ಅಗ್ನಿ ಕುಸುಮ
ಶ್ವೇತ ಮಂಡ್ಯ
ಅಗ್ನಿ ಕುಸುಮ
ಪಂಚವರ್ಣದ ಹಂಸ ಸತ್ಯಮಂಗಲ ಮಹಾದೇವ ಕೃತಿ ಬಿಡುಗಡೆಯ ಸಂಭ್ರಮದ ಕ್ಷಣಗಳು ದಿನಾಂಕ: 04-11-2019 ಬಿಡುಗಡೆ: ಶ್ರೀ ಮಲ್ಲೇಪುರಂ.ಜಿ.ವೆಂಕಟೇಶ್ ಕೃತಿ ಕುರಿತು ಮಾತಾಡಿದವರು: ಡಾ.ಸಿ.ಎನ್. ರಾಮಚಂದ್ರನ್
ಖಾಲಿ ದೀಪ ಮತ್ತು ಕತ್ತಲು ಬಿದಲೋಟಿ ರಂಗನಾಥ್ ಕಟ್ಟಿದ ಮಣ್ಣಗೋಡೆಯು ತಪ ತಪನೆ ಬೀಳುತ್ತಿದೆ ನಿದ್ದೆಯಿಲ್ಲದ ರಾತ್ರಿಗಳ ಕನಸು ಆ ಮನೆ ಪ್ರತಿ ಇಟ್ಟಿಗೆಯ ಮೇಲೂ ನಿನ್ನ ಶ್ರಮದ ಬೆವರ ವಾಸನೆ ನೀನು ಮಲಗೆದ್ದ ಜಾಗದ ನಿಟ್ಟುಸಿರು ಕಣ್ಣೀರಾಕುತ್ತಿದೆ ನೀನೆ ನೆಟ್ಟ ನಂಬಿಕೆಯ ಗಿಡದ ಬುಡಕ್ಕೆ ಪಾದರಸ ಸುರಿದ ಅವಳು ಇವತ್ತು ಬೀದಿ ನಾಯಿಯ ಬಾಲ ಅವಮಾನದ ಗಾಯ ನಂಜಾಗಿ ನಸಿರಾಡಿ ಬದುಕುವ ಭರವಸೆಯು ಕುಂದಿ ನೆಲದ ಮೇಲಿಟ್ಟ ಅಷ್ಟೂ ಹೆಜ್ಜೆಗಳು ಕೆಂಡಗಳಾಗಿ ಧಗ ಧಗಿಸಿ ಉರಿದು ಜೀವವನ್ನೇ ಸುಟ್ಟ ನರಳುವಿಕೆಯ ಧ್ವನಿಯಲ್ಲಿ ಮಕ್ಕಳ ಮೇಲಿನ ಪ್ರೀತಿ ಹಸಿ ಹಸಿಯಾಗಿತ್ತು ಮಣ್ಣು ತಿನ್ನುತ್ತಿರುವ ನಿನ್ನದೆ ದೇಹದ ಮೂಳೆಯನ್ನು ಒರಸಿ ನೋಡಿದೆ ಎಷ್ಟೊಂದು ಕನಸುಗಳು ಜೀವಂತವಾಗಿದ್ದವು ರೆಕ್ಕೆ ಪುಕ್ಕ ಎತ್ತಿಕೊಂಡು ಮುಚ್ಚಿದ ರೆಪ್ಪೆಗಳಡಿಯಲ್ಲಿ ಸವೆಯದ ಹಾದಿ ತೆರೆದೇ ಇತ್ತು ಮಾತಾಡಿಸಿದೆ ತಮ್ಮನೆಂಬ ಹೆಸರು ಎದೆಯೊಳಗೆ ಬಿರಿದು ಮೌನದ ಗುಂಡಿಯಲಿ ಮಾತುಗಳು ಸತ್ತಿರುತ್ತವೆಂಬ ಸಣ್ಣ ಅರಿವೂ ಇಲ್ಲದೆ. ಅಲ್ಲಿಂದ ಎದ್ದು ಮಾರು ದೂರ ನಡೆದೆ ಬಂದ ದಾರಿಗೆ ಸುಂಕವಿಲ್ಲದೆ. ತಡೆಯದ ಮನಸು ಮತ್ತೆ ತಿರುಗಿ ನೋಡಿತು ಮಣ್ಣ ಹೊದಿಕೆಯ ‘ಮಾಡಿ‘ನೊಳಗೆ ಎಷ್ಟೊಂದು ಶಾಂತತೆಯಲಿ ಮಲಗಿದೆ ಹಾರಿ ಹೋದ ಪ್ರಾಣ ಪಕ್ಷಿಯ ದೇಹ ತಲೆದೆಸೆಯ ಗೂಡ ದೀಪದೊಳಗಿನ ಬತ್ತಿ ಎಣ್ಣೆ ಇರುವವರೆಗೆ ಮಾತ್ರ ಉರಿಯುತ್ತದೆ. ನಂತರ ಉಳಿಯುವುದು ಕೇವಲ ಖಾಲಿ ದೀಪ ಮತ್ತು ಕತ್ತಲು. ***********************************
“ಓಟದಿಂದ ಕಲಿಯುವ ಆಡಳಿತದ ಪಾಠ” ಗಜಾನನ ಮಹಾಲೆ ಓಟದ ಸ್ಪರ್ಧೆಯಲ್ಲಿ ಬೇರೆ ಬೇರೆ ರೀತಿಯ ಓಟಗಳಿರುತ್ತವೆ. 5000 ಮೀಟರ್ ಹಾಗೂ 100 ಮೀಟರ್ ಓಟಗಳ ಎರಡು ವಿಭಾಗದ ಮಧ್ಯೆ ಬಹಳಷ್ಟು ವ್ಯತ್ಯಾಸವಿರುತ್ತದೆ. ವ್ಯತ್ಯಾಸ ಓಡುವ ದೂರದ ಬಗ್ಗೆ ಮಾತ್ರವಲ್ಲ. ಓಡುವ ವಿಧಾನದಲ್ಲಿಯೂ ವ್ಯತ್ಯಾಸವಿದ್ದು ಸರಿಯಾದ ವಿಧಾನದಲ್ಲಿ ಓಡಿದ ಸ್ಪರ್ಧಿ ಮೊದಲಿಗನಾಗುವ ಸಂಭವ ಹೆಚ್ಚಿರುತ್ತದೆ. 100 ಮೀಟರ್ ಓಟದಲ್ಲಿ ಪ್ರಾರಂಭದಿಂದ ಅತ್ಯಂತ ವೇಗವಾಗಿ ಓಡಿದವರು ಮತ್ತು ಆ ಸಾಮರ್ಥ್ಯವಿದ್ದವರು ಪ್ರಥಮ ಸ್ಥಾನ ಗಳಿಸುತ್ತಾರೆ. 5000 ಮೀಟರ್ ಓಟದಲ್ಲಿ ಈ ವಿಧಾನ ಪ್ರಯೋಜನಕಾರಿಯಲ್ಲ. ಈ ವಿಭಾಗದಲ್ಲಿ ಮೊದಲು ನಿಧಾನವಾಗಿ ಪ್ರಾರಂಭಿಸಿ, ನಿರಂತರವಾಗಿ ಓಡುತ್ತಿದ್ದು,ಗುರಿಗೆ ಸಮೀಪ ಬಂದಾಗ ವೇಗವನ್ನು ಹೆಚ್ಚು ಮಾಡಿ ಗುರಿ ತಲುಪಲು ಪ್ರಯತ್ನಿಸುವವರು ಯಶಸ್ವಿಯಾಗುತ್ತಾರೆ. 100 ಮೀಟರ್ ಓಟದಲ್ಲಿ ಓಡಿದಂತೆ ಮೊದಲೇ ವೇಗವಾಗಿ ಓಡಲು ಪ್ರಾರಂಭಿಸಿದರೆ, ಮಧ್ಯದಲ್ಲಿಯೇ ಸುಸ್ತಾಗಿ ಹೊರ ಹೋಗುವ ಸಂಭವ ಹೆಚ್ಚು. ಒಂದು ರಾಜ್ಯದ ಅಥವಾ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಈ ಓಟದ ಸ್ಪರ್ಧೆಯ ಟೆಕ್ನಿಕ್ನ ಅರಿವಿದ್ದರೆ ತಮ್ಮ ಗುರಿ ತಲುಪುವುದರಲ್ಲಿ ಯಶಸ್ವಿಯಾಗುತ್ತಾರೆ. ದೇಶದ ಅಥವಾ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಪ್ರಾರಂಭಿಸುವ ಯೋಜನೆಗಳು, ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಗಳು,ಆಡಳಿತದ ವಿವಿಧ ಹಂತಗಳಲ್ಲಿ ಮಾಡುವ ಬದಲಾವಣೆಗಳು, ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಮಾಡುವ ತಿದ್ದುಪಡಿಗಳು ಇವು ಯಶಸ್ವಿಯಾಗಬೇಕಾದರೆ, ಓಟದ ಟೆಕ್ನಿಕ್ ನ ಅರಿವಿದ್ದರೆ ಯಶಸ್ಸು ಸಾಧ್ಯ. ಯಾವುದನ್ನು ವೇಗವಾಗಿ ಮಾಡಬೇಕು ಹಾಗೂ ಯಾವುದನ್ನು ನಿಧಾನವಾಗಿ ಪ್ರಾರಂಭಿಸಿ ಅನಂತರ ವೇಗವನ್ನು ಹೆಚ್ಚಿಸಬೇಕು ಎಂಬ ಅರಿವಿಲ್ಲದಿದ್ದರೆ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತು ಆಡಳಿತದ ವಿಷಯದಲ್ಲಿಯೂ ಅನ್ವಯಿಸುತ್ತದೆ… *********************************************************
ಗುಳಿಗೆ ಮಾರುವ ಹುಡುಗ ಅರುಣ್ ಕೊಪ್ಪ ಇವನು ಬ್ಯಾಗ್ ಹೊತ್ತು ಬೆವರು ಬಿತ್ತಿ ಜಿಪ್ಪು ಸರಿಸುತ್ತಾ ಸ್ಯಾಂಪಲ್ ಹಂಚುವ ಡಾಕ್ಟರ್ ಛೆಂಬರ್ ಲಿ ದಿನವೂ ಜ್ಞಾನಾರ್ಜನೆಯಂತೆ! ಸರತಿ ಸಾಲಿನಲ್ಲಿ ಮಾತು ಬರದವ ಹೊಡೆಯಲು ಹೋಗುತ್ತಲೇ… ಕಾಲು ಕಿತ್ತು ಬೇರೆ ವೈದ್ಯರ ಭೇಟಿಗೆ ಗೀಳಿಡುತ್ತಾನೆ ಇವ ಗುಳಿಗೆ ಮಾರುವ ಹುಡುಗನಂತೆ ಒಳ ಸೇರಿಸಿದ ಅಂಗಿ, ಕಪ್ಪು ಸೊಂಟದ ಪಟ್ಟಿ ಶೂ ಕೂಡ ಹೊಳೆವ ಹಾಗೇ ರೋಗಿಗಳು ಮತ್ತಷ್ಟು ಹಿಡಿ ಶಾಪ ಹಾಕುವ ಉತ್ತೇಜನ ನೀಡುವ ಹಾಗೇ ಅವನ ಡ್ರೆಸ್ ಕೋಡ್ ! ತನಗೂ ಇತರರಿಗೂ ಬದುಕು ಸಾಕುವ ಪಾಲಕ ಸೇವಕ, ಎಂತೆಲ್ಲ ಹಲುಬುತ್ತಾರೆ… ಅಲೆದಾಟದ ಬದುಕಲಿ ಕಾರದ ಕಲ್ಲು ಗೊತ್ತಾಗದೆ ಸವೆದ ಹಾಗೇ, ಇವ ಗುಳಿಗೆ ಮಾರುವ ಹುಡುಗನಂತೆ ಸೈಕಲ್ ತುಳಿಯುತ್ತಾನೆ ಹೆಲ್ಮೆಟ್ ಇಲ್ಲದೆ ಬೈಕ್ ಗುರ್ ಗುಡಿಸಿ ನಡೆಯುತ್ತಾ, ತಟ ತಟನೆ ಮೈ ಧಗಿಸಿ ಶ್ರಮಿಕರ ವರ್ಗದಲಿ ಇವನೂ ಒಬ್ಬ ವೈದ್ಯರ ಸಮಯಕ್ಕೆ ಇವನು ಸರಿಯಾಗಿ ಒಡೆದು ಮೂಡುತ್ತಾನೆ ತಪಸ್ಸಲಿ ದೇವರು ಕಂಡ ಹಾಗೇ ಹಪಾಹಪಿಯ ಭಾವ ಮಂದಹಾಸ ದಿನ ಕಳೆಗಟ್ಟಿದೆ ಅವಗೆ ವ್ಯಾಪಾರ ಜೋರಂತೆ ಇವ ಗುಳಿಗೆ ಮಾರುವ ಹುಡುಗನಂತೆ ಮನಸ್ಸು ಕಂಡಾಗ ಕರೆಯುವ ಕೆಲ ವಿಶೇಷ ತಜ್ಞರು ಬೆಟ್ಟಿಯಾದಾಗಲೆಲ್ಲ ತಿರುಪತಿ ವೆಂಕಟ್ರಮಣ ದರ್ಶನವಾದಂತೆ ನನಗೆ ಎನ್ನುತ್ತಾನೆ. ಒಂದಷ್ಟು ಬಿಡುವಿಲ್ಲದ ಬಿಡುವಿನಲ್ಲಿ ಮಡದಿ ಮಕ್ಕಳು ಬಂದುಗಳಿಗೆ ಇಳಿ ಪ್ರಾಯದಲ್ಲೂ ನಗುವ ಊರಲ್ಲಿ ಸಿಗುವ ತನ್ನ ಹೆತ್ತಮ್ಮನಿಗಾಗಿ ತಂದೆಗಾಗಿ ಇವನು ಗುಳಿಗೆ ಮಾರುವ ಹುಡುಗನಂತೆ ತಿಂಗಳು ಕೊನೆಯಲ್ಲಿ ಹಾಹಾಕಾರದ ಗುಬ್ಬಿಯಂತೆ ಕಡ್ಡಿ ಸೇರಿಸಿ ಗೂಡ ಹೆಣೆದಂತೆ ಸುರಿಗೂ ಇಲ್ಲದ ಆಯುಷ್ಯ ಇನ್ನು ಮನೆ ಎಲ್ಲಿ? ನೀರ ಮೇಲಿನ ಗುಳ್ಳೆಯ ಹಾಗೇ ಸ್ವಾವಲಂಭಿಯ ಒಂದು ರೂಪವಂತೆ ಇವನು ಗುಳಿಗೆ ಮಾರುವ ಹುಡುಗನಂತೆ ಉದ್ಯೋಗ ಅರಸಿ ಬಂದನಂತೆ ಕಾಂಕ್ರೀಟ್ ಕಾಡಿಗೆ, ನಿರುದ್ಯೋಗ ಮೆಟ್ಟಲು ಬದುಕ ಕಟ್ಟಲು ಮೆಟ್ಟಿಲು ಏರುತ್ತಾ ಒಂದೊಂದೇ ಆಫೀಸರ್ ಆಗುತ್ತಾನೆ, ಚಾಲಕನಾಗುತ್ತಾನೆ ಶಿಕ್ಷಕನಾಗುತ್ತಾನೆ, ವಿದ್ಯಾರ್ಥಿಯಾಗುತ್ತಾನೆ ಕೊನೆಗೆ ಹಮಾಲಿಯೂ, ಚೌಕಟ್ಟಿನ ಭಯದಲ್ಲಿ ಬದುಕ ಗೆಲ್ಲುತ್ತಾ ಇವ ಗುಳಿಗೆ ಮಾರುವ ಹುಡುಗನಂತೆ ********************************** (ಔಷಧಿ ಕಂಪನಿ ಪ್ರತಿನಿಧಿಗಳಿಗೆ (ಮೆಡಿಕಲ್ ರೇಪ್ರೆಸೆಂಟಿಟಿವ್ ) ಕವಿತೆ ಅರ್ಪಣೆ )
ವಸಂತನಾಗಮನ ಮೂಲ ತೆಲುಗು ರಚನೆ: ಗುಂಟೂರು ಶೇಷೇಂದ್ರಶರ್ಮ ಗುಂಟೂರು ಶೇಷೇಂದ್ರ ಶರ್ಮಾ ಬಿ.ಏ.ಬಿ.ಯಲ್ 1927 -2007 ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ಕವಿ ಯುಗಕವಿ ಎಂದು ಹೆಸರುಗಳಿಸಿದವರು. ಇವರು ಕವಿ, ವಿಮರ್ಶಕ ಹಾಗೂ ಬರಹಗಾರರು.1994 ರಲ್ಲಿ ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಇವರು ನೋಬಲ್ ಬಹುಮಾನಕ್ಕೂ ಭಾರತದಿಂದ ನಾಮಿನೇಟ್ ಆಗಿದ್ದರು. ಇವರ ಹಲವಾರು ರಚನೆಗಳು ಕನ್ನಡ, ಇಂಗ್ಲೀಷು ಹಿಂದೀ ಉರ್ದೂ ಬೆಂಗಾಲೀ ನೇಪಾಲಿ ಹಾಗೂ ಗ್ರೀಕ್ ಭಾಷೆಗಳಿಗೂ ಅನುವಾದಗೂಂಡಿವೆ ಕನ್ನಡಕ್ಕನುವಾದ: ನಾರಾಯಣ ಮೂರ್ತಿ ಬೂದುಗೂರು ಹೂಗಳು ತುಟಿಯರಳಿಸಿವೆ ರಹಸ್ಯವ ತಿಳಿಸಲೂ!! ಈಗ…ಪ್ರತಿಯೊಂದು ಮರವೂ ಒಂದು ದೇವಳವೇ… ಹಕ್ಕಿಗಳೆಲ್ಲಾ ಹಾರುವಾ ದೇವತೆಯರೇ!!! ರೆಂಬೆ, ರೆಂಬೆಯಲೂ ಹಾಡಿನಾ ಸ್ಪರ್ಧೆಯೇ ಹುಲ್ಲುಕಡ್ಡೀಯಲ್ಲೂ ಗಂಧರ್ವಲೋಕವೇ.. ವೀಣೆಯು ಮೀಟಿದಂತೆ ಸ್ವರಗಳ ಅಪ್ಸರಸೆಯರು…. ಈ ಹೂಗಳಲನ್ನ ಯಾರು ಎಬ್ಬಿಸಿದರೋ…? ಏನೋ ನನ್ನ ಬೆನ್ಹತ್ತಿದೇ!!! ಯಾವುದೋ ನೆನಪುಗಳಿಗೆ ನನ್ನ ತೀಕ್ಷ್ಣವಾಗಿ ಒಳಪಡಿಸುತ್ತಿವೇ!!! ಈ ಕೋಗಿಲೆಗಳನ್ನ ಆ ಮಾವಿನಮರದ ಮೇಲೆ ಯಾರು ಇಟ್ಟರೋ ? ಅದು ಲೋಕವನ್ನ ನಿದ್ದೆ ಮಾಡಲಿಕ್ಕೆ ಬಿಡುತ್ತಿಲ್ಲ!! ವಸಂತನನ್ನ ಕರೆದು.. ಕೋಗಿಲೆಯನ್ನ, ಸುಮ್ಮನಿರಲು ಹೇಳಿದರೇ…ಅದು ಕೇಳುವುದಾ ? ನಾನು ಋಷಿಯಲ್ಲಾ..ಕೋಗಿಲೆಯ, ಸ್ವರ ಕೇಳಿ ಬೆಚ್ಚಿಬೀಳಲು… ನಮ್ಮೂರ ಮಣ್ಣಿನಿಂದ ಮಾಡಿದ ಸ್ನಾಯುಗಳು ಎನ್ನ ದೇಹದ್ದು!!! ಹಸಿರಾಗಿ ಪಂಚಮ… ದಲ್ಲಿ ಹಾಡುವಾ ಮಾವಿನಾ ಮರಾ… ನಡೆದಾಡುವದೊಂದು… ವಿನಹಾ… ಚೈತ್ರದ ಆಗಮನಕ್ಕೆ ಏನು ಬೇಕಾದರೂ ಮಾಡುವೆ ಎನ್ನುತಿದೇ!!!! ವಸಂತ ಋತುವೆಂದರೇ!!! ಕೋಗಿಲೆಗಳ ಹಾಡಿನಾ ಪಾಠಶಾಲೆ.. ಹಕ್ಕಿಗಳಾ ಸಂಗೀತ ಅಕಾಡೆಮೀ… ಒಂದೊಂದು ಹಕ್ಕೀ….ಸಾವಿರ ಹಾಡೂಗಳಾಗಿ ರೂಪಾಂತರಗೊಳ್ಳುವಾ ಋತೂ ಇದೂ!!! ಅದಕ್ಕೇ ಪ್ರಪಂಚವೆಲ್ಲಾ ಯಾವಾಗಲೂ ಒಂದು ಹೊಸ ವಸಂತಕ್ಕಾಗಿಯೇ. ನಿರೀಕ್ಷಣೇ ಮಾಡುತ್ತಿರುತ್ತೇ!!! ಚೈತ್ರವೂ…ಒಂದು ಜೇಡರಹುಳಾ…. ಹೂವುಗಳಾ ಅರಳಿಸುತ್ತೇ.. ಮೊಟ್ಟೇನೂ ಇಡುತ್ತೇ… ಹೂವುಗಳಲ್ಲೀ ಬಣ್ಣಾನೂ ತುಂಬುತ್ತೇ!!! ಬಲೆಯಲ್ಲಿ…. ಇತಿಹಾಸವನ್ನೂ.. ನೇಯುತ್ತೇ… ಏನೋ….ಪಿಸಪಿಸ ಮಾತಿನೊಂದಿಗೆ ಏಕಾಂತವನ್ನೂ ಕಾಡುತ್ತೇ!!! ಮರುಭೂಮಿಗಳ ದಾಟಿ…ದಾಟಿ.. ಹೂವರಳುವಾ ಬನಗಳಕಡೇ ಪ್ರಯಾಣ ಬೆಳಸುವೆ!!! ಸಮಯವೂ…. ಮಾವಿನಾ ಹಣ್ಣಿನಾ ಹಾಗೇ, ಮಧುರ ಸುವಾಸನೇ ಬೀರುತ್ತಾ.. ಇರುವುದನ್ನ ಅಲ್ಲಿ ಸಾಕ್ಷಾತ್ಕಾರಗೊಳಿಸುತ್ತೆ. ಉದರುವ ಎಲೆಗಾಗಿ ಭೂತಾಯಿಯಾ ನಿರೀಕ್ಷಣೇ… *****************************.
ಜೀವಾತ್ಮ ಕೊಟ್ರೇಶ್ ಅರಸೀಕೆರೆ ಯಾವುದೋ ಹಕ್ಕಿ ಹಾಕಿರುವ ಈ ಹಿಕ್ಕೆ ಈಗ ಸಸಿಯಾಗಿದೆ! ಉದರಾಂಬರದ ಕಾರಣ ನುಂಗಿ,ನೀರು ಕುಡಿದುದೆಲ್ಲಾ ಏನೆಲ್ಲಾ ಸಕಾರಣಗಳಿಗೆ ಕಾರಣ!! ಜಗಕ್ಕೆ ಬಿದ್ದ ಕಿರಣ,ಮೇಲಿಂದ ಬಿದ್ದ ನೀರ ಬಿಂದು,ಸುಯ್ಯನೇ ಬೀಸುವ ಗಾಳಿ…… ಯಾವ ಯಾವುದಕ್ಕೆ ಸಂಬಂಧ!! ಅಲ್ಲೊಂದು ಜೋಡಿ ಹಕ್ಕಿ, ಇಲ್ಲೊಂದು ಮಿಲನ, ನಳ ನಳಿಸುತ್ತಿರುವ ಹೂ… ಒಂಟಿಯಾಗಿ ಯಾವುದೋ ಶಿಖರ ತೇಲಿ ಹೋಗುತ್ತಿರುವ ಮೋಡಗಳು ಯಾವ ದಂಡಯಾತ್ರೆಗೆ……. ಜೀವ ಇರಲೇಬೇಕಿಲ್ಲ ಚಲನೆಗೆ ಸೃಷ್ಟಿಯ ಸಾರ ಯಾರು ಹೀರಿದ್ದಾರೆ? ಯಾರೋ ಮೇಲೋ ಯಾರ ವಿಜಯ? ಅವನು ಅವಳ ಮೇಲೆ,ಅವಳು ಇವನ… ಬೆತ್ತಲ ದೇಹದ ತರತರ ತಡುಕುವಿಕೆಯಲ್ಲಿ ಕಾಲ… ಹಿಂದಿಲ್ಲ…ಮುಂದಿಲ್ಲ ಬರೀ ಸದ್ದು..ಸಾವು ಜನನ ಜನೇಂದ್ರಿಯ! ದೇಶ,ರಾಜ್ಯ,ರಾಜ ಗಡಿಯಂತೆ…ಉಗಿ ಮುಖಕ್ಕೆ! ಯಾವ ಸಾಮ್ರಾಜ್ಯ ಈ ಗ್ಯಾಲಾಕ್ಸಿಯಲ್ಲಿ ಯಾವ ಪಥ,ಚಲನೆ,ಗಾಳಿ,ಅಣು ಅಣುವೂ ಯಾರೂ ತೋರದ ಮಹಾನ್ ಕಪ್ಪು ಕುಳಿ ಒಂದಷ್ಟು ಉಸಿರು,ಜೀವ… ಸಾಕಷ್ಟೇ.. ಅಹಂಕಾರದ ಬುಗ್ಗೆಗೆ? ಅದಕ್ಕೆ ಇದಿಯೋ ಮರುಳೇ ಮರಳು ಮರಳು..ಮರಳುಗಾಡು ಮರುಳೇ…ಮರುಳ ಜೀವ! ಯಾವ ಹಕ್ಕಿಯ ಹಾಡು ಯಾವ ಹಕ್ಕಿಯ ಹಿಕ್ಕೆ ನಾವೆಲ್ಲಾ….. !! ಆದರೂ ರುಜು ಬೇಕು ಅವಳ ಒಳಗೆ! ನನ್ನದೇ ಜೀವ ಅನ್ನುವ ಚಪಲಕ್ಕೋ….ಅಹಂಕಾರಕ್ಕೋ..!! ಮತ್ತದೇ ಹಕ್ಕಿ,ಹಿಕ್ಕೆ. ನೀರ ಬಿಂದು…ಸರಸರನೇ ಸರಸ…ಜೀವ ಜೀವಾತ್ಮ! ************************************ ಪರಿಚಯ: ಕವಿ,ಸಾಹಿತ್ಯಾಸಕ್ತರು ಅರಸೀಕೆರೆ,ಹಾಸನ ಜಿಲ್ಲೆ
ಶಿಕ್ಷಣದ ಸವಾಲುಗಳ ಬೆಟ್ಟು ಯಾರ ಕಡೆಗೆ? ಶೃತಿ ಮೇಲಿಸೀಮೆ ಶಿಕ್ಷಣ ಎನ್ನುವುದು ಸಾಮಾಜಿಕ ಸಂರಚನೆಯಲ್ಲಿ ಮಹತ್ವದ ಪರಿವರ್ತನೆ ತರುವ ದಿವ್ಯಾಸ್ತ್ರವಾಗಿದೆ. ಈ ಶಿಕ್ಷಣವು ಮುಂದಿನ ಪೀಳಿಗೆಗೆ ಹಿಂದಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಾಸ್ತವಿಕ ಮಾಹಿತಿಗಳನ್ನು ನೀಡುತ್ತಾ, ಯುವ ಪೀಳಿಗೆಯಲ್ಲಿ ಉತ್ತಮ ಆಲೋಚನೆ, ಭಾವನೆ, ನಿರಂತರತೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ಪೂರ್ವ ಭಾರತದಲ್ಲಿ ವಿದ್ಯಾವಂತರಿಗಿಂತ ಹೆಚ್ಚಾಗಿ ಜ್ಞಾನವಂತರು,ಸುಶಿಕ್ಷಿತರು ಇದ್ದರು. ಪ್ರಸ್ತುತ ಎಷ್ಟೇ ಪದವಿಗಳನ್ನು ಹೊತ್ತಿದ್ದರೂ ಅವರು ಪಡೆದ ವಿದ್ಯೆ ಅವರಿಗೆ ವಿನಯವನ್ನು ನೀಡುತ್ತಿಲ್ಲ . ‘ಶಿಕ್ಷಣ’ ಎಂದರೇನು? ಬೀದಿಗೊಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಕಡ್ಡಾಯ ಶಿಕ್ಷಣವೆಂದು ಶಿಕ್ಷಣ ಕಲಿಯುವವರ ಪ್ರಮಾಣ ಹೆಚ್ಚಿಸಿ, ಹಣವನ್ನು ಕಿತ್ತು ಮಾರ್ಕ್ಸ್ ಕಾರ್ಡನಲ್ಲಿ ಡಿಗ್ರಿಗಳನ್ನು ಕೊಟ್ಟು ,ಸಂಬಳಕ್ಕಾಗಿ ವೃತ್ತಿ ಪಡೆಯುವಷ್ಟು ಸಾಕ್ಷರರನ್ನಾಗಿ ಮಾಡುವುದೇ? ಇಲ್ಲಾ ಅಲ್ಲವೇ ? ಯುವ ಪೀಳಿಗೆಯನ್ನು ವಿದ್ಯಾವಂತರಾಗಿಸುವ ಜೊತೆಗೆ ಜ್ವಲಂತ ಸವಾಲುಗಳನ್ನು ಅರಿತು, ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು,ಒದಗಿದ ಸವಾಲುಗಳನ್ನು ಎದುರಿಸಲು ಅನುವಾಗುವ ಸಂರಕ್ಷಣಾತ್ಮಕವಾದ ಜ್ಞಾನವನ್ನೂ, ವಿಚಾರವಂತಿಕೆಯನ್ನು ಬೆಳೆಸುವುದಾಗಿದೆ. ಆಗಿನ ಗುರುಕುಲ ಪದ್ದತಿಯು ಶಿಕ್ಷಣಕ್ಕಿಂತ ಇಂದಿನ ಶಿಕ್ಷಣವು ವ್ಯಾಪಕವಾಗಿ ಬೆಳದಿದೆ. ಈ ವ್ಯಾಪಕತೆ ಅವ್ಯವಸ್ಥಿತವಾಗಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳು ನಮ್ಮೆದುರು ನಾಯಿಕೊಡೆಯಂತೆ ಬೆಳೆಯುತ್ತಿವೆ. ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳಿಗೆ ಸರ್ಜರಿ ಮಾಡಲೇ ಬೇಕಾದ ತುರ್ತು ಇದೆ. ಯಾವುದೇ ಶಾಲೆಯಿರಲಿ ಅಲ್ಲಿರುವ ಮೂಲ ಸೌಲಭ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಲಾಗಿದೆ,ಅವುಗಳ ಬಳಕೆಯನ್ನು ದಿನನಿತ್ಯದ ಬದುಕಲ್ಲಿ ಹೇಗೆ ಮಕ್ಕಳಲ್ಲಿ ರೂಢಿಸಿಕೊಳ್ಳಲಾಗಿದೆ ಎಂಬುದು ಮುಖ್ಯ. ಕೆಲವು ಕಡೆ ಕುಡಿಯುವ ನೀರಿನ ಸೌಲಭ್ಯಗಳಿದ್ದರೂ,ನೀರಿನ ಟ್ಯಾಂಕುಗಳಿದ್ದರೂ,ಅವುಗಳ ಶುದ್ಧತೆ ಎಷ್ಟರಮಟ್ಟಿಗಿದೆ? ಶಾಲೆಗೆ ಕಾಂಪೋಂಡ್ ಇದ್ದರಾಯಿತೇ!? ಆಟದ ಮೈದಾನ ವಿದ್ದರಾಯಿತೇ? ಕೇವಲ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಬೆಟ್ಟು ಮಾಡಿದರೆ ಸಾಲದು ಉಳಿದ ಸೌಲಭ್ಯದ ಬಳಕೆಯ ಮೇಲೂ ಬೆಳಕು ಬೀರಬೇಕಿದೆ. ಶಿಕ್ಷಕರೆಂದರೆ ಸಾಕು ‘ಗಂಟೆ ಹೊಡಿ, ಸಂಬಳ ತಗೋ’ ಎನ್ನುವ ಮಾತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ತಿಳಿಯದು ಆದರೆ ಇಂದಿನ ಶಿಕ್ಷಕ ಸಮುದಾಯವು ಶಿಕ್ಷಣ ನೀಡುವುದನ್ನು ಒಂದು ಸಂಬಳ ದೊರೆಯುವ ಕೆಲಸವನ್ನಾಗಿಯಷ್ಟೇ ಮಾಡುತ್ತಿದ್ದಾರೆ. ಶಿಕ್ಷಕರಾಗುವವರೆಗೆ ಏನೆಲ್ಲಾ ಕಷ್ಟಪಟ್ಟು ಸ್ಪರ್ಧಾತ್ಮಕವಾಗಿ ಓದಿರುತ್ತಾರೆ. ಆದರೆ, ಶಿಕ್ಷಕರಾಗಿ ಸೇರಿದ ನಂತರ ನಮ್ಮ ವಿದ್ಯಾರ್ಥಿಗಳು ಸರಿಯಾಗಿ ಕಲಿಯುತ್ತಿಲ್ಲ, ತುಂಟಾಟ ಜಾಸ್ತಿ, ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಶಾಲೆಯಲ್ಲಿ ಅದು ಇಲ್ಲ ಇದು ಇಲ್ಲ. ಅಬ್ಬಬ್ಬಾ! ಇಂತಹ ಸಾಲು ಸಾಲು ಸಬೂಬುಗಳನ್ನು ನೀಡಿ ತಮ್ಮ ಕರ್ತವ್ಯಗಳಿಂದ ನುಣಿಚಿಕೊಂಡು ತಮ್ಮ ಸುತ್ತಾ ರಕ್ಷಣಾತಂತ್ರ ಹೆಣೆದುಕೊಂಡು ಬಿಡುತ್ತಾರೆ.ಇಂತಹ ಸವಾಲುಗಳನ್ನು ಸ್ವೀಕರಿಸಿ ಮಗುವನ್ನು ಕಲಿಕೆಯಲ್ಲಿ ತೊಡಗುವಂತೆ ಹೇಗೆ ಮಾಡವುದು ಎಂದು ಪ್ರಾಥಮಿಕವಾಗಿಯು ಚಿಂತನೆ ನೆಡೆಸುವುದಿಲ್ಲ. ಇನ್ನೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ತರುವ ಸವಾಲಿನ ಪ್ರಮುಖ ಕಾರಣ ‘ಪೋಷಕರ ನಿರಾಸಕ್ತಿ’ ಆಶ್ಚರ್ಯದಿಂದ ನೋಡದಿರಿ, ಶಾಲೆಗೆ ಕಳಿಸಲು ನಿರಾಸಕ್ತಿಯಂತೆ! ಇಡೀ ಸಮಾಜವೇ, ಬೆಳಗ್ಗೆ ಎದ್ದು ಮಕ್ಕಳಿಗೆ ಸ್ನಾನ ಮಾಡಿಸು, ಸಮವಸ್ತ್ರ ಹಾಕು, ಶಾಲೆಗೆ ಕಳುಹಿಸುವುದೇ ತಮ್ಮ ಬೆಳಗಿನ ಕರ್ತವ್ಯವೆನ್ನುವಂತೆ ಮಾಡುತ್ತಿರುವಾಗ ಪೋಷಕರ ನಿರಾಸಕ್ತಿಗೆ ಸಮಯವೆಲ್ಲಿದೆ ಹೇಳಿ? ಬಡತನ ವಿರಬಹುದು,ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಅವರನ್ನು ವಂಚಿಸುವ ಹಕ್ಕು ಪೋಷಕರಿಗಿಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಮಗುವಿಗೆ ಕಲಿಯಲ್ಲಿ ಆಸಕ್ತಿ ಮೂಡುತಿಲ್ಲ. ‘ಕುದರೆಯನ್ನ ಕೆರೆವರೆಗೂ ಕರೆದುಕೊಂಡು ಬರಬಹುದು ಕೆರೆನೀರು ಕುಡಿಸೋಕೆ ಆಗುತ್ತಾ’,ಹಾಗೆಯೇ ಮಕ್ಕಳನ್ನು ಶಾಲೆಗೆ ಕರೆತರಬಹುದೇ ವಿನಃ ಹೆಚ್ಚಿನ ಆಸ್ಥೆ ವಹಿಸಿ ಶಾಲೆಯಲ್ಲಿ ಆ ಮಗುವನ್ನೇ ನೋಡಿಕೊಳ್ಳುವುದು ಸಾಧ್ಯವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ವೃತ್ತಿ ಆಧಾರಿತವಾದ ಅಥವಾ ಕೌಶಲ್ಯ ಭರಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಒದಗಿಸಿದ್ದೇ ಆದಲ್ಲಿ ಪೋಷಕರಿಗೂ, ಮಕ್ಕಳಿಗೂ ಅಔಪಚಾರಿಕ ಶಿಕ್ಷಣದ ನಿರಾಸಕ್ತಿ ಹೋಗಲಾಡಿಸ ಬಹುದಲ್ಲವೇ? ಎಷ್ಟೋ ಶಿಕ್ಷಕರು ಶಾಲೆಗಳಲ್ಲಿ ನಮಗೆ ಹೆಚ್ಚಿವರಿಯಾಗಿ ಜನಗಣತಿ,ಚುನಾವಣಾ ಕರ್ತವ್ಯ, ಮಗುವಿನ ವಿದ್ಯಾರ್ಥಿ ವೇತನ, ಆಧಾರ್ ಕಾರ್ಡ್, ಪಾಸ್ ಬುಕ್ ಮಾಡಿಸುವುದು ಸಾಲದಕ್ಕೆ ಇಲಾಖೆಗೆ ಮಾಹಿತಿ ನೀಡುವುದು, ವರದಿ ತಯಾರಿಸುವುದು ,ಬಿಸಿಯೂಟ ಹೀಗೆ ಸಮಯದ ವ್ಯರ್ಥವಾಗುತ್ತಿರುವುದರ ಬಗ್ಗೆ ದೂರುಗಳು ನೀಡುತ್ತಿರುತ್ತಾರೆ, ಆದರೇ ಎಷ್ಟು ಜನ ಶಿಕ್ಷಕರು ಶಾಲಾ ಸಮಯವನ್ನು ಶಾಲೆಗಾಗಿ ,ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ? ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆಯೇ? ಶಾಲಾ ವಿಶೇಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆಯೇ? ಪ್ರತಿ ವರ್ಷ ಶೈಕ್ಷಣಿಕ ಪ್ರಗತಿಯ ಬಗ್ಗೆ ಬೊಬ್ಬೆ ಹೊಡೆಯುವರು ತಮ್ಮ ಬೋಧನಾ ಕೌಶಲ್ಯಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆಯೇ? ಎಂಬುದನ್ನೂ ಗಮನಿಸಬೇಕಿದೆ. ಗುಣಮಟ್ಟದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಧಾವಂತದಲ್ಲಿ ದಿನಕ್ಕೊಂದು ಹೊಸ ನಿಯಮಗಳನ್ನು ತರುತ್ತಿರುವುದಲ್ಲದೆ, ಅನಿಯಮಿತ ನೇಮಕಾತಿಯಿಂದಾಗಿ ಎಲ್ಲಾ ಹಂತದಲ್ಲೂ ಭ್ರಷ್ಠತೆಗೆ ಮಣೆ ಹಾಕುತ್ತಿದೆ. ನೇಮಕವಾದ ಶಿಕ್ಷಕರು ವಿಷಯವಾರುವಾಗಿರದೆ ಮಕ್ಕಳ ಅನುಪಾತಕ್ಕೆ ಅನುಗುಣವಾಗಿದೆ.ಸಾಲದಕ್ಕೆ ದೈಹಿಕ ಶಿಕ್ಷಣ, ಕಲಾ ಶಿಕ್ಷಕರು, ಕಂಪ್ಯೂಟರ್ ಶಿಕ್ಷಣ ಇವುಗಳು ಕೇವಲ ಅಂಕಪಟ್ಟಿ ವಹಿಯ ದಾಖಲೆಗೆ ಸೀಮಿತವಾಗಿಯೇ ಉಳಿದಂತಿದ್ದು ಈ ವಿಷಯದ ಶಿಕ್ಷಕರ ನೇಮಕ ಕನ್ನಡಿಯೊಳಗಿನ ಗಂಟಂತಾಗಿದೆ. ಇನ್ನೂ ಶಿಕ್ಷರ ವರ್ಗಾವಣೆ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ,ಸುದ್ದಿಯಲ್ಲಿರುವ ಸಂಗತಿಯಾಗಿದೆ. ನಿರ್ದಿಷ್ಟ ನಿಯಮ ನಿರೂಪಿಸಿ, ನಿಯಮಿತವಾಗಿ ಕ್ರಮಗಳನ್ನು ಕೈಗೊಂಡಿದ್ದೇ ಆದಲ್ಲಿ, ತನು ಮನ ಸಮರ್ಪಣಾ ಭಾವದಿಂದ ಕೆಲವಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ. ಇದೆಲ್ಲದರ ಮಧ್ಯೆ ಮಾಹಿತಿ ತಂತ್ರಜ್ಞಾನದ, ಜಾಗತೀಕರಣದ, ಓಟದ ಜೊತೆ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಣ ವ್ಯವಸ್ಥೆ ಭಾರಕ್ಕೆ ಬಾಗಿದೆ. ಒಟ್ಟಿನಲ್ಲಿ ಶಿಕ್ಷಣ ಎನ್ನುವುದು ಎಲ್ಲಕ್ಕಿಂತ ಭಿನ್ನ ಮತ್ತು ವಿಶಾಲ ವ್ಯಾಪ್ತಿ ಹೊಂದಿರುವ ವ್ಯವಸ್ಥೆ .ಭಾರತದ ಭವಿಷ್ಯ ತರಗತಿ ಕೋಣೆಗಳಲ್ಲಿ ಮೂಲೆಗುಂಪಾಗದೆ, ನ್ಯೂನತೆಗಳೊಂದಿಗೆ ಬೆಳೆದರೂ, ಕೇಸರಲ್ಲಿ ಬೆಳೆದ ಕಮಲದಂತೆ ತನ್ನ ಪ್ರಾಮುಖ್ಯತೆ ಗಳಿಸಿ ಉಳಿಸಿಕೊಳ್ಳಬೇಕಿದೆ. ******************************************************************* ಪರಿಚಯ: ಶೃತಿ ಮೇಲಿಸೀಮೆ, ಹವ್ಯಾಸಿ ಬರಹಗಾರರು. ಗೆಣಿಕೆಹಾಳು( ಪೋಸ್ಟ್), ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ
ಮಲ್ಲಿಗೆ-ಸಂಪಿಗೆ ಅನು ಮಹಾಲಿಂಗ ಅಂಗಳದಿ ಹರಡಿತ್ತು ಹಸಿರಿನ ಮಲ್ಲಿಗೆ ಚಪ್ಪರ ಮಳೆಹೊಯ್ದು ತಂಪಾಗೆ ಸೊಂಪಾದ ಹಂದರ ಬಳ್ಳಿಯ ತುಂಬೆಲ್ಲ ಮಲ್ಲಿಗೆ ಹೂ ರಾಶಿ ಸಂಜೆಗೆ ಕೊಯ್ದರೆ ಮನೆತುಂಬ ಘಮ ಸೂಸಿ ಮನದೊಡೆಯ ತಂದಿರುವನು ಘಂಗುಡುವ ಮಲ್ಲಿಗೆ ನಾರಿಯ ಮುಡಿಯೇರಿ ನಗುತಿರಲು ಮೆಲ್ಲಗೆ ಹಿತ್ತಲ ಮರದಲ್ಲಿ ಬಿರಿದಾಳು ಸಂಪಿಗೆ ಘಮನವಾ ಸೂಸ್ಯಾಳು ಸುತ್ತೆಲ್ಲಾ ಸುಮ್ಮಗೆ ಬಾಲೆಯ ಮನ ಸೆಳೆಯೊ ಗಗನದ ಸಂಪಿಗೆ ಮುಡಿಸೇರಿಸಲು ಪರದಾಟ ಪಕ್ಕದ ಮನೆ ಕೆಂಪನಿಗೆ ಮಲ್ಲಿಗೆ ಸಂಪಿಗೆ ಪ್ರತ್ಯೇಕ ರಾಣಿಯರುಅವರವರ ಕಕ್ಷೆಯಲಿ ಅವರವರೆ ಬೀಗುವರು. ******************************
You cannot copy content of this page