ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

2020 ಎಂಬ ‘ಮಾಯಾವಿ ವರ್ಷ’

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು 2020 ಎಂಬ ‘ಮಾಯಾವಿ ವರ್ಷ’ ಚಂದ್ರ ಪ್ರಭಾ.ಬಿ. . 2020 ಎಂಬ ‘ಮಾಯಾವಿ ವರ್ಷ’  ಕುದುರೆಯಂತೆ ಕೆನೆಯುತ್ತ ಆಗಮಿಸಿ ವ್ಯಾಘ್ರನಾಗಿ ಮನುಕುಲವನ್ನು ನುಂಗಿ ಆಪೋಶನ ತೆಗೆದುಕೊಂಡುದು ಇಷ್ಟರಲ್ಲೇ ಇತಿಹಾಸದ ಪುಟ ಸೇರಲಿದೆ. ಆಗಮನಕ್ಕೂ ಮುನ್ನ ಆ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ಬಗೆ ವಿಸ್ಮಯಕಾರಿ ನಿರೀಕ್ಷೆ ಇದ್ದುದು ನಿಜ. T20 ಎಂಬ ಚುಟುಕು ಕ್ರಿಕೆಟ್ ಮೂಡಿಸಿದ ಸಂಚಲನ ಅದಕ್ಕೆ ಕಾರಣ. T20 ಮನೆ ಮನ ಮೈದಾನ ಪ್ರವೇಶಿಸಿದ ಹೊಸತರಲ್ಲಿ ಇಷ್ಟು ಕಡಿಮೆ ಓವರ್ ನಲ್ಲಿ ಅದೆಂಥ ಆಟ? 50 ಓವರಿನಲ್ಲಿ ನಿಜವಾದ ಆಟ ಶುರುವಾಗುವುದು 20 ಓವರ್ ನಂತರ..ಅಂಥದರಲ್ಲಿ ಕೇವಲ 20 ಓವರ್ ಆಟ ಹೇಗಿದ್ದೀತು ಎಂಬುದು ಕಲ್ಪನೆಗೂ ನಿಲುಕದಂತಿತ್ತು.. ಆಟದ ಜಟಾಪಟಿ ಕಣ್ಣಿಗೆ ಕಟ್ಟುವಂತೆ ಸುಳಿದಾಡತೊಡಗಿದಂತೆಲ್ಲ ಆಟದ ಕ್ರೇಜ್ ಇನ್ನಿಲ್ಲದಂತೆ ಹೆಚ್ಚಿತು. ಸಿಕ್ಸರು,ಬೌಂಡರಿಗಳ ಭರ್ಜರಿ T20 ಆಟದ ಹಾಗೇ 2020 ರ ವರ್ಷ ನೋಡನೋಡುತ್ತಲೇ ಸರಿದು ಹೋಗುವ ಮೊದಲು ಬದುಕಿಗೆ ಭರ್ಜರಿ ಬಂಪರ್ ಕೊಟ್ಟೇ ಹೋಗುತ್ತದೆ ಎಂಬ ಉತ್ಸಾಹ, ಉಲ್ಲಾಸಭರಿತ ಚರ್ಚೆ ವಿದ್ಯಾರ್ಥಿಮಿತ್ರರು, ಸಹೋದ್ಯೋಗಿಗಳ ನಡುವೆ ಹರಿಯುತ್ತ ಇರುವಂತೇ ವರ್ಷದ ಮೂರನೇ ತಿಂಗಳ ಇಪ್ಪತ್ಮೂರನೇ ದಿನ ಬದುಕು ಲಾಕ್ಡೌನ್ ಆಗಿತ್ತು!!  ಅದಕ್ಕೆ ಕಾರಣ ಏನೇ ಆಗಿರಬಹುದು. ಆದರೆ ಪರಿಣಾಮ ಮಾತ್ರ ಕಂಡು ಕೇಳರಿಯದಂಥದು. ಚಲಿಸುತ್ತಿರುವ ಸಿನಿಮಾದ ದೃಶ್ಯವೊಂದು ಗಕ್ಕನೆ ನಿಂತು ಸ್ಟಿಲ್ ಆದಂತೆ ಬದುಕು ಚಲನೆ ತೊರೆಯಿತು. ಆಗಲೇ ಆರಂಭವಾದ ಪರೀಕ್ಷೆಗಳು ಮುಂದೂಡಲ್ಪಟ್ಟವು. ಇನ್ನೂ ಆರಂಭವಾಗಬೇಕಿದ್ದ ಪರೀಕ್ಷೆ ಅನಿಶ್ಚಿತತೆಗೆ ದೂಡಲ್ಪಟ್ಟವು. ಹತ್ತಾರು ಕಾರಣದಿಂದ ಊರು ತೊರೆದ ಜೀವಗಳಿಗೆ ತವರ ಸೇರುವ ತುಡಿತ ಕಾಡಿತು. ನೂರಾರು ಸಾವಿರಾರು ಮೈಲಿ ನಡೆದು ಸೋರುವ ಹಿಮ್ಮಡಿ, ಸೋತ ದೇಹ ಹೊತ್ತು ಉಸಿರು ಬಿಟ್ಟರೂ ತವರ ನೆಲದಲ್ಲಿ ಬಿಟ್ಟೇನು ಎನುವ ಹಂಬಲದಲ್ಲಿ ಜೀವಗಳು ಬಸವಳಿದವು. ಬಸುರಿ ಬಾಣಂತಿಯರು, ಎಳೆಯ ಜೀವಗಳು, ವೃದ್ಧರು ದಾರಿ ಮಧ್ಯೆ ಅಸು ನೀಗಿದರು. ರೈತಾಪಿ ಜನರು ತಮ್ಮ ಬೆಳೆಗೆ ಪೇಟೆ ಇಲ್ಲದೇ ಕಂಗಾಲಾದರು. ಕಾರ್ಮಿಕರು ಬೀದಿಗೆ ಬಿದ್ದರು. ಟೊಮ್ಯಾಟೊ, ಕೋಸು, ತರಾವರಿ ಬೆಳೆಗಳನ್ನು ಬೀದಿಯಲ್ಲಿ ಎಸೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಯ್ತು. ಮೊದಲೇ ಕಂಗೆಟ್ಟು ಹೋದ ಬದುಕಿನ ಬಂಡಿ ಮತ್ತಷ್ಟು ಹಳ್ಳ ಹಿಡಿಯಿತು. ನಾಳೆ ಹೇಗೆ ಎಂಬ ಚಿಂತೆಗಿಂತ ” ಇಂದು ” ಇನ್ನಿಲ್ಲದಂತೆ ಎಲ್ಲರನ್ನೂ ಕಾಡಿತು. ತೆರೆದರೆ ಬಾಗಿಲ ಸಂದಿಯಿಂದಲೂ ವೈರಸ್ಸು ಮನೆ ಸೇರೀತು ಎಂಬ ಆತಂಕದಲ್ಲಿ ಸರಿಯಿತು ತಿಂಗಳೊಪ್ಪತ್ತು. ಕೈಯಲ್ಲಿದ್ದ ಕಾಸು ಕರಗಿ ತಾತ್ಕಾಲಿಕ ನಿರುದ್ಯೋಗ ಕಾಡತೊಡಗಿತು. ಹಲವರಿಗೆ ಅದೇ ಶಾಶ್ವತವೂ ಆಗಿ ಪರಿಣಮಿಸಿ ಬದುಕು ದುರ್ಭರವಾಯ್ತು. ದಿಕ್ಕೆಟ್ಟ ಪ್ರಭುತ್ವ ಏನು ಮಾಡಲೂ ತೋಚದೆ ಹೆಜ್ಜೆ ಹೆಜ್ಜೆಗೂ ಎಡವಿ ಟೀಕೆಗೊಳಗಾಯ್ತು. ತಿಂಗಳುಗಳು ಕಳೆದು ಕಾರ್ಪೊರೇಟ್ ಜಗತ್ತಿನ ಎಲ್ಲ ಸನ್ಮಿತ್ರರು ಸೇಫ್ ಆದ ನಂತರ ಲಾಕ್ಡೌನ್ ರೂಪಾಂತರ ಹೊಂದಿ ಸುಳಿದಾಡತೊಡಗಿತು. ಜನಸಾಮಾನ್ಯನ ಗೋಳು ಅಂತ್ಯವಿಲ್ಲದ್ದಾಯ್ತು. ಹೊರ ಬಿದ್ದರೆ ಬೆತ್ತದ ರುಚಿ ನೋಡಬೇಕು. ಮನೆ ಒಳಗೆ ಕುಳಿತರೆ ದುಡಿವೆಯಿಲ್ಲ. ಹೊಟ್ಟೆ ಹಸಿವಿಗೆ ಚೀಲದಲ್ಲಿ ಏನಾದರೂ ತುಂಬಲೇಬೇಕು. ತುಂಬಲೇನೂ ಇಲ್ಲ! ಆ ಓಣಿಯ ಆತ ಈ ಓಣಿಯ ಈಕೆ.. ಚಿಕ್ಕ ವಯಸ್ಸಿನವರು, ವಯಸ್ಸಾದವರು ನೋಡ ನೋಡುತ್ತ ವೈರಸ್ಸಿಗೆ ಆಹುತಿಯಾದರು. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದವರ ಹೆಸರಿನಲ್ಲಿ ಹಲವರ ಜೇಬು ತುಂಬಿದವು. ಖಾಸಗಿ ಆಸ್ಪತ್ರೆಗಳ ಬಿಲ್ಲು ವೈರಸ್ ದಾಳಿಗಿಂತ ಭಾರವೆನಿಸಿತು. ಕಾರಣವಿಲ್ಲದೆ ಸಮುದಾಯವೊಂದನ್ನು ಟೀಕೆಗೆ ಗುರಿಪಡಿಸಿದರು ಹಲವರು. ನರಕವಾಯಿತು ಬದುಕು. ಶಾಲೆ, ಕಾಲೇಜು, ಕಚೇರಿ, ಮಿಲ್ಲು, ಫ್ಯಾಕ್ಟರಿ ಎಲ್ಲ ಕದ ಮುಚ್ಚಿದವು. ಗಿಜಿಗುಡುವ ಸಂತೆ, ಪೇಟೆ, ಚೌಕ, ವೃತ್ತಗಳು ನಿಶ್ಶಬ್ದವಾದವು. ಉದ್ದಕ್ಕೆ ಚಾಚಿಕೊಂಡ ನೀರವ ರಸ್ತೆಗಳಲ್ಲಿ ಕಾಡಿನ ಪ್ರಾಣಿಗಳು ನಿರಾತಂಕವಾಗಿ ಸಂಚಾರಗೈಯಲು ತೊಡಗಿದವು. ಫೇಸ್‌ಬುಕ್, ಟ್ವಿಟರ್ ನಂತಹ ಮಾಧ್ಯಮಗಳು ಸುರಕ್ಷಿತ ಅಂತರ ಕಾಯ್ದುಕೊಂಡೇ ಜನರನ್ನು ಬೆಸೆಯುವ ಜನಪ್ರಿಯ ಮಾಧ್ಯಮಗಳಾದವು. ಉದ್ಯೋಗಸ್ಥ ಹೆಣ್ಮಕ್ಕಳಿಗೆ ಅಡುಗೆ ಮನೆಯಲ್ಲಿ ಒಂದಷ್ಟು ಹೊತ್ತು ನಿರಾತಂಕ,   ” ಕ್ವಾಲಿಟಿ ” ಸಮಯ ಕಳೆಯುವ ಅವಕಾಶ ನಿರಾಯಾಸವಾಗಿ ಒದಗಿತು. ಒಂದರ್ಥದಲ್ಲಿ ಬಗೆ ಬಗೆ ತಿಂಡಿ ತಿನಿಸು ಮಾಡಿ ಪರಿವಾರದೊಂದಿಗೆ ಸಂಭ್ರಮಿಸುವ ಅನಿರೀಕ್ಷಿತ ಲಾಟರಿ ದಕ್ಕಿತು. ಯೂ ಟ್ಯೂಬ್ ಗೆಳತಿಯರ ನೆರವಿನಿಂದ ದಿನಕ್ಕೊಂದು ಬಗೆಯ ರೆಸಿಪಿ ಪ್ರಯೋಗಗಳು ಶುರುವಿಟ್ಟುಕೊಂಡವು. ಪ್ರೀತಿ ಪಾತ್ರರ ಆರೋಗ್ಯ ಇನ್ನಿಲ್ಲದಂತೆ ಸುಧಾರಿಸಿತು. ಬೇಕಿದ್ದರೂ ಬೇಡದಿದ್ದರೂ ಪ್ರತಿಯೊಬ್ಬರೂ ಕೆಲವಷ್ಟು ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವಂತಾಯ್ತು. ಒಂದೇ ಪೇಜಿನಲ್ಲಿ ಬಗೆ ಬಗೆ ವ್ಯಂಜನಗಳು ಸಚಿತ್ರ ಪ್ರಕಟವಾಗುವಾಗಲೇ ಹಸಿದ ಹೊಟ್ಟೆಯ, ನಿಸ್ತೇಜ ಕಂಗಳ ಕರುಳು ಹಿಂಡುವ ಚಿತ್ರಗಳೂ ಪ್ರಕಟವಾದವು. ಸಹೃದಯರು ಹಲವರು ಗುಂಪು ಕಟ್ಟಿಕೊಂಡು ಹಸಿದ ಹೊಟ್ಟೆಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ತೋರಿದರು. ಮೂರು ಹೊತ್ತು ಅಡುಗೆ ಮನೆಯಲ್ಲಿ ಸವೆಯುವುದು ಹೆಂಗಳೆಯರಿಗೆ ಬೇಸರಿಕೆಯಾಯ್ತು. ವಿಶ್ವದಾದ್ಯಂತ ನದಿ, ಸರೋವರ, ನಾಲೆಗಳ ನೀರು ಜನ ಸಂಪರ್ಕದಿಂದ ದೂರಾಗಿ ಮಾಲಿನ್ಯ ಕಳಚಿಕೊಂಡು ಫಳಫಳಿಸಿದವು. ದಕ್ಷಿಣ  ಉತ್ತರ ಧ್ರುವದ ತುತ್ತ ತುದಿ ಶುಭ್ರಗೊಂಡವು, ದೆಹಲಿಯಂಥ ನಗರಗಳು ತುಸುವಾದರೂ ಮಾಲಿನ್ಯಮುಕ್ತವಾದೆವು, ಗಂಗೆ ಯಮುನೆಯರ ಶತಮಾನದ ಕೊಳೆ ಕಳೆಯಿತೆಂದು ಪತ್ರಿಕೆಗಳಲ್ಲಿ ವರದಿಯಾಯ್ತು. ಗೆಳತಿಯರು ಅಚ್ಚರಿ ಮೂಡಿಸುವ ಅನುಭವ ಹಂಚಿಕೊಂಡರು. ನೌಕರಿ ಅಂಬೊ ಚಾಕರಿ ಶುರುವಾದಾಗಿನಿಂದ ಶುರುವಾದ ಬಸ್ ಪ್ರಯಾಣ ತಂದ ಬೆನ್ನು ನೋವು ತಿಂಗಳಾನುಗಟ್ಚಲೆ ವಿರಾಮದಿಂದ ಕಡಿಮೆಯಾಗಿತ್ತು ಗೆಳತಿಗೆ. ಬಿದ್ದು ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡ ಮತ್ತೊಬ್ಬಾಕೆಗೆ ಕಾಲಿನ ಉಳುಕು ಅಕ್ಷರಶಃ ಮಾಯವಾಗಿತ್ತು. ಪಾಠಗಳಿಲ್ಲದೆ ಸೊರಗಿದ ತರಗತಿಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗಗಳು ಒದಗಿ ಬಂದವು. ಪರಿಪೂರ್ಣ ಅಲ್ಲದಿದ್ದರೂ ಅಷ್ಟೋ ಇಷ್ಟೋ ಆಸರಾಯಿತು ಆನ್‌ಲೈನ್. ನಗರಗಳ ನೌಕರಿ ತೊರೆದು ಹಳ್ಳಿಗಳಿಗೆ ಹಿಂದಿರುಗಿದ ಯುವಕರು ಪಿಕಾಸಿ, ಹಾರೆ, ಗುದ್ದಲಿ ಹಿಡಿದು ಬಾವಿ,  ಹಳ್ಳ,  ಕಾಲುವೆ ತೋಡಿದರು. ಒಕ್ಕಲುತನದಲ್ಲಿ ಬದುಕಿದೆ ಎಂದು ಮನಗಂಡರು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳಕೊಂಡ  ಹಲವಾರು ಮಿತ್ರರು ತಳ್ಳು ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ತೊಡಗಿದರು. ಅಕ್ಷರಶಃ ಗುಡಿ ಕೈಗಾರಿಕೆ ಎಂಬುದು ಸಾಕಾರಗೊಂಡಿತು. ಹಲವರು ಗೃಹ ಉದ್ಯೋಗ ಆರಂಭಿಸಿದರು.  ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮಾರಾಟಕ್ಕೆ ವೇದಿಕೆಯಾಗಿ ಬಳಸಿಕೊಂಡರು. ಅಂಚೆಯಣ್ಣ ಹೆಚ್ಚೆಚ್ಚು ಆಪ್ತನಾದ. ಆಡಂಬರ ತೆರೆಗೆ ಸರಿದು ಖರ್ಚಿಲ್ಲದ ಮದುವೆಗಳಾದವು. ಮದುವೆಗೆ ಕರೆಯದಿದ್ದರೆ ಯಾರೂ ಅನ್ಯಥಾ ಭಾವಿಸುವುದಿಲ್ಲ ಎಂಬುದು ಎಲ್ಲರಿಗೂ ಸುಲಭವಾಗಿ ಅರ್ಥವಾಯಿತು. ವೈದ್ಯೆ ಗೆಳತಿಗೆ ಫೋನ್‌ ಸಂಭಾಷಣೆಯಲ್ಲಿ ಕೇಳಿದ್ದೆ, “ಈ ಲಾಕ್ಡೌನ್ ಯಾವೆಲ್ಲ ರೀತಿ ಪರಿಣಾಮ ಬೀರಬಹುದು” ಅಂತ. “ಗಾಯ ಅಳಿದರೂ ಅಳಿಯದೇ ಉಳಿವ ಅದರ ಕಲೆಗಳಂತೆ ಶಾಶ್ವತ ವೈಕಲ್ಯ ಉಳಿಯುತ್ತೆ ಕಣೇ” ಅಂತ ನೋವಿನಿಂದ  ನುಡಿದಿದ್ದಳಾಕೆ. ಅದು ದಿನ ದಿನವೂ ಮನದಟ್ಟಾಗುತ್ತ ಸಾಗಿತು. ಎಂದಿಗಿಂತ ಹೆಚ್ಚು ಆತಂಕಕಾರಿ ಎನಿಸುವ  ಆರ್ಥಿಕತೆ, ನಿರುದ್ಯೋಗ ಹೆಗಲೇರಿ ಕುಳಿತಿವೆ. ಕೊರೊನಾವನ್ನು  ಹಿಂಬಾಲಿಸಿ ಬಂದ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಬೇರೆ ಯಾವುದೂ ಅಲ್ಲ ಕೇವಲ ಸೌಹಾರ್ದ, ಭೃಾತೃತ್ವ, ಹೊಂದಾಣಿಕೆ ಬದುಕು ಕಟ್ಟಿಕೊಳ್ಳುವ ದಾರಿಗಳು ಎಂಬುದು ಎದೆಗಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರ ಮುಖವಾಡ ಕಳಚಿದೆ. ತಿದ್ದಿಕೊಳ್ಳಲು ಇರುವ ದಾರಿ ಹುಡುಕುತ್ತ  ನಿಜ ಅರ್ಥದಲ್ಲಿ ಬದುಕು ಕಟ್ಟಿಕೊಳ್ಳುವ ಹೊಣೆ ಹೊತ್ತು 2021 ನ್ನು ಸ್ವಾಗತಿಸಬೇಕಿದೆ. ***********

2020 ಎಂಬ ‘ಮಾಯಾವಿ ವರ್ಷ’ Read Post »

ಇತರೆ, ಜೀವನ

ಹೊಸ ಭರವಸೆಯೊಂದಿಗೆ..

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಹೊಸ ಭರವಸೆಯೊಂದಿಗೆ..    ಜ್ಯೋತಿ  ಡಿ.ಬೊಮ್ಮ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ ತನ್ನ ಆಪೋಷನಕ್ಕೆ ತೆಗೆದುಕೊಳ್ಳುವದೊ ಎಂಬ ಭಯದಲ್ಲೆ ದಿನಕಳೆದಿದ್ದಾಯಿತು.ಒಬ್ಬರನ್ನೊಬ್ಬರು ಸದಾ ಅನುಮಾನದಿಂದ ನೋಡುತ್ತ ಸಂಬಂಧಗಳನ್ನೆಲ್ಲ ದೂರಗೊಳಿಸಿ ಒಂದು ಸೀಮಿತ ವಲಯದಲ್ಲೆ ಪರಸ್ಪರರಿಂದ ದೂರವಾಗಿ ಬದುಕಿದ ಆ ಕ್ಷಣಗಳು ಈಗ ನೆನಪಿಸಿಕೊಂಡಾಗ ಮತ್ತೆ ವಿಷಾದ ಕಾಡುತ್ತದೆ.ಕರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಅಷ್ಟೊಂದು ವೈಭವಿಕರಿಸಿ ಭಯಗೊಳಿಸುವ ಅಗತ್ಯವಿತ್ತೆ ..ಎಂಬ ಪ್ರಶ್ನೆಗೆ ಈಗ ಉತ್ತರ ಬೇಕಾಗಿಲ್ಲದಿರಬಹುದು.ಎಕೆಂದರೆ ಈಗ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುತ್ತಿರುವ ಅದನ್ನು ಮತ್ತೆ ನೆನಪಿಸಿಕೊಳ್ಳದಿರುವದೆ ಸೂಕ್ತ.  ಆದರೆ ಆ ಸಂದರ್ಬದಲ್ಲಿ ಜನರಿಗೆ ಕಾಡಿದ ಒಂಟಿತನ ,ಖಿನ್ನತೆ , ನೆನೆಸಿ ಕೊಂಡರೆ ಮನ ಕಂಪಿಸದೆ ಇರದು. ಮೊದಮೊದಲು ಲಾಕ್ ಡೌನ್ ಅನ್ನು ಸಂಭ್ರಮಿಸಿದವರೆ ಎಲ್ಲರು. ಮನೆಯ ದಿಗ್ಬಂಧನ ಮುಂದುವರೆದಂತೆ ಅದರ ಪ್ರತಿಕೂಲ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೂ ತೊರತೊಡಗಿತು..ಕಾರ್ಮಿಕರು ಇನ್ನಿಲ್ಲದಂತೆ ತೊಂದರೆಗೊಳಗಾದರು.ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಈಗಲೂ ಪರದಾಡುತಿದ್ದಾರೆ. ಕರೋನಾ ಮಾರಿಯೂ ಪ್ರತಿಯೊಬ್ಬರ ಶಿಸ್ತು ಬದ್ಧ ಜೀವನ ಕ್ರಮವನ್ನೆ ಕಸಿದುಕೊಂಡು ಬಿಟ್ಟಿತು. ಒಂದೊಂದು ಕಷ್ಟವು ಒಂದೊಂದು ಪಾಠ ಕಲಿಸಿಯೆ ಹೋಗುತ್ತದೆ.ಕರೋನಾ ಕಾಲಘಟ್ಟದ ಸಂದರ್ಭ ವೂ  ನಮಗೆ ಅನೇಕ ಪಾಠ ಕಲಿಸದೆ ಇರಲಿಲ್ಲ.ಮೊಟ್ಟ ಮೊದಲು ಮಾನವನ ಅತೀ ವೇಗದ ಬದುಕಿಗೊಂದು ಬ್ರೇಕ್ ಹಾಕಿತು.ಧಾವಂತ ಬದುಕಿನಲ್ಲಿ ಯಾಂತ್ರಿಕವಾಗಿದ್ದ ಸಂಭಂದಗಳು ಮತ್ತೆ ಬೆಸೆದವು ,ಬಾಂಧವ್ಯದ ಸೆಲೆ ವೃದ್ಧಿಸಿತು. ಮನೆಯಲ್ಲಿ ತಯ್ಯಾರಿಸಿ ಸೇವಿಸುವ ಆಹಾರದ ಮಹಾತ್ಮೆಯ ಅರಿವಾಯಿತು.ಪ್ರಕೃತಿ ಮತ್ತೆ ನಳನಳಿಸಿತು ಮಾಲಿನ್ಯವಿಲ್ಲದೆ.ಹಣ ಒಂದೇ ಪ್ರತಿಯೊಂದಕ್ಕೂ ಪರಿಹಾರವಲ್ಲ ಎನ್ನುವದು ಈ ಕರೋನಾ ಕಲಿಸಿಕೊಟ್ಟಿತು. 2020 ರ  ಕಾಲಘಟ್ಟದಲ್ಲಿ ಕರೋನಾ ಸೋಂಕಿಗೆ ಒಳಗಾದ ಕುಟುಂಬಗಳಲ್ಲಿ ನಮ್ಮದು ಒಂದು.ಆ ಸಂದರ್ಭದಲ್ಲಿ ನಾನು ಅನುಭವಿಸಿದ ತವಕ ತಲ್ಲಣಗಳು ಅಪಾರ.ರೋಗ ಲಕ್ಷಣಗಳು ಅಷ್ಟಾಗಿ ಭಾದಿಸದಿದ್ದರೂ ಅದರ ಸುತ್ತಲಿನ ಸರ್ಕಾರದ ಕಟ್ಟಳೆಗಳು ನಿಜವಾಗಿಯು ನಲುಗಿಸಿದ್ದವು. ಮುಂದೆಯೂ ಅದರೊಂದಿಗೆ ಬದುಕುವ ಅನಿವಾರ್ಯತೆ ಪ್ರತಿಯೊಬ್ಬರಿಗೂ. ಅಂತರ ಮತ್ತು ಮುಖಗವಸು ಕಡ್ಡಾಯವೆ. ಒಂದೂ ರೀತಿಯಲ್ಲಿ ಕರೋನಾ ಪಿಡುಗು ನಮ್ಮನ್ನು ಕಾಡಿದಷ್ಟು ಬದುಕುವ ಛಲ ಮತ್ತು ಆತ್ಮವಿಶ್ವಾಸ ಹೆಚ್ಚಿಸಿತು.ಮುಂದೆಯೂ ಅದರೊಂದಿಗೆ ಬದುಕಬೇಕು ,ಬದುಕೋಣ ,ಮತ್ತೊಂದು ಹೊಸವರ್ಷವನ್ನು ಸ್ವಾಗತಿಸುತ್ತ..ಹೊಸ ಭರವಸೆಯೊಂದಿಗೆ.. ಹೊಸ ಬೆಳಕಿನೊಂದಿಗೆ. **************************************   

ಹೊಸ ಭರವಸೆಯೊಂದಿಗೆ.. Read Post »

ಕಾವ್ಯಯಾನ

ಕೆಂಪು ತೋರಣ ಕಟ್ಟುತ್ತೇವೆ

ಕೆಂಪು ತೋರಣ ಕಟ್ಟುತ್ತೇವೆ ಅಲ್ಲಾಗಿರಿರಾಜ್ ಕನಕಗಿರಿ ಈಗ ನಾವುಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ.ರಾಜಧಾನಿಯ ಸಾಹುಕಾರರ ಮನೆಯ,ಕುಂಡಲಿಯಲ್ಲಿ ಕೆಂಪು ಗುಲಾಬಿ ಬಾಡಿಹೋಗಿವೆಯಂತೆ.ಹೂ ಗಿಡದ ಬೇರಿಗೆ ರಕ್ತ ಕುಡಿಸಲು ಹೊರಟಿದ್ದೇವೆ. ಈಗ ನಾವುಊರು ಕೇರಿ ಧಿಕ್ಕರಿಸಿ ಬಂದಿದ್ದೇವೆ.ನಮ್ಮ ಅನ್ನ ಕಸಿದು ಧಣಿಗಳಾದವರ,ಮನೆಯ ತಲ ಬಾಗಿಲು ತೋರಣ ಒಣಗಿ ಹೋಗಿವೆಯಂತೆ.ನಮ್ಮ ತೊಡೆ ಚರ್ಮ ಸುಲಿದುಕೆಂಪು ತೋರಣ ಕಟ್ಟಲು ಹೊರಟಿದ್ದೇವೆ. ಈಗ ನಾವುಜೀವದ ಹಂಗು ತೊರೆದು ಬಂದಿದ್ದೇವೆ.‘ಮರಣವೇ ಮಹಾನವಮಿಯೆಂದು’ದಿಲ್ಲಿ ಗಡಿ ಮುಚ್ಚಿಕೊಂಡವರ ಮನೆ ಮುಂದೆನಮ್ಮ ಹೋರಾಟದ ಹಾಡು ಬರೆಯಲು,ಕಳ್ಳು ಬಳ್ಳಿ ಕಟ್ಟಿಕೊಂಡು ಹೊರಟಿದ್ದೇವೆ. ನೇಗಿಲೆಂಬ ಶಿಲುಬೆ ಹೊತ್ತುಕೊಂಡು.ಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ ನಾವು. **************************************

ಕೆಂಪು ತೋರಣ ಕಟ್ಟುತ್ತೇವೆ Read Post »

ಕಾವ್ಯಯಾನ

ಶವ ಬಾರದಿರಲಿ ಮನೆ ತನಕ

ಕವಿತೆ ಶವ ಬಾರದಿರಲಿ ಮನೆ ತನಕ ಎ. ಎಸ್. ಮಕಾನದಾರ ನಿನ್ನ ಮನೆಯ ಅಂಗಳ ತನಕವೂನನ್ನ ಶವದ ಡೋಲಿ ಬಾರದಿರಲಿ ಹೂವಿನ ಚದ್ದರಿನ ತುಂಬಾ ಗುಲಾಬಿ ಅಂಟಿಸಿತರಾವರಿ ಜರದ ರೀಲು ಸುತ್ತಿ ಮೇಲಷ್ಟು ಇತ್ತರ್ ಸುರಿಯದಿರಲಿ ಆತ್ಮ ಸಾಕ್ಷಿ ನ್ಯಾಯಾಲಯಕೆಶರಣಾಗಿದ್ದೇನೆ. ಶಿಕ್ಷೆಗೆ ಗುರಿಯಾಗಿದ್ದೇನೆ ಅವಳಿಗೆ ಪ್ರೀತಿಸಿದ್ದು ನನ್ನ ತಪ್ಪಾದರೆನನ್ನನ್ನೂ ಪ್ರೀತಿಸಿದ ಅವಳ ತುರುಬು ತುಂಬಾ ಹೂ ಆರಡಿ ಜಾಗೆ ಮೂರು ಹಿಡಿ ಮಣ್ಣಿಗಾಗಿಕಾಲುಗೆರೆ ಸವೆದಿವೆ ಮೊಣಕಾಲು ಚಿಪ್ಪು ಒಡೆದಿದೆವಚನ ಭ್ರಷ್ಟನಲ್ಲ. ದೇಶ ಭ್ರಷ್ಟನೂ ಅಲ್ಲದಅವಳ ನಲ್ಲನಿಗೆ ಪುಟ ಗಟ್ಟಲೆ ತೀರ್ಪು ಬರೆದಿದ್ದು ಸರಿಯೇ ಕಾಮಾಲೆ ಮೆದುಳು ಹಳದಿ ಕಣ್ಣಿನ ಪಕೀರಕೀವು ಹೃದಯಾಕೂ ಅಫಿಡವಿಟ್ ಹಾಕಿದ್ದಾನೆ ಪ್ರತಿ ಹುಸಿ ಮಾತಿಗೂಕವಿತೆಯ ಮುಟ್ಟು ನಿಲ್ಲುತಿದೆ ನಾಳೆ ಬರುವ ಕರುಳಿನ ಕುಡಿಗೆಅಪ್ಪನ ಕವಿತೆ ತೋರಿಸಿ ತುತ್ತು ಉಣಿಸದಿರು ನಂಜಿಲ್ಲದ ಪದಗಳಿಗೆ ಬಾಣಂತಿ ಬೇರು ಕಟ್ಟದಿರು **********************************

ಶವ ಬಾರದಿರಲಿ ಮನೆ ತನಕ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ ಹೃದಯ ಕಣ್ಣೀರು ಕೊನೆ:ಹೃದಯವು ನಿಂತಿತುದುಃಖದ ಭಾರ. ಮನಸ್ಸು ಮನಸೇ ಜೋಕೆಕದ್ದಾರು ಆತ್ಮವನುಪ್ರೀತಿ ಹೆಸರು. ಅಮ್ಮ ತೊಗಲು ಬೊಂಬೆ :ಜೀವ ಕೊಟ್ಟ ದೇವತೆಅಮ್ಮನು ತಾನೇ. ಲಜ್ಜೆ ಸಂಜೆ ಕಡಲುಬಾನು ಭೂಮಿ ಮಿಲನಲಜ್ಜೆಯ ಕೆಂಪು. ಮೌನ ಮಾತು ಮೌನಕ್ಕೆಸೋತು ಶರಣಾಯಿತುಕಣ್ಣ ಭಾಷೆಲಿ. ಶಿಲೆ ಶಿಲೆಗೂ ಪ್ರೀತಿಸುರಿಯೋ ಸೋನೆಯಲಿಕರಗೋ ಮನ ಜಾತ್ರೆ ಮಾಯೆಯ ಜಾತ್ರೆಯಾರು ಯಾವ ಪಾಲಿಗೆಸಿಕ್ಕಿದ್ದೇ ಸಿರಿ. ಬಾಳು ಬಾಳ ಹಾದಿಲಿಮುಳ್ಳು ಕೂಡಾ ಹೂವಂತೆತೃಪ್ತಿ ಮನಕೆ. ಹೂವು ಮುಳ್ಳಿನ ಭಾಸಹೂಗಳು ಚುಚ್ಚಿದಾಗಪ್ರೀತಿಯೇ ಹೀಗೆ. ಕವಿ ಕವಿ ಕನಸುಕಂಡದೆಲ್ಲ ಕವಿತೆಮೊಗ್ಗು ಅರಳಿ. ********************************

ಹಾಯ್ಕುಗಳು Read Post »

ಕಾವ್ಯಯಾನ

ಕಾಡುವ ಕನಸುಗಳು

ಕವಿತೆ ಕಾಡುವ ಕನಸುಗಳು ರಶ್ಮಿ ಹೆಗಡೆ ಒಮ್ಮೊಮ್ಮೆ ಕಾಡುವ ರಂಗುರಂಗಾದ ಕನಸುಗಳುಬಣ್ಣದಲ್ಲಿ ಮಿಂದ ಮುಸ್ಸಂಜೆಯ ರವಿಯಂತೆಕಣ್ಣಿಗೆ ಇನ್ನೇನು ಚಂದ ಎನ್ನುವಷ್ಟರಲ್ಲಿಮುಳುಗಿ ಮಂಗಮಾಯವಾಗುವುದೇಕೆ? ಯಾರಿಂದಲೋ ಬಾಡಿಗೆ ತಂದ ಭಾವನೆಗಳಲ್ಲಅವೆಲ್ಲವೂ ನನ್ನ ನೆನಪಿನ ಗರ್ಭದಲ್ಲಿಯೇ ಅಡಗಿಬೆಚ್ಚಗೆ ಕುಳಿತು ಸಮಯ ಮೀರಿದ ಮೇಲೆಎದೆಯ ಗೂಡಿನಿಂದ ಹೊರಬಂದವುಗಳೇ! ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಬೇಕಾದಆ ನೆನಪಿನ ಪಕ್ಷಿಗಳು ಇಂದು ಮತ್ತೆಮನದ ಪಂಜರದಲ್ಲೇ ಬಂಧಿಯಾಗಿವೆಅದಕ್ಕೆ ಸ್ವಾತಂತ್ರ್ಯ ಸಿಗಬೇಕಾದ್ದು ನನ್ನಿಂದಲೇ! ಶಿಥಿಲಗೊಂಡ ಭಾವಸೇತುವೆಯಲ್ಲಿಇಂದು ಹರೆಯವೂ ಇಲ್ಲ,ಹುಮ್ಮಸ್ಸೂ ಇಲ್ಲಎಂದೋ ಆಗಾಗ ನೆನಪ ಮಳೆ ಸುರಿದಾಗಎದೆಯಡಿಗೆ ನೀರು ಉಕ್ಕಿ ಹರಿವುದನು ಕಾಣುತ್ತೇನೆ ಈ ನೆನಪುಗಳೇ ಹೀಗೆ,ಕಾಡುತ್ತವೆ,ಬೇಡುತ್ತವೆಕೊನೆಗೆ ಅಸಹಾಯಕತನದಿಂದ ಮಿಡಿಯುತ್ತವೆಮರಳುಗಾಡಿನ ಮರೀಚಿಕೆಯಂತೆಆಸೆ ತೋರಿಸಿ ಕಡೆಗೊಮ್ಮೆ ಮರೆಯಾಗುತ್ತವೆ! ******************************

ಕಾಡುವ ಕನಸುಗಳು Read Post »

ವಾರದ ಕವಿತೆ

ಈ ಸಂಜೆ ಗಾಯಗೊಂಡಿದೆ

ವಾರದ ಕವಿತೆ ಈ ಸಂಜೆ ಗಾಯಗೊಂಡಿದೆ ನಾಗರಾಜ ಹರಪನಹಳ್ಳಿ ಈ ಸಂಜೆ ದುಃಖಗೊಂಡಿದೆಆಕಾಶದ ಕೆನ್ನೆ ಮೇಲಿನ‌ ಕಣ್ಣೀರು ಸಾಗರವಾಗಿದೆ ಸಂಜೆ ದುಃಖದ ಜೊತೆ ಗಾಯಗೊಂಡಿದೆಅಲೆಯ ದುಃಖದ ಕೆನ್ನೀರು ದಂಡೆಗೆ ಸಿಡಿದಿವೆ ಕಣ್ಣೀರನುಂಡ ದಂಡೆ ಹಸಿಯಾಗಿದೆನಿನ್ನ ಭಾವಚಿತ್ರ ಕಡಲಹಾಯಿ ದೋಣಿಯಲ್ಲಿ ‌ಮೂಡಿ ಬಂದಿದೆ ಈ ಸಂಜೆ ಯಾಕೋ ಏನೋ ಕಳೆದು ಕೊಂಡಿದೆ , ಮೌನ ಸಾಗರದ ನಡುವಿನ ದ್ವೀಪ ತಬ್ಬಿದೆ ಕಡಲು ಪಶ್ಚಿಮಕ್ಕೆ ದೀಪ ಮಿಣಕುತ್ತಿದೆಅವು ನಿನ್ನ ಕಣ್ಣುಗಳೇ ಆಗಿವೆ ಸಂಜೆಯ ದುಃಖ ಅಳಿದುಅದರೊಡಲಿಗೆ ಆದ ಗಾಯ ಮಾಯುವ ಕ್ಷಣಕೆ ದಂಡೆ ಕಾದಿದೆಮತ್ತೆ ಅದೇ ದಂಡೆಯಲ್ಲಿ ಯುಗಳ ಹೆಜ್ಜೆ ಗಜ್ಜೆ ಸದ್ದಿಗೆಕಡಲು ಕಾದು ಕುಳಿತಿದೆ ಬರುವ ಹಗಲು ನಗುವ ಹೊತ್ತು ಮರಳಲು ಮನವು ಕಾದಿದೆ (ಗುಲ್ಜಾರ್ ಕವಿತೆಯ ಒಂದು ಸಾಲಿನಿಂದ ಪ್ರೇರಿತ ಕವಿತೆ) ******************************** ನಾಗರಾಜ್ ಹರಪನಹಳ್ಳಿ

ಈ ಸಂಜೆ ಗಾಯಗೊಂಡಿದೆ Read Post »

You cannot copy content of this page

Scroll to Top