ಎಲೆಗಳ ಬಲೆಯಲ್ಲಿ…
ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ… ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್, ಫ್ರೀಸೆಲ್ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್ ಬಾಹರ್ ಅಂದರ್ ಬಾಹರ್ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು ಸುಳ್ಳಲ್ಲ. ಅದೇನೋ ಚಲನಚಿತ್ರ… ಅವನು ಗೆದ್ದರೂ, ಸೋತರೂ ಅವನ ಮಡಿಲಲ್ಲಿ ಲಕ್ಷ್ಮಿ ಬಂದು ಕೂರುತ್ತಾಳೆ; ಆದರೆ ಅವನಂತೆ ಆಡಹೊರಟ ಜನಸಾಮಾನ್ಯರ ಬಳಿ ಅವಳು ಸಿಕ್ಕಂತೆ ಮಾಡಿ ತಪ್ಪಿಸಿಕೊಳ್ಳುವುದೇ ಹೆಚ್ಚು. ಅವಳು ಸಿಕ್ಕಿಕೊಳ್ಳುತ್ತಾಳೋ ಇಲ್ಲವೋ ತಿಳಿಯದು, ಆಡುವವರಂತೂ ಈ ಎಕ್ಕ, ರಾಜ, ರಾಣಿ, ಜೋಕರ್ ಎಂಬ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ಬಲೆಯಲ್ಲಿ ಬಿದ್ದು ತಮ್ಮನ್ನೇ ಸಂತೋಷದಿಂದ, ಸ್ವಾನುರಾಗದಿಂದ ಅರ್ಪಣೆ ಮಾಡಿಕೊಂಡಿರುತ್ತಾರೆ. ಇಸ್ಪೀಟಾಟಕ್ಕೆ ಕಾರಣಗಳು ಹಲವಾರು. ಹೊತ್ತು ಕಳೆಯುವುದಕ್ಕಾಗಿ ಎಂದು ಶುರುವಾಗುವ ನರ್ತನ ಹಲವು ಭಾವಭಂಗಿಗಳನ್ನು ತೋರುತ್ತಾ ಆಡುಗರನ್ನು ತನ್ನೆಡೆಗೆ ಸೆಳೆಯುತ್ತದೆ. ಬೇಸರ ನೀಗಲು… ಗೆದ್ದ ಖುಷಿಯ ಅಮಲು… ಸೋತು ಕಳೆದದ್ದನ್ನು ಕಳೆದಲ್ಲೇ ಛಲದಿಂದ ಮರಳಿ ಹುಡುಕಲು… ಗೆಳೆಯರು ಸಿಕ್ಕ ಖುಷಿಯಲ್ಲಿ… ಆಟದ ಆಕರ್ಷಣೆಯಲ್ಲಿ… ಹೀಗೆ ಹಲವು ವಿನ್ಯಾಸಗಳಲ್ಲಿ ಇಸ್ಪೀಟಿನ ರಾಣಿ ತನ್ನ ರಸಿಕರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ತವಕಿಸುತ್ತಿರುತ್ತಾಳೆ. ಒಮ್ಮೆ ಇವಳ ಮೋಹದಲ್ಲಿ ಸಿಲುಕಿಕೊಂಡವರಿಗೆ ಬುದ್ದಿಯ ಅಂಕುಶವಿಲ್ಲದಿದ್ದರೆ ಅದರಿಂದ ಮುಕ್ತಿಯಿಲ್ಲ. ಅದೆಷ್ಟೋ ಮಂದಿ ಮನೆ, ಮಠ, ಹೆಂಡತಿ-ಮಕ್ಕಳು, ಬಂಧು-ಬಾಂದವರನ್ನು ಕಳೆದುಕೊಂಡು ಬೀದಿ ಪಾಲಾಗಿರುವವರನ್ನು ನಮ್ಮ ಹತ್ತಿರದ ಸ್ನೇಹ ವಲಯದಲ್ಲೇ, ನೆಂಟರಿಷ್ಟರಲ್ಲೇ ಕಂಡಿದ್ದೇನೆ. ʻಊರಿಗೊಂದು ಹೊಲಗೇರಿʼ ಎನ್ನುವ ಗಾದೆಗಿಂತ ʻಊರಿಗೊಂದಾದರೂ ಇಸ್ಪೀಟಿನ ಅಡ್ಡಾʼ ಎನ್ನುವ ಮಾತೇ ಹೆಚ್ಚು ಸಮಂಜಸವೆನಿಸುತ್ತದೆ. ದೊಡ್ಡ ಪಟ್ಟಣಗಳಲ್ಲಾದರೆ ಇಸ್ಪೀಟು ಕ್ಲಬ್ಬು. ಇದರ ಪರಾಕಾಷ್ಠೆಯನ್ನು ನಾನು ನೋಡಿದ್ದು ಅಮೇರಿಕಾದ ಲಾಸ್ ವೇಗಾಸ್‌ನ ಕ್ಯಾಸಿನೋಗಳಲ್ಲಿ. ಅಲ್ಲಿನ ಜೂಜಿನ ಅಡ್ಡಾಗಳಲ್ಲಿ ಬೈಗು ಬೆಳಗೆನ್ನದೆ ಮಂದಿ ತಮ್ಮ ಮುಂದಿನ ಪರದೆಯಲ್ಲಿ ಮುಳುಗಿಹೋಗಿರುತ್ತಾರೆ, ಕಳೆದು ಹೋಗಿರುತ್ತಾರೆ!! ನನ್ನ ಈ ಲೇಖನದ ಉದ್ದೇಶ ಮನೆಮಠ ಕಳೆದುಕೊಂಡವರ ಕರುಣಾಜನಕ ಕತೆಗಳನ್ನು ಹೇಳುವುದಂತೂ ಖಂಡಿತವಾಗಿಯೂ ಅಲ್ಲ. ಒಂದು ಕಾಲದಲ್ಲಿ ಇದು ಬಂಧುಬಳಗದ ನಡುವಿನ ಸೇತುವಾಗಿ ಜನಗಳನ್ನು ಹಿಡಿದಿಡುತ್ತಿದ್ದ ಆಕರ್ಷಣೆಯ ಸಾಧನವಾಗಿದ್ದುದರ ಬಗ್ಗೆ ಕೆಲವು ಪ್ರಸಂಗಗಳನ್ನು ಹೇಳಬೇಕೆಂದಷ್ಟೆ. ಒಂದು ಕಾಲ ಎಂದರೆ ಎಲ್ಲೋ ಹೋಗಿಬಿಡಬೇಡಿ. ನಾನು ಹುಟ್ಟುವುದಕ್ಕೂ ಮುಂಚೆಯೇ ಇತ್ತೋ…? ನನಗೆ ತಿಳಿಯದು. ಅಂತೂ ಒಂದೈವತ್ತು, ಅರವತ್ತು ವರ್ಷಗಳ ಹಿಂದೆ ಎಂದುಕೊಂಡರೆ ಸಾಕು. ಮದುವೆಮನೆಯಲ್ಲಿ ಸೇರುತ್ತಿದ್ದ ನೆಂಟರಿಷ್ಟರು, ಬಂಧು ಬಳಗ ಸೇರಿರುವ ಖುಷಿಗೆ, ದಿಬ್ಬಣ ಮದುವೆ ಮನೆಗೆ ಕಾಲಿಟ್ಟ ಅನತಿಕಾಲದಲ್ಲೇ ತಮಗೊಂದು ಸೂಕ್ತವಾದ ಹೆಚ್ಚಾಗಿ ಯಾರ ಗಮನಕ್ಕೂ ಬಾರದಂತ (ಕಾಫಿ, ಕುರುಕಲು ತಿಂಡಿಗಳ ಪೂರೈಕೆಗೆ ಅನುವಾಗಿರುವಂತ) ಕೋಣೆಯನ್ನು ಆಕ್ರಮಿಸಿಕೊಂಡು ಜಮಖಾನೆ ಹಾಸಿಕೊಂಡು ಇಸ್ಪೀಟಿನ ಕಟ್ಟನ್ನು ಬಿಚ್ಚಿದರೆಂದರೆ, ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಎಂಬ ಭೇದಭಾವವಿಲ್ಲದೆ ಆಟ ಅವಿಶ್ರಾಂತವಾಗಿ ಮುಂದುವರೆದಿರುತ್ತಿತ್ತು. ಅವರ ಭಕ್ತಿ ಪರವಶತೆಯನ್ನು ಕೆಡಿಸಲು ನಿದ್ರಾದೇವಿಯಿಂದಲೂ ಸಾಧ್ಯವಿರಲಿಲ್ಲ ಬಿಡಿ! ಇಂತಲ್ಲಿ ದುಡ್ಡಿನ ಮೊತ್ತ ಹೆಚ್ಚಲ್ಲ. ಆಟವನ್ನು ರಂಗೇರಿಸಲು ಬೇಕಾದಷ್ಟು ಮಾತ್ರ… ಗೆದ್ದರೆ ಹತ್ತು… ಸೋತರೆ ಹತ್ತು… ಎನ್ನುವ ಹಾಗೆ… ಒಡವೆ, ವಸ್ತು, ಮನೆ ಮಠಗಳನ್ನು ಒತ್ತೆ ಇಡುವಂತ ಅಮಲಲ್ಲ. ಖುಷಿಗಾಗಿ ಖುಷಿ.. ಮೋಜಿಗಾಗಿ ಮೋಜು. ಇಸ್ಪೀಟೊಂದು ಖಯಾಲಿಯಷ್ಟೇ. ನನ್ನೊಬ್ಬ ದೊಡ್ಡಮ್ಮನ ಮಗನ ಮದುವೆಯಲ್ಲಿ ಹಿರಿಯಾಕೆಯೊಬ್ಬರು ಮದುವೆ ಹುಡುಗನ ಅಕ್ಕನನ್ನು “ಏನೇ ವಿಜ್ಜಮ್ಮ ನಿನ್ನ ಯಜಮಾನರು ಕಾಣುತ್ತಿಲ್ಲ, ತೀರ ಮೈದುನನ ಮದುವೆಗೂ ಬರಲಿಲ್ಲವೇ?” ಎಂದಿದ್ದರು. “ಅಯ್ಯೋ ಬಂದಿದ್ದಾರೆ ಚಿಕ್ಕಮ್ಮ, ಭಜನೆಯಲ್ಲಿ ಮುಳುಗಿಹೋಗಿದಾರೆ ಅಷ್ಟೇ” ಎಂದಳು ವಿಜಯ. ಮಹಾ ಭಕ್ತಳಾದ ಆಕೆ “ಅಯ್ಯೋ ಯಾವಾಗಿಂದ ನಡೀತಿದ್ಯೆ. ಎಲ್ಲಿ? ನಂಗೊತ್ತಾಗ್ಲಿಲ್ವೆ… ಅದೆಲ್ಲಿ ತೋರ‍್ಸು ಬಾರೆ ಸ್ವಲ್ಪ” ಎನ್ನುತ್ತಾ ಅವಳ ದುಂಬಾಲು ಬಿದ್ದರು. “ಅದು ನೀವು ಮಾಡೋ ಭಜನೆ ಅಲ್ಲ ಬಿಡಿ” ಎನ್ನುತ್ತಾ ಯಾರೋ ಕರೆದರೆಂದು ಅಲ್ಲಿಂದ ಜಾರಿಕೊಂಡಿದ್ದಳು. ಆಕೆ ಬಿಟ್ಟಾರೆಯೇ ಕಂಡಕಂಡವರನ್ನೆಲ್ಲಾ “ಭಜನೆ ನಡೀರಿರೋದು ಎಲ್ಲಿ?” ಎಂದು ತಲೆ ತಿಂದಾಗ ಯಾರೋ ಪುಣ್ಯಾತ್ಮರು ನಡೆಯುತ್ತಿದ್ದ ಕೋಣೆಯ ಬಾಗಿಲಿಗೆ ಕರೆದೊಯ್ದು ತೋರಿಸಿದರು. “ಅಯ್ಯೋ.. ಈ ಅನಿಷ್ಟಾನ ವಿಜ್ಜು ಭಜನೆ ಅಂದಳಲ್ಲಾ” ಎಂದು ಮಮ್ಮಲ ಮರುಗಿದರು. ನನ್ನ ಮದುವೆಯ ನಿಷ್ಕರ್ಷೆಯಾಗುವಾಗ ನಮ್ಮ ಮಾವನವರು “ನಮ್ಮದು ಒಂದು ಬೇಡಿಕೆ ಇದೆ” ಎಂದಿದ್ದರು. ʻಇದುವರೆಗೂ ಏನನ್ನೂ ಕೇಳದವರು ಈಗ ಏನೋ ಬೇಡಿಕೆ ಇಡುತ್ತಿದ್ದಾರಲ್ಲʼ ಎನ್ನುವ ಪ್ರಶ್ನೆಯನ್ನು ನಮ್ಮ ತಾಯಿ, ತಂದೆಯರ ಮುಖದಲ್ಲಿ ನೋಡಿದವರೇ “ಇನ್ನೇನಿಲ್ಲ; ನಮ್ಮ ಕಡೆ ಬರುವ ನೆಂಟರಿಷ್ಟರಲ್ಲಿ ಕೆಲವರಿಗೆ ಇಸ್ಪೀಟಿನ ಖಯಾಲಿ. ರಾತ್ರಿ ಹಗಲು ಅನ್ನದೆ ಮದುವೆ ಮನೆಯಲ್ಲಿ ಇದ್ದಷ್ಟು ಹೊತ್ತೂ ಆಡುತ್ತಿರುತ್ತಾರೆ. ಆಗಾಗ ಅವರಿಗೆ ಕಾಫಿಯೊಂದನ್ನು ಕೊಟ್ಟರೆ ಸಾಕು. ಅವರು ಊಟ, ತಿಂಡೀನೂ ಕೇಳಲ್ಲ” ಎಂದು ದುಗುಡಗೊಂಡಿದ್ದವರ ಮುಖಗಳಲ್ಲಿ ನಗೆಯರಳಿಸಿದ್ದರು. ಅವರು ಹೇಳಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ ಬಿಡಿ; ಹುಷಾರು ತಪ್ಪಿದ್ದ ಎಂಟು ತಿಂಗಳ ಮಗುವನ್ನು ಡಾಕ್ಟರ ಬಳಿಗೆ ಕರೆದೊಯ್ಯಲು ನನ್ನ ವಾರಗಿತ್ತಿ, ಆಟದಲ್ಲೇ ಮುಳುಗಿಹೋಗಿದ್ದ ಭಾವನನ್ನು ಆಡುತ್ತಿರುವಲ್ಲಿಗೇ ಹೋಗಿ ಎಬ್ಬಿಸಿ ಕರೆದುಕೊಂಡು (ಎಳೆದುಕೊಂಡು?) ಬರಬೇಕಾಯಿತು! ಮದುವೆ ಮುಗಿಸಿಕೊಂಡು ಹಿಂತಿರುಗುವ ಮುನ್ನ (ಯಾವ ಹೊತ್ತಿಗೆ ಯಾವ ಭಕ್ಷ್ಯ ಬಡಿಸಿದ್ದರೆಂದು ಅವರು ಗಮನಿಸಿದ್ದರೋ ಇಲ್ಲವೋ) ಅವರ ಆಟವು ಸಾಂಗವಾಗಿ ನಡೆಯಲು ಸಹಕರಿಸಿ ನಿಯತವಾಗಿ ಕಾಫಿತಿಂಡಿಗಳನ್ನು ಪೂರೈಸಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ ತೃಪ್ತರಾಗಿ ಹೊರಟರು. ಇನ್ನು ನನ್ನ ನಾದಿನಿಯ ಮದುವೆಯಲ್ಲಿ ಬೀಗರೌತಣವಾದ ತಕ್ಷಣ ನಾವು ಛತ್ರವನ್ನು ಬಿಟ್ಟುಕೊಡಬೇಕಿತ್ತು. ಸಂಜೆ ಅಲ್ಲಿ ಇನ್ನೊಂದು ಕಡೆಯವರ ಆರತಕ್ಷತೆ ನಡೆಯುವುದಿತ್ತು. ಹಾಗಾಗಿ ನಾವು ಬೆಳಗಿನಿಂದಲೇ ಸಾಧ್ಯವಾದಷ್ಟು ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಾ ನಾವು ಹೊರಡುವಾಗ ತೆಗೆದುಕೊಂಡು ಹೋಗಬಹುದಾದಷ್ಟನ್ನು ಮಾತ್ರ ಉಳಿಸಿಕೊಂಡಿದ್ದೆವು. ಊಟವಾದ ತಕ್ಷಣ ಪರಸ್ಪರ ಬೀಳ್ಕೊಂಡು ಅಲ್ಲಿಂದ ಗಂಡು ಹೆಣ್ಣು ಇಬ್ಬರ ಕಡೆಯವರೂ ಹೊರಟರೂ ಇನ್ನೂ ಇಸ್ಪೀಟಿನಾಟ ಮುಗಿದಿರಲಿಲ್ಲ. ಛತ್ರದವರು ಜಮಖಾನೆಯನ್ನೂ ವಶಕ್ಕೆ ತೆಗೆದುಕೊಂಡ ಮೇಲೂ ನೆಲದ ಮೇಲೇ ಇನ್ನೊಂದಿಷ್ಟು ಕಾಲ ಆಟವನ್ನು ಮುಂದುವರೆಸುತ್ತಿದ್ದವರು ಸಂಜೆಯ ಕಾರ್ಯಕ್ರಮದವರು ತಮ್ಮ ಸರಕುಗಳನ್ನೆಲ್ಲಾ ತೆಗೆದುಕೊಂಡು ಬಂದು ಎಬ್ಬಿಸಿದಾಗ, ನಮ್ಮ ಕಡೆಯವರೆಲ್ಲರೂ ಛತ್ರ ಬಿಟ್ಟು ಬಹಳ ಸಮಯವಾಗಿದೆಯೆನ್ನುವುದನ್ನು ಮನಗಂಡು ಮನಸ್ಸಿಲ್ಲದ ಮನಸ್ಸಿನಿಂದ ಎದ್ದರಂತೆ! ಹಾಗೆ ಎಬ್ಬಿಸದೇ ʻಏನೋ ಪಾಪ ಆಡಿಕೊಂಡಿರಲಿʼ ಎಂದು ಬಿಟ್ಟಿದ್ದರೆ, ಆ ಮದುವೆ ಮುಗಿದದ್ದೂ ಗೊತ್ತಾಗುತ್ತಿರಲಿಲ್ಲ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ! ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ|| ಡಿ. ಶಂಕರನಾರಾಯಣ್ ಅವರು ನನ್ನ ಅತ್ತೆಯ ಸ್ವಂತ ತಮ್ಮ, ನನ್ನ ಪತಿಗೆ ಸೋದರಮಾವ. ಅವರ ಓದುವ ಕಾಲದಲ್ಲಿ ನಮ್ಮ ಮಾವನವರು ಅವರಿಗೆ ತುಂಬಾ ಸಹಾಯ ಮಾಡಿದ್ದರಂತೆ. ದೆಹಲಿಯ ಯು.ಜಿ.ಸಿ.ಯಲ್ಲಿ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ಅವರು ಬೆಂಗಳೂರಿಗೆ ಬಂದಾಗೆಲ್ಲಾ ಅವರ ಕಛೇರಿಯ ಕೆಲಸವು ಮುಗಿದ ನಂತರ ಒಂದಷ್ಟಾದರೂ ಸಮಯವನ್ನು ಇಲ್ಲಿದ್ದ ಬಂಧುಬಾಂಧವರೊಡನೆ ಇಸ್ಪೀಟಾಟದಲ್ಲಿ ಕಳೆದು ತೆರಳುತ್ತಿದ್ದರು. ಅವರ ವೇಳಾಪಟ್ಟಿ ಸಕ್ಕರೆಯ ಜಾಡು ಹಿಡಿಯುವ ಇರುವೆಯಂತೆ ಪ್ರಿಯ ಬಂಧುಗಳೆಲ್ಲರಿಗೂ ತಿಳಿದು ಒಟ್ಟಾಗಿ ಸೇರಿ ಇಸ್ಪೀಟಿನ ಕಟ್ಟಿಗೆ ಬಂಧ ವಿಮೋಚನೆ ಮಾಡಿ ಆನಂದ ಮಹೋತ್ಸವವನ್ನು ಆಚರಿಸುತ್ತಿದ್ದರು. ಅಂತೆಯೇ ಆ ಕಾಲದಲ್ಲಿ ನಮ್ಮ ಬಂಧು, ಬಳಗದಲ್ಲಿ ಯಾರು ದೆಹಲಿಗೆ ಹೋದರೂ ಅವರ ಮನೆಯಲ್ಲೇ ವಾರ(ತಿಂಗಳು)ಗಟ್ಟಲೆ ಉಳಿದುಕೊಂಡು ದೆಹಲಿಯ ಸುತ್ತಮುತ್ತಲನ್ನು ನೋಡಿಕೊಂಡು ಬರುತ್ತಿದ್ದರು. ಬೆಳಗ್ಗೆಯೆಲ್ಲಾ ಪ್ರೇಕ್ಷಣೀಯ ಸ್ಥಳಗಳ ದರ್ಶನ; ಸಂಜೆಯಾಯಿತೆಂದರೆ ಇಸ್ಪೀಟ್ ರಾಣಿಯ ನರ್ತನ! ನನ್ನ ಮಾವನವರು ತೀರಿಕೊಂಡಾಗ ಈ ಸೋದರಮಾವ ದೆಹಲಿಯಿಂದ ಗುಬ್ಬಿಗೆ ಬಂದಿದ್ದವರು, “ವಾಸಣ್ಣ ಸತ್ತ ಜಾಗದಲ್ಲಿ ನಾವು ನಿದ್ದೆ ಮಾಡಿದರೆ ಅವನ ಆತ್ಮಕ್ಕೆ ಶಾಂತಿ ಸಿಗೋದಿಲ್ಲ. ಹಾಗಾಗಿ ನಾವೆಲ್ಲರೂ ಕ್ರಿಯಾ ಕಲಾಪಗಳು ಮುಗಿದು ಈ ಕೋಣೆಗೆ ಬಾಗಿಲು ಹಾಕುವ ತನಕ (ಮಾವನವರು ಸತ್ತ ಘಳಿಗೆ ಕೆಟ್ಟ ನಕ್ಷತ್ರವಾದ್ದರಿಂದ ಐದು ತಿಂಗಳು ಬಾಗಿಲು ಹಾಕಬೇಕಿತ್ತು) ದುಃಖವನ್ನು ಮರೆತು, ದಣಿವರಿಯದೆ ಇಸ್ಪೀಟಾಡಿ, ತನ್ಮೂಲಕ ಗತಿಸಿದ ಹಿರಿಯರಿಗೆ ಗೌರವವನ್ನು ಕೊಡೋಣ” ಎನ್ನುವ ಠರಾವನ್ನು ಹೊರಡಿಸಿದರು. ಅಷ್ಟು ಹಿರಿಯರ ಬಾಯಿಂದ ಬಂದ ಅಂತಹ ಮುತ್ತಿನಂತ ಅದ್ಭುತ ಮಾತಿಗೆ ಎಂತಾದರೂ ಅಗೌರವವನ್ನು ಸೂಚಿಸಲಾದೀತೇ…?! ಸುಮಾರು ಮೂರ್ನಾಲ್ಕು ಚದುರಡಿಯಿರುವ ಆ ಕೋಣೆಯಲ್ಲಿ ಪಠಪಠಪಠಣ ಆರಂಭವಾಯಿತು. ನೆಂಟರು ಬಂದ ಹಾಗೆಲ್ಲಾ ವೃತ್ತ ದೊಡ್ಡದಾಗುತ್ತಾ ಹೋಯಿತು. ಆಟದ ಖಯಾಲಿಯಿರುವ ಒಬ್ಬಿಬ್ಬರು ಹೆಂಗಸರೂ ಹಿಂದೆ ಬೀಳದೆ ಸೇರಿಕೊಂಡರು. ಊರಿನ ಹಿರಿಯರು, ವಾಸಣ್ಣನ ಆತ್ಮೀಯರೂ ಕೈ ಹಾಕದಿದ್ದರೆ ಅಪಚಾರವಲ್ಲವೇ! ಅವರೂ ತಮ್ಮ ಸೇವೆ ಸಲ್ಲಿಸಲು ಎಲೆಗಳನ್ನು ಹಿಡಿದರು. ಹಿರಿಯರ ಜೊತೆಗೆ ಎಲೆಗಳನ್ನು ಹಿಡಿಯುವಷ್ಟು ದಾಷ್ಟ್ಯವಿಲ್ಲದಿದ್ದರೂ ಕಿರಿಯರೂ ತಮ್ಮ ಕೈಲಾದಷ್ಟು ಆಡಿ ಸತ್ತ ಹಿರಿಯ ಚೇತನಕ್ಕೆ ಶಾಂತಿ ಕೋರಬೇಡವೇ. ಅಲ್ಲೇ ಇನ್ನೊಂದು ಗುಂಪು ಹುಟ್ಟಿಕೊಂಡಿತು. ಹಾಗೆಯೇ ಮತ್ತೊಂದು ಗುಂಪಾಯಿತು. ಜಾಗ ಸಾಲದೆ ವಾಸಣ್ಣನ ಪ್ರತೀಕವಾಗಿ ಉರಿಯುತ್ತಿದ್ದ ದೀಪ ಜನ ಬಂದ ಬಂದ ಹಾಗೆ ನಿಧಾನವಾಗಿ ಸರಿ ಸರಿಯುತ್ತಾ ಅಂತೂ ಆ ದೊಡ್ಡ ಕೋಣೆಯ ಮೂಲೆಯಲ್ಲಿ ಜಾಗ ಮಾಡಿಕೊಂಡಿತು. ಅಂತೂ ಕಡೆಗೊಂದು ದಿನ ಕಿಟಕಿಯ ಕಟ್ಟೆಯನ್ನೇರಿ ಕುಳಿತು ಕೋಣೆಯ ತುಂಬಾ ಕೇಳುವ ಎಲೆಗಳ ಇನಿದಾದ ಶಬ್ದದ ಆನಂದಕ್ಕೆ ತಲೆತೂಗುತ್ತಾ ಸಾಕ್ಷಿಯಾಗತೊಡಗಿತು. ಹೀಗೆ ತನ್ನ ಪ್ರತಿಷ್ಠಿತ ತಮ್ಮನ ಸೂಚನೆಯ ಮೇರೆಗೆ ಬಂದವರೆಲ್ಲಾ ಗಂಡನ ಆತ್ಮಕ್ಕೆ ಎಷ್ಟೊಂದು ಹಿತವಾಗಿ, ಅವಿರತವಾಗಿ ಶಾಂತಿ ಕೋರುತ್ತಿರುವಾಗ ಪಾಪ ನಮ್ಮತ್ತೆ…, ಇದು ತನ್ನ ಗಂಡನ ಸಾವೆಂಬುದನ್ನೂ ಮರೆತು ಆಗಾಗ ಆ ಗುಂಪಿಗೆ ಕಾಫಿ ಬೆರಸಿಕೊಡುವುದಕ್ಕೆ ನಿಲ್ಲಬೇಕಾಯಿತು… ನಿಂತರು! ಎನ್ನುವುದು ನಮ್ಮ ಗುಬ್ಬಿಯ ಮನೆಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದೆ! ಅಂತೂ ನನ್ನ ಮಾವನವರ ಆತ್ಮಕ್ಕೆ ತೃಪ್ತಿಯಾಯಿತೇ? ಆಗಿರಬಹುದು…. ಏಕೆಂದರೆ ಇಸ್ಪೀಟಾಟದಿಂದ ಆಯಿತೋ ಇಲ್ಲವೋ, ಸದಾ ಮನೆತುಂಬ ಜನರಿರಬೇಕು ಎನ್ನುವುದು ಅವರ ಒಂದು ಸ್ಥಿರವಾದ ಆಸೆ. ಊಟ, ತಿಂಡಿಯ ಹೊತ್ತಿನಲ್ಲಿ ಅದೆಷ್ಟು ಊಟದೆಲೆ ಬೀಳುತ್ತಿತ್ತೋ ಅಷ್ಟು ಖುಷಿ ಅವರಿಗೆ. ಹಳೆಯ ತಲೆಮಾರಿನ ಅನಿರ್ಬಂಧಿತ, ಅಮಾಯಕ ಮುಗ್ಧ ಪ್ರೀತಿ, ವಿಶ್ವಾಸದ ಪ್ರತೀಕದಂತಿದ್ದವರಿಗೆ ಮನೆಯೆಲ್ಲಾ ಸದಾ ಗಿಲಿಗಿಲಿಗುಟ್ಟುತ್ತಿರಬೇಕು; ನಗುವಿಂದ ತುಂಬಿರಬೇಕು ಎನ್ನುವ ಮಹದಾಸೆ. ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ʻಕಾಫಿ ಬೇಕೆʼ ಎಂದು ಕೇಳಿ ಕೊಟ್ಟವರಲ್ಲ; ʻಈಗ ತಾನೆ ಕುಡಿದು ಬಂದೆ, ಬೇಡʼ ಎಂದರೂ ಅದು ನಿಮ್ಮನೆಯ ಕಾಫಿ, ನಮ್ಮನೆಯದು ಆಗಿಲ್ಲʼ ಎನ್ನುತ್ತಾ ʻಹೆಂಗಸರಿಗೆ ಅರಿಶಿನ ಕುಂಕುಮ ಕೊಡುವುದು ಎಷ್ಟು ಮುಖ್ಯವೋ, ಮನೆಗೆ ಬಂದವರಿಗೆ ಕಾಫಿ ಕೊಡುವುದೂ ಅಂತದೇ ಸತ್ಸಂಪ್ರದಾಯʼ ಎಂದು ಬಲವಾಗಿ ನಂಬಿ ಅಂತೆಯೇ ನಡೆದುಕೊಂಡಿದ್ದವರು. ಅವರು ಸತ್ತ ದಿನ ಐವತ್ತು ಲೀಟರ್ ಹಾಲು, ನಂತರ ದಿನವೂ ಮೂವತ್ತು ಲೀಟರ್ ಹಾಲು ಬರಿಯ ಕಾಫಿಗೇ ಖರ್ಚಾಯಿತು ಎಂದರೆ ಅವರಿಗೆ ಖಂಡಿತವಾಗಿಯೂ ತೃಪ್ತಿಯಾಗಿರಲೇ ಬೇಕು! ಕಾಫಿಯ ಕತೆಯೇ ಇಷ್ಟಾದರೆ, ಇನ್ನು ಊಟ, ತಿಂಡಿಯ ವಿವರಣೆ ಬೇಕಿಲ್ಲ ಅಂದುಕೊಳ್ಳುತ್ತೇನೆ. ಅಷ್ಟು ದಿನಗಳೂ ಭಾವಮೈದುನನ ವರಸೆಯವರಾದ ವೆಂಕಟರಾಮು ಆ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿ, ಅಡುಗೆಯ ಕೆಲಸವಾದ ನಂತರ ತಾವೂ ಮುಂದಿನ ಕೋಣೆಯ ಪವಿತ್ರ ಪತ್ರಗಳಿಗೊಂದು ಕೈಹಾಕಿ ತಮ್ಮ ಶ್ರದ್ಧಾಂಜಲಿಯನ್ನೂ ಅರ್ಪಿಸಿ ಕೃತಾರ್ಥರಾದರು!! “ಪಾಪ, ಅವನೂ ಸ್ವಲ್ಪ ಹೊತ್ತು ಆಡಲಿ” ಎನ್ನುವ ಸದುದ್ದೇಶದಿಂದ ಮರುದಿನಕ್ಕೆ ಬೇಕಾಗುವ ತರಕಾರಿಯನ್ನು ಮನೆಯ ಹೆಂಗಸರು ಹೆಚ್ಚಿ ಅಣಿಮಾಡಿ ಆತನ ಈ ಪವಿತ್ರ ಕೈಂಕರ್ಯಕ್ಕೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದರು. ನಮ್ಮ ಅತ್ತೆಯ




