ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಅಲೆವ ನದಿ ಅಲೆವ ನದಿಗಜಲ್ ಗಳುಕವಿ :- ಕಿರಸೂರ ಗಿರಿಯಪ್ಪಪ್ರಕಾಶನ :- ಸನ್ಮತಿ ಪ್ರಕಾಶನ ಬಾಗಲಕೋಟೆಬೆಲೆ‌:- ೮೦ಪುಟಗಳು :- ೫೮ ಗಜಲ್ ಎಂದಾಕ್ಷಣ ನೆನಪಿಗೆ ಬರುವುದುಪ್ರೇಮಿಗಳ ಸರಸ ಸಲ್ಲಾಪ ,ಮನದಾಳದ ಸುಕೋಮಲ ಭಾವನೆಗಳು, ಹೆಂಗಳೆಯರ ಪಿಸು ನುಡಿಗಳು , ಒಳಹೊಕ್ಕು ಹೊರ ನೋಡುವ ತೀಕ್ಷ್ಣಮತಿ ಸೂಕ್ಷ್ಮವಾದ ಭಾವನೆಗಳ ಪೂರಣ, ಗಜಲ್ನಸಾಮಾನ್ಯ ಲಕ್ಷಣಗಳು ಕಾಫಿಯಾ ,ರದೀಪ್,ಮತ್ಲಾ,ಮಕ್ತಾ, ಕಾಣಬಹುದು ನೆರಳು-ಬೆಳಕಿನಾಟದಂತೆ ಇವುಗಳನ್ನು ಹೊಂದಾಣಿಕೆ ಮಾಡಿದರೆ ಮಾತ್ರ ಗಜಲ್ ಆಗಲ್ಲ ಸಹಜವಾಗಿ ಮೇಳೈಸಿಕೊಂಡು ಹೃದಯವನ್ನು ತಟ್ಟಿ ಬಡಿದೆಬ್ಬಿಸಬೇಕು. ಗಜಲ್ಗಳು ಮನಸೂರೆಗೊಂಡು ಒನ್ಸ್ ಮೋರ್ ಭಾವನೆಯನ್ನು ಹೊರ ಸೂಸಬೇಕು,ಅಂದಾಗ ಆ ಗಜಲ್ ನ ಶೇರ್ ಕೇಳಿದಾಕ್ಷಣ ವ್ಹಾ ! ಉತ್ಕಟವಾದ ಭಾವನೆ ಹೊರಹೊಮ್ಮಬೇಕು ಅದು ಗಜಲ ಶಕ್ತಿ. ಬಾಗಲಕೋಟೆ ಜಿಲ್ಲೆಯ ಕಿರಸೂರು ಗಿರಿಯಪ್ಪನವರ ಗಜಲ್ ಸಂಕಲನ ಅಲೆವ ನದಿ ಒಳಗಿನ ಅಂತರಾತ್ಮವನ್ನು ಒಂದು ಸಾರಿ ನೋಡಿ ಬರೋಣ…ಮೊದಲಿಗೆ ಪುಸ್ತಕದ ಬಗ್ಗೆ ಮಾತನಾಡುವುದಾದರೆ ಮುದ್ರಣ ಬಹಳ ಅಚ್ಚುಕಟ್ಟಾಗಿ ಮುಖಪುಟದ ಚಿತ್ರವು ಕೂಡ ಅಷ್ಟೇ ಸೊಗಸಾಗಿ ಮನ ಸೆಳೆಯುವಂತೆ ಮೂಡಿಬಂದಿದೆ, ಮುಖಪುಟ ತಯಾರಿಸಿದ ಕಲಾವಿದರಿಗೆ ನನ್ನದೊಂದು ನಮನ. ಇದೊಂದು ನಿತ್ಯ ಅಲೆದಾಟ ಕಲ್ಮಶಗಳನ್ನುತೊಳೆದು ನಿತ್ಯ ಪರಿಸರ ಮಾತೆಯು ತನ್ನೊಡಲಲ್ಲಿ ತುಂಬಿಕೊಳ್ಳುವಳು ದಾಹವನ್ನು ನೀಗಿಸಿ ,ಜಾತಿ- ಮತ-ಪಂತ ಭೇದಗಳನ್ನು ಮರೆತು ಸ್ವಚ್ಛಂದವಾಗಿ ಹರಿಯುವ ಮಾತೆ , ನಿರ್ಗುಣ ,ನಿರಾಕಾರ,ಅಲೆವ ನದಿ ಪುಸ್ತಕದ ಒಳ ಹೂರಣವನ್ನು ತಿಳಿಯೋಣ ಈ ಪುಸ್ತಕದ ಟೈಟಲ್ ಕೂಡ ಬಹಳ ಚಂದವಿದೆ. ಗಜಲ್ ಗಳೆಂದರೆ ಪ್ರೇಮಿಗಳ ವಿರಹ, ಪ್ರೇಮಿಗಳ ಉತ್ಕಟ ಭಾವನೆ, ಸರಸ-ವಿರಸ ಸಮರಸ, ಪ್ರೀತಿಯ ಉತ್ತುಂಗದ ಸ್ಥಿತಿ, ನಿರಾಸೆ, ಕಾಮನೆಗಳು, ಕುಡುಕರ ಮಾತುಗಳು, ಹೆಂಗಳೆಯರ ಮನದಾಳದ ಪಿಸು ಮಾತುಗಳು, ಬದುಕಿನ ಮಧುಪಾತ್ರೆ, ಮೊದಮೊದಲು ಒಂದೇ ಗುಂಪಿಗೆ ಗಜಲ್ ಸೇರಿಕೊಂಡಿತ್ತು ಆದರೆ ಕಾಲ ಬದಲಾದಂತೆ ಅದರ ವಿಸ್ತಾರವು ಕೂಡ ಬದಲಾಗಿದೆ‌ ಹೇಗೆ ? ತನ್ನ ವಿಸ್ತಾರದ ಹರಿವನ್ನು ಗಜಲ್ ಲೋಕವು ಬಹು ವಿಸ್ತಾರವಾಗಿ ಹರಡಿಕೊಂಡಿದೆ ಜಗದ ಜಂಜಡ ಗಳಿಗೆ ಮಿಡಿಯುವ ಮನ, ಸದ್ಯದ ಆಗು ಹೋಗುಗಳಿಗೆ ಸ್ಪಂದಿಸುವ ಗಜಲ್, ರಾಜಕೀಯ,ಆರ್ಥಿಕ ಸ್ಥಿತಿ, ಮಹಿಳಾ ಪರ ಹೋರಾಟ ಧ್ವನಿ,ದಬ್ಬಾಳಿಕೆ, ದೌರ್ಜನ್ಯ, ಶೋಷಣೆ, ಗಡಿಯಾಚೆಯು ಪ್ರೀತಿಯ ಹಂಚುವಿಕೆಯ ಹುಡುಕಾಟವನ್ನು ಬಹುತೇಕ ಗಜಲ್ ಕವಿಗಳಲ್ಲಿ ಈಗೀಗ ನೋಡಬಹುದು ಇದು ಒಳ್ಳೆಯ ಬೆಳವಣಿಗೆ. *ಬತ್ತಿದ ಬಾವಿದಂಡ್ಯಾಗ* *ಬತ್ತಿದ ಬಾವಿದಂಡ್ಯಾಗ ಗುಬ್ಬಚ್ಚಿಗಳ ಪಾದ ನಲುಗ್ಯಾದೊ |*ಬ್ಯಾಸಗಿ ಹೊಡೆತಕ್ಕೆ ಇರುವೆಗಳ ಪಾದನಲುಗ್ಯಾದೊ | ಈ ಮತ್ಲಾ ಗಮನಿಸಿದಾಗ ಈಗ ಗುಬ್ಬಚ್ಚಿ ಕಣ್ಮರೆಯಾಗಿ ಪರಿಸರದಲ್ಲಿ ಅವುಗಳ ಕಲರವ ಇಲ್ಲದೆ ಮನುಜ ಮೂಕವಾಗಿದ್ದಾನೆ .ಮಳೆ‌ವಿಲ್ಲದೆ ಸಣ್ಣ ಜೀವಿ ಇರುವೆ ಕೂಡಾ ಬಹಳ ತೊಂದರೆಯಲ್ಲಿ ಇವೆ ಎನ್ನುವ ಅವರ ಪರಿಸರ ಕಾಳಜಿಯ ಪ್ರಸ್ತುತ ಮನುಜ ದುರಾಸೆಯನ್ನು ಈ ಮತ್ಲಾದಲ್ಲಿ ಗಮನ ಸೆಳೆಯುತ್ತದೆ. *ಅಳುವ ಮೋಡದ ಕಣ್ಣಿಗೆ* *ಅಳುವ ಮೋಡದ ಕಣ್ಣಿಗೆ‌ ನೆಲದ ಬಾಯಿ ಕಂಡಾಗ ಎಂಥಾ ಚಂದ |**ಕೊರಗೊ ರೆಂಬೆಯ ಒಡಲಿಗೆ ಮಣ್ಣ ನಗು ಸಿಕ್ಕಾಗ ಎಂಥಾ ಚಂದ |* ನಾಡಿನಲ್ಲಿ ‌ಮಳೆ ಬೆಳೆ ಎಲ್ಲಾ ಕಾಲಕ್ಕೆ ತಕ್ಕಂತೆ ಸರಿಯಾಗಿ ಆದರೆ ಬಹಳ ಚಂದ ,ಸಾಯುವ ಜೀವಕ್ಕೆ ಹಿಡಿ ಆಶ್ರಯ ಸಿಕ್ಕರೆ ಎಷ್ಟೋ ಆ ಮನ ಸಂತಸ ಗೊಳ್ಳುತ್ತದೆ ಅಲ್ಲವೆ ಕಲ್ಪನೆಯನ್ನು ಕವಿ ನಿತ್ಯ ಪರಿಚರ ಮೂಲಕ ಹೇಳಿದ್ದಾರೆ.ವ್ಹಾ.! *ಕಂಬನಿಯ ಪಾತ್ರೆ* *ಅವಳು ರಾತ್ರಿಯ ಬೆದೆಗೆ ನಲುಗಿ ಕನಸುಗಳ ಕಣ್ಣೀರು ಸುರಿದಳು |**ನನ್ನ ಹೃದಯದ ಪದ ಮಧು ಶಾಲೆಯ ಜೋಗುಳವಾಗಿ ತೇಲುತ್ತಿತ್ತು |* ಕವಿ ಅವಳು ರಾತ್ರಿ ಬೆದರಿ ,ಕನಸುಗಳು ಕಮರಿ ನಯನಗಳು ಒದ್ದೆಯಾದವು ಆ ನೋವಿಗೆ ಹೃದಯ ವೀಣೆ ಜೋಗುಳವಾಗಿ ಹಾಡುತ್ತಿತ್ತು ಬಹಳ ಸುಂದರವಾದ ವರ್ಣನೆ ಸಹಜವಾಗಿ ಮೂಡಿ ಬಂದಿದೆ. *ಖುತುಮಾನಗಳಿಗೊಂದು ಪತ್ರ* *ಇಬ್ಬನಿಯ ಹಿಗ್ಗಿನಲಿ ತೇಲುವ ಕರುಳ ಕುಟುಕಿನ ಜೋಳದ ಕುಡಿ ನಾನು**ಮುಸುಕದಿರಿ ಸಂತತಿಯ ಬೀಜ ನೆಲದ ತೇವ ಹಿಡಿದಾಡಿಸುವ ಕಾಲ* ಪ್ರತಿ ಅಣುರೇಣು ಕೂಡಾ ಸಂತೋಷದಲ್ಲಿ ತೇಲುವ ಸಮಯದಲ್ಲಿ ಸ್ವಲ್ಪವಾದರೂ ಆಶೆಯ ಭಾವನೆಗಳನ್ನು ಹೊಂದಿರುತ್ತದೆ, ಜೀವ ಸಂತತಿಯ ಹಾಳು ಮಾಡದಿರಿ ನೆಲದ ಋಣವ ತೀರಿಸಲು ಬಿಡಿ ಎಂದ ಆರ್ಥಾನಾದ ಭಾವ ಬಹುತೇಕ ಇವರ ಗಜಲ್ ಗಳಲ್ಲಿ ಕಾಣಬಹುದು ‌. *ಕತ್ತಲಿನಾಚೆ* *ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು ! ಬೆಳಕಿನಾಚೆ**ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು ಕತ್ತಲಿನಾಚೆ‌* ಹೃದಯಗಳ ಭಾಷೆಯನ್ನು ಅರಿತು ಪ್ರೀತಿಯಿಂದ ಜಗವ ಗೆಲ್ಲಬೇಕು ಆ ಪದಗಳು ಪ್ರೀತಿಯಿಲ್ಲದ ಮೇಲೆ ಹೇಗೆ ಹುಟ್ಟುತ್ತವೆ ಎಂಥಾ ಮಾತು ಈ ಸಾಲು ನಾಡಿನ ಹಿರಿಯ ಕವಿಯಾದ ಡಾ | ಜಿ.ಎಸ್.ಶಿವರುದ್ರಪ್ಪ ಕವಿತೆ ನೆನಪಿಗೆ ಬಂತು.ಎದೆಯಲ್ಲಿ ಪ್ರೀತಿಯನ್ನು ನಾಟದ ಧರ್ಮ ಇದ್ದರೆಷ್ಟೊ ಬಿಟ್ಟರೆಷ್ಟೊ ! *ಪ್ರೀತಿ ಬಟ್ಟಲು* *ಫಲವತ್ತಾದ ಪೈರನು ಬೆಳೆದ ರಾಶಿಯಾದ ಕೈಗಳು**ಹುತ್ತದ ಬಳ್ಳಿಯಲ್ಲಿ ಒಡಲ ಸವಿಗಾಗಿ ತಡಕಾಡಿದವು* ರೈತ ತನ್ನ ನೆಲದವ್ವನ್ನು ಪ್ರೀತಿಯಿಂದ ಬೆಳೆಗಳನ್ನು ಬೆಳೆದು ಜಗಕ್ಕೆ ಅನ್ನವನ್ನು ನೀಡಿದ ಕೈಗಳು ಇಂದು ಆಧುನಿಕ ಕಾಲದ ವಿಷಪೂರಿತ ಕ್ರಿಮಿನಾಶಕಗಳ ಹಾವಳಿ,ನೀರಿಲ್ಲದೆ ಒಣ ಭೂಮಿಯಲ್ಲಿ ನಾಳೆಯ ಕಾಳಿಗಾಗಿ ಪರಿತಪಿಸುವ ಕಾಲ ಬಂದಿದೆ. *ಕುರಿ ಕಾಯುವ ನನ್ನೊಳಗ* *ನೇಗಿಲ ಹೂಡೋ ನನ್ನೊಳಗೆ ನೀನು ಹದವಾದ ಮಣ್ಣಿನ್ಹಂಗ**ನೆಲಕ್ಕುರುಳೋ ಎಲೆಗಳ ದನಿಯಲಿ ಹೊಸ ಚಿಗುರಿನ ನೆಲೆಯ್ಹಂಗ* ಈ ಷೇರ್ ಗಮನಿಸಿದಾಗ ನೇಗಿಲಯೊಳಗೆ ಅಡಗಿದೆ ಕರ್ಮವೆಂಬ ಕುವೆಂಪು ನೆನಪಿಗೆ ಬರುತ್ತದೆ.ಬದುಕಿನ ಬಹು ಪಾಲು ನಾವು ಮಣ್ಣಿನೊಂದಿಗೆ ಕಲಿಯಬೇಕು ಅವಳು ಹದಭರಿತವಾದ ಮಣ್ಣು ಎಂಬ ಹೋಲಿಕೆ ಸಹಜವಾಗಿದೆ.ಹೊಸ ಬೆಳಕಿನಲಿ ಜೀವನದಲಿ ನೆಲಕ್ಕೆ ಎಲೆಗಳು ಉರುಳಿ ಮರಳಿ ನೆಲದ ಋಣವನ್ನು ತೀರಿಸಬೇಕು,ಮತ್ತೆ ಹುಟ್ಟುವ ವಸಂತ ಚಿಗುರಿನ ನೆಲೆಯ್ಹಂಗ ಬಹಳ ಮಾರ್ಮಿಕವಾದ ಸಾಲುಗಳು. *ನೆಲದ ಮಾತಾಗಿ ಉಳಿದವು* *ಅಲೆಯ ಬಡಿತಗಳ ಅರಗಿಸಿ ಮುತ್ತುಗಳ ದನಿಯಾತು ಬೆವರು**ಹಜ್ಜೆಗಳ ಸವೆತ ಉಂಡ ರಸ್ತೆಗಳು ದೀಪಗಳ ನೆರಳಾಗಿ ಉಳಿದವು* ಕಷ್ಟಕಾರ್ಪಣ್ಯಗಳನ್ನು ನುಂಗಿದ ಜೀವ ಮುಂದೊಂದು ದಿನ ಸಿಹಿಯಾದ ಸವಿಗಳಿಗೆ ಅನ್ನು ಸವಿಯಬಲ್ಲದು ಅದರಂತೆ ಇಟ್ಟ ಹೆಜ್ಜೆ ಹೋರಾಟದ ಬದುಕಿನಲ್ಲಿ ಕಳೆದು ಹೋದ ದಿನಗಳಲ್ಲಿ ಆ ರಸ್ತೆಗಳೇ ಮುಂದೆ ನಿನಗೆ ದಾರಿದೀಪವಾಗಿ ಬೆಳಗಬಲ್ಲ ವೆಂಬ ಶ್ರಮಿಕರ ದಮನಿತರ ನುಡಿ ಈ ಸಾಲಿನಲ್ಲಿ ಕಾಣಬಹುದು. ಅವರ ಗಜಲ್ ಗಳನ್ನು ಗಮನಿಸುತ್ತಾ ಹೋದರೆ ಬಹುತೇಕ ಗಜಲ್ ಗಳು ತನ್ನ ಸುತ್ತಮುತ್ತಲಿನ ಅನುಭವಿಸಿದ ನೆಲಮೂಲದ ಅನುಭವಗಳ ಕಟ್ಟಿಕೊಟ್ಟ ಗಜಲ್ ಸಂಕಲನ ಎಂದು ಹೇಳಬಹುದು ಆದರೆ ಈ ಗಜಲ್ ಸಂಕಲನದಲ್ಲಿ 35 ಗಜಲ್ ಗಳು ಒಳಗೊಂಡಿವೆ. ಆದರೆ ಕವಿ ಏಕೋ ಒಂದೇ ಬಗೆಯ ಪ್ರಕಾರಕ್ಕೆ ಸೀಮಿತಗೊಂಡಂತೆ ಚೌಕಟ್ಟನ್ನು ಹಾಕಿಕೊಂಡಿದ್ದಾರೆ ಎಂದು ನನಗನಿಸುತ್ತದೆ.ಇವರ 30 ಗಜಲ್ ಗಳು ಮುರದ್ದಪ್  ಗಜಲ್ ಗಳಾಗಿದ್ದು ,ಉಳಿದ 5 ಗಜಲ್ ಗಳು ಗೈರಮುರದ್ದಪ್, ಒಟ್ಟಾರೆಯಾಗಿ ಒಂದೇ ಪ್ರಕಾರದ ಗಜಲ್ ಪುಸ್ತಕ ಮಾಡಿದ್ದರೆ ಓದುಗರಿಗೆ ಇನ್ನೂ ಚೆನ್ನಾಗಿತ್ತೇನೋ ಓದಿದಾಗ ಅನಿಸಿದ ಭಾವನೆ. *ಗಜಲ್ ಗಳೆಂದರೆ ಹಾಡುಗಬ್ಬ* ಸುಲಭವಾಗಿ ಹಾಡಿ ಅವುಗಳು ನಮ್ಮ ಮನವನ್ನು ತನಿಸಿ ಮತ್ತೆ ಮತ್ತೆ ನಮ್ಮೊಳಗೆ ಧ್ಯಾನಿಸುವಂತೆ ಮಾಡಬೇಕು ಇವರ ಬಹುತೇಕ ಗಜಲ್ಗಳು ಹಾಡಲು ಬರುವುದಿಲ್ಲ ,ಆದರೆ ಭಾವನೆ ತೀವ್ರತೆ, ಅಭಿವ್ಯಕ್ತಿ ಉತ್ಪ್ರೇಕ್ಷೆ ಎಲ್ಲವನ್ನು ಸೇರಿಸಿ ಒಂದು ಕ್ಷಣ ನಮ್ಮೊಳಗೆ ಅವುಗಳನ್ನು ಚಿಂತಿಸುವ ಪ್ರಯತ್ನ ಮಾಡಿದ್ದಾರೆ. ಇವರ ಗಜಲ್ಗಳು ಕಂಡಂತೆ ಕಾಫಿಯಾ ಮತ್ತು ರದೀಪ್ ಬಹಳ ಉದ್ದನೆಯ ಸಾಲುಗಳನ್ನು ಒಳಗೊಂಡಿವೆ , ರದೀಪ್ ಮತ್ತು ಕಾಫಿಯಾ ಕೇಳಿದ ತಕ್ಷಣ ವ್ಹಾ ಎನ್ನುವ ಉದ್ಗಾರ ನಮ್ಮೊಳಗೆ ಪ್ರಜ್ವಲಿಸಬೇಕು.ಆ ರೀತಿಯಲ್ಲಿ ಸಮ ಸಾಲುಗಳುಳ್ಳ ಸರಳ ಪದಗಳನ್ನು ಬಳಸಿದರೆ ಇನ್ನೂ ಚೆನ್ನಾಗಿರುತ್ತದೆಯೆಂದು ಹೇಳಬಹುದು. ಕವಿಯು ಹೊಲ, ರೆಂಟೆ,ಕುಂಟೆ, ಮಣ್ಣು ,ಎಲೆ, ಬೀಜ, ಕಣ್ಣು, ಹೀಗೆ ಇತ್ಯಾದಿ ಪದಗಳ ಸುತ್ತಲೂ ಗಜಲ್ ಗಳು ಗಿರಕಿ ಹೊಡೆದುವೆಂಬ ಭಾವನೆ ವ್ಯಕ್ತವಾಗುತ್ತದೆ , ಹಲವು ಕಡೆ ಬಳಸಿದ ಪದಗಳೇ ಪದೇಪದೇ ಪುನರ್ ಬಳಕೆಯಾಗಿವೆ.ಇಂಥ ಕಡೆ ಸ್ವಲ್ಪ ಗಮನಿಸಬೇಕೆಂಬ ಗಜಲ್ ಓದುಗನಾಗಿ,ಗಜಲ್ ಕೇಳುಗನ ವಿನಂತಿ. ಹೀಗೆ ಇವರ ಗಜಲ್ ಸಂಕಲನವನ್ನು ಗಮನಿಸಿದಾಗ ಚಂದನೆಯ ಮುಖಪುಟ ಗಜಲ್ ಗಳಿಗೆ ತಕ್ಕ ಹಾಗೆ ಇರುವ ರೇಖಾ ಚಿತ್ರಗಳು. ಗಜಲ್ ನ ಮೂಲ ಆಶಯವನ್ನು ಕನ್ನಡೀಕರಿಸುವುದು ಬಹಳ ಕಷ್ಟದ ಕೆಲಸ ಆದರೂ ಕವಿವರ್ಯ ಬಹಳ ಜಾಣ್ಮೆಯಿಂದ ಜನಪದಿಯ ಶೈಲಿಯಲ್ಲಿ ಆಡುಮಾತಿನಲ್ಲಿ, ಇವರ ಗಜಲ್ ಕಟ್ಟುವಗಾರಿಕೆ ವಿಸ್ಮಯಗೊಳಿಸುತ್ತದೆ, ನಿತ್ಯ ಬದುಕಿನ ಪ್ರೀತಿಯ ಹುಡುಕಾಟ ನೆಲದ ಮೇಲಿರುವ ಅದಮ್ಯ ಪ್ರೀತಿ,ಕೆಲವು ಕಡೆಗೆ ಮತ್ಲಾ ಮಕ್ತಾ ಸೂಜಿಗಲ್ಲಿನಂತೆ ಗಮನ ಸೆಳೆದು ನಿಲ್ಲಿಸಿಬಿಡುತ್ತದೆ, ಹಿರಿಯರು ಹೇಳಿದಂತೆ ಅನುಭಾವದಲ್ಲಿ ಅಮೃತವೂ ತುಂಬಿರುತ್ತದೆ ಹಾಗೆ ತತ್ವಪದಗಳಲ್ಲಿ,ವಚನಗಳ ಆಗಲಿ, ಸೂಫಿ ಸಾಹಿತ್ಯ,ಹೀಗೆ ಎಲ್ಲವೂ ಆ ಕಾಲಘಟ್ಟದ ನಡುವೆ ನಮ್ಮ ನೆಲವನ್ನು ಒಂದು ಕ್ಷಣ ಮಂತ್ರಮುಗ್ಧ -ರನ್ನಾಗಿ ಆಗಿನ ವ್ಯವಸ್ಥೆಯನ್ನು ಬಿಂಬಿಸುತ್ತದೆ, ಇವರು ಕೂಡ ತಮ್ಮ ಸುತ್ತಲಿನ ಪರಿಸರವನ್ನು ಬಿಂಬಿಸಿ ಗಜಲ್ ಮೂಲಕ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ ನಮ್ಮೆಲ್ಲರನ್ನು ಹೊಸ ಬಗೆಯ ಒಳನೋಟವನ್ನು ಇಣುಕಿ ಇಣುಕಿ ನೋಡುವಂತೆ ಈ ಪುಸ್ತಕವು ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಪುಸ್ತಕ ಬಹಳ ಆಕರ್ಷಕವಾಗಿದೆ ಜೊತೆಗೆ ಬಳಸಿದ ಕಾಗದಗಳು ಮತ್ತು ಮುದ್ರಣವನ್ನು ಸುಂದರವಾಗಿ ಮಾಡಿದ್ದಾರೆ,ಅವರಿಗೂ ಪ್ರೀತಿಯ ಸಲಾಂ. ಹೊಸ ಪುಸ್ತಕಗಳು ಬಂದಾಗಲೆಲ್ಲ ಆ ಪುಸ್ತಕವನ್ನು ಕೊಟ್ಟು ಓದಿನ ರುಚಿ ಹಚ್ಚುವ ಬೆನ್ನುಬಿದ್ದು ಅದರ ಬಗ್ಗೆ ಟಿಪ್ಪಣಿ ಬರೆಸುವ ಕಥೆಗಾರರಾದ ಅನಿಲ್ ಗುನ್ನಾಪೂರ ಅವರಿಗೆ ಪ್ರೀತಿ ಪೂರ್ವಕವಾದ ಧನ್ಯವಾದಗಳು. ಪುಸ್ತಕದ ಹೆಸರಿನಲ್ಲಿಯೂ ಕೂಡ ವಿಸ್ಮಯ ಅಲೆವ ನದಿ* ಈ ಪುಸ್ತಕವನ್ನು ನೀವುಗಳು ಕೊಂಡು ಓದಿ ನಿಮಗೂ ಕೆಲವು ಬದುಕಿನ ಅಲೆದಾಟದ ಚಿತ್ರಣವು ದೊರಕುತ್ತದೆ ಎಂದು ಹೇಳಬಹುದು, ಸಾಹಿತ್ಯಲೋಕಕ್ಕೆ ಈ ರೀತಿಯ ಇನ್ನೂ ಹೆಚ್ಚಿನ ಪುಸ್ತಕಗಳು ವಿಭಿನ್ನವಾಗಿ ಕಿರಸೂರ ಗಿರಿಯಪ್ಪನವರಿಂದ ಬರಲಿ ಎಂದು ಶುಭ ಹಾರೈಸುತ್ತೇನೆ  **************************************** ಮುತ್ತು ಬಳ್ಳಾ ಕಮತಪುರ

ಪುಸ್ತಕ ಪರಿಚಯ Read Post »

ಅನುವಾದ

ವೈನ್ ಇಲ್ಲವೇ ಇಲ್

ಅನುವಾದಿತ ಕವಿತೆ ವೈನ್ಇಲ್ಲವೇಇಲ್ಲ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಆಮಿಶಕ್ಕೊಳಪಡುವ ಖಾಲಿಯಾಗದ ಯಾವ ಮಧುವೂ ಇಲ್ಲಓ, ಹೂಬಿಡುವ ನಾರ್ಸಿಸಸ್ಸನ ನೋಟವೇ! ನಿನಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ. ನರಕಸದೃಶ ಸ್ಥಿತಿಯಲ್ಲಿರುವವನು ಸಂಪೂರ್ಣವಾಗಿ ಅಂಥ ಸ್ಥಿತಿಯಲ್ಲಿಲ್ಲಇದು ನರಕಗಳು ವಿಧಿಸಿದ ಶಿಕ್ಷೆ. ಆ ಶಿಕ್ಷೆ ಬಂದುದು ಪ್ರಿಯಕರನಿಂದ ಅಲ್ಲ ಪ್ರತಿ ಅಣುವೂ ನಿದ್ರಿಸದಿರುವ ನಿಶೆಯೇ ಇಂದಿನಿರುಳುನಾಳೆ ಒಂದು ಕ್ರಾಂತಿ ನಡೆಯಲಿದೆ, ಭೂಮಿ ಎಚ್ಚರದಿಂದಿದೆ ಜೀವನವು ನೋವಾಗಿ ಬದಲಾಗುತ್ತಲೇ ಇದೆ. ಈಗ ಏನಾಗಲಿದೆ?ಈಗ, ಆ ನೋಟ, ಪ್ರಾರ್ಥನೆಗಳಿಂದ ಯಾವುದೇ ಪ್ರಯೋಜನವಾಗದಿದೆ ಕಾರವಾನಿಗೆ ಚಂಡಮಾರುತ, ಗುಡುಗು ಮಿಂಚಿನ ಸೂಚನೆಗಳಿವೆಸಾವಿನ ಆತಂಕಗಳು ಅದರ ಮೇಲೆ ಯಾವುದೇ ನಿರ್ಬಂಧ ಹೇರದಿದೆ ಮಧು ಮತ್ತಿನೌಷಧಗಳ ಭಾರವಿರದಿಹ ಮಧುಶಾಲೆಗಳೆಲ್ಲಿಹವು?ವಿಶ್ವದ ಪಾರಮೇರೆಯ ಮೇಲೆ ಹರಡದಿರುವುದು ಒಂದು ಮೋಡವಲ್ಲದಿದೆ. ನಿನ್ನ ಪ್ರೀತಿ ನೀನೆಣಿಸಿದಂತೆ ಅಷ್ಟೊಂದು ಕೆಟ್ಟದ್ದಲ್ಲಅದಕ್ಕೆ ನೆಲವಿದೆ ಗಗನವಿದೆ ಅದು ವಿಶ್ವವನೆ ಹೊಂದಿದೆ ನನ್ನ ನಂಬಿಕೆ “ವಿಶ್ವದ ವಿರುದ್ಧ ಸ್ವರ್ಗ”ನಾನು ಪ್ರತಿಫಲವ ಬಯಸುತ್ತಿಲ್ಲ ದೇವರಿಗೆ ವಂದನೆಯಿದೆ ಯಾವಾಗಿನಿಂದ ಆ ಒಂದು ಗುರಿಯಲ್ಲಿ ದುಃಖದ ಕಾರವಾನ್ನಿಂತಿದೆ?ಯಾವಾಗಿನಿಂದ ಕ್ರಾಂತಿಯು ಕಾಲದ ಸಹ-ಪ್ರಯಾಣಿಕನಾಗದೆ ಉಳಿದಿದೆ? ಚಿಂತೆಬೇಡ! ಶತ್ರು ರುಂಡವ ಚೆಂಡಾಡಿದ ಬಳಿಕ, ಮೇಲಕ್ಕೆತ್ತಬಾರದು ಅದನ್ನುಯಾವಾಗ ತಾನೇ ಹಾರುವ ಧೂಳು ಕವಿಯ ಜೊತೆಗಾರನಾಗಿರದೆ ಉಳಿದಿದೆ? ಇಲ್ಲಿ ನಿಮ್ಮ ನೋವಿನಿಂದ ವಂಚಿತರಾದವರು ನಮಗೆಕೇಳಿಸುವ ವಿಶ್ವಪ್ರೀತಿಯ ಯಾವುದೇ ದುಃಖವನ್ನು ಹೊಂದದಿರಲಿ ಈಗಲೀಗಲೇ, ಮನುಷ್ಯನ ರಕ್ತ ನೀರಂತೆ ಹರಿಯಬಹುದುಈಗಲೀಗಲೇ ಜೀವನದ ಮುಖದಲ್ಲಿ ಹೊಳಪು ಮಾಸಬಹುದು ಪ್ರಪಂಚವ ಕುರಿತು ಪಾಪಿ ಜನಗಳು ಹೇಳುತ್ತಿದ್ದಾರೆ ಇಂತುಏರುತ್ತಿರುವ ಅಲೆ ತುಂಬಿದ ಈ ನದಿಯು ಮರೀಚಿಕೆಯಲ್ಲವೆಂದು ************************************

ವೈನ್ ಇಲ್ಲವೇ ಇಲ್ Read Post »

ಕಾವ್ಯಯಾನ

ಮರಕುಟಿಕ

ಕವಿತೆ ಮರಕುಟಿಕ ಡಾ. ಅರಕಲಗೂಡು ನೀಲಕಂಠ ಮೂರ್ತಿ ಒಂದು ಮರಕುಟಿಕ ಕುಕ್ಕುತ್ತಿದೆಕಾಯಕದಂತೆ ಕಾಯದೆಯಾರಿಗೂ ಎಡೆಬಿಡದೆಗುಕ್ಕು ಗುಕ್ಕು ಚಕ್ಕೆಯಷ್ಟೇಎಬ್ಬುತ್ತಿದೆ ಲೆಕ್ಕವಿಡದೆಮರದ ಕಾಂಡ-ಕೊಂಬೆಗಡುಸಾಗಿದೆ ವೀರ ಎದೆಯ ಹಾಗೆ! ಎಷ್ಟೊಂದು ಮರಕುಟಿಕಗಳುಬಂದು ಬಂದು ಕುಟಿಕಿ ಹೋಗಿದ್ದಾಗಿದೆಅರಿವು ಮಂಕಾಗುವಷ್ಟು ದಿನಗಳಿಂದಬರುತ್ತಲೇ ಇವೆ ಇಂದಿಗೂಸರದಿಯಲ್ಲೋಜಾತ್ರೆಯ ಜಂಗುಳಿಯಲ್ಲೋ… ಬಂದೇ ಬರುತ್ತವೆ ತಪ್ಪದೆ ಮುಂದೂ–ಮರವಿರುವಷ್ಟು ದಿನಅದರ ತಿರುಳು ತೊನೆವಷ್ಟು ದಿನಬಂದೇ ಬರುತ್ತವೆ… ಮರಕ್ಕೆ ನೋವಾಗುವುದೋ ಬಿಡುವುದೋಕುಟುಕುವ ಕೊಕ್ಕಿಗೇಕೆ ಉಸಾಬರಿ!ಕೆಲವೊಮ್ಮೆ ಮರ ಒಂದೇ…ಮರಕುಟಿಕಗಳನೇಕನೋವು ಮಾತ್ರ ನಿಶಬ್ದ ತದೇಕ!ಚಿಂತೆ ಕಂಬನಿ ಯಾರಿಗೆ…ಏಕೆ! ಮರ ಉರುಳಿ ಅಳಿದಮೇಲೆಎಲ್ಲಿಯ ಮರಕುಟಿಕಎಲ್ಲಿಯ ಕುಕ್ಕುವಿಕೆ…!

ಮರಕುಟಿಕ Read Post »

ಕಾವ್ಯಯಾನ

ಗಜಲ್

ಗಜಲ್ (ಗಾಂಧಿ:ಇನ್ನೊಂದು ನೋಟ) ಡಾ. ಗೋವಿಂದ ಹೆಗಡೆ ಚರಕ ನೂಲು ಕೋಲುಗಳಲ್ಲೇ ಅವನ ಕಂಡಿದ್ದೇವೆಕನ್ನಡಕವನ್ನು ಮರೆಯದೇ ಜೇಬಿಗೆ ಇಳಿಸಿದ್ದೇವೆ ಸ್ವರಾಜ್ಯ ಸತ್ಯಾಗ್ರಹ ಸ್ವದೇಶಿ- ದುಡಿಯುತ್ತ ಹೋದ ಅವನುನಾವು ಪುರಸೊತ್ತಾಗಿ ಕೂತು ಅವನ ಟೀಕಿಸುತ್ತೇವೆ ಒಂದೇ ಮಗ್ಗುಲ ಚಿತ್ರಗಳೆಂದರೆ ನಮಗೆ ಬಹಳ ಪ್ರೀತಿಒಂದು ಕಣ್ಣು ಮುಚ್ಚಿಯೇ ಎಲ್ಲವನ್ನೂ ಅಳೆಯುತ್ತೇವೆ ಕಪ್ಪು-ಬಿಳುಪುಗಳ ಆಚೆ ಲೋಕವೆಷ್ಟು ಸಂಕೀರ್ಣವಿದೆಕರಿಯ ಕನ್ನಡಕದಲ್ಲಿ ಕಂಡದ್ದು ಮಾತ್ರ ನಿಜವೆನ್ನುತ್ತೇವೆ ತಪ್ಪು ತೊಡರು ನೆರಳುಗಳನ್ನು ನೋಡುತ್ತ ನೀಡಿ ತೀರ್ಪುಬೆಳಕಿನೊಡನೆಯ ಮುಖಾಮುಖಿಗಳ ಬೇಕೆಂದೇ ಮರೆಯುತ್ತೇವೆ ಸಂಕೇತ-ಸಂಗತಿ, ಭಜನೆ-ಭಂಜನೆಗಳಲ್ಲಿ ನಮ್ಮ ನಡೆ ‘ಜಂಗಮ’ನಮ್ಮ ನಮ್ಮ ಅಳತೆಗೋಲುಗಳಲ್ಲೇ ಅವನ ಮಥಿಸುತ್ತೇವೆ *********************************

ಗಜಲ್ Read Post »

ಕಾವ್ಯಯಾನ

ದ್ವಿಪದಿಗಳು

ದ್ವಿಪದಿಗಳು ವಿ.ಹರಿನಾಥ ಬಾಬು ಯಾರನ್ನಾದರೂ ಏನ ಕೇಳುವುದಿದೆ?ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ! ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ?? ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದುಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ ಮರಗಿಡಗಳೂ ಮೌನ ತಾಳಿವೆಜೀವವಿರದ ಈ ದೇಹ ದಿಗಿಲುಗೊಂಡಿದೆ ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ ಒಂಟಿತನಕೆ ಯಾಕಿಷ್ಟು ಆತಂಕ?ನೀನು ಕೊಟ್ಟ ಪ್ರೀತಿಯ ಸವಿಮುತ್ತು ಇದ್ದ ಕಾಲಕ್ಕ ಹಗಲನೇಗೋ ಕಳೆದುಬಿಡುವೆ ಬೆಳಕಿನ ಜೊತೆಗೂಡಿಇರುಳು ನಿನ್ನ ನೆನಪ ಹೆಣವ ತಂದು ಸುರಿಯುತಿದೆ ಅಂಗಳಕೆ ನೀನಲ್ಲದೆ ಚಂದಿರ ಉರಿವ ಸೂರ್ಯನಿಗೂ ಮಿಗಿಲಾಗಿರುವಅವನ ಬೆಳದಿಂಗಳ ಬೆಂಕಿ ಕನಸುಗಳ ಸುಟ್ಟು ಕೇಕೆ ಹಾಕಿದೆ **********************************

ದ್ವಿಪದಿಗಳು Read Post »

ಕಾವ್ಯಯಾನ

ಪ್ರತಿಷ್ಠೆ ಬದಿಗಿಟ್ಟರೆ ಬಾಳು

ಕವಿತೆ ಪ್ರತಿಷ್ಠೆ ಬದಿಗಿಟ್ಟರೆ ಬಾಳು ಲಕ್ಷ್ಮೀದೇವಿ ಕಮ್ಮಾರ ಮನೆ ಮಿಡಿದರೂ ಪ್ರತಿಷ್ಟೆ ಗಡಿಅಡ್ಡಿಯಾಗಿದೆ ನನಗೂ ನಿನಗೂ ಅಕ್ಕಪಕ್ಕದ ಲ್ಲಿದ್ದರೂ ಅಹಂನ ಅಡ್ಡಗೋಡೆ ಅರಿಯಲಾರೆ ನನ್ನ ನೀನು ,ನಿನ್ನ ನಾನು ಬೇಕು ಬೇಕೆನಿಸಿರೂ ಸಾಕು ಮಾಡಿದ್ದೆವೆ ಮಾತುಕುಹಕಿಗಳಿಂದಾಗಿದೆ ಬಿರುಕುಒಡೆದು ಹೋಗುತ್ತಿದೆ ಪ್ರೀತಿ ಸೇತು ಒಲವದಾರೆ ಹರಿಸಲು ಬಂದುದರ ಕುರುಹುಅರಿಯದೆ ನಮ್ಮ ಸ್ವಾರ್ಥದ ಪರದಿಯಲಿ ಬಂದಿಯಾಗುಳಿದವರು ನಾವು ***********************************

ಪ್ರತಿಷ್ಠೆ ಬದಿಗಿಟ್ಟರೆ ಬಾಳು Read Post »

ಕಾವ್ಯಯಾನ

ಪ್ರೀತಿಯ ಬಿತ್ತಿ ಬೆಳೆಯಲು

ಕವಿತೆ ಪ್ರೀತಿಯ ಬಿತ್ತಿ ಬೆಳೆಯಲು ನಾಗರಾಜ ಹರಪನಹಳ್ಳಿ ನಾನು ಹೆಣ್ಣಾಗುವೆಗಾಂಧಿಯಂತಹ ಮಗನ ಹೆರಲು ಹೌದು,ಗಾಂಧಿಯಂಥ ಮಗ ಬೇಕುಈ ನೆಲಕ ದಿಕ್ಕು ತೋರಿಸಲು ಸಹನೆ ,ಸತ್ಯ ಅಹಿಂಸೆ ಹಂಚುವಗೋಡ್ಸೆ ಮನದ ಬಂದೂಕುಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲುಗಾಂಧಿಯಂಥ ಮಗನ ಹೆರಬೇಕು ಗೋಡ್ಸೆ ಮನದ ಗಡಿಗಳ ಅಳಿಸಿಅವನ ಕಣ್ಣಿಗೆ ಕರುಣೆ ತುಂಬಿಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿಬೆಳೆಯಲು ಗಾಂಧಿಯಂತಹ ಮಗ ಬೇಕು ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ ಜನನಾಯಕರ “ಕ್ಷಮಿಸು ಬಿಡು ಮಗನೆ” ಎನ್ನಲು ಗಾಂಧಿಯಂತಹ ಮಗ ಬೇಕು ಈ ನೆಲದ ಬೇರುಗಳಿಗೆ ರಕ್ತದ ಕಲೆಗಳಿವೆ ; ಬೆರಳುಗಳಿಗೆ ದ್ವೇಷದ ಹಸಿ ಮಾಂಸವಿದೆಹಿಂಸೆಯ ಭೂಮಿಯಲ್ಲಿಪ್ರೀತಿಯ ಬಿತ್ತಿ ಬೆಳೆಯಲುಗಾಂಧಿಯಂತಹ ಮಗನಹೆರಬೇಕು ನಾನು ಇಲ್ಲಿ ಪ್ರಾರ್ಥನಾ ಮಂದಿರಗಳು ಉರುಳಿವೆಗಲ್ಲಿ ಗಲ್ಲಿಗಳಲ್ಲಿ ಅನುಮಾನದ ಹುತ್ತಗಳೆದ್ದಿವೆ : ಕಾಣದ ಸರ್ಪಗಳು ಎಲ್ಲೋ ಅಡಗಿವೆ ಹುತ್ತವ ಬಡಿಯದೆ ,ಸರ್ಪಗಳ ಹಿಡಿದು ವಿಷ ತೆಗೆಯಲುಗಾಂಧಿಯಂಥ ಮಗ ಬೇಕಿದೆ ಗುಂಡಿಕ್ಕುವವನನೂ ಕ್ಷಮಿಸುವ ಗಾಂಧಿಯಂತಹ ಮಗನಮತ್ತೆ ಹೆರಬೇಕಿದೆಈ ನೆಲದ ತಾಯಿಯಾಗಿ ತಾಯ್ತನವ ಹಂಚಬೇಕಿದೆ ******************************

ಪ್ರೀತಿಯ ಬಿತ್ತಿ ಬೆಳೆಯಲು Read Post »

ಕಾವ್ಯಯಾನ

ಅಷ್ಟೇನೂ ಅಂತರವಿರಲಿಲ್ಲ

ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************

ಅಷ್ಟೇನೂ ಅಂತರವಿರಲಿಲ್ಲ Read Post »

ಕಾವ್ಯಯಾನ

ನೀನಾದೆ ನೀನಾದೆ

ಕವಿತೆ ನೀನಾದೆ ನೀನಾದೆ ಶಾಂತಲಾ ಮಧು ನೀನಾದೆ ಜೀವನದದಾತೆ ತಾಯಿಜೀವನದ ದಾತರುಹಲವಾರುಮುಗ್ದ ಮನಸಿಗೆಹಬ್ಬಿ ಆಲಂಗಿಸಿಉತ್ಸಾಹಕೆ ಚಿಲುಮೆ ನೀನಾದೆ ನೀನಾದೆ ನೀನಾದೆಪ್ರೀತಿ -ಪ್ರೇಮ ವಾತ್ಸಲ್ಯದಲಿತಣಿಸಿ ಸಂಕಲ್ಪ ವಿಕಲ್ಪ ನೀನಾದೆ ನೀನಾದೆಭೂಮಿ ಆಕಾಶಜಲ-ಚರ ಪ್ರಕೃತಿನೀಭಾವನೆಗಳ ಕಲಿಸಿಪುಲಕಿಸಿ ಪ್ರಶ್ನಿಸಿಉತ್ತರವೂ ನೀನಾದೆ ನೀನಾದೆ ನೀನಾದೆತಪ್ಪು ಸರಿ ಕೊಂಡಿಗಳಪೋಣಿಸಿ ನಿನ್ನೀ ಪ್ರಿಯಸರವಾಗಿಸಿ ಮೆರಸಿನೀನಾದೆ ಆದೆಅರಿಷ್ಟ್ ವರ್ಗಗಳಿಗೆಶರಣಾಗಿಸಿ ಕಾಡಿಸಿಬಿಟ್ಟು ಬಿಡದೆಕತ್ತಲು ಬೆಳಕಮಾಯೆಯಲಿ ಮೀಯಿಸಿಮನತಟ್ಟಿ .ನೀನಾದೆನೀನಾದೆಸ್ವಾರ್ಥ ವಿಕಲ್ಪಕೆ ಪ್ರಶ್ನೆನೀನಾದೆ ಶೋಧನೆಗೆ ಹುಟ್ಟುಭಾವನೆ ಬದುಕಿಗೆಹುಡುಕಾಟ ,ನೀನಾದೆ ನೀನಾದೆತಪ್ಪಿಗೆ ಹುಸಿ ಹೊಣೆಗಾರ ನೀನಾದೆ ನೀನಾದೆಭಯ-ಭಕ್ತಿಗೆ – ಭ್ರಮೆ,ಅಳಲನಾಲಿಸಿಅಂತರಂಗದ ಮಾತಾಗಿಸತ್ಯ ನಿತ್ಯವೇ ನೀನಾದೆನೀನಾದೆ ನೀನಾದೆ ನಿನ್ನೊಳಗೇ ‘ನಾ’ ನಿದ್ದೂ“ನಾ “ ?ಪ್ರಶ್ನೆಯೇ ಆದೆ. *****************************************

ನೀನಾದೆ ನೀನಾದೆ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ನೈಸು-ಬಿರುಸು ಒಮ್ಮೆ ತೊಗಲುಬೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣನವರ ಜತೆಗೆ ಮಾತಾಡುತ್ತ ಕುಳಿತಿದ್ದೆ. ಮಾತುಕತೆ ನಡುವೆ ಅವರ ಮನೆಯಿಂದ ಫೋನುಕರೆ ಬಂತು. ಅವರು ಎತ್ತಿಕೊಂಡು ಮರಾಠಿಯಲ್ಲಿ ಮಾತಾಡಿದರು. ಮಾತು ಮುಗಿದ ಬಳಿಕ ನನ್ನತ್ತ ಹುಳ್ಳಗೆ ನೋಡಿ `ನಮ್ಮದು ಒರಟು ಮರಾಠಿ’ ಎಂದರು. ಉತ್ತರ ಕರ್ನಾಟಕದ ತಿರುಗಾಟದಲ್ಲಿ ಕೆಲವರು ನನ್ನ ಕನ್ನಡಕ್ಕೆ `ನಿಮ್ಮ ಮಾತು ನೈಸು. ನಮ್ಮದು ಬಿರುಸು’ ಎಂದು ಪ್ರತಿಕ್ರಿಯಿಸುವುದುಂಟು. ವಿಚಾರಿಸಿ ನೋಡಿದರೆ, ಬಿರುಸೆಂದು ಭಾವಿಸಿದವರ ಮಾತಲ್ಲಿ ಆಡುಮಾತಿನ ಪ್ರಾದೇಶಿಕ ರೂಪಗಳು ಹೆಚ್ಚ್ಚಿರುತ್ತವೆ, ನೈಸೆಂದು ಕರೆಯಲಾಗುವ ಮತುಗಳಲ್ಲಿ ಬರೆಹದ ಶಿಷ್ಟತೆಯ ಪ್ರಮಾಣ ಹೆಚ್ಚಿರುತ್ತದೆ. ಪ್ರಶ್ನೆಯೆಂದರೆ, ತಮ್ಮ ವಾಗ್ರೂಪದ ಬಗ್ಗೆ ಈ ತಪ್ಪೊಪ್ಪಿಗೆಯ ಅಥವಾ ಕೀಳರಿಮೆಯ ದನಿಯಾಕೆ ಕಾಣಿಸಿಕೊಳ್ಳುತ್ತದೆ? ಈ ಕೀಳರಿಮೆ ಕನ್ನಡಕ್ಕೆ ಸೀಮಿತವಲ್ಲ, ಪ್ರಾದೇಶಿಕ ರೂಪಭೇದಗಳನ್ನು ಆಡುವ ಎಲ್ಲ ಭಾಷಿಕ ಸಮುದಾಯಗಳಲ್ಲೂ ಇದೆ. ಲಖನೊ-ದೆಹಲಿಯ ಉರ್ದುರೂಪಗಳು ಶ್ರೇಷ್ಠವೆಂಬ ನಂಬಿಕೆ ಭಾರತದ ಉಳಿದ ಪ್ರಾಂತ್ಯದ ಭಾಷಿಕರಲ್ಲಿದೆ. ಅದರ ಮುಂದೆ ಹೈದರಾಬಾದಿನ `ದಖನಿ’, ಸಿರಿವಂತರ ಮದುವೆಗೆ ಬಂದಿರುವ ಬಡವರ ತರಹ ಮುದುಡಿಕೊಳ್ಳುತ್ತದೆ. ತೆಲಂಗಾಣದ ತೆಲುಗು `ಒರಟು’ ಎಂಬ ಧೋರಣೆ ವಿಜಯವಾಡಾ-ಗೋದಾವರಿ ಭಾಗದವರಲ್ಲಿದೆ. ತೆಲುಗು ಸಿನಿಮಾಗಳಲ್ಲಿ ಯಜಮಾನಿಕೆ ಮಾಡುತ್ತಿರುವುದು ಇದೇ ಕರಾವಳಿಯ `ನೈಸು’ ತೆಲುಗು. ಸಿನಿಮಾಗಳು ತೆಲಂಗಾಣದ ನಟರನ್ನಿಟ್ಟುಕೊಂಡು ಹೈದರಾಬಾದ್ ಸ್ಟುಡಿಯೊಗಳಲ್ಲಿ ತಯಾರಾದರೂ, ವಿಜಯವಾಡ ಸೀಮೆಯ ಉಚ್ಚಜಾತಿಗಳಾಡುವ ಸಂಸ್ಕøತಭೂಯಿಷ್ಠ ತೆಲುಗನ್ನೇ ಬಳಸುತ್ತವೆ; ತಮಿಳು ಮಲೆಯಾಳ ವಿಷಯದಲ್ಲೂ ಇಂತಹ ಪ್ರಾದೇಶಿಕ ಶ್ರೇಣೀಕರಣ ಭಾವವಿದೆ. ತಿರುವನಂತಪುರದ ನಂಬೂದಿರಿಗಳ ಮಲೆಯಾಳವು ಮಿಗಿಲಾದುದೆಂಬ ಅಭಿಪ್ರಾಯ ಕೇರಳದಲ್ಲಿ ರೂಢವಾಗಿದೆ; ಪುಣೆಯ ಮರಾಠಿ ಶುದ್ಧವೆಂದೂ ವಿದರ್ಭದ ಅಥವಾ ಕೊಂಕಣದ ಮರಾಠಿಗಳು ಬೆರಕಿಯೆಂದೂ ಮಹಾರಾಷ್ಟ್ರಿಗರ ಗ್ರಹಿಕೆಯಿದೆ. ಬಹುಶಃ ಈ ತರತಮಪ್ರಜ್ಞೆ ಅಖಿಲ ಭಾರತೀಯವಾಗಿದೆ. ಇದೊಂದು ಭಾಷಿಕ ಬೇನೆ. ಭಾಷೆಯಲ್ಲಿ ಇದೆಯೆಂದು ನಂಬಲಾಗಿರುವ `ಒರಟು’ತನವು, ಪ್ರಕೃತಿಗೆ ಹತ್ತಿರವಾಗಿದ್ದು ಮೂಲರೂಪವನ್ನು ಗ್ರಾಮೀಣ ಜೀವಂತಿಕೆಯನ್ನು ಉಳಿಸಿಕೊಂಡಿರುವ ಎಂಬರ್ಥವಿದ್ದರೆ ಚಿಂತೆಯಿಲ್ಲ. ಅದು ಅಸೂಕ್ಷ್ಮ ಕಲಬೆರಕೆ ಎಂಬರ್ಥವಿದ್ದರೆ ಸಮಸ್ಯೆ. ಬೆಳಗಲ್ ವೀರಣ್ಣನವರು ಕಿಳ್ಳೆಕ್ಯಾತ ಸಮುದಾಯವರು. ಇದನ್ನು ಒಳಗೊಂಡಂತೆ ಕರ್ನಾಟಕದ ಗೋಸಂಗಿ ಹಕ್ಕಿಪಿಕ್ಕಿ ಬುಡ್ಗಜಂಗಮ ಮುಂತಾದ ಅಲೆಮಾರಿ ಕಲಾವಿದ ಸಮುದಾಯಗಳ ಮನೆಮಾತು ಮರಾಠಿ. ಈ ಸಮುದಾಯಗಳು ಮಹಾರಾಷ್ಟ್ರದಿಂದ ಯಾವಾಗ ಯಾಕಾಗಿ ಗುಳೆ ಬಂದವೊ ತಿಳಿಯದು. ಬಹುಕಾಲ ಕರ್ನಾಟಕದೊಳಗಿದ್ದ ಕಾರಣ, ತಮ್ಮದೇ ಆದ ಕನ್ನಡಮಿಶ್ರಿತ ಮರಾಠಿಯನ್ನು ರೂಪಿಸಿಕೊಂಡಿವೆ. ಈ ಮರಾಠಿಯು ಕನ್ನಡ-ತೆಲುಗು ಪ್ರದೇಶದಲ್ಲಿ ಬೆಳೆದಿರುವುದರಿಂದ ಸಹಜವಾಗಿ ದಟ್ಟ ದ್ರಾವಿಡತನದಿಂದ ಕೂಡಿದೆ. ಅದಕ್ಕಾಗಿ ಅವರು ಅದನ್ನು ಬಿರುಸೆಂದು ನಿರೀಕ್ಷಣ ಜಾಮೀನು ಅರ್ಜಿ ಹಾಕಿಕೊಳ್ಳುವುದರ ಅಗತ್ಯವಿಲ್ಲ. ಆದರೆ ವಾಸ್ತವದಲ್ಲಿ ಎಲ್ಲ ಭಾಷಿಕ ಮುಜುಗರಗಳ ಹಿಂದೆ ಉತ್ಕøಷ್ಟತೆಯ ಮಾದರಿಯೊಂದು ಕಣ್ಮುಂದೆ ಮೌಲ್ಯಮಾಪಕ ಅಧಿಕಾರ ಸ್ಥಾನದಲ್ಲಿ ನಿಂತಿರುತ್ತದೆ.ಜನ ತಮ್ಮ ನುಡಿ ಒರಟೆಂದು ಪರಿಭಾವಿಸಲು ವರ್ಗವೂ ಒಂದು ಕಾರಣ. ಚಲನಚಿತ್ರಗಳಲ್ಲಿ ತಮಾಶೆಗಾಗಿ ಬಳಕೆಯಾಗುವುದಕ್ಕೂ ಉತ್ತರ ಕರ್ನಾಟಕವು ರಾಜಕೀಯ ಅಧಿಕಾರ, ಸಂಪತ್ತಿನ ಹಂಚಿಕೆ, ಆಧುನಿಕತೆ ವಿಷಯದಲ್ಲಿ ಹಿಂದುಳಿದಿರುವುದಕ್ಕೂ ಸಂಬಂಧವಿದೆ. ಇಂಗ್ಲೀಶ್ ಮಾತಾಡುವ ಸಮುದಾಯಗಳಲ್ಲಿ, ಪದಬಳಕೆ, ವಾಕ್ಯರಚನೆ, ಉಚ್ಚಾರಣ ರೀತಿಯಲ್ಲಿರುವ ಭೇದಗಳು ಸೃಷ್ಟಿಸಿರುವ ತರತಮಗಳು ಅನಂತ. ಅಮೆರಿಕೆಯಲ್ಲಿ ಕಪ್ಪುಜನ ಮಾತಾಡುವ ಇಂಗ್ಲೀಶನ್ನು ಕೆಟ್ಟದೆಂದು ಬಿಳಿಯರು ವ್ಯಂಗ್ಯ ಮಾಡುವರೆಂದು ಕೇಳಿರುವೆ. ಭಾರತದಲ್ಲೇ ಬಿಹಾರಿಗಳ (ಭೋಜಪುರಿ) ಅಥವಾ ಕೇರಳಿಗರ ಇಂಗ್ಲೀಶ್ ಉಚ್ಚಾರಗಳನ್ನು ಕುರಿತು ಬಹಳ ಜೋಕುಗಳಿವೆ. ತಮ್ಮ ಇಂಗ್ಲೀಶ್ ಉಚ್ಚಾರಣೆಗಾಗಿ ಸ್ವತಃ ಆಂಗ್ಲ ಪ್ರಾಧ್ಯಾಪಕರೇ ಅಪಮಾನಿತರಾದ ಸನ್ನಿವೇಶಗಳನ್ನು ಅವರ ಆತ್ಮಕತೆಗಳು ಹೇಳುತ್ತವೆ.ನಮ್ಮದು ಬಹುಸಾಂಸ್ಕøತಿಕ ಬಹುಭಾಷಿಕ ಬಹುಧಾರ್ಮಿಕ ದೇಶವೆಂದೂ, ಏಕಸಂಸ್ಕøತಿ ಏಕಧರ್ಮ ಏಕಭಾಕ ದೇಶಗಳಲ್ಲಿಲ್ಲದ ವೈವಿಧ್ಯ ಮತ್ತು ಕೂಡುಬಾಳುವೆ ಇಲ್ಲಿದೆಯೆಂದೂ ಅಭಿಮಾನದಿಂದ ಕೊಂಡಾಡುತ್ತೇವೆ. ಆದರೆ ಬಾಹುಳ್ಯ ಮತ್ತು ವೈವಿಧ್ಯದ ಒಳಗೆ ಕ್ರಿಯಾಶೀಲವಾಗಿರುವ ತರತಮಗಳನ್ನು ಮರೆಮಾಚುತ್ತೇವೆ. ಪಾಕಿಸ್ತಾನದ ಉರ್ದು ಹಾಗೂ ಬಾಂಗ್ಲಾದೇಶದ ಬಂಗಾಳಿಗಳ ಪ್ರಾದೇಶಿಕ ಭಿನ್ನತೆಗಳಲ್ಲೂ ಇಂತಹವೇ ತಾರತಮ್ಯಗಳಿವೆ. ಶ್ರೇಣೀಕರಣವು ಉಪಖಂಡದ ಸಾಮಾಜಿಕ ಧಾರ್ಮಿಕ ಬದುಕಿನ ನೆತ್ತರೊಳಗೇ ಸೇರಿಹೋದಂತಿದೆ. ಅದರ ಝಳ ಭಾಷೆಯ ಮೂಲಕ ಮುಖದೋರುತ್ತಿದೆ.ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ಉಚ್ಚಜಾತಿ, ಮೇಲ್ವರ್ಗ, ನಗರವಾಸಿ, ಆಧುನಿಕರು, ಅಕ್ಷರಸ್ಥರು, ಅಧಿಕಾರ ಕೇಂದ್ರಕ್ಕೆ ಸಮೀಪ ಇರುವವರು ಆಡುವ ಭಾಷಿಕ ರೂಪ ಮತ್ತು ಉಚ್ಚಾರಗಳು ಶ್ರೇಷ್ಠವೆಂದು ಪರಿಗಣಿತವಾಗಿರುತ್ತವೆ. ಕೆಳಜಾತಿ, ಕೆಳವರ್ಗ, ಗ್ರಾಮೀಣ, ಆನಾಧುನಿಕ ಹಾಗೂ ಹಿಂದುಳಿದ ಪ್ರದೇಶದ ಜನರು ತಮ್ಮ ಭಾಷೆಗೆ ಮಾತ್ರವಲ್ಲ, ಸಂಸ್ಕøತಿ ಉಡುಪು ಆಹಾರಗಳನ್ನು ಕೀಳ್ಗಳೆವ ಸಿದ್ಧಾಂತಗಳಿಗೆ ಸಮ್ಮತಿ ಕೊಟ್ಟಿರುತ್ತಾರೆ. ಭಾಷಾವಿಜ್ಞಾನದ ಪ್ರಕಾರ ಭಾಷೆಯಲ್ಲಿ ಒರಟು-ನೈಸು, ಶ್ರೇಷ್ಠ-ಕನಿಷ್ಠ ಎಂಬುದು ಇರುವುದಿಲ್ಲ. ನಿರ್ದಿಷ್ಟ ಭಾಷೆ ವಿಭಿನ್ನ ಚಾರಿತ್ರಿಕ ಸಾಮಾಜಿಕ ಭೌಗೋಳಿಕ ಕಾರಣಗಳಿಂದ ಬಹುರೂಪಧಾರಣೆ ಮಾಡುವುದನ್ನು ಅದು ವಿವರಿಸುತ್ತದೆ. ಆದರೆ, ಚಾರಿತ್ರಿಕ ಒತ್ತಡಗಳಿಂದ ಹುಟ್ಟುವ ಈ ಬಹುತ್ವದೊಳಗೆ ಅಡಗಿರುವ ಭೇದಪ್ರಜ್ಞೆಯ ದೆಸೆಯಿಂದ, ಅದರ ರೂಪಗಳಲ್ಲಿರುವ ಶ್ರೇಷ್ಠ ಮತ್ತು ಕೀಳು ಭಾವವು ಚಾಲ್ತಿಗೆ ಬಂದುಬಿಡುತ್ತದೆ. ಈ ಭೇದಕ್ಕೆ ಕಾರಣ, ಭಾಷಿಕ ರೂಪದೊಳಗಿನ ಪದರಚನೆ ವಾಕ್ಯರಚನೆಗಳಲ್ಲ. ಅವನ್ನಾಡುವ ಜನರ ಹಿನ್ನೆಲೆಗಳು. ಶ್ರೇಷ್ಠವೆಂದೂ ನೈಸೆಂದೂ ಭಾವಿಸಲಾದ ರೂಪವು `ಕೆಳ’ `ಒರಟು’ `ಅಶುದ್ಧ’ ಎನಿಸಿಕೊಂಡಿರುವುದನ್ನು ಗೇಲಿ ಮಾಡುತ್ತದೆ. ಧಾರವಾಡ (ಕೆಲವೊಮ್ಮೆ ಮಂಗಳೂರು) ಕನ್ನಡವು ಬೆಂಗಳೂರು ಕೇಂದ್ರಿತ ಸಿನಿಮಾಗಳಲ್ಲಿ ಬಹುಕಾಲ ಹಾಸ್ಯಪಾತ್ರಗಳಲ್ಲಿ ಬಳಕೆಯಾಗುತ್ತಿತ್ತು. ಆದರೆ ಈಗೀಗ ಧಾರವಾಡ ಕನ್ನಡದಲ್ಲಿ ಸಿನಿಮಾ ಸೀರಿಯಲ್ ತಯಾರಾಗುತ್ತಿವೆ. ಆದರೆ ಅಲ್ಲೆಲ್ಲೂ ಮೈಸೂರು ಕನ್ನಡವನ್ನು ತಮಾಶೆಗಾಗಿ ಬಳಸಿಕೊಂಡಿರುವ ನಿದರ್ಶನಗಳನ್ನು ನಾನು ನೋಡಲಿಲ್ಲ. ಸಂಸ್ಕøತಭೂಯಿಷ್ಠ ಅಧಿಕೃತ ಹಿಂದಿಯ ಅಹಮಿಕೆ ಮತ್ತು ಕೃತಕತೆಯನ್ನು ಗೇಲಿಮಾಡುವ `ಚುಪ್ಕೆಚುಪ್ಕೆ’ ತರಹದ ಚಿತ್ರಗಳು ಕನ್ನಡದಲ್ಲಿ ಬಂದಂತಿಲ್ಲ. ಜನರನ್ನು, ಅವರ ಜಾತಿ ಪ್ರದೇಶ ಧರ್ಮ ವೃತ್ತಿ ಭಾಷೆಗಳ ನೆಲೆಯಿಂದ ಕೀಳರಿಮೆಗೊಳಿಸುವುದು, ಅವರ ಸಹಜ ವಿಕಾಸದ ಪ್ರಕ್ರಿಯೆಯನ್ನು ಮುರುಟಿಸುತ್ತದೆ. ಈ ಅಸಹಜ ಸನ್ನಿವೇಶ ಎರಡು ಹೊರದಾರಿಗಳನ್ನು ಹುಟ್ಟಿಸುತ್ತದೆ. ಒಂದು- ಶ್ರೇಷ್ಠವೆನಿಸಿರುವ ಭಾಷಿಕ ರೂಪವನ್ನು ಕುರುಡಾಗಿ ಅನುಕರಿಸುವುದಕ್ಕೆ. ಕರ್ನಾಟಕದ ನಗರ ಮಧ್ಯಮವರ್ಗದ ಮುಸ್ಲಿಮರು ಫಾರಸಿಯುಕ್ತ ಉರ್ದುವನ್ನು ವೈಯಾರದಲ್ಲಿ ಬಳಸುವುದರಲ್ಲಿ ಇದನ್ನು ಗಮನಿಸಬಹುದು. ಎರಡು- `ಒರಟು’ ಎನಿಸಿಕೊಂಡಿರುವ ರೂಪವನ್ನೇ ಕೆಚ್ಚಿನಿಂದ ಬಳಸುವುದು. ಉತ್ತರ ಕರ್ನಾಟಕದ ಕೆಲವು ಲೇಖಕರು ಮೈಸೂರು ಬೆಂಗಳೂರಿಗೆ ಹೋದರೂ ಜಿಗುಟುತನದಿಂದ ತಮ್ಮ ಪ್ರಾದೇಶಿಕ ರೂಪವನ್ನೇ ಬಳಸುತ್ತಿರುವರು. ಆದರೂ ಈ ಕೆಚ್ಚು ಕೆಲವರ ವೈಯಕ್ತಿಕ ಹಠವಾಗಿ ಉಳಿದಿಕೊಂಡಿದೆ. ಅದು ಬರೆಹಕ್ಕೆ ವಿಸ್ತರಣೆಯಾಗಿದ್ದು ಕಡಿಮೆ. ಟಪ್ಪಾಲು ಮುಟ್ಟಿತು ಎನ್ನುವುದಕ್ಕೂ ಪತ್ರ ತಲುಪಿತು ಎನ್ನುವುದಕ್ಕೂ ಅರ್ಥವ್ಯತ್ಯಾಸವಿಲ್ಲ. ಆದರೆ ಭಾವ ಮತ್ತು ಸೊಗಡಿನಲ್ಲಿ ಭಿನ್ನತೆಯಿದೆ. ಸ್ನಾನ, ಮೈತೊಳೆ, ಜಳಕಗಳ ನಡುವೆ; ಆಕಳು-ಹಸು-ಗೋವುಗಳ ನಡುವೆ ಪ್ರಾದೇಶಿಕ ಮಾತ್ರವಲ್ಲ, ಸಾಂಸ್ಕøತಿಕ ಫರಕುಗಳೂ ಇವೆ. ತೆಲುಗಿನಲ್ಲಿ ಮಳೆಯ ಅರ್ಥವುಳ್ಳ `ಯಾನಮು’ ಮತ್ತು `ವರ್ಷಮು’ಗಳು ಬಳಸುವವರ ಸ್ಥಾನನಿರ್ಣಯ ಮಾಡುತ್ತವೆ. ಸಮುದಾಯಗಳು ತಮ್ಮ ಭಾಷಿಕ ರೂಪಗಳನ್ನು ಕೀಳರಿಮೆಯಿಲ್ಲದೆ ಬಳಸುವುದು ಪ್ರಜಾಸತ್ತಾತ್ಮಕ ಹಕ್ಕಿನ ಸಂಗತಿ. ಆಯಾ ಪ್ರದೇಶದ ಅಥವಾ ಸಮುದಾಯಗಳ ಆಲೋಚನಕ್ರಮ, ಅನುಭವ ಜಗತ್ತು, ತಾತ್ವಿಕ ನಂಬಿಕೆ, ಸಾಂಸ್ಕøತಿಕ ನಡಾವಳಿಗಳು, `ಒರಟು’ ಎನಿಸಿಕೊಂಡ ರೂಪಗಳಲ್ಲಿ ಹಾಲಿನೊಳಗಿನ ತುಪ್ಪದಂತೆ ಅಡಗಿರುತ್ತವೆ. ಇದರ ಸಾಂಸ್ಕøತಿಕ ಅನನ್ಯತೆಯನ್ನು ಲೋಕಕ್ಕೆ ಲೇಖಕರು ಕಾಣಿಸುವರು. ಇದೊಂದು ಮಹತ್ವದ ಸಾಂಸ್ಕøತಿಕ ಹೊಣೆ ಕೂಡ. ಶ್ರೇಷ್ಠ ಶುದ್ಧ ನೈಸು ಅನಿಸಿಕೊಂಡಿರುವ ರೂಪಗಳಲ್ಲಿರದ ಕಸುವು ಚೆಲವುಗಳು `ಒರಟು’ `ಕಲಬೆರಕೆ’ `ಕೀಳು’ ಎನಿಸಿದ ರೂಪಗಳಲ್ಲಿ ಇರುವುದುಂಟು. ಸಾಮಾನ್ಯವಾಗಿ ಪ್ರಮಾಣೀಕರಣ ಪಡೆದ ಅಧಿಕೃತ ಭಾಷಿಕ ರೂಪಗಳು ಅತಿಬಳಕೆಯಿಂದ ಸವೆದಿರುತ್ತವೆ; ಒರಟೆನಿಸಿಕೊಂಡ ರೂಪವಿನ್ಯಾಸಗಳು ತಾಜಾತನದಿಂದ ಬೆಳಗುತ್ತಿರುತ್ತವೆ. ತಮ್ಮ ಮೇಲೆ ಕವಿದುಬಿದ್ದಿರುವ ಕೀಳರಿಮೆಯ ಧೂಲಿನ ದೆಸೆಯಿಂದ ಅವು ವಿಭಿನ್ನ ನಿಯೋಗಗಳಲ್ಲಿ ಬಳಕೆಯಾಗದೆ ಹಿಂಜರಿದು ನಿಂತಿರುತ್ತವೆ. ಈ ಹಿಂಜರಿಕೆ ಕೆಲವೊಮ್ಮೆ ಅವುಗಳ ಕಣ್ಮರೆಗೆ ಕಾರಣವಾಗಬಹುದು. ಉರ್ದು ಗಾದೆ ಮತ್ತು ನುಡಿಗಟ್ಟುಗಳನ್ನು ನೋಡುವಾಗ ನನಗೆ ಈ ಘೋರಸತ್ಯ ಹೊಳೆಯುತ್ತದೆ. ಅಲ್ಲಿ ಜೀವಂತಿಕೆಯಿಂದ ನಳನಳಿಸುವ ಎಷ್ಟೊಂದು ಗಾದೆಗಳಿವೆ. `ಜೀನಾ ಕರಗೆ ಹವ್ವಾ, ಗಾಂಡಕೊ ಬಂದಿ ತವ್ವಾ’ (=ಬಾಳುವೆ ಮಾಡೆ ಹವ್ವಕ್ಕ ಅಂದರೆ ಕುಂಡೆಗೆ ಕಾವಲಿ ಕಟ್ಕೊಂಡಿದ್ದಳಂತೆ) ಇವುಗಳಲ್ಲೊಂದು. ಇವು ಜನಬಳಕೆಯಲ್ಲಿ ಮುಜಗರವಿಲ್ಲದೆ ಸಹಜವಾಗಿ ಬಳಕೆಯಾಗುತ್ತವೆ. ಇವುಗಳಲ್ಲಿರುವ ನೇರಗುಣ, ತೀಕ್ಷ್ಣತೆ, ಹರಳುಗಟ್ಟಿದ ಅನುಭವ, ಕಾವ್ಯದ ಲಯಬದ್ಧತೆ ಮತ್ತು ಸಂಕ್ಷಿಪ್ತತೆ, ಧ್ವನಿಪೂರ್ಣತೆಗಳು ಜೀವಂತವಾಗಿವೆ. ನಗರ ಪ್ರದೇಶದ ಮಧ್ಯಮವರ್ಗದ ಜನರ ಪ್ರೌಢಉರ್ದುವಿಗೆ ಹೋಲಿಸಿದರೆ ಇದರ ಶಕ್ತಿ ಎದ್ದುಕಾಣುತ್ತದೆ. ಆದರೆ ಕರ್ನಾಟಕದ ಉರ್ದು ಲೇಖಕರು ಇದರ ಅನುಸಂಧಾನವನ್ನೇ ಮಾಡಿದಂತಿಲ್ಲ. ಫಾರಸಿಭೂಯಿಷ್ಠ ರಮ್ಯ ಉರ್ದುವಿನ ಯಜಮಾನಿಕೆಯಲ್ಲಿ ಅವರ ಬರೆಹ ಮಾತು ಬಳಲುತ್ತಿವೆ ಅನಿಸುತ್ತದೆ. ನಮ್ಮ ಅನೇಕ ತತ್ವಪದಕಾರರು ಈ ಪ್ರಾದೇಶಿಕ ‘ಒರಟು’ ಕನ್ನಡವನ್ನು ತಮ್ಮ ಬರೆಹದಲ್ಲಿ ಬಳಸಿರುವುದುಂಟು. ಇದನ್ನು ಬಹಳ ತಡವಾಗಿ ಆಧುನಿಕ ಲೇಖಕರು ಮುಜುಗರಬಿಟ್ಟು ಬಳಸಿದರು. ಇದನ್ನು ಪಾತ್ರಗಳಾಡುವ ಸಂಭಾಷಣೆಯಲ್ಲಿ ಮಾತ್ರವಲ್ಲ, ಅದರ ಹಿಂದೆ ಮುಂದೆ ಇರುವ ನಿರೂಪಣ ಭಾಷೆಯಲ್ಲೂ ತಂದರು. ಕೀಳೀಕರಿಸಿದ ಭಾಷಿಕ ರೂಪಗಳನ್ನು ತಿಳಿವಿನ ಅನುಸಂಧಾನದೊಳಗೆ ತರುವುದು ಅಸ್ಮಿತೆ ಹೋರಾಟ ಮಾತ್ರವಲ್ಲ, ಸಮಾಜವಾದಿ ಕ್ರಿಯೆ ಕೂಡ. ಇದು ಹದುಳದಾಯಕ ಸಮಾಜವನ್ನು ಕಟ್ಟುವಾಗ, ಎಲ್ಲ ಜನವರ್ಗಗಳನ್ನು ಒಳಗೊಳ್ಳುವ ಅಭಿವೃದ್ಧಿ ಮೀಮಾಂಸೆಗೂ ಸಂಬಂಧಿಸುವ ತತ್ವ. ******************************* ರಹಮತ್ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

You cannot copy content of this page

Scroll to Top