ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಶಕ್ತಿ ಅವ್ಯಕ್ತ ಸೃಷ್ಟಿ-ಸ್ಥಿತಿ-ಲಯ ಗರ್ಭದ ಮುಕ್ತ ರಹಸ್ಯ ರಾಣಿ ನಾ! ಹರಿವ ಜ್ವಾಲಾ ಶಕ್ತಿಯೊಳು ತಂಪೆರೆವ ವಿಮುಕ್ತಿ ನಾ! ಸಖಿ,ಕಾಮಿನಿ, ಧರ್ಮಿಣಿ, ಸಂಹಾರಿಣಿ, ವೈಷ್ಣವಿ ನಾ! ಸುಳಿಗಳೊಳು ಸಿಲುಕದಂತೆ ಗರಿಚಾಚಿ ಹೊಳೆವೆ ನಾ! ಪ್ರೀತಿಯ ಕಾಮನ ಬಿಲ್ಲಲಿ ಕಣ್ಣುಗಳ್ನಲಂಕರಿಸುವೆ, ಸಿಹಿಕನಸಮಳೆಯ ಮೌನ ಮುಗುಳ್ನಗೆಯೋರಳಿಸುವೆ, ಗಂಭೀರ ಮೂಗುತಿಯನ್ನು ಏರಿಸಿ ಕಾಂತಿಯ್ನ್ಹೆಚ್ಚಿಸುವೆ, ಸುಪ್ತ ಜ್ಞಾನ, ಮುಕ್ತ ಪ್ರೇಮ, ನಿರ್ಲಿಪ್ತ ಮನದ ಕುಂಕುಮ ಧರಿಸುವೆ. ವಜ್ರಕಲ್ಲಾಗಿ, ಗುಪ್ತಗಾಮಿನಿಯಾಗುವೆ ಕೇಸರಿದಾರಿಣಿಯಾಗಿಬಿಡುವೆ, ನೋಡದಿರು ಬಿಲೋಳಗಿನ ಆಳದ ಪ್ರೀತಿಯ, ಸವಿಯಲಿಚ್ಚಿಸದ್ದಿದ್ದರೆ.. ಕೇಳದಿರು ಮೌನ ದೇಗುಲದೊಳಿರುವ ಹಾಡ, ಕನಸಕಿನ್ನರನಲ್ಲದಿದ್ದರೆ.. ಮುಟ್ಟದಿರು ಮೂಗುತಿಯ, ಮುಗ್ಧತೆಗೆ ಒಲಿವ ಹರಿಯಾಗದಿದ್ದರೆ.. ಪ್ರೀತಿ, ಪ್ರೇಮ, ಸ್ನೇಹ, ತಾಳ್ಮೆ, ತ್ಯಾಗ, ಜ್ಞಾನ, ಮೌನ.. ಎರಡಕ್ಷರದ ಆಭರಣಗಳೇ ಇಡೆಯಿಂದ ಮುಡಿಗೆ.. ನಗ್ನ ನೋಟಕೆ ಎನ್ನಯ ಶಕ್ತಿಕಾಂತಿಯ ಮೂಲವಾಗಿರಲಿ

ಕಾವ್ಯಯಾನ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು. ಅಮೇರಿಕಾದಿಂದ ಅಶ್ವಥ್ ಅಶ್ವಥ್ ಮೊದಲೇ ಹೇಳಿದಂತೆ, ರಂಗ ತಿಮ್ಮರ ಸಂತೆ ಪ್ರಯಾಣ ನಿಯಮಿತವಾಗಿರುತ್ತಿತ್ತು. ಮೂಟೆಯಲ್ಲಿ ಇರುವ ಪದಾರ್ಥದ ಆಧಾರದ ಮೇಲೆ ನಾಲ್ಕೈದು  ಮಂಡಿಗಳಿಗೆ ಗಾಡಿ ಸಾಗಬೇಕಾಗಿತ್ತು. ಅವುಗಳಲ್ಲಿ ಭತ್ತ, ರಾಗಿ, ತೆಂಗುಗಳದ್ದು ಒಂದೇ ಮಂಡಿ. ಅದು ರಂಗ ತಿಮ್ಮರ ಮೊದಲ ನಿಲ್ದಾಣ, ಆಮೇಲೆ ಬೆಲ್ಲದ ಮಂಡಿ, ನಂತರ ಅಪರೂಪಕ್ಕೊಮ್ಮೆ ಅಡಿಕೆ ಮಂಡಿ. ಇವಿಷ್ಟೂ ರೌಂಡ್ಸ್ ಆದ ಮೇಲೆ ಮನೆಯಿಂದ ತಂದಿರುತ್ತಿದ್ದ ಹುಲ್ಲು ತಿನ್ನುವುದು.  ಗಾಡಿಯ ಕೆಳಭಾಗದಲ್ಲಿ ನೇತುಹಾಕಿರುತ್ತಿದ್ದ ಬಕೆಟ್  ತೆಗೆದು ಸಂತೇಮಾಳದ ಕೈಪಂಪಿನಿಂದ ಹಿಡಿದ (ಕಡೆಗೆ ನಲ್ಲಿಯೂ ಬಂದಿತ್ತೋ ಏನೋ) ನೀರು.  ಇನ್ನು ಮನೆಕಡೆ ಹೊರಡುವುದಕ್ಕಿಂತ ಮೊದಲು ದಿನಸಿ ಅಂಗಡಿಯಲ್ಲಿ ಒಂದು ನಿಲುಗಡೆ, ಕಡಲೇಪುರಿ, ಖರ್ಜೂರ ಸಿಹಿತಿಂಡಿಗಳ ಅಂಗಡಿಯ ಬಳಿ ಮತ್ತೊಂದು ನಿಲುಗಡೆ. ಈ ನಿಲುಗಡೆಗಳೆಲ್ಲ ಕಡ್ಡಾಯವಾಗಿರುವಂತಹವು, ಒಮ್ಮೊಮ್ಮೆ ನಿಲ್ಲಿಸಬೇಕಾದ ಅಗತ್ಯವಿಲ್ಲದಿದ್ದರೂ, ರಂಗ ತಿಮ್ಮರ ಅಭ್ಯಾಸಬಲ ಎಷ್ಟಿತ್ತು ಅಂದರೆ, ಗೌಡಜ್ಜಿಯ ಗಾಡಿ ಅಂಗಡಿ ಮುಂದೆ ನಿಲ್ಲದೇ ಹೋಗುವುದಿಲ್ಲ ಎಂದು ದಿನಸಿ ಅಂಗಡಿಯ ಶೆಟ್ಟರು ಖಡಾಖಂಡಿತವಾಗಿ ಹೇಳುವಷ್ಟು. ಪೇಟೆಯೊಳಗೆ ಮತ್ತು ಸಂತೆಮಾಳದಲ್ಲಿ ಬಸ್ಸು, ಕಾರು ಲಾರಿಗಳ ಮಧ್ಯೆ ಸಂತೆಯ ಜನಜಂಗುಳಿಯಲ್ಲೂ ಸಹ ಯಾರ ಮೇಲ್ವಿಚಾರಣೆಯೂ ಇಲ್ಲದೆ, ಯಾರಿಗೂ ಅಡ್ಡಿಯಾಗದಂತೆ ತಮ್ಮ ಜಾಡನ್ನೇ ಹಿಡಿದು ಸಾಗುವುದು ಅದೆಷ್ಟೋ ಜನರ ಕಣ್ಣಿಗೆ ಆಶ್ಚರ್ಯವೇ ಸರಿ. ಸಂತೆಮಾಳ ಬಿಟ್ಟ ತಕ್ಷಣ, ಮಾವಂದಿರು ಗಾಡಿಯಿಂದ ಇಳಿದು, ರಂಗ ತಿಮ್ಮರನ್ನು ತಮ್ಮ ಪಾಡಿಗೆ ಬಿಟ್ಟು ಊರಿನ ಜನರ ಜೊತೆ ಮಾತನಾಡುತ್ತಾ ಬೇರೆ ಗಾಡಿಗಳಲ್ಲಿ ಬರುತ್ತಿದ್ದರು. ದಿನವೂ ನಾಲ್ಕೂವರೆಗಂಟೆಗೆ ಶಾಲೆ ಮುಗಿದರೂ, ಕತ್ತಲಾಗುವ ತನಕ ಗೆಳೆಯರೊಂದಿಗೆ ಆಡಿಕೊಂಡು ಮನೆ ಸೇರುತ್ತಿದ್ದ ನಾನು, ಮಂಗಳವಾರ ಸಂಜೆ ಆಟದ ನೆನಪೂ ಮಾಡಿಕೊಳ್ಳದೆ ನಮ್ಮನೆಯ ಜಗುಲಿಯ ಮೇಲೆ ಹಾಜರಿರುತ್ತಿದ್ದೆ. ನನ್ನ ಈ ಹಾಜರಿಗೆ ಕಡಲೆಪುರಿ, ಖರ್ಜೂರ, ಸಕ್ಕರೆಅಚ್ಚು, ಬೆಣ್ಣೆಬಿಸ್ಕತ್ತುಗಳು, ಬಾಳೆಹಣ್ಣು ಇರುವ ಚೀಲ ಮುಖ್ಯ ಕಾರಣವಾಗಿದ್ದರೂ, ರಂಗ ತಿಮ್ಮರು ಹದಿನೈದು ಕಿಲೋಮೀಟರು ದೂರದ ಪೇಟೆಯ ಸಂತೆಗೆ ಮಸುಕಿನಲ್ಲಿ ಗಾಡಿಯ ಹೊರೆ ಎಳೆದು ಹೋಗಿ ಮತ್ತೆ ಗೋಧೂಳಿಯ ಹೊತ್ತಿಗೆ ಗಾಡಿಯನ್ನು ಮನೆ ಬಾಗಿಲು ಮುಂದೆ ತಂದು ನಿಲ್ಲಿಸಿ ಬಾಲ ಅಲ್ಲಾಡಿಸುವ ಅವುಗಳ ಹುರುಪು ನೋಡುವುದೇ ಒಂದು ಖುಷಿ. ಸಂತೆಗೆ ಗಾಡಿ ಹೋಗದಿದ್ದ ವಾರವೂ ಸಹ ನಾನು ರಂಗ ತಿಮ್ಮರ ಬರುವಿಕೆಗಾಗಿ ಕಾದಿದ್ದಿದೆ… ರಂಗತಿಮ್ಮರು ಪೇಟೆಯ ರಸ್ತೆಯಿಂದ ಬರದೇ, ಹಿತ್ತಿಲಿನಿಂದ ತಾತ ಹಿಡಿದುಕೊಂಡು ಬರುತ್ತಿದ್ದರೆ, ಗಾಡಿ ನಿಲ್ಲಿಸುತ್ತಿದ್ದ ಮಾಡಿನ ಹತ್ತಿರ ಹೋಗಿ ನೋಡುತ್ತಿದ್ದೆ. ಓಹ್! ಇವತ್ತು ಸಂತೆಗೆ ರಜಾ ಅಂತ ಬೇಸರವಾಗುತ್ತಿತ್ತು. ರಂಗ ತಿಮ್ಮ ಇಬ್ಬರೂ ನಮ್ಮ ಮನೆಯವರ, ಅದರಲ್ಲೂ ತಾತನ ಧ್ವನಿಯನ್ನು ಸಂತೆಯ ಗದ್ದಲದ ಒಳಗೂ ಗುರುತಿಸುತ್ತಿದ್ದವು.  ಇನ್ನು ನಾನು ಹುಟ್ಟಿಬೆಳೆದ ಮನೆಯನ್ನು ನಾನು ಹುಟ್ಟುವುದಕ್ಕಿಂತ ಒಂದೆರಡು ವರ್ಷಗಳ ಮೊದಲು ಕಟ್ಟಿದ್ದು.  ಆ ಮನೆಕಟ್ಟಲು ಮಣ್ಣು ಹೊತ್ತಿದ್ದು, ನೀರು ಹೇರಿ ತಂದಿದ್ದು,  ಮರಮಟ್ಟು ಸಾಗಿಸಿದ್ದು, ಪೇಟೆಯಿಂದ ಹೆಂಚು ಸಾಗಿಸಿದ್ದು ಈ ರಂಗ ತಿಮ್ಮರೇ. ಮಂಗಳೂರು ಹೆಂಚಿನ ನನ್ನ ತಾತನ ಹೊಸಮನೆಯ ಗೋಡೆ ಹೆಂಚುಗಳಿಗೆ ರಂಗ ತಿಮ್ಮರ ದುಡಿಮೆ ಸದಾ ಅಂಟಿಕೊಂಡಿದೆ. ನಾನು ರಂಗ ತಿಮ್ಮರನ್ನು ನೋಡಿದ ಅಷ್ಟೂ ದಿನಗಳಲ್ಲಿ ಕೆಲಸ ಮಾಡಿ ಅವುಗಳು ಬಳಲಿರುವ ದಿನಗಳೇ ಇರಲಿಲ್ಲ. ದುಡಿಮೆ ಅಂದರೆ ಅವುಗಳಿಗೆ ಉಸಿರಾಡುವಷ್ಟು, ಮೇವುತಿನ್ನುವಷ್ಟು ಸಲೀಸು. ಮುಂಗಾರಿನ ಬಿರುಸಾದ ಅಡ್ಡಮಳೆಯಿಂದ ಹಿಡಿದು ಭಾದ್ರಪದದ ಸೋನೆಮಳೆಯೂ ರಂಗ ತಿಮ್ಮರನ್ನು ನೆನೆಯಿಸುತ್ತಿರಲಿಲ್ಲ. ಬೇಸಿಗೆಯ ಜಳಜಳ ಬಿಸಿಲು ಅವುಗಳನ್ನು ಎಂದೂ ಒಣಗಿಸಿರಲಿಲ್ಲ. ಹತ್ತಾರು ಎಕರೆ ಹೊಲ, ಗದ್ದೆ ತೋಟಗಳನ್ನು ಉಳುಮೆ ಮಾಡಿ ಹದಗೊಳಿಸಿದವು ಅವು. ಅವುಗಳ ಹುರುಪಿನ ದುಡಿಮೆಗೆ ತಕ್ಕಂತೆ ಬಂದ ಫಸಲನ್ನು ಅಷ್ಟೇ ಶ್ರಮದಿಂದ ಕಣಕ್ಕೆ ಸಾಗಿಸುತ್ತಿದ್ದವು. ಅದೇ ಪಸಲನ್ನು ವಾರಕ್ಕೊಮ್ಮೆ ಸರದಿಯಲ್ಲಿ ಪೇಟೆಗೆ ಹೊತ್ತು, ಸಂತೆಯನ್ನೂ ಸುತ್ತಿ ಮನೆಗೆ ಉಪ್ಪು, ಎಣ್ಣೆಯಾದಿಯಾಗಿ ದಿನಸಿಯನ್ನು ಸಾಗಿಸುತ್ತಿದ್ದವು. ನನ್ನ ಇಡೀ ಬಾಲ್ಯ ಅವುಗಳ ಮುಂದೆ ಕಳೆಯಿತು… ಅವುಗಳು ಬೆಳೆಯುತ್ತಿದ್ದ ಕರುಗಳಾಗಿದ್ದಾಗಿನ ದಿನಗಳ ತುಂಟಾಟದ ಸಂದರ್ಭಗಳನ್ನೂ ತಾತ, ಅಕ್ಕಪಕ್ಕದ ಮನೆಯವರು, ಮತ್ತು ಊರಿನವರೂ ಹೇಳುತ್ತಿರುತ್ತಿದ್ದರು. ರಂಗ ಹುಟ್ಟಿದಾಗಿನಿಂದ ಕಡೆಯವರೆಗೂ ಮನೆಯವನಂತೆಯೇ ಆಗಿತ್ತು. ತಿಮ್ಮ ಬೇರೆಮನೆಯಲ್ಲಿ ಹುಟ್ಟಿ ನಂತರ ರಂಗನ ಜೊತೆಯಾದರೂ ರಂಗನಷ್ಟೇ ಮನೆಯ ಸ್ವಂತದವನಂತೆ ಇತ್ತು. ಅವುಗಳ ಆಯಸ್ಸೇ ಕಡಿಮೆ… ಇಪ್ಪತ್ತು ವರ್ಷ. ಅವು ಇದ್ದ ಅಷ್ಟೂ ದಿನಗಳಲ್ಲಿ ಅವುಗಳಿಗೆ ಬದುಕಲು ಬೇಕಾಗಿದ್ದು, ಮುಂಗಾರಿನಲ್ಲಿ ಹೊಲದ ಬದುವಿನ ಹಸಿರು ಹುಲ್ಲು, ಬೇಸಿಗೆಯಲ್ಲಿ ಬಣವೆಯಲ್ಲಿನ ಒಣಹುಲ್ಲು ಜೊತೆಗೆ ದಿನದ ಮೂರು ಹೊತ್ತು ಕೆರೆಯ ನೀರು ಅಥವಾ ಕಲಗಚ್ಚು. ಗದ್ದೆನಾಟಿಯ ಸಮಯದಲ್ಲಿ ಕಡಲೆಹಿಂಡಿ, ಬೇಯಿಸಿದ ಹುರುಳಿ. ಅದೇ ಅವುಗಳಿಗೆ ಮೃಷ್ಟಾನ್ನ. ನಾನು ಬೆಳೆಯುತ್ತಿರುವಂತೇ ರಂಗ ತಿಮ್ಮರಿಗೆ ಮುದಿತನ ಆವರಿಸುತ್ತಿತ್ತು. ಇನ್ನು ಇವುಗಳಿಂದ ಕೆಲಸ ಆಗುವುದಿಲ್ಲ ಮಾರಿಬಿಡುವುದು ಒಳ್ಳೆಯದು ಎಂದು ಕೆಲವರ ಅಭಿಪ್ರಾಯ… ಅಷ್ಟು ಸಾಲದು ಅಂತ ತಿಮ್ಮ ಮನೆಯಲ್ಲೇ ಒಬ್ಬರ ಕೆಂಗಣ್ಣಿಗೆ ಗುರಿಯಾದ. ಅದೇನು ಕೇಳಿಸಿತೋ, ಯಾವುದಕ್ಕೆ ಗಾಬರಿಯೋ, ಬದುವಿನಲ್ಲಿ ಮೇಯುವಾಗ, ಇದ್ದಕ್ಕಿದ್ದಂತೆ ಹರಿಹಾಯ್ದಿತೆನ್ನುವ ಒಂದು ಕಾರಣ. ತಿಮ್ಮನಿಗೆ ವಯಸ್ಸಾಗುತ್ತಿದ್ದರೂ ತನ್ನ ಸ್ವಭಾವ ಬದಲಾಗಿರಲಿಲ್ಲ.  ಆದರೂ ಮಾರಲು ಒಂದೋ ಅಥವಾ ಎರಡೋ ಪ್ರಯತ್ನ ನಡೆಸಿದ ತಾತ ಮಾರಲು ಮನಸ್ಸು ಮಾಡದೇ ಸೋತು ಸುಮ್ಮನಿದ್ದರು. ಅವತ್ತೊಂದು ದಿನ, ಅದು ಯಾವ ದಿನ ಎನ್ನುವುದು ನೆನಪಿಲ್ಲ.  ರಂಗನಿಗೆ ಒಂದೆರಡು ದಿನದಿಂದ ಹುಷಾರಿರಲಿಲ್ಲ.  ವಯಸ್ಸಾಗಿದೆಯಲ್ಲ, ಅದಕ್ಕೇ ಹಾಗಾಗಿದೆ,  ಸರಿಹೋಗುತ್ತೆ ಅಂತಲೋ ಏನೋ, ಮದ್ದು ಏನೂ ಕೊಟ್ಟಿರಲಿಲ್ಲ. ಎಂದಿನಂತೆ ಕೊಟ್ಟಿಗೆಯಿಂದ ಮನೆ ಮುಂಭಾಗಕ್ಕೆ ತಂದು ಬಳಪದ ಕಲ್ಲಿಗೆ ಕಟ್ಟಿದ್ದರು. ನಾನು ಶಾಲೆಗೆ ಹೊರಡುವಾಗ ರಂಗ ಮಲಗಿದ್ದಂತೆ ನೆನಪು. ಮಧ್ಯಾಹ್ನ ಊಟಕ್ಕೆ ಮನೆಗೆ ಬರಬೇಕಾಗಿದ್ದರೂ, ನಾನು ಅಪರೂಪಕ್ಕೆ ಮನೆಗೆ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದುದು. ಮಿಕ್ಕಂತೆಲ್ಲಾ ಬೆಳಿಗ್ಗೆ ರೊಟ್ಟಿ ತಿನ್ನುವಾಗಲೇ ಒಂದಿಷ್ಟು ಮಿಕ್ಕಿಸಿ ಪುಸ್ತಕದ ಮಧ್ಯೆ ಇಟ್ಟು ಓಡುತ್ತಿದ್ದೆ. ಊಟದ ಬಿಡುವಿನಲ್ಲಿ ಕಳ್ಳಾ-ಪೊಲೀಸು, ಲಗೋರಿ, ಗದ್ದೆಕೊಯ್ಲಿನ ಸಮಯವಾದರೆ ಶಾಲೆಯ ಪಕ್ಕದ ಕಣಗಳಲ್ಲಿ ಇರುತ್ತಿದ್ದ ಬಣವೆಗಳ ನಡುವೆ ಕಣ್ಣಾಮುಚ್ಚಾಲೆ ಹೀಗೆ ತರಹೇವಾರಿ ಆಟಗಳು. ಮಧ್ಯಾಹ್ನದ ಶಾಲೆ ಮುಗಿದು ನಾಲ್ಕೂವರೆ ನಂತರದಿಂದ ಕತ್ತಲಾಗುವ ತನಕ ಮತ್ತೆ ಆಟ. ಅವತ್ತೂ ಹಾಗೇ ಮಾಡಿದ್ದೆ. ಶಾಲೆ ಬಿಟ್ಟ ನಂತರ ಮಾಮೂಲಿನಂತೆ ನನ್ನ ಆಟ…  ಆಮೇಲೆ ಮನೆಗೆ ಬಂದೆ. ಕತ್ತಲಾಗಿತ್ತು. ಮನೆಯವರೆಲ್ಲರೂ ಒಂದು ರೀತಿ ಮೌನವಾಗಿದ್ದರು… ಎಂದಿನ ಲವಲವಿಕೆಯಿಲ್ಲ. ಅಮ್ಮ (ಅಜ್ಜಿ) ಊಟ ಮಾಡಲು ಕೂರದೇ ಏನೋ ಗೊಣಗುತ್ತಿದ್ದರಿಂದ, ಈ ಬಣಗುಡುವ ರಾತ್ರಿಗೆ ಕಾರಣವೇನಿರಬಹುದು ಅಂತ ಅಮ್ಮನನ್ನೇ ದಿಟ್ಟಿಸಿದೆ. “ಅಷ್ಟೊರ್ಷ  ಕಲ್ಲುಬಂಡೆಯಂಗಿದ್ದ ಎತ್ತಿಗೆ ಮೂರೇ ದಿನಕ್ಕೆ ಹಿಂಗಾಯ್ತಲ್ಲ. ಏನೋ, ಅತ್ಲಾಗಿ ಕೊರಗದಂತೆ ಜೀವ ಹೋಯ್ತು” ಅಂದರು.  ಆಗ ಅಡುಗೆಮನೆಯಿಂದ ಕೊಟ್ಟಿಗೆಗೆ ಒಂದು ಸಣ್ಣ ಕಿಟಕಿಯಿತ್ತು.  ನಾನಿನ್ನೂ ಅದನ್ನು ಇಣುಕುವಷ್ಟು ಎತ್ತರ ಬೆಳೆದಿರಲಿಲ್ಲ. ಅಲ್ಲೇ ಇದ್ದ ಸ್ಟೂಲ್ ಎಳೆದು ಅಂತೂ ಇಣುಕಿಯೇಬಿಟ್ಟೆ.  ತಿಮ್ಮ ಒಂದೇ ನಿಂತಿತ್ತು.  ಅದುವರೆಗೆ ಹುಷಾರಿಲ್ಲದಿದ್ದರೂ ಸಹ ಕೊಟ್ಟಿಗೆಯಲ್ಲೇ ಪಕ್ಕದಲ್ಲಿರುತ್ತಿದ್ದ ರಂಗ ಇರಲಿಲ್ಲ. ಜಾಗ ಅಗಲವಾಗಿದ್ದರಿಂದ ತಿಮ್ಮ ಹಿಂದಿನ ಕಾಲನ್ನು ಅತ್ತಿಂದಿತ್ತ ಅಡ್ಡ ಎಸೆಯುತ್ತಾ, ತೆರವು ಮಾಡಿದ್ದ ರಂಗನ ಜಾಗವನ್ನು ಕಾಯ್ದಿರಿಸುವವನಂತೆ ಕಾಣುತ್ತಿತ್ತು. ಮನೆಯವರ ಮೌನದೊಳಗೆ ನಾನೂ ಮುಳುಗಿಹೋದೆ. ನೆಪಕ್ಕೆ ಅನ್ನುವಂತೆ ಊಟಮಾಡಿ ದೀಪ ಆರಿಸಿದೆವು. ಬೆಳಗಾಗುತ್ತಲೇ ಹೊರಗೆ ಹೋಗಿ ಗಮನಿಸಿದೆ.  ಹಿಂದಿನ ದಿನ ರಂಗನನ್ನು ಕಟ್ಟಿದ್ದ ಬಳಪದಕಲ್ಲಿನ ಪಕ್ಕ ಒಂದಿಷ್ಟು ಕುಂಕುಮ, ಕೆಲವು ಅಗರಬತ್ತಿ ತುಂಡುಗಳು, ಹಿತ್ತಲಿನ ಹೂವಿನ ಗಿಡದ ಒಂದಿಷ್ಟು ಬಾಡಿದ ಹೂವುಗಳು. ಇದಾದ ಒಂದು ವಾರದಷ್ಟು ಸಮಯದಲ್ಲಿ ತಿಮ್ಮನ ಒಂಟಿತನ ತಾತನ ಗಮನಕ್ಕೆ ಬಂತು. ನೋಡಕಾಗಲ್ಲ ಮಾರಿಬಿಡು ಅತ್ಲಾಗಿ ಅಂತ ಬೇಸರದಿಂದಲೇ ಹೇಳಿ ಸಂತೆಗೆ ಒಂಟಿತಿಮ್ಮನನ್ನು ಹೊರೆಯನ್ನೇನೂ ಹೊರಿಸದೇ ಕರೆದೊಯ್ದಿದ್ದರು. ಈಗ ಅವುಗಳು ಇಲ್ಲವಾಗಿ ಇಪ್ಪತ್ತು ವರ್ಷಗಳೇ ಕಳೆದಿವೆ. ಇದರ ನಡುವೆ ಜೀವನಚಕ್ರ ಎಷ್ಟೋ ದೂರ ಉರುಳಿದೆ. ತಾತನ ಮನೆಯಲ್ಲಿ ನಾನೇ ಮೊದಲ ಮೊಮ್ಮಗ.  ಅದು ಅಕ್ಕನ(ತಾಯಿ) ತವರಾಗಿದ್ದರೂ, ನಾನು ಅಪ್ಪನ ಮನೆಯನ್ನು ಅಪ್ಪನ ಮನೆ ಎಂದಷ್ಟೇ ನೆನಪಿಸಿಕೊಳ್ಳುವೆನೇ ವಿನಃ, ಬಾಲ್ಯದ ನನ್ನ ಮನೆ ಅಂದರೆ ಈ ರಂಗ ತಿಮ್ಮರ  ಹೆಜ್ಜೆಯ, ಕೊರಳಿನ ಗೆಜ್ಜೆಯ ಸದ್ದು ಇದ್ದ ಮನೆಯೇ. ಅಲ್ಲಿ ಇದ್ದಷ್ಟೂ ದಿನ ಜೀವನದ ಬಿಸಿಲೇ ತಾಕಿರಲಿಲ್ಲ. ರಂಗ ತಿಮ್ಮರಿರುವ ಅಷ್ಟೂ ದಿನ ಮನೆಯಲ್ಲಿ ಸಮೃದ್ಧಿಯಿತ್ತು. ಹೊಸ ಮನೆಯೂ ಆಗಿತ್ತು. ಸುತ್ತಲವರು ಮೆಚ್ಚುವಷ್ಟು ಬೆಳೆಯೂ ಬರುತ್ತಿತ್ತು. ಮನೆಗೆ ಹೋಗಿಬರುವವರು, ನೆಂಟರಿಷ್ಟರು ಅದೆಷ್ಟೋ. ಹಬ್ಬದ ದಿನಗಳು ನಿಜವಾಗಿಯೂ ವಿಶೇಷವಾಗಿರುತ್ತಿದ್ದವು. ಇದೆಲ್ಲದರ ಹಿಂದೆ ಮನೆಯ ಸದಸ್ಯರ ಶ್ರಮ ಇದ್ದರೂ, ಅದಕ್ಕೆ ರಂಗ ತಿಮ್ಮನ ಪಾತ್ರವನ್ನು ಅಳೆಯುವುದಕ್ಕೆ ಸೇರು ಬಳ್ಳಗಳಿಂದಾಗಲಿ, ಮಾರು ಮೊಳಗಳಿಂದಾಗಲಿ, ಮೀಟರು ಕಡ್ಡಿಗಳಿಂದಾಗಲೀ ಸಾಧ್ಯವಿರಲಿಲ್ಲ.  ರಂಗ ತಿಮ್ಮರ ಕತೆ ಹದಿನೈದು-ಹದಿನೆಂಟು ವರ್ಷಗಳಲ್ಲಿ ನಡೆದ ಒಂದು ಮಿನಿ ಮಹಾಭಾರತವೇ ಹೌದು! ರಂಗ ತಿಮ್ಮರಿದ್ದ ಆ ನನ್ನ ಮನೆ ಸಣ್ಣದೊಂದು ನಂದನವನದಂತೆ ಇತ್ತು. ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಾರಲ್ಲ, ‘ಬೆಳಕೀವ ಸೂರ್ಯಚಂದ್ರರದೊಂದೂ ಸದ್ದಿಲ್ಲ’ ಎನ್ನುವಂತೆ  ರಂಗ ತಿಮ್ಮ ಇಬ್ಬರೂ ತಮ್ಮ ಸ್ನಾಯುಶಕ್ತಿಯ ಶ್ರಮದಿಂದಲೇ ಮನೆಗೆ ಬೆಳಕನಿತ್ತು, ಸದ್ದಿಲ್ಲದೇ ಸರಿದುಹೋದರು. ಈಗ ಇವುಗಳ ನೆನಪು ಬಾಯಾರಿದ ಗಂಟಲಿಗೆ ಸಿಹಿನೀರಿದ್ದಂತೆ! ನಾನು ಕಲಾವಿದನಾಗಿದ್ದರೆ, ಮೊನ್ನೆಯ ಕನಸಿನಲ್ಲಿ ದುರುಗುಟ್ಟು ನೋಡುತ್ತಿದ್ದ ತಿಮ್ಮನ ಆ ಕಣ್ಣುಗಳನ್ನು ಅಚ್ಚುಒತ್ತಿದ ಹಾಗೆ ಬಿಡಿಸಿರುತ್ತಿದ್ದೆ! ******

ಹೊತ್ತಾರೆ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು ಡಾ.ಸಣ್ಣರಾಮ ಹಿಂದಿನ ಸಂಚಿಕೆಯಿಂದ——— ಇಂದಿನ ಆಧುನಿಕ ಮಹಿಳಾವಾದಿಗಳು ಹೆಣ್ಣು ತನ್ನ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಪುರುಷ ದೌರ್ಜನ್ಯದಿಂದ ಪೂರ್ಣ ವಿಮುಕ್ತಿ ಪಡೆಯಬಹುದು ಎಂದು ಹೇಳುತ್ತಾರೆ. ಈ ತತ್ವವನ್ನು 12ನೇ ಶತಮಾನದಷ್ಟು ಹಿಂದೆ ಅಕ್ಕ ಹೇಳಿದ್ದಾಳೆ ಎಂಬುವುದನ್ನು ಮಹಿಳಾವಾದಿಗಳು ಗಮನಿಸಬೇಕು. ಅಕ್ಕನ ಬದುಕೆ ಇಂದಿನ ಮಹಿಳಾವಾದಕ್ಕೆ ಮೂಲ ಪ್ರೇರಣೆಯಾಗಬಲ್ಲದು. ಕದಳಿ ಎಂಬುದು ವಿಷಂಗಳು ಕದಳಿ ಎಂಬುದು ಭವ ಘೋರಾರಣ್ಯ ಈ ಕದಳಿ ಎಂಬುದು ಗೆದ್ದು ತಾವೆ ಬದುಕಿ ಬಂದು ಕದಳಿ ಬನದಲ್ಲಿ ಭವಹರನ ಕಂಡೆನು ಭವಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿದಪ್ಪಿದಡೆ ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು- ಈ ವಚನ ಅಕ್ಕನ ಪ್ರೌಢಮೆಗೆ, ಪ್ರಬುದ್ಧ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ಕೆದಕಿದಷ್ಟು ಅರ್ಥವನ್ನು ಹಿಡಿ ಹಿಡಿಯಾಗಿ ಸಹೃದಯರಿಗೆ ಉಣಬಡಿಸುತ್ತದೆ. “ಕದಳಿ” ಎಂಬ ಪದವನ್ನು ಎಷ್ಟು ಅರ್ಥದಲ್ಲಿ ಬಳಸಿದ್ದಾಳೆಂಬುದು ಗ್ರಹಿಕೆಗೆ ಸಿಕ್ಕರೆ ಭಾಷಾ ಪಂಡಿತರು ಬೆಕ್ಕಸ ಬೆರಗಾಗುತ್ತಾರೆ. ತನು, ಮನ, ಸಂಸಾರ, ಲೌಕಿಕ ಬದುಕು ಮೃದುಭಾವ ಮೊದಲಾದ ಅರ್ಥದಲ್ಲಿ ಕದಳಿ ಎಂಬ ಪದ ಬಳಕೆಯಾಗಿದೆ. ಈ ಸಂಸಾರವೆಂಬ ಘೋರ ಅರಣ್ಯವನ್ನು ಜಯಿಸಲು “ಕದಳಿ” ತನುಬೇಕು. ತನುವಿಲ್ಲದೆ ಪೂರ್ಣ ತತ್ವ ಲಭಿಸುವುದಿಲ್ಲ. ಕದಳಿ ತನುವಿನಿಂದ ಪೂರ್ಣ ತತ್ವವನ್ನು ಇಹದಲ್ಲಿ ಸಾಧಿಸಿದವರು ಪರದಲ್ಲಿ ಪೂರ್ಣವನ್ನು ಪಡೆಯುತ್ತಾರೆ. ಪೂರ್ಣದಲ್ಲಿ ಪೂರ್ಣವು ಸೇರಿದರೆ ಉಳಿಯುವುದು ಬಯಲು. ಈ ಬಗೆಯ ಅದ್ಭುತ ತತ್ವವನ್ನು ಸರಳ ಪದಗಳಲ್ಲಿ ನಿರ್ವಚಿಸಿರುವ ರೀತಿ ಅಪೂರ್ವವಾದುದು. ಪ್ರಾಚೀನ ಕಾಲದಲ್ಲಿಯೂ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಮಾನ್ಯತೆಯನ್ನು ಪಡೆದಿದ್ದರೆಂಬುದಕ್ಕೆ ನಿಕತ್ತಾ, ಸಾಸ್ವತಿ, ಮೈತ್ರೇಯಿ, ಗಾರ್ಗಿ, ಅಪಲಾ, ಯಯಾಂತ ಇವರು ನಿದರ್ಶನರಾಗಿದ್ದಾರೆ. ಶರಣೆ ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾವಾದಿಯಂತೆ ಮೊದಲ ಕವಿಯಿತ್ರಿಯೂ ಹೌದು. ಹತ್ತನೆ ಶತಮಾನದಲ್ಲಿ ಕೆಲವು ಸಾಲುಗಳ ಬರವಣಿಗೆ ಇದೆ ಎಂದು ಹೇಳಲಾಗುತ್ತಿರುವ “ಕಂತಿ” ಎಂಬುವಳನ್ನು ಹೊರತು ಪಡಿಸಿದರೆ 354 ವಚನಗಳನ್ನು “ಯೋಗಾಂಗ ತ್ರಿವಿಧಿ”, “ಸೃಷ್ಟಿಯ ವಚನ”, “ಮಂತ್ರ ಗೋಪ್ಯ” ಎಂಬ ಕೃತಿಗಳನ್ನು ರಚಿಸಿದ ಮಹಾದೇವಿ ಅಕ್ಕ ಬರೆದಿದ್ದಾಳೆ. ಅಕ್ಕನ ವಚನಗಳಲ್ಲಿ ತತ್ವವಿದೆ, ಸತ್ವವಿದೆ, ವೇದನೆಯಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅಕ್ಕನ ಕೊಡುಗೆ ಶ್ಲಾಘನೀಯ. ಅಕ್ಕಮಹಾದೇವಿಯ ವಚನದ ಮಹೋನ್ನತಿಯನ್ನು ಕುರಿತಂತೆ ಚನ್ನಬಸವಣ್ಣನವರು ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನಸಂಗಮದೇವಾ ಮಹದೇವಿಯಕ್ಕನ ಒಂದು ವಚನ ನಿರ್ವಚನ-ಎಂದಿದ್ದಾನೆ. ಅಕ್ಕಮಹಾದೇವಿಯ ವಚನ, ಅನುಭವ ಸಂಪತ್ತು ಅಷ್ಟು ಘನವಾಗಿತ್ತು. ಎಲ್ಲಾ ಆದ್ಯರ, ಹಿರಿಯರ ವಚನಗಳ ಸತ್ವವನ್ನು ಮೀರಿ ನಿಲ್ಲಬಲ್ಲವಾಗಿದ್ದಾವೆ ಎಂದು ಸಾಕ್ಷಿಕರಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಸತ್ಯಕ್ಕ: ಶರಣರ ಕ್ರಾಂತಿಗೆ ಶಕ್ತಿ ತುಂಬಿದ, ಅಲ್ಲಮ ಪ್ರಭುದೇವ ಮತ್ತು ಅಕ್ಕಮಹಾದೇವಿಯು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಜಿಲ್ಲೆಯ ಕೀರ್ತಿಯ ಕಿಡಿಯನ್ನು ಇಲ್ಲಿಂದಲೇ ಗುರುತಿಸಬಹುದಾಗಿದೆ. ಇವರೊಂದಿಗೆ ಶರಣೆ ಸತ್ಯಕ್ಕ ಸಹ ಶಿವಮೊಗ್ಗ ಜಿಲ್ಲೆಯ ಶರಣ ಚಳುವಳಿಯ ಕ್ರಾಂತಿಯ ಕಿಡಿ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸಮೀಪದ ಹಿರೇಜಂಬೂರು ಸತ್ಯಕ್ಕಳ ಜನ್ಮಸ್ಥಳ. ಸತ್ಯಕ್ಕ ಜನಪದ ಸಾಹಿತ್ಯದಲ್ಲಿ ಪ್ರವೀಣೆಯಾಗಿ ವಚನಗಾರ್ತಿಯು ಆಗಿದ್ದಳು. ಇವಳ ಕಾಯಕ, ನಿಷ್ಠೆ, ಭಕ್ತಿಯ ಪರಕಾಷ್ಠೆ ಆ ಕಾಲದಲ್ಲಿ ಮನೆಮಾತಾಗಿತ್ತು. ಶಿವಭಕ್ತರ ಮನೆಯ ಅಂಗಳ ಗುಡಿಸುವ ಕಾಯಕ ಇವಳದಾಗಿತ್ತು. ಈ ಕಾಯಕದಲ್ಲಿಯೇ ದೇವರನ್ನು ಕಂಡವಳು ಶಿವ ಶರಣೆ ಸತ್ಯಕ್ಕ. ಶಿವನ್ನಲ್ಲದೆ ಅನ್ಯ ದೈವವನ್ನು ಪೂಜಿಸುವುದಿಲ್ಲ. ಶಿವನ್ನಲ್ಲದೇ ಅನ್ಯ ದೈವದ ಶಬ್ಧವನ್ನು ಕೇಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಕಟ್ಟಾ ಶಿವಭಕ್ತೆ. ಅಂತೆಯೇ ತನ್ನ ಪ್ರತಿಜ್ಞೆಯನ್ನು ಪಾಲಿಸುತ್ತಾ ಬಂದವಳು. ಒಮ್ಮೆ ಶಿವನು ವೃದ್ಧ ಭಿಕ್ಷುಕನ ರೂಪದಲ್ಲಿ ಸತ್ಯಕ್ಕನ ಶಿವನಿಷ್ಠೆಯನ್ನು ಪರೀಕ್ಷಿಸಲು ಬರುತ್ತಾನಂತೆ. ಸತ್ಯಕ್ಕ ಬಿಕ್ಷೆ ಹಾಕಿದಾಗ ಹರಿದ ಜೋಳಿಗೆಯಿಂದ ಹಾಕಿದ ಬಿಕ್ಷೆಯು ನೆಲದಲ್ಲಿ ಚೆಲ್ಲುತ್ತದೆ. ಬಿಕ್ಷುಕ ರೂಪದ ಶಿವನು “ಅಯ್ಯೋ ಹರಿದ ಹರಿಯಿಂದ ಕಾಳು ಹರಿದು ಹೋಯ್ತು” ಎಂದು ಉದ್ಗರಿಸುತ್ತಾರೆೆ. ಹರಿ ಎಂಬ ಶಬ್ಧ ಕಿವಿಗೆ ಬೀಳುತ್ತಲೇ ಸಿಟ್ಟಾದ ಸತ್ಯಕ್ಕ ಸಿಟ್ಟಾಗಿ ಕೈಯಲ್ಲಿದ್ದ ಸಟ್ಟುಗದಿಂದ ಶಿವನನ್ನೇ ಹೊಡೆದಳೆಂದು ಐತಿಹ್ಯವಿದೆ. ಅಷ್ಟರ ಮಟ್ಟಿಗೆ ಶಿವಭಕ್ತೆಯಾಗಿದ್ದಳು. ಸತ್ಯಕ್ಕನ ಒಟ್ಟು 29 ವಚನಗಳು ದೊರೆತಿವೆ. ಶಂಬುಜಕೇಶ್ವರ ಎಂಬುದು ಅವಳ ಅಂಕಿತನಾಮ. ಜಂಬೂರಿನಲ್ಲಿ ಶಂಬುಕೇಶ್ವರ ಎಂಬ ದೇವರಿದ್ದಾರೆ. ಈ ಶಂಬುಕೇಶ್ವರ ದೇವರ ನಾಮವನ್ನೆ ಸತ್ಯಕ್ಕನ ತನ್ನ ಅಂಕಿತದಲ್ಲಿಟ್ಟುಕೊಂಡಿರಬೇಕು. ಅದು ವ್ಯತ್ಯಾಸವಾಗಿ ಶಂಬುಜಕೇಶ್ವರ ಆಗಿರಬೇಕೆಂಬುದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ತಳ ಸಮುದಾಯದ ಸತ್ಯಕ್ಕನ ವಚನಗಳಲ್ಲಿ ಅಪರೂಪದ ತತ್ವಗಳು ತುಂಬಿವೆ. ಸತಿ-ಪತಿಭಾವ, ಸಮರ್ಪಣಭಾವ, ಶಿವನಿಷ್ಠೆಗಳು ಸರಳವಾದ ಭಾಷೆಯಲ್ಲಿ ಮೈದುಂಬಿ ನಿಂತಿವೆ. ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಾಮಾಣಿಸಲಿಲ್ಲ ಕಾಸೆ ಮಿಸೆ ಕಠಾರವಿದ್ದುದೆ ಗಂಡೆAದು ಪ್ರಮಾಣಿಸಲಿಲ್ಲ ಅದು ಜಗದ ಹಾಹೆ: ಬಲ್ಲವರ ನೀತಿಯಲ್ಲ ಏತರ ಹೆಣ್ಣಾದಡೂ ಮಧುರವೆ ಕಾರಣ ಅಂದವಿಲ್ಲದ ಕುಸುಮಕ್ಕೆ ವಾಸನೆ ಕಾರಣ ಇದರಂದವ ನೀನೇ ಬಲ್ಲೆ ಶಂಭಜಕ್ಕೇಶ್ವರಾ ಸತ್ಯಕ್ಕ ಹಲವಾರು ವಚನಗಳಲ್ಲಿ ಪುರುಷ ಪ್ರಾಧ್ಯಾನತೆಯನ್ನು ದಿಕ್ಕರಿಸಿದ್ದಾಳೆ. ಅನುಭಾವಕ್ಕೆ ಲಿಂಗ ಭೇದವಿಲ್ಲ ಎಂದು ಸಾರಿದ್ದಾಳೆ. ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದಿದ್ದಾಳೆ. ಶಿವಶರಣರ ಕ್ರಾಂತಿಯಲ್ಲಿ ಪಾಲ್ಗೊಂಡು ಅದರ ದನಿಯಲ್ಲಿ ಗಟ್ಟಿದನಿಯನ್ನು ಹೊರಡಿಸಿದ ಶಿವಮೊಗ್ಗದ ಶರಣರು ತಮ್ಮದೇ ಅನನ್ಯತೆಯನ್ನು ಮೆರೆದಿದ್ದಾರೆ. ಶಿವಮೊಗ್ಗ ಕ್ರಾಂತಿಯ ನಾಡೆಂಬುದನ್ನು ಆ ಕಾಲಕ್ಕೆ ತೋರಿದ ಕೀರ್ತಿ ಈ ಶಿವಶರಣ-ಶರಣೆಯರಿಗೆ ಸಲ್ಲುತ್ತದೆ. ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ಎ.ಹೇಮಗಂಗಾ ಲೋಕದಾ ನಿಯಮಗಳ ಗಾಳಿಗೆ ತೂರಿ ಬಂದುಬಿಡು ನೀ ಮೆಲ್ಲನೆ ಹೂವೊಳು ಗಂಧ ಬೆರೆತಂತೆ ನನ್ನೊಳು ಸೇರಿಬಿಡು ನೀ ಮೆಲ್ಲನೆ ಟೀಕೆಗಳ ಕತ್ತಿ ಇರಿತಕೆ ನಲುಗಿ ಇದ್ದೂ ಇಲ್ಲದಂತಾಗಿದೆ ಜೀವ ನಲುಮೆ ತೋರಿ ಎದೆಗಪ್ಪಿ ನೋವ ಮರೆಸಿಬಿಡು ನೀ ಮೆಲ್ಲನೆ ನಿನ್ನದೇ ಕನವರಿಕೆಯಲಿ ಮುಳುಗಿ ನಿದಿರೆ ದೂರವಾಗಿದೆ ನನಗೆ ದುಃಖದಿ ಕಂಗಳು ಬಾತುಹೋಗಿರೆ ಸವರಿಬಿಡು ನೀ ಮೆಲ್ಲನೆ ಅದೆಷ್ಟು ಹೇಳಲಾಗದ ಮಾತುಗಳಿದ್ದವು ನನ್ನ ನಿನ್ನ ನಡುವೆ ! ನಗುವನ್ನೇ ಮರೆತ ಅಧರಗಳ ಒಮ್ಮೆ ಚುಂಬಿಸಿಬಿಡು ನೀ ಮೆಲ್ಲನೆ ಗುಡಿಸಲಾದರೂ ಸರಿ, ನಿನ್ನೊಡನೆ ಬಾಳುವಾಸೆ ಇದೆ ಈಗಲೂ ಕಣ್ರೆಪ್ಪೆಯೊಳು ಅವಿತಿಹ ಕನಸ ನನಸು ಮಾಡಿಬಿಡು ನೀ ಮೆಲ್ಲನೆ ನಂಜು ಮುಳ್ಳಾದ ಪ್ರೀತಿಯೇಕೋ ನನ್ನ ಬಲಿಪಡೆಯುತಿದೆ ಹೀಗೆ? ದೇಹ ನಿರ್ಜೀವಗೊಳ್ಳುವ ಮುನ್ನ ನನ್ನವನಾಗಿಬಿಡು ನೀ ಮೆಲ್ಲನೆ ದೀಕ್ಷೆ ತೊಟ್ಟಿಹೆ ನಾ ನೀನಿಲ್ಲಿಗೆ ಬರದೆ ಪ್ರಾಣ ತೊರೆಯೆನೆಂದು ‘ಹೇಮ’ಳ ಅಂತಿಮ ವಿದಾಯಕೆ ಮಡಿಲ ನೀಡಿಬಿಡು ನೀ ಮೆಲ್ಲನೆ ಇವರು ‘ಸಿರಿಗನ್ನಡ ವೇದಿಕೆ’ ಮೈಸೂರಿನ ಜಿಲ್ಲಾಧ್ಯಕ್ಷೆ……ರಾಜ್ಯ ಸಮಿತಿಯ ಉಪಾಧ್ಯಕ್ಷೆ…………..’ ಹೇಮಗಂಗಾ ಕಾವ್ಯ ಬಳಗ’ದ ಅಧ್ಯಕ್ಷೆ ಯಾಗಿ ನೂರಾರು ಕವಿಗಳನ್ನು ಬೆಳಕಿಗೆ ತಂದಿದ್ದಾರೆ . ಅನೇಕ ಸಂಘ , ಸಂಸ್ಥೆಗಳ ಪೋಷಕಿಯಾಗಿ ಸೇವೆ ಸಲ್ಲಿಸಿದ್ದಾರೆ… ಉತ್ತಮ ವಾಗ್ಮಿಯೂ, ಕವಯಿತ್ರಿಯೂ ಆಗಿರುವ ಹೇಮಗಂಗಾ ಇಲ್ಲಿಯವರೆಗೆ ಎರಡು ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ…..’ಮುಕ್ತ ವಚನಾಮೃತ’ ‌…..ನೂರು ವಚನಗಳ ಸಂಗ್ರಹ ಮತ್ತು ‘ ಹೃದಯಗಾನ’ ….ಭಾವಗೀತೆಗಳ ಸಂಕಲನ . ಕನ್ನಡ ಗಜ಼ಲ್ ಗಳ ಸಂಕಲನವೊಂದು ಪ್ರಕಟಣೆಯ ಹಂತದಲ್ಲಿದೆ

ಗಝಲ್ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮೊಗ್ಗಿನ ಜಡೆ ಜಯಾ ಮೂರ್ತಿ ದಟ್ಟ ಕೂದಲಿನ ಪುಟ್ಟ ಸಹನ ಬಯಸಿದಳು ಒಂದುದಿನ ಜಡೆ, ಮಲ್ಲಿಗೆ ಮೊಗ್ಗಿನ ‘ಅಮ್ಮ ಹಾಕು ಮೊಗ್ಗಿನ ಜಡೆ’ ಮುದ್ದುಗರೆದಳು ಅಮ್ಮನೆಡೆ ಮಗಳ ಇಚ್ಚೆ ಪೂರೈಸಲು ಸಂತೆ ಕಡೆ ಚೀಲ ಹೆಗಲಿಗೇರಿಸಿ ತಂದೆ ಹೊರಟರು ಮಲ್ಲಿಗೆ ಕಡೆ ಘಮ ಘಮ ಮೊಗ್ಗು ಮನೆಸೇರಲು ಅಮ್ಮ ಕುಚ್ಚು, ಬೈತಲೆ ಬೊಟ್ಟು, ಜಡೆಬಿಲ್ಲೆ ಹೊರತೆಗೆದಳು ಗಳಿಗೆಯಲ್ಲಿ  ಉದ್ದ ಕೂದಲ ಬಾಚಿ ಜಡೆ ಹೆಣೆದಳು ನಲಿಯುತಲಿ ಮೊಗ್ಗ ಪೋಣಿಸುತ್ತಾ ಹೊಲೆದಳು ದಟ್ಟ ಜಡೆಗೆ ಮುಗುಳ್ನಗೆ ಯೊಳು ಕುಚ್ಚು ಗಲಗಲ ಎನ್ನಲು ಮುಗುಳ್ನಗಲು ಮೊಗ್ಗುಗಳು ಬೆರೆಯುತ್ತಾ ಕಿಲ ಕಿಲಾ ಸಹನಾಳ ನಗೆಯೊಳು ಉಡಿಸಿಹಳು  ರೇಶಿಮೆ ಸೀರೆ ತಾಯಿ ಮಗಳಿಗೆ,  ಪುಟ್ಟ ಸಹನಾ ಮೆರೆದಿರೆ ಕನ್ನಡಿಯಲ್ಲಿ ಜಡೆ ಪ್ರತಿಬಿಂಬಿಸಿರೆ ತಂದೆ ಚಿತ್ರ ತೆರೆದಿರೆ ಸಂತಸ ಮನೆಯಲ್ಲಿ ಹರಿದಿರೆ ಉಳಿದ ಮೊಗ್ಗುಗಳ ಹಾರ ಕೃಷ್ಣ ನ ವಿಗ್ರಹ ಅಲಂಕರಿಸಿರೆ ದೀಪ ಬೆಳಗಿ ಮಗಳ ಆಶೀರ್ವಾದ ತಾಯಿ ಬಯಸಿರೆ ಮಗಳ ಆನಂದ ಹೀಗೆ ಇರಲಿ ಎನ್ನುತಿರೆ ಉರುಳಿತು ಸಂವತ್ಸರುಗಳು ಇಂದು ವಧುವಾಗಿ ಸಹನಾ ನಿಂತಳು ಬಿಳಿಸೀರೆ, ಆಭರಣ ಗಳ ತೊಟ್ಟ ಮಗಳು ಮೊಗ್ಗಿನಜಡೆ ಅಲಂಕೃತ ವ ಇಮ್ಮಡಿಸಲು ಓಡಿತು ತಾಯ ಹೃದಯ ಅಂದಿನ ಸಹನಾ ಮೊಗ್ಗಿನ ಜಡೆ ಬಯಸಿದ ದಿನ ಕೃಷ್ಣ ನ ಆಶೀರ್ವಾದ ಫಲಿಸಿತ್ತು ಈ ದಿನ ಮಗಳು ಅಳಿಯರು ಮಂಟಪದಲ್ಲಿ ನಿಂತ ಸುದಿನ ಮತ್ತೇನ ಬಯಸುವರು ಜನ್ಮವಿತ್ತ ತಂದೆ ತಾಯಿಯರು ಮಗಳ ಸುಖ ಜೀವನ ಅದೇ ಜೀವನದ ಗುರಿ ಧಾರೆ ಎರೆದರು ಮಗಳ, ತುಂಬಿದ ಸಭೆ ಅಕ್ಷತೆಯ ಮಳೆ ಸುರಿಸಿಹರು          ಶುಭಮಸ್ತು, ಶುಭಾಶಯಗಳ          ಧ್ವನಿ ಪ್ರತಿಧ್ವನಿಸಲು          ಮುಗುಳ್ನಕ್ಕರು ದಂಪತಿಗಳು            ಅವರ ಆಕಾಂಕ್ಷೆ ಫಲಿಸಲು. ಕಿರು ಪರಿಚಯ:          ವಾಸ ಇಟಲಿಯಲ್ಲಿ. ಕರ್ಣಾಟಕ ದಿಂದ ಬೆಂಗಳೂರು ಮೈಸೂರು. ಕವನಗಳನ್ನು ಬರೆಯುವ ಹವ್ಯಾಸ. ಹ್ರತ್ಕಮಲ 50 ಕವನಗಳ ಪುಸ್ತಕ publish ಆಗಿದೆ. 

ಕಾವ್ಯಯಾನ Read Post »

You cannot copy content of this page

Scroll to Top