ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹೂಗಳು ಅರಳುವ ಸಮಯ :

ಮೊದಲ ಕವಿತೆಯ ರೋಮಾಂಚನ ಅನುಪಮಾ ತುರುವೇಕೆರೆ ನನ್ನ ಜನ ಈಗ ನಿರಾಶ್ರಿತರು ಮತ್ತೊಮ್ಮೆ ಸಾಗಬೇಕು ಈ ದಾರಿಯಲ್ಲಿ ?ಪಯಣವನ್ನು ಇನ್ನೆಷ್ಟು ಸಾಗಿಸಬೇಕು!ಹಸಿವಿನ ಸಮುದ್ರವ ಬೆನ್ನಲಿ ಕಟ್ಟಿನಿರಾಸೆಯ ಕಾಂತಾರವ ಕಣ್ಣೊಳಗೆ ಬಂಧಿಸಿನಡೆಯುತ್ತಲೇ ಇದ್ದಾರೆ ನನ್ನ ಜನಊರಿಂದ ಪೇಟೆಗೆ ಅನ್ನಬಯಸಿಪೇಟೆಯಿಂದ ಊರಿಗೆ ಜೀವ ಬಯಸಿ ಆಶ್ರಯದ ಭರವಸೆಗಳ ಹೆಣಗಳುಹೇಷಾರವ ಮಾಡುತಿವೆಮಹಲಿನ ಸ್ಮಶಾನಗಳಲಿಅಲ್ಲಿ ಚಿಗುರಿದ ಗರಿಕೆ ನನ್ನ ಜನಹೆದರಿಕೆಯ ನಲ್ಲೆಯನು ಮುದ್ದಿಸುತಸಾಗುತ್ತಲೇ ಇದ್ದಾರೆ. ಬಾಗಿದ ಬೆನ್ನಲಿಶತಮಾನದ ನೋವ ಹೊತ್ತವರುಮಣ್ಣ ಕಣದೊಳಗೆ ಕಣ್ಣ ಕಣವನು ಕಂಡಎರೆಯಹುಳದಂತೆಹಸುರೊಳಗೆ ಪತ್ರಹರಿತ್ತುವಿನಂತೆಸಮ್ಮಾನವ ಬಯಸದ ನನ್ನ ಜನನಿರಾಶ್ರಿತರು ನಿರಾಸೆಯ ಮಕ್ಕಳು ನೀರು ಬಾಯಾರಿದ ಹೊತ್ತಲ್ಲಿಬಯಲಿಗೆ ಬೆವರ ಬಸಿದು ನಗಿಸಿದವರುಗಾಳಿ ನಿತ್ರಾಣವಾದ ಗಳಿಗೆಯಲಿಮಾರುತದಂತೆ ಆವರಿಸಿ ಗಿಡಮರಗಳ ಸಂತೈಸಿದರುಭೂಮಿಯ ಮೈಯ ಕೊಳೆಯನ್ನಭಕ್ತರು ಮಾಡುವ ನೇಮದಂತೆ ಬಾಚಿ ಬಳಿದವರು ನಿಲ್ಲದ ಪಯಣದಲಿ ದಾರಿಯ ಒಂಟಿತನ ನೀಗಿಗಿಡಗೆಂಟೆಗಳ ಹಾಡಿಗೆ ಹೆಜ್ಜೆಯಾದವರುನನ್ನ ಜನ ಈಗ ಮತ್ತೊಮ್ಮೆ ನಿರಾಶ್ರಿತರು ಈ ಕವಿತೆಯು ನನ್ನ ಬಾಲ್ಯದ ಗೆಳತಿ.ಶಾಲಾ ದಿನಗಳಿಂದ ಲೇ ಅವಳು ನನ್ನ ಎದೆಯೊಳಗೆ ಸೇರಿ ಪಲ್ಲವಿಸುತ್ತಿದ್ದಳು. ನಾನು ಬೆಳೆದ ಪರಿಸರದಲ್ಲಿ ಕನ್ನಡದ ನುಡಿಗಟ್ಟುಗಳು, ಜನರಾಡುವ ಮಾತಿನ ಲಯಗಳು ಎಲ್ಲವೂ ಸೇರಿ ಪದಗ ಳು ಜೀವ ತಳೆದು,ಹೊಚ್ಚ ಹೊಸಬಳಾದ ಕವಿತೆ ನನ್ನ ಸಂಗಾತಿಯಂತೆ ಕಾಲೇಜಿಗೆ ಬಂದಾಗಲೂ ನನ್ನೊಳಗೆ ಪ್ರೌಢವಾಗುತ್ತ ಬಂದವಳು. ಆದರೆ ಎಂದು ಅಕ್ಷರ ರೂಪದಲ್ಲಿ ನನ್ನ ಭಾವನೆಗಳಿಗೆ ಸಾಕ್ಷಿಯಾದವಳಲ್ಲ. ಆದರೆ ಜಗತ್ತನ್ನೇ ತಲ್ಲಣಗೊಳಿಸಿದ ಮಾರಣಾಂತಿಕ ರೋಗ ಕೊರೋನಾ ಸಮಯದಲ್ಲಿ ಖಾಲಿಯಾಗಿ ಕೂತ ಮೆದುಳಿಗೆ ಈ ನನ್ನೊಳಗಿನ ಕವಿತೆ ಮಿಡಿದಳು. ಭಯ,ಆತಂಕಗಳ ನಡುವೆಯೂ ಅಕ್ಷರಗಳ ಕಟ್ಟುವ ಅನಿವಾರ್ಯತೆ ನನಗೂ ಬಂದಿತು.ಮೊದಮೊದ ಲು ನಡೆದ ಸತ್ಯಘಟನೆಗಳನ್ನು ಬರೆಯುವುದು ನನಗೆ ಅನಿವಾರ್ಯವಾಗಿತ್ತು.ಏಕೆಂದರೆ ಕಾವ್ಯದ ದನಿ ಅದು ಎದೆಯ ದನಿಯಾಗಿತ್ತು.ಆದರೆ ಬರೆಯುವಾಗ ಮೂಡಿದ ಹೊಸ ಚೈತನ್ಯ ಪದಗಳಿಂದ ಹೊರ ಹೊಮ್ಮಿದ ಅರ್ಥಶಕ್ತಿ, ಇವುಗಳನ್ನು ನಾನೇ ಬರೆದೆನೆ ಎನ್ನುವಷ್ಟು ಆಹ್ಲಾದಕರ ಅನುಭವ ನನಗಾಗುತ್ತಿತ್ತು.ಆ ಮೊದಲ ಪದದಿಂದ ಬಂದ ಸ್ಪೂರ್ತಿ ಈಗಲೂ ಆ ನನ್ನೊಳಗಿನ ಗೆಳತಿ ಕಾವ್ಯಳನ್ನು ಸಶಕ್ತಳನ್ನಾಗಿ ಮಾಡುತಿದೆ. ಮೊದಲ ಬರವಣಿಗೆ ಆ ನನ್ನ ಪುಳಕಿತ ಭಾವವೇ ನನ್ನೊಳಗಿನ ಆ ಬೆಳೆದ ಕಾವ್ಯ–ಕವಿತೆ ಯಾದಳು ಹಾಡಾದಳು. ಲೇಖನಿ ಹಿಡಿದು ಕುಳಿತರೇ ಆ ಮೊದಲ ಅನುಭವದ ಸ್ಪೂರ್ತಿ ಬದಲಾಗುತ್ತಿಲ್ಲ. ಹೀಗೆ ಮನವನ್ನು ಮುದಗೊಳಿಸಿ ಕವಿತೆಗಳ ಕಟ್ಟುಲು ಅಣಿಗೊಳಿಸಿದ ಆ ಮೊದಲ ಅನುಭ ವಕೆ ನನ್ನದೊಂದು ಮನವಿ.ಮೊದಲ ದಿನ ಇದ್ದ ಆ ಹುರು ಪು ಆಹ್ಲಾದತೆ ಹಾಗೆಯೇಇರಲಿ ಎಂದು ಕೇಳುವೆ. ಮೊದಲ ಕವನದ ಅನುಭವ ನವ್ಯ ಹುರುಪಿನ ಮನೋ ಭಾವ **********************

ಹೂಗಳು ಅರಳುವ ಸಮಯ : Read Post »

ಇತರೆ

ಮೊದಲ ಕವಿತೆಯ ಅನುಭವದ ಸಾರ

ಮೊದಲ ಕವಿತೆಯ ರೋಮಾಂಚನ ಪೂಜಾ ನಾರಾಯಣ ನಾಯಕ            ಅದ್ಯಾಕೋ ಗೊತ್ತಿಲ್ಲ ಬಾಲ್ಯದ ದಿನದಿಂದಲೂ ಕನ್ನಡ ಭಾಷೆ ಮತ್ತು ಸಾಹಿತ್ಯ ಮೇಲೆ ಇತರ ಯಾವ ಭಾಷೆಯ ಮೇಲೂ ಇಲ್ಲದ ಒಲವು, ವಾತ್ಸಲ್ಯ, ಕರುಣೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ರೀತಿಯ ಗೌರವದ ಭಾವ ನನ್ನಲ್ಲಿ ನೆಲೆಯಾಗಿಬಿಟ್ಟಿದೆ. ಅದೇ ಕಾರಣಕ್ಕೋ ಏನೋ ಕವಿತೆಯನ್ನು ಬರೆಯಬೇಕು ಎನ್ನುವ ಸಣ್ಣ ತುಡಿತ ನನ್ನಲ್ಲಿ ಮೊಳಕೆಯೊಡೆದದ್ದು. ಆದರೆ ಶಾಲಾ-ಕಾಲೇಜಿನ ಪುಸ್ತಕದಲ್ಲಿನ ಕವಿಗಳ ಸಾಹಿತ್ಯದ ಹೊರತಾಗಿ ಬೇರಾವ ಹೆಚ್ಚಿನ ಸಾಹಿತ್ಯದ ಬಗ್ಗೆಯೂ ಗೊತ್ತಿಲ್ಲದ ನನಗೆ ಕಾವ್ಯವನ್ನು ರಚಿಸುವುದು ಹೇಗೆ?  ನನ್ನಿಂದ ರಚಿಸಲು ಸಾಧ್ಯವೇ? ಬರೆದರೂ ಸಹ ಪ್ರಕಟಿಸುವುದು ಹೇಗೆ ಮತ್ತು ಎಲ್ಲಿ? ಎನ್ನುವ ಹಲವಾರು ಪ್ರಶ್ನೆಗಳು ನನ್ನಲ್ಲಿ ಸದಾ ಕಾಡುತ್ತಲೇ ಇರುತ್ತಿದ್ದವು. ಪ್ರಶ್ನೆಗಳೆಲ್ಲ ಮನದಲ್ಲಿ ಗಿರಕಿ ಹೊಡೆಯುತ್ತಲೇ ಇದ್ದರೂ ಕೂಡ ಒಮ್ಮೆಯಾದರೂ ಕವಿತೆಯನ್ನು ಬರೆದೇ ತೀರಬೇಕೆನ್ನುವ ಕೌತುಕತೆ ಮಾತ್ರ ಎಂದಿಗೂ ಇದ್ದೇ ಇತ್ತು.  ನಾಗಚಂದ್ರ,  ಮುದ್ದಣ,  ಕುಮಾರವ್ಯಾಸರಂತ ಕನ್ನಡದ ಮೇರು ಕವಿಗಳಿಂದ ಹಿಡಿದು ಕುವೆಂಪು, ಬೇಂದ್ರೆ, ಕಾರಂತರಂತಹ ನವೋದಯ ಕವಿಗಳ ಪದ್ಯಗಳನ್ನ ಶಾಲಾ ದಿನಗಳಲ್ಲಿ ಓದುವಾಗ ಅವರ ಅದ್ಭುತ ಕಾವ್ಯ ರಚನಾ ಕ್ರಮ, ಕಾವ್ಯದ ಸೊಬಗು, ಕಾವ್ಯದಲ್ಲಿ ಅಡಕವಾಗಿರುವ ಅತ್ಯದ್ಭುತ ಶಕ್ತಿ, ಅವರು ಕಾವ್ಯಕ್ಕೆ ಶಬ್ದವನ್ನು ಪೋಣಿಸುವ ಗತಿ ಇವೆಲ್ಲವನ್ನೂ ಸಿಂಹಾವಲೋಕನ ಮಾಡಿ ನೋಡಿದಾಗ, ಸೋಜಿಗವೆಂದೆನಗನಿಸಿ ಅಬ್ಬಾ! ಬಹುಶಃ ಇದೆಲ್ಲ ವಾಗ್ದೇವಿಯ ಕೃಪೆಯೇ ಇದ್ದಿರಬೇಕೆಂದುಕೊಳ್ಳುತ್ತಿದ್ದೆ. ಅದೇ ಕ್ಷಣದಲ್ಲಿ ನನ್ನೊಳಗೆ ಕಾವ್ಯದ ಒಂದೆರಡು ಸಾಲು ಮಿನುಗಿದಂತಾಗಿ ನಾನೇಕೆ ಮಿನುಗಿದ ಈ ಭಾವನೆಯ ಸಾಲುಗಳನ್ನು ಬರವಣಿಗೆಯ ರೂಪಕ್ಕೆ ಕೂರಿಸಬಾರದೆಂದೆನಿಸಿ ಪಟ್ಟಿ – ಪೆನ್ನು ಹಿಡಿದು ಎಷ್ಟು ಬಾರಿ ಏನೇನೋ ತೋಚಿದನ್ನು ಗೀಚಿದ್ದಿಲ್ಲ! ಆದರೆ ಶಾಲಾ-ಕಾಲೇಜು ವಿದ್ಯಾಭ್ಯಾಸದ ನಡುವೆ ಅಷ್ಟೇನು ಕವಿತೆ ಬರೆಯಲು ಸಮಯ ಸಿಗದ ನನಗೆ ಸಮಯ ಸಿಕ್ಕಿದ್ದು ಕೊರೊನಾ ನಿಮಿತ್ತ ಕಾಲೇಜಿಗೆ ರಜೆಕೊಟ್ಟ ನಂತರವೇ. ಹಿಂದಿನ ವರ್ಷ ಸೆಪ್ಟೆಂಬರ್ 3ನೇ ತಾರೀಖು ನಾನು ಬಿಎಸ್ಸಿ ಪ್ರಥಮ ವರ್ಷವನ್ನು  ಓದುತ್ತಿರುವ ಸಂದರ್ಭವದು,   ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ/ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯ ವಿಷಯವಾಗಿ ನನಗೆ ಅಚಾನಕ್ಕಾಗಿ ಪ್ರಾಧ್ಯಾಪಕರಾದ ಹೊನ್ನಪ್ಪಯ್ಯ ಸರ್ ಪರಿಚಯವಾದರು. ಅವರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ತಮ್ಮ ಕವಿತೆಯನ್ನು ಫೋಟೋ ಕ್ಲಿಕ್ಕಿಸಿ ನನ್ನ ವಾಟ್ಸಪ್ಗೆ ಕಳುಹಿಸುತ್ತಿರುತ್ತಿದ್ದರು. ಒಮ್ಮೆ ಅವರ ಸಣ್ಣಕತೆ(ಪಾತ್ರ)ಆಲೋಚನೆ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನ ನನಗೆ ಕಳುಹಿಸಿದ್ದರು. ನಾನು ಓದಿ ಚೆನ್ನಾಗಿದೆ ಸರ್ ಇದಕ್ಕೆ ಅಂತಾನೇ ಪ್ರತ್ಯೇಕ ಆ್ಯಪ್ ಇದೆಯೇ ಎಂದು ಕೇಳಿದಾಗ ಅವರು, ಕೆಲವೊಂದು ಇವೆ, ನಿನ್ನದೇನಾದರೂ ಸೃಜನಶೀಲ ಬರವಣಿಗೆಗಳಿದ್ದರೆ ತಿಳಿಸು ಆಲೋಚನೆ ಗ್ರೂಪ್ಗೆ  ಸೇರಿಸೋಣ ಎಂದು ಅವರು ಹೇಳಿದಾಗ  ಹ್ಹೂ ಎಂದು ಆ ದಿನ ಸುಮ್ಮನಾಗಿದ್ದೆ. ರಾತ್ರಿಯೆಲ್ಲಾ ಪೂರ್ತಿ, ಸರ್ ‘ಗ್ರೂಪ್ಗೆ ಸೇರಿಸೋಣ’ ಎಂದು ಹೇಳಿದ ಮಾತೇ ನನ್ನಲ್ಲಿ ಮರುಕಳಿಸಿ ಲಾಗಾ ಹಾಕುತ್ತಿತ್ತು. ಮರುದಿನ ಮುಂಜಾನೆ ಕವಿತೆ & ಪ್ರಕಟಿಸುವ ಬಗ್ಗೆ ಯಾರ ಬಳಿ ಕೇಳುವುದು ಎನ್ನುವ ಪ್ರಶ್ನೆ ತಲೆದೋರಿದಾಗ ತಟ್ಟನೆ ನೆನಪಾಗುವುದು ಹೊನ್ನಪ್ಪಯ್ಯ ಸರ್. ಅವರೋ, ತಮ್ಮ ಕಾವ್ಯ ಮತ್ತು ಬರವಣಿಗೆಯಷ್ಟೇ ಸರಳ ಹಾಗೂ ಸಹೃದಯಿಗಳು. ಎಷ್ಟು ಮುಕ್ತವಾಗಿ ಕವಿತೆ ಮತ್ತು ಪ್ರಕಟಿಸುವ ಪರಿಯ ಬಗ್ಗೆ ಮಕ್ಕಳಿಗೆ ಮಕ್ಕಳದೇ ಆದ ಒಂದು ಸರಳ ಅರ್ಥೈಸಿಕೊಳ್ಳುವ ಶೈಲಿಯಲ್ಲಿ ಇಂಚಿಂಚನ್ನು ಹೇಗೆ ವಿವರಿಸಿ ಹೇಳಿದರೆಂದರೆ, ನನಗೆ ಒಂದು ಆಪ್ತತೆಯ ಚೌಕಟ್ಟಿನಲ್ಲಿ ಸಿಲುಕಿದಂತೆ ಭಾಸವಾಯಿತು. ಹಾಗೆಯೇ ಒಂದೆರಡು ದಿನದ ತರುವಾಯ ಆಲೋಚನೆ ಸಾಹಿತ್ಯ ಪತ್ರಿಕೆಯ ಬರಹಗಾರ ಕವಿಗಳ ಗುಂಪಿನಲ್ಲಿ ನನ್ನ ಹೆಸರು ಸೇರ್ಪಡೆ ಮಾಡಿದ್ದರು. ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಸಾಹಿತ್ಯ ಲೋಕದಲ್ಲಿ ವಿಶೇಷ ಸ್ಥಾನಮಾನ ಗಿಟ್ಟಿಸಿಕೊಂಡಿರುವ ನೂರಾರು ಬರಹಗಾರ ಕವಿಗಳ ಗುಂಪಿನಲ್ಲಿ ನಾ ಕಾಣದ ಒಂದು ಚಿಕ್ಕ ಚುಕ್ಕಿಯಂತಿದ್ದರೂ, ನನಗೊಂದು ಪುಟ್ಟ ಜಾಗ ಅಲ್ಲಿ ಸಿಕ್ಕಿತಲ್ಲ ಎನ್ನುವ ಖುಷಿಯಲ್ಲಿ ಕಲ್ಪನಾ ಲೋಕಕ್ಕೆ ಜಾರಿದ್ದಂತು ಸುಳ್ಳಲ್ಲ. ಆಲೋಚನೆ ಸಾಹಿತ್ಯ ಬಳಗಕ್ಕೆ ಸೇರಿದ ಮೇಲೆ  ಸಂಗಾತಿ ಸಾಹಿತ್ಯ ಪತ್ರಿಕೆಯ ಪರಿಚಯವೂ ಅಲ್ಲೇ ಆಗಿ ನನ್ನ ಮೊದಲ ಕವನ ‘ಕರುಣಾಮಯಿ’  ಸಂಗಾತಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕವಿತೆ ಪ್ರಕಟವಾದಾಗ, ಕವಿತೆಯನ್ನು ಎಲ್ಲರೊಟ್ಟಿಗೆ ಹಂಚಿಕೊಂಡಾಗ ಎಲ್ಲರ ಉತ್ತೇಜನ ಪೂರ್ವಕ ಮಾತು ನನ್ನಲ್ಲಿ ಹೊಸ ಭರವಸೆಯನ್ನು ನನ್ನೆಡೆಗೆ ಕೈ ಬೀಸಿ ಕರೆದಂತಿತ್ತು. ಆ ಪದ್ಯದ ನಾಲ್ಕನೇ ಪ್ಯಾರಾ ಇಂತಿದೆ…. ಕೂಡಿಟ್ಟ ಕಾಸಿನಲಿ ಶಾಲೆಗೆ ಪೀಜು ತುಂಬಿ ತನ್ನ ಹರುಕು ಸೀರೆಯ ಲೆಕ್ಕಿಸದೆ ನನಗೊಂದು ಹೊಸ ಅಂಗಿಯ ಕೊಡಿಸಿ ದೊಡ್ಡ ಅಧಿಕಾರಿಯ ಸ್ಥಾನದಲಿ ತಾ ಕೂಸ ನೋಡಬೇಕೆಂದು ಆಸೆಯಿಂದ ಕಾಯುತ್ತ ಕುಳಿತವಳು ಕರುಣಾಮಯಿ ನನ್ನಮ್ಮ. ಈ ಸಾಲುಗಳನ್ನು ಹೇಳಿ ಹರ್ಷ ವ್ಯಕ್ತಪಡಿಸಿ ಹಾಗೆಯೇ ಕವಿತೆಯ ಬಗ್ಗೆ, ಕವಿಯ ಕಾವ್ಯದ ವಕ್ರತೆ ಯಾವ ರೀತಿ ಇರಬೇಕು ಎನ್ನುವುದರ ಕುರಿತು ತುಂಬಾ ಸುಶ್ರಾವ್ಯವಾಗಿ, ನನ್ನ ಕಾಲೇಜಿನ ಸಹಪಾಠಿ ನಾಗಶ್ರೀಯ ತಂದೆ ವಿನಾಯಕ ಹೆಗಡೆಯವರು  ಕರೆ ಮಾಡಿ ಹೇಳಿ ನನಗೆ ಪ್ರೇರಣೆ ನೀಡಿದಾಗ, ಮುಂದೆ ನಾ ಇನ್ನೂ ಚೆನ್ನಾಗಿ  ಬರೆಯಬೇಕು ಎನ್ನುವ ಆಸೆ ನನ್ನನ್ನ ತನ್ನೆಡೆಗೆ ಬರಸೆಳೆದಿತ್ತು. ಈ ಎಲ್ಲ ಘಟನೆಗಳು ಎಂದಿಗೂ ಅಚ್ಚಳಿಯದೇ ಉಳಿಯುವಂತವು ಯಾಕೆಂದರೆ ಜೀವನದಲ್ಲಿ ‘ಮೊದಲ’ ಎನ್ನುವಂತಹವೆಲ್ಲ ಎಂದಿಗೂ ರೋಮಾಂಚನವೇ!ಅದಕ್ಕೆ ಕವಿತೆಯೇನು ಹೊರತಾಗಿಲ್ಲ. **************************

ಮೊದಲ ಕವಿತೆಯ ಅನುಭವದ ಸಾರ Read Post »

ಇತರೆ

ಮೊದಮೊದಲ ತೊದಲುಗಳು

ಮೊದಲ ಕವಿತೆಯ ರೋಮಾಂಚನ -ಶೋಭಾ ನಾಯ್ಕ‌ .ಹಿರೇಕೈ ಕಂಡ್ರಾಜಿ.‌ ನಾನಾಗ ಶಿಕ್ಷಕರ ತರಬೇತಿ ಪಡೆಯುತ್ತಿದ್ದ ದಿನಗಳು. 99ರ ಕಾಲಘಟ್ಟ. ಹಾಸ್ಟೆಲ್ನಿಂದ  ಎಲ್ಲ ಸೋದರಿಯರಿಂದ  ಬೀಳ್ಕೊಂಡು  ಹೊಸ ಊರು, ಹೊಸ ಸ್ಥಳ, ಹೊಸ ಬಾಡಿಗೆ ಮನೆಯಲ್ಲಿ ಒಂಟಿತನ ಕಾಡಿದಾಗ ನನಗೆ ಈ ಕವಿತೆಗಳ ನಂಟು ಬೆಳೆಯಿತು. ತೋಚಿದ್ದನ್ನು  ಗೀಚಲು ಪ್ರಾರಂಭಿಸಿದ್ದು ಆಗಲೇ. ಮತ್ತೆ ಆಗಲೇ ಕಾರ್ಗಿಲ್ ಯುದ್ಧದ ಸಂದರ್ಭ ಕೂಡ. ಗಡಿ ಮತ್ತು ಬಂದೂಕಿನ ಗುಂಡು ನನ್ನನ್ನು ಆಗಲೇ ಕಾಡಲು ಪ್ರಾರಂಭಿಸಿದ್ದು. ಆಗ ಯುದ್ಧದ ಬಗ್ಗೆ ಬರೆದ ಮೊದಲ ಸಾಲುಗಳು ಇಂದಿಗೂ ನೆನಪಿವೆ.‌..  “ಬಂದ ಭಿಕ್ಷುಕರಿಗೆ ಮನೆಯ ಜಗುಲಿಯ ಬಿಟ್ಟು,  ಅಂಗಳವೇ ನಮಗೆ  ಗತಿ ಯಾದ  ಸ್ಥಿತಿಯನ್ನು  ಮರೆತಿಲ್ಲ ಸ್ವಾಮಿ”  “ಮೋಸ ಹೋಗಲಾರೆವು ಮತ್ತೆ  ಬೆನ್ನ ಹಿಂದೆ ಇರಿವವಗೆ  ಕಲಿತಿರುವ ಪಾಠವದು  ಮರೆಯದಾಗಿದೆ  ನಮಗೆ”  ಎಂದು ಬರೆದಿದ್ದೆ….  ಎನ್ನುವಂಥ ಸಾಲುಗಳು ವಿದ್ಯಾರ್ಥಿ ಜೀವನದ ಬಿಸಿ ರಕ್ತದಲ್ಲಿ ಬಂದಿದ್ದು ಅಚ್ಚರಿಯೇನಲ್ಲ. ಆದರೀಗ ಯುದ್ಧದ ಜಾಗದಲ್ಲಿ ಬುದ್ಧ ಬಂದು ತಲುಪಿದ್ದಾನೆ ನನ್ನೊಳಗೆ.  ಕ್ರೌರ್ಯದ ಜಾಗದಲ್ಲಿ ಮನುಷ್ಯತ್ವ ,ಮಾನವೀಯತೆ ಮನೆ ಮಾಡಿದೆ. ಯುದ್ಧದ ಜಾಗವನ್ನು ಶಾಂತಿ ಆವರಿಸಿದೆ. ವಿದ್ಯಾರ್ಥಿ ಜೀವನದ  ಹೊತ್ತಿನಲ್ಲೇ  ಮತ್ತೊಂದು ಕವಿತೆ ನನ್ನಲ್ಲಿ ಮೂಡಿತ್ತು. ” ನಾನೇ ಗಡಿಯಾಗಿ, ನಾನೇ ಕಾಶ್ಮೀರವಾಗಿ, ನಾನೇ   ಕಣಿವೆಯಾಗಿ  ಒಂದು  ಕವಿತೆ  ಬರೆದಿದ್ದೆ” .  ಅದು  ಪೂರ್ತಿಯಾಗಿ  ಮೊದಲ  ಕವಿತೆಯ  ನೆನಪಾಗಿ  ಇನ್ನೂ  ನನ್ನ  ಡೈರಿ  ಪುಟದಲ್ಲಿ  ಹಾಗೇ  ಉಳಿದಿದೆ.  ಮೊದಲು  ಒಂದೆರಡು  ಪ್ರೇಮ  ಕವಿತೆ  ಬರೆದ ಕಾರಣಕ್ಕೆ,  ಹಾಸ್ಟೆಲ್ ನಲ್ಲಿ  ಕವಯತ್ರಿ  ಎಂಬ  ಪಟ್ಟ  ಕೊಟ್ಟು ;  ಪಟ್ಟಾಭಿಷೇಕ   ನಡೆದಿತ್ತಾದರೂ  ಆ  ಕವಿತೆಯ  ಸಾಲುಗಳು  ಇಂದು  ನೆನಪಿಗೆ  ಬರುತ್ತಿಲ್ಲ.    ಹಾಗಾಗಿ ನನ್ನ ಕಾಶ್ಮೀರವೆಂಬ ಬೆಡಗಿಗೆ ಎಂಬ ಕವಿತೆ ನಾ ಮರೆಯದ ನನ್ನ ಮೊದಲ ಕವಿತೆ.  ಆ ಕವಿತೆ ಹೀಗೆ ತನ್ನೊಡಲ ಬಿಚ್ಚಿಕೊಳ್ಳುತ್ತದೆ..  ಕೇಳುತ್ತಲೇ ಇದ್ದೇನೆ  ಎಷ್ಟೋ ವರ್ಷಗಳಿಂದ  ನೀನವರಿಗೆ ಬೇಕಂತೆ  ನೀನಿವರ  ಪಾಲಂತೆ !  ಅದಕ್ಕಾಗಿಯೇ ಅಲ್ಲವೇ  ದಿನವೂ ಗುಂಡಿನ ಮಳೆ  ನಿನ್ನ ಮನೆಯಂಗಳದಲ್ಲಿ  ಎಷ್ಟೊಂದು  ಕನಸಿದೆಯೋ ನಿನಗೆ  ನೀನಿಷ್ಟ ಪಟ್ಟವರ  ಜೊತೆ  ಬದುಕಬೇಕೆಂದು  ಅಲ್ಲಿ ಹಸಿರು   ಹುಟ್ಟಿಸಬೇಕೆಂದು  ಆದರೆ, ನಿನ್ನ ಕೇಳುವವರಾರು?  ನನಗೊಂದೇ ಭಯ  ಅವರಿಬ್ಬರ ಗುಂಡು  ನಿನ್ನೊಡಲನ್ನೇ  ಸುಟ್ಟು  ಬಿಟ್ಟರೆ ಹುಟ್ಟಬಹುದೇ  ಮತ್ತಲ್ಲಿ  ಹಸಿರು ?  ಕುರುಡು ಗಂಡನ  ಕೈಹಿಡಿದು ಮಕ್ಕಳು ಕುರುಡಾದರೆ ನಿನ್ನ ಗತಿ ಏನು?  ಅದಕ್ಕೆ  ಹೇಳಿಬಿಡು ಒಮ್ಮೆ ಮೌನ ಮುರಿದು, ಯಾರು ಬೇಕು ನಿನಗೆ?  ಅವರೋ? ಇವರೋ ? ಕವಿತೆ  ಬರೆದಾಗ  ಸಹಜ  ಖುಷಿ,  ಸಹಜ  ನಿರಾಳ.  ಮನದಲ್ಲೊಂದು  ಆ  ಕ್ಷಣದ  ಧನ್ಯತೆ.     ಪ್ರೇಮ  ಕವಿತೆ  ಬರೆವ  ವಯಸ್ಸಲ್ಲಿ  ಯುದ್ಧ,  ಗಡಿ ,  ದೇಶವೆಂದು  ಯೋಚಿಸಿದ್ದಕ್ಕೆ  ಈಗಲೂ  ಹೆಮ್ಮೆ.    ಈ  ಕವಿತೆಗಳ  ಬರೆದಿಟ್ಟ  ಡೈರಿಯನ್ನು  ನನ್ನ  ಗೆಳತಿಯೊಬ್ಬಳು,  ಅವಳ  ಗೆಳತಿಗೆ  ಕೊಟ್ಟು …. ನಮ್ಮ  ಜಿಲ್ಲೆಯ  ಹಿರಿಯ  ಸಾಹಿತಿಗಳಾದ  ವಿಷ್ಣು  ನಾಯ್ಕ  ಸರ್ ಗೆ  ತಲುಪಿಸಿ,  ನಿನ್ನೊಳಗೊಬ್ಬ  ಸಶಕ್ತ  ಕವಿಯತ್ರಿಯಿದ್ದಾಳೆ.   ಅವಳಿಗೆ  ಹಾಲು,  ಹಾರ್ಲಿಕ್ಸು  ಕೊಡುತ್ತಿರು. ಅಭಿನಂದನೆಗಳು  ನಿನ್ನೊಳಗಿನ  ಕವಯತ್ರಿಗೆ  ಎಂಬ  ಸಾಲುಗಳನ್ನು   ಆಶೀರ್ವಾದ  ಪೂರ್ವಕ  ಎಂಬಂತೆ  ಬರೆಸಿಬಂದು   ಕೊಟ್ಟ  ಆ  ಘಳಿಗೆ  ನಿಜಕ್ಕೂ  ಅವಿಸ್ಮರಣೀಯ.  ನಾನು  ಕವಯತ್ರಿ  ಅಂತ   ಅನ್ನಿಸಿತ್ತು  ಆ  ದಿನ.  ಮತ್ತೆ  ಆ  ದಿನಗಳೆಲ್ಲ  ನನಗೆ   ಸಮಾಜದ  ಆಗು    ಹೋಗುಗಳೇ  ಕವಿತೆಯ  ವಸ್ತು.   ಪ್ರಾರಂಭದ  ದಿನದಲ್ಲಿ  ಬರೆದ  ಮತ್ತೊಂದು  ಕವಿತೆಯ  ತುಣುಕು..  ಉಗ್ರಗಾಮಿಗಳಿಗಾಗಿ  ಬರೆದದ್ದು.. ಬದಲಾಗು ‘ ನೀ ಮೊದಲು ಮೆಟ್ಟಿದ್ದ  ಈ ಮಣ್ಣ ಕಣವನ್ನೇ..  ನೀ ಮೊದಲು ನೋಡಿದ್ದು  ಹೆತ್ತೊಡಲ ಮೊಗವನ್ನೇ..  ನೀ ಮೊದಲು ಕುಡಿದದ್ದು  ತಾಯ  ಮೊಲೆ  ಹಾಲನ್ನೇ… ಆದರೂ  ನೀನೇಕೆ  ಮಗುವಾಗಲಿಲ್ಲ ??   ಎಂಬ  ಕವಿತೆ ನನ್ನ  ವಿದ್ಯಾರ್ಥಿ ಜೀವನದ  ಮೊದ  ಮೊದಲ  ಕವಿತೆಗಳು.  ಮೊದಲ  ಕವಿತೆಯ  ಪುಳಕ  ಬರೆಯಲು  ಹೋಗಿ  ಕೆಲವು  ಕವಿತೆಗಳ ನಿಮ್ಮೆದುರಿಗಿಟ್ಟೆ.  ಕಾರಣವಿಷ್ಟೇ..  ಬಹಳ  ವರುಷಗಳ  ಮೇಲೆ  ಹಳೆ  ಡೈರಿಯ  ಪುಟ  ತೆರೆದಾಗ   ಇನ್ನೂ  ವರೆಗೂ  ಎಲ್ಲೂ  ಕಾಣಿಸಿ  ಕೊಳ್ಳದ  ಕವಿತೆಗಳು ,   ನಮಗೂ  ಎಲ್ಲಾದರೂ  ಪುಟ್ಟ  ಜಾಗ  ಕೊಡು,  ಅಬ್ಬಲಿಗೆಯಲ್ಲಿ  ( ಅವ್ವ  ಮತ್ತು  ಅಬ್ಬಲಿಗೆ  ,   ನನ್ನ  ಮೊದಲ  ಸಂಕಲನ  )   ನಮ್ನನ್ನೇಕೆ  ಬಿಟ್ಟೆ  ಎಂದು  ಕೇಳಿದ  ಇನಿ  ದನಿಯ  ಮೇಲೆ  ಮಮಕಾರದ  ಮುದ್ದುಕ್ಕಿತು.  ನನ್ನ  ಭಾವ  ಕೋಶದಲ್ಲಿ  ಸದಾ  ಹೊಸದಾಗೆ  ಇರುವ   ಮೊದಲ  ಕವಿತೆಗಳು  ಕೊಟ್ಟ   ಖುಷಿ,  ಸಂಭ್ರಮ,  ಮತ್ತು  ಕವಿ ಎಂಬ  ಪಟ್ಟವನ್ನು  ನಾ  ಎಂದು  ಮರೆಯಲಾರೆ.

ಮೊದಮೊದಲ ತೊದಲುಗಳು Read Post »

ಇತರೆ

ಮೊದಲ ಕವಿತೆಯ ಮಧುರ ಅನುಭವ

ಮೊದಲ ಕವಿತೆಯ ರೋಮಾಂಚನ ಎಂ.ಜಿ.ತಿಲೋತ್ತಮೆ ಕವಿತೆಯೆಂದರೆ ಕೇವಲ ಹಾಳೆ, ಲೇಖನಿ, ಪದ,ಸಾಲು ವಸ್ತುವಿನ ಆಯ್ಕೆಯಿಂದ  ಕೂಡಿರಲು  ಸಾಧ್ಯವಿಲ್ಲ. ನಮ್ಮ ಅನುಭವಕ್ಕೆ ಬರುವ ಎಲ್ಲಾ ಭಾವನೆಯನ್ನು ಕವಿತೆಯಲ್ಲಿ ಕಾಣಬಹುದು. ಮಾತಿನಲ್ಲಿಹೇಳಲಾಗದ ಪ್ರೇಮ,ವಿರಹ,ದುಗುಡ,ಹತಾಶೆ,  ಹೀಗೆ  ಎಲ್ಲವೂ ಕವಿತೆಯಲ್ಲದೇ ಬೇರೆ ಯಾವುದೇ ಮಾರ್ಗ ದಿಂದ ಹೇಳಿಕೊಳ್ಳುವುದು ಸುಲಭವಲ್ಲ.  ಕವಿತೆಯ ಹುಟ್ಟು , ಹರಿವು ಅದು ನಾವು ಅಂದುಕೊಂಡ  ಶುಭ ಘಳಿಗೆ ಅಥವಾ ಪುರೊಸೊತ್ತಿನ ಸಮಯದಲ್ಲಿ ಮನದ ಭಾವನೆಯ  ಕಿಂಡಿಯಿಂದ ನುಗ್ಗಿ ಬರುತ್ತದೆ ಎಂದು ಹೇಳಲಾಗದು. ಅದು ನೀಲಿ ಆಕಾಶದಲ್ಲಿ ಹಾರುವ ಹಕ್ಕಿಯ ಹಾಗೆ ಸ್ವತಂತ್ರತೆ ಬಯಸುತ್ತದೆ. ಕವಿತೆ ಬರೆಯಲು ಏಕಾಂತ ಬೇಕು ಎನ್ನುತ್ತಾರೆ ಆದರೆ ನನಗೆ ನನ್ನ ಒಂಟಿತನದ ಏಕಾಂತತೆಯೆ  ನನ್ನಲ್ಲಿರುವ ಕಾವ್ಯ ಹೃದಯ ಹುಡುಕಲು ಸಾಧ್ಯವಾಯಿತು. ನನಗೆ ಸಾಹಿತ್ಯ ಬಗ್ಗೆ ಒಲವು  ಸಾಧಾರಣ ಹೈಸ್ಕೂಲು ಮುಗಿಸುವ ಮೊದಲೇ ಮೂಡಿದ್ದರೂ ನನ್ನ ಮೊದಲ ಕವಿತೆ  ಹೃದಯದ ತೋಟದಲ್ಲಿ ಅರಳಿ  ಸುಗಂಧ ಹಬ್ಬಿಸಿದ್ದು  ದ್ವಿತೀಯ ಪಿಯುಸಿ ಮುಗಿಸಿದ ನಂತರವೇ. ನನ್ನ ಬರೆಹಗಳನ್ನು ಮೊದಲು ತೋರಿಸುತ್ತಿದ್ದು ನನ್ನ ಅಕ್ಕನ ಬಳಿ. ಅವಳು ಕನ್ನಡಲ್ಲಿ ಪದವಿ,ಎಂ.ಎ ಮುಗಿಸಿದ್ದು ಮತ್ತು ಕವಿತೆ ಕುರಿತು ಆಸಕ್ತಿಯಿದ್ದ ಕಾರಣವೂ ಇರಬಹುದು ಪ್ರೀತಿಯಿಂದಲೇ ಕೇಳುತ್ತಿದ್ದಳು. ಅವಳ ಸ್ಪೂರ್ತಿದಾಯಕ ನುಡಿಗಳೇ ಬರವಣಿಗಗೆ ಶಕ್ತಿಯಾಯಿತು. ಯಾವ ವಿಷಯ ಕುರಿತು  ಕವಿತೆ ಬರೆಯಬೇಕು ಎನ್ನುವಾಗಲೆಲ್ಲ ನನಗೆ ಕೂಡಲೇ ಹೊಳೆಯುವುದು  ಅಮ್ಮನ ಕುರಿತು. ಹಾಗೆ ನಾನು   ಬರೆದ ಮೊದಲ ಕವಿತೆಯು ಅಮ್ಮನ ಬಗ್ಗೆ. ಅಮ್ಮ ಅಮ್ಮ ಎಂದರೆ .. ನೋವ ಮರೆಸುವ ಮಡಿಲು ಮಮತೆಯ ಕಡಲು ಅವಳ ನಿತ್ಯ ಧೈರ್ಯದ ಕಂಗಳಲ್ಲಿ ಅಳುಕಿನ ಬಡಿತ ಯಾರಿಗೂ ಕಾಣಲ್ಲ ಮನೆಗೆ ಸೋರದ ಹೊದಿಕೆಯಾಗಿ ಎಲ್ಲರ ಕನಸಿಗೆ ಬಣ್ಣ ಬಳಿಯವಳು ಬಡತನದ ಗಂಜಿಗೆ ಹೋರಾಟ ಮಾಡವಳು ಸವೆದ ಹಸ್ತದ ನೋವು ತುಂಬಿ ತುಳುಕುವ ಸಿರಿತನದ ಕೋಣೆಗೆ ಆ ಬೆವರು ಕಾಣದು ಅವಳು ಬಾಡದ ಹೂವಂತೆ ನವಿರು ಮುಳಗದ ರವಿಯಂತೆ ಬೆರಗು ಸಮಯದ ಜೊತೆ ಕುಗ್ಗಿ ಮತ್ತೆ ತನ್ನ ಹಾದಿಯಲ್ಲಿ ಬೆಳಕಿನ ಕಿಂಡಿಯಿಂದ  ಹಾರುವಾಗ ಉತ್ಸಾಹ ನಗೆ ಬೀರಿದವಳು ಕೋಟಿ ದೇವರಿಗೆ ಸೆರಗ ತುದಿಯಲ್ಲಿ ಹರಿಕೆ ಕಟ್ಟಿ ನನ್ನ ಹಡೆದವಳು.. ಮುಗಿಯದ ಸಾಲುಗಳಲ್ಲಿ ಅಮ್ಮ ಮತ್ತೆ ಮತ್ತೆ ನಿನಗೆ ಮಗುವಾಗುವೆ.. ಈ ಕವಿತೆ ಶಶಾಂಕ ಎನ್ನುವ ಮ್ಯಾಗಜಿನಲ್ಲೂ ಪ್ರಕಟವಾಯಿತು. ಪಾಸಾಗುತ್ತೀನೋ ಇಲ್ಲವೋ ಎಂದುಕೊಂಡ ವಿಧ್ಯಾರ್ಥಿಗೆ ರಾಂಕ್ ಬಂದಷ್ಟು ಖುಷಿಯಾಯಿತು. ಅದರ ಸಂಪಾದಕರಾದ ಚಿದಾನಂದ ಕಡಾಲಸ್ಕರ ನಿನಗೆ ಬರೆಯುವ ಸಾಮರ್ಥ್ಯವಿದೆ ಹೀಗೆ ಬರೆಯುತ್ತಾ ಇರೆಂದು ತುಂಬಾ  ಪ್ರೋತ್ಸಾಹ ನೀಡಿದ್ದರು. ನಂತರ ಪದವಿ ಓದಿನ ಜೊತೆಗೆ ಅದೇ ಮ್ಯಾಗಜಿನಗಳಿಗೆ ಬರೆಯುವುದು ಹವ್ಯಾಸವಾಯಿತು. ಆಗೆಲ್ಲಾ ಈಗ ಇರುವ ಹಾಗೆ ಮೊಬೈಲ್ ಅಥವಾ ಲ್ಯಾಪ್ಟಾಪ  ಉಪಕರಣ ಬಳಿಸಿ ಬರೆದು ಕಳುಹಿಸುವುದು  ಅಸಾಧ್ಯವಾದ ಮಾತು . ಹಾಳೆಗಳಲ್ಲೇ ಬರೆದು ಪೊಸ್ಟಗಳ ಮೂಲಕ ಕಳುಹಿಸಬೇಕಿತ್ತು. ಕತೆ,ಕವನ,ಅಂಕಣ,ಕಾದಂಬರಿ ಹೀಗೆ ಸಂಚಿಕೆ ರೂಪದಲ್ಲಿ ಬರೆಯುತ್ತಾ ಹೋದೆ. ಎಷ್ಟೊ ಸಲಹೆ,ತಿದ್ದುಪಡಿಗಳು ಇನ್ನಷ್ಟು ಬರೆಯಲು ಸ್ಪೂರ್ತಿ ನೀಡಿತು. ಬರೆದ ಕವಿತೆಯೆಲ್ಲ ಒಂದೊಂದು ಸಲ ಯಾವುದೋ ಪಟ್ಟಿಯ ಕೊನೆ ಹಾಳೆಯಲ್ಲಿ ಉಳಿದುಕೊಳ್ಳುತ್ತಿತ್ತು. ಇದರಿಂದ ಹೇಗಾದರೂ ಕವನ ಸಂಕಲನ ಹೊರ ತರಬೇಕೆಂಬ ಹಟ ಇನ್ನಷ್ಟು ಹೆಚ್ಚಾಯಿತು. ಮನೆಯಲ್ಲಿ ಸಾಕಷ್ಟು ವಿರೋಧ ಕಂಡು ಬಂದರೂ ಹೆದರದೆ ದ್ವಿತೀಯ ಬಿ.ಎ.ವಿರುವಾಗ ಸಂಕಲನ ಬಿಡುಗಡೆ ಮಾಡಿದೆ. ನನ್ನ ಕವಿತೆಗಳನ್ನು ತಿದ್ದಿ ತೀಡಿ ಹದವಾಗಿ ಮೂಡಿಬರಲು ನನ್ನ ಗುರುಗಳಾದ ಶ್ರೀಧರ ಶೇಟ್ ಶಿರಾಲಿಯವರು ಕಾರಣೀಕರ್ತರು. ಇವೆಲ್ಲ ಮೊದಲ ಕವಿತೆಗೆ ಸಿಕ್ಕ ಪುಟ್ಟ ಪುಟ್ಟ ಫಲಗಳು. ಎಷ್ಟೋ ಭಾರಿ ನನ್ನ ಸ್ನೇಹಿತರು ಕೇಳಿದ್ದಾರೆ ಬಿ‌.ಎಯಲ್ಲೂ  ಇಂಗ್ಲೀಷನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೀಯ ಹಾಗೆ ಬಿ.ಇಡ್ ನಲ್ಲೂ ಇಂಗ್ಲೀಷನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದೀಯಾ ಈ ಕವಿತೆ ಬರೆಯುವ ಆಸಕ್ತಿ ಹೇಗೆ ಅನ್ನುತ್ತಿದ್ದರು. ಆಗ ನಾನು ಹೇಳಿದ್ದಿಷ್ಟೇ  “ಇಂಗ್ಲೀಷ ಜೀವನ ಸಾಗಿಲು ಒಂದು ಭಾಗ .ಈಡೀ ಬದುಕು ತುಂಬಾ ಕನ್ನಡ ತುಂಬಿರುತ್ತೆ. ” ಅದಕ್ಕೆ ಹೇಳುವುದು ಮಾರ್ಡನ್ ಬಟ್ಟೆ ತೊಟ್ಟ ತಕ್ಷಣ ಅವರು ಕೆಟ್ಟು ಹೋಗಿದ್ದಾರೆ ಅಂತ ಹೇಳಿಲಕ್ಕೆ ಆಗಲ್ಲ. ಹಾಗಂತ ಸಂಪ್ರದಾಯ ಬಟ್ಟೆ ತೊಟ್ಟಿದ್ದರೆ  ಅಂದ ಮಾತ್ರಕ್ಕೆ ಏನು ತಿಳಿಯದ ಮುಗ್ಧರು ಅಂತ ಪ್ರತಿಪಾದಿಸೋಕ್ಕೆ ಆಗೋದಿಲ್ಲ. ನಾವು ಸಂಪೂರ್ಣವಾಗಿ ತಿಳಿಯದೆ  ಯಾವುದರ ಬಗ್ಗೆಯೂ ಜಡ್ಜ ಮಾಡಲಿಕ್ಕೆ ಹೋಗಬಾರದು.  ಈಗೀಗ ಒಂದು ಕವಿತೆ ಬರಿಯಬೇಕಾದರೆ ಬಹಳ ಪ್ರಬುದ್ಧವಾಗಿ ಚಿಂತನೆ ಮಾಡಬೇಕು. ವಸ್ತು ಆಯ್ಕೆ ,ಮೆಚ್ಚುಗೆಗೆ ಪಾತ್ರ ವಾಗುವಂತೆ ಬರೀಬೇಕು ಎನ್ನುವ ಆಸೆ ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಉದ್ದೇಶ ಮತ್ತು ಚಿಂತನೆ ಇಲ್ಲದಿದ್ದರೆ ಕಾವ್ಯದ ದಿಕ್ಕು ಬದಲಾಗಿ ಬಿಡುತ್ತದೆ. ಮೊದಲ ಕವಿತೆಯೆಂದರೆ ಈ ಮೇಲಿನ ಗುಂಪಿಗೆ ಸೇರಿರುವುದಿಲ್ಲ. ಬೆಳಿಗ್ಗೆಯಿಂದ ಬಿಸಿಲು ಧಗ ಧಗಿಸುತ್ತಿದ್ದರೂ  ಬಾನಿಗೆ ಭುವಿ ಮೇಲೆ  ಒಮ್ಮಲೆ ಪ್ರೀತಿ  ಉಕ್ಕಿ ಬಂದರೆ ಸುರಿಯುವ ಹನಿಯಂತೆ ಗೊತ್ತಗದಂತೆ ಇಳಿದು ಬಿಡುತ್ತದೆ. ಅದಕ್ಕೆ ಹೊತ್ತು, ಸ್ಥಳ, ವಿಷಯ ಬೇಡ. ತೋಚಿದೆಲ್ಲಾ ಗೀಚುತ್ತಾ ಹೋಗುತ್ತೇವೆ. ನಮ್ಮ ಸಮಾನ ವಯಸ್ಕರೇ ಪ್ರಶಂಸಿದರೂ ಪದ್ಮಶ್ರೀ, ಜ್ಞಾನ ಪೀಠ ಪ್ರಶಸ್ತಿ ಸಿಕ್ಕಷ್ಟೇ ಖುಷಿಯಾಗುತ್ತೆ. ಈ ರೀತಿ ನನಗೂ ಆಗಿದೆ. ಎಷ್ಟೋ ಭಾರಿ ಕವಿತೆ ಬರೆದು ಯಾರಾದರೂ ಸಿಕ್ಕರೆ ಅವರಿಗೆ ಹೇಳಿ ಹೇಗಿದೆ ಎಂದು  ಕೇಳುವ ಕೌತುಕದಲ್ಲಿ ಇರುತ್ತಿದ್ದೆ. ಈಗ ಓಡಾಡುವ  ಹಾಗೆ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್, ಗಳು  ಬಳಸುವುದು ಆಗ ಬಹಳ ಅಪರೂಪವೇ. ಹಾಗೇ ಬಳಸಲು ಅಷ್ಟೇ ದೊಡ್ಡ ಮೊಬೈಲ್ ನನ್ನ ಬಳಿ ಇಲ್ಲವಾಗಿತ್ತು. ಹಾಗಾಗಿ ಕವಿತೆ ಕೇಳುಗರನ್ನು ಮುಖಾಮುಖಿಯಾಗಿ ದಾಟಿಸಬೇಕಾಗಿತ್ತು. ನಾನು ಕವಿತೆಗಳನ್ನು ನನದೇ ಡೈರಿಯಲ್ಲೇ ಬರೆದಿಡುತ್ತಿದ್ದೆ. ಚಿಕ್ಕ ಚಿಕ್ಕ ನುಡಿಮುತ್ತುಗಳು, ಹನಿಗಳು ಗೀಚುತ್ತಾ  ನಂತರ ದೊಡ್ಡ ಕವಿತೆ ಬರೆಯಲು ಕಲಿತೆ. ಬರೆಯುವುದಕ್ಕಿಂತ ಹೆಚ್ಚು ಓದಬೇಕು. ಓದಿದ್ದಷ್ಟು ಮನಸ್ಸು, ಬುದ್ಧಿ ಹರಿತವಾಗುತ್ತದೆ ಹೀಗೆ ತಿಳಿದವರ ಮಾತುಗಳಿಂದಲೇ ಬರವಣಿಗೆ ಶೈಲಿಗಳು ಬದಲಾಗುತ್ತಾ ಬಂದಿತ್ತು. ಕವಿತೆಯೆಂದರೇನು ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಪ್ರೀತಿ,ಮಮತೆಯ ಜೋಗುಳ,ನೇರ ಧ್ವನಿ,ಪ್ರತಿಧ್ವನಿ, ಭಾವನೆಗಳ ರೂಪ  ಇತ್ಯಾದಿ…. ಅವರವರ ಪಾಲಿಗೆ ಅದು ಬಿಟ್ಟಿದ್ದು.  ಕವಿತೆ ಸಾಗರದಷ್ಟು ಪ್ರೀತಿಯ ಹಂಚುತ್ತಿರಬಹುದು ಇಲ್ಲವೇ  ಕಂಬನಿ,ಅಸಾಯಕತೆ, ಅಮಾನವೀಯಕ್ಕೆ ಪ್ರತಿಧ್ವನಿಸುವ ಬಲವು ಬರಬಹುದು. ಬೇಂದ್ರೆಯವರು ಹೇಳುವಂತೆ ” ಎಲ್ಲಿಯವರಿಗೂ ಕವಿತೆ ಕೇಳಬೇಕೆಂಬ,ಕುತೂಹಲ,ಜಿಜ್ಞಾಸೆ, ಆ ಸಮಾಜದಲ್ಲಿ ಇರುತ್ತದಯೋ ಅಲ್ಲಿಯವರೆಗೆ ಕವಿಯ  ಜೀವನ ,ಕಾವ್ಯ ಸಾರ್ಥಕವಾಗುತ್ತದೆ.” ಬರಹಗಳನ್ನು ವ್ಯಕ್ತಿಯ ವ್ಯಯಕ್ತಿಕ ಜೀವನದಿಂದ ಅಳೆಯಬಾರದು. ಕವಿತೆಗೆ  ಸಮಾಜವನ್ನೇ ಬದಲಾಯಿಸುವ ಶಕ್ತಿ ಇದೆ. ಯಾಕೆಂದರೆ ಕೆಲವೊಮ್ಮೆ ವ್ಯಕ್ತಿ ಹೇಳಲು  ಹೊರಟುತ್ತಿರುವ ವಿಷಯ ಉತ್ತಮ ವಿಚಾರ ವಾದರೂ  ಬದುಕನ್ನು ಅವನ ನಿಲುವಿನ ವಿರೋಧ ಸಂಧಾನಕ್ಕೆ ಒಪ್ಪಿಸುವುದು ಸಮಂಜಸಹವಲ್ಲವೆನ್ನುವುದು ನನ್ನ ಅರಿವು. ಮೊದಲ ಕವಿತೆ ಮಧುರ ಅನುಭವ ಅವರವರ ಪಾಲಿಗೆ ಅದು ಅಮೃತ ಘಳಿಗೆವೆಂದೆ ಹೇಳಬಹುದು.

ಮೊದಲ ಕವಿತೆಯ ಮಧುರ ಅನುಭವ Read Post »

ಇತರೆ

ಲಾಲಿಸಿದಳು ಯಶೋಧೆ

ಮೊದಲ ಕವಿತೆಯ ರೋಮಾಂಚನ ವೀಣಾ ಹಂಪಿಹೊಳಿ  ನನ್ನ ಮೊದಲ ಕವನ ಹುಟ್ಟಿದ ಸಮಯ ವಿಚಿತ್ರ ಆದರೂ ಸತ್ಯ ಕೊನೆ ಅಂಕಿಗಳೆಲ್ಲ ೩,೩,೩. (೧೩/೦೩/೨೦೧೩) ಆಗ ನಾನು ದ್ವಿತೀಯ ಎಮ್ ಎ ಕನ್ನಡ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಮಯ.ದಿನವೂ ಸುಮಾರು ೧೧ ಗಂಟೆಗೆ ಕಿಟಕಿಯ ಪಕ್ಕದಲ್ಲಿ ಓದಲು ಕುಳಿತಾಗ  ಕಿಟಕಿಯ ಆಚೆಯಿಂದ ಪಕ್ಕದ ಅಪಾರ್ಟ್ಮೆಂಟನಲ್ಲಿ ಪ್ರತಿದಿನ ೧೨ ಗಂಟೆಗೆ ಮೂರುನಾಲ್ಕು ಮಹಿಳೆಯರು ಕೈಯಲ್ಲಿ ತಿಂಡಿ ಡಬ್ಬ ಹಿಡಿದುಕೊಂಡು ಪುಟ್ಟ ಪುಟ್ಟ ಮಕ್ಕಳ ಹಿಂದೆ ಓಡಾಡಿ ಅವರಿಗೆ ಅಲ್ಲಿ ನೋಡು, ಇಲ್ಲಿ ನೋಡು ,ಎಂದು ಗಿಡದಲ್ಲಿಯ ಪಕ್ಷಿಗಳನ್ನು ತೋರಿಸುತ್ತ ,ಮಗು ಬಾಯಿ ತೆರೆ ಯುವುದನ್ನೇ ಕಾಯುತ್ತ ,ತೆಗೆದ ಕೂಡಲೇ ಒಂದು ತುತ್ತು ಹಾಕಿದಾಗ, ಅವಳಿಗೆ ಆಗುವ ಸಂತೋಷ ಹೇಳಲಸಾಧ್ಯ .ಕ್ರಿಕೆಟ್ ಆಟಗಾರ ಸಿಕ್ಸರ್ ಹೊಡೆದಾಗ ಆಗುವ ಸಂಭ್ರಮ ಆ ಮಹಿಳೆಯಲ್ಲಿ .ಮಗು ತುತ್ತು ತಿಂದಾಗಲೆಲ್ಲ ಅವಳಲ್ಲಿ ಧನ್ಯತೆಯ ಭಾವ . ಮಗುವಿಗೂ ಮನೆಯಿಂದ ಆಚೆ ಬಂದ ಖುಷಿ ,ಈ ಮಹಿಳೆಯರಿಗೂ ಆಚೆ ಬಂದು ಆಟ  ಆಡಿಸುತ್ತಾ ಮಕ್ಕಳಿಗೆ ತಿನ್ನಿಸುವ ಖುಷಿ ಆಮೇಲೆ ಸ್ವಲ್ಪ ತಮ್ಮ ತಮ್ಮಲ್ಲೇ ದಿನನಿತ್ಯದ ಮಾತು ಹರಟೆ , ನಗು ಎಲ್ಲ .ಈ ದೃಶ್ಯ ವನ್ನು  ದಿನವೂ ನೋಡುತ್ತಿದ್ದ ನನಗೆ ಇಷ್ಟುಮಾತ್ರ ಗೊತ್ತಾಗಿದ್ದು ,ಏನೆಂದರೆ  ಈ ಪುಟ್ಟ ಮಕ್ಕಳ ತಾಯಿ ಆಚೆ ಕೆಲಸ ಮಾಡಲು ಹೋದರೆ ಬರುವುದು ಸಂಜೆಯ ವೇಳೆ ,ಅಲ್ಲಿಯವರೆಗೆ ಈ  ಮಕ್ಕಳು ಯಶೋದೆಯರ ಮಡಿಲಲ್ಲಿ ..ಈ ಒಂದು ಹಿನ್ನಲೆಯಲ್ಲಿ ನನ್ನ ಮೊದಲ ಕವನ ಹುಟ್ಟಲು ಕಾರಣವಾಯಿತು .ಆ ದಿನಗಳಲ್ಲಿ ದಿನವೂ ಓದುವ ಕಾರಣದಿಂದಾಗಿ ಪದ ,ವಾಕ್ಯಗಳೊಡನೆ ನಿತ್ಯ ಒಡನಾಟದಿಂದ ನನ್ನದೇ ರೀತಿಯಿಂದ ಅವುಗಳನ್ನು ಹೆಣೆಯುವ ಆಸೆಯಾಗಿ ಈ ಕವನ ಹುಟ್ಟಿತೆಂದರೆ ತಪ್ಪಾಗಲಾರದು.ಒಂದು ಬರೆದ ಮೇಲೆ ಇನ್ನೊಂದು ,ಇನ್ನೊಂದರ ಮೇಲೆ ಮತ್ತೊಂದು ಹಾಗೆ ಬರೆಯುತ್ತ ಹೋದೆ .ಬರೀತಾ ಬರೀತಾ ಒಂದು ಸುಮಾರು ನಲವತ್ತು ಕವನಗಳು ಮೂಡಿಬಂದವು. ಒಮ್ಮೆ ದಕ್ಷಿಣ ಕನ್ನಡದ ಒಂದು ಸಂಸ್ಥೆ ಯಿಂದ ಅಪ್ರಕಟಿತ ಕವನಗಳಿಗೆ ಆಹ್ವಾನ ಬಂದಿತು , ಸರಿ ಹಾಗಿದ್ರೆ ನನ್ನ ಕವನಗಳು ನೋಟುಬುಕ್ನಲ್ಲಿ ಹಾಯಾಗಿ ಮಲಗಿದ್ದವು .ಅವುಗಳನ್ನು ಚೆನ್ನಾಗಿ ಬರೆದು ,ಅವಗಳನ್ನು ಓದಲು ನನ್ನ ಆತ್ಮೀಯ ಹಿರಿಯರೊಬ್ಬರಿಗೆ ಕೊಟ್ಟೆನುಅವರು ಓದಿ ಸಣ್ಣ ಸಣ್ಣ ತಿದ್ದುಪಡಿ ಮಾಡಲು ತಿಳಿಸಿದರು.ಆನಂತರ ಅವುಗಳನ್ನ ಕೊರಿಯರ್ ಮಾಡಿ ಬಂದೆ.ಸೆಲೆಕ್ಟ್ ಆಗಲಿ ಬಿಡಲಿ ಅವುಗಳನ್ನು ತಿದ್ದುಪಡಿ ಮಾಡಿ ಬರೆಯುವಾಗ ,ಅವುಗಳನ್ನು ಪೋಸ್ಟ್ ಮಾಡಿ ಬರುವಾಗ ಆದ ಸಂಭ್ರಮಕ್ಕೆ ಬೆಲೆಯೇ ಇಲ್ಲ .ಅಂತೂ ಕಳಿ ಸುವ ಪ್ರಕ್ರಿಯೆ ಮುಗಿಯಿತು . ಕೆಲ ದಿವಸಗಳ ನಂತರ ಒಂದು ಪೋಸ್ಟ್ಕಾರ್ಡ್ ನನ್ನ ಹೆಸರಿಗೆ ಬಂದಿತು .ಅದರಲ್ಲಿ ಅವರು ಸಂಕಲನ ಕಲಿಸಿದ್ದಕ್ಕಾಗಿ ಧನ್ಯವಾದಗಳು ಹಾಗೂ ಆ ಒಂದು ಸ್ಪರ್ಧೆಯಲ್ಲಿ ಸೆಲೆಕ್ಟ್ ಆದ ಕವನ ಸಂಕಲನ ಹೆಸರು “ಜೀನ್ಸ್ ಹಾಕಿದ ದೇವರು”.ಹಾಗೂ ಕಳಿಸಿದ ಸಂಕಲನವನ್ನು ಹಿಂದಿರುಗಿಸುವ ಪ್ರಕ್ರಿಯೆ ನಮ್ಮಲ್ಲಿಲ್ಲದಕಾರಣ ನಾವು ಅದನ್ನು ಕಳಿಸಲಾಗಲಿಲ್ಲ ಎಂದು ಬರೆದಿದ್ದರು. ಹೆಚ್ಚಿನ expectations ಇಲ್ಲವಾದುದರಿಂದ , ನನ್ನ ಹೆಸರಿಗೆ ಪೋಸ್ಟ್ಕಾರ್ಡ್ ಬಂದದ್ದೇ ನಂಗೆ ಸಂತಸದ ವಿಷಯವಾಗಿತ್ತು.ಆ ಪೋಸ್ಟ್ ಕಾರ್ಡ್ ಇನ್ನೂ ನನ್ನಲ್ಲಿ ಜೋಪಾನವಾಗಿದೆ. ಇರಲಿ ಇಲ್ಲಿಗೆ ಮುಗಿಯಿತು ನನ್ನ ಮೊದಲ ಕವನದಿಂದ ಶುರುವಾಗಿ ಕವನ ಸಂಕಲನದ ವರೆಗಿನ ಸಂಕ್ಷಿಪ್ತ ವರದಿ .ಆಮೇಲೆ ಆ ಸಂಕಲನಕ್ಕೆ ಹಾಗೆ ಹಾಗಾಗಿ ಹೊಸ ಹೊಸ ಕವನಗಳನ್ನು ಸೇರಿಸುತ್ತ ಹೋದೆ . ಈ ಎಲ್ಲ ಘಟನೆಗೆ ಕಾರಣ ವಾದದ್ದು ನಾನು ಬರೆದ ಮೊದಲ ಕವನ . ಈ ಕವನ ತಾನೊಂದೇ ಇರದೇ ತನ್ನೊಡನೆ ಹಲವಾರು ಕವನಗಳನ್ನು ಸೇರಿಸಲು ನಾಂದಿ  ಹಾಡಿತು,ಇದರ ಬಗ್ಗೆ ಹಾಗು ಇದರ ಹಿಂದೆ ಮುಂದೆ ಏನಿತ್ತು ಮತ್ತು ಏನಾಯಿತು ಎಂಬುದನ್ನು ನೆನಪಿಸಿಕೊಳ್ಳುವ ಕೆಲಸ ಕೊಟ್ಟ ಸಂಗತಿ ಪತ್ರಿಕೆಗೆ ನನ್ನ ಅನಂತ  ಧನ್ಯವಾದಗಳು . ಸುಮಾರು ೮ ವರುಷಗಳ ಹಿಂದೆ ನೋಡಿ ನೆನಪಿಸಿಕೊಂಡು,ಈ ನೆನಪಿನ ದೋಣಿಯಲ್ಲಿ ವಿಹಾರ ಮಾಡಲು ಅವಕಾಶ ವೊದಗಿ ಬಂದದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುವೆ. ************************

ಲಾಲಿಸಿದಳು ಯಶೋಧೆ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ!

ಕಬ್ಬಿಗರ ಅಬ್ಬಿ – ಸಂಚಿಕೆ ೫ ನನ್ನ ಗೆಳೆಯನ ಪುಟ್ಟ ಮಗು ನನ್ ಹತ್ರ ಕೇಳಿದ,  ” ಮಾಮಾ, ಈ ಚಂದಾಮಾಮ ಎಷ್ಟೆತ್ತರ? “. ನಾನಂದೆ! ” ತುಂಬಾ ಎತ್ತರದಲ್ಲಿ ಇದ್ದಾನೆ ಪುಟ್ಟಾ”. “ಹೇಗೆ ತಲಪೋದು! ” ಪುಟ್ಟನ ಪ್ರಶ್ನೆ! ರಾಕೆಟ್ಟು..ಜೆಟ್ ಪ್ರಿನ್ಸಿಪಲ್ ಅಂತ ಒಂದಷ್ಟು ಕೊರೆದೆ!. ಪುಟ್ಟನ ಕಣ್ಣೊಳಗೆ ಏನೋ ಮಿಂಚು! ಆತ ಅಂದ, ” ಮಾಮಾ, ಅಷ್ಟೆಲ್ಲ ಕಷ್ಟ ಯಾಕೆ! ನಮ್ಮ ತಾರಸಿಯ ಮೇಲೆ ಒಂದು ಮೆಟ್ಟಿಲು ಕಟ್ಟೋಣ!, ಆ ಮೆಟ್ಟಿಲು ಹತ್ತಿ ನಿಂತು ಇನ್ನೊಂದು ಕಟ್ಟುವಾ! ಮತ್ತೆ ಅದರ ಮೇಲೆ ಹತ್ತಿ ನಿಂತು ಇನ್ನೊಂದು ಮೆಟ್ಟಿಲು! ಹೀಗೇ ಹತ್ತಿದರೆ ಚಂದಾಮಾಮ ಸಿಗಲ್ವಾ! ಹೀಗೆ, ಮುಗ್ಧ ಪುಟಾಣಿಗಳಿಗೂ ಕವಿಗಳಿಗೂ ಕಲ್ಪನೆ ಎನ್ನುವುದಕ್ಕೆ ಭೌತಿಕದ ಭೂತ ಕಾಡಲ್ಲ! ಎತ್ತರ, ಇನ್ನೂ ಎತ್ತರ, ನೆಲಕ್ಕೆ ನೆಲವೇ ಮೆಟ್ಟಿಲಾಗಿ ನಿಂತ ಮೆಟ್ಟಿಲುಗಳ ಸಾಲುಗಳೇ ಹಿಮಾಲಯ ಪರ್ವತಶ್ರೇಣಿ. ‌ ತುಂಬಿದ ಕೋಶಕೋಟಿಯಿಂದ ನಿರ್ವಾತದತ್ತ ನಡಿಗೆಯದು! ಆಕಾಶವನ್ನೇ ಘನೀಕರಿಸುವ ಥಂಡಿ. ವರುಣನೂ ಅಲ್ಲಿ ಸೋತು ಗಡ್ಡೆ ಕಟ್ಟಿದ ನೀರ್ಗಲ್ಲ ಪದರದೊಳಗೆ ಬಂದಿ. ಕರೆದೇ ಬಿಟ್ಟರು! ಇಳಿದು ಬಾ ತಾಯೇ ಇಳಿದು ಬಾ! ಸಾಮಾನ್ಯರೇ ಅವರು! ಅಂಬಿಕಾತನಯದತ್ತರು! ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ಗಂಗಾ ನದಿ ಗೋಮುಖದ ಎತ್ತರದಿಂದ ಭಾಗೀರಥಿ ಯಾಗಿ ಇಳಿದು, ಬಂಗಾಳಕೊಲ್ಲಿಯಲ್ಲಿ ಸಾಗರವಾಗುವ ನಡುವಿನ ಯಾತ್ರೆ, ಅದು ದರ್ಶನ. ನದಿ ಎಂದರೆ ಹರಿವು, ನಿರಂತರ ಹರಿವು. ಚಲನಶೀಲತೆಗೆ ಪ್ರತಿಮೆ, ನದಿ.  ಉಕ್ಕಿ ಹರಿಯುವ ನದಿ, ಮನುಷ್ಯನ ಭಾವೋತ್ಕರ್ಷದಂತೆ. ತಿರುವುಗಳು, ಪರಿವರ್ತನೆಯ ಸಂಧಿಯಂತೆ. ಎತ್ತರದಿಂದ ಜಲಪಾತವಾಗಿ ಬೀಳುವ ಧಾರೆ, ಪತನದ ಪ್ರತಿಮೆಯಂತೆ. ಕೆಳಬಿದ್ದ ಧಾರೆ ಸುಳಿ ಸುಳಿಯಾಗಿ ಎದ್ದು ಕೊಚ್ಚಿಕೊಂಡು, ಕೊಚ್ಚಿಸಿಕೊಂಡು ಬಿಂದು ಬಿಂದು ಸೇರಿ ಪುನಃ ಪ್ರವಹಿಸುವುದು, ಜೀವನದ ಅನಿವಾರ್ಯ ಸಂಘರ್ಷದಂತೆ, ಮರುಹುಟ್ಟಿನಂತೆ, ಪತನದ ನಂತರವೂ ಹರಿವಿನ ಸಾಧ್ಯತೆಯ ಧನಾತ್ಮಕ ಚಿಂತನೆಯಂತೆ. ಪರ್ವತದ ಕೊರಕಲಿನಲ್ಲಿ ಆಕೆಯ ರಭಸ, ಕೋಪವೋ, ಅಸಹನೆಯೋ, ಯೌವನದ ಶಕ್ತಿಪ್ರದರ್ಶನವೋ, ಯದ್ಧೋನ್ಮಾದವೋ ಗೊತ್ತಿಲ್ಲ. ಬಯಲಿನ ಸಮತಲದಲ್ಲಿ  ಆಕೆಗೆ ಮಧ್ಯವಯಸ್ಸು, ಶಾಂತಚಿತ್ತೆ, ಗಂಭೀರೆ. ಹರಡಿಕೊಳ್ಳುವಳು,  ವಿಸ್ತಾರವಾಗುವಳು,  ವಿಶಾಲ ಹೃದಯದ ಅಮ್ಮನಂತೆ. ನಿಧಾನವಾಗಿ, ಗಮ್ಯದತ್ತ ಸಾಗುವಳು,ಯೋಗಸಮಾಧಿಯ ಅಭ್ಯಾಸದಂತೆ. ಈ ಚಲನಶೀಲ ತತ್ವ ಹರಿಯುವ ನದಿಯ ನೀರಿನದ್ದು ಮಾತ್ರವಲ್ಲ!. ಅಸಂಖ್ಯ ಜೀವಜಾಲವನ್ನು ಗರ್ಭದಲ್ಲಿ ಹೊತ್ತು, ಅವಕ್ಕೆ ಉಸಿರೂಡಿ ಹರಿಯುವ ಹರಿವದು. ನದಿಯ ಇಕ್ಕೆಲಗಳಲ್ಲಿ, ನಾಗರಿಕತೆಯನ್ನು ಕಟ್ಟಿ, ಬೆಳೆಸುವ ಕಾಲನದಿಯೂ ಅದೇ. ನದಿಯ ಬಗ್ಗೆ ಒಂದು ಅಪೂರ್ವ ಕಲ್ಪನೆಯನ್ನು ತಡವಿ ಮುಂದುವರಿಯೋಣ!  ಕೆಳಗಿನ ಸಾಲುಗಳು, ಸಿದ್ದಲಿಂಗಯ್ಯನವರ, “ಸಾವಿರಾರು ನದಿಗಳು” ಕವಿತೆಯಿಂದ ” ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿಮೆಳೆಯ ಮರೆಗಳಲ್ಲಿ ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು” ಪರಿವರ್ತನೆಯ, ಹೊಸ ಬದುಕಿನ ಕನಸು ಹೊತ್ತ ಜನರ ಹೋರಾಟದ ದನಿಗಳಿವು. ಅವರು ಮುಂದುವರೆದು, “ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು ವೇದಶಾಸ್ತ್ರಪುರಾಣ ಬಂದೂಕದ ಗುಡಾಣ ತರೆಗೆಲೆ ಕಸಕಡ್ಡಿಯಾಗಿ ತೇಲಿತೇಲಿ ಹರಿದವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಹೀಗೆ, ಸಿದ್ದಲಿಂಗಯ್ಯ ನವರ ಕಲ್ಪನೆಯಲ್ಲಿ, ಪರಿವರ್ತನೆಗಾಗಿ ಹೋರಾಡುವ ಪ್ರತಿಯೊಬ್ಬನೂ, ಅಂತಹ ಸಾವಿರಾರು ಜನಮಾನಸ, ಹೋರಾಟದ ಸಾಗರದತ್ತ ಧುಮುಕಿದ ಸಾವಿರಾರು ನದಿಗಳು ಅಂತ, ನದಿಗೆ ಒಂದು ಹೊಸ ಪ್ರತಿಮೆ ಕೊಟ್ಟಿದ್ದಾರೆ. ಗಂಗಾನದಿಯನ್ನು, ಗಂಗೆಯ ತಟದ ಸಾಮಾನ್ಯ ಜನರು “ಗಂಗಾ ಮಾತಾ” ಅಂತ ಕರೆಯುತ್ತಾರೆ. ಎಷ್ಟೆಂದರೆ, ಅದು ಭೌತಿಕ ನದಿಯೆಂದು ಅವರು ಒಪ್ಪಲಾರರು. ಅದು ಅಮ್ಮ! ಈ ಭಾವನೆ, ಒಂದೆರಡು ದಿನಗಳ ಭಾವಬೆಳೆ ಅಲ್ಲ. ಇದು ಕುಡಿಯಲು ನೀರುಕೊಟ್ಟ, ಕೃಷಿಯ ಮೂಲಕ ಅನ್ನ ಕೊಟ್ಟ, ಅಮ್ಮನತ್ತ ಪ್ರೀತಿ,ಕೃತಜ್ಞ ಭಾವ. ತನ್ನನ್ನು ಸಾಕಿದ ಪ್ರಕೃತಿಯ ಶಕ್ತಿಯಾಗಿ ಅದಕ್ಕೆ ಸೂರ್ಯ, ಅಗ್ನಿ,ಇತ್ಯಾದಿ ಶಕ್ತಿಗಳ ಹಾಗೆಯೇ ದೈವೀಸ್ವರೂಪವೂ. ಗಂಗೆ ಅಂತಲ್ಲ, ಕಾವೇರಿ, ತುಂಗಭದ್ರೆ,  ಗೋದಾವರಿ ಇತ್ಯಾದಿ ನದಿಗಳ ಮಡಿಲಲ್ಲಿ ನಾಗರೀಕತೆ ಹುಟ್ಟಿ ಹುಲುಸಾಗಿ ಬೆಳೆಯಿತಷ್ಟೇ ಅಲ್ಲ, ಆ ನದಿಗಳೂ ನಮ್ಮ ಮನೆ, ಮನಸ್ಸು,ಭಾಷೆ, ಕಲೆಯ ಭಾಗವೇ ಆದವು. ಕೆಲವು ವರ್ಷಗಳ ಹಿಂದೆ, ಉತ್ತರಾಖಂಡದಲ್ಲಿ ಭೀಕರ ಮಳೆ ಸುರಿದು, ಗಂಗೆಯ ಪ್ರವಾಹ, ತನ್ನ ತಟದಲ್ಲಿ ಕಟ್ಟಿದ ಆಧುನಿಕತೆಯ ರೂಪಕಗಳಾದ ಹೋಟೆಲ್ ಕಟ್ಟಡಗಳನ್ನು ನೋಡು ನೋಡುತ್ತಲೇ ಕೊಚ್ಚಿ ತನ್ನ ಪ್ರವಾಹಕ್ಕೆ ಎಳೆದು ನುಂಗಿ ಹರಿದ ರೌದ್ರ ರೂಪವನ್ನು ,ನಾನು ಋಷೀಕೇಶದಲ್ಲಿ ಕಣ್ಣಾರೆ ನೋಡಿರುವೆ. ಆಗ ಅಲ್ಲಿನ ಜನರ ಬಾಯಲ್ಲಿ ಒಂದೇ ಮಾತು,  “ಗಂಗಾ ಮಾ, ಗುಸ್ಸೇ ಮೈ ಹೈ” ನೀರಿನಲ್ಲಿ ತರಗೆಲೆಯಂತೆ ತೇಲಿ ಹೋಗುವ ಕಾರು, ಗ್ಯಾಸ್ ಸಿಲಿಂಡರ್, ಮರದ ದಿಮ್ಮಿಗಳನ್ನು ನೋಡಿದರೆ ನಿಜವಾಗಿಯೂ, ನಾಗರಿಕತೆಯ ದೌರ್ಜನ್ಯದತ್ತ ಅಮ್ಮ ಅತೀವ ಕೋಪದಲ್ಲಿ ಹರಿಯುವಂತೆಯೇ ನನಗೂ ಅನಿಸಿತ್ತು. ” ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ ತಾಯಿ ಇಳಿದು ಬಾ” ಸ್ವರ್ಗವನ್ನು ತೊರೆದು ಬಂದ ತಾಯೀ, ನಿನಗೆ ಪೊಡಮಡುವೆ,  ಎನ್ನುವ ಬೇಂದ್ರೆ ಅವರಿಗೆ ಈ ತಾಯಿಯತ್ತ ಎಷ್ಟು ಪ್ರೀತಿ. ನದಿ,ತಾಯಿಯೇ ಎಂಬ ಸ್ಥಾಯೀ ಭಾವ. “ಬಯಲ ಜರೆದು ಬಾ, ನೆಲದಿ ಹರಿದು ಬಾ,”  ಎನ್ನುವಾಗ ಅಮ್ಮನ ಶಕ್ತಿಚಲನಕ್ರಿಯೆಯತ್ತ ಬಾಲಕ ಬೇಂದ್ರೆಯ ಬೆರಗಿನ,ಒಲವಿನ ಕರೆ ಕೇಳಿಸುತ್ತೆ ಅಲ್ಲವೇ!. ಹೀಗೆ ಚಲನಶೀಲ, ಚಣಚಣದ ಪರಿವರ್ತನೆಯೇ ಅಂತರಂಗದ ಸೂತ್ರವಾಗಿ ಹರಿಯುವ ನದಿಯನ್ನು ಒಡ್ಡು ಕಟ್ಟಿ ಬಂಧಿಸಿ ಒಂದು ಕೆರೆಯಾಗಿಸಿದರೆ, ಅದು ಕಂಬಾರರ ಗಂಗಾಮಾಯಿ ಕವಿತೆಯಾಗುತ್ತೆ.  ” ಕೆಂಪಾನ ಕೆಂಪುಗುಡ್ಡ ಬೆಳ್ಳಾನ ಬಿಳಿ ಗುಡ್ಡ ಒಡಮುರಿದು ಕೂಡಿದ ಒಡ್ಡಿನಲ್ಲೆ,ನಮ್ಮೂರ ಕೆರೆ ಹೆಸರು ಗಂಗಾಮಾಯಿ.” ಗುಡ್ಡಗಳು ಸೇರುವಲ್ಲಿ, ಅಣೆಕಟ್ಟು ಕಟ್ಟಿ, ಹರಿಯುವ ನೀರನ್ನು ಮನುಷ್ಯ ನಿಲ್ಲಿಸಿದ್ದಾನೆ. ಹಾಗೆ ಮೂಡಿದ, ಕೆರೆಯೇ ಗಂಗಾಮಾಯಿ ಕೆರೆ . ಮಾಯಿ ಅಂದರೆ ಮಾತೆಯೇ. ಗಂಗೆಯ ಎಲ್ಲಾ ಗುಣಗಳನ್ನು ಈ ಕೆರೆ ಹೊಂದಿದೆ, ಆದರೆ ಚಲನಶೀಲತೆ ಇಲ್ಲ. ಈ ಕವಿತೆಯಲ್ಲಿ ಹಲವಾರು ಪ್ರತಿಮೆಗಳು. ಈ ಕೆರೆಯ ಸುತ್ತ ಮೂರು ಥರದ ಜೀವ ವೈವಿಧ್ಯತೆ. ೧. ” ಮರಗಿಡ ಕಂಟಿ,ಸಸ್ಯ ಕೋಟಿ ೨. ” ನಾಯಿ ನರಿ ಹಂದಿ,ಶುಕಪಿಕಾದಿಯ, ಚೌರ್ಯಾಂಸಿ ಲಕ್ಷ ಕೀಚು ಕೀಚು. ( ಹಲವು ಪ್ರಾಣಿಗಳಲ್ಲದೇ, 84 ಲಕ್ಷ, ಕ್ರಿಮಿ ಕೀಟಗಳ ಪ್ರಾಣಿಜಗತ್ತು. , ಕೀಚು ಕೀಚು ಪ್ರಯೋಗ, ಒಂದು ಧ್ವನಿ ಪ್ರಬೇಧ) ೩. ದಡದ ಗಿಡಗಳ ನೆತ್ತಿ ಜೋತ ಬಾವಲಿ ಹಿಂಡು, ನೀರಿನೆದೆಯಲ್ಲದರ ವಕ್ರ ನೆರಳು. ( ಇದನ್ನು ಸ್ವಾರ್ಥ ಮನುಷ್ಯ ಪ್ರಜ್ಞೆಯ ಪ್ರತಿಮೆ, ಅಂತ ವಿಮರ್ಶಕರು ವಿವರಿಸಿದ್ದಾರೆ. ಈ ಬಾವಲಿಗಳು, ತಲೆಕೆಳಗಾಗಿ, ದಡದ ಮರಕ್ಕೆ ಜೋತು ಬಿದ್ದಿವೆ, ಅವುಗಳ ವಕ್ರ ನೆರಳು ಕೆರೆಯ ಎದೆಮೇಲೆ.) ಕವಿತೆಯುದ್ದಕ್ಕೂ ಹರಿವ ನೀರು,ನಿಂತ ನೀರಾಗಿ, ಅದನ್ನು ಮನುಷ್ಯ, ತನ್ನ ಸ್ವಾರ್ಥಕ್ಕಾಗಿ ಕೊಳೆ ಕೊಳೆಯಿಸುವ ಭಾವ. ಕವಿತೆಯಲ್ಲಿ ಕವಿ ಉಪಯೋಗಿಸಿದ ಒಂದು ಯೋಚನೆಗೂ ನಿಲುಕದ, ಪ್ರತಿಮೆಯಿದೆ. ಸಾಧಾರಣವಾಗಿ, ಬೆಳಗು, ಶುಭ ಸೂಚಕವೂ,ಆನಂದದಾಯಕವೂ. ನಿರಾಶೆಯ ಪರಮಾವಧಿಯಲ್ಲಿ ಕವಿಗೆ ಸೂರ್ಯೋದಯ ಹೇಗೆ ಕಾಣಿಸುತ್ತೆ?  ” ಮೂಡಣದ ಮುದಿಕುರುವೊಡೆದು ನೆತ್ತರು ಕೀವು ಸೋರಿತೋ, ಸುರುವಾಯ್ತಿಲ್ಲಿ ಚಲನೆ” ಜೀವಿಸುವ ದೇಹದ ನೂರಾರು ಅಂಗಾಂಗಗಳಿಗೆ ರಕ್ತಸಂಚಾರ ನಿರಂತರವಾಗಿ ಆಗುತ್ತಲೇ ಇರಬೇಕು. ಹಾಗೆ ಹರಿಯುತ್ತಾ, ರಕ್ತ, ದೇಹದ ಮುಕ್ಕೋಟಿ ಜೀವಕೋಶಗಳಿಗೆ ಶಕ್ತಿ ಹಂಚುತ್ತೆ. ಜೀವಕೋಶಗಳ  ಕಲ್ಮಶಗಳನ್ನು ತನ್ನೊಳಗೆ ಸೇರಿಸಿ, ಕಿಡ್ಣಿಯ ಮೂಲಕ ಹಾದು, ಕಲ್ಮಶ ಕಳೆದು, ಶ್ವಾಸಕೋಶಗಳನ್ನು ಹಾದು, ಕಾರ್ಬನ್ ಡೈ ಆಕ್ಸೈಡ್ ಕೊಟ್ಟು,ಆಕ್ಸೀಜನ್, ತುಂಬಿ ಹೃದಯದ ಮುಖಾಂತರ ಪುನಃ ದೇಹದ ಸುತ್ತ ಸುತ್ತುತ್ತೆ. ಇದೊಂದು ಚಲನಶೀಲ ಕ್ರಿಯೆ!. ದೇಹದಲ್ಲಿ ಕುರುವಾದಾಗ, ರಕ್ತಕಣಗಳು ಸತ್ತು, ಕೀವಾಗಿ, ಕುರು ಒಡೆದಾಗ ಸೋರುತ್ತದೆ. ಆ ಸೋರಿಕೆಯಲ್ಲಿ, ಕೆಟ್ಟುಹೋದ ರಕ್ತವೂ ಸೋರುತ್ತೆ. ಬಿಳಿ,ಕೆಂಪು ಬಣ್ಣಗಳ ಮಿಶ್ರಣವದು. ಚಲನಶೀಲ ತತ್ವಕ್ಕೆ ತಡೆಯುಂಟಾದಾಗ, ಕುರುವಾಗಿ ಒಡೆದು,ಸೋರುವುದು, ದೇಹದ ಪ್ರಕೃತಿ. ಬೆಳಗನ್ನು,ಇಷ್ಟು ಪ್ರತಿಮಾತ್ಮಕವಾಗಿ ಋಣಾತ್ಮಕ, ವಿದ್ಯಮಾನಕ್ಕೆ ಬಳಸಿದ ಇನ್ನೊಂದು ಕಾವ್ಯ ಇದಯೇ?.  ಪ್ರಕೃತಿ ಚಲನಶೀಲ ತತ್ವದ ಮೇಲೆಯೇ ನಿಂತರುವ, ಸದಾ ಬದಲಾಗುವ, ಅನಂತ ವ್ಯವಸ್ಥೆ. ಅದಕ್ಕೆ ತಡೆಯಾದಾಗ, ಭೂಕಂಪ,ನೆರೆ, ಚಂಡಮಾರುತ ಇತ್ಯಾದಿಗಳು, ನಿಸರ್ಗ,ತನ್ನ ಡಾಕ್ಟರ್,ತಾನೇ ಆಗುವ ಪ್ರಕ್ರಿಯೆಯಷ್ಟೇ?. ಹಾಗೆ ಮೂಡಣದ ಮುದಿಕುರುವೊಡೆದು,ಸೋರಿದಾಗ, ಸುರುವಾಯ್ತಿಲ್ಲಿ,ಚಲನೆ! ಎನ್ನುವಾಗ ಕವಿ,ಕುರುವಿಗೆ ಕನ್ನಡಿ ಹಿಡಿದು ಗಂಗಾಮಾಯಿ ಕೆರೆಯ ಸುತ್ತ ನಡೆಯುವ ಮಾನವ ನಿರ್ಮಿತ ಕೊಳೆತ, ಕೊಳೆಯುತ್ತಲೇ ಇರುವ ವ್ಯವಸ್ಥೆಯ ಪ್ರತಿಬಿಂಬ ತೋರಿಸುತ್ತಾನೆ. ” ಕೊಡುಕೊಲ್ಲು ವ್ಯವಹಾರ,ದರ ನಿರಾತಂಕ ತಂಗಾಳಿ ಸುಳಿಯದ,ದೊಡ್ಡ ತೆರೆ ಮೂಡಿ ಮುಳುಗದ ಹರಿಯುವುದಕ್ಕೆ ದಿಕ್ಕಿಲ್ಲದ ನೀರು” ಹರಿಯುವ ತೊರೆಗೆ, ಮನುಷ್ಯ,ಒಡ್ಡು ಕಟ್ಟಿ, ಕೊಡು ಕೊಲ್ಲು ವ್ಯವಹಾರದ ವ್ಯವಸ್ಥೆ, ವ್ಯಾಪಾರ ದರದಿಂದ ಅರ್ಥದಲ್ಲಿಯೇ ಅರ್ಥ ಅನ್ನುವ, ತಂಗಾಳಿಯೂ ಸುಳಿಯದ ವ್ಯವಸ್ಥೆ. ಹೊಸ ಯೋಚನೆ, ಹಳೆಯದು ತೊಳೆದು ಹೊಸ ಚಿಂತನೆ,ಇಲ್ಲದ, ಸ್ತಬ್ಧ ಚಿತ್ರದಂತೆ ನಾವೇ ಹೇರಿಕೊಂಡು, ಪ್ರಕೃತಿಯನ್ನು ಕಟ್ಟಿ ಹಾಕಿ ನಿಲ್ಲಿಸಿದ ವ್ಯವಸ್ಥೆ. ಪ್ರಕೃತಿ ಹರಿಯಲು ಬಯಸುತ್ತಿದೆ,ಆದರೆ ಮನುಷ್ಯ ಕಟ್ಟಿದ ಒಡ್ಡು,ಆ ಹರಿವಿಗೆ ಅಡ್ಡವಾಗಿದೆ!. 1969ರಲ್ಲಿ, ಕಂಬಾರರು ಬರೆದ ಕವಿತೆ, ಇಂದು  ಹೆಚ್ಚು, ಮನಮುಟ್ಟಲು ಕಾರಣ, ನಾವಿನ್ನೂ ಕಟ್ಟುತ್ತಿರುವ ಒಡ್ಡುಗಳೇ?. ಕೊರೊನಾ ವೈರಸ್ ಕೂಡಾ, ಮಾನವ, ನಿರ್ಮಿಸಿ ಕೊಳೆಯಿಸಿದ ಕೆರೆಯೊಳಗೆ ಹುಟ್ಟಿದ್ದೇ?. ******************************************************* ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ! Read Post »

ಇತರೆ

ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಡಾ.ಪ್ರೇಮಲತ ಬಿ. ತುಮಕೂರಿನ ಮಾಧ್ಯಮಿಕ ಶಾಲೆಯಲ್ಲಿದ್ದೆ. ಅತ್ಯಂತಗಟ್ಟಿ  ಚರ್ಚಾಪಟು ಅಂತ ಹೆಸರಾಗಿದ್ದೆ. ಆದಾಗ  ಧಾರವಾಡದಲ್ಲಿ ನಡೆಯಲಿದ್ದ ಎರಡನೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುತ್ತಿತ್ತು. ಆಯ್ಕೆದಾರರು ಇಡೀ ಕರ್ನಾಟಕದ ಎಲ್ಲ ನಗರಗಳಿಗೂ ಭೇಟಿ ಕೊಟ್ಟು ಮಕ್ಕಳನ್ನು ಹುಡುಕುತ್ತಿದ್ದರು. ಜಗದೀಶ ಮಳಗಿ ಎನ್ನುವವರು ನಮ್ಮ ಶಾಲೆಗೂ ಬಂದರು.ಕೊಟ್ಟ ವಿಚಾರದ ಬಗ್ಗೆ ಪ್ರಭಂದವನ್ನು ಬರೆದು ದೊಡ್ಡದೊಂದು ಭಾಷಣ ಮಾಡಿದ್ದೆ. ಅದಾದ ನಂತರ ಏನೂ ಹೇಳದೆ ಅವರು ಹೊರಟುಹೋದರು.ಒಂದೆರಡು ವಾರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ನನ್ನನ್ನೇ ಅಧ್ಯಕ್ಷಳನ್ನಾಗಿ  ಮಾಡಲು ಆಯ್ಕೆದಾರರ ಸಮಿತಿ ನಿರ್ಧರಿಸಿದ್ದಾರೆಂದು ತಿಳಿಸಿದರು. ಧಾರವಾಡದ ಕಲಾಮಂದಿರದಲ್ಲಿ ನಡೆದ ಸಮ್ಮೇಳನದಲ್ಲಿಸಿದ್ದಯ್ಯ ಪುರಾಣಿಕರು, ಶಿವರಾಮ ಕಾರಂತರು,ಸಿಸು ಸಂಗಮೇಶರು, ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ದೊಡ್ಡ ದೊಡ್ಡ ಹೆಸರಿನ ಜನರು ಭಾಗವಹಿಸಿದ್ದರು.ಅವರೆಲ್ಲರ ಎದುರು ಭರ್ಜರಿ ಭಾಷಣ ಮಾಡಿ ಎರಡೆರಡು ಬಾರಿ ಕರತಾಡನ ಗಿಟ್ಟಿಸಿಕೊಂಡೆ. ಮಕ್ಕಳ ಸಾಹಿತ್ಯದ ಮಹತ್ವ ಮತ್ತು ಅದನ್ನು ಗಂಗಾನದಿಗೆ ಹೋಲಿಸಿ ಅದು ಕಲುಷಿತಗೊಂಡರೆ ಆಗುವ ಅನಾಹುತಗಳ ಬಗ್ಗೆಯೆಲ್ಲ ಮಾತಾಡಿದ್ದ ನೆನಪು. ಈ ಅನುಭವದ ಮತ್ತು ಒಡನಾಟದ ಕಾರಣ ಬರೆಯಬೇಕೆನ್ನುವ ಹುನ್ನಾರ ಮೂಡಿತು. ಆ ಹೊತ್ತಿಗೆ ಹಲವು  ಪ್ರಭಂದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದನ್ನು ಬಿಟ್ಟರೆ ಸ್ವತಃ ನಾನು ಬರೆದ ಸಾಹಿತ್ಯ ಸೊನ್ನೆಯಾಗಿತ್ತು. ನಂತರ ಕೊಟ್ಟ ಹಲವಾರು ಪತ್ರಿಕಾ ಸಂದರ್ಶನಗಳಲ್ಲಿ ಹಾಗಂತಲೇ ಹೇಳಿಕೊಂಡೆ. ೧೩ ವರ್ಷದ ನನ್ನ ಪ್ರಕಾರ ಅಲ್ಲಿ ಭಾಗವಹಿಸಿದ್ದ ಬೇರೆ ಮಕ್ಕಳೆಲ್ಲ ಬರೆದಿರುತ್ತಾರೆ ಎಂದೇ ಆಗಿತ್ತು. ಆದರೆ, ಅದು ಸತ್ಯವಾಗಿರಲಿಲ್ಲ. ಅದೇ ಗೀಳಿನಲ್ಲಿ ಏನಾದರೂ ಬರೆಯುವ ಉತ್ಸಾಹ ನನ್ನಲ್ಲಿ ಮೂಡಿತು. ನನ್ನ ವಯಸ್ಸಿನ ಕಾರಣ ಸೀರಿಯಸ್ಸಾದದ್ದೇನಾದರೂ ಬರೆದರೆ ಪ್ರಕಟಿಸುವುದಿಲ್ಲ ಎನ್ನುವ ಗುಮಾನಿಯೂ ಇತ್ತು.ದೊಡ್ಡವರಿಗಾಗಿ ಬರೆಯುವ ಪ್ರಭುದ್ಧತೆಯಿರಲಿಲ್ಲ. ನನ್ನ ವಯಸ್ಸಿನವರಿಗೆ ಅಂತ ಮಕ್ಕಳ ಬರಹದ ನಿಗಧಿತ ಪತ್ರಿಕಾ ವಿಭಾಗಗಳಿರಲಿಲ್ಲ. ಅಥವಾ ನನಗೆ ತಿಳಿದಿರಲಿಲ್ಲ. ಚೆನ್ನಾಗಿ ಬರೆದಿದ್ದೇನೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಹೇಳಲು ಯಾವ ಮಾರ್ಗದರ್ಶಕರಿರಲಿಲ್ಲ. ಈ ಕಾರಣಕ್ಕೆ ನನಗಿಂತ ಚಿಕ್ಕ ಮಕ್ಕಳಿಗೆಂದು ’ ತಿಂಡಿ’ ಎನ್ನುವ ಪದ್ಯ ಬರೆದು ತರಂಗ ವಾರಪತ್ರಿಕೆಗೆ ಕಳಿಸಿದೆ. ಬಗೆ ಬಗೆಯ ತಿಂಡಿಗಳನ್ನು ಆಸ್ವಾದಿಸುತ್ತ ಸಂತೋಷಿಸುವಾಗ ತಟ್ಟನೆ ಅಮ್ಮನ ಕೂಗಿನಿಂದ ಕೊನೆಯಾಗುವ ಕನಸಿನ ಬಗೆಗಿನ ಪದ್ಯ.ನಂತರ ಮರೆತೂ ಬಿಟ್ಟೆ. ಆದರೆ ಕೆಲ ವಾರಗಳಲ್ಲಿ ಅದು ಪ್ರಕಟವಾಗಿ ಬಿಟ್ಟಿತು. ಮಕ್ಕಳಿಗಾಗಿ ಸಾಹಿತ್ಯದ ಒಂದು ಪುಟ್ಟ ತುಣುಕನ್ನು ಸೃಷ್ಟಿಸಿಬಿಟ್ಟಿದ್ದೆ! ನಿಜಕ್ಕೂ ನನ್ನ ಪಾತ್ರವನ್ನು ನಿಭಾಯಿಸಿದ ಗೆಲುವು ಮೂಡಿತು.  ಅದು ನನ್ನ ಪ್ರಥಮ ಪದ್ಯವಾದರೂ ನಾನು ಕವಿಯಾಗಿದ್ದು ಸುಳ್ಳು.ನಂತರ ಬರೆಯಲೂ ಇಲ್ಲ. ಕಾಲೇಜಿಗೆ ಬಂದಾಗ ಬರೆದ ಕವನಗಳು ಕನ್ನಡ ಪ್ರಭದಲ್ಲಿ, ವಾರ್ಷಿಕೋತ್ಸವ ಪತ್ರಿಕೆಗಳಲ್ಲಿ ಪ್ರಕಟವಾದವು. ತುಷಾರದ  ಚಿತ್ರಕವನ ಸ್ಪರ್ಧೆಯಲ್ಲಿ ಬಹಮಾನ ಗಳಿಸಿದವು.ಆದರೆ,ಆಗೆಲ್ಲ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಲೇಖನಗಳ ಬರವಣಿಗೆಯಲ್ಲಿ. ಇಂಗ್ಲೆಂಡಿಗೆ ಬಂದ ನಂತರ ಮತ್ತೆ ಹತ್ತಾರು ವರ್ಷ ಎಲ್ಲ ನಿಂತಿತು. ಇತ್ತೀಚೆಗಿನ ಹಲವಾರು ಕವನಗಳನ್ನು ಬರೆದು ಪ್ರಕಟಿಸಿದ್ದೇನಾದರೂ ನನ್ನನ್ನು ನಾನು ಕವಿಯೆಂದು ಕರೆದುಕೊಳ್ಳಲಾರೆ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ.ಭೋದಕಳಲ್ಲ. ಆದರೆ ಸ್ವಚ್ಚ , ಸರಳ ಕವಿತೆಗಳನ್ನು ಬರೆದಾಗ ಸಿಗುವ ಸೃಜನಾತ್ಮಕ ಆನಂದ ಅಷ್ಟಿಷ್ಟಲ್ಲ.ಅದರಲ್ಲೂ ನನ್ನಂತ ಎಳಸು, ಸರಳ ಕವಿಗಳ ಆನಂದ ಅತ್ಯಂತ ನವಿರಾದದ್ದು. ಬೃಹತ್ತಾದದ್ದು ಕೂಡ. ಪ್ರಥಮ ಪದ್ಯ ಕೊಟ್ಟ ನವಿರು ಕಚಗುಳಿ, ಹೆಮ್ಮೆ, ಅಲ್ಪ-ಸ್ವಲ್ಪ ಆತ್ಮವಿಶ್ವಾಸ ಇವಕ್ಕೆಲ್ಲ ನಾನು ಅತ್ಯಂತ ಋಣಿ.ಅಲ್ಲಿಂದ ಮುಂದಕ್ಕೆ ಹವ್ಯಾಸೀ ಬರಹಗಾರಳಾಗಲು ಆ ಸಾಹಿತ್ಯ ಸಮ್ಮೇಳನ ಮತ್ತು  ತರಂಗದ ಪುಟ್ಟ ಪದ್ಯಗಳೇ ಕಾರಣಗಳಾಗಿವೆ. *****************************

ಮೊದಲ ಕವನ Read Post »

ಇತರೆ

ಬಾಲ್ಯ ಮರುಕಳಿಸಿದಂತೆ

ಮೊದಲ ಕವಿತೆಯ ರೋಮಾಂಚನ ಶಿವಲೀಲಾ ಹುಣಸಗಿ .   ಅದೊಂದು ಸಂಜೆ ನಮ್ಮ ಹೈಸ್ಕೂಲ್ ನ ಸಭಾಭವನದಲ್ಲಿ ಒಂದು ಕಾರ್ಯಕ್ರಮ.ಚುಟುಕು ಬ್ರಹ್ಮ ದಿನಕರ ದೇಸಾಯಿ  ಯವರ ಸಾಹಿತ್ಯ ವಿಮರ್ಶೆ ಹಾಗೂ ಕವಿಗೋಷ್ಠಿ ಎರ್ಪಡಿಸಿದ್ದರು.ಆಸಕ್ತಿ ಇರುವವರು ಭಾಗವಹಿಸಲು ತಿಳಿಸಲಾಗಿತ್ತು.ನಾನು ಆಗ ಎಂಟನೇ ತರಗತಿ ವಿದ್ಯಾರ್ಥಿ. ನನ್ನ ತರಗತಿ‌ಯ ಗೆಳತಿಯರಿಗೆ ಪ್ರಾರ್ಥನೆ ಮಾಡಲು ಕರೆದಿದ್ದರು.ನನಗೆ ಹೊಸ ಅನುಭವ.ಹೇಗೆ ನಡೆಯುತ್ತದೆ ? ಎಂಬ ಕುತೂಹಲ.‌ಸಭಾಭವನದಲ್ಲಿ ಹಿರಿಯರು,ಕಿರಿಯರ ಇರುವುದನ್ನು ಖಾತ್ರಿಪಡಸಿಕೊಂಡು.ಒಳಹೋಗಲು ಧೈರ್ಯವಿರದೆ ಬಾಗಿಲ ಸಂದಿಯಿಂದ ನೋಡುತ್ತಿದ್ದೆ. ಆಗ ಯ್ಯಾರೋ ಏನಮ್ಮಾ…ಎನ್ ಮಾಡತಿದ್ದಿಯಾ? ಒಳಗೆ ಹೋಗಿ ಕುತಗೋ..ಸಾಹಿತ್ಯದ ವಿಚಾರ ತಿಳಿದುಕೋ ನಿನಗೆ ಓದಲು ಆಸಕ್ತಿ ಇದೆಯಾ? ಅಂದಾಗ ನಾನು ಒಂದು ಕ್ಷಣ ಹೆದರಿದ್ದೆ. ತಲೆಯೆತ್ತಿ ನೋಡಿದೆ ಅವರ ಪರಿಚಯ ನನಗಿಲ್ಲ. ನೀಳಕಾಯದ ವ್ಯಕ್ತಿ ನೀಳಕೂದಲು ಅಜಾನುಬಾಹು ಹೆದರಿಕೆಯಾಗಿತ್ತು.ಅವರು ಆಡಿದ ಮೃದು ಮಾತುಗಳಿಗೆ ತಲೆದೂಗಿ ಹೌದು ಸರ್ ಎಂದೆ.ನಡಿ ಒಳಗೆ ಹೊರಗೆ ನಿಂತು ಎನ್ಮಾಡತಿಯಾ? ಎಂದಾಗ ತಲೆಯಲ್ಲಾಡಿಸಿ ಮಾಸಿದ ಬಣ್ಣದ ಲಂಗ ಕುಪ್ಪುಸ ಧರಿಸಿದ್ದರಿಂದ ಒಳಬರಲು ಸಂಕೋಚವೆನಿಸಿ.ಹಿಂದಿನ ಬೆಂಚಲ್ಲಿ ಮೆಲ್ಲಗೆ ಕುಳಿತೆ.ನನ್ನೊಟ್ಟಿಗೆ ಬಂದ ವ್ಯಕ್ತಿಯನ್ನು ಎಲ್ಲರೂ ಬಲು ಪ್ರೀತಿಯಿಂದ ಸ್ವಾಗತಿಸಿ ಅವರನ್ನು ವೇದಿಕೆಗೆ ಆಹ್ವಾನ ನೀಡಿದ್ದನ್ನು ಕಂಡು ಇನ್ನು ಭಯವಾಯಿತು.ನಾನು ಹೊಸ ಅಂಗಿ ಹಾಕಿ ಬರಬಹುದಿತ್ತು ಅನ್ನಿಸಿತು. ಕಾರ್ಯಕ್ರಮ ಸುಂದರವಾಗಿ ನಡೆಯುತ್ತಿತ್ತು.ಕವಿಗೋಷ್ಠಿಗೆ ಬಂದ ಎಲ್ಲರ ಕವಿತೆಗಳನ್ನು ಆಸಕ್ತಿಯಿಂದ ಕೇಳುತ್ತ.ನಾನು ಅಲ್ಲೆ ಒಂದು ಕವನ ಗೀಚಿದ್ದೆ.ನಾನು ಬರೆಯುವುದನ್ನು ಆವ್ಯಕ್ತಿ ಗಮನಿಸುತ್ತಿದ್ದರು.ಅವರು ನಮ್ಮೂರಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀ ಮೋಹನ ಕುರುಡಗಿ ಅಂತ ಗೊತ್ತಾಯಿತು.ಅವರ ಮಾತುಗಳು ನನ್ನ ಮನದ ಮೇಲೆ ತುಂಬಾನೆ ಪ್ರಭಾವ ಬೀರಿತ್ತು.ಅವರ ಪ್ರೇರಣೆಯ ಮೂಲಕ ನನ್ನ ಭಾವನೆಗಳನ್ನು ಕವಿತೆಯಾಗಿಸುವ ಪ್ರಯತ್ನ ಮಾಡಲು ಹುರಿದುಂಬಿಸಿದ ವ್ಯಕ್ತಿ ಮೊದಲ ಗುರು ಎಂದರೆ ತಪ್ಪಾಗಲಾರದು.ನಾ ಬರೆದ ಮೊದಲ ಕವಿತೆಯನ್ನು ಅವರ ಮುಂದೆ ಹಿಡಿದಾಗ,ನನ್ನನ್ನೊಮ್ನೆ ನೋಡಿ ನಕ್ಕು ಓದಿ ಅವರು ಖುಷಿ ಪಟ್ಟಿದ್ದರು. ಅಡ್ಡಿಯಿಲ್ಲ ಪ್ರಯತ್ನ ಮಾಡಿರುವೆ.ಇನ್ನು ಚೆನ್ನಾಗಿ  ಬರಿಯಲು ಹೆಚ್ಚು ಓದು ಎಂದರು. ನನಗೆ ಹಿಗ್ಗೊಹಿಗ್ಗು ನಾ ಬರೆದ ಸಾಲುಗಳು ಕವಿತೆಯಾದವಲ್ಲವೆಂದು ಮನಸಾರೆ ಅವರಿಗೆ ನಮಸ್ಕರಿಸಿ ಮನೆಕಡೆ ಓಡಿದ್ದೆ.ಅಪ್ಪ ಅಮ್ಮರಿಗೆ ಹೇಳಿದಾಗ ಅವರು ಹಿರಿಯರು ಹೇಳಿದ ಹಾಗೆ ಬರಿ ಮಗಾ ಅಂತ ಅಮ್ಮ ಮುದ್ದಿಸಿದ್ದ ಮರೆಯಲಾರೆ.ಆ ಕವಿತೆಯ ಹಾಳೆಯನ್ನು ದೇವರ ಮುಂದಿರಿಸಿ ನಮಿಸಿದ್ದೆ ಹುರುಪು. ಆ ಕವಿತೆ ಇನ್ನು ನನ್ನ ಸ್ಮೃತಿ ಪಟಲದಲ್ಲಿ…ಬಾಲ ಭಾಷೆಯ ಕವಿತೆ… ಖಾಲಿ ಕುರ್ಚಿ ಹೂವ ನೀಡುತಲಿ ಬಂದವರು ಹಾಡಿ ಹೊಗಳಿ ಹೋದರು ನಿಂತು ನುಡಿದವರೆಲ್ಲರ ಮಾತಿಗೆ ಮುಂದೆ ಕುಂತವರು ತೂಕಡಿಸಿದರು ಹಿಂದಿದ್ದವರೆಲ್ಲ ಮರೆಯಾದರು ಮುಂದೆ ಖಾಲಿ ಕುರ್ಚಿಗಳು ವೇದಿಕೆಯ ತುಂಬ ಜನರು ಕೇಳುಗರಿಲ್ಲದೆ ವಾಚಿಸಿದರು ನನ್ನದೊಂದು ಸಾಲು ಹೇಳಲೋ ಬಿಡಲೋ ಗೊತ್ತಿಲ್ಲ ಖಾಲಿ ಕುರ್ಚಿಗಳು ಹೇಳಿಬಿಡು ಕೇಳುವೆ ಅನ್ನುತ್ತವಲ್ಲ.. ಈ ಕವನವನ್ನು ಮೊದಲ ಬಾರಿ ವಾಚಿಸುವಾಗೆಲ್ಲ ನನಗೆ ನಡುಕ.ಬೆವರು,ನೀರಡಿಕೆ,ಮೈಕಿನ ಮುಂದೆ ಪ್ರಥಮ ಬಾರಿ ನಿಂತು ಗಟ್ಟಿಯಾಗಿ ಮುಂದಿದ್ದವರನ್ನು ನೋಡಲು ಧೈರ್ಯ ಸಾಲದೇ ಬಡಬಡ ‌ಓದಿದಾಗ ಸುಸ್ತೊಸುಸ್ತು…ನನ್ನ ಗುರುಗಳು ನಿಧಾನವಾಗಿ ಓದು,ಗಡಿಬಿಡಿ ಮಾಡಬಾರದು.ಮೊದಲಿಗೆ ಹೀಗಾಗುತ್ತೆ ಎಂದು ಬೆನ್ನು ಚಪ್ಪರಿಸಿ ಚೆನ್ನಾಗಿ ಓದಿದೆ ಎಂದು ನೀರಿನ ಬಾಟಲಿ ನನ್ನ ಕೈಗೆ ನೀಡಿದರು. ನನಗೋ ನೆಮ್ಮದಿ ಓದಿದೆ ಎಂದು ಮನದಲ್ಲಿ ಖುಷಿಪಟ್ಟೆ. ಕವಿತೆಗಳ ಭಾವಗಳು ಚಿಗುರೊಡೆದಿದ್ದು,ಹೊಸ ಅಲೆಗೆ ದಾರಿ ತೋರಿದಂತಾಗಿತ್ತು.ನನ್ನ ಇನ್ನೊರ್ವ ಗುರುಗಳು ಶ್ರೀ ನಾ.ಸು.ಭರತನಳ್ಳಿ ಯವರು ನನ್ನ ಕವನ ವಾಚನಗಳಿಗೆ ಹಾಗೂ ಹೀಗೆ ಬರಿಯೆಂದು ಮಾರ್ಗದರ್ಶನ ನೀಡುತ್ತಿದ್ದರು.ಅದೇ ಸಂದರ್ಭದಲ್ಲಿ ದಿವಂಗತ ಶ್ರೀ ರಾಜಶೇಖರ ಹೈಸ್ಕೂಲ್ ಮುಖ್ಯಾಧ್ಯಾಪಕರು ನನಗೆ ಗೊತ್ತಿಲ್ಲದಂತೆ ಗಮನಿಸುತ್ತಿದ್ದರು.ಒಂದು ದಿನ ನನ್ನ ಕರೆದು ಪುಟ್ಟಾ ಮಂಚಿಕೇರಿಯಲ್ಲಿ ಕಾವ್ಯ ಶಿಬಿರವಿದೆ ಅದರಲ್ಲಿ ನೀನು ಭಾಗವಹಿಸು ನಾಡಿನ ಹೆಸರಾಂತ ಕವಿಗಳು ನಿನಗೆ ಮಾರ್ಗದರ್ಶನ ನೀಡುವರು.ಎಂದಾಗ ನನಗಾದ ಸಂತೋಷಕ್ಕೆ ಕೊನೆಯೇ ಇಲ್ಲ.ಆ ಗುರುಗಳೇ ಶಿಬಿರದ ಶುಲ್ಕ ಪಾವತಿಸಿ,ಅಲ್ಲಿ ಉಳಿದು ಕೊಳ್ಳಲು ವಸತಿ ವ್ಯವಸ್ಥೆ ಕೂಡ ಮಾಡಿ,ನಮ್ಮ ಮನೆಯಲ್ಲಿ ತಂದೆ ತಾಯಿಗೆ ಹೇಳಿ ಕರೆತಂದು ಶಿಬಿರಕ್ಕೆ ಬಿಟ್ಟಿದ್ದರು. ನನ್ನ ಪುಣ್ಯವೋ ಗೊತ್ತಿಲ್ಲ,ಅಲ್ಲಿ ಶ್ರೀ ಜಯಂತ ಕಾಯ್ಕಿಣಿ, ಎಚ್.ಎಸ್ ರಾಘವೆಂದ್ರರಾವ್…ದುಂಡಿ.ಹೀಗೆ ಹಲವಾರು ಗಣ್ಯರ ಪರಿಚಯದ ಜೊತೆ ಕಲಿಯಲು ಅವಕಾಶ ದೊರೆಯಿತು.ಪುಟ್ಟ ತಲೆ,ಎಳೆ ಮನಸು, ಮೆದುಳು, ಬಲಿಯದ ಹೃದಯ ಎಷ್ಟು ಸ್ವೀಕರಿಸಲು ಸಾಧ್ಯವೋ ಅಷ್ಟು ಮನಬಿಚ್ಚಿ ಸ್ವೀಕರಿಸಿದೆ.ನಿಂತು ಕವಿತೆ ವಾಚಿಸುವ ಕಲೆ ಅರಿತೆ.ವಸ್ತು, ವಿಷಯಗಳ ಮೇಲೆ ಹೇಗೆ ಕವಿತೆ ಕಟ್ಟಬೇಕು ಎಂಬುದನ್ನು ತಿಳಿಯಪಟ್ಟೆ.ನನ್ನ ಗುರುಗಳಿಗೊಂದು ಭರವಸೆ,ನನ್ನ ಮೇಲೆ. ಕವಿತೆ ಬರೆಯುವುದನ್ನು ನಿನ್ನದೇ ಆದ ಶೈಲಿಯಲ್ಲಿ ಪ್ರತಿಬಿಂಬಿಸೆಂದು ಪ್ರೋತ್ಸಾಹ. ಗುರು ಬಯಲಾದ ಬಾನಿಗೆ ಗುರುವೆ ಸರ್ವಸ್ವ ಮನವೆಂಬ ಬಾನಿಗೆ ಗುರುವೆಂಬ ಸಾರಥಿ ನಮ್ಮಂಥ ಶಿಷ್ಯರಿಗೆ ನಿಮ್ಮಂಥ ಗುರುವೆ ಮಾಣಿಕ್ಯ. ತಪ್ಪುಒಪ್ಪುಗಳ ಅಪ್ಪಿ ಬೆನ್ನ ತಟ್ಟುವವರು ನೀವಲ್ಲವೆ ಕವಿತೆ ಓದುವಾಗ ನನಗರಿವಿಲ್ಲದೇ ಕಣ್ಣೀರು ಜಾರಿದ್ದು,ಅಲ್ಲಿದ್ದ ನನ್ನ ಗುರುಗಳು ಕಣ್ಣೀರ ಒರೆಸಿದ್ದು‌. ಒಂದು ಕ್ಷಣ ನನ್ನ ನಾ ಮರೆತಂತೆ….ಮೊದಲಿನ ಅನುಭವಗಳು ನಿಜವಾಗಲೂ ಮರೆಯಲಾರದಂತಹ ಸವಿ ನೆನನಪುಗಳು.ಬಾಲ್ಯದ ಬರವಣಿಗೆಗಳು ಈಗಲೂ ಮನಸಿಗೆ ಆನಂದ ತರುತ್ತವೆ.ಮರೆಯಾದ ಜ್ಯೋತಿಗಳು ಅಂದು ನನ್ನ ಮನದಲ್ಲಿ ಹಚ್ಚಿದ ಹಣತೆ ಇಂದಿಗೂ ಅವರು ಬಿತ್ತಿದ ವಿಚಾರ ಧಾರೆಗಳು ನನ್ನ ಕವಿತ್ವಕ್ಕೆ ಪೂರಕವೆಂದರೆ ತಪ್ಪಾಗದು. ತಪ್ಪಲಿಲ್ಲ ನಮ್ಮ ಬೀದಿ ಹುಚ್ಚಣ ಬಳಿತಾನ್ರಿ ಬಣ್ಣ ನೋಡಿನಗತಾನ ಹುಚ್ಚನಾಂಗ ಅವ ಹಿಂದ ಇದ್ದನಂತ್ರಿ ರಾಜಾನಾಂಗ ರಾಜಕೀಯ ಪಕ್ಷದಾಗ ಹೀರೋ ಹಾಂಗ ಕಿತ್ತ ತಿನ್ನೊರಿಗೆ ಕುಡಿದು ಕುಪ್ಪಳಿಸೋರಿಗೆ ಹೊಲ ಮನಿ ಮಾರಿ ರಾಜಕೀಯದ ಪೋಷಾಕದಾಗ ಮರೆದಿದ್ದ ಬಂತು ಕೊನೆಗೂ ಟಿಕೇಟ್ ಸಿಕ್ಕಿಲ್ಲ ಬೀದಿಗೆ ಬೀಳೊದಂತು ತಪ್ಪಲಿಲ್ಲ… ಈ ಕವನ ನೈಜ ವ್ಯಕ್ತಿಯ ಬದುಕ ಕುರಿತಾಗಿತ್ತು.ಇದನ್ನು ಓದುವಾಗ ನನ್ನಲ್ಲಿ ಗಟ್ಟಿ ಮನಸ್ಸು ಬಂದಿತ್ತು.ಕೆಲವರಿಗೆ ಚೂರಿಚಿಚ್ಚಿದಾಂಗ ಆಗಿತ್ತು.ದಿವಂಗತ ಮೋಹನ ಕುರುಡಗಿ ಗುರುಗಳು ಮೆಚ್ಚಿ ಹೊಗಳಿದ್ದರು.ಬಂಡಾಯದ ಚಿಗುರು,ಚಿಗುರಿ ಹೆಮ್ಮರವಾಗಿ ಬೆಳೆಯಲೆಂದು ಆಶೀರ್ವದಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಇಂತಹ ಮಧುರ ನೆನಪುಗಳನ್ನು ಪುನಃ ಮೆಲುಕು ಹಾಕುವುದ ರೊಂದಿಗೆ.ಅಂತಹ ಹಿರಿಚೇತನಗಳನ್ನು ನೆನಪಿಸುವ ಸುಸಂದರ್ಭ ಒದಗಿದ್ದು ಸಂತಸ ತಂದಿದೆ.ಅಲ್ಲದೆ ಮೊದಲ ಕವಿತೆಗಳು ನೀಡಿದ ಖುಷಿ ಮರೆಯಲು ಸಾಧ್ಯವಿಲ್ಲ. ಸಾಹಿತ್ಯದ ಗಂಧ ತೇದಷ್ಟು ಪರಿಮಳ ಸೂಸುವುದು. ಮನಸ್ಸನ್ನು ಪುನಃ ಬಾಲ್ಯದತ್ತ ಹಿಂತಿರುಗಿದ್ದು ಕಾಮನ ಬಿಲ್ಲು ಮೂಡಿದಂತೆ. ************************

ಬಾಲ್ಯ ಮರುಕಳಿಸಿದಂತೆ Read Post »

ಇತರೆ

ಮೈಲಿಗಲ್ಲಾದ ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ಸುಜಾತಾ ರವೀಶ್ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಗಳಲ್ಲಿ ಬರೆಯುತ್ತಿದ್ದರೂ ಕವಿತೆ ಅಂತ ಬರೆದದ್ದು ಹತ್ತನೇ ತರಗತಿಯಲ್ಲೇ.  ಅದಕ್ಕೆ ಮುಂಚೆ ಗದ್ಯರೂಪದಲ್ಲಿ ಸಾಕಷ್ಟು ಮನಸ್ಸಿಗೆ ಬಂದದ್ದನ್ನು ಗೀಚಿ ನನ್ನ ಪ್ರೌಢ ಶಾಲಾ ಕನ್ನಡ ಶಿಕ್ಷಕಿ ಪುಷ್ಪಾ ಮೇಡಂ ಅವುಗಳನ್ನು ಲಂಕೇಶ್ ಪತ್ರಿಕೆಗೆ ಕಳಿಸುವ ಅಂದಿದ್ದರೂ ಕಳಿಸಿದರಾ ಬಿಟ್ಟರಾ ನೆನಪಿಲ್ಲ.  ಆಗ ಬರೆದದ್ದು ಯಾವುದೂ ಬಳಿಯಲ್ಲಿಲ್ಲ . ಅದೊಂದು ದಿನ ಒಂದು ಪುಟ್ಟ ಆಟೋಗ್ರಾಫ್ ಸೈಜಿನ ಪುಸ್ತಕವೊಂದನ್ನು ನನ್ನ ತಂದೆ ಕೊಟ್ಟರು ಅಂಗೈ ಅಗಲದ ಆ ಪುಸ್ತಕದಲ್ಲಿ ದೊಡ್ಡ ಪ್ರಬಂಧಗಳನ್ನು ಬರೆಯಲಾಗುತ್ತಿರಲಿಲ್ಲ . ಅದರಲ್ಲಿ ಬರೆಯಬೇಕೆಂಬ ಆಸೆಗೆ ಪುಟ್ಟ ಕವನಗಳನ್ನು ಬರೆಯತೊಡಗಿದೆ.  ಆ ಪುಟ್ಟ ಪುಸ್ತಕಕ್ಕೆ ಗುಲಾಬಿ ಹೂವಿನ ರಟ್ಟು ಹಾಕಿ ಜೋಪಾನದಲ್ಲಿ ಪ್ಲಾಸ್ಟಿಕ್ ರಕ್ಷಾ ಕವಚವನ್ನು ಹಾಕಿಟ್ಟಿದ್ದೆ. ಆ ಪುಸ್ತಕ ಭರ್ತಿಯಾದ ನಂತರ ನನ್ನ ಕವನ ಬರೆಯುವಾಟವೂ ನಿಂತಿತ್ತು ಮರೆತೂ ಬಿಟ್ಟಿದ್ದೆ. ಪುಸ್ತಕವೂ ಇಷ್ಟು ವರ್ಷ ಎಲ್ಲಿತ್ತೋ ಸಿಕ್ಕಿರಲೂ ಇಲ್ಲ . ಇತ್ತೀಚೆಗೆ ಆ ಪುಸ್ತಕ ಸಿಕ್ಕಿದ್ದೂ ಅದಕ್ಕೆ ಸರಿಯಾಗಿ ಸಂಗಾತಿಯಲ್ಲಿ ಈ ವಿಷಯದ ಬಗ್ಗೆ ಬರೆಯಲು ಹೇಳಿದ್ದೂ ಕಾಕತಾಳೀಯವಾಯಿತು.ಆಗಿನ ಭಾವಗಳು ಈಗ ಮರೆತು ಹೋಗಿದೆ ಆದರೆ ಓದಿದಾಗ ಪರವಾಗಿಲ್ಲ ಸುಮಾರಾಗಿ ಬರೀತಿದ್ದೆ ಅನ್ನಿಸುತ್ತೆ (ಅಥವಾ ಈಗಲೂ ಸುಧಾರಿಸಿಲ್ಲವೋ ಗೊತ್ತಿಲ್ಲ).  ಈಗ ಅದೆಷ್ಟೋ ಕವನಗಳನ್ನು ಬರೆದಿದ್ದರೂ ೧೪_೧೫ ವಯಸ್ಸಿನ ಪುಟ್ಟ ಮನದ ಭಾವಗಳು ಈಗ ಅಚ್ಚರಿ ಮೂಡಿಸುತ್ತದೆ. ಪ್ರಪಂಚವೇ ಗೊತ್ತಿರದ ಪುಟ್ಟ ಜಗತ್ತಿನ ವಿಷಯಗಳು ವಸ್ತುವಾದ ಬಗ್ಗೆ ಖುಷಿಯೂ ಆಗುತ್ತದೆ ಆ ಪುಟ್ಟ ಪುಸ್ತಕದ ಮೊದಲ ಕವನ ಪ್ರಾಯಶಃ ನನ್ನ ಮೊದಲ ಕವನವೂ ಅದೇ ಇರಬಹುದು. ನಿಮ್ಮ ಓದಿಗಾಗಿ……. ಮುಂಜಾವು ಬೆಳಗಿನ ಮೊದಲ ಜಾವದಲ್ಲಿ ಎದ್ದು  ಸವಿನಿದ್ದೆಗೆ ವಿದಾಯ ಹೇಳಿ ಹೊರ ಬಂದಾಗ ಕಂಡದ್ದು ನೀಲಿ ಆಗಸ  ಮರೆಯಾಗುತ್ತಿದ್ದ ಚಂದ್ರ ತಾರೆ  ಮತ್ತೆ ಕೆಲ ನಿಮಿಷಗಳಲ್ಲಿ  ಪೂರ್ವ ದಿಗಂತದಲ್ಲಿ  ರಾಗ ರಂಗು ಪಸರಿಸಿತು  ಬಾನಿನಲ್ಲಿ ಸೂರ್ಯ ಉದಯಿಸಿದ್ದ  ಇದ ಕಂಡ ಕವಿಗಳು ವರ್ಣಿಸಬಹುದು ನೂರು  ಆದರೇನು ಆ ನಿಸರ್ಗ ಸೌಂದರ್ಯದ  ರಮಣೀಯತೆಯಾಳವನು ಬರಡು  ಮಾತುಗಳೆಷ್ಟು ತಾನೇ ವರ್ಣಿಸಬಹುದು? ಅದರಿಂದೊದಗುವ ಶಾಂತ ಸುಖದ  ಅನುಭವವನ್ನು ಹೇಗೆ ತಾನೇ ಹೇಳಬಹುದು? ಸುಮಾರು ಮೂವತ್ತು ವರ್ಷಗಳ ಸುದೀರ್ಘ ವಿದಾಯದ ಬಳಿಕ ಬರವಣಿಗೆಯ ರೈಲು ಈಗ ಎರಡು ವರ್ಷದಿಂದೀಚೆಗೆ ಹಳಿ ಹತ್ತಿದೆ ಒಂದು ಕವನ ಸಂಕಲನ ಬಿಡುಗಡೆ,  ಪಠ್ಯಪುಸ್ತಕಕ್ಕೆ ಒಂದು ಕವನ ಆಯ್ಕೆಯಾದದ್ದು ಇವೆಲ್ಲಾ ಈಗಿನ ಮೈಲಿಗಲ್ಲುಗಳು . ಆದರೆ ಆ ಹಳೆಯ ಕವನಗಳನ್ನು ನಾನು ಯಾರಿಗೂ ತೋರಿಸಿಲ್ಲ ಎನ್ನುವುದು ವಿಚಿತ್ರ ಆದರೂ ಸತ್ಯ .    ***************

ಮೈಲಿಗಲ್ಲಾದ ಮೊದಲ ಕವಿತೆ Read Post »

ಇತರೆ

ಗಾಂಧಿಯೇ ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ರೇಶ್ಮಾಗುಳೇದಗುಡ್ಡಾಕರ್ ಅಂದು ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಮನೆಯ ಕಡೆ ಪಯಣ ಬೆಳಸಿದ್ದೆ . ನನ್ನ ಪ್ರೀತಿಯ ಲೇಡಿ ಬರ್ಡ ನೊಂದಿಗೆ.   ಮತ್ತೆ ಒಂದು ಘಂಟೆ ಕಳೆದು ಲ್ಯಾಬ್ ಗೆ ಹೋಗ ಬೇಕಾಗಿತ್ತು . ಸರ ಸರ ಮನೆಗೆ ಬಂದು ನನ್ನ ಸೈಕಲ್ ಅಂಗಳದಲ್ಲೆ ಬಿಟ್ಟು ಒಳಗೆ ಬಂದೆ “ಬಾಬಾ ರೇಶ್ಮಾ ಹೊಸತು ಪತ್ರಿಕೆ ಎರಡು ಬಂದಿದೆ ನೋಡು “.ಎಂದು ನನಗೆ ತಂದು ಕೊಟ್ಟರು .ತಂದೆಯವರಿಗೂ ಪತ್ರಿಕೆ ನೋಡಿ ಅಚ್ಚರಿಯಾಗಿದೆ .ನಾನು ಕವಿತೆ ಕಳಿಸಿರುವ ವಿಚಾರ ಅವರಿಗೆ  ತಿಳಿಸಿರಲಿಲ್ಲ ನಂತರ ಅಣ್ಣನಿಂದ ವಿಚಾರ ತಿಳಿದು ನಾನು ಬಂದ ಮೇಲೆ ನನ್ನ ಕೈಗೆ ಪತ್ರಿಕೆ ನೀಡಿದರು . ಎಲ್ಲರೂ ಪತ್ರಿಕೆಯನ್ನು ಓದಿ ಖುಷಿಯಾಗಿದ್ದಾರೆ ನನಗೆ ಆಶ್ಚರ್ಯ ಯಾಕೆ ,ಏನು ,ಎಂದು ತಿಳಿಯಲಿಲ್ಲ .ತೆಗೆದುಕೊಂಡು ನನ್ನ ಕೊಠಡಿಗೆ ಬಂದೆ ಅಣ್ಣಾ ನಗುತ್ತಾ ನಿನ್ನ ಕವನ ‘ಗಾಂಧಿ ‘ ಪ್ರಕಟವಾಗಿದೆ ನೋಡು ಎಂದು ಹೇಳಿದರು .ನನಗೆ   ಅಚ್ಚರಿ  ಸಂತಸವೋ ಸಂತಸ ಜೊತೆ ಗೌರವ ಧನ ೨೫ ರೂಗಳು ಬಂದಿತ್ತು .ಅಗ ನಾನು ಪದವಿಯ ಮೊದಲ ವರ್ಷದಲ್ಲಿದ್ದೆ .ಮಯೂರ, ಹೊಸತು ,ಸಂಕ್ರಮಣ ಪತ್ರಿಕೆಗಳು ಮನೆಗೆ ಬರುತ್ತಿದ್ದವು .ಹೊಸತು ಪತ್ರಿಕೆಯಲ್ಲಿ ಗಾಂಧಿ ಕುರಿತ ಚಿಂತನೆ ,ಬರಹಗಳು ಅವರ ಅನುಯಾಯಿಗಳ ಸಂದರ್ಶನಗಳು ನನಗೆ ಅತೀವ ಕುತೂಹಲಕಾರಿಯಾಗಿದ್ದವು  . ಅವೆಲ್ಲ ನನ್ನೊಳಗೆ ಗಾಂಧಿ ಕುರಿತ ಒಂದು ಸಂವೇದನೆಯನ್ನು  ಹುಟ್ಟುಹಾಕಿದವು.  ಹಾಗೂ ಒಳನೋಟವನ್ನು ನೀಡಿದ್ದವು. ಹೊಸತು ಪತ್ರಿಕೆಯಿಂದ ಅಗ ನನಗೆ ಹೊಸ ತಿಳಿವಿನ ಜಗತ್ತು ಕಾಣುತ್ತಿತ್ತು ಮತ್ತು ವಾಸ್ತವದ ಬಗ್ಗೆ ಒಂದು ಮಾನವೀಯ ಎಚ್ಚರದ ಅರಿವನ್ನು ಕಾಣುವ ಬರಹಗಳು ಇದ್ದವು.ಇದೆಲ್ಲ ಒಂದು ಧನಾತ್ಮಕ ಸಂಘರ್ಷವಾಗಿ ನನ್ನಲ್ಲಿ ಗಾಂಧಿ ಕವಿತೆ ರೂಪುಗೊಂಡಿತು . ನಾನು ಬರೆದ ಕವಿತೆ ಅಣ್ಣನೆ ಹೋಗಿ ಅಂಚೆ ಮಾಡಿ ಬಂದಿದ್ದರು .ಕಳಿಸಿ ಎರಡು ತಿಂಗಳಾದರೂ ಉತ್ತರವಿಲ್ಲ ಪ್ರತಿ ತಿಂಗಳು ಪತ್ರಿಕೆಯಲ್ಲಿ ಹುಡುಕಾಟ ನಡೆಸಿ ಸುಮ್ಮನಾದರೆ. ಆದರೆ ಅಕ್ಟೋಬರ್‌ ಸಂಚಿಕೆಯಲ್ಲಿ ನನಗೆ  ಅಚ್ಚರಿ ಕಾದಿತ್ತು .ಕವನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತದನಂತರ ನನ್ನ ಕವನದ ಮೆಚ್ಚುಗೆ ಕುರಿತು ನನಗೆ ಹಲವು ಪತ್ರಗಳು ಮನೆಗೆ ಬರತೊಡಗಿದವು . ಜೊತೆಗೆ   ಡಾ||. ಶ್ರೀಧರ್ ಪಿಸ್ಸೆ ಅವರ ಪತ್ರವು ಬಂತು.  ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಕವಿತೆಗೆ ನನ್ನ ಕವಿತೆ ಆಯ್ಕೆ ಅಗಿದೆ ಎಂಬ ಸಂಗತಿ ಹೊತ್ತು .ಇದನ್ನು ನಾನು ಊಹಿಸಿ ಇರಲಿಲ್ಲ  ಈ ವಿಶೇಷ ಅನುಭೂತಿಯನ್ನು ಬದುಕಿನುದ್ದಕ್ಕೂ ಮರೆಯಲು ಸಾದ್ಯವಿಲ್ಲ .ಅವರ ಸಂಪಾದಕತ್ವದಲ್ಲಿ ನನ್ನ ಕವಿತೆ 2006 ರ ವಾರ್ಷಿಕ ಕವಿತೆ  ಹೊತ್ತಿಗೆ ಯಲ್ಲಿ ಪ್ರಕಟವಾಯಿತು . ನನಗೆ ಓದು ನೀಡಿದ ಉಡುಗೊರೆ ನನ್ನ ಬದುಕಿಗೆ ಎಂದು ನಾನು ಭಾವಿಸಿದ್ದೇನೆ .ಹೊಸತು ಪತ್ರಿಕೆ ಸಂಪಾದಕ ಬಳಗಕ್ಕೆ ಈ ವೇದಿಕೆ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬ ದಿನಗಳ ನಂತರ ಬಾಲ್ಯದಿಂದಲೂ ಓದಿನ ಗೀಳು ನನಗೆ ಹೆಚ್ಚು ಬಾಲಮಂಗಳ,ಚಂಪಕ,ಚಂದಮಾಮಾ, ಮನೋರಮಾ ನನಗೆ ಆಗಿನ ಒಡನಾಡಿಗಳು .ತದನಂತರ ದಿನಗಳಲ್ಲಿ ತೇಜಸ್ವಿ, ಕಾರಂತರು, ಜಿಎಸ್ಎಸ್ ,ಲಂಕೇಶ್ , ನೇಮಿಚಂದ್ರ ,ಎಂ.ಕೆ.ಇಂದಿರಾ , ಗೊರೂರು ,ಅವರ ಕೃತಿಗಳು ಮನಸೆಳೆದವು ತ್ರಿವೇಣಿ ಅವರ ಕಾದಂಬರಿಗಳು ಮನೋವಿಜ್ಞಾನ ವನ್ನು ನನಗೆ ಅರ್ಥೈಸಿಕೊಳ್ಳಲು ಬಹುವಾಗಿ ಸಹಾಯವಾಯಿತು ,ವೈಜ್ಞಾನಿಕ ಬರಹಗಳ ಓದು ನನಗೆ ವಿಜ್ಞಾನದ ಕುತೂಹಲ ತಣಿಯಲು ಸಹಾಯವಾದವು ಜೊತೆಗೆ ತೇಜಸ್ವಿ ಅವರ ಕಾಡಿನ ಕತೆಗಳು ವಿಜ್ಞಾನ ಬರಹ ಅಚ್ಚುಮೆಚ್ಚು .ಪದವಿಯಲ್ಲಿ ವಿಷಯ ಪುಸ್ತಕಗಳಿಗಿಂತ ಸಾಹಿತ್ಯದ ಓದೇ ಹೆಚ್ಚಾಗಿತ್ತು ಮನೆಯಲ್ಲಿ ತಂದೆಯವರು ಪುಸ್ತಕ ಪ್ರೇಮಿಯಾಗಿದ್ದರು ಹಲವು ಕೃತಿಗಳು ಇದರಿಂದ ಪರಿಚಯವಾಯಿತು . ಸಾಹಿತ್ಯದ ಕಣ್ಣಲ್ಲಿ ಜಗವನ್ನು ನೋಡಿದ್ದಲ್ಲಿ ಯಾವುದು ಕಷ್ಟ ವಾಗಲಾರದು ಎಂಬದು ನನ್ನ ಬಲವಾದ ನಂಬಿಕೆ. ಓದು ಎಂಬುದು ಬದುಕಿಗೆ ಮದ್ದು. ಸೃಜನಾತ್ಮಕ ದೃಷ್ಟಿ ಕೋನ ಹಾಗೂ ಧನಾತ್ಮಕ ಸಂಚಲನ ನೀಡುತ್ತದೆ.ನಮ್ಮೊಳಗಿರುವ ಕಾಣದ ಲೋಕವನ್ನು ಸಾಹಿತ್ಯ ಅನಾವರಣಗೋಳಿಸುತ್ತದೆ .ವರ್ತಮಾನದ ಆಪಾರ ಕಾಳಜಿಯನ್ನು ಸೂಕ್ಷ್ಮ ಅವಲೋಕನವನ್ನು ನೀಡುತ್ತದೆ ಕನ್ನಡದಲ್ಲಿ ಬಹಳಷ್ಟು ಮೌಲ್ವಿಕ ಕೃತಿಗಳು ಇವೆ ಅದು ನನಗೆ ಹೆಮ್ಮೆ .ಮತ್ತಷ್ಟು ಓದುವ ಬಯಕೆ ಇದೆ. ಇಂದಿನ ಸಾಮಾಜಿಕ ತಾಣ ಒಂದು ಅದ್ಭುತ ವೇದಿಕೆ ಉತ್ತಮ ಬರಹಗಳು ಸುಲಭವಾಗಿ ಓದಲು ಸಿಗುತ್ತಿವೆ. ಇದು ನನಗೆ ಓದಿನ ಖುಷಿ ಇಮ್ಮಡಿ ಮಾಡಿದೆ. ಈ ವೇದಿಕೆಯನ್ನು ಗುಣಾತ್ಮಕವಾಗಿ ಬಳಸಿಕೊಂಡು ಮತ್ತಷ್ಟು ಉತ್ಕೃಷ್ಟ ಸಾಹಿತ್ಯ ಕೃಷಿಯಾಗಲಿ ಎಂಬುದು ನನ್ನ  ಮನದಾಳದ  ಬಯಕೆ.                        **************************

ಗಾಂಧಿಯೇ ಮೊದಲ ಕವಿತೆ Read Post »

You cannot copy content of this page

Scroll to Top