ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪರಿಸರ

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ? ನಂದಿನಿ ಹೆದ್ದುರ್ಗ ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. ‘ರೀಫಿಲ್ ಮಾತ್ರ ಸಾಕು’ ಎಂದೆ.. ‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ . ಇದನ್ನೇ ತಗೋಳಿ ‘ ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ.. ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ ರಿಫಿಲ್ ಕೇಳ್ತಿರುವುದು.. ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ… ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ ಮಾಡ್ತೀರಾ ಮೇಡಮ್…?ಎಂದರು. ಗೃಹಿಣಿ ಎಂದೆ.. ಅಬ್ಬಾ ಗೃಹಿಣಿ ಯಾಗಿ ಇಷ್ಟು ಸೂಕ್ಷ್ಮ ವಿಷಯಗಳಲ್ಲಿ ಗಮನವಿದೆಯಾ ಎಂದರು… ಗೃಹಿಣಿ ಇಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿ ವಹಿಸಬಾರದೇ ಅಥವಾ ಆಕೆ ಬೇಸಿಕಲಿ ಅಸೂಕ್ಷ್ಮಳೇ? ಅವರ ಪ್ರಶ್ನೆಗಳು ವಿಚಿತ್ರವೆನಿಸಿತು. “ಇಲ್ಲಾಆಆಆ….ಇನ್ ಮುಂದೆ ಹೀಗೇ ತರಕಾರಿ ತಂದರೆ ನಾನು ಮನೆಯೊಳಗೇ ತಗೊಂಡು ಹೋಗಲ್ಲ…” ಅವತ್ತು ಮನೆಯಲ್ಲಿ ಜೋರು ಜಗಳ. ಅವಳ ಗಂಡ ದಿನಾ ಎಫ್ಬಿಯಲ್ಲಿ ಬರುವ ವಿಡಿಯೊ ಗಳನ್ನು ನೋಡಿ ‘ನೋಡ್ ಸುಮಿ ಇಲ್ಲಿ.. ಮೀನಿನ ಹೊಟ್ಟೆಯಲ್ಲು ,ಹಸುವಿನ ಹೊಟ್ಟೆಯಲ್ಲೂ ಬರೀ ಪ್ಲಾಸ್ಟಿಕ್ಕು…ಜನರಿಗೆ ಬುದ್ದಿನೇ ಬರಲ್ಲಾ ಅಲ್ವಾ…’ ಅಂತಿರ್ತಾನೆ. ಆದರೆ ಅವನು ಮಾತ್ರ ಹೊರಗೆ ಹೋಗುವಾಗ ಕೈಚೀಲ ಕೊಟ್ರೆ ಅಲ್ಲೇ ಇಟ್ಟು ಹೋಗ್ತಾನೆ.. ನಾನೊಬ್ಬ ಪ್ಲಾಸ್ಟಿಕ್ ಬಳಸುವುದರಿಂದ ಮಹಾ ಬದಲಾವಣೆ ಏನೂ ಆಗಲ್ಲ…ಅನ್ನುವುದು ಅವನ ವಾದ. ಬಹಳಷ್ಟು ಬಾರಿ ತಿಳಿಹೇಳಿ,ವಾದಿಸಿ ಸೋತ ಸುಮತಿ ಅವತ್ತು ಪ್ಲಾಸ್ಟಿಕ್ ನಲ್ಲಿ ತಂದ ತರಕಾರಿಗಳನ್ನು ಒಳಗೆ ತೆಗೆದುಕೊಂಡೇ ಹೋಗಲಾರೆ ಅಂತ ಮುಷ್ಕರ ಮಾಡಿದಳು.. ಆ ಮೇಲಿಂದ ಸ್ವಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ… ಚಪ್ಪಲಿ ಕೊಂಡ ಮೇಲೆ ಅದಕ್ಕಾಗಿ ಕೊಡುವ‌ ರಟ್ಟಿನ ಪೆಟ್ಟಿಗಳನ್ನು ಬೇಡ ಎಂದರೆ ಅಂಗಡಿಯವ‌ನಿಗೆ ಅಚ್ಚರಿ.! ಸೀರೆ ಕೊಂಡಮೇಲೆ ಪಾಕೀಟು ಹಿಂದಿರುಗಿಸಿದರೆ ಹೊಸತರ ಹಾಗೆ ಅನಿಸುವುದಿಲ್ವಂತೆ. ಅಗತ್ಯವಿದೆಯೇ ಅದೆಲ್ಲಾ? ತಿನ್ನುವ ಪಿಜ್ಜಾದ ಮೂರುಪಟ್ಟು ಪ್ಯಾಕಿಂಗ್. ಸಣ್ಣದೊಂದು ಬಿಸ್ಕತ್ತು ಪ್ಯಾಕಿಗೆ ಮತ್ತೇನೋ ಪ್ಲಾಸ್ಟಿಕ್ ಆಟಿಕೆ ಫ್ರಿ.. ಆ ಫ್ರಿ ಸಿಗುವ ವಸ್ತವಿಗಾಗಿಯೇ ಮಗುವಿಗೆ ಬಿಸ್ಕತ್ತು ಪ್ಯಾಕಿನ ಮೋಹ.. ಒಂದು ಕೊಂಡರೆ ಮತ್ತೊಂದೇನೋ ಉಚಿತ… ಆ ಉಚಿತದ್ದು ಮೂರು ದಿನಕ್ಕೆ ಖಂಡಿತವಾಗಿ ಕಸ.. ಚೈನಾ ಮೇಡ್ ಬಹಳ ಚೀಪು. ಇದೊಂದು ಇರಲಿ ಅಂತ ಅನಿಸುವುದೂ ಸಹಜ. ಮೂರೇ ದಿನಕ್ಕೆ ಕೆಟ್ಟು ಹೋಗುವ ಅವು ರಿಪೇರಿಗೆ ಒದಗಲಾರವು. ಮತ್ತೆ ಕಸ.. ಮನೆಯಿಂದ ಹೊರಗೆ ಕಾಲಿಟ್ಟರೆ ಕಸ.. ಹೊರಗಿನಿಂದ ಒಳಗೆ ಬಂದರೆ ಮತ್ತೊಂದಿಷ್ಟು ಕಸ.. ಕಸ ಕಸ ಕಸ.. ಬದುಕೇ ಕಸಮಯವಾದ ಕಾಲ ಇದು. …. ಈ‌ ಮೊದಲೆಲ್ಲಾ ಮಹಾನಗರಗಳಿಗೆ ಮಾತ್ರ ಕಸ ವಿಲೇವಾರಿ ಸಮಸ್ಯೆ ಎನಿಸುತಿತ್ತು.. ಹಳ್ಳಿಯಲ್ಲಾದರೆ ಪ್ರತಿ ಮನೆಯಲ್ಲೂ ಒಂದು ತಿಪ್ಪೆ ಇರುತಿತ್ತು..ಮನೆಯ ಎಲ್ಲಾ ಕಸವೂ ಅಲ್ಲಿ ಕೊಳೆತು ಅದರ ಮೇಲೆ ಎರಡು ಕುಂಬಳ ಬೀಜ ಎಸೆದರೆ ವರ್ಷಕ್ಕಾಗುವಷ್ಟು ಕುಂಬಳ ಸಿಕ್ತಿತ್ತು.. ಆದರೆ.. ಪ್ಲಾಸ್ಟಿಕ್ ಹಳ್ಳಿಯನ್ನೂ ಬಿಡುತಿಲ್ಲ ಈಗ. ಪ್ರತಿ ಪ್ರಜ್ಞಾವಂತ ಹಳ್ಳಿಗ ನಿತ್ಯ ದಿನಚರಿಯೊಂದಿಗೆ ಕಡ್ಡಾಯ ಎನುವಂತೆ ಒದಗುವ ಪ್ಲಾಸ್ಟಿಕ್ ಅನ್ನು ಏನು ಮಾಡಬಹುದು ಅಂತ ತೋಚದೆ ಒದ್ದಾಡುತ್ತಾನೆ.. ನಗರದಂತೆ ಕಸ ಒಯ್ಯುವ ಗಾಡಿ ಇಲ್ಲಿಗೆ ಬರುವುದಿಲ್ಲ. ನೀರೊಲೆ ಕಾಣಿಸುವುದು ಸುಲಭದ ಮಾರ್ಗವಾದರೂ ವಾಯುಮಾಲಿನ್ಯ ನಿಶ್ಚಿತ. ಮಣ್ಣು ಅದನ್ನು ಜೀರ್ಣಿಸಿಕೊಳ್ಳಲಾರದು.. ಹರಿವ ನೀರಿಗೆ ಬಿಡವುದು ಥರವಲ್ಲ. ಮತ್ತೇನು ಮಾಡಬಹುದು..? … ಪ್ರತಿ ಮನುಷ್ಯನು ಜಾಗೃತನಾಗಲೇಬೇಕಾದ  ಪರ್ವಕಾಲ ಇದು ಎನಿಸುತ್ತದೆ. ಆದಷ್ಟೂ ಮಟ್ಟಿಗೆ ತಾನು ವೈಯಕ್ತಿಕವಾಗಿ ಸೃಷ್ಟಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಯೋಚಿಸಲೇಬೇಕಾಗಿದೆ. ಒಂದು ಎಕ್ಸಟ್ರಾ ಪೇಪರ್ ನ್ಯಾಪ್ಕಿನ್ ತೆಗೆಯುವ ಮೊದಲು,ಅನಗತ್ಯ ವಸ್ತವೊಂದನ್ನು ಕೊಳ್ಳುವ ಮೊದಲು,ಒಂದು ತುತ್ತು ಆಹಾರವನ್ನು ವ್ಯರ್ಥಮಾಡುವ ಮುನ್ನ ಎರಡನೇ ಬಾರಿ ಯೋಚಿಸುವವ ಮಾತ್ರ ನಿಜಕ್ಕೂ ಇಂದಿನ ನಾಗರಿಕ ವ್ಯಕ್ತಿ ಎನ್ನಬಹುದು.. “ಮಾಲಿನ್ಯ ನಿಯಂತ್ರಿಸಿ ,ಪರಿಸರ ಉಳಿಸಿ” ಈ ಘೋಷ ವಾಕ್ಯಕ್ಕೆ ಬದ್ದರಾಗಲೇಬೇಕಾದ ಕಾಲ ಸನ್ನಿಹಿತ ವಾಗಿದೆ. … ಜಗತ್ತೇ ಒಂದು ಕುಟುಂಬ ಎನ್ನುವ ಮಾತು ಈಗಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ.? ದೂರದ ವೂಹಾನ್ ನಲ್ಲಿ‌ ಬಂದ ‌ಕೊರೊನಾ ತಿಂಗಳೊಪ್ಪತ್ತಿಗೆ ಜಗತ್ತನ್ನೇ ವ್ಯಾಪಿಸಿದ ಬಗೆ .. ಭೂಮಿಯ ಆ ಬದಿಯಲ್ಲಿ ಬಂದ ರಾಕ್ಷಸ ಸ್ವರೂಪಿ ಮಿಡತೆಗಳು ಎರಡೇ ವಾರದಲ್ಲಿ ನಮ್ಮ ದೇಶಕ್ಕೂ ಬಂದ ವೇಗ. ಲೋಕವನ್ನೇ ಆಹುತಿ ತೆಗೆದುಕೊಳ್ಳುವಂಥ  ಮನುಷ್ಯ ಮನುಷ್ಯನ ನಡುವಿನ ವರ್ಣ ವರ್ಗ ಸಂಬಂಧಿ ಕದನಗಳು ದಿನ‌ ಮುಗಿಯುವುದರೊಳಗಾಗಿ ಎಲ್ಲೆಡೆ ಸುದ್ದಿಯಾಗುವ ಗದ್ದಲೆಬ್ಬಿಸುವ ಹುನ್ನಾರ.. ಈ ಎಲ್ಲವೂ “ಸದ್ಯ..ನಾನು ಸುಖವಾಗಿದ್ದೇನೆ ಸಾಕು” ಎನ್ನುವ ಮನಸ್ಥಿತಿಗೆ ಅಂಕಿತ ಹಾಡಲಿಕ್ಕಾಗಿಯೇ ಬಂದವು ಎಂಬುದು ತಿಳಿಯುತ್ತಿದೆ.. ನೀನು ಕ್ಷೇಮವಿದ್ದರೆ ಮಾತ್ರ ನಾನೂ ಕ್ಷೇಮ ಎನ್ನುವ ಹೊಂದಾವಳಿ ನಿರ್ಮಾಣವಾಗಲೇಬೇಕಿದೆ.. ಜೂನ್ ಐದು..ಅಂದರೆ ಇಂದು ವಿಶ್ವ ಪರಿಸರ ದಿನ.. ನಾಲ್ಕು ಮಾತಾಡಿ, ನಾಲ್ಕಕ್ಷರ ಬರೆದು ನಮ್ಮ ಕರ್ತವ್ಯ ಮುಗಿಸುವ ಯೋಜನೆಗೆ ಇತಿಶ್ರಿ ಹಾಡಿ ಸಣ್ಣಪುಟ್ಟ ಬದಲಾವಣೆಗಳನ್ನು ದಿನಚರಿಗೆ ಅಳವಡಿಸಿಕೊಳ್ಳಬಹುದೇ..? ನೂರು ಸಸಿಯನ್ನು ಕ್ಯಾಮೆರಾಗಾಗಿ ನೆಟ್ಟು ಒಂದೂ ಬದುಕದ ಒಣ ಮಹೋತ್ಸವದ ಆಚರಣೆಗೆ ಬದಲಾಗಿ ತನ್ನ ಇತಿಮಿತಿಯಲ್ಲಿ ಐದಾದರೂ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಈ ದಿನವನ್ನು ನಿಮಿತ್ತ ಮಾಡಿಕೊಳ್ಳಬಹುದೇ..? ಒಮ್ಮೆ ಹಿಂದಿರುಗಿ ನೋಡಿದರೆ ಹಿರಿಯರು ನಿರ್ಮಿಸಿಕೊಂಡ ದೇವರಕಾಡು,ಬನದ ಮರ,ಚೌಡಿ ಪೂಜೆ, ಬಯಲು ಬಸವ,ಕಾಡು ಬಸವ,ಬ್ರಹ್ಮ ದೇವರು, ಗುಂಡುತೋಪು ಇವೆಲ್ಲವೂ ಅದೆಷ್ಟು ಸಹಜವಾಗಿ ಈ ನೆಲ ಜಲ ವೃಕ್ಷಗಳನ್ನು ರಕ್ಷಿಸುತ್ತಿದ್ದವು. ಇವೆಲ್ಲವೂ ‘ನಂಬಿಕೆಯೆಂದರೆ..,ಇಲ್ಲಾ ಇಲ್ಲ ಮೂಢನಂಬಿಕೆ’  ಎನ್ನುವ ನಾಗರಿಕರ ಲೋಕ ಈಗ ನಮ್ಮದು. … ಮನುಷ್ಯನ ಮಿತಿ ಮೀರಿದ ವೇಗಕ್ಕೆ ಇತಿ ಹೇಳಲಿಕ್ಕಾಗಿಯೇ ಜಗತ್ತಿಗೆ ಕೊರೊನಾ ಬಂದಿದೆ ಎನುವುದನ್ನು ಒಂದಿಲ್ಲೊಂದು ಬಾರಿ ನಾವೆಲ್ಲರೂ ಹೇಳಿರುವ ಈ ಕಾಲದಲ್ಲಿ  ನಿತ್ಯವೂ ಬೇಸರ ಹುಟ್ಟಿಸುವಷ್ಟು ಬಾರಿ ಜಗತ್ತಿನ,ದೇಶದ ,ರಾಜ್ಯದ ,ಜಿಲ್ಲೆಯ, ಸ್ಥಳೀಯ ಸೋಂಕಿನ ಅಂಕಿಅಂಶಗಳನ್ನು ಮಾದ್ಯಮಗಳು  ಹೇಳುತ್ತಲೇ ಇರುತ್ತವೆ.. ಪ್ರತಿ ಬಾರಿ ಕೇಳಿದಾಗಲೂ ಮಾಸ್ಕಿನ ನೆನಪೂ,ಕೈತೊಳೆಯುವ ಮನಸ್ಸೂ,ಕ್ವಾರಂಟೈನಿನ ಭಯವೂ ಹೃದಯಮೆದುಳಿರುವ ಈ‌ ಮನುಷ್ಯ ಮಾತ್ರನಿಗೆ ಹೊಕ್ಕಿಳಿಯುವುದಂತೂ ಸತ್ಯ. ಹೀಗೊಂದು ಬಗೆ ಮನುಷ್ಯನನ್ನು ಎಚ್ಚರಿಸುತ್ತದೆ ಎಂದರೆ ಪ್ರತೀ ಹನ್ನೆರಡು ತಾಸಿಗೊಮ್ಮೆ ನಮ್ಮ ದೇಶದ,ನಮ್ಮ ರಾಜ್ಯದ,ಜಿಲ್ಲೆಯ, ತಾನು ವಾಸಿಸುವ ಏರಿಯಾದ ಮಾಲಿನ್ಯದ ಕುರಿತಾದ ಅಂಕಿಅಂಶಗಳು ಪ್ರತಿಯೊಬ್ಬರ ಮೊಬೈಲಿಗೆ ಬಂದು ಬೀಪಿಸಿದರೆ ನಮ್ಮೊಳಗೆ ಒಂದು ಎಚ್ಚರಿಕೆಯ ಗಂಟೆ ಮೊಳಗಬಹುದೇ…? ಪ್ರತೀ ರಸ್ತೆಯ ತಿರುವಿನಲ್ಲಿ, ಊರಿನ ಆರಂಭದಲ್ಲಿ ವಾಯುಮಾಲಿನ್ಯ ,ಶಬ್ದ ಮಾಲಿನ್ಯ, ನೆಲಮಾಲಿನ್ಯ ಇಷ್ಟಿಷ್ಟಿದೆ ಎನ್ನುವ ಮಾಹಿತಿ ದೊರಕಿದರೆ ನಮ್ಮ ಕೊಳ್ಳುಬಾಕತನಕ್ಕೆ ,ಕಸೋತ್ಪಾದನೆಗೆ ಒಂದು ಶೇಕಡವಾದರೂ ತಡೆ ಬೀಳಬಹುದಲ್ಲವೇ..? ಒಂದು ನದಿ ಅಥವಾ ಹೊಳೆಯ  ನೀರಿನ ಮಟ್ಟದಂತೆಯೇ ಅದರ ಜಲದ ಮಾಲಿನ್ಯ ‌ಮಟ್ಟವೂ ಪ್ರತಿನಿತ್ಯ ಮಾಹಿತಿ ಬೋರ್ಡಿನಲ್ಲಿ ದಾಖಲಾದರೆ  ನಮ್ಮ ಅಸೂಕ್ಷ್ಮತೆ ತುಸುವಾದರೂ ಬದಲಾಗಬಹುದೇ..? … ಪರಿಸರದಷ್ಟು ನಿಗೂಢ, ನಿಷ್ಠುರ  ವಿಷಯ ಬೇರೊಂದಿಲ್ಲ. ತಾನು ಗೆದ್ದೆ ಎಂದುಕೊಂಡಾಗಲೆಲ್ಲಾ ಅದು ಮನುಷ್ಯ ಜೀವಿಗೆ ನಾನಿದ್ದೇನೆ ಎನುವಂತೆ ಪಾಠ ಕಲಿಸುತ್ತಲೇ ಬಂದಿದೆ.. ಬದುಕು ಮತ್ತು ಭೂಮಿ ಒಂದನ್ನೊಂದು ಗಾಢವಾಗಿ ಅವಲಂಬಿಸಿರುವುದು ತಿಳಿದ ನಂತರವೂ ನಮ್ಮ ಹಮ್ಮು ಕಮ್ಮಿಯಾಗುವುದಿಲ್ಲ.. ಗುಬ್ಬಚ್ಚಿಯನ್ನು ನಾಶ ಪಡಿಸಿದರೆ ತಾನು ವರ್ಷಕ್ಕೆ ಬೆಳೆಯುವ ಧಾನ್ಯ  ಮೂರು ವರ್ಷ ಉಣ್ಣಲು ಸಾಲುತ್ತದೆ ಎಂದುಕೊಂಡ ತಲೆತಿರುಕ ಚೀನಾ ಅವುಗಳನ್ನು ಕೊಂದು ಅನುಭವಿಸಿದ ಬೇಗೆ ನಮ್ಮ ಕಣ್ಣೆದುರಿಗೇ ಇದ್ದರೂ ತಪ್ಪಿನಿಂದ ನಾವು ಕಲಿಯುವುದಿಲ್ಲ… ಗರ್ಭ ತುಂಬಿಕೊಂಡ ಆನೆಗೆ ಹಣ್ಣಿನ ರೂಪದಲ್ಲಿ ಸಾವು ತೋರುವ ಮಹಾ ಮನುಷ್ಯರು ನಾವು… ಅಗಾಧ‌ನೋವು ಅನುಭವಿಸುತ್ತಲೇ ಸುಮ್ಮನೇ ಘೀಳಿಟ್ಟು ,ಹರಿವ ನದಿಗಿಳಿದು ಬೇಗೆ ಶಮನಗೊಳಿಸಿಕೊಳ್ಳಲೆತ್ನಿಸಿ ಸಾವು ನೋಡಿದ ಯಃಕಶ್ಚಿತ್ ಆನೆ ಅದು.. ಮನುಷ್ಯ ಹೇಗೆ ಮತ್ತು ಏಕೆ ಇಷ್ಟೊಂದು ಸ್ವಾರ್ಥಿಯಾದ.!! ಹಣವೇ..?ಹಸಿವೇ…?ಗೆಲ್ಲುವ ಬಗೆಯೇ? ಸಾಮಾನ್ಯ ತಿಳುವಳಿಕೆಗೂ ನಿಲುಕುವ ಸಂಗತಿ ಎಂದರೆ ಎಕಾಲಜಿ ಮತ್ತು ಎಕಾನಮಿ ಸದಾ ಒಂದಕ್ಕೊಂದು ಪೂರಕವಾಗಿಯೇ ಕೆಲಸ ಮಾಡುತ್ತವೆ. ಹಾವು ಇಲಿಯನ್ನು,ಇಲಿ ಕಪ್ಪೆಯನ್ನು ಕಪ್ಪೆ ಕೀಟವನ್ನು ,ಕೀಟ ಹೂವು ಹೀಚುಗಳನ್ನು ತಿನ್ನುವುದು ಕೊರತೆ ಅಲ್ಲ..ಅದೇ ಕ್ರಮ ಬದ್ದತೆ ‌. its not by default.. It is by design.. .. ಮಣ್ಣನ್ನು ಆರೋಗ್ಯವಾಗಿಡುವ,ಪರಿಸರವನ್ನು ಸಹಜವಾಗಿರಿಸುವ , ಕಸದ ಉತ್ಪತ್ತಿ ಕಡಿಮೆಯಾಗಿಸುವ ಕುರಿತು ನಮ್ಮ ಕೊಡುಗೆ ಏನು.? ಬಹುಶಃ ಇಂದಲ್ಲದಿದ್ದರೆ ಇನ್ನೆಂದೂ‌ ನಮಗೆ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವ ಅವಕಾಶ ಸಿಗದೇ ಹೋಗಬಹುದು… ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.? _ ನಂದಿನಿ ಹೆದ್ದುರ್ಗ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. Read Post »

ಕವಿತೆ ಕಾರ್ನರ್

ಅದೊಂದು ಗಳಿಗೆ.

ಅದೊಂದು ಗಳಿಗೆ. ನಿನ್ನ ಕಾಣುವ ಬಯಕೆಯೊಂದು ಮತ್ತೆ ಮತ್ತೆ ಮುಗಿಬೀಳಲು ತುಕ್ಕು ಹಿಡಿದ ಬುದ್ದಿ ಹಿಡಿತ ತಪ್ಪಿ ಬಂದು ನಿಂತಿದ್ದು ನಿನ್ನ ಮನೆಯಂಗಳಕೆ ಬಂದಾಗ ನೀನು ಮುಚ್ಚಿದ ಕದ ತೆರೆಯದೆ ಕಾಯಿಸಿದ್ದು ನಿನ್ನೊಳಗಿನ ಅಹಮ್ಮಿನ ತುಣುಕಿನೊಂದಂಶವಾಗಿತ್ತು ಕರಗಿದ ಹಗಲು ನಿಶ್ಯಬ್ದ ಇರುಳೊಳಗೆ ಕರಗಿ ಲೀನವಾಗುವ ಸರಿಹೊತ್ತಲ್ಲಿ ದಿಡೀರನೆ ಜ್ಞಾನೋದಯವಾಗಿ ಕಣ್ಮುಂದೆ ಕಂಡ ಮಾಣಿಕ್ಯವೊಂದು ಕಣ್ಮರೆಯಾದ ಪರಿಗೆ ಏಳೂರುಗಳೂ ದಿಗ್ಬ್ರಮೆಗೊಳಗಗಿದ್ದವು. ಸುದೀರ್ಘ ಬರದ ಬೆಂಕಿಯೊಳಗೆ ಬೆಂದ ನನ್ನೂರೊಳಗಿನ ಹಸಿವಿನ ಹಾಹಾಕಾರಕ್ಕೆ ಅಸುನೀಗಿದ ಹಾಲುಗಲ್ಲದ ಹಸುಗೂಸುಗಳ ಹೊತ್ತು ಮಣ್ಣು ಮಾಡಿದ ಕೈಗಳಿಗೆ ಹತ್ತಿದ ಕುಷ್ಠ ಕಿವಿ ಮೂಗು ಪಾದಗಳ ಬೆರಳ ಸಂದಿಗಳಿಗೆ ವ್ಯಾಪಿಸಿ ಉರಿದು ಹೋಯಿತು ಹಾಗೇನೆ ಹಗಲ ಚಿತೆ ಹಿಮ ಪರ್ವತದ ತುತ್ತ ತುದಿಯಲಿ ನೆಲೆಸಿದ ಶಂಕರನ ಪಾದಗಳ ನುಣುಪಾದ ತಣ್ಣನೆಯ ಸ್ಪರ್ಶಕೆ ಕರಗಬಲ್ಲುದೆಂದು ನಂಬಿದ ಪಾಪಾತ್ಮಗಳ ದಿವ್ಯೋಪದೇಶಕೆ ಮಾರು ಹೋಗಿ ಹಮ್ಮು ತೊರೆದು ಸುತ್ತೂರಿನೆಲ್ಲ ಗರತಿಯರ ಪಾದಕೆರಗಿ ಶತಮಾನಗಳ ಪುರಾತನ ಶಾಪ ಉಶ್ಯಾಪಗಳೆಲ್ಲವನ್ನು ಇಲ್ಲವಾಗಿಸಿ ಅದೊಂದು ಮಂಗಳಕರವಾದ ಬೆಳಗಿಗೆ ಕಾಯುತ್ತ ಕೂತ ಕಡುಪಾಪಿ ಮನುಷ್ಯನ ಪಾಪಿಷ್ಠ ಕ್ಷಣಗಳ ಮನ್ನಿಸುವ ಮನಸಿರುವ ದೇವಪುರುಷನಿಗಾಗಿ ಕಾಯುವ ಗಳಿಗೆಯಿದೆಯಲ್ಲ ಅದಕ್ಕಿಂತ ಅಮೃತಮಯವಾದ್ದು ಬೇರೆ ಯಾವುದಿದೆ? ********* ಕು.ಸ.ಮಧುಸೂದನ

ಅದೊಂದು ಗಳಿಗೆ. Read Post »

ಕಾವ್ಯಯಾನ

ನಿರೀಕ್ಷೆ

ನಿರೀಕ್ಷೆ ಉಷಾ ಸಿ.ಎನ್ ಅಂದು ಭಾನುವಾರ ಕನ್ನಡಿಯ ಮುಂದೆ ನಿಂದು ನೀ ಮೆಚ್ಚುವ ಬಣ್ಣವ ಧರಿಸಿದ್ದೆ ಅದಕೊಪ್ಪುವ ಬಿಂದಿ ಬಳೆಗಳ ತೊಟ್ಟು ನೀಳ ಕೇಶವ ಹೆಣೆದು ಮಲ್ಲಿಗೆಯ ಮುಡಿದಿದ್ದೆ ನಗೆ ಚೆಲ್ಲುವ ತುಟಿಗಳಿಗೆ ಕೆಂಪು ಬಣ್ಣ ಲೇಪಿಸಿ ನಿನ್ನ ಕಣ್ಣುಗಳ ನೆನೆದು ನನ್ನ ಕಣ್ಣಿಗೆ ಕಾಡಿಗೆ ಬಳಿದಿದ್ದೆ ಅನುಗಾಲ  ನಿನ್ನತ್ತ ಬರಲು ತವಕಿಸುವ ಕಾಲುಗಳಿಗೆ  ಗೆಜ್ಜೆ ತೊಟ್ಟಿದ್ದೆ ಕಂಗಳಲಿ ಮಿಂಚಿಟ್ಟು, ತುಟಿಗಳಲಿ ನಗೆಯಿಟ್ಟು ನಿನ್ನ ದಾರಿಯ ಕಾದಿದ್ದೆ. ನೀ ಬಾರದೆ  ನಿರೀಕ್ಷೆಗಳು  ನೀರ ಮೇಲಣ ಗುಳ್ಳೆಗಳಾದವು ಕನಸುಗಳು ಕನಸುಗಳಾಗಿಯೆ ಉಳಿದವು. *********

ನಿರೀಕ್ಷೆ Read Post »

ಕಾವ್ಯಯಾನ

ಚೆಲ್ಲಿ ಹೋಯಿತು ಉಸಿರು

ಚೆಲ್ಲಿ ಹೋಯಿತು ಉಸಿರು ( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ವಿಜಯಶ್ರೀ ಹಾಲಾಡಿ ಚೆಲ್ಲಿಹೋಯಿತು ಉಸಿರು…( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ಗಾಳಿಗೆ ಗಂಧ ತುಂಬುತ್ತಿದ್ದಬಾಗಾಳು ಮರವನ್ನುಈ ಬೆಳಗು ಕಡಿಯಲಾಗಿದೆಮರದ ಮಾಂಸ ರಕ್ತ ಚರ್ಮಚೆಲ್ಲಾಡಿದ ಬೀದಿಯೊಳಗೆಇದೀಗ ತಾನೇ ನಡೆದುಬಂದೆನೆಲದಲ್ಲಿ ಜಜ್ಜಿಹೋದ ಹೂಮೊಗ್ಗು ಎಲೆಗಳ ಕಂಬನಿಕುಡಿಯುತ್ತಾ… ಹಕ್ಕಿ ಕೊರಳಿಗೆ ಕಷಾಯಕುಡಿಸಿದ ಸಂಗಾತಿ ಮರಮಣ್ಣಿನಾಳದ ಕಸುವುಗಳನಕ್ಷತ್ರಗಳಿಗೆ ಅಂಟಿಸಿದಅವಧೂತ ಮರಜೀವಜಂತುಗಳಿಗೆ ಜೀವಜಲಮೊಗೆದ ತಾಯಿಮರಬದುಕಿತ್ತು ಇಲ್ಲೇ ಕಣ್ಣೆದುರಲ್ಲೇಮಾತು ಮೀರಿದಬುದ್ಧಕಾರುಣ್ಯದಂತೆಮಮತೆ ತೋಳುಗಳಂತೆ… ಚೆಲ್ಲಿಹೋಯಿತು ಉಸಿರುಸಾವು ಹೆಪ್ಪುಗಟ್ಟಿದಂತೆ!****** ಬಾಗಾಳು ಮರ– ಬಕುಲದ ಮರ. ಪಶ್ಚಿಮಘಟ್ಟದ ಸಸ್ಯ. ನವಿರು ಪರಿಮಳದ ಹೂಗಳನ್ನು ಬಿಡುತ್ತದೆ. ಕಾಡಿನ ನಾಶದಿಂದಾಗಿ ಈ ಮರದ ಸಂಖ್ಯೆ ಕ್ಷೀಣಿಸಿದೆ.ಸು.ರಂ.ಎಕ್ಕುಂಡಿಯವರ ಒಂದು ಕವನಸಂಕಲನದ ಹೆಸರು: ಬಕುಲದ ಹೂಗಳು.**ವಿಜಯಶ್ರೀ ಹಾಲಾಡಿ *

ಚೆಲ್ಲಿ ಹೋಯಿತು ಉಸಿರು Read Post »

ಪುಸ್ತಕ ಸಂಗಾತಿ

ಆಖ್ಯಾನ

ಆಖ್ಯಾನ ಆಖ್ಯಾನಲೇಖಕರು- ಮೂರ್ತಿ ಅಂಕೋಲೆಕರಕಥಾಸಂಕಲನಪ್ರಕಾಶಕರು- ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ ಜೀವ ವಿಮಾ ನಿಗಮದ ಅಧಿಕಾರಿಯಾಗಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಮೂರ್ತಿ ಅವರು ತಮ್ಮ ಇಪ್ಪತ್ತರಿಂದ ಮೂವತ್ನಾಲ್ಕನೇ ವಯಸ್ಸಿನವರೆಗೆ ಬರೆದ ಕಥೆಗಳಲ್ಲಿ ಆಯ್ದ ಹತ್ತು ಕಥೆಗಳು ಇಲ್ಲಿವೆ. ಇದಕ್ಕೆ ಕೆ.ವಿ. ತಿರುಮಲೇಶ್ ಅವರು ಮುನ್ನುಡಿ ಬರೆದಿದ್ದಾರೆ.ನಾನಿಲ್ಲಿ ಉದ್ದೇಶಪೂರ್ವಕವಾಗಿ ಪ್ರತೀ ಕಥೆಯ ಬಗ್ಗೆ ಬರೆಯುವುದಿಲ್ಲ. ಏಕೆಂದರೆ ಇವು ಸಾಕಷ್ಟು ಸಂಕೀರ್ಣವಾಗಿ ಇದ್ದು ಒಂದೇ ಹಿಡಿತಕ್ಕೆ ಸಿಗುವಂಥವಲ್ಲ. ಇವೆಲ್ಲವೂ ಬಹಳ ಪ್ರಬುದ್ಧ ಕಥೆಗಳೆಂದು ಮಾತ್ರ ಹೇಳಬಹುದು. ಕತೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೇಖಕನಿಗೆ ಮಾತ್ರ ಸಾಧ್ಯವಾಗುವ ಕತೆಗಳು. ಬಹುಮುಖ್ಯವಾದ ಕಥಾವಸ್ತುಗಳು, ಗಂಭೀರವಾದ ಶೈಲಿ, ಎಲ್ಲವನ್ನೂ ಗಮನಿಸುವ ಸೂಕ್ಷ್ಮತೆ, ಅವಕ್ಕೆ ಸ್ಪಂದಿಸುವ ಗುಣ, ಅದ್ಭುತವಾದ ವೈಚಾರಿಕತೆ – ಇವೆಲ್ಲವೂ ಈ ಕಥೆಗಳನ್ನು ಬಹಳ ಮೇಲ್ಮಟ್ಟದಲ್ಲಿ ಇರಿಸುತ್ತವೆ. ಅಂಕೋಲೆಕರರು ಚಿತ್ರಿಸುವ ಜಗತ್ತು- ಕರಾವಳಿ ಮತ್ತು ಘಟ್ಟದ ಮೇಲಿನ ಹಳ್ಳಿ , ಪಟ್ಟಣಗಳು. ಅಲ್ಲಿನ ಎಲ್ಲಾ ತಲೆಮಾರಿನ ಜನ, ತೋಟ, ಒಳದಾರಿಗಳು, ಕಾಡು, ತೊರೆ, ಪ್ರಕೃತಿ. ದೇವಸ್ಥಾನ, ಜಾತ್ರೆ ಮತ್ತು ಕಾಲೇಜುಗಳು. ಈ ಜನರ ಸಂಬಂಧ, ವೈಷಮ್ಯ, ಪ್ರೀತಿ ಪ್ರಣಯ, ಹಾದರ, ಅಸೂಯೆ, ಅನುರಾಗ ಇತ್ಯಾದಿ. ಆದರೆ ಅವರ ‘ ಕ್ರಿಟಿಕಲ್ ಇನ್ಸೈಡರ್ ‘ ಈ ಮೇಲಿನವುಗಳನ್ನೇ ವಿಭಿನ್ನವಾದ ದೃಷ್ಟಿಯಿಂದ ಚಿತ್ರಿಸಿದ್ದಾರೆ. ಮಾರುತಿಯವರ ಪಾತ್ರಗಳು ಹೆಚ್ಚು ತೀವ್ರತೆಯಲ್ಲಿ ಚಿಂತನ ಮಂಥನದಲ್ಲಿ ತೊಡಗುತ್ತವೆ. ಕೆಲವು ಗೊಂದಲಗಳಲ್ಲಿ ಉಳಿದರೆ , ಇನ್ನು ಕೆಲವಕ್ಕೆ ಉಪಸಂಹಾರಗಳು ತಾನಾಗಿಯೇ ಒದಗಿ ಬರುತ್ತವೆ. ಮನುಷ್ಯಾವಸ್ಥೆ ಎಂದರೆ ಇದೇನೇ ಎಂದು ಕಥೆಗಳು ತೋರಿಸಿಕೊಡುವಂತೆ ಅನಿಸುತ್ತದೆ. ಈ ಚಿಂತನೆಯ ಸ್ವಭಾವವೇ ಅವರ ಕಥಾಪಾತ್ರಗಳನ್ನು ಬಹು ಆಯಾಮಿಗಳಾಗಿ ಮಾಡುತ್ತವೆ. ಬೆನ್ನುಡಿಯಲ್ಲಿ ಶ್ರೀಧರ ಬಳಗಾರ ಅವರು ಹೇಳಿರುವಂತೆ – ಮೂರ್ತಿ ಅವರ ಕಥನ ಪ್ರಪಂಚದಲ್ಲಿ ಸ್ವಭಾವತಃ ಒಳ್ಳೆಯತನದಲ್ಲಿ ಬದುಕುವ ಅಪೂರ್ವ ಶೋಭೆಯ ಮನುಷ್ಯರಿದ್ದಾರೆ. ಆತ್ಮಶೋಧನೆಗೆ ಹಿಂಜರಿಯದ ಅವರ ಕಥೆಗಳು ನವ್ಯೋತ್ತರ ಕಥನ ಸ್ವರೂಪಕ್ಕೆ ಸೂಚಕವಾಗುವುದರಿಂದ ಕಥನ ಪರಂಪರೆಯ ಅಧ್ಯಯನ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಇವೆಲ್ಲ ಕಾರಣಗಳಿಂದ ಒಮ್ಮೆ ಓದಲೇಬೇಕಾದ ಕೃತಿ ‘ ಆಖ್ಯಾನ’.********** ಡಾ. ಅಜಿತ ಹರೀಶಿ

ಆಖ್ಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸಹದೇವ ಯರಗೊಪ್ಪ ಎದೆ ಎತ್ತರ ಬೆಳೆದು ನಿಂತ ಪೀಕಿನಲಿ ಕಣ್ಣು ತಪ್ಪಿಸಿ ಎಲ್ಲಿ ಹೋದೆ|ಬತ್ತಿದೆದೆಯ ಬಾವಿಗೆ ಕಣ್ಣೀರು ಕುಡಿಸಿ ಎಲ್ಲಿ ಹೋದೆ|| ಬಿತ್ತಿದ ತಾಕುಗಳಿಗೆ ಉಳಿ ನೀರು ಉಣಿಸದೆ ಸೆರಗ ಜಾಡಿಸಿದೆ|ಮಣ್ಣಿನ ಹೊಕ್ಕಳಿಂದ ಅನ್ನದ ಬೇರು ಕತ್ತರಿಸಿ ಎಲ್ಲಿ ಹೋದೆ|| ತೂಗಿ ತೊನೆವ ಬೆವರ ತೆನೆಗಳಿಗೆ ಕವಣೆ ಬೀಸಲೆ ಇಲ್ಲ|ನೇಸರನ ಕಾಯುವ ಸೂರ್ಯಕಾಂತಿ ದಿಕ್ಕು ಬದಲಿಸಿ ಎಲ್ಲಿ ಹೋದೆ| ಬಿರುಕು ಬಿಟ್ಟ ನೆಲದ ಕೆಂಡಕ್ಕೆ ಬೆವರ ದೂಪದ ಬೆರಕೆ|ತೀರದ ಸಾಲಕ್ಕೆ ಉಳುವ ನೇಗಿಲ ಅಡಾ ಇರಿಸಿ ಎಲ್ಲಿ ಹೋದೆ|| ಸಗಣಿ ಬಳೆದ ಅಂಗೈಗೆ ಮದರಂಗಿ ಬಣ್ಣದ ಕಾಂತಿ|ಬೆವರ ಗಂಧ ತುಂಬಿದ ಉಡಿಯನು ಗಾಯಗೊಳಿಸಿ ಎಲ್ಲಿ ಹೋದೆ|| ಜತಿಗೆ ಸುಡುವ ಬಿಸಿಲಲಿ ಸಾಚಿ ಮೈ ಸುಟ್ಟು ಮಾಯವಾದೆ|ಕಾಳಿನ ಕೊರಳಿಗೆ ನುಶಿಗಳ ಮಾಲೆ ಪೋಣಿಸಿ ಎಲ್ಲಿ ಹೋದೆ|| *******

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮಾಲತಿ ಹೆಗಡೆ ಎದೆಯ ಮಧುಬನವ ಹದಗೆಡಿಸಿ ತೊರೆದು ಹೋದೆ ನೀನುಮನದ ಮೃದು ಭಾವ ಚೆದುರಿಸಿ ತೊರೆದು ಹೋದೆ ನೀನು ಲೋಕನಿಂದೆಗೆ ಕಿವುಡಾಗಿ ನಿನ್ನವಳಾಗಿದ್ದೆನೋ ಗಿರಿಧರಾನನ್ನನೀ ಭವದ ಭಾಧೆಗೆ ಸಿಲುಕಿಸಿ ತೊರೆದು ಹೋದೆ ನೀನು ಕಡೆದ ಮಜ್ಜಿಗೆಯಲ್ಲೆತ್ತಿದ ಶುದ್ಧ ನವನೀತದಂತಿತ್ತು ನನ್ನೊಲವುರಾಧೆಯ ರೋದನವ ಕಡೆಗಣಿಸಿ ತೊರೆದು ಹೋದೆ ನೀನು ಇಹ ಪರದ ಚಿಂತೆಯನೆಲ್ಲ ತೂರಿ ವೇಣು ನಾದದಲಿ ಕರಗಿದ್ದೆಜೀವ ಭಾವದ ನಂಟು ಕತ್ತರಿಸಿ ತೊರೆದು ಹೋದೆ ನೀನು ಮರುಳೋ ಮಾಯೆಯೋ ಅರಿಯದ ಕಡುಮೋಹಿಯಾಗಿದ್ದೆಆತ್ಮಸಾಂಗತ್ಯದಲಿ ಅಧೀನವಾಗಿಸಿ ತೊರೆದು ಹೋದೆ ನೀನು **********

ಗಝಲ್ Read Post »

ಇತರೆ, ಪರಿಸರ

ಪ್ರಕೃತಿ ರಕ್ಷತಿ ರಕ್ಷಿತಾಃ

ಪ್ರಕೃತಿ ರಕ್ಷತಿ ರಕ್ಷಿತಾಃ ಜ್ಯೋತಿ ನಾಯ್ಕ ಜೂನ್ ಐದು ಅಂದಾಕ್ಷಣ ವಿಶ್ವ ಪರಿಸರ ದಿನಾಚರಣೆ ಸ್ಮರಿಸೋದು ಸಾಮಾನ್ಯ ಏಕೆಂದರೆ ಪರಿಸರವು ಹಲವು ಜೈವಿಕ & ಭೌತಿಕ ಘಟಕಗಳ ಆಗರ, ಇವುಗಳ ನಡುವೆಯೇ ಬೇಕು-ಬೇಡಗಳ ಸಂಘರ್ಷ. ೧೯೭೨-೧೯೭೩ರಿಂದ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಪರಿಸರದ ಜಾಗೃತಿಗೊಳಿಸುತ್ತಲೇ ಬಂದಿದ್ದೇವೆ ಆದರೂ ಮತ್ತೆ ಮತ್ತೇ ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗೂ ಅದರ ಮಹತ್ವ ಅರಿಯುವ ಜೊತೆಗೆ ನಮ್ಮಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅವಲೋಕಿಸಿ ಸಂರಕ್ಷಿಸಲು ಪಣತೊಡುವ ಮಹತ್ವದ ದಿನ. ಈ ಪರಿಸರ ಅನ್ನೋ ಮೌನ ದೃಶ್ಯ ದೇವತೆ ಆರಾಧನೆ ಪ್ರಾಚೀನ ಕಾಲದಿಂದಲೂ ಸಾಗಿ ಬಂದಿದೆಯಾದರು ಇಂದಿನ ಪ್ರಕೃತಿ ಆರಾಧಕರೆ ಭಿನ್ನ. ಮಾತನಾಡುವಂತಹ ವಿವೇಚನೆ ಮನುಷ್ಯನಂತೆ ಪ್ರಕೃತಿಗೂ ಇದ್ದಿದ್ದರೆ ಬಹುಶಃ ಸೇಟೆದು ನಿಂತು ಪ್ರತಿರೋಧವೊಡ್ಡಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತೇನೋ.! ದುಡಿಮೆಯ ಅರ್ಧದಷ್ಟು ಆರೋಗ್ಯಕ್ಕೆ, ಆಸ್ಪತ್ರೆಗೆ ಹಾಕುವ ನಮಗೆ ಪ್ಲಾಸ್ಟಿಕ್ನ ಹಸಿರು ವರ್ಣದ ನೀರು ಸೇವಿಸದ, ಆಮ್ಲಜನಕ ಬಿಡುಗಡೆ ಮಾಡದ, ಇತರೆ ಗೊಬ್ಬರ ಬಯಸದೆ ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಕಾರ್ಖಾನೆಗಳ ಮೂಲಕ ಹೆರಿಗೆಯಾದ ಸಾವಿಲ್ಲದ ವಸ್ತುಗಳ ಮೇಲೆಯೇ ಹೆಚ್ಜಿನ ಮೋಹವೆಂದರೆ ಅತಿಶಯೋಕ್ತಿಯೇನಲ್ಲ. ನಗರವಾಸಿಗಳ & ಹಳ್ಳಿಗರ ನಿತ್ಯ ಬದುಕು ಪ್ರಕೃತಿಯ ಮಧ್ಯೆಯೇ. ಮಾನವನು ಪ್ರಕೃತಿಯ ಶಿಶುವಾಗಿದ್ದು ಪ್ರಕೃತಿಯ ಉಳಿವಿಲ್ಲದೆ ಮನುಷ್ಯ & ಪ್ರಾಣಿ ಸಂಕುಲದ ಆಸ್ತಿತ್ವಕ್ಕೆ ಧಕ್ಕೆಯಾಗುವುದರಲ್ಲಿ ನಿಸ್ಸಂದೇಹ. ಪ್ರಸ್ತುತ ಆಧುನೀಕರಣದ ಭರಾಟೆಯಲ್ಲಿ ಕೈಗಾರಿಕರಣ, ನಗರೀಕರಣ, ವಿಜ್ಞಾನ & ತಂತ್ರಜ್ಞಾದ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ಸಂರಕ್ಷಣೆಯನ್ನು ಮರೆತು ಆಧುನಿಕ ಜಗತ್ತು ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಮಣ್ಣಿನ ಮಾಲಿನ್ಯ, ಕಾಡಿನ ನಾಶಕ್ಕೆ ಕಾರಣರಾಗುತ್ತಲೇ ಬಂದಿದ್ದು, ಹೃದ್ರೋಗ, ಉಸಿರಾಟ, ಕ್ಷಯ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಜನ್ಮ ತಾಳಿ ಮಾನವ ಸಂತತಿಗೆ ಕಾಡುತ್ತಲೇ ಬಂದಿವೆ ಎಂಬುವುದನ್ನು ಮರೆಯಬಾರದು. ಬಹು ಮಹಡಿಯ ಕಟ್ಟಡಗಳು ತಲೆ ಎತ್ತುತ್ತಲೇ ಇವೆ, ಆದರೆ ಪ್ರಕೃತಿಯ ಸೊಬಗು ಮಾತ್ರ ಕಾಸು ಖರ್ಚು ಮಾಡಿ ಸವಿಯುವ ದುಃಸ್ಥಿತಿಗೆ ತಲುಪಿದ್ದೇವೆ. ಇವಕ್ಕೆಲ್ಲ ಕಾರಣ ನಮ್ಮೊಳಗೆ ಅಂತರ್ಗತವಾಗಿ ಅಡಗಿ ಕುಳಿತ ಬಯಕೆಯೆಂಬ ಧೂರ್ತ, ಪ್ರಕೃತಿವೆಂಬ ಸಂಜೀವಿನಿಯು ಮಾನವನ ಹಸಿವಿಗೆ ಕಸುವು ನೀಡಿದರೆ ಪ್ರಕೃತಿಯ ಹಸಿವಿಗೆ ಕಸುವು ಮನುಷ್ಯನೇ ಆಗಬೇಕಾದ ದುಃಸ್ಥಿತಿ ಬರಬಹುದು, ಆದ್ದರಿಂದ ಪ್ರಕೃತಿ ರಕ್ಷತಿ ರಕ್ಷಿತಾಃ ಅನ್ನೋ ಮಾತು ಮರೆಯದೆ ಪ್ರಕೃತಿಯ ಸೊಬಗನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಧಾವಂತದಲ್ಲಿ ಎಲ್ಲಿ, ಯಾವ ರೀತಿ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದೇವೆಂದು ಅರಿಯದೆ ಸಾಗುತ್ತಲೇ ಇದ್ದೇವೆ. ಸೇವಿಸಲು ಶುದ್ಧ ಗಾಳಿ,ನೀರಿಲ್ಲದೆ ಬಾಟಲ್ ನೀರು ಸೇವಿಸುವ ನಾವು ಮುಂದೊಂದು ದಿನ ಆಮ್ಲಜನಕದ ಟ್ಯಾಂಕ್ ಟೊಂಕಕ್ಕೆ ಕಟ್ಟಿಕೊಂಡು ಜೀವ ಉಳಿಸಿಕೊಳ್ಳುವ ಸಲುವಾಗಿಯೇ ದುಡಿದು  ಹೆಣವಾಗಬೇಕಾದ ಸಮಯ ಬಂದೊದಗಬಹುದು. ಈಗಾಗಲೇ ಪ್ರಾಣಿ ಸಂಗ್ರಹಾಲಯ, ಗಾರ್ಡನ್ಗಳೆಂದು ನಿರ್ಮಿಸಿಕೊಂಡು ಹಣ ಪೀಕಿ ಕೊಳ್ಳುವ ವ್ಯವಸ್ಥೆ ಆರಂಭವಾಗಿದ್ದು ಅದೆಲ್ಲ ಕ್ಷಣ ಮಾತ್ರದ ಆನಂದ. ಬದುಕು, ಬದುಕಲು ಬಿಡು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುತ  ಇತರೆ ಪ್ರಾಣಿಗಳನ್ನು, ಪಕ್ಷಿಗಳನ್ನು ಸ್ವಾತಂತ್ರವಾಗಿ, ಸ್ವಚೆಂದವಾಗಿ ಬಿಡಬೇಕು ಆಗ ನಿಜವಾದ ಪ್ರಕೃತಿ ಸೌಂದರ್ಯ ಶಾಶ್ವತವಾಗಿ ನೆಲೆಯೂರುವಂತಹ ವ್ಯವಸ್ಥೆ ಆಗಬಹುದು. ಕಲ್ಪನೆಗೂ ನಿಲುಕದ ನಿಸರ್ಗದ ತಾಣಗಳನ್ನು ಅಳಿವಿನಂಚಿನಲ್ಲಿ ದೂಡಿರುವ ಕಾರಣ ನಾಳೆ ನಮ್ಮಗಳ ಅಳಿವಿನ ದಿನಗಳು ಹತ್ತಿರ ಬಂದಿವೆ ಎಂಬುವುದನ್ನು  ಈಗಾಗಲೇ ಕೊರೊನಾ ಮಾರಿಯು ಸೂಚನೆ ಕೊಟ್ಟು ಎಚ್ಚರಿಸಿದೆ. ನಮ್ಮ ಹೆಣಗಳು ನಮ್ಮವರೇ ಮುಟ್ಟದಂತಹ ದುಃಸ್ಥಿತಿಗೆ ಬಂದಿದ್ದೇವೆಂದರೆ ಮೌನ ಪ್ರಕೃತಿಯು ಹೆಣಗಳನ್ನು ಹುಳಲು ತೆರಿಗೆ ಕೇಳುತ್ತಿರುವಂತೆ ಭಾಷವಾಗುತ್ತಿದೆ ಹಾಗೂ ಧರೆಯು ತನ್ನ ಒಡಲೊಳಗೆ ಸ್ವೀಕರಿಸಿ ತೃಪ್ತಿ ಪಡಲು ಸಹ ಸಂಕೋಚ ಪಡುತ್ತಿದೆ ಅನ್ನಿಸುತ್ತೆ.! ಸೋಜಿಗವಲ್ಲವೇ..!? ಮರಗಿಡಗಳಲ್ಲಿ ಇದ್ದಿದ್ದರೆ ನೆತ್ತರ ಕೆಂಪು ಧರೆಯೆಲ್ಲ ಆಗಿರುತ್ತಿತ್ತು ಇಷ್ಟೊತ್ತಿಗೆ ಕೆಂಪು!. ಇಷ್ಟೊಂದು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲಗಳ ನಾಶಕ್ಕೆ ಮಾನವ ಸಂಕುಲದ ಸ್ವಾರ್ಥವೇ ಪ್ರಧಾನವೆಂದರೆ ತಪ್ಪಾಗದು. ಭಾರತೀಯ ನೆಲದಲ್ಲಿ ವನಸಿರಿಯ ಸೊಬಗು ವರ್ಣಿಸಲಸದಳ ಏಕೆಂದರೆ ಇಲ್ಲಿನ ಪ್ರತಿ ಸಸ್ಯವು ಸಂಜೀವಿನಿಗಳಂತೆ..! ವೈದ್ಯ ಲೋಕ ಕಣ್ಬಿಡುವ ಮುನ್ನವೇ ನಮ್ಮ ಪೂರ್ವಜರು ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಂಡು ಈ ಪ್ರಕೃತಿ ವಿಸ್ಮಯದ ಮಹತ್ವವನ್ನು ನಮ್ಮ ಪೀಳಿಗೆಗೆ ವರ್ಗಾಯಿಸಿದ್ದು ಇಡೀ ವಿಶ್ವವೇ ನಮ್ಮೆಡೆ ಗಮನ ಕೇಂದ್ರೀಕರಿಸಿ ನೋಡುವಂತೆ ಮಾಡಿದೆ. ಹೀಗೆ ನಮ್ಮಉಪಯೋಗಕ್ಕೆ ಕಾಡುಗಳನ್ನು ಸಂಪೂರ್ಣ ನಾಶಗೊಳಿಸುತ್ತ ಸಾಗಬೇಕೆ!? ಅಥವಾ ಉಳಿಸುವೆಡೆಗೆ ಗಮನ ಹರಿಸಬೇಕೆ!? ಎಂಬುದನ್ನು ಅರಿತು ಏರುತ್ತಿರುವ ಜಾಗತಿಕ ತಾಪಮಾನ & ಜನ ಸಂಖ್ಯೆಯ ನಿಯಂತ್ರಣ ಮಾಡುತ್ತ ಇಂದಿನ ಶಾಲಾ,ಕಾಲೇಜಿನ ಮಕ್ಕಳಿಗೆ ವಿಜ್ಞಾನ,ತಂತ್ರಜ್ಞಾನದ ಜೊತೆಗೆ ಪರಿಸರ ಮಹತ್ವವನ್ನು ತಿಳಿಸಿಕೊಡುವ ಅತ್ಯಗತ್ಯವಿದೆ. ಭಾರತ ಸರ್ಕಾರ ಜೂನ್ ಮಾಸ ಸಂಪೂರ್ಣ ವನಮಹೋತ್ಸವ ಆಚರಣೆ ಮಾಡುವ ಕೆಲಸ ಮಾಡುತ್ತಿದ್ದು ಅದರಲ್ಲಿ ಪೂರ್ಣ ಪ್ರಮಾಣದ ತೊಡಗಿಸಿಕೊಳ್ಳುವಿಕೆ ಆಗಬೇಕಿದೆ. ಶುದ್ಧಗಾಳಿ & ನೀರು, ಉತ್ತಮ ಆಹಾರ, ಅಂತರ್ಜಲ ಏರಿಕೆ ಹಾಗೂ ತಾಪಮಾನದ ಇಳಿಕೆಗೆ ಸರ್ಕಾರ & ಕೈ ಜೋಡಿಸುತ್ತಿರುವ ಸಂಸ್ಥೆಗಳಿಗೆ ನಾವು ಸಹಕರಿಸುತ್ತ ಪ್ರತಿ ಕುಟುಂಬದಲ್ಲಿ ಎಷ್ಟು ಜನರಿದ್ದೆವೋ ಅಷ್ಟು ಮರಗಳನ್ನು ನೆಡುವ ಪ್ರಯತ್ನ ಮಾಡುವ ಅವಶ್ಯವಿದೆ. ಹಾಗೂ ಕೃಷಿಯಲ್ಲಿ ತೊಡಸಿಗಿಸಿಕೊಂಡಿರುವ ರೈತವರ್ಗಕ್ಕೆ ಬೆಲೆಬಾಳುವ ಮರಗಳನ್ನು ಬೆಳೆಸಲು ಸಂಸ್ಥೆಗಳು ಸಾಲ ಕೊಡಲು ಸಹ ಮುಂದಾಗಿದ್ದು ಸರ್ಕಾರವು ಮುಂದಾಗಿದೆ. ಜೊತೆಗೆ ಕೆರೆಗಳ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಕಾಡಂಚಿನ ಗ್ರಾಮಗಳ ಜನತೆಗೆ ವನ್ಯ ಜೀವಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳುವುದು. ಹಾಗೂ ವನ್ಯ ಜೀವಿಗಳ ಜೀವಕ್ಕೆ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾ ಅರಣ್ಯ ಕೃಷಿ ಯೋಜನೆ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಳಿಜಾರಿಗೆ ಇಂಗು ಗುಂಡಿಗಳ ನಿರ್ಮಾಣ ಮಾಡುತ್ತ ಕೃಷಿಕರಿಗೂ ಸರ್ಕಾರ ಸಹಕಾರ ನೀಡುತ್ತಾ ಪ್ರಕೃತಿಯ ಉಳಿವಿಗೆ ಎಲ್ಲಾರು ಶ್ರಮಿಸುವ ಅಗತ್ಯವಿದೆ ಎಂಬ ಇಂಗಿತ ನನ್ನದು. ಧನ್ಯವಾದ. ***********

ಪ್ರಕೃತಿ ರಕ್ಷತಿ ರಕ್ಷಿತಾಃ Read Post »

ಕಾವ್ಯಯಾನ

ಗರಿ ಹುಟ್ಟುವ ಗಳಿಗೆ

ಗರಿ ಹುಟ್ಟುವ ಗಳಿಗೆ ಫಾಲ್ಗುಣ ಗೌಡ ಅಚವೆ ರಾತ್ರಿಯಿಡೀ ಹೊಯ್ದ ಮಳೆಗೆಹದಗೊಂಡ ಹರೆಯದ ಬೆದೆಗೆಮುದನೀಡಿದ ನರಳುವಿಕೆಯಲ್ಲಿಇನ್ನೂ ಎದ್ದಿಲ್ಲ ಇಳೆ ಬೇಸಿಗೆಗೆ ಧಿಕ್ಕಾರ ಕೂಗಿದಮರಜಿರಲೆಗಳ ಅನಿರ್ದಿಷ್ಟಾವಧಿಯನಿರಸನ ಅಂತ್ಯವಾಗಿದೆಹಣ್ಣಿನರಸ ನೀಡಲು ಮೋಡಗಳುಧರೆಗಿಳಿದಿವೆ. ಮತ್ತೆ ಮತ್ತೆ ಬೀಳುವ ಮಳೆಅವಳ ನೆನಪುಗಳ ಚಿಗುರಿಸಿಬದುಕುವ ಆಸೆ ಮೂಡಿಸಿದೆಹುಲ್ಲು ಕಡ್ಡಿಗೆ ಜೀವ ಬಂದಂತೆ! ಹೊಯ್ಯುವ ಜುಮುರು ಮಳೆಗೆಅದುರುವ ಮರದ ಎಲೆಗಳುಮೋಡಗಳಿಗೆ ಸಂತಸದ ಸಂದೇಶರವಾನಿಸಿವೆ. ಧರೆಗಿಳಿದ ಮಳೆಗೆ ಬೆರಗಾದ ಕಪ್ಪೆಗಳುಕೂಗಿ ಕೂಗಿ ಕೂಗಿಖುಷಿಗೊಂಡು ಬೆದೆಗೊಂಡಿವೆ. ಹೊಳೆ ಹಳ್ಳಗಳಲ್ಲಿಯ ಮರಿಗಪ್ಪೆಗಳುಬಾಲ ಕಳಚಿ ಮೂಡಿ ಬಂದರೆಕ್ಕೆಗಳ ಕಂಡುಛಂಗನೆ ಕುಣಿದು ಕುಪ್ಪಳಿಸಿವೆ. ಭೂರಮೆಯ ಉಬ್ಬು ತಗ್ಗಿನ ಮೇಲೆಹೊದೆದ ಮಂಜು ಮುಸುಕನು ಸರಿಸಿತುಂಟ ಮೋಡ ಪುಳಕಗೊಂಡಿದ್ದಾನೆ ಮುಸುಕಿ.ಹದ ಹಸಿರ ಮೈಯಿಂದಹೊರಟ ಗಾಳಿ ಗಂಧನಿನ್ನ ಮೈಯಗಂಧ ನೆನಪಿಸಿತು. ಹೊಸ ಹರೆಯದ ಇಳೆಗೆಈಗ ಗರಿ ಹುಟ್ಟುವ ಗಳಿಗೆ!! ********

ಗರಿ ಹುಟ್ಟುವ ಗಳಿಗೆ Read Post »

ಕಾವ್ಯಯಾನ

ಸ್ವಾರ್ಥಿಯಾಗುತಿದ್ದೇನೆ.

ಸ್ವಾರ್ಥಿಯಾಗುತಿದ್ದೇನೆ. ಜ್ಯೋತಿ ಡಿ.ಬೊಮ್ಮಾ ಆಗ ಬದುಕುತಿದ್ದೆ ಜೀವದುಂಬಿ ,ನಟಿಸುತ್ತಿರಲಿಲ್ಲಈಗಲೂ ಬದುಕುತಿದ್ದೆನೆ , ನಟಿಸುತ್ತ ಆಗ ಮಾತಾಡುತಿದ್ದೆ ಮನಸ್ಸು ಬಿಚ್ಚಿನಿರ್ಗಳವಾಗಿಈಗಲೂ ಮಾತಾಡುತ್ತೆನೆ ಅಳೆದು ತೂಗಿಒಂದೊಂದೆ ಆಗ ಪ್ರೀತಿಸುತಿದ್ದೆ ಎಲ್ಲರನ್ನೂ ನಿಸ್ವಾರ್ಥದಿಂದಈಗಲೂ ಪ್ರೀತಿಸುತ್ತೆನೆ ಅಥವಾ ಪ್ರೀತಿಸುವಂತೆನಾಟಕವಾಡುತ್ತೆನೆ ಆಗ ಸ್ಪಂದಿಸುತಿದ್ದೆ ಥಟ್ಟನೆ ,ಯಾವಪ್ರತಿಫಲಾಪೇಕ್ಷೆ ಇಲ್ಲದೆ..ಈಗ ಅವರಿಂದಾಗುವ ಲಾಭ ನಷ್ಟ ಗಳುಅವಲಂಬಿಸಿರುತ್ತದೆ ನನ್ನ ಸಹಾಯಹಸ್ತ ಆಗ ನಗುತಿದ್ದೆ ನಿಷ್ಕಲ್ಮಷವಾಗಿ ಮನದುಂಬಿಈಗಲೂ ನಗುತ್ತೆನೆ ಹಿಂದೆಮುಂದೆ ಕೊಂಚ ತುಟಿಯರಳಿಸಿ ಆಗ ಹಾತೊರೆಯುತಿತ್ತು ಮನಸ್ಸುಎಲ್ಲರೊಳಗೊಂದಾಗಿ ಬೆರೆಯಲು ನಲಿಯಲುಈಗ ಹುದುಗುತ್ತೆನೆ ಒಂಟಿತನದ ಚಿಪ್ಪಿನಲ್ಲಿನನ್ನನ್ನು ನಾನು ನಿರ್ಬಂಧಿಸಿಕೊಂಡು ಈಗ ಅವರು ಇವರು ಎಲ್ಲರೂ ಮುಖವಾಡಗಳೆತಮಗರಿವಿಲ್ಲದೆ ದಿನವೂ ನಟಿಸುವ ಪಾತ್ರಧಾರಿಗಳು ಈಗೀಗ ಸ್ವಾರ್ಥಿಯಾಗುತ್ತಿರುವೆ ನನಗರಿವಿಲ್ಲದೆಇಲ್ಲ ಇಲ್ಲ ..ಸ್ವಾರ್ಥಿಯಾಗುವಂತೆ ಪ್ರೇರೇಪಿಸುವಸಮಾಜದಲ್ಲಿ ನಾನಿದ್ದೆನೆ. *********

ಸ್ವಾರ್ಥಿಯಾಗುತಿದ್ದೇನೆ. Read Post »

You cannot copy content of this page

Scroll to Top