ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಮ್ಮನದಿನ     

    ಎನ್.ಶೈಲಜಾ ಹಾಸನ

  ಕಳೆದ ವರ್ಷವಷ್ಟೆ ಅಮ್ಮನ ದಿನ ಆಚರಿಸಿದೆವು.ಈ ವರ್ಷವೂ ಅಮ್ಮಂದಿರ ದಿನ ಬಂದಿದೆ. ಅಮ್ಮನಿಗಾಗಿ ಒಂದು ದಿನವೇ ಎಂದು ಹುಬ್ಬೇರಿಸುವವರ ನಡುವೆಯೂ ಅಮ್ಮನನ್ನು ನೆನೆಸಿಕೊಂಡು ಅಮ್ಮನಿಗಾಗಿ ಉಡುಗರೆ ನೀಡಿ ಅಮ್ಮನ ಮೊಗದಲ್ಲಿ ಸಂತಸ ತುಂಬಿzವರು, ಅಮ್ಮನ ದಿನ ಮಾತ್ರವೇ ನೆನಸಿಕೊಂಡು ಅಮ್ಮನ ದಿನ ಆಚರಿಸಿದವರೂ, ತಮ್ಮ ಜಂಜಾಟದ ನಡುವೆ ಅಮ್ಮನನ್ನೆ ಮರೆತವರೂ, ಈ ಅಮ್ಮಂದಿರ ದಿನದ ಆಚರಣೆಗಳೆÉಲ್ಲ ನಮ್ಮ ಸಂಸ್ಕ್ರತಿ ಅಲ್ಲ, ನಾವೂ ದಿನವೂ ಅಮ್ಮನನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವೆ, ಈ ಒಂದು ದಿನ ಮಾತ್ರ ನೆನೆಸಿಕೊಂಡು ಉಡುಗೊರೆ ಕೊಟ್ಟು ಕೈ ತೊಳೆದುಕೊಂಡು ಮತ್ತೆ ಮುಂದಿನ ವರ್ಷವೇ ಅಮ್ಮನ ನೆನೆಸಿಕೊಂಡು ಬರುವ ವಿದೇಶಿ ಸಂಸ್ಕ್ರತಿ ನಮ್ಮದಲ್ಲ ಅಂತ ಮೂಗು ಮುರಿಯುವವರೂ ಇದ್ದಾರೆ. ಅದರೆ ಅಮ್ಮನ ದಿನ ಆಚರಿಸಿ ಉಡುಗೊರೆ ಕೊಟ್ಟಾಗ ಸಂಭ್ರಮಿಸುವ ಅಮ್ಮಂದಿರೇ ಹೆಚ್ಚಾಗಿದ್ದಾರೆ  ನನ್ನ ಮಗಳು ಕೂಡಾ ಬುದ್ದಿ ತಿಳಿದಾಗಿನಿಂದಲೂ ನನಗೆ ಪ್ರತಿ ವರ್ಷ ಉಡುಗರೆ ನೀಡುತ್ತಲೇ ಬಂದಿದ್ದಾಳೆ. ಅವಳು ನೀಡುವ ಪುಟ್ಟ ಪುಟ್ಟ ಉಡುಗರೆ ಕೂಡಾ ನನಗೆ ಅಮೂಲ್ಯವಾದದ್ದು ಹಾಗೂ ಆಪ್ಯಾಯಮಾನವಾದದ್ದು. ಇಂತಹ ಚಿಕ್ಕ ಚಿಕ್ಕ ವಿಚಾರಗಳು ಕೂಡಾ ಅಮ್ಮಂದಿರಿಗೆ  ಅದೆಷ್ಟು ಸಂತೋಷ ನೀಡುತ್ತದೆ ಅಂತ ಅಮ್ಮಂದಿರಿಗೆ ಗೊತ್ತು. ಆದರೆ ಅಂತಹ  ಸಣ್ಣ ಸಣ್ಣ ಸಂತೋಷವನ್ನೂ ಕೊಡಲಾರದ ಮಕ್ಕಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ.     ಅಮ್ಮ ಅಂದರೆ ದೇವತೆ, ದೇವರು ಎಲ್ಲಾ ಕಡೆ ಇರಲು ಸಾದ್ಯವಿಲ್ಲ ಎಂದೇ  ದೇವರು ಅಮ್ಮನನ್ನು ಸೃಷ್ಟಿಸಿದ್ದಾನೆ. ಅಮ್ಮ ಎನ್ನುವ ಮಾತಿನಲ್ಲೇ ಅಮೃತವಿದೆ. ಪ್ರೀತಿ. ಕರುಣೆ, ವಾತ್ಸಲ್ಯ , ಮಮತೆ, ಕ್ಷಮಾಗುಣ, ಆರ್ದತೆ,ತ್ಯಾಗ, ಸಹಿಷ್ಣುತೆ  ಮುಂತಾದ ಪ್ರಪಂಚದ ಎಲ್ಲಾ ಒಳ್ಳೆಯ ಗುಣಗಳನ್ನು ಅಮ್ಮನಲ್ಲಿ ಇಟ್ಟು  ದೇವರು ತನ್ನ ಪ್ರತಿನಿಧಿಯಾಗಿ ಈ ಲೋಕದಲ್ಲಿ ಸೃಷ್ಟಿಸಿದ್ದಾನೆ.  ಕರುಳ ಕುಡಿಯನ್ನು ನವ ಮಾಸಗಳು ತನ್ನ ಉದರದಲ್ಲಿ ಪೋಷಿಸಿ , ಪ್ರಾಣವನ್ನೇ ಒತ್ತೇ ಇಟ್ಟು ಮಗುವಿಗೆ ಜನ್ಮ ನೀಡಿ, ಹಸುಗೂಸನ್ನು  ಲಾಲಿಸಿ, ಪಾಲಿಸಿ, ಪೋಷಿಸಿ ಒಂದು ವ್ಯಕ್ತಿಯನ್ನಾಗಿ ಮಾಡುವಲ್ಲಿ ಅಮ್ಮನ ಪಾತ್ರದಿಂದಾಗಿಯೇ ಈ ಜಗದಲ್ಲಿ ಸರ್ವ ಶ್ರೇಷ್ಠ ಸ್ಥಾನ ಅಮ್ಮನಿಗೆ. ಸಿರಿ ಸಂಪತ್ತು. ವೈಭೋಗ. ಜೀವ ಸೃಷ್ಟಿಯಲ್ಲಿ ತಾಯಿ ಹಾಗೂ ಆಕೆಯ ಪ್ರೀತಿ, ವಾತ್ಸಲ್ಯಕೆ  ಸರಿಸಾಟಿಯಿಲ್ಲ, ಜಗಕೆ ಒಡೆಯನಾದರೂ ಅಮ್ಮನಿಗೆ ಮಗನೇ. ತಾಯಿ ದೇವರು ಸಕಲ ಸರ್ವಸ್ವ, ಪೂಜ್ಯ ಮಾತೆ. ಕರುಣ ಮಯಿ, ಬಂಧು ಬಳಗ ಮುಂತಾದುವುಗಳೆಲ್ಲಾ ಒಂದು ತೂಕ ಅಥವಾ ಒಂದು ಭಾಗವಾದರೆ, ತಾಯಿಯೇ ಒಂದು ಪ್ರತ್ಯೇಕ ಭಾಗ. ತಾಯಿ ಸ್ಥಾನವನ್ನು ಯಾರೂ ತುಂಬಲಾರರು. ಹಾಗಾಗಿಯೇ ಅಮ್ಮನೆಂದರೆ ಪೂಜನೀಯ. ಅಮ್ಮ ಎನ್ನುವ ಮಾತಿನಲ್ಲಿ ಅಮೃತವಿದೆ. ಕಷ್ಟ ಸುಖ ಆನಂದದಲ್ಲಿ ಮೊದಲು ಹೊರಡುವ ಪದವೇ ಅಮ್ಮ .” ಅಮ್ಮ ಎಂದರೆ ಮೈ ಮನವೆಲ್ಲಾ ಹೂವಾಗುವುದಮ್ಮಾ ನೋವೋ ನಲಿವೋ ಹೊರಡುವ ದನಿಯೇ ಅಮ್ಮಾ ಅಮ್ಮಾ “ಅಂತ ಹಾಡಿದ್ದಾರೆ. ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು ಅಂತ ಶಂಕರಚಾರ್ಯರು ಹೇಳಿದ್ದಾರೆ. ಈ ಕುರಿತು  ಪ್ರಚಲಿತವಿರುವ ಒಂದು ಕಥೆ ನೆನಪಾಗುತ್ತದೆ. ಒಂದು ಸಂಸಾರದಲ್ಲಿ ತಾಯಿ, ಮಗ , ಸೊಸೆ ಇರುತ್ತಾರೆ. ಸಂಸಾರವೆಂದ ಮೇಲೆ ಜಗಳ ಕದನ ಇದ್ದದ್ದೆ. ಅವರ ಮನೆಯಲ್ಲೂ ಅತ್ತೆ ಸೊಸೆಗೆ ಮುಗಿಯದ ಜಗಳ. ಯಾರ ಪರ ವಹಿಸಿದರೂ ಕಷ್ಟವೇ. ಇತ್ತ ಅಮ್ಮಾ, ಅತ್ತ ಹೆಂಡತಿ. ಯಾರಿಗೂ ಏನನ್ನು ಹೇಳದೆ ಸುಮ್ಮನಿದ್ದು ಬಿಡುತ್ತಿದ್ದ. ಅಮ್ಮಾ ಮಗನ ಮನೆಯಲ್ಲಿ ಇರಲಾರದೆ ಬೇರೆ ವಾಸಿಸ ತೊಡಗುತ್ತಾಳೆ. ಹಾಗೊಂದು ದಿನ ಹೆಂಡತಿ, ಅತ್ತೆಯನ್ನು ಹೇಗಾದರೂ ಮಾಡಿ ಅತ್ತೆಯನ್ನು ನೀವಾರಿಸಿಕೊಳ್ಳಬೇಕು ಅಂತ ಉಪಾಯಮಾಡಿ ತನಗೆ ತುಂಬಾ ಕಾಯಲೆ ಎಂಬಂತೆ ನಟಿಸುತ್ತಾಳೆ, ಯಾವ ವೈದ್ಯರಿಗೆ ತೋರಿಸಿದರೂ ವಾಸಿಯಾಗದಿದ್ದಾಗ ಗಂಡನಿಗೆ ಚಿಂತೆಯಾಗುತ್ತದೆ. ಆಗ ಹೆಂಡತಿ ಗಂಡನಿಗೆ ಹೇಳುತ್ತಾಳೆ ತನ್ನ ಕಾಯಲೆ ವಾಸಿಯಾಗ ಬೇಕಾದರೆ ನಿನ್ನ ತಾಯಿಯ ಹೃದಯ ಬೇಕು ಅದನ್ನು ತಂದು ಕೊಡು ಎಂದು ಹೇಳುತ್ತಾಳೆ. ಹೆಂಡತಿಯ ಕಾಯಲೆ ವಾಸಿಯಾದರೆ ಸಾಕು ಅಂತ ಮಗ ಅಮ್ಮನ ಬಳಿ ಬಂದು ಅಮ್ಮನನ್ನು ಕೊಂದು ಅವಳ ಹೃದಯ ತೆಗೆದು ಕೊಂಡು  ಆತುರ ಆತುರವಾಗಿ ಹೋಗುತ್ತಿರುವಾಗ ಎಡವುತ್ತಾನೆ. ಆಗ ಅವನ ಕೈಯಲ್ಲಿದ್ದ ಅವನ ಅಮ್ಮಾನ ಹೃದಯ ಮೆಲ್ಲಗೆ ಹೋಗಪ್ಪ ಎಡವಿ ಬಿದ್ದಿಯಾ ಜೋಕೆ ಅಂತ ಎಚ್ಚರಿಸುತ್ತದೆ. ಮಗ ತನ್ನನ್ನು ಕೊಂದರೂ ಮಗನನ್ನು ದ್ವೇಷಿಸದೆ, ಅವನಿಗಾಗಿ ಅವನ ಕ್ಷೇಮಕ್ಕಾಗಿ ಅಮ್ಮನ ಹೃದಯ ತುಡಿಯುತ್ತದೆ ಎಂಬುದಕ್ಕೆ ಈ ಕಥೆ ನಿದರ್ಶನವಾಗಿದೆ.      ಹತ್ತು ಜನ ಬೋಧಕರಿಗಿಂತ ಒಬ್ಬ ಜ್ಞಾನಿ ಹೆಚ್ಚು. ಹತ್ತು ಮಂದಿ ಜ್ಞಾನಿಗಳಿಗಿಂತ ಒಬ್ಬ ತಾಯಿಯೇ ಹೆಚ್ಚು. ತಾಯಿಗಿಂತ ಉತ್ತಮ ಗುರುವಿಲ್ಲ. ಹಾಗೆಂದೇ ಮನೆಯನ್ನು ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು ಅಂತ ಕೈಲಾಸಂ ಹೇಳಿದ್ದಾರೆ. ಮಗುವನ್ನು ತಿದ್ದಿ ತೀಡಿ ಒಬ್ಬ ಯೋಗ್ಯ ವ್ಯಕ್ತಿಯನ್ನಾಗಿ ಮಾಡುವ ಗುರುತರವಾದ ಹೊಣೆಗಾರಿಕೆ ತಾಯಿಯದ್ದೇ ಆಗಿದೆ. ಆ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವ ತಾಯಿ ತನ್ನ  ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವಳು. ತಾನು ಹೆತ್ತ ಮಗುವಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದವಾಗಿರುವ ತಾಯಿಯ ಪ್ರೀತಿಗೆ, ವಾತ್ಸಲ್ಯಕ್ಕೆ ಎಣೆ ಇದೆಯೇ. ಅಮ್ಮಾ ಎನ್ನುವುದು ಮಧುರವಾದ ಮಾತು. ಜೀವನಕ್ಕೆ ಬೆಳಕು ನೀಡುವ ಜ್ಯೋತಿ. ಮಗುವಿಗೆ ಅಮ್ಮನ ರಕ್ಷಾಕವಚದಿಂದಾಗಿ ಸುರಕ್ಷತೆ. ದೇವರು ಇಲ್ಲಾ ಎಂದು   ಯಾರು ಬೇಕಾದರೂ ಹೇಳ ಬಹುದು, ಆದರೆ ಅಮ್ಮಾ ಇಲ್ಲ ಎಂದು ಹೇಳಲು ಸಾದ್ಯವೇ ಇಲ್ಲ ಈ ಜಗತ್ತಿನಲ್ಲಿ. ತ್ಯಾಗಕೆ, ಮಮತೆಗೆ, ವಾತ್ಸಲ್ಯಕೆ, ಅನುರಾಗಗಳಿಗೆ ಮತ್ತೊಂದು ಹೆಸರೆ ಅಮ್ಮಾ. ಮಕ್ಕಲ ಸುಖದಲ್ಲಿ ತನ್ನ ಸುಖ ಕಾಣುವ ಏಕೈಕ ಜೀವಿ ಎಂದರೆ ತಾಯಿ ಮಾತ್ರಾ. ಇಂತಹ ಅಮ್ಮನ ಋಣ ತೀರಿಸಲು ಸಾದ್ಯವೇ ಇಲ್ಲ, ಹಾಗಾಗಿಯೇ ಈ ದೇಶದಲ್ಲಿ ಅಮ್ಮನಿಗೆ ಪೂಜನೀಯ ಸ್ಥಾನ. ಇಂತಹ ಪೂಜನೀಯ ಅಮ್ಮನಿಗಾಗಿ ವಿದೇಶಗಳಲ್ಲಿ ವರ್ಷದಲ್ಲಿ ಒಂದು ದಿನವನ್ನು ತಾಯಿಗಾಗಿ ಮಿಸಲಿಟ್ಟು” ಮದರ್ಸ ಡೇ” ಎಂದು ಆಚರಿಸಿ ಅಂದು ಅಮ್ಮನನ್ನು ಕೊಂಡಾಡಿ ಅವಳಿಗೆ ಪ್ರೀತಿಯ ಉಡುಗರೆ ನೀಡಿ ಆ ದಿನದಲ್ಲಿ ಆಕೆ ಹೆಚ್ಚು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ.     ಜಾಗತೀಕರಣದಿಂದಾಗಿ ಆ ಹಬ್ಬ ನಮ್ಮ ದೇಶಕ್ಕೂ ಕಾಲಿಟ್ಟಿತು. ಮದರ್ಸ ಡೇಯನ್ನು  ಹುಟ್ಟಿದ ದೇಶವನ್ನು ಮಾತೃಭೂಮಿ ಎಂದು ಗೌರವಿಸುವ ಈ ದೇಶದಲ್ಲಿ ಕೂಡಾ   ಸಂತೋಷವಾಗಿ ಸ್ವಾಗತಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂಟರ್‍ನೆಟ್ ಮತ್ತು ಮೊಬೈಲ್ ಕ್ರಾಂತಿಯಿಂದಾಗಿ ಭಾರತ ದೇಶದಲ್ಲಿಯೂ ಅಮ್ಮನಿಗಾಗಿ ಒಂದು ದಿನವನ್ನು ಮೀಸಲಿಟ್ಟು ಅಮ್ಮನ ದಿನದ ಗೆಲುವಿಗೆ ಕಾರಣರಾಗಿದ್ದಾರೆ. ಮಗುವಿಗೆ ಜನ್ಮ ನೀಡುವುದರಿಮದ ಮೊದಲುಗೊಂಡು ಉಸಿರು ಇರುವವರೆಗೂ ಮಕ್ಕಳ ಏಳ್ಗೆಗಾಗಿ ತಪಸ್ಸಿನಂತೆ ಸೇವೆ ಸಲ್ಲಿಸುವ ನಿಸ್ವಾರ್ಥ ಜೀವಿ ಅಮ್ಮನಿಗಾಗಿ ಮೇ ತಿಂಗಳ ಎರಡನೇ ಭಾನುವಾರ ಅಂತರಾಷ್ಟ್ರೀಯ ಮಾತೃ ದಿನೋತ್ಸವವನ್ನಾಗಿ ಆಚರಿಸಲಾಗುತ್ತಿದೆ,      ಬದಲಾಗುತ್ತಿರುವ ಈ ದಿನಗಳಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದು ಕೊಂಡು ಮಾನವೀಯತೆ ಕ್ಷೀಣಸುತ್ತಿರುವ ಈ ಸಂದರ್ಭದಲ್ಲಿ ಅಮ್ಮಾ ಕೂಡಾ ಹೊರೆಯಾಗುತ್ತಿದ್ದು ಮಕ್ಕಳ ತಿರಸ್ಕಾರಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸವಾಗುತ್ತಿದೆ. ಹೆತ್ತ ಮಕ್ಕಳು ಸ್ವಾರ್ಥಿಗಳಾಗಿ ತಮ್ಮ ಭೋಗ ಲಾಲಸೆಯಲಿ ಮುಳುಗಿ ಹೆತ್ತ ತಾಯಿಯನ್ನೇ ಮರೆತು ಬಿಟ್ಟಿರುವ ನಿದರ್ಶನಗಳನ್ನು ನಾವು ಪ್ರತಿ ನಿತ್ಯನಾವು ಕಾಣುತ್ತಲೆ ಇರುತ್ತೆವೆ, ಹೈಟೆಕ್ ಯುಗದಲ್ಲಿ ವೃದ್ದಾಶ್ರಮಗಳು ತಲೆಯೆತ್ತಿ ಅಮ್ಮಂದಿರ ಆಶ್ರಯ ತಾಣಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ, ಅಲ್ಲಿ ಸೂಕ್ತ ಆರೈಕೆ, ಪೋಷಣೆ ಸಿಗದೆ ಹಿಡಿ ಪ್ರೀತಿಗಾಗಿ ಹಂಬಲಿಸುತ್ತ ಕಾಲನ ಕರೆಗೆ ಕಾಯುತ್ತಿರುವುದು ಕರುಳಿರಿವ ಸಂಗತಿ. ಈ ದುರಂತದ ಅಂತಿಮ ದಿನಗಳು ಯಾರ ಬಾಳಿನಲ್ಲೂ ಬರಬಾರದು. ಹೆತ್ತ ಅಮ್ಮ ತಮ್ಮ ಕಣ್ಮುಂದೆ ಸದಾ ನಗುತ್ತಿರಲಿ ಎಂದು ಬಯಸುವ ಮಕ್ಕಳೆ ಈ ಭೂಮಿ ಮೇಲೆ ತುಂಬಿರಲಿ . ಅಮ್ಮನ ಆರೋಗ್ಯಕ್ಕಾಗಿ,  ಆರೈಕೆಗಾಗಿ,ಆನಂದಕ್ಕಾಗಿ ಮಕ್ಕಳು ತಮ್ಮ ಬದುಕಿನ ದಿನಗಳ ಕೆಲ ಗಂಟೆಗಳನ್ನಾದರೂ ಮೀಸಲಿಟ್ಟು ಆ ತಾಯ ಕಣ್ಣಲಿ ಮಿಂಚರಿಸಲಿ ಎಂಬುದೇ ಈ ಲೇಖನದ ಆಶಯ.

*****************

                                                 

About The Author

2 thoughts on “ಅಮ್ಮಂದಿರ ದಿನದ ವಿಶೇಷ- ಬರಹ”

  1. ಜಯಶ್ರೀನಾಗೇಶ್

    ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ

  2. ಚಂದ್ರು ಪಿ ಹಾಸನ್

    ತುಂಬಾ ಸೊಗಸಾಗಿ ವಿಶೇಷವಾಗಿ ಮೂಡಿ ಬಂದಿದೆ ಮೇಡಂ

Leave a Reply

You cannot copy content of this page

Scroll to Top