ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜೀವನ

ಕವಿತೆ ಜೀವನ ಭಾರತಿ ರವೀಂದ್ರ ನೋವು ನಲಿವುಗಳನೆರಳು ಬೆಳಕಿನ ಜೋಕಾಲಿ ಈ ಜೀವನ. ಹುಣ್ಣಿಮೆಯ ಕಂಡುಉಕ್ಕಿ ಬರುವ ಸಾಗರ ದಷ್ಟೇ ಅಗಾಧ ಈ ಜೀವನ. ಸುರಿಯೋ ಸೋನೆಗೆಹೆಜ್ಜೆ ಹಾಕೋ ನವಿಲಿನಕಾಲ್ಗೆಜ್ಜೆಯ ದನಿಯ ಹಾಗೆಸದ್ದೇ ಇಲ್ಲದ ಹೆಜ್ಜೆಯಸಂಗೀತ ದಂತೆ ಈ ಜೀವನ. ಬಡತನದ ಬೇಗೆ ಇರಲಿಸಿರಿತನದ ಸೊಬಗಿರಲಿಪ್ರೀತಿಯ ಹೊನಲಾಗಲಿಈ ಜೀವನ. ಸಂತೃಪ್ತಿಯ ಮನಕೆಸಿರಿತನದ ಸೋಗು ಇರದು ಒಲವೇ ನಲಿವುಈ ಜೀವನ **********************************

ಜೀವನ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ  ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು  ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, ನಾ ನಿನ್ನ ನೆನೆವಾಗ// ಭಾವಲೋಕದೀ ಸರಿತ ಸಲ್ಲಲಿತ ಕವನ ಮರುಳಿರಿಸಿ ಹರಿಯುತಿದೆ /ಶಾಲಿನಿಯ ಬಂಧದಲೀ ಒಲವ ಸಿಂಚನ ಕಚಗುಳಿಯಿಡುತಿದೆ ನಾ ನಿನ್ನ ನೆನೆವಾಗ// ********************************************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ನೆನಪಾಗುತ್ತಿದೆ ಚಂದ್ರು ಪಿ ಹಾಸನ್ ಮತ್ತೆ ನೆನಪಾಗುತ್ತಿದೆ, ನನ್ನ ಬಾಲ್ಯದೊಳುಕಳೆದ ದಿನಗಳು ಸುಂದರ ಆ ಮಧುರ ಕ್ಷಣಗಳುಕೆದಕಿದೆನು ನಾ ಇಂದು ಒಂದೊಂದು ಮನದೊಳುಚಿತ್ರಿಸಲೊರಟೆ ಸಾಲುಗಳಲ್ಲಿ ಆಕ್ಷಣಗಳ ಮುದದೊಳು ಮತ್ತೆ ನೆನಪಾಗುತ್ತಿದೆ, ನಾಲ್ಕೆಜ್ಜೆಯ ಮುಗ್ದ ಸಾಲುಅಮ್ಮನ ತೋಳು ಅದು ಸಂತಸದ ಸಾಲುರಾಜ ಸಿಂಹಾಸನ ನನ್ನ ತಾಯಿಯ ಮಡಿಲುಕುಣಿದು ಕುಪ್ಪಳಿಸಿದೆ ಪಡೆದೆ ಕೈತುತ್ತು ಅಲ್ಲಿ ನೆನಪಾಗುತ್ತಿದೆ ವಿದ್ಯಾರ್ಜನೆಯ ಆರಂಭಪ್ರಾಥಮಿಕ ಶಾಲೆಯ ಗಂಟೆ ಸದ್ದುಕೇಳಿದೊಡನೆ ಅಡ್ಡಗದ್ದೆ ಬಯಲಲ್ಲಿಓಡುತ್ತಿದ್ದೆವು ಗುಂಪಾಗಿ ಎದ್ದು-ಬಿದ್ದು ಮತ್ತೆ ನೆನಪಾಗುತ್ತಿದೆ, ಶಾಲೆಯ ಸಂಜೆಗಳುಅಣ್ಣನ ತೋಳು ಪ್ರತಿಸಂಜೆ ನಾ ಕೊಟ್ಟ ಗೋಳುದಿನಂಪ್ರತಿ ಅವಂಗೆ ನನ್ನ ಕಾಯುವ ಕಾರ್ಯರಸ್ತೆಬದಿ ಶುದ್ಧಕ್ಕಾಗಿ ನನ್ನ ಚಡ್ಡಿ ಹಿಡಿವಾಗ ಶೌರ್ಯ ಮತ್ತೆ ನೆನಪಾಗುತ್ತಿದೆ ರಾತ್ರಿಯ ಊಟಸಂಜೆಗೆ ಬಂದ್ ಆಗ್ತಿತ್ತು ಎಲ್ಲ ಆಟ-ಪಾಠಅಜ್ಜಿ ಹಾಸಿಗೆಯಲ್ಲಿ ನುಸುಳಿ ಗೊರಕೆ ಗೋಟರ್ ಗೊಟಮುಂಜಾನೆ ನಾಲ್ಕ್ಘಂಟೆಗೆ ಅಮ್ಮಂಗೆ ಗಿಳಿಪಾಠ ಮತ್ತೆ ನೆನಪಾಗುತ್ತಿದೆ, ಶಾಲೆಯ ಅಡ್ಡರಸ್ತೆಆ ಹಾದಿಯಲ್ಲಿ ಸಾಗಿದರೆ ಕಳೆಯುವುದೆಲ್ಲಾ ಸುಸ್ತುಅಲ್ಲೊಂದಿತ್ತು ಹುಣಸೆ, ಮಾವು, ನೇರಳೆ ಮರಪ್ರತಿ ಸೀಜನ್ ನಲ್ಲೂ ನಮ್ಮದೇ ರಾಜ್ಯಭಾರ ಮತ್ತೆ ನೆನಪಾಗುತ್ತಿದೆ, ಪರೀಕ್ಷೆಗಳ ಪ್ರಗತಿ ಪತ್ರಮಾರ್ಕ್ಸ್ ಕಾರ್ಡ್ ನಲ್ಲಿ ಅಂಕಗಳು ಕಡಿಮೆ ಬಂದದ್ದುಎಷ್ಟು ಬಾರಿ ಅಪ್ಪನ ಭಯದಲ್ಲಿ ತೋರಿಸದೆ ಕುಳಿತದ್ದುಬೆಳಗ್ಗೆ ಹೊರಡುವ ಸಮಯದಲ್ಲಿ ಅಮ್ಮನ ಕಾಲಿಡಿದಿದ್ದು ಮತ್ತೆ ನೆನಪಾಗುತ್ತದೆ, ಗದ್ದೆಯಲ್ಲಿನ ಆಟೋಟಭಾನುವಾರದಿ ನಡೆಯುತ್ತಿತ್ತು ನಮ್ಮದೇ ಒಂದು ಕೂಟಮುಂದಾಳತ್ವ ಸಿಗುತ್ತಿತ್ತು ಮಾಡಿಸಿದಂತೆ ಮಾಟಯಾಕಂದ್ರೆ ನಾ ಆಡ್ತಿದ್ದೆ ಚೆನ್ನಾಗಿ ಮರಕೋತಿಯಾಟ ಮತ್ತೆ ನೆನಪಾಗುತ್ತಿದೆ, ಜಾತ್ರೆ ಹಬ್ಬಗಳುಬಗೆಬಗೆಯ ತಿಂಡಿಗಳ ಬಿಡ ಬಿಡದೆ ಸವಿದಿದ್ದುಬಚ್ಚಿಟ್ಟಿದ್ದ ತಿನಿಸುಗಳ ಒಂದೊಂದೇ ಕದ್ದದ್ದುಎಂಟಾಣೆ ಹಿಡಿದು ಜಾತ್ರೆಯೆಲ್ಲಾ ಸುತ್ತಿದ್ದು ಮತ್ತೆ ನೆನಪಾಗುತ್ತಿದೆ ಕಾಲೇಜಲ್ಲಿ ನನ್ನ ಸ್ಥಿತಿಗತಿಅಲ್ಲಿ ಕಾಡಿತು ಪ್ರತಿದಿನ ವಿಜ್ಞಾನ ಕೋರ್ಸ್ನ ಭೀತಿಪ್ರಾರಂಭದಲ್ಲಿ ಹೃದಯದಲ್ಲಿ ಅಡಗಿಸಿದ್ದೆ ಚೊಚ್ಚಲ ಪ್ರೀತಿನಿಧಾನ ಹಂತದಲ್ಲಿ ಪಡೆದು ಜೀವನದಿ ಪ್ರಗತಿ ಮತ್ತೆ ಮತ್ತೆ ನೆನಪಾಗುತ್ತಿದೆ ಕಾಲೇಜು ಪಯಣಬಸ್ಸಿನಲ್ಲಿ ರಶ್ಶಾದರೆ ಬಾಗಿಲಲ್ಲಿ ನೇತಾಡ್ತಾ ನಮನಗೆಳತಿಯರ ಸೆಳೆಯಲು ಮಾಡ್ತಿದ್ದೆ ಆರೋಗ್ಯಕರ ಗಮನಸ್ನೇಹದ ಕಡಲಲ್ಲಿ ಹೇಗೋ ಸಾಗಿಸಿದ ಪಾರ್ವತಿರಮಣಾ ಮತ್ತೆ ನೆನಪಾಗುತ್ತಿದೆ ಪ್ರತಿ ಹೆಜ್ಜೆಗಳಲ್ಲಾಟಒಂದೊಂದು ಪರಿಸರದಲ್ಲೂ ಅನುಭವದ ಪಾಠಶಿಕ್ಷಕನಾಗಿ ಕಲಿಸಿದ ಕಂಡದ್ದೆಲ್ಲ ಬರೆಯುವ ಚಟಪರ ವಾಯಿತು ವಿಧಿಯಾಟ ಕಲಿಸಿತು ನೀತಿಪಾಠ ಮತ್ತೆ ನೆನಪಾಗುತ್ತಿದೆ ಬಾಲ್ಯದ ಸ್ನೇಹಜೀವಿಗಳುಕಂಡಾಗ ಹಾಯ್ ಹೋಗುವಾಗ ಬಾಯ್ ಅನ್ನೋ ಸಿಹಿ ಕ್ಷಣಗಳುಕಾಲಚಕ್ರವು ಎಲ್ಲವ ತಿರುಗಿಸಿ ಮರೆಸಿತುಆದರೆ ಮನಸ್ಸಿನ ಪುಟದಲ್ಲಿ ಅಚ್ಚರಿಯಾಗಿವೆ ನೆನಪುಗಳು ಮತ್ತೆ ನೆನಪಾಗುತ್ತಿದೆ ನೆನಪುಗಳ ನೆನಪುಗಳು ****************************************

ಕಾವ್ಯಯಾನ Read Post »

ಇತರೆ, ಪ್ರವಾಸ ಕಥನ

ಪ್ರವಾಸ ಕಥನ

ಜಾರಕಬಂಡೆಕಾವಲ್ ವೃಕ್ಷ ಉದ್ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ  ನಿಸರ್ಗಾರಾಧಕರಿಗೆ ಆಗಾಗ ತವರೂರು ನೆನಪಾಗುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನಗರ ನರಕ ಸಮಾನವೆಂದೆನಿಸಿ ಬಿಡುತ್ತದೆ.  ಉಸಿರು ಕಟ್ಟುವ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ವಾರಕ್ಕೊಮ್ಮೆಯಾದರೂ ಎಲ್ಲಾದರೂ ನಿರ್ಜನ ಹಾಗೂ ಪ್ರಕೃತಿಯಿರುವಲ್ಲಿ ಕಾಲಕಳೆಯ ಬೇಕೆನಿಸುವುದರಲ್ಲಿ ತಪ್ಪೇನಿದೆ.ನಗರಗಳು ಕದಂಬ ಬಾಹುವಿನಂತೆ ಹಳ್ಳಿ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು  ಬೆಳೆಯುತ್ತಿರುವಾಗ ಪಶ್ಚಿಮಘಟ್ಟಗಳಿಂದ ಬಂದ ನಮಗೆ ಮರಗಿಡಗಳ ಹಾಗೂ ಹಕ್ಕಿಗಳ ಕಲರವ ನೀರಿನ ಜುಳುಜುಳು ನಾದ ನೆನಪಾಗದೇ ಉಳಿಯಲು ಸಾಧ್ಯವೇ ? ಅಕ್ಟೋಬರ್ ಇಪ್ಪತ್ತಾರನೇ ದಿನದಂದು ನಮ್ಮ ಮನೆಯಿಂದ ಸುಮಾರು ಇಪ್ಪತ್ತು ಮೈಲು ದೂರದಲ್ಲಿರುವ  ವೃಕ್ಷ ಉದ್ಯಾನಕ್ಕೆ ಹೊರಟೆವು.  ಸ್ವಲ್ಪ ನಗರದ ವಾಹನ ದಟ್ಟಣೆ ಕಳೆದ ತಕ್ಷಣ ಮರಗಳ ಸಾಲುಗಳು ನಮ್ಮನ್ನು ಕೈಬೀಸಿ ಕರೆದವು. ನಗರದಿಂದ ಅನತಿ ದೂರದಲ್ಲಿ ಇದ್ದ ಈ ವೃಕ್ಷಗಳು ಸ್ವೇಚ್ಛೆಯಾಗಿ ನೀಳವಾಗಿ ಎತ್ತರವಾಗಿ ವಿಸ್ತಾರವಾದ ಈ ಪ್ರದೇಶದಲ್ಲಿ ಕಂಗೊಳಿಸುತ್ತಿದ್ದವು. ವಾವ್ ಎನ್ನುವ ವಾತಾವರಣ ಹಾಯ್ ಎನ್ನಿಸಿದ್ದುಇದೇ ರಾಮಗೊಂಡನ ಹಳ್ಳಿಯಲ್ಲಿರುವಂತಹ  ‘ ಜಾರಕಬಂಡೆ ಕಾವಲ್ ವೃಕ್ಷ ಉದ್ಯಾನ ವನ ‘. ಇದು ನಿಸರ್ಗ ಪ್ರಿಯರಿಗೆ ಹೇಳಿಸಿದ ತಾಣ. ಸುಮಾರು ಸಾವಿರ ಹೆಕ್ಟೇರ್ ಜಾಗವನ್ನು ಒಳಗೊಂಡ ಈ ಉದ್ಯಾನವನದಲ್ಲಿ ಸುಮಾರು 5000 ಸಸ್ಯ ಪ್ರಬೇಧ‌ಗಳಿವೆ.ಇಕ್ಕೆಡೆಗಳಲ್ಲಿ ಮರ ಹಾಗೂ ಅಲ್ಲಲ್ಲಿ ದಣಿವು ತಣಿಸಿಕೊಳ್ಳಲು ಕಲ್ಲು ಆಸನಗಳೂ ಇವೆ. ಈ ಉದ್ಯಾನವನವನ್ನು ತುಂಬಾ ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದಾರೆ. ಇದರ ಒಳಗಡೆ ಹಳ್ಳಿಯಲ್ಲಿ ಇರುವಂತಹ ಮಣ್ಣಿನ ರಸ್ತೆ , ಕಾಲುದಾರಿ ,ವಿವಿಧ ರೀತಿಯ ಗಿಡಗಳು ಪೊದೆಗಳು ಹೀಗೆ ನಡೆದಾಡುವ ಅಭ್ಯಾಸ ಇರುವವರಿಗೆ ಮನೋಲ್ಲಾಸವನ್ನು ನೀಡುತ್ತದೆ. ಅಲ್ಲಲ್ಲಿ ಕಣ್ತಣಿಸುವ ಮಲೆನಾಡಿನ ಸಸ್ಯಗಳನ್ನು ನಾವು ಕಾಣಬಹುದು. ನಾವು ಬಾಲ್ಯದಲ್ಲಿ ತಿನ್ನುತ್ತಿದ್ದ ಕೆಲವೊಂದು ಗಿಡಗಳೂ ಅಲ್ಲಿ ಫಲಭರಿತವಾಗಿ ಕಂಡು ಬಂದವು. ಪಕ್ಷಿ ಪ್ರಿಯರಿಗೂ ಅದ್ಭುತ ಸ್ಥಳ. ಅಲ್ಲಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೋದರೆ ಅಲ್ಲಿ ಚಿಟ್ಟೆಗಳ ಪ್ರಪಂಚ ಇರುವುದರಿಂದ  ವರ್ಣರಂಜಿತ ವಿವಿಧ ರೀತಿಯ ಚಿಟ್ಟೆಗಳನ್ನೂ ಕಾಣಬಹುದು.ಬೈಸಿಕಲ್ ಸವಾರರಿಗೆ ಮತ್ತು ಕಾಲುನಡಿಗೆ ಮಾಡುವವರಿಗೆ ಮಾತ್ರ ಅಲ್ಲಿ ಪ್ರವೇಶವಿರುತ್ತದೆ. ಸುಮಾರು ಏಳೂವರೆ ಮೈಲಿಯಷ್ಟು ನಡಿಗೆ.  ತುಂಬಾ ವಿಸ್ತಾರವಾದ ಜಾಗವಾಗಿರೋದ್ದರಿಂದ ಒಬ್ಬರೇ ಹೋಗುವುದಕ್ಕಿಂತ  ಜೊತೆಯಲ್ಲಿ ಹೋಗುವುದು ಸುರಕ್ಷಿತ .ಮುಖ್ಯದಾರಿಯ ನಂತರ ಕಾಲು ದಾರಿಗಳಲ್ಲಿ ನಡೆಯುತ್ತಾ ನಡೆಯುತ್ತಾ ಮೈಮರೆತರೆ ಪುನ: ಹೊರಗಡೆ ಬರುವುದು ಕಷ್ಟವಾಗ ಬಹುದು. ಮಖ್ಯದ್ವಾರದಲ್ಲಿ ಇರುವ ಸಿಬ್ಬಂಧಿಗಳಲ್ಲಿ ವಿಚಾರಿಸಿಕೊಂಡು ನಿಮ್ಮ ಪ್ರಯಾಣವನ್ನು ಶುರು ಮಾಡುವುದು ಒಳ್ಳೆಯದು. ಬೆಳಿಗ್ಗೆ ಆರು ಗಂಟೆಯಿಂದ ಹತ್ತರವರೆಗೆ ಹಾಗೂ ಸಂಜೆ ಮೂರು ಗಂಟೆಯಿಂದ ಆರರವರೆಗೆ ತೆರೆದಿರುವುದರಿಂದ  ಸೂರ್ಯೋದಯ  ಮತ್ತು ಸಂಜೆಯ ಸೂರ್ಯಾಸ್ತದ ಸಮಯವನ್ನು ಆನಂದಿಸ ಬಹುದು. ನಾವು ಮುಸ್ಸಂಜೆಯಲ್ಲಿ ಹಕ್ಕಿಗಳ ಕಲರವದ ಜೊತೆಜೊತೆಗೆ ಸೂರ್ಯಾಸ್ತದ ಸಮಯವನ್ನು ಆನಂದಿಸಿದೆವು.  ಮೂರು ಘಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಮುಖ ಕವಚವಿಲ್ಲದೆ ಶುದ್ಧ ಪ್ರಾಣವಾಯುವನ್ನು ಸೇವಿಸುತ್ತಾ ನಡೆಯುತ್ತಾ ಮಲೆನಾಡು ಸೊಬಗನ್ನು ಸವಿದೆವು. ಸೂರ್ಯಾಸ್ತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಮನೆಯತ್ತ ಸಾಗಿದೆವು. ಆಗಸ್ಟ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಹಸಿರು ಸೊಬಗನ್ನು ಬಹುಶಃ: ಅಲ್ಲಿ ಕಾಣಬಹುದು.ದಯವಿಟ್ಟು ಅಲ್ಲಿಗೆ ನಿಸರ್ಗ ಪ್ರೇಮಿಗಳು ಮಾತ್ರ ಹೋಗಬೇಕು ಏಕೆಂದರೆ ಈ ಮಹಾನಗರ ವ್ಯಾಪ್ತಿಯಲ್ಲಿ ಇದು ಅಳಿದುಳಿದು ಕೊಂಡಂತಹ ಏಕೈಕ ತಾಣ ಹಾಗೂ ನೈಸರ್ಗಿಕವಾಗಿ ಕಲ್ಮಷರಹಿತವಾಗಿಟ್ಟಂತಹ ನೆಮ್ಮದಿಯ ತಾಣ ಎಂದರೂ ಅತಿಶಯೋಕ್ತಿಯಾಗಲಾರದು. ಅಂತಹ ಅಮೂಲ್ಯವಾದ ಜಾಗಗಳನ್ನು ಹಾಗೇ ಉಳಿಸಿಕೊಳ್ಳೋಣ. ಗೌರವಿಸೋಣ.*******************************************

ಪ್ರವಾಸ ಕಥನ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಸುಜಾತಾ ಎನ್. ರವೀಶ್ ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ. ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ .ಬಿ. , ವಾಟ್ಸಾಪ್ ಗ್ರೂಪುಗಳಲ್ಲಿ ಸಕ್ರಿಯವಾದರು. ನಂತರ ,ಕವನಗಳ ಕೃಷಿ ಮತ್ತೆ ಮೊದಲಾಗಿ ಈಗ ಐನೂರಕ್ಕೂ ಹೆಚ್ಚು ಕವನಗಳು, ೨೦೦ ಗಝಲ್ಗಳು ರಚಿಸಿದ್ದಾರೆ. ರುಬಾಯಿ, ಟಂಕಾ ,ಹಾಯಿಕು, ವಚನ ಇನ್ನಿತರ ಪ್ರಕಾರಗಳು ರಚಿಸಿದ್ದಾರೆ. ಈಗ ಸೋದರ ಮುತ್ತುಸ್ವಾಮಿಯವರ ಪ್ರೋತ್ಸಾಹದಶ್ರೀಯುತ ನಾಗೇಶ ಮೈಸೂರು ಅವರು ಸಂಪಾದಿಸಿದ “ನಾವು ನಮ್ಮವರು” ಕವನ ಸಂಕಲನದಲ್ಲಿನ ಅವರ ‘ ನನ್ನ ಮುಖವಾಡಗಳು’ ಎಂಬ ಕವನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ ಸಿ ತರಗತಿಯ ಪೂರಕ ಪಠ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಪ್ರಥಮ ಸಂಕಲನ “ಅಂತರಂಗದ ಆಲಾಪ” ೭೬ ಕವನಗಳ ಸಂಕಲನವಾಗಿದ್ದು ಮೇ ೨೦೧೯ ರಲ್ಲಿ ಲೋಕಾರ್ಪಣೆಗೊಂಡಿದೆ .ಸಾಹಿತ್ಯೋತ್ಸವ ಎಂಬ ಮುಖ ಹೊತ್ತಿಗೆಯ ಸಾಹಿತ್ಯಿಕ ಗುಂಪಿನ ನಿರ್ವಾಹಕರಲ್ಲಿ ಒಬ್ಬಳಾಗಿದ್ದಾರೆ. ಅಲ್ಲಿನ ಸಾಪ್ತಾಹಿಕ ಕವನ ಸ್ಪರ್ಧೆ “ಪದ ಪದ್ಯೋತ್ಸವ”ದ ನಿರ್ವಹಣೆ ನಡೆಸುತ್ತಿದ್ದಾರೆ ಮುಖಾಮುಖಿಯಲ್ಲಿ ಈ ಸಲ ಸುಜಾತ ರವೀಶ್ ಮೈಸೂರು ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ. ” ನಾನು ದೇವರನ್ನು ಖಂಡಿತಾ ನಂಬುತ್ತೇನೆ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ನನ್ನ ಮನಸ್ಸಿನ ನೋವನ್ನಾಗಲಿ,  ನಲಿವನ್ನಾಗಲಿ ಆಂತರಿಕ ತುಮುಲ ದ್ವಂದ್ವಗಳನ್ನಾಗಲಿ, ಒಂದು ವಿಷಯದ ಬಗೆಗಿನ ಜಿಜ್ಞಾಸೆಯಾಗಲಿ, ಕೆಲವೊಮ್ಮೆ ಸಣ್ಣಪುಟ್ಟ ಸಂಭ್ರಮಗಳನ್ನಾಗಲಿ,  ಇವುಗಳನ್ನೆಲ್ಲಾ ಹೊರಹಾಕುವ ಹಂಚಿಕೊಳ್ಳುವ ಮಾಧ್ಯಮ ನನಗೆ ಕವಿತೆ .   ಕವಿತೆ ಹುಟ್ಟುವ ಕ್ಷಣ ಯಾವುದು ?     ಮನಸ್ಸಿನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಾಗದೇ ಈ ಕ್ಷಣ ಪದಗಳಲ್ಲಿ ಹೊರಹಾಕಲೇಬೇಕು , ಅವು ಅದಮ್ಯ ಎನಿಸಿದ ಆ ಹೊತ್ತು .ಇದ್ದಕ್ಕಿದ್ದ ಹಾಗೆ ಪದಪುಂಜಗಳು ತಲೆಯಲ್ಲಿ ಮೂಡಿ ಬಿಡುತ್ತವೆ. ಆ ಕ್ಷಣ ಅವುಗಳನ್ನು ಬರೆದಿಡಬೇಕು ನಂತರ ಬರೆವೆನೆಂದರೆ ಆ ಕ್ಷಣದ ತೀವ್ರತೆ ಅದೇ ಪದಗಳು ಮತ್ತೆ ಬರುವುದಿಲ್ಲ . ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? . ಹೆಚ್ಚಾಗಿ ನನ್ನ  ಕವನಗಳೆಲ್ಲ ಭಾವನಾಜಗತ್ತಿಗೆ ಸಂಬಂಧಪಟ್ಟಂಥವು. ನಿತ್ಯ ಜೀವನದ ಸುಖ ದುಃಖಗಳು. ಸುತ್ತಣ ಪ್ರಕೃತಿಯ ದೃಶ್ಯಗಳು. ಒಮ್ಮೊಮ್ಮೆ ಸಮಾಜದಲ್ಲಿ ನಡೆಯುವ      ಅನ್ಯಾಯ ಅನಾಚಾರಗಳು ನನ್ನ ಕವಿತೆಗೆ ಕಾರಣವಾಗಿವೆ . ಕೆಲವೊಂದು ವಸ್ತುಗಳು ಸಂಧರ್ಭಗಳು ಹಾಗೂ ಸ್ಥಳಗಳು ಕವಿತೆಗೆ ವಸ್ತುವಾಗಿಸಿದೆ ಪುರಾಣದ ಪಾತ್ರಗಳು ನನ್ನ ಮತ್ತೊಂದು ಮೆಚ್ಚಿನ ವಿಷಯ ಊರ್ಮಿಳೆ, ಗಾಂಧಾರಿ, ಕೈಕೇಯಿ, ಅಹಲ್ಯೆ, ಭೀಷ್ಮ, ಕರ್ಣ ಇವರೆಲ್ಲ ನನ್ನ ಕವನದಲ್ಲಿ ಬಂದು ಹೋಗಿದ್ದಾರೆ . ಆದರೆ ಅನುಭವದ ಕೊರತೆಯೋ ನನ್ನ ದೌರ್ಬಲ್ಯವೋ ಗೊತ್ತಿಲ್ಲ ಮನಸ್ಸಿನ ಭಾವನೆ ತುಮುಲಗಳೇ ಹೆಚ್ಚಾಗಿ ನನ್ನನ್ನು ಕಾಡಿ ಕವಿತೆ ಬರೆಸುತ್ತವೆ. ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ? ಖಂಡಿತ… ಕವಿತೆಗಳು ಬಾಲ್ಯ ಹರೆಯದ ಮೆಲುಕುಗಳು ಅನುಭವದ ಪಡಿ ನೋಟಗಳೇ ಅಗಿವೆ .ಮುಗ್ಧತೆ ಬೆರಗು ತುಂಬಿದ ನೋಟ ಪ್ರಪಂಚದೆಡೆಗಿನ ಅಚ್ಚರಿ ಇದೆಲ್ಲ ಬಾಲ್ಯದ ಕಾಣಿಕೆಯಾದರೆ ,ನನ್ನ ಹೆಚ್ಚಿನ ಪ್ರೇಮ ಕವಿತೆಗಳಲ್ಲಿ ಹರೆಯ ಇಣುಕಿ ಹಾಕಿದೆ .  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಸ್ವಾರ್ಥ ಹಾಗೂ ಜನಹಿತಕ್ಕಾಗಿ ಮಿಡಿಯುವುದು ಇದು ರಾಜಕೀಯಕ್ಕೆ ಬರುವವರ ಮೂಲಭೂತ ಮಂತ್ರ.  ಆದರೆ ಅದೇ ಕಣ್ಮರೆಯಾಗುತ್ತಿರುವ ವಿಪರ್ಯಾಸದ ದುರಂತ ಕಣ್ಣಿಗೆ ಕಟ್ಟುತ್ತಿದೆ ವಿಷಾದ ತರಿಸುತ್ತಿದೆ .  ಜನಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡ ನಾಯಕರುಗಳ ಕೊರತೆ ನಮ್ಮಲ್ಲಿ ಕಾಡುತ್ತಿದೆ ಅಂತಹ ನಾಯಕರನ್ನು ಬೆಳೆಸಿ ಆರಿಸುವುದು ನಮ್ಮಗಳ ಕರ್ತವ್ಯವೂ ಎಂಬುದು ನೆನಪಿಗೆ ಬರುತ್ತದೆ .  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ನಾನು ದೇವರನ್ನು ಖಂಡಿತಾ ನಂಬುತ್ತೇನೆ ದೇವರು ಎಂಬುದು ಒಂದು ನಂಬಿಕೆ ಹಾಗೂ ಗಮ್ಯವಾದರೆ ಧರ್ಮಗಳು ಅದನ್ನು ಸೇರುವ ಮಾರ್ಗಗಳು. ದಾರಿ ಯಾವುದಾದರೇನು  ಗಮ್ಯವನ್ನೇ ಮುಟ್ಟುತ್ತವೆ.  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?         ಸಾಂಸ್ಕೃತಿಕ ವಾತಾವರಣದ ಪರಿಭಾಷೆ ಬದಲಾಗುತ್ತಿದೆ ಮೊದಲೆಲ್ಲಾ ಮುಖತಃ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ದೂರದರ್ಶನ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿವೆ.  ಎಲ್ಲೋ ವೈಯುಕ್ತಿಕ ಸಂಪರ್ಕ ಹಾಗೂ ಅದರ ಮೂಲಕ ನಡೆಯುತ್ತಿದ್ದ ವಿಶಿಷ್ಟ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಸಂಗೀತವಾಗಲಿ ನೃತ್ಯವಾಗಲಿ ಕಲೆಯ ಪ್ರದರ್ಶನಕ್ಕಿಂತ ತಾಂತ್ರಿಕತೆಯ ಅದ್ಧೂರೀಕರಣ ಕಣ್ಣಿಗೆ ರಾಚುತ್ತದೆ. ವೈಭವ ಹಾಗೂ ಪ್ರದರ್ಶನಪ್ರಿಯತೆ  ಹೆಚ್ಚಾಗುತ್ತಿದೆ. ಕಲೆಗಾಗಿ ಕಲೆ ಎನ್ನುವುದು ಮಾಯವಾಗಿ ಎಲ್ಲದರಲ್ಲೂ ವಾಣಿಜ್ಯೀಕರಣದ ಭರಾಟೆ .    ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ತೀರಾ ಇತ್ತೀಚೆಗೆ 2 ವರ್ಷದಿಂದ ಬರೆಯುತ್ತಾ ಬಂದಿರುವ ನನಗೆ ಅದರ ಪರಿಚಯ ಇಲ್ಲ .ಬರೆಯುವ ಸಾಹಿತ್ಯ ಗಟ್ಟಿಯಾಗಿದ್ದರೆ ಇಂದಲ್ಲ ನಾಳೆ ಮೌಲ್ಯ ಇದ್ದೇ ಇದೆ ಎನ್ನುವ ನಂಬಿಕೆ ಇದೆ. ಇನ್ನು ಪರಿಷತ್ತು ಹಾಗೂ  ಇನ್ನಿತರ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಹೇಳ ಬೇಕೆಂದರೆ  ಹಿಡಿಯಬೇಕಾದ ಹಾದಿಯನ್ನು ಬಿಟ್ಟು   ಬೇರೆತ್ತಲೋ ಸಾಗುತ್ತಿದೆ ಅಂತ ಅನ್ನಿಸುತ್ತೆ . ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉನ್ನತ ಪರಂಪರೆ ಸಂಸ್ಕ್ರತಿಯ ದೇಶ ನನ್ನದು ಅಂತ ಬರಿ ಗತ ಇತಿಹಾಸದ ಬಗ್ಗೆ ಗರ್ವ ಪಡದೆ ಈ ಯುಗದಲ್ಲಿ ಹೇಗೆ ಮುನ್ನಡೆಯಬೇಕೆಂಬ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಎಂಬ ತತ್ವದಡಿಯಲ್ಲಿ  ಮತ್ತೊಂದು ಇತಿಹಾಸ     ಸೃಷ್ಟಿಸುವ ಕೆಲಸ ಆಗಬೇಕಿದೆ.  ಆದರೆ ಸ್ವಹಿತಾಸಕ್ತಿ ರಾಜಕೀಯ ದೊಂಬರಾಟಗಳ ಮಧ್ಯೆ ಮೂಲೋದ್ದೇಶ ಮರೆತು ಕವಲುದಾರಿಯಲ್ಲಿ ಸಾಗುತ್ತಿದೆ ಎನ್ನಿಸುತ್ತದೆ . ಜನರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಜಾಗೃತಿ ಮೂಡಿಸಬೇಕು. ಆದರೆ ಮಾಡುವರ್ಯಾರು ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಹಾಗೆ.  ಸ್ವಾತಂತ್ರ್ಯ ಪೂರ್ವದಲ್ಲಿ ಮೂಡಿದ್ದ ಐಕ್ಯತೆ ಅದೇ ಕೆಚ್ಚು ಈಗಲೂ ಬಂದರೆ ನಾವು ಏನನ್ನಾದರೂ ಸಾಧಿಸಬಹುದು . ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?     ನನಗೇನೂ ಅಂಥ ದೊಡ್ಡ ಕನಸುಗಳಿಲ್ಲ.  ಇನ್ನೂ ಇನ್ನೂ ಓದುತ್ತಾ ಮತ್ತಷ್ಟು ಹೆಚ್ಚಿನ  ಮೌಲಿಕ ಸಾಹಿತ್ಯ ರಚಿಸಬೇಕೆಂಬ ಬಯಕೆ ಅಷ್ಟೆ. ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ? ಕನ್ನಡದಲ್ಲಿ ಕುವೆಂಪು ಮತ್ತು ಎಸ್ ಎಲ್ ಭೈರಪ್ಪ ಅವರು. ಕುವೆಂಪು ಅವರು ವರ್ಣಿಸುವ ಪ್ರಕೃತಿ ಅವರ ಪದಗಳ ಪ್ರಯೋಗ ಕುತೂಹಲ ಮೂಡಿಸುತ್ತವೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ .ಭೈರಪ್ಪನವರ ಯೋಚನಾಲಹರಿ ಅವರ ಪಾತ್ರಗಳ ಸಂಕೀರ್ಣತೆ  ಯೋಚನೆಗಳಿಗೆ ಅವರು ಕೊಡುವ ಸ್ಪಷ್ಟತೆ ಮತ್ತು ಅವರು ಕಥೆ ಕಟ್ಟುವ ರೀತಿ ತುಂಬಾ ಇಷ್ಟವಾಗುತ್ತದೆ. ಇಂಗ್ಲಿಷಿನಲ್ಲಿ ಹೆಚ್ಚು ಓದಿಕೊಂಡಿಲ್ಲ ಆದರೆ ಶೇಕ್ಸ್ ಪಿಯರ್ ಇಷ್ಟ . ಈಚೆಗೆ ಓದಿದ ಕೃತಿಗಳಾವವು? ಡಾ ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಪ್ರಮುಖ ನೂರು ಲೇಖಕರ ಅಪ್ಪನ ಬಗ್ಗೆ ಬರೆದ ಆಪ್ತ ಬರಹಗಳು  ” ಅಪ್ಪನ ಹೆಗಲು “. ತಮ್ಮ ತಂದೆಯವರ ಬಗ್ಗೆ ಪ್ರಮುಖ ಲೇಖಕರುಗಳು ಬರೆದ ಲೇಖನವನ್ನು ಸಂಪಾದಿಸಿದ್ದಾರೆ ಓದಲು ಆಸಕ್ತಿದಾಯಕವಾಗಿದೆ ದಿ” ಲಾಸ್ಟ್ ಲೆಕ್ಚರ್” ರ್ಯಾಂಡಿ ಪಾಶ್ ಅವರು ಬರೆದು ಕನ್ನಡಕ್ಕೆ ಉಮೇಶ್ ಅವರು ಅನುವಾದಿಸಿದ ಪುಸ್ತಕ. ಕ್ಯಾನ್ಸರ್ ನಿಂದ ಇನ್ನೇನು ಸಾವು ಖಚಿತ ಎನ್ನುವ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ತನ್ನ ಆಲೋಚನೆಗಳನ್ನು ತೆರೆದಿಡುವ ಹಾಗೂ ಜೀವನದ ಸಾರವನ್ನು ಶಬ್ದಗಳಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನ. ಮನಸ್ಸಿಗೆ ತುಂಬಾ ತಟ್ಟಿತು  ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರವಣಿಗೆ ಬಿಟ್ಟರೆ,  ಅಡುಗೆ ಮಾಡುವುದು  ನಿಮಗೆ ಇಷ್ಟವಾದ ಸ್ಥಳ ಯಾವುದು ? ಕುಪ್ಪಳ್ಳಿಯ ಕವಿಶೈಲ.  ತುಂಬಾ ವರ್ಷಗಳಿಂದ ನೋಡಬೇಕೆಂದಿದ್ದೆ. ಈಗ ಕಳೆದ 2 ವರ್ಷದಲ್ಲಿ 2 ಬಾರಿ ಸಂದರ್ಶಿಸಿದ್ದೇನೆ. ಆ ಮನೆಯ ಗಹನ ಗಂಭೀರತೆ, ಕವಿ ಶೈಲ ದಲ್ಲಿನ ಒಂದು ರೀತಿಯ ನಿಗೂಡತೆ,  ಹರಡಿ ಹಾಸಿ ಚೆಲ್ಲಿದ ಪ್ರಕೃತಿ ಸೌಂದರ್ಯ ಎಲ್ಲಾ ನನ್ನ ಮನಸ್ಸನ್ನು ಸೆರೆಹಿಡಿದಿವೆ. ಅಲ್ಲಿ ಓಡಾಡುವಾಗಲೆಲ್ಲ ಇಲ್ಲಿ ರಸಋಷಿ ಗಳು ನಡೆದಿದ್ದರು ಎಂಬ ಭಾವವೇ ಒಂದು ರೀತಿಯ ಪುಳಕ ತರುತ್ತದೆ .  ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು? ಹಿಂದಿಯ ದೋ ಆಂಖೆ ಬಾರಹ್  ಹಾಥ್ ಹಾಗೂ ಕನ್ನಡದ ಶರಪಂಜರ ನೀವು ಮರೆಯಲಾರದ‌ ಘಟನೆ‌ ಯಾವುದು?      ಯಾವುದೇ ವಶೀಲಿ ಶಿಫಾರಸ್ಸು ಇಲ್ಲದೆ “ನಾವು ನಮ್ಮವರು” ಎಂಬ ಸಂಪಾದಿತ  ಸಂಕಲನದಲ್ಲಿನ ನನ್ನ “ಮುಖವಾಡಗಳು” ಕವನವನ್ನು ಕುವೆಂಪು ವಿಶ್ವವಿದ್ಯಾಲಯದ ಎರಡನೇ ಬಿ ಎಸ್ಸಿಯ ಪೂರಕ ಪಠ್ಯವಾಗಿ ಆಯ್ಕೆಮಾಡಿದ್ದು.  ತುಂಬಾ ಖುಷಿ ಕೊಟ್ಟ ಸಂಗತಿಯೂ ಹೌದು ಹೇಳಲೇ ಬೇಕಾದ ಕೆಲ ಸಂಗತಿಗಳು; ಕಾಲೇಜು ಓದುವ ಕಾಲದಲ್ಲಿ ಬರೆಯುವ  ಹವ್ಯಾಸ ಇತ್ತು .ಅದನ್ನು ಮುಂದುವರಿಸಿಕೊಂಡು ಹೋಗಲು ಆಗದಿದ್ದುದಕ್ಕೆ ಖೇದವಿದೆ.  ಅದಕ್ಕಾಗಿಯೇ ಈಗ ಬರೆಯುವ ಆಸಕ್ತಿಯಿರುವವರಿಗೆ  “ಸಾಹಿತ್ಯೋತ್ಸವ” ಎಂಬ ಮುಖಹೊತ್ತಿಗೆಯ ಗುಂಪಿನ ನಿರ್ವಾಹಕಿಯಾಗಿ ಕೈಲಾದಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ . ಇಷ್ಟು ಬರೆಯುವ ತುಡಿತ ಮಿಡಿತ ಇಟ್ಟುಕೊಂಡು ಇಷ್ಟು ದಿನ ಬರೆಯದೆ ಹೇಗೆ ಸುಮ್ಮನಿದ್ದೆ ಎಂದು ನನ್ನ ಬಗ್ಗೆ ನನಗೇ ಆಶ್ಚರ್ಯ ಉಂಟಾಗುತ್ತದೆ. ಈಗಂತೂ ದಿನಕ್ಕೆ ಏನಾದರೂ ಚೂರು ಬರೆಯದಿದ್ದರೆ ಆಗುವುದೇ ಇಲ್ಲ . ಇನ್ನು ನನ್ನ ಬರವಣಿಗೆಯ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ಕ್ಷೇತ್ರದಲ್ಲಿ  ಈಗ ಅಂಬೆಗಾಲಿಡುತ್ತಿರುವ ತೊದಲು ನುಡಿ ಆಡುತ್ತಿರುವ ಮಗು ನಾನು. ನನ್ನ ಪ್ರಥಮ ಸಂಕಲನದ ವಿಮರ್ಶೆ ಮಾಡಿದ ಶ್ರೀಯುತ ಪ್ರಕಾಶ ಕಡಮೆ ಅವರು ಹೇಳಿದಂತೆ ಪ್ರಾಸದ ತ್ರಾಸ ಕಳಚಿಕೊಳ್ಳಬೇಕಾಗಿದೆ,  ಅಂತರಂಗದ ಪರಿಧಿಯನ್ನು ದಾಟಿ ಯೋಚನೆಗಳು ಕವಿತೆಗಳು ವಿಸ್ತೃತ ವಿಶಾಲ ಹರಹಿಗೆ ಚಾಚಿಕೊಳ್ಳಬೇಕಾಗಿದೆ. ಸಾಮಾಜಿಕ ತುಡಿತ ಮಿಡಿತಗಳಿಗೆ ಸಾಕ್ಷಿಯಾಗಬೇಕಾಗಿದೆ. ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಕೃಷಿ ನಡೆಸಬೇಕಾಗಿದೆ ಮತ್ತಷ್ಟು ಮೌಲ್ಯಯುತ ಬರವಣಿಗೆಯನ್ನು ಕೊಡಬೇಕಿದೆ. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

You cannot copy content of this page

Scroll to Top