ಅರ್ಥ ಕಳೆದುಕೊಳ್ಳುವ ಸಮಯ

ಪ್ರಮೀಳಾ .ಎಸ್.ಪಿ.ಜಯಾನಂದ್.
ಅರ್ಥ ಕಳೆದುಕೊಳ್ಳುವ ಸಮಯ.

“ರೈತ ದೇಶದ ಬೆನ್ನೆಲುಬು” ಎನ್ನುವರು.ಹಸಿವು ಇಂಗಿಸುವ ಕಾಯಕ ಮಾಡುವ ರೈತ ದೇಹದ ಮತ್ತು ದೇಶದ ಆಧಾರ ವಾಗಿರುವುದು ಸತ್ಯ. ಹಾಗಾಗಿಯೇ ದೇಶದ ಹಲವಾರು ಯೋಜನೆಗಳು ರೈತರ ಪರವಾಗಿ ಬಂದು ನಿಲ್ಲುತ್ತವೆ.ಆದರೆ ಕೃಷಿಭೂಮಿ ಇಲ್ಲದವರು,ಕಾರ್ಖಾನೆ ಗಳಲ್ಲಿ ದುಡಿಯುವ ಮಂದಿ,ಕೂಲಿ ಕಾರ್ಮಿಕರು, ಹಲವಾರು ಸ್ತರಗಳಲ್ಲಿ ದುಡಿದು ದೇಶದ ಅಭಿವೃದ್ಧಿಗೆ ಕರಣರಾಗುತ್ತಾರೆ.ಇವರುಗಳಲ್ಲಿ ಎರಡು ವಿಧ.
1-ಸಂಘಟಿತ ಕಾರ್ಮಿಕರು
2-ಅಸಂಘಟಿತ ಕಾರ್ಮಿಕರು.
ಈ ದೇಶದ ಕಾರ್ಮಿಕ ಕಾಯ್ದೆಯು ಹಲವು ಸೌಲಭ್ಯಗಳು ಮತ್ತು ಭದ್ರತೆಯನ್ನು ಒದಗಿಸಿದರು ಕೂಡ ಅದು ಕೇವಲ ಬೆರಳೆಣಿಕೆಯಷ್ಟು ಕಾರ್ಮಿಕರನ್ನು ಮಾತ್ರ ತಲುಪುತ್ತಿದೆ.
ಕಾರ್ಮಿಕರ ಪರವಾಗಿ ಹುಟ್ಟಿಕೊಂಡ ಅನೇಕ ಸಂಘಗಳು ಕಾರ್ಮಿಕರ ಕಲ್ಯಾಣ ಮರೆತು ಒತ್ತಡ ಗುಂಪುಗಳಾಗಿ ಕೇವಲ ಹಣ ಪೀಕುವ ಕಾರ್ಯ ಮಾಡುತ್ತಿರುವುದು ತಿಳಿಯದ ವಿಷಯವೇನಲ್ಲ.
ನಗರ ಪ್ರದೇಶದ ಬಹುರಾಷ್ಟ್ರೀಯ ಕಂಪನಿಗಳ ಲ್ಲಿನ ಕಾರ್ಮಿಕರು ಒಗ್ಗಟ್ಟು ಪ್ರದರ್ಶನ ದಿಂದ ಬಹುಬೇಗನೆ ಸವಲತ್ತು ಪಡೆಯುವಲ್ಲಿ ಯಶಸ್ಸು ಕಾಣುತ್ತಾರೆ.ಆದರೆ ತಳ ಹಂತದಲ್ಲಿ ಕೆಲಸ ಮಾಡುವ
ಕಾರ್ಮಿಕ ರಾದ
*ಅಂಗನವಾಡಿ ಕಾರ್ಯಕರ್ತೆ ಯಾರು
*ಆಶಾ ಕಾರ್ಯಕರ್ತೆಯರು
*ನೀರ್ಗಂಟಿ ಗಳು
*ಬಿಸಿಯೂಟದ ನೌಕರರು
*ಪೌರಕರ್ಮಿಕರು
*ರಸ್ತೆ ,ಚರಂಡಿ ಕೆಲಸಗಾರರು
*ಕಟ್ಟಡ ಕಾರ್ಮಿಕರು
*ಮಾಲ್ಗಳು,ಆಸ್ಪತ್ರೆ,ಹೋಟೆಲ್, ಅಂಗಡಿಗಳಲ್ಲಿ ದುಡಿಯುವವರು
*ದಮನಿತ ಲೈಂಗಿಕ ಕಾರ್ಯಕರ್ತರು
*ಮಾರುಕಟ್ಟೆಯಲ್ಲಿ, ರೈಲ್ವೆ ,ಬಸ್ ನಿಲ್ದಾಣದಲ್ಲಿ ದುಡಿಯುವ ಹಮಾಲಿಗಳು.
*ವಾಚಮನ್ ಗಳು
*ಕಂಪ್ಯೂಟರ್ ಅಪರೇಟರ್ಸ್
* ಹೊರಗುತ್ತಿಗೆ ಕೆಲಸ ಗಾರರು….
ಇನ್ನೂ ಮುಂತಾದ ಕೆಲಸಗಾರರಲ್ಲಿ ಕೆಲವರು ಸಂಘಟಿತರಾಗಿ ದ್ದರೆ ಹಲವರಿಗೆ ಸಂಘಟನೆಯ ಮಹತ್ವವೇ ತಿಳಿದಿಲ್ಲ.

ಸಂಘಟನೆ ಮಾಡಿದವನ ನೌಕರಿಗೆ ಕುತ್ತು.
ಅನೇಕ ವಲಯಗಳಲ್ಲಿ ಕಾರ್ಮಿಕನೊಬ್ಬ ಸಂಘಟನೆ ಮಾಡಿ ಹೋರಾಟಕ್ಕೆ ಮುಂದೆ ನಿಂತರೆ ಅವನನ್ನು ಕ್ಷುಲ್ಲಕ ಕಾರಣ ನೀಡಿ ಕೆಲಸದಿಂದ ವಜಾ ಗೊಳಿಸುವ ಕಾರ್ಯವನ್ನು ಆಡಳಿತ ಮಂಡಳಿ ಮಾಡುತ್ತದೆ.ಸರ್ಕಾರ ದ ಇಲಾಖೆಯ ಅಧಿಕಾರಿಗಳು ಇದರ ಹೊರತಾಗಿ ಕಾರ್ಯನಿರ್ವಹಿಸಿಲ್ಲ.
ಕಾರ್ಮಿಕರ ಪರ ನಿಲ್ಲವ ನೌಕರನನ್ನು ಮಟ್ಟ ಹಾಕಲು ಅಧಿಕಾರ ವರ್ಗ ಸದಾ ಹಪಹಪಿಸುತ್ತದೆ.ಈ ಕಾರಣದಿಂದ ಲೇ ಕೆಲವು ಕಾರ್ಮಿಕರು ಭಯದಿಂದ ಹೊರಗಿನ ಕಾರ್ಮಿಕ ಪಕ್ಷ ಮತ್ತು ಸಂಘಟನೆ ಗಳ ಜೊತೆ ಕೈ ಜೋಡಿಸುತ್ತವೆ.
ಉದಾಹರಣೆಗೆ… ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರು,
ನಗರಪಾಲಿಕೆ ವ್ಯಾಪ್ತಿಯ ಗಾರ್ಮೆಂಟ್ಸ್ ಕಾರ್ಮಿಕರು..ಹೊರಗಿನ ಸಂಘಟನೆ ಜೊತೆ ಸೇರಿ ಹೋರಾಟಕ್ಕೆ ಇಳಿಯುತ್ತಾರೆ.
ಭ್ರಷ್ಟ ಕಾರ್ಮಿಕ ಮುಖಂಡರು.
ಇಂದು ಭಾರತದ ಅನೇಕ ಕಾರ್ಮಿಕ ಸಂಘಟನೆಗಳ ಪರವಾಗಿದ್ದ ಪಕ್ಷದ ಮುಖಂಡ ರು ರಾಜಕೀಯ ಅಧಿಕಾರ ದ ಲಾಲಸೆಗೆ ಬಿದ್ದು ತಮ್ಮತನವನ್ನು ಕಳೆದುಕೊಂಡು ಕೇವಲ ಹೆಸರಿಗಷ್ಟೇ ಉಳಿದಿವೆ.
ಒಂದು ದಿನದ ಮುಷ್ಕರ ಕ್ಕೆ ಕಾರ್ಮಿಕರನ್ನು ಪ್ರೇರೇಪಿಸಿ ಅವರಿಂದ ಕಡ್ಡಾಯವಾಗಿ ಹಣ ವಸೂಲಿ ಮಾಡಲಾಗುತ್ತದೆ.
ಮೊದಲೇ ಬಡಪಾಯಿ ಸ್ಥಿತಿ ಯಲ್ಲಿನ ಕಾರ್ಮಿಕರು ಸಂಘಟನೆ ನೆಪದಲ್ಲಿ ಹಣ ನೀಡಬೇಕಾದ ಸ್ಥಿತಿಯಿದೆ.ಹೀಗಿರುವಾಗ ಕೆಲವು ಕಾರ್ಮಿಕ ಪರವಾದ ಪಕ್ಷದ ನಾಯಕ ರು ಸರ್ಕಾರದ ಬಂಡವಾಳ ಗಾರರ ಕಾರ್ಮಿಕ ವಿರೋಧಿ ನೀತಿಯನ್ನು ಬೆಂಬಲಿಸಿ ಸ್ವಾಮಿನಿಷ್ಠೆ ವ್ಯಕ್ತಪಡಿಸಿ ಸ್ವಕಾರ್ಯ ಪೂರ್ಣ ಗೊಳಿಸಿಕೊಳ್ಳುವುದನ್ನು ಕಾಣ ಬಹುದಾಗಿದೆ.
ಮಹಿಳಾ ಕಾರ್ಮಿಕರ ದುಸ್ಥಿತಿ.
ಅನೇಕ ಕಡೆ ತಾವೇ ಕೇಳಿ ಪಡೆದ ಉದ್ಯೋಗ ದಲ್ಲಿರುವ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.ಅದರಲ್ಲಿಯೂ ಗಾರ್ಮೆಂಟ್ಸ್ ಮತ್ತು ವಾಹನಗಳ ಲ್ಲಿ ನಿಂತು ಕೆಲಸ ಮಾಡುವ ಹೆಣ್ಣುಮಕ್ಕಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ.
ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು ಆಕೆಯ ಕುಟುಂಬದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ.ಕೌಟುಂಬಿಕ ಸಾಮರಸ್ಯ ಕುಂಟಿತ ವಾಗಿ ಮಕ್ಕಳು ಅಪರಾಧಿ ಚಟುವಟಿಕೆ ಗಳಲ್ಲಿ ಮುಂದುವರೆಯುವುದನ್ನು ನೋಡಬಹುದಾಗಿದೆ.
ಸದಾಕಾಲ ತಮ್ಮ “ನೌಕರಿ ಭದ್ರತೆ” ಯ ಬಗ್ಗೆ ಯೋಚಿಸೋ ಮಹಿಳೆಯರು ಬಹುಬೇಗ ಒತ್ತಡಕ್ಕೆ ಸಿಲುಕುತ್ತಾರೆ.
ಕುಟುಂಬ ದೊಳಗಿನ ಸ್ತ್ರೀಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ವು ತನ್ನ ಕುಟುಂಬದ ಮೇಲಷ್ಟೇ ಅಲ್ಲ ಇಡೀ ದೇಶದ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಮರೆಯಬಾರದು.
ಹಾಗಾಗಿ ಮಹಿಳಾ ಕಾರ್ಮಿಕರ ಬಗ್ಗೆ ಅಸಡ್ಡೆ ತೋರಲೇ ಬಾರದು.
ಅಸಂಘಟಿತ ಕಾರ್ಮಿಕರು.
ಅಲ್ಲಲ್ಲಿ ಕಡಿಮೆ ಸಂಖ್ಯೆ ಮತ್ತು ಚದುರಿಹೋದ ಕಾರ್ಮಿಕರನ್ನು ಸಂಘಟನೆ ಮಾಡಲು ಯಾರೂ ಮುಂದೆ ಬರುವುದಿಲ್ಲ.ಇಲ್ಲಿ ಅವರನ್ನು ಗುರುತಿಸುವುದೇ ದೊಡ್ಡ ಸವಾಲು.
ಒಂದು ದಿನ ತರಕಾರಿ ಮಾರಿದ ವನೊಬ್ಬ ಇನ್ನೊಂದು ದಿನ ಕಟ್ಟಡ ಕರ್ಮಿಕನಾಗಿ ಮಗದೊಂದು ದಿನ ವಾಚಮನ್ ಆಗಿ ಕೆಲಸ ಮಾಡುವ ಬಹುತೇಕ ಮಂದಿ ಇದ್ದಾರೆ.ಹಾಗೆಯೇ ವಲಸೆ ಇವರ ಇನ್ನೊಂದು ಸಮಸ್ಯೆ. ಕ್ರಷರ್ ಗಳ ಕಾರ್ಮಿಕ ವರ್ಗವೂ ಇದಕ್ಕೆ ಹೊರತಾಗಿಲ್ಲ.
ನಿಗಧಿತ ಗುರುತಿನ ಚೀಟಿ ನೀಡಿ ಸೌಲಭ್ಯಗಳನ್ನು ಒದಗಿಸಲು ಅಸಂಘಟಿತ ಕಾರ್ಮಿಕರನ್ನು ಗುರುತಿಸಲು ಬೇರು ಮಟ್ಟದಲ್ಲಿ ಕೆಲಸ ಮಾಡುವ ನೌಕರರನ್ನೇ ಇಲ್ಲಿ ಬಳಸಿಕೊಳ್ಳಬೇಕಾಗುತ್ತದೆ.
ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವ ಬದಲು ವಂದಿಮಾಗದರಾದರೆ,
ಬಂಡವಾಳ ಹೂಡಿಕೆದಾರರ,ಆಡಳಿತ ಮಂಡಳಿ ಅಧಿಕಾರ ವರ್ಗದವರ ಬಾಲ ಹಿಡಿಯುವ ಕಾರ್ಮಿಕ ಪಕ್ಷಗಳಿದ್ದರೆ ದುಡಿಯುವ ಕೈಗಳು ಕೊಳೆಯುತ್ತವೆಯೇ ಹೊರತು ನೆಮ್ಮದಿಯಿಂದ ಅನ್ನ ತಿನ್ನಲು ಸಾಧ್ಯವಿಲ್ಲ.
ಈ ದೇಶದ ಅಧಿಕಾರಿಗಳು, ನಾಯಕರು,ಬಡ ಕಾರ್ಮಿಕರ ನೋವು ಅರಿಯದೇ ಕಾರ್ಮಿಕರ ಹೋರಾಟಗಳನ್ನು ಮತ್ತು ಪ್ರಾಮಾಣಿಕ ಮುಂದಾಳುಗಳನ್ನು ದಹಿಸದೇ ಗೌರವ ದಿಂದ ನಡೆಸಿಕೊಳ್ಳಬೇಕಿದೆ.
ಆಗ ಮಾತ್ರ ಮೇ-ಒಂದರ ಕಾರ್ಮಿಕ ದಿನಕ್ಕೊಂದು ಅರ್ಥ ಸಿಗಬಹುದೇನೋ.
ಕೇವಲ ದಿನ ಒಂದನ್ನು ಸಂಭ್ರಮಿಸುವುದು ಕಣ್ಣೊರೆಸುವ ತಂತ್ರವಾಗುತ್ತದೆಯೇ ಬೇರೇನೂ ಸಾಧ್ಯವಾಗುವುದಿಲ್ಲ.
*******



