ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ. ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ ಬದುಕು ಅವರ ಚಿತ್ರಕಲೆಯ ಮೂಲ ನೆಲೆ. ರೇಖಾ ಚಿತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಾರೆ. ನಾಡಿನ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರರ ರೇಖಾ ಚಿತ್ರಗಳನ್ನು ಮೀರಿಸುವಂತೆ ಬೆಳೆದ ಕಲಾವಿದ ಇವರು. ರೇಖೆಗಳ ಮಾಂತ್ರಿಕ ಹಜರತ್ ಅಲಿ ಅವರ ಚಿತ್ರಗಳಿಗೆ ಸೋಲದ ಚಿತ್ರರಸಿಕರೇ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಗದಗನಲ್ಲಿ ಕಲಾವಿದ ಗೆಳೆಯ ಹಜರತ್ ಮಾತಿಗೆ ಸಿಕ್ಕಿದ್ದರು. ತುಂಬಾ ಸಂಕೋಚದ, ನಾಚಿಕೆ ಸ್ವಭಾವದ ಹಜರತ್ ಅವರನ್ನು ಮಾತಿಗೆ ಎಳೆದು, ಅವರೊಳಗಿನ ಮೌನವನ್ನು ಮಾತಾಡಿಸಿ, ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ. ಹಂಪಿಯ ಅವಶೇಷ ಹಾಗೂ ಅಳಿದುಳಿದ ವೈಭವವನ್ನು ವಿದ್ಯಾರ್ಥಿಯಾಗಿದ್ದಾಗ, ಕಲಾವಿದ ಅಧ್ಯಾಪಕನಾಗಿದ್ದಾಗ ಹಲವು ಸಲ ಚಿತ್ರಿಸಿದ ಪ್ರೀತಿ ಅವರದ್ದು. ನಾಡಿನ ಶಿಲ್ಪ ಕಲೆಯ ಬಗ್ಗೆ, ರೇಖಾ ಚಿತ್ರ, ಬಣ್ಣದ ಚಿತ್ರಗಳು, ಅವುಗಳ ಬೆರಗು, ವಾಟರ್ ಕಲರ್ ಪೇಯಿಂಟಿಂಗ್ಸ, ಮಣ್ಣಿನ ಕಲಾಕೃತಿಗಳ ಬಗ್ಗೆ, ಲೋಹದ ಕಲಾಕೃತಿಗಳ ಬಗ್ಗೆ ಅವರು ಗಂಟೆಗಟ್ಟಲೆ ಮಾತಾಡಬಲ್ಲರು. ಹಾಗೂ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ರೂಪಿಸಬಲ್ಲರು. ನಾಡಿನ ಶ್ರೇಷ್ಠ ಕಲಾವಿದರ ಪರಂಪರೆಯಲ್ಲಿ ಹಜರತ್ ಅಲಿ ಅವರನ್ನು ಸಹ ಕಾಣಬೇಕು. ಅಂಥ ಪ್ರತಿಭೆ ಅವರಲ್ಲಿದೆ. …………………………………. “ಸಂದರ್ಶನದಲ್ಲಿ ನಾಡಿನ ಖ್ಯಾತ ಚಿತ್ರ ಕಲಾವಿದ ಹಜರತ್ ಅಲಿ ಅವರು ಚಿತ್ರ ಕಲೆಯ ಕುರಿತು ಮಾತಾಡಿದ್ದು ಇಲ್ಲಿದೆ. ……………………………. ನಾಗರಾಜ ಹರಪನಹಳ್ಳಿ : ಚಿತ್ರ ನಿಮ್ಮ ಉಸಿರು ಎಂದು ಗೊತ್ತು. ಆದರೂ ಈ ಪ್ರಶ್ನೆ ಕೆಣಕಲು ಕೇಳುತ್ತಿರುವೆ. ಚಿತ್ರ, ಬಣ್ಣಗಳ ಜೊತೆ ಯಾಕೆ ಆಟವಾಡುತ್ತೀರಿ ಅಥವಾ ಚಿತ್ರ ಬರೆಯುತ್ತೀರಿ ? ಹಜರತ್ ಅಲಿ : ಕಲೆ ಮಾನವನ ಆಲೋಚನೆಗಳು ತೀವ್ರಗೊಂಡಾಗ ಸ್ಪೋಟಗೊಳ್ಳುವ ಮೂರ್ತರೂಪದ ಅಥವಾ ದೃಶ್ಯ ರೂಪದ ಭಾವನೆಗಳೇ ಆಗಿರುತ್ತವೆ. ಅದು ಬಣ್ಣ, ರೇಖೆ, ಶಿಲ್ಪ, ಶ್ರಾವ್ಯ,ಅಭಿನಯ, ನೃತ್ಯ ಸಾಹಿತ್ಯ …..ಹೀಗೆ ಹತ್ತುಹಲವು ಬಗೆಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ. ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? ಉತ್ತರ ; ಯಾವುದೇ ಬಗೆಯ ಕಲೆಯ ಹುಟ್ಟಿಗೆ ಮೂಲ ಪ್ರೇರಕ ಶಕ್ತಿ ಪ್ರಕೃತಿಯೇ ಆಗಿರುತ್ತದೆ. ಅದು ಕಾಲ ಮತ್ತು ದೇಶಾತೀತವಾದುದು, ಹಾಗಾಗಿ ಇಂಥದ್ದೇ ಸಮಯದಲ್ಲಿ ಕಲೆ ಹುಟ್ಟುತ್ತದೆ ಎಂದೇನಿಲ್ಲ, ಕಲಾವಿದನಲ್ಲಿ ಭಾವತೀವ್ರಗೊಳಿಸುವ ಯಾವುದೇ ವಿಷಯಯವೂ ಚಿತ್ರರೂಪ ಪಡೆಯಬಲ್ಲದು. ನನ್ನನ್ನು ಹೆಚ್ಚಾಗಿ ಕಾಡುವ ವಸ್ತು ವಿಷಯ ಗ್ರಾಮೀಣ ಪ್ರದೇಶದ ಬದುಕು ಮತ್ತು ನೆಲೆ. ನಗರದ ಯಾಂತ್ರಿಕ ಬದುಕಿನ ನಿರ್ಭಾವುಕತೆಗಿಂತಲೂ , ಭಾವುಕ ಜಗತ್ತಿನ ಸ್ವಭಾವ ನನಗೆ ಇಷ್ಟದ ವಿಷಯ. ಪ್ರಶ್ನೆ : ನಿಮ್ಮ ರೇಖಾ ಚಿತ್ರಗಳು ತುಂಬಾ ಕಾಡುತ್ತವೆ. ಹೇಗೆ ಅದರ ಸೆಳೆತ ನಿಮಗೆ ? ಉತ್ತರ : ಚಿತ್ರಕಲೆಯಲ್ಲಿ ರೇಖಾಚಿತ್ರ ಕಲೆಯ ತಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ರೇಖಾಚಿತ್ರದ ಅಭ್ಯಾಸ ಪ್ರತಿಯೊಬ್ಬ ಕಲಾವಿದ್ಯಾರ್ಥಿಗೆ ಹಾಗೂ ಕಲಾವಿದನಿಗೆ ಅತ್ಯಗತ್ಯ. ಪ್ರಶ್ನೆ : ರೇಖೆಗಳು ಚಿತ್ರ ಕಲೆಯ ಶಾಸ್ತ್ರೀಯ ನೆಲೆ ಅಂತ ನೀವು ಹೇಳಿದ ನೆನಪು ನನಗೆ. ಬದಾಮಿ-ಬೇಲೂರು ಶಿಲ್ಪಕಲಾ ವೈಭವದ ವಿಶೇಷತೆ ಏನು ? ಉತ್ತರ : ನಮ್ಮ ಐತಿಹಾಸಿಕ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ, ಬೇಲೂರು ಹಳೇಬೀಡು ಮೊದಲಾದ ಸ್ಥಳಗಳು ಆಯಾಕಾಲದ ಜನಜೀವನದ ಸಾರವನ್ನು ಹೊಂದಿರುವ ಆಕರ ಕೇಂದ್ರಗಳಾಗಿವೆ. ಇವು ಆ ಕಾಲದ ಕಲಾ ಪರಂಪರೆಯನ್ನು ಒಳಗೊಂಡಿದ್ದು ಇಲ್ಲಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳು ಧಾರ್ಮಿಕ ವಿಷಯಗಳನ್ನಷ್ಟೇ ಅಲ್ಲದೆ, ಆ ಕಾಲದ ಜನರ ಉಡುಗೆ ತೊಡುಗೆಗೆಳು, ವೇಷ ಭೂಷಣಗಳು,ಕ್ರೀಡೆ, ಯುದ್ಧದ, ವೈಭೋಗ ಮುಂತಾದ, ತಮ್ಮ ಕಾಲದ ವರ್ತಮಾನವನ್ನ ನಮ್ಮ ಕಾಲಕ್ಕೂ ತೆರೆದಿಟ್ಟಿರುವ ಜ್ಞಾನ ಭಂಡಾರಗಳಾಗಿವೆ. ಇಲ್ಲನ ವಾಸ್ತುಶಿಲ್ಪ ಶಿಲ್ಪಕಲೆಗೆ ಮನಸೋಲದವರಾರು ? ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಹಂಪಿ ನನ್ನ ನೆಚ್ಚಿನ ಪ್ರಕೃತಿ ತಾಣ, ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ ಇಲ್ಲಿ ನೂರಾರು ನಿಸರ್ಗ ಚಿತ್ರಗಳನ್ನು ರಚಿಸಿದ್ದೇನೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ತುಂಬಾ ಕಲುಷಿತ ಗೊಂಡಿದೆ . ಜಾತಿ ಜಾತಿಗಳ ಮಧ್ಯೆ ಗೋಡೆಗಳು ನಿರ್ಮಿಸುವುದೇ ಸದ್ಯದ ರಾಜಕೀಯ ಬಂಡವಾಳ.. ಪ್ರಶ್ನೆ : ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ತೋರಿಕೆಯಾಗಬಾರದು. ಹೊಸ್ತಿಲೊಳಗಿರಬೇಕಾದ ಧರ್ಮ ಬೀದಿಗೆ ಬಂದು ಅಬ್ಬರಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಮಾನವತೆಯ ಬಿತ್ತದ ಧರ್ಮ ನನ್ನದೃಷ್ಟಿಯಲ್ಲಿ ಅಪ್ರಯೋಜಕ. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕ ವಲಯವ ಉಳ್ಳವರ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ. ಅಕಾಡೆಮಿಯಗಳಲ್ಲಿ ಬಹುತೇಕ ಜಾತಿ ಮತಗಳ ಪರವಾದ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರಿಗೆ ಗುರುತಿಸಲ್ಪಡುವುದು ಅತಿವಿರಳ. ಪ್ರಶ್ನೆ : ಚಿತ್ರ, ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಚಿತ್ರಕಲಾ ಕ್ಷೇತ್ರವೂ ಈ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ಇಂದು ಕರ್ನಾಟಕದ ಚಿತ್ರಕಲಾ ಶಿಕ್ಷಣ ಬಹುತೇಕ ಸೊರಗಿದೆ. ಇಂದು ಕಾಲೇಜುಗಳಲ್ಲಿ ಬೋಧನೆ ಮಾಡುವ ಅಧ್ಯಾಪಕರು ಬಹುತೇಕ ಯೂಜಿಸಿ ಮಾನ್ಯತೆಯ ಪದವಿಧರರಿದ್ದಾರೆಯೇ ಹೊರತು, ಪ್ರತಿಭಾವಂತ ರಿರುವುದು ಕಡಿಮೆಯೆ.. ವಿ.ವಿ.ಗಳ ಅಧಿಕಾರಿಗಳಿಗೆ ಚಿತ್ರಕಲಾ(ದೃಶ್ಯ ಕಲಾ) ಶಿಕ್ಷಣದ ಅರಿವಿನ ಕೊರತೆ ಇದೆ. ಪಠ್ಯಕ್ರಮದಲ್ಲಿ ಏನನ್ನು ಕಲಿಸಲಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಅಧ್ಯಾಪಕರ ಆಯ್ಕೆ ಯಲ್ಲಿ ಸರ್ಟಿಫಿಕೇಟ್ ಅಷ್ಟೇ ಮುಖ್ಯ, ಅಧ್ಯಾಪಕ ನ ಪ್ರತಿಭೆ ನಗಣ್ಯ. ಚಿತ್ರಕಲಾ ಶಿಕ್ಷಣ ಪ್ರಾಯೋಗಿಕ ಆಧಾರಿತ ಶಿಕ್ಷಣ ವಾಗಿರುವುದರಿಂದ ಅಧ್ಯಾಪಕರ ಆಯ್ಕೆಯಲ್ಲಿ ಅಥವಾ ಸಂದರ್ಶನದಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಬಹುದು.. ಪ್ರಶ್ನೆ : ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಸದ್ಯ ದೇಶಕ್ಕೆ ಮನುಷ್ಯ ಮನುಷ್ಯರನ್ನು ಬೆಸೆಯುವ ಧರ್ಮ ಧರ್ಮ ಗಳನ್ನ ಬೆಸೆಯುವ ಸೌಹಾರ್ದ ಸಂತನ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಯುವಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನದ ಘನತೆ ನಮ್ಮಲ್ಲಿ ಎಚ್ಚರಗೊಳ್ಳಬೆರಕು.. ಪ್ರಶ್ನೆ : ಆರ್ಟ ,ಪೇಯಿಂಟಿಂಗ್ಸ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಮನುಷ್ಯನ ಬದುಕು ಅರಾಜಕವಾದಲ್ಲಿ ಕಲೆ ಮತ್ತು ಸಂಸ್ಕ್ರತಿಗಳು ಅವಸಾನದ ಹಾದಿ ಹಿಡಿಯುತ್ತವೆ. ದೇಶ ಸುಭಿಕ್ಷುವಾಗಿದ್ದರೆ ಮಾತ್ರ ಕಲೆ, ಕಲಾವಿದರ ಅಸ್ತಿತ್ವ. ಇದಕ್ಕೆ ಪೂರಕವಾದ ಸಮಾಜ ನಮ್ಮದಾಗಲಿ. …………… ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಂತು ಶ್ರಾವಣ
ವೀಣಾ ರಮೇಶ್ ನಿಸರ್ಗದ ಕುಂಚದಲಿಬರೆದಳು ಶುಕ್ಲ ಪ್ರತಿಪದೆಹಸಿರ ಬಸಿರು ಹೊತ್ತುಶ್ರಾವಣದ ಶುಭಪ್ರದೆ ನವ ಶೃಂಗಾರದ ವೈಯಾರಿಮೈತುಂಬಿ ಬಂದಳುಬಿಂಕವ ತೋರಿಅಪ್ಪಿದಳು ಇಳೆಯಲಿ ಭೂರಮೆನಸುನಗೆಯ ತೂರಿ ಸಂಭ್ರಮದ ಪರ್ವಗಳ ಮಾಸಮನ ಮಾನಸದಲಿಶ್ರಾವಣಿ ತಂದಳುಮಂದಹಾಸ,ಪ್ರಕೃತಿಯ ಋತುವಿಲಾಸ ವೇದ ಮಂತ್ರಗಳ ಪಠಣಮಂಗಳ ವಾದ್ಯಗಳಶಬ್ದ ಘೋಷಣಪರ್ವಗಳ ಸಾಲಿಗೆ , ಸಂಭ್ರಮದ ಒಡಲಿಗೆಸಿಹಿಹೂರಣ **************
ನಾನೇ ರಾಧೇ…
ವಸುಂದರಾ ಕದಲೂರು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ಇನಿಯನ ಇಂಪಿನ ಕೊರಳಿನ ಕರೆಯಒಲವಿನ ಚೆಲುವಿನ ಇನಿದನಿ ಸವಿಯಮರೆಯಲಿ ಹೇಗೆ ನಾ ಮಾಧವನಾತೊರೆಯಲಿ ಹೇಗೆ ನಾ ಗಿರಿಧರನಾ ಮಾಧವ ರಾಘವ ಗಿರಿಧರ ಗೋಪಾಲಹಲಬಗೆ ಹೆಸರಲಿ ಜಪಿಸಿದೆ ಸಂಕುಲಬಾರಾ ಮಾಧವ ಮುರಳಿ ಲೋಲಾತೋರಾ ಶ್ಯಾಮಲ ಅಪಾರ ಲೀಲಾ ಹುಡುಕಲಿ ಎಲ್ಲಿ ಆ ಚೆಲುವನನುಸಹಿಸಲಿ ಹೇಗೆ ನಾ ವಿರಹವನುಮೋಹಿಸದಿರಲೆಂತು ಮಾಧವನನುತೊರೆಯುವುದೆಂತು ಘನವಂತನನು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ***********
ಕಾವ್ಯಯಾನ
ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲುರಚ್ಚೆ ಹಿಡಿದ ಮಗುವಿನಂತೆಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆತಾಳಬಲ್ಲೆನೇಸವಾರಿ?ಕಣ್ಣಂಚಲಿಮುತ್ತಿಕ್ಕುತ್ತಿದೆ ಸೋನೆಸುಡುವ ಹರಳಿನಂತೆಒರೆಸಿಕೊಳ್ಳಲೇ ಸುಮ್ಮನೆ?ಎಷ್ಟೊಂದು ಸಂಕಟದ ಸಾಲಿದೆಸೋಲೆಂಬ ಮೂಟೆಯೊಳಗೆನಟ್ಟ ನಡು ಬಯಲಿನಲಿ ಒಂಟಿಮತ್ತು ಒಂಟಿ ಮಾತ್ರಹರಿಯಬಲ್ಲದೇ ಹರಿದಾರಿ?ನಡೆಯುತ್ತದೆಯೇ ದಿಕ್ಕು ಮರೆತ ನೌಕೆ?ಸುತ್ತ ಹತ್ತೂರಿಂದ ಬಂದ ಪುಂಡಗಾಳಿ ಹೊತ್ತೊಯ್ದು ಬಿಡುವುದೇನೆಟ್ಟ ಹಗಲಿನ ಕಂಪು?ಯಾವ ದಾರಿಯ ಕೈ ಮರವೂಕೈ ತೋರುತ್ತಿಲ್ಲಮರೆತು ಹೋಗಿದೆ ದಿಕ್ಸೂಚಿಗೂಗುರುತುಕಗ್ಗತ್ತಲ ಕಾರ್ತಿಕದಲಿಹಚ್ಚುವ ಹಣತೆಯೂ ನಂಟು ಕಳಚಿದೆಮುಖ ಮುಚ್ಚಿಕೊಂಡೀತೆಬೆಳಕು ಬಯಲ ಬೆತ್ತಲೆಗೆ?ಮುಗ್ಗರಿಸಿದ ಮಧ್ಯಹಾದಿಯಮಗ್ಗಲು ಬದಲಿಸಲೇ?ನೂರೆಂಟು ನವಿಲುಗರಿಗಳನಡುವೆ ಹಾರಿದ ಮುಳ್ಳುಎದೆ ಚುಚ್ಚಿದೆ, ಕಣ್ಣು ನೆಟ್ಟಿದೆಮತ್ತು ನೆತ್ತಿಯನ್ನೂ ಕೂಡಸೋಲು ಭಾಷೆ ಬದಲಿಸುವುದಿಲ್ಲನನಗೋ ಭಾಷೆಗಳು ಬರುವುದೇ ಇಲ್ಲ.. ***************
ಕಾವ್ಯಯಾನ
ಕೊರೊನ ಜಾಗೃತಿ ಶ್ವೇತಾ ಮಂಡ್ಯ ಕೊರಗ ಬೇಡಿಬಂತೆಂದು ಕರೋನಮರೆಯ ಬೇಡಿಎಚ್ಚರಿಕೆ ಕೈ ತೊಳೆಯೋದನ್ನ ಹೆದರದಿರಿ ವೈರಸ್ಸಿನ ಕಾಟಕೆಹೆದರಿಸಿ ವೈರಿಯನು ಎದೆಗುಂದದೆಸಾಮಾಜಿಕ ಅಂತರ ಎಂದೂ ನೆನಪಿನಲಿರಲಿನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ ಮನೆಯೇ ಮಂತ್ರಾಲಯವಾಗಿಹಈ ದಿನಗಳಲಿಒಡೆದ ಮನವ ಒಂದಾಗಿಸಿಬಾಳುವುದ ಕಲಿಯೋಣ ಒಗ್ಗಟ್ಟಿನಲಿ ಬಿಸಿನೀರು,ಬಿಸಿಯೂಟ,ಹಾಲು, ಹಣ್ಣು ,ತರಕಾರಿಕರೋನ ತಡೆದು ಆರೋಗ್ಯವರ್ಧಿಸುವ ರಹದಾರಿ ಹೊರಗಡೆ ಬರುವಾಗಮುಖಕ್ಕಿರಲಿ ಮಾಸ್ಕ್ಬೇಡವೇ ಬೇಡಅನಗತ್ಯ ಓಡಾಟದ ರಿಸ್ಕ್ ಜೀವ ಉಳಿಸುವ ಕಾರ್ಯತತ್ಪರತೆಹಸಿದವರೊಡಲ ತುಂಬಿಸುವ ವಿಶಾಲತೆಮೆರೆದ ಮಂದಿಗೆಲ್ಲಾ ಸಲ್ಲಿಸೋಣನಮ್ಮ ಪ್ರೀತಿಯ ಕೃತಜ್ಞತೆ ಬದುಕ ಬಂಡಿಯ ಹಳಿ ತಪ್ಪಿಸಿಹಲವು ಜೀವಗಳ ಮಣ್ಣೊಳಗೆ ಮಲಗಿಸಿವಿಶ್ವ ಆರ್ಥಿಕತೆಯ ಬುಡಮೇಲಾಗಿಸಿಒಕ್ಕರಿಸಿದೆ ಈ ಕರೋನ ರಾಕ್ಷಸಿ ಏನಾದರೂ ಆಗಲಿ ಆತ್ಮಬಲವೊಂದಿದ್ದರೆಮೀರಬಹುದು ಎಲ್ಲವನುಸ್ವಯಂ ಜಾಗೃತರಾಗಿ ,ಗೆಲ್ಲೋಣ ಬನ್ನಿಈ ಮನುಕುಲದ ದುಸ್ವಪ್ನವಾದ ಕೊರೊನವನು. ಜೀವಕಿಂದು ಬೇಕು ಸಾಂತ್ವನಆತ್ಮ ಶಕ್ತಿಯೊಂದೇ ಬದುಕಿನ ಮಂಥನತಾಳ್ಮೆ ಸಹನೆ ಕರುಣೆಯ ಪ್ರದರ್ಶಿಸೋಣನಾವು ನಮ್ಮವರನೆಲ್ಲ ರಕ್ಷಿಸೋಣ ಮಹಾ ಮಾರಿ ಬಂತೆಂದುದೃತಿಗೆಡದೆ ಮುಂದೆಸಾಗಬೇಕು ಅಡೆತಡೆಗಳಮೀರುತ ನಡೆ ಮುಂದೆ ************
ಹಾಸ್ಯ
ಮದಿರಾ ಪ್ರಿಯರ ಹಳವಂಡಗಳು ಗೌರಿ.ಚಂದ್ರಕೇಸರಿ ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು. ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹಳವಂಡಗಳು ಆರಂಭವಾದವು. ದಿನವಿಡೀ ಅಡುಗೆ ಮನೆಯಲ್ಲೇ ಬೇಯಿಸುತ್ತ, ತಾವೂ ಬೇಯುವ ಸಂಕಟ ಹೆಂಗಸರಿಗೆ. ಬೆಳಗಾಗುತ್ತಿದ್ದಂತೆಯೇ ಮನೆಯಿಂದ ಕಾಲ್ಕಿತ್ತು ಹುಡುಗಿಯರ ಕಾಲೇಜಿನತ್ತ ಠಳಾಯಿಸುತ್ತಿದ್ದ ಹುಡುಗರಿಗೆ ಕ್ಷಣವೊಂದು ಯುಗವಾಗಿ ಹೋದಂತಾಗಿತ್ತು. ಅಲ್ಪ ಸ್ವಲ್ಪ ಅನುಕೂಲವಾಗಿರುವುದು ಮಕ್ಕಳಿಗೆ. ಕಣ್ಣಿ ಬಿಚ್ಚಿದ ಕರುಗಳಂತಾಗಿ ಹೋಗಿವೆ ಮಕ್ಕಳು. ಆದರೆ ಈ ಗಂಡಸರು ಮಾತ್ರ ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ಜಿಗುಪ್ಸೆಗೆ ಒಳಗಾಗಿದ್ದರೆಂಬುದು ನಮ್ಮ ಹೆಂಗಸರ ಅಂಬೋಣ. ಲಾಕ್ ಡೌನ್ ಜೊತೆ ಜೊತೆಗೆ ಮದ್ಯದಂಗಡಿಗಳಿಗೂ ಬೀಗ ಬಿದ್ದಾಗ ಗಂಡಸರೆಲ್ಲ ಅಕ್ಷರಶ: ಹತಾಶರಾಗಿ ಹೋಗಿದ್ದರು. ಮದಿರಾ ಪ್ರಿಯರ ಸ್ಥಿತಿಯನ್ನು ನೆನೆದರೆ ಕರುಳು ಹಿಂಡಿದಂತಾಗುತ್ತಿದೆ. ಬಡವ ಬಲ್ಲಿದರೆನ್ನದೇ ಮದಿರೆಯೊಂದೇ ತಮ್ಮ ಜೀವನದ ಥ್ರಿಲ್ ಎಂದುಕೊಂಡವರಿಗೆ ಜೀವನವೇ ನೀರಸವಾಗಿ ಹೋಗಿತ್ತು. ಈ ಕೊರೋನಾ ಎನ್ನುವ ಹೆಮ್ಮಾರಿಗೆ ಶಾಪ ಹಾಕುತ್ತಿರುವ ನಾಲಿಗೆಗಳೆಷ್ಟೋ, ಮದಿರೆಯ ಸರಬರಾಜನ್ನು ಮುಂದೂಡುತ್ತಾ ಹೋದ ಸರ್ಕಾರವನ್ನು ತೆಗಳಿದವರೆಷ್ಟೋ ಬಲ್ಲವರಾರು? ಇಂಥ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರದ ಹನಿ ನೀರಾವರಿ ಮಾಡುವವರು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದರು. ನಿತ್ಯ ಬರುವ ವಾರ್ತೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎಣ್ಣೆ ಅಂಗಡಿಗಳೇನಾದರೂ ಬಾಗಿಲು ತೆರೆಯುವ ವಿಚಾರವನ್ನು ಹೇಳುತ್ತಾರೇನೋ ಎಂದು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಆದರೆ ಎಣ್ಣೆ ಅಂಗಡಿಗಳಿಗೂ ಲಾಕ್ ಡೌನ್ ಎಂದು ಗೆರೆ ಕೊರೆದಂತೆ ಹೇಳಿದಾಗ ಮದಿರಾ ಪ್ರಿಯರ ಅಂತರಂಗದ ಅಳಲು ಏನೆಂಬುದು ಅವರಿಗಷ್ಟೇ ಗೊತ್ತು. ಲಾಕ್‌ಡೌನ್ ಸಮಯದಲ್ಲಿ ಒಮ್ಮೆ ಹೀಗೇ ಆಯಿತು. ಹಿಂದಿನ ವಠಾರದಲ್ಲಿ ಗಲಾಟೆಯಾಗುತ್ತಿತ್ತು. ಕುತೂಹಲಕ್ಕೆಂದು ಹೋಗಿ ನೋಡಿದಾಗ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆ ವ್ಯಕ್ತಿಯ ಮೇಲೆ ಬಂದಿರುವುದು ದೇವರೋ, ದೆವ್ವವೋ ಎಂದು ಪ್ರಶ್ನಿಸಲಾಗಿ ಅವನಿಗೆ ಬಡಿದುಕೊಂಡಿರುವುದು ಬಾಟಲಿಯ ದಯ್ಯ ಎಂದು ತಿಳಿದಿತ್ತು. ಪ್ರತಿನಿತ್ಯ ವಾರ್ತೆಗಳನ್ನು ನೋಡುವಾಗ ಕೈಯ್ಯಲ್ಲೊಂದು ಹಗ್ಗವನ್ನು ಹಿಡಿದುಕೊಳ್ಳುವುದು, ವಾರ್ತಾ ವಾಚಕರು ಇನ್ನೂ ಒಂದು ವಾರ ಎಣ್ಣೆ ಅಂಗಡಿಗಳಿಗೆ ಬೀಗ ಎನ್ನುತ್ತಲೇ ಇವನು ಹಗ್ಗವನ್ನು ಹಿಡಿದುಕೊಂಡು ನೇಣು ಬಿಗಿದುಕೊಳ್ಳಲು ಕೋಣೆಗೆ ಓಡುವುದು. ಮನೆಯವರೆಲ್ಲ ಓಡಿ ಹೋಗಿ ಅವನನ್ನು ಹಿಡಿದುಕೊಳ್ಳುವುದು. ಮದಿರೆ ಇಷ್ಟೊಂದು ಅನಿವಾರ್ಯವೆ ಮನುಷ್ಯನಿಗೆ ಎನ್ನಿಸಿತು. ಪ್ರಿಯತಮ/ಮೆ ಕೈ ಕೊಟ್ಟಾಗಲೋ ಸಾಲದ ಶೂಲ ಇರಿಯುವಾಗಲೋ ಆತ್ಮಹತ್ಯೆಗೆ ಮೊರೆ ಹೋಗುತ್ತಾರೆಂದರೆ ಇರಬಹುದೇನೋ ಎಂದು ಅಂದುಕೊಳ್ಳುಬಹುದು. ಆದರೆ ಯಕಶ್ಚಿತ್ತ್ ಒಂದು ಕಾಲು ಲೋಟದಷ್ಟು ಕಹಿ ಒಗರಿನ, ಗಂಟಲಲ್ಲಿ ಕೊಳ್ಳಿಯನ್ನು ಇಟ್ಟಂತಾಗುವ ದ್ರವಕ್ಕೋಸ್ಕರ ಜೀವನವನ್ನೇ ಕಳೆದುಕೊಳ್ಳಲು ಮುಂದಾಗುವುದಾ? ಎಂದುಕೊಂಡಿದ್ದೆ. ಇನ್ನು ಕೆಲ ಮದಿರಾ ಭಕ್ತರು ಒಂದು ಹೆಜ್ಜೆ ಮುಂದೆ ಹೋಗಿ ಎಣ್ಣೆಯಂಗಡಿಗಳಿಗೇ ಕನ್ನ ಕೊರೆದರು. ಅಂದರೆ ಮದಿರಾ ಪ್ರಿಯಾಣಾಂ ನ ಲಜ್ಜಾ ನ ಭಯಂ ಅನ್ನಬಹುದೇನೋ. ಕೆಲ ಹೆಣ್ಣು ಮಕ್ಕಳೂ ಇದಕ್ಕೆ ಹೊರತಾಗಿಲ್ಲವೇನೋ. ಇಂಥ ಬಿಗಿ ಪರಿಸ್ಥಿತಿಯಲ್ಲೂ ಇಬ್ಬರು ಹುಡುಗಿಯರು ಹೇಗೋ ಎಣ್ಣೆಯನ್ನು ಹೊಂಚಿಕೊಂಡು ಪೋಲೀಸರ ಕಾರ್ಯಕ್ಕೆ ಅಡ್ಡಿ ಮಾಡಿದ್ದು ಕೇಳಿ ಹೆಂಗಸರು ಗಂಡಸರಿಗಿಂತ ಚಾಲಾಕಿಗಳು ಎಂಬುದನ್ನು ಸಾಬೀತು ಪಡಿಸಿದರು.ಕುಡಿತಕ್ಕೆ ಅನಿವಾರ್ಯಗಳನ್ನು ಸೃಷ್ಠಿಸಿಕೊಳ್ಳುವವರಿಗೆ ಕಾರಣಗಳಿಗೆ ಕೊರತೆಯೇ? ನಿತ್ಯ ಗಂಟಲಲ್ಲಿ ಎಣ್ಣೆ ಇಳಿಯದಿದ್ದರೆ ಮನೆಗೆ ಹೋಗಲು ಭಯವಂತೆ. ಘಟವಾಣಿ ಹೆಂಡತಿಯರ ಜೊತೆ ಏಗಲು, ಆಫೀಸಿನ ಕೆಲಸದ ಒತ್ತಡವನ್ನು ನೀಗಲು, ಆದ ಸಂತೋಷವನ್ನು ಸಂಭ್ರಮಿಸಲು, ದು:ಖವನ್ನು ಭರಿಸಲು ಹೀಗೆ ಕುಡಿತಕ್ಕೆ ಕಾರಣಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ. ಈಗ ಹಾಲಿ ಒಕ್ಕರಿಸಿರುವ ಕೊರೋನಾದ ಭಯ ಇವರಿಗಿಲ್ಲ. ಅದನ್ನು ಮೀರಿದ ಭಯವೆಂದರೆ ಎಣ್ಣೆ ಅಂಗಡಿಗಳನ್ನು ಬ್ಯಾನ್ ಮಾಡಿ ಬಿಡುವರೇನೋ ಎಂಬ ಚಿಂತೆ. ಮದ್ಯ ಪ್ರಿಯರ ಹಳವಂಡಗಳೇನೇ ಇರಲಿ ಆದರೆ ಅವರ ಹೆಂಡಂದಿರು ಮಾತ್ರ ಇಷ್ಟು ದಿನ ನಿರಾಳವಾಗಿದ್ದರು. ಮನೆಯ ಒಂದು ದಿನದ ಖರ್ಚಿಗಾಗುವಷ್ಟು ದುಡ್ಡು ಗಂಡಸರ ಕುಡಿತಕ್ಕೇ ಹೋಗುತ್ತಿತ್ತು. ಅದು ಲಾಕ್‌ಡೌನ್ ಸಮಯದಲ್ಲಿ ಮಿಕ್ಕಿತು.. ಪರಮಾತ್ಮ ಒಳಗೆ ಇಳಿಯುತ್ತಿದ್ದಂತೆಯೇ ಹೆಂಡತಿಯ ಮೇಲೆ ರೋಪು ಹಾಕುತ್ತಿದವರೆಲ್ಲ ಆಗ ಮೆತ್ತಗಾಗಿ ಬಿಟ್ಟಿದ್ದರು. ಲಾಕ್ ಡೌನ್‌ನಿಂದಾಗಿರುವ ಲಾಭಗಳು ಯಾರಿಗುಂಟು ಯಾರಿಗಿಲ್ಲ? ಅಡುಗೆ ಮನೆಯ ಕೆಲಸವೊಂದು ಹೆಚ್ಚಾಗಿದೆ ಎನ್ನುವುದೊಂದನ್ನು ಬಿಟ್ಟರೆ ಆದದ್ದೆಲ್ಲ ಒಳಿತೇ ಆಗಿದೆ ಹೆಣ್ಣು ಮಕ್ಕಳಿಗೆ. ಫಲವತ್ತಾಗಿ ಬೆಳೆದಿದ್ದ ಗಂಡಸರ ಗಡ್ಡ-ಮೀಸೆ ಕ್ರಾಪುಗಳ ಜೊತೆಗೇ ಮದಿರೆ ಇಲ್ಲದೆ ಸೋತು ಹೋಗಿರುವ ಅವರ ಹ್ಯಾಪು ಮೋರೆಯನ್ನು ಕಂಡು ಅಯ್ಯೋ ಎನ್ನಿಸಿದರೂ ಒಳಗೊಳಗೇ ಇವರಿಗೆ ಇದು ಆಗಬೇಕಾದ್ದೇ ಎಂದುಕೊಂಡವರೇ ಹೆಚ್ಚು. ರಾಮಾಯಣ. ಮಹಾಭಾರದ ಕಾಲದಿಂದಲೂ ಎಲ್ಲದಕೂ ಕಾರಣಳು ಹೆಣ್ಣೇ ಎಂದು ಹೇಳುತ್ತ ಬಂದಿದ್ದಾರೆ ನಮ್ಮ ಗಂಡಸರು. ಈಗ ಹೇಳಲಿ ನೋಡೋಣ, ಅವರ ಕುಡಿತಕ್ಕೆ ಕಲ್ಲು ಬಿದ್ದಿದ್ದು ಹೆಣ್ಣಿನಿಂದಲೇ ಅಂತ? ಅದಕ್ಕೆ ಕಾರಣ ಕೊರೋನಾ ಆಗಿರುವಾಗ ಹೇಗೆ ತಾನೇ ಹೇಳಿಯಾರು? ಯಾರಿಗೆ ಗೊತ್ತು? ಕೊರೋನಾ ಕೂಡ ಹೆಣ್ಣೇ ಅಂದರೂ ಅಂದಾರು ಗಂಟಲಾರಿದವರು. ********
ಪುಸ್ತಕ ಸಂಗಾತಿ
ಹುಲಿಕಡ್ಜಿಳ ಸರಳ ಜೀವನ ಸೂತ್ರ ಪಠಿಸುವ ಕಥೆಗಳು- ಹುಲಿಕಡ್ಜಿಳ ತೀರ್ಥಹಳ್ಳಿಯ ಒಡ್ಡಿನ ಬೈಲಿನ ಹರೀಶ ಟಿ. ಜೆ. ಎಂದೇ ಹೆಸರಾಗಿರುವ ಹರೀಶ ಮಿಹಿರ ಇವರು ಮೂಡಬಿದಿರೆ ಆಳ್ವಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನೀಲಿನದಿ ಕಥಾ ಸಂಕಲನದಿಂದ ಈಗಾಗಲೇ ಕಥಾ ಸಾಹಿತ್ಯ ಲೋಕದಲ್ಲಿ ಪರಿಚಿತರು ಕೂಡಾ.ಅವರ ಎರಡನೇ ಕಥಾ ಸಂಕಲನ ಹುಲಿಕಡ್ಜಿಳ. ಸಂಕಲನದ ಹೆಸರೇ ಭಯ ಬೀಳಿಸುವಂತದ್ದು. ಆದರೆ ಒಳಪುಟದಲ್ಲಿ ಸಾಮಾಜಿಕ ಬದುಕಿನ ಹಲವು ತಿಕ್ಕಾಟಗಳು ಸಂಘರ್ಷಗಳು ಸಮ ಕಾಲೀನ ಜಗತ್ತು ಆಧುನಿಕತೆಯ ಜೊತೆಗೆ ನಡೆಯಬಾರದ ನಡೆಯಲ್ಲಿ ಹಾದಿ ತಪ್ಪುತ್ತಿರುವುದನ್ನು ವಿಶ್ಲೇಷಿಸುತ್ತಾ, ಬದುಕಿನ ನೈಜ ಸಾರ ಏನು? ಎಂಬುದನ್ನು ಓದುಗನಿಗೆ ತಿಳಿಸುವ ಪ್ರಯತ್ನ ಮಾಡುತ್ತವೆ. ಬಹುತೇಕ ದಕ್ಷಿಣಕನ್ನಡ,ಉಡುಪಿಯ ಸಾಂಸ್ಕೃತಿಕ ಹಿನ್ನೆಲೆ ಜನಜೀವನದ ಒಂದು ಚಿಕ್ಕ ಒಳನೋಟಕ್ಕೆ ಈ ಕಥೆಗಳು ಸೂಡಿ ಹಿಡಿಯುತ್ತವೆ. ನಮ್ಮ ಉಚ್ಚ ಪಾರಂಪರಿಕ ನೆಲೆಗಟ್ಟು, ಹೊಸತನಕ್ಕೆ ತೆರೆದುಕೊಳ್ಳುವ ಹುಮ್ಮಸ್ಸಿನಲ್ಲಿ ತಳಪಾಯವನ್ನು ಗಟ್ಟಿ ಮಾಡದ ಮನೆಗಳಲ್ಲಿಯ ನೋವು ನಲಿವು, ಹಸಿವು ಸಂಕಟಗಳ ದರ್ಶಿಸುತ್ತವೆ . ಕಥೆಗಳು. ಹಣದ ಮದ ಅದರ ಅಟ್ಟಹಾಸದ ನಡುವೆಯೇ ಬಡವನಲ್ಲೂ ಇರಬೇಕಾದ ಆತ್ಮಾಭಿಮಾನ ಹಾಗೂ ಆತ್ಮವಿಶ್ವಾಸಭಾವದ ಪ್ರತಿಫಲನವನ್ನು ನಿರೂಪಿಸುತ್ತವೆ. ಕೆಲವು ಕಥೆಗಳು ನಿಸರ್ಗದತ್ತ ಜೀವನ ವಿಧಾನದ ಅಗತ್ಯತೆಯನ್ನು ಮನಗಾಣಿಸುತ್ತವೆ. ಆಧುನಿಕತೆ ವರವೆಂದು ಬಗೆದು ಹೊಸ ಜಗತ್ತಿಗೆ ತೆರೆದುಕೊಳ್ಳುವ ಅನಿವಾರ್ಯತೆ ಇಂದಿನದು. ಆದರೆ ಅದು ನಿಸರ್ಗದ ನಿಯಮಕ್ಕೆ ತೀರಾ ವಿರುದ್ಧವಾಗಿ, ಮನೆಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡರೇ ಒಂದಲ್ಲ ಒಂದು ದಿನ ವಿಷಾನಿಲಗಳ ಪ್ರಭಾವ ಕಟ್ಟಿಟ್ಟಿದ್ದು ಎಂಬುದನ್ನು ಮನಗಾಣಿಸುತ್ತವೆ. ಸಂಕಲನದ ಮೊದಲ ಕಥೆ ಹುಲಿಕಡ್ಜಿಳ. ಜೇನು ಹುಳುವಿನಂತೆ ಗೂಡು ಕಟ್ಟುವ ಕಚ್ಚಿದರೆ ಭಯಂಕರ ಉರಿ ತರುವ ಕಡ್ಜಿಳ ಹುಳುಗಳು ಬಹುತೇಕ ಉತ್ತರ ಮತ್ತು ದಕ್ಷಿಣಕನ್ನಡದ ಸಣ್ಣಪುಟ್ಟ ಕಾನುಗಳಲ್ಲೂ ಕಾಣಸಿಗುತ್ತವೆ.ಅಂತಹ ಭಯಂಕರ ಹುಳುವನ್ನು ಹೊಸಕಿ ಹಾಕುವುದು ಸಾಮಾನ್ಯದ ಕೆಲಸವಲ್ಲ. ಆದರೆ ಮನೋಬಲ ಹಾಗೂ ಅದನ್ನು ಕೊನೆಗಾಣಿಸಬಲ್ಲ ಕೆಲವು ತಂತ್ರಗಳು ತಿಳಿದಿದ್ದರೆ ಅದನ್ನು ಬುಡಸಮೇತ ನಾಶ ಮಾಡುವುದು ಕಷ್ಟವೇನಲ್ಲ. ಬಡವ ನಾಗರಾಜಣ್ಣನ ಮಗಳು ಪುಷ್ಪ ಶಾಲೆಗೆ ಹೋಗುತ್ತಿದ್ದವಳು ಒಮ್ಮೆಲೇ ಶಾಲೆಗೆ ಹೋಗಲು ಹಿಂದೇಟು ಹಾಕತೊಡಗುವುದು, ಅದಕ್ಕೆ ಕಾರಣ ಶ್ರೀಮಂತ ಯುವಕನಾದ ತಾರಗೊಳ್ಳಿಯ ನಾಗೇಶ ಎಂಬಾತ ಆಕೆಯನ್ನು ತನ್ನೊಂದಿಗೆ ಬರುವಂತೆ ಪೀಡಿಸುತ್ತಿರುವುದು, ಅದನ್ನು ತಿಳಿದ ತಂದೆ ನಾಗರಾಜಣ್ಣ ಬಹಳ ಚಾತುರ್ಯದಿಂದ ಆ ಹುಳುವನ್ನು ಹೊಸಕಿ ಹಾಕುವುದು ಇದಿಷ್ಟೇ ಕಥೆ. ನಾಗರಾಜಣ್ಣ ಇಲ್ಲಿ ಬಡತನಕ್ಕೆ ಪ್ರತಿನಿಧಿಯಾಗದೇ, ಬದುಕಿನ ಸಮಸ್ಯೆಗಳನ್ನು ಎದುರಿಸುವ ಸಮರ್ಥ ವ್ಯಕ್ತಿತ್ವಕ್ಕೆ ಪ್ರತಿನಿಧಿಯಾಗುತ್ತಾನೆ. ಪ್ರಾಣಿ ಜಗತ್ತಿನಲ್ಲೂ ಕಾಣುವುದು ಇದೇ ತತ್ವವೇ . ಹಾಗಾಗಿ ಸಾಮಾಜಿಕ ಹಿನ್ನೆಲೆಯಲ್ಲಿ ಕಟ್ಟಿದ ಪಾತ್ರವಾದರೂ ಅದು ನಿರೂಪಿಸುವುದು ಸ್ವರಕ್ಷಣೆಯ ಅಗತ್ಯತೆಯನ್ನು.ದುರಾಚಾರವನ್ನು ಸಹಿಸುವುದು ಅಪರಾಧವೇ. ಅಂತಹ ನೀಚನನ್ನು ಮಟ್ಟ ಹಾಕಲೇ ಬೇಕು.ಇಂದಿನ ಸಮಾಜದಲ್ಲೂ ಇರುವ ಇಂತಹ ಪಾತ್ರಗಳು ಅಸಹಾಯಕರ ಕಣ್ಣೀರಿನಲ್ಲೇ ಸುಖಿಸುತ್ತವೆ. ಹಾಗಾಗಿ ಕಥೆಗಾರರ ಈ ಸಂದೇಶ ಕಥೆಯ ಮಹತ್ವವನ್ನು ಹೆಚ್ಚಿಸಿದೆ. ‘ಬೇಗೆ’ ಕಥೆಯಲ್ಲಿ ಸಾಂಸಾರಿಕ ಜೀವನದ ಅತೃಪ್ತಿಯಲ್ಲಿ ಬೆಂದು ನರಳುವ ಹೆಣ್ಣುಗಳು, ಹೊರಜಗತ್ತಿನಲ್ಲಿ ಸುಂದರ ಸಂಸಾರದ ಮೊಗವಾಡ ಹಾಕಿಕೊಂಡಿರುವುದು, ಹೆಣ್ಣುಗಳು ಜೀವನವೀಡಿ ಹೀಗೆ ಕೊರಗುತ್ತಾ ಬದುಕಬೇಕಾದ ಅನಿವಾರ್ಯತೆಯನ್ನು ಹೇಳುತ್ತಾರೆ. ಆ ಮೂಲಕ ಭಾರತೀಯ ಸಮಾಜದ ಸಾಂಸ್ಕೃತಿಕ ರೂಹುಗಳನ್ನು ಆಧುನಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲಾಗದ ನಮ್ಮ ಯುವಜಗತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನು ಮುರಿಯುವ ಅಗತ್ಯವಿದ್ದರೂ ಅದು ಪರಂಪರೆಯನ್ನು ಕಳೆದುಕೊಳ್ಳದೇ ಇರುವುದೇ ಸಭ್ಯತೆ ಎಂಬುದು ಕಥೆಯಲ್ಲಿ ಧ್ವನಿತವಾಗಿದೆ. ಆಧುನೀಕರಣದ ಅವಾಂತರ, ಹೊಸ ಜೀವನ ಶೈಲಿಯ ಆಕಾಂಕ್ಷೆಗೆ ಹಣವಿದ್ದರಾಯ್ತು ಎಂದುಕೊಂಡ ಹೆಣ್ಣು ಜೀವಗಳು ಮನೆಯವರು ಒಪ್ಪಿದ ಸಂಬಂಧಕ್ಕೆ ಗೋಣು ಕೊಟ್ಟು, ಮದುವೆಯಾಗುತ್ತಾರೆ. ಆದರೆ ವಿವಾಹವಾದ ಮೇಲೆಯೇ ಆ ಗಂಡಿನ ನಿಜದ ರೂಪ ಗೊತ್ತಾಗುವುದು. ಹಾಗಾಗಿ ಕಥೆಯ ಮುಖ್ಯ ಪಾತ್ರ ಅನಿತಾ ತನ್ನೊಂದಿಗಿನ ಯಾವ ಬಂಧಗಳಿಗೂ ಬೆಲೆಕೊಡದ, ಆಕೆಯ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದ ಪತಿಯನ್ನು ಬಿಡುವ ವಿಚಾರ ಮಾಡುವುದಿಲ್ಲ. ಮಕ್ಕಳಿಗಾಗಿ ಅವನೊಂದಿಗೆ ಏಗುವುದೇ ಇರುವ ಏಕೈಕ ಉಪಾಯ ಎನ್ನುತ್ತಾಳೆ. ಇದು ಭಾರತೀಯ ಸಮಾಜ ಹೇರಿದ ಅಲಿಖಿತ ಸಂವಿಧಾನಾತ್ಮಕ ಕಾನೂನು.ಮುಂದುವರೆದ ರಾಷ್ಟೃಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಬದುಕಿಗೆ ಮಹತ್ವವಿದೆ.ಅದೇ ನಮ್ಮಲ್ಲಿ ಬಂಧನಗಳಿಗೆ ಮಹತ್ವವಿದೆ. ಹಾಗಾಗಿ ಲೇಖಕರು ಇಲ್ಲಿಯ ಹೆಣ್ಣು ಜೀವಗಳ ತಟ್ಟಿ ಮಾಡಾಡಿಸಿದರೂ, ಅಂತಹ ಸಂದೇಶವನ್ನೂ ನೀಡಲಾರರು. ‘ಕಟೆ’್ಟ ಕಥೆ ಕೂಡಾ ಇನ್ನೊಂದು ಪ್ರಮುಖ ಸಂದೇಶವನ್ನೇ ನಿರೂಪಿಸುತ್ತದೆ. ಶ್ರೀಮಂತ ಗಬಡಿ ನಾಗ್ರಾಜರಾಯರ ಕುಟುಂಬ ಹೇಗೆ ತೋಟದ ಮನೆಯವರೆಂದು ಕರೆಸಿಕೊಂಡಿತ್ತೋ ಹಾಗೆ ಬೇರೆಯವರಲ್ಲಿ ಕೆಲಸಕ್ಕೆ ಹೋಗುವ ಹಾಗಾಗುವ ಚಿತ್ರಣದೊಂದಿಗೆ ಏಕತಳಿ ಬೇಸಾಯದಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮ, ಭೂಮಿಯ ಫಲವತ್ತತೆಯನ್ನು ಕಸಿದುಕೊಳ್ಳುವ ಇಂತಹ ಬೇಸಾಯ ಕೇವಲ ನಿಸರ್ಗ ವಿರೋಧಿ ಮಾತ್ರ ಆಗಿರದೇ ವಾಣಿಜ್ಯ ಜಗತ್ತಿನಲ್ಲೂ ಕೆಲವೊಮ್ಮೆ ವೈಪರಿತ್ಯಗಳನ್ನು ಹುಟ್ಟಿಸಿ, ಬೆಳೆದ ರೈತನ ಮೂಲಕ್ಕೆ ಕೊಡಲಿಪೆಟ್ಟು ಹಾಕುತ್ತದೆ ಎಂಬುದನ್ನು ವಿವರಿಸುತ್ತದೆ. ಇಂತಹ ಬೇಸಾಯ ಪದ್ಧತಿ ಆತನ ಬದುಕನ್ನೆ ನಾಶ ಮಾಡಿದ ಅನೇಕ ಉದಾಹರಣೆಗಳಿವೆ. ಆದಾಗ್ಯೂ ಕುರಿಗಳಂತೆ ರೈತರು ಈ ರೀತಿಯ ಬೇಸಾಯವನ್ನು ಹಿಂದೆಮುಂದೆ ನೋಡದೇ, ಕಾರ್ಪೊರೇಟ್ ಜಗತ್ತಿನ ಆಮೀಷಕ್ಕೆ ಒಳಗಾಗಿ ಅವಲಂಬಿಸಿಕೊಂಡು ಬರುತ್ತಿದ್ದಾರೆ.ಇದ್ದ ಸೊಗಸಾದ ಗದ್ದೆ ಹೊಲಗಳನ್ನು ಕೆಲವರು ತೋಟಗಳನ್ನಾಗಿ ಪರಿವರ್ತಿಸಿ ತೆಂಗು ಕಂಗು, ಬಾಳೆ, ಹತ್ತಿ ಅಂತೆಲ್ಲ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಕೆಲವೊಮ್ಮೆ ವಾಣಿಜ್ಯ ಜಗತ್ತಿನಲ್ಲಿ ಏಕಾಏಕಿ ಬೆಲೆ ಕುಸಿತಗೊಂಡು ಸಾಲಗಾರರಾಗಿ, ದುರ್ಭರ ಬದುಕನ್ನು ನಡೆಸುವಂತಾಗುತ್ತದೆ. ಗೊಂಬೆ ಕಥೆಯ ಸುಂದರ ಹುಡುಗಿ ಶ್ರೀಲತಾ ತನ್ನ ನೀತಿಯಿಲ್ಲದ ನಡೆಯಿಂದ ಹೇಗೆ ಬದುಕಲ್ಲಿ ಹಾದಿ ತಪ್ಪಿ ದುರ್ದೆಶೆಗೆ ಒಳಗಾದಳು ಎಂಬುದರಿಂದ ಓದಿಸಿಕೊಳ್ಳುತ್ತದೆ.ಆಧುನಿಕ ಬದುಕಿನ ಹೊಸ ಹೆಜ್ಜೆಗಳು, ಅವುಗಳ ವಿಫಲತೆ,ತಮ್ಮತನ ಇಟ್ಟುಕೊಳ್ಳಲಾಗದೇ ಆಧುನಿಕತೆಯ ಝಗಮಗಿಸುವಿಕೆಯಲ್ಲಿ ಮೆರೆವ ಆಸೆಯಲ್ಲಿ ಆ ಬೆಂಕಿಗೆ ಬಲಿಯಾಗುವ ಶ್ರೀಲತಾ ದುರಂತ ಪಾತ್ರಕ್ಕೆ ಸಾಕ್ಷಿಯಾಗುತ್ತಾಳೆ. ‘ತವರು’ಕಥೆ ನಮ್ಮ ನಿಮ್ಮ ಮನೆಯ ಹಿರಿಯ ಜೀವಗಳ ನಡೆನುಡಿ, ಬಂಧು ಬಾಂಧವರ ನಡುವಿನ ಬಾಂಧವ್ಯ, ಹೆಣ್ಣು ಮಕ್ಕಳ ತವರು ವ್ಯಾಮೋಹವನ್ನುತೆರೆದಿಟ್ಟಿದೆ. ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ.ಹೆಚ್ಚಿನ ಕತೆಗಳು ಸ್ತ್ರೀ ಪಾತ್ರವನ್ನೆ ಮುಖ್ಯ ನೆಲೆಯಲ್ಲಿ ಗ್ರಹಿಸುತ್ತಾ ವಿಸ್ತಾರಗೊಳ್ಳುತ್ತವೆ. ಹುಲಿಕಡ್ಜಿಳ ಕತೆಯ ಮುಗ್ಧ ಹುಡುಗಿ ಪುಷ್ಪಾ, ‘ಬೇಗೆ ‘ಕತೆಯ ದಾಂಪತ್ಯ ಜೀವನದ ಅತೃಪ್ತ ಪಾತ್ರಗಳಾದ ಅನಿತಾ ಮತ್ತು ವಾಣಿ, ತವರು ಕತೆಯ ತವರು ವ್ಯಾಮೋಹದ ಕತೆಗಾರರತಾಯಿ, ಸಾಕಲಾರದೆನ್ನ.. ಕಥೆಯ ಕರುಣಾಮಯಿ ಗೌರಿ, ಕುಡ್ಗೋಲು ಮುರ್ಗ ಕಥೆಯ ಸ್ವಾರ್ಥಮುಖಿ ಭಾವನಾ, ಗೊಂಬೆ ಕತೆಯ ಬಜಾರಿ ಶ್ರೀಲತಾ ಹೀಗೆ ಸ್ತ್ರೀ ಪಾತ್ರಗಳು ಸಂಕಲನದಲ್ಲಿ ಎದ್ದುಕಾಣುತ್ತವೆ. ಬಹಳ ನಿರರ್ಗಳ ಮಾತುಗಾರ ಹಾಗೂ ಹಾಸ್ಯ ಮಿಶ್ರಿತ ಮಾತಿನ ಧಾಟಿಯ ಹರೀಶ ತಮ್ಮ ಬದುಕಿನ ಅನುಭವಗಳ ಮೂಲಕವೇ ಕತೆ ಹೆಣೆಯುತ್ತಾರೆ. ಶೀರ್ಷಿಕೆ ಕಥೆ ‘ಹುಲಿಕಡ್ಜಿಳ’ದ ಹೊರತಾಗಿ ಉಳಿದ ಕತೆಗಳು ಜೀವಪರ ನಿಲುವನ್ನು, ತಾಳ್ಮೆ, ಸರಳತೆ, ಸಹಜತೆ, ಕರುಣೆ, ಪ್ರೀತಿ, ಬಾಂಧವ್ಯದ ಸುತ್ತಲೇ ಗಿರಕಿ ಹೊಡೆದು, ಸಹೃದಯರಿಗೆ ಇಷ್ಟವಾಗುತ್ತವೆ. ಬದುಕಿನೊಂದಿಗೆ ಬೆಸೆದುಕೊಂಡ ಜೀವಗಳನ್ನು ಅವರು ಪ್ರೀತಿಸುವ ಬಗೆ ಅದನ್ನು ಚಿತ್ರಶಾಲೆಯಂತೆ ಒಂದೊಂದು ಪಾತ್ರದೊಳಗಣ ಅನುಬಂಧವನ್ನು ಒಟ್ಟಂದದಲ್ಲಿ ಒಪ್ಪಂದದಂತೆ ಕಟ್ಟಿಕೊಟ್ಟರೀತಿ ಸೊಗಸಾಗಿದೆ. ******** ನಾಗರೇಖಾ ಗಾಂವಕರ್
ಕಾವ್ಯಯಾನ
ಗಝಲ್ ಲಕ್ಷ್ಮಿ ದೊಡಮನಿ ರಾಜಕಾರಣದ ಈ ಜೀವನ ಥಳುಕೆನಿಸುತ್ತದೆ ಎಚ್ಚರದಿಂದಿರುಕುರ್ಚಿ ತಲ- ತಲಾಂತರವಾಗಿ ತಮಗೆ ದಕ್ಕ ಬೇಕೆನಿಸುತ್ತದೆ ಎಚ್ಚರದಿಂದಿರು ಬದಲಾವಣೆ ಇಲ್ಲಿನ ನಿಯಮ ಯಾವುದೂ ಶಾಶ್ವತವಲ್ಲಮೃಗಜಲಕ್ಕೆ ಬೆನ್ನಟ್ಟಿದ ಪಶುವಿನಂತಾಗುತ್ತದೆ ಎಚ್ಚರದಿಂದಿರು ಬಿತ್ತಲಿಕ್ಕೆ ಹೋದವರು ಹೆಗ್ಗಣ ಬಿಲವನ್ನು ತೋಡಿದರಂತೆದಾರಿ ತಪ್ಪಿಸುವ ಆಸೆ-ಆಮಿಷಗಳನ್ನು ಒಡ್ಡಲಾಗುತ್ತದೆ ಎಚ್ಚರದಿಂದಿರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದೆಂಬ ತರಬೇತಿಯುಂಟುಮನ ನಾಚಿಕೆ,ಮಾನ ತೊರೆದು ಕೊರಡಿನಂತಾಗುತ್ತದೆ ಎಚ್ಚರದಿಂದಿರು ನಿಜಕ್ಕೆ ಸಮಾಧಿ ಕಟ್ಟಿ ಸುಳ್ಳಿಗೆ ಕಲಶವೇರಿಸುತ್ತಾರೆ ‘ಚೆಲುವೆ’ನಿನ್ನನ್ನೇ ನೀನು ನಂಬದಂತೆ ಭ್ರಮೆ ಹುಟ್ಟಿಸಲಾಗುತ್ತದೆ ಎಚ್ಚರದಿಂದಿರು ********
ಪುಸ್ತಕ ಸಂಗಾತಿ
ಮಕ್ಕಳಿಗಾಗಿ ನೂರಾರು ಕವಿತೆಗಳು ಕವಿ: ಸೋಮಲಿಂಗ ಬೇಡರಪ್ರಕಾಶನ: ಪಲ್ಲವಿ ಪ್ರಕಾಶನ, ಬೀಳಗಿಪುಟಗಳು: 220ಬೆಲೆ: ರೂ. 175/-ಪ್ರಕಟಿತ ವರ್ಷ: 2019ಕವಿಯ ದೂರವಾಣಿ: 9741637606 ಕಥೆ-ಕಾದಂಬರಿಗಳ ವಿಷಯದ ಹರವು-ಹರಿವು ವ್ಯಾಪಕ ಹಾಗೂ ವಿಶಾಲ. ಆದರೆ ಕವಿತೆಗಳದು ಹಾಗಲ್ಲ. ಅದರ ಕ್ಯಾನ್ವಾಸ್ ಚಿಕ್ಕದು. ಕಡಿಮೆ ಶಬ್ಧಗಳಲ್ಲಿ ಸುಂದರ ಗೇಯತೆ, ಲಯ, ಮಾತ್ರೆಗಳಲ್ಲಿ, ಅಂದದ ಪದಪುಂಜಗಳಲ್ಲಿ ಕವಿತೆ ಕಟ್ಟುವುದು ನಿಜಕ್ಕೂ ಒಂದು ಅದ್ಬುತ ಕುಶಲಕಲೆ. ಅದರಲ್ಲಿಯೂ ಮಕ್ಕಳ ಕವಿತೆಗಳನ್ನು ಸರಳ-ಸುಂದರ ಪದಗಳಲ್ಲಿ ಎಳೆಯ ಮನಸ್ಸಿಗೆ ಸುಲಭವಾಗಿ ಮುಟ್ಟುವಂತೆ ಪದ್ಯ ಬರೆಯುವುದು ಸಹ ಒಂದು ಕಲೆ. ಪರಕಾಯ ಪ್ರವೇಶಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮುಖದಲ್ಲಿ ಹೊಮ್ಮುವ ಭಾವಗಳನ್ನು ಕವಿತೆಯಾಗಿಸುವಲ್ಲಿ ಬೀಳಗಿಯ ಶಿಕ್ಷಕ ಸಾಹಿತಿ ಶ್ರೀ. ಸೋಮಲಿಂಗ ಬೇಡರ್ ಅವರು ಸಿದ್ಧಹಸ್ತರು. 2019ರಲ್ಲಿ ಇವರು ಹೊರತಂದ “ಮಕ್ಕಳಿಗಾಗಿ ನೂರಾರು ಕವಿತೆಗಳು” ಎಂಬ ಚಿಣ್ಣರ ಕವನ ಸಂಗ್ರಹ ಬಾಲಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆ. ನಿಸರ್ಗದ ರಮಣೀಯತೆ, ಬಿಸಿಲು-ಮಳೆ, ಆಪ್ಪ-ಅಮ್ಮ, ಹಬ್ಬ-ಹರಿದಿನಗಳು, ನಾಡು-ನುಡಿ, ಸಂಸ್ಕ್ರತಿ ಹೀಗೆ ಹತ್ತು-ಹಲವು ವಿಚಾರಗಳು ಅಂದದ ಪದಗಳಲ್ಲಿ ಚಂದದ ಕವಿತೆಗಳಾಗಿ ಇಲ್ಲಿ ಒಡಮೂಡಿವೆ. ಇಲ್ಲಿರುವ 106 ಕವಿತೆಗಳಿಗೆ ತಕ್ಕಂತೆ ಸುಂದರ ರೇಖಾಚಿತ್ರಗಳನ್ನು ಬಿಡಿಸಲಾಗಿದ್ದು ಅವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಹಿರಿಯ ಮಕ್ಕಳ ಸಾಹಿತಿ ದಿ.ಚಂದ್ರಕಾಂತ ಕರದಳ್ಳಿ ಅವರ ಸಹೃದಯತೆಯ ಮುನ್ನುಡಿ ಹಾಗೂ ಕವಿ ವೈ.ಜಿ.ಭಗವತಿ ಅವರ ಆಪ್ತತೆಯ ಬೆನ್ನುಡಿ ಕೃತಿಗೆ ಶೋಭಾಯಮಾನವಾಗಿದೆ. ನೀಲಾಗಸದಲ್ಲಿ ಸಾಗುವ ಹಕ್ಕಿಬಳಗ ಕಂಡು ಕವಿಹೃದಯವು ‘ಗಗನದ ಮಡಿಲಲಿ ತೇಲುತ ಹೊರಟಿವೆ ಹಕ್ಕಿಗಳಾ ಹಿಂಡು ಸೃಷ್ಠಿಗೆ ಚೆಲುವನು ಹೊಮ್ಮುತ ನಡೆದಿವೆ ರೆಕ್ಕೆಗಳಾ ಬಡಿದು’ ಎನ್ನುತ್ತಾ ಖುಷಿಪಡುತ್ತಾರೆ. ಕನ್ನಡ ನಾಡು-ನುಡಿಯ ಅಭಿಮಾನಿಯಾಗಿ ಕವಿಯು ‘ಕನ್ನಡ ನಾಡಿನ ಚಿಣ್ಣರು ನಾವು ಕನ್ನಡ ಗುಡಿಯನು ಬೆಳಗುವೆವು ಕನ್ನಡ ನುಡಿಯನು ಆಡುತ ನಾವು ಕನ್ನಡ ಕೀರ್ತಿಯ ಮೆರೆಸುವೆವು’ ಎಂದು ಕನ್ನಡಾಂಬೆಯ ಬಗೆಗೆ ಸೊಗಸಾದ ಗೀತೆ ರಚಿಸಿದ್ದಾರೆ. ಮಕ್ಕಳಿಗೆ ಹಬ್ಬಹರಿದಿನಗಳನ್ನು ಪರಿಚಯಿಸುವ ಕವಿಮನವು ‘ದೀಪ ದೀಪವ ಬೆಳಗಿವೆ ಒಲುಮೆಯಾರತಿ ಹಿಡಿದಿವೆ ಇಳೆಗೆ ಒಳಿತನು ಬಯಸಿವೆ ಇಂದ್ರ ಲೋಕವ ಸೃಷ್ಠಿಸಿವೆ’ ಎನ್ನುತ್ತಾ ಬೆಳಕಿನ ಹಬ್ಬ “ದೀಪಾವಳಿ”ಯ ವೈಭವವನ್ನು ಕಟ್ಟಿಕೊಡುತ್ತಾರೆ. ‘ಮಮ್ಮಿ ಅಂದ್ರೆ ಖುಷಿ ಅಮ್ಮ ಅಂದ್ರೆ ಕಸಿವಿಸಿ ಅನ್ಬೇಕಂತೆ ಮಮ್ಮಿ ಮಾಡೋದಿಲ್ಲ ಕಮ್ಮಿ ಯಾಕಿಂಗಾತು ನಂಪಾಡು ಬದಲಾಗಿದ್ದಾಳೆ ಅವ್ವ!!’ ಎನ್ನುವ ಕವಿತೆಯಲ್ಲಿ ಕವಿಯು ಹೊಸ ಜಗತ್ತಿನ ಬದಲಾವಣೆಗಳನ್ನು ಮಗುವಿನ ಮನದಲ್ಲಿ ಮೂಡುವ ಪ್ರಶ್ನೆಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಖಾಸಗಿ ಶಾಲೆಗಳ ವೈಭವಿಕರಣದ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಮಹತ್ವವನ್ನು ಸಾರುವ ಈ ಸಾಲುಗಳು ‘ಚಿಣ್ಣರ ಕನಸಿಗೆ ಬಣ್ಣವ ತುಂಬುವ ಚಿನ್ನದ ಕುಲುಮೆಗಳು ಹಿಗ್ಗಿನ ಬುಗ್ಗೆಯ ಚಿಮ್ಮುತ ಕಲಿಸುವ ಬತ್ತದ ಒರತೆಗಳು’ ಎನ್ನುವಾಗ ನಾವು ಕಲಿತ ಪ್ರಾಥಮಿಕ ಶಾಲೆಯ ನೆನಪುಗಳನ್ನು ಮರುಕಳಿಸುತ್ತವೆ. ದೇವರಿಗಿಂತಲೂ ಮಿಗಿಲಾದ ‘ಅಪ್ಪ-ಅಮ್ಮ’ ಭೂಲೋಕದ ನಿಜದೈವಗಳು ಇಲ್ಲಿ ಕವಿಯು ‘ಅಮ್ಮನ ನುಡಿಯು ಅಪ್ಪನ ನಡೆಯು ಸತ್ಯಕ್ಕೂ ಮಿಗಿಲು ಅಮ್ಮನ ಪೂಜೆ ಅಪ್ಪನ ಸೇವೆ ದೈವಕ್ಕೂ ಮಿಗಿಲು’ ಎಂಬ ಹಾಡು ಹೃದಯಂಗಮವಾಗಿದೆ. ಋತುಮಾನಕ್ಕೆ ತಕ್ಕಂತೆ ಬದಲಾಗುವ ಕಾಲಮಾನದಲ್ಲಿ ಬೇಸಿಗೆಯ ‘ಬಿಸಿಲ ಧಗೆ’ ಕಂಡ ಮಗು ‘ನಡೆಯುತಿರಲಿ ಆಡುತಿರಲಿ ಏನು ದಾಹವು ಬಿಸಿಲ ಧಗೆಗೆ ಬೆವರುತಿಹುದು ನನ್ನ ದೇಹವು’ ಎಂದು ಪರಿತಪಿಸುತ್ತದೆ. ಹೀಗೆ ವಿಭಿನ್ನ ವಸ್ತು-ವೈವಿಧ್ಯದ ಮಕ್ಕಳಿಗಾಗಿ ಬರೆದ ನೂರಾರು ಕವಿತೆಗಳು ಚಿಣ್ಣರ ಮನಸೂರೆಗೊಳ್ಳುತ್ತವೆ. ಈಗಾಗಲೇ ಇಲ್ಲಿನ ಬಹುತೇಕ ಕವಿತೆಗಳು ನಾಡಿನ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಈಗಾಗಲೇ ‘ಮುತ್ತಿನ ಮಳೆ’, ‘ಮುದ್ದಿನ ಹಕ್ಕಿ’, ‘ಹಕ್ಕಿ ಗೂಡು’, ‘ಸುಡುತ್ತಿದ್ದಾನೆ ಸೂರ್ಯ’ ಹಾಗೂ ‘ಬಂಗಾರ ಬಣ್ಣದ ಹಕ್ಕಿ’ ಎಂಬ ಐದು ಕೃತಿಗಳನ್ನು ಪ್ರಕಟಿಸಿ ಓದುಗರ ಮೆಚ್ಚುಗೆ ಗಳಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಇವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂಬುದು ನಮ್ಮ ಸದಾಶಯ. ********** ಬಾಪು ಖಾಡೆ
ಅನುವಾದ ಸಂಗಾತಿ
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು ಮೂಲ: ನೋಷಿ ಗಿಲ್ಲಾನಿ(ಉರ್ದು) ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದುನಿನ್ನೊಡನೆ ಸ್ನೇಹ ಕುದುರಿಸುವಷ್ಟೇ! ಸ೦ಪೂರ್ಣ ಹೊಸ ಕಥೆಯೆ ಇರಬಹುದುದಯವಿಟ್ಟು ವಿಷಯಕ್ಕೆ ಬಾ. ಈ ನೆರಳುಗಳಲ್ಲಿ ನಾ ಮುಳುಗಬಹುದುದಯವಿಟ್ಟು ಬೆಳಗು ನಿನ್ನ ಕಣ್ಣ ದೀವಿಗೆಯ! ನಿನ್ನ ದುಃಖವನ್ನರಿಯದೇ ಇದ್ದರೂನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ ನನಗೆ. ಹೃದಯ ಹಿ೦ಡಿ ಕೊಡ ಬೇಕು ರಕ್ತ!ನೋಡು, ಬರೆಯ ಬೇಡ ಪದ್ಯ! ಈ ಎಲ್ಲ ಅರ್ಥಗಳನ್ನುನಿರಾಕರಿಸುವುದುಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ! *********** ಮೇಗರವಳ್ಳಿ ರಮೇಶ್









