ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮನದ ಮಾಮರ ಸುವರ್ಣ ವೆಂಕಟೇಶ್ ಮನದ ಮಾಮರಕ್ಕೆ ಮದ ಮತ್ಸರದ ಕಟ್ಟೆ ಕಟ್ಟಿ ಸ್ವಾರ್ಥದ ಜಲವ ಹರಿಸಿ ಬೇರು ಪಸರಿಸಿ ನೇರಳಾಗಿ ನಿಲ್ಲು ಎಂದೊಡನೆ ಎಂತಯ್ಯಾ!! ಮೋಹದ ಕಿರಣವ ತಾಡಿಸಿ ಬೆಂಕಿಯ ಮಳೆ ಸುರಿಸಿ ಮರಳುಗಾಡಿನಲ್ಲಿ ನೆಡಸಿ ಹಚ್ಚ ಹಸಿರಿನ ತರು ಲತೆ ಹೊತ್ತು ಎದ್ದು ನಿಲ್ಲಂದರೆ ಎಂತಯ್ಯಾ!! ಭಾವ ಇಲ್ಲದ ಭಕುತಿ ತೋರಿಸಿ ಅಹಂಕಾರದ ತೊಗಟೆ ಊಡಿಸಿ ಬಿಸಿಲಿನಿಂದ ಬಲೆಯ ಹೆಣೆದು ವಿಷ ಬೀಜವ ಬಿತ್ತಿ ಅಮೃತದ ಸಿಹಿ ಬಯಸಿದೋಡನೆ ಎಂತಯ್ಯಾ!! *********

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

  ಸರಸ್ವತಿ ಜಿ. ಹರೀಶ್ ಬೇದ್ರೆ ಸರಸ್ವತಿ ಮುಂಜಾನೆ ಬೇಗನೇ ಎದ್ದು ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಿಕೊಟ್ಟು  ಅಂಗಡಿಯ ಬಳಿ ಬರುವ ಹೊತ್ತಿಗೆ ಎಂಟು ಗಂಟೆಯಾಗಿತ್ತು. ಆಗಲೇ  ಸಾಮಾಜಿಕ ಅಂತರ ಬಳಸಿ ನಿಂತಿದ್ದ ಕ್ಯೂ ಹೆಚ್ಚುಕಮ್ಮಿ ಅರ್ಧ ಕಿ.ಮೀ.ಗಿಂತ ಉದ್ದವಿತ್ತು. ಅಂಗಡಿ ತೆರೆಯಲು ಇನ್ನೂ ಒಂದು ಗಂಟೆ ಬಾಕಿ ಇತ್ತು. ಅಯ್ಯೋ ಏನಪ್ಪಾ ಮಾಡುವುದು ಎಂದು ಗೊಣಗುತ್ತಲೇ ಸರತಿಯಲ್ಲಿ ನಿಂತಳು. ಕ್ಷಣಕ್ಷಣಕ್ಕೂ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಜನರನ್ನು ನಿಯಂತ್ರಿಸಲು ಒಂದಿಬ್ಬರು ಪೋಲಿಸರು ಬಂದರು. ಅವರು ಹಿಂದೆ ಮುಂದೆ ಓಡಾಡುವಾಗ ಸರಸ್ವತಿಯನ್ನು ನೋಡಿ,  ಆಶ್ಚರ್ಯವನ್ನು ತಡೆದುಕೊಳ್ಳಲಾರದೆ ನಿಮಗೂ ಬೇಕಾ ಎಂದು ಕೇಳಿದರು. ಇವಳು ಬೇಕು ಎನ್ನುವಂತೆ ತಲೆ ಆಡಿಸಿದಳು. ಸರಿ ಸರಿ ಮೊದಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ ಎಂದು, ಇವರಿಗೆ ಯಾವಾಗ ಏನು ಸಿಗುತ್ತೆ ಗೊತ್ತು, ಹೊರಗಡೆ ಹೇಗೆ ಬರಬೇಕು ಗೊತ್ತಿಲ್ಲ ಮುಂತಾಗಿ ಹೇಳುತ್ತಾ ಮುಂದೆ ಸಾಗಿದರು.  ಪೋಲಿಸರಷ್ಟೇ ಅಲ್ಲದೆ ಆ ದಾರಿಯಲ್ಲಿ ಹೋಗಿ ಬರುವವರು ಸರಸ್ವತಿಯನ್ನು ವಿಚಿತ್ರವಾಗಿ ನೋಡುತ್ತಾ, ಅವಳು ಬಗ್ಗೆಯೇ ಹಗುರವಾಗಿ ಮಾತನಾಡುತ್ತಾ ಸಾಗುತ್ತಿದ್ದರು. ಇದನ್ನು ಗಮನಿಸಿದರೂ ಸರಸ್ವತಿ ಕ್ಯೂನಲ್ಲಿ ಅಂಗಡಿ ತೆರೆಯುವುದನ್ನೇ ಕಾಯುತ್ತಾ ನಿಂತಳು. ಒಂಬತ್ತು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಅಂಗಡಿ ಬಾಗಿಲು ತೆರೆಯಿತು. ಅಲ್ಲಿಯವರೆಗೆ ಸಂಯಮದಿಂದ ನಿಂತಿದ್ದ ಜನ ಸಾಮಾಜಿಕ ಅಂತರ ಮರೆತು ನುಗ್ಗಿದರು.  ಅವರಂತೆ ನುಗ್ಗಲು ಸಾಧ್ಯವಾಗದೆ, ಏನು ಮಾಡಬೇಕೆಂದು ತಿಳಿಯದೆ ಅಂಗಡಿ ಹತ್ತಿರದಲ್ಲೇ ಕಾಯುತ್ತಾ ನಿಂತಳು. ಜನರ ನುಗ್ಗಾಟ ಪೋಲಿಸರ ಹಿಡಿತಕ್ಕೂ ಬರಲಿಲ್ಲ.  ಇವಳು ಅಲ್ಲೇ ಹಾಗೆ ಕಾಯುತ್ತಲೇ ಇದ್ದಳು. ಇದನ್ನು ಗಮನಿಸಿದ ಪೋಲಿಸರು, ನೀವು ಇಲ್ಲಿ ನಿಂತಿದ್ದರೆ ನಿಂತೇ ಇರುತ್ತೀರಿ, ಏನು ಬೇಕು ಹೇಳಿ ಹಣಕೊಡಿ ತಂದುಕೊಡುತ್ತೇವೆ ಎಂದರು.  ಸರಸ್ವತಿ ಹೇಳಿ ಹಣ ಕೊಟ್ಟಳು. ಪೋಲಿಸಿನವರು ತಂದುಕೊಟ್ಟಿದ್ದನ್ನು ಹಿಡಿದು ಮನೆಗೆ ಬಂದವಳೇ , ಮನೆಯಲ್ಲೇ ಆಸೆಯಿಂದ ದಾರಿ ಕಾಯುತ್ತಿದ್ದ ಗಂಡನ ಮುಂದೆ ಇಟ್ಟಳು. ಒಂದುವರೆ ತಿಂಗಳಿಂದ ಒಂದು ಹನಿಯೂ ಸಿಗದೆ ಸತ್ತೇ ಹೋಗುವವನಂತೆ ಆಗಿದ್ದ ಅವನ ಮುಖದಲ್ಲಿ ಜೀವಕಳೆ ಮೂಡಿತು. ಇದನ್ನು ಕಂಡ ಸರಸ್ವತಿಗೆ, ಕ್ಯೂನಲ್ಲಿ ನಿಂತಾಗ ಇವಳನ್ನು ಅಸಹ್ಯವಾಗಿ ನೋಡಿ, ಮಾತನಾಡಿದ ಜನರ ಎಲ್ಲಾ ವಿಚಾರಗಳು ಮರೆತು ಹೋಯಿತು. **********

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಟಂಕಾ ರೇಖಾ ವಿ.ಕಂಪ್ಲಿ ೧ . ಲಲಿತ ರಾಗ ಕಲಿತೆನು ಈಗ ನಿನ್ನ ಜೊತೆಗೆ ಭಾವ ತುಂಬಿ ಕೊಡುವ ಪ್ರೇಮ ಸುಧೆಯೊಳಗೆ…… ೨. ನಿನಗೆ ಬೊಜ್ಜು ಮೂರ್ನಾಲ್ಕು ಗೊಜ್ಜನು ತಿಂದೆ ಏತಕೆ ಆ್ಯಸಿಡಿಟಿ ಕಾರಣ ಹಾಳಾಯಿತು ಹೊಟ್ಟೆ……. ೩. ಯಾಕೆ ಹುಡುಗ ತಂಟೆ ಮಾಡುತಿಯಾ ಒಂಟಿತನಕೆ ಭಂಗ ಮಾಡಬೇಡ ಬಿಟ್ಟು ಹೋಗ ಬೇಡ……… ೪. ನೀ ಕೊಟ್ಟ ಪೆಟ್ಟು ಮರಿಲಿಲ್ಲ ಗುರು ಆಧಾರವಾದೆ ನನ್ನ ಜೀವನದ ಬಂಡಿ ಸಾಗಿಸಲು….. ********* ರೇಖಾ ವಿ ಕಂಪ್ಲಿ

ಕಾವ್ಯಯಾನ Read Post »

ಕಥಾಗುಚ್ಛ

ಮಕ್ಕಳ ಕಥೆ

“ಕತ್ತೆಗೊಂದು ಕಾಲ”  ಅದು ಗಿರಿಕಂದರ ಪರ್ವತ ಶ್ರೇಣಿಗಳ ನಾಡು. ಅಲ್ಲಿ ಜಯದೇವ ಅರಸನು ರಾಜ್ಯ ಆಳುತಿದ್ದನು. ಆತ ತನ್ನ ಆಸ್ಥಾನದಲ್ಲಿ ಕುದುರೆಗಳ ಜೊತೆಗೆ ಕತ್ತೆಗಳನ್ನು ಸಾಕಿದ್ದನು. ಎಲ್ಲ ರಾಜರು ಕುದುರೆ ಸಾಕುತಿದ್ದರೆ, ಈತ ಮಾತ್ರ ಎರಡನ್ನು ಸಾಕುತಿದ್ದನು. ಈ ಮಾತು ರಾಜ್ಯದ ಎಲ್ಲ ಜನರಿಗೆ ಅಷ್ಟೆ ಅಲ್ಲ, ಕುದುರೆಗಳಿಗೂ ಆಶ್ಚರ್ಯವಾಗಿತ್ತು.                ಒಂದು ದಿನ ಸೇವಕರು ಕುದುರೆ ಮತ್ತು ಕತ್ತೆ ಒಟ್ಟಿಗೆ ಬಯಲಲ್ಲಿ ಮೈಯಲು ಬಿಟ್ಟರು. ಆಗ ಮೈಯುತ್ತಾ ಕುದುರೆ ಒಮ್ಮೇಲೆ ಹುಂಕರಿಸುತ್ತಾ ಕತ್ತೆಗೆ, “ಏ.. ಕತ್ತೆ, ನಿನ್ನದೇನೆ ಇಲ್ಲಿ ಕೆಲಸ..?” ಎಂದು ತೆಗಳಿ ನಕ್ಕಿತು. ಆಗ ಕತ್ತೆ, “ಕುದುರೆಯಣ್ಣಾ, ನಾವು  ಏನಾದರೂ ರಾಜನಿಗೆ ಉಪಯೋಗ ಬರುತ್ತಿರಬಹುದು, ಆ ಕಾರಣವೇ ಆತ ನಮಗೆ ಸಾಕಿರಬೇಕಲ್ಲ..!” ಎಂದು ಹೇಳಿ  ಸುಮ್ಮನೆ ಹುಲ್ಲು ತಿನ್ನುವದು. ಆದರೆ ಕುದುರೆ ಸುಮ್ಮನಾಗದೆ, “ ಏ.. ಮುರ್ಖ ಕತ್ತೆ, ನಿನಗೆ ತಿನ್ನುವದನ್ನು ಬಿಟ್ಟು ಮತ್ತೇನು ಬರುತ್ತೆ ಹೇಳು. ನೋಡು, ಯುದ್ಧ ಮಾಡಲು ನಾವು ಹೋಗುತ್ತೇವೆ, ಪ್ರಯಾಣ ನಮ್ಮಿಂದಲೆ, ಓಟದ ಸ್ಪರ್ಧೆಯಾಗಲಿ ಹಬ್ಬ ಉತ್ಸವ ಆಗಲಿ ನಮ್ಮನ್ನೆ ಬಳಿಸುವರು. ನಿನ್ನ ಒಂದಾದರೂ ಉಪಯೋಗ ಹೇಳು ನೊಡೋಣ..” ಎಂದು ಮತ್ತೆ ಕೆಣಕಿತು. ಆಗ ಅದು, “ಕುದುರೆಯಣ್ಣಾ ನೀನು ಜಾಣ ಎಂಬುದು ನನಗೆ ಗೊತ್ತು. ಆದರೆ ಪ್ರತಿಯೊಂದು ಪ್ರಾಣಿಗಳು ಹುಟ್ಟಿದ್ದು, ಏನಾದರೂ ಮಾಡಲಿಕ್ಕೆ. ನಮಗೂ ಒಂದು ಕಾಲ ಬರುತ್ತೆ..” ಎಂದು ಹೇಳಿ ಕತ್ತೆ ದೊಡ್ಡಿಗೆ, ಕುದುರೆ ಲಾಯಕ್ಕೆ ಹೋದವು.              ಕೆಲ ದಿನಗಳ ನಂತರ ವೈರಿ ರಾಜನು ಯುದ್ಧ ಸಾರಿ ಹೊರಟಾಗ ಜಯದೇವನು ಪ್ರತಿ ಹಲ್ಲೆಗಾಗಿ ಅಶ್ವದಳದ ಸಿದ್ಧತೆ ಮಾಡಿಕೊಳ್ಳಿ ಎಂದು ಅಪ್ಪಣೆ ಕೊಟ್ಟನು. ಆಗ ಸೇವಕರು ಕುದುರೆಗಳಿಗೆ ಹೆಚ್ಚಿನ ಶಕ್ತಿದಾಯಕ ಆಹಾರ ಕೊಡಲು ಪ್ರಾರಂಭ ಮಾಡುತ್ತಾರೆ. ಕುದುರೆ ಲಾಯ ಮತ್ತು ಕತ್ತೆಯ ದೊಡ್ಡಿಯ ಮಧ್ಯ ತಂತಿಯ ಸಂರಕ್ಷಣೆ ಅಷ್ಟೆ. ಆಗ ಕತ್ತೆಯನ್ನು ನೋಡಿ ಕುದುರೆ, “ನೋಡಿದಿಯಾ ಕತ್ತೆ, ನಾವು ಯುದ್ಧಕ್ಕೆ ಹೊರಟಿದ್ದೇವೆ. ಅದಕ್ಕೆ ನಮಗೆ ಒಳ್ಳೊಳ್ಳೆ ರುಚಿಕರ ಚಂದಿ, ನಿನಗೆ ಬರಿ ಹುಲ್ಲು..” ಎಂದು ಹುಂಕರಿಸಿ ನಗುತ್ತದೆ. ಆಗ ಅದು ಮರು ಏನು ಮಾತನಾಡದೆ, “ಶುಭಾಶಯ ಕುದುರೆಯಣ್ಣಾ, ಗೆಲುವು ನಿನ್ನದಾಗಲಿ..” ಎಂದು ಶುಭ ಕೋರುತ್ತದೆ.          ಕುದುರೆ ರಣರಂಗದಲ್ಲಿ ಭೀಮ ಪರಾಕ್ರಮದಿಂದ ಕಾದಾಡಿ ಯುದ್ಧ ಗೆದ್ದು ಬರುತ್ತದೆ. ಅಲ್ಲಿಂದ ಓಡುತ್ತಾ ಓಡುತ್ತಾ ತನ್ನ ಲಾಯಕ್ಕೆ ಬರುವಾಗ ಮತ್ತೆ ಕತ್ತೆಯನ್ನು ನೋಡಿ, “ಎಲೇ.. ಕತ್ತೆ, ನಾವು ಯುದ್ಧ ಗೆದ್ದು ಬಂದೇವು. ವೈರಿ ಸೈನ್ಯ ಕಾಲಲ್ಲಿ ಹಾಕಿ ತುಳಿದೇವು. ಇದರಿಂದ ಸಂತೋಷನಾದ ರಾಜ, ನಾಳೆ ನಮ್ಮ ಮೆರವಣಿಗೆ ಇಟ್ಟಿದ್ದಾನೆ..” ಎಂದು ಜೋರಾಗಿ ಹೇಳಿತು. ಅದಕ್ಕೆ ಕತ್ತೆ, “ಗೆಲುವಿಗಾಗಿ ಶುಭಾಶಯ, ಕುದುರೆಯಣ್ಣಾ..”ಎಂದು ಹೇಳಿ ಸುಮ್ಮನೆ ಹುಲ್ಲು ತಿನ್ನುತ್ತದೆ. ಆದರೆ ಕುದುರೆ ಮಾತ್ರ ಸುಮ್ಮನಾಗುವದಿಲ್ಲ, “ಇಲ್ಲಾ, ನಮ್ಮ ರಾಜನು ಎಷ್ಟು ಮುರ್ಖನಿರಬಹುದು. ನಿಮ್ಮಂತಹ ಮೂರ್ಖ ಪ್ರಾಣಿಗಳನ್ನು ಕಟ್ಟಿಕೊಂಡು ಸುಮ್ಮನೆ ರಾಜ್ಯದ ವೆಚ್ಚ ಹೆಚ್ಚಿಗೆ ಮಾಡಿಕೊಳ್ಳುತಿದ್ದಾನೆ..” ಎಂದಾಗಲೂ ಕತ್ತೆ ಏನು ಮಾತನಾಡದೆ ಸುಮ್ಮನಿರುತ್ತದೆ.                     ಮರುದಿನ ರಾಜಧಾನಿಯಲ್ಲಿ ರಾಜನ ಮೆರವಣಿಗೆ ಆಗುತ್ತದೆ. ಅಲ್ಲಿ ಕುದುರೆಗಳ ಹೊಗಳಿಕೆ ಆಗುತ್ತದೆ. ಎಲ್ಲ ಜನರು ರಾಜ ಮತ್ತು ಕುದುರೆಗಳ ಮೇಲೆ ಪುಷ್ಪಾರ್ಪಣೆ ಮಾಡುತ್ತಾರೆ. ಅಂದು ರಾಜ ವೈರಿ ಮುಕ್ತನು ಆಗಿರುತ್ತಾನೆ. ಆದರೂ ಆತ ದೂರದ ಶತ್ರುಗಳಿಂದ ಯಾವ ತೊಂದರೆ ಆಗಬಾರದೆಂದು ಸಮೀಪದ ಎತ್ತರ ಪರ್ವತದ ಮೇಲೆ ಕೋಟೆ ಕಟ್ಟುವದಾಗಿ ಘೋಷಣೆ ಮಾಡುತ್ತಾನೆ. ಕೋಟೆ ಕಟ್ಟಬೇಕಾದರೆ ಕಲ್ಲು, ಮಣ್ಣು, ಕಟ್ಟಿಗೆ, ಸಿಮೇಂಟ್‍ಗಳಂತಹ ಭಾರವಾದ ವಸ್ತುಗಳನ್ನು ಮೇಲೆ ತಲುಪಿಸಬೇಕಿತ್ತು. ಕುದುರೆಗಳಿಂದ ಈ ಕಾರ್ಯ ಅಸಾಧ್ಯ ಎಂಬುದು ರಾಜನಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕಾಗಿ ಆತ, ‘ಕೋಟೆಯ ಕೆಲಸಕ್ಕೆ ಕತ್ತೆಗಳನ್ನು ಬಳಿಸಿಕೊಳ್ಳಿ..’ಎಂದು ಅಪ್ಪಣೆ ಕೊಡುತ್ತಾನೆ. ಎಲ್ಲ ಜನರಿಗೆ ಇದು ವಿಚಿತ್ರ ಅನಿಸುವದು, ಆದರೂ ಸೇವಕರು ಬಂದು ಕತ್ತೆಗಳನ್ನು ಒಯ್ಯುವಾಗ ಮತ್ತೆ ಕುದುರೆ ಕತ್ತೆಯನ್ನು ನೋಡಿ, “ಹೋಗು ಕತ್ತೆ ಹೋಗು.. ಅದು ನಿಮ್ಮಿಂದ ಆಗದ ಕೆಲಸ. ರಾಜನಿಗೆ ನಾಳೆಯಿಂದ ಮತ್ತೆ ನಮ್ಮನ್ನೆ ಕರೆಸಬೇಕಾಗುತ್ತದೆ..” ಎಂದು ನಸು ನಕ್ಕಿತು.             ಕತ್ತೆಗಳೆಲ್ಲಾ ಹೋಗಿ ಸಂಯಮದಿಂದ ಭಾರ ವಸ್ತುಗಳನ್ನು ಅತ್ಯಂತ ಕಾಳಜಿಯಿಂದ ಒಯ್ದು ಪರ್ವತದ ಮೇಲೆ ಚೆಲ್ಲುತ್ತವೆ. ಆ ದಿನ ಕತ್ತೆಗಳ ಶ್ರಮ ಮತ್ತು ಪ್ರಾಮಾಣಿಕತೆ ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಆಗ ಆತ, “ನಮ್ಮ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಗಳ ಆಹಾರ ಕಡಿಮೆ ಮಾಡಿ ಕತ್ತೆಗಳಿಗೆ ಕೊಡಿ..” ಎಂದು ಸೇವಕರಿಗೆ ಅಪ್ಪಣೆ ಮಾಡುತ್ತಾನೆ. ಅಂದು ಕತ್ತೆಗೆ ಬಹಳ ದಣಿವು. ಅದು ಹುಲ್ಲು, ಚಂದಿ ತಿಂದು ಸುಮ್ಮನೆ ಮಲಗಿ ಬಿಟ್ಟಿತು. ಆದರೆ ಕುದುರೆ ಮಾತ್ರ ಅದನ್ನು ನೋಡಿ ಮೂಗು ಮುರಿಯುತ್ತಿತ್ತು. ಪ್ರತಿ ದಿನ ಕುದುರೆ ಕತ್ತೆಯನ್ನು ಏನಿಲ್ಲಾ ಒಂದು ಮಾತು ಹೇಳಿ ಹಿಯಾಳಿಸುತ್ತಿತ್ತು. ಆದರೆ ಅದು ಮಾತ್ರ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಯ ಯಾವ ಮಾತಿನತ್ತ ಗಮನ ಕೊಡಲಿಲ್ಲ.              ಕತ್ತೆಗಳ ಪರಿಶ್ರಮದಿಂದ ಬ್ರಹತ್ ಕೋಟೆ ನಿರ್ಮಾಣ ಆಯಿತು. ಇದರಿಂದ ಸಂತೋಷನಾದ ರಾಜನು ಅಲ್ಲಿಯೆ ಪಟ್ಟಾಭಿಷೇಕ ಮಾಡಿಕೊಳ್ಳುವದಾಗಿ ಡಂಗುರು ಸಾರಿದನು. ಸುತ್ತಲಿನ ರಾಜರಿಗೆ ಆಮಂತ್ರಣ ಕಳುಹಿಸಿದನು. ರಾಜನ ಸಿಂಹಾಸನ ಕೂಡ ಕತ್ತೆಗಳೆ ಮೇಲಕ್ಕೆತ್ತಿ ಒಯ್ದವು. ಅಲ್ಲಿ ಬಂದವರೆಲ್ಲಾ ಕೋಟೆಯ ಅದ್ಭುತತೆ ಮಾತನಾಡುತ್ತಿದ್ದರು. ಇಷ್ಟು ಎತ್ತರ ರಾಜ ಭಾರವಸ್ತು ಹೇಗೆ ತಂದನು ಎಂದು ಆಶ್ಚರ್ಯ ಪಟ್ಟರು. ಆಗ ಜಯದೇವನು ಇದರ ಎಲ್ಲ ಶ್ರೇಯ ಕತ್ತೆಗಳಿಗೆ ಕೊಡುತ್ತಾನೆ. ಅಲ್ಲಿ ಬಂದ ರಾಜರು ಸಹ ಕತ್ತೆಗಳ ಕೆಲಸವನ್ನು ಮೆಚ್ಚುತ್ತಾರೆ. ಅಂದು ಮಾತ್ರ ಅಲ್ಲಿಯ ಭವ್ಯ ಕಾರ್ಯಕ್ರಮಕ್ಕೆ ಕತ್ತೆಗಳ ಉಪಸ್ಥಿತಿ ಇತ್ತು ಆದರೆ ಕುದುರೆಗಳನ್ನು ಕೆಳಗಡೆಯ ಮೈದಾನದಲ್ಲಿ ಕಟ್ಟಲಾಗಿತ್ತು.               ಮರುದಿನ ಕತ್ತೆ ಬಂದು ಕುದುರೆಗೆ, “ನೋಡಿದಿಯಾ ಕುದುರೆಯಣ್ಣಾ, ನಾನು ಅಂದು ಹೇಳಿದಂತೆ ಈ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಒಂದು ಒಳ್ಳೆಯ ಕಾಲ ಬರುತ್ತದೆ. ಅದಕ್ಕೆ ಕಾಯಬೇಕು ಅಷ್ಟೆ. ಆದರೆ ಎಲ್ಲಕ್ಕಿಂತ ಮಹತ್ವದ್ದು ನಮಗೆ ಸಿಕ್ಕ ಅವಕಾಶವನ್ನು ನಾವು ಪರಿಶ್ರಮದಿಂದ ಪ್ರಾಮಾಣಿಕವಾಗಿ ಮಾಡಬೇಕು. ಆವಾಗ ಎಲ್ಲರು ಜಯಕಾರ ಹಾಕುತ್ತಾರೆ..” ಎಂದು ವಿನಯದಿಂದ ಹೇಳಿತು. ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಅದು ತನ್ನ ಅಹಂಕಾರ ಬಿಟ್ಟು ಸ್ನೇಹದಿಂದ ಬಾಳುತ್ತದೆ. ********* ಮಲಿಕಜಾನ ಶೇಖ

ಮಕ್ಕಳ ಕಥೆ Read Post »

ಕಾವ್ಯಯಾನ

ಕಾವ್ಯಯಾನ

ತಿಪ್ಪೆಗುಂಡಿಯಲ್ಲಿ ಮಗು ಫಾಲ್ಗುಣ ಗೌಡ ಅಚವೆ ಅಲ್ಲಿ ಮುರ್ಕಿಯಲ್ಲಿರುವತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆಇದೀಗ ಎಂಬಂತೆ ಒಂದು ಮಗು. ನವೆಂಬರ್ ಬೆಳಗಿನ ಚುಮು ಚುಮುಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆಅಲ್ಲೇ ಗುಲ್ ಮೋಹರ್ ಮರಗಳಲ್ಲಿಹೊಡೆದು ಕೂಡ್ರಿಸಿದಂತೆಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ. ಗಸ್ತು ತಿರುಗುವ ಇರುವೆಗಳುಯಾರನ್ನೋ ಕರೆತರಲು ಹೊರಟಂತೆಎಲ್ಲಿಗೋ ಪಯಣ ಹೊರಟಿವೆ. ತುಸು ತಡವಾಗಿ ವಾಕಿಂಗ್ ಹೊರಟವರುಮಂಕಿ ಕ್ಯಾಪ್ ಬಿಟ್ಟು ಬಂದವರಂತೆತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡುಹೊರಡುವ ಸನ್ನಾಹದಲ್ಲಿಅವರದೇ ರಾತ್ರಿಯಹಳಸಿದ ಕನಸುಗಳ ಜೊತೆಗೆ. ಹಾಸಿಗೆ ಮಡಚಿಟ್ಟು ಆಗಸಮುಖ ತೊಳೆದು ಕೊಳ್ಳುತ್ತಿದೆಮೋಡಗಳ ಮರೆಯಲ್ಲಿಬೆಳಗಿನ ಕೆಲಸಕ್ಕೆ ತಡವಾಯಿತೆಂಬರಾತ್ರಿ ನರಳಿಕೆಯ ಮುಖ ಭಾವದಲ್ಲಿ. ಪುರಸೊತ್ತು ಮಾಡಿಕೊಂಡುಬಸುರಾದವಳಿಗೆ ತೀಟೆಗೆಂಬಂತೆಹೊಟ್ಟೆಯ ತಿಂಗಳುಗಳಜವಾಬ್ದಾರಿಯಿಂದ ಯಾವಮುಸುಕಿನಲ್ಲಿ ಹುಗಿಸಿದ್ದಳೊ? ತಮ್ಮದೇ ಧಾವಂತದಲ್ಲಿ ಹಾಲು ತರಲುಹೊರಟವರಿಗೇನು ಗೊತ್ತುಅಲ್ಲೆ ಮಗು ಅಳುವ ಸದ್ದು?ಆಚೆ ಮನೆಯಲ್ಲಿ ದಿನ ಬೆಳಗಾದರೆಅಳುವ ಸದ್ದುಗಳುಅನವರತ ಧಾವಿಸುತ್ತಿರುತ್ತವೆ. ತಮ್ಮ ಏಕಾಂತಕ್ಕೆ ಭಂಗ ಬರುವದೆಂದುಬಿಟ್ಟು ಹೊರಟವರ ಮನಸುಇಡೀ ಜಗವನೊಂದು ಮಾಡುವಅಳುವ ಆಲಿಸುತ್ತಿದ್ದರೂಅಲೆಯದ ಸಮುದ್ರದಂತೆಸ್ತಬ್ಧಗೊಂಡಂತಿದೆಕೀಳರಿಮೆಯ ಬೇಲೆಯಲ್ಲಿ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳದೇಕರಳು ಕತ್ತರಿಸಿದ ರಕ್ತ ಒಸರುತ್ತಿರುವಮಗು ಮುಂದುವರೆಸಿದೆ ತನ್ನ ಪ್ರತಿಭಟನೆಇದನಾಲಿಸದೇ ಎಸೆದವರುನಸುಕಿನ ರೈಲು ಹತ್ತಿ ಹೊರಟಿದ್ದರುಅದು ಹೋದ ನಿಲ್ದಾಣದೆಡೆಗೆ. ರಸ್ತೆಯಲ್ಲಿ ಹೊರಟ ಹೆಂಗಸರ ಬಾಯಲ್ಲಿಪ್ರಕಟವಾದ ತಾಜಾ ಸುದ್ದಿಯೆಂದರೆಎಲ್ಲಿಂದಲೋ ಬಂದ ನಾಯಿಹೊತ್ತು ಹೋಯ್ತಂತೆ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೂರದ ಊರು ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ‌ ನನಗೆ‌ ಸಿಗಲೇ‌ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.) ******** ರಜಿಯಾ ಕೆ.ಬಾವಿಕಟ್ಟೆ

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಕೆಪ್ಪ ಅಂಜನಾ ಹೆಗಡೆ ಕೆಪ್ಪನ ಕಥೆ ಶುರುವಾಗುವುದು ನವರಾತ್ರಿಯಿಂದ. ನವರಾತ್ರಿಯೆಂದರೆ ಅದು ಅಂತಿಂಥ ನವರಾತ್ರಿಯಲ್ಲ. ಹಳೇಮನೆ ರಾಮಚಂದ್ರಣ್ಣನ ನವರಾತ್ರಿಯೆಂದರೆ ಯಲ್ಲಾಪುರ ತಾಲೂಕಿನಲ್ಲೆಲ್ಲ ಮನೆಮಾತಾದ ನವರಾತ್ರಿ ಅದು. ಚೌತಿ ಹಬ್ಬ ಮುಗಿದು ಇನ್ನೇನು ಹತ್ತೋ ಹದಿನೈದೋ ದಿನವಾಗುವಷ್ಟರಲ್ಲಿ ರಾಮಚಂದ್ರಣ್ಣನ ನವರಾತ್ರಿಯ ಧಾವಂತ ಶುರುವಾಗುತ್ತಿತ್ತು. ಅಟ್ಟದ ಮೇಲಿನ ಅಡಿಕೆ ಕಂಬಗಳನ್ನು ಒಂದೊಂದಾಗಿ ಕೆಳಗಿಳಿಸಿ ದೇವರಮನೆಯಲ್ಲಿ ನಿಲ್ಲಿಸುವುದರಿಂದ ಶುರುವಾಗುವ ನವರಾತ್ರಿ ಸಂಭ್ರಮ ಹಳೆಮನೆಯಲ್ಲಿ ವಿಜಯದಶಮಿಯವರೆಗೂ ಇರುತ್ತಿತ್ತು. ಅಲ್ಯೂಮಿನಿಯಂ ಬೋಗುಣಿಯೊಂದರಲ್ಲಿ ತಾನೇ ಕೈಯಾರೆ ತಯಾರಿಸಿಕೊಂಡ ಗೋಧಿಅಂಟಿನೊಂದಿಗೆ ಪ್ರತೀರಾತ್ರಿ ರಾಮಚಂದ್ರಣ್ಣ ಶಾರದೆಯ ಮಂಟಪ ರೆಡಿಮಾಡಲು ಕೂತುಬಿಡುತ್ತಿದ್ದ. ‘ಅಚ್ಯುತಂ ಕೇಶವಂ ರಾಮನಾರಾಯಣಂ’ ಎನ್ನುವ ತನ್ನ ಪ್ರೀತಿಯ ಭಜನೆಯೊಂದನ್ನು ಲಯಬದ್ಧವಾಗಿ ಹಾಡುತ್ತಾ ರಾಮಚಂದ್ರಣ್ಣ ಮಂಟಪ ಕಟ್ಟಲು ಕೂತನೆಂದರೆ ಇಡೀ ಹಳೇಮನೆ ಕೇರಿಯೇ ಅಲ್ಲಿ ನೆರೆಯುತ್ತಿತ್ತು. ಯೋಚಿಸಿದರೆ, ಕೆಪ್ಪನಿಗೂ ನನಗೂ ಅಂಥ ವ್ಯತ್ಯಾಸವೇನಿಲ್ಲ. ನಾನು ರಾಮಚಂದ್ರಣ್ಣನ ಮನೆ ಸೇರಿದಾಗ ನನಗೆ ಹನ್ನೊಂದು ವರ್ಷ. ಐದನೆಯ ಕ್ಲಾಸಿನವರೆಗೆ ಮಾತ್ರವೇ ಓದಲು ಅವಕಾಶವಿದ್ದ ಅಂಕೋಲೆಯ ಚಿಕ್ಕ ಹಳ್ಳಿಯೊಂದರಲ್ಲಿ ನಾನು ಹುಟ್ಟಿದ್ದು. ಅಮ್ಮನ ತಂಗಿ ಗಂಗಾಚಿಕ್ಕಿಯನ್ನು ರಾಮಚಂದ್ರಣ್ಣನ ತಮ್ಮನಿಗೆ ಮದುವೆ ಮಾಡಿಕೊಟ್ಟಿದ್ದರು. ರಾಮಚಂದ್ರಣ್ಣ ವಯಸ್ಸಿನಲ್ಲಿ ನನ್ನ ಅಪ್ಪನಿಗಿಂತ ದೊಡ್ಡವನಾಗಿದ್ದರೂ ನಾವೆಲ್ಲ ಅವನನ್ನು ಕರೆಯುತ್ತಿದ್ದದ್ದು ರಾಮಚಂದ್ರಣ್ಣ ಅಂತಲೇ. ರಾಮಚಂದ್ರಣ್ಣನಿಗೆ ಇದ್ದ ಒಬ್ಬನೇ ಮಗ ಹಾವು ಕಚ್ಚಿ ಸತ್ತುಹೋದನೆಂದು ಗಂಗಾಚಿಕ್ಕಿ ಯಾವಾಗಲೋ ಹೇಳಿದ್ದು ಬಿಟ್ಟರೆ, ಆ ವಿಷಯವನ್ನು ಯಾರೂ ಮಾತಾಡುತ್ತಿರಲಿಲ್ಲ. ರಾಮಚಂದ್ರಣ್ಣ ಮಾತ್ರ ಯಾವ ದುಃಖವೂ ಶಾಶ್ವತವಲ್ಲವೆಂಬ ನಿರ್ಲಿಪ್ತತೆಯಲ್ಲಿ ಊರಿನ ಮಕ್ಕಳನ್ನೆಲ್ಲ ವಿಶ್ವಾಸದಿಂದ ನೋಡುತ್ತಾ ತಾನಾಯಿತು ತನ್ನ ನವರಾತ್ರಿಯಾಯಿತು ಎಂಬಂತೆ ಇದ್ದುಬಿಡುತ್ತಿದ್ದ. ನಾನು ಐದನೇ ಕ್ಲಾಸು ಮುಗಿಸಿ ಬೇಸಿಗೆರಜೆಯ ಮಜವನ್ನೆಲ್ಲ ಚಿಕ್ಕಮ್ಮನ ಮನೆಯಲ್ಲಿಯೇ ಅನುಭವಿಸಿ ಮುಗಿದಮೇಲೆ, ಮನೆಗೆ ವಾಪಸ್ಸು ಕರೆದೊಯ್ಯಲು ಅಪ್ಪ ಬಂದಿದ್ದ. ಅಪ್ಪ, ಚಿಕ್ಕಪ್ಪ, ರಾಮಚಂದ್ರಣ್ಣ ಮಧ್ಯಾಹ್ನದ ಮೇಲೆ ಬಾಳೆಕಾಯಿ ಚಿಪ್ಸ್ ತಿನ್ನುತ್ತಾ ಚಾ ಕುಡಿಯುವಾಗ ನನ್ನ ಆರನೇ ಕ್ಲಾಸಿನ ಸಮಸ್ಯೆ ಧುತ್ತೆಂದು ಚಿಪ್ಸ್ ಪ್ಲೇಟಿಗೆ ಬಿತ್ತು. “ಅದೆಂಥ ಸಮಸ್ಯೆ, ಅವಳು ನಮ್ಮನೇಲೇ ಶಾಲೆಗೆ ಹೋಗಲಿ; ನಮ್ಮನೆಲ್ಲೂ ನವರಾತ್ರಿಗೊಂದು ದುರ್ಗೆ ಬೇಕು ಮಾರಾಯ” ಎಂದವನೇ ರಾಮಚಂದ್ರಣ್ಣ ಚಾ ಲೋಟಾ ತೊಳೆಯಲು ಎದ್ದುಹೋದ. ಆವತ್ತಿಂದ ಹಳೇಮನೆ ನವರಾತ್ರಿಯ ಪರ್ಮನೆಂಟ್ ದುರ್ಗೆ ಆದೆ ನಾನು. ನನಗೆ ನೆನಪಿದ್ದಂತೆ ಅದು ನನ್ನ ಏಳನೇ ಕ್ಲಾಸಿನ ನವರಾತ್ರಿಯಿರಬೇಕು. ವಿಜಯದಶಮಿಯ ದಿನ ಶಾರದೆಯನ್ನು ಕಳುಹಿಸಿ, ಕೇರಿಯ ಹೆಂಗಸರೆಲ್ಲ ‘ಹರಸಿದಳೆಲ್ಲರಿಗೂ ಶಾರದೆ ಒಲಿದು’ ಎಂದು ಹಾಡುತ್ತಿದ್ದ ಎಮೋಷನಲ್ ಸನ್ನಿವೇಶದಲ್ಲಿ ಈ ಕೆಪ್ಪ ಕೇರಿಗೆ ಕಾಲಿಟ್ಟಿದ್ದ. ಅವನು ತೊಟ್ಟಿದ್ದ ಬೆಳ್ಳನೆಯ ಬಟ್ಟೆಯಿಂದಲೂ ಇರಬಹುದು ತುಸು ಜಾಸ್ತಿ ಕಪ್ಪಗೆ ಕಾಣಿಸುತ್ತಿದ್ದ. ಹಳೇಮನೆ ಕೇರಿಯ ಮೊದಲ ಮನೆಯಾಗಿದ್ದ ರಾಮಚಂದ್ರಣ್ಣನ ಮನೆಯ ಅಂಗಳದ ಮೆಟ್ಟಿಲಮೇಲೆ ತನ್ನದೇ ಮನೆಯೆಂಬಂತೆ ಬಂದು ಕುಳಿತುಕೊಂಡ. ಬಸ್ ಸ್ಟಾಪಿಗೆ ಹತ್ತಿರದಲ್ಲೇ ಇದ್ದ ಹಳೇಮನೆಗೆ ಬಸ್ಸು ತಪ್ಪಿಸಿಕೊಂಡವರು ನೀರು ಕುಡಿಯಲೆಂದೋ ಅಥವಾ ಮುಂದಿನ ಬಸ್ಸಿನ ಸಮಯ ಕೇಳಲೆಂದೋ ಬರುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಾಗೇ ಯಾರೋ ಬಂದಿರಬಹುದು ಎಂದುಕೊಂಡ ನಮಗೆಲ್ಲ ಅವನಿಗೆ ಮಾತು ಬರುವುದಿಲ್ಲ ಎನ್ನುವುದು ಅರ್ಥವಾಗಿದ್ದು ಅವನು ಅದೇನನ್ನೋ ಹೇಳಲು ಪ್ರಯತ್ನಿಸಿದಾಗಲೇ. ಅವನು ಪ್ರಯತ್ನಿಸಿದ ಮಾತುಗಳೆಲ್ಲ ವಿಚಿತ್ರ ಶಬ್ದಗಳನ್ನು ಹೊರಡಿಸಿದವಾದರೂ ಯಾವುದೂ ಅರ್ಥವಾಗಲಿಲ್ಲ. ರಾಮಚಂದ್ರಣ್ಣ ಆಗಷ್ಟೇ ಪೂಜೆ ಮುಗಿಸಿ, ಉಟ್ಟಿದ್ದ ಮಡಿ ಬಿಚ್ಚಿ ಲುಂಗಿ ಉಡುತ್ತ “ಯಾರೇ ಅದು, ಬಸ್ಸು ತಪ್ಪಿಸಿಕೊಂಡರಂತಾ ಏನು” ಎಂದು ಹೆಂಡತಿಯನ್ನು ಕೇಳುತ್ತ ಹೊರಬಂದಾಗ ಕೆಪ್ಪ ಅವನ ಮುಖ ನೋಡುತ್ತಾ ಏನೇನೋ ಶಬ್ದಗಳನ್ನು ಹೊರಡಿಸಿದ. ರಾಮಚಂದ್ರಣ್ಣ ಅವನನ್ನು ಮಧ್ಯದಲ್ಲಿ ತಡೆದು ಪ್ರಶ್ನೆ ಕೇಳಲು ಪ್ರಯತ್ನಿಸಿದನಾದರೂ ಯಾವುದಕ್ಕೂ ಸ್ಪಂದಿಸದ ಅವನಿಗೆ ಕಿವಿಯೂ ಕೇಳುವುದಿಲ್ಲ ಎನ್ನುವುದು ನಮಗೆಲ್ಲ ಖಚಿತವಾಯಿತು. ಮಾತೂ ಬರದ ಕಿವಿಯೂ ಕೇಳಿಸದ ಅವನಿಂದ ಯಾವ ವಿವರಗಳನ್ನೂ ಪಡೆದುಕೊಳ್ಳಲಾಗಲೇ ಇಲ್ಲ. ಪೆನ್ನು ಹಾಳೆಗಳನ್ನು ಕೊಟ್ಟರೆ ಅವು ತನಗೆ ಸಂಬಂಧಪಟ್ಟ ವಸ್ತುಗಳೇ ಅಲ್ಲವೆನ್ನುವಂತೆ ಅವುಗಳೆಡೆಗೆ ತಿರುಗಿಯೂ ನೋಡದ ಅವನಿಗೆ ಅಕ್ಷರಜ್ಞಾನ ಇದ್ದಿರಬಹುದಾದ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಅವನಿಗೆ ಹೆಸರೊಂದು ಇದ್ದಿರಬಹುದಾದರೂ ಅದನ್ನು ಕಂಡುಹಿಡಿಯುವ ಯಾವ ಮಾರ್ಗವೂ ಯಾರಿಗೂ ಗೋಚರಿಸಲಿಲ್ಲ. ಗಂಗಾಚಿಕ್ಕಿ ಬಡಿಸಿದ ಹಬ್ಬದೂಟ ಉಂಡವನೇ ತಟ್ಟೆ ಲೋಟಾಗಳನ್ನು ತೊಳೆದು ತನ್ನದೇ ಆಸ್ತಿ ಎಂಬಂತೆ ಜಗಲಿಯ ಮೂಲೆಯಲ್ಲಿಟ್ಟುಕೊಂಡ. ಅದೆಲ್ಲಿಂದ ಬಂದ, ಹಳೇಮನೆ ಕೇರಿಗೇ ಯಾಕೆ ಬಂದ, ಬಂಧುಬಳಗದವರು ಯಾರಾದರೂ ಇದ್ದಾರೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ನನಗೆ ಯಾವತ್ತಿಗೂ ಬಗೆಹರಿಯದ ಒಂದು ವಿಚಿತ್ರವೆಂದರೆ ಕೇರಿಯ ಯಾರೊಬ್ಬರೂ ಅವನನ್ನು ಸಂಶಯದ ದೃಷ್ಟಿಯಿಂದ ನೋಡಲೇ ಇಲ್ಲ. ರಾಮಚಂದ್ರಣ್ಣನ ಪ್ರೀತಿ ವಿಶ್ವಾಸ ನಂಬಿಕೆಗಳೆಲ್ಲ ಜಾಜಿ ಬಳ್ಳಿಯಂತೆ ಕೇರಿಯನ್ನೆಲ್ಲ ಹಬ್ಬಿದಂತೆ ನನಗೆ ಈಗಲೂ ಅನ್ನಿಸುತ್ತದೆ. ಹೀಗೆ ಕೆಪ್ಪ ಎಂಬ ಹೊಸ ಹೆಸರಿನೊಂದಿಗೆ ಕೆಪ್ಪ ರಾಮಚಂದ್ರಣ್ಣನ ಮನೆಯ ಖಾಯಂ ಸದಸ್ಯನಾದ. ಆದರೆ ಕೆಪ್ಪನ ವಾಸಕ್ಕೆ ತಕ್ಕ ಜಾಗ ಕೇರಿಯ ಯಾವ ಮನೆಯಲ್ಲೂ ಇರಲಿಲ್ಲ. ಹಳೇಮನೆಯ ಯಾವ ಕುಟುಂಬವೂ ಅಂಥ ಸ್ಥಿತಿವಂತ ಕುಟುಂಬವೇನೂ ಆಗಿರಲಿಲ್ಲ. ರಾಮಚಂದ್ರಣ್ಣನ ಅಪ್ಪನ ಕಾಲದಲ್ಲಿ ಖಾಂದಾನಿ ಎನ್ನಬಹುದಾಗಿದ್ದ ಕುಟುಂಬ, ಮಕ್ಕಳ ಕಾಲಕ್ಕೆ ಹೊಂದಾಣಿಕೆಯಾಗದೇ ಎಂಟು ಮನೆಗಳಾಗಿ ಒಡೆದುಹೋಗಿತ್ತು. ಅವರುಗಳ ಮಧ್ಯ ತಲೆಹೋಗುವಂತಹ ಜಗಳಗಳು ಆಗುತ್ತಿರಲಿಲ್ಲವಾದರೂ ಗದ್ದೆಕಾಯುವ ರಾತ್ರಿಪಾಳಿಯ ವಿಷಯಕ್ಕೋ, ಅವರ ಮನೆಯ ಬೆಕ್ಕು ಅರ್ಧತಿಂದುಬಿಟ್ಟ ಇಲಿ ಇವರ ಮನೆ ಅಟ್ಟದ ಮೇಲೆ ಕೊಳೆತು ವಾಸನೆ ಬರುತ್ತಿರುವ ವಿಷಯಕ್ಕೋ ಆಗಾಗ ಚಿಕ್ಕಪುಟ್ಟ ಮನಸ್ತಾಪಗಳಾಗುತ್ತಿದವು. ಈ ಮನಸ್ತಾಪಗಳೇನಾದರೂ ಜಗಳಕ್ಕೆ ತಿರುಗಿದರೆ ರಾಮಚಂದ್ರಣ್ಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೊಂದು ಜಾಣತನದ ಪರಿಹಾರ ಹುಡುಕುತ್ತಿದ್ದ. ಹೆಚ್ಚೇನೂ ಓದಿರದ ರಾಮಚಂದ್ರಣ್ಣ ತನ್ನ ಅಚ್ಚುಕಟ್ಟಾದ ಮಾತಿನಿಂದಲೇ ಕೇರಿಯವರಷ್ಟೇ ಅಲ್ಲದೇ ಊರಿನವರ ಗೌರವವನ್ನೂ ಗಳಿಸಿಕೊಂಡಿದ್ದ. ಯಾವತ್ತೂ ಧ್ವನಿ ಎತ್ತರಿಸಿ ಮಾತನಾಡದ ರಾಮಚಂದ್ರಣ್ಣ, ಏರುಧ್ವನಿಯಲ್ಲಿ ಮೂರೂ ಹೊತ್ತು ಹಲಬುತ್ತಲೇ ಇರುತ್ತಿದ್ದ ಕೆಪ್ಪನೊಂದಿಗೆ ಸೌಹಾರ್ದ ಬೆಳೆಸಿಕೊಳ್ಳಬಹುದಾದ ಯಾವ ನಿರೀಕ್ಷೆಯೂ ಕೇರಿಯವರ್ಯಾರಿಗೂ ಇರಲಿಲ್ಲವಾದರೂ ಕೆಪ್ಪನ ವಾಸಕ್ಕೊಂದು ಜಾಗ ಹುಡುಕುವ ಜವಾಬ್ದಾರಿ ರಾಮಚಂದ್ರಣ್ಣನ ತಲೆಗೇ ಬಂತು. ರಾಮಚಂದ್ರಣ್ಣನ ಮನೆ ಕೇರಿಯ ಮೊದಲ ಮನೆಯಾದದ್ದರಿಂದ ಜಾಗವನ್ನು ಕೊಂಚ ವಿಸ್ತರಿಸಿ ಮನೆಯನ್ನು ನವೀಕರಿಸುವ ಅವಕಾಶ ಮನೆಗಳೆಲ್ಲ ಹಿಸೆಯಾದ ಸಮಯದಲ್ಲೇ ರಾಮಚಂದ್ರಣ್ಣನಿಗೆ ಒದಗಿಬಂದಿತ್ತು. ಅಣ್ಣತಮ್ಮಂದಿರು ಒಟ್ಟಿಗೇ ಇದ್ದಿದ್ದರಿಂದ ಸ್ವಲ್ಪ ಅನುಕೂಲಸ್ಥನಾಗಿದ್ದ ರಾಮಚಂದ್ರಣ್ಣ ಮನೆ ಹಿಂದೆ ಇದ್ದ ಸೊಪ್ಪಿನ ಬೆಟ್ಟದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿಸಿ ವಿಶಾಲವಾದ ಕೊಟ್ಟಿಗೆಯನ್ನು ಕಟ್ಟಿಸಿಕೊಂಡಿದ್ದ. ಆ ಕೊಟ್ಟಿಗೆಯಲ್ಲೇ ಸಣ್ಣದೊಂದು ಭಾಗದಲ್ಲಿ ಮಣ್ಣಿನ ಗೋಡೆಯನ್ನೆಬ್ಬಿಸಿ ಬಾಗಿಲು ಕಿಟಕಿಗಳಿಲ್ಲದ ರೂಮೊಂದನ್ನು ಕಟ್ಟಿಸಿ, ರಾಮಚಂದ್ರಣ್ಣ ಕೆಪ್ಪನ ಪಾಲಿನ ಆಪತ್ಬಾಂಧವನಾದ. ಎರಡೇ ದಿನದಲ್ಲಿ ರಾಮಚಂದ್ರಣ್ಣ ಮಾಡಿಸಿಕೊಟ್ಟ ಹಲಸಿನ ಮಂಚದ ಮೇಲೆ ಆಸೀನನಾದ ಕೆಪ್ಪ ಕೊಟ್ಟಿಗೆಯ ಒಡೆಯನೂ, ಕೇರಿಯ ಕಾವಲುಗಾರನೂ ಆಗಿಹೋದ. ಗಂಗಾಚಿಕ್ಕಿಯ ಕೊಟ್ಟಿಗೆಯ ಜವಾಬ್ದಾರಿಯನ್ನು ತಾನಾಗಿಯೇ ವಹಿಸಿಕೊಂಡ. ದಿನ ಬೆಳಗಾದರೆ ಒಂದು ಎಮ್ಮೆ, ಒಂದು ಹಸುವಿನ ಹಾಲು ಕರೆದು, ಸೊಪ್ಪು ಕಡಿದು ತಂದು, ಸಗಣಿ ತೆಗೆದು, ಹೊಸ ಸೊಪ್ಪು ಹಾಸುವವರೆಗೂ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ರಾತ್ರಿಗಳಲ್ಲಿ ಗದ್ದೆ ಕಾಯುವ ಕೆಲಸವನ್ನೂ ತಾನೇ ವಹಿಸಿಕೊಂಡು ಕೇರಿಯವರ ನಿದ್ರೆಯನ್ನೂ ಸಲಹತೊಡಗಿದ. ಬೆಕ್ಕು ಕೂಡಾ ಯಾರ ಭಯವೂ ಇಲ್ಲದೇ ತಾನು ಹಿಡಿದ ಇಲಿಗಳನ್ನೆಲ್ಲ ತಂದು ಕೆಪ್ಪನ ರೂಮಿನಲ್ಲೇ ರಾಜಾರೋಷವಾಗಿ ತಿನ್ನತೊಡಗಿತು. ಅರ್ಥವಾಗದ ಭಾಷೆಯಲ್ಲಿ ಬೆಕ್ಕಿಗೋ, ಇಲಿಗೋ ಬಾಯ್ತುಂಬ ಬೈಯುತ್ತ ಅಳೆದುಳಿದ ಇಲಿಯ ಅವಶೇಷಗಳನ್ನು ಬಳಿದು ಗೊಬ್ಬರದ ಗುಂಡಿಗೆ ಎಸೆದು ಬೆಕ್ಕು ಓಡಾಡಿದ ಜಾಗವನ್ನೆಲ್ಲ ಸಗಣಿನೀರು ಹಾಕಿ ತೊಳೆದುಬಿಡುತ್ತಿದ್ದ. ಯಾರ ಮನೆಯ ಅಂಗಳವಾದರೂ ಸರಿಯೇ, ಒಂದು ಹುಲ್ಲುಕಡ್ಡಿ ಬಿದ್ದರೂ ಅದನ್ನೆತ್ತಿ ಬಿಸಾಕುತ್ತಿದ್ದ ಕೆಪ್ಪನ ಚೊಕ್ಕು, ಶಿಸ್ತು ನೆನಪಾದಾಗಲೆಲ್ಲ ನನಗೆ ಬಾಲ್ಯದ ಅದೆಷ್ಟೋ ಪಾಠಗಳನ್ನ ಮಾತೇ ಬರದ ಕೆಪ್ಪ ಕಲಿಸಿಕೊಟ್ಟಂತೆನ್ನಿಸುತ್ತದೆ. ಕಾಲಕಳೆದಂತೆ ಕೆಪ್ಪ ಊರಿನವರ ಬಾಯಲ್ಲಿ ‘ಹಳೇಮನೆ ಕೆಪ್ಪ’ನೇ ಆಗಿಹೋದ. ನಾನು ಏಳನೇ ಕ್ಲಾಸು ಮುಗಿಸಿ, ಹಳೇಮನೆಯಿಂದ ಮೂರು ಕಿಲೋಮೀಟರು ದೂರದ ಗೋಳಿಮಕ್ಕಿ ಹೈಸ್ಕೂಲಿಗೆ ಸೇರಿದೆ. ಬೆಳಿಗ್ಗೆ ನಾನು ಏಳುವಷ್ಟರಲ್ಲಿ ಬಚ್ಚಲ ಒಲೆಗೆ ಬೆಂಕಿ ಹಾಕಿ, ಬಾವಿಯಿಂದ ನೀರು ಸೇದಿ ಹದಮಾಡಿದ ನೀರು ಹಂಡೆ ತುಂಬಾ ಇದೆಯೆಂದು ಖಾತ್ರಿಯಾದ ಮೇಲೆಯೇ ಕೆಪ್ಪ ಕೊಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದ. ಈ ಕೆಪ್ಪನಿಗಿದ್ದ ಒಂದೇ ಒಂದು ಚಟವೆಂದರೆ ಬೀಡಿ. ಕೆಪ್ಪ ಹಳೇಮನೆ ಸೇರಿ ಒಂದು ವಾರವಾಗುತ್ತಿದ್ದಂತೆ ಒಂದಿನ ರಾಮಚಂದ್ರಣ್ಣ ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಅವನ ಪಕ್ಕ ಬಂದು ಅದೇ ಏರುಧ್ವನಿಯಲ್ಲಿ ಮಾತಾಡತೊಡಗಿದನಂತೆ. ಅರ್ಥವಾಗದ ರಾಮಚಂದ್ರಣ್ಣ ಅವನ ಮುಖ ನೋಡಿದ್ದಕ್ಕೆ, ಬೀಡಿಕಟ್ಟು ಹೊರತೆಗೆದು ಕಟ್ಟಿನಲ್ಲಿದ್ದ ಕೊನೆಯ ಬೀಡಿಯನ್ನು ತೋರಿಸುತ್ತಾ ತಂದುಕೊಡುವಂತೆ ಕೈಸನ್ನೆ ಮಾಡಿದನಂತೆ. ಕೈ ಒರೆಸುತ್ತಾ ರಾಮಚಂದ್ರಣ್ಣ “ಇವನಿಗೆ ಬೀಡಿ ಬೇಕಂತೆ, ನಾಳೆ ಯಲ್ಲಾಪುರಕ್ಕೆ ಹೋಗಿಬರ್ತೀನಿ; ಮನೆ ಸಾಮಾನು ಪಟ್ಟಿ ಮಾಡಿಕೊಡು” ಎಂದಿದ್ದು ಯಲ್ಲಾಪುರ ಬಸ್ಸು ನೋಡಿದಾಗೆಲ್ಲ ನೆನಪಾಗುತ್ತದೆ ನನಗೆ. ಆ ಬೀಡಿಕಟ್ಟಿನ ಬಾಂಧವ್ಯ ಅವರಿಬ್ಬರನ್ನೂ ವಿಚಿತ್ರವಾಗಿ ಬೆಸೆದಿತ್ತು. ಬೀಡಿ ಸಿಗರೇಟು ಹಾಗಿರಲಿ, ಕವಳವನ್ನೂ ಹಾಕದ ರಾಮಚಂದ್ರಣ್ಣ ಪ್ರತೀಸಲ ಯಲ್ಲಾಪುರಕ್ಕೆ ಹೋದಾಗಲೂ ಕೆಪ್ಪನಿಗೆಂದು ಬೀಡಿಕಟ್ಟು ತರುತ್ತಿದ್ದ. ಮನೆಯಲ್ಲಿದ್ದ ಮಕ್ಕಳಲ್ಲೇ ದೊಡ್ಡವಳಾಗಿದ್ದ ನನ್ನ ಕೈಯಲ್ಲಿ ಹಳೇ ಪೇಪರಿನಲ್ಲಿ ಸುತ್ತಿದ ಬೀಡಿಪೊಟ್ಟಣವನ್ನು ಕೊಟ್ಟು ಕೆಪ್ಪನಿಗೆ ಕೊಡುವಂತೆ ಹೇಳುತ್ತಿದ್ದ. ಅದರಲ್ಲಿರುವುದು ಬೀಡಿಪೊಟ್ಟಣ ಎನ್ನುವುದು ನನಗಾಗ ಗೊತ್ತಾಗದೇ ಇದ್ದರೂ ಅದನ್ನು ನೋಡಿದ ತಕ್ಷಣ ಕೆಪ್ಪನ ಮುಖ ಅರಳಿದ್ದು ಮಾತ್ರ ಗೊತ್ತಾಗುತ್ತಿತ್ತು. ಕೇರಿಯ ಮಕ್ಕಳಿಗೆ ಕಾಣಿಸದಂತೆ ಬೆಟ್ಟದಮೇಲೋ, ಕೊಟ್ಟಿಗೆಯ ಮೂಲೆಯಲ್ಲೋ ಕುಳಿತು ಬೀಡಿ ಸೇದುತ್ತಿದ್ದ ಕೆಪ್ಪ ಉಳಿದ ಬೀಡಿಮೋಟನ್ನು ಮಾತ್ರ ಗೊಬ್ಬರದ ಗುಂಡಿಗೇ ಬಿಸಾಕುತ್ತಿದ್ದ. ನನಗೆ ಹೈಸ್ಕೂಲು ಮುಗಿಯುತ್ತಿದ್ದ ಸಮಯದಲ್ಲಿ ಕೆಪ್ಪನ ಬೀಡಿಪ್ರೇಮ, ಅವನು ಹಲಬುತ್ತಿದ್ದ ಕೆಲವು ಶಬ್ದಗಳೆಲ್ಲ ಅರ್ಥವಾಗತೊಡಗಿ, ‘ಪಾಪ ಕೆಪ್ಪ!’ ಅನ್ನಿಸುತ್ತಿತ್ತು. ಈಗಲೂ ಯಾರಾದರೂ ಯಾರಿಗಾದರೂ ಪಾಪ ಅಂದಾಗಲೆಲ್ಲ, ಬೀಡಿಕಟ್ಟು ಸಿಕ್ಕಿದಾಗ ಅರಳಿದ ಕೆಪ್ಪನ ಮುಖ ನೆನಪಾಗುತ್ತದೆ. ನಾನು ಹೈಸ್ಕೂಲು ಮುಗಿಸಿ ಕುಮಟಾದಲ್ಲಿ ಪಿಯುಸಿಗೆ ಸೇರಿ ಅಲ್ಲೇ ಡಿಗ್ರಿಯನ್ನೂ ಮುಗಿಸಿ, ಕಾರವಾರದ ರೆಸಾರ್ಟ್ ಒಂದರಲ್ಲಿ ಫ್ರಂಟ್ ಆಫೀಸ್ ಕೆಲಸಕ್ಕೆ ಸೇರಿಕೊಂಡೆ. ಪ್ರತೀವರ್ಷ ನವರಾತ್ರಿಯ ಹತ್ತು ದಿನವೂ ಕೆಲಸಕ್ಕೆ ರಜೆ ಹಾಕುತ್ತಿದ್ದ ನಾನು ರೆಸಾರ್ಟಿನ ಗಿಡಗಳನ್ನು ಮೆಂಟೇನ್ ಮಾಡುತ್ತಿದ್ದ ರಾಜಣ್ಣನ ಬಾಯಲ್ಲೂ ರಾಮಚಂದ್ರಣ್ಣನ ಮನೆಯ ದುರ್ಗೆಯೇ ಆಗಿದ್ದೆ. ಈ ಸಲ ನವರಾತ್ರಿಗೆ ಹಳೇಮನೆಗೆ ಹೋದಾಗ ಗಂಗಾಚಿಕ್ಕಿ, ಕಳೆದ ಮಳೆಗಾಲ ಕೆಪ್ಪ ತೀರಿಕೊಂಡ ಸುದ್ದಿಯನ್ನು ಹೇಳುತ್ತಾ ಕುಡಿಯಲು ಮಜ್ಜಿಗೆ ಬೆರೆಸಿಕೊಟ್ಟಳು. ಹೊಸ ಬಟ್ಟೆ ತಂದುಕೊಟ್ಟರೂ ಅದನ್ನು ಗೋಣೀಚೀಲದಲ್ಲಿ ಕಟ್ಟಿಟ್ಟು ರಾಮಚಂದ್ರಣ್ಣನ ಹಳೆಯ ಬಿಳಿ ಅಂಗಿಯನ್ನೇ ತೊಡುತ್ತಿದ್ದ ಕೆಪ್ಪ, ಸಾಯುವ ದಿನ ರಾಮಚಂದ್ರಣ್ಣ ಕಳೆದವರ್ಷ ನವರಾತ್ರಿಗೆ ತಂದುಕೊಟ್ಟ ಹಸಿರು ಅಂಗಿಯನ್ನು ತೊಟ್ಟಿದ್ದನಂತೆ. ಜೀವಹೋಗುವ ಅರ್ಧಗಂಟೆ ಮೊದಲು ರಾಮಚಂದ್ರಣ್ಣನನ್ನು ಕರೆದು ಹೊಸ ಅಂಗಿ ತೋರಿಸುತ್ತಾ ಅದೇನನ್ನೋ ಹೇಳಲು ಪ್ರಯತ್ನಿಸಿದನಂತೆ. ಮಳೆಗಾಲದ ದಿನಗಳಲ್ಲಿ ನಾವು ಶಾಲೆಯಿಂದ ಬರುವ ಹೊತ್ತಿಗೆ ಬಚ್ಚಲೊಲೆಯ ಬೆಂಕಿಯಲ್ಲಿ ಹಲಸಿನಬೀಜ ಸುಡುತ್ತಾ ನಮಗಾಗಿ ಕಾಯುತ್ತಿದ್ದ ಕೆಪ್ಪ ನೆನಪಾಗಿ, ಬಾಲ್ಯದ ಬೆಚ್ಚನೆಯ ನೆನಪೆಲ್ಲ ಹೇಳದೇಕೇಳದೇ ಕೆಪ್ಪನೊಂದಿಗೇ ಹೊರಟುಹೋದಂತೆನ್ನಿಸಿತು. ಶಾರದೆಗೆ ಸೀರೆ ಉಡಿಸುತ್ತಿದ್ದ ರಾಮಚಂದ್ರಣ್ಣನ ಕೈ ಸ್ವಲ್ಪ ನಡುಗುತ್ತಿರುವಂತೆನ್ನಿಸಿ ಗಂಗಾಚಿಕ್ಕಿಯ ಹತ್ತಿರ ವಿಚಾರಿಸಿದೆ. ರಾಮಚಂದ್ರಣ್ಣನ ಶುಗರ್ ಲೆವಲ್ ಕಡಿಮೆಯಾಗಿದ್ದು, ಈಗ ಕಿವಿಯೂ ಸ್ವಲ್ಪ ಮಂದವಾಗಿರುವುದು, ಕೆಪ್ಪ ಸತ್ತುಹೋದಮೇಲೆ ರಾಮಚಂದ್ರಣ್ಣ ಯಲ್ಲಾಪುರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದು, ರಾಯ್ಸದ ಡಾಕ್ಟ್ರು ತಿಂಗಳಿಗೊಮ್ಮೆ ಮನೆಗೇ ಬಂದು ಚೆಕಪ್ ಮಾಡುವುದು ಎಲ್ಲವನ್ನೂ ಗಂಗಾಚಿಕ್ಕಿ ನಡುಗುವ ಧ್ವನಿಯಲ್ಲಿ ಹೇಳಿದಳು. ತಾನು ನೆಟ್ಟ ಮೌಲ್ಯಗಳನ್ನು ನೀರು ಗೊಬ್ಬರ ಹಾಕಿ ಪೊರೆಯುತ್ತಿದ್ದ ಕೆಪ್ಪ ಇಲ್ಲದೇ ರಾಮಚಂದ್ರಣ್ಣ ಅನಾಥನಾದಂತೆ ಎನ್ನಿಸಿತು. ಊರಿನ ಹೆಣ್ಣುಮಕ್ಕಳನ್ನೆಲ್ಲ ಸಾಲಾಗಿ ಕೂರಿಸಿ, ಹತ್ತು ರೂಪಾಯಿ

ಕಥಾಯಾನ Read Post »

ನಿಮ್ಮೊಂದಿಗೆ

ಕಾವ್ಯಯಾನ

ದೂರದ ಊರು ಅಪ್ಪ ರಜಿಯಾ ಕೆ.ಬಾವಿಕಟ್ಟೆ ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ‌ ನನಗೆ‌ ಸಿಗಲೇ‌ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಶೀಲಾ ಭಂಡಾರ್ಕರ್ ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ, ಶೂನ್ಯವಾಗಿದ್ದ, ಏಕಾಂಗಿ ಬದುಕಿನೊಳಗೆ, ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸಿದ ಹಾಗೆ. ಛತ್ರಿಯನ್ನು ಮನೆಯಿಂದ ತರುವುದರೊಳಗೆ ತಂದರೂ ಬಿಚ್ಚುವುದರೊಳಗೆ ಅಥವಾ ಹಾಗೇ ಸುಮ್ಮನೆ ತೋಯುವುದು ಕೂಡ ಅಪ್ಯಾಯವೆನಿಸುವ ಹಾಗೆ ಭೋರೆಂದು ಸುರಿಸುರಿದು ಬಟ್ಟೆಗಳ ಮೇಲೆ, ಮುಚ್ಚದ ಅಂಗಾಂಗಗಳ ಮೇಲೆ, ಕಣ್ಣುಗಳೊಳಗೆ, ಕಿವಿಗಳಲ್ಲಿ, ಮುಟ್ಟಲಾಗದ ದೇಹದ ಸಂಧಿಗೊಂದಿಗಳಲ್ಲಿ, ದಾರಿ ಹುಡುಕುತ್ತಾ, ನುಸುಳಿದಂತೆ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ ಏಕಾಂಗಿ ಬದುಕಿನೊಳಗೆ. ಖುಷಿಯೆನಿಸುತ್ತದೆ ರಸ್ತೆಯಲ್ಲಿ ನಡೆಯುತ್ತಿರುವಾಗ ಅಚಾನಕ್ಕಾಗಿ ಹೀಗೆ ಒದ್ದೆಯಾಗುವುದು ಏನೋ ಒಂದು ರೀತಿಯ ಖುಷಿ ಕೊಡುತ್ತದೆ. ಮಳೆ ಸಂಪೂರ್ಣ ನಿಂತ ಮೇಲೆ ಇನ್ನೂ ನಡೆಯುತ್ತಲೇ ಇರುವಾಗಲೇ ಮೋಡಗಳೆಡೆಯಿಂದ ಇಣುಕುವ ಬಿಸಿಲಿಗೆ ಬಟ್ಟೆ ಮತ್ತು ನಾನು ನನ್ನ ಮೈಮೇಲಿನ ಹನಿಗಳು ಒಣಗುತಿದ್ದೇವೆ. ಇನ್ನು ಮನೆವರೆಗಿನ ದಾರಿ ಮಳೆ ಬರದೆ ಬಿಸಿಲು ಸುರಿದರೆ ಸಾಕು. ಮಳೆಗೆ ತೋಯ್ದ ಎಲ್ಲವೂ ಒಣಗಿದರೆ ಖುಷಿ ಇದೆ..ಹೀಗೆ ಒದ್ದೆಯಾಗುವುದರಲ್ಲೂ. ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸುವ ಹಾಗೆ. ********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಸಾಂಸ್ಕೃತಿಕ ಲೋಕದ ದಲ್ಲಾಳಿಗಳು. ಮಲ್ಲಿಕಾರ್ಜುನ ಕಡಕೋಳ ಬೆಂಗಳೂರು, ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ “ಗು” ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ” ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು. ಹಳ್ಳಿಗಳಲ್ಲಿ ಚೆಂದಗೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, ದಿನಗಟ್ಟಲೇ ಸೋಬಾನೆ ಪದ, ಬೀಸುವಕಲ್ಲು ಪದಹಾಡುವ ಮಹಿಳೆಯರು ಇರ್ತಿದ್ರು. ಪ್ರತಿಭಾಶಾಲಿಗಳಾದ ಅಂಥವರನ್ನು ಸ್ಥಳೀಯ ಶಾಲಾ ಮಾಸ್ತರನೋ, ಮಠದ ಅಯ್ಯನವರೋ ಬೆಂಗಳೂರಿನ ಸರಕಾರದ ಗಮನಕ್ಕೆ ತಂದು ಅಂಥವರನ್ನು ಗುರುತಿಸಿ ಗೌರವಿಸುವ, ಸಾಧ್ಯವಾದರೆ ಅಂಥವರಿಗೆ ಮಾಸಾಶನ ಕೊಡಿಸುವ ಸತ್ಕಾರ್ಯಗಳು ಮುಗ್ದತೆಯಿಂದ ಜರುಗುತ್ತಿದ್ದವು. ಎಲ್ಲಿ ಹೋದವೋ ಜವಾರಿತನದ ಮತ್ತು ಯತಾರ್ಥ ಪ್ರೀತಿಯ ಆ ದಿನಗಳು ಎಂದು ವರ್ತಮಾನದಲ್ಲಿ ಹಳಹಳಿಸುವಂತಾಗಿದೆ. ಅಷ್ಟೇ ಯಾಕೆ ಅದಕ್ಕಾಗಿ ಅಂದು ಅಧಿಕಾರಿ ಮತ್ತು ರಾಜಕೀಯ ವಲಯಗಳಲ್ಲಿ ಸುಮಧುರ ಸಂಸ್ಕೃತಿ ಬೆಸೆಯುವ, ನಿಸ್ವಾರ್ಥದ ಶುದ್ಧಜವಾರಿ ಕಾಲಮಾನ ಅದಾಗಿತ್ತು. ಸಂಸ್ಕೃತಿ ಕುರಿತು ಮಾತನಾಡುವುದೆಂದರೆ ಪಾವಿತ್ರ್ಯತೆಯ ಸಂಬಂಧಗಳ ಕುರಿತು ಮಾತನಾಡುವ ಗೌರವಭಾವ ತುಂಬಿ ತುಳುಕುತ್ತಿತ್ತು. ಹಾಗೇನೇ ಸಾಹಿತಿ, ಕಲಾವಿದರೆಂದರೆ ಆಗ ನಮಗೆಲ್ಲ ಲೈವ್ ಕ್ಯಾರಕ್ಟರುಗಳು. ಎಂಥವರಲ್ಲೂ ಅನನ್ಯತೆ ಉಕ್ಕಿಸುವ, ಸಾತ್ವಿಕತೆ ಸೂಸುವ ಆದರದ ಭಾವ ತುಂಬಿ ತುಳುಕುತ್ತಿದ್ದವು. ಬರಬರುತ್ತಾ ಅದೆಲ್ಲ ಕ್ಷೀಣಿಸಿ ಅದರ ಸಾಧ್ಯತೆಯ ಕ್ಷಿತಿಜಗಳು ಯದ್ವಾತದ್ವಾ ಹರಡಿಕೊಳ್ಳುತ್ತಾ ಅದರ ಹಿಡಿತಗಳು ಸಾಂಸ್ಕೃತಿಕ ಲೋಕವನ್ನೂ ಬಿಡದೇ ಅಕ್ಟೋಫಸ್ ತರಹ ಆವರಿಸಿಕೊಂಡು ಬಿಟ್ಟಿವೆ. ನೋವಿನ ಸಂಗತಿಯೆಂದರೆ ಅದೊಂದು ರಿಯಲ್ ಎಸ್ಟೇಟ್ ಬಿಜಿನೆಸ್ಸಿನಂತೆ ಹೆಸರು ಮತ್ತು ಆಮದಾನಿ ತರುವಂತಾಗಿದೆ. ನೇರವಾಗಿ ರಿಯಲ್ ಎಸ್ಟೇಟ್ ಎಂದು ಕರೆದು ಬಿಟ್ಟರೆ ಸಹಜವಾಗಿ “ದಲ್ಲಾಳಿಗಳೆಂದೇ” ಅರ್ಥೈಸಿ, ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಮೂಡುವುದಿಲ್ಲ. ಅಂತೆಯೇ ಲಾಬಿಕೋರರು ಅದರ ಬದಲು ಸಾಂಸ್ಕೃತಿಕ ಲೋಕದಸೇವೆ ಎಂದು ಕರೆದುಕೊಂಡಿದ್ದು. ಅವರದು ಕಲ್ಚರಲ್ ಎಸ್ಟೇಟ್ ದಂಧೆ ಎಂಬ ಬನಾವಟಿ ಯಾರಿಗೂ ತಿಳಿಯಲ್ಲ. ಎಷ್ಟಾದರೂ ಸಾಹಿತ್ಯ, ಸಂಗೀತ, ಕಲೆ, ಪರಂಪರೆ, ಜಾನಪದ, ನಾಡು, ನುಡಿ, ಇವುಗಳನ್ನೊಳಗೊಂಡ ಸಂಸ್ಕೃತಿ ದಿಗ್ಗಜರ ಒಡನಾಟದ ಲೋಕವದು. ಅದರಿಂದಾಗಿ ಯಾರಿಗಾದರೂ ಎಳ್ಳರ್ಧ ಕಾಳಿನಷ್ಟೂ ಅಪಾರ್ಥ ಮಾಡಿಕೊಳ್ಳದ ಒಂದು ಗೌರವಯುತವಾದ ಸ್ಟೇಟಸ್. ಲೋಕದ ಕಣ್ಣಲ್ಲಿ ಕನ್ನಡ ಸಂಸ್ಕೃತಿಯ ಪರಿಚಾರಿಕೆ. ಯಾವುದೇ ರಿಸ್ಕ್ ಇಲ್ಲದೇ ಹಣ, ಹೆಸರು, ಕೀರ್ತಿ ವಗೈರೆಗಳು ಸಲೀಸಾಗಿ ಸಿಗುವ ಬಂಡವಾಳರಹಿತ ಹೈಟೆಕ್ ಬಿಜಿನೆಸ್. ಇದು ಕೆಲವರ ಪಾಲಿಗೆ ಪ್ರತಿಷ್ಠಿತ ಉದ್ದಿಮೆಯೇ ಆಗಿದೆ. ಆದರೆ ಮೇಲ್ನೋಟದಲ್ಲಿ ಇದೊಂದು ಲಾಬಿ ಮತ್ತು ಲಾಭಕೋರತೆಯ ಕಲ್ಚರಲ್ ಟ್ರೇಡಿಂಗ್ ಟ್ರೆಂಡ್ ಅಂತ ಅನ್ನಿಸೋದೇ ಇಲ್ಲ. ಅದೊಂಥರ ಕಾರ್ಪೊರೇಟ್ ವ್ಯವಹಾರ. ಅದರ ನೇಪಥ್ಯ ಹುನ್ನಾರ ಯಾರಿಗೂ ತಿಳಿಯುವುದೇ ಇಲ್ಲ. ಹಾಂಗಂತ ಸಾಂಸ್ಕೃತಿಕ ಲೋಕಿಗರಿಗೆ ರಾಜಕೀಯಪ್ರಜ್ಞೆ ಬೇಡವೆಂಬುದು ಖಂಡಿತವಾಗಿಯೂ ನನ್ನ ಅಭಿಪ್ರಾಯವಲ್ಲ. ಸಂಸ್ಕೃತಿ ಚಿಂತಕರಿಗೆ ಪರಿಪೂರ್ಣವಾದ ರಾಜಕೀಯ ಮತ್ತು ಸಾಮಾಜಿಕಪ್ರಜ್ಞೆ, ಪರಿಜ್ಞಾನ ಇರಬೇಕು. ಆದರೆ ಚಾಲ್ತಿಯಲ್ಲಿರುವ ಭಟ್ಟಂಗಿಗಳ ಒಳಹೇತು, ಕೊಳಕು ಹುನ್ನಾರದ ದ್ರಾಬೆ ರಾಜಕಾರಣದಿಂದ ಸಂಸ್ಕೃತಿ ಚಿಂತಕರು ದೂರವಿರಬೇಕಿದೆ. ದುರಂತದ ಸಂಗತಿ ಎಂದರೆ ಇಲ್ಲಿ ಯಾವುದಕ್ಕೆ ದೂರ, ಯಾವುದಕ್ಕೆ ಹತ್ತಿರ ಇರಬೇಕಾಗಿದೆ ಎಂಬುದರ ತದ್ವಿರುದ್ಧದ ವೈರುಧ್ಯಗಳದ್ದೇ ಅಟ್ಟಹಾಸ. ಸರಕಾರ ಯಾವುದೇ ಪಕ್ಷದ್ದಿರಲಿ, ಅವಕಾಶವಾದಿ ದಲ್ಲಾಳಿಗಳದ್ದೇ… ಕ್ಷಮಿಸಿ, ಕ್ಷಮಿಸಿ ಲಾಬೀಕೋರರದ್ದೇ ಯಾವಾಗಲೂ ಮೇಲುಗೈ. ವಿಧಾನಸೌಧದ ಮೂರನೇ ಮಹಡಿಯಲ್ಲಿ ‘ಅಂಥವರು’ ಎಲ್ಲಪಕ್ಷಗಳ ಸರಕಾರಗಳಲ್ಲೂ ಸಲ್ಲುತ್ತಲೇ ಇರ್ತಾರೆ. ಯಾಕಂದರೆ ಅವರು ಎಲ್ಲ ಕಾಲಕ್ಕೂ ಸಲ್ಲುವಂತಹ ಚಾಲಾಕಿತನದ ರಕ್ಷಾಕವಚ ಧರಿಸಿರುತ್ತಾರೆ. ಇಂಥವರ ನೆರವಿಗೆ ಜಾತಿ, ಮತ, ಮಠ, ಐಭೋಗ ಎಲ್ಲವೂ ಮೇಳೈಸಿರುತ್ತವೆ. ಜತೆಗೆ ಸಾಂಸ್ಕೃತಿಕ ಲೋಕಜ್ಞಾನವು ರವಷ್ಟಿದ್ದರೆ ಸಾಕು. ರಾಜಕೀಯ ಪಕ್ಷಗಳ ಪಾಲಿಗೆ ಇಂತಹ ಲಾಬಿಕೋರರು ಇವನಾರವ, ಇವನಾರವ ಎಂದೆನಿಸದೇ ಎಂದಿಗೂ ಇವ ನಮ್ಮವನೆಂದೆನಿಸಯ್ಯ ಎಂಬ ಅನುಕೂಲಸಿಂಧು ಪ್ರಮಾಣಪತ್ರ ಪಡಕೊಂಡಿರುತ್ತಾರೆ. ಹೀಗೆ ಇವರು ವಿಧಾನಸೌಧದ ಮೂರನೇ ಮಹಡಿಯ ಬೃಹಸ್ಪತಿಗಳನ್ನು ತಲೆದೂಗಿಸುತ್ತಾರೆಂದರೆ ಅರೆ ಸರಕಾರಿ, ಸರಕಾರಿ ಇಲಾಖೆಗಳ ಮಹಡಿ, ಬಹುಮಹಡಿ ಕಟ್ಟಡಗಳವರದ್ದು ಇನ್ಯಾವಲೆಕ್ಕ.? ಅಷ್ಟಕ್ಕೂ ಇವರು ಅದೆಂಥ ಚಾಲಾಕಿಗಳೆಂದರೆ ಆಯಕಟ್ಟಿನ ಇಲಾಖೆಗಳಲ್ಲಿ ಅಂತಸ್ತಿಗನುಗುಣವಾಗಿ ಸಾಹೇಬ್ರೇ, ಧಣಿ, ಅಕ್ಕಾ, ಅಣ್ಣಾ ಅನ್ನುತ್ತಲೇ ಕೈ ಬಿಸಿ ಮಾಡುತ್ತಾ ಕೆಲಸ ಮಾಡಿಸಿಕೊಳ್ಳುವ ಮಹಾ ಬೆರಕಿಗಳು. ಇವರ ಚಾಲಾಕಿತನಕ್ಕೆ ಸರ್ಕಾರದ ಅನುದಾನಗಳು ಮಾತ್ರ ಗುರಿಯಲ್ಲ. ಸಾಂಸ್ಕೃತಿಕ ಲೋಕದ ಉತ್ಸವ, ವಿಶ್ವಮೇಳ, ಪರಿಷೆ, ಪ್ರಾಧಿಕಾರ, ಪ್ರತಿಷ್ಠಾನ, ಅಕಾಡೆಮಿಗಳ ನೇಮಕಾತಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡಕೊಳ್ಳುವ ಇಲ್ಲವೇ ಹೊಡಕೊಳ್ಳುವಲ್ಲಿ ಇವರದು ಎತ್ತಿದ ಕೈ. ಸರಕಾರದ ವಿಶೇಷ ಸೌಲಭ್ಯ, ಸವಲತ್ತುಗಳನ್ನು ಕೊಡಿಸುವಲ್ಲೂ, ಪಡೆಯುವಲ್ಲೂ ಇವರದು ಮುಂಚೂಣಿ ನಾಯಕತ್ವ. ಒಮ್ಮೊಮ್ಮೆ ವಂದಿಮಾಗಧರಾಗಿ, ಮತ್ತೊಮ್ಮೆ ಪ್ರತಿಭಟನೆಯ ಪೋಷಾಕು ಧರಿಸುವ ಇವರು ಯಾವುದೇ ಸಾಂಸ್ಕೃತಿಕ ಬದ್ಧತೆ ಹೊಂದಿರಲಾರರು. ಸಮಯಕ್ಕೆ ತಕ್ಕವೇಷ, ಸಭೆಗೆ ತಕ್ಕರಾಗ ಹಾಡುವ ನಿಪುಣಕಲೆ ರೂಢಿಸಿ ಕೊಂಡಿರುತ್ತಾರೆ. ಎಡಚ, ಎಬಡನಂತಹ ಮಂತ್ರಿಯೇನಾದರು ಸಿಕ್ಕರೆ ಸಾಕು ಅವನನ್ನು ಆಟ ಆಡಿಸುವಲ್ಲಿ ಇವರನ್ನು ಮೀರಿಸುವವರೇ ಇರಲ್ಲ. ಅಷ್ಟಕ್ಕೂ ಈ ಹೊಲಬುಗೇಡಿಗಳು ಅಡ್ಡಕಸುಬಿಗಳೇನಲ್ಲ. ಎಲ್ಲ ಕಲೆಗಳ ತಟಕು ತಟಕು ಪರಿಚಯವುಳ್ಳ ಸಕಲಕಲಾ ಪರಾಕ್ರಮಿ ಗೋಸುಂಬೆಗಳು. ಆದಾಗ್ಯೂ ಎಮರ್ಜೆನ್ಸಿಗೆ ಇರಲೆಂದು ಕಲೆಯ ಯಾವುದಾದರೊಂದು ಪ್ರಕಾರದಲ್ಲಿ ಸಣ್ಣದೊಂದು ಸಾಧನೆಯ ಸರ್ಟಿಫಿಕೆಟ್, ಆಧಾರ್ ಕಾರ್ಡಿನಂತೆ ಇಟ್ಟುಕೊಂಡಿರುತ್ತಾರೆ. ಒಂದೆರಡು ಸಂಘ ಸಂಸ್ಥೆ, ಟ್ರಸ್ಟ್, ಪ್ರತಿಷ್ಠಾನಗಳ ಅಧಿಕೃತ ನೊಂದಣಿ ಮಾಡಿಟ್ಟುಕೊಂಡು ತಪ್ಪದೇ ಅವುಗಳ ಹೆಸರಲ್ಲಿ ಇಲ್ಲಿಯ ಮತ್ತು ದಿಲ್ಲಿಯ ಸರಕಾರದ ಖಜಾನೆಗಳಿಂದ ಬಳಬಳ ಅಂತ ಅನುದಾನ ಉದುರಿಸಿ ಕೊಳ್ಳುತ್ತಾರೆ. ಅದಕ್ಕೆಲ್ಲ ಜಿಎಸ್ಟಿ ಸಮೇತವಾದ ಬಿಲ್ಲು ಬಾಣಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಯಾರಿಸಿ ಕೊಡುವಲ್ಲಿ ಇವರು ಸಿಕ್ಕಾಪಟ್ಟೆ ಶ್ಯಾಣೇರು. ಈ ಕಠಿಣ ಪರಿಶ್ರಮವನ್ನು ಸಾಂಸ್ಕೃತಿಕ ಸಂಘಟನೆ ತಮಗೆ ದಶಕಗಳಿಂದ ಕಲಿಸಿ ಕೊಟ್ಟಿದೆಯೆಂದು ವಿಧಾನಸೌಧದ ಕಾರಿಡಾರುಗಳಲ್ಲೂ ಪುಂಗಿ ಊದುತ್ತಾರೆ. ಮೊದ ಮೊದಲು ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ರೋಗ ಬೆಂಗಳೂರಿಗಷ್ಟೇ ಸೀಮಿತಗೊಳ್ಳಲಿಲ್ಲ. ಇದು ಕೊರೊನಾ ವೈರಾಣು ತರಹ ಎಲ್ಲ ಕಡೆಗೂ ಸಾಂಕ್ರಾಮಿಕ ರೋಗವಾಗಿ ಹಬ್ಬಿದೆ. ಕೆಲವರು ತಮ್ಮ ಸಾರಿಗೆ ಸಂವಹನದ ಅನುಕೂಲ ಸರಳಗೊಳ್ಳಲೆಂದು ಅಂಥವರು ಬೆಂಗಳೂರಿಗರಾಗಿದ್ದು, ಮತ್ತೆ ಕೆಲವರು ಅನಿವಾಸಿ ಬೆಂಗಳೂರಿಗರು. ರಾಜಧಾನಿಯ ಈ ಲಾಬಿಕೋರರು ಜಿಲ್ಲೆ, ತಾಲೂಕುಗಳಲ್ಲೂ ಶಾಖಾಮಠಗಳಂತೆ (ಗೆಳೆಯರೊಬ್ಬರ ಪ್ರಕಾರ ಅಲಿಬಾಬಾ ಮತ್ತು ೪೦…) ತಮ್ಮ ಶಿಷ್ಯಬಳಗ ಸಾಕಿ ಕೊಂಡಿರುತ್ತಾರೆ. ಆ ಮೂಲಕ ಅವರ ಬಿಜಿನೆಸ್ ನಾಡಿನ ತುಂಬೆಲ್ಲ ಹರಡಲು ಅನುಕೂಲ. ಸಿರಿಗನ್ನಡದ ಪ್ರಾಂಜಲ ಕಲೆ, ಸಂಸ್ಕೃತಿಗೆ, ಬೋಳೆತನದ ಕಲಾವಿದರಿಗೆ ಇಂಥವರಿಂದ ಬಿಡುಗಡೆಯೇ ಇಲ್ಲ ಎನ್ನುವಷ್ಟು ಇವರ ಕಬಂಧ ಬಾಹುಗಳು ಬಲಾಢ್ಯಗೊಂಡಿವೆ. ಕೆಲವು ಮಠಾಧೀಶರು, ಪತ್ರಕರ್ತರು ಇಂತಹ ಲಾಬಿಕೋರರ ಪರನಿಂತು ಲಾಬಿಮಾಡುವುದು, ಆಶೀರ್ವದಿಸುವುದು ಅಷ್ಟೇನು ನಿಗೂಢವಲ್ಲದ ಸಾಂಸ್ಕೃತಿಕ ದುರಂತ. ಅನರ್ಹರಿದ್ದೂ ತಮ್ಮ ಪಾಲಿನ ಸಂಘ, ಸಂಸ್ಥೆಗಳ ಅನುದಾನ, ಪ್ರಶಸ್ತಿ ಹೊಡಕೊಂಡಿದ್ರೆ ಮುಂಡಾ ಮೋಚಲೆನ್ನಬಹುದಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ, ಸಹಾಯಧನ, ಆಪದ್ಧನ, ಪ್ರಶಸ್ತಿಗಳನ್ನು ಇತರೆ ಅನರ್ಹರಿಗೇ ಕೊಡಿಸುವ ದಲ್ಲಾಳಿತನದಲ್ಲಿ ಇವರದು ಹೆಸರಾಂತ ಹೆಸರು. ಕೆಲವರ ಪಾಲಿಗದು ಕಾಯಕವೇ ಆಗಿಬಿಟ್ಟಿದೆ. ಸರಕಾರದ ಎಲ್ಲ ಮಜಲುಗಳ ಒಳಕೀಲು, ಕೀಲಿಕೈಗಳ ದಟ್ಟಪರಿಚಯ ಇವರಿಗೆ ಕರತಲಾಮಲಕ. ಏನೊಂದು ಅನುಮಾನಕ್ಕೆಡೆ ಇಲ್ಲದಂತೆ, “ಪುಣ್ಯಾತ್ಮರಿವರು” ಎಂಬ ತಮ್ಮ ಇಮೇಜಿಗೆ ಧಕ್ಕೆ ಬಾರದಂತೆ ಹವಾ ಮೇನ್ಟೇನ್ ಮಾಡುವಲ್ಲಿ ಇವರನ್ನು ಮೀರಿಸುವವರೇ ಇಲ್ಲ. ಸಂಸ್ಕೃತಿಯ ಗಂಧಗಾಳಿಯಿಲ್ಲದ ಭ್ರಷ್ಟ ಅಧಿಕಾರಿಗಳು, ಕೀರ್ತಿಕಾಮುಕ ರಾಜಕಾರಣಿಗಳಿಗೆ ಸಹಜವಾಗಿ ಇಂತಹ ಕಲರ್ಫುಲ್ ಪುಂಗೀದಾಸರೇ ಬೇಕು. ಇಂಥವರ ಪುಂಗಿದಾಸನಿಷ್ಠೆ ಮೆಚ್ಚಿ ಯಾವನಾದರು ಹುಚಪ್ಯಾಲಿ ಮಂತ್ರಿ ಮಹಾಶಯ ಇವರನ್ನು ವಿಧಾನ ಪರಿಷತ್ತಿಗೋ, ರಾಜ್ಯಸಭೆಗೋ ನೇಮಕ ಮಾಡುವ ಸಾದೃಶ್ಯ ಪವಾಡಗಳು ಜರುಗಿದರೇನು ಅಚ್ಚರಿ ಪಡಬೇಕಿಲ್ಲ.! ಆಗ ಜೈ ಹೋ ಲಾಬಿ, ಜೈಹೋ..! ಎನ್ನವುದೊಂದೇ ಬಾಕಿ. ಜೋಕಲ್ಲ ಇವರನ್ನು ದಲ್ಲಾಳಿಗಳು ಅನ್ನುವಂಗಿಲ್ಲ ಜೋಕೆ…!! *******

ಪ್ರಸ್ತುತ Read Post »

You cannot copy content of this page

Scroll to Top