ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಹಾವು ತುಳಿದೇನೇ?

ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು ಅವುಗಳ ಇರಾದೆಯಿರಬೇಕು. ಅಲ್ಲಿ ಎರಡು ಮಾದರಿಯ ಸುದ್ದಿಗಳಿರುತ್ತವೆ. ಮೊದಲನೆಯವು-ಬೈಕುಗಳ್ಳರ ಬಂಧನ, ಸರಗಳ್ಳತನ, ಮನೆಯ ದರೋಡೆ, ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಕುಸಿದು ಕೂಲಿಗಾರನ ಜೀವಂತ ಸಮಾಧಿ, ಜಾತ್ರೆಯಲ್ಲಿ ಗುಂಪು ಘರ್ಷಣೆ, ಬಣವೆ ದಹನ, ಟ್ರಿಪ್ಪರ್ ಡಿಕ್ಕಿಹೊಡೆದು ಕಾರು ನುಜ್ಜುಗುಜ್ಜು, ಎಮ್ಮೆ ಅಡ್ಡಬಂದು ಬೈಕ್ ಸವಾರನಿಗೆ ಪೆಟ್ಟು ಇತ್ಯಾದಿ. ಎರಡನೆಯವು-ಕುರಿಗಳಿಗೆ ಸಿಡಿಲು ಬಡಿದಿದ್ದು, ಹಾವು ಕಚ್ಚಿ ಸತ್ತಿದ್ದು, ರೈತನಿಗೆ ಕಾಡುಹಂದಿ ತಿವಿದಿದ್ದು, ದನಗಾಹಿಗಳ ಮೇಲೆ ಕರಡಿ ಹಲ್ಲೆ, ಭಕ್ತರ ಮೇಲೆ ಜೇನುದಾಳಿ, ನಾಯಿಯನ್ನು ಚಿರತೆ ತಿಂದಿದ್ದು ಮುಂತಾದವು.ಮೊದಲನೆಯವು ಮಾನನಿರ್ಮಿತ ಅಪರಾಧಗಳಾದರೆ, ಎರಡನೆಯವು ನಿಸರ್ಗವೂ ಪಾಲುಗೊಂಡಿರುವ ದುರಂತಗಳು. ಪ್ರಶ್ನೆಯೆಂದರೆ ಎರಡನೆಯವು ನಿಜಕ್ಕೂ `ಅಪರಾಧ’ಗಳೇ? ಸಾವು ನೋವಿನ ಅಂಶವಿರುವುದರಿಂದಲೂ, ಪೋಲಿಸರು ಮಹಜರು ನಡೆಸುವುದರಿಂದಲೂ ಇವು `ಅಪರಾಧ’ದ ಸುದ್ದಿಗಳು ನಿಜ. ವಾಸ್ತವದಲ್ಲಿ ಇವು ಮನುಷ್ಯರು ಆಹ್ವಾನಿಸಿಕೊಂಡು ಅಥವಾ ಅವರ ಕೈಮೀರಿ ನಡೆದ ದುರಂತಗಳು ಕೂಡ. ಆದರಲ್ಲೂ ಹಾವುಕಚ್ಚುವುದು ಅಪರಾಧ ಎನ್ನುವವರಿಗೆ, ತನ್ನ ಪಾಡಿಗೆ ಹೋಗುತ್ತಿದ್ದ ಹಾವನ್ನು ಜನ ಚಚ್ಚುವುದು ಅಪರಾಧ ಎನಿಸುವುದಿಲ್ಲವೇಕೆ? ರಾಜ್ಯ ಮಟ್ಟಕ್ಕೇರದೆ ಎರಡನೇ ಪುಟದ ಸ್ಥಳಿಯ ಸುದ್ದಿಗಳಾಗಿ ಪ್ರಕಟವಾಗುವ ಈ `ಸಣ್ಣ’ ವರದಿಗಳನ್ನು ಮುಂಜಾನೆಯ ಗಡಿಬಿಡಿಯಲ್ಲಿರುವ ವಾಚಕರು ನಿರ್ಲಕ್ಷಿಸಿ, ರಾಜ್ಯ-ರಾಷ್ಟ್ರದ ದೊಡ್ಡ ಸುದ್ದಿಗಳಿಗೆ ಹೋಗಲು ತವಕಿಸುತ್ತಾರೆ. ಹೀಗಾಗಿ ಇವು ನಿರ್ಲಕ್ಷಿತವಾಗಿಯೇ ಉಳಿದುಬಿಡುತ್ತವೆ. ಎಷ್ಟೊ ಸಲ ಇವು ಸ್ಥಳೀಯ ಸ್ಟಿಂಜರನ ಅಸ್ತಿತ್ವದ ಭಾಗವಾಗಿ ಪುಟತುಂಬುವ ಫಿಲ್ಲರುಗಳಾಗಿರುತ್ತವೆ. ಆದರಿವು ನಿರ್ಲಕ್ಷಿಸುವ ಸುದ್ದಿಗಳೇ? ಬಳ್ಳಾರಿ ಜಿಲ್ಲೆಯಲ್ಲೇ ನೂರಾರು ಜನ ಹಾವು ಕಡಿದು ಸಾಯುತ್ತಾರೆಂದ ಮೇಲೆ, ಕರ್ನಾಟಕದ ಲೆಕ್ಕ ಎಷ್ಟಿರಬಹುದು? ವರ್ಷಕ್ಕೆ ಭಾರತದಲ್ಲಿ ಹಾವುಕಚ್ಚಿ ಸಾಯುವವರ ಸಂಖ್ಯೆ 50 ಸಾವಿರವಂತೆ. `ಅಪರಾಧ’ ಸುದ್ದಿಯ ನಮೂನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದು: “ಹಾವುಕಚ್ಚಿ ಇಬ್ಬರ ಸಾವು: ಬುಧವಾರ ರಾತ್ರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರು ಹಾವಿನ ಕಡಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಾಗೇನಹಳ್ಳಿಯಲ್ಲಿ ಮಲಗಿದ್ದ ಮಿನಗಿನಾಗ (15) ಮತ್ತು ಶಿವಪ್ಪ (19) ಎಂಬುವರು ಸಾವನ್ನಪ್ಪಿದರು. ಮಿನಗಿನಾಗನಿಗೆ ಗುಡಿಸಲಿನಲ್ಲಿ ಇದ್ದಾಗ ಹಾವು ಕಚ್ಚಿದರೆ, ಶಿವಣ್ಣನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚ್ಚಿತ್ತು. ಮಿನಗಿನಾಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರೆ, ಶಿವಣ್ಣ ಸ್ಥಳದಲ್ಲಿಯೇ ಸಾವನಪ್ಪಿದ ಎಂದು ಪೋಲಿಸ್ ಮೂಲಗಳು ತಿಳಿಸಿವೆ.’’ಗಾಬರಿ ಹುಟ್ಟಿಸುವುದು ಹಾವು ಕಚ್ಚಿದ್ದಲ್ಲ; ಇದು ಮಾಮೂಲಿ ಎಂಬಂತಿರುವ ಬರೆಹದ ನಿರ್ಲಿಪ್ತತೆ. ದಿನಾ ಕೊಲ್ಲುವ ಮತ್ತು ಸಾಯುವ ಈ ಸುದ್ದಿಯನ್ನು ಬರೆಬರೆದು ಬಹುಶಃ ಸ್ಥಳೀಯ ಪತ್ರಕರ್ತರೂ ದಣಿದಿರಬೇಕು. ಯಾಕೆಂದರೆ, ಈ ಹಾವುಗಳು ಸ್ಕೂಲಿಗೆ ಹೋಗಿದ್ದ ಮಗುವಿಗೆ, ಮನೆಯಲ್ಲಿ ಮಲಗಿದ್ದವರಿಗೆ, ಕೆಲವೊಮ್ಮೆ ಒಂದೇ ಮನೆಯಲ್ಲಿದ್ದ ಐದಾರು ಜನರಿಗೆ, ಕೋಳಿ ಇಟ್ಟಿರುವ ಮೊಟ್ಟೆಯನ್ನು ತೆಗೆಯಲು ಬುಟ್ಟಿಯೊಳಗೆ ಕೈಹಾಕಿದ ಮುದುಕಿಗೆ, ಹುಲ್ಲುಕೊಯ್ಯಲು ಹೋದ ತರುಣನಿಗೆ, ರಾತ್ರಿ ಗದ್ದೆಗೆ ನೀರು ಹಾಯಿಸಲು ಹೋದವರಿಗೆ, ಬೆಳೆ ಕೊಯ್ಯುವವರಿಗೆ, ಕೊಯ್ದು ಹಾಕಿದ ಬೆಳೆಯನ್ನು ಸಿವುಡುಗಟ್ಟಲೆಂದು ಬಾಚಿಕೊಂಡವರಿಗೆ ಕಚ್ಚುತ್ತವೆ. ಕಬ್ಬಿನಗದ್ದೆಯನ್ನು ಸರಸಕ್ಕೆ ಆರಿಸಿಕೊಂಡ ಪ್ರೇಮಿಗಳನ್ನೂ ಬಿಟ್ಟಿಲ್ಲ. ಒಮ್ಮೆ ತಮ್ಮ ಮಗಳನ್ನು ವಿಶ್ವವಿದ್ಯಾಲಯಕ್ಕೆ ಸೇರಿಸಲು ಬಂದ ಒಬ್ಬರು ಬಗಲುಕೋಲು ಮೆಟ್ಟಿಕೊಂಡು ಕಷ್ಟಪಟ್ಟು ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದರು. ಅವರ ಕಾಲನ್ನು ಕಂಡು ಏನಾಯಿತು ಎಂದು ಕೇಳಿದೆ. ಅವರು ಲೈನ್‍ಮನ್. ಕಂಬಹತ್ತುವಾಗ ಬುಡದಲ್ಲಿದ್ದ ಹಾವು ಕಚ್ಚಿ ಮೊಣಕಾಲತನಕ ಕಾಲನ್ನೇ ಕತ್ತರಿಸಲಾಗಿದೆ. ಹಾವು ಕಚ್ಚಲು ಹೊಲವೇ ಬೇಕಾಗಿಲ್ಲ.ಮನುಷ್ಯರನ್ನು ಸಾಯುವಂತೆ ಕಚ್ಚುವುದು ಒಂದೊ ನಾಗರ ಇಲ್ಲವೇ ಕನ್ನಡಿ(ವೈಪರ್) ಹಾವು. ಬಳ್ಳಾರಿ ಜಿಲ್ಲೆಯ ಸ್ಥಳೀಯ ಸುದ್ದಿಗಳ ಪ್ರಕಾರ, ಹೆಚ್ಚು ಜನರು ಹಾವಿನಿಂದ ಸತ್ತಿರುವುದು ಹೊಲಗೆಲಸದಲ್ಲಿ. ಅದೂ ಅಪರಾತ್ರಿಯಲ್ಲಿ. ಮೇಲ್ಕಾಣಿಸಿದ ಸುದ್ದಿಯಲ್ಲಿರುವವರ ಹೆಸರಲ್ಲೇ ಸರ್ಪದ ಹೆಸರೂ, ಸರ್ಪವನ್ನು ಒಡವೆಯಂತೆ ಧರಿಸುವ ಶಿವನ ಹೆಸರೂ ಇರುವುದು ಒಂದು ವ್ಯಂಗ್ಯ.ಈ ಸರ್ಪಸಾವುಗಳಿಗೆ ನಿಜವಾದ ಕಾರಣವೇನು? ಹಾವುಗಳ ಜಾಗದಲ್ಲಿ ಜನ ವಾಸವಾಗಿದ್ದಾರೆಯೊ ಅಥವಾ ಹಾವೇ ಜನರ ಜಾಗಕ್ಕೆ ಹರಿದು ಬರುತ್ತಿವೆಯೊ? ಹಾವಿನಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲವೆ? ಕಚ್ಚಿದರೆ ಕೂಡಲೇ ಅವರನ್ನು ಬದುಕಿ ಉಳಿಸುವ ಆರೋಗ್ಯದ ಸೌಲಭ್ಯ ಎಷ್ಟರಮಟ್ಟಿಗಿದೆ? ಮೊದಲರಡು ಪ್ರಶ್ನೆಗಳು ಪರಿಸರಕ್ಕೆ ಸಂಬಂಧಪಟ್ಟವು. ಮೂರನೆಯದು ಕೆಲಸಗಾರರ ಎಚ್ಚರಗೇಡಿತನದ್ದು; ಕೊನೆಯದು ವ್ಯವಸ್ಥೆಗೆ ಸಂಬಂಧಿಸಿದ್ದು ಮತ್ತು ಗಂಭೀರವಾದದ್ದು. ಯಾಕೆಂದರೆ, ಹೆಚ್ಚಿನ ಪ್ರಸಂಗಗಳಲ್ಲಿ ಹಾವು ಕಡಿತಕ್ಕೆ ಒಳಗಾದವರು ಆಸ್ಪತ್ರೆ ತಲುಪುವ ಮುನ್ನ ದಾರಿಯಲ್ಲೇ ಕೊನೆಯುಸಿರು ಎಳೆಯುತ್ತಾರೆ; ಇಲ್ಲವೇ ಆಸ್ಪತ್ರೆಗೆ ಹೋದಾಗ ತುರ್ತುಚಿಕಿತ್ಸೆ ಸಿಗದೆ ಸಾಯುತ್ತಾರೆ. ಇಲ್ಲಿ ಅಪರಾಧ ಕೇವಲ ಹಾವಿನದಲ್ಲ; ಕಚ್ಚಿಸಿಕೊಂಡ ಕೆಲಸಗಾರರದ್ದಲ್ಲ; ಅವರನ್ನು ಉಳಿಸಿಕೊಳ್ಳಲಾಗದ ವ್ಯವಸ್ಥೆಯದು ಸಹ. ಸಾವು ವಯೋ ಸಹಜವಾಗಿ ಬಂದರೆ ದೋಷ ಕೊಡಬೇಕಿಲ್ಲ. ಅಸಹಜವಾಗಿ ಅಕಸ್ಮಾತ್ ಬಂದರೆ, ಅದನ್ನು ತಡೆಯುವ ಸಿದ್ಧತೆ ನಾಗರಿಕ ಸಮಾಜದಲ್ಲಿ ಇರಬೇಕು. ಹಾಗಿಲ್ಲದೆ ಇರುವುದೇ ಸಾಮಾಜಿಕ ಅಪರಾಧ.ಪಶ್ಚಿಮದ ದೇಶಗಳಲ್ಲೂ ಹಾವು ಕಚ್ಚುತ್ತವೆ. ಆದರೆ ಅಲ್ಲಿ ಸಾಯುವವರ ಸಂಖ್ಯೆ ಕಡಿಮೆ. ಕಚ್ಚಿದರೂ ಉಳಿಸಿಕೊಳ್ಳುವ ವ್ಯವಸ್ಥೆ ಅಲ್ಲಿ ಚೆನ್ನಾಗಿದ್ದಂತಿದೆ. ಭೂಕಂಪ, ನೆರೆ, ಸುನಾಮಿ, ಚಂಡಮಾರುತ ಬಂದಾಗ ಅಲ್ಲೂ ಸಂಭವಿಸುವ ಸಾವುನೋವುಗಳ ಪ್ರಮಾಣ ಕಡಿಮೆ. 90ರ ದಶಕದಲ್ಲಿ ಲಾತೂರಿನ ಭೂಕಂಪವಾದಾಗ ಹೆಚ್ಚು ಜನ ಸತ್ತಿದ್ದು ಮನೆಗಳ ಕಚ್ಚಾ ರಚನೆಯಿಂದ. ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡಮಾರುತಗಳು ಪೂರ್ವ ಕರಾವಳಿಯಲ್ಲಿ ತಾಂಡವನೃತ್ಯ ಮಾಡಿದಾಗಲೂ ಇದೇ ಕತೆ. ನಾಗರಿಕ ಸಮಾಜವಾಗಿ ನಾವು ಕಟ್ಟಿಕೊಂಡಿರುವ ವ್ಯವಸ್ಥಿತವಲ್ಲದ ವ್ಯವಸ್ಥೆಯಿಂದ ಸಕಾಲಿಕ ನೆರವಿಲ್ಲದೆ ಹೆಚ್ಚು ಜನ ಮರಣಿಸುತ್ತಾರೆ. ಕಣಿವೆಗೆ ಬಿದ್ದ ಹಸುವಿರಲಿ, ನೆರೆಯಲ್ಲಿ ಕೊಚ್ಚಿಹೋಗುವ ವ್ಯಕ್ತಿಯಿರಲಿ, ಮನೆಗೆ ಬೆಂಕಿಬಿದ್ದಾಗ ಸಿಕ್ಕಿಕೊಂಡ ಮಗುವಿರಲಿ, ಯೂರೋಪು ಜಪಾನು ಅಮೆರಿಕಗಳ ವ್ಯವಸ್ಥೆ ಪ್ರಾಣವುಳಿಸಲು ಎಷ್ಟು ಮುತುವರ್ಜಿ ವಹಿಸುತ್ತದೆ ಎಂಬುದನ್ನು ಟಿವಿ ನೋಡುವವರೆಲ್ಲ ಬಲ್ಲರು. ಇದು ಅಲ್ಲಿನ ನಾಗರಿಕ ವ್ಯವಸ್ಥೆ ತನ್ನ ಜನರಿಗೆ ಬದ್ಧವಾಗಿರುವುದರ ಸಂಕೇತ ಮಾತ್ರವಲ್ಲ, ಎಚ್ಚೆತ್ತ ನಾಗರಿಕ ಪ್ರಜ್ಞೆಯುಳ್ಳ ಸಮಾಜ ಆಳುವ ವ್ಯವಸ್ಥೆಗಳನ್ನು ದಕ್ಷವಾಗಿ ಇಟ್ಟುಕೊಂಡಿರುವುದರ ಸಂಕೇತ ಕೂಡ.ನಾವೊಂದಿಷ್ಟು ಗೆಳೆಯರು, ಉತ್ತರ ಕರ್ನಾಟಕದ ಪ್ರವಾಹದಿಂದ ಶೆಡ್ಡುಗಳಲ್ಲಿ ಬದುಕುತ್ತಿದ್ದವರ ಜತೆ ವಾರಕಾಲ ಇದ್ದೆವು. ಹೆಂಚಿನಂತೆ ಕಾದ ಶೆಡ್ಡುಗಳು. ಜತೆಗೆ ಹಾವು ಹುಪ್ಪಡಿ ಕಾಟ. ವ್ಯವಸ್ಥೆಯ ಬೇಹೊಣೆಯಿಂದ ಕಷ್ಟಪಡುವ ಜನರ ಲೆಕ್ಕ ಬರೆಯಲು ತಕ್ಕ ಕಿರ್ದಿ ಪುಸ್ತಕವೇ ಇಲ್ಲವೆನಿಸಿತು. ಇದೆಲ್ಲ `ಅಪರಾಧ’ದ ವರ್ತುಲದಲ್ಲಿ ಬರುವುದೇ ಇಲ್ಲ. ಕೊಲೆಯೆಂದೂ ಅನಿಸುವುದಿಲ್ಲ. ಭೂಪಾಲದಲ್ಲಿ ಜನರನ್ನು ಕೊಂದಿದ್ದು ವಿಷಾನಿಲವೊ ಜನರನ್ನು ವಿಪತ್ತುಗಳಿಂದ ರಕ್ಷಿಸುವ ಹೊಣೆಹೊರದ ವ್ಯವಸ್ಥೆಯೊ? ನಾಲ್ಕು ದಶಕಗಳಾಗುತ್ತಿದ್ದರೂ ಅಲ್ಲಿನ ಜನಕ್ಕೆ ತಕ್ಕ ಪರಿಹಾರ ಸಿಕ್ಕಿಲ್ಲ. ಎಂಡೋಸಲ್ಫಾನ್ ಪೀಡಿತರು ತಮ್ಮದಲ್ಲದ ತಪ್ಪಿಗೆ ನರಳುತ್ತಲಿದ್ದಾರೆ. ಇವರಿಗೂ ಬೆಂಕಿಬೀಳುವ ನೊರೆಕಾರುವ ಬೆಂಗಳೂರಿನಂಚಿನ ಕೆರೆಗಳಿಗೂ ವ್ಯತ್ಯಾಸವಿಲ್ಲ. ಡ್ಯಾಮಿನ ಕೆಳಗಣ `ಭತ್ತದ ಕಣಜ’ ಎನ್ನಲಾಗುವ ಊರುಗಳಲ್ಲಿ ಸುರಿಯಲಾಗುತ್ತಿರುವ ಕ್ರಿಮಿನಾಶಕಗಳು ಎಷ್ಟು ಜೀವಿಗಳ ಆರೋಗ್ಯವನ್ನು ಹೇಗೆ ಕೆಡಿಸಿವೆಯೊ ಯಾರು ಬಲ್ಲರು? ನಂಜನ್ನು ಎಗ್ಗಿಲ್ಲದೆ ಚೆಲ್ಲಾಡಿ ಸಮೂಹಗಳ ಪ್ರಾಣಕ್ಕೆ ಕುತ್ತಿಡುವ ಕೆಲಸಗಳಿಗಿಂತ ಕಚ್ಚುವ ಹಾವುಗಳು ಕಡಿಮೆ ಅಪಾಯಕಾರಿ. ಶಿಶುನಾಳರ `ಹಾವು ತುಳಿದೇನೇ ಮಾನಿನಿ’ ತತ್ವಪದದಲ್ಲಿ ಹಾವು ಆನುಭಾವಿಕ ಅರ್ಥದಲ್ಲಿರುವ ರೂಪಕ. ಸಿದ್ಧಲಿಂಗಯ್ಯನವರ `ಹಾವುಗಳೇ ಕಚ್ಚಿ’ ಕವನದಲ್ಲಿ ಜನರ ಎಚ್ಚೆತ್ತಪ್ರಜ್ಞೆಯ ಸಂಕೇತ. ಹಾವನ್ನು ದಾಸಿಮಯ್ಯ ಹಸಿವಿಗೆ ಹೋಲಿಸಿದರೆ ಅಕ್ಕ ಕಾಮಕ್ಕೆ ಪ್ರತಿಮಿಸುವಳು. ಹಾವನ್ನು ಪ್ರತಿಮೆ ರೂಪಕವಾಗಿಸಿರುವ ಈ ಯಾರೂ ಅದನ್ನು ಕೇವಲ ಹಗೆಯನ್ನಾಗಿ ಪರಿಭಾವಿಸಿಲ್ಲ. ಹಾವನ್ನು ಆರಾಧಿಸುವ ಮತ್ತು ಚಚ್ಚಿಹಾಕುವ ಮನೋಭಾವಕ್ಕಿಂತ ಭಿನ್ನವಾದ ದೃಷ್ಟಿಕೋನವಿದು. ಕಚ್ಚಿಸಿಕೊಳ್ಳದಂತೆ ಒಡನಾಡುವುದು ಸಾಧ್ಯವಾಗುವುದಾದರೆ, ಹಾವಿನ ಸಂಗ ಲೇಸು ಕಾಣಯ್ಯ ಎಂದು ಹೇಳುವಲ್ಲಿ, ದಿಟ್ಟತನ ಮಾತ್ರವಲ್ಲ ವೈರುಧ್ಯಗಳನ್ನು ಸಂಭಾಳಿಸುವ ವಿವೇಕವೂ ಇದೆ.ಕೊಂದಹರು ಎಂಬುದನರಿಯದ ಹಾವು ತುಳಿದವರನ್ನಷ್ಟೆ ಕಚ್ಚುತ್ತದೆ. ಅದರ ನೆಲೆಯನ್ನು ಆಕ್ರಮಿಸಿಕೊಂಡು, ಉಣಿಸಿನ ಸರಪಣಿಯನ್ನು ಭಗ್ನಪಡಿಸಿರುವ ನಾವು, ದಿಟದ ನಾಗರ ಕಂಡೊಡನೆ ಕೊಲ್ಲುತ್ತಿದ್ದೇವೆ. ಅಧಿಕಾರಸ್ಥರು ರೈತರ ಹೊಲಗದ್ದೆಯನ್ನು ನೀರು ಬೆಟ್ಟವನ್ನು ಕಿತ್ತು ಉದ್ಯಮಿಗಳಿಗೆ ಮಾರುವುದು `ಅಪರಾಧ ಸುದ್ದಿ’ ಆಗುವುದೇ ಇಲ್ಲ. ಈಗ ಜನರನ್ನು ಕೊಲ್ಲಲು ಹಾವುಗಳೇ ಬೇಕಿಲ್ಲ. ಡೆಂಗಿ ಸೊಳ್ಳೆಗಳೇ ಸಾಕು. ಬಳ್ಳಾರಿ ಜಿಲ್ಲೆಯಲ್ಲಿ ಡೆಂಗಿಜ್ವರದಿಂದ ಬಹಳ ಜನ ಜೀವ ಕಳೆದುಕೊಂಡಿದ್ದಾರೆ. ನಾಡಿನಲ್ಲಿ ಜನರ ಜೀವದಷ್ಟು ಅಗ್ಗವಾದ ವಸ್ತು ಬೇರೆಯಿಲ್ಲ. ಇಂತಹ ವ್ಯವಸ್ಥೆಯಲ್ಲಿ, ಆತ್ಮರಕ್ಷಣೆಗಾಗಿ ಕಚ್ಚುವ ಹಾವುಗಳು ಅಪರಾಧಿಗಳಾಗಿ ಬಿಂಬಿತವಾಗುವುದು ಸಹಜವೇ ಆಗಿದೆ. ****************************************************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಹಾವು ತುಳಿದೇನೇ? Read Post »

ಕಾವ್ಯಯಾನ

ಪಟ್ಟಣಕ್ಕೆ ಬುದ್ಧ ಬರಬೇಕಿತ್ತು

ಕವಿತೆ ಪ್ಯಾರಿಸುತ ಅದು ಒಂದು ದಾರಿಬುದ್ಧ ಹೋಗುತ್ತಿದ್ದ ದಾರಿಯದುಅವನು ಎದ್ದು ಹೋದ ಸಮಯಕ್ಕೆನಾನೂ ಎದ್ದು ಯಾರಿಗೂ ಹೇಳದೆಹೋಗಿಬಿಟ್ಟೆ;ಅವನಿಗೆ ಕಂಡಂತೆ ನನಗೆ ಯಾವಹೆಣವಾಗಲಿ,ಮುದಿಯನಾಗಲಿಯಾರೂ ಒಬ್ಬರೂ ಸಿಗಲೇ ಇಲ್ಲಅಥವಾನನ್ನ ಕಣ್ಣೇ ಕಾಣಲಿಲ್ಲವೋ ಗೊತ್ತಿಲ್ಲನಾನು ಮಾತ್ರ ಅವನು ಸಿಗುವಭರವಸೆಯ ಭರದಲ್ಲಿ ಹೆಜ್ಜೆಗಳನ್ನುಹಾಕುತ್ತಲೇ ಹೋಗುತ್ತಿದ್ದೆನನ್ನ ಚಪ್ಪಲಿಗಳೂ ಅದೇ ಭರವಸೆಯನ್ನುಹುಟ್ಟು ಹಾಕಿದ್ದವುಒಳಗೊಳಗೆ ಬುದ್ಧನಾಗುವ ಜಂಬಕಾರಂಜಿಯಂತೆ ರಂಜಿಸುತ್ತಿತ್ತುನಾನು ರಾಜನ ಮಗನಲ್ಲದಕ್ಕೋ,ಗುಡಿಸಲು ಹೊರತು ಬೇರೇನೂಇಲ್ಲದಕ್ಕೋತಿಳಿಯಲಿಲ್ಲ ಮತ್ತೆ ಮುಂದೆ ಹೆಜ್ಜೆ ಹಾಕಿದೆಕಾಡೆಲ್ಲ ಅಲೆದರೂ ಯಾವ ಪಾಪಪ್ರಜ್ಞೆಯುಕಾಡದಿರುವದುನನ್ನಲ್ಲೂ ಆಶ್ಚರ್ಯ ಉಂಟು ಮಾಡಿತ್ತುಅಲ್ಲಿಂದ ನೇರವಾಗಿ ಪಟ್ಟಣದ ಎದೆಯ ಮೇಲೆನಡೆಯುತ್ತಿದ್ದೆಗುಡಿಯ ಪಕ್ಕ ಹಸಿವಿಗಾಗಿ ಹಂಬಲಿಸುವಮಾಸ್ಕು ಧರಿಸಿದ,ಕೊಳಕು ಬಟ್ಟೆಯುಟ್ಟಬಲಗೈಯನ್ನು ಮುಂದೆ ಚಾಚಿರುವಒಬ್ಬ ಸುಂದರ ಯುವತಿ ಕಂಡಳುಅವಳಲ್ಲಿ ಸೌಂದರ್ಯವಿತ್ತು,ಸಾಕ್ಷಾತ್ ಭಗವಂತನಿದ್ದ ಆದರೆ ಅದಕ್ಕಿಂತಅವಳ ಹಸಿವು ಕಾಣುತ್ತಿತ್ತುಹಸಿವನ್ನು ನಿಗಿಸಿದ್ದರೆ ಭಗವಂತ ಹೊರಬರುತ್ತಿದ್ದನೇನೋಈ ದಾರಿಯಲ್ಲಿ ನಾ ಬರುವ ಬದಲು ಬುದ್ಧನೇಬರಬೇಕಿತ್ತುಕಾಡನ್ನು ಬಿಟ್ಟು ಪಟ್ಟಣವನ್ನೆಲ್ಲ ಸುತ್ತಬೇಕಿತ್ತುಅಲ್ಲಿ ಕಾಣುತ್ತಿದ್ದ ಹೆಣ,ಒಂಟಿ ಮುದಿ ಜೀವಇಲ್ಲಿ ಎಲ್ಲವೂ ಬಹುವಾಗಿ ಕಾಣುತ್ತಿದ್ದವು ************************************

ಪಟ್ಟಣಕ್ಕೆ ಬುದ್ಧ ಬರಬೇಕಿತ್ತು Read Post »

ಕಾವ್ಯಯಾನ

ಕರೆ ಮಾಡಬೇಡಿ…ಪ್ಲೀಸ್

ಕವಿತೆ ಸುಜಾತ ಲಕ್ಷ್ಮೀಪುರ. ಒಂದೇ ಸಮನೆ ಎಡಬಿಡದೆಝಣಗುಟ್ಟುವ ಪೋನುಕೋಪ ನೆತ್ತಿಗೇರಿಸಿ ಸಿಟ್ಟು ಮತ್ತು ಅಳುಒತ್ತರಿಸಿಕೊಂಡು ಬಂದುಕಣ್ಣೀರಾಗಿ ಹರಿದರೂಬಿಕ್ಕಳಿಕೆ ಹಾಗೇ ಉಳಿದಿದೆ. ದಯವಿಟ್ಟು ಕರೆ ಮಾಡಬೇಡಿನಾನು ಎಷ್ಟು ಬಾರಿ ಹೇಳಲಿಹೌದು ನಾನು ಕರೋನಾ ಸೋಂಕಿತಳು.ಸೋಂಕಿತಳೆ. ಮತ್ತೆ ಮತ್ತೆ ವಿಳಾಸ ಖಾತರಿಆಗಬೇಕೇಕೆ!??‌ಹೊರಟಿಲ್ಲಾ ಇನ್ನೂ ವಿಳಾಸವಿಲ್ಲದ ಊರಿಗೆ. ದೇಹದ‌ ನೋವಿಗೇನೋಗುಳಿಗೆಗಳಿವೆ…ಯಾರಾದರೂ ಕಳಿಸಿಕೊಡಿವಿಳಾಸ ತಿಳಿಸುವೆಸೋಂಕಿತಳೆಂಬ ಹೆಸರು ಕಿತ್ತಾಕುವ ಗುಳಿಗೆ. ಹಾಲು,ತರಕಾರಿ,ದಿನಸಿತಂದು ಕೊಡುವವರಿಲ್ಲದೆಕಿಟಕಿ ಸರಳುಗಳ ಆಚೆ ಸತ್ತ ಮನಸ್ಸಿನ ಮಂದಿ ನೋಡುತ್ತಾ ಕಾಲದೂಡುತ್ತಿದ್ದೇನೆ. ನಾನೀಗ ವೈರಾಣುವಿನ ವಿರುದ್ದಗಟ್ಟಿಯಾಗಿ ನಿಂತಿದ್ದೇನೆ.ಪದೇ ಪದೇ ಕರೆಮಾಡಿಪ್ರಶ್ನಿಸಬೇಡಿ ನಿರುಮ್ಮಳವಾಗಿರಲು ಬಿಟ್ಟುಬಿಡಿ. ಸದ್ಯಕ್ಕೆ ಇದೇ ವಿಳಾಸ..ಸದ್ಯಕ್ಕೆ ನಾನು ಸೋಂಕಿತಳೆಸದ್ಯಕ್ಕೆ ಪೋನಿಡಿಕರೋನಾ ಬಂದವರೆಲ್ಲಾ ಸಾಯುವುದಿಲ್ಲಾ.ಕೊಂಚ ಮಾನವೀಯತೆ ತೋರಬೇಡವೇ!?ಪ್ರಶ್ನಿಸಿಕೊಳ್ಳಿ ನಿಮ್ಮನ್ನೆ. ************************************

ಕರೆ ಮಾಡಬೇಡಿ…ಪ್ಲೀಸ್ Read Post »

ಇತರೆ

ಯಕ್ಷಿಣಿ ಗಾನ

ಮೊದಲ ಕವಿತೆಯ ರೋಮಾಂಚನ-ಸರಣಿಯ ಕೊನೆಯ ಬರಹ ಪೂರ್ಣಿಮಾ ಸುರೇಶ್ ಬಾಲ್ಯ, ಚಂದಮಾಮ ಪುಸ್ತಕಗಳ ಪುಟಗಳೊಳಗೆ, ಅವಿತು  ಚಿತ್ರಗಳಿಗೆ ಬಣ್ಣ ತುಂಬುತ್ತಿತ್ತು. ಭೂತದ ಭೂತ, ಭವಿಷ್ಯ-ಪಿಷಾಚಿ! ಯಾವುದರ ಕಾಟವೂ ಇರದ ಮುಕ್ತವಾಗಿ ಅರಳಿದ ಸುರುಳಿ ಮೊಗ್ಗು ಮೂಡಿದಾಗ, ‘ ಇಂದು’ ವಿಗೆ ಲಂಗದಾವಣಿ.  ಯಾರ ಮನೆಯಲ್ಲಿ, ಯಾವ ಅಂಗಡಿಗಳಲ್ಲಿ  ಹಳೆಯ ಕಥೆ ಪುಸ್ತಕ ಸಿಗಬಹುದು. ರಾತ್ರಿ ಹತ್ತಿರದಲ್ಲಿ ಬಯಲಾಟ ಇರಬಹುದೇ?.. ಅಮ್ಮನ ಕಣ್ಣು ಬೆದರಿಸಬಹುದೇ?.ಅಜ್ಜಿಯನ್ನು ಹೇಗೆ ಒಪ್ಪಿಸಬೇಕು..ಇವಿಷ್ಟು ಬದುಕಿನ ಬಗ್ಗೆ ಮೂಡಿಕೊಳ್ಳುತ್ತಿದ್ದ ಪ್ರಶ್ನೆ ಮೊಗ್ಗುಗಳು.    ರಾತ್ರಿ ನೋಡಿದ ಬಯಲಾಟ,ಸಂಜೆ ಓದಿದ ಚಂದಮಾಮದ ಕಥೆಗಳನ್ನು ಕಣ್ಣೊಳಗೆ ತುಂಬಿ, ಕಲ್ಪನೆಯನ್ನು ಮತ್ತಷ್ಟು ಹಿಗ್ಗಿಸಿ, ಒಬ್ಬ ಸುಂದರ ರಾಜಕುಮಾರಿ,ಒಬ್ಬ ರಾಕ್ಷಸ,ದೂರದಲ್ಲಿ ಒಬ್ಬ ರಾಜಕುಮಾರನನ್ನು ಮನದ ಭಿತ್ತಿಯಲ್ಲಿ ಚಿತ್ರಿಸಿ, ಅದರ ನಶೆಗೆ ದೇಹ,ಮನಸ್ಸಿನ ಹೆಜ್ಜೆಗಳು ಗೆಜ್ಜೆ ಕಟ್ಟಿಕೊಳ್ಳುತ್ತಿದ್ದವು. ಇವುಗಳ ಭಾರ ಇಳಿಸಿಕೊಳ್ಳುವ ಆತುರ. ಸಿಕ್ಕಿಸಿಕ್ಕಿದ ಗೆಳತಿಯರನ್ನು ಎಳತಂದು ಮನೆಯ ಪಕ್ಕದ ಅಶ್ವತ್ಥ ಮರದ ಕಟ್ಟೆಯಲ್ಲಿ ಕುಳ್ಳಿರಿಸಿ ಕಲ್ಪನೆಯ ರಾಜಕುಮಾರಿಯಿಂದ ಕಥೆ ಆರಂಭಗೊಂಡು ರಾಕ್ಷಸನ ಎಳತಂದು ರಾಜಕುಮಾರ ಬಂದು. ರಾಕ್ಷಸನ ಕೊಂದು,ಅವಳನ್ನು ಮದುವೆಯಾದ ಎಂಬಲ್ಲಿಗೆ ಕಥೆಗೊಂದು ಚುಕ್ಕಿ ಬಿದ್ದು..ಮೈ ಭಾರ ಇಳಿಸಿಕೊಂಡು ಮನದ ಕೂಸನ್ನು ಅವರ ಮಡಿಲಿಗಿಟ್ಟ ಸಂತೃಪ್ತಿ.    ಒಬ್ಬಳೇ ಕೂತಾಗಲೂ ಮರುದಿನ ರೂಪುಗೊಳ್ಳುವ ರೂಪಸಿ ರಾಜಕುಮಾರಿಗೆ ಅಷ್ಟೇ ಸುಂದರ ಹೆಸರಿಡುವ ತಾಳಲಾಗದ ಚಡಪಡಿಕೆ.   ಈ ಚಕ್ರಬಂಧದಲ್ಲಿ ಇರುವಾಗ ಬಲು ದೊಡ್ಡ ಸಮಸ್ಯೆಯೊಂದು ನನ್ನ ಇರಿಯಲು ಆರಂಭಿಸಿತ್ತು. ನನಗಿಂತ ನಾಲ್ಕು ವರ್ಷ ಕಿರಿಯಳಾದ ತಂಗಿ ಅಮ್ಮನ ಮುದ್ದಿನ ಮಗಳು. ಸಹಜವಾಗಿ ಮೊದಲ ಪ್ರಾಧಾನ್ಯತೆ ಅವಳಿಗೇ ಸಿಗುತ್ತಿತ್ತು. ಜೊತೆಜೊತೆಗೆ ನನ್ನ ಅವಳ ಜಗಳದ ನಡುವೆ ಅವಳ ಗೆಲುವಿಗೆ ಸಿಕ್ಕುವ ಬ್ರಹ್ಮಾಸ್ತೃವೆಂದರೆ ಅಮ್ಮ. ಅಮ್ಮನ ಪ್ರೀತಿಗಾಗಿ  ನಮ್ಮಿಬ್ಬರ ಕಾದಾಟ, ಆಕೆಗೆ ಕೆಲಸದ ನಡುವೆ, ಕಿರಿಕಿರಿ ಉಂಟು ಮಾಡುತ್ತಿತ್ತು. ಇದರಿಂದ ದೊಡ್ಡವಳಾದ ನಾನು ಪೆಟ್ಟು ತಿನ್ನುತ್ತಿದ್ದ ಸಂದರ್ಭಗಳೂ ಕಡಿಮೆಯೇನಿಲ್ಲ. ಈ ಸೋಲಿನ ನೋವು ತಂಗಿಯ ಜೊತೆಜೊತೆಗೆ, ಅಮ್ಮನ ಜೊತೆಗೂ ವಿರಸದಂತಹ ಅನಾಮಿಕ ಭಾವ ಒಂದನ್ನು ನನಗೆ ಪರಿಚಯಿಸಿತು.  ಯಾವುದನ್ನೂ ಬಹಳ ಕಾಲ ನನ್ನ ಜೊತೆ ಅಡಗಿಸಲಾಗದ ನಾನು ಇದರಿಂದ ಮುಕ್ತಿ ಹೊಂದಬೇಕಿತ್ತು. ಇದನ್ನೆಲ್ಲ ಕಥೆಯ ಒಳಗೆ ತುಂಬುವ ಚಾಕ್ಯತೆ ಆಗಿನ್ನೂ ಕಲಿತಿರಲಿಲ್ಲ. ಕಥೆಯೆಂದರೆ ರಾಜಕುಮಾರಿಗೇ ಸೀಮಿತ!. ಪುಟ್ಟ ಗುಡಿಸಲಿನಂತಹ ಮನೆಯಲ್ಲಿ ಹರಕು ಪರಕು ಫ್ರಾಕು ಧರಿಸಿ,ಕೆದರಿದ,  ನನ್ನ ಪುಟ್ಟ ತಲೆಗೆ ಮೀರಿದ ಕಥಾ ವಸ್ತುವಿದು. ಆದರೆ ತಿಂಡಿ, ನಿದ್ದೆ, ಪ್ರೀತಿ ಎಲ್ಲವೂ ಅಮ್ಮನಿಂದ ಮೊದಲು ಸಿಗಬೇಕಾದದ್ದು ತನಗೇ ಎಂಬ ಹಕ್ಕೊತ್ತಾಯ.  “ದಿನವೂ ಏನು ನಿನ್ನ ರಂಪ. ನೀನು ದೊಡ್ಡವಳು. ಅರ್ಥ ಮಾಡಿಕೊಳ್ಳಬೇಕು” ಎಂಬ ಅಮ್ಮನ ಸಮಾಧಾನದ ಮಾತುಗಳು. ಹೊಸದೊಂದು ಕಿಚ್ಚಿನ ಕಿಡಿ ಮನದೊಳಗೆ ಹಚ್ಚಿತ್ತು . ಅಮ್ಮನ ಮೇಲೆ ಕೋಪ,ತುಂಟಿ ತಂಗಿ ಮೇಲೆ ಹಠ ಎಲ್ಲವನ್ನೂ ಹೊರಹಾಕಿ ಮತ್ತೆ ನನ್ನ ರಾಜಕುಮಾರಿ ಕಥೆ ತಯಾರಿಗೆ ಹೋಗಬೇಕು. ಏನು ಮಾಡುವುದು. ಇಂತಹ ಮಹಾನ್ ದುಃಖ ಯಾರಿಗೂ ತಿಳಿಯುತ್ತಿರಲಿಲ್ಲ. ಏನು ಮಾಡುವುದು? ಆಗಲೇ ಹುಟ್ಟಿತ್ತು ಕವನ. ಅದು ಬಾಲಕಿ ಕುಂತಿಗೆ ಹುಟ್ಟಿದ  ಕರ್ಣ ನಂತಹಾ ಮಗು. ಹಳೇ ಪುಸ್ತಕ ಒಂದರಲ್ಲಿ ಗೀಚಿದ್ದು.”ಅಮ್ಮ ಪ್ರೀತಿಸುವುದಿಲ್ಲ” ಎಂಬ ಭಾವಾರ್ಥದ ನನ್ನ ಮೊದಲ ಕವನ. ಜೊತೆಗೆ ದಿನಾಂಕ ನಮೂದಿಸಿದ್ದೆ. ಅದು ಯಾರಿಗೂ ಕಾಣಲಿಲ್ಲ , ಕಾಣುವ ಪುಟದಲ್ಲಿ ದಾಖಲಾಗಲೂ ಇಲ್ಲ. ಆ ಹಳೆಯ ಪುಸ್ತಕ ಬಹು ಕಾಲ ಇದ್ದು‌ ಕೊನೆಗೆಲ್ಲೋ ಮಾಯವಾಯಿತು. ನಂತರ ಮತ್ತೆ ರಾಜಕುಮಾರಿಯನ್ನು ಪೋಷಿಸಿ ಹೊರತಂದು ಸ್ನೇಹಿತರ ಎದುರು ತಂದು ನಿಲ್ಲಿಸುವ ಕಥನ ಕಾಯಕವೇ ಮುಂದುವರೆದಿತ್ತು.    ಕವನ,ಕವಿತೆ,ಬುದ್ದಿವಂತರಿಗೆ ಮಾತ್ರ ಸರಿ. ಕವಿಗಳೆಂದರೆ ಅದ್ಭುತವೇನೋ ಕಂಡಂತೆ: ಆ ಕವಿತೆ, ನಿಜವಾದ ಕವಿತೆ ಆಗಿತ್ತೇ..ತಿಳಿಯದು.  ಆದರೆ ನಂತರದ ದಿನಗಳಲ್ಲಿ ಅಮ್ಮನಿಗೆ  ಅದನ್ನು ತೋರಿಸಿ ಅವಳು ನಕ್ಕು ನನ್ನ ಪೆದ್ದು ನಡವಳಿಕೆಗಾಗಿ,  ನಗಲು  ಬಹಳ ಕಾಲ ಕಾರಣವಾಗಿತ್ತು. ಮುಂದೆ ಕವಿತೆ ಹೇಗಿರಬೇಕು? ನಾನೂ ಕವಿತೆ ಬರೆಯಲು ಸಾಧ್ಯವೇ ಎಂದು ಯೋಚನೆಗೆ ಒಳಗಾಗಿದ್ದೆ. ಕವಿತೆ ಬರೆಯುವವರೆಲ್ಲ ಮೇಧಾವಿಗಳು. ಅದು ನನ್ನಂತಹ ಸಾಧಾರಣ ಮಂಡೆಯ ಹೆಣ್ಣಿಗೆ ಒಲಿಯುವಂತಹದಲ್ಲ. ಹೆಚ್ಚೆಂದರೆ ಕಥೆ ಬರೆಯಬಹುದು ಎಂದು ನನ್ನ ಕನಸಿಗೆ ಕಥೆಯ ಆಹಾರ ನೀಡಿ ಸಮಾಧಾನ ಮಾಡಿದ್ದೆ.   ಆದರೂ ಹಳೇ ನೋಟ್ ಪುಸ್ತಕಗಳಲ್ಲಿ ನನಗೂ ಸರಿಯಾಗಿ ಅರ್ಥ  ಆಗದ,ಬೇರೆಯವರಿಗೆ ಏನೆಂದೇ ತಿಳಿಯಲಾಗದ ಸಾಲುಗಳನ್ನು ಗೀಚಿ ಖುಷಿ ಪಟ್ಟದ್ದೂ ಇದೆ. ಆದರೆ ಇದಾವುದೂ ಕವಿತೆಯ ದರ್ಜೆಗೆ ಏರದೆ, ಕವಯತ್ರಿ ನಾನು ಆಗಲೇ ಇಲ್ಲ.   ಕಾಲೇಜಿನಲ್ಲಿ ನಮ್ಮ ಕನ್ನಡ ಪ್ರಾಧ್ಯಾಪಕರು ನಿನ್ನ ಭಾಷೆ ಚೆನ್ನಾಗಿದೆ. ಕವನ ಬರೆಯುತ್ತೀಯಾ..ಎಂದಾಗ ಬಾಂಬ್ ಸ್ಪೋಟವಾದಂತೆ ಬೆಚ್ಚಿ,ಅಂಜಿ ಓಡಿದ್ದೆ. “ಅಬ್ಬ! ಕವನ ? ನಾನು ಹೇಗೆ ಬರೆಯೋದು..ಅದು ನನಗಲ್ಲ.”    ಕೊನೆಗೂ ಒಮ್ಮೆ ಕವಿತೆ ನನ್ನಲಿ ಬಂದು ಗುನುಗುನು ಗುನುಗಿ ಲಹರಿಯೊಂದನ್ನು ತೇಲಿಸಿ ಬಿಟ್ಟಳು. ನಮ್ಮ ಮನೆಯ ಬಳಿ ಒಂದು ಮನೆಯಿತ್ತು. ಕೇವಲ ಹೆಂಗಸರಿದ್ದ ಮನೆ. ಸುಂದರ ಮಹಿಳೆಯರು. ನನಗೋ ವಾತ್ಸಲ್ಯದ ಮಹಾಪೂರ ಹರಿಸಿದವರು. ಅವರನ್ನು ಅಜ್ಜಿ,ದೊಡ್ಡಮ್ಮ,ಸಣ್ಣಜ್ಜಿ ಅಂತೆಲ್ಲ ಕರೆಯುತ್ತಿದ್ದೆ. ಬಾಲ್ಯ ಬಸಿದು ಹರೆಯ ಅಪ್ಪಿ ಯೌವನ ಕೂತು ಒಳಗೊಳಗೆ ಸಂಚಲನ ಮೂಡಿಸಿದ ಬಳಿಕ ಅವರು ನನ್ನ ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಕೂತು ವೇದನೆ, ನೋವಿನ, ಪ್ರೇಮದ ಬಿಗಿದ ತಂತಿ ಎಳೆದಂತೆ .ಯಾವುದೋ ತಳಮಳ. ಬರೆಯಬೇಕು..ಹೇಗಾದರೂ..ಯಾರಿಗೂ ತಿಳಿಯಬಾರದು..ಆದರೂ ಆ ಅವರ ನೋವು ದಾಖಲಾಗಬೇಕು. ಆಗ ತಿಳಿವಿನಾಚೆಯಿಂದ ಕೆಲವು ಸಾಲುಗಳು ಹೊಳೆದು ಪುಟಗಳಲ್ಲಿ ದಾಖಲಾಗಿದ್ದವು. ಬರೆದು ನಾನೇ ಓದಿ ಕಣ್ಣೀರಾಗುತ್ತಿದ್ದೆ.    ಪ್ರೇಮ,ಪ್ರೀತಿ ಹರೆಯದ ಕನಸು ನನ್ನ ಕವಿತೆಗೆ ವಸ್ತುವಾಗದೆ, ದೇವದಾಸಿಯರು ಎಂದು ಕರೆಸಿಕೊಳ್ಳುವ ಆ ನಾಲ್ಕು ಅಮ್ಮಂದಿರ ಒಡಲ ಬಿಸುಪು ಕವನವಾಗಿತ್ತು.  ಅಂತರಂಗದ ಬಯಲಾಟ ಮಬ್ಬಾದ ಕಣ್ಣಂಗಳದಲಿ ಹಿತ್ತಲ ಬಯಲಾಟ ಪಾತ್ರಧಾರಿಗಳು ಅದಲು ಬದಲು ಪ್ರಸಂಗ ಮಾತ್ರ ಅದೇ.. ಸುಕ್ಕುಗಟ್ಟಿದ ಕೆನ್ನೆಗಳಲೂ ಮೂಡಲ ಮನೆಯ ರಂಗು ಕರಗುತ್ತಿದ್ದ ಬಣ್ಣಗಳಲಿ ಉಳಿದಿಹುದು ಕೆಂಪೊಂದೇ ಜೋತು ಬಿದ್ದ ಪ್ರಾಯ ಬಾಲ್ಯ ಯೌವನಗಳ ಯುಗಾದಿ ಮರೆತು ಬಿಟ್ಟ ಸಿಹಿಯೂಟ ಅಂಟು ಜಾಡ್ಯ ಕಹಿಯೊಂದೇ ಸಡಿಲಿಸಿದ ತೋಳುಗಳಲಿ ದಂಡ ನಾಯಕರ ಗುರುತು ಕನಸುಗಳ ಅಚ್ಚಿನಲಿ ಬಡ್ಡಿಗಳಿಸುತಿಹ ವೇದನೆ ಕುಸಿಯುತಿಹ ಕಾಲುಗಳು ನವಿಲ ಗೆಜ್ಜೆ  ಕುರುಹು ಗಂಡು ಹೆಜ್ಜೆಯ ಭಾರಕೆ ಧರೆಗಂಟಿದ ದೇಹ ಮೌನವೃತಕೆ ವಾಲುತಿಹ ಮಸ್ತಿಷ್ಕದಲಿ ಕುರುಕ್ಷೇತ್ರದ ಶಂಖನಾದ ಕೈ ಚೆಲ್ಲುತಿಹ ಸಾರಥಿ ವಿಜಯ ದುಂಧುಬಿ ಎಲ್ಲಿಯೋ.. **     **   **  ** ಅದನ್ನು ಓದಿದ ಹಿರಿಯ ಕವಯತ್ರಿಯೊಬ್ಬರು ಕೇಳಿದ್ದರು ” ಇದೇನೇ,ಈ ಹರೆಯದಲ್ಲಿ ಇಂತಹ ಕವನ ಬರೆದಿರುವೆ. ನಿನಗೆ ಹೊಂದುವ,ನಿನ್ನ ವಯಸ್ಸಿನ ಭಾವನೆಗಳನ್ನು ಬರಿ. ಇದೆಲ್ಲಿ ಸಿಕ್ತು.” ನಸುನಕ್ಕಿದ್ದೆ.  ಅಂತರಂಗದಲ್ಲಿ ಪಟ್ಟಾಗಿ ಕೂತ ಅನುಭೂತಿ ಹಾಗೆ ಸಾರ್ವಜನಿಕವಾಗಿ ಬಿಡಿಸಿಡಲಾದೀತೇ.. ಅದು ಅನನ್ಯ. ಅದರ ಸಾರವಷ್ಟೇ ಬಸಿದು ಬೇರೊಂದು ಬಗೆಯಲ್ಲಿ ಅಕ್ಷರದ ಬಸಿರಲ್ಲಿಟ್ಟು ಹಿತದ ನೋವಿನಲ್ಲಿ ಅರಳಿಸುವ ಯತ್ನ ಮಾಡಬಹುದು. ಆ ಕವನ ನೋವಿನ ಜೊತೆಜೊತೆ ಆಪ್ತವಾದ ನೆನಪುಗಳೊಂದಿಗೆ “ನನ್ನ ಮೊದಲ ಕವನ” ಎಂಬ ಮುದ್ದೂ ಜೊತೆ ಸೇರಿಕೊಂಡಿದೆ.    ಮುಂದೆ  ಕವನ ಹೇಗಿರುವುದು..ಇದು ಕವನ ಆಗಿದೆಯೇ..ನಾನು ಬರೆದಿರುವುದು ಕವಿತೆಯೇ ಎಂಬ ಗೊಂದಲಗಳೊಂದಿಗೆ ಕವಿತೆ ಹಾಗೂ ನಾನು ಜೊತೆಜೊತೆಯಾಗಿ ಬದುಕು ಸಾಗಿಸುತ್ತಿದ್ದೇವೆ. ****************************

ಯಕ್ಷಿಣಿ ಗಾನ Read Post »

ಅನುವಾದ

ಸಂವಿಧಾನ ಶಿಲ್ಪಿಗೆ

ಅನುವಾದ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ. ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ ನೋವುನೀವು ಉಂಡು,ಸೆಟೆದು ನಿಂತವರಲ್ಲವೇ?ಶತಮಾನದ ಸಂಕೋಲೆತುಕ್ಕು ಹಿಡಿದು ವಿಷವಾಗಿದೆಅಪಮಾನದ ಬೂದಿಯಿಂದಹೊಸ ಹುಟ್ಟನ್ನುಕಟ್ಟಿ ನಡೆದಾಡಬೇಕು. ಇದೋ,ಹೆಜ್ಜೆ ಎತ್ತಿಟ್ಟಿದ್ದೇವೆ.ನೀವು ನಮ್ಮೊಳಗಿದ್ದೀರಿ. Wouldn’t you be a boy?a sharp sickle ofher painful sighwas piercings hardmy inner core.Soil under my footto be held pressednot to be slipped off.I were looking at her. ….I remember thee. Is your daughter,matured?push her inside the room.The burning pain,from my heart, spreadedthroughout the body.Yes! The lava also tobe preserved.I were looking through. …I remember thee. Forget not! Now you’re a wife!bend your head at his feet.follow him unto the last.at once I had slipped off.but she was tobe confident.who was within me.I were looking sharp …I remember thee. The wound of insultpain of rejectionyou injested.still stood strong.centuries restraints of societyrusted and poisonous Must build a new lifeout of this exploitation ash.and walk with firm steps Now! We are on our wayYou are within us. *******************************

ಸಂವಿಧಾನ ಶಿಲ್ಪಿಗೆ Read Post »

ಕಾವ್ಯಯಾನ

ಜಂಜಾಟದ ಬದುಕು

ಕವಿತೆ ಪೂಜಾ ನಾರಾಯಣ ನಾಯಕ ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕುಕಂಡರೇನಂತೆ, ಅತ್ತ ಪೋದರೆ ಸಿಗದಾ ಹಕ್ಕುಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗನಿತ್ಯವೂ ದಿನಪೂರ್ತಿ ಜಂಜಾಟಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳುನಿಬ್ಬಣದಂತೆ ಸಾಗುತಿವೆಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆಸಹಿಸಲಾಗದ ಸಂಕಟಎತ್ತೆತ್ತಲಿಂದಲೋ ಕುಠಾರದ ಮೊನಚಂತೆ,ಕುಹಕ ಮಾತುಗಳೇಳುತಿವೆಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ.ತಪ್ತ ಹೃದಯಕೆ ತಿರಸ್ಕಾರಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿದಿಕ್ಕು-ಹಕ್ಕುಗಳಿಲ್ಲದೇಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆನಿತ್ಯವೂ ದಿನಪೂರ್ತಿ ಜಂಜಾಡುತ್ತಾಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ. ********

ಜಂಜಾಟದ ಬದುಕು Read Post »

ಅನುವಾದ

ಅನುವಾದ ಸಂಗಾತಿ

ಕವಿತೆ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಸಂವಿಧಾನ ಶಿಲ್ಪಿಗೆ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ ನೋವುನೀವು ಉಂಡು,ಸೆಟೆದು ನಿಂತವರಲ್ಲವೇ?ಶತಮಾನದ ಸಂಕೋಲೆತುಕ್ಕು ಹಿಡಿದು ವಿಷವಾಗಿದೆಅಪಮಾನದ ಬೂದಿಯಿಂದಹೊಸ ಹುಟ್ಟನ್ನುಕಟ್ಟಿ ನಡೆದಾಡಬೇಕು. ಇದೋ,ಹೆಜ್ಜೆ ಎತ್ತಿಟ್ಟಿದ್ದೇವೆ.ನೀವು ನಮ್ಮೊಳಗಿದ್ದೀರಿ. ************************* To the father of constitution Wouldn’t you be a boy?a sharp sickle ofher painful sighwas piercings hardmy inner core.Soil under my footto be held pressednot to be slipped off.I were looking at her.….I remember thee. Is your daughter,matured?push her inside the room.The burning pain,from my heart, spreadedthroughout the body.Yes! The lava also tobe preserved.I were looking through.…I remember thee. Forget not! Now you’re a wife!bend your head at his feet.follow him unto the last.at once I had slipped off.but she was tobe confident.who was within me.I were looking sharp…I remember thee. The wound of insultpain of rejectionyou injested.still stood strong.centuries restraints of societyrusted and poisonous Must build a new lifeout of this exploitation ash.and walk with firm steps Now! We are on our wayYou are within us. ********************

ಅನುವಾದ ಸಂಗಾತಿ Read Post »

ಇತರೆ, ಜೀವನ

ಬಸವಣ್ಣನಿಗೊಂದು ಪತ್ರ

ಲೇಖನ ನೂತನ ದೋಶೆಟ್ಟಿ ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆಇವನಾರವ ಇವನಾರವ ಎನ್ನದಿರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು ಚೂರಾಗಿದ್ದ ನಮ್ಮ ಅಂದಿನ ಸಮಾಜಕ್ಕೆ ದಾರಿದೀವಿಗೆಯಾಗಿ ಬಂದು ಮೇಲು ಕೀಳೆಂಬುದನ್ನು ಧಿಕ್ಕರಿಸಿ ಕಾಯಕ ಮಂತ್ರದೀಕ್ಷೆ ಮಾಡಿದೆ. ಕಾಯಕವೇ ಧರ್ಮ ಎಂದು ಪ್ರತಿಪಾದಿಸುತ್ತಲೇ ಅಂದಿನ ಧಾರ್ಮಿಕತೆಗೆ ದಯವಿಲ್ಲದಾ ಧರ್ಮ ಅದೇವುದಯ್ಯಾ ?ಎಂದು ಪ್ರಶ್ನಿಸಿದೆ.ಇದು ಕೇವಲ ಪ್ರಶ್ನೆಯಾಗಿರದೆ ಸಹಸ್ರಾರು ಹಿಂದುಳಿದವರ, ಬಡಬಗ್ಗರ, ತುಳಿತಕ್ಕೆ ಒಳಗಾದವರ, ಶೋಷಿತರ, ದುರ್ಬಲ ವರ್ಗದವರ ಮನೋಬಲವನ್ನು ವೃದ್ಧಿಸಿ ಇತರರಂತೆ ತಾವೂ ಮನುಷ್ಯರು. ತಮಗೂ ಅವರಂತೆ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳುವ ಧೈರ್ಯದ್ರವ್ಯವಾಯಿತು.ಅಂತಹ ಧೈರ್ಯವನ್ನು ಜನಸಾಮಾನ್ಯರಲ್ಲಿ ತುಂಬುವ ಮೊಟ್ಟಮೊದಲ ಪ್ರಯತ್ನ ನಿನ್ನಿಂದ ನಡೆಯಿತು.ನೀನು ಅವರೆಲ್ಲರ ಆರಾಧ್ಯಧೈವವಾದೆ. ನಿನ್ನ ಕಾಯಕ ನಿನ್ನನ್ನು ಆ ಎತ್ತರಕ್ಕೆ ಏರಿಸಿತು.ಆನಂತರ ನಡೆದದ್ದೆಲ್ಲ ಕ್ರಾಂತಿಯೇ.ಹೀಗಿದ್ದ ನೀನು ,ನಿನ್ನ ಜೀವಿತಕಾಲದಲ್ಲೇ ಆರಂಭಿಸಿದ ಸಾಮಾಜಿಕ ಚಳವಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಯಿತು. ಪ್ರಬಲರು ದುರ್ಬಲರೊಂದಿಗೆತಮ್ಮನ್ನು ಗುರುತಿಸಿಕೊಳ್ಳಲು,ಅವರಿಗೆ ಸಮಾನ ಸ್ಥಾನ-ಮಾನಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿದರು.ಈ ಪ್ರತಿರೋಧದ ಜ್ವಾಲೆ ನಿನ್ನನ್ನೂ ಸೇರಿಸಿದಂತೆ ನಿನ್ನ ಆದರ್ಶ ಸಮಾಜದ ಕನಸನ್ನೂ ಆಹುತಿ ತೆಗೆದುಕೊಂಡಿತು.ಅದೂ ಮತ್ತೊಂದು ರೀತಿಯ ಕ್ರಾಂತಿಯೇ.ಆನಂತರ ಮತ್ತೊಮ್ಮೆ ನೀನು ಆರಾಧ್ಯದೈವವಾದೆ.ಅಂದು ನೀನು ಬೆಳೆಸಿದ ನಿನ್ನ ಮಕ್ಕಳು ದಾಯಾದಿಗಳಾಗಿ ಹೊಡೆದಾಡುತ್ತಿದ್ದಾರೆ.ಅವರು ಏಕೆ ಹೊಡೆದಾಡುತ್ತಿದ್ದಾರೆ ಎಂದು ನನ್ನಂಥ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಅದು ನನ್ನಂಥ ಸಾಮಾನ್ಯರಿಗೆ ಸಂಬಂಧಿಸಿದ್ದೂ ಅಲ್ಲ. ಅದೇನಿದ್ದರೂ ರಾಜಕಾರಣಿಗಳಿಗೆ, ಧರ್ಮದ ಮುಂದಾಳುಗಳಿಗೆ ಸಂಬಂಧಿಸಿದ್ದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಇವರಿಬ್ಬರ ನಡುವೆ ನೀನು ಹೇಗೆ ಮತ್ತು ಏಕೆ ಸಿಲುಕಿದೆ ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಿನ್ನನ್ನು ದೈವವಾಗಿ ಆರಾಧಿಸಬೇಕೆಂದು ನೀನೇನು ಅವರನ್ನು ಬೇಡಿಕೊಂಡಿದ್ದಿಲ್ಲ. ಅಥವಾ ನಿನ್ನನ್ನೇ ಆರಾಧಿಸಬೇಕೆಂದೂ, ಅವರು ನಿನ್ನ ನಂತರ ತಾವೇ ಒಪ್ಪಿಕೊಂಡು ಮುನ್ನಡೆಸಿದ ಧರ್ಮದ ಮೊದಲಿಗನೆಂದೂ ಹೇಳಿರಲಿಲ್ಲ. ಇದೆಲ್ಲ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಅವಶ್ಯಕತೆಯಾಗಿತ್ತು.ಅದಕ್ಕೆ ನಿಮಿತ್ತವಾಗಿ ಬಂದ ನೀನು ಎಲ್ಲರನ್ನೂ ಒಂದಾಗಿಸಿ, ಮುನ್ನಡೆಸಲು ಹರಸಾಹಸ ಮಾಡಿ ಒಂದು ಹಂತದಲ್ಲಿ ಯಶಸ್ವಿಯಾದೆ. ಇದನ್ನು ಸಹಿಸದ ಜನ ಅಂದೂ ಇದ್ದರು ತಾನೆ?ಈ ನೋವು ನಿನ್ನನ್ನು ಅವರೆಲ್ಲರಿಂದ ದೂರ ಸರಿಯುವಂತೆ ಮಾಡಿತೋ ಅಥವಾ ಅವರೇ ನಿನ್ನನ್ನು ಕಾಣದ ಲೋಕಕ್ಕೆ ಕಳಿಸಿದರೋ ಆ ಕೂಡಲಸಂಗನಿಗೆ ಮಾತ್ರ ಗೊತ್ತು. ಅಣ್ಣಾ, ವಿದ್ಯೆಯಿರದ ಆ ಕಾಲದ ಜನರಲ್ಲಿ ಅರಿವು ಮೂಡಿಸಲು ನೀನು ಪಡಬಾರದ ಪಾಡು ಪಟ್ಟೆ.ಎಲ್ಲರ ವಿರೋಧದ ನಡುವೆ ಏಕಾಂಗಿಯಾದರೂ ಅಚಲನಾಗಿ ನಿಂತೆ.ಕಮ್ಮಾರ, ಕುಂಬಾರ ಮೊದಲಾದ ಕಾಯಕದವರ ಬಾಳು ಭಂಡವಲ್ಲ. ಕಾಯಕವೇ ಕೈಲಾಸ ಎಂದು ಸಾರಿ ಮೊಟ್ಟಮೊದಲ ಬಾರಿಗೆ, ‘ ಡಿಗ್ನಿಟಿ ಆಫ್ ಲೇಬರ್’ – ಶ್ರಮಜೀವಿಗಳಿಗೆ ಗೌರವ ಸಲ್ಲಲೇಬೇಕಾದ ಹಕ್ಕಿನ ಪ್ರತಿಪಾದನೆ ಮಾಡಿದೆ. ಅದಾಗಲೇಇಂತಹ ಅನೇಕಾನೇಕ ಕಾಯಕಗಳು ಜಾತಿಗಳಾಗಿ ಪರಿಗಣಿತವಾಗಿದ್ದವು. ಆ ಜಾತಿಗಳು, ಅವರ ಅನಿವಾರ್ಯತೆ ಹಾಗೂ ಅವರ ಬಡತನ, ಅಂದಿನ ಮೇಲ್ವರ್ಗದ ಸಮಾಜಕ್ಕೆ ಆಳುವ ವರ್ಗಕ್ಕೆ ಬೇಕಾಗಿತ್ತು.ಅವರು ಸಂಘರ್ಷಕ್ಕೆ ಇಳಿದಾಗ ಅವರೆದುರು ನಿನ್ನ ಹೋರಾಟ ನಿನ್ನ ಜೀವಿತಕಾಲದಲ್ಲಿ ಸಫಲವಾಗಲಿಲ್ಲ. ಇದೆಲ್ಲ ನಡೆದು ಈಗ ೯ ಶತಮಾನಗಳೇ ಕಳೆದಿವೆ. ಆದರೂ ಕಾಲ ಮುನ್ನಡೆಯದೆ ನಿಂತಲ್ಲೇ ನಿಂತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿಗೆ ಇವೆ.ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ. ಅಯ್ಯಾಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಕಕ್ಕುಲಾತಿಯಿಂದ ಕಲಿಸಿದ ನಿನ್ನನ್ನೇ ಎಲವೋ ಎನ್ನುವುದಕಿಂತ ವಿಪರ್ಯಾಸ ಬೇಕೆ? ನನ್ನಂಥ ಸಾಮಾನ್ಯರಿಗೆ ದಾರಿ ತೋರುವ ಗುರುವ ಎಲ್ಲಿ ಹುಡುಕಲಿ ?ಈಗ ನೀನೊಂದು ‘ಬ್ರ್ಯಾಂಡ್’ ಆಗಿದ್ದೀಯಾ ಬಲ್ಲೆಯಾ ?ನಿನ್ನ ವಚನಗಳನ್ನು ತಮಗೆ ಬೇಕಾದಂತೆ, ತಮಗೆ ಬೇಕಾದಲ್ಲಿ ಉದ್ಧರಿಸಿ ಚಪ್ಪಾಳೆ ಗಿಟ್ಟಿಸುವ ನಾಯಕರು ಹೆಚ್ಚುತ್ತಿದ್ದಾರೆ. ನಿನ್ನ ಮೂರ್ತಿಗಳು ಎಲ್ಲೆಡೆ ಪ್ರತಿಷ್ಠಾಪನೆಯಾಗುತ್ತಿವೆ. ಕಡಲಾಚೆಯೂ ನೀನು ಪ್ರಸಿದ್ಧ. ರಾಜಕೀಯ ಹವಣಿಕೆಗಳಿಗೆ ನೀನು ದಾಳವಾಗಿದ್ದು ಮಾತ್ರ ನನಗೆ ಸಂಕಟವುಂಟು ಮಾಡುತ್ತದೆ ಏಕೆಂದರೆ ನೀನು ನಿನ್ನ ಕಾಲದಲ್ಲೂ ರಾಜಕೀಯದಾಟಕ್ಕೆ ದಾಳವಾಗಿದ್ದಿ. ನೀನಾಗಲೀ, ನಿನ್ನ ವಚನಗಳಾಗಲೀ ಧರ್ಮದ ಸೋಂಕಿರದ ಜೀವನಕ್ರಮ, ಸ್ವಾಸ್ಥ್ಯ ಆದರ್ಶ ಸಮಾಜದ ಬೆನ್ನೆಲುಬು ಮತ್ತು ಒಂದು ಅನನ್ಯ ಸಂಸ್ಕೃತಿ ಎಂದು ನನ್ನಂಥ ಸಹಸ್ರಾರು ಸಾಮಾನ್ಯರು ನಂಬಿಕೊಂಡು ಅದನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ. ಅಂತಹದರಲ್ಲಿ ನಮ್ಮ ಬದುಕನ್ನೇ ದಿಕ್ಕೆಡಿಸುತ್ತಿರುವ ವಿದ್ಯಾವಂತ, ಬುದ್ಧಿವಂತ, ಸುಶಿಕ್ಷಿತ ಎಂದು ಕರೆದುಕೊಳ್ಳುವ ಗುಂಪುಗಾರಿಕೆಯ ಜನರಿಗೆ ನನ್ನಂಥವರ ಧಿಕ್ಕಾರವಿದೆ.ಅಣ್ಣಾ, ಅಂಗೈಯಲ್ಲಿ ದೈವತ್ವವನ್ನು ಕಾಣಿಸಿದ ನಿನ್ನ ಉದಾರತೆ, ಹಿರಿತನ ಇಂಥವರಿಗೆ ಅಂದೂ ಅರ್ಥವಾಗಿರಲಿಲ್ಲ. ಈ ಲಾಭಕೋರ ಢೋಂಗಿಗಳ ನಡುವೆ ನೀನು ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವೆ?

ಬಸವಣ್ಣನಿಗೊಂದು ಪತ್ರ Read Post »

ಇತರೆ

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ನಾಗರೇಖಾ ಗಾಂವಕರ್ ಬರವಣಿಗೆ ಎಂಬುದು ಒಂದು ತುರ್ತಾಗಿ ಬದಲಾಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು ನನ್ನಲ್ಲಿ. ಆದರೆ ಮೊದಲ ಕವಿತೆ ಬರೆದ ಕ್ಷಣದ ಅನುಭವ ಹೇಗೇ ಹೇಳಲಿ? ಬಹುಶಃ ಇದಕ್ಕೆ ಅಭಿಪ್ರಾಯ ವ್ಯಕ್ತ ಪಡಿಸುವುದು ಕಷ್ಟದ ಕೆಲಸ. ಹೌದು ನಾನೂ ಕೂಡ ಆ ಕವಿತೆ ಬರೆದೆ. ಅದು ನನ್ನ ಜೀವನದ ಮೊದಲ ಕವಿತೆ. ಕವನದ ಶೀರ್ಷಿಕೆ ವಿಶ್ವಕರ್ತನ ಗುಡಿ. ನನ್ನ ಇಪ್ಪತ್ತೆರಡನೇ ವಯಸ್ಸಿಗೆ ಬರೆದ ಕವಿತೆ. ಅದಕ್ಕೂ ಮುಂಚೆ ನಾನೊಂದು ಓದುವ ಹುಳವಾಗಿದ್ದೆ. ಕಾಲೇಜಿನ ಅಭ್ಯಾಸಗಳ ಜೊತೆ ಕಾಲೇಜಿನ ಗ್ರಂಥಾಲಯಗಳಲ್ಲಿ ಸಿಗುವ ಬಹುತೇಕ ಪ್ರೇಮ ಕಾದಂಬರಿಗಳು, ವಾರಕ್ಕೊಂದಾವರ್ತಿ ಬದಲಾಯಿಸುತ್ತಾ, ಪಾಠ ಪ್ರವಚನದ ಕಾಲದಲ್ಲಿ ಪಠ್ಯದ ಪುಸ್ತಕದ ಒಳಗೆ ಬೆಚ್ಚಗೆ  ಕಾದಂಬರಿಗಳು ಕೂತಿರುತ್ತಿದ್ದ್ದ್ತವು. ತಲೆ ಒಮ್ಮೆ ಪ್ರಾದ್ಯಾಪಕರ ಉಪನ್ಯಾಸದ ಕಡೆ ನೋಡುವಂತೆ ಮೇಲೆತ್ತಿದರೆ, ಇನ್ನೆರಡು ಪಟ್ಟು ಹೆಚ್ಚು ವೇಳೆ ಕೆಳಗೆ ಕೂತಿದ್ದ ಕಾದಂಬರಿಯ ಪಾತ್ರಗಳಲ್ಲಿ ಮುಳುಗಿರುತ್ತಿತ್ತು. ಅಷ್ಟಕ್ಕೂ ಕಲಾ ವಿಭಾಗದ ನಮಗೆ ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಕಾಲೇಜು ಕ್ಲಾಸುಗಳ ಬಂಕ್ ಮಾಡಿ ಮನೆಯಲ್ಲಿ ಮನೆಗೆಲಸ ಮಾಡಿ, ಓದಿದರೂ ಪ್ರಥಮ ದರ್ಜೆಗೇನೂ ಕೊರತೆ ಆಗುತ್ತಿರಲಿಲ್ಲ. ಇಂತಿಪ್ಪ ದಿನಗಳಲ್ಲಿಯೇ ಅದೆಷ್ಟೋ ಸಾಯಿಸುತೆ, ಉಷಾ ನವರತ್ನರಾವ್, ಯಂಡಮೂರಿ ಇತ್ಯಾದಿ ಇತ್ಯಾದಿ ಲೇಖಕರ ಲೌಕಿಕ ಕಾದಂಬರಿಗಳ ಓದಿ ಮುಗಿಸಿದ್ದೆ. ಇದಕ್ಕೂ ಮುಂಚೆ ಹೈಸ್ಕೂಲು ಕಲಿಯುವಾಗ ಹಳ್ಳಿಯಿಂದ ಹೋಗಿ ಬರುವುದು ಕಷ್ಟವೆಂದು ಬಾಡಿಗೆ ಮನೆಯೊಂದರಲ್ಲಿ ನಾವು ಅಣ್ಣ ಅಕ್ಕ ತಂಗಿ  ಎಲ್ಲರೂ ಸೇರಿ ಒಟ್ಟಿಗೆ  ಬಾಡಿಗೆ ಮನೆಯೊಂದರಲ್ಲಿ  ಇರುತ್ತಿದ್ದೆವು. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಉಳಿದವರ ಪರೀಕ್ಷೆಯೆಲ್ಲ ಮುಗಿದು ಮನೆಗೆ ಹೋಗಿದ್ದರೆ, ನಾನು ಒಬ್ಬಳೇ ಬಾಡಿಗೆ ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಉಣ್ಣುತ್ತಾ  ಪರೀಕ್ಷೆ ಬರೆಯುತ್ತಿದ್ದೆ. ಅದು ಗಣಿತ ಪರೀಕ್ಷೆಯ ಹಿಂದಿನ ದಿನ. ಓದುತ್ತಾ ಕೂತವಳಿಗೆ ಅಕ್ಕ ತಂದಿಟ್ಟಿದ್ದ ಕಾದಂಬರಿಯೊಂದು ಕಣ್ಣಿಗೆ ಬಿದ್ದಿತ್ತು. ಅದು ತ.ರಾ.ಸು ಅವರ ಚಂದವಳ್ಳಿಯ ತೋಟ ಮಾರನೇ ದಿನ ಗಣಿತ ಪರೀಕ್ಷೆ.  ಕಣ್ಣಿಗೆ ಕಂಡ ಕಾದಂಬರಿಯನ್ನು ಬಿಡಲು ಮನಸ್ಸಾಗದೇ ಲೆಕ್ಕ ಬಿಡಿಸುವುದು ಅರ್ಧಮರ್ಧ ಮಾಡಿ ಕಾದಂಬರಿ ಹಿಡಿದವಳು ಹನ್ನೆರಡುವರೆಗೆ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಮಾರನೇ ದಿನ ಮತ್ತೆ ಪರೀಕ್ಷೆ ಬರೆದಿದ್ದೆ. 45 ಅಂಕಗಳಷ್ಟೇ ಗಣಿತಕ್ಕೆ ಪಡೆದಿದ್ದೆ. ಇದೆಲ್ಲ ನೆನಪಾಗುತ್ತಲೂ ಮೊದಲ ಕವಿತೆಯ ಸುಖ ಎಂತದ್ದೆಂದೂ ಹೇಳಲೇ ಬೇಕು. ಅದೆಂತಹುದೋ ಅಳಕು, ಮೊದಮೊದಲು ಬರೆದ ಅರೆಬರೆ ಅರೆಬೆಂದ ಕವಿತೆಗಳ ಮೇಲೆ ಕೆಳಗೆ ನೋಡಿ, ಶಬ್ದಗಳ ಚೌಕಟ್ಟು ಸರಿಯಾಗಿದೆಯೇ?ಎಂಬೆಲ್ಲ ಚಿಂತೆಗಳು. ಈ ಕವಿತೆ ಬರೆಯಲು ಪ್ರೇರಣೆ ಒಂದು ಬೇಕೆ ಬೇಕು. ಆಗ ತಾನೇ ಪದವಿ ಹಂತದಲ್ಲಿದ್ದೆ. ಗೆಳತಿಯೊಬ್ಬಳ ಪ್ರೇಮ ಕವಿತೆ ಕಾಲೇಜಿನ ಲಿಟರೇಚರ್ ಬುಲೆಟಿನ್ನಲ್ಲಿ ರಾರಾಜಿಸುತ್ತಿತ್ತು. ಎಲ್ಲರ ಬಾಯಲ್ಲಿಯೂ ಅದೇ ವಿಷಯ. ಎಷ್ಟು ಚೆನ್ನಾಗಿದೆ? ಹಾಗಿದೆ.., ಹೀಗಿದೆ.. ಮನೆಗೆ ಹೋದವಳೆ ನಾನೂ ಒಂದು ಬರೆದರೆ ಹೇಗೆ ?ಎಂಬ ಹುಕಿ ಹುಟ್ಟಿದ್ದೆ ತಡ, ಬರೆದೆ ಬರೆದೆ. ಅದನ್ನು ಯಾರಾದರೂ  ಓದಿದರೆ ನಕ್ಕಾರು, ಅನ್ನಿಸಿ ಬರೆದಷ್ಟನ್ನು  ಮತ್ತೆ ಮತ್ತೆ ಹರಿದು ಎಸೆದೆ. ನನಗೇ ನಗು ಬಂದಿತ್ತು. ಪ್ರೀತಿ ಪ್ರೇಮ ಇಂತಹ ನಾಜೂಕಿನ ವಿಷಯವನ್ನೆಲ್ಲಾ  ಶಬ್ದಗಳಲ್ಲಿ ಮುದ್ಧಾಗಿ ಮೂಡಿಸುವ ಗಟ್ಟಿತನ ಹೇಗೆ ಬರುವುದು  ಎಂಬ ಅಚ್ಚರಿ. ಬೇಡ ಬಿಡು, ಮನೆಯಲ್ಲಿ ನನ್ನ ಅಣ್ಣಂದಿರೇನಾದರೂ ನನ್ನ ಕವಿತೆ ಓದಿದರೆ ಕಥೆ ಮುಗಿಯಿತು. ಇದರ ಗೋಜು ಬೇಡವೇ ಬೇಡವೆಂದು ನಿರ್ಧರಿಸಿದೆ. ಆದರೆ ಇದು ಒಂದು ಖಯಾಲಿ. ಒಳಗಣ ತುಡಿತ, ನನ್ನೊಳಗಿನ ತೆರೆದುಕೊಳ್ಳುವ ಹಂಬಲ. ಅದೆಷ್ಟೋ ಕನಸುಗಳು ನನಸಾಗದ ನೆಲೆಯಲ್ಲಿ ಮನದ ಮೂಲೆಯಲ್ಲಿ ಮಿಡುಕಿದ ಭಾವಗಳು, ಮತ್ತೆ ಚಿಗುರಿದ ಕನಸುಗಳು, ವ್ಯಾಮೋಹದ ಪರದೆಯಲ್ಲಿ ಕಟ್ಟಿದ ಕಣ್ಣು, ಮತ್ತೆ ಬರೆದೆ. ಆದರೆ ಈಗ ಪ್ರೇಮ ಕವಿತೆ ಬರೆಯುವ ಪ್ರಮಾದ ಮಾಡಲಿಲ್ಲ. ನಾನು ಪ್ರಯತ್ನಿಸಿದ ಪ್ರೇಮ ಕವಿತೆಗಳು ಅಂತಹ ಉದ್ದಿಪನಗೊಳಿಸುವ ಪ್ರಭಾವ ಬೀರುವಂತಹುಗಳಾಗಿರಲಿಲ್ಲ. ಹಾಗಾಗಿ ದೇವರ ಅಸ್ತಿತ್ವದ ಕುರಿತ ಒಂದು ಕವಿತೆ ಬರೆದೆ. ಆಗ ನಾನು ಎಳಸಲ್ಲ. ಬೆಳೆದ ಮನಸ್ಸು. ಭಯದ ನೆರಳಿರಲಿಲ್ಲ. ಆದರೆ ನನ್ನ ಪ್ರಾಥಮಿಕ ಶಾಲಾದಿನಗಳ ಹಂತದಲ್ಲಿ ನನಗೆ ಕಲಿಸಿದ ಗುರುಗಳಾದ ಕವಿ ಶಾಂತಾರಾಮ ಬಾಳೆಗುಳಿಯವರ ಪ್ರಭಾವವಿತ್ತು. ಹಾಗೆಂದು ನಾನವರ ನೆಚ್ಚಿನ ಶಿಷ್ಯೆಯಾಗಿರಲಿಲ್ಲ. ಎಲ್ಲರಿಂದ ಕೊಂಚದೂರವಾಗಿಯೇ ಉಳಿಯುವ ಜಾಯಮಾನ ನನ್ನದು. ಅವಕಾಶಕ್ಕಾಗಿಯೋ, ಇನ್ನೊಬ್ಬರ ಆದರಕ್ಕಾಗಿ ಹಂಬಲಿಸುವ ಗುಣವೇ ಇಲ್ಲ. ಹಾಗೇ ಗುರುಗಳ ಆತ್ಮೀಯತೆಯನ್ನು ಗಳಿಸಿಕೊಂಡಿರಲಿಲ್ಲ.ನನ್ನ ಬರೆಯುವ ಆಸೆಯನ್ನು ಅವರೆಲ್ಲೆಂದು ತೋಡಿಕೊಂಡಿರಲೇ ಇಲ್ಲ. ಕಾಲೇಜು ದಿನಗಳು ಮುಗಿದು,ನೌಕರಿಯ ಹುಡುಕಾಟದಲ್ಲಿದ್ದ ಕಾಲದಲ್ಲಿ ನಾನು ಬರೆದ ಮೊದಲ ಕವಿತೆ. ವಿಶ್ವಕರ್ತನ ಗುಡಿ ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೇ ಅಲ್ಲಿ ಬಂಧೀ ವಿಶ್ವಕರ್ತನ ತಂದು ಗುಡಿಯ ಬಂಧನವಿಟ್ಟು, ಮೆರೆದ ಮೌಢ್ಯವು ಮನುಜ ಬುದ್ಧಿ. ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೇ ಬೇಕೆ ಒಂದು ಮನೆಯು ಜೀವಜೀವದ ಒಳಗೆ ಹುದುಗಿರುವ ಆತ್ಮನವ ಭಾವಿಸಲು ಸರ್ವರೂ ಅವನ ಕುಡಿಯು.                                     ಹೀಗೇ ಸಾಗಿತ್ತು ಕವಿತೆ. ಇದೇ ಸಮಯಕ್ಕೆ ಕೆಲಸವೂ ದೊರಕಿ ಖುಷಿಯಾಗಿದ್ದೆ. ಸಿನೇಮಾ, ಮಾರ್ಕೆಟ್ಟು ತಿರುಗುವುದು ಕೊಂಚ ಜಾಸ್ತಿಯಾಗಿತ್ತು. ಮನೆಯಲ್ಲಿ ವಿವಾಹದ ತಯಾರಿಯೂ ನಡೆಯುತ್ತಿತ್ತು. ಸುತ್ತ ಸಮಾನ ಮನಸ್ಕ  ಸ್ನೇಹವಲಯವೂ ಇತ್ತು.  ಸ್ನೇಹ ಪ್ರೇಮದ  ಪರಧಿಯಲ್ಲಿ ಆ  ಭಾವವೊಂದು ನನ್ನ ಎದೆಯಲ್ಲಿ ಮೀಟುತಿತ್ತು. ಇನ್ನೊಂದು ಕವಿತೆ ಬರೆದಿದ್ದೆ. ಅದೊಂದು ಸ್ನೇಹ ಮತ್ತು ಪ್ರೇಮದ  ಬಗ್ಗೆ ಬರೆದ ಕವಿತೆ. ಶೀರ್ಷಿಕೆ ಗೆಳತಿ ಅದನ್ನು ಗಂಡುದನಿಯಾಗಿ ಬಳಸಿದ್ದೆ. ಗೆಳೆಯ ಎಂದರೆ ಯಾರಾದರೂ ನನ್ನ ಬಗ್ಗೆ ತಪ್ಪು ತಿಳಿದಾರು ಎಂಬ ಭಯ. ಹಾಗಾಗಿ ಗೆಳೆಯ ಇರಬೇಕಾದಲ್ಲಿ ಗೆಳತಿ ಬಂದಿದ್ದಳು. ಏಕೆ ಗೆಳತಿ, ಮನ ಬಾಗಿಲವರೆಗೂ ಬಂದು ತಟ್ಟಿ ಕರೆಯಲಿಲ್ಲ. ನಿನ್ನ ಭಾವನೆಗಳೇಕೆ ನನ್ನವರೆಗೂ ಮುಟ್ಟಲೇ ಇಲ್ಲ. ನನಗೂ ಇತ್ತಲ್ಲ ಆಸೆ ನಿನ್ನಂತೆ.. ಗೆಳತಿಯಾಗಿ ಬಂದವಳು ಪ್ರೇಮಿಯಾಗಿ ಬರಲೆಂದು ಜೀವನಕೆ ಜೊತೆಯಾಗಲೆಂದು.. ಅದಕ್ಕೇಕೆ ತಣ್ಣಿರನ್ನೆರಚಿದೆ? ಕಡೇತನಕ ಬಗೆಗೂಡು ಹೊಗೆ ಗೂಡಾಗಲೆಂದೇ? ಬಣ್ಣದ ಚಿತ್ತಾರ ಬಿಡಿಸ ಹೊರಟಾಗ ಕಪ್ಪು ಮಸಿ ಚೆಲ್ಲಿ ಕಲೆಯಾಯಿತೇ? ವ್ಯಥೆ ಬೇಡ ಗೆಳತಿ,  ನವ್ಯ ಕಲೆಯ ರೀತಿ ಗೆರೆ ಎಳೆದು ಚಿತ್ರವಾಗಿಸುವೆ. ಹೊಗೆಗೂಡ ಕಿಂಡಿಯನು  ತೆರೆದುಬಿಡು. ಶುದ್ಧವಾತ ಹರಿದು ಬರಲಿ. ಪ್ರೇಮವಿರದಿರೆ ಸ್ನೇಹವಾದರೂ ಇರಲಿ ಈ ಪರಿ.. ಸ್ವಾರ್ಥದ ನೆರಳಿಲ್ಲ ಏಕತಾನತೆಯ ಕೊರಗಿಲ್ಲ ವಿಳಂಬ ಬೇಡ ಗೆಳತಿ ಈಗಲಾದರೂ ಪ್ರೇಮಸೌಧದ ತಳಪಾಯದ ಮೇಲೆ ಕಟ್ಟೋಣ ನಡಿ ಸ್ನೇಹ ಸೌಧ! ಆನಂತರವೇ ತಿಳಿದದ್ದು ಆ ಕವಿತೆ ಓದಿದ ಗೆಳತಿಯೊಬ್ಬಳು ಇಷ್ಟಪಟ್ಟಳು. ಉಳಿದವರಿಗೆ ತೋರಿಸಿ, ಚೆನ್ನಾಗಿದೆಯೆಂಬ ಬಿರುದು. ನನ್ನೊಂದಿಗೆ ಕೆಲಸ ಮಾಡುವ ಸ್ನೇಹಿತ ಸ್ನೇಹಿತೆಯರೆಲ್ಲ ಒಂದಲ್ಲ ಒಂದು ಕಾರಣಕ್ಕೆ ಸಾಹಿತ್ಯ ಸಂವಾದ ಬೇರೆ ಬೇರೆ ಲೇಖಕರ ಪುಸ್ತಕಗಳ ಚರ್ಚೆ ಇವುಗಳಲ್ಲಿ ಭಾಗವಹಿಸುತ್ತಿದ್ದರು. ನಾನು ಎಳಸು. ಒಂದೆರಡು ವರ್ಷದಲ್ಲಿ ಕೊಂಚ ಚಿಗುರಿದ್ದೆ. ಹತ್ತಾರು ಕವನಗಳ ಬರೆದೆ. ಆಪ್ತರಿಂದ ಪ್ರೋತ್ಸಾಹವೂ ದೊರೆಯುತ್ತಿತ್ತು. ಆದರೆ ಮತ್ತೆ ವಿವಾಹ ಬಂಧನ ನನ್ನ ಕವಿತಾ ಬರವಣಿಗೆಯನ್ನು ಕುಂಠಿತಗೊಳಿಸಿತು. ಸಾಂಸಾರಿಕ ಸುಖದಲ್ಲಿ ಮುಳುಗಿಹೋದೆ.  ಮನೆ ಗಂಡ ಮಕ್ಕಳು ಕೆಲಸ  ಇದಿಷ್ಟೇ ನನ್ನ ಪ್ರಪಂಚವಾಯ್ತು. ಹಾಗೇ ಕವಿತೆ ಬರೆಯುವುದು ನನ್ನಲ್ಲಿ ಆಗಾಗ ಪ್ರತ್ಯಕ್ಷವಾಗಿ ಮತ್ತೆ ಕೆಲವು ಕಾಲ ಕಾಲಗರ್ಭ ಸೇರಿದಂತೆ ಮರೆಯಾಗಿ ಹೋಗಿತು. ಆದರೆ ಭೂಮಿಯಲ್ಲಿ ಚಿಗುರುವ ಪ್ರತಿಯೊಂದು ಗಿಡ, ಮರ ಬಳ್ಳಿ, ಜೀವ ಸಂಕುಲ ಎಲ್ಲಕ್ಕೂ ಒಂದು ಮೊದಲ ಅನುಭವವಿದ್ದೆ ಇದೆ. ಬೀಜದೊಳಗಿನ ಸತ್ವ ಆಹಾರ ಪೂರೈಕೆ ಆಗುವವರೆಗೆ ಏನೂ ಗೊತ್ತಿಲ್ಲದ ಆಗಷ್ಟೇ ಚಿಗುರಿದ ಸಸಿ, ಆನಂತರ ತಾನೇ ಆಹಾರ ತಯಾರಿಸಿಕೊಳ್ಳುವ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಲೇ ಬೃಹದಾಕಾರವಾಗುತ್ತ ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೆಳೆಯುವುದು. ಜೀವ ಸಂಕುಲದ ಆದಿಮ ಜೀವಿಗಳಿಂದ ಹಿಡಿದು ಮಾನವನಂತಹ ಪ್ರಚಂಡ ಬುದ್ದಿಶಕ್ತಿಯ ಜೀವಿಯೂ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ತನ್ನದೇ ಆದ ಪ್ರಥಮ ಅನುಭವಕ್ಕೆ ಒಳಗಾಗುತ್ತಲೇ ಗಟ್ಟಿಗೊಳ್ಳುತ್ತಲೇ ಹೋಗುವುದು.ವಿಕಸನದ ಹಾದಿಯೇ ಹಾಗೇ? ಅವಸಾನದ ತುದಿಯಲ್ಲೂ  ಕೆಲವೊಮ್ಮೆ ಮತ್ತೇ ಉತ್ಕರ್ಷಕ್ಕೆ ಎಡೆಮಾಡಿಕೊಟ್ಟ ಉದಾಹರಣೆಗಳು ಹೇರಳ. ಹಾಗೇ ಭೂಮಿಯೊಳಗಣ ಎಂದೂ ಒಣಗದ ತೇವದಂತೆ ಕವಿತೆ ನನ್ನೊಳಗನ್ನು ತಡಕಾಡಿ, ತಿವಿದು, ಎಬ್ಬಿಸಿ,ಉದ್ದೀಪಿಸುತ್ತಲೇ ಇತ್ತು. ನನ್ನ ಅಪ್ರಬುದ್ಧ ಭಾವನೆಗಳು, ಬಂಡಾಯದ ಗುಣ, ಪ್ರಕೃತಿಯೊಂದಿಗಿನ ಪ್ರೀತಿ ಜೀವಂತವಾಗಿಯೇ ಇದ್ದವು. ಹಾಗಾಗಿ ಇತ್ತೀಚೆಗೆ   ನಡು ವಯಸ್ಸಿನಲ್ಲಿ ಅಕ್ಷರದ ಕೊಳದಲ್ಲಿ ನನ್ನ ಮುಖ ಕಾಣಬಹುದೇ ಎಂಬ ಆಸೆಯಿಂದ ಅದರಲ್ಲಿ ಇಣುಕಿ ಇಣುಕಿ ನೋಡುತ್ತಿದ್ದೇನೆ. ಈಗ ಮತ್ತೆ ವಿಸ್ಮಯವೆನ್ನುವಂತೆ ಮುಖ ಅಸ್ಪಷ್ಟವಾಗಿ ಕಾಣುತ್ತಿದೆ. ಹೂ ಹಣ್ಣು ನೀಡುವ ಹೆಮ್ಮರವಾಗುವುದೇ ಕಾದು ನೋಡಬೇಕಿದೆ ನನಗೆ.. ***********************

ಮೊದಲ ಕವಿತೆ Read Post »

You cannot copy content of this page

Scroll to Top