ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಸ್ವಾತ್ಮಗತ

ಏಕತೆ ಸಾರುವ ಹುಸೇನ್-ಷಾವಲಿ ತಾತಯ್ಯ…! ಕೆ.ಶಿವು.ಲಕ್ಕಣ್ಣವರ `ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿನ ಒಂದು ಸಾಲು. ಇಂತಹ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂಬಂತೆ ಬಾಗೇಪಲ್ಲಿಯಲ್ಲಿ ದರ್ಗಾ-ಕರಗ, ಮಂದಿರ, ಮಸೀದಿ, ಗುಡಿ, ಚರ್ಚ್ ಎಲ್ಲವೂ ಇಲ್ಲೇ ಇವೆ. ಈ ನೆಲದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರ ಕೊಡುಗೆ ಸಾಕಷ್ಟಿದೆ… ಹಿಂದು-ಮುಸ್ಲಿಂರು ತಮ್ಮ ಗುರು ಮತ್ತು ಮಾರ್ಗದರ್ಶಕರೆಂದೇ ಅವರನ್ನು ಕಾಣುತ್ತಾರೆ. ಅದೇ ಕಾರಣಕ್ಕೆ ಮುಸ್ಲಿಂರ ಪಾಲಿಗೆ ಅವರು ಹುಸೇನ್ ಶಾವಲಿಯಾದರೆ, ಹಿಂದುಗಳಿಗೆ ಅವರು ಪ್ರೀತಿಯ ತಾತಯ್ಯ. ದಾಸರಿಂದ ಹುಸೇನ್ ದಾಸ ಎಂದೂ ಅವರು ಕರೆಸಿಕೊಂಡಿದ್ದಾರೆ. ಸೌಹಾರ್ದ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದ್ದಾರೆ ಅವರು… 1963ರ ದಿನಗಳಲ್ಲಿ ಜವಳಿ ಉದ್ಯಮಿಯಾಗಿದ್ದ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರು ಸಂತರಾದದ್ದು ಆಕಸ್ಮಿಕ ಪವಾಡವೇನಲ್ಲ. ಅವರು ಜನರಿಗೆ ಏನನ್ನೂ ಬೋಧನೆ ಮಾಡಲಿಲ್ಲ. ತತ್ವ ಪದಗಳನ್ನು ಹೇಳಲಿಲ್ಲ. ಆದರೆ ಅವರ ಇಡೀ ಬದುಕೇ ಲೌಕಿಕ ಸತ್ಯಗಳನ್ನು ಹೇಳುವ ವಿಶ್ವವಿದ್ಯಾಲಯವಾಯಿತು… ಶ್ರೀಮಂತರಾಗಿದ್ದ ಅವರು ಪ್ರತಿ ದಿನ ಹೊಸ ಬಟ್ಟೆ ಧರಿಸುತ್ತಿದ್ದರು. ಯಾವುದೇ ಕೊರತೆ ಅವರಿಗೆ ಇರಲಿಲ್ಲ. ಆದರೆ ಧರ್ಮಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದಾಗ ಅವರಲ್ಲಿ ವೈರಾಗ್ಯ ಮೂಡಿತು. ಅತ್ತ ಹಾಲು ಕುಡಿಯುವ ಮಗು ಮತ್ತು ಇತ್ತ ವ್ಯಾಪಾರ- ವಹಿವಾಟು ತ್ಯಜಿಸಿ ದೈವ ಸಾಕ್ಷಾತ್ಕಾರದ ಮಾರ್ಗದಲ್ಲಿ ಬೆಳೆದು ನಿಂತವರು ಸಂತ ಹುಸೇನ್ ಷಾವಲಿ ತಾತಯ್ಯ..! ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ಸೊಂಟಕ್ಕೆ ತುಂಡು ಬಟ್ಟೆ ಧರಿಸಿಕೊಂಡು, ಕಾಡು-ಮೇಡು ಅಲೆಯಲು ಆರಂಭಿಸಿದರು. ಪ್ರತಿ ನಿತ್ಯ ಸ್ವಾದಿಷ್ಟ ತಿನಿಸುಗಳನ್ನು ತಿನ್ನುತ್ತಿದ್ದವರು ಭಿಕ್ಷಾಪಾತ್ರೆಯನ್ನು ಹಿಡಿದು ಮನೆಗಳ ಮುಂದೆ ಭಿಕ್ಷೆ ಕೇಳತೊಡಗಿದರು. ಅಲ್ಲಿಗೆ ಅವರು ಸಂಪೂರ್ಣವಾಗಿ ಬದಲಾದರು. ಮೊದ ಮೊದಲು ಅವರನ್ನು ಹುಚ್ಚ, ಧರ್ಮ ವಿರೋಧಿ ಎಂದು ಮಸೀದಿಯಿಂದ ಜನರೇ ಹೊರ ನೂಕಿದರು. ಆದರೆ ನಂತರದ ದಿನಗಳಲ್ಲಿ ಅವರ ತತ್ವ, ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅದೇ ಜನರು ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳಾದರು… `ಗುಡಿ-ಮಸೀದಿಗಳಲ್ಲಿ ಭಗವಂತನನ್ನು ನೋಡದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಲ್ಲಿಯೂ ಧರ್ಮಾತ್ಮನನ್ನು ಕಾಣಿರಿ. ಹಿಂದು-ಮುಸ್ಲಿಂ ಎನ್ನುವಂತಹದ್ದು ಮನುಷ್ಯ ಸ್ಥಾಪಿಸಿಕೊಂಡಿರುವುದು. ದೈವನಿರ್ಣಯವಲ್ಲ. ಜಾತಿ, ಧರ್ಮಗಳು ಬೇರೆ ಬೇರೆಯಾದರೂ ನಡೆದು-ಕುಣಿದಾಡುವ ಆತ್ಮ ಒಂದೇ. ನಾನು ನನ್ನ ಹೊಟ್ಟೆ ತುಂಬಿಸಿಕೊಳ್ಳಲು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಪಾಪ-ಕರ್ಮಗಳನ್ನು ಬೇಡುತ್ತಿದ್ದೇನೆ. ನಂತರ ಕರುಳನ್ನು ಹರಿಯುವ ನದಿಯಲ್ಲಿ ತೊಳೆಯುತ್ತಿದ್ದೇನೆ’ ಎಂದು ಅವರು ತಮ್ಮ ಶಿಷ್ಯಂದಿರಿಗೆ ಹೇಳುತ್ತಿದ್ದರು…! ಅವರು ಗತಿಸಿ ಇಂದಿಗೆ 50 ವರ್ಷಗಳ ಮೇಲಾಗಿವೆ. ರಂಜಾನ್ ಹಬ್ಬದ ಮಾರನೆಯ ದಿನದಿಂದ 11ನೇ ದಿನಕ್ಕೆ ಅವರು ಇಹಲೋಕವನ್ನು ತ್ಯಜಿಸಿದರು. ಇಸ್ಲಾಂ ಧರ್ಮದ ಪ್ರಕಾರ, ಈ ದಿನವನ್ನು ಸೌಹಾಲ್ 11ನೇ ತಾರೀಖು ಎನ್ನುತ್ತಾರೆ. ಪ್ರಾಣ ತ್ಯಾಗ ಮಾಡಿದ ದಿನದಂದು ಜಾತಿ- ಧರ್ಮಗಳು ಮೀರಿ ತಮ್ಮ ಗುರುವಿನ ಆಜ್ಞೆಯಂತೆ ಎಲ್ಲರೂ ಒಂದಾಗಿ ಅವರನ್ನು ಸಮಾಧಿ ಮಾಡಿದ ಅಂದಿನಿಂದ ಇಂದಿನವರಿಗೂ ಜಾತ್ಯತೀತವಾಗಿ ಪ್ರತಿದಿನ ದರ್ಗಾಗೆ ಪ್ರವೇಶಿಸಿ ತಮ್ಮ ಸಂಕಷ್ಟಗಳನ್ನು ಬಗೆಹರಿಸುವಂತೆ ಪ್ರಾರ್ಥಿಸುವುದು ರೂಢಿಯಾಗಿದೆ…! `ಈ ಸಂತನಿಗೆ ನಡೆದುಕೊಳ್ಳುವ ಜನರು ಹೃದಯವಂತಾಗಿರಬೇಕು. ಮನುಷ್ಯತ್ವ ಇರುವಂತಾಗಿರಬೇಕು. ಸಕಲ ಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಹೃದಯವಂತರಾಗಿರಬೇಕು. ಅಷ್ಟೇ ಹೊರತು ಜಾತಿವಂತರಲ್ಲ…! ಎಲ್ಲಾ ಜಾತಿ, ವರ್ಗದವರು, ಜಾತ್ಯತೀತತೆ, ಏಕತೆ, ಸಹೋದರ ಭಾವ ಹೊಂದಿದವರೆಲ್ಲ ದರ್ಗಾಗೆ ಬರುತ್ತಾರೆ. ತಾತಯ್ಯ ಕಣ್ಮರೆಯಾದರೂ ಅವರ ಶಿಷ್ಯಂದಿರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ’ ಎನ್ನುತ್ತಾರೆ ದರ್ಗಾದವರು… ಈದ್-ಉಲ್-ಫಿತರ್ ಹಬ್ಬದ ಮಾರನೆ ದಿನದಿಂದ 11ನೇ ದಿನಕ್ಕೆ ಸಂತ ಹಜರತ್ ಶೇಖ್ ಹುಸೇನ್-ಷಾವಲಿ ತಾತಯ್ಯ ಇಹಲೋಕ ತ್ಯಜಿಸಿದರು. ಆ ದಿನವನ್ನು ಸೌಹಾಲ್ ಎಂದು ಕರೆಯಲಾಗುತ್ತದೆ…! ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೋಮವಾರ ರಾತ್ರಿ 8ರ ಸುಮಾರಿಗೆ `ಸಂದಲ್-ಎ-ಶರೀಫ್’ (ಗಂಧದ ಅಭಿಷೇಕ), ಅನ್ನದಾನ ಮತ್ತು ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ಯಾರೆ…! ಹೀಗಿದೆ ಸಂತ ಹಜತತ್ ಶೇಖ್ ಹುಸೇನ್-ಷಾವಲಿ ತಾತಯ್ಯನ ಪುರಾಣ..!! ———– ‌‌‌‌

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ. ಗೋವಿಂದ ಹೆಗಡೆ ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು ನನ್ನ ತಪ್ಪು ದಾಟಿ ಹೋಗಿದ್ದೀ ನೀನು ಗೊತ್ತು,ಮರಳಿ ಹರಿಯದು ನದಿ ಬಿದ್ದ ಪಕಳೆಯನೆತ್ತಿ ಸಖೀ,ತುಟಿಗೊತ್ತಿ ಕಳಲಿದ್ದು ನನ್ನ ತಪ್ಪು

ಕಾವ್ಯಯಾನ Read Post »

ಇತರೆ

ಸಂಗೀತ ಸಂಗಾತಿ

ಸಂಗೀತದ ಹಿರಿಮೆ ರತ್ನಾ ಬಡವನಹಳ್ಳಿ ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ‌ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು. ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು. ರಚ್ಚೆ ಇಳಿದು ಅಳುವ ಮಗುವೂ ಸಹ ಅಮ್ಮನ ಜೋಗುಳ ಕೇಳಿ ಅಳು ನಿಲ್ಲಿಸುವುದ ಕಂಡಿಲ್ಲವೇ .ಎಲ್ಲ ತಾಯಂದಿರೂ ಸಂಗೀತ ,ಹಾಡು ಕಲಿತವರೇ ಇರುವುದಿಲ್ಲ ಆದರೂ ಮಗು ಅಳುತಿರಲು ಮಲಗಿಸುವಾಗ “ನನ್ನ ಬಂಗಾರೀ ಮುದ್ದೂ ಚಿನ್ನುಮರೀ,ಜಾಣ ಪಾಚೋ ಪುಟ್ಟೂ ” ಎಂದು ರಾಗವಾಗಿ ಹೇಳುತ್ತಾ ಮಲಗಿಸುವುದಿಲ್ಲವೇ ಹಾಗೆ ಸಂಗೀತ ಎಲ್ಲ ವಿಧದ ಧ್ವನಿಗಳಲಿ ಅಡಗಿದೆ. ಕೊಂಚ ಭಾವಜೀವಿಯಾಗಿ ಕಲೆಯ ಬಲೆ ಮನದಿ ಹರಡಿದ್ದರಂತೂ ಶಬ್ದಗಳಲೂ ಮಧುರ ಲಯಬದ್ದ ರಾಗ ಅನುಭವಿಸುವುದು ನಿಜ. ಮಳೆ ಸುರಿಯುವ ಮತ್ತೆ ಮಳೆ ನಿಂತು ಹೆಂಚಿನ ಅಥವಾ ಮನೆಯ ಚಪ್ಪರದ ತುದಿಯಿಂದ ಬೀಳುವ,ಮಳೆಬಂದಾಗ ಹಳ್ಳಿಯ ಮಣ್ಣಿನ ಮನೆ ಸೋರುವಾಗ ಪಾತ್ರೆ ಇಟ್ಟು ಅದರಲ್ಲಿ ಬೀಳುವ ಹನಿ ಹನಿ ನೀರಿನ ದನಿಯಲೂ ಲಯಬದ್ದ ರಾಗ ಆಲಿಸಬಲ್ಲದು. ಹಾಲು ಕರೆಯುವಾಗ ಖಾಲಿ ತಂಬಿಗೆಯಲಿ ಬೀಳುವ ಹಾಲಿನ ಸೊರ್ ಸೊರ್ ಶಬ್ದ ತುಂಬುತ್ತಾ ಬಂದಾಗ ನೊರೆಯ ಮೇಲೆ ಬೀಳುವ ಶಬ್ದವೇ ಬೇರೆ ಹಳ್ಳಿ ಮನೆಗಳಲ್ಲಿ ಹಸು,ದನಕರುಗಳು ಕಟ್ಟುವ ಜಾಗ ಮನೆಯಪಕ್ಕ ಇದ್ದರೆ ರಾತ್ರಿ ಮಲಗಿದಾಗ ಅವುಗಳು ಮೆಲುಕು ಹಾಕುತ್ತಾ ಜೋರು ಉಸಿರು ಬಿಡುತ್ತಾ ಅತ್ತ ಇತ್ತ ತಿರುಗುವಾಗ ಗೊರಸಿನ ಶಬ್ದ , ಎತ್ತಿನ ಬಂಡಿ ಹೊರಟಾಗ ಕೊರಳ ಗೆಜ್ಜೆಯ ಹಾಗೂ ಬಂಡಿಯ ಚಕ್ರದ ಸಪ್ಪಳ ಮಧ್ಯೆ ಮಧ್ಯೆ ಎತ್ತಗಳನ್ನು ಓಡಿಸಲು ಹೇ ಹೇ ಎನುವ ಸವಾರನ ಧ್ವನಿ ಹೀಗೆ ಎಲ್ಲವೂ ನಾದ ಮಯ ಅನುಭವಿಸಿ ಆಸ್ವಾದಿಸುವ ಮನಸಿದ್ದರೆ ಮಾತ್ರ ಹೀಗೆ ರೈಲಿನಲಿ ಕುಳಿತಾಗ ಅದರ ಒಂದೇ ಸಮನಾಗಿ ಉಂಟಾಗುವ ಶಬ್ದ ಜೋಗುಳ ಹಾಡಿದಂತೇ ಆಗುವುದು. ಹಾಗೆ ಕೆಲವರ ಕೈ ಬೆರಳು ಬಸ್ಸಿನ ಕಂಬಿ ಹಿಡಿದು ನಿಂತಾಗಲೂ ತಾಳ ಹಾಕುವುದ ಕಂಡಿದ್ದೇವೆ. ಮಾನವ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವ ಮಾಧ್ಯಮವೇ ಕಲೆ.ಕಲೆಯು ಮಾನವನ ಮನಸನ್ನು ಸಂಸ್ಕರಿಸುತ್ತದೆ.ಕಲೆಯ ಮೂಲವೇ ಪ್ರಕೃತಿ. ಇದರ ಸೌಂದರ್ಯೋಪಾಸನೆಯ ಮೂಲಕ ಮಾನವನ ಪ್ರತಿಭೆ ಅನಾವರಣಗೊಳ್ಳುತ್ತದೆ. ಅರವತ್ನಾಲ್ಕು ಕಲೆಗಳನ್ನು ಭಾರತೀಯ ಗ್ರಂಥಗಳು ತಿಳಿಸುತ್ತವೆ.ಅವುಗಳಲ್ಲಿ ಲಲಿತಕಲೆ,ವಿಜ್ಞಾನ,ವಾಣಿಜ್ಯ ಹೀಗೆ ವಿಂಗಡಿಸಿದ್ದಾರೆ ಅದರಲ್ಲಿ ಲಲಿತ ಕಲೆ ಸಂಸ್ಕಾರ,ಪ್ರತಿಭೆಯ ಮೂಲಕ ತೆರೆದುಕೊಳ್ಳುತ್ತದೆ ಸಂಗೀತ,ನೃತ್ಯ,ಸಾಹಿತ್ಯ,ನಾಟಕ,ಶಿಲ್ಪ,ಚಿತ್ರ ಇವೆಲ್ಲ ಲಲಿತಕಲೆಗಳೆನಿಸುತ್ತವೆ. ಈ ಲಲಿತ ಕಲೆಗಳಲ್ಲಿ ಸಂಗೀತ ಪ್ರಮುಖ ಸ್ಥಾನ ಪಡೆದಿದೆ ನಾದದ ಮೂಲಕ ಅಂತರೀಕ ಸೌಂದರ್ಯವ ಕಿವಿಯ ಮೂಲಕಹರಿಸಿ ಲೌಕಿಕ ಜಗದ ಜಂಜಾಟವ ಮರೆಸಿ ಕಲಾವಿದ ಹಾಗೂ ಶ್ರೋತೃವಿನ ಮನವ ತಣಿಸುವುದೇ ಸಂಗೀತ ಗೀತ ಎಂದರೆ ಹಾಡು. ಸಂಗೀತವೆಂದರೆ ಒಳ್ಳೆಯ ಹಾಡು .ಕಿವಿಗೆ ಹಿತವ ತಂದು ಮನದ ಮುಟ್ಟಿ ಮಾನಸಿಕ ಉದ್ವೇಗಶಮನ ಮಾಡಿ ಶಾಂತರಸದಲಿ ನೆಲೆಗೊಳಿಸುವುದು ಶಾಸ್ತ್ರೀಯ ಸಂಗೀತ ಮತ್ತಷ್ಟು ಮುಂದಿನವಾರ ತಿಳಿಯೋಣ

ಸಂಗೀತ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು ತಿಳಿದಾಗ ನನ್ನ ಕಾಲುಗಳ ಕೊರಡಿನ ಮೇಲೆ ನಾನೇ ಬೆಳೆದು ನನ್ನ ಬೇರುಗಳ ತುದಿಗಳನ್ನು ನಾನೇ ಚಿಗುರಿಸಿಕೊಂಡು ನನ್ನೊಳಗೆ ನಾನೇ ಹೊರಲಾರದಂತಹ ಹುವ್ವಾಗಿ ಅರಳುತ್ತೇನೆ ಎಂದೋ ಒಂದು ದಿನ ನನ್ನನ್ನು ನಾನೇ ತುಂಡರಿಸಿಕೊಂಡು ಬೀಜಗಳನ್ನ ಅಪ್ಪಿಕೊಂಡು ತೇಲುವ ಹತ್ತಿಹೂವಿನಂತೆ ಯಾವುದೊ ಗಾಳಿಯ ದೋಣಿಯಲ್ಲಿ ತೇಲುತ್ತಾ ಕದಲುವ ಕಾಲಗಳ ಬಾಗಿಲುಗಳನ್ನು ಒಂದೊಂದಾಗಿ ತಟ್ಟುತ್ತಾ ಸಾಗುತ್ತಿರುತ್ತೇನೆ ಕೂಡಿಬರುವ ಕಾಲವೊಂದು ಹಿತ್ತಲ ಬಾಗಿಲು ತೆರೆದು ನನ್ನನ್ನು ಬಯಸಿ ಬಿತ್ತಿಕೊಳ್ಳುವವರೆಗು!

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ ಬಿದಲೋಟಿ ರಂಗನಾಥ್ ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ ಹೆಣದ ಮೇಲಿನ ಕಾಸಿಗೆ ನಾಲಿಗೆಯನ್ನೇಕೆ ಚಾಚಿದೆ ? ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ ನಿನ್ನ ಹೆಸರನ್ನೇಕೆ ಜೋಡಿಸುತ್ತಿ? ನಿಷ್ಠೆ ಇಲ್ಲದ ಮನಸನು ಹೊತ್ತು ಹೊಲಸು ಆಗಿ ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ ನಿನ್ನ ನಡೆ ಎಂದಿಗೂ ಗಾಳಿಗೋಪುರ ಇದ್ದ ಸೀರೆಯನು ಉಡದೇ ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು ಮುಟ್ಟಲು ಹೋಗಿ ಜಾರಿ ಹಾರಿದ ಸೀರೆಯ ಬದುಕು ಮುರಾಬಟ್ಟೆ ! ನಂಬಿಕೆಯ ಎದೆಯ ಮೇಲೆ ಬೈರಿಗೆ ತಿರುವಿ ಹೋದ ಹೆಜ್ಜೆಯೇ ನಿನಗೂ ಕಾದಿದೆ ಬೆಂಕಿ ಬವಣೆ ಸುಖದ ಅಮಲಲಿ ತೇಲುವ ನೀನು ಕಮರಿ ಹೋಗುವ ಕಾಲ ದೂರವಿಲ್ಲ. ರೋಧಿಸುತ್ತಿರುವ ಮಣ್ಣಾದ ಮನಸಿನ ನೋವು ನಿನಗೆ ತಟ್ಟದಿರುವುದೆ? ಸುಳ್ಳಿನ ಪಾಯದ ಮೇಲೆ ಸತ್ಯದ ಗೋಪುರ ನಿಲ್ಲುವುದು ಕಷ್ಟ.! ಎಂದಿಗೂ. ನೀನಿಗ ಹಾರಾಡುವ ಹಕ್ಕಿಯಾಗಿರಬಹುದು ಆದರೆ ನೀನು ಎಷ್ಟೇ ಉಜ್ಜಿ ತೊಳೆದರು ನಿನ್ನ ಕೈಗೆ ಅಂಟಿದ ಪಾಪದ ಬಣ್ಣ ಎಂದೂ ಅಳಿಸದು ! ನೋವಿನಿಂದ ಹೋದ ಆ ಉಸಿರು ನಿನ್ನ ಬೆನ್ನ ಮೇಲೆ ಬರೆದ ಅಳಿಸಲಾಗದ ಮುಳ್ಳಿನ ಚಿತ್ರ ಕರುಳು ಕುಡಿಗಳಿಗೆ ಕೊಟ್ಟ ಅಪ್ಪನ ಉಸಿರಿಲ್ಲದ ಚಿತ್ರಪಟವನ್ನು ನೋಡಿದ ಪ್ರತಿಸಾರಿಯು ಅವು ಬಿಡುವ ನಿಟ್ಟುಸಿರು ನಿನ್ನ ಸುಡುತ್ತಲೇ ಇರುತ್ತದೆ ನೀನು ನರಳಿ ನರಳಿ ಸಾವಿನ ಮನೆಯ ತಟ್ಟುವಾಗ ನೀನು ಮಾಡಿದ ಮೋಸವನ್ನು ಉಂಡು ನೊಂದು ಬೆಂದು ತೊರೆದಿದ್ದ ಆ ಉಸಿರಿಗೆ ಬಹುಶಃ ರೆಕ್ಕೆ ಬಂದು ಮುಕ್ತಿಮಾರ್ಗದ ಕಡೆಗೆ ಹಾರಬಹುದು !

ಕಾವ್ಯಯಾನ Read Post »

You cannot copy content of this page

Scroll to Top