ನನ್ನ ತಂದೆ, ನನ್ನ ಹೆಮ್ಮೆ
ನೆನಪು ಶ್ರೀನಿವಾಸ ಖರೀದಿ ತಂದೆಯವರ ಹೆಸರು: ಶ್ರೀ ಕೆ.ಎನ್. ಶ್ರೀಧರಮೂರ್ತಿ ಭದ್ರಾವತಿ ಹುಟ್ಟಿ ಬೆಳೆದದ್ದು : ತರೀಕೆರೆ / ರಂಗೇನಹಳ್ಳಿ ವ್ಯವಹಾರ ಸ್ಥಳ : ಭದ್ರಾವತಿ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದ್ದ ನನ್ನ ತಂದೆ ಭದ್ರಾವತಿಯ ದಿವಂಗತ ಶ್ರೀ ಕೆ. ಎನ್.ಶ್ರೀಧರಮೂರ್ತಿ ಯವರು. 1931ರಲ್ಲಿ ಜನಿಸಿದ ಇವರು, ತಮ್ಮ ಹತ್ತನೇ ವಯಸ್ಸಿನಲ್ಲಿ ಮಹಾತ್ಮ ಗಾಂಧೀಜಿ ರವರ ಪಾದಗಳ ಸ್ಪರ್ಷಿಸುವ ಮೂಲಕ ತನ್ನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ರೂಡಿಸಿಕೊಂಡವರು. ಚಿಕ್ಕಂದಿನಲ್ಲೇ ನಾಯಕತ್ವಗುಣಗಳನ್ನು ಬೆಳೆಸಿಕೊಂಡಿದ ಇವರು, ತರೀಕೆರೆಯಲ್ಲಿ ತನ್ನ ಶಾಲಾದಿನಗಳಲ್ಲಿಯೇ ಸ್ವಾತಂತ್ರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅಪ್ರಾಪ್ತ ಬಾಲಕನಾಗಿ ಕ್ವಿಟ್-ಇಂಡಿಯಾ ಚಳುವಳಿ, ಸ್ವರಾಜ್ಯ ಚಳುವಳಿ, ಅಸಹಕಾರ ಚಳುವಳಿ, ಮೈಸೂರು ಚಲೋ ಚಳುವಳಿ ಮುಂತಾದ ಸ್ವಾತಂತ್ರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ತನ್ನ ಹದಿಹರೆಯ ವಯಸ್ಸಿನಲ್ಲಿ ಒಮ್ಮೆ ಪಟ್ಟಣ್ಣ-ಪಂಚಾಯ್ತಿ ಚುನಾವಣೆಗೆ ತನ್ನ ಉಮೇದುವಾರಿಕೆ ಸಲ್ಲಿಸಿ ಅವರ ಅಪ್ಪ ಇವರನ್ನು ಮನೆಯಿಂದ ಹೊರಹಾಕ್ಕಿದ್ದರಂತೆ. ಹೈಸ್ಕೂಲಿನ ವಿದ್ಸಾರ್ಥಿ ಸಂಘದ ನಾಯಕನಾಗಿ ತನ್ನ ಸ್ನೇಹಿತರೊಡನೆ ಅಸಹಕಾರ ಚಳುವಳಿ – ಸ್ವರಾಜ್ಯ ಚಳುವಳಿಗಳಲ್ಲಿ ಭಾಗವಹಿಸಿ, ಬ್ರಿಟೀಷರ ಕಛೇರಿಗಳಿಗೆ ದಾಳಿ ಮಾಡಿ ಅಲ್ಲಿನ ಕಾರ್ಯಕಲಾಪಗೆ ಅಡ್ಡಿಪಡಿಸುವುದು, ರೈಲು ತಡೆದು ಪ್ರತಿಭಟಿಸುವುದು, ರಾತ್ರಿಯಲ್ಲಿ ಮನೆಮನೆಗಳ ಬಾಗಿಲುಗಳಿಗೆ ಕರಪತ್ರ ಅಂಟಿಸಿ ಸ್ವಾತಂತ್ರ ಹೋರಾಟದ ಸಭೆಗಳಿಗೆ ಬರುವಂತೆ ಅಲ್ಲಿನ ನಿವಾಸಿಗಳಿಗೆ ಸ್ಪೂರ್ತಿ ತುಂಬುತಿದ್ದರು. ಎಷ್ಟೊ ಬಾರಿ ಬಂಧನಗೊಳಗಾಗಿ ಕೋರ್ಟ್ ಗೆ ಹಾಜರುಪಡಿಸಿದರೂ ಚಿಕ್ಕ ಬಾಲಕನೆಂದು ಬಿಡುಗಡೆಗೊಂಡಿದುಂಟಂತೆ. ಹೀಗೆ ಓಮ್ಮೆ ತಿಪಟೂರಿನಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿದ್ದಾಗ, ರೈಲ್ವೇ ನಿಲ್ದಾಣದಲ್ಲಿ ರೈಲನ್ನು ತಡೆಹಿಡಿದು ಬ್ರಿಟೀಷ್ ಸರ್ಕಾರಕ್ಕೆ ಸಂಭಂದಪಟ್ಟ ಅಂಚೆ ಟಪಾಲುಗಳನ್ನು ನಾಶಪಡಿಸಿ, ರೈಲ್ವೇ ನಿಲ್ದಾಣ ದ್ವಂಸ ಪಡಿಸಿದ ಆರೋಪದಡಿ ಚಿಕ್ಕಮಗಳೂರಿನ ಜೈಲು ಪಾಲಾಗಿದ್ದರು. ಮೈಸೂರು ಚಲೋ ಚಳುವಳಿಯಲ್ಲಿ ಬಂದಿಸಲ್ಪಟ್ಟು ಬೆಂಗಳೂರಿನ ಕೆ.ಆರ್.ಪುರಂನ ಸೆಂಟ್ರಲ್ ಕಾರಾಗೃಹದಲ್ಲಿ 3ತಿಂಗಳ ಕಾಲ ಜೈಲುವಾಸ ಅನುಭವಿಸಿದರು. ಜೈಲುವಾಸದಲ್ಲಿ ಕಾಂಗ್ರೆಸ್ ನ ಹಲವು ಮುಂದಾಳುಗಳ ಪರಿಚಯವು ಮುಂದೆ ಒಬ್ಬ ಪ್ರಭಾವಿ ಕಾಂಗ್ರೆಸ್ ದುರೀಣನಾಗಿ ಬೆಳೆಯಲು ಕಾರಣವಾಯಿತು. ರಾಜಕೀಯವಾಗಿ ಇವರಿಗೆ ಎಪ್ಪತ್ತರ ದಶಕದಲ್ಲಿ ಎಷ್ಟೇ ಪ್ರಭಾವವಿದ್ದರೂ ಯಾವುದೇ ಅಧಿಕಾರ ಸಿಗದದ್ದು ವಿಪರ್ಯಾಸವೇ ಸರಿ. ಓಮ್ಮೆ ಎಮರ್ಜೆನ್ಸಿ ಸಮಯದಲ್ಲಿ ಕಾಂಗ್ರೆಸ್ ನ ಬಿ-ಫಾರಂ ಮನೆ ಬಾಗಿಲಿಗೆ ಬಂದರೂ ಇಂದಿರಾ ವಿರೋಧಿ ಗಾಳಿ ಇರಬಹುದೆಂದು ಹೆದರಿ ಟಿಕೇಟ್ ನಿರಾಕರಿಸಿದರು. ಮತ್ತೊಮ್ಮೆ ಪರಿಷತ್ತಿಗೆ ನಾಮನಿರ್ದೇಶನವಾಗುವ ಕಡೇ ಗಳಿಗೆಯಲ್ಲಿ, ಆಗಿನ ಮುಖ್ಯಮಂತ್ರಿ ಅರಸುರವರು ರಾಜಕೀಯ ಒತ್ತಡಕೊಳಲಾಗಿ ಇವರಿಗೆ ಮೀಸಲಿಟ್ಟಿದ್ದ ಸ್ಥಾನವನ್ನ ಪರಭಾರೆ ಮಾಡಿದರು. ಇನ್ನ ಎಂಬತ್ತರ ದಶಕದಲ್ಲಿ ಆರೋಗ್ಯ, ವಯಸ್ಸು ಒಂದೆಡೆಯಾದರೆ, ಜಾತಿ ಆಧಾರಿತ ರಾಚಕೀಯವು ಇವರ ವಿಧಾನಸಭೆ ಪ್ರವೇಶಿಸುವ ಆಸೆ, ಆಸೆಯಾಗಿಯೇ ಉಳಿಹಿತು. ಓಮ್ಮೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ, ಮತ್ತೊಮ್ಮೆ ಬಾಯಲಿದದ್ದು ಕಿತ್ತುಕೊಂಡರು. ತೊಂಬತ್ತರ ದಶಕದಲ್ಲಿ ನಮ್ಮ ಮನೆಗೆ ಬೇಟಿಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಗುಂಡೂರಾಯರಿಗೆ ತಂದೆಯವರು ತಮಾಷೆ ಮಾಡುತ್ತ ಹೇಳಿದ ನೆನಪು : ‘ನೀವು “ಮಾಜಿ ಮುಖ್ಯಮಂತ್ರಿ”, ಆದರೆ ನಾವು ಸ್ವಾತಂತ್ರ ಹೋರಾಟಗಾರರು ಎಂದಿಗೂ “ಮಾಜಿ” ಯಾಗುವುದಿಲ್ಲ,’ ಎಂದು. 82 ವರುಷ ಬಾಳಿ ಬದುಕಿದ ಈ ಸ್ವಾತಂತ್ರ ಹೋರಾಟಗಾರ, 2013ರಲ್ಲಿ ತನ್ನ ಕೊನೆಯ ಉಸಿರೆಳೆದರು. ನನ್ನ ತಂದೆಯ ಬಗ್ಗೆ ಈ ವಿಷಯಗಳನ್ನು ಹಂಚಿಕೊಳ್ಳಲು ನನಗೆ ಹೆಮ್ಮೆ ಎನ್ನಿಸುತ್ತಿದೆ. *********************************
ನನ್ನ ತಂದೆ, ನನ್ನ ಹೆಮ್ಮೆ Read Post »









