ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನನಗಷ್ಟೆ ಗೊತ್ತು! ಲೋಕೇಶ್ ಅಷ್ಟು ಸುಲಭವಲ್ಲ ನಿನ್ನ ಉಳಿಸಿಕೊಳ್ಳುವುದು ಅಷ್ಟು ಸಲೀಸು ಅಲ್ಲ ನಿನ್ನ ಕಳೆದುಕೊಳ್ಳುವುದು ನೀನೆಂದು ಉನ್ಮಾದ ರುಚಿಗೆ ತಾಕೀದೊಡನೇ ನೀ ಕರೆದೊಯ್ಯುವ ಜಗತ್ತು ನನಗಷ್ಟೇ ಗೊತ್ತು! ನೀನೆಂದು ಭಾವನ್ಮೊದಾ ಮನಕ್ಕೆ ನೆನಪದೊಡನೇ ನೀ ಆವರಿಸಿಕೊಳ್ಳುವ ನಿಯತ್ತು ನನಗಷ್ಟೇ ಗೊತ್ತು! ನೀನೆಂದು ಸವಿ ವಿನೋದ ಮಾತಿಗೆ ಜೊತೆಯಾದೊಡನೇ ನೀ ಆಪ್ತವಾಗುವ ಅವಲತ್ತು ನನಗಷ್ಟೇ ಗೊತ್ತು! ನೀನೆಂದು ಉಸಿರ ನಾದ ಏರಿ ಇಳಿದೊಡನೇ ನನ್ನ ಎದೆಯಲ್ಲೆಳೆವ ಹೆಸರಂತು ನನಗಷ್ಟೇ ಗೊತ್ತು *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯುಗಾದಿಯ ಆ ದಿನ ನೀ.ಶ್ರೀಶೈಲ ಹುಲ್ಲೂರು ಹೆದ್ದಾರಿಗಂಟೇ ಇರುವ ನನ್ನ ಮನೆ ಮಹಲಿನ ಮಹಡಿಯ ಬಾಲ್ಕನಿಯಲಿ ಬಂದು ನಿಂತೆ ಬಿಕೋ ಎನ್ನುವ ಸತ್ತುಬಿದ್ದ ರಸ್ತೆ! ಅಲ್ಲೊಂದು ಇಲ್ಲೊಂದು ಆಗೊಂದು ಈಗೊಂದು ಕಂಡು ಕಣ್ಮರೆಯಾಗುವ ಬೀದಿ ನಾಯಿ ಗಳು ತಮ್ಮ ವಿಸರ್ಜನಾ ವ್ಯೂಹ ದ ಕೊನೆಯ ಅಂಗದ ಅಂತಿಮ ಚಪಲವ ಲೈಟಿನ ಕಂಬಕೆ ಕಾಲೆತ್ತಿ ನೆಲಕೆ ತಳವೊತ್ತಿ ತೀರಿಸಿ ಕೊಂಡು ಕಂಬಿ ಕಿತ್ತವು! ಪ್ರಾಸಕ್ಕಂಟಿದ ‘ಕವಿತೆ ಸಾಲು’ ಇಂದು ನನ್ನನ್ನು ಪರದೇಶಿಯಾಗಿಸಿ ಕ್ರಾಸ್ ಕಂಟ್ರಿ ಓಟಕ್ಕಿಳಿದವು. ಸರಿ,ಬಂದಂತೆ ಬರೆದಿಡುವೆ ಬೈದವರಿಗೊಂದು ಸಲಾಂ ಹೇಳಿ! ಇಲ್ಲಿ ಹರಿದೋಡುತಿರುವ ಸಾಲುಗಳಂತೆಯೇ ಹರಕು-ಪರಕು ಚೆಲ್ಲಾಪಿಲ್ಲಿ ಮನದ ಕವಲು! ತುಂಬಿಕೊಂಡಿರುವುದೇನು ಒಳಗೆ? ಎಲ್ಲ ಖಾಲಿ ಖಾಲಿ ಮೋಡ ವಿಲ್ಲದ ಬಾನು ! ಸ್ವಾತಂತ್ರ್ಯ ದ ಹೋರಾಟದಲ್ಲಿ ನಾವಿರಲಿಲ್ಲ ,ಅವರೇಕೆ ಆ ಪರಿ ಹೋರಾಡಿದರು?ಎಂಬುದನು ಓದಿ ತಿಳಿದುದಕಿಂತ‌ ಇಂದಿನ ದಿಗ್ಬಂಧನವೇ ಎಮ್ಮೆ ಬಡಿವ ಬಾಲ್ಯ ನೆನಪಿಸಿತು! ಖಾರ ತಿಂದವನ ಒದ್ದಾಟ! ಒಳಗೊಳಗೇ ಗುದ್ದಾಟ! ನಂಮೀ ಸಂಕಟ ತೊಳಲಾಟಕೆ ಪ್ರಧಾನಿಯೇ ಕಾರಣ ಎಂದು ಫೂತ್ಕರಿಸಿದೆ! ಅಲ್ಲಿ ನಮ್ಮ ಓಣಿಯಾಚೆಯ ಆಸ್ಪತ್ರೆ ಪಕ್ಕ ಜನರ ಗೌಜು ಗದ್ದಲದ ನಡುವೆ ಬಾಯಿ ಬಿರಿವಂತೆ ಗಹಗಹಿಸಿ ನಗುತ್ತಿತ್ತು ಕರೋನಾ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ ನಮ್ಮ ಗೋಳನು ಕಂಡು ಕರಗಿರುವನೇ ದಿನಕರ ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ ಕತ್ತಲು ಸರಿದು ಬೆಳಕು, ಲೋಕದ ನಡೆ ‘ಜಂಗಮ’ ಆಪದಗಳ ಕಳೆದು ನಲವ ಎರೆಯುವನೇ ದಿನಕರ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾವೆಲ್ಲರೂ ಮನೆಯಲ್ಲೇ ಇದ್ದೇವೆ ರೇಖಾಭಟ್ ನಾವೆಲ್ಲರೂ ಮನೆಯಲ್ಲೇ ಇದ್ದೇವೆ ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ ಅಡುಗೆಮನೆ ಈಗ ಕೇಂದ್ರ ಸ್ಥಾನ ಟಿ.ವಿ ಹಾಲ್ ನಮ್ಮ ಆಸ್ಥಾನ ಬೀದಿಗಂತೂ ಹೋಗೋದಿಲ್ಲ ಅದಂತೂ ಈಗ – ಖಬರಸ್ಥಾನ! ಮಾವನ ವಾಕಿಂಗ್ ಸ್ಟಿಕ್ ಗೋಡೆ ಮೂಲೆಯಲ್ಲೆ ನಿದ್ರೆಗೆ ಜಾರಿದೆ! ಅತ್ತೆಯ ಹೂವಿನ ಚೊಬ್ಬೆ ದೇವಸ್ಥಾನ ಮರೆತು ಬೊರಲು ಬಿದ್ದಿದೆ! ಪುಟ್ಟ ಪಿಂಕ್ ಸೈಕಲ್ ಮರದ ಬುಡದಲಿ ಒರಗಿ ನಿಂತು ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ! ಕೊರೊನಾ ಬೂತದ ಚಿತ್ರ ಬಿಡಿಸಿ ಅದಕ್ಕೆ ಕ್ರಾಸ್ ಮಾರ್ಕ್ ಹಾಕಿ ಆಗಾಗ ಕಿಟಕಿಯಲ್ಲಿ ಹಣಕುವ ಮಗಳ ಕಣ್ಣೊಳಗಿನ ಬಣ್ಣವೂ ತುಸು ಕಡಿಮೆಯೇ ಆಗಿದೆ ಕಂಪ್ಯೂಟರೊಳಗೆ ಹೊಕ್ಕು ಇ ಪೇಪರ್ ಓದುತ್ತ ಆಗಾಗ ಕೊರಾನಾ ಅಂಕಿ ಅಂಶ ವರದಿ ಮಾಡುವ ಅವಳಪ್ಪನೋ ಬಂಧಿತ- ಕಾಲು ಸುಟ್ಟ ಬೆಕ್ಕು- ಆದರೂ ಹೊತ್ತು ಸರಿಯುತ್ತಿದೆ ಅದಕೆ ಕಾರಣ ಇಂಟರ್ ನೆಟ್ಟು!! ಒಮ್ಮೆ ಗ್ರೀನ್ ಟೀ ಮತ್ತೊಮ್ಮೆ ಕಷಾಯ ತುಸು ಹೊತ್ತಿಗೆ ಚಹಾ ಬಿಸಿಲೇರಲು ಮಜ್ಜಿಗೆ ಬೆಲ್ಲ ಈ ದಾಹ ಹೆಚ್ಚುತ್ತಿರುವುದು ಬಿಸಿಲಿಗೊ, ಆತಂಕಕ್ಕೊ ಅರ್ಥವಾಗುತ್ತಿಲ್ಲ ಮನೆಯೊಳಗಿನ ಬಿಸಿಯ ಹೊರಹಾಕಲು ಫ್ಯಾನ್ ಇಪ್ಪತ್ತ್ನಾಲ್ಕು ಗಂಟೆ ತಿರುಗುತ್ತಿದೆ ಒಳಗುದಿಯ ಹೊರಹಾಕಲಾರದ ನಾನು ಯಾವ ಕವಿತೆಯನ್ನು ಪೂರ್ತಿ ಬರೆಯಲಾಗದೇ ಪೂರ್ಣವಿರಾಮ ಇಡುತ್ತಿದ್ದೇನೆ! *******************

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ರಣಹಸಿವಿನಿಂದ ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮ ಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ ಕಲಸಿಹಾಕಿದ ಭ್ರೂಣಗಳ ನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ ನೋಡು ಬರೆಯುವಾಗಲೂ ಇದನು ಕೆಕ್ಕರಿಸಿ ನೋಡುತಿದೆ ಮೃಗವೊಂದು ರಣಹಸಿವಿನಿಂದ! ******** ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ನಾವೇನು ವ್ಯಬಿಚಾರಿಗಳಾಗಿರಲಿಲ್ಲ! ಅವಳನ್ನು ಪ್ರೀತಿಸಿದ್ದು ನಿಜಹೆಸರಲ್ಲೇನಿದೆ ಹೇಳಿಸುಶೀಲಾ, ಶಕೀಲಾ, ಶೈನಿ!ಏನಾದರು ಒಂದಂತು ಆಗಿರಲೇ ಬೇಕೆಂಬ ಹಟ ನನಗಂತು ಇರಲಿಲ್ಲ! ಹಾಗೇನೆ ನನ್ನ ಹೆಸರುಮಹೇಶ, ಮುಬಾರಕ್, ಮ್ಯಾಕ್ಹೀಗೇನೆ ಯಾವುದಾದರೊಂದು ಆಗಿರಲೇ ಬೇಕೆಂಬ ಹಟಅವಳಿಗೂ ಇದ್ದಂತೆ ಕಾಣಲಿಲ್ಲ… ನಮ್ಮ ಮಿಲನದ ಉನ್ಮತ್ತ ಕ್ಷಣದೊಳಗೂಅವಳಾಗಲಿ ನಾನಾಗಲಿ ಅಪ್ಪಿ ತಪ್ಪಿಯೂನಮ್ಮಹೆಸರುಗಳ ಪಿಸುಗುಡಲಿಲ್ಲ!ಅಷ್ಟು ಅನಾಮಧೇಯರಾಗಿ ಪ್ರೇಮಿಸಿದೆವು. ಹೊರಗಿನವರಿಗೆ ನಾವು ಗೊತ್ತಿದ್ದುದು ನಮ್ಮ ಹೆಸರುಗಳಿಂದ ಮಾತ್ರಆದರೆ ಆ ಹೆಸರುಗಳಾಚೆಯಲ್ಲಿಯೂಇರುವ ನಮ್ಮ ಐಡೆಂಟಿಟಿಯನ್ನುಹುಡುಕಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಹಾಗಂತ ನಾನು ವಿಟನಾಗಿರಲಿಲ್ಲಅವಳೇನು ಜಾರಿಣಿಯಾಗಿರಲಿಲ್ಲ!************* ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಅನುವಾದ

ಅನುವಾದ ಸಂಗಾತಿ

ಈ ದಿನ ಮೂಲ: ಮೆರಿ ಒಲಿವಿರ್( ಅಮೇರಿಕಾ ಕವಿಯಿತ್ರಿ) ಕನ್ನಡಕ್ಕೆ: ಕಮಲಾಕರ ಕಡವೆ ಈ ದಿನ ನನ್ನ ಹಾರಾಟ ಕಡಿಮೆ ಮಾಡಿದ್ದೇನೆಒಂದು ಮಾತನೂ ಆಡುತ್ತಿಲ್ಲ ನಾನುಹೆಬ್ಬಯಕೆಗಳ ಎಲ್ಲ ಮಾಟಮಂತ್ರಗಳ ಮಲಗಿಸಿದ್ದೇನೆ. ಜಗ ಸಾಗಿದೆ ಅದು ಸಾಗಬೇಕಾಗಿರುವಂತೆಹೂದೋಟದಲ್ಲಿ ಮೆಲ್ಲಗೆ ಜೇನಿನ ಝೇಂಕಾರಮೀನು ಕುಪ್ಪಳಿಸಿದೆ, ನೊರಜು ಯಾರದೋ ಆಹಾರವಾಗಿದೆಮುಂತಾಗಿ. ನಾನು ಮಾತ್ರ ಈ ದಿನ ರಜೆಯಲ್ಲಿದ್ದೇನೆಪುಕ್ಕದಷ್ಟು ಶಾಂತಚಲಿಸದೆಯೂ, ಅಪಾರ ದೂರವನ್ನುಕ್ರಮಿಸುತ್ತಿದ್ದೇನೆ ನಿಶ್ಚಲತೆ, ಮಂದಿರದ ಒಳಹೊಗಲುಇರುವ ಬಾಗಿಲುಗಳಲ್ಲೊಂದು. ***** Today I’m flying low and I’mnot saying a wordI’m letting all the voodoos of ambition sleep. The world goes on as it must,the bees in the garden rumbling a little,the fish leaping, the gnats getting eaten.And so forth. But I’m taking the day off.Quiet as a feather.I hardly move though really I’m travelinga terrific distance. Stillness. One of the doorsinto the temple.

ಅನುವಾದ ಸಂಗಾತಿ Read Post »

ಇತರೆ

ಪ್ರಸ್ತುತ

ಗೋಲ್ಡನ್ ಟೈಮ್ ಸ್ಮಿತಾ ರಾಘವೇಂದ್ರ ಅಬ್ಬಬ್ಬಾ ಅಂದ್ರೆ ಮೂರುದಿನ ಇರಬಹುದಪ್ಪಾ ಮನೆಲಿ ಅದಕ್ಕಿಂತ ಹೆಚ್ಚಿಗೆದಿನ ಬಾಗಿಲುಹಾಕಿ ಕೂರಲು ಅಸಾಧ್ಯ..ಆದರೆ ಬರೋಬ್ಬರಿ ಇಪ್ಪತ್ತೊಂದು ದಿನಗಳಕಾಲ ಮಹಾಮಾರಿ ಕೋವಿಡ್ 19 ತೊಲಗಿಸಲು ಮನೆಯೇ ಮದ್ದು ಎಂದು,ಜನಹಿತಕ್ಕಾಗಿ ಜಾರಿಮಾಡಿದ ಸರ್ಕಾರದ ನಿಯಮ ಪಾಲಿಸದೇ ಇರಲು ಸಾಧ್ಯವಿಲ್ಲ.. ಲಕ್ಷಣರೇಖೆ ಹಾಕಿ ಬಾಗಿಲು ಹಾಕಿ ಕೊಳ್ಳುವದು ಉತ್ತಮ ಕೆಲಸ ಆದರೆ ಅದೆಷ್ಟು ಜನರಿಗೆ ಒಳಗೊಳಗೇ ಕಸಿವಿಸಿ,ದಿಗಿಲು,ಇನ್ನೇನು ಬದುಕೇ ಮುಗಿಯಿತೇ!? ಎನ್ನುವ ಭಾವ,ಬಾಗಿಲು ಹಾಕಿ ಕೂತು ಏನು ಮಾಡುವದು ಎನ್ನುವ ಗೊಣಗು. ತಲೆ ಕೆಡಿಸಿಕೊಳ್ಳಬೇಡಿ ಅಯ್ಯೋ ಹೇಗೆ ಈ ಇಪ್ಪತ್ತೊಂದು ದಿನ ಕಳೆಯಲಪ್ಪಾ!? ಅಂತ ತಲೆಯಮೇಲೆ ಸೂರು ಬಿದ್ದವರಂತೆ ಆಡಬೇಡಿ. ಇಂತಹ ಉತ್ತಮ ಅವಕಾಶ ಮತ್ತೆ ನಮ್ಮ, ನಿಮ್ಮ ಜೀವನದಲ್ಲಿ ಬರಲಾರದು. ಗೃಹ ಬಂಧನವಲ್ಲ ಗೃಹವಾಸ ಇದು ನಮ್ಮದೇ ಒಳಿತಿಗಾಗಿ ಎಂದು ಮನಃಪೂರ್ವಕವಾಗಿ ಸ್ವಾಗತಿಸಿ. ಒಂದಿಷ್ಟು ನಿಯಮ ಹಾಕಿ ಕೊಳ್ಳಿ ಸದುಪಯೋಗ ಪಡಿಸಿಕೊಳ್ಳುವತ್ತ ಮನಸು ವಾಲಲಿ. ಎಲ್ಲರೂ ಮನೆಯಲ್ಲಿಯೇ ಇರುವದರಿಂದ ಮನೆಯ ಹೆಂಗಸರಿಗೆ ಸಹಜವಾಗಿಯೇ ಕೆಲಸಗಳು ಜಾಸ್ತಿಯಾಗುತ್ತವೆ,ಅಡುಗೆ ಮನೆಯಲ್ಲಿ ತಾಯಿಯ ಜೊತೆ ಹೆಂಡತಿಯ ಜೊತೆ ಸಹಕರಿಸಿ. ಮನೆಯ ಹೆಣ್ಣುಮಕ್ಕಳಿಗೆ ಅಡುಗೆ ಕಲಿಯಲು ಉತ್ತಮ ಅವಕಾಶ. *ಎಷ್ಟೋದಿನಗಳಿಂದ ಉಳಿದೇಹೋದ ಕೆಲಸಗಳನ್ನು ಕೈಗೆತ್ತಿಕೊಳ್ಳಿ *ಒಳ್ಳೆಯ ಪುಸ್ತಕಗಳನ್ನು ಓದಿ *ಮಕ್ಕಳು ಮನೆಯೊಳಗೇ ಬಂದಿಯಾಗಿರಲು ಇಷ್ಟ ಪಡಲಾರರು ಅವರನ್ನು ಸಂಭಾಳಿಸುವದೇ ಒಂದು ದೊಡ್ಡ ಸವಾಲು ಮನೆಯ ಪ್ರತಿಯೊಂದು ಸದಸ್ಯರೂ ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಸಮಯಕಳೆಯಿರಿ. ಅನವಶ್ಯಕ ರೇಗು ಮಕ್ಕಳನ್ನು ಘಾಸಿಗೊಳಿಸದಿರಲಿ. *sslc ಮಕ್ಕಳಿಗೆ ಪರೀಕ್ಷೆ ಮುಗಿಯದ ಕಾರಣ ಅವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ ಸದಾ ಅವರಿಗೆ ಧೈರ್ಯ ತುಂಬುತ್ತಿರಿ ಸಂಬಂಧಗಳನ್ನು ಆಪ್ತವಾಗಿ ನೋಡಿ ಮುನಿಸು ವೈಮನಸ್ಸುಗಳಿಗೆ ಅವಕಾಷ ನೀಡದಿರಿ. *ಹೀಗೆ ಇಷ್ಟು ದಿನಗಳಕಾಲ ಇಡೀ ಮನೆ ಸದಸ್ಯರು ಒಟ್ಟಿಗೆ ಇರುವ ಅವಕಾಶ ಜೀವನದಲ್ಲಿ ಮತ್ತೆ ಬರಲಾರದು ಎಂಬುದನ್ನು ಅರಿತುಕೊಳ್ಳಿ. ನೆನಪಿರಲಿ ಮತ್ತೆ ನಾವು ಅದೇ ಬ್ಯೂಸಿ ಬ್ಯೂಸಿ ಜೀವನಕ್ಕೆ ತರೆದುಕೊಳ್ಳಲೇಬೇಕು ಓಡುವ ಕಾಲದೊಂದಿಗೆ ದಾವಂತದಲಿ ಓಡಲೇಬೇಕು ಪ್ರತಿಯೊಬ್ಬರಿಗೂ ಈ ಕಾಲ ಗೋಲ್ಡನ್ ಸಮಯ. ಸದುಪಯೋಗಪಡಿಸಿಕೊಳ್ಳಿ. *ಮನೆಯ ಸದಸ್ಯರೆಲ್ಲ ಕೂತು ಸುದ್ದಿ ಹೇಳಿ, ಆಟವಾಡಿ, ಪರಸ್ಪರ ಅರ್ಥ ಮಾಡಿಕೊಳ್ಳಿ, ಅದೆಷ್ಟೋ ಜನರು ಏನೂ ಕೆಲಸ ಇಲ್ವಲ್ಲಾ ಎಂದು ಮೂರು ಹೊತ್ತು ಮೊಬೈಲ್ ನಲ್ಲಿ ಮುಳುಗಿ ಸಾಮಾಜಿಕ ತಾಣದಲ್ಲಿ ಅನವಶ್ಯಕ ಸುದ್ದಿಗಳಿಗೆ ಇಂಬು ಕೊಡುತ್ತಾ ಸಮಯ ಕಳೆಯುತ್ತಾರೆ. ಖಂಡಿತವಾಗಿ ಈ ತಪ್ಪು ಮಾಡಬೇಡಿ. ಮತ್ತಷ್ಟು ಮೊಬೈಲ್ ದಾಸ್ಯತ್ವಕ್ಕೆ ಬಲಿಯಾಗದಿರಿ. ಕೊನೆಯದಾಗಿ ಈ ಗೃಹವಾಸ ಶಾಶ್ವತವಲ್ಲ ನಾವು ದೇಶದ ಒಳಿತಿಗಾಗಿ ನಿಯಮಪಾಲನೆ ಮಾಡುತ್ತಿದ್ದೇವೆ.ಸಣ್ಣ ಪುಟ್ಟ ಕಷ್ಟಗಳನ್ನು ಸಹಿಸಿಕೊಳ್ಳೋಣ ತಾಳ್ಮೆ ಕಳೆದುಕೊಳ್ಳದಿರೋಣ ಎಂದು ನಿರ್ಧಾರಮಾಡಿ.. ಮುಖ್ಯವಾಗಿ ಮುನಿಸು ಜಗಳಗಳಿಗೆ ಯಾವುದೇ ಅವಕಾಶ ಕೊಡಲಾರೆ ಎಂದು ಪ್ರತಿಯೊಬ್ಬರೂ ಮನದೊಳಗೇ ಶಪಥ ಕೈಗೊಳ್ಳಿ.. ಖುಷಿಯಾಗಿ ಕಳೆಯಿರಿ. *************

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ ಎಲ್ಲಿಂದಲೂ ಎಷ್ಟು ಹೊತ್ತಿಗೂ ಎರಗೀತು ವಿಪತ್ತು ರಕ್ಷಣೆಯ ಉಪಾಯಗಳಿಲ್ಲದೆ ಜೀವ ತಲ್ಲಣಿಸಿದೆ ಒಬ್ಬರಿಗೊಬ್ಬರ ಸಾಂಗತ್ಯವಿರದೇ ಬದುಕು ಹೇಗೆ ‘ಜಂಗಮ’ ವಿಧಿಯ ದೂರಿದೆ ಜೀವ ತಲ್ಲಣಿಸಿದೆ **************************

ಕಾವ್ಯಯಾನ Read Post »

ಅಂಕಣ ಸಂಗಾತಿ, ಇತರೆ

ಜ್ಞಾನಪೀಠ ವಿಜೇತರು

ಯು.ಆರ್.ಅನಂತಮೂರ್ತಿ..! ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ..! ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ… ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯವಾಗಿದೆ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುತ್ತಾರೆ… ತಮ್ಮ ಬಹು ಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ. ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ (ಕುವೆಂಪು ಮತ್ತು ಅನಂತಮೂರ್ತಿ) ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. ಇವರು ಹುಟ್ಟಿದ್ದು ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ)… ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ. ಪಡೆದರು… ೧೯೭೦ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, ೧೯೮೭ರಲ್ಲಿ ಕೇರಳದ ಕೋಟ್ಟಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಗತಿಗಳಾಗಿದ್ದರು. ೧೯೯೨-೯೩ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗೋಕಾಕರ ಅನಂತರ ಈ ಸಂಸ್ಥೆಯ ಅಧ್ಯಕ್ಷರಾದ ಎರಡನೆಯ ಕನ್ನಡಿಗರು ಇವರು… ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜವಾಹರಲಾಲ್ ನೆಹರೂ ವಿ.ವಿ., ಜರ್ಮನಿಯ ತೂಬಿಂಗೆನ್ ವಿ.ವಿ., ಅಮೇರಿಕ ದೇಶದ ಐಯೊವಾ ವಿ.ವಿ., ಟಫಟ್ಸ್ ವಿ.ವಿ., ಕೊಲ್ಲಾಪುರದ ಶಿವಾಜಿ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿದ್ದರು… ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ; ಉಪನ್ಯಾಸ ನೀಡಿದ್ದಾರೆ. ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ತುಂಬ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ… ಇಷ್ಟೇ ಅಲ್ಲದೆ, ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ.ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ… ಅನಂತಮೂರ್ತಿಯವರು ಪ್ರಸಿದ್ಧರಾಗಿರುವುದು ಕನ್ನಡದ ಬರಹಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ critical insider ಆಗಿ. ೧೯೫೫ರಲ್ಲಿ “ಎಂದೆಂದೂ ಮುಗಿಯದ ಕತೆ” ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ “ಮೂರು ದಶಕದ ಕಥೆಗಳು” ೧೯೮೯ರಲ್ಲಿ ಹೊರಬಂದಿದೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲ ಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ… ೧೯೬೫ರಲ್ಲಿ ಇವರ ಮೊದಲ ಕಾದಂಬರಿ “ಸಂಸ್ಕಾರ” ಪ್ರಕಟವಾಯಿತು. ಪ್ರಕಟವಾದಾಗ ಮತ್ತು ಚಲನಚಿತ್ರವಾದಾಗ ತುಂಬ ವಿವಾದವನ್ನುಂಟು ಮಾಡಿದ ಈ ಕಾದಂಬರಿ ಹಲವಾರು ದೇಶೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ, ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. “ಆವಾಹನೆ” ಎಂಬ ಒಂದು ನಾಟಕವನ್ನು ಬರೆದಿರುವ ಅನಂತಮೂರ್ತಿ “೧೫ ಪದ್ಯಗಳು”, “ಮಿಥುನ” ಮತ್ತು “ಅಜ್ಜನ ಹೆಗಲ ಸುಕ್ಕುಗಳು” ಎಂಬ ಮೂರು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು “ರುಜುವಾತು” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು… ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ… ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ “ದೀಕ್ಷಾ” ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ… ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,೧೯೯೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ -ಇವು ಅನಂತಮೂರ್ತಿಯವರಿಗೆ ಬಂದ ಮನ್ನಣೆಗಳಲ್ಲಿ ಕೆಲವು. ೧೯೯೪ರಲ್ಲಿ ಬಂದಿರುವ ಜ್ಞಾನಪೀಠ ಪ್ರಶಸ್ತಿ ಇವೆಲ್ಲವುಗಳಿಗೆ ಕಳಶಪ್ರಾಯವಾದುದು… ಹೀಗಿದ್ದರು ಹೀಗಿತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಯವರ ಬದುಕು ಮತ್ತು ಸಾಹಿತ್ಯ… *********** ‌‌‌‌ — ಕೆ.ಶಿವು.ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

You cannot copy content of this page

Scroll to Top