ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾರ್ಮಿಕ ದಿನದ ವಿಶೇಷ ಲೇಖನ

ಕಾರ್ಮಿಕರಿಲ್ಲದ  ಕಾರ್ಮಿಕ ದಿನಾಚರಣೆ ಗಣೇಶ್ ಭಟ್ ಶಿರಸಿ ಕಾರ್ಮಿಕರಿಲ್ಲದ  ಕಾರ್ಮಿಕ ದಿನಾಚರಣೆ              ಕೆಂಪು ಧ್ವಜಗಳ ಹಾರಾಟ,  ಜನರ ಮೆರವಣ ಗೆಗಳಿಲ್ಲದ  ಕಾರ್ಮಿಕ ದಿನಾಚರಣೆ  ನಡೆಯುತ್ತಿದೆ. ಎಂದಿನಂತೆ  ಸರ್ಕಾರ ರಜೆ   ಘೋಷಿಸಿದ್ದರೂ, ರಜೆಯನ್ನು  ಅನುಭವಿಸಲಾರದ ಸ್ಥಿತಿಗೆ ಜಗತ್ತಿನಾದ್ಯಂತ ಕಾರ್ಮಿಕರು ತಲ್ಪಿದ್ದಾರೆ.            ಮೇ 1 ನೇ ತಾರೀಕಿನಂದು ಕಾರ್ಮಿಕ ದಿನ ಆಚರಿಸಲು ಕಾರಣವಾದ  ಘಟನೆ ನಡೆದಿದ್ದು 1886 ರಲ್ಲಿ.  ಅಮೇರಿಕಾವು ಅದಾಗಲೇ ಆರ್ಥಿಕ ಹಿಂಜರಿತದಿಂದ ಜರ್ಝರಿತವಾಗಿತ್ತು. 1882 ರಿಂದಲೂ ಮಂದಗತಿಯಲ್ಲಿದ್ದ  ಆರ್ಥಿಕ ಸ್ಥಿತಿಯಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದರು.  ದುಡಿಮೆಯ ಅವಧಿಗೆ  ಮಿತಿ  ಇರಲಿಲ್ಲ. ದಿನಕ್ಕೆ 10 ರಿಂದ 12 ತಾಸು ಕೂಡ ಕೆಲಸ ಮಾಡಬೇಕಾಗುತ್ತಿತ್ತು.             ಇಂತಹ  ದಿನಗಳಲ್ಲಿ  ಕಾರ್ಮಿಕ ಸಂಘಟನೆಗಳು ದಿನದ  ದುಡಿಮೆಯನ್ನು 8 ತಾಸುಗಳಿಗೆ  ಸೀಮಿತಗೊಳಿಸುವಂತೆ ಒತ್ತಾಯಿಸುತ್ತಿದ್ದವು.  ಕಾರ್ಖಾನೆಗಳ, ಉದ್ದಿಮೆಗಳ ಮಾಲೀಕರು  ಇದಕ್ಕೆ    ಒಪ್ಪದಿದ್ದಾಗ  ವಸಂತ ಕಾಲದ ಪ್ರಾರಂಭವಾದ 1 ಮೇ 1886 ರಿಂದ  ದಿನಕ್ಕೆ  8 ತಾಸು ಮಾತ್ರ ಕೆಲಸ  ಮಾಡಬೇಕೆಂದು ಕಾರ್ಮಿಕ ಸಂಘಟನೆಗಳು ತಮ್ಮ  ಸದಸ್ಯರಿಗೆ ಕರೆ ನೀಡಿದವು.          ಆದರೆ ಮಾಲೀಕರ ಒಡೆದಾಳುವ ನೀತಿಯಿಂದಾಗಿ ಕಾರ್ಮಿಕ  ಸಂಘಟನೆಗಳ ಕೆಲವು  ಸದಸ್ಯರು ಕೆಲಸಕ್ಕೆ  ಹಾಜರಾಗಿ ಎಂದಿನಂತೆ 10 ತಾಸುಗಳ ದುಡಿಮೆಗೆ  ಮುಂದಾದರು. ಇದನ್ನು  ಪ್ರತಿಭಟಿಸಲು ಉಳಿದ ಕಾರ್ಮಿಕರು  ಫ್ಯಾಕ್ಟರಿಗಳ  ಹೊರಗಡೆ  ಜಮಾಯಿಸಿದರು.         ಮೇ 3 ನೇ ತಾರೀಖಿನಂದು ಪ್ರತಿಭಟನಾ ನಿರತ ಕಾರ್ಮಿಕರ ಸಂಖ್ಯೆಯಲ್ಲಿ  ಹೆಚ್ಚಳವಾಗಿ  ನೂಕುನುಗ್ಗಲು ಉಂಟಾಯಿತು.  ಇದನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಕೆಲವರು ಸಾವನ್ನಪ್ಪಿದರು.  ಅವರ ಶವವನ್ನಿಟ್ಟು ಪ್ರತಿಭಟನೆ   ಮುಂದುವರಿಯಿತು.   ಮೇ 4 ರಂದು ಪ್ರತಿಭಟನೆ  ನಡೆಯುತ್ತಿದ್ದ  ಸ್ಥಳದಲ್ಲಿ ಬಾಂಬ್ ಸ್ಪೋಟಗೊಂಡಿತು.  ಕೆಲವು ಪೋಲೀಸರು ಹಾಗೂ ನಾಗರಿಕರು ಸತ್ತರು ಹಾಗೂ ಹಲವರಿಗೆ  ಗಾಯಗಳಾದವು.  ಪೋಲೀಸ್ ಬಲದಿಂದ ಚಳುವಳಿಯನ್ನು  ಹತ್ತಿಕ್ಕಲಾಯಿತು.  ಬಾಂಬ್ ಸ್ಪೋಟಕ್ಕೆ ಕಾರ್ಮಿಕರೇ ಕಾರಣವೆಂದು  ಹಲವರನ್ನು  ಬಂಧಿಸಿ, ಕೆಲವರಿಗೆ  ಶಿಕ್ಷೆ ವಿಧಿಸಲಾಯಿತು.         ಈ ಘಟನೆ  ನಡೆದಾಗ ಅಲ್ಲಿ ವಲಸೆ ಬಂದ ಕಾರ್ಮಿಕರ ಸಂಖ್ಯೆ  ತುಂಬಾ ದೊಡ್ಡದಿತ್ತು.  ಜರ್ಮನಿ, ಮೆಕ್ಸಿಕೋಗಳಿಂದ  ಬಂದ ಕಾರ್ಮಿಕರನ್ನು  ಸ್ಥಳೀಯರು ಇಷ್ಟಪಡುತ್ತಿರಲಿಲ್ಲ.  ಕಾರ್ಮಿಕರ  ನಡೆಗೆ ವಿರೋಧ  ಹಾಗೂ   ಪೋಲೀಸರ ದಬ್ಬಾಳಿಕೆಗೆ  ಸ್ಥಳೀಯ ಉದ್ದಿಮೆದಾರರು,  ವ್ಯಾಪಾರಿಗಳು, ಸಾರ್ವಜನಿಕರಿಂದ  ಭಾರೀ ಬೆಂಬಲ ವ್ಯಕ್ತವಾಯಿತು.  ಮುಂದೆ ಎಷ್ಟೋ ವರ್ಷಗಳ ನಂತರ ಈ  ಘಟನೆ  ನಡೆದ ಚಿಕಾಗೋ ನಗರದ ಹೇ ಮಾರ್ಕೆಟ್  ಚೌಕದಲ್ಲಿ  ಕಾರ್ಮಿಕರಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಯಿತು.          ಅಂದಿನ ಘಟನೆಗೂ ಇಂದು ನಡೆಯುತ್ತಿರುವ ಸಂಗತಿಗಳಿಗೂ ತುಂಬಾ ಸಾಮ್ಯತೆ ಇದೆ. ಲಾಕ್‍ಡೌನ್  ನಿಂದಾಗಿ ಕಾರ್ಮಿಕರ ಮರು ವಲಸೆ ನಡೆಯುತ್ತಿದೆ. ದುಡಿಯುವ  ಊರಿನಲ್ಲಿ  ಅವರು ವಲಸೆಗಾರರು, ಸ್ವಂತ ಊರಿಗೆ  ಹೋದಾಗ ಪರ- ಊರಿನಿಂದ ಕಷ್ಟಕಾಲದಲ್ಲಿ  ಓಡಿಬಂದು ತಮಗೆ ತೊಂದರೆ ನೀಡುವರೆಂಬ ಭಯ. ಇಂತಹ   ಮಾನಸಿಕ ತುಮುಲಗಳ ನಡುವೆ, ನಿರುದ್ಯೋಗದ ಸಮಸ್ಯೆ. ಅವೈಜ್ಞಾನಿಕವಾಗಿ, ಪೂರ್ವಯೋಜಿತವಲ್ಲದ ರೀತಿಯಲ್ಲಿ  ಅನುಷ್ಠಾನಗೊಂಡ ಲಾಕ್‍ಡೌನ್‍ನಿಂದ  ಉದ್ಯೋಗ ಕಳೆದುಕೊಂಡವರಿಗೆ  ನಗರಗಳಿಗೆ  ವಾಪಸ್ಸು  ಹೋಗುವ  ಧೈರ್ಯ ಬರುತ್ತಿಲ್ಲ.  ಇನ್ನು ಯಾವಾಗ ದಿಢೀರ್ ಎಂದು ಲಾಕ್‍ಡೌನ್  ಬಂದೀತೆಂಬ  ಆತಂಕ. ನಗರಗಳಲ್ಲೇ ಉಳಿದವರಿಗೆ   ಉದ್ಯೋಗ ಮುಂದುವರಿಕೆಯಾದೀತೆಂಬ ಭರವಸೆಯೂ ಇಲ್ಲ.         ಈ ಮರುವಲಸೆಯ ಪರ್ವ ದೇಶದ  ಆಂತರಿಕ  ಸಮಸ್ಯೆ ಮಾತ್ರವಲ್ಲ;  ಅಂತರಾಷ್ಟ್ರೀಯ ಸಮಸ್ಯೆಯೂ ಹೌದು. ದೇಶದ  ದೊಡ್ಡ ನಗರಗಳಿಂದ  ಹಳ್ಳಿಗಳಿಗೆ ವಾಪಸ್ಸಾಗುತ್ತಿರುವಂತೆಯೇ, ವಿವಿಧ ದೇಶಗಳಿಂದಲೂ ಭಾರತಕ್ಕೆ  ಮರಳಲು ಜನ ತುದಿಗಾಲಲ್ಲಿ  ನಿಂತಿದ್ದಾರೆ.  ಲಾಕ್‍ಡೌನ್  ತೆರವಿನ ನಂತರ   ಈ ಪ್ರಮಾಣ ಹೆಚ್ಚಲಿದೆ.  ಮರು ವಲಸಿಗರಲ್ಲಿ  ದೈಹಿಕ ಶ್ರಮಿಕರು ಮಾತ್ರವಲ್ಲ; ಬೌದ್ಧಿಕ  ಶ್ರಮಿಕರೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ.   ಈ ಮರುವಲಸೆಯ ಮಹಾಪರ್ವವನ್ನು  ಎದುರಿಸಲು ಭಾರತ ಸರ್ಕಾರದ ಬಳಿ ಯಾವುದೇ ಯೋಚನೆ ಅಥವಾ ಯೋಜನೆಗಳಿಲ್ಲ. ಈಗ ಅಸ್ತಿತ್ವದಲ್ಲಿರುವ ನರೇಗಾ ಮುಂತಾದ ಯೋಜನೆಗಳಿಂದ  ದೊಡ್ಡ ಪ್ರಮಾಣದ  ಯಾವ ಪ್ರಯೋಜನವೂ ಆಗದು.  ನಿರುದ್ಯೋಗ ಭತ್ತೆ ನೀಡಿಕೆ ಭಾರತದಲ್ಲಿ  ಆಗದ ವಿಷಯ. ಉಚಿತ ಆಹಾರ ನೀಡಿಕೆಯನ್ನು ಎಷ್ಟು ದಿನ ಮುಂದುವರಿಸಲು ಸಾಧ್ಯ?      ಈ ಸಮಸ್ಯೆಗೆ ಪರಿಹಾರವೆಂದರೆ ಸ್ಥಳೀಯ ಸಂಪನ್ಮೂಲಗಳ ಬಳಕೆಯಿಂದ  ಸ್ಥಾನಿಕವಾಗಿ  ಉದ್ದಿಮೆಗಳ ಸ್ಥಾಪನೆ.  ಸ್ಥಳೀಯವಾಗಿ ಲಭ್ಯವಿರುವ  ಸಂಪನ್ಮೂಲಗಳನ್ನು ಆಧರಿಸಿ,  ಬ್ಲಾಕ್  ಮಟ್ಟದಲ್ಲಿ  ಯೋಜನೆಯನ್ನು ರೂಪಿಸಬೇಕು.  ಬ್ಲಾಕ್‍ನ  ನಿವಾಸಿಗಳೆಲ್ಲರಿಗೂ ಫಲಪ್ರದ  ಉದ್ಯೋಗಾವಕಾಶ  ಸೃಷ್ಟಿಸುವ  ಗುರಿಯಿಂದ  ಆರ್ಥಿಕ ಚಟುವಟಿಕೆಗಳು  ಹಾಗೂ  ಅಭಿವೃದ್ಧಿ ಕಾರ್ಯಗಳು  ರೂಪಿತವಾಗಬೇಕು.  ಅಗತ್ಯವಿರುವಲ್ಲಿ  ಕೆಲಸದ  ಅವಧಿಯನ್ನು ದಿನಕ್ಕೆ 3 ಅಥವಾ 4 ತಾಸುಗಳಿಗೆ  ಇಳಿಸಬೇಕು.    ವಿಕೇಂದ್ರೀಕೃತ ಅರ್ಥನೀತಿಯ  ಅಳವಡಿಕೆ,  ಸಮತೋಲಿತ ಆರ್ಥಿಕ ಚಟುವಟಿಕೆ  ( ಯಾವ ಕ್ಷೇತ್ರದ ಮೇಲೆ ಜನಸಂಖ್ಯೆಯ ಎಷ್ಟು ಪ್ರಮಾಣದ  ಜನ ಅವಲಂಬಿತರಾಗಿರಬೇಕೆಂಬುದು) 100% ಉದ್ಯೋಗಾವಕಾಶ, ಬ್ಲಾಕ್ ಮಟ್ಟದ ಯೋಜನಾ ನಿರೂಪಣೆ  ( ತಳಮಟ್ಟದಿಂದ  ಉನ್ನತ ಮಟ್ಟದ   ಯೋಜನಾ ನಿರೂಪಣಾ ಪದ್ಧತಿ) ಗಳಿಂದ  ಇಂದು ಉದ್ಭವವಾಗುವ  ನಿರುದ್ಯೋಗ ಹಾಗೂ ಆರ್ಥಿಕ  ಸಮಸ್ಯೆಗೆ ಪರಿಹಾರ ಸಾಧ್ಯ.     ಚೀನಾವನ್ನು  ಬಿಟ್ಟೋಡಿ ಬರುವ  ಕಂಪನಿಗಳಿಂದ  ಉದ್ಯೋಗ ಸೃಷ್ಟಿಯಾಗಲಿದೆ,  ಭಾರತದ ಶ್ರೀಮಂತ   ಕಂಪನಿಗಳು   ನಿರುದ್ಯೋಗಿಗಳ ನೆರವಿಗೆ  ಬರುತ್ತವೆಂಬ ಭ್ರಮೆಯಲ್ಲೇ  ಮುಳುಗಿದ್ದರೆ ಬರಲಿರುವ   ಆರ್ಥಿಕ  ಕುಸಿತ,   ಉಂಟಾಗಲಿರುವ ಸಾಮಾಜಿಕ  ಕ್ಷೋಭೆಯನ್ನು, ಆಗಬಹುದಾದ  ಅನಾಹುತ ತಡೆಯಲು ಅಧಿಕಾರದಲ್ಲಿರುವವರಿಂದ  ಸಾಧ್ಯವಾಗದು. ********

ಕಾರ್ಮಿಕ ದಿನದ ವಿಶೇಷ ಲೇಖನ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರ ಕೂಗು ಈರಪ್ಪ ಬಿಜಲಿ ಕಾರ್ಮಿಕರ ಕೂಗು” ಚೋಟುದ್ದದ ಹೊಟ್ಟೆಚೀಲವ ತುಂಬಿಸಲು ಮನುಜ ಮಾಡುವನು ಕೂಲಿ ಕೆಲಸಗಳನು ಕಟ್ಟಡ,ಬಡಗಿತನ,ವೆಲ್ಡಿಂಗ್ ,ಪೈಪ್ಲೈನಗಳು ಪೇಂಟರ್,ಪೌರ,ಸಿಂಪಿಗಕಮ್ಮಾರಿಕೆ,ಅನೇಕ ಕರ್ಮಗಳು।।1।। ನಮ್ಮಿ ಕಾರ್ಮಿಕರಿಗಿಲ್ಲ ಜೀವನದ ಭದ್ರೆತೆ ಅವರ ಜೀವನವಿರುವುದು ಬಲು ವಿಭಿನ್ನತೆ ಬಂಡ್ವಾಳಷಾಹಿ,ಕಾರ್ಮಿಕರಲ್ಲಿನ ತಾರತಮ್ಯತೆ ದೂರಾಗಿ ಮೂಡಿಬರಲಿ ಎರಡೂಗುಂಪಲಿ ಸರಿಸಮಾತೆ।।2।। ಕಾರ್ಮಿಕರ ಕೂಗು ನೊಂದ ಮನಗಳ ಕೂಗು ಕೇಳುತ ಧನಿಕರು ಹಿಗ್ಗಿಸುವರು ತಮ್ಮಯ ಮೂಗು ಹೃದಯಸಿರಿವಂತಿಕೆಲಿ ಕಾರ್ಮಿಕರ ಮನಸ್ಸದು ಮಗು ವೇತನದ ದಿನದಂದು ಇವರ ಮುಖದಲಿ ಕಿಲಕಿಲ ನಗು।।3।। ಜೀವದ ಅಂಗುತೊರೆದು ಅವಿರತ ದುಡಿವವರು ನಿರ್ಭಯವಾಗಿ ಬಹುಅಂತಸ್ತಿನ ಕಟ್ಟಡಗಳ ಕಟ್ಟುವವರು। ನಗರದ ಕಾರ್ಮಿಕರ ಮಕ್ಕಳಿಗೆ ವಿದ್ಯೆಯಕೊರತೆ ಕಾರ್ಮಿಕರಿಗೆ ಶಾಶ್ವತವಾದ ಆಶ್ರಯಸ್ಥಳಗಳ ಕೊರತೆ ।।4। ಕೂಲಿಗಾಗಿ ವಲಸೆ ಹೋಗುವ ಕಾರ್ಮಿಕರು ಕೆಲಸದ ಮೇಲೆ ದುರ್ಘಟನೆಗೆ ತುತ್ತಾಗಿ ಬಲಿಯಾಗುವರು ಬಲಿಯಾಗುವ ಕುಟುಂಬಗಳಿಗೆ ದೊರಕಲಿ ಉತ್ತಮ ಪರಿಹಾರ ಧನಿಕರ ಮೂಲಕ ದೊರಕಿಸಲಿ ನಮ್ಮಿಘನ ಸರ್ಕಾರ।।5।। ***** ಕಟ್ಟಡ ಕೆಲಸಗಳ ಮಾಡುವ ನಮ್ಮೀ ಕಾರ್ಮಿಕರು ನವ ನಗರಗಳ ನಿರ್ಮಿಸುವ ಹೆಮ್ಮೆಯ ನಿರ್ಮಾಪಕರು। ಆಲಿಸಲಿ ಕಾರ್ಮಿಕರ ಕೂಗನು ಮಾಲೀಕರು ಹೃದಯವಂತಿಕೆಯನು ಮೆರೆವಂತಾಗಲಿ ಸಿರಿವಂತರು ।।6।।

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಲೇಖನ

ನಾವು ಬಾಲ ಕಾರ್ಮಿಕರು.  ಗೌರಿ.ಚಂದ್ರಕೇಸರಿ ನಾವು ಬಾಲ ಕಾರ್ಮಿಕರು.  ಹೌದು. ನಾವು ಕೂಲಿ ಮಾಡುವ ಮಕ್ಕಳು. ನಮ್ಮನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಾರೆ. ನಮ್ಮೆಲ್ಲರ ಕನಸುಗಳು ಹೆಚ್ಚೂ ಕಮ್ಮಿ ಒಂದೇ ತೆರನಾಗಿರುತ್ತವೆ. ಬೇರೆ ಬೇರೆ ಬಣ್ಣದ ಬಟ್ಟೆ ತೊಟ್ಟಿರುತ್ತವೆ. ಆದರೆ ಕನಸಿನ ಪರಿಧಿ ಭಿನ್ನ. ಅವು ಕೈಗೂಡಲಾರದ ಕನಸುಗಳೆಂದು ನಮಗೆ ಗೊತ್ತು. ಆದರೆ ಕನಸುಕಾಣಲು ಹಣವನ್ನೇನೂ ಕೊಡಬೇಕಿಲ್ಲವಲ್ಲ.ಸೈಕಲ್ ಶಾಪ್ ಒಂದರಲ್ಲಿ ಪಂಕ್ಚರ್ ಹಾಕುತ್ತ ನಾನೊಬ್ಬಸೈಕ್ಲಿಸ್ಟ್ ಆಗಬೇಕೆಂದೋ, ಹೋಟೆಲ್ ಒಂದರಲ್ಲಿ ಎಂಜಲುಹೊದ್ದು ಮಲಗಿದ ಟೇಬಲ್‌ನ್ನು ಶುಚಿಗೊಳಿಸುತ್ತ, ಗ್ರಾಹಕರ ಜೊತೆ ಬರುವ ಅವರ ಮಕ್ಕಳು ಮಾತನಾಡುವ ಇಂಗ್ಲೀಷನ್ನು ಮಾತನಾಡಲು ನನಗೂ ಬರುವಂತಿದ್ದರೆ? ಕಟ್ಟಡ ಕಟ್ಟುವಲ್ಲಿ ಇಟ್ಟಿಗೆಯನ್ನು ಹೊರುವ ತಲೆಯ ಮೇಲೆ ಹಾರುವ ವಿಮಾನವನ್ನುಕಂಡು ಆ ವಿಮಾನವನ್ನು ನಾನೇ ಓಡಿಸುವ ಕನಸು. ಆದರೆ ಮನೆಯ ಪರಿಸ್ಥಿತಿ ನಮ್ಮೆಲ್ಲ ಕನಸುಗಳಿಗೆ ಬರೆ ಹಾಕಿದೆ.ಅಪ್ಪನ ಬೇಜವಾಬ್ದಾರಿತನ, ಕುಡಿತ, ತಮ್ಮ ತಂಗಿಯರನ್ನು ನನ್ನ ಉಡಿಗೆ ಹಾಕಿ ಯಾರದೋ ಬೆನ್ನು ಹತ್ತಿ ಹೋದ ಅವ್ವ.ಸಿರಿವಂತರು ನೀಡಿದ ಋಣ ಭಾರ, ಅತಿವೃಷ್ಠಿ, ಅನಾವೃಷ್ಠಿಗಳುತಂದಿಟ್ಟ ಅನಾಹುತಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ನಮ್ಮ ದುಡಿಮೆಗೆ. ಇನ್ನೂ ತೀರದ ನಿದ್ದೆಯಲ್ಲಿಯೇ ಎದ್ದು, ಬರಿಮೈಗೆ ತೇಪೆ ಹಾಕಿದ ಅಂಗಿಯನ್ನು ಸಿಕ್ಕಿಸಿ, ಹಸಿದು ಚುರುಗುಟ್ಟುವ ಹೊಟ್ಟೆಯನ್ನು ಹೊತ್ತು ಕೆಲಸದ ದಾರಿಯನ್ನು ಸವೆಸಬೇಕು. ನಿತ್ಯ ಮಾಲೀಕರ ನಿಂದನೆಗೆ ಕಿವಿಯಾಗಬೇಕು.ಅವನ ಕ್ರೂರ ನೋಟವನ್ನು ಎದುರಿಸಿ ಮೈ ಎಲ್ಲಾ ಹಿಡಿಯಾಗಿಸಿಕೊಳ್ಳಬೇಕು. ಅಮ್ಮ ಅಕ್ಕಂದಿರನ್ನೆಲ್ಲ ಬೈಗುಳಗಳಲ್ಲಿ ಬಳಸಿಕೊಳ್ಳುವ ಇವರ ಬಗ್ಗೆ ಕುದಿ ಹತ್ತಿ ರಕ್ತ ಕಣ್ಣಿಗೆ ಬರುತ್ತದೆ. ಇಲ್ಲಿ ಹೆಡೆ ಬಿಚ್ಚಿಕೊಳ್ಳುವ ಛಲದಿಂದಲೇ ನಮ್ಮಂತಹ ಮಕ್ಕಳು ತಮ್ಮ ಕನಸಿಗೆ ಜೀವ ಬರಿಸಿದ್ದಾರೆ. ಮೆತ್ತನೆಯ ಆಸನಗಳಲ್ಲಿ ಕುಳಿತು ತಮ್ಮ ಸಾಧನೆಗಳ ಹಿಂದೆ ಇರುವ ತಮ್ಮನ್ನು ತುಳಿದವರ ನೆನಪುಗಳನ್ನು ಮೆಲುಕು ಹಾಕುತ್ತಾರೆ.  ಹೌದು. ಇಂದು ನಾವು ಬಾಲ ಕಾರ್ಮಿಕರಿರಬಹುದು.ಮುಂದೊಂದು ದಿನ ಆಳಿಸಿಕೊಂಡವರನ್ನೇ ನಾವು ಆಳಬಹುದು.ನಮಗೂ ಕೆಚ್ಚಿದೆ, ರೊಚ್ಚಿದೆ. ಮೂಗರಂತೆ ಸುಮ್ಮನಿದ್ದರ ಆಂತರ್ಯದಲ್ಲಿ ನಿಗಿ ನಿಗಿಸುವ ಜ್ವಾಲಾಗ್ನಿ ಇದೆ. ಅವಮಾನ, ಹಸಿವು,ಬಡತನಗಳನ್ನು ಹಾಸಿ ಹೊದ್ದವರೇ ಮುಂದೊಂದು ದಿನ ಮಥನಲ್ಲಿ ಹುಟ್ಟಿದ ಅಮೃತದಂತೆ ಮೇಲೇಳುತ್ತಾರೆ. ಹೌದು ನಾವು ಬಾಲ ಕಾರ್ಮಿಕರು. **********

ಕಾರ್ಮಿಕ ದಿನದ ವಿಶೇಷ-ಲೇಖನ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ -ಕವಿತೆ

ಕವಿತೆ ಬಿಸಿಲ ಹೂಗಳ ಬದುಕು ಲಕ್ಷ್ಮಿ ಪಾಟೀಲ್ ಬಿಸಿಲ ಹೂಗಳ ಬದುಕು ನನಗೆ ನೆರಳಿಗಿಂತಲೂ ಬಿಸಿಲೇ ಇಷ್ಟ ಒಳಗಿನ ಬೆಂಕಿ ಹೊರಗೆ ನೀರಾಗಿ ಹರಿಯುವ ವಿಸ್ಮಯಕ್ಕೆ ಕಾವುಗಳನ್ನೆಲ್ಲ ಕರಗಿಸಿ ನೀರಾಗುವುದನ್ನು ಕಲಿಸುತ್ತವಲ್ಲ ಅದೆಷ್ಟು ಸಲೀಸು… ಬಿಸಿಲನ್ನು ಹಾಸಿ ಹೊದೆದು, ಶ್ರಮದಲ್ಲಿ ಬೆವರಿಳಿಸಿ ಬಿಸಿಲ ಹಾಡುಗಳನ್ನು ಕಟ್ಟಿ ಜೀವನೋತ್ಸಾಹ ಹೇರಿಕೊಂಡು ಹೊರಟವರನ್ನು ಕಂಡು ನಾನೀಗ ದುಃಖಿಸುವುದಿಲ್ಲ ಭಾವಕೋಶಗಳನು ಅರಳಿಸಿ ಬಿಡುವ ಬಾಡದ ಹೂವಾಗಿ ಉಳಿದು ಬಿಡುವ ಬದುಕಿನರ್ಥಗಳನ್ನು ಹಿಗ್ಗಿಸುವ ಇವರನ್ನು ಕಂಡು ಹಿಗ್ಗುತ್ತೇನೆ ಬೆವೆರಿಳಿಸುವ ಕಸಬಿಗೆ ಜೀವ ತುಂಬುತ್ತೇನೆ… ತಮ್ಮಷ್ಟಕ್ಕೆ ತಾವು ತಣ್ಣಗೆ ಬದುಕುವ ಇವರು ಥೇಟ್ ಮಣ್ಣಿನ ಬಣ್ಣದವರು ನೋವುಗಳನ್ನೆಲ್ಲ ಧಗೆಯಲ್ಲಿ ಆವಿಯಾಗಿಸಲು ಅವರು ಬಿಸಿಲ್ಲನ್ನೇ ಪ್ರೀತಿಸುವರು ಉಪ್ಪು ನೀರಿನ ಕಡಲಾಗುವರು ಬೆವರುಬಸಿದು, ತಮ್ಮ ದಣಿವಿಗೆ ತಮ್ಮ ಸೋಲಿಗೆ ತಮ್ಮ ಉಪವಾಸಗಳಿಗೆ ತಣಿಸುವ ಪಾಠ ಕಲಿತುಕೊಂಡವರು… ಅನ್ಯರ ಹೊರೆ ಹೊತ್ತು ಭಾರವೆಂದು ನರಳದವರು ಹಡಗು ಕಟ್ಟಿಕೊಂಡು ಹಾಯಾಗಿರುವವರಿಗೆ ನಿತ್ಯ ತುತ್ತಾಗುವವರು ಈ ಪೊರೆವ ಜನಗಳೇ ಭೂಮಿಯ ತುಂಬಾ ಬಿಸಿಲ ಹೂವಾಗಿ ಅರಳಿ ನಿಲ್ಲುವರು….. ಇವರ ವಡಲ ವಡಬಾಗ್ನಿಯಲ್ಲಿ ತಮ್ಮ ಹಡಗು ತೇಲಿಸಿಕೊಂಡು ಅವರಲ್ಲಿ ಹಾಯಾಗಿ ಬದುಕುವರು ನೆರಳನ್ನೇ ಪ್ರೀತಿಸುವರು ನೆರಳಾದವರನ್ನು ಮರೆಯುವರು…. ಪಾಪಕ್ಕೆ ಪಕ್ಕಾಗಿ ಬಿಸಿಲಿಗೆ ಬಿದ್ದರೆ ಸತ್ತೇ ಹೋಗುವರು… ಅರಳದೆ ಅರಳಿಸದೆ ಮಣ್ಣಿನಲ್ಲಿ ಮಣ್ಣಾಗದೆ ಚಿತಾಗಾರದಲ್ಲಿ ಬೂದಿಯಾಗುತ್ತವೆ ಈ ಶವಗಳು ಹುಡುಕಿದರಲ್ಲಿಲ್ಲ ಜೀವಾಮೃತದ ಕಣಗಳು, ಬಿಸಿಲ ಹೂಗಳ ತಳಕೆ ಗೊಬ್ಬರವೆಂದು ಚೆಲ್ಲಲು…. *********

ಕಾರ್ಮಿಕ ದಿನದ ವಿಶೇಷ -ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಇದ್ದಲ್ಲೆ ಇದ್ದು ಬಿಡಿ. ಜ್ಯೋತಿ ಡಿ.ಬೊಮ್ಮಾ. ಇದ್ದಲ್ಲೆ ಇದ್ದು ಬಿಡಿ. ಇದ್ದಲ್ಲೆ ಇದ್ದು ಬಿಡಿ ನೀವು ಆರಾಮವಾಗಿ ನಿಮ್ಮೂರಿಗೆ ನಿಮ್ಮ ಮನೆಗೆ ಕರೆಸಿಕೊಳ್ಳಲು ಸರ್ಕಾರದ ಬಳಿ ಸೌಲಬ್ಯಗಳಿಲ್ಲ. ವಿದೇಶದಿಂದ ಮರಳುವವರಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವವರಿಗೆ ಬಸ್ ,ಏರೋಪ್ಲೇನ್ ಗಳೆಲ್ಲ ಮೀಸಲಾಗಿವೆ. ನೀವು ಇದ್ದಲ್ಲೆ ಇದ್ದುಬಿಡಿ ಕಾರು ಜೀಪುಗಳಿದ್ದವರು ಬರಲಿ ಅವರವರ ಊರಿಗೆ ಚೆಕ್ ಪೋಸ್ಟ್ ನಲ್ಲಿರುವವರಿಗೆ ಚಳ್ಳೆಹಣ್ಣು ತಿನ್ನಿಸಿ ಹೊತ್ತು ಹರಿಯುವ ಮೊದಲು. ನೀವು ಇದ್ದಲ್ಲೆ ಇದ್ದು ಬಿಡಿ ಕೆಲಸವಿಲ್ಲ ,ತಿನ್ನಲು ಆಹಾರವಿಲ್ಲದಿದ್ದರೂ ಹಿಡಿ ಅನ್ನಕೊಟ್ಟು ಕೈತೊಳೆದುಕೊಳ್ಳುವವರ ದೊಡ್ಡಸ್ತಿಕೆಯ ಮುಂದೆ ಹಿಡಿಯಾಗುತ್ತ. ಗೃಹ ಬಂಧನದಲ್ಲಿರುವವರು ಸಂಭ್ರಮಿಸಲಿ ತಮ್ಮ ತಮ್ಮ ಸಂಸಾರದೊಂದಿಗೆ ನೀವು ಇದ್ದಲ್ಲೆ ಇದ್ದು ಬಿಡಿ ಸೂರಿಲ್ಲದೆ ,ಕೂಳಿಲ್ಲದೆ ದಿನಗಳು ದೂಡುತ್ತ. ಪರ್ಪ್ಯೂಮ್ ಹಾಕಿಕೊಂಡು ವಿದೇಶದಿಂದ ಬಂದು ಸೋಂಕು ಹಬ್ಬಿಸುವವರನ್ನು ಬಿಟ್ಟು ಬಿಡಿ ಕಾರ್ಮಿಕರ ಮೇಲೆ ಕ್ರಿಮಿನಾಶಕ ಸಿಂಪಡಿಸಿ ವೈರಾಣುವನ್ನು ಓಡಿಸಿಬಿಡಿ. ತುತ್ತಿನ ಚೀಲ ತುಂಬಿಕೊಳ್ಳಲು ರಾಜ್ಯ ಗಡಿಗಳನ್ನು ದಾಟಿಹೋದ ಕಾರ್ಮಿಕರು ತಮ್ಮವರ ಸೇರಬಯಸಿದ್ದು ತಪ್ಪೆ..! ನೂರು ರಹದಾರಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಬಸವಳಿಯುತ್ತಿರುವ ನಿಮಗೆ ನಿಮ್ಮ ಗೂಡು ಸೇರಿಸಲಾಗುತ್ತಿಲ್ಲ..ಕ್ಷಮಿಸಿ. ****** (ಕಾಯಕದಲ್ಲಿ ದೇವರನ್ನು ಕಾಣುತ್ತಿರುವ ಶ್ರಮಜೀವಿಗಳಿಗೆಲ್ಲ ಕಾರ್ಮಿಕ ದಿನಾಚರಣೆಯ ಶುಭಾಷಯಗಳು ).

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಾರ್ಮಿಕ ದಿನದ ವಿಶೇಷ-ಕಥೆ ತಿಥಿ ಟಿ. ಎಸ್.‌ ಶ್ರವಣ ಕುಮಾರಿ. ತಿಥಿ “ನಾಗೂ… ಏ ನಾಗೂ… ಇದಿಯನೇ ಒಳಗೆ…” ಅಡುಗೆಮನೆಯನ್ನಿಸಿಕೊಂಡ ಆ ಮನೆಯ ಮೂಲೆಯಲ್ಲಿ ಹೊಗೆಯೊಂದಿಗೆ ಗುದ್ದಾಡುತ್ತಾ ಹುಳಿಗೆ ಹಾಕಲು ಹುಣಿಸೇಹಣ್ಣು ಕಿವುಚುತ್ತಾ ಕುಳಿತಿದ್ದ ನಾಗುವಿಗೆ ಸುಬ್ಬಣ್ಣನ ದನಿ ಕೇಳಿ ʻಯಾಕ್‌ ಬಂದ್ನೋ ಮಾರಾಯ ಈಗ, ಕೆಲಸಿಲ್ದೆ ಈ ದಿಕ್ಕಿಗ್‌ ಕೂಡಾ ತಲೆಯಿಟ್ಟು ಮಲಗೋನಲ್ಲʼ ಎಂದುಕೊಂಡೇ “ಇದೀನೋ ಇಲ್ಲೇ ಒಲೆಮುಂದೆ ಅಡುಗೆಮಾಡ್ತಾ” ಎಂದುತ್ತರಿಸಿದಳು. ಬಿಸಿಲಿನಿಂದ ಒಳಗೆ ಬಂದವನಿಗೆ ಅಡುಗೆಮನೆಯೆಂದು ಮಾಡಿದ್ದ ಅಡ್ಡಗೋಡೆಯ ಒಳಗಿನ ಕತ್ತಲೆ, ಹೊಗೆಯ ಮಧ್ಯೆ ʻನಾನೂ ಇದೀನಿʼ ಎನ್ನುವಂತೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಅಸ್ಪಷ್ಟವಾಗಿ ಅವಳ ಆಕೃತಿ ಕಂಡಿತು. “ಈ ಹೊಗೇಲಿ ಅದೆಂಗಾರ ಇದಿಯೇ ಮಾರಾಯ್ತಿ, ನಿನ್‌ ಮಖ್ವೇ ಸಮಾ ಕಾಣಲ್ವಲ್ಲೇ” ಎಂದ ಕೆಮ್ಮುತ್ತಾ. “ಕಾಣ್ದಿದ್ರೆ ಬಿಡತ್ಲಾಗೆ, ಮಾತಾಡ್ತಿರದು ಕೇಳ್ತಿದ್ಯಲ್ಲ, ಏನು ಸವಾರಿ ಈ ಕಡೆ” ಎಂದಳು. ಇಷ್ಟು ಹೊತ್ತಿಗೆ ಆ ಕತ್ತಲಿಗೆ ಸ್ವಲ್ಪ ಕಣ್ಣನ್ನು ಹೊಂದಿಸಿಕೊಂಡಿದ್ದವನು ಅಲ್ಲೇ ಎದುರಿನ ಗೋಡೆಗೊರಗಿ ಕೂತು “ಇವತ್ತು ಸೋಮಾರ ಅಲ್ವನೇ, ನಾಳೆ ಬರಾ ಶುಕ್ರಾರ ಅಜ್ಜಿ ಬರ್ತಳೆ. ಈ ಸಲ ʻಮೇ ಡೇʼ ರಜಾದಿನ್ವೇ ಬಂದಿದೆ ನೋಡು. ಕರ್ದೋರೆಲ್ರೂ ಬರ್ತರೆ. ದೊಡ್ಡೋರೆ ಒಂದು ಮೂವತ್ತು ಜನ್ರ ಮೇಲೇ ಆಗ್ತರಪ್ಪ. ಅಮ್ಮಂಗೆ ಒಬ್ಳಿಗೇ ಅಷ್ಟು ಅಡುಗೆ ಮಾಡಕ್ಕೆ ಕೈಲಾಗುಲ್ವಲ್ಲೆ. ಅದ್ಕೇ ನಾಗೂನ ಸಹಾಯಕ್ಕೆ ಬರ್ಬಕಂತೆ ಅಂತ ಹೇಳ್ಬಾ ಅಂದ್ಳು” ಅಂದ.‌ ಅವನ ಕಡೆ ತಿರುಗಿ “ಈ ಶುಕ್ರಾರಾನಾ… ಅವತ್ತೇ ನಾರಣಪ್ಪನೋರ ಮನೇಲಿ ಮಗನ್‌ ಮದ್ವೆ ದೇವರ ಸಮಾರಾದ್ನೆ ಇಟ್ಕಂಡಿದರೆ. ಮದ್ವೆ ಮನೆ ಚಕ್ಲಿ, ಉಂಡೆ ಎಲ್ಲಾ ನಾನೇ ಮಾಡ್‌ಕೊಟ್ಟಿರದು. ನಿನ್ನೇಂದ ಶುರುಮಾಡ್ದೋಳು ಇವತ್ತು ಬೆಳಗ್ಗೆನೂ ಏಳುತ್ಲೇ ಹೋಗಿ ಕೆಲ್ಸ ಮುಗಿಸ್ಕೊಟ್ಟು ಬಂದು ಒಲೆ ಹಚ್ಚಿದೀನಿ. ತಪ್ದೇ ಅವತ್ತು ಸುತ್ತು ಕೆಲ್ಸಕ್ಕೆ ಜತಿಗೆ ಹೂವೀಳ್ಯಕ್ಕೂ ಬರ್ಬೇಕು ಅಂತ ಹೇಳಿಯಾರೆ. ನಾನೂ ಒಪ್ಕಂಡಿದಿನಿ. ತಿಥಿ ಅಡ್ಗೆಗೆ ನಂಗೆ ಬರಕ್ಕಾಗಲ್ಲ” ಅಂದು ಆರುತ್ತಿದ್ದ ಒಲೆಯನ್ನೊಮ್ಮೆ ಊದುಗೊಳವೆಯಿಂದ ಜೋರಾಗಿ ಊದಿದಳು. “ಹಂಗಂದ್ರೆ ಹ್ಯೆಂಗೇ? ವರ್ಷ್ವಷ್ವೂ ಮಾಘ ಶುದ್ಧ ಅಷ್ಟ್ಮಿ ದಿನ ಅಜ್ಜಿ ತಿಥಿ ಅನ್ನದು ನಿಂಗೊತ್ತಲ್ವನೆ. ಪ್ರತಿ ಸಲ್ವೂ ನಿಂಗೇ ಹೇಳುದು ನೀನೇ ಜತಿಗ್‌ ಬರದು. ಮರ್ತೇಂದ್ರೆ ಹ್ಯಂಗೆ?” ಮರೆತು, ಬೇರೆಯ ಕಡೆ ಒಪ್ಪಿಕೊಂಡದ್ದು ಅವಳದೇ ತಪ್ಪು ಅನ್ನೋ ಹಾಗೆ ಸುಬ್ಬಣ್ಣ ದಬಾಯಿಸಿದ. “ನಾನೊಬ್ಳೆನಾ ಇರದು ಅಜ್ಜಿಗೆ ಮೊಮ್ಮಗ್ಳೂಂತ, ಪ್ರತಿಸಲ್ವೂ ಬರ್ತಿರ್ಲಿಲ್ವ. ಈ ಸಲ ನಂಗಾಗಲ್ಲ. ಇನ್ಯಾರಾದ್ರೂ ಮಾಡ್ಲಿ” ಎಂದವಳೇ ಮತ್ತೆ ಆರುತ್ತಿದ್ದ ಒಲೆಯತ್ತ ತಿರುಗಿದಳು. “ನಂಗೊತ್ತಿಲ್ಲಪ್ಪ, ನೀ ಹೀಗಂದಿ ಅಂತ ಅಮ್ಮನ ಹತ್ರ ಹೇಳ್ತಿನಿ. ನೀನುಂಟು, ಅವ್ಳುಂಟು. ಹೇಳ್‌ಬಾ ಅಂದ್ಲು, ಹೇಳಿಯೀನಿ” ಎನ್ನುತ್ತಾ ಕೋಪಿಸಿಕೊಂಡು ಅಲ್ಲಿಂದ ಎದ್ದ. ʻಹೋದ್ರೆ ಹೋಗ್ತಾನೆ. ನಾನೊಬ್ಳು ಸಿಕ್ತೀನಿ ಇವ್ರಿಗೆ ಬಿಟ್ಟಿ ಚಾಕ್ರಿ ಮಾಡಿ ಸಾಯಕ್ಕೆ… ಹಾಳಾದ್ ಈ ಒಲೆ… ಹತ್ಕೊಂಡು ಅಡುಗೆಯಾದ್ರೆ ಸಾಕಾಗಿದೆ. ಮುಲ್ಲಾ ಕೂಗಿ ಎಷ್ಟೊತ್ತು ಆಗೋಯ್ತು. ಇನ್ನರ್ಧ ಗಂಟ್ಗೆ ಹಸ್ಕಂಡು ಬರಾ ಹೊತ್ಗೆ ಆಗಿಲ್ದಿದ್ರೆ ಒಂದು ರಾಮಾಣ್ಯವೇ ಆಗೋಗತ್ತೆ…ʼ ಅಂದುಕೊಂಡು ಮತ್ತೆ ಮತ್ತೆ ಊದಿ ಅಂತೂ ಒಲೆ ಉರಿಸುವುದರಲ್ಲಿ ಗೆದ್ದಳು. ಗಂಡನ ಊಟವಾದ ಮೇಲೆ ತಾನೂ ಒಂದಷ್ಟು ಉಂಡು ಮಿಕ್ಕದ್ದನ್ನ ಸ್ಕೂಲಿಂದ ಬರುವ ಮಕ್ಕಳಿಗೆ ಮುಚ್ಚಿಟ್ಟು ಅಡುಗೆ ಮಾಡಿದ ಜಾಗವೆಲ್ಲಾ ಒರಸಿ ಉಸ್ಸಪ್ಪಾ ಅಂತ ಬಾಗಿಲೆದುರಿಗೆ ಕುಳಿತುಕೊಂಡಳು. ಎದುರಿನ ಹೊಂಗೆಮರದಿಂದ ಬೀಸುತ್ತಿದ್ದ ಗಾಳಿಗೆ ಜೀವವೆಲ್ಲಾ ಹಾಯೆನಿಸಿ ಬಾಗಿಲು ತೆರೆದಿದ್ದಂತೆಯೇ ʻಓಣಿ ಕೊನೇಮನೆ, ಯಾರ್‌ ಹಾಯ್ತಾರಿಲ್ಲಿʼ ಎನಿಸಿ ಚಾಪೆ ಬಿಡಿಸಿ ಉರುಳಿಕೊಂಡಳು. ಬೆಳಗ್ಗೆ ಎದ್ದಾಗಿಂದ ಒಲೆ ಮುಂದೆ ದಣಿದಿದ್ದು ಬೆನ್ನು ನೆಲಕ್ಕೆ ಹಾಕಬೇಕೆನಿಸಿತ್ತು. ʻಪ್ರತಿಸಲವೂ ಜಯತ್ತೆ ನನ್ನೇ ಯಾಕ್ ಕರಿಬೆಕು? ಕೃಷ್ಣವೇಣಿ, ಶಾರದಾ, ವಿಮಲಾ ಯಾರೂ ಅವ್ಳ ಕಣ್ಣಿಗ್ಯಾಕ್ ಕಾಣಲ್ಲ. ಅವ್ರನ್ನ ಕರ್ಯದು, ಅವ್ರೂ ಎಲ್ಲಾ ನನ್ನಂಗೆ ಮಾವನ್‌ ಅಕ್ತಂಗೀರ್ ಮಕ್ಳೇ ಅಲ್ವಾ ಅವರತ್ರ ಕೆಲಸ ತೆಗೆಯೋದು ನನ್ನ ಹತ್ರ ತೆಗೆದಷ್ಟು ಸುಲಭ್ವಾ. ಯಾರೂ ಜಯತ್ತೆ ಜೋರಿಗೆ ಸೊಪ್ಪು ಹಾಕಲ್ಲ, ನೀನೂಂದ್ರೆ ನಿಮ್ಮಪ್ಪ ಅಂತರೆ. ಅವ್ರೆಲ್ಲಾ ಮನೆಕಡೆ ಹಚ್ಚಗೆ, ಬೆಚ್ಚಗೆ ತಕ್ಮಟ್ಟಿಗೆ ಚೆನ್ನಾಗಿದರೆ, ಹಾಗಂದ್ರೆ ತಡಕಳತ್ತೆ. ಅದೇ ನಾನು ಎದುರು ಮಾತಾಡಿದ್ರೆ ಊರಲ್ಲೆಲ್ಲಾ ʻಎರ್ಡೊತ್ತು ನೆಟ್ಗೆ ಊಟ್ಕಿಲ್ದಿದ್ದೂ ಎಷ್ಟು ಸೊಕ್ಕುʼ ಅಂತ ಕತೆಕತೆಯಾಗಿ ಹೇಳ್ಕಂಡು ಬರ್ತಳೆ. ತಥ್‌, ಬಡ್ತನಾ ಅನ್ನೋದು ಬಾಯ್ನೂ ಹೊಲ್ದ್ಬಿಡತ್ತಲ್ಲ…ʼ ಅನ್ನಿಸಿ ಇರುಸುಮುರುಸಾಯ್ತು. ಪಕ್ಕಕ್ಕೆ ತಿರುಗಿಕೊಂಡಳು. ʻಹಾಳಾಗ್ಲಿ ಆ ವಿಷ್ಯ, ಹೇಗೂ ಈ ಸಲ ಬರಲ್ಲʼ ಅಂತ ಹೇಳಾಯ್ತಲ್ಲಾ, ನಾಳೆ ತುಂಗಮ್ನೋರ ಮನೆ ಸಾರಿನ್‌ ಪುಡಿ, ಹುಳಿಪುಡಿ ಕೆಲ್ಸ ಇದೆ.‌ ದುಡ್ಡಿನ್‌ ಜತಿಗೆ ಒಂದು ವಾರ ಹತ್ದಿನಕ್ಕಾಗಷ್ಟು ಪುಡೀನು ಕೊಡ್ತರೆ. ಬುದ್ವಾರ ಲಲಿತಮ್ನೋರಿಗೆ ದೋಸೆಹಿಟ್ಟು ರುಬ್ಬುಕೊಡಕ್ಕೆ ಬರ್ತಿನಿ ಅಂತ ಹೇಳಾಗಿದೆ. ಎರಡ್ಸೇರು ಅಕ್ಕಿ ನೆನ್ಸಿರೂ ಒಂದು ಹೊತ್ಗಾಗೋಷ್ಟು ಹಿಟ್ಟು ತಗಂಡೋಗೆ ಅಂತೇಳಿ ಮೇಲಿಷ್ಟು ದುಡ್ಡೂ ಕೈಗಾಕ್ತಾರೆ. ಗುರ್‌ವಾರ ಬೆಳಗ್ಗೇನೇ ನಾರಣಪ್ಪನೋರ ಮನೆಗೆ ಹೋಗಿ ಮಡೀಲಿ ಚಿಗಳಿ, ತಂಬಿಟ್ಟು ಮಾಡಿಟ್ಟು ಬಂದ್ಬಿಡ್ಬೇಕು. ಶುಕ್ರಾರ ಬೆಳಗ್ಗೆದ್ದು ಕೋಸಂಬ್ರಿ, ಪಾನಕ ಎಲ್ಲಾ ಮಾಡೋ ಹೊತ್ಗೆ ಸರೀ ಹೋಗತ್ತೆ. ಹತ್ತೂವರೆಗೆ ರಾಹುಕಾಲ ಬಂದ್ಬಿಡತ್ತೆ, ಬೇಗ್ನೇ ಶುರು ಮಾಡ್ಕಂಬಿಡಣ ಅಂದ್ರಲ್ಲ ಕಮಲಮ್ಮʼ ಅಂತ ಯೋಚನೆ ಬಂತು. ಕೆಲ್ಸಕ್ಕೆ ನಾನೇನು ಇಂತಿಷ್ಟೂ ಅಂತ ಹೇಳ್ದಿದ್ರೂ ಸೈತಾ ಅವ್ರ ಕೈ ಧಾರಾಳಾನೆ. ʻಹೂವೀಳ್ಯಕ್ಕೆ ಕೊಡಕ್ಕೇಂತ ಐದು ಜನ ಮುತ್ತೈದೇರಿಗೆ ಕಾಟನ್ ಸೀರೆ ತಂದಿದೀನಿ ಕಣೆ. ನಿಂಗೂ ಒಂದು ಕೊಡ್ತಿನಿ. ನೋಡಿಲ್ಲಿʼ ಅಂತ ತೋರ್ಸಿದ್ರು ಬೇರೆ. ಗಳದ ಮೇಲೊಂದು, ಮೈಮೇಲೊಂದು ಅನ್ನೋ ಹಾಗಾಗಿದೆ ನಂಗೀಗ. ಆ ಸೀರೆ ಬಂತೂಂದ್ರೆ ಹೊರಗೆಲ್ಲಾದ್ರೂ ಹೋಗೋವಾಗ ಉಡಕ್ಕಾಗತ್ತೆ. ಆಗದನ್ನ ಪೆಟ್ಗೆಲಿಟ್ಟು ಅಲ್ಲಿರೊ ಇನ್ನೊಂದೇ ಒಂದು ಸ್ವಲ್ಪ ಗಟ್ಟಿಯಾಗಿರೊ ಸೀರೇನ ಹೊರಗೆ ತೆಕ್ಕೋಬೋದುʼ ಅಂದುಕೊಳ್ತಾ ಮತ್ತೆ ಈ ಪಕ್ಕಕ್ಕೆ ತಿರುಗಿದಳು. ʻಜೊತೆಗೆ ಜಾನಕೀನೂ ಕರ್ಕಂಬಾ, ಕನ್ಯಾಮುತ್ತೈದೆಗೆ. ಅವ್ಳಿಗೂ ಎಲಡಿಕೆ ಕೊಡೋದು ಅನ್ಕಂಡಿದೀನಿ ಅಂದ್ರು. ಅವ್ಳ ಕೈಗೂ ಏನಾರ ಕೊಡ್ತರೆನೋ. ಕೊಟ್ಟೇ ಕೊಡ್ತರೆ. ಒಳ್ಳೇ ಊಟ್ವಂತೂ ಸಿಗತ್ತೆ.ʼ ಕಣ್ಣು ತೂಗುವ ಹಾಗಾಯ್ತು ʻಎದ್ದು ಬಾಗಿಲು ಮುಂದೂಡಲೇʼ ಅನ್ನಿಸಿದರೂ ʻಅಯ್ಯೋ ಕೊಳ್ಳೆ ಹೊಡ್ಕಂಡು ಹೋಗಕ್ಕೆ ಏನಿದೆ. ಸ್ವಲ್ಪ ಗಾಳಿಯಾದ್ರೂ ಆಡಲಿʼ ಅಂದುಕೊಂಡು ಮತ್ತೆ ಯೋಚನೆಯಲ್ಲಿ ಮುಳುಗಿರುವಂತೆಯೇ ಒಂದು ಜೋಂಪು ಹತ್ತಿತು… “ಏನೇ ಬಾಗಿಲು ತೆಕ್ಕೊಂಡೇ ಮಲ್ಗಿದೀಯಲ್ಲೇ. ಯಾರಾದ್ರೂ ನುಗ್ಗಿದ್ರೇನು ಗತಿ” ಅಂತ ಕೇಳಿದ ತಕ್ಷಣ ಬೆಚ್ಚಿಬಿದ್ದು ಎದ್ದಳು. ಬಾಗಿಲಿಗಡ್ಡವಾಗಿ ಜಯತ್ತೆ ನಿಂತಿದ್ದಳು. ತಕ್ಷಣವೇ ಎದ್ದು, ಅದೇ ಚಾಪೆಯನ್ನು ಇನ್ನೊಂದು ಗೋಡೆಗೆ ಹಾಕಿ “ಕೂತ್ಕೋತ್ತೆ, ಮಕ ತೊಳ್ಕಂಡು ಬರ್ತಿನಿʼ ಎನ್ನುತ್ತಾ ಹಿತ್ತಿಲಿನ ಬಾಗಿಲಿನ ಪಕ್ಕದಲ್ಲಿದ್ದ ತಗಡಿನ ಮರೆಗೆ ಹೋಗಿ ಕೈಕಾಲು, ಮುಖ ತೊಳೆದುಕೊಂಡು ಬಂದು ಹೊಗೆಹಿಡಿದಿದ್ದ ಕನ್ನಡಿಯಲ್ಲಿ ಮಸಕುಮಸಕಾಗಿ ಕಂಡೂ ಕಾಣದಂತಿದ್ದ ಮುಖವನ್ನು ನೋಡಿಕೊಂಡು ಹಣೆಗಿಟ್ಟುಕೊಂಡು ಅವಳು ಬಂದಿದ್ದೇಕೆಂದು ತಿಳಿದಿದ್ದರೂ, “ಏನತ್ತೆ ಬಂದೆ, ಕೂತ್ಕಾ, ಒಂಚೂರು ಕಾಫಿ ಮಾಡ್ತಿನಿ” ಎನ್ನುತ್ತಾ ಅವಳೆಡೆಗೆ ತಿರುಗಿದಳು. “ಕಾಫೀನೂ ಬೇಡ, ಏನೂ ಬೇಡ, ನೀ ಬಾಯಿಲ್ಲಿ ಮದ್ಲು. ಇಲ್ಲಿ ಬಾ” ಅಂದಳು ಜಯಮ್ಮ ಜೋರಾದ ಅತ್ತೆ ಪಾಪದ ಸೊಸೆಗೆ ಹೇಳುವ ಜರ್ಬಿನಲ್ಲಿ. ಈ ಧಾಳಿಗೆ ಸಿದ್ದವಾಗಿಲ್ಲದ ನಾಗು ಬಂದು ಅಡುಗೆಮನೆಯ ಅಡ್ಡಗೋಡೆಗೆ ಒರಗಿ, ʻಈಗ ಅತ್ತೆ ಏನು ಗಿಲೀಟು ಮಾತು ಹೇಳಿದ್ರು ಸೈತ ಒಪ್ಕಬಾರ್ದುʼ ಅಂತ ನಿರ್ಧರಿಸಿಕೊಂಡವಳಂತೆ ಒರಗಿ ನಿಂತಳು. “ಅಲ್ವೇ, ಬೆಳಗ್ಗೆ ಸುಬ್ಬಣ್ಣನ್‌ ಕೈಲಿ ಹೇಳ್ಕಳಿಸಿದ್ರೆ ಬರಕ್ಕಾಗುಲ್ಲಾ ಅಂದ್ಯಂತೆ. ನಿಮ್ಮಜ್ಜಿ ತಿಥೀನೇ… ತಿಳ್ಕ, ನಿಮ್ಮಮ್ಮನ ಹೆತ್ತವ್ಳಲ್ವಾ… ಸ್ವಲ್ಪ ಸಹಾಯಕ್ಕೆ ಬಾಂದ್ರೆ ಎಷ್ಟು ಜಂಭ ನಿಂದು. ಅಜ್ಜಿ ತಿಥೀಗಿಂತ ಯಾರ್ದೋ ಮನೆ ದೇವ್ರಸಮಾರಾದ್ನೆ ಹೆಚ್ಚಾಯ್ತ ನಿಂಗೆ. ನಾನೇ ಬೇಕಾರೆ ಅವ್ರ ಮನೇಗೆ ಹೇಳಿ ಕಳಿಸ್ತೀನಿ, ʻಹೀಗಿದೆ ನಿಂಗ್ ಬರಕ್ಕಾಗಲ್ಲʼ ಅಂತ. ಬೇಕಾರೆ ನಿನ್‌ ಬದ್ಲು ಶಾರೀನ ಮಗ್ಳನ್‌ ಕರ್ಕಂಡೋಗಕ್ಕೆ ವಪ್ಸಿ, ಕಮಲಮ್ಮಂಗೆ ಹೇಳ್ತಿನಿ. ಹಿಂದಿನ್ದಿನ ಹೋಗಿ ಕೆಲ್ಸ ಮಾಡ್ಕೊಟ್ಟು ಬಾ. ಆವತ್ತು ನಮ್ಮನಿಗೆ ತಪ್ಪಸ್ಬೇಡ. ಎಲ್ಲಿ ಮಡಿಸೀರೇಗೆ ಒಣಗ್‌ಹಾಕಕ್ಕೆ ನಿಂದೊಂದು ಸೀರೆ ಕೊಡು” ಜಬರ್ದಸ್ತಿಯಿಂದ ತಾನೇ ಎಲ್ಲಾ ತೀರ್ಮಾನವನ್ನೂ ಮಾಡಿಬಿಟ್ಟಳು ಜಯಮ್ಮ. “ಹಾಗಲ್ಲತ್ತೇ…” ಏನೋ ಹೇಳಲು ಹೋದ ನಾಗುವನ್ನು ಅಲ್ಲೇ ತಡೆದು “ಹಂಗೂ ಇಲ್ಲ, ಹಿಂಗೂ ಇಲ್ಲ ಮದ್ಲು ಮಡಿಗೆ ಹಾಕಕ್ಕೆ ನಿನ್‌ ಸೀರೆ ಕೊಡು ಅಷ್ಟೇಯ. ನೋಡು, ಪುರೋಹಿತ್ರು ನಮ್ಮನೇ ಕೆಲ್ಸ ಮುಗಿಸ್ಕಂಡು ಮೂರು ಗಂಟೆ ಬಸ್ಸಿಗೆ ತೀರ್ಥಳ್ಳಿಗೆ ಹೋಗ್ಬಕಂತೆ. ಅಡ್ಗೆ ತಡಾಗೋ ಹಾಂಗಿಲ್ಲ. ಅವತ್ತು ಅದೇನೋ ರಜ ಇದ್ಯಂತಲ್ಲ, ಜನ ಬೇರೆ ಜಾಸ್ತಿ, ಬೆಳಗ್ಗೆ ಆರು ಗಂಟ್ಗೇ ಬಂದ್ಬಿಡು. ಈಗ ಮದ್ಲು ಸೀರೆ ಕೊಡು” ಎನ್ನುತ್ತಾ ಅವಳು ಮಾತನಾಡಕ್ಕೆ ಅವಕಾಶವನ್ನೇ ಕೊಡದೆ ʻಇಕಾ ನಾನೆ ತಗಂಡೆʼ ಎನ್ನುತ್ತಾ ಪಕ್ಕದ ಗಳುವಿನ ಮೇಲಿದ್ದ ಸೀರೆ, ರವಿಕೆಯನ್ನು ಎಳೆದು ಸುತ್ತಿಕೊಂಡು ಹೊರಟೇಬಿಟ್ಟಳು ಜಯಮ್ಮ. ಬೆಪ್ಪಾಗಿ ನಿಂತುಬಿಟ್ಟಳು ನಾಗು ʻಅದ್ಹೇಗೆ ನಂಗೆ ಮಾತಾಡಕ್ಕೂ ಬಿಡ್ದೆ ಅತ್ತೆ ಹೀಗ್ಮಾಡ್ಬಿಟ್ಳೂʼ ಅಂತ ತಲೆಮೇಲೆ ಕೈಹೊತ್ತು ಕೂತಿದ್ದ ನಾಗುವನ್ನು ಜಾನಕಿ ಕೂಗಿದ್ದು ಎಚ್ಚರಿಸಿತು. ಸ್ಕೂಲಿನ ಚೀಲವನ್ನು ಮೂಲೆಯಲ್ಲಿಡುತ್ತಾ “ಅದೇನು ಯೋಚ್ನೆ ಮಾಡ್ತ ಕೂತಿದೀಯೇ. ನಂಗೆ ಹಸಿವು. ಬೇಗ ಒಂದಿಷ್ಟು ಕಲ್ಸಿ ಕೊಡು” ಎನ್ನುತ್ತಾ ಕೈಕಾಲು ತೊಳೆಯಲು ಹೋದಳು. ಒಳಗೆ ಮುಚ್ಚಿಟ್ಟಿದ್ದ ಅನ್ನದಲ್ಲಿ ಹುಳಿಯನ್ನ, ಮಜ್ಜಿಗೆಯನ್ನ ಎರಡನ್ನೂ ಕಲಿಸಿ ಸ್ವಲ್ಪ ಸ್ವಲ್ಪವನ್ನು ಜಾನಕಿಯ ತಟ್ಟೆಗೆ ಹಾಕಿ ಕೊಟ್ಟಳು. ಮಿಕ್ಕದ್ದನ್ನು ಇನ್ನೇನು ಬರುವ ಶೇಷಾದ್ರಿಗೆ ಮುಚ್ಚಿಟ್ಟಳು. ಹುಳಿಯನ್ನ ಬಾಯಿಗಿಟ್ಟ ಜಾನಕಿ “ಇವತ್ತೂ ಪಪಾಯ ಕಾಯಿನ ಹುಳೀನೇ ಮಾಡಿದೀಯಾ… ಥೂ ನಂಗಿಷ್ಟ ಇಲ್ಲ” ಎನ್ನುತ್ತಾ ತಟ್ಟೆ ಕುಕ್ಕಿದಳು. ನಾಗುವಿಗೂ ಕೋಪ ಬಂತು. “ಏನ್‌ ನಿಮ್ಮಪ್ಪ ಇಪ್ಪತ್ತುಮೂವತ್ತು ಸಾವ್ರ ಸಂಬಳ ತರೋ ಸರ್ದಾರ. ದಿನದಿನಾನೂ ಅಂಗ್ಡೀಯಿಂದ ತರ್ಕಾರಿ ತಂದು ಮಾಡ್ತೀನಿ. ಮನೆ ಹಿತ್ಲಲ್ಲಿ ಏನು ಬೆಳ್ದಿರತ್ತೋ ಅಷ್ಟೇನೆ. ಹಸಿವಾಗಿದ್ರೆ ತಿನ್ನು ಇಲ್ದಿದ್ರೆ ಅಲ್ಲೇ ಮೂಲೇಲಿ ಮುಚ್ಚಿಟ್ಟು ಹೋಗು. ರಾತ್ರಿ ಹೊಟ್ಟೆ ಕಾದ್ರೆ ತಿನ್ನೋವಂತೆ” ಎನ್ನುತ್ತಾ ಮತ್ತೆ ರಾತ್ರಿಯ ಅಡಿಗೆಗೆ ಒಲೆ ಹಚ್ಚತೊಡಗಿದಳು. ಅಷ್ಟರಲ್ಲಿ ಶೇಷಾದ್ರಿಯೂ ಬಂದ. ಮಾತಿಲ್ಲದೆ ತನ್ನ ತಟ್ಟೆಗೆ ಹಾಕಿಕೊಟ್ಟಿದ್ದನ್ನು ಸ್ವಾಹಾ ಮಾಡತೊಡಗಿದ. ಗುಮ್ಮೆಂದು ಕೂತಿದ್ದ ಜಾನಕಿಯನ್ನು ನೋಡಿ “ತಿನ್ನಲ್ವೇನೆ, ತಿಂದಿದ್ರೆ ನಂಗ್ಹಾಕು” ಎಂದು ತಟ್ಟೆಯನ್ನು ಮುಂದೆ ಚಾಚಿದ. ಮರುಮಾತಿಲ್ಲದೆ ಜಾನಕಿ ತಿನ್ನತೊಡಗಿದಳು. ಒಲೆ ಹೊತ್ತಿದ ತಕ್ಷಣ ಸ್ವಲ್ಪ ನೀರುಕಾಸಿ ತೊಟ್ಟೇತೊಟ್ಟಿದ್ದ ಹಾಲು ಸೋಕಿಸಿ ನಾಗು ಬೆಲ್ಲದ ಕಾಫಿ ಮಾಡಿಕೊಂಡು ರಾತ್ರಿಯ ಊಟಕ್ಕೆ ಎಸರಿಟ್ಟಳು. ತಟ್ಟೆ ತೊಳೆದಿಟ್ಟ ಶೇಷಾದ್ರಿ ಎದ್ದು ಆಟಕ್ಕೆ ಹೊರಗೋಡಿದ. ಹೆದಹೆದರುತ್ತಲೇ ಜಾನಕಿ “ನಂಗೊಂತೊಟ್ಟು ಕಾಫಿನಾದ್ರು ಕೊಡ್ತಿಯೆನೇ?” ಕೇಳಿದಳು. ʻಅಯ್ಯೋʼ ಅನ್ನಿಸಿ “ತಗಾ” ಎನ್ನುತ್ತಾ ತಳಮುಳುಗುವಷ್ಟು ಕಾಫಿಯನ್ನು ಸಣ್ಣಲೋಟಕ್ಕೆ ಬಗ್ಗಿಸಿಕೊಟ್ಟಳು. ಇನ್ನಷ್ಟು ಬಿಸಿನೀರು ಬೆಲ್ಲವನ್ನು ಬೆರಸಿಕೊಂಡು ತನ್ನ ಲೋಟದ ತುಂಬ ಮಾಡಿಕೊಂಡು ನಿಧಾನವಾಗಿ ಕುಡಿಯುತ್ತಾ “ಈ ಕಾಫಿ ಕೊಟ್ಟಿದ್ರೆ ನಿಜ್ವಾಗೂ ಜಯತ್ತೆ ಕುಡಿತಿದ್ಲಾ” ಅಂದುಕೊಳ್ಳುತ್ತಲೇ ಎರಡೂ ಲೋಟ ತೊಳೆದಿಡು ಎಂದು ಜಾನಕಿಗೆ ಕೊಟ್ಟು ಸಿಟ್ಟು ತೀರಿಸಿಕೊಳ್ಳುವಂತೆ ಆರುತ್ತಿದ್ದ ಒಲೆ ಊದಿದಳು… ರಾತ್ರಿ ಎಷ್ಟೋ ಹೊತ್ತು ನಿದ್ರೆ ಬರಲಿಲ್ಲ… ನಂಗ್ಯಾಕೆ ʻನಾ ಬರಲ್ಲಾಂದ್ರೆ ಬರಲ್ಲʼ ಅಂತ ಹೇಳಕ್ಕಾಗ್ಲಿಲ್ಲ… ಹೇಳಕ್ಕೆ ಅವ್ಳು ಬಿಟ್ಟಿದ್ರಲ್ವಾ… ನಾರ್ಣಪ್ಪನೋರ ಮನೆಗ್ಹೋದ್ರೆ ಸೀರೆ, ದಕ್ಷಿಣೆ, ಒಂದಷ್ಟು ಹಣ್ಣು ಎಲ್ಲಾ ಸಿಗತ್ತೆ ಅಂತ ಅವ್ಳಿಗ್‌ ಗೊತ್ತಿಲ್ವಾ. ಹಂಗ್ಸಿ ಮಾತಾಡ್ತಳಲ್ಲ. ಬದ್ಲಿಗೆ ಶಾರೀನ ಕಳಿಸ್ತಿನಿ

ಕಾರ್ಮಿಕ ದಿನದ ವಿಶೇಷ-ಕಥೆ Read Post »

ಕಾವ್ಯಯಾನ

ಕಾರ್ಮಿಕದಿನದ ವಿಶೇಷ-ಕವಿತೆ

ಕವಿತೆ ಮೇ ಕವಿತೆ ಲಕ್ಷ್ಮೀ ದೊಡಮನಿ ಮೇ ಕವಿತೆ ನೆನಪಾಗುವಿರಿ ನೀವಿಂದು ಬಂದಿದೆ ಮೇ ಒಂದು ಹೊಗಳುವೆವು ನಾವಿಂದು ಬಂದಿದೆ ಮೇ ಒಂದು ಬಸವರಸರ ತತ್ವದ ತೆರದಿ ಕೈಲಾಸದಲಿ ಇರುವಿರಿ ಬರೆಯಿಸಿಕೊಳ್ಳುವಿರಿ ನೀವಿಂದು ಬಂದಿದೆ ಮೇ ಒಂದು ಕಣ್ಣ ಗಾರೆ,ಬಸವಳಿದ ಮೊಗ,ತನು ಎಲುಬು ಹಂದರ ಅರಿವಿಗೆ ಬರುವಿರಿ ನಮಗಿಂದು ಬಂದಿದೆ ಮೇ ಒಂದು ನಿಮ್ಮನ್ನು ವಿಭಜಿಸಿ ದುಡಿಸಿಕೊಳ್ಳುವ ಧೂರ್ತರಿಂದ ಅಣಗಿಸಿಕೊಳ್ಳುವಿರಿ ನೀವಿಂದುಬಂದಿದೆ ಮೇ ಒಂದು ನಿಮ್ಮಕಾರ್ಯ,ತ್ಯಾಗ,ಬಲಿದಾನಗಳ ಸಂದರ್ಶನ ನಡೆದು ಪ್ರೇರಣೆಯಾಗುವಿರಿ ನಮಗೆಂದು ಬಂದಿದೆ ಮೇ ಒಂದು ಒಂದೇ ದಿನದ ಸ್ಮರಣೆ,ಆಚರಣೆ ಬೇಡ ‘ಚೆಲುವೆ’ ಅವರಂತೆ ಕಾಯಕಯೋಗಿಯಾಗಲಿ ನಾವೆಂದೆಂದು ಬಂದಿದೆ ಮೇ ಒಂದು **********

ಕಾರ್ಮಿಕದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು ಅಂಜನಾ ಹೆಗಡೆ ಕಾರ್ಮಿಕರ ದಿನದಂದು ಹಾಲು ಉಕ್ಕಿದ್ದು ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಕಾರ್ಮಿಕ ದಿನದ ಶುಭಾಶಯ! “ಕಾಯಕವೇ ಕೈಲಾಸ” ನೆನಪಾಗಿ ಮೈ ನಡುಗಿತು ಕೈಲಾಸ ಕೈತಪ್ಪಿದ ನೋವು ಬಾಧಿಸಿ ಬಾತ್ ರೂಮನ್ನಾದರೂ ತೊಳೆಯಲಿಕ್ಕೆಂದು ಟೊಂಕಕಟ್ಟಿ ನಿಂತೆ ಎಲ್ಲ ಬ್ರ್ಯಾಂಡ್ ಗಳ ಕ್ಲೀನರುಗಳ ಒಂದುಗೂಡಿಸಿ ಬ್ರಶ್ ಗಳನ್ನೆಲ್ಲ ಗುಡ್ಡೆ ಹಾಕಿ ತಲೆಗೊಂದು ಷವರ್ ಕ್ಯಾಪ್ ಹಾಕಿ ಸೈನಿಕಳಾದೆ ಹೊಳೆವ ಟೈಲ್ಸು ಕಾಮೋಡುಗಳೆಲ್ಲ ಜೈಕಾರ ಕೂಗಿದಂತಾಗಿ ಒಳಗೊಳಗೇ ಸಂಭ್ರಮಿಸಿದೆ ವಾಷಿಂಗ್ ಮಷಿನ್ನಿನ ಹೊಟ್ಟೆಗಷ್ಟು ಬಟ್ಟೆ ತುರುಕಿ ಮೇಲಷ್ಟು ನೀಲಿಬಣ್ಣದ ಲಿಕ್ವಿಡ್ ಹಾಕಿ ತಿರುಗಲು ಬಿಟ್ಟೆ ಒಲೆಮೇಲಿಟ್ಟ ಹಾಲು ಮರೆತೆ ಮೊಬೈಲ್ ತೆರೆದರೆ ಮತ್ತಷ್ಟು ಸ್ಟೇಟಸ್ ಅಪ್ ಡೇಟ್ ಗಳು; ಕೈಲಾಸದ ಹೊರೆ ಹೊತ್ತವರೆಲ್ಲ ಸೋಷಿಯಲ್ ಆದಂತೆನ್ನಿಸಿ ಪೊರಕೆ ಹಿಡಿದೆ ಕಸ ಗುಡಿಸಿ ನೆಲ ಒರೆಸಿದೆ ದೇವರನ್ನೂ ಬಿಡಲಿಲ್ಲ ಸಿಲ್ವರ್ ಡಿಪ್ ಇದೆಯಲ್ಲ! ಸ್ವರ್ಗ ನರಕದ ಹೊಣೆ ಹೊತ್ತ ದೇವರು ಅಂಗೈ ಮೇಲೆ ಹೊಳೆಯುತ್ತಿದ್ದಾನೆ ಒಲೆಮೇಲೆ ಮರೆತ ಹಾಲು ಉಕ್ಕಿ ಹರಿಯುತ್ತಿದೆ ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಅನುವಾದ

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಮೂಲ: ಬರ್ಟೋಲ್ಟ್ ಬ್ರೆಕ್ಟ್ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಥೀಬ್ಸ್ ನ ಏಳು ಗೇಟುಗಳನ್ನು ಕಟ್ಟಿದವರಾರು?ಪುಸ್ತಕಗಳ ತು೦ಬಾ ರಾಜರುಗಳ ಹೆಸರುಗಳು.ಬ೦ಡೆಗಲ್ಲುಗಳನ್ನು ತ೦ದು ಜೋಡಿಸಿದವರು ದೊರೆಗಳೆ?ಮತ್ತು ಬ್ಯಾಬಿಲೋನ್ ಅದೆಷ್ಟು ಸಲ ನಾಶವಾಯಿತು!ಮತ್ತೆ ಮತ್ತೆ ಯಾರು ಕಟ್ಟಿದರು ಈ ನಗರವನ್ನು?ಚಿನ್ನದ ಹೊಳಪಿನ ನಗರಿಯಲ್ಲಿ ಅದನ್ನು ಕಟ್ಟಿದವರು ವಾಸವಾಗಿದ್ದರೆ?ಚೀನಾದ ಮಹಾಗೊಡೆಯನ್ನು ಕಟ್ಟಿ ಮುಗಿಸಿದ ಸ೦ಜೆಗಾರೆ ಕೆಲಸದವರು ಎಲ್ಲಿಗೆ ಹೋದರು?ರೋಮ್ ಸಾಮ್ರಾಜ್ಯದ ತು೦ಬಾ ವಿಜಯದ ಸ೦ಕೇತದ ಕಮಾನುಗಳು.ಯಾರು ನಿಲ್ಲಿಸಿದರು ಅವುಗಳನು?ಯಾರ ಮೇಲೆ ಸೀಸರ್ ವಿಜಯ ಸಾಧಿಸಿದ?ಹಾಡಿನಲ್ಲಿ ಜೀವ೦ತವಾಗಿದೆ ಬೈಜಾ೦ಟಿಯಮ್ಎಲ್ಲಿ ಹೋದವು ಅಲ್ಲಿನ ವಾಸದರಮನೆಗಳು?ಪುರಾಣಪ್ರಸಿದ್ಧ ಅಟ್ಲಾ೦ಟಿಸ್ನಲ್ಲೂರಾತ್ರಿ ಕಡಲು ಭೋರ್ಗರೆದು ಉಕ್ಕಿದಾಗಮುಳುಗುತ್ತಿದ್ದ ಮ೦ದಿ ಬೊಬ್ಬೆಯಿಟ್ಟರುತಮ್ಮ ಗುಲಾಮರಿಗಾಗಿ. ಯುವ ಅಲೆಗ್ಸಾ೦ಡರ್ ಭಾರತವನ್ನು ಗೆದ್ದಅವ್ಬನೊಬ್ಬನೇ ಹೊರಾಡಿ ಗೆದ್ದನೆ?ಸೀಸರ್ ಗಾಲ್ ರನ್ನು ಸೊಲಿಸಿದಅವನ ಸೈನ್ಯದಲ್ಲೊಬ್ಬ ಅಡಿಗೆಯವನೂ ಇರಲಿಲ್ಲವ?ಸ್ಪೈನ್ ನ ಫಿಲಿಪ್ ತನ್ನ ಹಡಗು ಮುಳುಗಿನಾಶವಾಗುವಾಗ ಜೊರಾಗಿ ರೋದಿಸಿದಅಲ್ಲಿ ಇನ್ನಾವ ಕಣ್ಣೀರುಗಳೂ ಇರಲಿಲ್ಲವೆ?ಗ್ರೀಸ್ ನ ಫ್ರೆಡ್ರಿಕ್ ಏಳು ವರ್ಷಗಳ ಯುದ್ಧದಲ್ಲಿವಿಜಯ ದು೦ದುಭಿ ಬಾರಿಸಿದಅವನ ಜತೆ ವಿಜಯೋತ್ಸವವನ್ನುಮತ್ತೆ ಯಾರ್ಯಾರು ಆಚರಿಸಿದರು? ಪ್ರತೀ ಪೇಜಿನಲ್ಲೂ ವಿಜಯದ ವಿವರಯಾರ ಬೆಲೆ ತೆತ್ತು ಏರ್ಪಡಿಸಿದ್ದುಈ ವಿಜಯೊತ್ಸವದ ಕೂಟಗಳನ್ನು? ಪ್ರತೀ ದಶಕದಲ್ಲೂ ಒಬ್ಬ ಮಹಾನ್ ವ್ಯಕ್ತಿ!ತುತ್ತೂರಿಯವನಿಗೆ ಹಣ ಕೊಟ್ಟವರು ಯಾರು? ಎಷ್ಟೊ೦ದು ವಿವರಗಳು!ಎಷ್ಟೊ೦ದು ಪ್ರಶ್ನೆಗಳು!*********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಇತರೆ

ಕಾರ್ಮಿಕ ದಿನದ ವಿಶೇಷ

ಅರಿವು ಬಹು ಮುಖ್ಯ..! ಕೆ.ಶಿವು ಲಕ್ಕಣ್ಣವರ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕ ದಿನದ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕರ ದಿನಾಚರಣೆಯ ದಿನ. ಇದು ಮಹತ್ವದ ದಿವಾಗಿದೆ. ಮೇ ದಿನ ಅಥವಾ ವಿಶ್ವ ಕಾರ್ಮಿಕರ ದಿನಾಚರಣೆ ದಿನಕ್ಕೆಂಟು ಗಂಟೆಗಳ ನಿಗದಿತ ಕೆಲಸಕ್ಕಾಗಿ ಆರಂಭವಾದ ಹೋರಾಟವನ್ನು ಸ್ಮರಿಸುವ ಈ ದಿನವನ್ನು ಕಾರ್ಮಿಕರು ಇಡೀ ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟದ ದಿನವನ್ನಾಗಿ ಆಚರಿಸುತ್ತಾರೆ. ಈ ಆಚರಣೆಗೆ ಒಂದು ಶತಮಾನಕ್ಕೂ ಮೀರಿದ ಸುದೀರ್ಘ ಇತಿಹಾಸವಿದೆ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು. ಚಾರಿತ್ರಿಕ ಘಟನೆಯೊಂದರ ಹಿನ್ನೆಲೆಯಲ್ಲಿ ಆರಂಭವಾದ ಮೇ ದಿನಾಚರಣೆ ಹುಟ್ಟಿದ್ದು ಹೇಗೆಂದು ನೋಡೋಣ.ಅಮೆರಿಕದಲ್ಲಿ ಚಿಗುರೊಡೆದ ಕಾರ್ಮಿಕರ ಹೋರಾಟ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ವಿವಿಧ ಕೈಗಾರಿಕೆಗಳು ಜನರಿಗೆ ಉದ್ಯೋಗ ನೀಡಿದ್ದವಾದರೂ ಕಾರ್ಮಿಕರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅವರು ದುಡಿಯುತ್ತಿದ್ದ ಕಾರ್ಖಾನೆಗಳಲ್ಲೂ ಸಹ ಮನುಷ್ಯರ ಜೀವನಕ್ಕೆ ಅಗತ್ಯವಾದ ಕನಿಷ್ಠ ಸವಲತ್ತುಗಳನ್ನೂ ಮಾಲೀಕರು ಒದಗಿಸುತ್ತಿರಲಿಲ್ಲ. ಕೆಲಸಗಾರರನ್ನು ಗಾಣದೆತ್ತುಗಳಂತೆ ಅಸುರಕ್ಷಿತ ವಾತಾವರಣದಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಮಾಲೀಕರ ಲಾಭವನ್ನು ನಿಯಂತ್ರಿಸಿ ಕಾರ್ಮಿಕರಿಗೆ ಸವಲತ್ತು ನೀಡುವ ಯಾವುದೇ ಶಾಸನವೂ ಅಸ್ತಿತ್ವದಲ್ಲಿರಲಿಲ್ಲ. ದಿನದ ಇಪ್ಪತ್ತುನಾಲ್ಕು ಗಂಟೆಗಳೂ ಮಾಲೀಕನ ಕಾರ್ಖಾನೆಯಲ್ಲಿ ದುಡಿಯಬೇಕಿದ್ದ ಕೆಲಸಗಾರರು ವಿಶ್ರಾಂತಿಯಿಂದ ಮತ್ತು ಕೌಟುಂಬಿಕ ಜೀವನದಿಂದ ವಂಚಿತರಾಗಿದ್ದರು. ಈ ರೀತಿ ಕಾರ್ಮಿಕರು ಹರಿಸಿದ ಬೆವರು ಮಾಲೀಕರ ಖಜಾನೆಯನ್ನು ತುಂಬಲು ಕಾರಣವಾಗಿತ್ತು ಮತ್ತು ಮಾಲೀಕರ ವರ್ಗ ಇನ್ನಷ್ಟು ಶ್ರೀಮಂತವಾಗುತ್ತಲೇ ಇತ್ತು. ಕಾರ್ಮಿಕರು ನೊಂದು ಬೆಂದು ಮಣ್ಣಾಗುತ್ತಲಿದ್ದರು. 8 ಗಂಟೆ ಕೆಲಸದ ನಿಗದಿಗಾಗಿ ಆಗ್ರಹ: ಹೀಗಿರುವಾಗ 19ನೇ ಶತಮಾನದ ಕೊನೆಯ ಭಾಗದಲ್ಲಿ ಅಮೆರಿಕಾದ ಕಾರ್ಖಾನೆಗಳಲ್ಲಿ ಅಲ್ಲಲ್ಲೇ ಸ್ಥಳೀಯವಾಗಿ ಕಾರ್ಮಿಕರಲ್ಲಿ ಮಡುಗಟ್ಟಿದ ನೋವು ಸಂಕಟಗಳು ಹೋರಾಟದ ಸಂಘಟಿತ ರೂಪವನ್ನು ಪಡೆಯಿತು. ಸಮಾಜವಾದಿ ನಾಯಕರ ನೇತೃತ್ವದಲ್ಲಿ ಮುಷ್ಕರಗಳನ್ನು ಸಂಘಟಿಸಿ ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಲು ಪ್ರಾರಂಭಿಸಿದರು. 8 ಗಂಟೆಗಳ ಕೆಲಸ, 8 ಗಂಟೆಗಳ ವಿಶ್ರಾಂತಿ ಮತ್ತು 8 ಗಂಟೆಗಳ ಮನರಂಜನೆಯಂತೆ ದಿನದ 24 ಗಂಟೆಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಉದ್ಯೋಗ ಕ್ಷೇತ್ರಗಳಲ್ಲಿ ದಿನವೊಂದಕ್ಕೆ 8 ಗಂಟೆಗಳ ನಿಗದಿತ ಕೆಲಸಕ್ಕಾಗಿ ಕಾರ್ಮಿಕ ಸಂಘಗಳು ಆಗ್ರಹಿಸಿದವು. 1886ರ ಮೇ 1ರಿಂದ ಕಾನೂನಾತ್ಮಕವಾಗಿ 8 ಗಂಟೆ ಕೆಲಸ ಮಾಡಲಿದ್ದೇವೆಂದು 1884ರಲ್ಲಿ ಅಮೆರಿಕದ ಕಾರ್ಮಿಕ ಸಂಘಟನೆ ಘೋಷಿಸಿತ್ತು. ಚಿಕಾಗೊದಲ್ಲಿ 1886ರ ಮೇ 1 ರಂದು ಕಾರ್ಮಿಕರ ಮುಷ್ಕರ: ಅಮೆರಿಕದಲ್ಲಿ 1886ರ ಮೇ 1ರಂದು 13,000 ವಿವಿಧ ಕ್ಷೇತ್ರಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂರುವರೆ ಲಕ್ಷ ಜನ ಕಾರ್ಮಿಕರು ಕೆಲಸಕ್ಕೆ ಹೋಗದೆ ಮುಷ್ಕರ ಹೂಡಿದರು. ಈ ಕಾರ್ಮಿಕರ ಮುಷ್ಕರವನ್ನು ಅಲ್ಲಿನ ಎಡಪಂಥೀಯ ಕಾರ್ಮಿಕ ಸಂಘಟನೆ ಸಂಘಟಿಸಿತ್ತು. ಚಿಕಾಗೊ ನಗರವೊಂದರಲ್ಲೇ 40,000 ಶ್ರಮಿಕರು ಕೆಲಸದಿಂದ ದೂರ ಉಳಿದರು. ರಸ್ತೆಗಳು ಬಿಕೋ ಎನುತ್ತಿದ್ದವು. ರೈಲುಗಳು ಸ್ತಬ್ಧಗೊಂಡಿದ್ದವು, ಯಂತ್ರಗಳನ್ನು ನಡೆಸುವವರಿಲ್ಲದೆ ಕಾರ್ಖಾನೆಗಳಲ್ಲಿ ಮೌನ ಆವರಿಸಿತ್ತು. ನಿರ್ಮಾಣ ಕೈಗಾರಿಕೆಯಲ್ಲಿ ದುಡಿಯುತ್ತಿದ್ದವರೂ ಸೇರಿದಂತೆ ಸುಮಾರು 1,85,000 ಕಾರ್ಮಿಕರು ಆ ಕಾಲದಲ್ಲಾಗಲೇ ಎಂಟು ಗಂಟೆ ಕೆಲಸದ ಪದ್ಧತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಹಲವಾರು ಕ್ಷೇತ್ರಗಳ ಕಾರ್ಮಿಕರು ಮೇ 1ರ ಮುಷ್ಕರದಲ್ಲಿ ಕೈಜೋಡಿಸಿ ಕಾರ್ಮಿಕ ಚಳವಳಿಯ ಪ್ರವಾಹವನ್ನು ಸೇರಿಕೊಂಡರು. ಅನೇಕ ಕಾರ್ಮಿಕ ಸಂಘಗಳು ರಚನೆಯಾಗಿ ಕಾರ್ಮಿಕರು ಸಂಘಟಿತರಾದರು. ಕಾರ್ಮಿಕರು ಮಾಲೀಕರ ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟವನ್ನು ಶಾಂತಿಯುತವಾಗಿಯೇ ಮುಂದುವರಿಸಿದರು. ಸಮಾಜವಾದ ಕಾರ್ಮಿಕರಿಗೆ ನೆಮ್ಮದಿಯ ಬದುಕು ನೀಡಬಲ್ಲದೆಂಬುದರ ಬಗ್ಗೆ ಕಾರ್ಮಿಕ ಮುಖಂಡರ ಭಾಷಣಗಳು ಹೋರಾಟನಿರತ ಕಾರ್ಮಿಕರ ಮನಮುಟ್ಟುತ್ತಿದ್ದವು… ಹೇ ಮಾರ್ಕೆಟ್ ಸ್ಕ್ವೇರ್ ನರಮೇಧ ಮತ್ತು ಹುತಾತ್ಮ ಕಾರ್ಮಿಕ ನಾಯಕರು : ಮುಷ್ಕರದಿಂದ ದೂರ ಉಳಿದಿದ್ದ ಕಾರ್ಮಿಕರು ಪ್ರತಿದಿನವೂ ಬಂದು ಹೋರಾಟದಲ್ಲಿ ಸೇರ್ಪಡೆಯಾಗುತ್ತಲೇ ಇದ್ದರು. ಹೀಗೆ ಚಿಕಾಗೋ ನಗರದಲ್ಲೇ ಮುಷ್ಕರನಿರತ ಕಾರ್ಮಿಕರ ಸಂಖ್ಯೆ 1 ಲಕ್ಷ ಮುಟ್ಟಿತ್ತು. ಚಳವಳಿಯ ನೇತೃತ್ವ ವಹಿಸಿದ್ದ ಆಲ್ಬರ್ಟ್ ಪಾರ್ಸನ್ಸ್, ಜೊಹಾನ್ ಮಸ್ತ್, ಅಗಸ್ತ್ ಸ್ಪೈಸ್ ಮತ್ತು ಲೂಯಿ ಲಿಂಗ್ ಅಮೆರಿಕ ಕಾರ್ಮಿಕರ ಮನೆಮಾತಾದರು. ಅದೇ ಮೇ 3ರಂದು ಮ್ಯಾಕ್ ಕಾರ್ಮಿಕ್ ರೀಪರ್ ವರ್ಕ್ಸ್ ಎಂಬ ಕಾರ್ಖಾನೆಯ ಕಾರ್ಮಿಕರ ಮತ್ತು ಚಿಕಾಗೊ ಪೊಲೀಸರ ಮಧ್ಯೆ ಸಂಘರ್ಷ ಉಂಟಾಗಿ ಹಲವರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿ ಗುಂಡಿನ ದಾಳಿಗೈದರು. ಸ್ಥಳದಲ್ಲೇ ಕನಿಷ್ಟ ಇಬ್ಬರು ಸಾವನ್ನಪ್ಪಿ ಅನೇಕ ಜನ ಗಾಯಗೊಂಡರು. ಪೊಲೀಸರ ದುಷ್ಕೃತ್ಯವನ್ನು ಖಂಡಿಸಲು ಚಿಕಾಗೊ ನಗರದ ಹೇ ಮಾರ್ಕೆಟ್ ಚೌಕದಲ್ಲಿ ಮೇ 4ರಂದು ಪ್ರತಿಭಟನಾ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆ ಮುಂದುವರೆದಂತೆ ಯಾರೋ ಬಾಂಬ್ ಎಸೆದು ಪೊಲೀಸರನ್ನು ರೊಚ್ಚಿಗೆಬ್ಬಿಸಿದ್ದು ಅದಕ್ಕಾಗೇ ಕಾಯುತ್ತಿದ್ದಂತಿದ್ದ ಪೊಲೀಸರು ಸಿಡಿಗುಂಡಿನ ಪ್ರಹಾರ ಕೈಗೊಂಡರು. ಈ ಘಟನೆಯಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿತು, ಆದರೆ ಬಾಂಬ್ ಎಸೆದವರಾರೆಂಬ ಸತ್ಯ ತಿಳಿಯುವ ಗೋಜಿಗೆ ಹೋಗಲಿಲ್ಲ. ಕಾರ್ಮಿಕ ಚಳವಳಿಯ ನಾಯಕತ್ವ ವಹಿಸಿದ್ದ ಸ್ಪೈಸ್, ಪಾರ್ಸನ್ಸ್, ಫಿಶರ್, ಎಂಗಲ್, ಲೂಯಿ ಅವರುಗಳನ್ನು ಹೇ ಮಾರ್ಕೆಟ್ ಸ್ಕ್ವೇರ್ ಪ್ರಕರಣದಲ್ಲಿ ಸಿಲುಕಿಸಿ, ಅನ್ಯಾಯವಾಗಿ 1887ರಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.ಅವರು ಪ್ರಾಣ ತೆತ್ತಿದ್ದು ಅವರು ಮಾಡಿದ ಕೃತ್ಯಗಳಿಂದಾಗಲ್ಲ, ಬದಲಿಗೆ ಅವರು ನಂಬಿ ಮಂಡಿಸುತ್ತಿದ್ದ ವಿಚಾರಗಳಿಂದಾಗಿ, ಶ್ರಮಜೀವಿಗಳ ಪರವಾದ ಸಮಾಜವಾದಿ ಸಿದ್ಧಾಂತಗಳಿಂದಾಗಿ ಎಂಬುದನ್ನು ಇಡೀ ಜಗತ್ತೇ ಮನಗಂಡಿದೆ ಎನ್ನುವುದಕ್ಕೆ ವಿಶ್ವ ಕಾರ್ಮಿಕರ ದಿನಾಚರಣೆಯೇ ಸಾಕ್ಷಿ. ಮೇ ದಿನಾಚರಣೆ – ತಪ್ಪಬೇಕೆಂದು ಕಾರ್ಮಿಕರ ಬವಣೆ: ವಿಶ್ವದ ಕಾರ್ಮಿಕರಿಗೆ 8 ಗಂಟೆ ಕೆಲಸ ಎಂದು ನಿಗದಿ ಮಾಡಿದ ಶಾಸನಕ್ಕೆ ಮತ್ತು ಕಾರ್ಮಿಕರಿಗೆ ಸುರಕ್ಷಿತ ಕೆಲಸದ ಸ್ಥಳಗಳನ್ನು ಖಾತರಿಪಡಿಸುವಲ್ಲಿ ಈ ಎಲ್ಲಾ ಹೆಸರಿಸಬಹುದಾದ, ಪತ್ತೆಹಚ್ಚಲಾರದ ಸಾವಿರಾರು, ಲಕ್ಷಾಂತರ ಹೋರಾಟಗಾರರ/ರ್ತಿಯರ ತ್ಯಾಗವಿದೆ ಎಂಬುದನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುವ ಅಗತ್ಯವಿದೆ. ಹಕ್ಕುಗಳನ್ನು ಕಾರ್ಮಿಕರಿಗೆ ಯಾರೂ ದಾನವಾಗಿ ನೀಡಿಲ್ಲ. ಅಮೆರಿಕ ದೇಶದ ಚಿಕಾಗೊ ನಗರದಲ್ಲಿ ಜರುಗಿದ ಈ ಚಾರಿತ್ರಿಕ ಮೇ ದಿನದ ಹೋರಾಟವನ್ನು ಸ್ಮರಿಸುತ್ತಲೇ ಕಾರ್ಮಿಕರ ಹಿತ ಕಾಪಾಡುವುದು ಮತ್ತು ಹಕ್ಕುಗಳನ್ನು ಉಳಿಸಿ ಗಳಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಉದ್ದೇಶವೂ ಆಗಿರುತ್ತದೆ. ಇದಕ್ಕಾಗಿ ಕಾರ್ಮಿಕರು ತಮ್ಮ ವಿರುದ್ಧ ಆಳ್ವಿಕೆ ನಡೆಸುತ್ತಿರುವ ಶ್ರೀಮಂತರ ಕಾರ್ಪೊರೇಟ್ ರಾಜಕೀಯವನ್ನು ಅರ್ಥೈಸಿಕೊಳ್ಳಬೇಕಿದೆ, ಶ್ರಮಜೀವಿಗಳ ಪರವಾಗಿರುವ ಸಮಾಜವಾದದ ಅರಿವನ್ನೂ ಪಡೆಯಬೇಕಿದೆ. ಭಾರತದಲ್ಲಿ ಮೇ ದಿನಾಚರಣೆಯ ಆರಂಭ:: ಭಾರತದಲ್ಲಿ 1890ರಲ್ಲೇ ಬಾಂಬೆ ಹತ್ತಿ ಗಿರಣಿಗಳ ಸುಮಾರು 10000 ಕಾರ್ಮಿಕರು ಲೊಖಾಂಡೆ ಅವರ ನಾಯಕತ್ವದಲ್ಲಿ ಸಭೆ ಸೇರಿದ್ದರು. ಅಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಮಾತನಾಡಿದ್ದರು. ಸಭೆಯಲ್ಲಿ ವಾರದ ರಜೆಗಾಗಿ ಆಗ್ರಹಿಸಲಾಗಿ ಮಾಲೀಕರು ಒಪ್ಪಿಕೊಂಡರು. 1890 ರ ಸೆಪ್ಟೆಂಬರ್ 25ರಂದು ಬ್ರಿಟಿಷ್ ಭಾರತ ಸರ್ಕಾರ ಒಂದು ಆಯೋಗ ರಚಿಸಿತು. ಈ ಆಯೋಗ 1891ರಲ್ಲಿ ಫ್ಯಾಕ್ಟರಿ ಕಾನೂನಿಗೆ ಶಿಫಾರಸ್ಸು ಮಾಡಿತು. 1892 ಜನವರಿ 1ರಂದು ಈ ಶಾಸನವನ್ನು ಜಾರಿಗೆ ತರಲಾಗಿ, ಮಹಿಳೆಯರಿಗೆ 11 ಗಂಟೆಗಳ ಕೆಲಸ ಮತ್ತು ನಡುವೆ ಒಂದೂವರೆ ಗಂಟೆಗಳ ವಿಶ್ರಾಂತಿ ಹಾಗೂ ಮಕ್ಕಳಿಗೆ 7 ಗಂಟೆಗಳ ಕೆಲಸ ಎಂದು ನಿಗದಿಪಡಿಸಲಾಯಿತು. ಇದು ನಿಗದಿತ ಕೆಲಸದ ವೇಳೆಯ ಮೊದಲ ಶಾಸನವಾದರೂ ಇದರಲ್ಲಿ ಪುರುಷ ಕಾರ್ಮಿಕರಿಗೆ ಕೆಲಸದ ಸಮಯವನ್ನು ನಿಗದಿಗೊಳಿಸಿರಲಿಲ್ಲ. ವಾರದ ರಜೆಯೂ ಉಲ್ಲೇಖವಾಗಿತ್ತು… ನಂತರದಲ್ಲಿ ಕಾರ್ಮಿಕರ ಹೋರಾಟಗಳ ಫಲವಾಗಿ 1911ರಲ್ಲಿ ಪುರುಷ ಕಾರ್ಮಿಕರಿಗೆ 12 ಗಂಟೆಗಳ ಕೆಲಸವನ್ನು ನಿಗದಿಗೊಳಿಸಲು ಗಿರಣಿ ಕಾರ್ಮಿಕರು ಒಪ್ಪಿದರು. ಆದರೆ ಮೇ ದಿನಾಚರಣೆಯನ್ನು 1923ರ ವರೆಗೂ ಭಾರತದಲ್ಲಿ ಆಚರಿಸಿದ ದಾಖಲೆಯಿಲ್ಲ. 1920ರಲ್ಲಿ ಜನ್ಮ ತಳೆದ ದೇಶದ ಮೊಟ್ಟಮೊದಲ ಕಾರ್ಮಿಕ ಸಂಘಟನೆ ಎಐಟಿಯುಸಿ ಮೇ ದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ 1927ರಿಂದ ಎಲ್ಲಾ ಪ್ರಾಂತ್ಯಗಳಲ್ಲೂ ಮೇ ದಿನವನ್ನು ಆಚರಿಸಲು ಆರಂಭಿಸಿತು. ಹೀಗೆ 1923ರಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕ್ರಮೇಣ ಭಾರತದೆಲ್ಲೆಡೆ ವ್ಯಾಪಿಸಿತು. ಈ ವರ್ಷದ ವಿಶ್ವ ಕಾರ್ಮಿಕ ದಿನಾಚರಣೆಯ ಘೋಷಣೆ: “ಸೃಷ್ಟಿಸುವವನಿಗೆ ಸೇರಬೇಕು ಸಂಪತ್ತು” ಜಗತ್ತಿನಾದ್ಯಂತ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲಿದೆ. ಭಾರತದ ಪರಿಸ್ಥಿತಿಯನ್ನು ಗಮನಿಸೋಣ. 2017ರಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.73ರಷ್ಟು ಪಾಲು ಶೇ.1ರಷ್ಟು ಸಿರಿವಂತರು ಹಂಚಿಕೊಂಡಿದ್ದರೆ, ಭಾರತದ ಅತಿಬಡತನದಲ್ಲಿರುವ ಶೇ.50ರಷ್ಟು ಜನಸಂಖ್ಯೆ (67 ಕೋಟಿ ಭಾರತೀಯರು) ಕೇವಲ ಶೇ.1ರಷ್ಟು ಸಂಪತ್ತು ಹೆಚ್ಚಳವನ್ನು ಕಂಡಿದ್ದಾರೆಂದು ವರದಿಯಾಗಿದೆ. ಉದಾಹರಣೆಗೆ ಉದ್ಯಮಿಯಾಗಿರುವ ಅಂಬಾನಿ ಈ ವರ್ಷ ತನ್ನ ಆಸ್ತಿಯಲ್ಲಿ ಶೇ.25ರಷ್ಟು ಅಧಿಕೃತ ಹೆಚ್ಚಳ ತೋರುತ್ತಾನೆ. ಆದರೆ ನಮ್ಮ ದೇಶದ ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ, ಕಾರ್ಮಿಕರು ದಿನದೂಗಿಸಿದರೆ ಸಾಕೆಂದು ನಿಟ್ಟಿಸುರು ಬಿಡುವಂತಾಗಿದೆ! ಇದರರ್ಥ ಸಮಾಜದ ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳಿಗೆ ಆ ಸಂಪತ್ತು ದಕ್ಕುತ್ತಿಲ್ಲ. ಇದಕ್ಕೆ ಕಾರಣ ಶ್ರಮಜೀವಿಗಳ ಬೆವರು ಶ್ರೀಮಂತರ ಜೇಬಿಗೆ ಲಾಭವಾಗಿ ಹರಿಯಲು ಬಂಡವಾಳಶಾಹಿ ಸರ್ಕಾರಗಳು ಮಾಡುವ ಕಾನೂನು ಕಟ್ಟಲೆಗಳೇ. ಆದ್ದರಿಂದ ಶ್ರಮಜೀವಿಗಳು ಈ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ತಮ್ಮ ಶ್ರಮದ ಫಲವನ್ನು ತಾವೇ ಉಣ್ಣಲು ರಾಜಕೀಯ ಚಿಂತನೆ ನಡೆಸುವುದು ಅಗತ್ಯವೂ ಅನಿವಾರ್ಯವೂ ಆಗಿದೆ.ಮೇ ದಿನಾಚರಣೆಯ ಹುತಾತ್ಮ ಅಗಸ್ಟ್ ಸ್ಪೈಸ್ ಗಲ್ಲಿಗೇರುವ ಮುನ್ನ ಆಳುವ ಶೋಷಕರಿಗೆ ಹೇಳುವ ಮಾತುಗಳು ಇಂದಿಗೂ ಅರ್ಥಪೂರ್ಣವಾಗಿವೆ..! ********

ಕಾರ್ಮಿಕ ದಿನದ ವಿಶೇಷ Read Post »

You cannot copy content of this page

Scroll to Top