ಅಂಕಣ ಬರಹ ಕಬ್ಬಿಗರ ಅಬ್ಬಿ ಸೌಂದರ್ಯ ಲಹರಿ ಆ ಅಜ್ಜ ತನ್ನ ಮನೆಯ ಅಂಗಳದಲ್ಲಿ ಕುಳಿತು ನೋಡುತ್ತಲೇ ಇದ್ದರು. ದಿನಾಲೂ ನೋಡುತ್ತಿದ್ದರು. ಚಿಟ್ಟೆಯನ್ನು! ಬಣ್ಣದ ಚಿಟ್ಟೆಯನ್ನು. ಅದರ ಎಡ ಬಲದ ರೆಕ್ಕೆಗಳು ಒಂದಕ್ಕೊಂದು ಕನ್ನಡಿ ಹಿಡಿದ ಬಿಂಬಗಳ ಹಾಗೆ. ಆಗಷ್ಟೇ ರವಿ ವರ್ಮ, ತನ್ನ ಕುಂಚದಿಂದ ಬಳಿದು ಬಿಡಿಸಿದ ತೈಲವರ್ಣಚಿತ್ರದ ರೇಖೆಗಳ ಹಾಗೆ ನಾಜೂಕು ವರ್ಣ ರೇಖೆಗಳು ಆ ರೆಕ್ಕೆಗಳಲ್ಲಿ!. ಅದು ಹಾರೋದಂದರೆ! ಲಪ್..ಟಪ್.. ಎಂದು ರೆಕ್ಕೆಯನ್ನು ನಯ ನಾಜೂಕಿನಿಂದ ತೆರೆದು ಮಡಿಸಿ ವಿಶ್ವಾಮಿತ್ರನ ತಪಸ್ಸು ಭಂಗಕ್ಕೆ ಬಂದ ಅಪ್ಸರೆಯ ಮೋಹಕ ಹೆಜ್ಜೆಗಳ ಲಯ ಅದಕ್ಕೆ!. ಬರೆದೇ ಬಿಟ್ಟರು! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ. ಈ ಕವನದತ್ತ ಚಿತ್ತ ಹರಿಸುವ ಮುನ್ನ, ಸೃಷ್ಟಿಯಲ್ಲಿ ಕಾಣ ಸಿಗುವ ಪ್ರತಿಯೊಂದು ರೂಪದ ಹಿಂದಿನ ಸ್ವರೂಪದತ್ತ ದೃಷ್ಟಿ ಹರಿಸಿದರೆ ನಮಗೆ ಒಂದು ಅನೂಹ್ಯ ಸಾಮ್ಯತೆ ಕಾಣ ಸಿಗುತ್ತೆ. ಅದೇ ಸಿಮ್ಮೆಟ್ರಿ ( Symmetry). ನಿಮಗಿಷ್ಟವಾದ ಸಿನೆಮಾ ನಟಿ ಅಥವಾ ನಟನ ಮುಖ ಯಾಕೆ ಚಂದ. ಮುಖದ ಎಡ ಭಾಗ ಮತ್ತು ಬಲ ಭಾಗ ಒಂದಕ್ಕೊಂದು ಮಿರರ್ ಇಮೇಜ್ ಅಲ್ವಾ. ಎಡ ಬಲದಲ್ಲಿ ಕಣ್ಣುಗಳು, ಹುಬ್ಬುಗಳು ಕಪೋಲಗಳು, ಕಿವಿಗಳು ಮೂಗಿನಲ್ಲೂ ಎರಡು ಹೊಳ್ಳೆಗಳು! ಹೀಗೆ ಸೃಷ್ಟಿಯ ಅದ್ಭುತ ಅಡಗಿದೆ ಮುಖಾರವಿಂದದ ಸಿಮ್ಮೆಟ್ರಿಯಲ್ಲಿ. ಈ ಸುಂದರ ಸಮರೂಪೀ ಚಿತ್ರಗಳು ಪರಸ್ಪರ ಕಣ್ಣು ಮಿಟುಕಿಸಿ “ಲವ್ ಅಟ್ ಫಸ್ಟ್ ಸೈಟ್” ಎಂಬ ಪ್ರೇಮ ಕಥೆ ಆರಂಭ. ಜಗದ ಸೌಂದರ್ಯದ ಹಿಂದೆ ಈ ಸಮರೂಪತ್ವ ಅಥವಾ ಸಿಮ್ಮೆಟ್ರೀ ಇದೆ. ಇದೊಂದು ಪ್ರಕೃತಿ ತತ್ವ. ನಾವು ನೀವು ಬಯಸಿ ರೂಪಿಸಿದ್ದಲ್ಲ. ದಾಸವಾಳ ಹೂವನ್ನು ಗಮನಿಸಿ. ಅದರ ದಳಗಳು ಒಂದರಂತೆ ಇನ್ನೊಂದು, ಒಂದು ಶಂಕುವಿಗೆ ಅಂಟಿಕೊಂಡಂತೆ ಹೊರಗಿಣುಕುತ್ತವೆ. ಅದರ ತೊಟ್ಟನ್ನು ಹಿಡಿದು ಸ್ವಲ್ಪ ಸ್ವಲ್ಪವೇ ದಳದಿಂದ ದಳಕ್ಕೆ ತಿರುಗಿಸಿದರೆ, ಹೂವು ಒಂದೇ ಥರ ಕಾಣಿಸುತ್ತೆ. ಇದೂ ಒಂದು ಸಿಮ್ಮಟ್ರೀ. ಅದೂ ಬೇಡ ಅಂದರೆ ಯಾವುದೇ ಗಿಡ ಬಳ್ಳಿಯ ಎಲೆಯನ್ನು ಗಮನಿಸಿ. ಎಲೆ ಮಧ್ಯದಲ್ಲಿ ಒಂದು ನಾರು ಅದು ಜೋಡಿಸಿ ಹಿಡಿದು ಇಕ್ಕೆಲಗಳಲ್ಲಿ ಎಡ ಬಲದ ಎಲೆ!. ಅದೂ ಸಿಮ್ಮೆಟ್ರೀ!. ದೇವದಾರು ಮರದ ಗೆಲ್ಲುಗಳು, ತೆಂಗಿನ ಮರದ ಮಡಲುಗಳು, ಎಷ್ಟೊಂದು ಸಿಮ್ಮೆಟ್ರಿಯಿಂದ ಸ್ವಾಲಂಕಾರ ಭೂಷಣೆಯರು ಅಲ್ಲವೇ. ನಾವು ನಿಂತ ಭೂಮಿ, ಆಕಾಶಕಾಯಗಳು ಸಾಧಾರಣವಾಗಿ ಗೋಲಾಕಾರ. ಅದು ಅತ್ಯಂತ ಹೆಚ್ಚು ಸಿಮ್ಮೆಟ್ರಿಕ್ ಅವಸ್ಥೆ. ಚಂದಮಾಮ ಹುಣ್ಣಿಮೆಯ ದಿನ ಎಷ್ಟು ಚಂದ ಕಾಣಿಸುತ್ತಾನೆ, ವೃತ್ತಾಕಾರದ ಬೆಳ್ಳಿ ತಟ್ಟೆಯ ಹಾಗೆ! ನೀವು ಸಸ್ಯದ ತುಣುಕನ್ನು ಮೈಕ್ರೋಸ್ಕೋಪ್ ನಲ್ಲಿ ಇಟ್ಟು ನೋಡಿದರೆ ಷಟ್ಕೋನಾಕೃತಿಯ ಜೀವಕೋಶಗಳು ಸಿಮ್ಮೆಟ್ರಿಕ್ ಆಗಿ ಒಂದಕ್ಕೊಂದು ಹೆಗಲು ಜೋಡಿಸಿ ಸಾಲುಗಟ್ಟಿ ನಿಂತ ದೃಶ್ಯ ಕಾಣಿಸುತ್ತೆ. ಸಸ್ಯ ಮತ್ತು ಪ್ರಾಣಿಲೋಕದಿಂದ ಹೊರಬಂದರೆ, ಅದೋ, ಆ ಕಪ್ಪು ಕಲ್ಲು ಇದೆಯಲ್ಲ, ಅದನ್ನು ಒಡೆದೊಡೆದು ಅತ್ಯಂತ ಸಣ್ಣ, ಮೂಲ ಕಣವಾಗಿಸಿದರೆ ಅದು ಸ್ಪಟಿಕ ರೂಪಿಯಾಗಿರುತ್ತೆ. ಆ ಸ್ಫಟಿಕದ ಏಕಕಣ ಕೋಶ ಚಚ್ಚೌಕವೋ ಆಯತ ಘನವೋ, ಇತ್ಯಾದಿ ಹಲವು ರೀತಿಯ ಸಿಮ್ಮೆಟ್ರಿಕ್ ಆಕಾರ ಪಡೆದಿರುತ್ತವೆ. ಅದರ ಮೂಲೆಗಳಲ್ಲಿ ಮತ್ತು ಒಳಗೆ ನಾವು ಗೋಲಾಕಾರ ಎಂದು ನಂಬಿದ ಪರಮಾಣುಗಳು ಕುಳಿತಿರುತ್ತವೆ. ಪರಮಾಣುಗಳೂ ಸಮರೂಪೀ ಗೋಲಕಗಳೇ!. ನಾವು ಉಸಿರಾಡುವ ಆಕ್ಸೀಜನ್, ಕುಡಿಯುವ H2O ನೀರು, ಈ ಎಲ್ಲಾ ಮಾಲೆಕ್ಯೂಲ್ ಗಳೂ ತಮ್ಮದೇ ಆದ ಸಿಮ್ಮೆಟ್ರಿಯಿಂದಾಗಿ, ಸ್ವಭಾವವನ್ನೂ ಪಡೆದ ಅಂದಗಾತಿಯರು. ನಮ್ಮ ಮಿಲ್ಕೀ ವೇ ನಕ್ಷತ್ರ ಮಂಡಲದ ಚಿತ್ರ ನೋಡಿದರೆ ಅದರಲ್ಲೂ ಒಂದು ಸಿಮ್ಮೆಟ್ರಿ. ನಮ್ಮನ್ನು ಬಹಳಷ್ಟು ಕಾಡಿದ ಕರೋನಾ ವೈರಸ್ ನ ಚಿತ್ರವನ್ನು ಗಮನಿಸಿ, ಅದೂ ಸಿಮ್ಮೆಟ್ರಿಕ್ ಆದ ಗೋಲಕದ ಮೇಲ್ಮೈಯಲ್ಲಿ ವ್ಯವಸ್ತಿತ ದೂರದಲ್ಲಿ ಹತ್ತು ಹಲವು ಕಡ್ಡಿಗಳನ್ನು ಚುಚ್ಚಿದಂತೆ ಕಾಣಿಸುತ್ತೆ. ಈ ಸಿಮ್ಮೆಟ್ರಿಯಿಂದಾಗಿ ಆಕಾರಕ್ಕೆ ಸೌಂದರ್ಯವಲ್ಲದೇ ಅದರದ್ದೇ ಆದ ಸ್ಥಿರತೆ ಸಿಗುತ್ತೆ. ಚಿಟ್ಟೆಯ,ಹಕ್ಕಿಗಳ ದೇಹದ ಇಕ್ಕೆಲಗಳ ರೆಕ್ಕೆಗಳು ಅವುಗಳಿಗೆ ಹಾರಾಡುವಾಗ ಏರೋಡೈನಮಿಕ್ ಸ್ಥಿರತೆ ಕೊಡುತ್ತವೆ. ವಿಮಾನದ ಒಂದು ರೆಕ್ಕೆ ಮುರಿದರೆ ವಿಮಾನ ಕೆಳಗೆ ಬಿತ್ತು ಎಂದೇ ಲೆಕ್ಕ. ಕಟ್ಟಡಗಳು ಚಚ್ಚೌಕವೋ ಪಿರಮಿಡ್ ಥರವೋ, ಗುಂಬಜ್ ಆಗಿಯೋ ನಿರ್ಮಿಸಲು ಕಾರಣವೇ ಸಿಮ್ಮಟ್ರಿಯ ಚಂದದ ಜತೆ ಜತೆಗೇ ಸಿಗುವ ದೃಡತೆ, ಸ್ಥಿರತೆ. ಮನುಷ್ಯ, ಪ್ರಾಣಿಗಳ ದೇಹದ ಸಂರಚನೆಯಲ್ಲಿ ಕಾಣುವ ಸಿಮ್ಮೆಟ್ರಿ, ಆಯಾ ಪ್ರಾಣಿಯ ಜೀವನ ಶೈಲಿಗೆ ಅನುಗುಣವಾದ ಚಲನೆಗೆ ಮತ್ತು ಅಸ್ತಿತ್ವಕ್ಕೆ ಸ್ಥಿರತೆ ದೊರಕಲೆಂದೇ. ಈ ಎಲ್ಲಾ ಪ್ರಕೃತಿ ಸಿದ್ಧ ಪ್ರಕಾರಗಳ ಸ್ವರೂಪವನ್ನು ನಿರ್ಧರಿಸುವ ಸೂತ್ರ ಆ ವ್ಯವಸ್ಥೆಯ ಒಳಗಿನಿಂದಲೇ ಅದಕ್ಕೆ ಆ ರೂಪ ಕೊಡುತ್ತದೆ!. ದಾಸವಾಳ ಹೂವಿನ ಮೊಗ್ಗು ಅರಳಿ ಹೂವಾಗುತ್ತೆ ತಾನೇ!. ಯಾರೋ ತಮ್ಮ ಇಚ್ಛೆಗನುಸಾರ ದಾಸವಾಳದ ದಳಗಳನ್ನು ಒಂದಕ್ಕೊಂದು ಅಂಟಿಸಿದ್ದರಿಂದಾಗಿ,ಆ ಹೂ ಅರಳಿಲ್ಲ ಎಂಬುದು ಮುಖ್ಯ. ಅಂತಃಸತ್ವದ ಬಲದಿಂದ, ಅಂತಃಸೂತ್ರದ ಮಾರ್ಗದರ್ಶನದಿಂದ ಈ ರೂಪದ ಸಿಮ್ಮೆಟ್ರಿ, ಜತೆಜತೆಗೇ ಅದರ ಸೌಂದರ್ಯ ಪ್ರಕಟವಾಗಿದೆ. ಒಂದು ಶಾಂತವಾದ ಕೊಳದ ಮಧ್ಯಕ್ಕೆ ಒಂದು ಕಲ್ಲೆಸೆದರೆ, ವೃತ್ತಾಕಾರದ ಅಲೆಗಳು ಬಿದ್ದ ಕಲ್ಲಿನ ಬಿಂದುವನ್ನು ಕೇಂದ್ರವಾಗಿಸಿ ಒಂದರ ಹಿಂದೆ ಒಂದರಂತೆ ಕೊಳದ ದಡದತ್ತ ಸರಿಯುತ್ತವೆ. ಈ ಅಲೆಗಳಲ್ಲಿಯೂ ಸಿಮ್ಮೆಟ್ರಿ ಇದೆ. ಅಲೆಗಳ ನಡೆಯಲ್ಲಿ ಲಯವೂ ಇದೆ. ಹಾಗಾಗಿ, ಯಾವುದೇ ಸಿಮ್ಮೆಟ್ರಿಯ ಜತೆಗೆ, ಲಹರಿಯಿದೆ, ಲಯವೂ ಇದೆ. ಈಗ ಕವಿತೆಗೆ ಬರೋಣ! ಕವಿತೆಯ ಸಾಲುಗಳ ರೂಪ ಮತ್ತು ಅರ್ಥ ಕಟ್ಟುವ ಸ್ವರೂಪವೇ ಛಂದಸ್ಸು!. ಅದಕ್ಕೂ ಹತ್ತು ಹಲವು ಸಿಮ್ಮೆಟ್ರಿಗಳಿವೆ. ಪ್ರಕೃತಿಯ ಚಿತ್ತಾರಗಳ ಸಿಮ್ಮಟ್ರಿ ಹೇಗೆ ಒಳಗಿನಿಂದಲೇ ಪ್ರಕಟವಾಗುತ್ತದೆಯೋ ಹಾಗೆಯೇ ಕವಿತೆಯ ಛಂದವನ್ನು, ಚಂದವನ್ನು ಮತ್ತು ಅರ್ಥ ವಾಸ್ತುವನ್ನು ಕವಿತೆಯ ಅಂತರಂಗದ ಬೀಜವೇ ನಿರ್ಧರಿಸುತ್ತದೆ. ಅದಕ್ಕೇ ಇರಬೇಕು, ಕವಿಯನ್ನೂ ಬ್ರಹ್ಮನಿಗೆ ಹೋಲಿಸಿದ್ದು. ಕವಿತೆಯ ಛಂದದ ಜತೆಗೂ ಲಹರಿಯಿದೆ. ಲಯವಿದೆ. ಆ ಲಯಕ್ಕೆ ಓದುಗನ ತನ್ಮಯ ಮನಸ್ಸನ್ನು ವಿಲಯನ ಮಾಡುವ ಕಸುವಿದೆ. ಬೇಂದ್ರೆ ಅವರ “ಪಾತರಗಿತ್ತಿ ಪಕ್ಕ” ಕವನದಲ್ಲಿ ಈ ಅಂತರಂಗಜನ್ಯ ಸಿಮ್ಮೆಟ್ರಿ ಮತ್ತು ಸೌಂದರ್ಯ ಲಹರಿ ಎರಡೂ ಎಷ್ಟು ಚೆಂದ!. ಹಾಗಿದ್ದರೆ ಈ ಛಂದದ ಗರ್ಭಕೋಶ ಯಾವುದು. ಅದರ ನೈಸರ್ಗಿಕ ಮತ್ತು ವ್ಯಾಕರಣಾತ್ಮಕ ವ್ಯಾಪ್ತಿ ಏನು?. ಮನುಷ್ಯ ಹೊರಗಿನಿಂದ ಲೇಪಿಸುವ ಛಂದ ಮುಖ್ಯವೇ ಅಥವಾ ಪ್ರಕೃತಿ,ಜನಪದ ಜನ್ಯ ಛಂದವಿಲ್ಲದ ಚಂದ ಮುಖ್ಯವೇ? ಈ ಪ್ರಶ್ನೆ ಹಾಕುವ ಕವಿತೆ, ಪೂರ್ಣಿಮಾ ಸುರೇಶ್ ಬರೆದ “ಛಂದವಿಲ್ಲದ ಚೆಂದ” ಕವಿತೆ. ಅಕ್ಷರರೂಪಿಯಾಗಿ ಹೀಗಿದೆ ನೋಡಿ. ಛಂದವಿಲ್ಲದ ಚೆಂದ * * * ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು ಅಡುಗೆ ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿ; ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ! ಅಂಗಳದ ರಂಗೋಲಿಗೂ ಜ್ಯಾಮಿತಿಯ ಚುಕ್ಕಿ- ಗೆರೆಗಳು; ಚಿತ್ತಾರದ ಹುಮ್ಮಸ್ಸಿಗೆ ಕಂಠಪಾಠ ಆಗಲೇಬೇಕು ಸೂತ್ರ- ಪ್ರಮೇಯಗಳು ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು ಆಗ ಗೆರೆಗಳು ಬೆರಳ ತುದಿಯಿಂದ ಇಳಿದು.. ಆದರೂ ಆಗೊಮ್ಮೆ ಈಗೊಮ್ಮೆ ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ… ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ .. ಸಲೀಸಾಗಿ ಬರೆದು ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ * * * ಛಂದವಿಲ್ಲದ ಚೆಂದ ಅನ್ನುವಲ್ಲಿ ಛಂದ ಎಂದರೇನು?. ಅದು ಕಾವ್ಯದ ಅಂತರಾಳದಿಂದ ಸ್ವಯಂಭೂ ಆಗಿ ಸಂಭವಿಸಿದ, ಸಂಭವಿಸುತ್ತಲೇ ಇರುವ ನೈಸರ್ಗಿಕ ಕ್ರಿಯೆಯೇ? ಅಥವಾ ಬಾಹ್ಯಸ್ತರದಿಂದ ಅಂಕಣದ ಅಂಚುಗಳಿಗೆ ರೂಪ ಕಟ್ಟುವ ಛಂದವೇ?. “ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು” ‘ಗಣಿತ ಗುಣಿತ ಕಲಿತವರು’ ಎಂಬುದನ್ನು ಗಮನಿಸಬೇಕು. ಇದು ಕಲಿತ ಛಂದ. ಸ್ವಯಂ ಭೂ ಛಂದವಲ್ಲ. ಹೀಗೆ ಕಲಿಸುವ ಕಲೆಸುವ, ಪಾಕ ಬರಿಸುವ, ತರ್ಕ ಶಾಸ್ತ್ರೀಯ, ಬಾಹ್ಯಜಗತ್ತಿನ ಕಾರ್ಯ ಕಾರಣ ಸಂಬಂಧಗಳ ಪದಬಂಧಕ್ಕೆ ಸಿಲುಕಿದ ಅಂತರ್ಮನ, ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿಯಾಗುತ್ತೆ. “ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ!” ಈ ಸಾಲುಗಳಲ್ಲಿ ‘ಅಂತರಂಗದ ಒಳದನಿ’ ಅಂತ ಬಳಸಿರುವುದು ಗಮನಾರ್ಹ. ಅದು ಅಂತರಾಳದ ನ್ಯಾಚುರಲ್ ಛಂದ. ಕವಿತೆಯುದ್ದಕ್ಕೂ ನಡೆಯುವ ತುಲನೆ, ಬಾಹ್ಯಜನ್ಯ ಛಂದದ ಲಿಪ್ ಸ್ಟಿಕ್ ಮತ್ತು ಎದೆಯೊಳಗಿನ ಪ್ರೀತಿಯ ಛಂದದ ಚೆಂದ ಗಳ ನಡುವೆ. “ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ.” ಗೆರೆಗಳ ಮೂಲಕ, ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು, ಶಿಷ್ಟ ಪದ್ಧತಿಯ ಕಂಠಪಾಠ ಮಾಡಿದ ‘ನುರಿತ’ ಬೆರಳುಗಳು ರಂಗವಲ್ಲಿ ಬರೆಯುವಾಗ ರೇಖೆಗಳಿಗೆ ಭಾವ ಬರದೇ ಇದ್ದಾಗ ಆ ಜನಪದೀಯ ಹುಡುಗಿ ಸರಸರನೆ ರಂಗೋಲಿ ಬರೆಯುತ್ತಾಳೆ. ಆಕೆಗೆ, ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ ಯಾವುದರ ಕಂಠಪಾಠವೂ ಇಲ್ಲ. ( ಕಂಠಪಾಠ ಎಂಬ ಪದ ಎಷ್ಟು ಮೆಕ್ಯಾನಿಕಲ್ ಎಂಬ ಭಾವ ಅಲ್ಲವೇ). ಹಾಗೆ ಆ ಕಾಡು ಹುಡುಗಿ ಸಲೀಸಾಗಿ ಬರೆದು, “ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ” ರಂಗವಲ್ಲಿಯ ಪೂರ್ವನಿರ್ಧಾರಿತ ಶಿಷ್ಟ ಜ್ಞಾನದ ಗೆರೆಗಳು, ಮತ್ತು ಅಂತರಂಗದಿಂದ ಮೂಡಿ ಆವಿರ್ಭವಿಸಿ ತನ್ನಿಂದ ತಾನೇ ಬರೆಯಲ್ಪಟ್ಟ ರಂಗೋಲಿಯ ನಡುವೆ ಇದು ಸ್ಪರ್ಧೆಯಲ್ಲ. ಮೊದಲನೆಯದ್ದು ಸೂತ್ರ ಕಗ್ಗಂಟುಗಳಲ್ಲಿ ಬಂದಿಯಾದರೆ, ಎರಡನೆಯದ್ದು ಛಂದವಿಲ್ಲದ ಚಂದವಾಗಿ, ಬಂಧನವಿಲ್ಲದ ಬಾಂಧವ್ಯವಾಗಿ, ಸರಸರನೆ ಬೆರಳುಗಳು ಸರಿದು ಮೂಡುವ ಸಿಮ್ಮೆಟ್ರಿಯಾಗಿ ಮೂಡಿ “ರಂಗೋಲಿಯಂತೆ ಅವಳೂ ನಿರಾಳವಾಗಿ ನಗುತ್ತಾಳೆ! “ ನಾನು ಈ ಮೊದಲು ಉದಾಹರಣೆಯಾಗಿ ಹೇಳಿದ ಪ್ರಕೃತಿಯ ಒಳಕೇಂದ್ರದಿಂದ ಹೊರಮುಖಿಯಾಗಿ ಆಯಾಮದ ಪರಿಧಿಯ ಹಂಗಿಲ್ಲದೆ ಹರಿದು ಮೂಡುವ ಸಿಮ್ಮೆಟ್ರಿಗೆ ಛಂದವಿಲ್ಲದ ಚೆಂದವಿದೆ. ಅದಕ್ಕೆ ಮನುಷ್ಯನಿರ್ಮಿತ ಛಂದಸ್ಸಿನ ಅಗತ್ಯವಿಲ್ಲ. ಅಲ್ಲವೇ ************************************************************ ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಅಂಕಣ ಬರಹ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚುಕಾಡುವ ವಿಷಯ” ಈ ಸಲದ ಮುಖಾಮುಖಿ ಯಲ್ಲಿ ನಾಗರಾಜ್ ಹರಪನಹಳ್ಳಿ ಸಂದರ್ಶಿಸಿದ್ದಾರೆ ಕವಿ,ಕತೆಗಾರ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರನ್ನು.……….ಪರಿಚಯ :ಸಂಯುಕ್ತ ಕರ್ನಾಟಕ, ಉದಯವಾಣಿ, ಗೌರಿಲಂಕೇಶ್ ಪತ್ರಿಕೆಗಳು ಸೇರದಂತೆ ೧೪ ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೋಮಾ, ಕನ್ನಡ ಎಂ.ಎ. ಪದವಿಧರ. ಸುಮಾರು ಎರಡು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರು. ಮಾದಪ್ಪನ ಸಾವುಅದೃಶ್ಯ ಲೋಕದ ಮಾಯೆ ನಿರ್ವಾಣಗಾಂಧಿ ವೃತ್ತದ ದಂಗೆ ಕಥಾ ಸಂಕಲನಗಳು, ಮನಸೆಂಬ ಮಾಯಾವಿ ಆಯ್ದ ಕತೆಗಳ ಸಂಕಲನ.ಜೋಗವ್ವ ತಲ್ಲಣನೆಲೆ `ದಾಳಿ ಕಾದಂಬರಿ ಸೇರದಂತೆ ಒಟ್ಟು ೧೦ ಕೃತಿಗಳು ಪ್ರಕಟವಾಗಿವೆ.ಜೋಗವ್ವ ಕಾದಂಬರಿಗೆ ಅಮೆರಿಕಾದಲ್ಲಿ ನಡೆದ ೨೦೦೬ರ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಪರ್ಧೆಯ ಪುರಸ್ಕಾರ ಹಾಗೂ ಕತೆಗಳಿಗೆ ಕ.ಸಾ.ಪ. ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಪತ್ನಿ ಅನುಪಮ ಮತ್ತು ಇಬ್ಬರು ಪುತ್ರರೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.…………………………………. ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಬರೆವಣಿಗೆ ಎಂಬುದು ನನಗೆ ಮಾಸಿಕ ಬಿಡುಗಡೆಯ ಒಂದು ಮಾರ್ಗ. ಹೊಟ್ಟೆ ಹಸಿದಾಗ ಹೇಗೆ ಊಟದ ಅಗತ್ಯವಿರುತ್ತದೋ ಹಾಗೆ, ಬರೆವಣಿಗೆ ಮನಸ್ಸಿನ ಹಸಿವು ನೀಗಿಸುವ ಒಂದು ಕ್ರಮ ಎಂದುಕೊಂಡಿದ್ದೇನೆ. ನನಗೆ ಕತೆಗಳಲ್ಲಿ ಹೆಚ್ಚು ಆಸಕ್ತಿ. ಅದು ಕನಸೋ, ಅನುಭವವೋ, ಹುಡುಕಾಟವೋ ಅಥವಾ ಇನ್ನೇನೋ ಆಗಿರಬಹುದು. ಅದನ್ನು ಅಕ್ಷರಗಳಲ್ಲಿ ತೆರೆದಿಟ್ಟು ನಿರಾಳವಾಗುವುದಕ್ಕೆ ಬರೆಯುತ್ತೇನೆ. ವಸ್ತುಸ್ಥಿತಿಯೊಂದರ ಬೆನ್ನುಬಿದ್ದು ಹೊರಟು ಧ್ಯಾನದ ಉತ್ತುಂಗದ ಸ್ಥಿತಿಯಲ್ಲಿ ದೊರೆತ ಅರಿವಿನ ಸಾಕ್ಷಾತ್ಕಾರದ ಫಲವೇ ಕಥನ ಎಂಬುದು ನನ್ನ ನಂಬಿಕೆ. ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಆನಂದವಾಗಲಿ, ವಿಸ್ಮಯವಾಗಲಿ, ದುಃಖವಾಗಲಿ ಅಥವಾ ಶೋಧನೆಯ ಹಂಬಲವೇ ಇರಲಿ ಯಾವ ಒಂದು ಸಂಗತಿ ಮನಸ್ಸನ್ನು ತಟ್ಟುತ್ತದೋ; ಬಹಳ ದಿನ ಕಾಡುತ್ತದೋ, ಚಿಂತನೆ-ಜಿಜ್ಞಾಸೆಗೆ ಹಚ್ಚುತ್ತದೋ ಅದು ಕತೆ-ಕವಿತೆಯ ಸ್ವರೂಪದಲ್ಲಿ ರೂಪಗೊಂಡು ವ್ಯಕ್ತವಾಗುತ್ತದೆ. ಅದಕ್ಕೆ ಇಂತಹದೇ ಸಮಯ ಎಂಬುದು ಇಲ್ಲ. ಮನಸ್ಸಿಗೆ ಹತ್ತಿರವಾದದ್ದು, ನಾನೇ ಅರಿಯದ ನನ್ನ ಪ್ರಜ್ಞೆ ಯೊಂದನ್ನು ಜಾಗೃತಗೊಳಿಸುವ ಸಂಗತಿ, ಘಟನೆ, ವ್ಯಕ್ತಿ ಕತೆ ಹುಟ್ಟುವ ಕ್ಷಣಕ್ಕೆ ಮೂಲ. ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಮನುಷ್ಯ ಸಂಬಂಧಗಳ ನಿಗೂಢ ನೆಲೆಗಳನ್ನು ಶೋಧಿಸುವುದು, ಆ ಮೂಲಕ ವಾಸ್ತವಿಕ ನೆಲೆಗಟ್ಟಿನಲ್ಲಿ ಬದುಕನ್ನು ನೋಡುವುದು ನನ್ನ ಹಲವು ಕತೆಗಳ ಗುಣ ಅಥವಾ ವಸ್ತು ಎನ್ನಬಹುದು. ನಾವು ಪರಂಪರೆಯನ್ನು ಒಪ್ಪಿಕೊಂಡು ಯಾವುದನ್ನು ಬದುಕು ಎಂದು ಕೊಂಡು ಕಣ್ಣುಮುಚ್ಚಿ ಜೀವಿಸುತ್ತಿದ್ದೇವೊ ಅದನ್ನು ಮೀರಿದ ಒಂದು ಬದುಕಿನ ಆಯಾಮವನ್ನು ಅನ್ವೇಷಿಸುವ, ದರ್ಶಿಸುವ ಕ್ರಮ ನನ್ನ ಕತೆಗಳಲ್ಲಿ ಹೆಚ್ಚಾಗಿ ವ್ಯಕ್ತವಾಗಿದೆ ಎಂದು ಭಾವಿಸಿದ್ದೇನೆ. ನಮ್ಮ ದೇಶದ ಜನರಿಗೆ ಅಂಟಿಕೊಂಡಿರುವ ಕರಾಳ ಮೌಢ್ಯ ಎಂಬುದು ೨೧ನೇ ಶತಮಾನದಲ್ಲೂ ವಿಮೋಚನೆಯಾಗಿಲ್ಲವಲ್ಲ ಎಂಬುದು ಮತ್ತು ಈ ಜನರು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚು ಕಾಡುವ ವಿಷಯ. ನಮ್ಮ ದೇಶದಲ್ಲಿ ಇದಕ್ಕೆ ಕೊನೆಯೇ ಇಲ್ಲವೇನೊ!? ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಸಾಮಾನ್ಯವಾಗಿ ಎಲ್ಲ ಲೇಖಕರ ಬರವಣಿಗೆಯಲ್ಲಿ ಬಾಲ್ಯ ಮತ್ತು ಹರೆಯದ ಕಾಲಘಟ್ಟದ ಸಗತಿಗಳು ವ್ಯಕ್ತವಾಗಿರುತ್ತವೆ. ಬಾಲ್ಯವೆಂಬುದು ನಮ್ಮ ಬದುಕಿನ ಅಡಿಪಾಯವಿದ್ದಂತೆ ಹಾಗಾಗಿ ವ್ಯಕ್ತಿ ಎಷ್ಟೇ ಪ್ರಬುದ್ಧನಾದರೂ ಬಾಲ್ಯವನ್ನು ಮರೆಯಲಾರ. ಅದರಂತೆ ಹರೆಯದ ಕಾಲಘಟ್ಟವನ್ನು ಒಂದು ಭಾವಗೀತೆಗೆ ಹೋಲಿಸಬಹುದು. ಅಲ್ಲಿ ವಾಸ್ತಕ್ಕಿಂತ ಹೆಚ್ಚು ಕನಸುಗಳೇ ಇರುತ್ತವೆ. ಹಾಗಾಗಿ ಕತೆ ಮತ್ತು ಕವಿತೆಗಳಲ್ಲಿ ಇವೆರಡೂ ಹಂತಗಳನ್ನು ದಾಟಿ ನಾನೀಗ ಬದುಕು, ಸಮಾಜ ಮತ್ತು ಜಗತ್ತನ್ನು ಒಂದು ಪ್ರಬುದ್ಧ ನೋಟದಿಂದ ನೋಡುವ ಹಂತಕ್ಕೆ ಬಂದಿದ್ದೇನೆ ಅನಿಸುತ್ತದೆ. ಹಾಗಾಗಿ ಹಿಂದೆ ಬರೆದದ್ದೆಲ್ಲ ಅಪೂರ್ಣ ಅನಿಸುತ್ತದೆ. ಇನ್ನುಮುಂದೆ ಬರೆಯುವುದೆಲ್ಲ ಇನ್ನೂ ಪಕ್ವವಾಗಿರಬೇಕು ಅನ್ನಿಸುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ರಾಕೀಜಯ ಸನ್ನಿವೇಶಗಳ ಬಗೆಗೆ ಮಾತನಾಡಿ ನಮ್ಮ ನೈತಿಕತೆ, ಬದ್ಧತೆಯನ್ನು ಮಲಿನ ಮಾಡಿಕೊಳ್ಳುವುದು ಬೇಡ ಅನ್ನಿಸುತ್ತದೆ. ನೈತಿಕತೆ ಮತ್ತು ಬದ್ಧತೆಯ ವಿಚಾರದಲ್ಲಿ ಇಂದು ರಾಜಕೀಯ ಆ ಮಟ್ಟಕ್ಕೆ ಅಧಃಪತನಗೊಂಡಿದೆ. ದೇಶದಲ್ಲಿ ಇಂದು ಪಕ್ಷ-ಸಿದ್ಧಾಂತಗಳು ಎಂಬುವವೇ ಅಸ್ತಿತ್ವದಲ್ಲಿ ಇಲ್ಲ. ಅಧಿಕಾರ ಸಿಗುವುದಾದರೆ ಯಾವ ವ್ಯಕ್ತಿಯೇ ಆದರೂ ಯಾವುದೇ ಗುಂಪು-ವಿಷಯಗಳೊಂದಿಗೆ ರಾಜಿಯಾಗಬಲ್ಲ. ತನ್ನ ಬದ್ಧತೆಯನ್ನು ತಾನೇ ತುಳಿದು ಅದರ ಮೇಲೆ ಜನರ ಹಿತವನ್ನು ಸಮಾಧಿ ಮಾಡಬಲ್ಲ. ಒಟ್ಟಾರೆ, ಹಣ ಬಲ, ಪ್ರಭಾವ, ಶಕ್ತಿ ಇದ್ದವನೇ ಜನಪ್ರತಿನಿಧಿ ಎನ್ನುವಂತಹ ನೀಚ ಮಟ್ಟಕ್ಕೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಾಂತರಗೊಂಡಿದೆ. ಜನ ಇದನ್ನು ಅರ್ಥ ಮಾಡಿಕೊಂಡು ಜಾಗೃತರಾಗುವವರೆಗೆ ಇದಕ್ಕೆ ಕೊನೆ ಇಲ್ಲ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನನ್ನ ಪ್ರಕಾರ ಮನುಷ್ಯ ಮಾನವೀಯ ಸಂಸ್ಕಾರಗಳನ್ನು ಅಳವಡಿಸಿಕೊಂಡು ಜೀವಿಸುವುದೇ ಧರ್ಮ. ಧರ್ಮದ ವಿಚಾರದಲ್ಲಿ ಇದನ್ನು ಮೀರಿದ ಇತರ ಸಂಗತಿಗಳೆಲ್ಲ ವ್ಯವಹಾರ-ವ್ಯಾಪಾರಗಳಷ್ಟೇ. ಸಮಾಜದಲ್ಲಿ ಇಂದು ಧರ್ಮದ ವಿಷಯ ಬಂಡವಾಳವಾಗಿ ಮಾರ್ಪಟ್ಟಿದೆ. ತಮ್ಮ ಧರ್ಮವೇ ಹೆಚ್ಚು, ತಮ್ಮ ಧರ್ಮವೇ ಉಳಿಯಬೇಕು- ಬೆಳೆಯಬೇಕು, ವ್ಯಾಪಿಸಬೇಕು ಎಂಬ ಕ್ಷುದ್ರ ಉದ್ದೇಶಗಳು ಧರ್ಮದ ಅರ್ಥವನ್ನು ವಿರೂಪಗೊಳಿಸಿವೆ. ಅದ್ದರಿಂದ ನಾನು ಹೇಳುವುದೇನೆಂದರೆ ಸಮಾಜದಲ್ಲಿ ಸಮದಾಯಗಳು ಸಾವಿರಾರು ಇದ್ದರೂ ಧರ್ಮಕ್ಕೆ ಇರುವ ಅರ್ಥ ಒಂದೇ. ಎಲ್ಲ ಸಮುದಾಯಗಳು ಅದನ್ನು ಅರಿಯಬೇಕಿದೆ. ಸೃಷ್ಟಿಯಲ್ಲಿ ಧರ್ಮ ಮತ್ತು ದೇವರ ಪರಿಕಲ್ಪನೆಗಳು ಸಮನ್ವಯವಾದಂತಹವು. ನಾನು ಯಾವುದನ್ನು ಮಾನವೀಯ ಸಂಸ್ಕಾರ ಎಂದು ಹೇಳಿದೆನೊ ಮನುಷ್ಯನಲ್ಲಿ ಅದನ್ನು ಜಾಗೃತಗೊಳಿಸುವ ಪ್ರಜ್ಞೆಯೇ ದೇವರು. ಅದಕ್ಕೆ ಮೂರ್ತವಾದ ಆಕೃತಿ ಎಂಬುದು ಇಲ್ಲ. ಅದೊಂದು ಮನುಷ್ಯನಲ್ಲಿ ಇರಬೇಕಾದ ಸಕಾರಾತ್ಮಕ ಭಾವವಷ್ಟೇ. ಹಾಗಾಗಿ ದೇವರು ಇದ್ದಾನೋ-ಇಲ್ಲವೋ ಎಂಬುದರ ಕುರಿತು ಮಾತನಾಡುವ ಮೊದಲು `ದೇವರು ಎಂದರೆ ಏನು ಎಂಬುದನ್ನು ವಾಸ್ತವವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ದೇವರು ಎಂಬ ಇಂತಹ ಶ್ರೇಷ್ಠ ಭಾವ ಇಂದು ಸಮಾಜದಲ್ಲಿ ಕೆಲವರಿಂದ ವ್ಯಾಪಾರೀಕರಣಗೊಂಡು, ರಾಜಕೀಯಕರಣಗೊಂಡು ಇಡೀ ಸಮಾಜವನ್ನೇ ಅಂಧಶ್ರದ್ಧೆಯ ಕೂಪಕ್ಕೆ ತಳ್ಳುವ ಚಟುವಟಿಕೆಯಾಗಿ ಬೆಳೆದಿದೆ. ಅದು ಈ ದೇಶದ ದುರಂತವೆಂದೇ ಹೇಳಬೇಕು. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತಹ ದೇವರ ರೂಪಗಳನ್ನು ಸೃಷ್ಟಿಸಿಕೊಂಡು ಜನ ಆ ರೂಪಕ್ಕೆ ಹಾಲು-ತುಪ್ಪ, ಹಣ ಸುರಿದು, ಹಸಿದ ಹೊಟ್ಟೆಗಳನ್ನು ಹೊರಳಿಯೂ ನೋಡದಿರುವುದನ್ನು ಕಂಡರೆ `ಅಯ್ಯೋ ಅನಿಸುತ್ತದೆ. ಈ ದೇಶದಲ್ಲಿ ಬುದ್ಧ ಬಂದು ಹೋದ, ಬಸವಣ್ಣ ಬಂದು ಹೋದ, ಅಂಬೇಡ್ಕರ್ ಅವರಂತಹ ಮಹಾ ಜ್ಞಾನಿ ಬಂದು ಹೋದರೂ, ಕ್ರೂರ ಮೌಢ್ಯದಿಂದ ಹೊರ ಬರದ ಈ ಜನರನ್ನು ಕಂಡಾಗಲೆಲ್ಲ ನನಗೆ ಆಕ್ರೋಶ, ಕೋಪ, ಕಡೆಗೆ ವಿಷಾದ ಮೂಡುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಪ್ರಸ್ತುತ ಸಾಂಸ್ಕೃತಿಕ ಕ್ಷೇತ್ರ ತನ್ನ ಧ್ಯೇಯೋದ್ದೇಶಗಳನ್ನು ಕಳೆದುಕೊಂಡು ವ್ಯಾಪಾರಕ್ಕೆ ತಿರುಗಿದೆ ಎಂದು ಹೇಳಬಹುದು. ನಾವು ಯಾವುದನ್ನು ಸಂಸ್ಕೃತಿ ಎಂದು ಅಭಿಮಾನದಿಂದ ಪೋಷಿಸುತ್ತ ಬಂದಿದ್ದೇವೆಯೋ ಇಂದು ಅದು ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ. ಕಲೆ-ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಅದಕ್ಕೆ ಕಾರಣ ಜಾಗತೀಕರಣ, ತಂತ್ರಜ್ಞಾನ ಬೆಳವಣಿಗೆ ಮತ್ತು ರಾಜಕೀಯ ಶಕ್ತಿಗಳು. ಕಲೆ, ಸಾಹಿತ್ಯ, ಸಂಸ್ಕೃತಿ ಎಂಬವು ಆಯಾ ದೇಶದ ಸೌಂದರ್ಯದ ದ್ಯೋತಕವಾಗಿರುತ್ತವೆ. ಅವು ವಿರೂಪಗೊಂಡರೆ ದೇಶದ ಸೌಂದರ್ಯವೇ ವಿರೂಪಗೊಂಡತೆ. ಇವನ್ನು ಪೋಷಿಸಬೇಕಾದ ಸರ್ಕಾರಗಳು ಈ ವಿಚಾರವನ್ನು ನಿರ್ಲಕ್ಷಿಸುತ್ತಿವೆ. ಸಮಾಜದಲ್ಲಿ ಕ್ರೌರ್ಯ ಬೆಳೆಯಲು ಇದೂ ಒಂದು ಕಾರಣವಾಗಿರಬಹುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ರಾಜಕಾರಣವೆಂಬುದು ಇಂದು ಎಲ್ಲ ಕ್ಷೇತ್ರದಲ್ಲಿ ಇರುವಂತಹದೆ. ರಾಜಕಾರಣ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವುದರಿಂದಲೇ ಸತ್ಯ ಮತ್ತು ಮೌಲ್ಯಗಳು ನೆಲೆ ಕಳೆದುಕೊಂಡಿವೆ. ಅರ್ಹತೆ ಮತ್ತು ಪ್ರತಿಭೆ ಎಂಬುದು ಮೂಲೆಗುಂಪಾಗಿದೆ. ಆದ್ದರಿಂದ ರಾಜಕಾರಣದಲ್ಲಿ ಸಾಹಿತ್ಯ-ಸಂಸ್ಕೃತಿ ಇರಬೇಕೆ ಹೊರತು ಸಾಹಿತ್ಯ-ಸಂಸ್ಕೃತಿಯಲ್ಲಿ ರಾಜಕಾರಣವಿರಬಾರದು. ಇಂದು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ವಿಚಾದರಲ್ಲಿ ಕೆಲವು ಸಾಹಿತಿಗಳು ರಾಜಕಾರಣಿಗಳನ್ನೂ ಮೀರಿಸುವಂತೆ ರಾಜಕೀಯ ಮಾಡುತ್ತಿರುವುದನ್ನು ನೋಡಿದರೆ ಸಾಹಿತ್ಯದ ಮೌಲ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಅರ್ಥವಾಗುತ್ತದೆ. ಸಾಹಿತ್ಯವೆಂಬುದು ಜ್ಞಾನ-ಅರಿವಿನ ಮಾರ್ಗವೇ ಹೊರತು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ಹಪಾಹಪಿತನವಲ್ಲ. ಈ ಎಲ್ಲದರ ನಡುವೆಯೂ ಪ್ರಾಮಾಣಿಕ ಸಾಹಿತ್ಯ, ಸಾಹಿತಿಗಳು ನೇಪಥ್ಯದಲ್ಲೇ ಇದ್ದಾರೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ನಮ್ಮ ಮನಸು ಏನು ಹೇಳುತ್ತಿದೆ? ಈ ವಿಷಯವಾಗಿ ನಾನು ಮಾತನಾಡುವ ಮೊದಲು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನನಗೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಿಗೂ ಅಧಿಕಾರ ಮುಖ್ಯ ಹೊರತೂ ಜನರ ಹಿತವಲ್ಲ. ಮಾನವೀಯ ಗುಣಗಳನ್ನು ಪ್ರತಿಪಾದಿಸುವ ರೀತಿ-ಸಿದ್ಧಾಂತಗಳಲ್ಲಿ ನಂಬಿಕೆ ಇದೆ. ಅದು ಎಲ್ಲಿದ್ದರೂ ಸ್ವೀಕಾರರ್ಹ. ಚುನಾಯಿತ ಯಾವುದೇ ವ್ಯಕ್ತಿ, ಮಂತ್ರಿ-ಸರ್ಕಾರವೇ ಇರಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕಾಗುತ್ತದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ತಮ್ಮದೇ ಶಾಸನ ಸೃಷ್ಟಿಸುವ ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನೇ ಪಲ್ಲಟಗೊಳಿಸಬಹುದಾದ ಹುನ್ನಾರಗಳನ್ನು ನಾನು ಒಪ್ಪಲಾರೆ. ಒಂದು ರಾಷ್ಟವೆಂದರೆ ಒಂದು ಸಮುದಾಯ, ಧರ್ಮ ಕೇಂದ್ರಿತ ಭೂಪ್ರದೇಶವಲ್ಲ. ಸರ್ವ ಸಮುದಾಯ, ಧರ್ಮ ಕೇಂದ್ರಿತ ಭಾರತದಂತಹ ರಾಷ್ಟ್ರವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ರೂಪಾಂತರಗೊಳಿಸುವ ಹುನ್ನಾರ ಸಲ್ಲದು. ದೇಶವನ್ನು ಮುನ್ನಡೆಸುವವರು ಇದನ್ನು ಅರಿಯಬೇಕು. ಓಟ್ ಬ್ಯಾಂಕ್‌ಗಾಗಿ ಸಮುದಾಯ, ಧರ್ಮದ ವಿಷಯಗಳನ್ನು ಅಸ್ತçವಾಗಿಸಿಕೊಂಡು ಜನರ ಮನಸ್ಸು ಒಡೆಯುವುದು ಯಾವ ಪಕ್ಷ-ಸಿದ್ಧಾಂತದ ಮೌಲ್ಯ? ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನನ್ನ ಅರಿವಿನಲ್ಲಿ ಹೇಳುವುದಾದರೆ ಸಾಹಿತ್ಯವೆಂಬುದು ಅಂತರಂಗದಲ್ಲಿ ಬೆಳಗುವ ಜ್ಯೋತಿ. ಅದಕ್ಕೆ ಯಾವುದೇ ತರಹದ ಆಡಂಬರ, ವೈಭವ, ಮೆರವಣಿಗೆಗಳ ಅಗತ್ಯವಿಲ್ಲ. ಬರವಣಿಗೆ ಎಂಬುದು ಆ ಜ್ಯೋತಿಯನ್ನು ಹೊತ್ತಿಸಿದರೆ, ಓದು ಎಂಬುದು ಅದನ್ನು ನಿರಂತರವಾಗಿ ಬೆಳಗಿಸುತ್ತದೆ. ಸಾವು ಕಣ್ಣೆದುರು ಬಂದರೂ ಈ ಅರಿವಿನ ಆನಂದ ವೆಂಬುದು ಅದರ ಭಯವನ್ನು ಮರೆಸುತ್ತದೆ. ಹಾಗಾಗಿ ನಾನು ಸಾಹಿತ್ಯದ ಈ ಪ್ರಕ್ರಿಯೆಯನ್ನು ನನ್ನ ಜೀವಿತಾವಧಿಯವರೆಗೂ ಜಾಗೃತವಾಗಿಟ್ಟುಕೊಳ್ಳಲು ಬಯಸುತ್ತೇನೆ. ಇಂದಿಗಿಂತ ನಾಳೆ ಇನ್ನೂ ಚೆನ್ನಾಗಿ ಬರೆಯಬೇಕು ಎಂಬ ಹಂಬಲದಲ್ಲಿರುತ್ತೇನೆ. ಇದು ಆತ್ಮೋದ್ಧಾರದ ಮಾರ್ಗ! ವ್ಯಾಪಾರವಾಗದೇ ಉಳಿಯಬೇಕು ಎಂಬುದು ನನ್ನ ಆಶಯ. ಆದರೆ ಲೇಖಕರು ಬಡವರಾಗಿಯೇ ಉಳಿದು, ಪ್ರಕಾಶಕರು ಮಾತ್ರ ಶ್ರೀಮಂತರಾಗುತ್ತಿರುವುದು ವಿಪರ್ಯಾಸ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಬೇರೆ ಬೇರೆ ಲೇಖಕರು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗುತ್ತಾರೆ. ಹಲವರಲ್ಲಿ ಹಲವು ಬಗೆಯ ವೈವಿಧ್ಯವಾದ ಗುಣಗಳು ಇಷ್ಟವಾಗಬಹುದು. ಆದಾಗ್ಯೂ ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತರು ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾನ್ಜ್ ಕಾಫ್ಕಾ, ಆಲ್ಬರ್ಟ್ ಕಮೂ ಅವರು ನನಗೆ ಹೆಚ್ಚು ಇಷ್ಟವಾಗುವ ಲೇಖಕರು. ಯಾವುದೇ ವರ್ಗಕ್ಕೂ ಸೇರಬಹುದಾದ ವಿಶಿಷ್ಟ ಪ್ರಬೇಧದ ಬರವಣಿಗೆ ಮೂಲಕ ತೇಜಸ್ವಿ ಇಷ್ಟವಾದರೆ, ಕಾರಂತರು ಪ್ರಖರ ವೈಚಾರಿಕ ನಿಲುವಿನಿಂದ ಇಷ್ಟವಾಗುತ್ತಾರೆ. `ಮೆಟಮಾರ್ಫಸಿಸ್ ನಂತಹ ಬೆರಗು ಮೂಡಿಸುವಂತಹ ಅಸಂಗತ ಕಾದಂಬರಿ ಮೂಲಕ ಪ್ರಾನ್ಜ್ ಕಾಫ್ಕಾ ಇಷ್ಟವಾಗುತ್ತಾನೆ. ಈಚೆಗೆ ಓದಿದ ಕೃತಿಗಳಾವುವು? ಟಿ.ಪಿ. ಅಶೋಕ ಅವರ ಕಥನ ಭಾರತಿ, ಅಮರೇಶ ನುಗಡೋಣಿ ಅವರ ದಂದುಗ, ವಸುಧೇಂದ್ರ ಅವರ ತೇಜೋ ತುಂಗಭದ್ರಾ ಮತ್ತು ಇತರ ಕೃತಿಗಳು. ನಿಮಗೆ ಇಷ್ಟವಾದ ಕೆಲಸ ಯಾವುದು? ಓದು, ಬರೆವಣಿಗೆಯಂತೆ ಪ್ರವಾಸ ಮತ್ತು ಕಾಡಿನಲ್ಲಿ ಚಾರಣ ಮಾಡುವುದು ಕೂಡ ಇಷ್ಟ. ಕಾಂಕ್ರಿಟ್ ಕಾಡಿನಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ಬೆರೆಯುವುದು ಎಂದಿಗೂ ನನಗೆ ಇಷ್ಟದ ಕೆಲಸ. ಅದೇ ರೀತಿ

