ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್ ಜುಗಲ್

ಗಝಲ್ ಜುಗಲ್ ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ ಶ್ರೀದೇವಿ ಕೆರೆಮನೆ ಗಿರೀಶ್ ಜಕಾಪುರೆ ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ) ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯುಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲುಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ ನಿನ್ನ ನೆನಪಿನ ಗರಿಕೆ ಹುಲ್ಲಿನ ಚಿಗುರುಶರದೃತುವಿಗೆ ಆವರಿಸಿ ಮೈ ನಡುಗಿಸುವ ತಂಗಾಳಿಯಂತೆ ನನ್ನ ದನಿಗೆ ನನ್ನ ದನಿಯು ಸುತ್ತೆಲ್ಲ ಹರಡಿದೆ ಎದೆಕೋಟೆಯ ಬತ್ತಲಾರದ ಬಯಕೆಯಂತೆ ಸುರುಗಿಯ ಸಮ್ಮೋಹನಬದುಕಿನ ಪ್ರತಿಕ್ಷಣದಲ್ಲೂ ಜೀವದೃವ್ಯ ಚಿಮ್ಮಿದಂತೆ ನನ್ನ ದನಿಗೆ ನಿನ್ನ ದನಿಯು ಮಥುರೆಯೊಂದಿಗೆ ತೊರೆದು ಹೋದ ಕೃಷ್ಣನಿಗಾಗಿ ಜೀವಮಾನವಿಡಿ ಕಾತರಿಸಿದಳು ರಾಧೆನವಿಲುಗರಿಯ ಸಾವಿರ ಎಳೆಗಳ ನವಿರಾದ ಸ್ಪರ್ಶದಂತೆ ನನ್ನ ದನಿಗೆ ನಿನ್ನ ದನಿಯು ಸಪ್ತಸಾಗರಗಳಿದ್ದರೂ ಪಾಲ್ಗಡಲ ಬೆಳ್ನೊರೆಯೇ ಬೇಕಂತೆ ಲಕ್ಷ್ಮಿಕಾಂತ ಹರಿಗೆಶಿವನ ರುದ್ರ ಡಮರುಗದ ಅಬ್ಬರಿಸುವ ಅಲೆಯ ನಿನಾದಂತೆ ನನ್ನ ದನಿಗೆ ನಿನ್ನ ದನಿಯು ಸುರೆಯಲ್ಲೇ ಮುಳುಗಿರುವ ದೇವಲೋಕದ ಅಧಿಪತಿಗೆ ಅಮರಾವತಿಯೂ ಬೇಸರವಂತೆಗಸಗಸೆ ಪಾಯಸದ ಗೋಡಂಬಿಗೆ ನಶೆಯೇರಿದ ಅಮಲಂತೆ ನನ್ನ ದನಿಗೆ ನಿನ್ನ ದನಿಯು ಅಳುವ ಮಗುವಿನ ದನಿಗೆ ಮೈಮರೆತು ರಮಿಸಿ ಮುದ್ದಿಸುವ ನಿನ್ನ ಹಳೆಯ ಚಾಳಿ ಬಿಡು ಅಲ್ಲಮಮಗುವಿನ ಅಳುವಿನಲ್ಲಿರುವ ಸಪ್ತಸ್ವರದ ನಿನಾದದಂತೆ ನನ್ನ ದನಿಗೆ ನಿನ್ನ ದನಿಯು ಕಾತರಿಸುತಿದೆ ನಿದ್ದೆಯಿರದ ಕಮಲ ಸೂರ್ಯನಿಗೆ, ನೈದಿಲೆಯ ನೆತ್ತಿಗೀಗ ವಿರಹದ ಉರಿನಸುಕಿನ ಸೂರ್ಯನ ಎಳಸು ಕಿರಣಕೆ ನಾಚುವ ಇಬ್ಬನಿಯಂತೆ ನನ್ನ ದನಿಗೆ ನಿನ್ನ ದನಿಯು ಸಿರಿ, ಆಗದಿರುವುದಕೆ ಮರುಗುವ ಬದಲು ಪಾಲಿಗೆ ಬಂದಿದ್ದನ್ನು ಸಂತಸದಲಿ ಒಪ್ಪಿಕೊಒಮ್ಮೆಯೂ ಸೇರದ ಎಂದಿಗೂ ಅಗಲದ ರೈಲು ಹಳಿಯಂತೆ ನನ್ನ ದನಿಗೆ ನಿನ್ನ ದನಿಯು ನನ್ನ ದನಿಗೆ ನಿನ್ನ ದನಿಯು (ಗಿರೀಶ ಜಕಾಪುರೆ) ಮಧುರ ಮದಿರಿಗೆ ಅಧರ ಮಧು ಬೆರೆಸಿದಂತೆ ನನ್ನ ದನಿಗೆ ನಿನ್ನ ದನಿಯುನೆಲದ ಕುಸುಮಕೆ ಮುಗಿಲ ಘಮ ಸುರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಜಗದ ರೀತಿ ರಿವಾಜು ಮುರಿದು ಒಲವಿಗಾಗಿ ಎಲ್ಲೆ ಮೀರಿಗೆ, ಅಪ್ಪಿದೆಕಡಲು ತಾನೇ ಹರಿದು ನದಿ ಸೇರಿದಂತೆ ನನ್ನ ದನಿಗೆ ನಿನ್ನ ದನಿಯು ನಿನ್ನ ಹೆಸರು ಕೇಳಿದೊಡನೆ ಮನಸಿನಲಿ ಹೆಜ್ಜೆ ಗೆಜ್ಜೆಯ ಘಲಿರು ನಾದಒಲವ ಮಿಡಿತ ಎದೆಯಿಂದ ಎದೆಗೆ ಹರಿಸಿದಂತೆ ನನ್ನ ದನಿಗೆ ನಿನ್ನ ದನಿಯು ತಿಳಿಯದಾಗಿದೆ ಈಗ ಯಾವ ಬಿಂಬ ನನ್ನದು ಯಾವ ಬಿಂಬ ನಿನ್ನದುನನ್ನ ದೇಹ ನಿನ್ನ ರೂಪ ಧರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಮಗುವು ತಾಯಿಯ ಹಿಂದೆ ಬರುವಂತೆ ಬಂದೆ ಒಲವ ಸಮ್ಮೋಹಿತನಾಗಿಶಾರೀರ ಶರೀರವ ಅನುಕರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಯಾವ ಜನ್ಮದ ಬಂಧವೂ ಚೆಂಬೆಳಕಾಗಿ ಬಂದು ಕೂಡಿದೆ ಬಾಳಿಗೆಕತ್ತಲಲಿ ನಂದಾದೀಪ ಉರಿಸಿದಂತೆ ನನ್ನ ದನಿಗೆ ನಿನ್ನ ದನಿಯು ನೀನು ಮುಟ್ಟಿದ ಶಿಲೆಗಳಿಂದ ಹೊಮ್ಮುತಿದೆ ಸುರಸಂಗೀತ ಝರಿಯಾಗಿಬರೀ ಸ್ಪರ್ಶದಿಂದ ಗಾಯ ಭರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಯಾವ ಪ್ರಹರದಲೂ ಮರೆತಿಲ್ಲ ಮಾಯೆ ‘ಅಲ್ಲಮ’ ಒಬ್ಬರನೊಬ್ಬರುಬೇಟವು ಬೇಟೆಗಾರನ ಸ್ಮರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಇದು ಶ್ರೀದೇವಿ ಕೆರೆಮನೆ ಹಾಗೂ ಗಿರೀಶ್ ಜಕಾಪುರೆಯವರು ಬರೆದ ಗಜಲ್ ಜುಗಲ್ ನನ್ನ ದನಿಗೆ ನಿನ್ನ ದನಿಯು ಸಂಕಲನದ ಶೀರ್ಷಿಕಾ ಗಜಲ್‌ಗಳು. ಇಲ್ಲಿ ಶ್ರೀದೇವಿ ಕೆರೆಮನೆಯವರು ೩೮ ಮಾತ್ರೆ ಬಳಸಿದ್ದರೆ, ಗಿಋಈಶ್ ಜಕಾಪುರೆಯವರು ೩೦ ಮಾತ್ರೆ ಬಳಸಿ ಬರೆದಿದ್ದಾರೆ. ಈ ಗಜಲ್‌ಗಳ ವೈಶಿಷ್ಟ್ಯತೆ ಏನೆಂದರೆ ಇಬ್ಬರೂ ಪರಸ್ಪರರ ತಕಲ್ಲೂಸ್‌ನ್ನು ತಮ್ಮ ಗಜಲ್‌ಗಳಲ್ಲಿ ಬಳಸಿಕೊಂಡಿದ್ದಾರೆ. ಅಳುವ ಮಗುವಿನ ದನಿಗೆ ಮೈಮರೆತು ರಮಿಸಿ ಮುದ್ದಿಸುವ ನಿನ್ನ ಹಳೆಯ ಚಾಳಿ ಬಿಡು ಅಲ್ಲಮಮಗುವಿನ ಅಳುವಿನಲ್ಲಿರುವ ಸಪ್ತಸ್ವರದ ನಿನಾದದಂತೆ ನನ್ನ ದನಿಗೆ ನಿನ್ನ ದನಿಯು ಎಂದು ಶ್ರೀದೇವಿಯವರು ಬರೆದಿದ್ದರೆ ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಎಂದು ಗಿರೀಶ ಜಕಾಪುರೆಯವರು ಹೇಳಿದ್ದಾರೆ. ಗಜಲ್ ಪರಂಪರೆಯಲ್ಲಿಯೇ ಇಂತಹುದ್ದೊಂದು ವಿಶಿಷ್ಟ ಪ್ರಯೋಗ ಪ್ರಪ್ರಥಮ ಬಾರಿಗೆ ಬಳಕೆಯಾಗಿದೆ. ಗಜಲ್ ಬರೆಯುವವರಿಗೆ ಇವು ಅಭ್ಯಾಸಕ್ಕೆ ಯೋಗ್ಯವಾದ ಗಜಲ್‌ಗಳಾಗಿವೆ

ಗಝಲ್ ಜುಗಲ್ Read Post »

ಕಾವ್ಯಯಾನ

ನಿವೇದನೆ…

ಕವಿತೆ ಹರೀಶ ಕೋಳಗುಂದ ಹೌದು…ನನಗೆ ಗೊತ್ತುನೀ ನನ್ನ ಪಕ್ಕದಲ್ಲೇ ಕುಳಿತಿರುವೆಸುಳ್ಳು ಹೇಳುವುದಿಲ್ಲ ನಾನುಈ ಕಡುಗತ್ತಲಲ್ಲೂ ನಿನ್ನ ಮುಖತಿಳಿನೀರ ಬಾವಿಯಲ್ಲಿ ಬಿದ್ದಚಂದಿರನ ಬಿಂಬವೆಂದು ಎಡತಾಕುತ್ತಿದೆ ನನ್ನೆದೆಗೆನಿನ್ನುಸಿರ ಬಿಸಿನಿನ್ನೆದೆಬಡಿತದ ಸದ್ದುನೀ ತೊಟ್ಟ ಕೈ ಬಳೆಯ ಘಲುಗುಮುಡಿದ ಮಲ್ಲಿಗೆಯ ಘಮಲು ಹೊತ್ತು ಉರುಳುತ್ತಿದೆಅರಿವೇ ಇಲ್ಲಏನೋ ಹೇಳುವ ಬಯಕೆತುಟಿ ಎರಡಾಗಿಸುವ ಧೈರ್ಯ ಸಾಲದುಕೈ ನಡುಗುತ್ತಿವೆಮೈ ಬೆವರುತ್ತಿದೆಎದೆಯೊಳಗೆ ಅಸ್ಪಷ್ಟ ಆತಂಕ ನೆನಪಿರಬಹುದು ನಿನಗೆನಾ ನಿನ್ನ ಮೊದಮೊದಲು ಕಂಡಾಗನೀ ನನ್ನ ಕಂಡೂ ಕಾಣದಂತೆನೋಡಿಯೂ ನೋಡದಂತೆಕಣ್ಣು ಹಾಯಸಿದಷ್ಟೂದೂರ ಕಾಣುವ ಮರೀಚಿಕೆಯಂತೆಕಣ್ಣಿಗೆ ಬಿದ್ದುಕೈಗೆ ಸಿಗದ ಮಾಯಾಜಿಂಕೆಯಂತೆಮರೆಯಾದದ್ದು ಮತ್ತೆಲ್ಲೋ ನಿನ್ನ ಹುಡುಕಿದಾಗಪಿಸುಗುಡುವ ರಾತ್ರಿಗಳಲಿತೆರೆದ ಕಿಟಕಿಯಾಚೆ ಮೊರೆವ ಕನಸುಗಳಂತೆಕರಿಮಲೆಯ ಬೆನ್ನಲ್ಲಿನ ನಿಚ್ಛಳ ನೀಲಾಕಾಶದಂತೆನಿನ್ನೊಲುಮೆಯ ಕುರುಹು ಸಿಕ್ಕಿದ್ದು ಈಗೀಗ ನನ್ನ ಪಾಲಿಗೆನಿನ್ನೊಲವಿನ ಜಲಪಾತದಲ್ಲಿಎಳೆ ಮೀನಾಗಿ ಈಜುವ ತವಕನಿನ್ನ ಸಾನಿಧ್ಯದಲಿನಾ ನನ್ನ ಸಂಪೂರ್ಣ ಕಳೆದುಕೊಂಡುಮತ್ತೊಮ್ಮೆ ಪಡೆದುಕೊಂಡುನಿನ್ನರ್ಧವೇ ಆಗಿ ಪರಿಪೂರ್ಣನಾಗುವ ತಹತಹಿಕೆಜ್ವರದುರಿಯಲ್ಲಿ ಕುದಿವ ಮಗುತಾಯ್ಮೊಲೆಗೆ ಕನವರಿಸುವಂತೆನಿನ್ನ ಹೆಸರ ಕರೆವಾಸೆಹೊಸಮಳೆಗೆ ಹದಗೊಂಡ ಮಣ್ಣಿನೆದೆಯ ಮೇಲೆಬಿದ್ದು ಬೇರೂರಿದ ಈ ಉಳಿಜಾಲಿಜಡಗೊಂಡು ಮುದಿ ಕೊರಡಾಗುವವರಗೆನಿನ್ನ ಸಾಂಗತ್ಯದಲಿನಿನ್ನ ನಿಷ್ಕಲ್ಮಶ ಪ್ರೇಮದುರಿಯಲಿದಹಿಸುವ ಬಯಕೆನಿನ್ನ ಮಡಿಲ ತೆಕ್ಕೆಯಲಿ ಬೆಚ್ಚಗೆ ಒರಗಿಕಣ್ಮುಚ್ಚುವ ಹಂಬಲ ******

ನಿವೇದನೆ… Read Post »

ಅನುವಾದ

ವಿಚಾರವೇನೆಂದರೆ…

ಅನುವಾದಿತ ಕವಿತೆ ಮೂಲ ಇಂಗ್ಲೀಷ್: ಹೆಲೆನ್ ಬ್ಯಾಸ್ ಕನ್ನಡಕ್ಕೆ: ಅಶ್ವಥ್ ಬದುಕ ಪ್ರೀತಿಸುವುದು,ಹಂಬಲವಿಲ್ಲವೆನಿಸಿದಾಗಲೂ,ಆಪ್ತವಿದ್ದೆಲ್ಲವೂ ಉರಿದು ಬೂದಿಯಾಗಿಕೈಗಂಟುವ ಧೂಳಿನಂತಾದರೂಆ ಬೂದಿಯ ಕೆಸರುಗಂಟಲಿಗಿಳಿದು ಬಿಗಿದಾಗಲೂಬದುಕ ಪ್ರೀತಿಸುವುದು. ಕೊರಗು ನಿನ್ನ ಬಳಿಯೇ ಕುಳಿತಿರುವಾಗಲೂಅದರ ಬೇಸಿಗೆಯುರಿ, ಗಾಳಿಯನು ನೀರಾಗಿಸಿ,ಒಲೆಮೇಲೆ ಕುದಿವಂತೆ ಬೊಬ್ಬುಳಿ ತರಿಸಿನಿನ್ನುಸಿರಿಗೆ ತಾಕಿಸಿದಾಗಲೂ,ಅದೇ ಕೊರಗು ನಿನ್ನದೇ ಮಾಂಸಖಂಡಗಳಂತೆಭಾರವೆನಿಸಿ, ಉಲ್ಪಣಗೊಂಡು,ಕೊರಗಿನದೇ ಸ್ಥೂಲಕಾಯವಾದಾಗಲೂದೇಹವಿದೆಲ್ಲವನು ಹೇಗಾದರೂ ಸಹಿಸೀತು? ಅದುಕೊಳ್ಳುತ್ತಲೇಮುದ್ದಾದ ನಗುವಿರದ, ನೀಲಗಣ್ಣುಗಳಿರದಆಡಂಬರವಿರದ ಸಾಮಾನ್ಯ ಮುಖದಂತೆಬದುಕನೊಮ್ಮೆ ಅಂಗೈಗಳ ನಡುವೆ ಹಿಡಿದುಹೇಳಿಬಿಡು ಖಚಿತ, ನಾನಿನ್ನ ಸ್ವಾಗತಿಸುತ್ತೇನೆನಾನಿನ್ನ ಪ್ರೀತಿಸುತ್ತೇನೆ, ಮತ್ತೊಮ್ಮೆ ಎಂದು. **************

ವಿಚಾರವೇನೆಂದರೆ… Read Post »

ಇತರೆ, ಲಹರಿ

ಹೆಣ್ಣುಮಕ್ಕಳ ಓದು

ಲಹರಿ ವಸುಂಧರಾ ಕದಲೂರು ಒಂದು ತಮಾಷೆಯ ಲಹರಿ…     ಹೆಣ್ಣು ಮಕ್ಕಳು ಓದು ಬರಹ ಕಲಿಯೋದು ಏಕೆ? ಅವರು ಯಾವ ಸಾಮ್ರಾಜ್ಯ ಕಟ್ಟಬೇಕು? ಯಾರನ್ನ ಉದ್ಧಾರ ಮಾಡಬೇಕು? ಇವೇ ಇಂತಹವೇ ನೂರು ಪ್ರಶ್ನೆಗಳು ಹುಟ್ಟಿಕೊಳ್ತವೆ.    ಇಂಥ ಪ್ರಶ್ನೆಗಳು ಈಗ ಹೆಚ್ಚು ಇರಲಾರದು ಬಿಡಿ. ಆದರೂ ಲೇಖನಿ ಹಿಡಿದರೂ, ಕೀಲಿಮಣೆ ಕುಟ್ಟಿದರೂ ಮುಸುರೆ ತಿಕ್ಕೋದು, ತೊಟ್ಟಿಲು ತೂಗೋದು ನಿಮಗೆ ತಪ್ಪಿದ್ದಲ್ಲ ಎಂದು ಕೊಂಕು ರಾಗ ಹಾಡುವವರಿಗೇನೂ ಕಮ್ಮಿಯಿಲ್ಲ.    ಅಲ್ಲಾ ಇವರೇ.., ನಮ್ಮ ಮನೆ ಪಾತ್ರೆ ಪರಡೆಗಳನ್ನು ನಾವು ತೊಳೆದು ಸ್ವಚ್ಛ ಮಾಡಿಕೊಳ್ಳೋದ್ರಲ್ಲಿ ಏನು ತಪ್ಪಿದೆ ಹೇಳಿ? ಕೆಲಸಕ್ಕೆ ಹೊರಗೆ ಹೋಗಿ ಬಂದು ಮನೇಲಿ ಅಚ್ಚುಕಟ್ಟು ಮಾಡಬಾರದು ಅಂತ ಇದೆಯೇ? ಇಲ್ಲಾ ನಾಕಾರು ಅಕ್ಷರ ಕಲಿತರೆ ಮಕ್ಕಳನ್ನು ಹೆರಬಾರದು ಎಂದು ಎಲ್ಲಾದರೂ ಕಾನೂನಾಗಿದೆಯೇ?    ಒಟ್ಟಿನಲ್ಲಿ ಜನಕ್ಕೆ ಹೇಗಿದ್ದರೂ ತಪ್ಪೇ… ಅವರಿಗೆ ಕಂಡವರನ್ನು ಮೂದಲಿಸದೇ ಇರಲಾಗದು. ಇತರರನ್ನು ಎತ್ತಾಡದೇ ಹೋದರೆ ತಿಂದದ್ದೂ ಜೀರ್ಣವಾಗದು. ಕಲಹ ಪ್ರಿಯರು ಮೊಸರಲ್ಲಿ ಕಲ್ಲು ಹುಡುಕೀ ಹುಡುಕಿ, ಅದು ಸಿಗದೇ ಹೋದಾಗ ತಾವೇ ನಾಕಾರು ಬೆಣಚು ಚೂರು ಹಾಕಿಬರುವಷ್ಟು ಮಟ್ಟಿಗೆ ಕೆಟ್ಟಿರುತ್ತಾರೆ.   ಈಗಂತೂ ಮನೇಲಿ ಕೂರುವವರಿಗಿಂತಲೂ ಹೊರಗೆ ಒಂದಿಲ್ಲೊಂದು ಕೆಲಸಕ್ಕೆ ಹೋಗಿ ಬರುವವರೇ ಹೆಚ್ಚು. ಹಳ್ಳಿಯಿರಲಿ, ಪಟ್ಟಣವಿರಲಿ ವಿದ್ಯೆ ಕಲಿಯುವುದಕ್ಕೆ ಹಿಂದಿನಂತೆ ಅಡ್ಡಿ ಆತಂಕಗಳ ಹರ್ಡಲ್ಸ್ ಹೆಚ್ಚು ಇಲ್ಲ. ಹಾಗಾಗಿ ಹೆಣ್ಣುಮಕ್ಕಳು ವಿದ್ಯಾವತಿಯರಾಗುವ ನಾಗಾಲೋಟಕ್ಕೆ ತಡೆಯಂತೂ ಸಧ್ಯಕ್ಕಿಲ್ಲ.    ಆದರೂ ಒಂದು ಸಂದೇಹ ಯಾವಾಗಲೂ ಕಾಡುತ್ತಿರುತ್ತದೆ.     ಏಕೆ ಹಿಂದಿನವರು ಮಹಿಳೆಯರನ್ನು ಓದುವ, ಕಲಿಯುವ ಅಪೂರ್ವ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದ್ದರು ಎಂದು..?!      ಈಗಿನಂತೆ ಸೈನ್ಸು, ಕಾಮರ್ಸು, ಆರ್ಟ್ಸು ಎಂದೆಲ್ಲಾ ಹೆಚ್ಚೇನು ಪಠ್ಯಶಾಖೆಗಳು ಇರದಿದ್ದ ಕಾಲದಲ್ಲಿ ಏನೇನಿತ್ತು ಓದಲು? ಮಹಾಕಾವ್ಯಗಳೂ, ಕತೆ- ಪುರಾಣಗಳೂ, ವೇದೋಪನಿಷತ್ತುಗಳೂ ಇವೇ ಮೊದಲಾದವು ಅಲ್ಲವೇ?     ವೇದೋಪನಿಷತ್ತು ಕಲಿಯಲು ಅನ್ಯರಿಗೆ ನಿಷಿದ್ಧವಿದ್ದಾಗ ಪುರಾಣ ಕಾವ್ಯಗಳನ್ನಲ್ಲದೇ ವಿದ್ಯಾಕಾಂಕ್ಷಿಗಳಿಗೆ ಮತ್ತೇನು ಕಲಿಸಬೇಕಿತ್ತು? ಅಕ್ಷರಾಭ್ಯಾಸ, ಶ್ಲೋಕಾಭ್ಯಾಸ, ಸಾಮಾನ್ಯ ಲೆಕ್ಕ – ಪುಕ್ಕ ಕಲಿಯುವುದು ಬಿಟ್ಟರೆ ಉಳಿಯುವುದು ಮಹಾಕಾವ್ಯಗಳೇ…    ಅವಾದರೂ ಎಂತಹವು..!? ಲೋಕಪ್ರಸಿದ್ಧವಾದ ರಾಮಾಯಣ – ಮಹಾಭಾರತ; ಅದರ ಉಪಕತೆ – ಪುರಾಣ…   ಇನ್ನು ನಮ್ಮ ಹೆಣ್ಣುಮಕ್ಕಳು ಮಹಾಕಾವ್ಯಗಳನ್ನು ಓದಿ, ಅಭ್ಯಾಸ ಮಾಡಿ ತಿಳಿಯುವುದಾದರೂ ಏನಿತ್ತು ಹೇಳಿ? ಬರಿಯ ಶಂಕೆ, ಅಪಮಾನ, ಸೇಡಿನ ಕಿಡಿ, ಮತ್ಸರ, ಶಪಥ, ತಿರಸ್ಕಾರ, ಅಪಮಾನ, ಅಗಲುವಿಕೆ, ಯುದ್ಧ, ಸಾವು, ನೋವು ಇತ್ಯಾದಿ, ಇತ್ಯಾದಿ, ಇತ್ಯಾದಿ…     ಇಂತಹವನ್ನು ಓದುವ ಬದಲು ಮನೆವಾರ್ತೆಗಳೇ ಮುಖ್ಯ ಎಂದುಕೊಂಡು ಓದಿನತ್ತ ನಮ್ಮ ಹೆಣ್ಣುಮಕ್ಕಳು ಮುಖ ತಿರುಗಿಸಿರಲಿಕ್ಕೂ ಸಾಕು.       ಮನೆ ಕೆಲಸ ಎಂದರೆ ಬರೀ ಅಡುಗೆ, ತೊಳಿ- ಬಳಿ ಅಲ್ಲ. ಅಡುಗೆಗೆ ಪೂರಕ ಸಾಮಾಗ್ರಿಗಳು ಇವೆಯೇ ಎಂದು ನೋಡಿಕೊಂಡು ಅವನ್ನು ಸಿದ್ಧಮಾಡಿಕೊಳ್ಳಬೇಕು. ಏನೇನು ಮಾಡಬೇಕು, ಮಳೆಗಾಲಕ್ಕೆ, ಬೇಸಿಗೆಗೆ, ಚಳಿಗೆ ಹೀಗೆ ಹವಮಾನಕ್ಕೆ ಅನುಕೂಲಕರ ಸಿದ್ಧತೆಯಾಗಿರಬೇಕು. ಹಬ್ಬ ಹರಿದಿನ ಶುಭಕಾರ್ಯ ಇತರೆ ಸಮಾರಂಭಗಳಿಗೆ ತಯಾರಿ ಮಾಡಬೇಕು. ಮಕ್ಕಳು – ಹಿರಿಯರು ಹೊರಗೆ ದುಡಿಯಲು ಹೋಗುವವರ ದೇಖರೇಖಿ ನೋಡಬೇಕು. ಬಂಧು ಬಳಗ, ಅತಿಥಿ ಅಭ್ಯಾಗತರ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕು. ಮನೆವಾರ್ತೆ ಒಂದೇ ಎರಡೇ…!    ಇವೇ ಇಷ್ಟೆಲ್ಲಾ ಇರುವಾಗ ಪುರಾಣ- ಕಾವ್ಯ ಓದಿಕೊಂಡು ಕೂರಲಿಕ್ಕಾಗುತ್ತಿತ್ತೇ? ಅದೇನು ಹೊಟ್ಟೆ ತುಂಬಿಸುತ್ತದೆಯೇ? ನೆತ್ತಿ ಕಾಯುತ್ತದೆಯೇ? ಹಾಗಾಗಿ ಕಲಿಯಲು ನಮ್ಮ ಹೆಣ್ಣು ಮಕ್ಕಳೂ ಅಸಡ್ಡೆ ಮಾಡಿರಬಹುದು ಬಿಡಿ.       ಇಲ್ಲಾ ಏನಿದೆ ಇದರೊಳಗೆ ಎಂದು ಗುರುಗಳ ಗರಡಿಗೆ ಕಲಿಯಲು ಹೋದವರಿಗೆ ಹೆಣ್ಣುಗಳನ್ನು ಕಾವ್ಯದೊಳಗೆ ಇನ್ನಿಲ್ಲದಂತೆ ಅಬಲೆಯರೂ, ಹೊಟ್ಟೆಕಿಚ್ಚಿನವರೂ, ಯುದ್ಧ ಕಾರಣರೂ, ತಂದು ಹಾಕುವವರೂ, ಕಲಹ ಪ್ರಿಯರೂ ಹೀಗೆ ಚಿತ್ರಿಸಿರುವುದನ್ನು ಕಂಡು ಕೋಪಗೊಂಡು ಇದೇಕೆ ಹೀಗೆ..?! ಎಂದು ಮಾತಿನ ಚಕಮಕಿಯಾಗಿ ವಾದವಿವಾದ ತಾರಕಕ್ಕೆ ಹಚ್ಚಿಕೊಂಡಿರಬಹುದು.      ಹಾಗಾಗಿ ಇದೆಲ್ಲಾ ಬೇಡಬಿಡು, ಚೆನ್ನಾದ ವಿಚಾರಗಳು ಕಲಿಯುವ ಸಂದರ್ಭ ಬಂದಾಗಲೇ ನಾವು ಓದುವ ಬಗ್ಗೆ ಚಿಂತಿಸೋಣ ಎಂದು ನಮ್ಮ ಹೆಣ್ಣುಮಕ್ಕಳು ವಿಚಾರ ಮಾಡಿರಬೇಕು.   ಹಾಗಾಗಿಯೇ ಆಧುನಿಕ ವಿದ್ಯಾಭ್ಯಾಸ ಕ್ರಮ ಜಾರಿಗೆ ಬಂದು ಕಲೆ, ವಿಜ್ಞಾನ, ವಾಣಿಜ್ಯ ವಿಚಾರಗಳು ಓದುವ ರೂಢಿ ಬೆಳೆದು ಬಂದ ಮೇಲೆಯೇ ನಮ್ಮ ಹೆಣ್ಣುಮಕ್ಕಳು ಓದಿನಲ್ಲಿ ಮೇಲುಗೈ ಸಾಧಿಸಿರುವುದು…  ಇದು ನನ್ನ ಒಂದು ವಿಚಾರವಷ್ಟೇ… ಸತ್ಯಕ್ಕೆ ಹಲವು ಮಗ್ಗಲುಗಳಿವೆ. – —

ಹೆಣ್ಣುಮಕ್ಕಳ ಓದು Read Post »

ಇತರೆ, ಜೀವನ

ಬದುಕು ಕಠೋರ

ಅನುಭವ ನಾಗರಾಜ ಮಸೂತಿ ಇವತ್ತು ಬದುಕು ಬಹಳ ಕಠೋರ ಅನಿಸ್ತು. ನಾವೆಲ್ಲ ಮನೆ ಮುಂದಿನ ಗೇಟ್ ಕೂಡ ದಾಟದ ಹಾಗೆ ಮನೆಯಲ್ಲಿಯೇ ಕೂತಿವಿ. ಹಳ್ಳಿ ಹೆಣ್ಣು ಮಗಳು ಮೊಸರು ಮಾರ್ತಾ ಮನೆ ಬಾಗ್ಲಿಗೆ ಬಂದ್ಲು. ನಮವ್ವಗ ಒಂದು ಒಳ್ಳೆ ಅಭ್ಯಾಸ ಏನಂದ್ರ ಯಾರೇ ಬರ್ಲಿ ಕರದ ಕುಂಡರ್ಸಿ ನೀರ ಕೊಟ್ಟ ಮಾತಾಡ್ಸುದು. ವ್ಯಾಪಾರ ಎರಡನೆ ಮಾತು. ಇದು ನಮ್ಮ ಮನೆ ಮಂದಿಗೆ ಹಿರೆರಿಂದ ಬಂದ ಬಳುವಳಿ. ಇರ್ಲಿ ಹಾಂ ಮೊಸರ ಮಾರಕ ಬಂದಾಕಿ ಮಸರು ಕೊಟ್ಲ ರೊಕ್ಕಾನು ತಗೊಂಡು ಕಥೆ ಹೇಳಾಕ ಸುರು ಮಾಡಿದ್ಲ. ಬಾಗಲಕೋಟಿ ಹತ್ರ ಪಕ್ಕದ ಹಳ್ಳಿ ಆಕೆದು . ಕಾಯಿಪಲ್ಯ, ಮೊಸರ, ಹಾಲ ಮಾರೊರು ಎಂಟತ್ತ ಮಂದಿ ಸೇರಿ ಟಾಟಾ ಎಸಿ ಗಾಡಿ ಬಾಡಗಿ ಮಾತಡ್ಕೊಂದ ಬಂದಾರ. ಇಲ್ಲಿ ನವನಗರದಾಗ ಎಲ್ಲೀ ವ್ಯಾಪರಕ್ಕ ಬಿಡವಲ್ಲರು.  ಕೊರೊನಾ ಬಂದೈತಿ ಅಂತ ಹೇಳಿ ಪೋಲಿಸರ ಮುಂಜ ಮುಂಜಾನೆ ಲಾಠಿ ಏಟ್ ಕೊಡಾಕ ಸುರು ಮಾಡ್ಯರಬೆ ಎವ್ವ, ಬುಟ್ಯಾಗಿನ ಕಾಯಿಪಲ್ಯ ಚೆಲ್ಲಾಕತ್ತಾರ, ಗಡಿಗ್ಯಾಗಿನ ಮಸೂರ ಚೆಲ್ಲಿದ್ರ. ಒಬ್ಬ ಗನಮಾಗ ಬಂದ ಕೇಳಿದ ಬೆಣ್ಣಿ ಇತ್ತಬೆ ಅರ್ಧ ಕಿಲೋ ಕೊಟ್ಟ್ಯಾ ಪೋಲಿಸ್ ಬಂದ್ರ ಹಂಗ ಓಡಿ ಹೋದನಬೇ. ರೊಕ್ಕಾನು ಕೊಡ್ಲಿಲ್ಲ, ಡಬ್ಬಿನ ಒಯ್ದಾಬೇ. ಎಡ್ನೂರು ಮುನ್ನೂರ ರೂಪಾಯಿಬೇ ಎವ್ವಾ, ಏನ್ ಮಾಡಬೇಕ ನೋಡ. ಅವ್ವಗ ತಡ್ಯಾಕಾಗಲಿಲ್ಲ ಬೈದ್ಲು ಮನಸು ಹಗರು ಮಾಡ್ಕೊಂಡಳು. ಮೊಸರ ಮಾರಾಕಿಗಿ ಸಮಾಧಾನ ಮಾಡಿದ್ಲ. ಎವ್ವ ಈ ಗಲಾಟ್ಯಾಗ ಯಾಕ್ ಬರ್ತಿ ಸುಮ್ಮನ ಮನ್ಯಾಗ್ ಇರ್ಬಾರ್ದ ಅಂದ್ಲ್. ಎಷ್ಟೇ ಆಗಲಿ ಹಳೆ ಮನುಷ್ಯಾರ ಒಬ್ಬರ ಕಷ್ಟ ತಮ್ಮ ಕಷ್ಟ ಅನ್ನುವಷ್ಟರ ಮಟ್ಟಿಗೆ ಅವರ ಪ್ರತಿಕ್ರಿಯೆ ಇರುತ್ತ. ಅಷ್ಟಕ್ಕ ಸುಮ್ಮನಾಗಲಾರದ ಮೊಸರ ಮಾರೊ ಹಳ್ಳಿ ಹೆಣ್ಣು ಮಗಳು ಒಳ್ಳೆಯದಷ್ಟ ಗೊತ್ತ , ಯಾರಾರ ಏನರ ಅಂದ್ರ ಜಗಳ ಮಾಡ್ತಾರ, ಆದರ ಕೆಟ್ಟದ ಬಯಸಾಂಗಿಲ್ಲ. ನಾವು ಮನ್ಯಾಗ ಕುಂತರ ಜನ ಎಲ್ಲಾ ಏನ್ ತಿನಬೇಕಬೇ ಎವ್ವ , ಬೆಳದಿದ್ನ ಕೆಡಿಸಿ ಏನ ಮಾಡುದೈತಿ ಅಲ್ಲನ ಬೇ? ಏನ ಒಂದೀಟು ತ್ರಾಸ್ ಆದಿತ್ತ ಬಂದ ಹೋಗಾಕ ಅಂದ ಬುಟ್ಟಿ ತೆಲಿ ಮ್ಯಾಲಿ ಹೊತ್ತ ಹೊಂಟ್ಲ. ಅವ್ವ ಹೌದು ನೀ ಕರೆಕ್ಟ್ ಅದಿಯವ, ಕಲ್ತವಕ ಬುದ್ಧಿ ಕಡಿಮೆ ಆಗ ಕತ್ತೈತಿ ಏನ್ ಮಾಡುದವ, ಹುಷಾರ್ ಹೋಗವ ಅಂತ ಹೇಳಿ ಕಳಿಸಿದ್ಲ. ಬದುಕು ಕಠೋರ ನಮ್ಮಂತವರಿಗೆ, ಏನು ಅರಿಯದ ಮುಗ್ಧರಿಗೆ ಅಷ್ಟೇ ಸರಳ. *************

ಬದುಕು ಕಠೋರ Read Post »

ಇತರೆ, ಲಹರಿ

ನಾನು ನಾನೇ…..

ಲಹರಿ ರಾಧಿಕಾ ಕಾಮತ್ ಜೀವನ ಒಂದು ಚಲನಚಿತ್ರ… ನಮ್ಮದು ಅದರಲ್ಲಿ ಒಂದೊಂದು ಪಾತ್ರ… ಮೇಲಿರುವ ನಿರ್ದೇಶಕ ಹಿಡಿದಿರುವ ಸೂತ್ರ… ಕೊನೆಗೆ ಎಲ್ಲರೂ ಮರಳಬೇಕು ಅವನ ಹತ್ರ… ಈ ಜೀವನ ಎಂಬ ನಾಟಕ/ ಚಲನಚಿತ್ರದಲ್ಲಿ ನಾವು ಹುಟ್ಟಿನಿಂದ  ಹಲವಾರು ಪಾತ್ರಗಳನ್ನು ನಿಭಾಯಿಸುತ್ತಲೇ ಇರುತ್ತೇವೆ. ಅದು ನಮ್ಮ ಇಷ್ಟದ್ದಾಗಲಿ ಇಷ್ಟವಿಲ್ಲದ್ದಾಗಲಿ ನಾವು ನಿರ್ವಹಿಸಲೇ ಬೇಕು. ನಾನು ಹುಟ್ಟಿದಾಗ ಒಂದೇ ಬಾರಿಗೆ ಮಗಳು ,ಮೊಮ್ಮಗಳು ತಂಗಿ ಎಂಬ ಮೂರು ಪಾತ್ರಗಳನ್ನು ಒಟ್ಟಿಗೆ ನಿಭಾಯಿಸಿದ್ದೆ. ಮುಂದೆ ನಾಲ್ಕೈದು ವರ್ಷ ಕಳೆದಾಗ ಅಮ್ಮನ ಮಮತೆ ಕಂಡು ನನಗೂ ಅಮ್ಮನ ಪಾತ್ರ ನಿರ್ವಹಿಸುವ ಆಸೆ. ಆಗ ನನಗೆ ಮಗುವಾಗಿದ್ದು ನನ್ನ ಬಳಿ ಇದ್ದ ಒಂದು ಬೊಂಬೆ.ಅದನ್ನೇ ಮಗುವೆಂದು ತಿಳಿದು ಅಮ್ಮನಾಗಿಬಿಟ್ಟಿದ್ದೆ. ಮುಂದೆ ಮುಂಬೈನಲ್ಲಿದ್ದ ನನ್ನ ಅಕ್ಕ ಊರಿಗೆ ಬಂದಾಗ ಅವಳು ಕೇಳಿದ ,ಓದಿದ ಸಿಂಡ್ರೆಲ್ಲಾ, ಸ್ನೋವೈಟ್  ಕತೆ ಕೇಳಿದಾಗ ಅದರಲ್ಲಿದ್ದ ರಾಜಕುಮಾರಿಯೂ ನಾನೇ ಆಗಿಬಿಟ್ಟಿದ್ದೆ… ಮುಂದೆ ಶಾಲೆಗೆ ಹೋದಾಗ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ಶಿಕ್ಷಕಿಯನ್ನು ಕಂಡಾಗ ನನಗೂ ಶಿಕ್ಷಕಿಯಾಗಬೇಕು  ಎಂಬ ಆಸೆ. ಅದನ್ನು ನೆರವೇರಿಸಿಬಿಟ್ಟಿದ್ದ ಆ ಸೂತ್ರಧಾರ. ಮುಂದೆ ಬಂಧು ಬಳಗದ ಹೊರತಾಗಿ ಸ್ನೇಹಿತೆ ಎಂಬ ಪಾತ್ರ ನನಗಿಷ್ಟವಾಗಿತ್ತು.ಅದನ್ನು ಎಲ್ಲ ಕಡೆಗಳಲ್ಲೂ  ನಿರ್ವಹಿಸಿದೆ ಮುಂದಿನದು ಪತ್ನಿ,ಸೊಸೆ,ಅಮ್ಮನ ಪಾತ್ರ ಗಳು ನನ್ನ ಹೆಗಲೇರಿಬಿಟ್ಟವು..ಇದು ತುಸು ತ್ರಾಸಾದಯಕ ಪಾತ್ರಗಳು. ಯಾವುದೇ ರಿಹರ್ಸಲ್(ಪೂರ್ವತಯಾರಿ) ಗಳಿಲ್ಲದೆ ಮಾಡಬೇಕಾದ ಪಾತ್ರಗಳು.. ಕಷ್ಟವೋ ಸುಖವೊ ಸಧ್ಯಕ್ಕೆ ಅವನ್ನು ಕೂಡ ನಿರ್ವಹಿಸಿರುವೆ.. ಇನ್ನು ಸಧ್ಯ ಎರಡು ಪಾತ್ರಗಳು ಬಾಕಿ ಇವೆ..ಅತ್ತೆ ಹಾಗೂ ಅಜ್ಜಿಯ ಪಾತ್ರ ಆ ಸೂತ್ರದಾರನ ದಾರ ಎಷ್ಟು ಉದ್ದ ಇದೆಯೋ ಗೊತ್ತಿಲ್ಲ. ಅದನ್ನು ನನ್ನಿಂದ ಆಡಿಸುವ ಇಚ್ಛೆ ಅವನಿಗಿದೆಯೋ.. ನನ್ನಿಂದ ಅದು ನಿರ್ವಹಿಸಲು ಸಾಧ್ಯವಿದೆಯೋ ನನಗೆ ತಿಳಿದಿಲ್ಲ… ಒಟ್ಟಾರೆ ನಾನು ನಾನಾಗಿಯೇ…ನಾನೇ ಪಾತ್ರವಾಗಿ ಇದುವರೆಗೆ ನಟಿಸಿರುವೆ… ಕೆಲವೊಂದು ಕಡೆ ಪೋಷಕ ನಟಿ,ಕೆಲವೊಂದು ಕಡೆ ನಾಯಕ ನಟಿ,ಇನ್ನೂ ಕೆಲವು ಕಡೆ ಖಳನಾಯಕಿಯಾಗಿಯೂ ನಟಿಸುವ ಸಂದರ್ಭ ಬಂದಿರುತ್ತದೆ. ಈ ಜೀವನ ಎಂಬ ನಾಟಕದಲ್ಲಿ ನಾವು ನಿರ್ದೇಶಕರಾಗಲು ಖಂಡಿತಾ ಸಾಧ್ಯವಿಲ್ಲ ಕೊನೆಯದಾಗಿ ನಾವು ನೋಡುವ ಚಲನಚಿತ್ರಗಳ ನಟರಿಗೆ ಇಷ್ಟು ಪಾತ್ರಗಳಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು ಅಂತ ಕೇಳ್ತಾರಲ್ಲ ಹಾಗೆಯೇ ನನಗೇನಾದರೂ ಕೇಳಿದರೆ ನನ್ನ ಉತ್ತರ ಸ್ನೇಹಿತೆಯ ಪಾತ್ರ *****

ನಾನು ನಾನೇ….. Read Post »

You cannot copy content of this page

Scroll to Top