ್ನು ದೇಶಬಿಟ್ಟ ನಂತರವಂತೂ, ಒಂದು ದಿನ ಡ್ರೈವರ್ ಲೈಸಿನ್ಸ್ ಪಡೆಯುವುದಕ್ಕೆ ಕಡ್ಡಾಯವಾಗಿ ನಡೆಸಬೇಕಾದ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದು; ಆಮೇಲೆ ಒಂದು ಸಾರ್ತಿ ರಾಶಿ ಹಿಮ ಸುರಿದಿದ್ದ ಚಳಿಗಾಲದಲ್ಲಿ ಕೆಮ್ಮಾಗಿ ನಿರ್ಲಕ್ಷಿಸಿದ್ದಕ್ಕೆ ಅದು ಜ್ವರಕ್ಕೆ ತಿರುಗಿ ಒಂದು ದಿನ ಆಸ್ಪತ್ರೆಗೆ ಹೋಗಿದ್ದೆ. ಅದು ಬಿಟ್ಟರೆ ಹತ್ತು ವರ್ಷಗಳಲ್ಲಿ ಆಸ್ಪತ್ರೆಯ ಮುಖ ನೋಡಬೇಕಾದ ಅಗತ್ಯವೇ ಬಂದಿಲ್ಲ ನನಗೆ. ಹಾಂ, ಸದಾ ಕಂಪ್ಯೂಟರ್ ಮುಂದೆಯೇ ನನ್ನ ಕೆಲಸವಾಗಿರುವುದರಿಂದ, ಮೊದಲ ಕೆಲವು ವರ್ಷಗಳ ಸಿಆರ್‌ಟಿ ಮಾನಿಟರುಗಳ ಕೃಪೆಯಿಂದಾಗಿ ದೃಷ್ಟಿ ನೆಟ್ಟಗೆ ಮಾಡಿಕೊಳ್ಳುವುದಕ್ಕೆಂದು ಕನ್ನಡಕ ಕಡ್ಡಾಯವಾಗಿಬಿಟ್ಟಿದೆ! ಅದಕ್ಕಂತೂ ಪ್ರತಿ ಎರಡು ವರ್ಷಕ್ಕೊಮ್ಮೆ ರಾಜಾಸೀಟಿನ ಮೇಲೆ ಕೂತು ಆ ಡಾಕ್ಟರು ತಿರುಗಿಸುವ ಲೆನ್ಸುಗಳ ಮೂಲಕ ನೋಡಿ ನನಗೆ ಓದಲು ಬರ್ತದೋ ಇಲ್ಲವೋ ಅಂತ ಅವರ ಮುಂದೆ ಸಾಬೀತುಪಡಿಸಬೇಕಾಗ್ತದೆ. ಆದರೆ ಸಣ್ಣಪುಟ್ಟ ಖಾಯಿಲೆಗಳಿಗೆ ನಾನು ಇಂದೂ ಸಹ ಅಮ್ಮನ ಆ ಮನೆ ಔಷಧಿಗಳನ್ನೇ ಅನುಸರಿಸ್ತೇನೆ, ಖಾರಾಬಾಂಬು, ಹೊಗೆಯಾಡಿಸುವಂತಹ ಆ ಅಭ್ಯಂಜನ ಸ್ನಾನ ಇವೆರಡನ್ನು ಹೊರತುಪಡಿಸಿ! *********

ಹೊತ್ತಾರೆ Read Post »

ಕಾವ್ಯಯಾನ

ಕಾವ್ಯಯಾನ

ಗಾಂಧಿ ನಕ್ಕರು ಅಶ್ವಥ್ ಗಾಂಧಿ ನಕ್ಕರು ಗಾಂಧಿತಾತ ರಾಷ್ಟ್ರಪಿತ ತನ್ನೊಳಗೇ ತಾನು ದೈವಭಕ್ತ ಸಂಪತ್ತಿನುತ್ತುಂಗ ಎಂಜಿ ರಸ್ತೆ ಗಾಂಧಿಗೆಂದು ಮೀಸಲಂತೆ ಬೀದಿ ಬದಿಯ ಬಡವನ ಪಾಲು ಚಿತ್ರಮಂದಿರದ ಕೊನೆಯ ಸಾಲು ಕಣ್ಣರಳಿಸಿ ಕತ್ತನೆತ್ತಿ ತುಣುಕು ತುಣುಕೇ ದೃಶ್ಯವುಂಡು ಬೆರಗಾಗುವ ಬೆಪ್ಪನ ಕಂಡು ಗಾಂಧಿ, ಸುಮ್ಮನೆ ನಕ್ಕುಬಿಟ್ಟರು ಹೊಸ ಕಾಲದ ಅಭ್ಯುದಯಕೆ ಒಂದು ಸಂಜೆ ಕಾರ್ಯಕ್ರಮಕೆ ಸೆಲ್ಫಿ ತೆಗೆದುಕೊಳ್ಳಲೊಂದು ಪೊರಕೆ ತಂದು, ಕ್ಯಾಮರ ಬಂದು ಸಾವಧಾನ ಕೊಂಡುತಂದು ಗಾಂಧಿಯನ್ನು ಬಳಸಿಕೊಂಡು ನೀರು ಸಿಂಪಡಿಸಿಕೊಂಡು ಹುಸಿಬೆವರು ಬರಿಸಿಕೊಂಡು ಸಮಾಧಾನ ಭಂಗಿಯಲ್ಲಿ ಕ್ಲಿಕ್ ಕ್ಲಿಕ್ ಚಿತ್ರ ತೆಗೆವ ಹುಸಿ ಮುಸಿ ನಗುವ ಮುಡಿಸಿ ಮಸಿಯ ಬಳಿವ ನಾಯಕ ನಾಲಾಯಕ್ಕರ ನೆನೆದು ಗಾಂಧಿ, ನಕ್ಕು ಸುಮ್ಮನಾದರು ವಿಶ್ವಗುರುವು ನಮ್ಮ ಬೃಹತ್ ದೇಶ ಉದ್ದಗಲಕೂ ಇದೇ ವೀರಾವೇಶ ಕೂತರೆ ಖಂಡಾಂತರ ನಿಂತರೆ ಹಿಮಾಲಯದೆತ್ತರ ಸಮಾನತೆಗಿಲ್ಲ ಅರ್ಥ ಸನಾತನವದೊಂದೇ ತೀರ್ಥ ಫಡಫಡ ಬಾಯಿ, ಬಡಾಯಿ ದಂಡು ಗಗನ ನೌಕೆ ತೇಲ್ವುದನ್ನು ಕಂಡು ಗಾಂಧಿ, ಸುಮ್ಮನಿರದೇ ನಕ್ಕರು ಆಟಗಾತಿ ಓಡಿ ಪದಕ ತಂದರಲ್ಲಿ ಜಾತಿ ಹುಡುಕಿಕೊಂಡು ಬಂದರಿಲ್ಲಿ ಕಣ್ ಮುಚ್ಚಿ ಹಾಲು ಕುಡಿವ ಬೆಕ್ಕು ಮುಲ್ಲಾನ ಮಿಯಾಂವೇ ಇರಬೇಕು! ಬಾಂಬಿನಲ್ಲೂ ಧರ್ಮವ ಕಂಡು ನಿಂತಲ್ಲಿಯೇ ಬೆರಗುಗೊಂಡು ಗಾಂಧಿ, ನಗಲಾರದೇ ಸುಮ್ಮನಿದ್ದರು! ಬಂಗಾರದ ರಸ್ತೆಯ ಮಾತನಾಡಿ ಬಡವರ ಬುಡಮೇಲು ಮಾಡಿ ನೂರೈವತ್ತನೇ ಜಯಂತಿ ಕಂಡು ಗಾಂಧಿ, ನಕ್ಕು ಸುಮ್ಮನಾದರು ‘ಮತ್ತೆ ಹುಟ್ಟಿ ಬಾ’ ಎಂಬುದನ್ನು ಕೇಳಿ ಗಾಂಧಿ, ನಕ್ಕು ನಕ್ಕು ಸುಸ್ತಾದರು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜಾತ್ರೆ ಅಂಜನಾ ಹೆಗಡೆ ಬಯಲಿಗಿಳಿದ ದೇವರೆದುರು ತಲೆಬಾಗಿ ನಿಂತರೆ ಮೆದುಳಿಂದ ಮೃದುವಾಗಿ ಎದೆಗಿಳಿದ ಜಯಜಯ ಶಂಕರಿ ಜಯ ಜಗದೀಶ್ವರಿ…. ತಂಪಾದ ಹಾಡು ತಲೆಗೆ ಮೆತ್ತಿದ ಬಣ್ಣಕ್ಕೂ ಎದೆಗಿಳಿದ ಮೆದುಳಿಗೂ ಸಂಪರ್ಕವೇ ಇಲ್ಲದಂತೆ ದೇವರೇ ಮೈಮೇಲೆ ಬಂದಂತೆ ಮನಬಂದಂತೆ ಒದರುವ ಮೈಕಿನಲ್ಲಿ ಧೂಮ್ ಮಚಾಲೇ ಧೂಮ್… ತಲೆ ಕುಣಿಸುತ್ತ ನಿಂತ ತೊಟ್ಟಿಲ ಸಾಲು ತಿರುಗಿಸುವವನನ್ನು ಕಂಡವರಿಲ್ಲ ಹತ್ತಾರು ಸುತ್ತು ಸುತ್ತಿ ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ…. ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ ನಿಂತುಹೋದ ತೊಟ್ಟಿಲಿಂದ ಇಳಿದ ಪೋರ ಹುಡುಕಿದ್ದು ಅಪ್ಪನ ಕಿರುಬೆರಳಿಗೆ ಹರಕೆ ತೀರಿಸಿ ಬೆವರೊರೆಸಿಕೊಳ್ಳುವವಳ ಕೈಗಂಟಿದ ಕುಂಕುಮದ ಚಿತ್ರ ಕುತ್ತಿಗೆ ಮೇಲೆ ಕುತ್ತಿಗೆಯಿಂದ ಬೆನ್ನಿಗಿಳಿದ ಕೆಂಪು ಬೆವರಿಗೆ ಬಣ್ಣದ ಘಮ ಸ್ಲೀವ್ ಲೆಸ್ ಟಿ ಶರ್ಟಿನ ಹುಡುಗನ ಕುತ್ತಿಗೆ ಮೇಲೊಂದು ತ್ರಿಶೂಲದ ಟ್ಯಾಟೂ ಘನಗಾಂಭೀರ್ಯದಿಂದ ಹಗ್ಗದ ಮೇಲೆ ನಡೆಯುತ್ತಿದ್ದಾಳೆ ಹುಡುಗಿ ಏಳುಬೀಳಿನ ಭಯವಿಲ್ಲದಂತೆ ಭವದ ಸದ್ದುಗಳಿಗೆ ಕಿವುಡಾದ ಬಾಲೆ ಹಗ್ಗದ ಮೇಲೆಯೇ ಭುವನೇಶ್ವರಿಯಾಗುತ್ತಾಳೆ ದೂರದಿಂದ ಘಂಟೆಯ ಸದ್ದು ಬೆಚ್ಚಗೆ ಎದೆಗಿಳಿಯುತ್ತಿದೆ *******

ಕಾವ್ಯಯಾನ Read Post »

ಇತರೆ

ಲಲಿತ ಪ್ರಬಂಧ

ನಮ್ಮೂರ ಜಾತ್ರೆಲಿ.. ಜ್ಯೋತಿ ಡಿ.ಬೊಮ್ಮಾ. ನಮ್ಮೂರ ಜಾತ್ರೆಲಿ.. ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ ಬಿಂಬಿಸುವದು. ಹೆಜ್ಜೆ ಹೆಜ್ಜೆಗೂ ಕಟೌಟಗಳು.ಸ್ವಾಗತ ಕೋರುವ ನೆಪದಿಂದ ತಮ್ಮ ತಮ್ಮ photo ಗಳನ್ನು ಬೀದಿ ಬೀದಿಗಳಲ್ಲಿ ನಿಲ್ಲಿಸಿ ಹೆಮ್ಮೆ ಪಡುವ ಊರಿನವರು, ರಸ್ತೆಗಳನ್ನು ಅಲಂಕರಿಸಿ ತಳಿರು ತೊರಣ,ಹೂಗಳಿಂದ ಮಾಡಿದ ಸ್ವಾಗತ ಕಮಾನುಗಳು,ಊರವರನ್ನೂ ರಂಜಿಸಲು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ತಹರೆವಾರಿ ಅಂಗಡಿಗಳು,ಬಾಯಲ್ಲಿ ನೀರೂರಿಸುವ ತಿನಿಸಿನ ಬಂಡಿಗಳು, ಮತ್ತು ಎಲ್ಲೆಲ್ಲೂ ಜನ ಜನ ಜನ ಜಾತ್ರೆಯ ಪ್ರಮುಖ ಘಟ್ಟವೆ ರಥೋತ್ಸವ ,ಅದಕ್ಕೂ ಮುನ್ನಾದಿನ ಅಗ್ಗಿ ತುಳಿಯುವದು ಇರುತ್ತದೆ.ಈ ಶಬ್ದದ ಅರ್ಥ ಎನೇನು ಹೊಂದಿಕೆಯಾಗದು.ಅಗ್ನಿಗೆ ಪ್ರದಕ್ಷಿಣೆ ಹಾಕುವದನ್ನೆ ಅಗ್ನಿ ತುಳಿಯುವದು ಎನ್ನ್ನುತ್ತಾರೆ.ಕೆಲವೊಂದು ಕಡೆ ಕೆಂಡದ ಮೇಲೂ ನಡೆಯುತ್ತಾರಂತೆ. ಕಾಡು ಉಳಿಸಿ ಎಂದು ಸಾರುವರೆಲ್ಲರೂ ಕೈಯಲ್ಲಿ ಕಟ್ಟಿಗೆ ತುಂಡುಗಳನ್ನಿಡಿದು ಅಗ್ನಿ ಕುಂಡಕ್ಕೆ ಎಸೆದು ದಿಗಂತಕ್ಕೆ ಮುಖಮಾಡಿ ಉರಿಯುವ ಬೆಂಕಿಗೆ ಪ್ರದಕ್ಷಿಣೆ ಹಾಕುತ್ತ, ತೆಂಗಿನ ಕಾಯಿ ಒಡೆಯುತ್ತ ,ಮನೆಯಿಂದ ತಂದ ನೈವೇದ್ಯ ತೋರುತ್ತ (ಎಸೆಯುತ್ತ ) ಸಾಗುವರು.ನನ್ನ ಕೈಗೂ ಕೊಟ್ಟ ಕಟ್ಟಿಗೆ ಚೂರುಗಳು ಅಗ್ನಿಗೆ ಎಸೆಯಬೇಕೋ ಬೇಡವೋ ಎಂಬ ಸಂದಿಗ್ಧ ದಲ್ಲಿ ಯಾಕೋ ಎಸೆಯಲು ಮನಸ್ಸು ಒಪ್ಪದೆ ಹಾಗೆ ಕೈಯಲ್ಲಿ ಹಿಡಿದುಕೊಂಡು ಬಂದು ಅಮ್ಮನಿಂದ ಬೈಸಿಕೊಂಡಾಯಿತು.ರಸ್ತೆ ಮೇಲೆಲ್ಲ ಕಟ್ಟಿಗೆ ಮಾರುವವರದೆ ಜಾತ್ರೆ .ದುಡ್ಡು ಕೊಟ್ಟು ಕೊಂಡು ಬೆಂಕಿಗೆ ಎಸೆದು ಭಕ್ತಿಯಿಂದ ಪರವಶವಾಗುವವರ ದಂಡು ಹೆಚ್ಚುತ್ತ ಹೋಯಿತು. ಜಾತ್ರೆಗೆ ಹೋದಮೇಲೆ ದೇವಸ್ಥಾನ ಕ್ಕೆ ಹೋಗದೆ ಇ ರಕಾಗುತ್ತೆಯೆ .ಅಲ್ಲಿ ಜನರ ದಂಡು ,ಎಲ್ಲರಿಗೂ ದೇವರಿಗೆ ಬಟ್ಟೆ (ಹೊದಿಕೆ) ಮಾಡುವ ಸಂಭ್ರಮ.ಬಟ್ಟೆ ಕೊಳ್ಳಲು ಹೋದ ಅಮ್ಮನನ್ನು ಹಿಂಬಾಲಿಸಿದೆ.ಬಟ್ಟೆ ಮರುವವರು ಬಂಡಿಗಳ ಮೇಲೆ ಎರಡು ವಿಧದ ಬಟ್ಟೆಗಳನ್ನಿಟ್ಟಿದ್ದರು ಬೆಲೆ ಕೆಳಲಾಗಿ ಒಂದರ ಬೆಲೆ ನೂರೂ ರೂ.ಮತ್ತೊಂದರ ಬೆಲೆ ನೂರೈವತ್ತು ರೂಗಳು.ವ್ಯತ್ಯಾಸ ಕೇಳಿದಾಗ ನೂರೈವತ್ತು ಬೆಲೆಯ ವಸ್ತ್ರಗಳು ಹೊಚ್ಚಹೊಸದು.ನೂರು ರೂ ಬೆಲೆಯ ವಸ್ತ್ರಗಳು ದೇವರಿಗೆ ಉಡಿಸಿ ಮತ್ತೆ ತಂದವುಗಳು.ಅದೇ ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ.ಅಮ್ಮ ನೂರೈವತ್ತು ಕೊಟ್ಟು ಹೋಸ ವಸ್ತ್ರ ಗಳನ್ನೆ ಕೊಂಡಳು ಅವು ಮತ್ತೆ ಇಲ್ಲಿಗೆ ಬರುತ್ತೆ ಎಂದು ತಿಳಿಸಿ ಹೇಳುವ ನನ್ನ ಪ್ರಯತ್ನ ಗೊರ್ಕಲ್ಲ ಮೇಲೆ ನೀರು ಸುರಿದಂತೆ ,ವ್ಯರ್ಥ. ದೇವಸ್ಥಾನ ದಲ್ಲಿ ಒಂದು ಕಿ ಮಿ ವರೆಗೆ ದೇವರಿಗೆ ಬಟ್ಟೆ ಮಾಡುವವರ ಕ್ಯೂ , ನಾನು ಮೆಲ್ಲನೆ ಅಮ್ಮನಿಂದ ತಪ್ಪಿಸಿಕೊಂಡು ದೂರದಲ್ಲಿ ಪರಿಚಿತರೊಂದಿಗೆ ಮಾತಾಡುತ್ತ ಕುಳಿತೆ. ಸುಮಾರು ಸಮಯದ ನಂತರ ನನ್ನನ್ನೂ ಹುಡುಕುತ್ತ ಬಂದ ಅಮ್ಮನ ಕೈಯಲ್ಲಿ ವಸ್ತ್ರಗಳು ಹಾಗೆ ಇದ್ದವು. ದೇವರಿಗೆ ಬಟ್ಟೆ ಮಾಡಿಲ್ಲವೆ ಎಂದು ಕೇಳಿದಕ್ಕೆ ಬಂದ ಉತ್ತರದಿಂದ ಅವಕ್ಕಾದೆ. ” ಗುಡಿಯಲ್ಲಿ ದೇವರಿಲ್ಲವಂತೆ ” ಉತ್ಸವ ಮೂರ್ತಿಯನ್ನು ಊರಲ್ಲಿ ಮೆರವಣಿಗೆ ಮಾಡಲು ಒಯ್ದಿದ್ದರು.ದೇವರು ಬರುವವರೆಗೂ ದೇವರಿಲ್ಲದ ಗುಡಿಯಲ್ಲಿ ಕಾಯುತ್ತ ಕುಳಿತೆವು .ದೇವರು ಬಂದರು , ಎಲ್ಲರೂ ಕೈಯಲ್ಲಿರುವ ವಸ್ತ್ರಗಳನ್ನೂ ಲಗುಬಗೆಯಿಂದ ದೇವರ ಮುಂದೆ ಇಡತೊಡಗಿದರು ದೂರ ಇದ್ದವರು ದೇವರ ಸಮೀಪ ಇರುವವರಿಗೆ ಮಾಡಲು ಕೊಟ್ಟು ದೂರದಿಂದಲೆ ಹರಕ ತೀರಿಸಿ ನಡೆದರು. ದೇವರ ಮುಂದೆ ವಸ್ತ್ರ ಗಳ ರಾಶಿ ಹೆಚ್ಚಾದಂತೆ ಸ್ವಯಂ ಸೇವಕರು ಅವುಗಳನ್ನು ತೆರವುಗೊಳಿಸಿ ಹೊರಗೆ ಮಾರುವವರ ಬಂಡಿಗಳಿಗೆ ವರ್ಗಾಯಿಸುತಿದ್ದರು ಕೊಳ್ಳುವವರು ಮತ್ತೆವೆ ಕೊಂಡು ದೇವರಿಗೆ ಎರಿಸುತಿದ್ದರು.ಒಟ್ಟಿನಲ್ಲಿ ಈ ರೀತಿಯ ಆಚರಣೆ ಗಳಿಂದ ಅನೇಕರ ಬದುಕಿನ ಬಂಡಿ ಸಾಗುತ್ತದೆ. ಆಚರಿಸುವರಿಗೆ ಮನಶ್ಯಾಂತಿ ದೊರೆಯಬಹುದು. ಹರಕೆಯ ಬೇರೆ ಬೇರೆ ಬಗೆಗಳು ಪ್ರಕಟವಾದವು. ಸಕ್ಕರೆ ಹಂಚುವ ಹರಕೆಯವರು.ಪೇಡೆ ಹಂಚುವ ಹರಕೆಯವರು ಎಲ್ಲರ ಕೈಗೂ ಸಕ್ಕರೆ ಪೇಡೆಗಳನ್ನು ತುಂಬ ತೊಡಗಿದರು ತಿನ್ನಲೂ ಆಗದೆ ಬಿಸಾಡಲೂ ಆಗದೆ ಪ್ರತಿಯೊಬ್ಬರು ತಮ್ಮ ಕೈಯಲ್ಲಿರುವದನ್ನೂ ಮತ್ತೊಬ್ಬರಿಗೆ ಹಂಚತೊಡಗಿದರು ಹಂಚುವ ಪ್ರಕ್ರಿಯೆ ಮುಂದುವರೆಯುತಿತ್ತು.ಮನೆಗೆ ಹೋಗಿ ಎಲ್ಲರೊಂದಿಗೆ ಕುಳಿತು ಹೋಳಿಗೆ ಊಟಮಾಡಿದ್ದು ಸಂತೋಷದಾಯಕವಾಗಿತ್ತು. ಮರದಿನ ಸಂಜೆ ಬಾಲ್ಯದ ಗೆಳತಿಯರೊಡನೆ ಜಾತ್ರೆಗೆ ಹೋದ ಸಂದರ್ಬ ಮನಸ್ಸನ್ನು ಉಲ್ಲಾಸ ಗೊಳಿಸಿತು. ಸಂಜೆಯ ತಂಪಿನಲ್ಲಿ ಜನರೆಲ್ಲ ಏಳುವ ಧೂಳನ್ನು ಲೆಕ್ಕಿಸದೆ ,ತಾಯಂದಿರು ಅಜ್ಜ ಅಜ್ಜಿಯರು ಚಿಕ್ಕ ಮಕ್ಕಳ ಕೈಹಿಡಿದು ಅವು ಕೇಳುವ ವಸ್ತುಗಳೆಲ್ಲ ಗದರುತ್ತಲೆ ಚೌಕಾಶಿ ಮಾಡಿ ಕೊಡಿಸುತ್ತ ,ಜಾತ್ರೆಯ ಸವಿಯನ್ನು ಮಕ್ಕಳಿಗಿಂತ ಹೆಚ್ಚು ಅನುಭವಿಸುತ್ತ ಒಡಾಡುವದನ್ನು ನೋಡುವದೆ ಚಂದ. ಏನು ಕೊಳ್ಳಬೇಕು ,ಎಲ್ಲಿ ಹೋಗಬೇಕೆಂಬ ನಿರ್ದಿಷ್ಟ ಗುರಿಇರದೆ ಗೆಳತಿಯರೆಲ್ಲ ಕಾಲು ಹೋದ ಕಡೆ ಹೋಗುತ್ತ ,ಹಳೆ ನೆನಪುಗಳು ಮೆಲುಕುಹಾಕುತ್ತ ,ಅಂಗಡಿಗಳಲ್ಲಿರುವ ವಸ್ತುಗಳನ್ನು ಸುಮ್ಮನೆ ನೋಡುತ್ತ , ಮನೆಯಲ್ಲಿ ಹೆಚ್ಚಾಗಿ ಬಿದ್ದಿರುವ ಬಳೆ ಪಿನ್ನು ಟಿಕಳಿಗಳನ್ನೆ ಮತ್ತೆ ಮತ್ತೆ ಕೊಳ್ಳುತ್ತ ಆಟದ ಯಂತ್ರಗಳಿರುವ ಮೈದಾನಕ್ಕೆ ಬಂದಾಯಿತು.ಅಲ್ಲಿರುವ ಜೋಕಾಲಿ ತಿರುಗುಣಿಗಳಲ್ಲಿ ಕುಳಿತು ತಲೆ ತಿರುಗಿದರು ಬಿಡದೆ ಮತ್ತೆ ಮತ್ತೆ ಗಿರಕಿ ಹೊಡೆಯುತ್ತ ಅಕ್ಷರಶ ಮಕ್ಕಳಾದೆವು ,ಎದೆಯುದ್ದ ಬೆಳೆದ ಮಕ್ಕಳಿದ್ದಾರೆಂಬುದು ಮರೆತು. ಹರೆಯದಲ್ಲಿ ಹಿಂದಿಂದೆ ಅಲೆದ ಹುಡುಗರೆಲ್ಲ ಈಗ ಪ್ರೌಢರಾಗಿ ಎದುರಿಗೆ ಸಿಕ್ಕರೂ ಎಕವಚನದಲ್ಲಿ ಮಾತಾಡಬೇಕೊ ಬಹುವಚನದಲ್ಲಿ ಮಾತಾಡಬೇಕೋ ತೋಚದೆ ತಡವರಿಸತೊಡಗಿದಾಗ ಅವರ ಪರಿಪಾಟಲು ಕಂಡು ನಗುತ್ತ ಮತ್ತದೆ ಹಳೆ ಆತ್ಮಿಯತೆಯಿಂದ ಮಾತಾಡಿದಾಗ ನಾವೆಲ್ಲ ಮತ್ತೆ ಇಪ್ಪತೈದು ವರ್ಷ ಹಿಂದೆ ಹಾರಿದ್ದಾಯಿತು. ಜಾತ್ರೆಯು ತುಂಬಾ ನಾವೆಲ್ಲ ಗೆಳೆಯ ಗೆಳತಿಯರು ಒಡಾಡಿದ್ದೆ ಒಡಾಡಿದ್ದು.ಜೀಲೆಬಿ ಮಿರ್ಚಿ ಭಜಿ ಚೂಡವಾಗಳನ್ನು ತಿನ್ನುತ್ತ ಈಗಿನ ಮತ್ತು ಹಳೆಯ ವಿಷಯಗಳು ಮಾತಾಡುತ್ತ ಜಾತ್ರೆ ಎಂಬ ಮಾಯಾಲೋಕದಲ್ಲಿ ಮುಳುಗಿದೋದೆವು. ಇಷ್ಟರಲ್ಲೆ ಅನೇಕ ವರ್ಷಗಳಿಂದ ಮರೆಯಾದವರ ಮುಖದರ್ಶನವಾಗಿ ,ಒಂದು ಆತ್ಮಿಯ ನಗುವಿನಿಂದ ,ಆರಾಮ ,ಆರಾಮ ,ಎಂಬ ಕುಶಲೋಪರಿಯಿಂದ ಮರೆಯಾದ ಎಷ್ಟೊ ಸಂಬಂಧಗಳು ಗೆಳೆತನಗಳು ಮತ್ತೆ ಚಿಗುರಿದವು.ಕೆಲವು ನಿಮಿಷದ ಮಾತಿನಿಂದ ಮರೆಯಾದ ಬಾಂಧವ್ಯ ಮತ್ತೆ ಬೆಸೆಯಿತು.ಮನದಿಂದ ಮರೆಯಾದವರು ಮತ್ತೆ ಮನದಲ್ಲಿ ನಿಂದರು. ನನ್ನೂರಿನ ಜಾತ್ರೆ ನನ್ನೂರಿನ ಜನರೊಡನೆ ಬಾಂಧವ್ಯ ಬೆಸೆದಿಡುವ ಹಂದರವಾಯಿತು. ******

ಲಲಿತ ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಪದಗಳೇ ಹೀಗೆ ಜಿ.ಲೋಕೇಶ್ ಪದಗಳೇ ಹೀಗೆ ಪದಗಳೇ ಹೀಗೆ ಅಲೆಸುತ್ತವೆ ಇಂದು ಬಾ ನಾಳೆ ಬಾ ಎಂದು ಕವಿತೆಗಳನ್ನು ಕಟ್ಟಲು ಎರವಲು ಪಡೆಯಲು ಹೋಗಬೇಕಾಗಿದೆ ನಮ್ಮೂರ ಶೆಟ್ಟಿ ಬಳಿಗೆ ನನ್ನವ್ವ ಸಾಲ ಪಡೆಯಲು ಹೋಗುವಂತೆ ಬಡ್ಡಿ ಬೇಕಾದಷ್ಟು ನೀಡುತ್ತೇನೆಂದರೂ ಏನೋ ಅನುಮಾನ ಪದಗಳಿಲ್ಲಿ ಸಿಗಲೊಲ್ಲವು ಸರಿ ಕಾಯುತ್ತಿದ್ದೇನೆ ಬಾಗಿಲು ತೆರೆಯುವ ಮುನ್ನವೇ ಸರದಿಯಲ್ಲಿ ನಿಂತು ಇವತ್ತು ನಾನೇ ಮೊದಲು!! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೆಳಕಿನ ಬೀಜಗಳು.. ಚಂದ್ರಪ್ರಭ ಬೆಳಕಿನ ಬೀಜಗಳು.. ಪುರುಷನೆಂದರು ಪ್ರಕೃತಿಯೆಂದರು ನಾವು ತಲೆದೂಗಿದೆವು ಗಂಡೆಂದರು ಹೆಣ್ಣೆಂದರು ನಾವು ತಲೆದೂಗಿದೆವು ಅವನೆಂದರು ಅವಳೆಂದರು ನಾವು ತಲೆದೂಗಿದೆವು ತುದಿಯೆಂದರು ಮೊದಲೆಂದರು ನಾವು ತಲೆದೂಗಿದೆವು ಅಖಿಲವೆಂದರು ಅಣುವೆಂದರು ನಾವು ತಲೆದೂಗಿದೆವು ಅನಾದಿಯಿಂದ ಇದು ನಡೆದೇ ಇದೆಯಲ್ಲ ಹೊಸತೇನಿದೆ ಇದರಲ್ಲಿ!! ನಾವು ಒಡಲು ತುಂಬಿ ಹೆತ್ತು ಹೊರುತ್ತ ಬಂದಿದ್ದೇವೆ ಅಟ್ಟು ಬೇಯಿಸಿ ಹಸಿವ ನೀಗುತ್ತೇವೆ ಚಳಿ ಗಾಳಿ ಮಳೆ ಬಿಸಿಲಿಗೆ ತತ್ತರಿಸುವಾಗ ಜೀವವನು ವಾತ್ಸಲ್ಯದ ಸೆರಗಲ್ಲಿ ಕಾಪಿಡುತ್ತೇವೆ ಸೂರುಗಳಿಗೆ ಜೀವ ತುಂಬಿ ಲವಲವಿಕೆಯ ಮನೆಯಾಗಿಸುತ್ತೇವೆ ಗೋಡೆಗಳನು ಕೆಡವಿ ಸೇತುವೆ ಕಟ್ಟುತ್ತೇವೆ ಮನೆ ಅಂಗಳ ರಸ್ತೆಗಳನೆಲ್ಲ ಗುಡಿಸಿ ಅಂದದ ರಂಗೋಲಿ ಬಿಡಿಸುತ್ತೇವೆ ಬಟ್ಟೆ ಪಾತ್ರೆ ನೆಲ ಗೋಡೆ ಎಲ್ಲ ತಿಕ್ಕಿ ತೊಳೆದು ಹಸನುಗೊಳಿಸುತ್ತೇವೆ ಮನಮನದೊಳು ದೀಪ ಉರಿಸಿ ಅಲ್ಲೊಂದಿಷ್ಟು ಬೆಳಕು ಇಣುಕುವಂತೆ ಮಾಡುತ್ತೇವೆ ಮುಟ್ಟು ಬಸಿರು ಬಾಣಂತನ ಎಂಬೆಲ್ಲವುಗಳನು ಜೀವ ಕಾರುಣ್ಯದ ಕಣ್ಣಿಂದಲೇ ನಿರುಕಿಸುತ್ತೇವೆ ಅದನೆಲ್ಲ ಅಕ್ಕರೆಯಿಂದ ಒಪ್ಪಿ ಅಪ್ಪಿಕೊಳ್ಳುತ್ತೇವೆ ಕೂಸು ಕುನ್ನಿ ಮುದಿ ಜೀವಗಳು ಆರೋಗ್ಯ ಬಾಧೆಯಿಂದ ಪೀಡಿತರು ಮನೋವ್ಯಾಕುಲತೆಗೆ ಒಳಗಾದವರೆಲ್ಲ ನಮಗೆ ನೊಂದ ಜೀವಗಳಾಗಿ ಕಂಡಿವೆ ಅವರ ಸಾಂತ್ವನ ಸೇವೆಗೆ ನಮ್ಮೊಳಗಿನ ತಾಯಿ ದಾದಿ ಸದಾ ತುದಿಗಾಲಲ್ಲಿ ನಿಂತು ತುಡಿಯುತ್ತಾಳೆ ಪ್ರಕೃತಿ ಎನಿಸಿದ ಕ್ಷಣದಿಂದ ನಮ್ಮನ್ನು ಎರಡನೇ ಸಾಲಿಗೆ ದೂಡಲಾಗಿದೆ ಸಹಸ್ರಮಾನಗಳಿಂದ ನಮ್ಮನ್ನು ಹಿಡದೆಳೆದು ತೊಟ್ಟ ಬಟ್ಟೆ ಸೆಳೆದು ಅಂಗ ಅಂಗವನು ಛಿದ್ರಗೊಳಿಸಿ ಹೃದಯವನ್ನು ಬಟಾ ಬಯಲಿನಲ್ಲಿ ಬಿಕರಿಗಿಡಲಾಗಿದೆ ಆದರೂ ಮಿಡಿಯುವುದ ತೊರೆದಿಲ್ಲ ನಾವು ಹೃದಯ ತನ್ನ ಮಿಡಿತ ಮರೆತರೆ ಜಗ ನಿಶ್ಚಲವಾಗುವುದೆಂಬ ಎಚ್ಚರ ಸದಾ ನಮ್ಮನ್ನು ಪೊರೆದಿದೆ ಮನೆ ಮಕ್ಕಳು ಪಾತ್ರೆ ಪಗಡದೊಂದಿಗೆ ನಮ್ಮನ್ನು ಹಿಂಸೆ ಅತ್ಯಾಚಾರಗಳ ಭೀಬತ್ಸಕ್ಕೆ ನಿರಂತರ ಗುರಿ ಮಾಡಲಾಗಿದೆ ಸೆರಗಿನ ಮರೆಯಲ್ಲಿ ನಾವು ನಮ್ಮ ಕರುಳ ಕುಡಿಗಳನು ಪೊರೆದಿದ್ದೇವೆ ಗುಂಡು ಗೋಲಿ ಬಡಿಗೆ ಕತ್ತಿ ಖಡ್ಗಳಿಗೆ ವಿನಾಕಾರಣ ಜೀವ ತೆತ್ತ ಜತೆಗಾರ ಇಂದು ಬರುವ ನಾಳೆ ಬರುವನೆಂಬ ಹುಸಿ ಭರವಸೆಯನೆ ತುಂಬುತ್ತ ಎಳೆಯ ಜೀವಗಳ ಸಲಹಿದ್ದೇವೆ ಬೆಂಕಿ ಬಯಲು ಕಂಬಿ ಜೈಲುಗಳು ನಮ್ಮ ಕಾರುಣ್ಯದೆದುರು ಮಂಡಿಯೂರಿವೆ ಗಾಢ ಅಗಾಧ ಎಂಬ ಬಣ್ಣನೆಗೆ ಪಾತ್ರವಾಗುವ ಅಂಧಕಾರ ನಮ್ಮೊಂದು ಸೆಳಕಿನೆದುರು ನಿಲ್ಲದೆ ಸೋತು ಕಾಲ್ಕಿತ್ತಿದೆ ಈ ಊರು ಆ ಊರು ಈ ದೇಶ ಆ ದೇಶ ಎನುವ ಭೇದವೇ ಇರದೆ ಬುವಿ ಎಲ್ಲೆಡೆ ಮೆಲ್ಲಗೆ ಕುಡಿಯೊಡೆದು ಬೆಳಕು ಸೂಸಿ ನಿಧಾನವಾಗಿ ಬಿಸಿಲು ಚೆಲ್ಲುತ್ತೇವೆ ಹರಿತ್ತುವಿನಲ್ಲಿ ಜೀವ ಸಂಚಾರವಾಗುತ್ತದೆ ನೋಯಿಸುವ ನೊಂದ ಪೊರೆದ ಈರ್ಷೆಗೆ ನಿಂತ ಜೀವಗಳೆಲ್ಲ ಕೈ ಮುಂದೆ ಮಾಡುವಾಗ ನಾವು ಕೈ ತುತ್ತು ನೀಡುತ್ತೇವೆ.. ಆಗ ಎಲ್ಲ ಇಲ್ಲಗಳ ನಡುವೆ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ ರೊಟ್ಟಿಯೆದುರು ಬಣ್ಣ ಬಣ್ಣದ ಪತಾಕೆಗಳು ಗುಡಿ ಗುಂಡಾರ ದೈವಗಳೆಲ್ಲ ಸೋತು ನೆಲ ಕಚ್ಚುತ್ತವೆ ಸಂದಿಗೊಂದಿಗಳಲ್ಲಿ ಬೆಳಕಿನ ಎಳೆ ಎಳೆ ಸೂಸಿ ಒಂದಿಷ್ಟು ಕರುಳ ಬಳ್ಳಿಯ ಬೇರಿಗೂ ತಾಕುವಾಗ ಬುದ್ಧ ಬಸವ ಬಾಬಾ.. ಕನಕ ಕಬೀರ ಏಸು ಅಕ್ಕ ಮೀರಾ ಲಲ್ಲಾ.. ಕಪ್ಪು ಕೆಂಪು ಹಸಿರು ಎಲ್ಲ ಒಂದರೋಳು ಇನ್ನೊಂದು ಬೆರೆತು ಬೆಳ್ಳನೊಂದು ಬೆಳಕು ಹೊಮ್ಮುತ್ತದೆ…. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಗಜ಼ಲ್ ನಿನ್ನ ಕಣ್ಣಲ್ಲಿ ಕಂಡ ನೆರಳುಗಳ ಬರೆಯಲಾರೆ ಕೆನ್ನೆಯಲಿ ಮಡುವಾದ ಬಣ್ಣಗಳ ಬರೆಯಲಾರೆ ಕಡಲೇಕೆ ಕುದಿಕುದಿದು ಮರಳಿದೆ ಹೀಗೆ ಎದೆಯಾಳದ ಉಮ್ಮಳಗಳ ಬರೆಯಲಾರೆ ನಿನ್ನನ್ನು ಒಮ್ಮೆ ಸೋಕಲು ಎಂಥ ತಪನೆಯಿತ್ತು ಚಾಚಿ ಚಾಚಿ ಮರಗಟ್ಟಿದ ಬೆರಳುಗಳ ಬರೆಯಲಾರೆ ತೋಳಲ್ಲಿ ತಲೆಯಿಟ್ಟಾಗ ಎದ್ದ ಕಂಪನವೆಷ್ಟು ಬದುಕಿನ ಬದುಕಾದ ಚಣಗಳ ಬರೆಯಲಾರೆ ಬರಿಯ ಮಾತುಗಳಿಗೆ ದಕ್ಕಿದ್ದು ಏನು ‘ಜಂಗಮ’ ನುಡಿಯುಂಬರದಲ್ಲೆ ನಿಂತ ಭಾವಗಳ ಬರೆಯಲಾರೆ **********

ಕಾವ್ಯಯಾನ Read Post »

You cannot copy content of this page

Scroll to Top