ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ಮಿತಾ ಅಮೃತರಾಜ್

ಯಾವುದೋ ಒಂದು
ಅದೃಶ್ಯ ಗಳಿಗೆಯಲ್ಲಿ
ಹೇಗೋ ಬಂದು
ನುಸುಳಿಕೊಂಡಿದೆಯಲ್ಲ
ನನ್ನ_ನಿನ್ನ ನಡುವಲ್ಲೊಂದು
ತೆಳು ಗೆರೆ.

ಎಳೆದದ್ದು ನೀನಲ್ಲವೆಂದೆ
ನಾನಂತೂ ಮೊದಲೇ ಅಲ್ಲ
ಕಂಡೂ ಕಾಣದಂತಿರುವ ಎಳೆ
ಸೂಕ್ಷ್ಮ ಗೆರೆ
ಹಾಗಾದರೆ ಬಂದದ್ದಾದರೂ ಎಲ್ಲಿಂದ?

ಇಂಚಿಂಚೇ ಬೆಳೆಯುತ್ತಿದೆ
ಬಲಿಯುತ್ತಿದೆ.
ಇಬ್ಬರಿಗೂ ಅದರ ಮೇಲೆ ಅಸಡ್ಡೆ
ಎಳೆಯದ ಗೆರೆಯನ್ನು ಅಳಿಸುವುದೇತಕೆ?

ಮಿತಿ ಮೀರಿ ಬೆಳೆದು
ಗೆರೆಯೇ ಗೊಡೆಯಾದರೆ
ನನಗೆ ನೀನು,ನಿನಗೆ ನಾನು
ಕಾಣಿಸುವುದಾದರೂ ಎಂತು?

ಗೆರೆಯ ಮೊನಚು
ಈಗ ಎದೆಯವರೆಗೂ ಬಂದು ತಾಕಿ
ಭಯ ಹುಟ್ಟಿಸುತ್ತಿದೆ.

ಗೆರೆಗಳು ಒಂದನ್ನೊಂದು ಕೂಡಿಸುತ್ತದೆ.
ಕೆಲವೊಮ್ಮೆ ಗುಣಿಸಿ,ಭಾಗಿಸಿ,ಕಳೆದು
ಬರೇ ಶೇಷವನ್ನಷ್ಟೇ ಉಳಿಸಿಬಿಡುತ್ತದೆ
ಕೂಡ…
ಇಲ್ಲಿ ತೀರಾ ನಿಗಾ ಬೇಕು.

ಬಿಡು, ಹೇಗೋ ಹುಟ್ಟಿಕೊಂಡಿದೆ
ಸಧ್ಯ ಕಂಡಿತಲ್ಲ!
ಬಿಗುಮಾನ ಬಿಟ್ಟು ಬಾ ಬೇಗ
ಅಳಿಸಿ ಬಿಡೋಣ.
ಆ ನಡುವಲ್ಲಿ ಕಂಡೂ ಕಾಣದಂತಿರುವ
ಕನ್ನಡಿಯೊಂದ ತೂಗಿ ಬಿಡೋಣ.

********

About The Author

1 thought on “ಕಾವ್ಯಯಾನ”

  1. ನಾಗರಾಜ್ ಹರಪನಹಳ್ಳಿ

    ಅದ್ಭುತ. ಕಾವ್ಯದ ಶಕ್ತಿ ಅನ್ನುವುದು ಇದಕ್ಕೆ. ಒಂದು ಕತೆಯಲ್ಲಿ, ಕಾದಂಬರಿಯಲ್ಲಿ ಹೇಳುವುದನ್ನು ಕವಿತೆ ಯಲ್ಲಿ ಹೇಳಬಹುದು.‌ಹಾಗಾಗಿ ಕಾವ್ಯಕ್ಕೆ ಸಾಹಿತ್ಯ ಪ್ರಕಾರದಲ್ಲಿ ಆಗ್ರಸ್ಥಾನ.
    ಗೆರೆಯ ಅಳಿಸೋಣ.‌ ನಡುವೆ ಕಂಡೂ‌ ಕಾಣದಂತಹ ಕನ್ನಡಿಯ ನೇತು ಬಿಡೋಣ ಎಂಬಲ್ಲಿ ಕಾವ್ಯದ ಶಕ್ತಿ ಹಾಗೂ ಗೆಲುವು ಇದೆ. ಸ್ಮಿತಾ ಅಮೃತರಾಜ್ ಅವರ ಕಾವ್ಯವೇ ಹಾಗೆ…ಎಷ್ಟೊಂದು ಸೂಕ್ಷ್ಮವನ್ನು ನವಿರಾಗಿ ದಾಟಿಸಿಬಿಡುತ್ತಾರೆ….
    ಒಳ್ಳೆಯ ಕವಿತೆ ಇದು…

Leave a Reply

You cannot copy content of this page

Scroll to Top